ಶ್ರೀಗುರುಕೃಪೆಯನಾಂತ ಸಾಧಕವರೇಣ್ಯನ
ಮನೋಮಯಂ ಪ್ರಾಣಮಯಮಂ ಪ್ರವೇಶಿಸುತಲ್ಲಿ
ಊರ್ಧ್ವಗಮ ವಾಸನಾ ಸ್ನೇಹಕ್ಕೆ ಬೆಂಬಲಂ
ನಿಂದು, ದೈವೀವಿರುದ್ಧಂ ತಮಃಪ್ರವೃತ್ತಿಯಂ
ನಿಗ್ರಹಿಸಿ, ತನ್ನಭೀಪ್ಸಾದೂತನಂ ಮೃಣ್ಮಯದ
ಜಡಕೆ ಸಂವಾದಿಯಾಗಿರ್ಪ ಸುಪ್ತಚಿತ್ತದ
ಗುಪ್ತತಿಮಿರದ ಸೆರೆಯ ಚೈತ್ಯಸಂಪ್ರಜ್ಞೆಯಂ
ಪುಡುಕಿ ಕಂಡೈತರಲ್ ಕಳುಹುವಧ್ಯಾತ್ಮದೋಲ್
ಶ್ರೀರಾಮನಟ್ಟಿದಾ ಸುಗ್ರೀವ ದೂತೋತ್ತಮಂ
ಪೊಕ್ಕನೈಸಲೆ ಲಂಕೆಯಂ ! ದರ್ಶನಂದೋರೆಮಗೆ,      ೧೦
ಓ ವಾಙ್ಮಯಿಯೆ, ನಿತ್ಯಸತ್ಯಂ ನಿಕ್ವಣಿಸುವೋಲ್
ವಚಸ್‌ತಂತ್ರಿ ಕವಿಯ ಚಿದ್ಯಂತ್ರಸಮ ಹೃದ್ವೀಣೆಯಿಂ !
ಏರಿ ಕವಿಕಲ್ಪನಾ ಸುರಧನುರ್ಯಾನಮಂ,
ಸಚ್ಚಿದಾನಂದಮಂ ಸಾಧಿಸೆ, ಋಷಿಪ್ರತಿಭೆ
ಅಟನಗೈವುದು ದಿವ್ಯ ವೈವಿಧ್ಯಮಯ ವಿರಾಡ್
ವಿಶ್ವವೈಶಾಲ್ಯಮಂ. ಇಂದ್ರಿಯದ ನಂದನದಿ
ನಾನಾ ಸುಖದಿ ರಮಿಸಿ ರಮಿಸಿ, ರುಚಿಭಾವನಾ
ಸ್ವಪ್ನರಚನೆಯ ಲಸಲ್ಲೋಕದಿ ಪರಿಭ್ರಮಿಸಿ
ಭ್ರಮಿಸಿ, ಬುದ್ಧಿಯ ಕುಶಾಗ್ರತೆಯ ಕೌಕ್ಷೇಯದಿಂ
ತರ್ಕವಿದ್ಯಾತತ್ತ್ವ ಗುಹ್ಯತೆಯನಾಕ್ರಮಿಸಿ ಮೇಣ್          ೨೦
ಕ್ರಮಿಸಿ, ತತ್ಕಾಲಿಕದ ತೃಪ್ತಿಯಲ್ಲದೆ ಬೇರೆ
ಕಾಣದೆ ಚಿರಂತನಾನಂದಮಂ, ಬೇಸರಿಂ,
ಮೇಲೆ ಕೈಕೊಳ್ವುದೈ ಯೋಗಪಥಮಂ : ಕುಳ್ತು
ಗಿರಿಶಿರಶ್ಯಿಲೆಯ ಪೀಠದಿ, ಉಷಾ ನಿಶ್ಯಬ್ದ
ಸುಪ್ತಿಯಿಂ ವಿಶ್ವಮೆಳ್ಚರ್ಪುದಂ ಧ್ಯಾನಿಸುತೆ
ಹೃದಯಿಪನು ರವಿಯುದಯದವತಾರಮಂ, ಮತ್ತೆ,
ನಿಂತು ಸಾಗರ ಸಿಕತ ತೀರದೊಳ್, ನಾಟ್ಯಮಯ
ನೀಲ ಜಲ ಲಯ ದರ್ಶನದಿ ಜೀವಲಯನಾಗಿ
ಭಾವದ ಸಮಾಧಿಯಿಂ ಪೀರ್ವನು ಸಮುದ್ರಮಂ,
ಬ್ರಹ್ಮತೆಯನಿನಿತನನುಭವಿಸಿ, ಮೇಣಂತೆವೋಲ್,       ೩೦
ಪ್ರಕೃತಿಯ ಬೃಹಚ್ಚಿತ್ರ ಸೃಷ್ಟಿಯ ಸಮಸ್ತಮಂ,
ನಕ್ಷತ್ರ ನೀಹಾರಿಕಾ ಲೋಕ ಲಕ್ಷಂಗಳಾ
ಗಗನಮಂ, ಭೂಮಾನುಭೂತಿಪ್ರಚೋದನೆಯ
ನೈಸರ್ಗಿಕಾಕೃತಿಗಳಂ ಮನಃಕೃತಿಗಳಂ
ಸಾಧಿಸುವನಧ್ಯಾತ್ಮಿಸುವನಾದೊಡಂ ಆ
ಪ್ರಯತ್ನ ಕಾರಣಕೆಂತುಮೇಂ ಕಾರ್ಯಮಾದಪುದೆ
ಕಾರಣಾತೀತಮಾ ಬ್ರಹ್ಮತತ್ತ್ವಂ ? ಒರ್ಮೆ ತಾಂ
ಸುಳಿದಿಲ್ಲಿ ಮೇಣೊರ್ಮೆ ಮಿಂಚುತ್ತಲ್ಲಿ ತೋರ್ದಂತೆ
ತೋರ್ದಡಂ, ಅದು ದಿಟದಿನಿರ್ಪುದೋ ಮೇಣ್ ಬರಿಯ
ಆಸೆ ಬೀಸಿದ ಗಾಳಿಗೋಪುರವೊ ಎಂಬೊಂದು            ೪೦
ಶಂಕೆಯುಯ್ಯಲೆಯಲ್ಲಿ ತೊನೆದಪ್ಪುದಯ್ ಶ್ರದ್ಧೆ,
ಬುದ್ಧಿಸ್ಥಿರತೆಗೆಟ್ಟು, ಇಂತಹಂಕೃತಿಯಳಿಯೆ,
ಸಾಧನೆಯ ಶಿಖರದಲಿ, ತನ್ನ ಯತ್ನವನುಳಿದು
ತಾಟಸ್ಥ್ಯಮಂ ತಳೆಯುವಾತ್ಮಪ್ರತೀಕ್ಷೆಗಾ
ಅನುಭೂತಿ ಮೈದೋರ್ವುದೈ, ತನಗೆ ತಾಂ ಪೊಣ್ಮೆ,
ಪೊಳೆದು, ತಳತಳಿಸಿ !
ಅರಸಿದನೊ ಆಂಜನೇಯಂ,
ಆ ಋಷಿಪ್ರತಿಭೆಯೊಲ್, ರಾಮನರ್ಧಾಂಗಿಯಂ
ಲಂಕಾ ಜಟಿಲ ಕುಟಿಲ ವಿಸ್ತೀರ್ಣದೊಳ್, ಏರ್ದು
ಬೋರೆಯನಿಳಿಯುತೋರೆಯಂ, ತರತರದ ಬಳ್ಳಿ
ಗಿಡಮರಗಳಿಂದಿಡಿದ ದಾರಿದೋಂಟಂಗಳಂ   ೫೦
ಸೋವುತ್ತೆ ಕಣ್ ಕಿವಿಗಳೆಚ್ಚರಿಕೆಯಿಂ, ಮತ್ತೆ
ಅಲ್ಲಲ್ಲಿ ಪಡೆಪಡೆಗಳಾಗಿ ತಿರುಗುವ ಇರುಳ್
ಕಾಪಿನಾಳ್ಗಳ ಸೊಲ್ಲ ಸುಳಿವಿಂ ಧರಾತ್ಮಜೆಯ
ಸೆರೆಯ ತಾಣಕೆ ಸಾಕ್ಷಿಯಂ ಸಂಗ್ರಹಿಸಲೆಳಸಿ
ಹೊಂಚುತ್ತೆ, ಶಂಕೆಗೆಡೆಯಾಗಿ ತೋರ್ಪೆಡೆಗಳಂ
ಪೊಕ್ಕು, ತರ್ಕಜಿಜ್ಞಾಸೆಯೋಲೇನೊಂದುಮಂ
ಬಿಡದೆ ಸೋದಿಸುತೆ, ಪಾಪಿಯ ಹೃದಯ ಕೂಪದೊಳ್
ಪ್ರಾರಬ್ಧದಿಂ ನಿದ್ರಿಸಿಹ ಧರ್ಮಬುದ್ಧಿಯಂ
ಜಾಗ್ರತಂಗೊಳಿಸಲೆಳಸುತ್ತದಂ ಅರಸುವ
ಕೃಪಾ ಕೃಪಾಣದ ಕಿರಣದೋಲಾಂಜನೇಯಂ ೬೦
ಪ್ರವೇಶಿಸಿದನಯ್ ಶಿಖರತ್ರಯವ್ಯಾಪಿಯಾ
ದಶಗ್ರೀವಪುರದ ಪಾಪದ ಸಾಂದ್ರಕೇಂದ್ರಮಂ !
ನಿಬ್ಬೆರಗುವೊಡೆದುದಾ ಕಿಷ್ಕಿಂಧೆಯಾತಂಗೆ
ಇಂದ್ರಜಿತು ಪಿತನ ವೈಡೂರ್ಯಮಯ ಕಮನೀಯ
ಕನಕವಿಭವಂ ಮಧ್ಯಲಂಕೆಯಾ : ಗರ್ವಶಿರ
ಗಗನೋನ್ನತ ಗಿರೀಂದ್ರ ಸಾನುವಂ ಸೇವಿಸಲ್
ಚಿತ್ರ ನಾನಾ ಸ್ತೂಪದಿಂ ವ್ಯೂಹಗೊಂಡಿರ್ಪ
ಫೇನ ಸನ್ನಿಭ ಶರನ್ಮೇಘನಾಗಂಗಳೋಲ್
ಯಾತುಧಾನ ಪ್ರಧಾನಾಯಲಸ್ಥಾನಗಳ್,
ರೌಪ್ಯ ರತ್ನ ಸ್ವರ್ಣ ವರ್ಣ ಸಂಶೋಭಿಗಳ್,     ೭೦
ಚಂದ್ರಿಕಾ ಕ್ಷೀರಾಭಿಷೇಕಪ್ರಮತ್ತತೆಗೆ
ಸುಖಮೂರ್ಛೆಗದ್ದಂತೆವೋಲೆಸೆದುವಾ ಮಲೆಯ
ನಡುದಲೆಯ ನಿಡುದೂರದೋರೆಯನಲಂಕರಿಸಿ,
ಒಲಿದಪ್ಪಿದೋಲ್ ! ಮಿನುಗಿದುವು ಮಿಂಜೊಡರ್ ಮನೆಮನೆಗೆ,
ಮಿಂಚಿನಲರಿನ ಗೊಂಚಲೋಲ್, ಪಂಕ್ತಿಪಂಕ್ತಿಯಿಂ,
ಚಕ್ರಗತಿಯಿಂ, ವೀಥಿವೀಥಿಯಂ ಶೃಂಗರಿಸಿ
ಜ್ವಲಿಸಿದುವು ಕಲಶದೀಪಸ್ತಬಕ ರಾಜಿಗಳ್,
ರಾಸಲೀಲಾ ಪದಪ್ರಾಸ ವಿನ್ಯಾಸಮಂ
ಮೆರೆದು. ಶಿಲ್ಪಿಯ ಕುಶಲ ಕಲೆಯ ರೇಖಾಪ್ರತಿಭೆ
ಸುಪ್ರಕಟಮಪ್ಪಂತೆವೋಲ್ ಮನೆಮನೆಯ ಮೇಲೆ        ೮೦
ಗೋಪುರದ ಭುವನೇಶ್ವರಿಯ ಪರಿಜನಾವರಿಸಿ
ಝಗಝಗಿಸಿದುವು, ಮಳೆಬಿಲ್ಲಿನೋಕುಳಿಯನೆರಚಿ,
ಬಣ್ಣಬಣ್ಣದ ದೀಪತೋರಣಂ. ಹೇಷಿತಂ
ಬೃಂಹಿತಂ ರಥಚಕ್ರ ಚೀತ್ಕಾರಗಳ್‌ವೆರಸಿ
ಸದ್ದುವೊಳೆ ನೆರೆಯುರ್ಕ್ಕಿ ಬರ್ಪವೋಲ್, ಕಿವಿತುಂಬಿ
ಬಂದುದಾ ರಾಜಧಾನಿಯ ವಿವಿಧ ಬಹುಜನದ
ಕಲಕಲ ತುಮುಲ ದೈತ್ಯನಿನದ. ಅಸುರ ಲಕ್ಷ್ಮಿಯ
ಮಿಸುನಿಯೆಸಕದ ನಯಕೆ, ಸೌಂದರಕೆ ಸಂಸ್ಕೃತಿಗೆ,
ಕಲ್ಪನಾಕುಶಲತೆಯ ಶಿಲ್ಪಕೆ ಮನಂ ಮೆಚ್ಚಿ
ನಿಲ್ಪಟ್ಟು ತಲೆತೊನೆದನೆನೆ ಮಹತ್ಕಾರ್ಯಪಟು,          ೯೦
ಸತ್ತ್ವಸಂಪನ್ನನಾ ಕಪಿನೃಪ ಹಿತಂಕರಂ,
ಮರುತಾತ್ಮಜಂ, ಲಂಕೆಗಿನ್ ಕವಿಸ್ತುತಿಯೇಕೆ
ಮರುನೀರಸಂ ?
ಅಂತಗೋಚರ ವನೇಚರಂ
ಗೋಮಿನಿಯ ಕಾಮಿನಿಗೆ ಜನಜನದೊಳಾಲಿಸುತೆ
ಮನೆಮನೆಯೊಳರಸುತ್ತೆ ಯಾಮಿನಿಯನಲೆಯುತಿರೆ,
ರಜನಿ ಮುಂಜರಿದಂತೆ ಹಿಂಜರಿದುದೊಯ್ಯನಾ
ಪುರದ ರಾತ್ರಿಂಚರತ್ವಂ. ಹಿಂಚಿತಯ್ ಪ್ರಜಾ
ಚರಣ ಸಂಚರಣದೊಲೆ ಯಾನ ಸಂಚಲನಮುಂ.
ಶಬ್ದಮೊಯ್ಯನೆಯೆ ನಿಶ್ಯಬ್ದತಾಲಿಂಗನದಿ
ರಮಿಸಿ, ಗದ್ಗದವಾಗುತೊಯ್ಯನಡುಗುತೆ, ಕಡೆಗೆ          ೧೦೦
ತೊದಲಾಯ್ತು. ಸೊಡರುಗಳನಾರಿಸಲ್ಕಲ್ಲಲ್ಲಿ,
ಮಸುಳಿದುದು ಗೃಹಗೃಹದೊಳಂತರಂಗದ ದೀಪ್ತಿ ;
ಕಳ್ತಲೆಯತಿಥಿಯಾಯ್ತು. ಒಂದಾದ ಮೇಲೊಂದು
ನಿರ್ವಾಣವೊಂದಲಾ ತೈಲಾರ್ಚಿ ತತಿ, ಮಂಜು
ಮಂಜಾಗಿ ತೋರ್ದಡಂ, ಕೈಗಣ್ಮಿದೋಲಾಯ್ತು
ಶೈಶಿರಜ್ಯೋತ್ನ್ಸೆ. ಸುಳಿಸುಳಿದನಿಚ್ಛಾರೂಪಿ
ಸೌಧದಿಂ ಸೌಧಕ್ಕೆ, ಗಾಳಿಯೋಲ್, ಕಂಪಿನೋಲ್,
ನೆಳಲವೋಲ್, ಕನಸಿನೋಲ್, ಸಸಿಗದಿರವೋಲ್, ನಿಶಿಯ
ನಿಟ್ಟುಸಿರಿನೋಲ್,
ಭ್ರಮಾಶೀಲ ನಾಗರಿಕತೆಯ
ಕೂಗಡೆಗೆ ಕೇಳಿಬಹ ಮೌನಮೂಲದ ಶಾಂತಿ  ೧೧೦
ಸಂಸ್ಕೃತಿಯ ವಾಣಿಯೋಲಲ್ಲಲ್ಲಿ ಶ್ರೀಮಂತ
ವೇಶ್ಮಂಗಳಿಂ, ನೀರವ ನಿಶಾಪ್ರಾಣ ತಂತ್ರಿಯನೆ
ಮಿಡಿದರೆನೆ, ತೇಲಿಬಂದುದು ಬೀಣೆಯಿಂಚರಂ :
ಗಾನ ಜೇನಿನ ಸೋನೆ ಸೋರ್ದುದೊ, ಕಿವಿಯ ತೃಷೆಗೆ
ತಣಿವ ನಾಲಗೆಯಾಗಿ ನಲಿವಂತೆ ! ನವವಧೂ
ಚುಂಬನಕ್ಕಾಲಿಂಗನದ ಬೆಸುಗೆ ಬೆರೆವಂತೆ,
ಸವಿಗೆ ಸವಿ ನೆರೆವವೋಲ್ ಘ್ರಾಣಮಂ ಸುಖಕದ್ದಿ
ಪ್ರಾಣಮಂ ತೇಂಕಾಡಿಸುವ ಪರಿಮಳಂಗಳುಂ
ಅಲೆದುವಾಗಸವನಶರೀರ ಮೋಹಂಗಳೋಲ್ !
ಲಂಕಾ ಲತಾಂಗಿಯರ ನೂಪುರ ಝಣತ್ಕೃತಿಗೆ            ೧೨೦
ಕಿವಿಯಿತ್ತೊಡಂ ಬಗೆಸೋಲದಾ ಬ್ರಹ್ಮಚಾರಿ,
ಲೆಕ್ಕಿಸದೆ ಲಲನಾ ಲಲಾಟ ಲಾವಣ್ಯಮಂ,
ದೇವಿ ಸೀತೆಯನಲ್ಲದರಸಲಿಲ್ಲನ್ಯಮಂ
ಕಂಡ ನಾನಾ ಸ್ಥಿತಯ, ವಸನಚ್ಯುತಿಯ, ಲಲಿತ
ದೇಹದ್ಯುತಿಯ ಭೋಗಮಂಚದ ರತವ್ರತದ
ಸೀಮೆಯಲಿ. ಯೋಗನಿಷ್ಠೆಗೆ ಕೋಡ ಕೊನರಿಸುತೆ
ಹೋಗಿ ಹೊಕ್ಕನು ಮನೆಗೆ ಇಂದ್ರಜಿತುವಾ !
ಕಲೆಗೆ ತಾಂ
ಸಜ್ಜೆವನೆಯೆಂಬಂತೆ ಸೊಗಸುಗೊಂಡಿರ್ದದಂ
ಸಂಚರಿಸಿದನು ಧೂಪರೂಪಮಂ ತಾಳ್ದನಿಲ
ಸೂನು : ತಾರಸ್ವರದೊಳೂಳ್ದುದು ಪೊಸನ್ತಿಲೆಡೆ          ೧೩೦
ಕಟ್ಟುಗೊಂಡೊರಗಿರ್ದ ಜಾಯಿಲಂ, ಗಾರಾಗಿ
ಕೇಗಿದುದು ಸಾಕಿದ ನವಿಲ್. ಮಸುಳಿದುದು ಕಾಂತಿ
ದೀಪಾಳಿಗಳ್ಗೆ. ತೆಕ್ಕನೆ ಬೆಚ್ಚಿಬಿದ್ದಂತೆ,
ಕಂಪಿಸಿತು ಹೊಂಗೆಜ್ಜೆ ಗಂಟೆಗಳ ತೋರಣಂ,
ಹನಿಹನಿಯೊಳಿನಿದನಿಯ ಸೋನೆಯಂ ಸೂಸಿ. ಮೇಣ್
ಸ್ವಪ್ನಭೀತಿಯೊಳೆಂಬ ತೆರದಿ, ಮಂಡೋದರಿಯ
ಸೊಸೆಯ ಶಿಶು ಕೂಗಿದನು ತೂಗುತೊಟ್ಟಿಲೊಳೆದ್ದು
ಕುಳಿತು. ಲಂಕೇಶ್ವರಪ್ರಿಯಸುತಪ್ರೇಮಸತಿ,
ತಾರಾಕ್ಷಿ, ಸಿರಿಮಂಚದಿಂ ದಿಗ್ಗನೇಳುತ್ತೆ,
ಕುಡಿಯಿಲ್ಲಣವನೊರಸಿ ಸೊಡರನುಜ್ಜಳಿಸಿದಳ್ ;          ೧೪೦
ಬೆಜ್ಜರದಿ ನಡೆಯುತರ್ಭಕನ ತೆಗೆದೆತ್ತಿದಳ್ ;
ಚೊಚ್ಚಲೆದೆಗೊತ್ತಿದಳ್ ; ಸಂತಯ್ಸಿ ಮುಂಡಾಡಿ
ಮುತ್ತೊತ್ತಿದಳ್ ಮುದ್ದುಮೊಗಕೆ. ತರುಣಿ, ಷೋಡಶಿ,
ತಲ್ಲಣಂಗೊಳುತ ಬೆಸಸಿದಳಲ್ಲಿಗನಿತರೊಳ್
ಬೇಗನುಬ್ಬೇಗದಿಂ ಬಂದೊರ್ವ ಸೇವಿಕೆಗೆ,
ತನ್ನ ಕಂದನ ತಂದೆಯಂ ಕರೆದು ತರುವಂತೆ.
ಕಳವಳದ ನುಡಿಗೇಳ್ದು, ಅಧ್ಯಯನ ಕಕ್ಷ್ಯದಿಂ,
ಓಡೋಡಿಯೈತಂದನೊಂದು ಹೊತ್ತಗೆವೆರಸಿ
ರಣಧೀರನಿಂದ್ರಜಿತು, ಸಾಮಾನ್ಯನೋಲ್. ಕಂಡು
ಆ ಭದ್ರರೂಪದ ಸುದೀರ್ಘದೇಹಿಯನವನ      ೧೫೦
ಸಲ್ಲಲಿತ ಲಲಿತಾಂಗಿಯೆಡೆ ಮತ್ತೆ ಶಿಶುವಿನೆಡೆ,
ನಾಲಗೆಗೆ ನೆಗೆದ ಹರಕೆಯನೆನಿತೊ ಸಂಯಮದಿ
ಸಂಹರಿಸಿ, ಬಿಸುಸುಯ್ದನಾಂಜನೇಯಂ !
ಸತಿಗೆ,
ಮಗುವನೆರ್ದೆಗೊತ್ತಿ ಕಣ್‌ಬೆದರಿರ್ದ ರೂಪಸಿಗೆ
ಇಂತೊರೆದನಿಂದ್ರಜಿತು ದರಹಾಸದಿಂ : “ಇದೇನ್,
ಮನದನ್ನೆ, ನೀಂ ಸುರಕ್ಷಿತಳಾಗಿಯುಂ ಬರಿದೆ
ಬೆದರುವೆ ಅರಕ್ಷಿತಳವೋಲ್ ? ನನ್ನ ಈ ಮುದ್ದು
‘ವಜ್ರಾರಿ’ಗೇನ್ ಬಾಧೆಯುಂಟಾಯ್ತೆ ? ನುಡಿ, ನುಡಿ ;
ಅಕಾರಣಂ ಮಿಳ್ಮಿಳನೆ ನೋಳ್ಪೆಯೇಕಿಂತು ?
ಕೋಟಲೆಯನೊಡನೆ ತವಿಪೆನ್; ತ್ರಿಲೋಕಂಗಳಂ       ೧೬೦
ಮಥಿಸುವೆನ್; ಬೆಜ್ಜಗಜ್ಜಂಗೆಯ್ವೆನೀ ನಿನ್ನ
ಬೆಜ್ಜರಕೆ !”
ತೊಯ್ದಕಣ್ ಉಸಿರಸುಯ್‌ವೆರಸುತುಂ
ಗದ್ಗದಂಗೆಯ್ದಳಿಂತಾ ಭೀರಂ ತನ್ನಿನಿಯ
ದೈತ್ಯಧೀರಂಗೆ : “ಪೇಳಲಂಜುವೆನಲ್ಪಮಂ,
ನಾನಬಲೆ, ನಿನ್ನಾ ಸಬಲ ಮತಿಗೆ. ಪ್ರಾಣಪತಿ,
ಭಾವದಿಂದರಿತುದಂ ಬುದ್ಧಿಯಿಂದಳೆಯಲದು
ಮೌಢ್ಯದೊಲ್ ತೋರ್ಪುದಹುದಾದೊಡಂ, ಲಘುವಲ್ತು
ದುಶ್ಶಕುನ ಚಿಹ್ನೆ. ಬಿದಿಯೆಳ್ಚರಿಕೆವೆರಳದಂ
ಕಡೆಗಣಿಸದರಿತು ನಡೆವುದೆ ಬುದ್ಧಿ. ನಿರ್ನೆರಂ
ಬೆದರುವುದೆ ವೀರ ರಮಣಿಯ ಹೃದಯವೆನ್ನುಸಿರ್?      ೧೭೦
ಊಳ್ದತ್ತು ಜಾಯಿಲಂ; ಕೇಗಿತು ನವಲ್ ; ಗಂಟೆ
ಸರಗೈದುವನಿಮಿತ್ತಮೊಡನೆ ಚಿಟ್ಟನೆ ಚೀರ್ದು
ನಿದ್ದೆಯನೊದರಿ ತೊಟ್ಟಿಲೊಳಗೆದ್ದು ಕುಳ್ತನೀ
ನಿನ್ನ ಪೌರುಷವಜ್ರ ಸಂಭವಂ !”
ಕೇಳ್ದಡಂ
ಗಮನಿಸದವೋಲ್ ಸತಿಯ ನುಡಿಗಳಂ ಇಂದ್ರಜಿತು
ಸುತ್ತಲುಂ ನೋಡಿ: “ಏನಿದು? ಧೂಪಧೂಮಮೇಂ?
ಇಂತು ಪೊಗೆಯಡಸಿದೊಡೆ ನಿದ್ದೆಯಚ್ಚರಿಯಲ್ತೆ
ಕಂದಂಗೆ?” ಎನುತಾಳ್ಗಳಿದೆರ್ಡೆಗೆ ಬೆಸಸಿದನ್
“ತೆರೆಯಿಂ ಗವಾಕ್ಷಮಂ !”
“ಪೋದ ಬೈಗಿನೊಳೊಂದು            ೧೮೦
ಬಿದ್ದುದು ಮಹೋಲ್ಕೆ ಪತ್ತನದುತ್ತರದ ಗಿರಿಯ
ಲಂಬವೆಂಬಾ ಶಿಖರದತ್ತಣ್ಗೆ. ಕಂಡೆನಾಂ
ಅನಲಾ ಕುಮಾರಿಯೊಡನಿರ್ದ್ದೆಮ್ಮ ಉದ್ಯಾನ
ಕೃತಕ ಶೈಲಾಗ್ರದಿಂ. ಲಂಕಾ ಸಮಸ್ತಮುಂ
ಕಂಡುದೆಂಬರು ಆ ಭಯಂಕರದ ದುಶ್ಶಕುನ
ದೃಶ್ಯಮಂ. ಕ್ಷಣಮಾತ್ರಮೇನೊ ಕಪಿಗಾತ್ರಮಂ
ಕೆತ್ತಿದೋಲ್ ಕಾಣಿಸಿತ್ತಂತೆ ಕೆಲಕೆಲಬರ್ಗೆ !
ಕೇಡೆಂಬರರಸುಗಳಿಗರಿತವರ್ !”
“ಸಾಲ್ಗುಮಾ
ಅಂತೆ ಕಂತೆಯ ಚಿಂತೆ. ಕಲ್ಪನಾ ಭೀತಿಯಂ
ಬಿಡು, ಕಾಂತೆ. ಪೆಣ್‌ಜಾತಿಗೇಂ ಬೇರೆ ತರ್ಕಮಂ
ವಿಧಿಸಿಹನೊ ಸೃಷ್ಟಿಕರ್ತಂ ಕಾಣೆನಾಂ ! ನಿನ್ನ  ೧೯೦
ಈ ಪೇಳ್ದುದಕ್ಕೇಂ ಸಮನ್ವಯಮೊ ಮಿಥ್ಯೆಯಾ
ಉಲ್ಕಾ ಕಥಾವಾರ್ತೆ ?…. ನೋಡು, ಮಗು ಮಲಗಿದನ್.
ಶಯ್ಯೆಯಾಗಿಸು ತೊಟ್ಟಿಲನ್…. ಮಲಗು ನೀನುಂ,
ಮನಃಪ್ರಿಯೆ. ಧನುರ್ವಿದ್ಯೆಯಂ ಪೇಳ್ವ ವೇದಮಂ,
ಈ ಪುಸ್ತಕವನೋದಿ ಬರ್ಪೆನಾಂ, ಬೇಗದಿಂ,
ನಿನ್ನೆಡೆಗೆ…. ಸಂಗವಿಲ್ಲದ ನಿನ್ನ ಕಲ್ಪನೆಗೆ
ಭೀತಿ ಸಹಜಂ, ಅಬಲೆ !….
ಸತಿಯ ಕಣ್ಣಿಗೆ ತನ್ನ
ಕಣ್‌ ಬೆಸೆದು, ಇಂಗಿತದಿ ಎವೆಯಿಕ್ಕದೀಕ್ಷಿಸುತೆ,
ಹೋಹಾತನಂ ಪ್ರಾಣನಾಥನಂ ಪ್ರಾರ್ಥನಾ
ದೃಷ್ಟಿಯಿಂ ತಡೆದು ನುಡಿದಳು ತರುಣಿ ತನ್ನೆದೆಯ        ೨೦೦
ತಲ್ಲಣಿಕೆಯಂ: “ತಿರಸ್ಕರಿಸದಿರ್, ವೀರವರ,
ಪೆಣ್ಣೆದೆಯಳಲ್ಕೆಯಂ. ಒಲಿದೊಲವಿನಾಶಂಕೆ
ಅರ್ಥವಿಲ್ಲದುದಲ್ತು. ಮಂತ್ರದಾಲೋಚನೆಯ
ಮಂದಿರದೊಳಿರ್ಪ ನಿಮಗೆಂತು ತಿಳಿವುದು ಜನಂ
ಕಾಣ್ಬ ಬಹಿರಂಗಸತ್ಯಂ? ಲಂಕೆಗೇಂ ಕೇಡೊ !
ರಾಮಸತಿಯಂ ಮಾವನಪಹರಿಸಿ ತಂದಾ
ಮೊದಲ್ಗೊಂಡು ತೋರುತಿವೆ ದುಶ್ಯಕುನಗಳ್. ನನಗೊ
ದುಃಸ್ವಪ್ನಮಯಮಿರುಳ್. ಆ ಮಹಾ ತಾಯಿಯನ್
ಹದಿಬದೆಯರಧಿದೇವಿಯಂ ಮಾವನೆಂತಕ್ಕೆ
ತಂದಾಯ್ತು. ವಶವಾಗದವಳನಿನ್ನಾದೊಡಂ
ಹಿಂದಕೊಪ್ಪಿಸುವಂತೆ ತಿದ್ದಬಾರದೆ ನಿಮ್ಮ ಆ   ೨೧೦
ತಂದೆಯಂ.”
“ಆ ತಂಗಿ, ಕಕ್ಕನ ಮಗಳ್, ನಿನಗೆ
ಸಖಿಯಲ್ತೆ ಅನಲೆ ! ಅವಳುಪದೇಶಮಂ ಕೇಳ್ದು
ನೀನುಂ ವಿಭೀಷಣಾರ್ಯನ ತೆರದೊಳೊರೆಯುತಿಹೆ
ನನಗೆ. ತಂದೆಗುಪದೇಶಕ್ಕೆ ಕೊರತೆಯುಂಟೇನ್ ?
ನಾನಿರ್ಪುದಯ್ಯನಾಣತಿಯಂತೆ ನಡೆಯಲ್ಕೆ ;
ಬುದ್ಧಿವೇಳಲ್ಕನ್ಯರಿರ್ಪರೆನಗಿಂ ಮಿಗಿಲ
ಜ್ಞಾನಿಗಳ್ ! ಮಲಗು, ನಡೆ. ಹೆದರಿಕೆಯನುಳಿ. ಲಂಕೆ,
ನಮ್ಮನ್ನರಿರ್ಪ ಈ ಲಂಕೆ, ದುರ್ಗಂ ದಿಟಂ ;
ದುಸ್ಸಾಧ್ಯಮಾರ್ಗಾದೊಡಂ !”
ಸುಯ್ದು ತಿರುಗಿದಳ್          ೨೨೦
ತರಳೆ, ಕಣ್ಮರೆಯಾಗೆ ಪತಿಯ ಧೀರಾಕೃತಿಯ
ಪೆರ್ಮೆ. ತನ್ನೆರೆಯನಾಣತಿಯಂತೆ ಸೇವಕರ್
ತೆರೆದ ಕಿಟಕಿಗಳಿಂದೆ, ಬೀಸುಗಾಳಿಯ ಕೂಡಿ
ಮನೆಯಿಂ ತೆರಳ್ವವೋಲ್, ನಡೆದುದಾ ಕಂಪುವೊಗೆ
ಪೊರಗೆ. ಸೀತಾವಾರ್ತೆಗೇಳ್ದು ಮನದುತ್ಸವಂ
ಪೆರ್ಚೆ, ವಂದಿಸುತಿಂದ್ರಜಿತುಸತಿಯನಲ್ಲಿಂದೆ
ಪೊರಮಟ್ಟನಾಂಜನೇಯಂ ರಾಮದಯಿತೆಯಂ
ಪುಡುಕಲ್ಕೆ ಮುಂದೆ.
ಗೃಹಗೃಹಚಾರಿ ಪವನಜಂ
ಪೊಕ್ಕನಲ್ಲಿಂ ಪ್ರಹಸ್ತನ ಮನೆಗೆ : ಆ ಮಹಾ
ಸೇನಾನಿ ಪಾಣ್ಬೆಯೊರ್ವಳ ಪಾದ ಮೂಲದೆಡೆ ೨೩೦
ಲೀನನಾಗಿರ್ದ ದೃಶ್ಯದ ದೈನ್ಯಮಂ ನೋಡಿ,
ಕಾಮದಿಂ ಕ್ಷಾತ್ರತೇಜಕೆ ಬರ್ಪ್ಪ ಹೀನಮಂ
ಪಳಿಯುತೆ, ಜುಗುಪ್ಸೆಯಿಂ ಸುಗಿದು, ನೆಗೆದನು ಮೇಲೆ
ಮಹಾಪಾರ್ಶ್ವನೆಂಬಿನ್ನೊರ್ವ ಸೇನಾನಿಯ ಸುಧಾ
ಶ್ವೇತ ಸೌಧಕ್ಕೆ. ತನ್ನೊಂದಸ್ತ್ರಶಕ್ತಿಯಂ
ಮಂತ್ರದಿಂದರ್ಚಿಸುತ್ತಿರ್ದನಂ ಗೌರವಿಸಿ,
ಮುಂಬರಿದನಲ್ಲಿಂ ವಿರೂಪಾಕ್ಷ ದಳಪತಿಯ
ಮನೆಗೆ. ವಿದ್ಯುಜ್ಜಿಹ್ವನಂತೆ ವಿದ್ಯುನ್ಮಾಲಿ,
ಜಂಬುಮಾಲಿ, ಸುಮಾಲಿ, ಧೂಮ್ರಾಕ್ಷ, ಘನ, ವಿಘನ,
ವಕ್ರಶಠ, ಮತ್ತ, ಯುದ್ಧೋನ್ಮತ್ತ, ಹಸ್ತಿಮುಖ,   ೨೪೦
ಶೋಣಿತಾಕ್ಷ, ಕರಾಳ, ರಶ್ಮಿಕೇತು, ಪಿಶಾಚ,
ವಜ್ರಕಾಯಂ, ಧ್ವಜಗ್ರೀವಂ, ಮಹಾಕಾಯನ್,
ಅತಿಕಾಯನ್, ಬ್ರಹ್ಮಕರ್ಣಂ ದಂಷ್ಟ್ರನಿತ್ಯಾದಿ
ನಾನಾಪ್ರಮುಖ ದೈತ್ಯನಾಯಕ ನಿವಾಸಂಗಳಂ
ಸೋದಿಸುತೆ, ಸೋವುತ್ತೆ, ಸೋಸುತೈತರುತಿರಲ್
ಪರ್ವತಂಬೋಲ್ ಇದಿರ್‌ಮಲೆತೆದ್ದು ನಿಂತುದಾ
ಕುಂಭಕರ್ಣನ ಬೃಹದ್ ಭವನ ಭೀಷಣ ಭವ್ಯ
ಗೋಪುರಂ !
“ಇದಾವ ವೀರನ ಮನೆಯೊ ? ಮೇಣಸುರ
ರಾಜನರಮನೆಯೊ ? ಮೇಣೆನ್ನ ಅನ್ವೇಷಣೆಯ
ಕೊನೆಯೊ ? ಮೇಣ್ ಕಪಿಕುಲದ ಪುಣ್ಯಪೈರಿನ ತೆರೆಯೊ ?         ೨೫೦
ನೋಳ್ಪೆ” ನೆನ್ನುತೆ ಘೂಕರೂಪಮಂ ತಾಳ್ದದಂ
ಪೊಕ್ಕನು ತಮಿಸ್ರಗುಹೆಯಂ ಪುಗುವವೋಲ್. ಪೊಕ್ಕು,
ಬಟ್ಟೆದಪ್ಪಿದನದರ ಜಟಿಲರಚನೆಯ ವಿಪುಲ
ವಿಸ್ತೀರ್ಣದೊಳ್ : ಸಹ್ಯದಾಗುಂಬೆಯಟವಿಯೊಳ್
ಬಲಗಿಯ ಬೃಹತ್ತರುಶ್ರೇಣಿ ಕಿಕ್ಕಿರಿದವೋಲ್
ಪಂಕ್ತಿಪಂಕ್ತಿಸ್ತಂಭಗಳ್, ಸ್ತೋಮ ಶೈಲಿಯಿಂ,
ದೈತ್ಯೇಂದ್ರನಾಳುಗಳ್ ದೈತ್ಯಾಜ್ಞೆಯಂ ಪೊತ್ತು
ದೈತ್ಯಕ್ರಮಂ ನಿಲ್ವವೋಲ್ ನಿಂದಿರ್ದುವಗಣಿತಂ,
ಗಣಿತಂ ದಣಿಯುವಂತೆ : ಮಧುಕಕ್ಷಲಕ್ಷಗಳ್
ಕ್ಷೌದ್ರಪಟಲದೊಳಮಿತ ಸಂಖ್ಯೆಯಿಂದಿರ್ಪ್ಪವೊಲ್        ೨೬೦
ಚಿತ್ತಭ್ರಮೆಯನೊಡರಿಸುತ್ತಿರ್ದುವಲ್ಲಿಯಾ
ಕೋಣಕೋಣದ ಕೋಟಿ ಕೋಣೆಗಳ್, ಮತ್ತಮಾ
ಮಾರುತಿಯ ಬುದ್ಧಿ ಬೆರಗಾಗೆ ಪೆರ್ಬಂಡೆಗಳ್,
ಪೆರ್ಮರದ ದಿಮ್ಮಿಗಳ್, ಬಲ್ದಡಿಗ ನೇಣುಗಳ್,
ಕುಂಕುಮಂವೆರಸಿರ್ದ ಕೆಮ್ಮಣ್ಣಿನೊಟ್ಟುಗಳ್,
ನುಣ್ಮಳಲ್ವೆಟ್ಟುಗಳ್ ಮೆರೆದಿರ್ದುವಲ್ಲಲ್ಲಿ,
ಬಗೆಗೆ ತರ್ಪಂತೆವೋಲ್ ಬಲ್ಗರಡಿಯಂ : “ದಿಟಂ
ರಾಕ್ಷಸವ್ಯಾಯಾಮರಂಗಮಿರವೇಳ್ಕುಮೀ
ದೃಶ್ಯಾದ್ಭುತಂ !” ಎನುತ್ತೆ ಮುಂಬರಿಯಲದೊ ಮತ್ತೆ
ಗೋಚರಿಸಿತಿನ್ನೊಂದು ಸೋಜಿಗಂ. ಕಾಳ್ಕೋಣ          ೨೭೦
ಕಡವೆ ಸಾರಗ ಜಿಂಕೆಗಳ ಕವಲ್ಗೊಂಬುಗಳ್,
ತಿರುಗೊಂಬುಗಳ್, ನೀಳ್ದಕೊಂಬುಗಳ್ ; ಪಂದಿ ಪುಲಿ
ಭಲ್ಲೂಕ ಸಿಂಹ ಗಜ ಖಡ್ಗಮೃಗಮಿತ್ಯಾದಿ
ಜಂತುಗಳ ದಂತ ನಖ ಚರ್ಮಗಳ್ ; ಮೇಣ್ ಶಿಲ್ಪ
ಕರ್ಮಗಳ್ ಕಂಭಕಂಭಗಳಲ್ಲಿ, ಬಾಗಿಲಲಿ,
ಜಗಲಿಯಲಿ, ಗೋಡೆಗೋಡೆಗಳಲ್ಲಿ, ಕಣ್ಣಲೆವ
ಕಡೆಗಳಲಿ, ಸುತ್ತಣೆಲ್ಲೆಡೆಗಳಲಿ ಮೆರೆದುವಾ
ಕುಂಭಕರ್ಣನ ಬಿನದವೇಂಟೆಯ ಕವರ್ತ್ತೆಗಳ್,
ತೋರುಮನೆಯಲ್ಲಿ ! ನಡೆಗೊಳೆ ಮತ್ತೆ ಮುಂತಣ್ಗೆ,
ಪ್ರಾಣಿಸಂಗ್ರಹಶಾಲೆಯಂ ಪ್ರವೇಶಿಸಿದವೋಲ್            ೨೮೦
ಕಾಣಿಸಿದುವಲ್ಲಲ್ಲಿ ನಾನಾ ವಿಧದ ವನದ
ಜಲದ ಗಗನದ ಜೀವಿಗಳ್ : ಶಬ್ದಮಯಮಾಯ್ತು
ಚಿತ್ರ ಚಿತ್ರಸ್ವರದಿ ಶ್ರೋತ್ರೀಂದ್ರಿಯಂ. ಚಿರತೆಗಳ್,
ಪೆರ್ಮೊಸಳೆ ಪೆರ್ಬ್ಬಾವು ಪೆರ್ಬ್ಬಂದಿ ಪೇರಾನೆ
ಪೆರ್ಬುಲಿ ಪೆಡಂಭೂತಗಳ್, ಕರಡಿಗಳ್, ಸಿಂಹಗಳ್,
ಭೀಕರದ ಬೇಂಟೆನಾಯಿಗಳಿರ್ದುವಾ ಜವನಂ
ಜವಂಗೆಡಿಸುವಾ ಗಂಡುವೀಡಿನಲಿ. ಎಲ್ಲಿಯುಂ,
ದೀರ್ಘದೇಹದ ದೈತ್ಯರಲ್ಲಾದೊಡಂ ಮತ್ತೆ
ಪ್ರಾಣಿಗಳೊಳಾದೊಡಂ, ಪೆಣ್ಣೆಂಬ ಸುಳಿವಿರದೆ
ಬರಿ ಗಂಡುವೀಡಾಗಿ ಭೀಷಣತೆವೆತ್ತುದಾ        ೨೯೦
ಕುಂಭಕರ್ಣಪ್ರಪಂಚಂ ! “ಏಂ ವಿಚಿತ್ರಮೋ
ಈ ಅಮರ್ತ್ಯ ಭೂ, ಲಂಕೆ !” ಎನುತೆ ಮುಂದಕೆ ಮತ್ತೆ
ಸಾರುತಿರಲದೊ ಕೇಳ್ದುದಯ್ ಮಹಾಭೀಳತರ
ಢಕ್ಕಢಿಕ್ಕಿಧ್ವಾನ ಭೈರವಂ ! ಕಿವಿ ನಿಮಿರಿ
ಕಳವಳಿಸುತಾಲಿಸಿದನಾಂಜನೇಯಂ ಮನೆಯ
ಕಟ್ಟಡವನಲುಗಿಪಾ ಗುದ್ದುಸದ್ದಂ ! ಮತ್ತೆ
ಚೋದ್ಯಮಿದು ವಾಸಗೃಹದೊಳಗೆನುತೆ ಮುಂಬರಿಯೆ
ಪಿಡಿಯುತಾ ಧ್ವಾನಧ್ವಮಂ, ಸಿಡಿಲ್ ಸಿಡಿಲೊಡನೆ
ಮುಷ್ಟಿಯುದ್ಧಂಗೆಯ್ವವೋಲ್, ನೆಲಂ ಕಂಪಿಸಲ್
ಸಡಿಲ್ದುರುಳ್ವ ಗಂಡಶೈಲಮಿನ್ನೊಂದರೆಯ      ೩೦೦
ಬಂಡೆಗೆ ತಗುಳ್ದವ್ವಳಿಸುವೊಲ್ ಸಮೀಪಿಸಿತ್ತಾ
ಧೈರ್ಯಸ್ಖಲನಕಾರಿ ಕೋಲಾಹಲಂ ! ಮುಂ ಪೋಗೆ
ವೋಗೆ, ಕಡೆಗೆ ಕಂಡುದು ಆ ಭಯಂಕರ ನಿನದ
ಕಾರಣಂ, ದೈತ್ಯ ಭೀಮನ ಬೃಹದ್ ವ್ಯಾಯಾಮ
ವೇದಿಕಾಪ್ರಾಂಗಣಂ :
ಕೆಂಜೊಡರ್ ದೀವಿಗೆಯ
ಬೊಂಬಾಳಗಳ ರಾಜಿ ದೆವ್ವದಾರಾಧನೆಯ
ನೀರಾಜನಂಗಳೋಲ್ ರಾರಾಜಿಸಿತು, ನೆಲಂ
ಕೆನ್ನೀರೊಳಳ್ದ ಕೆಂಗೂಳೆರಚಿದಂತೆಸೆಯೆ,
ಜಪಾಕುಸುಮ ಕುಂಕುಮ ಶೋಭಿತಂ. ನೋಳ್ಪರಾ
ಕಣ್ಗಳ್ಗೆ ಮುಸುಗಿತೊಂದಸ್ಪಷ್ಟತೆಯ ಮರ್ಬ್ಬು,  ೩೧೦
ಮನಕೆ ಮಾಯೆಯ ಮೋಹಮಂ ಬೀಸಿ. ನೆಳಲ್ಗಳುಂ
ಜೀವವಸ್ತುಗಳೊಲಭಿನಯಿಸಿದುವು ನಾಟ್ಯಮಂ
ಕುಡ್ಯಕಂಭಗಳೊಡನೆ ಮೇಳಮಂ ಕಟ್ಟಿ. ಆ
ರಕ್ತದೀಪಾರ್ಚಿ ರೋಚಿಯ ವರ್ಣಮನೆ ಪೋಲ್ವ
ಕಟಿವಸ್ತ್ರ ಮಾತ್ರ ಧಾರಿಗಳಲ್ಲಿ ಪೇರೊಡಲ
ಜಟ್ಟಿಗಳ್, ಪ್ರೇಕ್ಷಣಪ್ರಾಣರೆನೆ, ಸುತ್ತುಂ
ವಿಜೃಂಭಿಸಿರೆ, ಗೂಳಿ ನಾಲ್ಕಂ ಮಲೆತುಮೊರ್ವ ಕಲಿ
ಮಲ್ಲಗಾಳೆಗವಾಡುತಿರ್ದನು, ಮರುತ್ಸುತನ
ಪೆರ್ಮೆಗೆ ನಿಮಿರ್ವಂತೆ ರೋಮಾಂಚನಂ ! “ದೈತ್ಯ
ವೀರರೊಳಗಾವನೀತನೊ ? ದಿಟಂ ಪಟುಭಟಂ !         ೩೨೦
ನಮಗೆ ಮಲೆಯಲ್ ತಕ್ಕನೀತನದಟಂ !” ಎನುತ್ತೆ
ಮೆಚ್ಚಿ ನೋಡಿದನಾ ಮಹಾದೇಹಮಂ : ಹೇರಿ
ಬಂಡೆಗೆ ಬಂಡೆಯಂ ಗಿರಿಯ ರಚಿಸಿದರೆನಲ್ಕೆ,
ಬೇರ್ಗಂಟುಗಳ್ ಪಿಣಿಲ್ ಪಿಣಿಲೆದ್ದು ಪೆರ್ಮರನ
ಮೆಯ್ಗೆ ಪೆಣೆದುವೆನಲ್ಕೆ, ಭೈರವನೊಡಲ ಸುತ್ತಿ
ನಿದ್ರೆಯಿಂದೇಳ್ವ ಪೆರ್ಬಾವ್ ಮೈಮುರಿವೆನಲ್ಕೆ
ಕುತ್ತಿಗೆಯ ಭುಜದ ಬೆನ್ನಿನ ಜಾನು ಜಂಘೆಯ
ವಕ್ಷದೇಶಸ್ನಾಯು ವಜ್ರಖಂಡಗಳುರ್ಬಿ
ಮಾಂಸಜೀವಿಯ ಮಾಂಸಲಭ್ರುಕುಟಿಗಳ ತೆರದಿ
ತೋರ್ದುವು ಅಗುರ್ವಾಗಿ. ಪೊದೆ ಪೊದೆ ಕೆದರ್ದ ತಲೆ  ೩೩೦
ಮಾಂಕರಿಸಿತದ್ರಿ ಶಿಖರದ ಮುಖವನಾವರಿಸಿ
ಬೆಳೆದಟವಿಯಂ. ಇಭಸ್ಥೂಲತೆಯನಾಂತೊಡಂ
ಚಕಿತ ಹರಿಣನ ಚಲಚ್ಚರಣ ವೈಖರಿಯಿಂದೆ
ಚಿರತೆನೆಗೆಯಂ ಸರ್ಪರಸನ ವಿನ್ಯಾಸಮಂ
ಬಳ್ಳಿಮಿಂಚಂ ಮೆರೆಯುತಿರ್ದನು ನಿಶಾಚರಂ,
ಕುಪಿತ ಪುಂಗವ ಚತುಃಶಕ್ತಿ ಚಾತುರ್ಯಮುಂ
ಸೋಲ್ತು ಸುಯ್ಯುತ್ತೊರಲ್ದುರ್ಚಿ ಗೋಮಯವಿಕ್ಕಿ
ನೆಲಕ್ಕುರುಳ್ವವೋಲ್ !
ತೋಳ್‌ಮೊದಲನಂಗಯ್ಗಳಿಂ
ಚಪ್ಪರಿಸಿ, ತೋರ ತೊಡೆಗಳನಪ್ಪಳಿಸಿ, ಚಿಮ್ಮಿ
ಪುಟನೆಗೆದು ಕುಪ್ಪಳಿಸುತಟ್ಟಹಾಸಂಗೆಯ್ದು      ೩೪೦
ನಿಮಿರಿ ನಿಂತನು ಚವರಿಮೀಸೆಯ ಮುಗುಳ್‌ನಗೆಯ
ವ್ಯಾಯಾಮ ವ್ಯಸನಿ. ತೆಕ್ಕನಲ್ಲಿಂದೊಯ್ದರಾ
ಕಾಳೆಗದ ಗೂಳಿಗಳ ದಡಿಗ ದೇಹಂಗಳನ್
ರಾಕ್ಷಸ ಭಟರ್. ಮತ್ತೆ, ನೋಡುತಿರ್ದ್ದಿರ್ದ್ದಂತೆ,
ಪುಗಿಸಿದರ್ ಪೊಚ್ಚಪೊಸ ಕಾಡಾನೆಯೊಂದನಾ
ದೈತ್ಯಸಿಂಹನ ಮೃತ್ಯುಸಮ್ಮುಖಕೆ. ಉಸಿರ್ ಕಟ್ಟಿ
ಕಂಟಕಿತಮಾಯ್ತಂಜನಾಸುತನ ಕೌತುಕಂ.
ಮುಂದೆ ಏನ್ ಎಂಬನಿತರೊಳ್ ತಿಂದು ತೇಗಿತಾ
ಪ್ರಶ್ನೆಯಂ ನಡೆದ ಘಟನಾದ್ಭುತಂ :
ರೋಷದಿಂ
ಘೀಂಕರಿಸಿ ರಂಗಮಂ ಪೊಕ್ಕಾ ಮದದ್ವಿಪಂ    ೩೫೦
ಬೆರ್ಚಿ ನಿಂದುದು ಘಕ್ಕನೆಯೆ, ಮುಂದೆ ಆಕಳಿಸಿತೆನೆ
ದೈತ್ಯದೇಹಪ್ರಪಾತಂ ! ಕೀಲಿಸಿತು ದಿಟ್ಟಿ.
ಕೀಲಿಸಿತು ನೆಲಕೆ ಕಾಲ್. ಕೀಲಿಸಿತು ಮನಕೆ ಮೆಯ್.
ಕೀಲಿಸಿತುಸಿರ್. ಕೀಲ್ಗೊಂಬೆಯೋಲಿರ್ದುದಾನೆ,
ಒಂದೆರಳ್ ಮೂರ್ ಚಣಂ. ಕೆಂಬೆಳಕಿನಾ ಮಾಯೆ
ತಳಿದ ಮಂಕಿಂದೊಯ್ಕನೆಳ್ಚತ್ತು ತಿಳಿದವೋಲ್
ತಲೆಯೊಲೆದು, ಸೊಂಡಿಲಂ ತೊನೆದು, ನಿಡು ಪನೆಗಳಂ
ತೂಗಿ, ಮೊರಗಿವಿಗಳಂ ಬೀಸಿ, ಘೀಳಿಟ್ಟೊಡನೆ
ಮುನ್ನುರ್ಗ್ಗಿ ಹೋರಾಡಲನುವಾದುದಾ ಹೋರಿ
ಹೇರಾನೆ. ನಿಶ್ಚಲಂ ನಿಂದು ಕಣ್‌ಬೆಸೆದಿರ್ದ     ೩೬೦
ಮಲ್ಲರಕ್ಕಸನದಂ ಕಂಡು, ಬಂಡೆ ಮಂಡೆಯ
ಗದೆಯ ತೋಳಿನ ವಜ್ರಮುಷ್ಟಿಯಿಂ ಗುರ್ದ್ದಿದನ್
ಪಣೆಗೆ. ಪೆಟ್ಟಿಗೆ ಸೆಡೆತು ಚೀರಿದಾ ಮದಹಸ್ತಿ
ಮತ್ತೆ ಸೊಂಡಿಲನೆತ್ತಿ ನುಗ್ಗಿತು, ಮಲೆತು ಕೆರಳಿ,
ತನಗೆಣೆಯ ಗಾತ್ರದ ನಿಶಾಚರನ ತನುಗಿರಿಯ
ಸಾನುವಪ್ರಕ್ರೀಡೆಗೆಂಬಂತೆ. ದಂತಾಸಿ
ಕೀಸಿತಾತನ ತೊಡೆಯ ಮೊರಡಿಯಂ. ಗಜಘಟಾ
ಕುಂಭಸ್ಥಲಂ ಢಿಕ್ಕಿ ಹೊಡೆದುದು ಹೊಕ್ಕುಳೆಡೆಗಾ
ಜಟ್ಟಿಗನ ಹೊಡೆಗೆ. ಮೇಣಿಭಕರಂ ಪಗೆಯೊಡಲ
ನೇಮಿಯಂ ಸುತ್ತಲೆಳಸಿಯುಮದರ ಬಿತ್ತರಕೆ  ೩೭೦
ಬೇಸರುತ್ತಿರೆ, ರಕ್ಕಸನ ಬಾಹು ಪೆಣೆದುದಾ
ಹಸ್ತಿ ಹಸ್ತಕೆ ; ತನ್ನ ಮಸ್ತಕವನೊತ್ತಿದನ್
ಹಸ್ತಿ ಮಸ್ತಕಕೆ ; ಮತ್ತೊಂದು ಕಯ್ಯಿಂದದರ
ರದಮಂ ತುಡುಕುತದುಮಿದನ್, ಹೆಪ್ಪುಗಡುವವೊಲ್
ವಾರಣಪ್ರಾಣಮಾರ್ದುರ್ವರೆಗೆ ಪದಂಗೊಟ್ಟು
ನಟ್ಟು ಚಿಮ್ಮಿದನಚಲ ಭಾರಮಂ. ಕೋಡುಡಿದು,
ಮುಂಗಾಲ್ಗಳೆದ್ದು, ಹಿಂಗಾಲ್ಗಳುಂ ತತ್ತರಿಸಿ,
ಬೆನ್ನಡಿಯಾಗಿ ಬಿದ್ದುದು ಮದದ್ವಿರದಮೊಳ್ಕಿ
ಕೆನ್ನೆತ್ತರಂ. ಮತ್ತೆ, ಕೇಳ್, ಮೇಲೆಳ್ದುದಿಲ್ಲಾ
ಮಹಾಪ್ರಾಣಿ !
ನಿಡುಸುಯ್ದನಾಂಜನೇಯಂ : “ದಿಟಂ            ೩೮೦
ಇನ್ನನ್ನರೊಂದು ನೆರಮಿರೆ ಅಜೇಯಮೆ ವಲಂ
ಈ ಲಂಕೆ ! ಈ ದೈತ್ಯನನ್ನೆಂತು ಗೆಲ್ಲುವೆವೊ
ಮುಂದೆ ? ಧರ್ಮಮೆ ಸಹಾಯಂ ನಮಗೆ !” ಚಿಂತೆಯಿಂ
ಪೊರಮಟ್ಟನಲ್ಲಿಂದೆ, ಪಾತಾಳಮಂ ಪೊಕ್ಕು
ಬರ್ದುಕಿ ಬಂದವನಂತೆವೋಲ್. ಅರಿಲ್ವಟ್ಟೆಯಂ
ಸಮೀಕ್ಷಿಸಿದನರಿಯೆ ಪೊಳ್ತಂ : ಮಿನುಗುತಿರ್ದತ್ತು
ಮೃಗಶಿರಂ ಪಶ್ಚಿಮವರ್ತಿಯಾಗಿ. ಮಿರುಗಿದುವು
ಉತ್ತರದ ಬಾನ್‌ಬಿತ್ತಿಯೊಳ್ ಸಪ್ತಋಷಿಗಣಂ.
ಏರ್ದ ತಿಂಗಳ್‌ಜೊನ್ನಮಂ ಮರ್ಬುಗೈದತ್ತು
ಹೊಗೆಯ ಹಿಟ್ಟಿನ ಮಾಗಿಮಂಜು. ದೇವಿಯ ದೆಸೆಗೆ       ೩೯೦
ಕುದಿಕುದಿದು, ಹುಡುಕಿ ನಡೆದನು ಬೇಗಬೇಗನೆ
ಸಮೀರಾತ್ಮಜಂ.
ಗೃಹದಿಂದೆ ಗೃಹಕೆ, ನೋಟದಿಂ
ನೋಟಕ್ಕೆ, ಶ್ರದ್ಧೆಯಿಂದೊರ್ಮೆ ಶಂಕೆಯಿನೊರ್ಮೆ,
ರೋಷದಿಂದೊರ್ಮೆ ರೋಸುತ್ತೊರ್ಮೆ, ಹೇಸಿಗೆಯ
ಕಾಣ್ಕೆಗಳಿಗವಚರುತ್ತೊರ್ಮೆ, ಮಹಿಮಾಸ್ಪದದ
ದೇವಭಕ್ತಿಯ ಧರ್ಮದೃಢತೆಯ ಮಹೋದಾರ
ವೈಭವಕೆ ಬಗೆವೆರ್ಚುತುತ್ಸಾಹಗೊಳುತೊರ್ಮ್ಮೆ
ತರತರದ ಭಾವಾನುಭವಗಳಿಂ, ಕಾವ್ಯದೊಳ್
ಪ್ರವಹಿಪ ನವರಸಂಗಳೊಳ್ ತೇಲ್ವ ಸಹೃದಯಂ
ತುತ್ತತುದಿಗೆಂತು ರಸಸರ್ವಕೆ ಸಮಾಧಿಯಹ  ೪೦೦
ಶಾಂತಕೆ ಸಮೀಪಿಸುವನಂತು, ಸಾರ್ದನು ಬಳಿಗೆ
ವಿಭೀಷಣ ನಿಕೇತನಕೆ. ಸಾತ್ವಿಕ ಸುಗಂಧದಿಂ
ಸ್ವಾಗತಂ ಬಯಸಿ, ವೀಣಾಮೃದುಲವಾಣಿಯಿಂ
ಪಾಡುತೆ ಸುಖಾಗಮನ ಗೀತೆಯಂ, ಹೃದಯಮಂ
ತೆರೆವವೋಲ್ ಸನ್ನೆಯಿಂ ಕರೆವವೋಲ್ ಶೋಕಮಂ
ಮೀಂಟಿ ಬಾಳಿನ ಗೋಳನೊರೆವವೋಲಿರ್ದುದಾ
ಶ್ರೀಮಂತ ಮಂದಿರ ಶ್ರೀ. ಕದಲಿಸಿತು ಕಂಪು
ಹನುಮ ಹೃದಯದ ವಜ್ರಮಂ. ಕಣ್‌ ಪನಿಯುವಂತೆ
ತಂತಿಯಿಂಪಿಗೆ ಕರಗಿತಂತಃಸ್ಮೃತಿಯಲಂಪು.
ಪಶುಪಕ್ಷಿ ನಾನಾ ಅಮಂಗಳಾಕೃತಿಯಲಂಪು. ೪೧೦
ತಳೆಯುತೊಂದಾದ ಮೇಲೊಂದನೆಂತುಂ ಪುಗಲ್
ಸಮರ್ಥನಾಗದೆ, ಮನದಿ ಸಂತೋಷಿಸಿದನಲ್ಲಿ
ಕಲ್ಪಿಸಿ ಶುಭಸ್ನೇಹಮಂ. ದೇವಿ ಜನಕಜೆಗೆ,
ದಶರಥಕುಮಾರಂಗೆ, ಕಪಿಕುಲ ನರೇಂದ್ರಂಗೆ,
ಮೇಣಂಜನಾ ಮಾತೃದೇವಿಯ ಮಗಂಗೆನಗೆ
ದೊರೆಕೊಳ್ವುದಿಲ್ಲಿ ಸಜ್ಜನಸಂಗಮೆನುತ್ತಾ
ಸಮೀರಜಂ, ತಾಳುತೋಂಕಾರ ಶುಭರೂಪಮಂ,
ಪೊಕ್ಕನು, ವಿಪಂಚೀಕ್ವಣನ ಸಂಗಿ ತಾನಾಗಿ,
ಆ ವಿಭೀಷಣ ವೇಶ್ಮಮಂ.
ಕತ್ತಲೆಯೆ, ಬೆಳಕೆ,
ಚಿತ್ತಮಿಂದ್ರಿಯಾದವಂಗೆ ? ನೋಡಲೆಳಸಿದೊಡೆ          ೪೨೦
ಕಣ್ಣಾಗಿ, ಕೇಳಲೆಳಸಿದೊಡೆ ಕಿವಿಯಾಗಿ, ಮೇಣ್
ಜನದ ಮನದಂತರಂಗವನರಿಯಲವರಾ
ಮನಃಪ್ರಚೋದನೆಯಾಗಿ ಸುಳಿದನಲ್ಲಿ ಅನೇಕ
ಲೋಕದಲಿ. ಕಂಡಾ ಕಲೆಯ ನಯದ ಅಭಿರುಚಿಯ
ಸಂಯಮದ ಸಾತ್ವಿಕತೆ ಸೊಗಸುತೈತರುತಿರಲ್
ಮುಂದೆ ಮೆರೆದುದು ದೃಶ್ಯಮೊಂದತಿಸುಂದರಂ :
ಚೆಲುವೆ ಅನಲಾ ಕನ್ಯೆ, ಮಗಳಾ ವಿಭೀಷಣಗೆ,
ರತ್ನಕಂಬಳ ಚಿತ್ರವೇದಿಕೆಯ ಮೇಲಿರ್ದು
ಮೀಂಟಿದಳ್ ತಂತಿಯಿಂಚರವೊನಲ್‌ಬೀಣೆಯಂ,
ಮಂದಿರದ ಮರದ ಮಣ್ಣಿನ ಜಡಪದಾರ್ಥಗಳ್‌            ೪೩೦
ಪ್ರತಿರಣಿಸುವೋಲ್. ನಾದರೂಪಿ ಮರುತಾತ್ಮಜಂ
ಮೋದಮೂರ್ಛೆಗೆ ಸಂದನವ್ಯಕ್ತ ಶೋಕಮಯ
ಸ್ವರಸುಖವನೀಂಟಿ. ಬಳಿಯೊಳೆ ವಿಭೀಷಣನ ಸತಿ
ಸರಮೆ ಕುಳ್ತಿರಲನತಿದೂರದೊಳವಂ ತನ್ನ
ಮಗಳ ಕಲೆಯಂ ಮೆಚ್ಚಿ, ಕಣ್‌ಮುಚ್ಚಿ, ಕಿವಿದೆರೆದು
ಸವಿಯುತಿರ್ದನು ನಿಶ್ಚಲಂ. ‘ಲಂಕೆಗತಿಥಿಗಳೊ?’
ಎಂಬ ಶಂಕೆಗೆ ಸೋಲ್ತು ನೋಡುತಿರೆ ಪವನಜಂ,
ಬೀಣೆ ನಿಂತುದು ತೆಕ್ಕನೆಯೆ; ಬೆಚ್ಚಿದಳ್ ಕುವರಿ;
ಸುತ್ತ ನೋಡಿದಳಾರ ಬರವನೊ ನಿರೀಕ್ಷಿಸುವ
ತೆರದಿ. ಕಣ್‌ತೆರೆದ ತಂದೆಯ ಪ್ರಶ್ನೆಯಿಂಗಿತಕೆ            ೪೪೦
‘ಆರೊ ಬಂದಂತಾದು’ ದೆನೆ, ಮಗಳ ಮಾತಂ
ಸಮರ್ಥಿಸುತೆ ತಾಯ್‌ ‘ದಿಟಂ; ಪುಳಕಿಸುತ್ತಿದೆ ನನ್ನ
ತನು’ ವೆನಲ್, ಮುಗುಳುನಗೆ ನಕ್ಕನ್ ವಿಭೀಷಣಂ;
ಧ್ವನಿಯ ಗಾಂಭೀರ್ಯಕ್ಕೆ ಗಾಳಿಯ ಮಗನ ಮನದ
ಗೌರವಮರಳಲೊರೆದನಿಂತು : “ಸೋಜಿಗಮೇಕೆ ?
ದಿವ್ಯಕಲೆಯೆಲ್ಲಿರ್ದೊಡಲ್ಲಿಗೈತಹರಲ್ತೆ ದಲ್
ಪಗಲಿರುಳ್ ವಿಶ್ವಮಂ ಸಂಚರಿಸಿ ರಕ್ಷಿಸುವ
ಸತ್‌ಶಕ್ತಿಗಳ್, ದೇವತಾತ್ಮಗಳ್ ? ನಮ್ಮವೋಲ್
ಅವರುಂ ರಸಪ್ರಿಯರ್. ನಮಗಿಂ ಮಿಗಿಲ್ ! ರಸಮೆ
ಅವರುಣ್ಬಮೃತಮಲ್ತೆ ?”
“ಮನಮೇಕೊ ಬೆಚ್ಚುತಿದೆ ! ೪೫೦
ಸುಖವೊ ದುಃಖವೊ ತಿಳಿಯೆನೆದೆಯನಳ್ಳಾಡುತಿದೆ !”
ಎಂದ ಮಗಳಿಗೆ ತಂದೆ:
“ನಿನ್ನ ಸಂಗೀತಮುಂ
ಲೋಕ ಶೋಕವನೆಲ್ಲಮಾಲಿಪರ ಹೃದಯದೊಳ್
ಕದಡುವೋಲಿರ್ದತ್ತು. ವತ್ಸೆ, ಹರಯದ ಮಹಿಮೆ
ಅಂತುಟೆ ವಲಂ !”
ಸರಮಾದೇವಿ ಪತಿಯಂ ಕುರಿತು :
“ಆಶೋಕವನಿಕಾ ಮಧ್ಯೆ ರಾಮನ ತಪಸ್ವಿನಿಯ
ಕಂಡಾ ಮೊದಲ್ಗೊಂಡು, ಮೇಣಾ ಮಹೀಯಸಿಯ
ವಾಗಮೃತಧಾರೆಯಂ ಸವಿದಾ ಮೊದಲ್ಗೊಂಡು
ಅನ್ಯಳಂತಿಹಳೆಮ್ಮೆ ಕನ್ನೆ !”
ಮರುತಾತ್ಮಜನ
ಮನದೊಳಾಸೆಯ ಬಿಸಿಲ್ ಪೊಳಪನುಜ್ಜಳಿಸಿದಾ         ೪೬೦
ಮಾತುಗಳ್ ಕವಿಸಿದುವು ದುಗುಡದ ಮುಗಿಲ ಮರ್ಬ್ಬನ್
ದೈತ್ಯವರ್ಯನ ಮುಖ ಪ್ರಸನ್ನತೆಗೆ ! ಸಂಕಟದ
ಛಾಯೆ ತಂದೆಯ ಕಣ್ಗೆ ಸುಳಿದುದನರಿತು, ಇಂತು
ಅನಲಾ ಕುಮಾರಿ:
“ಬೊಪ್ಪಯ, ಮುಚ್ಚುವಿರೆ ನನಗೆ
ನಿಮ್ಮಾತ್ಮಮಂ ಸುಡುತ್ತಿರ್ಪಳಲ ಬೇಗೆಯಂ ?
ನನಗಿನ್ ಮಿಗಿಲ್ ದುಃಖಿಗಳ್ ನೀಮ್, ಧರಾತ್ಮಜೆಯ
ದೆಸೆಗೆ ! ಮರುಗಿಹಿರಿ ನೀಂ ಪಿರಿಯಯ್ಯಗಾಗಿಯುಂ ;
ಮತ್ತೆಮ್ಮ ಕುಲಕೆ ಕೀರ್ತಿಗೆ ದೇಶದವನತಿಗೆ
ಧರ್ಮಾಭ್ಯುದಯಕಾಗಿಯುಂ. ಅರಸನೋಲಗದಿ
ನಿಮಗೆ ನಿಮ್ಮಣ್ಣಂಗೆ ಮೇಣಿತರ ಮುಖ್ಯರಿಗೆ     ೪೭೦
ನಿಚ್ಚಮುಂ ನಡೆವ ಚರ್ಚೆಯ ತೋಟಿಯೇಂ ನಮಗೆ
ತಿಳಿಯದೆಂಬಿರೆ ?…. ನಿನ್ನೆ ಸಂಜೆ, ಲಂಕೆಗೆ ಲಂಕೆ
ಕಂಡುದಾ ನೋಟಮಂ. ಬಿಳ್ದುದೊಂದುರಿವರಿಲ್
ನಗರದುತ್ತರ ಗಿರಿಯ ನೆತ್ತಿಯಲಿ !…. ದೇವಿಯನ್,
ಆ ನನ್ನ ಗುರುದೇವಿಯನ್, (ಒಯ್ಯನಿಟ್ಟಳ್ ಕಯ್ಯ
ವೀಣೆಯನ್, ಗದ್ಗದವನೆಂತಾದೊಡಂ ಸಂಯಮಿಸಿ ;
ಕಣ್ಬನಿಯನೊರಸಿದಳ್ ಸೆರಗುದುದಿಯಿಂ. ಮತ್ತೆ)
ನಿರ್ಭಾಗ್ಯೆಯನ್ ಮರಳಿ ಪತಿಯೆಡೆಗೆ ಕಳುಹದಿರೆ,
ಲಂಕೆಗಿನ್ ಸುಖಮೆಲ್ಲಿ ? ಲಂಕೆಗಿನ್ ಶುಭಮೆಲ್ಲಿ ?
ಲಂಕಿಗರ್ ನಮಗೆ ನೆಮ್ಮದಿಯೆಲ್ಲಿ ?…. ಬೊಪ್ಪಯ್ಯ       ೪೮೦
ಮಿಡಿಯಲೊಳ್ಪನೆ ನುಡಿಯುವೀ ನನ್ನಿನಿಯ ಬೀಣೆ
ಮಿಂಟಲೀಗಳ್ ಮುನಿದು ಪರಿತಪಿಸುತಿದೆ ; ಸುಯ್ದು
ಶಪಿಸುತಿದೆ ! ನೀಮಿಂದು ಕೇಳ್ದುದೆಂಬುದುಮದರ
ಗಾನಮಲ್ತನುರೋದನಂ !…. ಕೇಳಿಮಿನ್ನುಮಾ
ಓಂಕಾರದಾಲಾಪನೆಯ ತೀಕ್ಷ್ಣಸಂಕಟಂ
ತುಂಬಿದೋಲಿದೆ ಮನೆಯ ತುಂಬಿಯಂ !” ಮೂವರುಂ
ಅಚ್ಚರಿಯಿನಾಲಿಸುತ್ತಿರೆ, ಒಯ್ಯನೊಯ್ಯನೆಯೆ
ದೂರ ದೂರಂ ನಡೆದುದಾ ನಾದಮಶ್ರುತಂ
ಸ್ಮೃತಿಮಾತ್ರಮಾಗಿ !
“ಇನ್ನನ್ನರಿಂ ಕ್ಷೇಮಿಯೀ
ಲಂಕಾ ಕನಕಲಕ್ಷ್ಮಿ !” ಎನ್ನುತಲ್ಲಿಂ ಮುಂದೆ     ೪೯೦
ನಡೆಗೊಳುತ್ತಾಂಜನೇಯಂ ಏರ್ದನುತ್ತಮ
ತ್ರಿಕೂಟಮಧ್ಯಮ ಶಿಖರ ಶಿರಕಾಗಿ. ಬರಬರುತೆ
ದರ್ಶನಕಗುರ್ವಿದುದು, ಪರ್ವತಂಬೋಲ್, ಬಂಡೆ
ಬಂಡೆಯ ಮಸೆದು ಬೆಸೆದು, ಕೋಟಾವಲಯ ಭಿತ್ತಿ.
ಕಾಣ್ಬುದೆ ತಡಂ ತಿಳಿದನರಮನೆಯೆಂದು ದೈತ್ಯ
ರಾಜೇಂದ್ರನಾ. ನೊಣಂ ಸುಳಿದೊಡಮದಂ ಬೆಳಗಿ
ತೋರ್ಪಂತೆ, ಮೇಲೆಕೆಳಗೆತ್ತಲುಂ ಮೆರೆದತ್ತು
ಸುತ್ತಿ ನೆಯ್ದಾ ಸೊಡರ ಶೈಲಿ. ಪೆರ್ಬಾಗಿಲಂ
ಕಾವಲಲೆಯುವ ಕೈದುಕಾರನ ತನುಚ್ಛಾಯೆ
ಮಂದಮಂದಂ ಚಲಿಸಿದುದು ಧೀರಗತಿಯಿಂ,  ೫೦೦
ಬೃಹದ್‌ಭೀತಿಯೋಲ್, ಭಿತ್ತಿಪಟದಲ್ಲಿ ! ಮಸ್ತಕದಿ
ಮೆರೆದುದುಕ್ಕಿನ ಶಿರತ್ರಂ ; ಹಸ್ತದಿ ಶತಘ್ನಿ.
ರಕ್ಷಿಸಿತ್ತಾ ಭೀಮದೈತ್ಯನ ಶರೀರಮಂ,
ಖರ್ಪರಂಬೋಲ್ ಪೆಣೆದು, ಮಳ್ಳುಮುಳ್ಳಿನ ಮೊನೆಯ
ಕಣೆವೆತ್ತ ಸರಪಣಿಯ ವೃಶ್ಚಿಕಾಂಕಿತ ತನುತ್ರಂ.
ಬೆನ್ಗೆ ಭೀಕರಮಾಗಿ ಬಾಗಿದುದು ಕರ್ಬ್ಬುನದ
ಬಿಲ್, ಬತ್ತಳಿಕೆವೆರಸಿ. ನೇಲ್ದು ಕಟಿಯಿಂ ಖಣಿಲ್
ಖಣಿಲೆಂದು ಕರ್ಕಶಸ್ವನಂಗೆಯ್ದುದಾಭೀಳ
ದೀರ್ಘಖಡ್ಗಂ, ಕಡಿವವೋಲ್ ಕುಳಿರ್ದಿಂಗಳಾ
ಚಳಿಮೌನಮಂ. ವಾಮಭುಜದಿಂ ಜಗುಳ್ದತ್ತು   ೫೧೦
ವೀರತೂರ್ಯಂ, ನಿದ್ರೆಗಂಕುಶವೆನಲ್ ನಗರ
ರಕ್ಷಕರಾ.-
ಇಂತು ವೃಶ್ಚಿಕರೋಮನಾ ಮಹಾ
ದ್ವಾರಪಾಲಕನಿರ್ಪುದಂ ದೂರದಿಂ ನೋಡಿ,
ಅರಿತನತಿ ಮಾಯಾವಿಯೆಂದು, ‘ಪೊಕ್ಕಪೆನೆಂತೊ
ವಂಚಿಸೀ ಮಾಯಾಪ್ರವೀಣನಂ ? ತಗದಿವನ
ಕೂಡೆ ಬಹಿರಂಗ ಘರ್ಷಣಂ. ಬಾಯ್ಗಿಟ್ಟನೆನೆ
ಪೆಗಲೆಳಲ್ವಾ ಭೀಮತೂರ್ಯಮಂ, ಕಿಡುವುದಾ
ರಾಮಕಾರ್ಯಂ. ಮಸುಳಿದಪುದಮಿತ ಹೃತ್ಕಮಲ
ಚೈತ್ರಸೂರ್ಯಂ !’ ಚಿಂತಿಸುತೆ ತರಿಸಂದನೊಂದು
ಹರುವಂ. ಮಿದುಳ್ಗೆ ಸಂಮೋಹನ ಭ್ರಾಂತಿಯಂ           ೫೨೦
ತೀವಿ, ಪುಸಿನಿದ್ದೆಯಿಂ ಪ್ರಜ್ಞೆಯಂ ಮಳ್ಗಿಪೋಲ್
ಕಳ್ಗಾಳಿಯಾಗಿ ತೀಡಿದನವನ ನಾಸಿಕದ
ಸೀಮೆಯೊಳ್. “ಇದೇನಿಂದು ಎಂದಿಲ್ಲದೀ ನಿದ್ದೆ ?
ಕಣ್‌ ಭಾರಮಾಗುತಿದೆ ? ಕುಗ್ಗುತಿದೆ ಕಾಲ್‌ಬಲ್ಮೆ !
ಮಾಗಿಯಾಗಮನದ ಮಹಿಮೆಯಲ್ತೆ ?” ತನ್ನೊಳಗೆ
ತಾಂ ಗೊಣಗುತಂತು ವೃಶ್ಚಿಕರೋಮನಾಯೆಡೆಯೆ
ಕುಳ್ಳಿತೊಯ್ಯನೆ ನೆಲಕ್ಕೊರಗಿದನು, ಮರಸೊಂದಿದೋಲ್.
ಪೊಕ್ಕನಣುವಂ ಸತೀತಸ್ಕರನ ಲೋಕಮಂ,
ಭಾಸ್ಕರಕುಲದ ತಪಸ್ವಿನಿಯೆಡೆಯ ಮಾರ್ಗಿತಕೆ
ಧರ್ಮಕಾರ್ಮುಕಮೆಚ್ಚ ಮಾರ್ಗಣದವೋಲ್. ನೃಪನ    ೫೩೦
ಸದ್ಮಮಂ ಬಳಸಿದುಪವನದ ವಿಸ್ತೀರ್ಣಮಂ
ಕಂಡುಬ್ಬಿದನು, ಅದೆ ವಿಭೀಷಣನ ಸತಿಯೊರೆದ
ಅಶೋಕವನಮಿರಲಪ್ಪುದೆಂದು. “ಕಾಣ್ಬೆನೈಸಲೆ
ಇಲ್ಲಿ ಆ ದೇವಿಯಂ !” ಎಂಬುದಂ ನೆನೆನೆನೆದು,
ಕುದಿಕುದಿದು, ತವಕಿಸಿದನನಿಲಾತ್ಮಜಂ, ಕಾಂಬ
ಕಾತರದಿ. ಬನಚೆಲ್ವನೊಂದಿನಿತು ಗಮನಿಸದೆ,
ಪರಿಮಳಂಗಳನಿನಿತು ಲೆಕ್ಕಿಸದೆ, ಸೀತೆಯಂ
ನೋಡುವ ನಿರೀಕ್ಷಣೆಗೆ ತನ್ನಂ ನಿವೇದಿಸುತೆ
ಸಂಭ್ರಮಿಸುತಿರೆ ವನಚರಂ ಕಂಡನೊಂದಲ್ಲಿ
ದೇವಕುಟಿಯಂ. ಕಂಡು ಬಳಿಸಾರ್ದದಂ ಪುಗಲ್          ೫೪೦
ಕುಶಲ ಸುಂದರ ಶಿಲ್ಪಮಯದಮೃತರಚನೆಯಿಂ
ಚಿತ್ತಕೆ ಪವಿತ್ರತೆಯನೊಡರಿಸುತ್ತಿರ್ದುದಂ,
ಹನುಮದೇವಂಗಾದುದೊಂದತಿ ನವಾನುಭವ
ಸಂತೃಪ್ತಿ. ಬುದ್ಧಿಗೆ ಅತೀತಮಂ ಭಾವದಿಂ
ಗ್ರಹಿಸಿ, “ಇಲ್ಲಿಯೆ ವಲಂ ಪೂಜ್ಯೆಯಿಹಳಾ ದೇವಿ !
ಅಲ್ಲದಿರೆ ನನಗೇತಕೀ ಅಕಾರಣಂ ಸುಖಂ ?
ಹಿಂದೆಲ್ಲಿಯುಂ ಲಂಕೆಯೊಳ್ ನನಗೆ ಈ ಪರಿಯ
ಪುಣ್ಯಾನುಭವಮಾದುದಿಲ್ಲ. ಕಾಣ್ಬೆನೀಗಳೆ
ನನ್ನ ಸಾಗರ ಲಂಘನದ ಗಗನ ಸಾಹಸದ
ಗಂತವ್ಯ ಲಕ್ಷ್ಮಿಯಂ !” ಎಂದೀಕ್ಷಿಸುತ್ತಿರಲ್,    ೫೫೦
ಹೃದಯದಾನಂದಮೆ ಘನೀಭವಿಸಿ ತೋರ್ದುದೆನೆ
ಮುಂದೆಸೆದಳೊರ್ವ ಮಹಿಳಾಮೂರ್ತಿ, ಪುಷ್ಪಮಯ
ಶಿವಶಿವಾಣಿಯರಮಲ ವಿಗ್ರಹಂಗಳ ಚರಣ
ತಲದಿ ಶಿರಂಬಾಗಿ. ಸಂಭ್ರಮ ಮತ್ತ ನೇತ್ರದಿಂ
ನೋಡಿದನು ಬೆಳ್ಳುಡೆಯನುಟ್ಟಾ ಕೃಶಾಂಗಿಯಂ,
ಶೋಕಾರ್ತೆಯಂ, ದೀನೆಯಂ, ಪುಣ್ಯಮುಖಿಯಂ,
ಸಗದ್ಗದೋತ್ಕಂಠೆಯಂ. ‘ರಾಮಚಂದ್ರಂ ಗೆಲ್ಗೆ !’
ಎಂದುಗ್ಗಡಿಸುವ ಚಪಲತೆಗೆ ಕಡಿವಣವಿಕ್ಕಿ,
ಕೇಳ್ದನಾಕೆಯ ದನಿಯ ದೈನ್ಯಮಂ:
“ಕರುಣಿಸಯ್
ಭುವನಗುರು, ಓ ಆರ್ತಜನ ಕಲ್ಪತರು, ಪತಿಗೆ ೫೬೦
ನೀಡಾತ್ಮ ಶಾಂತಿಯಂ, ಮತಿಗೆ ಮಂಗಳಮೆಸಗು.
ನೀಡೆನಗೆ ಪತಿಭಿಕ್ಷೆಯಂ. ಹೇ ಮನ್ಮಥಾರಿ,
ಮದನಚಿತೆಗೆನ್ನ ಪತಿ ಬೇಳ್ವೆಯಾಗದ ತೆರದೆ
ರಕ್ಷಿಸೆನ್ನಯ್ದೆತನಮಂ. ತಾಯೆ, ಗಿರಿಜಾತೆ,
ಕಲ್ಯಾಣಿ, ನೀಂ ತಪಂಗೈದೆಂತು ಪಡೆದೆಯೋ
ನಿನ್ನೆರೆಯನಂ, ನಾನಂತೆ ಪಡೆವವೋಲೆನ್ನ
ಮನದನ್ನನಾತ್ಮಮಂ ಕೃಪೆಗೆಯ್, ಫಲಪ್ರದೇ.
ಕೊನೆಗಾಣಿಸೀ ಸಂಕಟದ ಬೆಂಕೆಸಂಕೋಲೆಯಂ ;
ಪೊರೆ ನಿನ್ನ ಬಾಲೆಯಂ !”
ಪೆಣ್‌ಕೊಂಚೆಯಂತೆವೋಲ್
ಇಂತು ಆಕ್ರಂದಿಸುತೆ ದೇವದಂಪತಿಯಡಿಗೆ    ೫೭೦
ಮತ್ತಮೆರಗಿದಳಬಲೆ, ಶೋಕದ ಸಿಡಿಲ್ ಬಡಿದು
ಬೀಳ್ವಂತೆ ! ಸಹಿಸಲಾರದೆ ತಾಯಳಲ್ಕೆಯಂ,
ರಾಮ ಸಂಪ್ರೀತೆಯಂ ಸಂತೈಸಲೆಂದೆಳಸಿ,
‘ರಾಮಚಂದ್ರಂ ಗೆಲ್ಗೆ ! ಜನಕನಂದಿನಿ ಬಾಳ್ಗೆ !’
ಎಂದುಗ್ಗಡಿಸಿದುದೆ ತಡಂ ಚೀರಿದಳ್ ಮಹಿಳೆ,
ಬ್ರಹ್ಮಚಾರಿಗೆ ಬೆಳ್ಪಮರ್ವಂತೆ. ಬೆಬ್ಬಳಿಸಿ,
ತಪ್ಪಿದೇನೆಸಗಿದೆನೊ ನಾನೆನುತೆ, ಮಿಳ್ಮಿಳನೆ
ನೋಡುತಿರೆ ಬೆಪ್ಪುಬಡಿದಾಂಜನೇಯಂ, ಕದಂ
ತೆರೆದುದೊಯ್ಕನೆ ; ಪೊಕ್ಕನೊರ್ವಂ ಸ್ಫುರದ್ರೂಪಿ
ತಾನಭಯಸ್ವರೂಪಿ ! ಆ ಗಾತ್ರಕ್ಕೆ, ತೇಜಕ್ಕೆ,   ೫೮೦
ಶೃಂಗಾರ ಶೀಲ ವಿನಯದ ರಸಿಕ ಪೌರುಷಕೆ,
ಸೂತ್ರಕಾಂಚನದಂಚಲದ ಪೀತಾಂಬರದ
ಸಿರಿಯುಡೆಯ ಕೂಡೆ ಪಡಿಮಲೆತಿರ್ದ ರಾಜತೆಗೆ
ಮಾರುತಿಯ ಮೂಕವಿಸ್ಮಯಮುಲಿಯುತಿರ್ದುದು
ತನಗೆ ತಾನೆ : ಇವನಾರ್ ? ಈತನಾರ್ ? ಈ ಮಹಾ
ಪುರುಷನಾರ್ ? ನಾಂ ಕಾಣೆನಿನ್ನೆಗಮ್ ಇವಂಗೆಣೆಯ
ಓಜಸ್ವಿಯಂ !
ಮಂದಿರದ ಮೌನಮದುರಿದುದು
ಬಂದವನ ದರ್ಪಧ್ವನಿಯ ಬಿರುಬಿಂಗೆ : “ಕಾಂತೆ,
ನಿನ್ನದೇನೀ ಭ್ರಾಂತಿ ? ಪಲದಿನಗಳಿಂದಮಾಂ
ಶಾಂತಿಯೆಂಬುದನರಿಯೆ ನಿನ್ನ ದೆಸೆಯಿಂ ! ಭ್ರಮೆಗೆ     ೫೯೦
ಮಾರುವೋಗಿದೆ ನಿನ್ನ ಬುದ್ಧಿಸ್ಥಿರತೆ. ರಾಜ್ಞಿ
ನೀನಾಗಿಯುಂ ಕ್ಷಾತ್ರಮಂ ತ್ಯಜಿಸಿ ಜೀವಿಸಿಹೆ
ನಿರ್ಲಜ್ಜೆಯಿಂ. ನನ್ನನುಂ ಸೆಳೆಯಲೆಳಸುತಿಹೆ
ನಿಸ್ತೇಜತೆಗೆ. ನಿನ್ನ ಬಿಸಿಮಿದುಳ್ ಕುದಿಯಿಸುವ
ಪುಸಭೀತಿಯಿಂ ನಿನ್ನನೆಂತುಂ ಪೊರೆಯಲೆಂದು,
ನಿದ್ದೆಗೆ ತಿಲಾಂಜಲಿಯನಿತ್ತು, ಬಂದೆನಿಲ್ಲಿಗೆ
ಕಾಪಿರಲ್ ! ಈ ಬನದೊಳಿಂದಿಲ್ಲಿಗಾರುಮನ್
ಬರದವೋಲಾಣತಿಯನಿತ್ತಿಹೆನ್. ಪೂಜೆಗೆಯ್
ಶಾಂತಮನದಿಂ. ನಾನೆ ಕಾವಲಿರೆ ನಿನಗದೇಂ
ಭೀತಿ ? ಚೀರ್ದುದದೇಕೆ ? ಕಂಪಿಸುತ್ತಿಹೆಯೇಕೆ ೬೦೦
ಪೇಳ್, ಪ್ರಿಯೆ ?” ಕಂಠಸ್ವರದ ಕರುಣರೋಷಕ್ಕೆ
ನಡುಗುತಿರೆ ನೀರವತೆ, ನಡುಗುತಂತೆಯೆ ಕಾಂತೆ
ಮುಡಿಮಣಿದೊರೆದಳಿಂತು : “ಪೋದ ಬಯ್ಗುಂಬೊಳ್ತು
ಕೆಡೆದ ಉಳ್ಕೆಯ ಅಶುಭಮಂ ಪರಿಹರಿಸಲೆಂದು
ಪರಮೇಶನಂ ಪ್ರಾರ್ಥಿಸಲ್ ಬಂದೆನಯ್, ಪ್ರಭೂ.
ನಿನಗೆ ಸೈಪಂ ಬೇಡುತಿರಲಾರೊ ಬಳಿಯೊಳೆಯೆ
‘ರಾಮಚಂದ್ರಂ ಗೆಲ್ಗೆ ! ಜನಕನಂದಿನಿ ಬಾಳ್ಗೆ !’
ಎಂದು ಸುಸ್ಪಷ್ಟಮುದ್ಘೋಷಿಸಿದವೋಲಾಯ್ತು,
ಪ್ರಜ್ಞೆಗೆ ದಿಗಿಲ್ ತಗುಳ್ವಂತೆ ! ಚೀರ್ದೆನೊ ಏನೊ
ನಾನರಿಯೆ, ಪ್ರಾಣಪ್ರಭೂ.”
ಸುಯ್ದು, ತನ್ನೊಳಗೆ          ೬೧೦
ತಾನೆಂಬವೋಲ್. “ನಿನ್ನ ಹೃದಯಮೆ ನಿನಗೆ, ದೇವಿ,
ಕಿವಿಯಾಯ್ತು. ನಿನ್ನುಸಿರ ಹರಕೆಯನೆ ನಿನ್ನ ಕಿವಿ
ಧ್ಯಾನಸಮಯದೊಳಾಲಿಸಿತು. ಬೇರೆಯಿನ್ನೆಲ್ಲಿ
ವಾಣಿ, ಪೇಳ್‌, ನನ್ನ ರಾಣಿ ?”
“ನಿನಗೆ ಅಶುಭವನೆಂತು
ನೆನೆಯುವೆನ್, ಜೀವೇಶ ?”
“ನನಗೆ ಅಶುಭವನಲ್ತು
ಅವರ್ಗೆ ಶುಭಮಂ.”
“ಸರ್ವರ್ಗೆ ಶುಭಮಿರ್ಕೆ, ಪ್ರಭೂ.
ಕಲ್ಯಾಣ ಕಲ್ಪತರು, ಲೋಕಗುರು, ಶಿವನಿದಿರ್
ಪ್ರಾರ್ಥನೆಗೆ ಕಾರ್ಪಣ್ಯಮೇಕೆ ?”
“ಶುಭಮಿತ್ತಪನ್,
ತನ್ನಿಚ್ಛೆಯೋಲ್ ; ನಿನ್ನಿಚ್ಛೆ ನನ್ನಿಚ್ಛೆಯಂತಲ್ತು !….
ಸೀತೆಯನ್ ನೀನ್ ಕಂಡುದುಂಟೇನ್ ?”
“ಕಂಡಿಹೆನ್ !      ೬೨೦
ಕ್ಷಮಿಸು. ನಿನ್ನಾಜ್ಞೆಯಂ ಮೀರ್ದಳಲ್ತಾದೊಡಂ,
ನನಗೆ ದರ್ಶನಮಿತ್ತಳಾ ಪೂಜ್ಯೆ !”
“ಆ ಪೂಜ್ಯೆ
ನಿನಗೆ ದರ್ಶನಮಿತ್ತುದೇಂ ಸ್ವಪ್ನಲೋಕದೊಳ್ ?”
“ಅಲ್ತಲ್ತು, ಅಶೋಕವನದೊಳ್ !”
“ಎಂತೊ ? ಅಂತು ನೀಂ
ಕಂಡುದು ದಿಟಂ !”
“ದಿಟಂ.” “ಕೆಟ್ಟೆನಾನ್ !” “ಶಿವಶಿವಾ
ತೊಲಗಲಿ ಅಮಂಗಳಂ !”
“ಕೆಟ್ಟೆನಾನ್ ! ಕೊಂದೆ ನೀಂ !
ಹಿಂದೆಂದು ಸೋಲರಿಯದೆನ್ನಮ್, ಮಯಕುಮಾರಿ,
ನೀಂ ಸೋಲಿಸಿದೆ, ಶುಭಕೆ ! ಕೇಳ್, ದೇವಿ, ಪೇಳ್ದಪೆನ್.
ರಣರಂಗಮಾಗಿರ್ಪುದೆನ್ನ ಹೃದಯಂ ಹಿತಕೆ
ಮೇಣ್ ಪ್ರಿಯಕೆ, ರುಚಿಗೆ ಮೇಣ್ ಶುಚಿಗೆ ; ನಿನ್ನ ಮುಂದಿರೆ          ೬೩೦
ನಿನಗೆ, ಮೇಣಾಕೆಯಂ ನೆನೆಯಲಾಕೆಯ ಸುಖದ
ಸಂಗಕ್ಕೆ !”
“ನಿನ್ನೊಡನೆ ನಾನುಮೈತಂದಪೆನ್,
ಮನದನ್ನ, ನಡೆಯಿಂ ಅಶೋಕವನಕೀಗಳೆಯೆ !”
ಚಂದ್ರನಖಿಗೊರೆದಿಹೆನ್. ನಾಳೆ ಸೂರ್ಯೋದಯಕೆ
ಹೋಹೆನೊರ್ವನೆ, ಕಡೆಯ ಸೂಳ್. ನಿನ್ನ ರಾವಣನ್
ಕೆಮ್ಮನೆಯೆ ಸೋಲ್ವನೆಂದರಿಯದಿರ್, ಮಂಡೋದರಿ !”
ಕಾಮರೋಷಧ್ವನಿಯ ಕಠಿನತೆಗೆ ಸೆಡೆಯುತಿರೆ
ಸತಿಯಳ್ಕಿ, ತುಳ್ಕಿದುದು ವಿಕೃತಿ ದಶಶಿರಮುಖದ
ಮೆಯ್ಸಿರಿಗೆ. ಓಡಿದಳೆನಲ್ಕೆ ಮುಂದಕೆ ನುಗ್ಗಿ
ಕಾಲ್ಗಳಂ ತಬ್ಬಿದಳ್ ; ಬಳ್ಳಿಯಾದಳು ಮರಕೆ ; ೬೪೦
ಹೂವಾದುದವಳುಸಿರ್ : “ಬೇಡ ಬೇಡೀ ಹಠದ
ಸಾಹಸಂ, ರಾಜೇಂದ್ರ. ರುಚಿಗೆ ಕೈಕೊಂಡುದಂ
ಛಲಕೆ ಮುಂಬರಿಪುದೇಂ ಸುಖವೆ, ಸರಸವೆ, ಮತಿಯೆ,
ಸಚ್ಚರಿತ್ರವೆ, ಜೀವಿತೇಶ್ವರ ? ಪತಿವ್ರತೆಯ
ಸುವ್ರತದ ಮಹಿಮೆಯಿಂ ಸಂಯಮವನೆರ್ದೆಗೊಳಲ್
ಸೋಲೆಂಬರೇನದಂ ಸುಕೃತಮತಿಗಳ್ ? ಶಿವಕೆ
ಶರಣಾದರದು ಸೋಲೆ ? ಆ ಗೆಲ್ಗೆ ಮಿಗಿಲೊಳದೆ
ಬೇರೆ ಗೆಲ್ಲಂ ? ಇಂದ್ರವಿಜಯಿಗಿಂ ನೂರುಮಡಿ
ವೀರವಿಕ್ರಮಿಯಲ್ತೆ ಇಂದ್ರಿಯ ವಿಜಯಿ ? ಬರಿಯ
ಈ ಬಿಂಕದಂಕಮಂ ತೊರೆ. ಸೋಲು ಸತ್ಯಕ್ಕೆ ;            ೬೫೦
ನಮಗದುವೆ ಗೆಲ್. ಸೋಲು ಧರ್ಮಕ್ಕೆ ; ನಮಗದುವೆ
ಗೆಲ್‌. ಸೋಲ್ ಒಲವಿಗದುವೆ ಸಾಮ್ರಾಜ್ಯಸಂಪದಂ
ನಮಗೆ ದಲ್”
ಭಾವಭಾರಕೆ ನಸುಮಣಿದ ನೃಪನ
ನೇತ್ರದಿಂ ಬಿಸುಗಣ್ಬನಿಗಳುದುರುತಿರೆ ಸತಿಯ
ನೆಗಹಿದ ಮೊಗಕ್ಕೆ : “ಸೋಲಂ ಬಯಸಿ ಪಡೆಯುವುದೆ
ಕ್ಷಾತ್ರತೇಜಂ ? ದಯಿತೆ, ಬೀರರ್ಗೆ ಬಯಕೆ ಗೆಲ್ ;
ಸೋಲಲ್ತು. ನಿನ್ನರಕೆ, ಆ ನನ್ನ ಸೋಲ್, ತನಗೆ
ತಾನ್‌ ಬಂದಪುದೆ ಬರ್ಕೆ…. ಸೀತೆಯನ್ ಮೊದಮೊದಲ್
ಚೆಲುವಿಗೊಲಿದೆನ್. ಮಸುಳಿಸಿದಳದನ್, ತೊರೆದು ನಲ್‌
ಉಣಿಸು ಮೀಹಂಗಳಂ…. ಛಲಮೆ ಮೋಹಿಪುದಿಂದು    ೬೬೦
ನನ್ನ ಛಲಮಂ…. ನನಗುಮೀಗಳಿನ್ನೊಂದಳ್ಕು….
ಹಿಂದಣಂದದೊಳಿಂದು ಮತ್ತೆಮತ್ತಾಕೆಯಂ
ನೋಡುತಿಲ್ಲಾಂ. ಭೀತಿ ತಲೆದೋರುತಿಹುದೆನಗೆ,
ಕರುಣೆಯಿಂದೆಲ್ಲಿ ದೃಢತೆಗೆ ಭಂಗ ಬಂದಪುದೊ
ಎಂದು. ಅವಳೊಂದು ಕಡೆ, ನೀನೊಂದು ಕಡೆ, ಮತ್ತೆ
ಆ ವಿಭೀಷಣನೊಂದು ಕಡೆ, ನನ್ನ ಚಿತ್ತಮಂ
ಚಲಿಸುತಿರ್ಪಿರಿ, ಮದನ ಧೈರ್ಯದ್ರುಮದ ಬೇರ್ಗೆ
ಬೆನ್ನೀರನಡಕಿ. ಅದೊಡೇಂ ? ಗೃಹವೈರಿಗಳ್
ಗೆತ್ತು ನಿಮ್ಮನಿಬರಂ, ರಾಮನನ್ನೆಂತಂತೆ,
ಗೆಲ್ವೆನೆಂಬುದೆ ನನ್ನ ಪೂಣ್ಕೆ !…. ಅದೇನಾ ತೂರ್ಯ     ೬೭೦
ನಿಸ್ವನಂ ? ಭಯಚಕಿತಮೆಳ್ಚರಿಸುವಂತೆವೋಲ್
ಮತ್ತೆಮತ್ತೊದರುತಿದೆ….”
ಪೊಳ್ತಿನಿತನಂತರಂ
ಮಾಯೆ ತಿಳಿದೆದ್ದ ವೃಶ್ಚಿಕರೋಮನಾಶಂಕೆ
ಕೈತವವನೂಹಿಸಿತು ತನಗೊದಗಿದಾ ಸ್ಥಿತಿಯ
ಸೋಜಿಗಕೆ. ತುಡುಕಿ ಹೆಗಲಿನ ತುತ್ತುರಿಯನೂದಿದನ್,
ಒಂದು ಸೂಳ್, ಎರಡು ಸೂಳ್, ಪಲವು ಸೂಳ್ ! ಲಂಕೆ ತಾಂ
ಬೆರ್ಚ್ಚಿ ಕೇಳ್ದತ್ತದಂ. ಬೀದಿಯನಲೆವ ಶುನಕ
ಸಮುದಯಂ ಬಳ್ಳಿಕ್ಕಿದುವು ಕೂಡೆ. ಪತ್ತನದ
ಕೋಲಾಹಲಂ ಪೆರ್ಚಲಿರುಳ ಕಾಪಿನ ದಳಂ
ಚಕಿತಮಾಯ್ತಿರ್ಮಡಿಸಿದೆಳ್ಚರಿಕೆಯಿಂ. ಓಡೋಡಿ          ೬೮೦
ತನ್ನೆಡೆಗ ಬಂದ ಕಾವಲ್ ಪಡೆಗಳೊಡೆಯರಿಗೆ
ಕಟ್ಟಾಜ್ಞೆಯೊರೆದನರಮನೆಯ ದೌವಾರಿಕಂ
ವೃಶ್ಚಿಕರೋಮನಿಂತು :
“ಶಂಕೆ ನನಗಿಹುದಾರೊ
ಮಾಯಾವಿ ಪುರಕೆ ಪೊಕ್ಕಿಹನೆಂದು. ಶೋಧಿಸಿಮ್
ಲಂಕಾ ಸಮಸ್ತಮಂ. ಮೂಲೆ ಮೂಲೆಯನಿರದೆ
ಸೋವಿ, ಮಾಯಾ ಮಂತ್ರತಂತ್ರಮೆಲ್ಲಂದದಿಂ
ಪುಡುಕಿನೋಳ್ಪುದು. ಸಹಜಮಲ್ಲದ ನಿದ್ದೆಯಡಸಿ
ನನ್ನನಿನ್ನೆಗಮೇಗಳುಂ ವಂಚಿಸಿದುದಿಲ್ಲಿಂತು !”
ದಶಗ್ರೀವನೊಡನೆ ಕೇಳ್ದನಾ ತೂರ್ಯಮಂ
ಸುಗ್ರೀವನನುಚರಂ. ತಿಳಿದನದರರ್ಥಮಂ.    ೬೯೦
ಜಾನಿಸಿದನೊರ್ ಚಣಂ ಮುನ್‌ಗೆಯ್ವುದಂ : ತನ್ನ
ಚರಣತಲದೆಡೆ ನಾಲಗೆಯನುಳಿದ ಬಿನ್ನಪದ
ಮಾಳ್ಕೆಯಿಂದಿರ್ದ ಮಂಡೋದರಿಯ ಜಡೆಗಳಂ
ಸೊಗಸಿ ನೋಳ್ಪಂತಿರ್ದ ಲಂಕೇಶ್ವರನ ಮೇಲೆ
ಮುನ್ನ ಮನದೊಳಗಿರ್ದ ಮುನಿಸು ನಸು ಕಾವಾರಿ,
ಸತಿಯ ಸನ್ನಿಧಿಮಹಿಮೆಗೆಂಬಂತೆವೋಲ್, ಕರುಣೆ
ಕಣ್ಮಲರಿದುದು ಹನುಮಹೃದಯದಲಿ ! “ಈ ಸತಿಯ
ತನುಮನವ ಪಡೆದವಗೆ ಆ ಸತಿಯ ಊ ಸತಿಯ
ಮೋಹಮೆಂತುಟೊ ? ಮದನನಲ್ತಿದಕೆ ವಿಧಿಯಲಾ
ಕಾರಣಂ ! ಏ ತೇಜಮೇ ಗತಿಗೆ ವಂದಪುದೊ  ೭೦೦
ಇಂದ್ರಿಯದ ದೌರ್ಬಲ್ಯಮೊಂದಿರಲ್ ? ತ್ರೈಭುವನ
ಗೌರವಕೆ ಯೋಗ್ಯನೀಪರಿ, ಮಕ್ಕಳಳುವಂತೆ
ಕೈಸೇರದಿರೆ ಬಯಸಿದೊಂದು ಬಣ್ಣದ ಗೊಂಬೆ,
ರೋದಿಪುದನಾರಾದೊಡಂ ಕಾಣ್ಬರೇಂ ? ಕಂಡೆ
ನಾನ್ ! ಕಂಡ ನಾನಿವಂಗಿನ್ ಮುಳಿವೆನೆಂತುಟೊ
ಮೊದಲ್ ಮುಳಿದವೋಲ್ ? ಪ್ರಜೆಗಳಿದಿರ್ ಬಹಿರಂಗದೊಳ್,
ವೈರಿಗಳ ಮುಂದೆ ರಣರಂಗದೊಳ್, ತೋರ್ಪನೇನ್
ಈ ಶಿಥಿಲ ಅಂತಸ್ಥಮಂ ?…. ಪೂಜ್ಯೆ ಈ ಸತಿಗೆ
ತನ್ನ ಪತಿಯಾತ್ಮದುದ್ಧಾರ ಕಾರ್ಯದೊಳಿಂದು
ನೆರವಾಗದಿರ್ದೊಡಾಂ ಧರ್ಮಚ್ಯುತಂ. ನನ್ನ  ೭೧೦
ಬಂದ ಕರ್ತವ್ಯಕವಿರುದ್ಧಮಂ ಗೈದು, ಮೇಣ್
ಚೋದಿಸುವೆನನುಕೂಲಮಂ ! ಸತಿಯ ಕೇಳ್ದುದಂ
ಮತ್ತೊರ್ಮೆಯುಲಿವೆನ್ ದಶಗ್ರೀವನಾಲಿಪೋಲ್ !
ಭ್ರಮೆಯೆಂದುದನ್ ಪ್ರಮೆಯನಾಗಿಪೆನ್ !”
ಮತ್ತೆಯುಂ
ಮಂದಿರಂ ಮೊಳಗಿತಾ ಧ್ವನಿಮೃದಂಗಸ್ತನಿತ
ಮಂದ್ರದಿಂ, ಮೊದಲೆ ತುತ್ತುರಿದನಿಗೆ ಕಿವಿನಿಮಿರಿ
ಕೇಳುತಿರ್ದಾ ದೈತ್ಯ ದಂಪತಿಗಳಿರ್ವರುಂ
ಬೆರಗಾಗುವೋಲ್, ಪತಿಯನಪ್ಪಿ ತಳ್ಕೈಸುವೋಲ್ :
“ರಾಮಚಂದ್ರಂ ಗೆಲ್ಗೆ ! ಜನಕನಂದಿನಿ ಬಾಳ್ಗೆ !”
ಸ್ತಂಭದಿಂದುಣ್ಮಿದುದೊ ? ಕುಡ್ಯದಿಂ ಪೊಣ್ಮೆದುದೊ ?    ೭೨೦
ಬೋದಿಗೆಯಿನವತರಿಸಿದುದೊ ? ಕೆತ್ತಿದಾನೆಯಿಂ
ಬಂದುದೋ ? ಶಿಲ್ಪಶುಕಮುಲಿದುದೋ ? ವಚಿಸಿದುವೊ
ಚಿತ್ರಕರ್ಮಂಬೆತ್ತ ದೈತ್ಯಕುಲದೇವತಾ
ಮೂರ್ತಿಗಳ್ ? ಮೇಣದ್ಭುತಮ್, ಶಿವಶಿವಾಣಿಯರೆ
ಅರ್ಚಿತಪ್ರತಿಮೆಯಿಂದುಚ್ಚರಿಸಿದರೊ ಎನಲ್ಕೆ
ಆ ವಾಣಿ ಮೇಲಿಂದೆ, ಕೆಳಗಿಂದೆ, ಅಲ್ಲಿಂದೆ,
ಇಲ್ಲಿಂದೆ, ಸುತ್ತಣಿಂದೆತ್ತಣಿಂದುಲಿಬಲೆಯ
ಬೀಸಿದುದು ಸಿಕ್ಕಾಗಿ ಹಾಸುಹೊಕ್ಕಾಗಿ, ಕಿವಿ
ಕಣ್ಗೆಟ್ಟ ಮೀನಾಗುವೋಲ್ ಕೇಳ್ದರಿರ್ವರಿಗೆ !
ನಕ್ಕನಾ ರಾವಣಂ, ಒಳ್ಕಿದಳ್ಕಂ ನಕ್ಕು,          ೭೩೦
ನಗೆಯಿಂದದಂ ದಮಿಸುವಂತೆ, ಧರ್ಮಭೀತಿಗೆ
ಬೆರಗಿನುಡುಗೆಯ ತೊಡಿಸುತಿಂತು ಮಂಡೋದರಿಗೆ
ಸಂತೈಕೆಯಂ :
“ಭ್ರಾಂತಿ ಸಾಂಕ್ರಾಮಿಕಂ, ರಾಜ್ಞಿ !
ನಿದ್ದೆಯಡಸಿದ ನನ್ನ ಮಿದುಳಿಗುಂ ಸೋಂಕುತಿದೆ
ನಿನ್ನ ಮಿದುಳಿನ ಮರುಳ್ ಬಿಸುಪು ! ನೀನಿತ್ತುದಾ
ದುರುಳ ಸೂಚನೆಯೆಂತು ಮರಳಿ ಮೈದೋರಿದುದು,
ಕಂಡೆಯಾ ! ನಮ್ಮ ಬಗೆ ನಮಗೆ ಪಗೆ ! ಪೋಗುವಂ
ಬಾ, ದೇವಿ, ನಿದ್ದೆಯಮರ್ದಿನ ಮರ್ದ್ದನೀಂಟಲ್ಕೆ !
ಬೇಡ, ಬಿಡು ಭೀತಿಯಂ. ಪುಸಿಯಳ್ಕನಾಚೆಗೊಗೆ.
ಲಂಕೆ ಆರ್ಗಂ ಪುಗಲ್ಕಸದಳಂ. ಕೇಳ್ದೆಯೇನ್   ೭೪೦
ಆ ತೂರ್ಯನಾದಂಗಳಂ ? ಮಾಯಾಸಮರ್ಥರಾ
ನಮ್ಮ ರಕ್ಷದಳಂ. ಕಾಯುತಿದೆ ಪಗಲಿರುಳ್.
ನಮ್ಮ ಈ ವಿದ್ಯಾತ್ಮಕದ ದುರ್ಗಕಾರೆಂದೆ
ರಕ್ಷಕಳ್ ? ಸಾಮಾನ್ಯಳಲ್ತು ಲಂಕಾಲಕ್ಷ್ಮಿ.
ಆ ದೇವಿ ರಕ್ಷೆಯಾಗಿರೆ ಭಯಂ, ಭಯಮಲ್ತು
ನಾಸ್ತಿಕತೆ ! ಬೆದರದಿರ್. ಹೃದಯಕಿನ್ನುಂ ಶ್ರದ್ಧೆ
ಮೂಡದಿರೆ ನಿನಗೆ, ಇದೊ ಆಣತಿಯನಿತ್ತಪೆನ್,
ನಿನ್ನ ಸಂಶಯ ಹರಣಕಾಗಿ, ಲಂಕೆಯನಿರದೆ
ಗೋರಿ ಸೋವಲ್ ಶಂಕೆ ಸಾವನ್ನೆಗಂ ! ದೇವಿ,
ಬಾ, ಪೋಗುವಂ.” ಮೆಲ್ಲನೆತ್ತಿದನು ಮಡದಿಯಂ.         ೭೫೦
ತೋಳ್‌ಸಿಡಿಲ ಪಂಜರದಿ ತನ್ನ ಮೊದಲೊಲ್ಮೆಯಂ
ತೂಗಿ ಒಯ್ದನು ಉಯ್ಯಲೆಗೆ ಬಿಳಿಯ ಓಕುಳಿಯ !