ತೆರೆ ಪರಂಪರೆ : ಮೊರೆ ಪರಂಪರೆ : ಪರಂಪರೆಯ
ಬೆಳ್ನೊರೆನೊರೆಯ ಪೊರೆಯ ಸಾಗರದ ನಾಗರನ
ಭೋರ್ಗರೆವ ಭೋಗ ಕುಲ ಬಲಮವ್ವಳಿಸಿದುದು
ನಿರಂತರಂ, ತಟಗತ ಅಶೋಕವನ ವಂಕಿಮ
ಶಿಲಾವೇಲೆಯಂ. ಕಾಡುಗೋಡೆತ್ತರದೊಳಿರ್ದ
ಪುಲ್ಮನೆಯೊಳಿರ್ದು ಸೀತಾದೇವಿ ತಾನುತ್ಕಂಠೆ,
ನೋಡುತಿರ್ದಳ್ ತರಂಗೋಲ್ಲಾಸಮಂ ; ಮೇಣ್
ಕೇಳುತಿರ್ದಳ್ ತರಂಗೋಚ್ಛ್ವಾಸ ಘೋಷಮಂ ; ಮೇಣ್
ನೋಡುತಿರೆಯಿರೆ, ಕೇಳುತಿರೆಯಿರೆ, ದೃಗಿಂದ್ರಿಯಕೆ
ಶ್ರವಣೇಂದ್ರಿಯಕೆ ಭೇದಮಳಿದತ್ತು. ಮೆಲ್ಲನೆಯೆ            ೧೦
ತೆರೆಯಾಗಿ, ಮೊರೆಯಾಗಿ, ತಿರೆಯೆಲ್ಲ ತಾನಾಗಿ,
ತನ್ನತನವನೆ ಮೀರಿ ನೆಗೆದುದು ಅತೀಂದ್ರಿಯಕೆ
ದೇವಿಯಾತ್ಮಂ. ಕಾಣ್ಬವೋಲೆಳ್ಚರದ ಚಿಂತೆ
ಕನಸಿನೊಳ್, ಕೇಳ್ದುದೊಂದತಿಶೋಕಮಯ ಗೇಯ-
ದಿಂಚರಂ. ಕೇಳ್ದಳೆನೆ ಗೇಯಮೆನಲಾ ಪದಂಗಳ್
ಐಂದ್ರಿಯಜ್ಞಾನ ಸೂಚಕಮೌಪಚಾರಿಕಂ.
ಕಾಲದೇಶಾತೀತಮಂ ಅನುಭವಾವರ್ಣ್ಯಮಂ
ಕೇಳ್ದಳೋ ? ಕಂಡಳೋ ? ಎಂತಾದರೇನಂತೆ,
ರಾಮದುಃಖವನೆಲ್ಲಮಂ ತಾನುಂಡಳಯ್ ! ಬಳಸಿ
ಕಾಪಿರ್ದ ಲಂಕಾ ಲತಾಂಗಿಯರ್ ಬೆಬ್ಬಳಿಸಿ    ೨೦
ಕಂಡರಾ ಶೂನ್ಯತೆಯ ಸುಳಿದಾಟಮಂ. ಗಾಳಿಯಂ
ಬೀಸಿದರ್ ; ನೀರೆರಚಿದರ್ ; ಕರೆದರಲುಗಿದರ್ ; ಮೇಣ್
ಕಡೆಗಟ್ಟಿದರು ವಾರ್ತೆಯಂ ದೊರೆಯ ಸನ್ನಿಧಿಗೆ.
ಬೆಳ್ದಿಂಗಳಿರುಳಳಿದು ಮೂಡಣ ದಿಗಂಗನೆಯ
ಮೊಗಕೆ ನಸುಗೆಂಪಲರುವಂತೆ, ಸೀತೆಯ ಮೊಗದ
ಬೆಳ್ಪಳಿದುದಿಸಿತೊಂದು ನಳನಳಿಪ ಚೆಂದಳಿರ
ಸೊಂಪು. ತಿರುಗಿದತ್ತೊಯ್ಯನೆಯೆ ಶೋಕಗೇಯಂ
ಧೀರಗಾನಕ್ಕೆ. ತಾನದ ಮೇಲೆ ಗರಿಗೆದರಿ
ತಾನಮೇರ್ದಂತೆ ಹಾರಿದುದು ಬಾನೆತ್ತರಕೆ
ಹರ್ಷ ಗಾನದ ಪಕ್ಷಿ. ಕಣ್ದೆರೆದಳರವಿಂದ
ನೇತ್ರೆ : ಕಂಡಳು ಮುಂದೆ ಧಾನ್ಯಮಾಲಿನಿಯೊಡನೆ      ೩೦
ನಿಂದಿರ್ದ ದಶಕಂಠನಂ, ಬುದ್ಧಿಪೂರ್ವಕಂ
ತಾನಲ್ಲಮಭ್ಯಾಸಬಲದಿಂದಮೆಂಬಂತೆ
ಮೊಗಮಿಳುಹಿದಳ್. ಕಂಡಳಡಿವರೆಗೆ ಮುಡಿಚಾಚಿ
ನೆಲದ ಮೇಲೊರಗಿರ್ದ ದಶಶಿರಚ್ಛಾಯೆಯಂ !
ದೊರೆಯ ಕಣ್ ತಿಳಿದು ತೊಲಗಿದುದೊಡನೆ ಪೆಣ್‌ಗಾಪು
ಸೀತೆಯೆಡೆಯಿಂ. ಧಾನ್ಯಮಾಲಿನಿಯುಮಲ್ಲಿಂದೆ
ತೆರಳಲನುಗೆಯ್ಯೆ ರಾವಣನವಳನಿರವೇಳ್ದು,
ಜಾನಕಿಯೆಡೆಗೆ ತಿರುಗಿ : “ದೇವಿ, ನಿನ್ನಿಚ್ಚೆಗೇಂ
ಕೊರತೆಯಿಲ್ಲದೆ ನಿನ್ನ ತೊಳ್ತಿರೆಸಗುವರಲ್ತೆ      ೪೦
ನಿನ್ನ ಬೆಸಗೆಯ್ದುದಂ ? ಹಸನಿಹುದೆ ನಿನಗೆ ಈ
ಪೊಸತಿರ್ಕೆದಾಣಂ ?…. ಅನಿಲಂ ಬಿಜ್ಜಣಿಗೆವೀಸಿ
ಸೇವಿಪನೆ ? ನೇಸರೆಳವಿಸಿಲ ಬಿಸುಪಿತ್ತಪನೆ
ನಿನ್ನ ಸಿರಿಮೆಯ್ಗೆ ? ತರುಪತ್ರ ಛತ್ರಚ್ಛಾಯೆ
ಕೊಡೆಯ ನೆಳಲಾಗೆ ಪಾಲಿಪಳಲ್ತೆ ವನದಾಸಿ
ಕರ್ತವ್ಯಮಂ ? ನಿನಗೆ ಗೌರವದ ಕಾಣ್ಕೆಯಂ
ಸಲ್ಲಿಸಿಹನಲ್ತೆ ತೆರೆಚವರಿಯಂ ಬೀಸುವೀ
ರಾಜಸೇವಾಸಕ್ತನೆನ್ನ ಕಿಂಕರ ಕೃಪಾ
ಕಾಂಕ್ಷಿಯೀ ಸಾಮಂತ ನೃಪ ಸಾಗರಂ ?…. ಸೀತೆ,
ಬಡಗಣ್ಗೆ ಮೊಗಮಾಗಿ ಪಡೆವುದೇನಂ ಬೇಡಿ    ೫೦
ಬಡವನಂ ? ಕಡವರವನೆಲ್ಲ ಲಂಕೆಗೆ ಸೋತು
ಬಡತನವಡಸಿತಾ ಕುಬೇರಂಗೆ…. ತೆಂಕಣ್ಗೆ
ಕಣ್ಣಪ್ಪುದುಂ ವೇಡ  : ಲಂಕೆಯರಮನೆ ಸಿರದ
ಗೋಪುರದ ಚಾಮೀಕರದದೀಪ್ತಿ ತಾನೇಗಳುಂ
ಕೀನಾಶಗಾಗಿರ್ದುದೊಂದೆಳ್ಚರಿಕೆವೆರಳವೋಲ್
ಭೀತಿ !…. ಮೈಥಿಲಿ, ಮುಹುರ್ಮುಹುರೆನ್ನ ದೈನ್ಯಮಂ
ನಿನಗಾಂ ನಿವೇದಿಸುತ್ತಿಹೆನೆಂತೂ ಲೆಕ್ಕಿಸದೆ
ನನ್ನ ಪೆಂಪಂ. ಮಿತಮರಸುತಾಳ್ಮೆಯಾದೊಡಂ,
ನಿನ್ನೊಲ್ಮೆಯೊಂದು ಬೆಲೆಯರಿತನೆಂ ; ತಾಳ್ಮೆಯನೆ
ಹೃದಯದುತ್ಕಂಠೆಗೆ ಖಲೀನಮಂ ಗೆಯ್ದನೆಂ ;  ೬೦
ನಿನ್ನವೊಲ್ಮೆಯ ವರಂಬಡೆಯಲೋಸುಗಮಾಂ
ತಪಸ್ವಿಯೆಂ. ಒಪ್ಪಿ ಬರಲೊಲ್ಮೆ ಜೇನ್ ; ಒಲ್ಲದಿರೆಯುಂ
ಬಲದಿನಿಳ್ಕುಳಿಗೊಂಡರದು ಪಂಕಮೌ, ಪಂಕಜೆ.
ಸಾಧನೆಗಸಾಧ್ಯಮಿಲ್ಲೆಂಬರೌ, ಉಪಾಸಿಸಲ್
ಕಾಲಾಂತರಕೆ ಕಲ್ಲುಮೀಶ್ವರನ ಕೃಪೆಯಾಗಿ
ಪರಿಣಮಿಸಿದಪ್ಪುದೆನೆ, ನಿನ್ನ ಕಲ್ಲೆರ್ದೆ ಕರಗಿ
ಮೆಲ್ಲಿತಪ್ಪುದು ದಿಟಂ ! ನೋಡೀಕೆಯಿಹಳೆನಗೆ
ಸಾಕ್ಷಿ. ನಿನಗಾಗಳೆಯೆ ಪೇಳ್ದಳಲ್ಲವೆ ತಂಗೆ
ಚಂದ್ರನಖಿ ? ಧಾನ್ಯಮಾಲಿನಿಯೆನಗೆ ನೋಂತಂಗೆ
ಕಾಲಾಂತರಕ್ಕೋತು ಕೃಪೆದೋರ್ದಳೆಂಬುದಂ ?”       ೭೦
ಪಿಡಿದ ತೃಣಚೂರ್ಣಮಂ ರಾವಣಪ್ರತಿ ಗೆತ್ತು
ಮೊಗಮೆತ್ತದೆಯೆ ಸಂಬೋಧಿಸಿದಳವನಿಜಾತೆ :
“ಬಿದಿಯ ಬೇಳ್ವೆಗ ಬಂದ ಪಶು ನೀಂ, ದಶಗ್ರೀವ.
ಮರುಗುವೆನು ನಿನಗೆ, ತಾಯ್ ಕೇಡಾಡಿ ಕಂದಂಗೆ
ಮರುಗುವೋಲ್. ನನ್ನ ಕಲ್ಲೆರ್ದೆ ಕರಗುತಿದೊ ನಿನಗೆ
ಮೆಲ್ಲಿತಪ್ಪುದು ದಿಟಂ ! ನೀನೆಂದ ಮಾಳ್ಕೆಯಿಂ,
ಸಾಧನೆಗಸಾಧ್ಯಮಿಲ್ಲೆಂಬರೈ. ಉಪಾಸಿಸಲ್
ಕಾಲಾಂತರಕೆ ಕಲ್ಲುಮೀಶ್ವರನ ಕೃಪೆಯಾಗಿ
ಪರಿಣಮಿಪುದೆಂತಂತೆ, ಕಾಲಾಯಸಕೆ ಸಮಂ
ನಿನ್ನ ಕಲ್ಲೆರ್ದೆ ಕರಗಿ ಮೆಲ್ಲಿತಪ್ಪುದು ದಿಟಂ !     ೮೦
ನೋಂತಿರ್ವೆನನವರತಮಾತ್ಮದುದ್ಧಾರಕ್ಕೆ
ನಿನಗೆ !….”
ನುಡಿನುಡಿಯುತಾವೇಶಮೇರ್ದಂತೆವೋಲ್,
ಧಾನ್ಯಮಾಲಿನಿಯಂತೆ ದಶಶಿರಂ ಬೆರಗಾಗೆ,
ಗಂಭೀರ ವೈಖರಿಯಿನೊಯ್ಯನೊಯ್ಯನೆ ದೇವಿ
ಮೊಗಮೆತ್ತಿದಳ್ ! ನೋಡಿದಳ್ ನೇರಮಸುರನಂ,
ದೃಷ್ಟಿಭರ್ತ್ಸನೆಗಳ್ಕಿ ಸೆಡೆತುದೆನಲಳಿಯಾಸೆ ತಾಂ
ರಕ್ಕಸಗೆ ! ಮೊತ್ತಮೊದಲಾ ದಿಟ್ಟ ದಿಟ್ಟಿಯಂ
ಸಂಧಿಸಿದ ದೈತ್ಯೇಂದ್ರನೀಕ್ಷಿಸಿರಲಾಕೆಯಂ
ಮೂಕ ವಿಸ್ಮಯದಿಂ, ವಸುಂಧರಾತ್ಮಜೆ ಮತ್ತೆ :
“ಪಿರಿಯನಹುದಯ್ ನೀಂ, ದಶಗ್ರಿವ ; ಪಿರಿತನಂ          ೯೦
ಕೆಡದವೋಲೆಸಗಿ ಬಾಳ್. ಧರ್ಮದಂಡವ ಕೆಣಕಿ
ಪಾಳ್ಗೆಯ್ಯದಿರ್ ಲಂಕೆಯಂ, ನಿನ್ನನೊಲಿದರ್ಗೆ
ಕೆಮ್ಮನನ್ನೆಯಮೊಡರ್ಚದಿರ್ ವೈಧವ್ಯಮಂ !
ತಡೆಯುವುದೆ ಸಾಗರಂ ಧರ್ಮರೋಷವನಯ್ಯೊ
ಮರುಳೆ ? ಸಾಗರವೆ ಸೇತುವೆಯಾಗೆ, ಗರದಂತೆವೋಲ್
ನಿನ್ನನಟ್ಟದೆ ಮೃತ್ಯುರೂಪದ ಕೃಪಾಕೇತು ?….”
ಮೊಗಂಬಾಗಿದಳ್ ಮರಳಿ. ಕೇಳಿಸಿತು ಕಡಲ ಮೊರೆ,
ಹಕ್ಕಿಯಿಂಚರಮಂತೆ ತರುಮರ್ಮರಂ. ಮೌನದಿಂ,
ಮೊಗದಿರುಹಿ ತೆರಳಿದನ್ ಧಾನ್ಯಮಾಲಿನಿವೆರಸಿ
ರಾವಣಂ, ಚಿಂತಾ ನಿಮಗ್ನನಂತರ್ ಮಥಿತನಾ           ೧೦೦
ಜೀವನಾಂಭೋಧಿ.
ಆ ಇರುಳ್, ಬೆಳ್ದಿಂಗಳೊಳ್,
ವಿಶ್ವನಿದ್ರೆಯೊಳೊಂದು ಕನಸಿನಂತಿರೆ ಪೃಥಿವಿ,
ನಿಶ್ಶಬ್ದತೆಯ ಪಕ್ಷವಿಸ್ಫಾಲಮೆಂಬಿನಂ
ಕಡಲ ತೀರದ ತೆಂಗು ಮರಗಳೊಳ್ ನರ್ತಿಸಿರೆ
ಗರಿಮರ್ಮರಂ, ಚಂದ್ರ ಸುಂದರ ವಿಶಾಲೋರು ತಾಂ
ನೀಲಾಬ್ಧಿ ಆ ಸತಿಯ ಸಂಕಟಕೆ ಅನುಕಂಪಿಸುವ
ತೆರದಿ ಸುಯ್ದಿರೆ ನರಳಿ ಹೊರಳಿ, ಸೀತೆಯ ಕಿವಿಗೆ
ಕೇಳಿಸಿತ್ತೊಂದು ಕಿಂಕಿಣಿ ಕನಕ ನೂಪುರದ !
ನೋಡುತಿರೆ ಕಂಡಳ್ ಚಕಿತನೇತ್ರೆ : ಆ ಅಮೃತ
ರಾತ್ರಿಯೆ ಲಲನೆಯಾಕೃತಿಯಾಂತು ಬಂದವೋಲ್,     ೧೧೦
ಪಾಲ್‌ಬೆಳ್ಳನೆಯ ಸೀರೆ ಸಿಂಗರಿಸಿದೊಂದಾಳ್ತನಂ
ನಡೆಗುಣ್ಪಿನಿಂ ಬಗೆಗೆ ಭಯಭಕ್ತಿಯನೊಡರ್ಚೆ,
ಬಂದಳೊರ್ವಳ್, ಭೂಮಿದೇವಿಯೆ ಕುಮಾರ್ತೆಯಂ
ಸಂತೈಸಲೈತರ್ಪವೋಲ್ ! ಬಳಿಗೆ ಬಾರದೆಯೆ
ದೂರದೊಳೆ ನಿಂದಳೆನುತಿರೆ, ಕಯ್ಗಳೆತ್ತಿದಳೆ ?
ಸೋಜಿಗಮಿದೇಂ ? ತನಗೆ ಕಯ್ಮುಗಿದಳೆಂಬಂತೆ
ತೋರುತಿದೆ ! ಸೀತೆಯಚ್ಚರಿಯಿಂದೆ ಕಣ್ಣಾಗಿ
ನಿಟ್ಟಿಸಿರೆ, ಬೀಣೆ ಮಿಡಿದಂತೊಯ್ಯನೊಯ್ಯನೆಯೆ
ರೋದಿಸಿದಳಸ್ಪಷ್ಟಮಾಡುತಾ ಗಂಭೀರೆ,
ಧೀರೆ, ಧವಳಾಂಬರಾ ಮಹಿಳೆ !
ಇಂತಿಂತಿಂತು     ೧೨೦
ಇರುಳೇಳ್ಗಳಾ ರೂಪು ಬಂದು ದೂರದಿ ನಿಂತು,
ರೋದಿಸಿ, ತುಳಿಲ್‌ಗೆಯ್ದು, ಮೊರೆಯುತಸ್ಪಷ್ಟಮಂ
ಪಿನ್ ತೆರಳುತಿರಲೆಂಟನೆಯ ರಾತ್ರಿ, ಕನಿಕರಕೆ
ಕರಗಿದಿಳೆಗುವರಿ ಮೇಲೆಳ್ದಳವಳಿರ್ದೆಡೆಗೆ
ನಡೆದಳೆರ್ದೆ ತೋಡಿ ನುಡಿಸಿದಳಿಂತು :
“ಆರಮ್ಮ,
ತಂಗೆ, ನೀನ್ ? ನೋಡುತಿಹೆನೇಳಿರುಳ್ಗಳಿಂ ; ಬಂದು
ಗೋಳಾಡುತಾವುದನೊ ಸಂಕಟವನೊರೆಯುತಿಹೆ ;
ಆರನೊ ಕರೆಯುತಿಹೆ ; ಆರನೊ ಬೇಡುತಿಹೆ ;
ಕೈ ಮುಗಿದದಾರ್ಗೊ ರಕ್ಷೆಯ ಪಡೆಯಲೋಸುಗಂ
ನೋಂತವೋಲಿದೆ ನೋಂಪಿಯಂ. ಬೆದರಿದೆನ್ ಮೊದಲ್          ೧೩೦
ದನುಜ ಕೈತವಮೆಂದು. ಕಡೆಗೆ, ನಿನ್ನಯ ಕೊರಳ
ದುಃಖ ನೈಜತೆಯೆನಗೆ ಕೆಣಕಿದುದು ಕರುಣೆಯಂ.
ನನ್ನಂತೆ ನೀನುಮಸುರನ ದೌಷ್ಟ್ಯಮೆಳೆತಂದ
ಗರತಿವೆಣ್ಣಿರವೇಳ್ಕುಮ್ ! ಈ ಲಂಕೆಯೊಳಗೆನಿತು
ದುಃಖಿಗಳ್ ನಮ್ಮನ್ನರೊಳರೊ ?….”
“ನಾನಕ್ಕನೆನ್
ನಿನಗೆ, ತಂಗೆ, ವಯಸ್ಸಿನಿಂದಂತೆ ದುಕ್ಕದಿಂ !
ನನ್ನವೋಲತಿದುಃಖಿ, ಲಂಕೆಯೊಳಗಂತಿರ್ಕೆ,
ಸೃಷ್ಟಿಯೊಳಗಿಲ್ಲಮೆಂದರಿ….”
“ದೇಶಮಂ ತ್ಯಜಿಸಿ,
ವನವಾಸಮಂ ವರಿಸಿ, ರಾಕ್ಷಸನ ಪಾಪಕ್ಕೆ
ಬಲಿಯಾದ ದಶರಥಸುತನ ಭಾರ್ಯೆಗಿಂ ದುಃಖಿ          ೧೪೦
ನೀನೆಂಬೆಯೇನ್ ?”
“ದಿಟಂ ; ಸೀತೆಗಿನ್ನತಿದುಃಖಿ
ನಾನ್, ಎನಿತೊ ಸೀತೆಯರಳಲ ಪೊತ್ತಿಸಿರ್ಪಂಗೆ ನಾಂ
ಮಡದಿಯೆನ್ !”
“ಮಂಡೋದರಿಯೆ ನೀಂ ?” ಹರ್ಷವಿಸ್ಮಯದಿ
ಬೆಸಗೊಂಡವನಿಜಾತೆಗಾ ಮಹಿಳೆ :
“ನಿರ್ಭಾಗ್ಯೆ ದಲ್
ನಾನಪ್ಪೆನಾ ಪೆಸರ ಪೆಣ್….”
“ಪೆಸರ ಪೆಣ್ ದಿಟಂ !
ಮುನ್‌ ಕೇಳ್ದೆನಾಂ ನಿನ್ನ ಬೆಳ್ಜಸವನೆಲೆ ಪೂಜ್ಯೆ ;
ಕಂಡಿಂದು ಧನ್ಯೆಯೆನ್. ಪಿರಿಯಳ್ಗೆ ನಮಿಸುವೆನ್.”
“ನಾನಸುರಿ. ನಮಿಸದಿರೆನಗೆ, ಆರ್ಯೆ !”
“ನೀನಸುರಿ ?
ನೀನಸುರಿಯಲ್ತು ; ದೇವತೆ. ಪತಿವ್ರತೆಯಾಗಿ
ನಮಗೆಲ್ಲಮಾದರ್ಶಮಾತೆ. ನಿನಗಾಂ ನಮಿಸೆ ೧೫೦
ಶೀಘ್ರದಿಂದೆನಗೆ ಮಂಗಳಮಪ್ಪುದೆಂದು ನಾಂ
ಬಲ್ಲೆನ್….”
“ಆ ಮಂಗಳಂ ನಿನಗೆ ಶೀಘ್ರದಿನಕ್ಕೆ !
ನಿನ್ನ ಮಂಗಳಮೆನಗೆ ಮಂಗಳಂ ! ನನ್ನಂತೆ,
ದೇವಿ, ನೀನುಂ ಪ್ರಾರ್ಥಿಸಾ, ನನ್ನ ಪತಿಯೆರ್ದೆಗೆ
ಶುದ್ಧಿ ದೊರೆಕೊಳ್ವಂತೆ, ನಾನದನೆ ಬೇಡಲ್ಕೆ
ಬರುತಿರ್ದೆನೀಯೆಡೆಗೆ ನಿನ್ನ ಸಾನ್ನಿಧ್ಯಕ್ಕೆ….”
ಮೌನಮಿರ್ದಳ್ ಸೀತೆ ; ಒಂದಿನಿತನಂತರಂ
ಮಯನ ನಂದನೆ ಮತ್ತೆ :
“ನಿನ್ನ ಸಂಧಿಸಲೆನಗೆ
ಲಂಕೇಶನನುಮತಿಯನಿತ್ತನಿಲ್ಲದರಿಂದೆ
ನಾನೆ ಮೊದಲೈತಂದು ನಿನ್ನ ದರ್ಶನದಿಂದೆ    ೧೬೦
ಧನ್ಯೆಯಾಗದೆ ಹೋದೆನೆಲೆ ಪುಣ್ಯ ಚಾರಿತ್ರೆ….
ಪ್ರಾರ್ಥನೆ ಸಫಲಮಾಯ್ತು. ನೀನೆ ದರ್ಶನವಿತ್ತೆ.
ನುಡಿಸಿದೆ. ಕೃತಾರ್ಥಳೆಂ…. ಹದಿಬದೆತನಕೆ ಮೀರ್ವ
ಸಾಧನೆಯಿಲ್ಲ, ತಂಗಿ…. ಕೊಳೆಗೆ ತಗುಳಲ್ಕಗ್ನಿ
ಕೊಳೆಯುಮುರಿಯಪ್ಪುದಂತೆಯೆ ನಿನ್ನ ನೋಂಪಿಯಿಂ
ಕಿಡುಗೆನ್ನ ಪತಿಯ ಹೃದಯದ ಪಾಪ ಕಿಲ್ಬಿಷಂ.
ಸನ್ಮತಿಯುದಿಸಿ ಶಾಂತಿ ಸುಖಮಕ್ಕೆ ಸರ್ವರಿಗೆ !….”
ಸೀತೆಗೆಳ್ಚರಮಪ್ಪ ಮುನ್ನಮಾ ಸ್ತ್ರೀ ಮೂರ್ತಿ
ಮುಡಿ ಚಾಚುತಡಿಮುಟ್ಟಿ ಪಾದಧೂಳಿಯನಾಂತು
ನಡೆದಳಲ್ಲಿಂದೊಡನೆ ಕಣ್ಬೊಲವನತಿಗಳೆದು,  ೧೭೦
ಮೆಯ್ವೆತ್ತ ಜೊನ್ನವೆಣ್ ಮತ್ತೆ ಜೊನ್ನಪ್ಪವೋಲ್ !
ನನಸಾದೊಡಂ ಕನಸಿನಿಂದಮೆಳ್ಚತ್ತವೊಲ್
ಬೆರಗಾಗಿ ಹಿಮ್ಮರಳಿದಳು ಸೀತೆ, ಕರೆಗಣ್ಮೆ
ಪೆರ್ಚಿದಾನಂದದಿಂ : ತನ್ನ ನೋಂಪಿಗೆ ಪೆರರ
ನೋಂಪಿಯೆ ನೆರಂ, ಗುರಿಯೊಳಿಲ್ಲದಿರಲಂತರಂ.
ಮಂಡೋದರಿಯ ದೃಢತೆಯಾದುದುಕ್ಕಿನ ಸಾಣೆ
ಮೈಥಿಲಿಯ ಚಿತ್ತಕೆಂತೆನೆ, ತನ್ನ ದೇವತೆಗೆ
ಪೂಜೆ ಸಲ್ಲಿಸಿ ಮಣಿಯುವನ್ಯರಂ ಕಾಣಲ್ಕೆ
ಹೊಂಪುಳಿಯಿನುಕ್ಕಿದಪುದಲ್ತೆ ಭಕ್ತೆಗೆ ಭಕ್ತಿ
ಹುರಿಗೊಂಡು ? ಸೆರೆಮನೆಯೆ ಆತ್ಮಸಾಧನೆಗೊಂದು    ೧೮೦
ಎಲೆಯ ಮನೆಯಾಯಿತ್ತು ; ಪೌಲಸ್ತ್ಯಜನ ಲಂಕೆ
ಮಂಡೋದರಿಯ ಲಂಕೆಯಾಯಿತ್ತು ; ರಾವಣನ
ಮೇಲಿರ್ದ ವೈರಭಾವಂ ಸುಲಭದಿಂ ಕರಗಿ
ಮಂಡೋದರಿಯ ಪತಿಯ ಮೇಲಣ ಕರುಣೆಯಾಯ್ತು.
ಸೂರ್ಯನಾತಪಕೆ ಕಾಲದ ತಪಂ ನೆರವಾಗಲಾ
ಬಜ್ಜರತನಂ ಬರ್ಪುದೊಯ್ಯನಿದ್ದಲಿಗೆನಲ್,
ಸೀತೆ ಮಂಡೋದರಿಯರಿರ್ವರ್ ತಪಂಬಡಲ್
ರಾವಣನ ಮನದ ಪೊನ್ ಹೃತ್ತಾಪಮೂಷೆಯೊಳ್
ಕುದಿಕುದಿದು ಕರಕರಗಿ ಕಾಳಿಕೆಯನುಳಿಯದೇನ್ ?
ತಿಳಿಯದೇನ್ ? ಪೊಳೆಯದೇನ್ ? ಪೊಚ್ಚ ಪೊಸ ಪೊನ್ನಾಗಿ       ೧೯೦
ತಳತಳಿಸದೇನ್ ?
ನೆನೆದಳತ್ರಿಸತಿಯಂ ; ಪೂಜ್ಯೆ
ಹದಿಬದೆಯರಧಿದೇವಿಯಾಕೆ ತನಗಂದಿತ್ತುದಂ
ರಕ್ಷೆಯಂ ಮೇಣುಮಾಶೀರ್ವಾದಮಂ ತನ್ನ
ಮುಡಿಯಿಂ ತೆಗೆದು ನೋಡಿದಳ್ ದಿವ್ಯಸುಮಮಂ. ಹಿಗ್ಗಿ
ನೋಡಿದಳದಂ ಮರಳಿಮರಳಿ. ಮೀಯದೆ, ಉಡದೆ
ಕೊಳೆ ಬಣಬೆಗೊಂಡಿರ್ದ ತನ್ನ ಮೆಯ್ಯೊಳದೊಂದೆ
ಹೂ ಹೊಚ್ಚ ಹೊಸತಿರ್ದುದಂ ಕಂಡು, ರಾಮಂಗೆ
ತನಗೆ ಸತ್ಯಕೆ ಶುಚಿಗೆ ಧರ್ಮಕ್ಕೆ ಸರ್ವರಿಗೆ
ಮಂಗಳಂ ದಿಟಮೆಂದು ನಂಬಿ, ಧೈರ್ಯಗೊಂಡು,
ಸುಮರೂಪದನಸೂಯೆಯಂ ಪಣೆ ಮುಟ್ಟಿ ನಮಿಸಿ,       ೨೦೦
ಪುಣ್ಯಪ್ರಸಾದಮಂ ಶಿರದೊಳಾಂತಳ್ ಮತ್ತೆ
ವೈದೇಹಿ.
ವಜ್ರರಕ್ಷಣೆ ಗೆತ್ತು ಸುಮರಕ್ಷೆಯಂ,
ಧರಣಿದೇವಿಯ ಕನ್ಯೆಯನುದಿನಂ ಪ್ರಾರ್ಥನಾ
ತಪದಿಂದೆ ವಿಶ್ವಶಕ್ತಿಯ ಕೃಪೆಗೆ ಸೆರೆಗೊಡ್ಡಿ
ಬೇಡುತಿರೆಯಿರೆ, ಮಳೆಯ ಮೋಹರಂ ಮುಗಿಲೊಡ್ಡು ತಾಂ
ಧರ್ಮಮಟ್ಟಿದ ಬೇಹುಕಾರರೆನೆ ಮುತ್ತಿರ್ದುದಯ್
ಲಂಕಾ ಕನಕ ಕೋಂಟೆಯಂ. ಸರಿ ಸಿಡಿಲ್ ಮಿಂಚು
ಗಾಳಿ ಗುಡುಗಿನ ಘೋರ ಮುಂಗಾರ ಭೈರವಂ
ವ್ಯೋಮದೊಳ್ ಭೂಮಿಯೊಳ್ ಕಾಡಿನೊಳ್ ನಾಡಿನೊಳ್
ಕಾಣ್ಬರೆರ್ದೆಯೊಡಲಿನೊಳ್ ತಡಿಗೆಟ್ಟ ಕಡಲಿನೊಳ್      ೨೧೦
ಧಿಮ್ಮೆಂದು ಧೀಂಕಿಟ್ಟು ಪದಮೆತ್ತಿ ಪದಮಿಟ್ಟು
ಪುರ್ಚ್ಚುಕುಣಿತಂ ಕುಣಿದನಾ ತಲ್ಲಣಿಸೆ ಲಂಕೆ !