ದಳದಳವಲರ್ದ್ದುದೈ, ಮೂಡು ಬಾನಂಚಿನೊಳ್
ಪ್ರತೀಕ್ಷಿಸಿದ ಫಾಲ್ಗುಣದ ಪೂರ್ಣಿಮೆಯ ದಿನಪುಷ್ಟ
ಪುಣ್ಯೋದಯದ ಉಷಃಕಾಂತಿ. ಧಳಧಳಧಳಂ
ಮೊಳಗಿದುದು ಪ್ರಸ್ಥಾನ ಭೇರಿ ರವಂ. ನವಿರ್
ನಿಮಿರಿ ಕಂಪಿಸಿತಾ ಘನೋನ್ನತ ಪ್ರಸರಣ —
ಶಿಖರಿ. ದಳದಳ ತರಂಗಿತ ವಾನರರ ಮಹಾ
ಸೇನಾ ಸಮುದ್ರಮುಕ್ಕಿದುದು ದಕ್ಷಿಣ ದಿಶಾ
ದೈತ್ಯ ಲಂಕಾಮಥನ ವಿಪ್ಲವಕೆ. ಪ್ಲವಗೇಂದ್ರ
ಸುಗ್ರೀವನಾಜ್ಞಾಪ್ರಚೋದಿತನ್ ಸೇನಾನಿ
ನೀಲಂ, ಸಹಸ್ರಸಂಖ್ಯೆಯ ಪಥಜ್ಞರಿಂ ಕೂಡಿ, ೧೦
ಮಾರ್ಗರಚನಾ ಬಲ ಸಮರ್ಥರಿಂ ಕಡಿಯಿಸುತೆ
ಪೆರ್ವಟ್ಟೆಯಂ, ಸಸ್ಯ ಜಲ ಫಲ ಸಮೃದ್ಧಿಯಿಂ
ಕ್ಷೇಮಕರಮಾಗಿರ್ದ ಸಹ್ಯಮಲಯಾದ್ರಿಗಳ
ಸಾನು ಸುಂದರ ಸೀಮೆಯಲಿ ಮುಂಬರಿದನಯ್,
ಹಿಂಬಲರಸಂಖ್ಯೇಯ ಅಕ್ಷೌಹಿಣಿಯ ಬಲದ
ಸ್ವೈರಿ ಭೀಕರ ಕಪಿಚಮೂ. ಹೇಳಲೇನಳವೆ?
ಕೇಳ್ ಸಹ್ಯಶೈಲಮಂ; ಕೇಳ್ ಮಲಯಗಿರಿಯಂ:
ಅರಣ್ಯ ನಿರ್ಝರ ನದಂಗಳಂ ಕೇಳ್; ಪ್ರತಿಸ್ಪರ್ಧಿ
ಮಲೆತುದಿನ್ ಮುಂದೆ ಗತಿಯೇನೆಂದೊರಲ್ವವೋಲ್
ಉದ್ವೇಗಗೊಂಡಾ ಉದನ್ವಂತನಂ ಕೇಳ್! ೨೦
ಅನಂತಮಂ ಅಳೆಯಲಳವೇ? ಎಣಿಸಲಳವೇ
ಮಳಲ್ ಕಣಗಳಂ ಕಡಲತೀರದಾ? ಅಗಣಿತಂ
ಅಮೇಯಮ್, ಅಯೋಧ್ಯೆ ತಾಂ ನಡಸೆ, ಲಂಕೆಯ ಕಡೆಗೆ
ಅದ್ಭುತಮೆನಲ್ ನಡೆದುದು ಅಪಾರ ದೀರಮಾ
ಕಿಷ್ಕಿಂಧೆ!
ಗಿರಿಸನ್ನಿಭಂ ಗಜಂ: ಗವಯಂ
ಮಹಾ ಬಲಿಷ್ಠಂ; ಗಮಾಕ್ಷಂ ಸಂದ ಕಲಿ; ಮುಂದೆ,
ತಂತಮ್ಮ ಪುಲಿಯ ಚಿರತೆಯ ತೊಗಲ್ ಕಯ್ಗಯ್ದ
ಬಲ್ಪಡೆಗಳಂ ಕೂಡಿ, ನಡೆದರೈ ತರುಮೂಲ
ಬೀಮಾಭೀಲ ಗದೆಗಳಂ ಪೊತ್ತು. ಬಲಗಡೆಗೆ
ವಾನರರ್ಷಭ ಋಷಭನೈತಂದನೈ ತನ್ನ, ೩೦
ಸಿಂಹಚರ್ಮದಿ ಸಮೆದ ಸಮರೂಪ ವರ್ಮಮಂ
ಧರಿಸಿ, ರುದ್ರನ ಶೂಲಗಳ ಸಹೋದರರೆನಲ್
ಶೂಲಪಾಣಿಗಳಾಗಿ, ಹಗೆಯೆದೆಯ ಹೆದರಿಕೆಯ
ಹೇರಾಳ್ಗಳೊಡನೆ. ಗಂಧಹಸ್ತಿಯವೋಲ್ ತರಸ್ವಿ,
ಗಂಧಮಾದನವೆಸರ ದುರ್ಧರ್ಷವಾನರಂ
ಖಡ್ಗಹಸ್ತದ ಖಡ್ಗಿಚರ್ಮದ ಪರಾಕ್ರಮದ
ಕೋಟಿಕೋಟಿಗಳೀಟಿಗಳ್ಗೆ ದಳಪತಿಯಾಗಿ
ಐತಂದನೈ ಸವ್ಯಪಾರ್ಶ್ವದಲಿ. ಅಂಗದಂ
ಜಾಂಬವ ಸುಷೇಣ ಶತಬಲಿ ವೇಗದರ್ಶಿಗಳ್
ನೂರು ಸಾವಿರ ಲಕ್ಷ ಕೋಟಿಯಾಳ್ಗಳ್ ವೆರಸಿ ೪೦
ಕಾವಲಾದರಂ ಸೈನ್ಯಹೃದಯಕ್ಕೆ. ಮೈಂದಂ
ದರೀಮುಖಂ ರಂಭಂ ಪ್ರಜಂಘಂ ನಳಂ ದ್ವಿವಿದ
ವಿನಿತಾದಿ ಪನಸ ತಾರಾದಿ ಸೇನಾನಿಗಳ್
ತಂತಮ್ಮ ಸೇನೆಗಳ್‌ವೆರಸಿ ನಾನಾ ಮುಖದಿ
ನಡೆದರಲ್ಲಲ್ಲಿ. ಕಪಿರಾಜನೈತಂದನಯ್ ಕೇಳ್,
ಕೋಸಲೇಶ್ವರ ಸೂನುಗಳ್‌ವೆರಸಿ, ಸೇನಾಮಧ್ಯೆ
ಆಂಜನೇಯನ ಅಂಗರಕ್ಷೆಯಲಿ !
ಮಾಗಿಗೆ
ಚರಮಗೀತೆಯನುಲಿದುವಳಿವಿಂಡು; ಸುಗ್ಗಿಯ
ನಾಟಕಕೆ ನಾಂದಿಯನುಲಿಯೆ ಹಿಗ್ಗಿದುದು ಕೊರಳ್ ೫೦
ಕೋಗಿಲೆಗೆ. ಮೆಲ್ ತೀಡತೊಡಗಿತು ಗಂಧಗಾಳಿ;
ತಿಳಿದು ನೀಳ್ದುವು ದಿಶಾಳಿ. ಸುಖವಾಯ್ತಲೆವ ದಾರಿ;
ಶೀತಕಾನನ ವಾರಿ ಹಿತವಾಯ್ತು. ತಳಿರ ತಲೆ
ತರುತಾಯಿಯಿಂದಿಣುಕಿ, ಕಣ್ಗೆ ಕಡು ಚೆಲ್ವಾಯ್ತು.
ಸಹ್ಯ ಮಲಯಾದ್ರಿ ಸೌಂದರ್ಯಮಂ ಸೌಖ್ಯಮಂ
ಸವಿದು ಮುನ್ನುಗ್ಗುತ್ತಿರೆ ಆ ರಾಮಸಖ ಸೇನೆ,
ತೊರೆಗಳೊಳ್ ಕೆರೆಗಳೊಳ್ ಕುಡಿದು ಬತ್ತಿದುದು ನೀರ್;
ತವಿದುದೈ ಮರಬಳ್ಳಿಗಳಲಿ ಪಣ್; ಪುತ್ತಿನೊಳ್
ಕಲ್ಗೋಡಿನೊಳ್ ಮರದ ತೂಂತಿನೊಳ್ ಬರಿದಾಯ್ತು
ಜೇನ್: ಬೀಡುವಿಟ್ಟೆಳ್ದ ಕೋಟಿ ಕೋಟ್ಯನುಕೋಟಿ
ಜೇನ್ಪುಳುಮುಗಿಲ್ ಕರ್ಪ್ಪನೆಳೆದುವು ಮುಗಿಲ್ಮೊಗಕೆ, ೬೦
ಝೇಂಕರಿಸಿ, ನಿಂತಲ್ಲಿ ನಿಲ್ಲದಿಂತಾ ಸೇನೆ
ತೊತ್ತಳದುಳಿದು ದರಿಕಂದರದ ಗಿರಿವಕ್ಷಮಂ
ದಾಳಿಟ್ಟುದಯ್ ಮುಂದೆ ಮುಂದೆ!
ಲಂಕೇಶ್ವರನ
ಬೇಹುಗಾವಲ್ಪಡೆಯ ಸೀಗೆಮೆಳೆಗಳನೆಲ್ಲಿ
ಕಂಡಲ್ಲಿ ಕಡಿದಿಕ್ಕುತುಂ, ತನ್ನ ಪಡೆಯ ನಡೆ
ತಡವರಿಸದಂದದಲಿ ಹಗಲಿರುಳ್ ಮುನ್‌ನಡೆದು
ಸೇನಾನಿ ನೀಲನಗ್ನಿಯ ಮಗಂ ಬರೆವರೆ
ದವಾಗ್ನಿಯೋಲ್, ಮುಂದೆದ್ದುದು ಮಹೇಂದ್ರಭೂಧರಂ
ದ್ರುಮಚಾರು ಪಂಕ್ತಿನೀಲಂ. ಮಾರುತಾತ್ಮಜಂ
ಸುಗ್ರೀವ ರಾಮಲಕ್ಷ್ಮಣರಿಗಾ ಸಾಲ್ ಮಲೆಯ ೭೦
ಮಹಿಮೆಯಂ, ವಿಭವಮಂ, ಉನ್ನತಿಯ ಘನತೆಯಂ,
ಸಂಪಾತಿ ಕುಳ್ತಿರ್ದ ಶಕುನಿಶಿಲೆಯಿರ್ಪೆಡೆಯ
ಕಡಿಪುಮಂ, ಸಾಗರೋಲ್ಲಂಘನಕೆ ಮುನ್ನಂದು
ಹುಡುಕುಪಡೆ ಸಭೆ ನೆರೆದ ಸಾನುಪ್ರದೇಶಮಂ,
ಲಂಕೆಯಿಹ ದಿಗ್ಭಾಗಮಂ ದೂರಮಂ ಕುರಿತು
ಬಣ್ಣೆಸುತಿರಲ್ ಕಿವಿಗೆ ಬಂದುದು ಭೀಮ ನಿಸ್ವನಂ,
ರುಂದ್ರ ಸಾಗರ ಸಲಿಲ ನಿರ್ಘೋಷಮಂದ್ರಂ.
ಅಯೋನಿಜಾ ವಲ್ಲಭ ಮನಂ ಪ್ರಫುಲ್ಲಿಸುತಿರಲ್
ಬಹುದಿನಗಳಾಶೆ ಸಿದ್ಧಿಸಿತೆಂದು ಸಡಗರಿಸಿ
ಶರಧಿ ಗುರು ದರ್ಶನಕೆ, ಮುಟ್ಟಿ ಬೆಟ್ಟವನದರ ೮೦
ಪ್ರತ್ಯಂತ ಸೀಮೆಯನಡರಿದುದು ಸೇನೆ. ಏರಿ,
ದಳಪತಿಯ ಸಂಜ್ಞೆಯಿಂ ಮತ್ತಮಲ್ಲಿಂದಿಳಿದು,
ಕಂದರದ ಸುಪಥಮಂ ಕೊಂಡು, ಗಿರಿಯ ಚರಣದ
ಶರಧಿಪರಧಿಯ ಸಿಕತಮೃದುಲ ಧೌತೋಪಲದ
ವೇಲಾವನದಿ ಬೀಡು ಬಿಟ್ಟುದು ಬೃಹದ್ ಬಲಂ
ಸಾಗರೌಘಸ್ಪರ್ಧಿ ತಾನಾಗಿ!
ಅಂಬುಧಿಯ
ಮೊದಲ ಕಾಣ್ಕೆಗೆ ಮುದಂ ಮಿಕ್ಕು, ಮಾತಿಲಿಯಾಗಿ
ನಿಂದು, ನಿಷ್ಪಂದನಾದಂ ಸಿಂಧುಧೀರನ್
ಸಗರಬಂಧು. ಅಂಬರದ ಸಲಿಲಾವತಾಮೆನೆ,
ನೋಟದೋಟಂ ಸುಯ್ದು ಸೋಲ್ವನ್ನೆಗಂ ಪರ್ವಿ, ೯೦
ಪರ್ವತಂಬೋಲುರ್ಬಿದುದು ದಿಗಂತಂಬರಂ,
ಮೇಲ್ವಾಯ್ದುರುಳ್ವುದೆಂಬೊಂದಗುರ್ವಿಂ ಭ್ರಮಾ
ಭೀಕರಮಪಾರತಾ ಪ್ರತಿಮಮಾ ಅಪ್ರತಿಮ
ಸಲಿಲಾಕರಂ. ಪಿಂತೆ ತಾಂ ಕಂಡುದಾವುದುಂ
ಆ ಶರಧಿದರ್ಶನದನುಭವವನಿಂಗಿತದೊಳುಂ
ಸೂಚಿಸಿದುದಿಲ್ಲಮೆನೆ ಭವ್ಯಮಾಯ್ತುನುಭೂತಿ
ಪ್ರಸ್ರವಣ ಗಿರಿಶಿರ ಗುಹಾ ತಪೋಯೋಗದಿಂ
ರಸದರ್ಶಿಯಾಗಿರ್ದ ರಸಋಷಿ ರಘೂದ್ವಹ
ಮಹಾನ್ ಮತಿಗೆ. ಮುನ್ನೀರ್ಗೆಣೆಯೆ ಬಾನೊ? ಬಾನ್ಗೆಣೆಯೆ
ಮುನ್ನೀರೊ? ಮೇಣೆರಡುಮುಂ ತಾನೊ? ನೋಡುತಿರೆ, ೧೦೦
ಕಣ್ ಪೀರ್ದುವಾ ನೀಲದ್ವಯಂಗಳಂ; ನನೆದು
ತೊಯ್ದುದಂತಃಕರಣಮಾ ವರ್ಣದಿಂ; ನೀಲಿ
ನಾಳ ನಾಳದಿ ಪರಿದು, ನೀಲಮಾಯ್ತಾ ಮೆಯ್ಯ
ನೆತ್ತರುಂ; ನೀಲತರವಾದನಾ ನೀಲತನು
ರಾಮಚಂದ್ರಂ. ಹೃದಯಮಲೆಯಲೆಯೆದ್ದು ನರ್ತಿಸಿ
ಫೇನ ಚಂದನ ಶೋಭಿಯಾದುದು, ಸಮುದ್ರಮಂ
ಪ್ರತಿಕೃತಿಸಿ; ವಾತದೋಲಿತಮಾಯ್ತು ಜೀವನಂ,
ಉಚ್ಚಲಜ್ಜಲಧಿಯೋಲ್, ಉಲ್ಲೋಲ ಕಲ್ಲೋಲ
ರುಂದ್ರ ರಮ್ಯಂ!
ನೀಲನಾಣತಿಗೆ ಮುಡಿಬಾಗಿ
ಪಡೆಪಡೆಯೊಡೆಯರಲ್ಲಲ್ಲಿ ಬಿಡಿಸಿದರು ಶಿಬಿರಮಂ ೧೧೦
ಕಡಲ ದಡದಲ್ಲಿ. ಸೀಮೆಯನುಳಿದು ಸೀಮಾಂತರಕೆ
ಗುಳೆಯದೆಗೆಯತೊಕ್ಕಲ್ವೋಪ ಹಕ್ಕಿಯ ಹಿಂಡು,
ಬಿತ್ತರದ ಕಡಲನುತ್ತರಿಸಿ, ಪಕ್ಕಂ ದಣಿದು
ಸೋಲೆ, ಸಿಕ್ಕಿದ ಮೊದಲ ನೆಲಕ್ಕಿಳಿದು ವಿಶ್ರಮಿಸೆ
ಕಿಕ್ಕಿರಿಯುವಂತೆ ಕವಿದುವು ಕಡಲ ತೀರಮಂ
ಪರ್ಣಗೃಹಗಳ್ ಚರ್ಮಛಾದಿತಂ. ಹೊಗೆಗಳುಂ
ಮೇಲೆದ್ದುವಲ್ಲಲ್ಲಿ ಪಾಕ ಕರ್ಮಕೆ ಬರೆದು
ಪೀಠೆಕೆಯ, ಪುಡುಕಿ ತಂದರು ಕೆಲರು ಪುಳ್ಳಿಯಂ;
ಹಣ್ಣುಹಂಪಲನರಸಿದರು ಕೆಲರು; ಕೆಲರಗೆದರಯ್
ಗೆಡ್ಡೆಗೆಣಸುಗಳ ದಡದೆಡೆಯೆ ತೆಳ್ಳೆಯೊಳಿಳಿದು ೧೨೦
ಕೆಲಕೆಲರ್ ಮಿಂದರೆದೆಯಾಳದಾ ನೀರೊಳಗದ್ದಿ,
ತೆರೆತೆರೆಗಳೊಡನಾಡಿ ಮೆಯ್‌ಸೊಗಸಿ. ಕೆಲಬರಿನ್
ಹರೆಯದವರಲ್ಲಲ್ಲಿ ಮಳಲ ಮೆತ್ತೆಯೊಳೊರಗಿ
ಕಡಲೆಲರಿಗೊಡಲೊಡ್ಡಿದರು ಚಾಚುತಂಗಾತ.
ಕೆಲರು ಕಿರಿಯರು ಮಳಲನಾಡಿದರು; ತೋಡಿದರು;
ಬಾಯ್ಗೆ ಬಂದುದನುಲಿದು ಪಾಡಿ, ಕುಣಿಕುಣಿದಾಡಿ,
ಒಬ್ಬರೊಬ್ಬರನಟ್ಟುತೋಡಿದರು!
ಇಂತಿರುತಿರಲ್‌,
ಅನ್ನೆಗಮಿಳಿದು ಬಂದುದು ಬಯ್ಗ ಪಡುವಣ ಮುಗಿಲ
ಮಂಚಕ್ಕೆ. ಒಸಗೆಯೋಕುಳಿಯಾದುದಾ ದೆಸೆಗೆ
ಕಡಲ ನೀರ್, ಅಗ್ನಿಚೂರ್ಣವನೆರಚಿದೋಲಂತೆ ೧೩೦
ಲೋಲಿತ ತರಂಗೋರಗಾಭೀಳಮಾಯ್ತಾ
ಮಹಾರ್ಣವಂ. ರಾಗಮನುರಾಗಮಂ ಸ್ಮೃತಿಗೆ ತೆರೆ
ಧಗಿಸಿತಾತ್ಮಂ ವಿರಹದುರಿಗಾ ರಾಮಚಂದ್ರಂಗೆ.
ಹಕ್ಕಿ ಹಾಡನು ಮುಗಿಸಿ ಗೂಡಿಗೋಡಿತು; ಮಿಗಂ
ಹಕ್ಕೆ ಸೇರಿತು. ಮೇದುದಂ ಮೆಲುಕು ಹಾಕಲ್ಕೆ;
ಮೌನಮಪ್ಪಿದುದಬ್ಧಿಶಬ್ದಮಂ, ಮೇಣ್ ಸೈನ್ಯ
ಸಂನಾದಮಂ. ಕರ್ಪ್ಪು ತಾನೊಯ್ಯನಿಳಿತಂದಪ್ಪಿ
ಮಸಿಮುದ್ದೆಯಾದುರು ಗಿರಿಧರಿತ್ರಿ ಚುಕ್ಕಿಗಳ್
ಕಿಕ್ಕಿರಿದುವಾಗಸದೊಳೆಂತಂತೆ ಮುನ್ನೀರ
ಚಕಿತ ವಕ್ಷದಲಿ, ಲಕ್ಷೋಪಲಕ್ಷಂ. ಅಲ್ಲಲ್ಲಿ ೧೪೦
ಶಿಬಿರಶಿಬಿರದೊಳಗ್ನಿವು ರಂಜಿಸಿದುವರಳ್ವವೋಲ್!
ದಯುತೆ ಸೆರೆಯಾಗಿರ್ದ ದೈತ್ಯಲಂಕಾದ್ವೀಪಮಾ
ತಾನಿರ್ದ ದಕ್ಷಿಣದಿಶೆಗೆ ದೃಷ್ಟಿಯಾಗಿರ್ದು,
ಮೇರೆಗಾಣದ ಸರಿತ್ಪತಿಯನೀಕ್ಷಿಸುತ ಬಹು
ಭಾವೋರ್ಮಿಮಾಲಾ ಸಮುದ್ರನಾಗಿರ್ದ ರವಿ
ಕುಲ ಶಿರಶ್ಯೇಖರಂ ಚಿತ್ರಭಾನುಜಗಿಂತು
ಗಾಢ ಸುಪ್ರಿಯಿನಚಿರಮೆಳ್ಚತ್ತನೋಲ್:
“ಅಗ್ರ
ಸೇನಾನಿ ನೀನ್, ಅಗ್ನಿಪುತ್ರ; ನಿನ್ನೊಡನಿನಿತು
ನನಗೆ ವೇಳ್ಕುಂ ಮಂತಣಂ. ಗುಹ್ಯಮೇನಿಲ್ಲ;
ಕಪಿರಾಜನಂತರಂಗದ ಮಂತ್ರಿಗಳ್ ಎಲ್ಲರ್ ೧೫೦
ಆಲಿಸಲ್ ತಕ್ಕುದೆ ವಲಂ. ಆದೊಡಂ ನನಗೆ.
ಭಾವಭಾರದಿನೇದುತಿರ್ಪೆನಗೆ, ಓರ್ವನಿರೆ
ಸುಕರಮಪ್ಪುದು ಬಗೆಯ ಮೇಣ್ ನಾಲಗೆಯ ನಡೆಗೆ.
ನೀನವರ್ಗಾ ಬಳಿಕಮೊರೆಯಲಪ್ಪುದು ನಮ್ಮ
ಈ ನಡೆವ ಸಂಭಾಷಣೆಯ ಸಾರಮಂ. ಮೌನಿ
ನೀಂ. ನಿನಗೆ ಮೌನಂ ಪ್ರಕೃತಿಸಹಜಮಾದೊಡಂ,
ಹೇ ವಾನರವರೇಣ್ಯ, ನೀಲ, ಬಾಯ್ದೆರೆದೆದೆಯ
ಉತ್ತರವನೊರೆಯವೇಳ್ಕುಂ ನನ್ನ ಕೇಳ್ವುದಕೆ.
ಮುಚ್ಚು, ಮರೆ, ಸಂಕೋಚವಿನಿತು ಸಲ್ಲದು ಇಲ್ಲಿ,
ನನ್ನ ನಿನ್ನಯ ಹೃದಯಸಭೆಯಲ್ಲಿ!”
“ರಘುಶ್ರೇಷ್ಠ, ೧೬೦
ನಿನ್ನಿಷ್ಟಮೆನಗಾಜ್ಞೆ, ಸೇನಾನಿಗಳಿಗೆಲ್ಲ
ಪರಮ ಸೇನಾನಿ ನೀನ್. ಬಗೆಬಿಚ್ಚಿ ಪೇಳ್ದಪೆನ್;
ಕೇಳ್.”
ಇರ್ದರಿರ್ವರುಮಚಂಚಲರ್ ರತ್ನಧಿಯ
ಚಂಚಲಾಂಚಲದೊಳಿರ್ದೊಂದರೆಯ ಬೆನ್ನಿನೊಳ್.
ಮುಂಗಾಲ್ ಮುಳುಗಿ, ಸೊಂಡಿಲಂ ನೀಡಿ, ನೀರ್ ಕುಡಿವ
ಹೇರಾನೆಯೋಲ್ ಅರ್ಧ ಮೇಲರ್ಧ ಕೆಳಗಿರ್ದ
ಆ ಬಂಡೆಯಂ ಬಡಿದುದವ್ವಳಿಸಿ ತೆರೆನೊರೆಯ
ಮುತ್ತುಗೊಂಚಲ್‌; ಬಡಿಯಲೊಡಮಾಯ್ತು ಪಾಲ್‌ಚವರಿ
ಕೈವೀಸುವೋಲ್; ಬೀಸುವುದೆ ತಡಂ ತುಂತರಿನ
ಸೋನೆ ಸಿಂಚಿಸಿತಿರ್ವರಂಗಮಂ; ಹಂಚಿದೊಲ್‌ ೧೭೦
ವಾಃಕಣಕಣದಿ ಮಿಂಚಿತುಡುಕಾಂತಿ!
“ಈ ಕಡಲ್
ಲಂಕೆಯಿಹ ದೂರ ಪಾರಕೆ ನೂರು ಯೋಜನಂ
ನೀಳ್ದಿರ್ಪುದಲ್ತೆ? ಬಹು ಯೋಜನಂ ಪಸರಿಸಿಹ
ಈ ದೀರ್ಘ ವೇಲೆಯನೆಲ್ಲ ತುಂಬಿ, ಧೈರ್ಯಮಂ
ಮನಕೆ ಮೇಣ್ ಕಣ್ಗೆ ಹಬ್ಬವನೀವ ಈ ಬೃಹದ್‌
ಧ್ವಜಿನಿಯಂ ದೈತ್ಯತೀರಕೆ ದಾಂಟಿಸುವ ಬಗೆಗೆ
ಕಳವಳಿಸುತಿದೆ ಬಗೆಯೆನಗೆ. ನೀಂ ದೀರ್ಘದರ್ಶಿ;
ಪೇಳೆನಗುಪಾಯಮಂ.”
“ಬಿಡು ಚಿಂತೆಯಂ ರಘುಜ;
ಧರ್ಮಂ ಸಹಾಯಮಿರೆ, ಧರ್ಮದೇವತೆಯೆಮಗೆ
ಕಟ್ಟುವಳ್ ಸೇತುವಂ. ನಿನ್ನೊರ್ ತಪಃಶಕ್ತಿ, ೧೮೦
ಪೇಳ್, ಚಲಿಸಲಾರದೆ ಋತಪ್ರಕೃತಿಯಂ? ಕಡಲ್
ಬಟ್ಟೆಯೀಯದೆ ಬೆದರಿ, ಇಚ್ಛೆಗೆ ಒಡಲ್ ಬಿರಿದು?
ಕಲ್ ತೇಲದೇನ್, ವಿಸರ್ಜಿಸಿ ತನ್ನ ನಿಯತಿಕೃತ
ನಿಯಮಮಂ? — ಅಲ್ಲದೆಯೆ, ನಮ್ಮ ಸೇನೆಯೊಳಿಹರ್
ಅಪ್ರಾಕೃತ ಬಲಾನ್ವಿತರ್: ಕಡಲನೊರ್ ಕಯ್ಯ
ಅಪ್ಪಳಿಕೆಯಿಂದಮಿರ್ಕಡೆಗೆ ಸರಿವಂತೆವೋಲ್
ಬಡಿವ ಬಲ್ಮೆಯ ಪಡೆವ ಗಾತ್ರಕೆ ವಿಜೃಂಭಿಸುವ
ದೈತ್ಯಕಲಿಗಳ್; ವಿಶ್ವಕರ್ಮಂಗೆಣೆಯ ಯಾಂತ್ರಧೀ
ಕುಶಲಿಗಳ್‌; ನೌಕಲಾ ಕೋವಿದರ್; ಖೇಚರರ್!
ನಿನ್ನ ತಪಕಿನ್ನನ್ನರೊಂದು ಕೈಂಕರ್ಯಮಿರೆ, ೧೯೦
ಕಡಲೊ ಕಾಲುವೆಯೊ, ಪೇಳ್, ಈ ಕಾಣ್ಬುದಕರಾಶಿ
ನಮ್ಮೀ ಅನೀಕಿನಿಗೆ?”
ಸಹಜ ಮೌನಿಯ ಮಹದ್
ಧ್ವನಿಯ ಧೈರ್ಯಕೆ ರಾಮನೆರ್ದೆಗಳ್ತಲಳಿವವೋಲ್
ವರುಣಾಲಯದ ಸಲಿಲ ಚಂಚಲ ದಿಂಗಂತದಿಂ
ಮೈದೋರದನಂ ಕೃಷ್ಣಪಕ್ಷದ ಶಿಶಿರ ರುಚಿರ
ಧನುರುಪಮನಾ ಮಂದಚಂದ್ರಂ. ಮಿನುಗುವಲೆತಲೆಯ
ಚೆನ್ನೀರ ಚೆಲ್ವನೀಕ್ಷಿಸಿ ಜಾನಕೀಜಾನಿ ತಾಂ
ಮತ್ತೆ ಜಾನಿಸುತಿಂತು ನೀಲಂಗೆ:
“ಕೇಳಿದಯ್
ನೀನ್, ಆಂಜನೇಯನಿಂ, ಲಂಕೆಯೊಂದುಗ್ರ ಬಲ
ವೃತ್ತಾಂತಮಂ?” “ತಿಳಿದೆನ್.” “ಈ ಮಹಾಸೇನೆಯೊಳ್ ೨೦೦
ಮುನ್ನೀರನಿರ್ಮೆ ದಾಂಟುವ ಸಯ್ಪು ಅನೇಕರ್ಗೆ
ದೊರೆಯಲಾರದು!” “ದಿಟಂ, ದಾಶರಥಿ.” “ಪಡೆಗಳಾಳ್
ತಿಳಿದಿರ್ಪರೇನೆರಡುಮಂ?” “ಮಹಾವೀರನೆಯೆ,
ಕಿಷ್ಕಿಂಧೆಯಿಂ ಪೊರಮಡುವ ಮುನ್ನಮೆಯೆ, ನೆರೆದ
ಸರ್ವ ಸೈನಿಕ ಮಹಾಸಭೆಗೆ ತಿಳಿಸಿಹನೆಲ್ಲಮಂ
ಕಷ್ಟ ನಷ್ಟದ ಕಠಿನ ಕಥನಮಂ.” ಬಹು ಜನರ
ಸತಿ ಸುತರ ಸಂಸಾರ ಸುಖವನೇತಕ ನನ್ನ
ಮೇಣೆನ್ನ ಸಯಿಯ ಮುಂದಣ ಅನಿಶ್ಚಿತ ಸುಖಕೆ
ಬೇಳ್ವುದೆಂದೆದೆ ಚುಚ್ಚುತಿಹುದೆನಗೆ, ಅಗ್ನಿಭವ.”
“ಸ್ವಾರ್ಥಮಲ್ತೀ ಸಾಹಸಂ. ಪುರುಷಾರ್ಥವೊಂದು ೨೧೦
ಗಂತವ್ಯಮೀ ತ್ಯಾಗಯಜ್ಞಕ್ಕೆ. ನೀನುಮಾ
ದೇವಿಯುಂ ಪ್ರತಿಮೋಪರಮ್ ಮಾತ್ರರೈ, ಪ್ರಾಜ್ಞ.”
“ಶ್ಲಾಘ್ಯಮಂ ಪೇಳ್ದೆ; ನೀಂ ದಿಟಂ ತತ್ತ್ವಜ್ಞನಯ್!”
“ಬಹುಮಾನಮೆನಗೆ ಋಷಿಗಳ ಶಿಷ್ಯನಿಂತೆನಲ್!”
“ಆರೊ ಇರ್ವರ್, ಅಲ್ಲಿ, ಸಾಮಾನ್ಯ ಸೈನಿಕರ್
ತಿರುಗಾಡುತಿಹರಲ್ತೆ?” “ಬರುತಿರ್ಪರೀ ದೆಸೆಗೆ.”
ನೋಡುತಿರಲಿರ್ವರಾಳ್ಗಳ್, ದೀರ್ಘನೊರ್ವನೆಡೆ
ಕುಬ್ಜನೊರ್ವಂ, ಬರಬರುತ್ತೆ ಬಳಿ ಸಾರಿದರ್.
ಕರೆ ಅವರನೆನೆ ರಾಮನಂತೆ ನೀಲಂ ಕರೆಯೆ,
ಕೇಳ್ದು ತೆಕ್ಕನೆ ಮಾತನುಳಿದರಾ ದನಿಗೇಳ್ದ ೨೨೦
ದೆಸೆಗೆ ನಡೆದರ್: ಮಹಾ ಸೇನಾನಿಯಂ ಮತ್ತೆ
ಕಾಣುತೆ ರಘುಕುಲೇಂದ್ರನಂ ನಮಸ್ಕರಿಸಿದರ್
ಧೀರ ಮರ್ಯಾದೆಯಿಂ.
“ನೀಮಾರ ಪಡೆಯವರ್?”
ಕೇಳ್ದರಾ ರಾಮಚಂದ್ರಸ್ನೇಹ ವಾಣಿಯಂ.
ಕುಳ್ಳನುದ್ದನ ಮೊಗವನೀಕ್ಷಿಸಲವನ್: “ದೇವ,
ಕಪಿಕುಲೋತ್ತಮ ವೀರ ದಧಿಮುಖೇಂದ್ರನ ಧೀರ
ದಳದವರ್!” “ಪೆಸರ್ ನಿಮಗೆ?” “ರಂಹನಿವನೆನ್ನ ಕೆಳೆಯಂ;
ನನ್ನನೆಂಬರ್ ವಹ್ನಿ.” “ನೀಮಾವ ಯುದ್ಧದೊಳ್
ನುರಿತವರ್?” “ವಜ್ರಮುಷ್ಟಿಯ ಮಲ್ಲಯುದ್ಧದಿ
ಪೆಸರ್ವೆತ್ತ ಕಲಿಯೀತೆನ್ನ ಮಿತ್ರನ್. ಕಾಡಾನೆಯನ್ ೨೩೦
ಕೋಡುಡಿದು, ನೆತ್ತಿಯೆ ಪಿಸುಳ್ವಂತೆ, ನಾವೆಲ್ಲ
ನೋಡೆ, ಮೋದಿದನೊರ್ಮೆ; ನಾಂ ಬಂದ ಬಟ್ಟೆಯೊಳ್,
ಮೊನ್ನೆ!” “ನೀನ್?”
ರಾಮನಾ ಪ್ರಶ್ನೆಗುತ್ತರವೀರ
ವಿನಯ ಶೈಲಿಯ ನೆನೆಯುತಿರಲಾಜಾನುಬಾಹು
ಆ ವಹ್ನಿ. ಋಜು ಹೃದಯದುತ್ಸಾಹಿಯಪ್ಪೊಡಂ
ರೂಕ್ಷ ಜಿಹ್ವೆಯ ರಂಹನವಸರದೊಳೊರೆದನಾ
ಪೃಥುಲ ಕುಬ್ಜಂ: “ಗಗನಗಮನದೊಳ್ ನಿರುಪಮನ್,
ವೈರಿಗಜ ಸಿಂಹನೀ ವಹ್ನಿದೇವಂ! ಮಹಾ
ಮಾಯಾವಿ, ಮೇಣ್, ಕಾಮರೂಪಿ! ಬಂಡೆಯ ನೆಗಹಿ
ಕವಣೆಕಲ್ ಬೀರಿದನೆನಲ್ ಬಲಿದ ಕೋಂಟಗಳ್ ೨೪೦
ಬಿರಿವುವೀತಂಗೆ! ಬಿಲ್ ಬಿಜ್ಜೆಯೀತಂಗೊಂದು
ಮಕ್ಕಳಾಟಂ! ಖಡ್ಗ ಕಲೆಯೊಳುಂ ಕಲಿ! ಗದಾ
ಯುದ್ಧದೊಳ್ ಈತನತಿ ಭೈರವಂ ! . . . . . . .”
ತಡೆದನಾ
ಸನ್ಮಿತ್ರನಂ ಮುನ್ನುಡಿಯಲೀಯದೆಯೆ ವಹ್ನಿ ;
ಮತ್ತೆಂದನಾ ರಾಮಭದ್ರಂಗೆ : “ರಾಜೇಂದ್ರ,
ಮನ್ನಿಸೀ ಮಿತ್ರನತ್ಯುತ್ಸಾಹ ಜಲ್ಪಮಂ.”
“ನಿನ್ನ ನೋಡಿದರಾತನೊರೆದನತ್ಯಲ್ಪಮಂ,
ವಹ್ನಿ !”  ಕೋಸಲನೃಪನ ನುಡಿಗೆ ತಲೆಬಾಗಿದನ್
ದೀರ್ಘೋನ್ನತಂ ; ಮತ್ತೆ “ದಧಿಮುಖೇಂದ್ರನ ದಳದಿ
ನಾನೊರ್ವನತ್ಯಲ್ಪನೆಯೆ ದಿಟಂ, ದೇವ.”  “ನೀನ್ ೨೫೦
ಅಲ್ಪನಾಗಿರ್ಪವೊಲ್ ತುಳಿಲಾಳ್ಗಳಂ ಪಡೆದ
ದಧಿಮುಖೇಂದ್ರನೆ ಧನ್ಯನೈಸೆ ! — ನೀಮಿರ್ವರುಂ
ಮಹಿಮರೆ ವಲಂ, ಪರಸ್ಪರ ಸಖ್ಯದಿಂ, ಮತ್ತೆ
ಪೇರದಟಿನಿಂ. — ವಹ್ನಿ, ನಿನಗೆ ಸಹಧರ್ಮಿಣಿಯ
ಸುಖ ಸಂಗಮಿರ್ಪುದೇನಯ್ ?”  “ಇರ್ದುದೆನ್ನೊರೊಳಗೆ.”
ಪ್ರತ್ಯತ್ತರದ ಇಂಗಿತವ್ಯಂಗ್ಯಕೊಂದಿನಿತೆ
ನಕ್ಕು, ಸೀತಾಪ್ರಾಣವಲ್ಲಭಂ: “ಇರ್ದುದೇನ್ ?
ಅಯ್ಯೊ ಇರ್ಪುದನುಳಿದು ಬಂದು ಸಂಕಟಕೇಕೆ
ಸಿಲ್ಕಿದಯ್? ನಿನ್ನವೊಲೆ ನಿನ್ನಾಕೆಯುಂ ದಃಖಿ !”
ಸುಯ್ದು ಕೇಳ್ದನ್, “ನನ್ನ ಕತದಿಂದಾದುದಲ್ತೆ ೨೬೦
ನಿಮಗೆ ಬನ್ನಮ್, ವಹ್ನಿ ?”
ತತ್ತರಿಸಿದನು ವಹ್ನಿ
ಸುಯ್ಲುರಿಗೆ ಸಿಲ್ಕಿ. ಕೈಮುಗಿದು, ಮೊಣಕಾಲೂರಿ,
ಬೇಡಿದನ್: “ದೇವ, ಮನ್ನಿಸು ನನ್ನ ಬಿನದಮಂ.
ತಪ್ಪಿತರ್ಥವ್ಯಾಪ್ತಿ!”
“ಏಳೇಳ್, ಭಟವರೇಣ್ಯ;
ಮಕ್ಕಳಿಹರೇ ನಿನಗೆ?” ರಘುಜನೆಂದನು, ದನಿಯೆ
ನೇಹವ ಸೂಸುವಂತೆ.
“ಇರ್ಪನೊರ್ವನ್, ದೇವ.”
“ಚಿಕ್ಕವನೆ?” “ಅಲ್ಲದಿರೆ ನನ್ನ ಪಕ್ಕದೊಳಿರನೆ
ನಿನ್ನ ಸೇವೆಯ ದೇವ ಕಾರ್ಯಕ್ಕೆ?” “ಅವರ್ಗಾರ್
ರಕ್ಷಕರ್?” “ನಾನೆ!” ಸುಯ್ಯುತೆ ದಶರಥಾತ್ಮಜಂ
ವೀರ ವಹ್ನಿಯ ಕಣ್ಗಳಂ ಕರುಣೆಯಿಂ ನೋಡಿ ೨೭೦
“ನೀನೆ?” ಎಂದಿನಿತು ಜಾನಿಸಿ ಮತ್ತೆ, “ಮರಣದೋಳ್
ರಣಮಿಹುದು, ವಹ್ನಿ; ಹಣೆಬರೆಹಮೊರೆಯುವುದಿರ್ಕೆ,
ಸಾರುತಿದೆ ಕೈಬರೆಹಮುಂ!” ಧ್ವನಿಯರಿತು ನಕ್ಕನಾ
ರಾಮ ನೀಲರ ಕೂಡೆ ಭಟವರಿಷ್ಠಂ ವಹ್ನಿ; ಮೇಣ್
ತನ್ನ ಧೈರ್ಯಕೆ ನೀಡಿದನು ನಾಲಗೆಯನಿಂತು:
“ಆವ ಧರ್ಮಕೆ ಸಾವನಪ್ಪುವೆವೊ ಪೊರೆವುದಾ
ಧರ್ಮಮೀ ಲೋಕಮಂ. ನನ್ನ ಸತಿಸುತರೊಂದು
ಹೊರತೆ? ಕೇಳ್, ರಾಜೇಂದ್ರ, ಸರ್ವಸೇನಾಧಿಪತಿ
ಈ ನೀಲದೇವನೆಮ್ಮಂ ನಡಸೆ, ಬಾಳ್ವೆರಸಿ
ಕಾಣ್ಬೆವೆಲ್ಲರ್ ಮನೆಯ ಮಂಗಳವ, ಅಲ್ಲದಿರೆ, ೨೮೦
ಬಿದಿ ಬಗೆಯಲನ್ಯಮಂ, ಬಿದಿ ಬಗೆಯಲನ್ಯಮಂ,
(ಬಿದಿಗಿಲ್ಲಮೆರ್ದೆ ಬಲ್ಲೆ!) ಸಾವೆ ಮೇಲ್ ಬರ್ದುಕಿಗಂ!
ದಶಶಿರಂ ಪೊತ್ತುಯ್ದುದೊರ್ಬ್ಬನ ಸತಿಯನಲ್ತು;
ಸತಿತನವನುಯ್ದಿಹನ್! ಪುರುಷನಿರಲಾಗದೀ
ಧರೆಯ ಮೇಲೊರ್ವನುಂ ಪೊರೆಯದನ್ನೆಗಮಾ
ಸತೀತ್ವಮಂ! ರಘುವರ, ಸುರಕ್ಷಿತರ್ ನನ್ನವರ್
ನಿನ್ನ ಈ ಕೇಳ್ದ ಕುಶಲಪ್ರಶ್ನ ಕೃಪೆಯಿಂದಮುಂ!”
ಸೇನಾಪತಿಯ ಸನ್ನೆಯನ್ನರಿತು, ಕೈಮುಗಿದು
ಬೀಳ್ಕೊಂಡರಾ ಸೈನಿಕಸ್ನೇಹಿತರ್. ಜೊನ್ನಿರುಳ್ ೨೯೦
ಭೂವ್ಯೋಮ ಸಾಗರಂಗಳನೊಂದುಮಾಳ್ಪಂತೆ
ಬೆಸೆದಪ್ಪಿದುದು, ಮುಡಿದ ಬಿಲ್ದಿಂಗಳಿಂದೊಪ್ಪಿ.
“ನಿಮ್ಮ ಸಂಸ್ಕೃತಿ ಮಿಗಿಲ್ ನಿಮ್ಮ ನಾಗರಿಕತೆಗೆ
ಪಿರಿದು, ಸೇನಾನಿ!” ವಹ್ನಿಯ ವಚನ ವೈಖರಿಯ
ವಿನಯದ ವಸಂತತೆಯ ಸವಿಯ ರೋಮಂಥಿಸುತ
ನುಡಿದನಾ ಔತ್ತರೇಯೋತ್ತಮಂ, ರವಿಕುಲದ
ರಾಘವಂ, ಕಪಿಕುಲದ ಕಿಷ್ಕಿಂಧೇಯಾತಂಗೆ, ಕೇಳ್,
ಆ ವಾನರ ಕ್ಷಾತ್ರತೇಜೋ ಹಿರಣ್ಯರೇತಜಗೆ.