ಪ್ರತೀಕಾರ ಬದ್ಧಭ್ರುಕುಟಿ ಸತೀ ತಸ್ಕರನ
ದುರ್ಮಂತ್ರಕುಟಿಯಿಂ ಪೊರಮಟ್ಟನಯ್ ಶುಕಂ,
ಸಾರಣಂ ವೆರಸಿ. ಅಸ್ತೂಲತೆಯಿನದೈತ್ಯಮಾ
ತನುವಿರ್ದುದಾತಂಗೆ, ರೇಖಾಸ್ಮರಣಕಾರಿ,
ಶುಕ ಚಂಚು ಮುಖಂಗಾ ಶುಕಂಗೆ. ಸಾರಣಂ ತಾಂ
ಶುಕ ಮುಖಸ್ತುತಿಯೊ ಮೇಣಾತನುತ್ಪ್ರೇಕ್ಷೆಯೊ
ಎನಲ್ಕವನನನಸರಿಸಿ ನಡೆದನಯ್, ಕಾವ್ಯಕ್ಕೆ
ಕೈಂಕರ್ಯವೆಸಗುವ ಅಲಂಕಾರದೋಲಂತೆ.
ಲಂಕೇಶ್ವರನ ಗುಪ್ತಚಾರರೊಳಗ್ರಮಾನ್ಯರಾ
ಇರ್ವರುಗ್ರರ್, ತ್ರಿಕೂಟಾದ್ರಿಯಂ ಪಿಂತಿಕ್ಕಿ, ೧೦
ಗಾವುದಂಗಳ ಕಳೆದು, ಸೇರ್ದರು ಸುವೇಲಾದ್ರಿ
ಶೃಂಗೋತ್ತುಂಗ ರಂಗಮಂ. ಕಂಡರೌನ್ನತ್ಯದಿಂ
ವೈನತೇಯವ್ಯೂಹದಿಂ ಬೀಡುಗೊಂಡಿರ್ದ
ಕಪಿಸೈನ್ಯ ಶೇಷ ಶತ ಶತ ತರಂಗಿತ ಫಣಾ
ವಿಸ್ಪಾರಣಾ ರುಂದ್ರ ರಣ ರಾಮ ವೈರಮಂ.
ಸಿಂಧು ತಟ ಗತ ಗಿರಿಶ್ರೇಣಿಯ ಲಸತ್‌ಸಾನು
ಕಂದರ ಬೃಹದ್‌ರಂಗಮಂ ತುಂಬಿ ಪರ್ವಿದಾ
ಶ್ಯೇನ ರಚನಾಕೃತಿಯ ವಾನರ ಮಹಾನೀಕಿನಿಯ
ಚಂಚುದೇಶದೊಳಿರ್ದುದಯ್ ವಜ್ರಕಠಿನಂ
ಪಡೆ ಗಂಧಮಾದನನಾ, ಖಡ್ಗಿಯ ಮುಖಾಗ್ರದೊಳ್ ೨೦
ಕೂರ್ಪಿಂ ನಿಮಿರ್ವೊಂದೆ ಕೋರೆಗೊಂಬಿನ ತೆರದಿ
ನಿಂದಗುರ್ವಿರ್ದನಾ ಗರ್ವಪರ್ವತ ಶೃಂಗ
ಸನ್ನಿಭಂ ಗಂಧಮಾದನನವನ ಸೇನೆಯ
ಶಿರಶ್ಯಿಖರದಲಿ. ತಂತಮ್ಮ ಸೇನೆಗಳ್‌ವೆರಸಿ,
ವಾಲಿಯ ಮಗಂ, ಸರ್ವಸೇನಾನಿ ನೀಲನಂ
ಕೂಡಿ, ಹಗೆಯೆದೆಯ ಹೆದರಿಕೆಯಾಗಿ ಮೆರೆದನೈ
ಆ ವ್ಯೂಹ ವಕ್ಷದಲಿ. ಪಕ್ಷ ದಕ್ಷಿಣದಲ್ಲಿ.
ತನ್ನ ಪಡೆಗಡಲ ನಡುವಣ ದೀವಿವೆಟ್ಟೆನಲ್,
ಪಡೆವಳಂ ವಾನರರ್ಷಭ ಋಷಭನಿರ್ದನು
ಅಜೇಯವೀರ್ಯಂ. ಸವ್ಯಪಾರ್ಶ್ವದಲಿ ಜಾಂಬವಂ, ೩೦
ವೇಗದರ್ಶಿ ಸುಷೇಣರೊಡಗೂಡಿ, ರಕ್ಷಣೆಯ
ಕಾರ್ಯದಧ್ಯಕ್ಷನಿರ್ದನು, ವಯೋಗೌರವದಿ
ಭವ್ಯವಪುವಾಗಿ. ಸುವಿಭಕ್ತಮಾ ವ್ಯೂಹದಾ
ಕುಕ್ಷಿ ಪ್ರದೇಶದೊಳ್ ಕಪಿರಾಜನೆಸೆದನಯ್
ರಾಮಲಕ್ಷಣ ಸಹಿತಮಾಂಜನೇಯನ ಭೀಮ
ಬಾಹುದೈತ್ಯರ ರಾಹುರಕ್ಷೆಯ ಭಯಂಕರ
ಕ್ಷೇಮದಲಿ. ದೇವಶಿಲ್ಪಿಯ ತನೂಜಂ ನಳಂ,
ಇತರ ವಾನರ ಮುಖ್ಯಂ ನೆರಂಬಡೆದು, ತಾಂ
ಸರ್ವಸೈನ್ಯ ನಿಯಂತೃವಾಗಿರ್ದನಯ್, ತನ್ನ
ತಂದೆಯ ಬರದ ಮಹಿಮೆಯಿಂ ಬೃಹದ್ರೂಪಕ್ಕೆ ೪೦
ಮೇಣ್ ಮಹಚ್ಛಕ್ತಿವೈಭವಕೇರ್ದ ವಾನರ
ಧ್ವಜಿನಿಯ ಮಹೋತ್ಸಾಹನೇಮಿಯೆಂಬಂತೆವೋಲ್!
ನಿಶಾಚರೇಂದ್ರನ ಗೂಢಚರರಿರ್ವರುಂ ಪಗಲ್
ತುದಿಯೆಯ್ದುವನ್ನೆಗಂ ಕಾಯ್ದರು ಸುವೇಲಾದ್ರಿ
ಚೂಡಾಗ್ರದೊಳ್. ಇರುಳ್ ಕರ್ಪ್ಪಿಳಿಯಲೊಡನೊಡನೆ
ತಾಮುಮಿಳಿದರ್ ಶಿಬಿರಕಭಿಮುಖರ್. ಕಳ್ದೊಯ್ಯನೆಯೆ
ಪೊಂಚಿ ಸಂಚರಿಸಿದರ್ ಪಡೆಯ ಪೊರವೀಡಿನೊಳ್
ಕಳ್ಗಂಡಿಯಂ ಪುಡುಕಿ. ಬಲಿದ ಕಾವಲ್‌ವೇಲಿ
ನುಸಿ ಪುಸಿಯಲೆಡೆಯಿಲ್ಲದಿರೆ ಕುಟಿಲಮೊಂದಮ್
ಉಪಯಾಮಂ ತರಿಸಂದರಾ ಪ್ರವೀಣರ್. ಶುಕಂ ೫೦
ರಾಕ್ಷಸ ಪ್ರಕಟ ವೇಷವಾಂತು ಪಾಳೆಯದ
ಕಡೆಗೋಡತೊಡಗಿದನ್. ವಾನರಾಕೃತಿವೆತ್ತ
ಸಾರಣಂ “ರಾಕ್ಷನ್! ಬೇಹುಗಾರನ್! ಕೊಳ್‌ಕೊಳ್‌!”
ಎನುತ್ತವನ ಬೆಂಬತ್ತಿದನ್. ಕೂಡೆ ಕಾವಲ್ ಪಡೆಯ
ಕೊರಲ ಕೂಗುಗಳೆದ್ದುವಾ ಸದ್ದನತಿಗಳೆದು
ಕೈದಂಗಳ ಕರ್ಬುನ ಖಣತ್ಕೃತಿಗಳೇರ್ದುವಾ
ಲೌಹರವಮಂ ನುಂಗಿನೊಣೆದುದು ಚಮೂ ಚರಣ
ರಣ ತುಮುಲ ಕೋಲಾಹಲಂ. ಬೇಟೆನಾಯ್ಗಳಂ
ವಂಚಿಸಲೆಳಪ ವಂಚನಾ ಚತುರ ವೃಕಂಬೋಲ್
ಶುಕಂ, ಸರ್ಪಗತಿ ಚಮತ್ ಕೃತಿಯಿಂ ಪಳಂಚಿದನ್ ೬೦
ಪಾಳೆಯದ ಪೊರ ಅಂಚಿನುದ್ದಕೂ ಗದ್ದಲದ
ಗಲಿಬಿಲಿಯ ಜಂಗುಳಿಯ ಜಟಿಲ ಜಾಲಭ್ರಮೆಯ
ಬೀಸಿ. ಬೆಂಬತ್ತಲಾ ಸರ್ವವಾನರ ದೃಷ್ಟಿ
ರಾಕ್ಷಸ ಪ್ರಕಟ ವೇಷದೊಳೋಡುತಿರ್ದನಂ,
ವಾನರಾಕೃತಿಯಿಂದಮವನನಟ್ಟುತ್ತುರ್ದ
ಸಾರಣಂ ಜನಜಂಗುಳಿಯ ಪಾಸುಪೊಕ್ಕಿನೊಳ್
ಪೊಕ್ಕನೊಯ್ಕನೆ ಜುಣುಗಿದನು ಬೀಡಿನೊಳಯಿಂಕೆ.
ಸಾರಣೋದ್ಯಮ ಸಫಲತೆಯನರಿಯುತಾ ಶುಕಂ
ಪಂತಿ ಪಂತಿಯ ಪೊಂಜುಗಳ ಕೆಂಜೊಡರ್ ವೆಳಗು
ತನ್ನನೆಣ್ದೆಸೆಯಿಂದಮಾವರಿಸುವಂತೆವೋಲ್
ಬಿರಿಯಿಕ್ಕಿದನು ತನ್ನಂಘ್ರಿ ಶೀಘ್ರತೆಗೆ. ನಟಿಸಿ
ಕಾಲ್‌ಸೋಲಮಂ, ತಿರುಗಿ, ದೊಪ್ಪನೆ
ನೆಲಕ್ಕುರುಳ್ದನತ್ತಿತ್ತಮೊದರಿ ಕೈಕಾಲ್ಗಳಂ
ಕೆದರಿ. ಕಾಪಿನಾಳ್ಗಳ್ ಬಳಿಗೆ ಬಪ್ಪನಿತರೊಳ್
ಕೆಂಜೊಡರ್ ವೆಳಗಿನೊಳ್ ಕಂಡುದಾಕೃತಿ, ಪೆಣನ
ಮಾಳ್ಕೆಯಿಂ, ನಿಮಿರಿ ನಿಟ್ಟಯ್ಸಿ. ಬಡಿಗೆಗಯ್ಯಿಂ
ಬಡಿವರಂ ತಡೆದೆತ್ತಿ ತಂದರಾ ರಾಕ್ಷಸ
ಶರೀರಮಂ ಪಡೆವಳಂ ಗಂಧಮಾದನನಿರ್ದ
ಪಟಕುಟಿಗೆ . ಸೇನಾನಿ ಬೆಸಸಿದಂದದಿ ಗೆಯ್ದ
ಶಿಶಿರ ಶುಶ್ರೂಷೆಗೆಂಬವೊಲಾ ಕಪಟಿಗಳ ೮೦
ಶಿರೋಮಣಿ ಶುಕಂ, ಮುಚ್ಚೆದಿಳಿದನೆನೆ, ಕಣ್‌ಬಿಚ್ಚಿ
ನೋಡಿದನು ಬೆಬ್ಬಳಿಪ ಬೆಳ್‌ನೋಟದಿಂ ತನ್ನ
ಸುತ್ತಿರ್ದರಂ.
“ಆರೊ ನೀನ್? ಲಂಕಿಗರ ಕಡೆಯ
ಬೇಹಿನವನೇನ್?”
“ಬಳಿಯ ಪಳ್ಳಿಯ ಕೃಷೀವಲನ್.”
ಎನೆ ಶುಕಂ, ಪ್ರಶ್ನಿಸಿದನಾ ಗಂಧಮಾದನಂ
ಮತ್ತೆ ” ಕಳ್ತಲೊಳಗೇಂ ಕಜ್ಜಮೀ ತಾಣದೊಳ್
ನಿನಗೆ?”
“ಮೇವಿಗೆಯ್ದಿದ ಗೋವು ಪಿಂತಿರುಗದಿರೆ,
ಪುಡುಕುತದನಿತ್ತಣ್ಗೆ ಕಪ್ಪಿನೊಳ್ ತಪ್ಪಿ ಬರೆ,
ಕೊಳ್ ಕೊಳ್ ಎನ್ನುತ್ತೆ ಬೆನ್ನಟ್ಟಿದನ್ ನಿಮ್ಮೊರ್ವ
ಮುಂಗಾಪಿನಾಳ್.”
“ಶೋಧಿಸಾತನಂ !” ಬೆಸಸಲ್ಕೆ ೯೦
ಸೇನಾನಿ. ಪುಡುಕತೊಡಗಿದನೊರ್ವ ಸೈನಿಕಂ
ಸರ್ವತ್ರಮಾ ಶುಕನ ಸರ್ವಸ್ವಮಂ. ತೆಗೆದ
ನಾನಾ ಪದಾರ್ಥಂಗಳೊಳ್ ಕಾಣುತೊಂದನಾ
ಕಟಿಯ ಬಂಧನಮೆನಲ್ ಫಣಿರೂಪದಿಂದಿರ್ದ
ಮಣಿಮಯ ಕಠಾರಿಯಂ, ಕೇಳ್ದನವನಂ; “ಎಲವೊ,
ಪೊಲಂಗೆಯ್ಮೆಗೇತಕೀ ಗುಪ್ತಾಯುಧಂ? ಪೊಲಮೊ
ಮೇಣ್ ಪೊಲೆಯ ಕೊಲೆಯೊ? ಪೇಳಾವುದೈ ನಿನ್ನವರ್
ನಿನಗಿತ್ತ ನೇಮಂ? ” ಎನುತ್ತಿರಲ್, ತಳ್ಳಿದನ್
ತೆಕ್ಕನೆ ಶುಕಂ ತನ್ನನರಸುತಿರ್ದಾತನಂ
ಕಪಿದೂತನಂ. ನಿಂದು, ಶೋಧನೆಗೆ ತಡೆಯಿಕ್ಕಿ, ೧೦೦
ಕೋಪೋಗ್ರನಾದಾತನಂ ಪಿಡಿದು ಪುಡುಕಲ್ಕೆ
ಪಡೆವಳಂ ಬೆಸಸೆ, ಮುಷ್ಟಾಮುಷ್ಟಿಯಾಯ್ತಲ್ಲಿ!
ಸುಗ್ರೀವ ಮಾರುತಾತ್ಮಜರೊಡನೆ, ಸೌಮಿತ್ರಿ
ಸಹಿತ, ಮುಂದಣ ಮಾರ್ಗಮಂ ಮಂತ್ರಿಸುತ್ತಿರ್ದ
ಸೀತಾ ಹೃದಯನಾಥನಾಲಿಸಿದನಾ ಶುಕನ
ಕಾರಣದ ಕಳಕಳಧ್ವಾನಮಂ. “ರಕ್ಷಿಸಯ್,
ರಾಮ. ರಕ್ಷಿಸು ನನ್ನನಯ್ಯೊ ಕೊಲುತಿಹರಯ್ಯ
ದೂತನಂ! ” ಎಂಬ ಪುಯ್ಯಲ್‌ಗೇಳುತೇಳ್ವನಂ
ಶ್ರೀರಾಮನಂ ವಿನಯದಿಂ ತಡೆದು ಸಂತಯ್ಸಿ,
ರವಿಸುತಂ ಹನುಮನಂ ನೋಡಲಾತಂ ಬಂದು ೧೧೦
ತಡೆದನಾ ಸದೆಬಡಿಯುತಿರ್ದರಂ: “ದೂತನಂ
ಕೊಂದಪರೆ? ಸಾಲ್ಗು ಬಿಡಿಮಾತನಂ.” ಎಂದನಿಲ
ಸಂಭವಂಗಾ ಗಂಧಮಾದನಂ : “ಪುಸಿವನಯ್,
ಆಂಜನೇಯ, ದೂತನಲ್ತಿವನೆಮ್ಮ ಘಾತಿಸಲ್
ಬಂದ ಖೂಳನ್ : ಪಗೆವರೊಳಸಂಚು ಕಳ್ಗೊಲೆಗೆ
ಕಳುಹಿರ್ಪ ಬೇಹುಗಾರನ್. ಚೋರನೀತಂಗೆ
ತಕ್ಕುದನೆ ಬೆಸಸಿದೆನ್. ಕಾಣೀ ಕಠಾರಿಯನ್!
ಪಳ್ಳಿಯೊಕ್ಕಲಿಗನೆಂದಾಡಿದಿವನೊಡನಿರ್ದ
ನೋಡೀ ಕಿಮುಳ್ಚಿದೋಲೆಯೊಳೆಸೆವ ಸಂಕೇತ —
ಲಿಪಿ ಲಿಖಿತಮಂ! ” “ದಿಟವನರಿವಂ. ರಘೂದ್ವಹಂ ೧೨೦
ಪೇಳ್ದಟ್ಟಿದನ್. ಕಳುಹಿಸೀತನನ್ ನನ್ನೊಡನೆ,
ವಾನರೇಂದ್ರನ ಕೇಂದ್ರ ಶಿಬಿರಕ್ಕೆ.” ಕೇಳ್ದದಂ
ಮೇರೆ ಮೀರ್ದಾನಂದದಿಂ ಶುಕಂ, ತನ್ನಪಾಯಂ
ಸಫಲಮಾದುದಕಂಜನಾ ಸೂನುವಿಗೆ ಮನದೆ
ವಂದಿಸುತೆ, ಹಿಂಬಾಲಿಸಿದನಾತನಂ ಧೂರ್ತ
ಸಹಜಮೆಂಬತಿವಿನಯದಿಂದೆ.
ರಘವೀರನಂ,
ಶ್ಮಶ್ರು ಭೀಷ್ಮಾನನದ ಸಿಂಹ ಗಂಭೀರನಂ,
ವಿಪ್ರಲಂಭಗ್ರೀಷ್ಮ ಸಂಕಟ್ಯ ತಪಸ್ತೇಜೋ
ಪ್ರದೀಪ್ತಾಕ್ಷಿ ತೀಕ್ಷ್ಣನಂ ಕಂಡುದೆ ತಡಂ ಶುಕಂ
ಜಾನಕೀಜೀವನಂ ತಾತ್ಕಾಲಿಕಕೆ ತಾಂ ೧೩೦
ನಿರಿಚ್ಛನಾದನೆನೆ, ಮಾಣ್ಬುದು ಜಿಂಹಜೀವಿಯ
ನಿಸರ್ಗ ವಕ್ರತೆ; ಮುಗ್ಧಸರಳತೆಯನನುಕರಿಸಿ
ಮೂಡಿದತೊಂದಪೂರ್ವಂ ಮೂರ್ಖತಾ ಋಜುತೆ.
ದೈತ್ಯೇಂದ್ರ ಸಮ್ಮುಖದೊಳನುಭವಿಪ ಗೌರವಕೆ
ಮಿಗಿಲಪ್ಪ ಗೌರವವನನುಭವಿಸಿ, ಮರೆಯುತ್ತೆ
ಮುನ್ನ ತರಿಸಂದ ಬೇಹಿನ ಬಟ್ಟೆಯಂ, ಸತ್ಯ
ಸಾನ್ನಿಧ್ಯಮಹಿಮೆಗೆನೆ, ಮಣಿದು ಕೈಮುಗಿದನೈ
ರಾವಣಾರಿಯ ರಾಜವಿಗ್ರಹಕೆ! ಸತ್ತ್ವದೆಡೆ
ಸತ್ಯಮೇ ಪರಮಸತ್ಫಲವನಿತ್ತಪುದೆಂಬ
ವಾದಪೂರ್ವದ ಬೋಧದಿಂ ಸಸ್ಯಧೈರ್ಯಮಂ ೧೪೦
ಧರಿಸಿದ ದಶಗ್ರೀವ ಗುಪ್ತಚಾರಂ ಶುಕಂ,
ಪ್ರಶ್ನಿಸಿದ ಸುಗ್ರೀವನಂ ತಿರಸ್ಕರಿಪವೊಲ್,
ಮಿಥಿಳಾತ್ಮಜೆಯ ಮನಃಪ್ರಿಯನ ಮೊಗದೊಳ್ ನಟ್ಟ
ನೋಟಮಂ ಪಿಂ ಮರಳ್ಚದೆಯೆ, ಇರ್ದುದನೆಲ್ಲಮಂ
ಉಸಿರ್ದನಿರ್ದಂತೆವೋಲ್:
“ಲಂಕೇಶ್ವರನ ಬೇಹಿನಾಳ್
ದಿಟಮೆಂ ಪೆಸರ್ ಶುಕಂ. ಐತಂದೆನರಿಯಲ್ಕೆ
ನಿಮ್ಮ ಪಡೆಯಂ, ಮತ್ತೆ ನಡೆಯನಂತೆಯೆ ನಿಮ್ಮ
ಪುರುಳುಮಂ.” “ನೇರಮೈತರದಿಂತು ಬಳಸಿನೊಳ್
ಬಂದೆಯೇಕಯ್?” “ಪಗೆಯನರಿಯಲ್ಕೆ ಮುನ್ನಮಾ ೧೫೦
ಬಟ್ಟೆ ಜಾಣಲ್ತು. ವೈರಿಯ ಬಲಕೆ ಮಿಗಿಲವನ
ಹೃದಯ ಪರಿಚಯಮಲ್ತೆ ಬೇಹಿಂಗೆ ಮೊದಲ ಗುರಿ!
ಶೀಲವರಿಯದ ಮುನ್ನಮಲಸಿದೆನ್ ನೇರ್ನಡೆಗೆ.”
“ಅಳ್ಕಿದಯ್?” “ಅಲ್ತಲ್ತು. ಅಲಸಿದೆನ್.” “ಪುಯ್ಯಲ್ಚಿ
ನೀನೊರಲ್ದುದು ಅಲಸಿಕೆಯ ಕುರುಹೊ?” ನಗೆಯಂ
ಕಿವುಳ್ಗೇಳ್ದು ಬೇಹುಗಾರರ ಬಲ್ಲಹಂ: “ನಮ್ಮ
ರೀತಿಯ ರಹಸ್ಯಗಳ್ ನಿಮ್ಮ ನಗೆಗೀಡಾಗೆ,
ಬೇಹುಗಾರಿಕೆಗದುವೆ ಜಯಲಾಂಛನಂ. “ಕಂಡು
ಶುಕನಲಘು ಭಂಗಿಯಂ ರಘುಜಂ ಕಪೀಂದ್ರಂಗೆ:
“ಹಗುರನಲ್ಲೀತನಂ ಸಾಮಾನ್ಯನೆಂದೆಣಿಸಿ
ಕೈತವಕ್ಕೀಡಾಗದಿರ್. ಸರಳಮೆಂಬವೋಲ್ ೧೬೦
ಈತನೊ ತೋರ್ಪೀ ಋಜುತ್ವಮುಂ, ಸರ್ಪದ
ಋಜುತ್ವದೊಲ್ , ವಿಷಪೂರ್ಣಮಾಭೀಳಕರಮಲ್ತೆ?
ಸಮಯವೊದಗಲ್ ಮರಳಿ ನೈಜವಕ್ರತೆಯಾಂತು
ಸಾಧಿಸದೆ ಬಿಟ್ಟಪುದೆ ತನ್ನ ಸಂಕಲ್ಪಮಂ?
ಪಾಪದ ರಥಂ ಸ್ವಾರ್ಥಸಾಧನೆಗೆ ಕೆಲವೊರ್ಮೆ
ಪಿಡಿದಪುದು ಪುಣ್ಯಪಥಮಂ!” ಜಾನಿಸುತ್ತಿನಿತು,
ದೃಢಮೊರೆದನಿಂತಾಜ್ಞೆಯಂ: “ವಾನರೇಂದ್ರ, ತೋರ್
ದನುಜೆಂದ್ರ ದೂತನೀತಂಗೆಮ್ಮ ಪಡೆಗಡಲ
ಬಿತ್ತರಮನಾಳಮನ್. ದಿಟದ ಕೆಚ್ಚಿರಲೆಮಗೆ
ಮುಚ್ಚೇವುದಯ್? ತಿಳುಹಲೀತಂ ದಶಾನನಗೆ ೧೭೦
ತನಗೊದಗಲಿರ್ಪ ದಶೆಯಂ!”
ತೆಕ್ಕನೆಳ್ಚರ್ತು
ರಾಮ ಸಂಮ್ಮೋಹ ಶಕ್ತಿಯನುರ್ಚುವಂದದಿಂ
ವಕ್ಷಮುರ್ಬ್ಬುವೊಲುಸಿರ್ ಸುಯ್ದು ನಕ್ಕಾ ಶುಕಂ:
“ನುಡಿತದಿರ್ ಮತ್ ಪ್ರಭುಗೆ ಧಿಕ್ಕಾರಮಂ! ನೀಂ
ನರೇಂದ್ರನಪ್ಪೊಡಮೆನ್ನ ಪ್ರಭು ದಿಗುಪಾಲರ್ಗೆ
ಸಾರ್ವಭೌಮಂ! ನಿನ್ನ ಸೇನೆಯನೆನಗೆ ತೋರ್ದು,
ನಾನದಂ ದೊರೆಗೊರೆವ ಬಳಸುಗೆಯ್ಮ್ಮೆಗೆ ಬರಿದೆ
ದಣಿಯದಿರ್. ಮೀಸಲಾಗಿಪ್ಪುದಾ ಕಿರುಗೆಯ್ಮೆ
ನನ್ನಿಂದಮೆನ್ನ ಕಿಂಕರರಿಗೆ. ಅದಂತಿರ್ಕೆ.
ನಿನ್ನ ಮೇಲ್ ಕರುಣ್ ನನ್ನಿಂದಮೀ ನುಡಿಸುತಿದೆ ೧೮೦
ವಾಕ್ಯಂಗಳಂ. ನಿನ್ನನೊಲ್ಲದಾ ಸತಿಗಾಗಿ
ನಿನ್ನ ತಾಯಿಗೆ ಪುತ್ರನಿಧನವ್ಯಥೆಯನೇಕೆ
ತಂದೊಡ್ಡುವೈ ವೃಥ? ಮಿಥಿಳಾತ್ಮಜೆಯ ಲಜ್ಜೆ
ಲಂಕೇಶ್ವರಂಗಾಗಿರ್ಪುದಯ್ ಸೊಗದ ಸಜ್ಜೆ! . . . .”
ಮತ್ತೆ ಮುನ್ನೊರೆವ ಮುನ್ನಮೆ ಆಂಜನೇಯನ
ಚಪೇಟಪ್ರಹಾರದಿಂ ಜಡಮಾಯ್ತು ಶುಕ ಮುಖಂ!
ತತ್ತರಿಸಿ ಬೀಳ್ವನಂ ತಾಂಗದಿರೆ ಸೌಮಿತ್ರಿ,
ಚರಣ ಘಾತಕೆ ಚರಂ ಪೊರ್ದುತಿರ್ದನೊ ಏನೊ
ಪಂಚತ್ವಮಂ? ಮಾತನಾಡದೆ ಮರುತ್ಸುತಂ
ಸೀತೆಯೊಡೆಯನ ನೋಟದಂಕೆಗೆ ಅವುಂಕಿದನ್ ೧೯೦
ತನ್ನೆರ್ದೆಯ ರೋಷದವಮಂ: “ಸಲ್ಲದಿಲ್ಲಿಗೆ,
ಅರಿಂದಮ, ಸಾತ್ವಿಕ ವಿಧಾನಂ. ಅಮರ್ತ್ಯು ಭೂ
ಈ ಲಂಕೆ. ಮರ್ತ್ಯರೀತಿಗುಮಂತೆ ನೀತಿಗುಂ
ಪೊರಗು . ಕುಲದಿಂ ಮಾತ್ರಮಲ್ತಿವರ್ ಸ್ವಗುಣದಿಂ
ರಾಕ್ಷಸರ್! ಭಯಕ್ಕಲ್ಲದೆಯೆ ನಯಕೆ ಸೋಲರೀ
ನಕ್ತ ಜೀವರ್. ವಿಭೀಷಣದೇವನೊರ್ವಂ ವಿನಾ
ಕಂಡೆನಿಲ್ಲೊರ್ವನಂ ಸತ್ತ್ವಪ್ರಧಾನನಂ
ಲಂಕಾ ಪುರುಷಮುಖ್ಯರೊಲ್. . . . ” ತನಗೆ ಭಂಗಮಂ
ನೆಗಳ್ದಾಂಜನೇಯಂಗೆ ಮುಖಭಂಗಮಂ ಮಾಳ್ಪ
ಮಾಳ್ಕೆಯಿಂದಾತನ ನುಡಿಗೆ ನಡುವೆ ಬಾಯಿಕ್ಕಿ ೨೦೦
ಬೇಹುಗಾರಂ: “ಇಂದು ನಿನ್ನಾ ವಿಭೀಷಣಂ
ಲಂಕಾ ಪ್ರಮುಖನಲ್ಲಯ್. ಅರಸನಾಕ್ರೋಶಕ್ಕೆ
ದ್ರೋಹಕಾರಣದಿಂದೆ ಸಿಲ್ಕಿ ನಗರಚ್ಯುತಂ,
ದೇಶಗೌರವ ಬಾಹಿರಂ! ತನೂಜೆಯನಂತೆ
ಸತಿಯುಮಂ ತೊರೆದು, ದೇಸಿಗನಾಗಿ ಪೊರಮಟ್ಟು
ವ್ರತಿಯಂತೆ ಪೊಳ್ತುಗಳೆಯುತ್ತಿರ್ಪನಾ ದ್ರೋಹಿ,
ದಿಕ್ಕುಗೆಟ್ಟೊಂಟಿಗಂ, ವೇಲಾದ್ರಿ ಪಂಕ್ತಿಯ
ವಿಪಿನ ಮಧ್ಯೆ. ಕಾಗೆಯುಂ ಕರೆಯದವನತ್ತಣ್ಗೆ!
ಇರ್ದನಂತರ್ ವೈರಿಯೊರ್ವನವನುಂ ನಿಮಗೆ
ನೆರಮೀಯದಂತಾಯ್ತಲಾ?” ಶುಕನ ನುಡಿಗೇಳ್ದು ೨೧೦
ಸುಖನಯನನಾದಾಂಜನೇಯಂ, ಸುವಾರ್ತೆಯಂ
ತರ್ಪ ಸನ್ಮಿತ್ರನಂ ತಳ್ಕೈಸುವೋಲ್, ಅವನ
ಗಾತ್ರಮಂ ತಬ್ಬಿದನ್; ಕಂಡರಚ್ಚರಿಗೊಳಲ್
ಮುಂಡಾಡಿದನ್ : “ನೀನ್ ಸುಃರುತ್ತೆನಗೆ, ಶುಕ! ಪೇಳ್
ವಿಭೀಷಣನ ನೆಲೆಯನಾಂ ನಿನಗೆ ದಲ್ ನಿತ್ಯಋಣಿ!
ಎಲ್ಲಿದನ್? ಏಕೆವೋದನ್? ಆರ್ಗೆ ಮೈತ್ರಿಯಂ
ಮಾಡೆ ಲಂಕಾದ್ರೋಹಿಯಾದನ್?” ಕಿತವ ವಿದ್ಯಾ
ಗುರು, ಶುಕಂ, ಚಟುಲಾಶುಮತಿ, ಹಾಸ್ಯಗೈವಂತೆ
ಕುಟಿಲ ಮಂದಸ್ಮೇರ ಮುಖದಿಂ ಮರುತ್ಸುತನ
ಮೋರೆಯನರಿತು ನೋಡಿ : “ಪರಿಹಾಸ್ಯಕೆಂದೆನಯ್ ೨೨೦
ಪುಸಿ ಅದನ್ ! ಬೆಳ್ಪನಂದದಿ ತಪ್ಪನಪ್ಪಿ, ನೀಂ
ಕೋಳುವೋದಯ್! ಕರ್ಕಶತೆಯಾಂತುದಂಜನಾ
ವತ್ಸವದನಂ. ಒಯ್ಯನವನಂ ತಳ್ಳಿ ಸರಿದನ್
ಮುನ್ನಮಿರ್ದಾ ತನ್ನ ಪೀಠಕೆ. ಕಪೀಂದ್ರನಂ
ಕಣ್ಣರಿಯೆ ನೋಡಿದನ್: ಬಳಿಯಿರ್ದ ವಾನರಿಗೆ
ಪರ್ಚಿದನ್ ವಾನರೇಂದ್ರಂ: “ಬೆಸಸು ಬೇಗದಿಂ
ಶರಗುಲ್ಮಗೀತನಂ ಪಿಳಿದು, ನಿಜಮನಿತುಮಂ
ತಿಳಿದು, ಬಾಳ್ವೆರಸಿಯೆ ವಿಸರ್ಜಿಸವೇಳ್ಕುಮೆಂಬ
ನಮ್ಮಿಚ್ಛೆಯಂ.”
ಬಂದರಾಗಳೆ, ಭಯಂಕರಂ,
ವ್ಯಾಘ್ರೋಗ್ರರಾ ನರಕ ಶಿಕ್ಷಾ ಪ್ರವೀಣರಾ ೨೩೦
ಶರಗುಲ್ಮ ಯಮಕಿಂಕರರ್. ರಾಹು ಬಾಹುಗಳ್
ಪಿಡಿಯೆ ತಿಂಗಳ್ ಕಾಣದಾಗುವೋಲಾ ಶುಕಂ
ಮರೆಯಾಗುತವರ ಬಲ್‌ನೆಳಲ್‌ಗಳ ನಡುವೆ ತಾಂ
ಪುದುಗಿ ಪೋದನ್, ವಂಚನೆಯೆ ವೋಪಂತೆವೋಲ್!