ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯ ‘ಶ್ರೀರಾಮಾಯಣದರ್ಶನಂ’ ಕನ್ನಡ ಸಾರಸ್ವತ ಪ್ರಪಂಚದ ಮಹಾಸಿದ್ಧಿಗಳಲ್ಲಿ ಒಂದು. ‘ಮಹಾಕಾವ್ಯ’ದ ಕಾಲ ಮುಗಿದು ಹೋಯಿತು ಎನ್ನುವವರಿಗೆ ಒಂದು ಸವಾಲಾಗಿ, ಮಹತ್ತಾದುದಕ್ಕೆ ಕಾಲದ ಕಟ್ಟಿಲ್ಲವೆನ್ನುವುದಕ್ಕೆ ಒಂದು ಸಾಕ್ಷಿಯಾಗಿ ‘ರಾಮಾಯಣದರ್ಶನಂ’ ಸೃಷ್ಟಿಯಾಗಿದೆ. ಹಳೆಯ ಕಥೆ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರ ಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಇದಕ್ಕೆ ಭಾರತೀಯ ಸಾಹಿತ್ಯದಲ್ಲಿಯೆ ಒಂದು ಅನನ್ಯವಾದ ಸ್ಥಾನವಿದೆ. “ಮಿಲ್ಟನ್ ಕವಿಯ ‘ಪ್ಯಾರಡೈಸ್ ಲಾಸ್ಟ್’ ‘ಪ್ಯಾರಡೈಸ್ ರೀಗೇನ್ಡ್’ ಆದಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ” ಎಂಬ ದಿವಂಗತ ರಾಷ್ಟ್ರಕವಿ ಗೋವಿಂದ ಪೈ ಅವರ ಮಾತುಗಳಲ್ಲಿ ‘ರಾಮಾಯಣದರ್ಶನಂ’ ಬೃಹತ್ತು ಮಹತ್ತುಗಳು ಸ್ಪಷ್ಟವಾಗಿ ವ್ಯಕ್ತಗೊಂಡಿವೆ.

ಈ ಮಹಾಕಾವ್ಯಕ್ಕೆ ಬಗೆಬಗೆಯಾದ ಗೌರವಗಳು ದೊರಕಿವೆ. ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರವಾದ ಮೊದಲ ಕನ್ನಡ ಗ್ರಂಥ ಇದು; ರಾಷ್ಟ್ರದ ಅತ್ಯುಚ್ಚ ಸಾಹಿತ್ಯ ಗೌರವವಾದ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆಯಿತು. ಈ ಎಲ್ಲ ಗೌರವಗಳಿಗಿಂತಲೂ ಹೆಚ್ಚಾಗಿ ಇದು ಸಹೃದಯರ ಪ್ರೀತ್ಯಾದರಗಳನ್ನು ಗಳಿಸಿತು. ಈಗಾಗಲೆ ಈ ಮಹಾಕಾವ್ಯದ ಮೂರು ಆವೃತ್ತಿಗಳು ಪ್ರಕಟವಾಗಿವೆ. ಇದರ ಸುಲಭ ಬೆಲೆಯ ಆವೃತ್ತಿಗಾಗಿ ಅನೇಕರು ಸರ್ಕಾರವನ್ನು ವಿಶ್ವವಿದ್ಯಾನಿಲಯವನ್ನು ಆಗಿಂದಾಗ ಪ್ರಾರ್ಥಿಸುತ್ತಲೆ ಇದ್ದರು. ೧೯೬೭ರ ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀ ಕುವೆಂಪು ಹಾಗೂ ಗುಜರಾತಿನ ಕವಿ ಶ್ರೀ ಉಮಾಶಂಕರ ಜೋಶಿ ಇಬ್ಬರನ್ನೂ ಬೆಂಗಳೂರಿನ ನಾಗರಿಕರು ಆಗ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರೇಂದ್ರ ಪಾಟೀಲರ ಅಧ್ಯಕ್ಷತೆಯಲ್ಲಿ ಜನವರಿ ೯, ೧೯೬೯ ರಂದು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಪಾಟೀಲರು ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಸುಲಭ ಬೆಲೆಯಲ್ಲಿ ಒದಗಿಸುವ ಯೋಜನೆ ಸರ್ಕಾರಕ್ಕಿದೆಯೆಂದು ಪ್ರಕಟಿಸಿದರು. ಕಾವ್ಯಪ್ರೇಮಿಗಳ ಉತ್ಸಾಹಕ್ಕೆ ಆಗ ರೆಕ್ಕೆಯೊಡೆಯಿತು. ಮುಂದೆ ಬಗೆ ಬಗೆಯಾದ ಯೋಜನೆಗಳನ್ನು ಪರಿಶೀಲಿಸ ಬಯಸಿ ಸರ್ಕಾರ ವಿಶ್ವವಿದ್ಯಾನಿಲಯದ ಸಲಹೆಯನ್ನೂ ಕೇಳಿತು. ೧೯೭೦ರ ಏಪ್ರಿಲ್‌ನಲ್ಲಿ ಆರು ರೂಪಾಯಿ ಬೆಲೆಗೆ ‘ಶ್ರೀ ರಾಮಾಯಣ ದರ್ಶನಂ’ ದೊರೆಯುವಂತೆ ಮಾಡುವ ಒಂದು ಯೋಜನೆಯನ್ನು ಕನ್ನಡ ಅಧ್ಯಯನ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿತು. ಆಗಸ್ಟ್ ತಿಂಗಳಲ್ಲಿ ಸರ್ಕಾರ ಯೋಜನೆಯನ್ನು ಒಪ್ಪಿತು. ಅದರ ಫಲವಾಗಿ ಈ ಆವೃತ್ತಿ ಪ್ರಕಟವಾಗುತ್ತಿದೆ. ಇದಕ್ಕಾಗಿ ಕನ್ನಡಿಗರು ರಾಜ್ಯ ಸರ್ಕಾರಕ್ಕೆ ಕೃತಜ್ಞರಾಗಿರಬೇಕು.

ಇಂಥದೊಂದು ಯೋಜನೆಯನ್ನು ಒಪ್ಪಿ ಕನ್ನಡ ಸಾಹಿತ್ಯ ಪ್ರೇಮಿಗಳ ಬಹುದಿನದ ಬಯಕೆಯನ್ನು ಈಡೇರಿಸಿಕೊಟ್ಟ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರೇಂದ್ರ ಪಾಟೀಲರನ್ನೂ ಅವರ ಸಹೋದ್ಯೋಗಿಗಳಾಗಿದ್ದ ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಹಾಗೂ ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗ್ಡೆ ಅವರನ್ನೂ ಅವರ ಸಾಹಿತ್ಯ ಸಂಸ್ಕೃತಿಗಳ ಮೇಲಣ ಪ್ರೀತಿ ಅಭಿಮಾನಗಳಿಗಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮುಂದಿನ ಸರ್ಕಾರವೂ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಪ್ರಾರ್ಥಿಸುತ್ತೇನೆ. ಈ ಮಹಾಕಾವ್ಯದ ಸುಲಭ ಬೆಲೆಯ ಅವೃತ್ತಿಯ ಪ್ರಕಟಣೆಗೆ ಅನುಮತಿ ನೀಡಿದ್ದಾರೆ; ವಿಶ್ವವಿದ್ಯಾನಿಲಯದ ಕುಲಪತಿ ಶ್ರೀ ದೇ. ಜವರೇಗೌಡರು ಮತ್ತು ಶಿಕ್ಷಣ ಶಾಖೆಯ ಕಾರ್ಯದರ್ಶಿ ಶ್ರೀ ಕೆ.ಆರ್. ರಾಮಚಂದ್ರನ್ ಈ ಯೋಜನೆಯ ಈಡೇರಿಕೆಯಲ್ಲಿ ಸಹಕರಿಸಿದ್ದಾರೆ; ಮೈಸೂರು ವಿಶ್ವವಿದ್ಯಾನಿಲಯದ ಮುದ್ರಣಾಲಯದ ಮುಖ್ಯಾಧಿಕಾರಿ ಶ್ರೀ ಎಚ್. ನರಸಣ್ಣನವರೂ ಅವರ ಸಹೋದ್ಯೋಗಿಗಳೂ ಆಶ್ಚರ್ಯಕರ ರೀತಿಯಲ್ಲಿ ಮುದ್ರಣ ಕಾರ್ಯವನ್ನು ನಿರ್ವಹಿಸಿದ್ದಾರೆ; ಈ ಸಂಸ್ಥೆಯ ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗದ ಶ್ರೀ ಪ್ರಧಾನ್ ಗುರುದತ್ತ ಮತ್ತು ಶ್ರೀ ಎಚ್.ಎಸ್. ಹರಿಶಂಕರ್ ಅವರು ಕರಡು ಓದುವುದರಲ್ಲಿಯೂ ತಮ್ಮ ಕಾವ್ಯಪ್ರೇಮವನ್ನು ಮೆರೆದಿದ್ದಾರೆ. ಇವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.

ಹಾ.ಮಾ. ನಾಯಕ
ನಿರ್ದೇಶಕ
ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು
ರಾಮನವಮಿ : ಏಪ್ರಿಲ್ ೪, ೧೯೭೧