ಅದ್ವಿತೀಯಮೆನೆ ಮೂಡಿತಾ ದ್ವಿತೀಯಂ ದಿನಂ:
ಪ್ರಾಣಮಂ ಪೀರ್ವ ಘೋರಾಶೀವಿಷಾಸ್ತ್ರಮಂ
ಗೆಲ್ದು ಮೇಲೆಳ್ದ ವಾನರ ಸಿಂಹನಾದಂಗಳಂ
ಕೇಳುತಾಶ್ವರ್ಯದಿಂ ರೋಷದಿಂ ರಾವಣಂ
ಮಿಳ್ತುನೇಮವನಿತ್ತು ಕಳುಹಿದನು ತನ್ನಾಯ್ದ
ಕಟ್ಟಾಳ್ಗಳೊಡೆಯರ್ಕಳಂ, ಕದನಯಜ್ಞಕ್ಕೆ.
ಅದ್ವಿತೀಯಮೆನೆ ಮೂಡಿತಾ ದ್ವಿತೀಯಂ ದಿನಂ!
ಲಂಕೇಶ್ವರನ ಭೀಷಣಾಜ್ಞಾಕಿರೀಟಮಂ
ಪೊತ್ತ ಭಾರಕೆ ಮತ್ತ ಬಿಂಕಕೆ ಪಿಂಗಿ ಪೊಂಗಿ
ತನ್ನ ಪೆರ್ಪಡೆಯೊಡನೆ ಧೂಮ್ರಾಕ್ಷರಾಕ್ಷಸಂ ೧೦
ಬಂದು ಬಿದ್ದನು ಶತಬಲಿಯ ಮೇಲೆ, ಕಾಳ್ಕೋಣಗಳ್
ಪೇರಾನೆವಿಂಡಂ ಕೆಣಕುವಂತೆ. ಹೊತರೆಯ
ಬೆಟ್ಟನೆತ್ತಿಯ ಕಲ್ಲರೆಯ ಮೊರಡುಗೋಡಂತೆ
ಭೀಮತನು; ಕಾಡನಂಡಲೆವ ಬಿರುಗಾಳಿಯೋಲ್
ಭೀಮಕಲಿ; ತಟಮಂ ಕೊರೆದು, ತರುಗಳನುರಳ್ಳಿ,
ತಿಳಿಯಂ ಕದಡಿ ಕೊಚ್ಚಿ, ಪರಿವ ಮುಘಾರ್ವೋನಲ
ಪೊಳೆಯಂತೆವೋಲ್ ಭೀಮ ಕರ್ಮಿ; ಆ ದೈತ್ಯನಂ
ತಾಗಿ ಹೊದಕುಳಿಗೊಂಡು ಬೇಗುದಿದುದೈ ವ್ಯೋಮ
ಗಾಮಿಗಳ ಮೇಣ್ ಕಾಮರೂಪಿಗಳ ಶತಬಲಿಯ
ಭೀಮಸೇನಾಬ್ಧಿ. ಪಡೆ ಮಡಿದುದಂ , ೨೦
ಸೋಲ್ತುದಂ ಕಾಣುತಾ ಸೇನಾನಿ ಶತಬಲಿಯೆ
ಮಾರಾಂತನಸುರವೀರಂಗೆ. ಮರುಕೊಳಿಸಿ ಧೈರ್ಯಂ,
ಮುತ್ತಿದುದು ಮತ್ತೆ ಕಪಿಸೇನೆ ದಶದಿಶೆಗಳಿಂ
ಸ್ಧೂಮ್ರಾಕ್ಷನ ವರೂಥಮಂ. ಕಿತ್ತ ಮರಗಳಿಂ
ಬೀಸಿ ಬಡಿದರು ಮುರಿಯೆ ತೇರ್ಗಾಲಿ. ಗಿರಿಗಳಿಂ
ಬಂಡೆಗುಂಡರೆಗಳಂ ಪೊತ್ತಿತ್ತಿ, ಬಾನ್ಗೇರಿ,
ಗುರಿಬಿಡಲ್ ಸತ್ತುವು ರಧಾಶ್ವಗಳ್, ಬೆನ್ನ್ಮುರಿದು,
ನೆತ್ತಿಯ ಪಿಸುಳ್ದು . ತೇರುಡಿಯೆ ರಿಪುಬೃಹದ್‌ವಪು
ವರೂಥದಿಂ ದಿಮ್ಮನೆಯೆ ಧುಮ್ಮಿಕಿದುದು ನೆಲಕೆ,
ದಿಗ್ಗಜಕೆ ಬೆನ್ ಜಗ್ಗೆನಲ್ ! ಪೇಳ್ವುದೇನಾ ೩೦
ಮಹದ್‌ದೃಶ್ಯಮಂ? ನೋಡಿದುದು ನಿಬ್ಬೆರಗುವೋಗಿ
ರಾಕ್ಷಸ ಭಯಂಕರಾಕಾಮಂ ಕಪಿಧ್ವಜಿನಿ:
ಹೆಗ್ಗಂಟೆಗಳ ಹಂತಿ ತೂಗಿದೊಡ್ಯಾಣಮಂ
ಸುತ್ತಿರ್ದ ಸೊಂಟದಿಂ ಜೋಲ್ದುದು ಮಹಾಭೀಳ
ನಗ್ನಖಡ್ಗಂ. ಕಣೆಹಂದಿಗಳ ಗೊಂಚಲೆಂಬಂತೆ
ನೇಲ್ದುವೈ ಮುದ್ಗರಂಗಳ ಗೋಷ್ಠಿ. ತಿಮಿರದ
ತಿಮಿಂಗಿಲದ ಖರ್ಷರೋಪಮ ಚರ್ಮಮಂ ಕೊರೆದು
ಸಮೆದುದೆನೆ, ಮೆರದುದೆಡಗೈ ರೌದ್ರಮುಷ್ಠಿಯಲಿ
ಖಡುಗಮಿಗದೊಗಲಿನ ಕರಿಗುರಾಣಿ. ‘ಪರಿಘಮುಖಿ’
ಬಲ್ಗದೆಯದೊಂದು, ಬಲಗೈಯ ಭೈರವನೆನಲ್, ೪೦
ತೂಗಿ ತೊನೆದುದು ತನ್ನ ಫಣಿಯ ಪೊದೆಯಂತಿರ್ದ
ಪೆರ್ಮಂಡೆಯಂ. ನೋಡಿತಯ್ ನಿಬ್ಬೆರಗು ಬಡಿದು
ಧೂಮ್ರಾಕ್ಷನುಗ್ರವಿಗ್ರಹವನಾ ಸುಗ್ರೀವ
ಸೇನಾಸಮಗ್ರಂ!
ಬಳ್ಳಿಯ ಮಿಂಚು ಬಲ್‌ಮೆಯ್ಯ
ಮೋಡದೊಳ್ ಸಂಚರಿಸದಂ ಸುತ್ತುವರಿವವೊಲ್
ಚಲಿಸಿ ಶತಬಲಿ ತವಿಸಿದನು ರಾಕ್ಷಸಸ್ಥೂಲ
ಸಾಮರ್ಥ್ಯಮಂ. ರಕ್ಕಸನ ಗದೆಗೆ ರಕ್ಕಸನ
ತನುವೆ ಗುರಿಯಾಯ್ತು; ಖಡುಗಂ ತೊಯ್ದುದಾತನದೆ
ರುಧಿರದಿಂ; ರಕ್ಕಸನ ಮುದ್ಗರಂಗಳ ಹತಿಗೆ
ರಕ್ಕಸನ ಸೇನೆಯಾಹುತಿಯಾಯು. ಹರೆಗಡಿದ ೫೦
ಹೆಮ್ಮರಂ ಬುಡಗಡಿಯೆ ಬೀಳ್ವವೋಲುರುಳಲಾ
ಧೂಮ್ರಾಕ್ಷ ದೈತ್ಯಕಾಯಂ ಪೆಡಂಮೆಟ್ಟಿತಯ್
ಗಾಯಗೊಂಡಳಿದುಳಿದಸುರಸೇನೆ.
ಅತ್ತಲಾ
ದಕ್ಷಿಣದ್ವಾರದೊಳ್ ಮೇಲ್ವಾಯ್ದ ವಜ್ರದಂಷ್ಟ್ರನ
ಪಡೆಗೆ ನಡೆದತ್ತಿದಿರ್ ವಾಲಿಪುತ್ರನ ದಳಂ,
ಕಾಳ್ಗಿರ್ಚ್ಛೆಗಿದರ್ ನಡೆವ ಮತೊಂದು ಪೆರ್ಚುಗೆಯ
ಕಾಳ್ಗಿರ್ಚ್ಚೆನಲ್. ಕೂಡೆ ಪೊತ್ತಿದುದು ಧಗಧಗಿಸಿ
ಸಮರಾಧ್ವರಾಗ್ನಿ. ಬೇಳ್ದತ್ತಿರ್ಕಡೆಯ ಸೈನಿಕಂ.
ಕಾಣುತ್ತದಂ ಮುನ್ನುಗ್ಗಿದನು ವಜ್ರದಂಷ್ಟ್ರಂ
ತ್ರಿಶೂಲಾಂಕುಶದಿ ತನ್ನಡರ್ದ ಮತ್ತೇಭಮಂ ೬೦
ತಿವಿತಿವಿದರಿಯ ಮೇಲೆ. ಪಡುಮಲೆಯ ಮುಡಿಯೇರಿ
ಮುಂಗಾರ್ ಗುಡುಗಿ ಮುಂಬಾಯ್ವವೋಲ್ ಬಂದವನ
ಬಿರುಬಿಗಾರದೆಯೆ ತತ್ತರಿಸಿದತ್ತಂಗದನ
ಪಡೆಯಡವಿ. ಕಿಡಿಗರೆವ ತನ್ನ ಕರಚಕ್ರಮಂ
ಗಿರ್ರನೆ ತಿರುಗಿಸುತ್ತಾ ಕರ್ಬುರಂ ಕೆಯ್‌ಗೊಯ್ವ
ಪೇರೊಕ್ಕಲಿಗನಂತೆ ತರಿದೊಟ್ಟಿದನು ಬಣಬೆಯಂ
ಹಗೆಯ ತಲೆಮೆದೆಗಳಿಂ. ಹೆದರಿ ಹಿಂಜರಿದುದೈ
ಹರಿವಾಹಿನಿ! ಕಂಡದಂ ಕೋಧತಾಮ್ರಾಕ್ಷನಾ
ಕಪಿಯೂಧಪಂ ವಾಲಿಸೂನು ದೃಢಗಮನದಿಂ
ಮುಂಬರಿದನರಿಯ ಸರಿಸಕೆ ಕರಿಕರೋಪಮ ೭೦
ಹಸ್ತದೊಳ್ ಪಿಡಿದೆತುತೊಂದುಗ್ರಮಂ, ಬೃಹದ್
ಗಾತ್ರಮಂ, ರೌದ್ರರೋಚಿಯ ನಿಶಿತ ಪರಶುವಂ,
ಸುಘೋರಮಂ.
ಪಡುಮಲೆಯ ಕಾಡೊಳೊಂಟಿಗ ಪಂದಿ
ಮಲೆವುದೆಂಟುಟೊ ತನ್ನನಡಹಾಯ್ದ ಪೆರ್ಬ್ಬುಲಿಗೆ,
ಸೆಡೆತನಂತುಟೆ ವಜ್ರದಂಷ್ಟ್ರಂ ಪುರಂದರ
ಸುತನ ಸುತಗೆ ಹೂಂಕರಿಸಿದನ್, ದಾಡೆಗಡಿದನ್,
ಕೆಂಗಣ್ಗಳಿಂ ನೋಡಿದನ್ ತನ್ನನೆವೆಯಿಡದೆ
ನೋಳ್ಪಾತನಂ ; ನವಿರ್ ನಿಮಿರಿದನ್, ಸುಯ್ಸುಯ್ದು
ಕೋರೆಗಳಿನಿರಿವಂತೆ ದಂಷ್ಟ್ರಮಯ ಚಕ್ರದಿಂ
ಘರ್ಘರ ಧ್ವನಿ ಪೊಣ್ಮೆ ಬೀಸಿ ಪೊಯ್ದನ್, ಬರ್ಪ ೮೦
ಚಕ್ರಯುಧಕೆ ತನ್ನ ಕೈಯ ಖರ್ಪರವೊಡ್ಡಿ
ಬಲ್ಗೊಡಲಿಯಿಂದಿಟ್ಟನಂಗದನಿಭದ ಮೂರ್ಧ್ನಿ
ಬಿರಿದು ಮಿದುಳಂ ವಾಂತಿಗೈವಂತೆ . ತತ್ತರಿಸಿ,
ಕೋಡೊತ್ತಿ. ಮಗ್ಗುಲಿಕ್ಕಿತು ಮತ್ತವಾರಣಂ.
ನೆಗೆದು ಚಂಗನೆ ನೆಲಕೆ, ಕಂಗನೆ ಕನಲಿ, ಕಯ್ಗೆ
ಸಿಲ್ಕಿದ ಕೈದುವಂ, ಮುಸಲಮಂ, ತುಡುಕಿಪಿಡಿದು,
ಮೇಲ್ವಾಯ್ವ ರಾಕ್ಷಸನ ತಲೆಗೆ ಕಲಿ ವಾನರಂ
ಗುರಿವೀಸಲೊಡನೆ ತೊಪ್ಪನೆ ತೊಯ್ದು ಕೆಂಪಾಯ್ತು
ರಾಕ್ಷಸ ರುಧಿರಸಿಕ್ತಮಾ ಸಿತ ಪರಶು ಜಿಹ್ವೆ.
ಚಿಪ್ಪಿಡೆದುದಸುರ ಮಂಡೆಗೆ; ಭಯಂಕರಮಾಗೆ ೯೦
ಕಣ್ ಬಸಿದುದಂತಸ್ಥಮಂ ; ಬಿದ್ದನವನಿಗೆ
ನಿಶಾಚರಂ; ಕೂಡೆ ಬಿದ್ದುದು ಧೈರ್ಯಮಸುರರಿಗೆ;
ಹಗೆಯ ಹಳು ಬಯಲೇಳೆ ನುಗ್ಗಿ ಸವರಿದನಂಗದಂ;
ಪೌರುಷಾತಪಕೆ ಕುದಿಕುದಿದಾವಿಯಾದುದೆನೆ,
ಮುಗಿಲವೊಲ್ ಸಗ್ಗಕ್ಕೇರ್ದುದು ಶತ್ರು ಜೀವನಂ!
ಅತ್ತಲುತ್ತರದಲ್ಲಿ ಕೋಂಟೆಯ ದಿಡ್ದಿವಾಗಿಲಂ,
ಕರ್ಬ್ಬುನದ ಚಪ್ಪಡಿಗಳಿಂದೆ ಕೈಗೈದುದಂ.
ರಾಕ್ಷಸಕುಲದ ರಾಕ್ಷಸಬಲದ ಕಟ್ಟಾಳುಗಳ್
ತೆರೆದರಯ್, ನೂರ್ವರ್, ಪೊಣ್ಮಲ್ ಮಹಾಸ್ವನಂ
ಚಕಿತಗೊಳ್ವಂತೆವೋಲ್ ಕಪಿಚಮೂ. ಬೀಸಿದರ್ ೧೦೦
ಸೇತುವಂ ಕಂದಕಕೆ, ಯಂತ್ರಕರ್ಮಂಗಳಿಂ
ಪೆಣೆದ ದಿಮ್ಮಿಯ ಸಂಕ ಸಾಲ್ಗಳಿಂ. ನಡೆದುದೈ,
ಭೋರ್ಗರೆದುದೈ, ಪರಿದುದೈ ಪಡೆವೊನಲ್, ಲಂಕಾ
ಸರೋವರಂ ಕೋಡಿದೆಗೆದಂತೆ. ಲಂಕೇಶ್ವರನ
ಮೆಚ್ಚಿನ ಚಮೂಪತಿ ಅಕಂಪನಂ ತಾನಿಂತು
ಸಾಗಿದನು ತನ್ನ ನಚ್ಚಿನ ಪಟುಭಟರ
ವಾಹಿನಿಯೊಡನೆ ವೀರರದೇವ ವಾನರ ನಳನ
ಸೇನಾಸಮುದ್ರ ಸಮ್ಮುಖಕೆ. ಸೇನಾಪತಿಯ
ಕಯ್ಯ ಹೊಂಗೋಲ್ಗುಡಿಯ ಸನ್ನೆಯಾಣತಿಯಂತೆ
ತನ್ನ ದಳಸಹಿತಾ ದರೀಮುಖಂ ಮುನ್ನುಗ್ಗಿದನ್, ೧೧೦
ತಾಗಿದನ್, ತಳ್ಳಿದನ್, ತಡೆದನ್ ಅಕಂಪನನ
ಬಲ್‌ಸೇನೆಯಂ. ಮಸೆದುದು ಗಾಳಿ; ಮುಸುಗಿತು ಧೂಳಿ;
ಅಗುರ್ವಿಸಿತ್ತಯ್ ಕದನ ಕೋಲಾಹಲದ ಕೇಳಿ.
ಕೇಳ್ದುದಲ್ಲದೆ ಕಂಡುದಿಲ್ಲೊಂದುಮಾ ಸಮರ
ಮಂಡಲದ ಭೈರವ ರಣಕ್ರೀಡೆ.
ಪಿಂಗಿದುದು
ನೆತ್ತರ್ಮಳೆಗೆ ರಜಂ; ಕೆಸರೆದ್ದುದೈ ನೆಲಂ;
ಶವಮಯಂ ತಾನಾಯ್ತು ಶಿವಮಯ ವಸುಂಧರೆಯ
ಮೆಯ್. ಕಂಡರಾಶ್ಚರ್ಯಮಂ ಸಕಲಸೈನಿಕರ್
ದರೀಮುಖಾಕಂಪನರ ಕೈದುವಿಲ್ಲದ ಕೈಯ
ಮಹಮದ್‌ಯುದ್ಧಮಂ:
ರಾಕ್ಷಸ ಸದೃಶ ವಾನರಂ ೧೨೦
ಪೆಸರಿಂ ಮಾತ್ರಮಲ್ಲದೆಯೆ ದಿಟದಿಂ ದರೀಮುಖಂ!
ಮೇಣಂತೆವೊಲ್, ವಾನರ ಸದೃಶ ರಾಕ್ಷಸಂ
ಪೆಸರಿಂದೆ ಮಾತ್ರಮಲ್ಲಯ್, ದಿಟದಿಂದಕಂಪನಂ!
ಬಾಯ್ದೆರೆದ ಪಾತಾಳದಾಕಳಿಕೆಯೆಂಬವೋಲ್
ದರಿಭಯಂಕರಮಾಗಿ ನಿಂದನ್ ದರೀಮುಖಂ!
ಆಕಾಶದೆತ್ತರಕೆ ಶಿಖರಮೆತ್ತಿರ್ದವೋಲ್
ಗಿರಿಭಯಂಕರಮಾಗಿ ನಿಂದನ್ ಅಕಂಪನಂ!
ಆನೆ ಸೊಂಡಿಲ ತೂಗುವಂದದಿ ತೂಗಿದರ್
ತೋಳ್ಗಳಂ. ಸಿಂಹ ಸಿಂಹವ ಕೆಣಕುವಂದದಿ
ಕೆಣಕಿದರ್ ಕಣ್ಗಳಿಂ. ಪುಲಿ ಪುಲಿಗೆ ಮಲೆವಂತೆ, ೧೩೦
ಫಣಿ ಫಣಿಗೆ ಸುಯ್ವಂತೆ, ಸುಯ್‌ಸುಯ್ದು, ಮಲೆಮಲೆತು,
ಗೂಳಿಸೆಣಸಿದನಿರ್ವನೊರ್ವಂಗೆ. ತೆಕ್ಕನೆಯೆ
ಕಂಡರೆಲ್ಲರ್ ಗಿರಿ ಬಿದ್ದುದಂ ದರಿಗೆ ! ನೋಡಿದರ್,
ಓಡಿದರ್ ಮೈಂದದ್ವಿವಿದ ನಳರ್ ನೆರವೀಯೆ
ತಮ್ಮವಗೆ. ನಗುತಿರ್ದ್ದನಾ ಮಲ್ಲಗಾಳೆಗದ
ಕೋವಿದಂ, ಬಿದ್ದಂತೆ ನಟಿಸುತರಿಭಾಟನ ಕೀಲ್
ಮುರಿದು ಕೊಂದೆದ್ದಾ ದರೀಮುಖಂ!
ಅಕಂಪನಂ
ಪಡೆವೆರಸಿ ಮಡಿದುದಂ ಕೇಳ್ದು ದೈತ್ಯೇಂದ್ರಂ
ಪ್ರಹಸ್ತನಂ, ರಾಕ್ಷಸ ಸಮಸ್ತ ಸೇನಾಧ್ಯಕ್ಷನಂ,
ಬಳಿಯಟ್ಟಿ ಬರಿಸಿ ಬೆಸಸಿದನಿನಿತು ಖಿನ್ನಂ ೧೪೦
ತನ್ನಮರ್ಷಮಯ ವಿಮರ್ಶೆಯಂ :
“ನಾನೇಗಳುಂ
ಪಗೆಬಲ್ಮೆಯಂ ಕಿರಿದು ಭಾವಿಸಿದೆನಿಲ್ಲದೊಡಂ,
ಕೇಳ್ ಪರಮಸೇನಾನಿ, ವನಚರರ ಮೇಣ್ ನರರ
ಸಮರ ಸಾಮರ್ಥ್ಯಮಿನಿತಧಿಕಮಾದುವೆ ದಿಟಂ
ಸೋಜಿಗಂ! ಬಿದ್ದುದಯ್ ಮೊದಲ ದಿನದಾಜಿಯೊಳೆ
ನಮ್ಮ ಸೈನ್ಯದೊಳೇಳು ಗುಲ್ಮಂಗಳಿಗೆ ಮಿಗಿಲ್
ತುಳಿಲಾಲ್‌ಬಲಂ. ಶಕ್ರಸೇನೆಯಂ ತನ್ನತುಳ
ವಿಕ್ರಮದಿ ಬಿರುಗಾಳಿಯಿದಿರ ತರಗೆಲೆಗೆಯ್ದ
ಮೇಘನಾದನ ಮಾಯೆಯುಂ ಮೋಘಮಾದುದೆನೆ
ಏನನೆಂಬೆನು ನಮ್ಮ ದುರ್ವಿಧಿಗೆ? ಎರಡನೆಯ ೧೫೦
ದಿನದಿಂದಿನೀ ರಣದ ಕಥೆಯುಂ ವ್ಯಥೆಯನೇ
ತಂದೊಡ್ಡುತಿದೆ. ವಜ್ರದಂಷ್ಟ್ರ ಧೂಮ್ರಾಕ್ಷರ್,
ಮಹಾಕಲಿ ಅಕಂಪನಂ, ಯುದ್ಧವಿದ್ಯಾ ಪರಮ
ಪಾರಂಗತರ್. ಕಳೆದುಕೊಂಡುದವರಂ ನಮ್ಮ
ಪಕ್ಷಂ, ವಿಹಂಗಮಂ ಕಳೆದುಕೊಳ್ವಂತೆವೋಲ್
ಪಕ್ಷಂಗಳಂ, ಪಗಲ್‌ನೆತ್ತಿಯೊಳಿರ್ಪುದಿನ್ನುಮ್;
ರಣವಿಶಾರದ, ಬೈಗು ಪಡುವಣ ಮಲೆಯ ತಲೆಗೆ
ತೆಂಗದಿರನಂ ಮುಡಿಯ ಮಣಿ ಮಾಡುವನಿತರೊಳ್
ನೂಂಕವೇಳ್ಕುಂ, ಕೇಳ್, ಕಪಿಧ್ವಜಿನಿಯಂ ಈ
ತ್ರಿಕೂಟಾಚಲದ ಸಾನುವಿಂದಾ ಸುವೇಲಾದ್ರಿ ೧೬೦
ಕಂದರದ ನರಕನಿಮ್ನತೆಗೆ!”
ರಣಪಂಡಿತಂ
ರಾಜಾಜ್ಞೆಗೂ ಪ್ರಹಸ್ತಂ, ಸರ್ವರಾಕ್ಷಸ
ಪ್ರಮುಖಸೇನಾನಿ ನಸು ಕುಗ್ಗಿದನ್, ಬಾಗಿದನ್,
ಕೈಮುಗಿದು ಬಿನ್ನಯ್ಸಿದನ್ ರಾಜರಾಜೇಶ
ಮಕುಟಂಗಳಡಿಸೋಂಕುವಾತಂಗೆ :
“ರಾಜೇಂದ್ರ,
ಕಲಿಗೆ ಸಂಗ್ರಾಮಮಿರ್ಪುದು ಕಲಾನಿಪುಣಂಗೆ
ಸಂಗೀತದಂತೆವೋಲವರೋಹಣಂ ಪ್ರಿಯಂ,
ಮೇಣಂತೆ ಮಧುರಮಾರೋಹಣಂ! ಕೇಳೊಂದೆರಳ್
ಕದನಮಂ ಗೆಲ್ದ ಮಾತ್ರದಿ ಪೂರ್ಣಯುದ್ಧಮಂ
ಗೆಲ್ವರೇನ್? ಸೈನಿಕವರೇಣ್ಯರಂ, ಪಟುಭಟ ೧೭೦
ವರಿಷ್ಠರಂ, ಅತಿರಥ ಮಹಾರಥ ಶ್ರೇಷ್ಠರಂ
ವೆರಸಿ ನಾನೆಯೆ ರಣಾಧ್ವರದ ದೀಕ್ಷೆಯನಿಂದು
ಕೈಕೊಂಡಪೆನ್. ಸೂರ್ಯನಸ್ತಾಚಲಕೆ ನಡೆವ
ಮುನ್ನಮೆ ವನೇಚರ ಚಮೂ ಸಮಸ್ತಂಗಳಂ
ನಿನ್ನಾಜ್ಞೆಯಂತೆಳ್ಚುವೆನ್ ಸುವೇಲಾಚಲದ
ಕಂದಕಕೆ. ಕೇಳೆನ್ನ ಪೂಣ್ಕೆಯನ್ : ಯುದ್ಧಮಂ
ಗೆಲ್ದು ಬಹೆನಲ್ಲದಿರೆ ಬೆಳ್ವೆಯಾದಪೆನಿಂದು
ರಣ ಹುತವಹಂಗೆ!”
ವೀರೋಚಿತಂ ಕೃಪೆಯಿಂ
ಕಟಾಕ್ಷಿಸುತೆ, ಮನ್ನಣೆಯ ಮಾಡುತುಡುಗೊರೆಗಳಂ
ನೀಡಿ, ಕಳುಹಿಸಿದನು ರಾವಣನಸುರಸೇನಾನಿಯಂ ೧೮೦
ಮರಣನಟ ನಾಟಕ ರಣಕ್ರಿಯೆಗೆ, ಪ್ರಭುವಿಂದೆ
ಸನ್ಮಾನಮಂ ಪಡೆದ ಉತ್ತೇಜನಕೆ ಉರ್ಬ್ಬಿ,
ಪೊದೆಯ ಪುರ್ಬ್ಬಿನ ಪುರಿಯ ಮೀಸೆಯ ರಣಾವೇಶಿ
ಆ ಪ್ರಹಸ್ತಂ ಬೆಸನನಟ್ಟಿದನು ದಳದಳಕೆ,
ಮೊನೆಯ ಕೆನೆಗೆಣೆಯ ಕಡುಗಲಿಗಳಂ ಕೂಡಿ
ನುಗ್ಗಲಂದಿನ ಸಗ್ಗಸಂಗರಕೆ. ನೆರೆದುದಾಳ್;
ನೆರದುದಶ್ವಂ; ನೆರೆದುದುರಥಂ; ನೆರೆದುದಾನೆ;
ನೆರದುದು ತಿಗ್ಮ ನಾನಾಯುಧದ ಪಂಕ್ತಿ. ನೆರೆದುದೂರ್,
ನೋಟದೌತಣಕೆ, ಮೇಣ್, ಪಣ್ಣಿದುದು ಪೊಂದೇರ್,
ಮಹೋನ್ನತಂ, ಗಿರಿಚೂಡಭವ್ಯಂ, ವಸಂತವನ ೧೯೦
ಚೂತತರು ಚಾರು ಹರನ ಕೊರಳಿನ ಗರಳಮಂ
ಕರ್ದ್ದಿಂಗಳೊಂದು ಕರ್ಪಿಗೆ ಹೆಪ್ಪೆರದು ಕಡೆದು
ಪಡೆದವೆನೆ, ಪೊಳೆದುವಾ ತೇರ್ನೊಗಕೆ ಪೆಗಲಾಂತ
ಮಿಂಚುಗಪ್ಪಿನ ಮಹಾತೇಜಿಗಳ್. ಮಿಳಿರ್ದತ್ತು
ಮಧ್ಯಾಹ್ನ ಮಿಹಿರ ಛವಿಯಲಿ, ಮಹಿಯ ರವಿಯೆನೆ,
ಮಿಸುನಿ ಸೂತ್ರದಿ ನೆಯ್ದ ಧೋತ್ರದಹಿಕೇತನಂ
ಸ್ಯಂದನಾಗ್ರದಲಿ. ರಥಮಂ ಪ್ರದಕ್ಷಿಣಂಗೆಯ್ದ,
ಬಾನ್ಗೇರಿ ಪರಿಮಳದ ಧೂಮಗಳ್, ಭೋರ್ಗರೆಯೆ
ರಣಭೇರಿ ದುಂದುಭಿ ನಿನಾದಗಳ್, ಗೆಲ್ಲುಲಿಯೆ
ಜನತುಮುಲ ಜಯಘೋಷಗಳ್ ದೈತ್ಯಸೇನಾನಿ ೨೦೦
ತೇರೇರಿದನು ಮಿಳ್ತುಕೂರೊಸಗೆ ದಿಬ್ಬಣದ
ರಣಕೆ. ರಾಹುರೋಷಂ ಶೊಣಿತಾಕ್ಷಾದಿಗಳ್;
ನರಾಂತಕ, ಸಮುನ್ನತ, ಮಹಾನಾದನಾ ಕುಂಭಹನು,
ಸುಪ್ತಘ್ನ, ಮಕರಾಕ್ಷ, ದುರ್ಮುಖ, ಮಹೋದರರ್;
ಸಾಲ್‌ನಡೆದರಿತರ ದಳನಾಯಕರವನ ಹಿಂದೆ,
ಯಮಭೀಕರಂ.
ದೆಸೆದೆಸೆಗೆ ದಳದೊಡೆಯರಂ ನಿಲ್ಲಿಸಿ,
ಕಲಿಸಿ, ಸಮರವ್ಯೂಹಮಂ ಬಲಿಸಿ, ತಾಂ ಸ್ವಯಂ
ವಾನರರಖಿಲ ಮಹಾ ಸೇನಾನಿ, ಅಗ್ನಿಜಂ,
ನೀಲನಿರ್ದಾ ದುರ್ಗಮದ ವಜ್ರಧರ ದಿಶೆಗೆ
ದುರ್ಗಪೂರ್ವದ್ವಾರದಿಂ ಪಾಯ್ದನಾ ಪ್ರಹಸ್ತಂ, ೨೧೦
ದಾನವ ಧನುರ್ಧರರ ದಿಗಿಭಧೀರಂ! ಏರ್ದು
ಕೋಂಟೆಯೆಳ್ತರದೊಂದು ಕೊತ್ತಳಕೆ, ನೆತ್ತಿಯಿಂ
ನೋಡುತಿರ್ದನು ಕಲಿ ಕುತೂಹಲಿ ದಶಾನನಂ
ಬಿತ್ತರದ ಲಂಕೆಯಂ ಬಳಸಿ ಭೋರಿಡುತಿರ್ದ್ದ
ವಾನರರ ರಾಕ್ಷಸರ ಸೇನೆಗಳ ಸಾಗರದ
ಸಂಘಟ್ಟಣೆಯ ಸಂಚಲನ ವಲನ ವೈಖರಿಯ
ವಿನ್ಯಾಸಮಂ. ಶುಕಂ ಸಾರಣಂವೆರಸಿ ಬಳಿಯೋಳ್
ನಿಂದು ಬಣ್ಣಿಸುತಿರಲ್ ಪರಿಚಯದ ರಿಪುದಳದ
ವೀರರ್ಕಳಂ, ಕಿವಿಗೆ ಬಂದುದು ಭಯಂಕರದ
ಕೋಲಾಹಲಂ; ಕಂಡುದೊಡನೆಯೆ, ತರಂಗಗಳ್ ೨೨೦
ಮಸೆದ ಕಡಲಿಗೆ ಮಗುಚುವೋಲ್, ಚಮೂಚಲನಗಳ್,
ತೆರೆಗೆ ತೆರೆ ಮಲೆತವ್ವಳಿಪ ಭೀಮಶೈಲಿಯ
ಬೃಹಚ್ಛಂದದಿಂ. ಸ್ಪರ್ಧಿಸಿದುವೊಡನೆ ಧೂಳ್ಮುಗಿಲ್
ಮೇಲ್ ನೆಗೆವ ನಾದಸಿಂಹಂಗಳಂ. ಮಹೋಗ್ರಮಾ
ತೊಡಗಿದುದು ಸಂಗ್ರಾಮ ಮಂದರ ಮಥನಕಾರ್ಯಂ!
ಕೆಲವೊಳ್ತನಂತರಂ ಕುದಿಬಗೆಯ ರಾವಣಣ
ಬೆಸಸಿದನು ಕರೆದು ಬಳಿಯಿರ್ದ ವೇಗಾಯ್ನನಂ;
“ಓಡು, ಸಾರಣ, ನೋಡಿ ಬಂದೊರೆ ರಣಸ್ಥಿತಿಯ
ನಾಡಿಯಂ. ಮುಸುಗಿತು ರಜೋಮೇಘಮಿರ್ಬ್ಬನಿಯ
ಮಂಜಿನೋಲ್. ಕೋಲಾಹಲಂ ಕೇಳ್ವುದಾಹವಂ ೨೩೦
ಕಾಣದಿನಿತುಂ.” ಮೂಡಿದುವು ರೆಂಕೆ ಸಾರಣನ
ಭುಜಕೆ; ಕೊಡೆಗೆದರಿ ಹಾರುತ್ತಿಳಿದನಾ ಕದನ
ಮೇದಿನಿಗೆ. ತುಸುವೊಳ್ತನಂತರಂ, ಸಾರಣಂ
ಬಾರದಿಹ ಕಾರಣವನರಿಯಲ್ಕೆ ಕಾತರಿಸಿ
ದಶಶಿರಂ “ನಡೆ ನೀನ್, ಶುಕ, ತಳುವಿದನ್ ಸಾರಣಂ.
ತವಕದಿಂ ತಾ ಸಮರವಾರ್ತೆಯಂ.” ಶುಕನತ್ತ
ಮರೆಯಾಗಲಿತ್ತಲಸುರೇಶ್ವರಂ ಕೊತ್ತಳದ
ನೆತ್ತಿಯಂ ಶತಪಥಂ ತುಳಿಯುತ್ತಲೀಕ್ಷಿಸಿರೆ
ಗಾಳಿವಟ್ಟೆಯ ತುಂಬಿ ಬಾನ್ ಮುಟ್ಟಲೇರಿರ್ದ
ರಣರಜೋವಿಸ್ತೀರ್ಣಮಂ ಮೇಣ್ ಕ್ಷಣಕ್ಷಣಕೆ ೨೪೦
ಬಿತ್ತರಂಗೊಂಡು ವಾರ್ಧಿಯ ಮೇಲೆ ಗಡಿಯಾಗೆ
ವರ್ಧಿಸುತ್ತಿರ್ದದರ ಮೇರೆಯಂ, ದೂತನೊರ್ವನ್
ಬಂದು, ಕಯ್ಮುಗಿದು, ರಾಣಿಯ ಕರೆಯನರುಹಿದನ್
ಶೃಂಗಾರ ವಿನಯಶಾಲಿಗೆ, ಮಯತನೂಜೆಯ
ಮನೋವಲ್ಲಭಂಗೆ. ಕರೆಗಿನಿತು ಮೊಗಗುಂದಿದನ್;
ನೋಡಿದನು ರಣಮಹಿಯ ಕಡೆಗೆ. ಕೊತ್ತಳವಿಳಿದು
ಕಿಂಕರ್ ಬಳಸಿಬರೆ ನಡೆದನರಮನೆಗಾಗಿ,
ಹಸಿದುಮಿರ್ಕಗೆ ನಡೆವ ಹಸಿಗಾಯದೆಕ್ಕಲನವೋಲ್.
ಹೊಮ್ಮಣೆಯ ಮೇಲೆ ಹೊಂದಳಿಗೆಯಲಿ ಕಮ್ಮನೆಯ
ರಾಜಭೋಜನವಿರಲದಂ ಯಂತ್ರಕರ್ಮವೆನೆ ೨೫೦
ಕೆಮ್ಮನೆಯೆ ಕಬಳಿಸುತ್ತಿರ್ದ ಚಿಂತಾ ಮಗ್ನನಂ
ಸೋದ್ವಿಗ್ನನಂ ಕಂಡು, ಪತಿಸೇವೆಗನುವಾಗಿ
ಚವರಿ ಬಿಜ್ಜಣವಿಡಿದು ಬಾಗಿರ್ದ ಮಯಕುವರಿ,
ಹೆದರುತಂಜುತೆ ಮೆಲ್ಲನೆಯೆ ಮಾತು ತೆಗೆದಳಾ
ದಿನದ ರಣವಾರ್ತೆಯಂ ಕೇಳ್ವ ನೆವದಿ. ಹೇಳ್ದನತಿ
ಸಂಗ್ರಹದಿ ತಿಳಿದನಿತುಮಂ. ಹೇಳುತಿರೆ ಹಣೆಗೆ
ಬೆವರು ಹನಿಮೂಡಿದುದ ನೋಡಿ ಮಂಡೋದರಿಗೆ
ಸುಯ್‌ವೆರಸಿ ಚಿಮ್ಮಿದುದು ಕಣ್ಣೀರ್. ದುಕೂಲದಿಂ
ವಿಧಿಯ ಲಿಖಿತವನೊರಸಲಾಶಿಸುವಳೆಂಬಂತೆ
ತೂಲ ಮೃದುವೆನಲುಜ್ಜಿದಳ್ ಪತಿ ಲಲಾಟಮಂ, ೨೬೦
ತೊಡೆವವೋಲ್ ಪ್ರತಿಕೂಲಮಂ.
“ನನ್ನ ಹಣೆಯಿರಲಿ;
ನಿನ್ನ ಕಣ್ಣೊರಸಿಕೊಳ್, ಲಂಕೇಶ್ವರಿ, ರಣಭೀತಿ
ನಿನಗೇಕೆ? ಇಂದರಾತಿಯನೆಮ್ಮ ದುರ್ಗದಿಂ
ವೇಲಾದ್ರಿಕಂದರಕೆ ನೂಂಕಿ ಬರದಿರದೆಮ್ಮ
ಸೈನ್ಯಂ. ಪ್ರಹಸ್ತಂ ಸಮರ್ಘ ರಣಪಂಡಿತಂ.
ಸಮಸ್ತ ಶಸ್ತ್ರಾಸ್ತ್ರ ಸಂಗ್ರಾಮ ವಿಭುವಾತನಂ
ಕಳಕೆ ಕಳುಹಿದ ಬಳಿಕ, ರಮಣಿ, ನಗೆಗೇಡಲಾ
ರಿಪುಭಯಂ?”
“ಆ ಅಳ್ಕು ನನಗಿದುದೆ. ನಿನ್ನ ಕಯ್
ಹಿಡಿದೆನಗೆ?”
“ಮತ್ತೇಕೆ ಸುಯ್ವೆ?”
“ಇಂದುದಯದೊಳ್
ನೀಂ ರಾಮನರ್ಧಾಂಗಿಯಂ ಕಂಡುದುಂಟೈಸೆ?” ೨೭೦
“ಕಂಡುದುಂಟಾ ನಿರಶನ ಕೃಶಾಂಗಿಯಂ.”
“ಪಿಂತೆ
ಅಂತೇಗಳುಂ ನೀಂ ಪೋದುದಿಲ್ಲೇಕಾಂತಮಂ
ಬೆಸಸಿ.”
“ಅನಲೆಯಿರ್ದಳ್! ಸನಿಹಮಿರ್ದಳ್ ತ್ರಿಜಟೆ?
ಏಕಾಂತಮೇನಲ್ಲಿ? ಪೇಳ್ದೆನಾಕೆಗೆ ಪೋದ
ರಾತ್ರಿಯ ರಣದ ವಿಜಯವಾರ್ತೆಯಂ : ಕಪಿಸೇನೆ
ರಾಮಲಕ್ಷ್ಮಣಸಹಿತ ಮಗನ ಮಾಯೆಗೆ ಸಿಲ್ಕಿ
ಭೂಮಿಗತವಾದುದುಂ. ಮರುಳುನಗೆ ನಕ್ಕಳಾ
ಹೊಟ್ಟೆಗಿಲ್ಲದೆ ಮಿದುಳ್‌ಕದಡಿದಾ ಸಂಭ್ರಾಂತೆ!”
“ಪೇಳ್ದಳೆನಗನಲೆ ಬೇರೊಂದು ಕಥೆಯಂ.” ಎಂದಾ
ಮಹೀಯಸಿಯ ಮುಖಭಾವಮಂ ನಿಡಿದು ನಿಟ್ಟಿಸುತೆ ೨೮೦
ತೆರದನೊಯ್ಯನೆ ತನ್ನ ಹೃದಯಮಂ. ಕಲಂಕಿರ್ದ
ಕಾಸಾರಮಾದುದಸುರನ ಮುಖಂ;
“ಕಳೆದಿರುಳ್
ಕನಸಾದುದೊಂದೆನಗೆ, ರಾಣಿ, ಕಂಡೆನದರೊಳ್
ಮರಳಿ ಆ ಭೀಕರದ ದೃಶ್ಯಮಂ, ನಿರ್ಭಾಗ್ಯೆ
ವೇದಮತಿ ಚಿತೆಯೇರ್ದುದಂ. ಕಣ್ಣ ಮುಂದುರಿದು
ಭಸ್ಮದವಳಿಮರಾಶಿಯಾದುದಾ ಸುಂದರಿಯ
ತನುರೂಪರಾಶಿ. ನೋಡುತ್ತಿರಲ್ಕಾನದಂ
ತೀಡಿದತ್ತೊಂದು ಮೆಲ್ಲೆಲರೂದಿ ಬೂದಿಯಂ.
ತವಿದ ಮೃತಭಸ್ಮರಾಶಿಯಿನೊಯ್ಯನೊಯ್ಯನೆಯೆ
ಕವಿಕರ್ಮ ರಮಣೀಯಮಮೃತಮೂರ್ತಿಯದೊಂದು ೨೯೦
ಭವಿಸಿದುದು. ಗುರುತಿಸಿದೆನಾ ಮೂರ್ತಿಯಲಿ ಈ
ಮಹಾ ತಪಸ್ವಿನಿ ಸೀತೆಯಂ. ಕಾರಣವನರಿಯೆ;
ನಡುಗಿ ಕಣ್ದೆರೆದೆದ್ದು, ಬೆಮರ್ದ ಮೆಯ್ಯಂ ಕಂಡು,
ನನ್ನೊಳಗೆ ನಾಂ ನಕ್ಕೆನಾ ಸ್ವಪ್ನಚೇಷ್ಟಿತಕೆ!
ಹುಸಿಯ ಕನಸಿನ ಶಂಕೆಯಂ ನಿವಾರಿಸಲೆಂದು
ಹೋಗಿ ಕಂಡೆನು ಜನಕಜಾತೆಯಂ. ಕಂಡಾ
ಕೃಶಾಂಗಿಯಂ ಶಂಕೆ ತೊಲಗಿದುದೆನಗೆ. ಇವಳೆಲ್ಲಿ?
ಅವಳೆಲ್ಲಿ? ಮತಿ ನಿದ್ದೆಗೆಯ್ದಂದು ಮಿದು ಮಿದುಳ್
ಕಡೆದೆಬ್ಬಿಸುವುದೀ ವಿಕಾರಂಗಳಂ!”
“ಪ್ರಭೂ,
ಮನದಾಳದಿಂದಾತ್ಮಧರ್ಮಮಿತ್ತೆಳ್ಚರಿಕೆ ತಾಂ ೩೦೦
ಕನಸಿನಂದದಿ ಬಂದುದಲ್ತೆ? ನಿನ್ನಾತ್ಮಮಂ,
ನಿದ್ರೆಯ ಕೃಪೆಯೊಳಹಂಕಾರದಿಂ ಬಿಡುತೆಯಂ
ಪಡೆದ ನಿನ್ನಂತರಾತ್ಮನ ಶುದ್ಧಸಂದೇಶಮಂ.
ದಿಕ್ಕರಿಸದಿರ್ ಕಪಿಸೈನ್ಯಕಲ್ತೆಮ್ಮ ಸೈನ್ಯಂ
ಕ್ಷಯಿಸುತಿರ್ಪುದು ಪತಿವ್ರತೆಯ ದೈನ್ಯಕೆ ಕಣಾ!”
ಎನುತೆ ರಾವಣನ ಕಣ್ ತನ್ನ ಕಣ್ಣಿಗೆ ನಡಲ್
ಮುಂಬರಿದಳಿಂತಾ ಮಹಾರಾಜ್ಞಿ : “ನನಗನಲೆ
ಪೇಳ್ದುದಂ ಪೇಳ್ದಪೆನ್, ನೀಂ ಕಂಡ ಕನಸಿಗಿಂ
ಮಿಗಿಲಪ್ಪುದಂ. ತ್ರಿಜಟೆ ತನ್ನ ಕೈಂಕರ್ಯಮಂ
ಮುಗಿಸಿ ಮಲಗಿದಳಂತೆ. ದೇವಿ ಕಣ್ಮುಚ್ಚದೆಯೆ ೩೧೦
ಭೀಷ್ಮಮೌನವನಾಂತು ತನ್ನೊಳಗೆ ತಾಂ ಪೊಕ್ಕ
ಯೋಗಿನಿಯವೋಲಿರಲ್ ಕಂಡುದನಲೆಯ ಕಣ್ಗೆ
ಪರ್ಣಶಾಲೆಯ ತುಂಬಿದೊಂದನುಪಮಜ್ಯೋತಿ.
ರೋಮಾಂಚ ಕಂಚುಕಿತ ಗಾತ್ರೆ ನೋಡುತ್ತಿರಲ್,
ಬಾಹ್ಯಸಂಜ್ಞಾಶೂನ್ಯೆ ಆ ಸೀತೆ ತೊಡಗಿದಳಾರೊ
ನುಡಿಸಿದವೊಲಾಗಿ ಸಂವಾದಮಂ. ಆ ಪೂಜ್ಯೆ
ಅಲ್ಲಿರ್ದಮೆಲ್ಲೆಲ್ಲಿಯುಂ ಚರಿಸುತಿರ್ದಂತೆ.
ಅಲ್ಲಿರ್ದುಮೆಲ್ಲಮಂ ಕಾಣುತಿರ್ದಂತೆ, ಮೇಣ್
ಅಲ್ಲಿ ತಾಟಸ್ಥ್ಯಮಂ ತಾಳ್ದಳೋಲಿರ್ದೊಡಂ
ದೂರಮಿರ್ದ್ದಿತರರ ಜಗತ್‌ಕ್ರಿಯಾಚಕ್ರಮಂ ೩೨೦
ನಡೆಪವೋಲಾಚರಿಸುತಿರ್ದಳಂ ಕಂಡನಲೆ
ಮೆಯ್ಮರೆತಳಂತೆ ಭಯರಸವಶೆ! ಅನಂತರಂ
ಹದಿಬದೆಯ ಕಯ್ಯ ಸೋಂಕಿಗೆ ಅನಲೆ ಕಣ್ದೆರೆಯೆ,
ರಾಮಸತಿ ‘ಅಭೀತೆಯಾಗೆಲೆ ವತ್ಸೆ, ನೀಂ ಕಂಡ
ದೈವಿಕಕೆ. ನಿನ್ನಯ್ಯನುಪಕೃತಿಗೆ ಬರ್ದುಕಿತೌ
ನನ್ನಯ್ದೆದಾಳಿ. ಕಂಟಕಮೊಂದು ಕಳೆದುದೌ
ಪ್ರಭು ರಾಮಚಂದ್ರಂಗೆ!’ ಎನುತೆ ಸಂತೈಕೆಯಂ
ಪೇಳ್ದ ಪಾವನೆಯ ಪದತಲಕೆ ನಮಿಸಿದಳಂತೆ
ನಮ್ಮನಲೆ!”
ಸತಿಯ ಮಾತಿಗೆ ಸುಯ್ದು ಧಶಶಿರಂ :
“ಅನಲೆ! ನಮಗನಲೆಯೆ ದಿಟಂ! ರಾಮ ಪಕ್ಷಕಾ ೩೩೦
ತಂದೆ; ಸೀತೆಯ ಪಕ್ಷಕೀ ಮಗಳ್! ಇರ್ವರುಂ
ದ್ರೋಹಿಗಳ್! ಅಕ್ಕರೆಯೆ ನನಗಿಕ್ಕಿದುರಿಯಾಯ್ತು!
ಬೇಡವೆಂದೆನ್. ಬಿಡದೆ ಬೇಡಿದಳ್; ಕಾಡಿದಳ್.
ನೋಡೊಬರಿವಾಸೆಗಾಣತಿಯಿತ್ತೆನೊಪ್ಪಿದೆನ್;
ಮಾಡಿದಳ್ ಮನೆಯನ್ ಅಶೋಕವನದೊಳ್! ಕಟ್ಟು
ಕತೆಗಳನ್ ಕಟ್ಟಿ, ಕಣ್ಣಾರೆ ಕಂಡುದೆನುತ್ತೆ,
ಮತಿಗೆಟ್ಟು ನಂಬುವಳ್; ನಂಬಿಸುವಳಿತರರಂ;
ಪೆಣ್ಗಳೊಳ್ ಪ್ರಕಟಿಸುವಳಪಧೈರ್ಯಮಂ! ಆ ಅಣುಗಿ
ಬೆಪ್ಪಾಡಿದುದನೆಲ್ಲಮಂ ನೀನುಮೊಪ್ಪಿದೆಯಲಾ,
ಅದೆ ಸೋಜಿಗಂ! ನಿನ್ನೆ ಬದುಕಿದನಲಾ ಶತ್ರು; ೩೪೦
ಇಂದಿನ ರಣದಿ ಕಾಣ್ಬೆ ನಿನ್ನ ತಲೆಗೆಟ್ಟನಲೆಯಾ
ಕಟ್ಟಿರ್ಪ ಕತೆಯ ಪೊಳ್ಳಂ;”
ಬಂದನನಿತರೊಳ್
ಸಾರಣಂ. ರಣವಾರ್ತೆಯಂ ತಂದ ಚಾರನಂ
ತರವೇಳ್ದನುಣುಮನೆಗೆ: “ಬೇಗನೊರೆ ವಾರ್ತೆಯುಂ,
ವೇಗವಾಯ್ಲ.” ಎಂದ ದೈತ್ಯೇಂದ್ರಂಗೆ ಧೂಳಿಡಿದು
ಬೆಮರೆಳ್ದ ಬೇಹಿನಾಳ್, ವದನಮುತ್ಸಾಹಮಂ
ಸೂಸುತಿರೆ, ಕಯ್ಮುಗಿದು ಕಥನಗೈದನು ಕದನ
ವೃತ್ತಾಂತಮಂ: “ಜೀಯ, ತೊತ್ತುವೋದಳು ನಮಗೆ
ಜಯವನಿತೆ! ಹಿಂದುಹಿಂದಕೆ ಸರಿದು ಓಡುತಿದೆ
ಸರ್ವತ್ರಮಾ ರಿಪುವ್ಯೂಹಂ, ಸರೋವರಂ ೩೫೦
ಬೇಸಗೆಯ ಜಳಜಮಿತ್ರನ ಝಳಕೆ ದಡಮಂ
ವಿಸರ್ಜಿಸುವವೋಲ್. ಪೇಳ್ವೆನೇಂ ಪ್ರಹಸ್ತಾಸುರನ
ಶೌರ್ಯರವಿಯಾಟೋಪಮಂ! ಧನುರ್ಧರನಾಗಿ,
ಠಂಕಾರ ನಿರ್ಘೋಷದಿಂ ಭಯಂಕರನಾಗಿ,
ಬಾಣಾಗ್ನಿಯಿಂ ರಿಪುಪ್ರಾಣಕಾನನಕೆ ತಾಂ
ದಾವಾಗ್ನಿಯಾಗಿ ಪೊಕ್ಕನ್ ವಾನರರ ಮಹಾ
ಸೇನಾಧಿಪತಿ ನೀಲನಿರ್ದೆಡೆಗೆ. ಕೊಂದುದು
ನರಾಂತಕನನಾ ದ್ವಿವಿದವಾನರನಿಟ್ಟದೊಂದು ಪೆರ್
ಬಂಡೆಗಲ್. ತಾಗಿದನು ಕುಂಭಹನು ದ್ವಿವಿದನಂ;
ಕೆಡೆದನ್ ವನೇಚರಂ ರಾಕ್ಷಸ ಮುಸಲ ಹತಿಗೆ. ೩೬೦
ಮೈಂದಂ ಸಮುನ್ನತ ಮಹಾನಾದರಿರ್ವರಂ
ತನ್ನುಪಚಮೂಪತಿಗಳಂ ಕಡಿದು ತನ್ನುರುವ
ಕಡಿತಲೆಗ ಬಲಿಗೊಟ್ಟುದಂ ಕಂಡು ನಮ್ಮ ಕಲಿ,
ನಿಮ್ಮಾನೆ, ತೇರ್ವಾಯ್ದನೈ ಪ್ರಹಸ್ತಂ, ಕೊಂದು
ಸಾಸಿರವನಾ ಮೈಂದಸಮ್ಮುಖಕೆ. ವೀರನಾ
ಕಪಿವರನವನ ತೇರ ತೇಜಿಗಳನುರುಳಿಸಲ್,
ತಥದಿಂ ಧುಮುಕುತೊಂದು ರಣವಾರಣವನೇರಿ
ಕೂಗಿದನು ಶಾರ್ದೂಲ ಗುಲ್ಮಾಧಿಪಗೆ ತನ್ನ
ಸಂಕೇತಮಂ, ಕೂಡೆ ಮಾಯಾಪ್ರವೀಣರಾ
ಶಾರ್ದೂಲನಾಳುಗಳ್ ಶೈಲಖಂಡೋಪಮದ ೩೭೦
ಸಿಡಿಲೊಡಲ ಸಿಡಿಗುಂಡುಗಳ ರೂಪಮಂ ಧರಿಸಿ
ಗಿರಿಗಳೋಲುರುಳತೊಡಗಿದರರಿಯನರೆಯಟ್ಟಿ, ಮೇಣ್
ಮಲೆತವರನರೆದು! ಚೀತ್ಕಾರಮೆದ್ದುದು ಹಗೆಯ
ಥಟ್ಟನಲಿ, ಪಡೆವಳರ ಕರೆಗಿನಿತು ಕಿವಿಗೊಡದೆ
ಹಿಂಜರಿಯತೊಡಗಿದಾ ಕಪಿಸೇನೆಯಂ ನೀಲನುಂ
ತಡೆಯಲಾದರೆ, ಸರಿಯಲಾಣಾತಿಯನಿತ್ತನಯ್
ಆಯಕಟ್ಟಿನ ಬೇರೆ ತಾಣದೊಳ್ ವ್ಯೂಹಮಂ
ಬಲಿದು ಮಾರಾಂತು ನಿಲ್ವಾಸೆಯಿಂ!”
ಹಸನ್ಮುಖಿ
ದಶಾನನಂ, ಸನ್ನೆಯಿಂ ಸಾರಣನ ಸುಮ್ಮನಿಸಿ,
ನೋಡಿದನು ಮಂಡೋದರಿಯ ಮೂಖವನಿಂಗಿತ ೩೮೦
ಕಟಾಕ್ಷದಿಂ: “ಕೇಳ್ದೆಯೇನ್, ದೇವಿ, ಸಾರಣನೆಂದ
ರಣವರದಿಯಂ? ನಿಶ್ಯಂಕಿಯಾಗಿನ್ನಾದೊಡಂ? —
ನಡೆ ನೀನ್, ಚರಾಗ್ರಗಣಿ. ಕಾಯುತಿರೆ ನನಗಾಗಿ
ಕೊತ್ತಳದ ನೆತ್ತಿಯೊಳ್.” ಅವಸರದೊಳೂಟಮಂ
ಪೂರೈಸಿದನ್. ತಂದ ವೀಳಯವನೊಲ್ಲದೆಯೆ
ಸತಿಗೆಂದನೌಪಚಾರಿಕಮೆನಲ್: “ಸೀತೆಯಂ
ಸಾಯದವೊಲೆಂತಾದಡಂ ಪೊರೆಯವೇಳ್ಕುಮಾ
ಅನಲೆಗೆನ್ನಾಜ್ಞೆಯಂ ಪೇಳ್, ದೇವಿ. ಇನ್ನೆನಗೆ
ರಣದ ಮೋಹವೆ ಮೋಹಮಾ ಜಾನಕಿಯ ಮೇಲೆ
ಮುನ್ನಿರ್ದ ಮೋಹಮೆಲ್ಲಂ ತಿರುಗಿಹುದು ರಣದ ೩೯೦
ಮಧುರತರ ಸಾಹಸಕೆ!”
ಹೋಹಾತನಂ, ತನ್ನ
ಜೀವ ಜೀವಾತುವಂ, ಪುರುಹೂತ ಜೇತನಂ,
ಪ್ರಾಣೇಶನಂ ನೋಡುತಾ ಮೇಘನಾದನ ಮಾತೆ
ಮದನಹರನಂ ಮತಮಾತನರ್ಧಾಂಗಿಯಂ
ಪ್ರಾರ್ಥಿಸಿದಳಿನಿಯನಾತ್ಮೋದ್ಧಾರಭಿಕ್ಷೆಯಂ
ಬೇಡಿ.
ಕೊತ್ತಳವೇರಿ ಕಣಕೆ ಕಣ್ ಕೀಲಿಸಿರೆ
ಲಂಕೇಶ್ವರಂ, ದಿನೇಶ್ವರನುಮಾ ಪಡುಮಲೆಯ
ತಲೆಯ ಕೋಡಂ ಮೆಟ್ಟಿ ನಿಂದಿರಲ್, ತಂದನು ಶುಕಂ
ಅದ್ಭುತ ವಿಜಯವಾರ್ತೆಯಂ, ಸುಗ್ರೀವಸೈನ್ಯಂ
ತ್ರಿಕೂಟಮಂ ತ್ಯಜಿಸಿ ವೇಲಾದ್ರಿಕಂದರಕೆ  ೪೦೦
ಪೆಡಂಮೆಟ್ಟಿ ನಿಂದಿರ್ದುದಂ. ಬಂದನಿನ್ನೊರ್ವನಾಳ್
ಶುಕನ ಬೆಂಬಳಿಯೆ; ಪೇಳ್ದನ್ ಪ್ರಹಸ್ತನಳಿವಂ,
ನೀಲ ಹಸ್ತ ಗದಾಭಿಘಾತ ಸಂಜಾತಮಂ.
ಪ್ರಥಮ ಸೇನಾಪತಿಯ ಮೃತ್ಯುವಾರ್ತೆಗೆ ಮನಂ
ತತ್ತರಿಸಿ ದ್ಯೆತ್ಯೇಂದ್ರನುತ್ತರಿಪ ಮುನ್ನಮೆಯೆ
ತಂದನಿನ್ನೊರ್ವಂ ದುರಂತ ವೃತ್ತಾಂತಮಂ,
ಕೋದಂಡಪಾಣಿ ರಘರಾಮ ದೋರ್ದಂಡದಿಂ
ಪೊಯ್ವೊಡೆದ ರಕ್ಕಸರ ಪಡೆ ಕೆಟ್ಟು, ಕಂಗೆಟ್ಟು,
ರಣಧರಣಿಯೊಳ್ ಬಿಟ್ಟುಕಳೆದು ಲೆಕ್ಕಂಗೆಟ್ಟ
ಶವಂಗಳಂ, ಸೇನಾನಿಗಳ ಕಳೇವರಂಗಳಂ ೪೧೦
ತುಳಿತುಳಿದಿರದೆ ಲಂಕೆಯ ಕಡೆಗೆ ಪೆಡಂಮೆಟ್ಟಿ
ದೌಡೋಡಿ ಬರುತಿರ್ಪುದಂ!
ನೇಸರನ್ನೆಗಂ
ಪಡುಮಂಚಕಿಳಿದೊರಗಿದನ್. ದಶಶಿರನ ಮತಿಗೆ
ಮಂಕು ಕವಿದಂತೆ ಕವಿದುದು ರಾತ್ರಿವರ್ಣಂ
ಧರಿತ್ರಿಯಂ. “ಕರೆ ಮಹಾಪಾರ್ಶ್ವನಂ. ಬರವೇಳ್
ಬಳಾರಿಜಿತುವಂ. ಬಳಿಯನಟ್ಟಾ ನಿಕುಂಭಂಗೆ.
ದುರ್ಗರಕ್ಷಣೆಗೆ ಪೇಳ್ ಕುಂಭನಂ. ತ್ರಿಶಿರಂಗೆ
ಬೆಸಸು ಪೆರ್ಬಾಗಿಲ್ಗಳಂ ಬಲಿಸಿ ನಿಲ್ವಂತೆ
ನುರಿತ ಮೀಸಲ್ಪಡೆಗಳಿಂ. ಪೇಳ್ ಸುಪಾರ್ಶ್ವಂಗೆ
ಪೊಸ ಪಡೆಗಳಂ ಕೂಡಿ ನಡೆದು ನೆರವಾಗಲಾ ೪೨೦
ಸ್ಖಲಿತ ಹೃದಯದೊಳೋಡಿಬರುತಿಹ ನಮ್ಮ ಸೈನ್ಯಕ್ಕೆ!”
ಇಂತಿತ್ತು ತನ್ನಾಜ್ಞೆಯಂ, ಕೊತ್ತಳವನಿಳಿದು
ಉದ್ವಿಗ್ನ ಚಿತ್ತನಲ್ಲಿಂ ನಡೆದನಾಳೋಚನೆಗೆ
ಸಚಿವ ಮಂದಿರಕೆ. ಕಿಕ್ಕಿರಿದಿರ್ದುದಾ ಸಭೆ
ಮಹಾಮಾತ್ಯರಿಂ. ಚಿಂತೆ ಮುಸುಗಿರ್ದಾನನಗೆ
ಪೇಳ್ದರೊಮ್ಮತದಿಂ ದಿಶಾನನಂಗೀ ಹದನ:
“ಮತದ ಭಿನ್ನತೆಗಿಲ್ಲಿ ತಾವಿಹಿದೆ? ಕಟ್ಟು ಸೇನಾ
ಪಟ್ಟಮಂ ಶಕ್ತಿಸಾಧಕನತುಲ ವಿಕ್ರಮ
ಮಹಾಪಾರ್ಶ್ವ ದಳಪತಿಗೆ. ಅಂದು ಸಭೆಯಲಿ ಆ
ವಿಭೀಷಣನ ಪಕ್ಷದಿ ನಿಂದು ನುಡಿದುದನಿಂದು ೪೩೦
ನೆನೆಯದಿರು. ಮನ್ನಣೆಯ ಮಾಡದಿರಲರ್ಹತೆಗೆ,
ತಾನೆ ತನ್ನದನೆ ಕೊಂದಂತೆ, ಹಗೆಗುಪಕೃತಿಯಲಾ!
ವಿಲಯವೇಗದಿ ನುಗ್ಗಿ ಬಹ ಕಪಿಧ್ವಜಿನಿಯಂ
ಇಂದಿನಿರುಳಲಿ ತಡೆವ ಬಲವಾ ಮಹಾಪಾರ್ಶ್ವ
ಸತ್ತ್ವಸಂಯಮಕಲ್ಲದನ್ಯರ್ಗೆ, ನೀನೊರ್ವನಾ
ಕುಂಭಕರ್ಣನದೊರ್ವನುಳಿಯೆ, ದಿಟಮಸದಳಂ.
ನಿದ್ರಾಸಮಾಧಿಯೊಳ್ ಮಗ್ನನ್ ಸಹೋದರಂ.
ನೀಂ ದೊರೆ. ಸಮರ್ಥರಿರೆ ಸೇವಕರ್, ಬೆಸಸುವುದೆ
ಕರ್ತವ್ಯಮಾಜ್ಞಾ ಸಮರ್ಥಂಗಾ ಪ್ರಭುಶಕ್ತಿ
ಯುಕ್ತಂಗೆ!”
ಸಮ್ಮತಿಸಿದನ್ ಸಚಿವರಾಡಿತಕೆ. ೪೪೦
ಬಳಿಯಟ್ಟಿದನ್ ಮಹಾಪಾರ್ಶ್ವಂಗೆ. ಬಂದನಾ
ಶಕ್ತಿಪೂಜೆಯೊಳಿರ್ದ ಭಾಳನೇತ್ರಸಮಾನನಾ
ದೈತ್ಯಸೇನಾಧಿಪಂ. ನಮಸ್ಕರಿಸಿದಾತಂಗೆ
ನೀಡಿ ಸಮಪೀಠಮಂ ಮನ್ನಣೆಯ ಮಾಡಿದನ್;
ಹೇಳಿದನು ಸಚಿವರಿತ್ಯರ್ಥಮಂ, ಮತ್ತಮದೆ
ತನ್ನಾಜ್ಞೆಯಂ.
“ಜೀಯ, ಅಂದಾ ವಿಭೀಷಣಂ
ಪೇಳ್ದುದಂ ನೆನೆ . ಇಂದುಮಂದೆಂದುದನೆ ನಿನಗೆ
ಬಿನ್ನಯ್ಸುವೆನ್. ನಮ್ಮ ದೌರ್ಬಲ್ಯಮಿರ್ಪುದೀ
ನಮ್ಮ ಸೈನ್ಯದೊಳಲ್ತು, ರಾಜೇಂದ್ರ ಆದೋಡಾ
ಮಾತೀಗಳಪ್ರಸಂಗಂ ನನಗೆ; ಮೇಣ್ ನನ್ನ ೪೫೦
ಸ್ವಾಮಿನಿಷ್ಠೆಗೆ ತಕ್ಕುದಲ್ತು. ನಿನ್ನಾಜ್ಞೆಯಂ
ಸರ್ವ ಸೇನಾಧಿಪತ್ಯದ ಮಹಾ ಪಟ್ಟಮಂ
ಮುಡಿಯೊಳಾಂತೆನ್. ತಡೆಯುವೆನ್ ರಾಮಸಂಗ್ರಾಮ
ಶಕ್ತಿಯಂ ನಾಳೆ ಪೊಳ್ತರೆ ನೇಸರೇಳ್ವನ್ನೆಗಂ.
ಬಳಿಕಮಲ್ಲಿಂದೆ ಮೇಲ್ ಆಯು ತೀರ್ವನ್ನೆಗಂ
ದುಡಿದಪೆನ್. ಮಡಿವೆನಲ್ಲದೆ ನಿನ್ನ ತೇರ್ ನೊಗಕೆ
ಪೆಗಲಾಂತು, ಮರಳಿ ಲಂಕೆಗೆ ಪುಗೆನ್. ತನ್ನ ಮಿತಿ
ತಾನರಿದನೆಂದುಂ ದೊರೆಗೆ ಪುಸಿಯ ಭರವಸೆಯ
ಬಲೆಯನೊಡ್ಡನ್.”
ಮಹಾಪಾರ್ಶ್ವ ಹೃದಯವನರಿತು,
ಕಲಿ ಕಲಿಗೆ ಕೊಡುವ ಕಣ್‌ಮೆಚ್ಚುಗೆಯ ಕಾಣ್ಕೆಯಂ ೪೬೦
ಸಲಿಸಿ : “ನೀನೆಂದುದದು ದಿಟಮಾದೊಡಂ. ನಮಗೆ
ಯುದ್ಧಮಲ್ಲದೆ ಬೇರೆ ಮೋಕ್ಷಕೆಲ್ಲಿದೆ ಬಟ್ಟೆ,
ಪೇಳ್, ಸಾಧಕವರೇಣ್ಯ? ನಡೆ ಪೋಗು; ಈ ಇರುಳ್
ತಡೆ ರಾಮಶಕ್ತಿಯ ಕಪಿಧ್ವಜಿನಿಯಂ. ನಾಳೆ
ಕುಂಭಕರ್ಣನನೆಬ್ಬಿಪೆನ್, ಕೇಳ್, ಅಕಾಲದೊಳ್
ಪ್ರಳಯರುದ್ರನೆಬ್ಬಿಸುವವೋಲ್!” ಎನ್ನುತ್ತಾ
ಪುಲಸ್ತ್ಯಜಂ ಬೀಳುಕೊಟ್ಟನು ಮಹಾಪಾರ್ಶ್ವನಂ
ರಣಮೇದಿನಿಯ ರುದ್ರವೇದಿಕೆಗೆ. ಧಳಧಳಧಳಂ
ಧರೆ ನಡುಗೆ ಕಿವಿಗೆ ಬಂದುದು ಧೀರಮಾ ನಿಶಾ
ನಿಶ್ಯಬ್ಧ ಭೈರವಂ, ಕೇಳ್, ಸಮರಭೇರೀ ರೌರವಂ! ೪೭೦