ಜನ ಚರಣ ಚಲದ್‌ ಧೂಳಿದೂರಂ, ಮೃಗಖುರಾ
‘ಕ್ಷುಣ್ಣ ಶಾದ್ವಲ ಸುಂದರಂ, ಜಲಪಾನ ಸಂತೃಪ್ತ
ಪಕ್ಷಿಪಾದಾಂಕಿತ ಶಿಲಾ ಕಲಾ ಶೈವಾಲ
ಚಿತ್ರಿತಂ, ವೃಕ್ಷಗುಲ್ಮವ್ರತತಿ ಸಂವೃತಂ,
ಝರ ಪತನಘೋಷ ಗದ್ಗದ ವಿಹಗಕೂಜಿತಂ,
ಸಂಕ್ಷಿಪ್ತ ವಿಪಿನದೋಲಿರ್ದುದಾ ನಿಕುಂಜ ಭೂ,
ಕಿಂಶುಕ ಕದಂಬಾದಿ ತರು ನಿಸೇವಿತ ಮಹಾ
ಶಿಂಶುಪಾಶೋಕ ಸಂಶೋಭಿತಂ. ನಿಬಿಡಮಾ
ಶಿಂಶುಪದ ಶಾಖಾಗ್ರದೊಳಗಿರ್ದು, ಕಂಟಕಿತ
ರೋಮ ತನು, ನೋಡುತಿರೆಯಿರೆ ಸಮೀರಾತ್ಮಜಂ ೧೦
ನಿರುದ್ಧೋಚ್ಛ್ವಾಸನೊಲ್ ನಿಷ್ಪಂದಿತಂ, ದೇವಿ
ಇಳಿತಂದಳೊಯ್ಯನೊಯ್ಯನೆ ನಿರ್ಝರದ ತಟಿಗೆ,
ಭಕ್ತಶಿಲ್ಪಿಯ ರಮ್ಯವಿಗ್ರಹಕೆ ದೇವತಾ
ಪ್ರಾಣಮವತರಿಸುವೋಲ್ ಕೊಂಬೆಯೆಳ್ತರದಿಂದೆ,
ಹತ್ತೆ ಸಾರಿರ್ದಳಂ ಕಂಡಾಕೆಯಂ, ಆ
ಕೃಶಾಂಗಿಯಂ, ಮೀಹಮಿಲ್ಲದ ಮಲಿನಗಾತ್ರೆಯಂ,
ವಿವಿಧ ಭಾವ ಕ್ರಕಚ ಪೀಡನಕೆ ಸಿಲ್ಕಿತೊ
ಸಮೀರಜಾತ್ಮಂ! ಸಂತೋಷವುಕ್ಕಿತದನಿಕ್ಕಿ
ದುಃಖಧೂಮಂ ತುಂಬಿದತ್ತದನಿರಿದು ಸೀಳ್ದು
ಉಜ್ವಲಿಸಿತುರಿ ರೋಷಭೀಷಣವಿಷಾದದಾ: ೨೦
“ಇವಳಹುದೆ ಆ ದೇವಿ, ನನ್ನ ಸಾಹಸದಂತ್ಯ
ಗಂತವ್ಯಲಕ್ಷ್ಮಿ! ದಿಟಮಾ ರಾಮನರ್ಧಾಂಗಿ
ಇವಳಲಾ! ಧನ್ಯನಾಂ, ಸಾರ್ಥಕಮೆನ್ನ ಜನ್ಮಂ!
ಅನಿಲದೇವನೆ ನಮೋ; ಸೂರ್ಯದೇವನೆ ನಮೋ;
ದೇವತೆಗಳಿರ ನಮೋ; ಸರ್ವದೇವರ ದೇವ,
ಧರ್ಮಮೂರ್ತಿಯೆ ನಮೋ! ಸೀತೆಯಂ ತೋರ್ದ್ದುದಕೆ,
ಆ ತಾಯಿ ಸಾರ್ದುದಕೆ, ಕೃತಕೃತ್ಯನಾದುದಕೆ,
ಮುಹುರ್ಮುಹುರಿದೋ ನಿಮಗೆ ನಮೋ! ನಮೋ! ನಮೋ!”
ತನ್ನೊಳಗೆ ತಾನಿಂತು ವಂದನೆಯನರ್ಪಿಸಿರೆ,
ಬೀಸುವೆಲರಿಗೆ ಬೀಳ್ವ ಮರದೆಲೆವನಿಗಳೊಡನೆ ೩೦
ಬಳಬಳನುದಿರ್ದ್ದತ್ತು ಕಣ್ಣಾಲಿನೀರ್. ಮತ್ತೆ
ಮರುಕದಿಂದಾಂಜನೇಯಂ : “ಅಯ್ಯೊ, ದಾಶರಥಿ
ಬಣ್ಣಿಸಿದ ತನ್ನ ದಯಿತೆಯ ಚಿತ್ರವೆಲ್ಲಿ? ಈ
ದೀನ ದುಃಖಿನಿಯೆಲ್ಲಿ? ಬರ್ಚಿಸಿದ ಚೆಲ್ವೆಸೆವ
ಚಿತ್ರಪಟಮಂ ಮಸಿಯ ಕೈ ಹಿಸುಗಿ ಬಿಸುಟಂತೆ
ತೋರ್ಪಳೀ ಮಹಿಳೆ! ವಿಧಿಯ ನಿಷ್ಠುರ ಹೃದಯಮಂ
ಸುಡು ಸುಡು, ದಯಾಶೂನ್ಯಮಂ! . . . . .ಬರಿದೆ ಬಯ್ಯಲೇನ್
ಕಾಣದಿರ್ಪುದನಿಲ್ಲಿ ಕಂಡ ಕಾರಣವನಾಂ
ಕೈಬಿಟ್ಟೆನಲ್ತೆ? ನೀಚನ ಮಂಡೆಯಂ ನನ್ನ
ದೋರ್ದಂಡ ಮುಷ್ಟಿವಜ್ರದಿನಪ್ಪಳಿಸಿ ಬಡಿದು ೪೦
ಕೆಡಹದೆಯೆ ಕೆಮ್ಮನಿರ್ದೆನದೇಕೆ ನಾಂ, ಮರದಿ,
ಮರವಟ್ಟನೋಲ್‌? ಇರ್ಕೆ; ಪಶ್ಚಾತ್ತಾಪಮಿರ್ಕೆ.
ದೀವಿಯೇನನೊ ಪೇಳ್ವಳಾಲಿಪೆನ್‌. ತರಿಸಲ್ವೆನ್‌
ಆಬಳಿಂ ಮುಂ ಸಲ್ವ ಮೇಲ್ವಟ್ಟೆಯನ್!”
ಪುಳಿಲ್
ತಾಣದೈಕಾಂತಮಂ ಪೊಕ್ಕುದೆ ತಡಂ ಸೀತೆ,
ಸುತ್ತಂ ನೋಡಿ, ಸುಯ್ದು, ನಿಂತಳಂತರ್ಮುಖಿ,
ಸಮಾಧಿಸ್ಥಳೋಲ್ ಗುಹ್ಯಮಾವುದನೊ ಪೊತ್ತದಂ
ಪೇಳಲಾತುರಮಿರ್ದೊಡಂ ಪೇಳಲಾರದೆಯೆ
ತುಟಿಗಚ್ಚಿ ಬಾಯ್ಮುಚ್ಚಿ ಬಿನ್ನನಿರ್ದ್ದಂದರೋಲ್
ಇರ್ದುವು ಗಿಡಂಮರಂಗಳಲ್ಲಿ, ಸಂತೋಷಮಂ ೫೦
ಚಿಲ್ಲಿ ಮಾಗಿಯ ಮಂಜನೆಲೆಯ ಬಟ್ಟಲೊಳಿಟ್ಟು,
ಪೊತ್ತಿಸಿರ್ಪ್ಪನಿಯ ಕರ್ಪೂರಕಿನರೋಚಿಯಂ,
ಪೂಗಂಪಿನಾರತಿಯನೆತ್ತುವ ನಿಮಿತ್ತದಿಂ
ಸೂಚಿಸಿತ್ತಾ ಸ್ಥಾವರಂ ಶುಭವನವನಿಜೆಗೆ
ಮಂಗಳಾಶೀರ್ವಾದದಾ. “ತಾಯಿ, ಭೂದೇವಿ,”
ಗದ್ಗದಿಸಿ, ಕೈಮುಗಿಯುತಾ ಪ್ರಕೃತಿ ವಿಗ್ರಹಕೆ,
ಮುನ್ನೊರೆದಳಿಂತು : “ನೀನಾದೊಡಂ ಕಾಯಮ್ಮ
ನಾಥವತಿಯಾದೀ ಅನಾಥೆಯಂ. ಲಂಕೆಯಂ
ನಿನ್ನಂಕಮಲ್ತೆ? ಅಂತಲ್ಲದಿರೆ ಈ ಶಾಂತಿ
ನನಗೆ ದೊರೆಯುವುದೆಂತುಟಿಲ್ಲಿ? ಪೆತ್ತಂಬೆಯೇ ೬೦
ಮುದ್ದಿನಿಂದೆತ್ತಿ ಮುತ್ತಿಟ್ಟು ಸಂತೈಸುವೋಲ್
ಮತ್ತೆ ಮಗುವಾದೆನಾಂ! ದೇವತಾತ್ಮಗಳಿಲ್ಲಿ
ಸತ್‌ ಶಕ್ತಿಗಳ್‌ ಸುತ್ತಣಿಂ ಮೂಡಿ ಪೊರೆವುವೆನೆ
ಧೈರ್ಯಮೊಂದುಕ್ಕುತಿಹುದಿಂದೆನಗಭೂತಪೂರ್ವಂ!
ಹರಧನುವನೆತ್ತಿದಂದೆನ್ನ ಮನದನ್ನಂಗೆ
ಹೂಮಾಲೆಯಿಕ್ಕುವಂದುಕ್ಕಿದೊಂದುತ್ಸವಂ
ಬಗ್ಗಿಪುದು ಸುಗ್ಗಿಗೋಗಿಲೆಯಾಗಿ ಮಾಗಿಯಾ
ನನ್ನೆದೆಯೊಳಿಂದು : ನಿನ್ನಂಕಮೆ ದಿಟಂ, ತಾಯೆ,
ಈ ಲಂಕೆಯಂ!”
ಪುಳಿಲ್‌ಚೆಲ್ವನಾಲಿಗಳಿಂದೆ
ಪೀರ್ದೀಂಟಿ ಪೂಜಿಪೋಲೀಕ್ಷಿಸುತೆ, ಚಲಿಸಿದಳ್ ೭೦
ಸುರಸುತೋಪಮೆ ಧರಣಿಸುತೆ, ನಿರ್ಝರಂ ನೆಗೆವ
ಕಡುಗೆಯ್ಮೆಯಂ ಸಹಿಸೆ ನೀರ್ಬೀಳಕೊಂದಂಚು
ಕಟ್ಟಿದೊಲಗುರ್ವಿರ್ದ ಪಾಸರೆಗೆ. ನೋಡಿದಳ್‌
ಆ ಮಹೋನ್ನತಿಯಿಂದೆ ಜಲಪಾತದಾಳಮಂ,
ಕೌಂಗುತರುಮೇಯಮಂ. ಕಾಣ್ಮೆಗಳ್ಕಿದ ಮನಂ
ಮತ್ತೆ ಸಂತೋಷಿಸಿತು. ಭಕ್ಷಿಸೆ ತೆರೆದ ಬಾಯ್‌
ರಕ್ಷಿಸುವ ಮನೆಯಾಯ್ತು : ಕೊಟ್ಟವಧಿಯೊಳಗಾಗಿ
ತನಗೆ ರಾಮನ ರಕ್ಷೆಯೊದಗದಿರೆ, ರಾವಣ
ಬಲಾತ್ಕಾರದಿಂದಮುಂ ಮೇಣವನೊಡನೆ ಬೇಳ್ವ
ಹೇಸಿಗೆಯ ಗತಿಯಿಂದಮುಂ ಪಾರಾಗಲಿದುವೆ ೮೦
ಪರಮಾಶ್ರಯಂ! ತೊರೆಯನನುಕರಿಸಿ ಧುಮುಕಲ್ಕೆ,
ನೀರಂತೆವೋಲ್, ತುಂತುರಾಗದೇನೀ ನನ್ನ
ಬಡವೊಡಲ್? ಪೊರೆಯಾಗದೆನ್ನ ಛಿದ್ರಿತ ಶವಂ;
ಕರುಣಿಯೀ ನಿರ್ಝರಿಣಿ; ಕಡಲನತಿ ದೂರಮ್;
ನೆಲಂ ಪೆತ್ತಳೆಂ; ನೀರ್ ಬಸಿರ್ ಪೇಸುವುದೆ? ಮೀನ್ಗೆ
ಪಸಿವಿರದೆ? ಪಲ್ಲಿರದೆ? ತಿಂದಿಲ್ಲಗೈಯದೇನ್‌
ಪರದೇಸೀಯೀ ಪಾಳ್ಕಾಯಮಂ?”
ಕೊರಳ್‌ ಬಿಗಿದು
ಮೂಗಳ್ತಳಾ ದಿವ್ಯದುಃಖಿನಿ ಸಗದ್ಗದಂ,
ತನ್ನ ಕಲ್ಪನೆ ಮಥಿಸಿದಾ ತನ್ನ ದುರ್ಗತಿಗೆ
ತಾನೆ ಕುದಿದೆರ್ದೆ ಕರಗಿ ಮರುಗಿ. ಧೃತಿಯಿಂ ಮತ್ತೆ ೯೦
ತೊಳೆದಳಶ್ರು ಮಲಿನ ಕಪೋಲಮಂ. ಝರ ನಟತ್‌
ಸ್ಪಟಿಕ ಶೀತಲ ಲಸತ್ಕೋಮಲ ಶಿವಾಂಬುವಂ
ಕೊಂಡಳಂಗೈಗಂಜಲಿಯನೆತ್ತಿದಳ್ ತನ್ನ
ವಂಶಾಧಿದೇವನಿಗೆ ರವಿಗರ್ಘ್ಯಮಂ : “ನಮೋ,
ಹೇ ಜಗಚ್ಚಕ್ಷು, ವಂಶದ ಮಗಳ್ ಪ್ರಾರ್ಥಿಪಳ್
ಕೇಳ್, ಕರುಣಿ. ನೀಂ ವಿಶ್ವಶಕ್ತಿಪ್ರತೀಕನಯ್;
ಮೇಣ್ ಋತಪ್ರತಿಮಾ ಸ್ವರೂಪನಯ್; ಪ್ರತಿದಿನಂ
ಪ್ರತ್ಯಕ್ಷಮಪ್ಪ ಪರಮಾತ್ಮನಯ್ ನೀಂ ನಿಖಿಲ
ಜಲ ಸಸ್ಯ ಮೃಗ ಮನುಜ ಜೀವರಿಗೆ. ನಿನ್ನಿಂದೆ ೧೦೦
ಲೋಕಂ ನವೀನಂ ನಿರಂತರಂ. ನಿನ್ನಿಂದೆ
ಸೃಷ್ಟಿಗುತ್ಸಾಹಂ; ಲಯಂ ಸೃಷ್ಟಿಮುಖಿ ನಿನ್ನ
ಚೈತನ್ಯದಿಂ; ಸ್ಥಿತಿಗೆ ನೀನೆ ಗತಿ, ಮತಿ, ಶಕ್ತಿ,
ಮೇಣಕ್ಷರಜ್ಯೋತಿ. ನಾಮರಿಯದಿರ್ಪೊಡಮೇನೊ?
ಕಳ್ತಲೆಗೆ ಮಿಳ್ತುವಾಗಿರ್ಪಂತೆ, ಪಾಪಮಂ
ಸಂಹರಿಸಿ ಪುಣ್ಯಮಂ ಪೊರೆವೆ ನೀಂ, ಹೇ ಜಗತ್‌
ಕಲ್ಯಾಣಮೂರ್ತಿ. ರಕ್ಷಿಸೊ ನಿನ್ನ ಇಕ್ಷ್ವಾಕು
ಕುಲ ಕುಮಾರೆಯ ಪುಣ್ಯಮಂ, ಮಾನಮಂ, ಮತ್ತೆ
ವಂಶಗೌರವ ಕೀರ್ತಿಯಂ! ವಿಶ್ವತಿಮಿರಮಂ
ಕೊಲೆಗೈವ ನಿನಗೆ ರಾಕ್ಷಸನೆದೆಯ ಪೊಲೆಗುಹೆಯ
ಕತ್ತಲೆಯ ಕಿರುಬಿತ್ತರಂ ಪಿರಿದೆ? ಕುಲಗುರುವೆ, ೧೧೦
ಕೈಬಿಡದಿರೆನ್ನಂ ಪತನಗತಿಗೆ, ರಕ್ಷೆಯಿರೆ
ರಘುರಾಮ ಸತಿಗೆ ನೀಂ, ಮಂಗಳಮಹುದೊ ದಿಟಂ
ಮತ್ ಪ್ರಾಣಪತಿಗೆ!”
ಅರ್ಘ್ಯವನೆತ್ತಿದಂಜಲಿಯ
ತೀರ್ಥಮೊಯ್ಯನೆಯೆ ತೊಟ್ಟಿಕ್ಕುತಿರೆ, ತೊರೆಯ ಮೊರೆ
ಪಕ್ಷಿಕಲರುತಿ ಪುಷ್ಟಮೋಂಕಾರ ಘೋಷಮಂ
ಜಪಿಸಿ ಪರಿದಿರೆ, ನಿಮೀಲಿತನೇತ್ರೆಯಾ ಕೃಶಗಾತ್ರೆ
ಧ್ಯಾನಗಂಗಾಸ್ರೋತ ಸಂಸ್ನಾತೆ ತಾಂ ಕೇಳಿದಳ್,
ವಿಸ್ಮಿತಾಂತಃಕರಣೆ, ದೇವಕಂಠಧ್ವನಿಯ
ತಾರ ಮಂದ್ರೋದಾರಮಂ. ನೀರ್ದನಿಯ ಮೀರ್ದು,
ಧುಮ್ಮಿಕ್ಕುತುರುಳ್ವಬ್ಬಿಯಬ್ಬರವನಾಕ್ರಮಿಸಿ ೧೨೦
ಪೆರ್ಚಿ, ಪರ್ವಿದುದು ಖಗರವ ಸಮಶ್ರುತಿಯಾಗಿ
ವೇದನಾದೋಪಮಂ ಆ ಗಂಭೀರವಾಣಿ :
“ಇರ್ಪುದುತ್ತರ ದಿಶೆಯೊಳಂಬುಧಿಯಿನಂಬುಧಿಗೆ
ಪೂರ್ವ ಪಶ್ಚಿಮ ದಿಶಾಧೀಶರಣಿಮಾಡಿದರೊ
ಕುಂಭಿನಿಗೆ ತಲೆಗಿಂಬನೆನೆ ಪರ್ವಿ ಪರ್ವತಂ,
ಚಂದ್ರಚೂಡಪ್ರಿಯಂ, ಹಿಮವಂತನಾಮಂ,
ನಗೇಂದ್ರ ರುಂದ್ರಂ, ತೆಂಕಲೊಳಲ್ಲಿಗನತಿದೂರಂ
ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ
ಸರಯೂ ನದಿಯ ಮೇಲೆ. ದೇವ ದಶರಥನಾಳ್ದ
ರಾಜಧಾನಿಯದರ್ಕ್ಕೆ ಮನುಕೃತಮಯೋಧ್ಯೆ. ಆ ೧೩೦
ಕ್ಷಿತಿಪತಿಗೆ ಮೂವರಿರ್ದರ್ ಚೆಲ್ವನೀರೆಯರ್
ಕೌಸಲೆ ಸುಮಿತ್ರೆಯರ್ ಕೈಕೆ. ಮಕ್ಕಳವರ್ಗೆ
ರಾಮ ಲಕ್ಷ್ಮಣ ಭರತ ಶತ್ರುಘ್ನರಾದರಯ್‌,
ಚಕ್ರವರ್ತಿಗೆ ಚತುರ್ಭುಜಗಳೋಲ್‌. ಅಗ್ರಜಂ,
ನೀಲಮೇಘಶ್ಯಾಮಕೋಮಲಂ,” ಜನಕಜೆಗೆ
ನಾಳ ನಾಳದಿ ದುಮುಕುತಿರೆ ಜೇನ್ಸೊಗಂ, ಮೇಯ್ಗೆ
ಮುಳ್ನವಿರ್ ಮೂಡಿ ರಸವಶವಾಗುತಿರೆ ಮನಂ,
ದ್ರವಿಸುವೊಲ್ ಬಾಷ್ಪಾರ್ದ್ರ ಚೇತನಂ, ಮತ್ತಮಾ
ಮುಂದುವರಿದುದು ದಿವ್ಯವಾಣಿ ” : ಚೇತೋಹರಂ,
ಮನ್ಮಥಂಗೆನಿತೊಮಡಿ ಸುಂದರಂ, ಕಲಿಧನ್ವಿ, ೧೪೦
ಭೀಮವಿಕ್ರಮಿ, ಶಾಸ್ತ್ರಕೋವಿದಂ, ದೈತಾರಿ,
ಮಂತ್ರಾಸ್ತ್ರಶಸ್ತ್ರನಿಪುಣಂ, ಚಂದ್ರರಮ್ಯನಾ
ರಾಮಚಂದ್ರಂ ಶಿವಧನುವನೆತ್ತಿ ಸೀತೆಯಂ
ಮಿಥಿಳೇಂದ್ರ ಸಂಪ್ರೀತೆಯಂ, ಧರಾಜಾತೆಯಂ,
ಲೋಕವಿಖ್ಯಾತೆಯಂ ಮದುವೆನಿಂದಂ ಅನರ್ಘ್ಯ
ಸೌಂದರ್ಯ ಲಕ್ಷ್ಮಿಯಂ ತ್ರ್ಯಭುವನದಾ!”
‘ಆ’ ಎಂಬ
ಆಲಾಪನೆಯ ದೀರ್ಘ ಮಾಧುರ್ಯಮಂತ್ಯಮಂ
ಸೇರ್ವನಿತರೊಳೆ ದೇವಿ, ತಾಳಲಾರದೆ, ಶುಭದ
ಸಂದೇಶ ಕಾರಣವನರಿಯುವ ಕುತೂಹಲಕೆ
ಕಣ್ದೆರೆದಳತಿಸುಖಮುಖೀ : ಹರಿಯುತಿರ್ದತು ೧೫೦
ತೊರೆ, ಮೊರೆದು, ಭೋರ್ಗರೆಯುತಿರ್ದತ್ತು ಝರಶರ
ನಿಪಾತಘೋಷಂ. ಶಿಶಿರರ್ತು ಪೂರ್ವಾಹ್ನ ರವಿಯ
ರೈರಶ್ಮಿ ನಲಿದುದು ತರಂಗಾಗ್ರದೊಳ್ ಮಿಣುಕಿ
ಮಿಂಚಿ. ಹಕ್ಕಿಗಳುಲಿಗಳಡವಿಜೋಗುಳವೆನಲ್
ತೂಗಿದುವು ಕಿವಿದೊಟ್ಟಿಲಂ. ಕಾಣದಾರುಮಂ
ಬೆರಗಾಗಿ : “ಕೇಳ್ದೆನಲ್ಲವೆ ದಿವ್ಯವಾಣಿಯಂ?
ಪೇಳ್ದುದೈಸಲೆ ಶುಭದ ವಾರ್ತೆಯಂ? ಕಣ್ದೆರೆಯೆ,
ಕಿವಿಮುಚ್ಚಿದಂತಾಯ್ತು! ಕಾಣೆನಾರುಮನಂತೆ
ನಿಂತುದಾ ವಾಣಿಯಂ! ಕುಲದೈವ ರವಿಕೃಪೆಯೊ?
ಪೆತ್ತಮ್ಮ ಭೂಮಿತಾಯಿಯ ಕೃಪೆಯೊ? ಮೇಣಾವ ೧೬೧
ವೃಕ್ಷಯಕ್ಷನ ವಚನ ಸಾಂತ್ವನವೊ? ಮೇಣೆನ್ನ
ಪಸಿದ ಮೆದುಳಿನ ಬೆಮೆಯೊ? ಬಯಕೆಯೊಡ್ಡಿದ ಬರಿಯ
ಬಯಲೊ? ರಕ್ಕಸ ಕವಡೊ? — ಅಲ್ತಲ್ತು! ದಿಟಮೆ ದಲ್!
ಗಾಂಭೀರ್ಯಮೆಲ್ಲಿ ಕಪಟಕೆ? ಭ್ರಾಂತಿಗಾ ಧ್ವನಿಯೆ?
ಏಂ ಮಧುರಮೇಂ ಶಾಂತಮೇಂ ಧೀರಮಿರ್ದುದಾ
ಕಂಠಘಂಟಾರವಂ! ಈ ಚೆಲ್ವನೀಕ್ಷಿಸಲ್‌
ಸುರರೆನಿತೊ ಚರಿಪರಿಲ್ಲಿಗೆ. ನೋಡದಿರ್ದೊಡೇಂ
ನರರ ಕಣ್‌? ಪ್ರೇಕ್ಷಕರಭಾವದಿಂದಿಂತಪ್ಪ
ಸೌಂದರ್ಯಮಂ ವ್ಯರ್ಥಮಾಗಿಸಲ್ಕೊಪ್ಪದೀ
ಸೃಷ್ಟಿ. ಆವನೊ ಸುರನಿರಲ್‌ವೇಳ್ಕುಮೆನ್ನಮೇಲ್ ೧೭೦
ಕರುಣಿ, ಸಂತೈಸಲೆನ್ನಂ, ನುಡಿದನಾ ಮಧುರ
ವಾಕ್ಯಂಗಳಂ! ಏನಾಮಾರಾನುಮಿರ್ಕ್ಕೆ!
ಧನ್ಯೆಯಾನೆನ್ನ ಹೃದಯೇಶ್ವರನ ರೂಪಗುಣ
ನಾಮಮಯ ಕಾವ್ಯಮಂ ಕೇಳ್ದು. ಸಟೆಯಾದೊಡೇಂ?
ದುಃಖಜೀವಿತೆಯೆನಗೆ ಧೈರ್ಯಮೀವುದೆ ದಿಟಂ;
ಕಷ್ಟಬಂಧಿತೆಯೆನಗೆ ನೆಚ್ಚನೀವುದೆ ದಿಟಂ;
ನಿಷ್ಠೆಯಂ ಸಾಧಿಸುವಳೆನಗೆ ಹರಕೆಯೆ ದಿಟಂ;
ಪ್ರತ್ಯಾಶೆಯಾ ಶಿಷ್ಟಮಿಷ್ಟಮೆ ದಿಟಂ!”
ಮತ್ತೆ
ಅರ್ಘ್ಯಪೂರ್ಣಂ ಕರಪುಟಾಂಜಲಿಯನೆತ್ತಿದಳ್;
ಕಣ್ ಮುಚ್ಚಿದಳ್. ಮತ್ತೆ, ಇಂದ್ರಿಯಾತ್ಮಕ ಮನಂ ೧೮೦
ವಿದ್ಯುದಣು ಚಕ್ರನರ್ತನದಿಂದೆ ವರ್ಣಮಯ
ಸೃಷ್ಟಿ ವೈವಿಧ್ಯಮಂ ರಚಿಪೊಲಾ ಜಲಪಾತ
ಘೋಷದಿಂದುಣ್ಮಿದುದೆನಲ್ ಕಿವಿಗೆವಂದುದಾ
ಆಕಾಶ ವಾಕ್:
“ನೀನರಿತಿರ್ಪುದಂ ನೀನೆ
ಕಂಡುಂಡುದಂ ನಿನಗೆ ಪೇಳಲೇಂ ಸಾರ್ಥಕಂ?
ಮುನ್ನೊರೆವೆನಾಲಿಸಾ, ಸುಗ್ರೀವ ಸನ್ಮಿತ್ರ
ಶ್ರೀರಾಮ ಪುಣ್ಯಸತಿ: ದುರುಳ ಲಂಕಾಧಿಪಂ,
ಮಾರೀಚ ಮೃಗಯಾ ನಿಮಿತ್ತದಿಂ ರಾಮನಂ
ಮೇಣಂತೆ ಲಕ್ಷ್ಮಣನುಮಂ ದೂರಮೆಳೆತಟಂ
ಮಾಡಿ, ಲಂಕೆಗೆ ನಿನ್ನನಾ ಪಂಚವಟಿಯಿಂ ೧೯೦
ಕವರ್ದುಯ್ದನಂತರಂ ದುಃಖಹತಚೇತಸಂ,
ದೀನಾತಿದೀನಮತಿ, ನಿನ್ನ ಪತಿ, ದಾಶರಥಿ
‘ಹೇ ವರಾರೋಹೇ, ಅನಿಂದಿತೇ, ಸರೋಜಮುಖಿ,
ದಯಿತೆ, ಮೈಥಿಲಿ, ಸೀತೆ’ ಎಂದೊರಲ್ದಲೆದಲೆದು
ಕರೆಕರೆದರಸಿ, ಮರಣಮುಖಿ ಜಟಾಯುವಿನರಿತು
ನಿನಗೊದಗಿದಪದಶೆಯ ಕಥೆಯಂ, ನಿರಾಶಾ
ಕಬಂಧನಂ ಕೊಂದು, ಮುನ್ನಡೆಯೆ, ತಾಪಸಿ ಶಬರಿ
ತನ್ನ ಜೀವವನಿತ್ತು ರಕ್ಷಿಸಿದಳೆಲೆ ದೇವಿ
ನಿನ್ನಾಣ್ಮನಂ. ಮುಂದೆ ವಾನರ ನೃಪೇಂದ್ರನಾ
ರವಿತನಯ ಸುಗ್ರೀವನೊಳ್ ಲಭಿಸಿದುದು ಮೈತ್ರಿ, ೨೦೦
ಸುಕೃತಮಂಗಳೆ, ನಿನ್ನ ಜೀವಿತೇಶ್ವರಗೆ. ಆ
ವಾನರವರೇಣ್ಯಂ ಕಪಿಧ್ವಜಾಲಂಕೃತಾ
ಗಿರಿಗಹ್ವರಾದ್ಭುತಾ ಕಿಷ್ಕಿಂಧೆಯನ್ನಾಳ್ವ
ರುಂದ್ರವಿಕ್ರಮಿ. ನಾನವಂಗನುಚರಂ, ಪೂಜ್ಯೆ,
ನಿನ್ನ ಮಾರ್ಗಿತಕಾಗಿ ಬಂದಸಂಖ್ಯೇಯರೊಳ್,
ಶತಯೋಜನಾಂಭೋಧಿಯಾ ಪಾರದೊಳ್ ನಿಂದು
ನಿನ್ನ ವಾರ್ತೆಯನುಯ್ವ ನನ್ನಂ ನಿರೀಕ್ಷಿಸುವ
ಸಾಧನಾಸಕ್ತರೊಳಮೇಯ ಶಕ್ತರೊಳೊರ್ವ
ಸಾಮಾನ್ಯನೆಂ. ಪುತ್ರನಂಜನಾದೇವಿಗಾಂ;
ಮರುತನಿಂ ಸಂಭವಿಸಿದಾಂಜನೇಯಂ!”
ವಾಣಿ
ಮಾಣ್ದುಂ ಸುಖಸ್ವಪ್ನಭಂಗ ಭಯಭೀತೆ, ಸತಿ, ೨೧೦
ಕಣ್ದೆರೆಯಲಂಜಿರಲ್, ಅರ್ಘ್ಯಮೆತ್ತಿದ ಕೈಯ
ಅಂಜಲಿಗದೇನೊ ಬಿಳ್ದವೊಲಾಗುತವಳ ಮೆಯ್
ಜುಮ್ಮನೆ ನವಿರ್ನಿಮಿರಲೊಯ್ಕನೆ ಮಲರ್ದುವಾ
ಮುಗುಳುಗಣ್: ಗೋಚರಿಸಿತರ್ಘ್ಯ ತೀರ್ಥದೊಳೊಂದು
ಪೊನ್ನುಂಗುರಂ ಬಿಸಿಲೊಳುಜ್ವಲಿಸಿ ಥಳಥಳಥಳನೆ
ಥಳಿಸಿ, ಕಿವಿಯಾಲಿಕೆಗೆ ತಾಂ ಕಣ್ಣುಮಿತ್ತುದೆನೆ
ಸುರ ಸಾಕ್ಷಿಯಂ! ಸುಖಂ ಶಂಕೆಗಾಸ್ಪದಮಾಗೆ
ಕಣ್ಣಾದುದೆತ್ತೆತ್ತಲುಂ ಭಯಂ. ವಿಸ್ಮಯಂ
ಸುಯ್ದುದೇನೊಂದಪೂರ್ವಮನಲ್ಲಿ ಕಾಣದಿರೆ ೨೨೦
ಸುತ್ತಣಾ ಪ್ರಕೃತಿದೃಶ್ಯದ ಯಥಾಸ್ಥಿತಿಯ ನಿಯಮ
ನಿಷ್ಠೆಯಲಿ. ಬೆದರುತದ್ಭುತಕೆ ಚೀರ್ದಪಳೊ ಮೇಣ್
ಮೂರ್ಛೆಬೀಳ್ವಳೊ ಅಬಲೆ ಎಂಬನಿತರೊಳೆ, ಮರಳಿ
ದನಿಗೇಳ್ದುದಮರ್ದು ಸೋರ್ದಂತೆ: “ಒಳಸೋರದೊರ್,
ಮಾತೆ; ಕಾಣ್, ನಿನ್ನಾಣ್ಮನಂಗುಳಿಯಕಮಲ್ತೆ
ನೀನೆತ್ತಿದರ್ಘ್ಯದೊಳದೊ ಮಹಾರ್ಘ್ಯಮೆಸೆಯುತಿದೆ,
ಹೇ ಪುಣ್ಯಲಕ್ಷ್ಮಿ! ” ಬೆಕ್ಕಸವಟ್ಟು ನೋಡಿದಳ್:
ಮತ್ತಮತ್ತಂ ನೋಡಿದಳು ನೋಟಮಂ ನಟ್ಟು,
ನಂಬಲಾರದ ಸೊಗಕೆ ಮರಂಬಟ್ಟು! ಪ್ರಕೃತಿಯಂ
ತಾಂ ಸಸಂಭ್ರಮೆಯಾದವೋಲ್, ಪೀಲಿನವಿಲೊಂದು, ೨೩೦
ಪೀತಾಂಬರದ ಪಿಡಿಯ ಪಿಂಛ ಚಾಮರದಂತೆ
ಕಂಗೊಳಿಸಿ, ಪಾರಿದತ್ತಾ ದಡದಿನೀ ದಡಕೆ,
ನುಣ್‌ತಿಪ್ಪುಳೆದೆ ನೀರ್ಕೀಸುವಂತೆ. ಬೆಚ್ಚಿದೊಲ್‌,
ತೆಕ್ಕೆನುಕ್ಕಿದ ಸಂತಸಕೆ ಕೊರಳ್ ಬಿಚ್ಚಿದೊಲ್‌,
ಹಕ್ಕಿ ಹಾಡಿದುವೆಕ್ಕೆಯುಲಿಗಳಂ. ತಂಬೆಲರ್
ತರುಗಳೊಳ್ ಮರ್ಮರಿಸಿದತ್ತು, ತನಗೊದವಿತೆನೆ
ರತ ಗದ್ಗದಂ. ಪನಿಗಳುಂ ಪೂಗಳುಂ ಸೇಸೆ
ತಳಿದವು ತೊರೆಗೆ, ನೀರಿಗೊದಗೆ ರೋಮಾಂಚನಂ.
ರವಿಕಿರಣಸಂಬಂಧಿ ಜಲಪಾತಶೀಕರಂ
ನಿರ್ಮಿಸಿರ್ದಿಂದ್ರಚಾಪಂ ದೃಶ್ಯಮನಿತುಮಂ ೨೪೦
ತುಂಬಿತೆಂಬಂತೆ , ಸೀತೆಯ ಕಣ್ಗೆ ಲೋಕಮೇ
ರಂಜಿಸಿತು ನವರತ್ನಧೂಳಿಯನೆರಚಿದಂತೆ.
ಜಲತರಂಗಗಳೆ ಬಹುವೀಣೆಗಳನೊಡನೆ
ಮಿಡಿದುವೆನೆ ತಂತಿಯಂಚರಮುಣ್ಮತಿರೆ, ನೋಡೆ
ನೋಡೆ, ಆ ಇಂದ್ರಧನುರಾಕಾಶಮನೆ ಕಡೆದು
ಕೈಗೈದು ಬರ್ಚಿಸಿದ ಚೆಲ್ವು ಪುತ್ತಳಿಯೆನಲ್,
ಘನಿಸಿತಯ್, ನವ್ಯ ನವರತ್ನರೋಮಾಜಿನದ
ಹೊಂಗಪಿಯ ರೂಪಮಲ್ಪಂ ಮೇಣ್ ಮಹಾದ್ಭುತಂ!
“ಗೆಲವಕ್ಕೆ! ಸೊಗವಕ್ಕೆ! ಶುಭವಕ್ಕೆ! ಶಿವಮಕ್ಕೆ!
ಗೆಲ್ಗೆ ಧರ್ಮಂ! ಗೆಲ್ಗೆ ಶರ್ಮಂ! ಋತಂ ಗೆಲ್ಗೆ! ೨೫೦
ಗೆಲ್ಗೆ ರಘುರಾಮಚಂದ್ರಂ! ಗೆಲ್ಗೆ ಮಿಥಿಳೇಂದ್ರ
ಸುತೆಯ ಹೃದಯ ಸರೋಜ ಶುಭ್ರ ಕುಟ್ಮಲ ಮಧುರ
ಮಧುಷಟ್ಟದಂ! ಗೆಲ್ಗೆ, ಸರ್ವ ಕಪಿಕುಲ ಗರ್ವ
ಧೈರ್ಯ ಪಾರಾವಾರನಾಂಜನೇಯಂ ಗೆಲ್ಗೆ!
ಕೈಮುಗಿವನಿದೊ, ದೇವಿ, ಸುಗ್ರೀವನನುಚರಂ,
ಶ್ರೀ ರಾಮ ಸದ್ಧರ್ಮ ದೂತಂ!”
ತನಗೆ ಶುಭವೇಳ್ದು
ಮನಕೆ ನಿಶ್ಯಂಕೆಯಂ ಮಾತೃಭಾವವನೆರ್ದೆಗೆ
ನೆಮ್ಮದಿಯನಾತ್ಮಕುಕ್ಕಿಸುತಿದಿರೆ ಮೈದೋರ್ದ
ಕಪಿರೂಪಿಯಾಂಜನೇಯನ ದಿವ್ಯಶೋಭೆಯಂ
ಕಂಡು, ಮೇಲೇಳಲಾರದ ಹರ್ಷಭಾರದಿಂದಿಂ ೨೬೦
ಕುಳ್ತಲ್ಲೆ ತಳ್ತು, ರಾಮನ ಮುದ್ರಿಕೆಯನಪ್ಪಿ
ಪಿಡಿದಿರ್ದ ಕರದಿಂದೆ ಪರಸಲೆಳಸಿಯುಮದಂ
ನೆಗೆಹಲಾರದೆ, ನುಡಿಯಲೆಳಸಿಯುಂ ಬಾಯ್ ಬರದೆ
ಭಾವಮೂಕೋದ್ವಿಗ್ನೆ, ನಡನಡನೆ ನಡುಗುತಾ
ಭದ್ರೆ ತುಟಿಯದುರಿದಳ್ ಬರಿದೆ. ವಾತ್ಸಲ್ಯದಿಂ
ಕ್ಷೇಮ ಕಾತರೆ ದೇವಿ ಸುತ್ತಲೆತ್ತೆತ್ತಲುಂ
ಕಣ್ಣಟ್ಟುತಿರಲಂಜನಾ ಹಿತಾಕಾಂಕ್ಷೆಯಿಂ,
ನುಡಿದನಣುವಂ:
“ಬೇಡೌ ಬೆದರ್ಕೆ,ನನಗಾಗಿ,
ತಾಯಿ. ನಿನಗಲ್ಲದೆಯೆ ದರ್ಶನಾಸಾಧ್ಯಮೀ
ಯೋಗಜಂ ರೂಪಮಪ್ರಾಕೃತಂ; ಮೇಣೆನ್ನ ೨೭೦
ದನಿಯುಮಶ್ರಾವ್ಯಮನ್ಯರ್ಗೆ. ಮೇಣೇ ನೆಲಂ
ಮಾಯಾಪ್ರವೀಣ ದಾನವರ ಬೀಡಾದೊಡಂ.
ನನ್ನ ಹಿತರಕ್ಷಣೆಗೆ ನಾಂ ಸಮರ್ಥನೆ ವಲಂ,
ಹೇ ತಪಸ್ವಿನಿ, ನಿನ್ನ ನಲ್ವರಕೆಯಿಂ. ಪೂಜ್ಯೆ,
ನಿಡುವೊಳ್ತನಾಂ ಕಳೆದೆನಾಗಳೆಯೆ. ಬೇಗದಿಂ
ಪೋಗವೇಳ್ಕುಂ ರಾಮಸನ್ನಿದಿಗೆ. ನೀನಿರ್ಪ
ನೆಲೆಯರಿತು ವಾರ್ತೆಯಂ ತಿಳಿಸಲಾಜ್ಞಪ್ತನೆಂ
ಕಪಿರಾಜ ಸುಗ್ರೀವನಿಂ . ಕಡಲನುತ್ತರಿಸಿ
ನಿನ್ನೆ ಬೈಗಿನೊಳಿಲ್ಲಿಗೀ ಲಂಕೆಗೈತಂದೆನವ್.
ಪೆರ್ಬಾಗಿಲೊಳ್ ಪೊಕ್ಕೆನಾಕ್ರಮಿಸಿ ಭಂಗಿಸುತೆ ೨೮೦
ಲಂಕಾಧಿದೇವಿಯಂ. ಯೋಗಮಾಯಾ ಬಲದಿ
ಸೋಸಿ ಕಂಡಿಹೆನಖಿಲ ನಗರಿಯಂ. ತಿಳಿದೆನಾಂ
ರಾಕ್ಷಸ ರಹಸ್ಯಂಗಳಂ. ಬೆಳಗು ಜಾವದೊಳ್
ಬಂದೆನಿಲ್ಲಿಗೆ; ಕುಳ್ತೆನೀ ಶಿಂಶುಪದ ಮರದ
ಶಾಖಾಗ್ರದೊಳ್. ಕಂಡೆನೆಲ್ಲಮಂ, ಕಲ್ಯಾಣಿ;
ಮೇಣ್ ಕೇಳ್ದೆನಖಿಲಮಂ ನಿನ್ನ ಕೀರ್ತಿಗೆ ಮತ್ತೆ
ತೇಜಕ್ಕೆ ಕೋಡು ಮೂಡಿಪ ದಿವ್ಯಭಾಷಣವದಂ!
ಧನ್ಯನಾಂ; ಆಲಿಸಿದೆನಾತ್ಮ ಸಂಸ್ಫೂರ್ತಿಕರಮಂ
ನಿನ್ನಸ್ಖಲಿತ ಚಿತ್ತವೃತ್ತಾಂತಮಂ? ಪೂಜ್ಯೆ,
ಕಂಡುದೆಲ್ಲವನೊರೆವೆನಾ ರಾಮಭದ್ರಂಗೆ, ೨೯೦
ನನ್ನ ಪೇಳ್ವುದೆ ಸಾಲ್ವೊಡಂ, ನಿನ್ನ ಕಡೆಯಿಂದೆ
ಕಂಡುದಕೆ ಚಿಹ್ನೆಯೊಂದಂ ಪಡೆದು ಪೋಪುದುಂ
ನೀತಿ. ಜವದಿಂ ನೀಡು ಕುರುಪಂ, ಜಗದ್ವಂದ್ಯೆ;
ತಳುವಲಾಗದು; ಸಾಗರೋಪಮಮಿಹುದು ಮುಂದೆ
ಮಾಳ್ಪ ಕಜ್ಜಂ!”
ಇಂತೊರೆದು ಕೈಮುಗಿಯುತಿದಿರ್
ನಿಂದ ಹನುಮಂತನಂ ಪೆರ್ಮೆಯಿಂದೀಕ್ಷಿಸುತೆ,
ಮನದನ್ನನುಂಗುರವನಿಟ್ಟು ಪಣೆಗೆದೆಗೊತ್ತಿ,
ಮತ್ತಮತ್ತಂ ತೆಗೆದು ಕಣ್ಗೊತ್ತಿ, ಮುತ್ತಿಟ್ಟು,
ಆ ಅವಿನ್ನಾಣದೊಳೆ ತನ್ನಾಣ್ಮನಂ ಕಂಡ
ಕಾದಲ್ಮೆಯುನ್ಮಾದದಿಂದೆ ರಸವಶೆಯಾಗಿ ೩೦೦
ಪ್ರೇಮದ ಸಮಾಧಿರತ ಸಂಮಗ್ನೆ, ತೊದಲುಣ್ಮೆ,
ಪಸುಳೆವೊಲ್ ಸಂಬೋಧಿಸಿದಳಿಂತು:
“ಕುಶಲಮತಿ,
ಹೇ ಮಹಾ ವಾನರೋತ್ತಮ, ನೀಂ ವಿವೇಕಿಯೈ,
ಹರ್ಷಾತಿಸಂಮೂಢಮೆನ್ನ ಮತಿಯಂ ಕ್ಷಮಿಸಿ
ತಾಳ್ಮೆದೋರ್. ಬಹುದಿನಾನಂತರಂ ಲಭಿಸಿತೀ
ನಿನ್ನನೀಕ್ಷಿಸುತೆನ್ನ ಪತಿವಾರ್ತೆಯಂ ಕೇಳ್ವ
ಮಂಗಳ ಸುಖಂ. ಮಾಡದಿರದರ್ಕ್ಕೆ, ಸ್ವಪ್ನದೊಲ್,
ಶೀಘ್ರೋಪಸಂಹಾರಮಂ. ಸ್ವಪ್ನಮಲ್ಪಾಯು;
ದೀರ್ಘಾನುಭವರೂಪಿಯಲ್ತೆ ಸತ್ಯಂ. ಶ್ರದ್ಧೆ
ಸಂಶಯಾತ್ಮಕಮಾಗುವನಿತುಮಾಕಸ್ಮಿಕಂ ೩೧೦
ಬಂದೊದಗಿದೀ ಸೊಗವನಲ್ಪಾಯು ಗೈಯದಿರೊ,
ಹೇ ಚಿರಂಜೀವಿ! ನೀಂ ಮರೆಯಾದ ಮೇಲೆನಗೆ
ಕಂಡುದೆಲ್ಲಂ ಮತ್ತೆ ಕೇಳ್ದುದೆಲ್ಲಂ ಬರಿಯ
ಪುಸಿಯೆಂದೊ ಕನಸೆಂದೊ ನಿರಶನ ಮನೋಭ್ರಮಾ
ಕೃತಿಯೆಂದೊ ತೋರ್ಪುದೆ ತಡಂ ಆ ಹತಾಶೆಯೇ
ಕೊಲ್ವುದೆನ್ನಂ. ಕೊಲ್ಲದಿರಲೀ ಪ್ರಪಾತದ ಕರುಣೆ
ದಯೆಗೆಯ್ವುದಯ್ ನನ್ನಳಲ್ಗಂತ್ಯಮಂ!”
“ಹೇ ಪೂಜ್ಯೆ,
ಮಾಣ್ ಅಮಂಗಳವನೀ ಮಂಗಳ ಮುಹೂರ್ತದೊಳ್!
ರಾಮಚಂದ್ರನ ನಾಮಮುದ್ರಿಕೆಯನಿತ್ತೆನಾಂ
ಪ್ರತ್ಯಯಾರ್ಥಂ, ನಿನ್ನ ಪತಿ ಕೊಟ್ಟುದಂ, ನಿನಗೆ, ೩೨೦
ಬಾಲೆ! ಸತ್ಯಕೆ ಸಾಕ್ಷಿ ಬೇರೆಯಿರ್ಪುದೆ ಮಿಗಿಲ್
ಪೇಳ್ ಅದಕೆ? ತರಮಲ್ತು ನಿಷ್ಕಾರಣಾಶಂಕೆ
ನನ್ನ ಮೇಲ್, ಎಲೆ ತರಳೆ!”
ಪುಟ್ಟ ಆಕಾರದಿಂ
ಪೊಣ್ಮಿದಾ ದಿಟ್ಟನುಡಿಗಳಿಗಿನಿತು ಸೆಡೆತಳ್ಕಿ,
ನೋಡುತ್ತಲಘುಧೀರನಂ, ತನ್ನ ಸಂದೆಗಕೆ
ತಾನೆ ನಾಣ್ಚುತೆ ಸೀತೆ:
“ಮುನಿಯದಿರ್, ಮಹಾತ್ಮ,
ನಿನಗಾಂ ಕೃತಜ್ಞಳೆಂ. ನಿನ್ನನೆನ್ನೀ ಬಳಿಯೆ
ನೀಡುವೊಳ್ತುಂ ನೋಡುವಾಸೆಯಿಂ, ನಿನ್ನಿಂದೆ
ರಮಣ ವೃತ್ತಾಂತಮಂ ಮನದಣಿಯುವನ್ನೆಗಂ
ಕೇಳ್ವಾಸೆಯಿಂ ಪೇಳ್ದೆನಲ್ಲದೆಯೆ ನಿನ್ನೊಳಾಂ ೩೩೦
ಸಂಯೋಜಿಸಿದೆನಲ್ತು ಕಪಟಾರ್ಥಮಂ.”
“ಕ್ಷಮಿಸು,
ದೀನ ದುಃಖಿನಿ, ನನ್ನ ಜಿಹ್ವೆಯೊರಟಂ. ದೊರೆಯ
ಕಾರ್ಯ ಸಾಧನೆಗಂತೆ ನಿನ್ನಭ್ಯುದಯಕೆಲ್ಲಿ
ಭಂಗಮಪ್ಪುದೊ ಕಾಲಹರಣದಿಂದೆಂಬಳುಕೆ
ನುಡಿಸಿತೆನ್ನಂ. ಮತ್ತೆ ಬೇರೆ ಕಾರಣಮಿಹದೆ
ನಿನ್ನ ಕಾರಣಕಾಗಿ ವಾರಿಧಿಯನುತ್ತರಿಸಿ
ದೈತ್ಯಲಂಕೆಗೆ ಪೊಕ್ಕ ನನಗೆ?”
“ಪ್ರಾಜ್ಞನೆ ದಿಟಂ
ನೀನುದ್ಯೋಗನೀತಿಕೋವಿದಂ. ಕಳುಹುವನೆ
ಮಮ ಜೀವಿತೇಶನೇನಿತರರಂ? ಲಘುಗಳ್ಗೆ
ಲಂಘ್ಯಮೇನಾ ಮಹಾಂಭೋಧಿ, ಶತಯೋಜನ ೩೪೦
ಭಯಂಕರಂ? ಭರ್ತೃವಾರ್ತಾವಹಂ, ಪ್ರಿಯನೆನಗೆ
ನೀಂ ಸಹೋದರ ಸಮಂ. ಸ್ವಾಮಿ ಸಂದೇಶಮಂ
ಕೇಳ್ದೆನಗೆ ಪತಿಯ ವಾರ್ತೆಯನಾಲಿಪಾತುರಂ
ಕುದಿಸುತಿದೆ ಹೃದಯಮಂ. ಪರದುಃಖ ಕಾತರಂ
ನಿನ್ನನಾಂ ಪ್ರಾರ್ಥಿಪೆನದಂ ಪೇಳ್ದು ತಣಿಸೆನ್ನ
ಪ್ರಾಣತೃಷೆಯಂ, ಹೇ ಜಗತ್‌ಪ್ರಾಣಸೂನು. ಪೇಳ್
ಪ್ರಾಣೇಶನೆಂತಿಹನ್‌? ಪ್ರಾಣಪತಿಯೆಲ್ಲಿಹನ್?
ಪ್ರಾಣವಲ್ಲಭನೇಕೆ ತಳುವಿಹನ್‌? ವಿರಹದಿಂ
ತವಿದಿಹನೊ? ಶೋಕದಿಂ ತಪಿಸಿಹನೊ?” ಕೊರಳ ಸೆರೆ
ಬಿಗಿದು ಸಂಕಟವುಕ್ಕುತಿರೆ ಮರಳಿ, “ನೆನೆಯುವನೆ? ೩೫೦
ಮರೆತಿಲ್ಲನಲ್ತೆ ಈ ದೀನ ಹತಭಾಗ್ಯೆಯಂ?
ಸಹಜಸುಖಿಯಾತಂಗೆ ಸಕಲ ಶೋಕವನಿತ್ತ ಈ
ಮಂದಮತಿಯಂ?”
ಜಿಹ್ವೆ ತತ್ತರಿಸಿ ಬರೆ, ಮುಂದೆ
ನುಡಿಯಲಾರದೆ ಬಿಕ್ಕಿ ಬಿಕ್ಕಿ ಸಂತಪವುಕ್ಕಿ
ಬೇಯಂತಿರ್ದಾಕೆಯಾ ಪ್ರಶ್ನಮಾಲೆಯ ಮಧ್ಯೆ
ಹುದುಗಿರ್ದ ಪೆಣ್ಣೆದಯ ಸಂದೇಹ ಸೂತ್ರಮಂ
ಸಂಭಾವಿಸಿದನಾ ಪರೇಂಗಿತಜ್ಞಂ:
“ಭದ್ರೆ,
ಬಿಡು ಶಂಕೆಯಂ; ಮಾಣಧೈರ್ಯಮಂ. ನಿನ್ನದೀ
ಕಷ್ಟಂ ತುದಿಯನೆಯ್ದಿತೆಂದೆ ತಿಳಿ. ನೀನಿರ್ಪ
ನೆಲೆಯನರಿಯದೆ ತಳುವಿಹನ್ ವಿರಹಿ ದಾಶರಥಿ. ೩೬೦
ತಾಣಮಂ ತಿಳಿವುದೆ ತಡಂ ಮಹಾವೀರರಿಂ,
ಪರ್ವತೋಪಮ ಧೀರರಿಂ, ನಭಶ್ಚಲಿಗಳಿಂ,
ಕಾಮರೂಪಿಗಳಿಂ ಪುದಿದ ಕಪಿಧ್ವಜಿನಿಯಂ
ಕೂಡಿಕೊಂಡೀ ವಾರಿಧಿಯ ವಿಪುಲತೆಯನೊಂದು
ಗೋಷ್ಟದ ಜಲಕೆ ಸಮಂಗೈದು, ಲಂಕೆಯನಿದಂ
ದಹಿಸದೇನಿರ್ಪುದೆ ಧರಾತ್ಮಜಾವಲ್ಲಭನ
ರೌದ್ರರೋಷಂ? ನಂಬು; ನನ್ನಾಣೆ! ನಿನ್ನಾಣೆ,
ರಘುರಾಮನಾಣೆ, ಪರಶಿವನಾಣೆ! — ಕಲ್ಯಾಣಿ,
ನಿನ್ನನಗಲಿದ ರಾಮನನ್ಯಮಂ ಮರೆತಿಹನ್;
ನೀನಲ್ಲದನ್ಯ ಜೀವಿತಮಿಲ್ಲಮಾತಂಗೆ: ೩೭೦
ನೆನೆವುದೇ ಉಣಿಸು; ಕರೆವುದೆ ಮಾತು; ಸುಯ್ವದೇ
ಉಸಿರು; ಚಿಂತೆಯೆ ಕನಸು; ಚಿಂತೆಯೆ ಮನಸು; ಮೇಣ್
ನಿನ್ನಿಂ ಪೊರಗೆ ಬೇರೆಯಂ ಕಾಣನಾ ನೃಪಂ
ಪ್ರಕೃತಿಯೊಳ್ : ತಳಿತ ತರು ಕಣ್ಗೊಳಿಸೆ, ಕೋಮಲೆಯ
ಕಾಣುವನ್. ತೊರೆಯ ಮೊರೆ ಕಿವಿಗೊಳಿಸೆ, ತನ್ನಯ
ಮನೋಹರಿಯನಾಲಿಪನ್. ಪಣ್‌ಪೂಗಳಂ ಕಾಣೆ,
‘ಓ ಎನ್ನ ಸೀತೆ, ಮೈಥಿಲಿ’ ಎನುತೆ ಮರುಗುವನ್.
ಕಲಪಕ್ಷಿಯುಲಿಯಾಲಿಸಲ್, ನಿನ್ನನೇ ನೆನೆದು
ಮರಮಟ್ಟು ನಿಲ್ವನ್. ಎಳ್ಚರುವನರೆನಿದ್ದೆಯೊಳ್;
‘ಚಾರುಕುಂಡಲೆ! ವಲ್ಗು ಬಿಂಬೋಷ್ಠೆ! ಏಣಾಕ್ಷಿ! ೩೮೦
ನಾಗನಾಸೋರು! ರಮಣಿ! ಲತಾಂಗಿ! ತನ್ವಂಗಿ!’
ಎಂದೆಂದು ಪಂಬಲಿಸಿ ಕರೆವನಳುವನ್ ನಿನಗೆ,
ಹೇ ತ್ರೈಭುವನ ಸೌಂದರ್ಯಲಕ್ಷ್ಮಿ! — ನಿನಗಾಗಿ
ರಾಮನಿಂದು ತಪಸ್ವಿ : ಮುಟ್ಟನಾ ಪಾರ್ಥಿವಂ
ಮದ್ಯಮಾಂಸಂಗಳಂ. ಕಂದಮೂಲಂಗಳಂ
ಪಣ್ಪಲಂಗಳನುಂಡು ಬರ್ದುಕಿಹನ್. ಧ್ಯಾನದೊಳ್
ಪೊಳ್ತುಗಳೆವನ್. ಶಕ್ತಿಯಾರ್ಜುನೆಯ ಯೋಗದೊಳ್
ಮುಳುಗಿರ್ಪನಾ ಪ್ರತಿಜ್ಞಾಭೀಷ್ಮ ತೇಜಸ್ವಿ!”
ಬೇವು ಬೆಲ್ಲಗಳನೊರ್ಮೆಯೆ ಸವಿದ ತೆರನಾಗಿ
ರಾಮಕೀರ್ತನ ವೀತಶೋಕೆ ಆ ಜನಕಸುತೆ ೩೯೦
ತಾನಾದಳಯ್ ರಾಮಶೋಕ ಸಮಾನಶೋಕೆ.
ಶೋಕಾಶೋಕೆಯಾ ಪತಿವ್ರತಾಶ್ಲೋಕೆಯಾ
ಅಕ್ಷಿ ಕಾಂತಿಯ ಅಲೌಕತೆಗೆ ಬೆರಗಾದನಯ್
ಪವನಜಂ. ದೂರದಿಂದಾಕೆಯಂ ಕಂಡಂದು
ಮೀಹಮಿಲ್ಲದ ತನು ವಸನ ಮಲಿನತೆಯ ದೆಸೆಗೆ
ಮಾಸಿದೊಂದಮರ ಸೌಂದರ್ಯಮೆಸೆದುದು ಬೆಳಗಿ,
ರಾಗಸಾಗರ ಧೀರ ಸಂಯಮಿ ರಘೂದ್ವಹನ
ಅಧೈರ್ಯಮದ್ಭುತ ಧೈರ್ಯಮೆನಿಸಲ್ಕೆ.
“ಮುಡಿ ಮಣಿದು
ಕೈಮುಗಿದೆನಿದೊ! ನಿನ್ನ ಪಡೆದಮ್ಮಗೆನ್ನದೀ
ವಂದನೆಯನೊಯ್, ಅಂಜನೆಯ ಕಂದ. ನಿನ್ನ ತಾಯ್ ೪೦೦
ತಂದಯರ್ ಧನ್ಯರಾಗಲಿ; ನಿನ್ನ ಕುಲದವರ್
ಮಾನ್ಯರಾಗಲಿ; ನಿನ್ನ ಪುಣ್ಯಕೀರ್ತಿಯ ಕಾಂತಿ
ಸರ್ವಲೋಕವ್ಯಾಪ್ತಿಯಾಗಿ ಬೆಳಗಲಿ ಸರ್ವ
ಕಾಲಕ್ಕೆ! — ಪೇಳ್ದೆನಗೆ ಮಮ ಜೀವಿತೇಶ್ವರಂ
ನಾನ್ಯಮನನೆಂಬುದಂ, ಬೆಂದನ್ನೆರ್ದೆಗೆ ಕರೆದೆ
ನೀನಮೃತಮಂ; ಶೋಕ ಸಂತಪ್ತನೆಂದೊಡನೆ
ವಿಷವೂಡಿದಯ್, ಕ್ರೂರಕರುಣಿ. ರಾಮಂಗೆನಗೆ
ಲಕ್ಷ್ಮಣಂಗೀ ಪಾಂಗನಿತ್ತ ವಿಧಿಯುಂ ಕ್ರೂರಿ
ತಾನಾದೊಡಂ, ತರ್ಪುದೆನಲೀ ಪರಿಯ ಸುಖದ
ಸಂಘಟನೆಯಂ ದಿಟಮದಂ ಕರುಣಿಯಲ್ತೆ? — ಕೇಳ್, ೪೧೦
ವಾನರವರೇಣ್ಯ, ಮರೆಯದೆಯೆ ಪತಿಗನಿತುಮಂ
ನೀನೊರೆಯವೇಳ್ಕುಮಯ್ ಕಂಡುದಂ, ಕೇಳ್ದುದಂ,
ದಿನಕರ ಕುಲೋತ್ತಮನ ಹೃದಯ ವಧುಗೊದಗಿರ್ಪ
ಈ ದೈನಂದಿನದ ದೈನ್ಯಮಂ. ವರ್ಷದವಧಿ,
ದಶಶಿರನ ಮಹಿಳೆ ಮಂಡೋದರಿಯ ದಯೆ ಕಣಾ,
ನೀಗಿರ್ಪುದಿಂದಿಂಗೆ ತನ್ನ ದಶ ಮಾಸಮಂ.
ತಿಂಗಳಿನ್ನೆರಡರುಳ್ವನಿತರೊಳಗೈತಂದು
ನನ್ನನುದ್ಧರಿಸವೇಳ್ಕುಂ. ಸ್ವಾಮಿಗೊರೆಯಿದಂ,
ವಾಕ್ಕೋವಿದನೆ, ಸಫಲಮಪ್ಪಂತೆವೋಲ್ ನಿನ್ನ
ವಾಙ್ಮಹಿಮೆ. ಲಂಕೆಯೊಳಗುಂ, ವಾನರೋತ್ತಮನೆ, ೪೨೦
ಸತ್ತ್ವದುತ್ತಮರಿಹರ್; ಧರ್ಮಕಾರ್ಯಕೆ ನೆರಂ
ಬರ್ಪದವರೆನ್ನ ಮನದನ್ನಂಗೆ. ತಿಳಿಸದಂ,
ಸುಗ್ರೀವ ಸಾಹಸೋತ್ಸಾಹ ತೇಜನಕರಂ
ನಯವಾರ್ತೆಯಂ. ಸಹೋದರನಿರ್ಪನಯ್ ದುರುಳ
ದಶಶಿರಗೆ; ಪೆಸರಿಂ ವಿಭೀಷಣಂ. ಸತ್ತ್ವಮತಿ
ಆ ಪೂಜ್ಯನೆನ್ನ ನಿರ್ಯಾತನಕೆ ಪೇಳ್ದೆಲ್ಲಮುಂ
ನೀತಿಯಂ ಕಿವುಡು ಕಿನ್ನರಿಯಾಯ್ತು ಕಾಲವಶಿ
ಕಾಮಪಾಶದ ಮೃತ್ಯು ಕಾಯ್ದಿರುವ ರಾವಣಗೆ.
ಆ ವಿಭೀಷಣ ಕನ್ಯೆ ತನ್ನ ತಾಯೊರೆದುದಂ
ಪೇಳ್ದಳೆನಗನಲಾ ಕುಮಾರಿ. ಮತ್ತೋರ್ವನಾ ೪೩೦
ವೃದ್ಧನಿರ್ಪಂ ಸಚಿವನಾ ದುಷ್ಟಚೋರಂಗೆ;
ಪೆಸರ್ ಅವಿಂಧ್ಯಂ. ಧರ್ಮದರ್ಶಿಯಾತಂ ಪೇಳ್ದ
ಸೌಜನ್ಯಮಂ ಪೇಸಿ ಬಿಸುಟನಾ ದುರ್ವಿಧಿಯ
ಧೂರ್ತದೂತಂ. ಮರಣಯಜ್ಞಸ್ತೂಪ ಬಂಧಿಯಾ
ಪಶು ರಾವಣಂ. ಪೇಳ್ವುದೆನ್ನಂತರಾತ್ಮಮುಂ,
ಹೇ ಹರಿಶ್ರೇಷ್ಠ, ನನಗಪ್ಪುದೆನ್ನಾನಂದ
ಸಂಪ್ರಾಪ್ತಿಯುಂ ಕ್ಷಿಪ್ರದಿಂ. ಜನಸ್ಥಾನದೊಳ್
ತಾನೊರ್ವನನುಜನ ಸಹಾಯಮಂ ಲೆಕ್ಕಿಸದೆ
ಕೊಂದನೈಸಲೆ ಚತುರ್ದಶರಿಂ ಸಹಸ್ರರಂ
ಖರದೂಷಣಾದಿ ಬಹುಘೋರರಂ! ಆ ಮಹಾ ೪೪೦
ರಿಪುಭಯಂಕರನೀಗಳೆನಗಾಗಿ, ತನ್ನೊಲಿದ
ಕೈಹಿಡಿದಬಲೆಗಾಗಿ, ಶೋಷಿಸನೆ ಶರಧಿಯಂ
ಬಾಣಾಗ್ನಿಯಿಂ? ತವಿಸದಿರ್ಪುದೆ ಶರಧಿವೃಷ್ಟಿ
ರಾವಣಪ್ರಾಣಾಗ್ನಿಯಂ? ಪುರುಷಪುಂಗವಗೆ
ಪೇಳ್, ಸಮೀರಕುಮಾರ, ತನ್ನ ಮನದನ್ನನಂ
ಮನದೊಳನುಭಾವಿಸುತೆ, ಪಾದಾರವಿಂದಕ್ಕೆ
ಪಣೆಯೊತ್ತಿ ಕಣ್ಣೀರ್ಗಳಿಂದೆ ಮೀಯಿಸಿ, ಮತ್ತೆ
ಕೈಯಿಂದೆ ಮುಟ್ಟಿ ಸೊಗಸಿದಳೆಂದು ತನ್ನಬಲೆ!”
ಪೇಳುತ್ತೆ, ಪೇಳ್ದುದಂ ನೆನೆನೆನೆದು ಗೋಳಿಡುತೆ,
ಮೂಗಳ್ಕೆಯಳುತಿರ್ದಳಂ ಕಂಡನಾ ಕರುಣಿ ೪೫೦
ಮರುತಾತ್ಮಜಂ. ಬತ್ತಿದುದು ಸಹನೆ. ಕರಗಿತೆರ್ದೆ.
ಪೇಸಿದುದು ತನ್ನ ಬೀರಂ ತನ್ನ ದುರ್ಬಲ
ಸ್ಥಿತಿಗೆ. ಸಹಜ ವಿವೇಕಿಗಾದುದುತ್ಸಾಹದಿಂ
ಕ್ಷಣಿಕಾವಿವೇಕಮೆನೆ, ಕೈಮುಗಿದೊರೆದನಿಂತು
ಹದಿಬದೆಗೆ : “ದೇವಿ, ನಾನೇನ್‌ ಅನೌಚಿತ್ಯಮಂ
ನೆಗಳ್ದಿರ್ದೆನಿನಿತುವೊಳ್ತುಂ? ನೇರಮಪ್ಪುದಕೆ
ಗಳಪುತಿರ್ದೆನೆ ಬಿರಿದೆ ಬಳಸಿನಾಲೋಚನೆಯ
ಅಪ್ರಕೃತಮಂ? ದೇವ ರಾಮಚಂದ್ರನ ಕೊಡೆ
ನಿನ್ನನನುಬಂಧಿಸುವುದಲ್ತೆ ಗಂತವ್ಯಮೀ
ನನ್ನ ಮೇಣಖಿಲ ವಾನರ ಸಾಹಸದ ತಪದ ೪೬೦
ಸಾಧನಕೆ? ಮಾಡೆನೆ ಮುಹೂರ್ತ ಮಾತ್ರದೊಳದಂ
ನಿನ್ನ ಕೃಪೆಯಿರೆ, ಅನಿಂದಿತೆ? ಅಗ್ನಿ ಹವಿಯಂ
ಸುರೇಂದ್ರಗೊಯ್ವಂದದಿಂ ನಿನ್ನನುಯ್ವೆಂ, ಪೂಜ್ಯೆ,
ಮಾಲ್ಯವತ್ ಪರ್ವತದ ಪ್ರಸ್ರವಣ ಶಿಖರದೊಳ್
ಕಿಷ್ಕಿಂಧೆಗನತಿದೂರಂ ತಪಂಬಡುತಿರ್ಪ
ಸತೀಚಿಂತನ ತಪಸ್ವಿ ರಾಘವೇಂದ್ರನ ದಿವ್ಯ
ಸನ್ನಿಧಿಗೆ! ರಾಜ್ಞಿ, ನಾಂ ನಿನ್ನ ಕಿಂಕರನೆನ್ನ
ಬೆನ್ನೇರುವುದೆ ತಡಂ ಕಾಲುವೆಯವೋಲಿದಂ
ಲಂಘಿಸುವೆನೀ ವಾರ್ಧಿಯಂ. ದಿಟದಿಯುಂ ನಿನ್ನ ಪಣೆ
ಸ್ವಾಮಿಪಾದವ ಸೋಂಕವೋಲೆಸಗುವೆನ್, ಭಗಿನಿ, ೪೭೦
ಶೀಘ್ರಾತಿಶೀಘ್ರದಿಂ! ನಾನಲೆವ ನಾನೊಲಿವ
ನಾನುಂಡು ಬದುಕುವೆನ್ನಾ ಮಲೆಯ ಮೇಲಾಣೆ,
ಕಾಡು ಬಯಲುಗಳಾಣೆ, ತೊರೆಕೆರೆಗಳಾಣೆ, ಮೇಣ್
ಪಣ್ಪಲಗಳಾಣೆ! ಕೇಳ್, ಸಾಲದಿರ್ಪೊಡೆ, ಮತ್ತೆ,
ಮಂದರದ ಮೇಲಾಣೆ! ಮೇರುವಿನ ಮೇಲಾಣೆ!
ವಿಂಧ್ಯ ಹಿಮವತ್‌ ಸಹ್ಯ ಮಲಯ ಶೈಲಗಳಾಣೆ!
ಗಂಗೆ ಯಮುನೆಯರಾಣೆ! ಕೃಷ್ಣೆ ಗೋದೆಯರಾಣೆ!
ಕಾವೇರಿ ತುಂಗಭದ್ರೆಯರಾಣೆ! ಸುಳಿಸದಿರು
ಸಂಶಯದ ಲವಲೇಶಮಂ ಛಾಯೆಯಂ ದೇವಿ :
ಅಮೋಘಮೆನ್ನೀ ಪ್ರತಿಜ್ಞೌ ವಚೋವಜ್ರಂ!” ೪೮೦
ಹರ್ಷವಿಸ್ಮಿತೆ ವಿಕಂಪಿಸಿದಳವನಿಸುತೆ, ತಟಿತ್‌
ಪ್ರವಹಿಸಿದವೊಲ್ ಪುಲಕಿತ’ಖಿಲಾಂಗಿ: ಇಚ್ಛಿಪುದೆ
ತಡಮಿಂದೆ ಅಗಲಿದಿನಿಯನ ಅಡಿಯ ತಾವರೆಗೆ
ತುಂಬಿಗೆಯ್ವೆನೆ ತನ್ನ ಮುಡಿಯಂ? ಇದಿರ್ಮೆರೆವ
ಈ ಕಪಿಯ ಕಿರಿಯಗಾತ್ರಕೆ ಸಾಧ್ಯಮದು ದಿಟಮೆ?
ಅಪ್ಪುದಾ ಧ್ವನಿಯ ಧೈರ್ಯಮೆ ತನ್ನ ಸತ್ಯಮಂ
ಸಾರುತಿದೆ! — ಪುರ್ಚ್ಚಿದೇನಂ ಪರ್ಚುತಿದೆ ಮರುಳ್
ಮನ್ಮನಂ ಚಿಃ! — ಭರ್ತ್ಸನೆಯನಡಗಿಪೊಲ್ ಸ್ಮಿತಂ
ಮೊಗದೊಳಾಡಲ್, ಮರುತ್ಸೂನುವಂ ನಡೆ ನೋಡಿ,
ಶುದ್ಧಾತ್ಮನುತ್ಸಾಹಕಪಚಾರಮೆಸಗಲ್ಕೆ ೪೯೦
ಬೆದರಿ, ಪಿಂತಿಕ್ಕಿದಳ್ ಪ್ರಮುಖ ಕಾರಣಮದಂ;
ಮುನ್ನೊಡ್ಡಿದಳ್ ಗೌಣಮಿದನಿಂತು :
“ನಿನಗಿದೇಂ
ಧೂರ್ತಾತಿ ಸಾಹಸಂ, ಪವನಸುತ? ನೀಂ ತಳೆದ
ಈ ಆಕೃತಿಯ ಮಹಿಮೆಯಿರವೇಳ್ಕುಮದು ಕಣಾ!
ಅತ್ಯಲ್ಪಮೀ ನಿನ್ನ ದೇಹಮದರೊಳಗೆಂತು
ಪೊತ್ತು ನನ್ನಂ ಪಾರುವಯ್ ಸ್ವಾಮಿಯಿರ್ಪೆಡೆಗೆ,
ಸುದೀರ್ಘದೂರದಪಾರ ಸಾಗರವನುತ್ತರಿಸಿ,
ಪರ್ವತಾಟವಿ ಪೃಥ್ವಿಯಂ ಚರಿಸಿ?”
ಪ್ರಶ್ನೆಯಂ
ತನ್ನ ಶಕ್ತಿಯ ಮತ್ತೆ ಮಾನದ ಮುಖಕ್ಕೆಸೆದ
ಭಂಗಮೆಂದೆಯೆ ಬಿಗೆದನುತ್ಸಾಹಿ. ನಿಶಿತಮತಿ ೫೦೦
ಹನುಮನಂಗನೆಯಿಂಗಿತವನರಿಯಲಾರದೆಯೆ
ತಪ್ಪಿದನೆನಲ್ ಬ್ರಹ್ಮಚರ್ಯಕೆ ಗರಿಮೆಯೈಸೆ :
ನನ್ನ ಮಹಿಮೆಯನರಿಯಳೀ ಆರ್ಯೆ. ಪೇಳ್ವರುಂ
ಬೇರಿಲ್ಲಮಿಲ್ಲಿ. ತನ್ನಂ ಪೊಗಳಿಕೊಳ್ವುದುಂ
ತನಗೆ ತರಮಲ್ಲಮಾದೊಡಮಿಲ್ಲಿ ವಿನಯಕ್ಕೆ
ಕಾಣೆನನ್ಯೋಪಾಯಮಂ. ತೋರ್ದಪೆನಿವಳ್ಗೆ
ಸಂದೇಹ ವಾರಣಾರ್ಥಂ ಯೋಗಸಿದ್ಧಿಜಂ
ಸತ್ತ್ವಪ್ರಭಾವಂಗಳಂ — ಎನುತ್ತೆ ತರಿಸಂದು
ಬಳೆಯತೊಡಗಿದನಚಲ ಸಂಕಾಶಮದ್ಭುತಂ
ಮರುತನೌರಸಪುತ್ರನಾಕಾಶಕೆ! ದವಾಗ್ನಿ ೫೧೦
ತೇಜಂ ಸವಿಸ್ಫುಲಿಂಗಂ ಸ್ಫುರಿಸುತುಜ್ವಲಿಸೆ
ಧ್ವನಿಗೆಯ್ದನಿಂತಾ ಪ್ರಭಂಜನಸುತಂ :
“ಅನಘೆ,
ಕಾಣಿದಂ ನನ್ನೀ ಮಹದ್ರೂಮಂ. ಪೂಜ್ಯೆ,
ಭಾವಿಸದಿರೆನ್ನ ಸತ್ತ್ವದೊಳ್ ಸಂದೇಹಮಂ.
ಕಡಲೆನಗೆ ದನಗೊರಸು ನೀರೆಂದು ತಿಳಿ, ನೆಗೆಯೆ.
ಗಿರಿವನ ಸಹಿತ ಲಂಕೆಯಾದೊಡಂ ಸೀರ್ಪುಲ್ಲ
ಪೊರೆಯೆಂದು ತಿಳಿ, ತಾಯಿ, ನನ್ನೀ ಮಹಾಬಲಕೆ.
ಶೋಕಮಂ ಬಿಡು ನೀನಶೋಕೆಯಾಗೇರೆನ್ನ
ಭುಜಮೇರುವಂ. ತೇರು ದೇವರನೆಂತು ಪೊತ್ತು
ಗುಡಿಗೆ ನಡೆಯುವುದಂತೆ ಕಮಲಲೋಚನನೆಡೆಗೆ ೫೨೦
ನಿನ್ನನಾಂ ಕೊಂಡೆಯ್ವೆನಿಂದು ಭೈಗಿಂದೊಳಗೆ
ಕೇಳ್, ಕೈರವಾಕ್ಷಿ!”
ವಾನರ ಪುಂಗವನ ಭೀಮ
ಭರವಸೆಗೆ ಗುಡಿಗಟ್ಟುತಾ ಸೀತೆ, ನಸುನಗುತೆ,
ತನ್ನ ವಚನದ ಹೃದಯವರಿಯದುರ್ಬಿದ ಮಹಾ
ಬ್ರಹ್ಮಚಾರಿಗೆ : “ಮಹಾತ್ಮಾ, ನಿನ್ನ ಸತ್ತ್ವಮಂ
ತಿಳಿಯದಾಡಿದೆನೆಂದು ಕಳವಳಿಸದಿರು! ನಿನ್ನ
ಶರಧಿ ಲಂಘನಕಿಂ ಮಿಗಿಲ್ ಸಾಕ್ಷಿಯೇಕದಕೆ?
ಕಳುಹುವನೆ ರಾಮನಸಮರ್ಥನಂ ತನ್ನ ಈ
ನಾಮಾಂಕಿತಾಂಗುಳೀಯವನಿತ್ತು ತನ್ನಬಲೆ ೫೩೦
ನನ್ನನರಸಲ್ಕೆ? ಇಚ್ಛೆಯೊ ಅಲ್ತೊ ಸ್ವಾಮಿಗೀ
ನಿನ್ನ ನೂತನ ಸಾಹಸಂ! ಪುಡುಕಲಲ್ಲದೆಯೆ
ನಿನಗಿಲ್ಲಮುಯ್ವಾಜ್ಞೆ, ನಿನಗೆನಗಮಂಗಳಂ
ಸ್ವಾಮಿಯಾಜ್ಞೋಲಂಘನಂ. ಹೇ ಮಹಾವೀರ,
ಆಯುಕ್ತಮದರಿಂದೆನಗೆ ನಿನ್ನೊಡನೆ ಬಪ್ಪುದಯ್.
ಏನಾನುಮಕ್ಕೆಂದು ನಿಚ್ಚಯ್ಸಿ ಬರ್ಪ್ಪೆನೆನೆ
ತಡೆವುದೆನ್ನಂ ಪ್ರಬಲಭೀತಿ. ಕಡಲಂ ನೆಗೆವ
ನಿನ್ನ ಭೀಕರವೇಗಕಾಂ ಮೂರ್ಛೆಯಿಂ ನೀರ್ಗೆ
ಬಿಳ್ದಪೆನೊ? ತಿಮಿ ನಕ್ರ ಝಷಗಳ್ಗೆ ತಿನಿಸಹೆನೊ?
ನನ್ನನೊಯ್ಯಲ್ ನಿನ್ನನಟ್ಟುವ ನಿಶಾಚರರ
ಕೂಡೆ ನೀನೊರ್ವನಲ್ಲದನೆಂತು ಮಾರಾಂತು ೫೪೦
ಕಾದುವೆಯೊ? ನನ್ನ ರಕ್ಷಣೆಯ ದೆಸೆಯಿಂ ನಿನಗೆ
ವಿಘ್ನಮಾದೊಡೆ, ಭಗ್ನಮಾಗದೆ ರಘೂದ್ವಹನ
ವೀರೋದ್ಯಮಂ? ಕಾದುವಾಗಳವರೊಡನೆ ನೀಂ,
ಭೀತಚೇತಸೆಯೆಂ, ಸಮುದ್ರಕ್ಕುರಳ್ವಳಂ
ನನ್ನನವರೆತ್ತಿ ಬೈತಿಟ್ಟೊಡಾಮೇಲೆಂತು
ನೆಲೆಯರಿವೆಯಯ್‌? ನೀಂ ಮಹಾವೀರನಪ್ಪೊಡಂ
ಯುದ್ಧದೊಳನಿಶ್ಚಿತಂ ಗೆಲ್‌ಸೋಲಗಳ್. ಮೇಣ್,
ಮಹಾಮಹಿಮ, ನಿನ್ನ ಕೈತವವರಿತ ಕುಪಿತರೀ
ಘೋರ ರಾಕ್ಷಸರೆನ್ನನತಿಚಿತ್ರಹಿಂಸೆಯಿಂ
ಕೊಂದೊಡಂ ಕೊಲಬಹುದೊ? ಕೊಲ್ವೊಡೆ, ನಿರರ್ಥಕಂ ೫೫೦
ತಾನಲಾ ನಿನ್ನೀ ಮಹಾಪ್ರಯತ್ನಂ? ನನ್ನ
ಸತ್ತುದಂ ಕೇಳ್ವೊಡಾ ರಾಮಲಕ್ಷ್ಮಣರೊಡನೆ
ಅಸುಗಳೆವರಯ್; ಅಂತೆ ಸುಗ್ರೀವನುಂ; ಅಂತೆ ಮೇಣ್
ವಾನರ ಸಮಸ್ತರುಂ. ಮೇಣಂತುಮಲ್ಲದೆಯೆ,
ರಾಮನ ಯಶಃಕಾರಣವನೇಕೆ ನೀನಿಳ್ದು
ಕೊಂಡೆಯೆಂಬಪಯಶಂ ನಿನಗೆ?” ಜಾನಿಸುತಿರ್ದು
ತುಸುವೊಳ್ತನಂತರಂ ಮತ್ತೆ ಜನಕಾತ್ಮಜೆ :
“ದಶಗ್ರೀವಗೆಂತಂತೆ ಬಹುಜನರ್ಗಿರ್ಪ್ಪುದಯ್
ಬಹುವಿಧದಿ ಸಮೆಯಲಿಹ ಬಹುಜನ್ಮ ಕರ್ಮಗಳ
ಪೊಲೆಕಿಲ್ಬಿಷಂ. ಸರ್ವರಾ ಸರ್ವ ಕರ್ಮಗಳ ೫೬೦
ಪಾಸುಪೊಕ್ಕಿನ ಜಟಿಲ ಜಾಲಮೆ ಕೃತಿಪುದಲ್ತೆ
ನಡೆವೀ ಜಗನ್ನಾಟ್ಯಮಂ! ಕೇಳ್, ಕಪಿವರೇಣ್ಯ,
ನಿನ್ನೊಡನೆ ನಾಂ ಬರ್ಪುದೆಂತುಂ ಅಯುಕ್ತಮಯ್:
ಮುಟ್ಟೆನಾನೈಚ್ಛಿಕಂ ಜೀವಿತೇಶಂ ವಿನಾ
ಅನ್ಯರಂ, ಪುರುಷರಂ ಪರಕೀಯರಂ! ಅಣ್ಣ,
ಕ್ಷಮಿಸೆನ್ನನ್; ಉಪಕಾರಮಂ ತಿರಸ್ಕರಿಸಿದಳ್
ಎಂದು ನೋಯದಿರೆನಗೆ. ಬಿತ್ತರಿಸಲೇವುದಯ್
ಶಿಷ್ಟಪ್ರಕಟಮಂ ಪ್ರಚುರ ನೀತಿಯಂ ನಿನಗೆ
ಸದಾಚಾರ ನೀತಿ ನಯವಿದಗೆ? ವಾನರಮುಖ್ಯ,
ನಡೆ ಬೇಗದಿಂ ಸ್ವಾಮಿಯೆಡೆಗೆ; ಕೊಡು ವಾರ್ತೆಯಂ ೫೭೦
ಕಪಿ ಪಡೆಗೆ; ತಾರಯ್ಯ ನಿನ್ನ ತಂಗಿಯ ಕಡೆಗೆ
ಹರ್ಷಮಂ, ಮುಕ್ತಿಯಂ, ಪತಿಚರಣ ಸನ್ನಿಧಿಯ
ಮಾಂಗಲ್ಯಮಂ.”
ಕೇಳ್ದನಾ ಜಾಣೆ ಜಾನಕಿಯ
ಸಾಧ್ವಿಯ ವಚೋವ್ಯಂಗ್ಯಮಂ; ವಾಚ್ಯಮಂ, ಮತ್ತೆ
ಸೂಚ್ಯಮಂ, ಮತ್ತೆ ಗುರುಲಘು ಮಿಶ್ರಿತೋಕ್ತಿಯಾ
ಮುಖ್ಯ ಗೌಣಂಗಳಂ. ‘ಪೇಳ್ದೆಂ ಸದಾಶೆಯಿಂ;
ಸದ್ಭಾವಮವಿವೇಕಮಾಯ್ತಲಾ; ವಿಕೃತಿಯಂ
ಪೆರುವ ಬಸಿರಿಯ ನಿರೀಕ್ಷಣೆಯ ಭಂಗದೊಲೆನಗೆ
ದುಕ್ಕಕೆ ಮಿಗಿಲ್ ನಾಣೆ ನೋವಾಯ್ತಲಾ ! — ಎನುತೆ,
ಪ್ರತೀಕಾರಮಿಲ್ಲದವಹೇಳನಕೆ ಕುಗ್ಗುವೊಲ್, ೫೮೦
ಮುದುಗಿದುದೊ? ಸೆಡೆತುದೊ? ಕಿಮುಳ್ಜಿದೊಲ್ ಕಿರಿಕಿರಿದು
ಕಿರಿದಾಯ್ತೊ? ಮುನಿನಾ ಕೃತಿಗಿಳಿದನಣುವನ್
ವಿಸರ್ಜಿಸಿ ಬೃಹದ್ರೂಪಮಂ. ಗುರೂತ್ತೇಜನಂ
ತೊಲಗಿದುತ್ಸಾಹದೊಲ್ ಸಣ್ಣನಾಗುತ್ತಳಲ
ಸಿಗ್ಗಂ ನುಂಗಿಕೊಳುತೆ ಕೈಮುಗಿಯುತಂಬಿಕೆಗೆ
ದರಹಸನ್ಮುಖಿ ಅಸುಖಿ ಆಂಜನೇಯಂ:
“ಭಗಿನಿ,
ತಪ್ಪಾಯ್ತು. ಮನ್ನಿಸೆನ್ನಪಚಾರಮಂ. ಒಪ್ಪಿದೆನ್;
ನುಡಿದೆನ್ ಅಯುಕ್ತಮಂ. ಧರ್ಮಂ ಪತಿವ್ರತೆಗೆ
ನೀನೆಂದುದನಿತುಂ. ವಿವೇಕಮುತ್ಸಾಹದಿಂ
ತಡವರಿಸಿತೆಡವಿತಪರಾಧಮೆಸಗಿತು; ಅದಂ ೫೯೦
ಕ್ಷಮಿಸೌ, ಕ್ಷಮಾಕನ್ಯೆ! ಅರಸಿಗಿದು ಗುಣ್ಪೆ ದಲ್.
ಆ ಅಳ್ಕು ಉಸಿರ ನಡೆ ಪೆಣ್ಗೆ. ಮೇಣಾ ನುಣ್ಪು
ನಿರಿ ಗರತಿಯಾದೊಳ್ಗೆ. ನನ್ನ ಬೆನ್ನೇರಿಯುಂ
ಪೆಣ್ಗೆ ಸಾಧ್ಯಮೆ ಕಡಲ ನೆಗೆ? — ನೀಂ ಪೇಳ್ದುದಾ
ಕೊನೆಯ ಕಾರಣಮೆಲ್ಲಕಿಂ ಮಿಗಿಲ್ ಘನಮೈಸೆ
ಶ್ರೀರಾಮಸತಿಗೆ! ಮತ್ತೊಮ್ಮೆ ಬೇಡುವೆನಂಬೆ;
ರಾಮನೊಳ್ ನನಗೆ ಪೆರ್ ಕೆಳೆ ನುಡಿಸಿತಲ್ಲದೆಯೆ
ಭಾವಿಸದಿರನ್ಯಮಂ. ನಿನ್ನ ಸಂಕಟಮುಂ
ಪ್ರಚೋದಿಸಿತ್ತಾ ಧೈರ್ಯಮಂ, ತಾಯಿ! …
ಬೆಬ್ಬಳಿಪ
ಬ್ರಹ್ಮಚಾರಿಯ ಸಂಕಟಸ್ಥಿಯನರಿಯುತಾ ೬೦೦
ಸಾಧ್ವಿ ಒಯ್ಯನೆ ತೆಗೆದಳುರದೆಡೆಯೊಳವಿತಿಟ್ಟುದಂ,
ಮದುವೆ ನಿಲ್ವಂದು ಪತಿ ಕೊಟ್ಟುದಂ, ಚೂಡಾಮಣಿಯ
ಕೃತ್ತಿಕಾಕೃತಿ ಚೆಲ್ವಂ. ಝಗಿಝಗಿಸುವದರ
ಕಿಡಿಕಿಡಿಯ ಕಿರಣ ದೀಧಿತಿಗೆನಲ್ ಜ್ವಲಿಸಿತಾ
ಮರುತಜಾತ್ಮಂ; ಮರುಳ್ದುದು ಧೃತಿಗೆ ದೀಪ್ತಿ: ಮೇಣ್,
ತೊಲಗುತೆ ಮೊಗದ ಮರ್ಬ್ಬು, ಮರುಕೊಳಿಸಿತಯ್ ಮೊದಲ
ತೈಜಸಂ. ಪೆರ್ಮೆಗೆ ನವಿರ್ ನಿಮಿರ್ದಂಜಲಿಯ
ನೀಡಿ, ಕೈಕೊಂಡನಾ ಪ್ರತ್ಯಭಿಜ್ಞಾನಮಂ;
ಮತ್ತೆ ಮಣಿಯತೆ ಕೃತಜ್ಞತೆಗೆ,  ಕಿವಿಗೊಟ್ಟನಾ
ಕೌಸಲೆಯ ಸೊಸೆಗೆ:
“ಕೊಳ್ ಪ್ರತ್ಯಭಿಜ್ಞಾನಮಂ,
ಮದುವೆ ನಿಲ್ವಾಗಳೆನ್ನೆರೆಯನೆನಗಿತ್ತಿದಂ, ೬೧೦
ಅಂಜನೆಯ ಕಂದ. ಸುಪರಿಚಿತಮೀ ಮುಡಿಯೊಡವೆ
ಮಿಥಿಳೇಂದ್ರನಳಿಯಂಗೆನ್ನ ನಾಥಂಗೆ.” ಮತ್ತೆ
ಮೌನಿಯಾದಳ್ ಸೀತೆ; ಅನಿಲಜನ ಕರಪುಟದಿ
ಮಿರುಗುತಿರ್ದವತಂಸಮಂ ಬಿಚ್ಚುಗಣ್ಗಳಿಂ
ನೋಡುತಿರ್ದ್ದಿರ್ದ್ದಂತೆ, ನಗೆಯ ನೇಸಲ್ ಸುಳಿಯೆ,
ಕಣ್ಮುಚ್ಚಿದಳ್ ಸ್ಮರಸುಖಸ್ಮರಣಸುಖೀ: “ಅನಘ,
ಪೇಳ್ವೆನೊಂದಂ ನಿನಗೆ ಸ್ಮೃತ್ಯಭಿಜ್ಞಾನಮಂ;
ನನಗೆ ನನ್ನಿನಿಯಂಗೆ ಪೊರತನ್ಯರಾರ್ಗುಮೀ
ಪೃಥಿವಿಯೊಳಲಭ್ಯಮಂ; ಪ್ರಾಣಮಿರ್ಪ್ಪೆನ್ನನೇ ೬೨೦
ಪ್ರಜ್ಞೆಯಿಂ ಕಂಡುದಕೆ ಚೂಡಾಮಣಿಗೆ ಮಿಗಿಲ್
ಸಾಕ್ಷ್ಯಮಂ: ಚಿತ್ರಕೂಟದ ಪಾದಮಂ ತೊಳೆದು
ಪರಿವ ಮಂದಾಕಿನಿಯ ಪುಳಿನರಂಗದೊಳೊಂದು
ನಡುವಗಲ್; ಚಿನ್ನವೂಗಳ ಚೈತ್ರತರುವಿಂ
ಜಗುಳ್ದಿರ್ದುವಯ್ ಪೊನ್ನಲರೆಲರ್ಗೆ, ಮೇಣ್ ಕರ್ನೆಳಲ
ತಣ್ಪಲ್ ಬಿಸಿಲ್ಗೆ; ನಾವಿರ್ಬರುಂ ನೀರಾಡಿ,
ಕನಕ ಸುಮ ರಂಗವಲ್ಲಿಯ ನೆಳಲ ನುಣ್ಮಳಲ
ಹಸೆಮಣೆಯ ಮೇಲ್, ಮರಳಿ ಮದುಮಕ್ಕಳಾದವೊಲ್
ಕುಳ್ತು ಸರಸದೊಳಿರಲ್; ಮರಕುಟಿಗವಕ್ಕಿ ದನಿ,
ಕಲ್ವೊಳೆಯ ಮೊರೆ, ಬೇಸಗೆಯ ಕಾಡ ಬೇಸರಿನ ೬೩೦
ನಿದ್ದೆಯ ಪಗಲ್ ಗನಸ ಕನವರಿಕೆಯಾಗಿರಲ್;
ನನ್ನ ಬೆರಳಂ ಪಿಡಿದು ತಾನೆ ಮಳಲಂ ತಿದ್ದಿ
ಬರೆದನೊಂದಂ ಪ್ರಣಯಮಂತ್ರಮಂ. ಓದೆನಲ್
ಓದಿದೆನ್. ಕೆನ್ನೆಗೆಂಪೇರ್ದಳ್ಗೆ ಬೊಟ್ಟಿಟ್ಟು
ತೇಯ್ದ ಕಲ್ಗಾವಿಯಂ, . . . ” ಮುಂದೆ ‘ಮುದ್ದಾಡಿದೆನ್’
ಎಂದು ತನ್ನೊಳಗೆ ತಾಂ ಸವಿದುಕೊಂಡಳ್. ಪುಹಿಳೆ
ತರಳೆಯೊಲ್ ನಾಣ್ಚುತಿರ್ದುದ ನೋಡಿ ತಾನುಂ
ಮುಗುಳ್ನಕ್ಕನಾಂಜನೇಯಂ:
“ಉಸಿರ್ವೆನನಿತುಮಂ,
ದೇವಿ. ಪೊಳ್ತುಗಳೆಯದೆ ಬೀಳ್ಕೊಡುವುದೆನ್ನನಿನ್.”
“ವತ್ಸ, ಪಸಿದಯ್, ಫಲಾಹಾರಮಂ ತಂದಪೆನ್, ೬೪೦
ಬೇಗದಿಂ; ಕೊಂಡು ಪೋಗಯ್!” “ಬೇಡಮಾ ಚಿಂತೆ,
ಯೋಗಬಲದಿಂ ಕ್ಷುಧಾತೀತನೆಂ. . . ಕೇಳ್, ಅದೋ,
ದೂರ ಕಹಳಾ ರವಂ!” “ಏನದಯ್?” “ಭಟರೆನಗೆ
ಸೋವುತಿರ್ಪರ್!” “ಅಯ್ಯೊ; ಶಿವಶಿವಾ, ಹುದುಗಿಕೊಳ್
ಈ ಪೊದೆಯ ಮರೆಗೆ!”
ಪೆಣ್ಣಳ್ಕಿಗುತ್ತರಮೆನಲ್
ನಕ್ಕನನಿಲಾತ್ಮಜಂ. ಗಾಳಿಯಾಯ್ತಿದಿರಿರ್ದ
ಗಾಳಿಯ ಮಗನ  ತಳೆದ ಕಪಿಯ ರೂಪಂ. ಕಣಸು
ಬಿರಿದೊಡನೆ ನನಸು ನುಗ್ಗಿತು ಬಗೆಯ ಭೂಮಿಕೆಗೆ:
ಮರ ಬಳ್ಳಿಗಳ ನೋಟಮ್; ಆ ನಿರ್ಝರದ ಸಲಿಲ
ಗದ್ಗದಂ; ಮೇಣ್ ಧಳಂಧಳಮೆಂದು ಬಳಿಬಳಿಗೆ ೬೫೦
ಸಾರುತಿರ್ದಾ ಭಯಂಕರ ಪಟಹ ಢಕ್ಕ ಧ್ವಾನ
ಭೀತಿ! ಕೈಯುಂಗುರವನೊತ್ತಿದಳ್ ವಕ್ಷಕ್ಕೆ:
ಬೇಂಟೆನಾಯ್ ಬೆನ್ನಟ್ಟೆ ಸೋಲ್ತ ಶಶಹೃದಯದೊಲ್
ಢವಢವಿಸುತಿರ್ದುದಾ ಪ್ರಾಣದುರ್ಗಂ! ಸಂಭ್ರಾಂತೆ,
ದೆಸೆದೆಸೆಗೆ ನೋಡುತಿರ್ದಾ ರಾಘವ ಶ್ರೀಕಾಂತೆ,
ಕಂಡಳಾ ತ್ರಿಜಟೆಯಂ, ತಳುವಿದಳದೇಕೆಂದು
ತನ್ನೆಡೆಗೆ ಓಡೋಡಿ ಬರುತಿರ್ದಳಂ!
“ಏಳು, ಓ
ಬೇಗೇಳು, ಭದ್ರೆ; ಕೇಳ್ದೆನೊಂದಪವಾರ್ತೆಯಂ!
ಅದೊ ಮೊಳಗುತಿವೆ ಭೇರಿ! ದೈತ್ಯೇಂದ್ರನಾಳುಗಳ್
ಸುತ್ತಿದರ್, ಸೋಸಿಹರ್, ಬೇಂಟೆನುಗ್ಗಿಹರೀ ೬೬೦
ಅಶೋಕವನಮಂ! ಹರಿಣಿಯಾಗದಿರವರ ಬಿಲ್ಗೆ!”
“ಏನಾದುದೌ, ತ್ರಿಜಟೆ?” ಬೆಸಗೊಂಡಳಾ ಸೀತೆ,
ರಾಮಾಂಗುಳೀಯಕದ ಧೈರ್ಯಮಂ ಪುಗಿಸುವೊಲ್
ಹೃದಯಕ್ಕದಂ ತನ್ನುರಃಸ್ಥಳದೊಳವಿತಿಡುತೆ
ಚೂಡಾಮಣಿಯ ತಾಣದೊಳ್. “ಪೇಳ್ವೆನೇಳೇಳ್!”
ಎನುತ್ತೆ, ತಾಯ್ ಪುಲಿ ಮರಿಯನೆಂತು ರಕ್ಷೆಯ ಗವಿಗೆ,
ಬೇಂಟಿ ನುರ್ಗ್ಗಿದ ಬೇಡರಿಂ ನಾಯ್ಗಳಿಂ ಪೊರೆಯೆ,
ಕಚ್ಚಿಕೊಂಡುಯ್ದಪುದೊ ತಾನಂತೆವೊಲ್ ತ್ರಿಜಟೆ
ಕೈನಡುಗಿ ಪಿಡಿದೆತ್ತಿದಳ್ ಜಗಜ್ಜಾತೆಯಂ,
ತನ್ನ ರಾಕ್ಷಸಶಕ್ತಿ ದೈವಿಕೋದ್ಯಮದಿಂದೆ ೬೭೦
ದೇವ ಬಲಕಿರ್ಮಡಿ ಸಫಲಮಾಗೆ!
ಇಳುಹಿದಳ್
ಪರ್ಣಕುಟಿಯೊಳಗೆ. ಮೇಣ್ ತಿಳುಹಿದಳ್ ತಾಂ ಕೇಳ್ದ
ಭಯವಾರ್ತೆಯಂ: “ಅದೇನೆಂದಾರರಿವರಮ್ಮ?
ರೂಪಮಿಲ್ಲದ ಭೀತಿ ಪೊಕ್ಕುದೆಂಬರ್ ಪುರಕೆ
ಪೋದಿರುಳ್! ಲಂಕೆಯನಲೆಯುತಿರ್ಪುದೆಂಬರಾ
ಬೂತು! ಪೆರ್ಬಾಗಿಲಂ ಕಾವ ಲಂಕಾಲಕ್ಷ್ಮಿ ತಾಂ
ಪಿಡಿದಿರ್ದಜೇಯ ಶೂಲಂ ಕೊಂಕಿರ್ಪುದೆಂಬರೌ!
ದೈತ್ಯಮುಖ್ಯರ ಮನೆಗಳೊಳ್ ರಾತ್ರಿ ನಿದ್ದೆಯನೆ
ಕಂಡರಿಯರಂತೆ! ಭೀಕರ ಶಬ್ದಗಳ್, ಪ್ರೇತ
ಧೂಮಗಳ್, ಪರಿಮಳ ಪಿಶಾಚಗಳ್, ಘೀಂಕಾರ ೬೮೦
ಹ್ರೀಂಕಾರಮೋಂಕಾರಗಳ್, ಶ್ವೇತಛಾಯೆಗಳ್,
ಓರೊರ್ವರಿಗೆ ಬೇರೆ ಬೇರೆ ಕಣ್ಮಾಯೆಗಳ್!
ಅರಮನೆಯ ಗೋಪುರಮೊರಲ್ದುದೆಂಬರ್! ಭಟರ್
ಕಾಪುಳಿದು ಮೋಹನಿದ್ರೆಗೆ ಸಂದರೆಂಬರ್!
ಕೆಲರ್ ಸೈನಿಕರ್ ದಿಕ್ಕುಗೆಟ್ಟಲೆದರೆಂಬರ್!
ಕೆಲರ್ಗುನ್ಮಾದಮಮರ್ದುದೆಂಬರ್! ಆಲಿಸದೊ,
ಮಾಯಾಪ್ರವೀಣರುಂ ಮಂತ್ರತಂತ್ರಜ್ಞರುಂ
ಶೋಧಿಸುತ್ತಿರ್ಪರಾ ಪೊಕ್ಕು ಭೂತವನರಸಿ
ಬಂಧಿಸಲ್ಕೆ!”
ಹಗೆಯ ಹೆದರಿಕೆ ತನಗೆ ಕೆಚ್ಚಾಗೆ,
ಹರಸಿದಳ್ ದೇವಿ ಹನುಮಂಗೆ ನಿರಪಾಯಮಂ, ೬೯೦
ತನ್ನ ಮನದೊಳಗೆ. ಸೀತೆಯ ಶಾಂತರೀತಿಯಂ
ಕಂಡಾ ತ್ರಿಜಟೆ ಬೆರಗುವಟ್ಟಿರಲ್: ” ಬೆದರದಿರ್,
ರಾಕ್ಷಸೋತ್ತಮ ಭಗಿನಿ; ಭೂತಮಲ್ತದು,  ದಿಟಂ,
ಧರ್ಮಮಟ್ಟಿದ ದೇವದೂತಂ! ಕುಕರ್ಮಿಗಳ್
ಬೆದರಮೇಳ್ಕುಂ; ನಿನಗೆನಗೆ ಬೆದರ್ಕೆಯ ಗೊಡವೆ
ಏಕೆ? — ಏನದು ಬೊಬ್ಬೆಯಬ್ಬರಂ, ಕೇಳ್, ತ್ರಿಜಟೆ?
ಪೇರಾನೆ ಘೀಂಕಾರಗಳ್ ಕೂಡಿ ಕೇಸರಿಯ
ಗರ್ಜನೆಗಳಂ ತಾಗಿದೋಲಿರ್ಪುದಾ ಭೀಮ
ಭೋರಾರ್ಭಟಂ!”
ಬೆಳಕು ಕಂಡಿಯಿಂದಿಣುಕಿದಳ್
ತ್ರಿಜಟೆ, ಓಸರಿಸಿ ತರೆಗೆಲೆಗಳಂ. ಕಂಡುದಂ ೭೦೦
ಕೂಗಿದಳ್: “ಅಯ್ಯಯ್ಯೊ, ಪೇಳ್ವೆನೇನಂ, ದೇವಿ?
ಸದೆದಲಬಿ ತಿರುಪಿ ತರುಚಂಡಿಕೆಗಳಂ, ಭೋರ್
ಭೋರ್ಗರೆದು ಬೀಸುತಿದೆ ಚಂಡ ಪ್ರಭಂಜನಂ!
ರೋಷ ಜಂಝೂವಾತಕೆದ್ದು ಕವಿದಿದೆ ಧೂಳಿ
ಬುವಿಬಾನ್ಗಳಂ ಕಲಸಿ! ಸುಟ್ಟುರೆಯ ಬಿರಬಿಂಗೆ,
ತರಗೆಲೆಗಳಂತೆವೋಲ್, ಲರಿಲರಿಲ್ ಮುರಿಮುರಿದು
ಮರದಿಂದುರುಳ್ವನಿತರೊಳೆ ನಭಕ್ಕೇರುತಿವೆ
ಪೆರ್ಗೋಡುಗಳ್, ತಾಯಿ, ಸಳವನೆರಗಿದ ಖಗದ
ತಿಪ್ಪುಳ್ಗರಿಗಳಂತೆ! ನಾನರಿಯೆನೆಮಗೆಂತೂ
ರಕ್ಷೆ?”
“ಬರದಿಲ್ಲಿಗಾ ವಾಯುದೇವನ ರೌದ್ರಮ್, ೭೧೦
ಅಂಜದಿರು”; ಬಾರಕ್ಕ ಒಳಗೆ ಬಲ್ ಪಸಿದೆನಾ
ಪಣ್ಗಳಂ ತಾ.” — ತ್ರಿಜಟೆ ತಾನಣಿಮಾಡಿದಾ
ಫಲಂಗಳಂ ತಂದಿತ್ತಳಚ್ಚರಿಯೊಳಾಕೆಯಂ
ನೋಡುತಾ : ತರಣಿವಂಶದ ತರುಣಿ ಪಿಂತೆಂದುಮ್
ಅಂತೆವೊಲ್ ತಿಂದಳಿಲ್ಲೆಂಬಂತೆ ಸವಿಯುತಿರೆ,
ತ್ರಿಜಟೆ ಕಣ್ದಣಿಯೆ ನೋಡಿದಳದಂ, ಭಕ್ತಂ
ನಿವೇದಿತವನುಣ್ಬ ಭಗವಂತನಂ ನೋಳ್ಪಂತೆವೋಲ್!