ಮನುಷ್ಯಮತಿ ವಶಮೆ, ಪೇಳ್, ಅಮರ್ತ್ಯ ರಣಮೇದಿನಿಯ
ಅಲೌಕಿಕಬಲ ಬಲಾನ್ವಿತರ ದನುಜವಾನರ
ಚಮೂಕ್ರಿಯಾಪ್ರಾರಂಭಸಮಯ ತುಮುಲಂ? ಶುಕ್ರಂ
ರಾಮನ ನಿರೂಪಮಂ ಪೊತ್ತು ಪೋದವನಿತ್ತ
ಬಾರದಿರೆ, ಕಾದುದು ಕಪಿಧ್ವಜಿನಿ ಚೈತ್ರ ರವಿ
ಮೂಡುವ ಮುಹೂರ್ತಮಂ. ಕರ್ಪ್ಪು ಕೊನೆಯಂ ಸೇರ್ವ
ಮುನ್ನಮೆ, ಬೆಳ್ಪು ಮೂಡಣದದ್ರಿ ಚೂಡಮಂ
ಚುಂಬಿಸುವ ಮುನ್ನಮೆಯೆ ಕೇಳ್ದುದು ತೆಕ್ಕನೆಯೆ
ರಕ್ಕಸರ ರಣಕಹಳೆ, ತ್ರಿಕೂಟಂ ಸುವೇಲಂ
ಧಿಗಿಲ್ಲೆನೆ ವಿಕಂಪಿಸಿ ಪುಲಕಿಸುವವೋಲ್! ಕೂಡೆ ೧೦
ಕೇಳ್ದುದು ನಿಶಾಚರ ರಣೋತ್ಸಾಹ ಸೂಚಕಂ,
ಕೋಟಿ ಕಂಠಸ್ಫುರಿತ ಭೀಮಸ್ವನಂ! ಇತ್ತಲ್, ಆ
ಧ್ವನಿಗೆ ಮಾರ್ಮಲೆವಂತೆ, ಒಡನೆ ಉಕ್ಕಿತು ಬುಗ್ಗೆ,
ಮುಗಿಲ ಸರಿಸಕೆ, ಸಮರ ಸಂಕೇತ ತೂರ್ಯದಾ!
ದಳದಳದಳದಿ ಧಳ ಧಳ ಧಳಂ ಮೊಳಮೊಳಗಿದವು
ಕೂಡೆ ಕೊಳುಗುಳದ ರಣಭೇರಿಗಳ್. ಕಿವಿಗೆಡಲ್
ಸದ್ದೆದ್ದುದೆದ್ದುದು ಧೂಳಿ ಕಣ್ಗೆಡಲ್. ಪೇರೊಡಲ
ಭಟರ ಬೇಗಕೆ ಪುಟ್ಟಿದತ್ತೊಂದು ಬಲ್ಗಾಳಿ.
ಗಿರಿಶಿಖರ ತರುವರ ತತಿಯ ತೂಳಿ. ತಳತಳಿಸಿ
ಮೂಡಿದಂದಿನ ದಿನೇಶ್ವರನ ಕಿರಣಹಸ್ತಂ ೨೦
ಕ್ರವ್ಯ ಕಲುಷಿತವಾದುದಾ ರಣದ ಮಾರಣದ
ರುಧಿರ ಭೀಷಣದರುಣ ಧರಣಿಯಲಿ!
ತಾಗಿದನು
ನೀಲಂ ಪ್ರಹಸ್ತನಂ; ಮೈಂದನಾ ವಜ್ರಹನುವಂ;
ದ್ವಿವಿದನಾ ರಾಹುರೋಷನ ಸೈನ್ಯ ಬಾಹುವಂ.
ತಾಗಿದನು ವಾಲಿಪುತ್ರಂ ಮಹಾಪಾರ್ಶ್ವನಂ;
ಋಷಭಂ ಗವಾಕ್ಷನಂ ಕೂಡಿ ತಾಗಿದನಾ
ಮಹೋದರನ ಸೇನೆಯಂ. ಮೇಘನಾದನ ಪಡೆಗೆ
ತಾಗಿದತ್ತಾಂಜನೇಯನ ದಳಂ. ತಾಗಿದನು
ನಳನಕಂಪನನಂ; ದರೀಮುಖಂ ಮಲೆತನಾ
ವಜ್ರದಂಷ್ಟ್ರಂಗೆ. ಸುಪ್ತಘ್ನ ಮಕರಾಕ್ಷರಂ ೩೦
ತಡೆದನ್ ಸುಷೇಣನಾ ದಧಿಮುಖನ ಬೆಂಬಲದಿ.
ಶತಬಲಿಯ ಬಲಮವ್ವಳಿಸಿದತ್ತು ಬ್ರಹ್ಮಾಕ್ಷ
ಧೂಮ್ರಾಕ್ಷರಂ. ಗಜ ಗವಯರಗ್ನಿಕೇತುವಂ
ತಾಗಿದರ್ ದುರ್ಮುಖ ಸಮೇತನಂ. ನಡೆದನಾ
ಕೇಸರಿಯೊಡನೆ ತಾರನಾ ಸೂರ್ಯಶತ್ರುವಿನ
ಮೇಲೆ. ಬೆಳಗುವೊಳ್ತಿಗೆ ತೊಡಗಿ ಮುಭರಿದುದೈ
ಇಂತುಟಾ ದನುಜ ಕಾರಣ ದನುಜವಾನರ
ರಣಾಧ್ವರಂ, ಬೈಗಿನ ದಿಗಂಬರಂ, ಕಾಳಗದ
ಕಳನ ಕೆನ್ನೀರಾವಿಗುದಿಸಿದ ಮುಗಿಲ್ಗಳಿಂ,
ನೆತ್ತರೊಳ್ ಮಿಂದು ಕೆಂಗಾವಿಯಂ ತೊಟ್ಟೆಸೆವ, ೪೦
ಸಾಕ್ಷಾತ್ ಮೃತ್ಯುವಿಂ ದೀಕ್ಷೆಯನ್ನಾಂತ, ತಾಂತ್ರಿಕ
ತಪಸ್ಸಾಧನಾಸಕ್ತ ರಕ್ತಾಜಿನಾಭೀಳ
ಕಾಪಾಲಿಕನವೋಲ್ ಜಿನದ್ವೇಷವೇಷದಿಂ
ಜ್ವಲಿಪನ್ನೆಗಂ!
ಮಡಿದರಾರ್? ಏರ್ವಡೆದರಾರ್?
ಕಡಿದರಾರ್, ಕೆಡೆದರಾರ್? ಆರನಾರ್ ಮಲೆತರಾರನ್
ಆರೆಂತು ಸೆಣಸಿದರ್? ಕೇಳ್ವರಿರ್ದೊಡಮದಂ
ಪೇಳ್ವೆರಾರ್, ಲೆಕ್ಕಂ ಪಕ್ಕಂಗಿಡಲ್ ಕಿಕ್ಕಿರಿದು
ಪೊಯ್ದಾಡಿದಿರ್ಕ್ಕೆಲದ ಸೈನಿಕದಲಿ? ಪೆಸರಿರದ
ಸಾಮಾನ್ಯ ಪಟುಭಟರ ಮಾತಿರ್ಕೆ; ಪೆಸರಾಂತ
ಕಡುಗಲಿಗಳಂ ಪೆಸರಿಸಲ್ ಬಣ್ಣಿಸಲ್ ಬಹುದೆ ೫೦
ಮರ್ತ್ಯಕವಿ ಜಿಹ್ವೆ? ಕೇಳ್, ಬಳಲಿದುದೊ ಬರೆವ ಕೈ
ಚಿತ್ರಗುಪ್ತಂಗೆ ! ಮಸಿ ಬತ್ತಿದುದೊ ಲೇಖಣಿಗೆ!
ಸಾವಿನೂರಿನ ಸಗ್ಗವಾಗಿಲ್ಗಳಂ ಕಿತ್ತೆತ್ತಿ
ಪೊತ್ತು ಗೆಂಟುರ್ಗುಯ್ದು ತಮ್ಮ ಕರ್ತವ್ಯಮಂ
ಕಾಯುತಿರ್ದರ್ ಕಾಪಿನಾಳ್ಗಳೆನ, ಸಾಲದೇನ್, ಪೇಳ್,
ಮಡಿದ ವೀರರ ಸಂಖ್ಯೆಯಂ, ಅಸಂಖ್ಯೇಯಮಂ,
ಸೂಚಿಸಲ್?
ಕೇಳಾದೊಡಂ ಪೇಳ್ವೆನೊಂದೆರಡು
ಪೊಡವಿಯರಿಕೆಯ ಪೆಸರ್ವಡೆದವರ ಕೃತಿಗಳಂ,
ಗತಿಗಳಂ ಮೇಣ್ ಸಮರ ಸಂಗತಿಗಳಂ. ಕೊಂದು
ವಜ್ರಹನುವಂ ದ್ವಂದ್ವಯುದ್ಧದೊಳ್ ದ್ವಿವಿದಂ ೬೦
ತಾನುಮೇರ್ವಡೆದುರುಳಿದನ್. ರಾಹುರೋಷನಂ
ಲಂಕೆಗೆ ಮರಳ್ವವೋಲರೆಗಳಿಂದರೆಯಟ್ಟಿ
ದಣಿದನಾ ಮೈಂದಂ, ಕಪಿಧ್ವಜರ ಕಲಿ ಕವೀಂದ್ರಂ.
ಅಂಗದನ ಮುಂದೆ ಹಿಮ್ಮೆಟ್ಟುತೆ ಮಹೋದರನ
ಸೇನೆ ದಳುದುಳವಾಯ್ತು ಋಷಭ ವಾನರ ಸೇನೆ
ಶಕ್ತಿಪೂಜಕ ಮಹಾಪಾರ್ಶ್ವನಿದಿರಿನಲಿರದೆ
ಹಿಂಜರಿದುದಯ್ ಗದಗದಿಸಿ ಬೆದರಿ. ಶತಬಲಿಯ
ಪಡೆಯತುಳ ಘಾತಕ್ಕೆ ಕೆಡೆದ ಧೂಮ್ರಾಕ್ಷನಂ
ಪೊತ್ತುಯ್ದುದವನ ಪಡೆ, ಔಷಧ ನಿಕೇತನದ
ಮಂತ್ರ ಶುಶ್ರೂಷೆಗೆ. ಮರುತ್ಸುತಂಗಿದಿರಾದ ೭೦
ಶಕ್ರುಜಿತು ಮೇಘನಾದನ ರಥಂ, ತಾನಾಯ್ತು
ಚೂರ್ಣೀಕೃತಂ, ಮುಷ್ಟಿಮುದ್ಗರ ಕುಠಾರದ
ಕಠೋರ ತಾಡನಕೆ. ತೆರಳಿದನು ತೇರುಡಿಯಲಾ
ರಾವಣ ಪ್ರಿಯ ಸೂನು, ಗರ್ವಭಂಗಿತನಾಗಿ,
ಶರ್ವರಿಯ ಸಂಶ್ರಯದಿ ಮಾಯಾವಿಧಾನದಿಂ
ನಿಶಾರಣವ ರಚಿಸೆ ನಿಶ್ಚಯಿಸಿ.
ಪಗಲನ್ನೆಗಮ್
ತುದಿಗೆಯ್ದಿ ಬರೆ, ನೆತ್ತರಿಂ ತೊಯ್ದು ಕೆಂಪೇರ್ದ
ರುಕ್ಮರೋಚಿಯ ಬೃಹದ್‌ವಸ್ತ್ರಮಂ ಶುಚಿಗೆಯ್ಯೆ
ರವಿ ಮುದ್ದೆಗೆಯ್ದುದ್ದಿದನೊ ಪಡುಗಡಲ್ಗೆನೆ
ಭಯಂಕರರೋಕುಳಿಯಾದುದಪರಾಭ್ಧಿ. ಅತ್ತಲಾ ೮೦
ಇನನ ಬಿಂಬದ ಕೆಂಡಮಂಡಳಮುರಳೆ ನೀರ್ಗೆ
ಕಲ್ಲಿದ್ದಲಿತ್ತೆದ್ದುದೋ ಎನೆ ಇರ್ದುದುದಯಾದ್ರಿ.
ಪೇಳ್ವುದೇನಾಶ್ಚರ್ಯಮಂ! ಪಾಡಿವದ ಶಶಿಯ
ಮೂಡಿದುದನಾರ್ ಕಂಡರಾ ಇರುಳ್? ಅದು ಕಣಾ
ಮೇಘನಾದನ ಮಾಯೆ: ತೀಡಿದುದು ಭುವನಮಂ
ಕಾಡಿಗೆಯ ಕಗ್ಗತ್ತಲಕ್ಷಿಗಳ್ಗದ್ವೈತ ತಾಂ
ಪ್ರತ್ಯಕ್ಷಮಪ್ಪಂತೆವೋಲ್. ಕೃತ್ರಿಮದ ರಾತ್ರಿ
ನಿಸ್ಸೂತ್ರಧಾರಿಯಾದುದು ನೇತ್ರ ನಾಟಕಕೆ.
ಪಗೆಯದಾರ್ ಕೆಳೆಯದಾರ್ ತಿಳಿಯದೊಂದನುಪಮದ
ಪೊಗೆಯ ಬೆಮೆ ಕವಿದುದು, ಕಪಿಧ್ವಜರ ಕಣ್ದಿಟ್ಟಿ ೯೦
ಹೊಲಬುಗೆಡುವಂತೆ. ತಮಗೆ ಸುಸಮಯಮೆಂಬುದಂ
ತಿಳಿದಾ ತಮಿಸ್ರಚರರಿರ್ಮಡಿಸಿ ಮೇಲ್ವಾಯ್ದು
ತವಿಸಿದರ್ ನಾನಾಯುಧಪ್ರಹಾರಂಗಳಿಂ
ವನೇಚರಾನೀಕಮಂ. ಕತ್ತಲೊಯೊಳರಿಯದೆಯೆ
ತಮ್ಮವರನರಿಗಳೆಂದಿರಿದರ್ ಕೆಲರ್. ಕೆಲರ್
ಪಗೆಗಳನೆ ತಮ್ಮವರ್ಗೆತ್ತವರ ಪಕ್ಷದೊಳ್
ನಿಂದು ಬಡಿದಾಡಿದರ್. ರಣಭೇರಿ ಪಣವಾದಿ
ರಣವಾದ್ಯ ರಣನಮಂ ಗೆಲೆವಂದುದಯ್ ಭಟರ
‘ನಿಲ್ ಕೊಲ್ಲು ಇರಿ ಕೆಡುಹು ಪೊಯ್ ಎಂಬ ಸುತುಮುಲಂ
ಶಬ್ಧಮತುಲಂ.
ಕಳ್ತಲೆಯ ಕಣ್ಗೇಡಿತನಕೆ ೧೦೦
ಕಡಿವಣವಿಕ್ಕೆ ಪೊತ್ತಿಸಿದರಲಲ್ಲಿ ಪೆರ್ ಬಿದಿರ್
ಮೆಳೆಗಳಂ, ಮರಗಳಂ, ಕುತ್ತುರ್ಗಳಂ. ಕೆಂಬೆಂಕೆ,
ತಿಮಿರದ ಕೊರಳ್ಗೆ ತೋರಣದ ಕಟ್ಟಾಣಿಯೆನೆ,
ಧಗಧಗಿಸುತೆದ್ದುದುರಿಗೋಪುರದ ಸಾಲ್ಗಳಂ
ಕಟ್ಟಿ. ಕೊಲೆ ಕಳೆಯೇರುವಂತೆ ರಂಜಿಸಿತೊಡನೆ
ಕೆಂಗಾಂತಿ. ನೂರ್ಮಡಿಸಿದಿರ್ಕಿನಿಂ ಮುಂದೊತ್ತಿ
ಮತ್ತೆ ಕಾದಲ್ ತೊಡಗಿದುದು ನೀಲನಾಜ್ಞೆಯಲಿ
ಸುಗ್ರೀವ ಸೇನೆ. ಆ ರಭಸಕಸುರ ದಳಗಳ್
ಮೂಢವಾತಕೆ ಸಿಲ್ಕುವಬುಧಿ ನೌಕೆಗಳಂತೆ
ಕಂಗೆಟ್ಟು, ದೆಸೆಗೆಟ್ಟು, ಸುಳಿ ಸುತ್ತಿದುವು ಮರಳಿ ೧೧೦
ತಿರ್ರನೆ ತಿರುಗಿ ಮರುಗಿ.
ಕಂಡನದನಿಂದ್ರಜಿತು.
ಕೈಕೊಂಡನದ್ಭುತದ ಕೈತವನ ಮಾರ್ಗದಿಂ
ಕಾಳಕೂಟೋಪಮದ ಕೂಟರಣಮಂ. ಮುಂದೆ, ಕೇಳ್,
ಪ್ರತಿಮಿಸುವೆನನುಪಮವನಪರಾಧಮಂ ಕ್ಷಮಿಸಿ,
ತಂತಮ್ಮ ಸಂಸ್ಕ್ರತಿಗೆ ಸುಕೃತಕ್ಕೆ ಸಾಧ್ಯಮಂ
ಸವಿಯುವುದು ಸಹೃದಯರ್ ಸಂವೇದ್ಯಮಂ:
ತ್ರಿಜಗಂ
ಗದಗದಿಸಿ ನಡುಗಿದುದು. ತಲ್ಲಣಿಸಿತಾಗಸಂ.
ತತ್ತರಿಸಿತದ್ರಿಕುಲಮಂತೆ ಕೂಳ್ಗುದಿಗುದಿದು
ಗದಗದಿಸೆ ಜೀವನಂ ಪ್ರಳಯಶಂಕೆಯಿನಳ್ಕಿ
ಸುಯ್ದುವು ಮಹಾಂಭೋಧಿಗಳ್. ಇರ್ದ್ದಕಿರ್ದ್ದಂತೆ, ೧೨೦
ಕಡಲ ನೀರ್ಗಳೆ ಹೆದರಿ ಹಾರಿದುವೊ ಬಾನೆಡೆಗೆ,
ಭೂಧರಂಗಳೆ ಬೆದರಿ ಚೆದರಿದುವೊ ಗಗನಕೆನೆ
ಕತ್ತಲೆಗೆ ಕರ್ಪಿಟ್ಟು ಕವಿದುವೈ ಬಲ್ ಮುಗಿಲ್.
ಮೊಳಗುರುಳ್ದುರು, ಗುಡುಗುಡುಬಂಡೆಯೆನೆ, ದಿಕ್ತಟದಿಂದೆ
ದಿಕ್ತಟಕೆ. ಕತ್ತಲ್ಗೆ ಕಾಂತಿಯ ಕಠಾರಿಯೆನೆ
ಬಳ್ಳಿವರಿದಿರಿದುವೈ ಕೆಮ್ಮಿಂಚುಗಳ್. ಸಿಡಿಲ್
ಕಿವಿಯೊಡೆದುವಾ ಪ್ರಳಯ ತಾಂಡವದ ಕಾಲದಲಿ
ಭೈರವನೆ ಬ್ರಹ್ಮಾಂಡ ಚಂಡೆಯಂ ಬಡಿವಂತೆವೋಲ್.
ತಗುಲಿದರೆ ತಲೆಯೊಡೆವ ಪೇರಾಲಿಕಲ್ಲುಗಳ್ ೧೩೦
ವೆರಸಿ ಕರೆದುದು ಮುಸಲಧಾರೆ. ನಿಶ್ಯೇಷಮಾ
ಮೆಳೆಯುರಿಗಳಾರಿದುವು, ಪೇಳ್ವುದೇಂ, ಕಣ್ಮುಚ್ಚಿ
ತೆರೆವಲ್ಲಿಗಾ ಮಳೆಗೆ. ದರಿ ತುಂಬಿ ಕೆರೆಯಾಯ್ತು.
ಪರಿವ ಕಾಲುವೆ ಪಿರಿಯ ತೊರೆಯಾಯ್ತು. ಕೋಂಟೆಯಂ
ಬಳಸಿರ್ದ ಪಾತಾಳ ಕಂದಕಗಳಾದುವು
ಸಮುದ್ರಸಂಬಂಧಿಗಳ್. ಕೆಸರಿನೊಳ್ ನೀರಿನೊಳ್
ಪುಸಿಯುಸುಬಿನೊಳ್ ಸಿಲ್ಕಿದಾ ಕಪಿಕಟಕಟದಪ್ರಕಟ
ಸಂಕಟವನೇನೆಂಬೆನಕಟಾ ದಶಗ್ರೀವ
ಸುತಶ್ರೇಷ್ಠ ಕೂಟವಿದ್ಯಾಟೋಪದಿಂ!
ಇಂತು
ಕರುಣಸ್ಥಿತಿಗೆ ಸಿಲ್ಕಿದಾ ರಾಮಸೇನೆಯಂ
ಕಂಡುಬ್ಬಿದನು ಜಿಂಹಯೋಧಿ, ಆ ಬ್ರಹ್ಮವರ ೧೪೦
ಗರ್ವಿಷ್ಠನಿಂದ್ರಜಿನ್ ಮೇಘನಾದಂ. “ರಾತ್ರಿ
ತೀರ್ವನಿತರೊಳ್ ತೀರ್ಚಿದಪೆನೀ ವನಾಲಯರ
ಪಡೆಯ ಪೆಸರಿನ ಬರಿಯ ಗಡಿಬಿಡಿಯ ಗಡಣಮಂ!”
ಎಂದಾರ್ದು, ಮುಗಿಲ ಮರೆಯಂ ಸೇರ್ದು, ಮಾಯೆಯಿಂ
ಮೆಯ್ಗರೆದು, ಕರೆಯತೊಡಗಿದನಸ್ತ್ರವರ್ಷಮಂ,
ವೈರಿಯ ಯ ವಿನಾಸಕಾಧುನಿಕ ವಿಜ್ಞಾನ ಕಲೆ
ಕೈಕೊಳ್ಳುತಿರ್ಪತಿ ಭಯಾನಕೋಪಾಯಗಳ್
ಪೋಲ್ವೆಗೆ ಬರಿ ಶಿಶುಕ್ರೀಡೆಯಪ್ಪಂತೆ. ಸಿಡಿಲುಗಳೆ
ಸರಳಾದುವೆನೆ ಬಿದ್ದುವಶನಿನಾರಾಚಗಳ್;
ಸಿಡಿದ ಸದ್ದಿಗೆ ಕಿವುಡುವೋದುವು ಕೊಂಡಂಕೆಗಳ್; ೧೫೦
ಬಿರಿದ ರಭಸಕೆ ಛಿದ್ರವಾದುವು ಕಪಿಧ್ವಜರ
ಕಾಯಗಳ್; ಪೊಗೆಯ ಕೌರಂ ತಾಳಲಾರದೆ
ಉಸಿರ್ ಕಟ್ಟುತೋಡಿದರ್ ದೆಸೆದೆಸೆಗೆ ವಾನರರ್
ಶುಚಿ ಸಮೀರಂಗೆಳಸಿ ತಂಡತಂಡಂ. ವಿಭ್ರಾಂತಿ
ಮುಸುಗಿತು ಮಹಾ ಮತಿಯ ಮೇಧಾವಿಗಳಿಗುಮಾ
ವಾನರ ವರಿಷ್ಠರೊಳ್. ದುಸ್ಥಿತಿಯನರಿಯುತಾ
ಕೌಶಿಕಪ್ರಿಯಶಿಷ್ಯನಾ ರಘುರಾಮರುದ್ರಂ
ಪ್ರತೀಕಾರಮಂ ತನ್ಯ ದಿವ್ಯಕೋದಂಡಮಂ
ಕೈಕೊಂಡನಯ್, ಪ್ರಾಣಂ ಮುಹದ್ ಭವಿಸುವೋಲ್
ಸಮಸ್ತ ಸೇನೆಯ ತ್ರಸ್ತ ಚೇತನಕೆ.
“ಅರಸಿಮಾ ೧೬೦
ಮಾಯಾವಿಯಿರ್ಪ ನೆಲೆಯಂ. ಬೆಳಗಿದಪೆನೀ
ನಭಸ್ಥಲವನಸ್ತ್ರಜ ಗಭಸ್ತಿಯಿಂ.” ಬೆಸನಾರ್ದ
ದಶರಥ ಸುತನ ಕಂಡರಿಲ್ಲೊರ್ವರುಂ. ಜನಿಸಿ
ಸಿಂಜಿನಿಯ ದನಿ ಕಿವಿದೆಸೆಗೆ ಸೇರ್ವ ಮುನ್ನಮೆ, ಬಾನ್ಗೆ
ಬುವಿಯಿಂದೆ ರವಿಗಳಂ ಕವಣೆಯೆಸೆದಂತಾಯ್ತು.
ಸ್ಪಗಲಿರುಳ್ಗಿಣಿಕಿತನೆ ಭೂವ್ಯೋಮಮೆರಡುಮುಂ
ಸೋಮಸುಂದರ ಸೂರ್ಯಸಂಸ್ಪಷ್ಟಮಾದುವಯ್
ತರು ಗುಲ್ಮವನ ಶೈಲ ವಿವಿಧ ಛಾಯಾ ಚಿತ್ರ
ರಮಣೀಯ ಕೃತಿಗಳಿಂ : ವಿವರವಾದುದೊ ವಿಶಿಖ
ಶಿಖಿಗಾ ವಿಯದ್ ವಿವರಂ!
ಪರಂತಪ ತರಸ್ವಿಗಳ್, ೧೭೦
ಪ್ಲವಗರ್ಷಭರ್, ಗಗನಗಾಮಿಗಳ್ ಶೋಧಿಸಲ್
ನೆಗೆದರಂಬರತಲಕೆ ಶರಭರ್ ಸುಷೇಣರ್
ಗವಾಕ್ಷ ಗಜ ಗವಯ ಶತಬಲಿ ಋಷಭರಂಗದರ್
ಹನುಮ ಜಾಂಬವರಗ್ರ ಸೂತ್ರದಲಿ. ಕಂಡನೈ
ಕಾಣದಾ ಕಲಿ ಮೇಘನಾದನಿವರಂ; ಕರೆಯ
ತೊಡಗಿದನು ಸಿಡಿಲೆಣೆಯ ಕಣಗಳನವರ ಮೇಲೆ.
ಹಾಯ್ದುರತ್ತಲ್, ಹಾಯ್ದರಿತ್ತಲ್, ವಿಹಂಗಗಳ್
ರಕ್ಷಣೆಗೆ ಪಾಯ್ವವೊಲಪಾಯದಿಂ ಡೇಗೆಯ
ನಖಂಗಳಾ! ಕುಪ್ಪಳಿಸಿದರ್ ಕಪ್ಪೆಗಳವೋಲ್;
ಕೊಂಕಿ ಬಳುಕುತೆ ಪರಿದರೈ ಸರ್ಪಗಳವೋಲ್; ೧೮೦
ಮುಗಿಲ್ವಟ್ಟೆಯನ್ನೀಸಿದರ್ ಮೀಂಗಳೊಲ್. ಪೊಗೆಗಳೊಲ್‌
ಮೇಲೇರಿದರ್; ಕಲ್ಗಳೋಲುರುಳಿದರ್; ಸರಳ್
ತಾಗಿ ಮೆಯ ಸೀಳಲಸು ನಂದಿ ಕೆಡೆದವರೆನಿತೊ
ಮಂದಿ!
ಮಾಯೆಯಿಂ ಮೆಯ್ಗರೆದ ರಾವಣಿಯನಾರ್
ಕಾಣ್ಬರ್? ಅದಂತಿರಲಿ. ರಾಘವಾಸ್ತ್ರ ಜ್ಯೋತಿ
ತನ್ನ ಪಕ್ಷಕೆ ತಾನೆ ವಿದ್ರೋಹಿಯಾದುದೆನೆ
ವಾನರವ್ಯೂಹಸ್ಥಿತಿಯನಂತೆ ದಶರಥನ
ಸುತನಿರ್ಕೆದಾಣಮಂ ತೋರ್ದುದು ಬಯಲ್ಚಿ ಆ
ತಾರಾಕ್ಷಿವಲ್ಲಭಗೆ. ಕೊಲ್ವೆನೆಲ್ಲರನೊಂದೆ
ನಾಗಾಸ್ತ್ರದಿಂದೆಂದು ಹೂಡಿದನಮೋಘಮಂ ೧೯೦
ಮರಣಮಯದಾಶೀವಿಷೌಘಮಂ. ತೊಟ್ಟುದೆ ತಡಂ
ತುಂಬಿದತ್ತಂಬರದ ಸೀಮೆಯಂ ಘೋರಾಂಧ
ಗರಳ ಧೂಮಂ. ಕಿಡಿಯ ಗಡಣದ ಹೆಡೆಮಣಿಗಳಂ
ಕೊಡಕೊಡಹುತೆಣ್ದೆಸೆಗೆ ಸಿಡಿದುವು. ಉಗುಳ್ದುವೆನೆ
ಒಂದು ಮತ್ತೊಂದನಾ ಎರಡು ಎರಡೆರಡನಾ
ನಾಲ್ಕೆಂಟನಾ ಎಂಟು ಪದಿನಾರನಾ ಅಂಕೆ
ತಾನೆ ತನ್ನಂ ಗುಣಿಸಿ ವರ್ಧಿಸಿತು, ಸ್ಪರ್ಧಿಸಿ
ಕಪಿಧ್ವಜರ ಸಂಖ್ಯೆಯನಮೇಯಮಂ. ಸಿಡಿದೊಡೆದ
ಕಣೆಕಣೆಯಿನುಣ್ಮಿದುವು ಹಾವುರೂವಿನ ಹೊಗೆಯ
ಸುರುಳಿಗಳ್. ಹರಿಹರಿಯುತೊಯ್ಯನೊಯ್ಯನೆ ಹಿಡಿದು ೨೦೦
ಸುತ್ತಿದುವು ಮೆಯ್ಗಳಂ. ಘ್ರಾಣ ರಂಧ್ರಂಗಳಿಂ
ಪ್ರಾಣ ಗೃಹಮಂ ಪೊಕ್ಕು ನಂಜುಗಳನೋಕರಿಸೆ,
ಪಸುರೇರ್ದೊಡಲ್ಗಳಿಂ ಮಹಾ ಸುಭಟರ್ಕಳುಂ
ಚೇತನಮುಡುಗಿ ಕೆಡೆದರಿಳೆಯಲ್ಲಿ! ನಿಶ್ಚಲಂ
ನಿದ್ರಿಪೋಲ್ ನಿಶ್ಯಬ್ದಮಾಯ್ತಾ ಸಮಸ್ತಂ
ಸಮರಭೂಮಿ. ರಾಮಲಕ್ಷ್ಮಣಸಹಿತಮವನಿಗೆ,
ವಿಭೀಷಣಂ ಪೊರತಾಗಿ, ವಿಷಮೂರ್ಛೆಗಳ್ದಿದ
ಕಪಿಧ್ವಜಿನಿಯಂ ಕಂಡು ಕೃತಕೃತ್ಯ ಗರ್ವದಿಂ
ಪಿಂತುರುಗಿದನು ಪುರಕೆ ಮೇಘನಾದಂ, ತನ್ನ
ತಂದೆಯ ಕರೆದ ರಜನಿಯೋಲಗಕೆ ಘೋಷಿಸಲ್ಕಾ ೨೧೦
ಸಾಹಸದ ಸಂತೋಷಮಂ.
ಆತ್ಮ ಧಿಕ್‌ಕೃತ
ಅನಾತ್ಮ ವಿಜ್ಞಾನದೈಂದ್ರಿಯ. ಸುಖ ವಿಮೋಹದ
ತಮಸ್ಸುಪ್ತಿಗುರುಳಿರ್ಪ ನಾಗರಿಕತೆಯ ನಿದ್ರೆ ತಾಂ
ಬಳಿಸಾರ್ವ ಕಾಲಲಬ್ಧಿ ಪ್ರಭಾವದಿನೆಂತುಟಾ
ತನ್ನ ಜಾಡ್ಯಕೆ ತಾನೆ ತನ್ನಂತರಂಗದಿಂ
ಮದ್ದನೊದಗಿಪುದಂತೆ, ಕೂಟರಾಕ್ಷಸ ಕೃತಿಗೆ
ರಾಕ್ಷಸ ವಿಭೀಷಣನೆ ನಿಷ್ಕೃತಿಯನಿತ್ತನಯ್
ರಾಮಸೇನೆಯ ಭೀಷಣಸ್ಥಿತಿಗೆ.
“ತಳುವಿದಡೆ
ಸರ್ವರುಂ ಮೂರ್ಛೆಯಿಂದೊಯ್ಯನೆಯೆ ಮಿತ್ತುವಿಗೆ
ತುತ್ತಾಗುವುದೆ ದಿಟಂ. ಕಾಲ ಮೀರುವ ಮುನ್ನ ೨೨೦
ಗರಳ ಪ್ರಭಾವಮಂ ತಳ್ಗಿಸಲೆವೇಳ್ಕುಮ್.
ಸುಷೇಣನ್ ಮಹಾ ಮಂತ್ರ ವೈದ್ಯಪ್ರವೀಣನ್
ಎನಿಪ್ಪುದನ್ ಕೇಳಿಬಲ್ಲೆನ್. ಆತನೀ ವಿಷಕೆ
ಪಿರಿದು ಪೊಳ್ತೊಳಗಾಗಿರನ್.” ಬಭ್ರು ಸಂಕೇತ
ಕೇತನವನರಸುತೆ ವಿಭೀಷಣಂ ತೊಳಲುತಿರೆ
ಕೇಳಿಸಿತು, ನೀರವದ ನಿಶ್ಚಲದ ಪೆಣಮಯದ
ರಣ ಧರೆಯ ಮೇಲಾಗಸದಿ, ಗಾಲಿದನಿಗಳೆನೆ,
ದಿವ್ಯಕಂಠದ ಮಧುರ ಸಂವಾದ:
“ಇದೆ ಕೊನೆಯೆ,
ಪೇಳಕ್ಕ, ಆ ಎಲ್ಲ ಉದ್ಯಮಕೆ?”
“ತೊರೆ, ತಂಗೆ,
ಶೋಕಮಂ. ಕಂಬನಿಯನೊರಸು. ” ಸ್ವಪ್ನಲಕ್ಷ್ಮಿಗೆ ೨೩೦
ಧೈರ್ಯವಿತ್ತಳ್‌ ತಪೋಲಕ್ಷ್ಮಿ, “ಕಾಣ್, ಕಾಣಲ್ಲಿ,
ಧರ್ಮಶಕ್ತಿಯೆ ರಾಮಪಕ್ಷದಲ್ಲಿ ನಿಂತೆಂತು
ಹೊರಾಡುತಿದೆ ಸೆಣಸಿ ದುಶ್ಯಕ್ತಿಯಂ! ಇಲ್ಲಿ
ದೇಹಂಗಳುರುಳಿದಾ ಮಾತ್ರದಿಂ ಮುಗಿಯುವುದೆ
ಆತ್ಮಕರ್ಮಂ? ವಿಶ್ವಶಕ್ತಿಗಳೆ ತಾಮ್ ದೇವತಾ
ರೂಪಂಗಳಂ ತಾಳ್ದು ಚಲಿಸುತಿಹವಾಗಳೆಯೆ,
ನೋಡದೊ, ಮನೋಮಯದ ಲೋಕದಲಿ. ಅವರಿಚ್ಛೆ
ತೋರ್ಪುದನ್ನಮಯದೊಳ್ ಪ್ರಕೃತಿ ನಿಯಮಂಗಳೋಲ್.
ಆ ಇಚ್ಛೆಗವಿಧೇಯತೆಯೆ ಭಯಂ. ಆ ಭಯಕೆ
ಉರಿವುದೀ ಅಗ್ನಿ; ಸೂರ್ಯನೆಸೆವನ್; ಯಮ ವರುಣ ೨೪೦
ಇಂದ್ರಾದಿಗಳ್ ಪಾಲಿಪರ್ ನಿತ್ಯಕರ್ತವ್ಯಮಂ.
ನೋಡಿತಿರು. ಭಗಿನಿ, ಸೀತಾ ತಪೋಮಹಿಮೆಯಂ:
ಮುನಿದೊಡೆಯನಾಣತಿಗೆ ಬೆದರಿದಾಳುಗಳೆಂತು
ತವಕದಿಂ ತಕಪಕನೆ ಕುದಿಕುದಿದು ಗದಗದಿಸಿ
ಕಜ್ಜದೇರ್ ನೊಗಕೆ ಮಣಿದಾಂಪರೋ ಪೆಗಲ್ಗಳಂ
ತನಂತೆವೋಲ್, ಸೃಷ್ಟಿಸೂತ್ರಂಗಳಂ ಪಿಡಿದು
ನಡೆಯಿಪ ಜಗಚ್ಛಕ್ತಿಯಮರ ದೂತರ್ಕಳೀ
ಯುದ್ಧ ಮೇದಿನಿಯನಿಂದವರ ಕರ್ಮಕೆ ಅಗ್ರಮಂ
ವೇದಿಕೆಯನಾಗಿಪರ್. ಮುನ್ನಡೆವುದಂ ನೋಡಿ,
ಜವದಿ ನಡೆದೊರೆ ದೇವಿಗನಿತುಮಂ, ನೀಂ ಕಾಣ್ಬ ೨೫೦
ದೈವಿಕ ಮಹದ್‌ದೃಶ್ಯಮಂ.”
ಕೇಳ್ದುಮಾ ಶುಭದ
ದೈವೇಚ್ಛೆಯಂ, ತದಿಚ್ಛಾಂತರ್ಗತಂ ತನ್ನ
ಕೈಕೊಳ್ವ ನೈಸರ್ಗಿಕ ವಿಧಾನಮೆಂಬುದಂ
ಕರ್ಮಾಕರ್ಮ ಮರ್ಮಮಮ್ ತಿಳಿದಾ ವಿಭೀಷಣಂ,
ಧರ್ಮವೇತ್ತಂ, ರಾಕ್ಷಸೋತ್ತಮಂ ಮುನ್ನಡೆದು
ಗೆಯ್ದುದಂ ಕವಿಕರ್ಮ ರಮಣೀಯಮಪ್ಪಂತೆ
ಬಣ್ಣಿಪೆನ್, ಸ್ವಪ್ನ ಸುಂದರಿಗೆ ಕಂಡಂದದಿಂ,
ಮನೋಲೋಕ ಸುಭಗಮಂ, ಸ್ವಚ್ಛಂದಮಂ, ಮೇಣ್
ರಸಪ್ರತೀತಿಯ ಸತ್ಯತರಮಂ:
ಚಲನೆಯುಡುಗಿರ್ದ
ಯುದ್ಧ ರಂಗದೊಳೊಂದು ಚಲಿಸಿದುದು ಮಾರುತಂ, ೨೬೦
ವಾಯುದೇವ ಪ್ರೇರಿತಂ, ವನ್ಯಂ, ನಗಂಗಳಿಂ
ಪೊತ್ತು ದಿವ್ಯೌಷಧಿಯ ಸಂಜೀವಮಂ. ಮತ್ತೆ,
ಬೀಸಿ ದೂರಕೆ ಓಸರಿಸಿದುದು ಮೇಘನಾದ
ಶರೌಘ ಸಂಭವ ಗರಳವಾತಂಗಳಂ. ನೋಡೆ
ನೋಡೆ, ಮೋಡಗಳೋಡಿ ತಿಳಿವೋದುದಾಗಸಂ;
ತುಂಬು ಬಿಂಬಂ ತೋರಿದುದು ಪಾಡಿವದ ಪೆರೆಗೆ!
ತಿರೆಗೆ ತುಳ್ಕಿತು: ಜೊನ್ನೊ? ಜೇನಿಂಗಡಲೊ? ನಗೆಯೊ
ರಾಮಕ್ಷೇಮ ಚಂದ್ರಮನಾ? ಆ ಅಕಿಲ ಕಾರ್ಯಕೆ
ಪ್ರಧಾನ ಕಾರಣಮೆ ಪಿಂದೋರ್ಪುದೆಂಬವೋಲ್
ತೋರ್ದುದು ವಿಯದ್ದೂರದಲ್ಲೊಂದು ಚರಿಪರಿಲ್. ೨೭೦
ಚಂದ್ರ — ಸುಂದರ ನಭದ ಬಹುವಿರಳ ತಾರೆಗಳ
ನಡುವೆ ವಿಪುಳೋಜ್ವಲಂ. ಬರಬರುತೆ, ತನ್ನಮರ
ಕಾಂತಿಯಿನಿತರ ದೀಪ್ತಿಗಳನೆಲ್ಲಮಂ ನುಂಗಿ,
ಮನುಜ ಲೋಕೇಂದ್ರಿಯಾವಶ್ಯಕಾಕಾರಮಂ
ಸ್ವೀಕರಿಸುತವತರಿಸ ತೊಡಗಿದುದು ಲಂಕಾ
ಬಹಿರ್ಭೂತಮಾ ಯುದ್ಧಮೇದಿನಿಗೆ. ತಾರೆಯ ತೆರದಿ
ತೋರುತೆ ಮೊದಲ್, ಬರಬರುತೆ ಖಗಾಕಾರಮಂ
ತಳೆಯುತೆ, ಮನುಶಹಯನುವಾಂತು ತಿರೆಗಿಳಿದುದಾ
ದಿವ್ಯತೇಜಂ. ಸ್ವರ್ಗ ಸಂಭವ ಸುವರ್ಣೋಜ್ವಲ
ಪರ್ಣಪಕ್ಷಗಳೆಸೆದುವೈ ಭುಜಧ್ವಜಂಗಳೆನೆ ೨೮೦
ಪೊಣ್ಮಿ. ತಳತಳಿಸಿದುವು ದಿವ್ಯವಕ್ಷಾಂಬರದಿ,
ಫಾಲ್ಗುಣೋದಯ ರವಿಯ ರೋಚಿಗಳೆನಲ್, ರೋಮ
ರಾಜಿ. ಮಿರುಗಿದು ನಿರ್ಜರ ಸಹಜ ದೇದೀಪ್ಯ
ಕೌಶೇಯಮಮರ ವಪುವಂ, ಭವ್ಯಶೈಲಿಯಿಂ
ನೆಯ್ದು, ಕಯ್ಗಯ್ದು. ಜೋಲ್ದೆಸೆದುದೈ ನಂದನ
ಕುಟಜ ಕುಸುಮ ಕಂಠಹಾರಂ, ರೆಂಕೆಗರಿಗಳಿಂ
ಬೀಸುತಿರ್ದೆಲರಿಗೆ ಮರಣಹರಣ ಜೀವಾತುಂ
ಸೌಗಂಧಮಯದಮೃತದೌಷಧಗಳಂ ಸೂಸಿ.
ಅಂತುಟೈತಂದಾ ಗರುತ್ಮಂತ ಸಾನ್ನಿಧ್ಯ
ಮಂತ್ರಮಣಿಗಿರದೆ ಪರಿದೋಡಲಾ ಗರಳಫಣಿ ೨೯೦
ಮೇಘನಾದನ ನಾಗನಾರಾಚದಾ, ಸುಪ್ತಮಾ
ರಣಚೇತನಮೆ ಮೂರ್ಛೆಯಿಂದೇಳ್ವವೋಲ್ ಅಕ್ಷಿ
ಅರಳಿದವು ಇಕ್ಷ್ವಾಕುಕುಲ ದೀಪಕಂಗೆ. “ಏಳ್
ಸ್ವಮಾಯಾ ವಿಮೋಹದಿಂ, ಹೇ ಜಗತ್ ಸ್ವಾಮೀ;
ನಿಮಿತ್ತಮಾತ್ರಂ ನಿನ್ನ ನೆಳ್ಚರಿಸೆ ಬಂದೆನಾಂ;
ನಿತ್ಯಜಾಗ್ರಚ್ಚಿತ್ತನಲ್ತೆ ನೀನ್!” ಕೈಮುಗಿದು
ನಿಂದಾ ಸಮುದ್ರ ಮಂದ್ರಧ್ವನಿಯ ತನ್ನಾತ್ಮ
ರುಂದ್ರ ಸತ್ವದ ಬಹಿಶ್ಚರ ವಿಗ್ರಹನ ಕಂಡು
ಮಂದಸ್ಮಿತಾನುಗ್ರಹಂ ಗೆಯ್ದು ರಾಮನೊಳೆ
ಪೊಕ್ಕಡಂಗಿದುದಾ ಗರುತ್ಮಂತ ದೇವತನು , ೩೦೦
ಸ್ವಪ್ನದೇವಿಯ ಕಣ್ ತಪೋಲಕ್ಷ್ಮಿಯಕ್ಷಿಯಂ
ಬೆಬ್ಬಳಿಸಿ ಮಿಳ್ಮಿಳನೆ ನೋಳ್ಪಂತೆವೋಲ್!
ನೆಗಳ್ದ
ಶುಶ್ರೂಷೆಗೆಂಬಂತೆ, ಸುಯ್ದು ಕಣ್ದೆರೆದನಾ
ಕಣಸಿನಿಂದೀ ಕಣಸಿಗೆಳ್ಚರ್ಪನಂತೆ ವೋಲ್
ರಾಮಚಂದ್ರಂ. ಕಂಡನಿದಿರಿನಲಿ ತನ್ನಂ
ಬಳಸಿ ನಿಂದ ಕಪಿಮುಖ್ಯನಾಯಕ ಮೂಖಂಗಳಂ.
ದುಃಖ ಕರ್ದ್ದಿಂಗಳಿಂ ಹರ್ಷ ಬೆಳ್ದಿಂಗಳ್ಗೆ
ದಾಂಟಿ ಬರುತಿರ್ದುವಂ: “ತೊರೆಯಿ ತಳ್ಳಂಕಮಂ,
ಮಿತ್ರರಿರ್. ರಾವಣಿಗೆ ದೊರೆತಜನ ವರಬಲಮ್
ತವಿದುದಲ್ಲದೆ ತವಿದುದಿಲ್ಲೆಮ್ಮುಸಿರ್. ಕರೆದು ೩೧೦
ನೆರೆಯಿವ್ ಬೆದರ್ದು ಕೆದರ್ದೆಮ್ಮ ಪಡೆಯಾಳ್ಗಳಂ.
ಲಗ್ಗೆ ನುಗ್ಗುವ ನಮ್ಮ ಹುರಿಗೊಂಡ ಕಲಿತನಕೆ
ತನ್ನತುಳ ಸೈನ್ಯಶಕ್ತಿಯೊಳರ್ಧಮಂ ಮೀರ್ದಿಂದು
ಬಲಿಗೊಡುವುದೀ ಲಂಕೆ. ನೋಡುತಿರಿಮೆನ್ನಾಜ್ಞೆ
ವಿಧಿಗೆ ತನ್ನಿಚ್ಛೆಯಪ್ಪುದು; ದಿಟಂ!” ಭಾವದಿಂ
ಬೆಸಸಿದಾ ಸತ್ಯವಾಕ್ಯನ ವಚನಧೈರ್ಯಕೆನೆ
ನಡೆದರಾ ವಾನರಾನೀಕಿನೀ ಸೇನಾನಿಗಳ್
ರಚಿಸೆ ತಂತಮ್ಮ ಮುರಿದ ರಣಮುಖಗಳಂ : ಮತ್ತೆ
ಮೊಳಗಿದುವು ರಣಭೇರಿ! ಕುಮುಟೆದ್ದುದು ವನಾದ್ರಿ
ನಿದೆ! ಕವಿದ ಕಂಬಳಿತಿಮಿರದಿಂ ಬಿಡುಗಡೆಯೆ ೩೨೦
ಪಡೆಯೆ ಮೆಯ್ ಕೊಡಹಿತುದಯಾಚಲಂ! ಉಷೆಯ ಕಣ್
ಕೇಸೆವೆದೆರೆದುದಾಶೆಯಂದದಿ ಇಂದ್ರನಾಶೆಯಲಿ!