“ಓವೊ ತಿಮಿರಾತಿಗೇನ್ ಭಯಮೊ ಕೇಳ್? ಏಕೆ
ತಡೆಯುತಿಹನಾ ಅನೂರುವ ವರೂಥಾಶ್ವಖುರ
ವೇಗಮಂ, ಸಂಯಮಿಸಿ ಕರ ಖಲೀನಂಗಳಂ?
ಮೂಡಣದ ಮಲೆಯೇರಿ, ನಾಡೆಲ್ಲಮಂ ಬೆಳಗಿ
ತೋರಿ, ಖಗ ಕಂಠರುತಿಯಿಂದಿಳಾ ಶ್ರೇಯಮಂ
ಸಾರಿ, ಜವದಿಂ ಬರಲ್‌ಪೇಳ್‌! ಭಯಂ ಬೇಡಮಾಂ
ಸೀತಾ ರುಮೆಯರಯ್ದೆತನಕಿಂದು ಮುಡಿಪಿಡುವೆನ್
ಎನ್ನ ಕನ್ಯಾ ತಪಸ್ಸರ್ವ ಫಲಮಂ!” ಇಂತೆಂದು
ಬೆಸಸಿದಳು ಶಿವೆ ತನ್ನ ಕಿಂಕರಿಗೆ. ತಿರುಗಿದಳ್
ಶಂಕರನ ಕಡೆಗೆ. ಕೈಲಾಸಗಿರಿಶೃಂಗಕ್ಕೆ ೧೦
ಕೋಡು ಮೂಡಿದ ತೆರದಿ ನಿಂದು ಭೂಲೋಕಮಂ
ಗಂಭೀರ ಮುಖಮುದ್ರೆಯಿಂದೆ ದಿಟ್ಟಸುತಿರ್ದ
ರುದ್ರದೇವಂ, ಕುರಿತು ತನ್ನುತ್ತಮಾರ್ಧಮೆನೆ
ಬಳಿ ನಿಂದ ಸತಿಗೆ ಪಾರ್ವತಿಗೆ ಕೈದೋರಿದನ್
ಲಂಕೆಯಿರ್ದೆಡೆಗೆ;
“ಕಾಣ್, ಗಿರಿಜೆ, ಕಾದಿಹುದಿಂದು
ನಿನಗೊಂದು ಕಣ್ಣೌತಣಂ. ಪಿಂತೆ ನೀನೆನಿತೆ
ರೌಂದ್ರಗಳಂ ಕಂಡೆಯಾದೊಡಂ ನೀನಿಂದು
ನೊಳ್ಬುದಕೆ ಹೊಯ್‌ಕಯ್ಗಳೊಳವೊ ಸಂದೆಯಮೆನಗೆ.
ತ್ರಿಪುರಹರನರ್ಧಾಂಗಿಯಾಗಿಯುಂ, ಸ್ಕಂದನಾ
ತಾರಕಧ್ವಂಸಿ ಕಂದನೆಯೆ ನಿನಗಾಗಿಯುಂ, ೨೦
ನೀಂ ನೋಡವೇಳ್ಕುಮೀ ಕುಂಭಕರ್ಣ ಮಹೋಗ್ರ
ಸಂಗ್ರಾಮಮಂ, ಪ್ರಿಯಂ ಲಯಮೂರ್ತಿಗೆನಗಿವಂ
ಲಯಕರ್ಮಿ, ಮೇಣಿಂದೆ ತಾನುಂ ಲಯಾಭಿಮುಖಿ.
ನೋಡೆಮ್ಮ ಭೈರವನೆ ಪೊಕ್ಕಿರ್ಪನಾತನಂ
ದಾನವರ ವಾನರರ ದಳದೊಳ್ ಪ್ರಚೋದಿಸಲ್
ಪ್ರಾಣಪ್ರಲಯಮಂ!”
ಭವಾನಿ ಬೆದರಿದಳವನ
ನುಡಿಗೆ; ಎರಗಿದಳಡಿಗೆ; “ಕರಗು ಕರುಣಿಸು ನನಗೆ,
ವಿಷಧರೋರಗಧಾರಿ, ಕುವರಿ ಸೀತೆಯ ಹಣೆಯ
ಕುಂಕುಮಕೆ ಹಾನಿ ಬರದಿರಲಿ! ಮಗಳೂರ್ಮಿಳೆಗೆ,
ನೋಡಲ್ಲಿ ಸರಯೂ ನದಿಯ ತಟದಿ ನನ್ನನೆ ೩೦
ನಿರಂತರಂ ಪೂಜಿಸಿ ತಪಂಗೆಯ್ವಳಿಗೆ, ಮುಡಿದ
ಹೂ ಬಾಡದಿರಲಿ! ಕಿಷ್ಕಿಂಧೆಯೊಳ್, ನೋಡಲ್ಲಿ,
ನೋಂತಿರುವ ರುಮೆಯ ತಾಳಿಗೆ ಭಂಗ ಬರದಿರಲಿ!”
ನಕ್ಕನಾ ಮುಕ್ಕಣ್ಣನಕ್ಕರೆಯನುಕ್ಕಿಸಲ್
ನುಡಿದಳ್ಗೆ ಜಗದಂಬೆಗಿಂತೆಂದು ತನ್ನಿಚ್ಛೆಯಂ;
“ನಿನ್ನಂಶಮಾ ಸೀತೆ ನಿನ್ನ ಭಕ್ತರ್ ದೈತ್ಯ
ಸೋದರರ್. ನೀನೆ ಸಮ್ಮೋಹಿಸಿಹೆ ರಾವಣನ
ಮತಿಯನವನಿಷ್ಟಸಿದ್ಧಿಗೆ ಸಾಧನವನೊಡ್ಡಿ.
ನೀನೆಯೆ ಜಗನ್ಮಾತೆ, ಪುಟ್ಟಿಪಳ್, ಪೊರೆಯುವಳ್,
ಕೊಲ್ಲುವಳ್, ಕಾಯುವಳ್, ನೀನಲ್ಲದಾನೇನ್? ೪೦
ನಿರಂಜನಂ, ನಿಷ್ಕರ್ಮಿ! ನೀಂ ವಾಣಿಯಾದಂದು
ನಾನಜಂ; ನೀಂ ಲಕ್ಷ್ಮಿಯಾದಂದು ವಿಷ್ಣುವಾಂ;
ರಜತಾದ್ರಿಯಿದೆ ಸತ್ಯಲೋಕಮಪ್ಪುದು, ಮತ್ತೆ
ವೈಕುಂಠಮುಂ ತಾನೆ ತೋರ್ಪುದಿಲ್ಲಿಯೆ, ಮಾಯೆ
ನೀನೊಲಿದವೋಲ್! ಪೇಳ್ದುದೆನ್ನಿಚ್ಛೆಯಾದೊಡಂ,
ಕೇಳ್, ಮಹಾಗೂಢಮದುಂ ನಿನ್ನ ವೃತ್ತಿಯೆ ದಿಟಂ!
ತನ್ನ ನಾಟಕದಿ ತಾಂ ಪಾತ್ರಧರನಾಗಿಯುಂ
ಪ್ರೇಕ್ಷಕನವೋಲ್ ನೋಳ್ವ ಕವಿಸೂತ್ರಧಾರಿಯೋಲ್,
ಪ್ರಿಯೆ, ನೋಡು, ಕುಂಭಕರ್ಣನ ಲೋಕಭೀಕರ
ಮಹಾಭೀಳ ರಣಕಾವ್ಯಮಂ; ರುದ್ರದೃಷ್ಟಿಯಿರೆ ೫೦
ರೌದ್ರಮುಂ ರಸಮಲ್ತೆ?”
ಇಂತೆನುತ್ತಾ ಕಡೆಗೆ
ತಿರುಗಲಾ ಪರಮೇಷ್ಠಿ, ಹೊರಳಿತೊ ಜಗದ್‌ದೃಷ್ಟಿ
ಲಂಕೆಯತ್ತಣ್ಗೆ! ಶಿವೆ ಬಳಿಸಾರ್ದಳೀಶನಂ.
ಕಾಲಕೂಟಂ ಕುದಿಯೆ, ಪೆಡೆಯೆತ್ತಿದುವು ಸುಯ್ದು
ಕೊರಳ ಸುತ್ತಿದ ಗರಳ ಸರ್ಪಾಳಿ. ಕಾಳಗಕೆ
ಪೊರಮಟ್ಟ ಕುಂಭಕರ್ಣನ ರುಂದ್ರ ರೂಪಕೆ
ಜಗನ್ಮಾತೆಪಿತರಿಂತು ಕೈಲಾಸದೊಳ್ ನಿಂತು
ನೋಡಿದರೆನಲ್ಕಿನ್ ಮಿಗಿಲ್ ಪ್ರತಿಮೆ ತಾನಿಹುದೆ
ಪ್ರತಿಮಿಸಲ್ ಕವಿಹೃದಯ ಭೂಮಾನುಭೂತಿಯಂ?
ಮೇಣ್, ವಿಶ್ವ ಶಕ್ತಿಗಳ್ ಮನುಜ ದೃಷ್ಟಿಗೆ ದೇವ ೬೦
ದೇವತೆಗಳೊಲ್ ತೋರಿ, ಸೃಷ್ಟಿಸಂಗ್ರಹಕಾಗಿ
ಚಣಚಣಮುಮವತರಿಸುತಿರ್ಪ ಕವಿದರ್ಶನದ
ಕಾವ್ಯಲೋಕದ ಸರ್ವಲೋಕ ಚಿರಸತ್ಯಮಂ?
ಜಗದಂಬೆಯಟ್ಟಿದ ವಚೋಧೈರ್ಯಕೆ ಜಗಚ್ಚಕ್ಷು
ಮೂಡಿದನ್, ಪ್ರಥಮಕಿರಣಂ ತ್ರಿಕೂಟಾಗ್ರಮಂ
ಚುಂಬಿಸಿತು, ತಳತಳಿಸೆ ದಳಕಂಠನರಮನೆಯ
ಕುಂಭಾಕೃತಿಯ ಶಾತಕುಂಭ ಕಲಾಶಾಗ್ರಮಂ. ಮೇಣ್
ಶಕ್ತಿಯನುಸಂಧಾನದಲಿ ರಾತ್ರಿಯನಿತುಮಂ
ಕಳೆದು, ವಿಕ್ರಿಯೆಯಿಂ ಗಿರಿಸ್ಪರ್ಧಿಯೆನಲುರ್ಬ್ಬಿ
ಬಳೆದಗುರ್ಬಿಸಿ, ಯುದ್ಧಸನ್ನದ್ಧನಾಗಿರ್ದ್ದ ೭೦
ಕುಂಭಕರ್ಣನ ಪೀನ ಕರ್ಣಕುಂಡಲ ರುಕ್ಮ
ಕುಂಭಮಂಡಲಗಳೊಳ್ ಪಗಲುಳ್ಕೆ ಪುಟ್ಟಲ್
ಪ್ರತಿಜ್ವಲಿಸಿತಾ ಪ್ರಭಾತಾತಪಂ! ಮತ್ತಮಾ
ಲಂಕೆಗಿದಿರೆಳ್ದೊಂದು ಶೃಂಗಸ್ಥಳದಿ ನಿಂದು,
ಸುಗ್ರೀವನಿಂ ರಿಪುವ್ಯೂಹಮಂ ಮೇಣದರ
ಚಲನವಿನ್ಯಾಸಮಂ ಕೇಳಿ ತಿಳಿಯುತ್ತಿರ್ದ
ರಾಮನ ನಿಷಂಗಾಗ್ರ ವಿಶಿಖ ಪುಂಖಂಗಳಂ
ಚುಂಬಿಸಿದುದಾ ಪೊಂಬಿಸಿಲ್. ಶಿತಾಯುಧ ಪಂಕ್ತಿ,
ಇರ್ಕೆಲದ ಪಡೆಗಳಿಂ, ಕಾರಿದುವು ಕಾಂತಿಯಂ,
ಕೋಟಿ ವಿದ್ಯುತ್ ಕಿರಣರೋಚಿ ಓತಪ್ರೋತಮಂ ೮೦
ನೆಯ್ದ ಜೋತಿರ್ಜಾಲಮಂ.
ಕಯ್‌ಪೊಯ್ವ ಸನ್ನೆಯಂ
ತೂರ್ಯಮೂಳ್ದುದೆ ತಡಂ, ಕಿವಿಬಿರಿಯಲಚಲಗಳ್
ಕಂಪಿಸಲ್, ದೆಸೆ ಮಸೆದುದೈ ದನಿಯಾ; ರಣಭೇರಿ
ಮೊಳಗಿದುವು; ಭೋರ್ಗರೆದುವು ಭಯಾನಕಾನಕಂ;
ಕೂಗಿದವು ಕಹಳೆ; ಚೀರಿದುವು ನಿಸ್ಸಾಳತತಿ;
ಅಂಜೆ ಗಜಘಟೆ ಗಜರಿದುವು ರಂಜೆ; ಕುದುರೆಗಳ್
ಕುಣಿಕುಣಿದು ಪೊಣ್ಮಿದುದು ಹೇಷೆ; ಚಿತ್ಕೃತಿಯುಣ್ಮೆ
ಗರ್ಗರಿಸಿ ನುರ್ಗ್ಗಿದುವು ತೇರ್ಗಾಲಿ; ಘಂಟೆಗಳ
ಘೋರ ಘೋಷಂ ಬೆರಸಿ ಘೀಳಿಟ್ಟುವಾನೆಗಳ್;
ಕೋಟಿ ಕಂಠಂಗಳಿಂದಟ್ಟಹಾಸಂಗೆಯ್ದು ೯೦
ಕೈದುವೆರಸಿದ ಕಯ್ಗಳಂ ನೆಗಹಿ ಕೂಗಿದರ್
ಕಾಲಾಳುಗಳ್ ಸಿಂಹನಾದಂಗಳಂ! ತನ್ನ
ಪೇರಾನೆದೇರೇರಿ ಕೋಂಟೆಪೆರ್ಬಾಗಿಲ್ ಬರಂ
ಬಿಜಯಗೈಯ್ದಾ ಕುಂಭಕರ್ಣಂ, ವಿಸರ್ಜಿಸುತೆ
ತನಗೆ ಗೌರವಮಾತ್ರದಂತಿರ್ದ ತೊಡಕನ್, ಆ
ರಥಮಂ ತಿರಸ್ಕರಿಸಿ ಭುರಥಕ್ಕವತರಿಸಿದನ್.
ಸದ್ದಡಗಿದುದು ಕಪಿಸೇನೆಯಲಿ; ಮೂಗುವೆರಳಾಗಿ
ನೋಡುತಿರ್ದುದು ಕುಂಭಕರ್ಣನ ಮಹದ್‌ರುಂದ್ರ
ಗಾತ್ರಗಿರಿಯಂ ಮುಗುವಟ್ಟಂತೆ! ನೋಡುತಿರೆ,
ಪಜ್ಜೆ ಪಜ್ಜೆಗೆ ತಿರೆಗೆ ಪುಟ್ಟಲ್ ಪ್ರಕಂಪನಂ, ೧೦೦
ನೆಗೆತಮೊಂದಕೆ ದಾಂಟಿದನು ಬಲ್ಗೋಂಟೆಯಂ
ನೆಗೆತಮೆರಡಕ್ಕೆ ದಾಂಟಿದನಗಳ್ತೆಯಂ ವಿಪುಲ
ವಿಸ್ತರದಾ. ದಾಂಟಿನು ನೆಗೆತ ಮೂರಕೆ ತನ್ನ
ಮರ್ತ್ಯಾಯು ಮೇರೆಯಂ. ಕಾಲಾಂತಕನ ತೆರದಿ
ಕಾಲಿಕ್ಕಿದನು ಕಾಲವಶಿ ಕಾಲವಲಯಕೆ
ಅಕಾಲಮೃತ್ಯುವಿನಂತೆವೊಲ್! ‘ಮುಸಲಕೇಶಿ’ ನಿಗೆ,
ಗದೆಯುಂ ತ್ರಿಶೂಲಮುಂ ಮುಸಲಯಂ ಖಡ್ಗಮುಂ
ಸರ್ವಾಯುಧಂಗಳಂ ತನ್ನೊಳೊಂದಾಗಿರ್ದ
ದೈತ್ಯದೈತ್ಯನ ದೈತ್ಯಮುದ್ಗರಕೆ, ತಲೆ ತೊಯ್ದ
ಕೆನ್ನೀರ್ಬಸಿಯೆ, ಬಿರಿದು ಕೆಡೆಯೆ ಕಪಿರುಂಡಗಳ್, ೧೧೦
ಬಡಿದಲ್ಲಿ ಬಯಲೇಳೆ, ಬಡಿತಬಡಿತಕೆ ನೆಲಂ
ಝಗ್ಗನೆ ಕಣಿವೆ ಬೀಳೆ, ಬೀಸಿದನು, ಬಡಿದನ್,
ತಿರುಪ್ಪಿದನ್, ಜಪ್ಪಿದನ್, ಕೊಂದನರೆದನು ಕೋಟಿ
ಕಪಿಕುಲರಾ: ಇಂದಲ್ಲಿ ಐರೋಪ್ಯ ದೌಷ್ಟ್ಯಮ್
ಪ್ರಯೋಗಿಸುವ ದೈತ್ಯಯಂತ್ರಗಳೆಂತು ಮನೆಯೆನದೆ
ಮಠವೆನದೆ, ಚರವೆನದಚರವೆನದೆ, ಪೆಣ್ಣೆನದೆ
ಗಂಡೆನದೆ, ನಾಗರಿಕರೆನದೆ ಸೈನಿಕರೆನದೆ,
ಪಸು ಪಸುಳೆಯೆನ್ನದೆಯೆ, ತಗ್ಗುಬ್ಬುತಡೆಯೆನದೆ
ಮುಂದೆ ತಡೆಬಂದನಿತುಮಂ ಮೆಟ್ಟಿ ತುಳಿತುಳಿದು,
ಬರಿಗೈದು, ಬಟ್ಟ ಬಯಲಂಗೈಯ್ದು, ಮಿಳ್ತುವಿನ ೧೨೦
ಮುನ್ನಡೆಗೆ ನೆತ್ತರೋಕುಳಿವೊಯ್ದ, ಕಂಬನಿಯ
ಕಾಲುವೆಗೆ ರಕ್ತವರ್ತ್ಮಗಳಾಗುತಿರ್ಪ್ಪಂತೆವೋಲ್
ಮುಂಬರಿದನಾ ಕುಂಭಕರ್ಣಂ, ದಶಾನನ
ಮಹಾ ಸಮರ ಯಂತ್ರಸ್ವರೂಪಂ:
ಮೊದಲ್ ಮೊದಲ್,
ಬೆರ್ಚ್ಚಿದೊಡಮೆರ್ದೆಗಿಡದೆ ನಿಂದುದು ಕಪಿಧ್ವಜಿನಿ
ತಡೆಯಲ್ ಕೆಲಂಬರುಂ, ಮೇಲ್ಬೀಳಲುಂ ಕೆಲರ್,
ಮುನ್ನುರ್ಗಲೆಳಸಿದರು ತರುಶೈಲ ಹಸ್ತರ‍್
ಭಟಾಗ್ರಗಣ್ಯರ್. ದೈತ್ಯನುರು ಮುದ್ಗರದ ಮೊದಲ
ಬೀಸಿಗೆ ನಿಎಲಕ್ಕೊರಗಿದುದು ನೂರ್. ಸಹಸ್ರಮಂ
ತಿರೆಗುರುಳ್ಚಿತು, ತಿಕ್ಕಿತೆರಡನೆಯ ಹತಿ, ಮತ್ತೆ ೧೩೦
ಮೂರನೆಯ ಹತಿಗೆ ಕಾದವರೊಳರೆ, ಸದ್ಗತಿಗೆ?
ಅತಿಭಯಕೆ ಕಾಲ್ಕೆಟ್ಟರಲ್ಲದುಳಿದವೆರೆಲ್ಲಿ?
ಪೆಸರ ಬಿರುದಾದುದಾ ಕಾಲಾಳ್ಗಳಿಗೆ! ಪೊತ್ತ
ಮರ ಕಲ್ಲು ಕೈದುಗಳನಲ್ಲೆ ನಿಂತಲ್ಲೆಸೆದು
ಕಿತ್ತೋಡಿದರು: ಕಲಿಗಳೆಂಬುತ್ತಮರನರಸಿ
ಕಾಣೆ! ಬಹುಕಾಲಮದುಮಿಟ್ಟು ಸಹಜಕಾಮನೆ
ಜಟಿಲವಾಗುತೆ ಪಿಶಾಚ ಪಟ್ಟುತ್ವದಿಂ ಕೊನೆಗೆ
ತನಗೆ ಸೆರಗಾವಲಾಗಿರ್ಪ ಸದ್‌ವಾಸನಾ
ಸಭ್ಯರ್ಕಳಂ ಬಿರಿದೊಡೆದು ಪೊರಮಡಲ್ಕೆಳಸಿ
ಪಾಯ್ವುದು. ಮೊದಲ್ಮೊದಲ್ ಪಡಿಮಲೆತಿದಿರ್ ನಿಂದು ೧೪೦
ತಡೆದೊಡಂ, ಕಡೆದಗದರ ರಾಕ್ಷಸತೆಗಳ್ಕುತವು
ಮುನ್ನ ತಮಗಿರ್ದ ಗೌರವಕೆಳ್ಳುನೀರ್ ಕೊಟ್ಟು
ದಿಕ್ಕುಗೆಟ್ಟೋಡುವುವು, ಬಾಳ್‌ಭೂಮಿ ಸರ್ವಮಂ
ವೈರಿಗೆ ತೆರಂಬಿಟ್ಟು. ಪೇಳ್ ಕರೆದೊಡೇನವರಂ
ಬರಿಯ ಬುದ್ಧಿ? ಅಂತರಾತ್ಮಪ್ರಚೋದನೆಯಿರದ
ಬುದ್ದಿ ತಾನುಂ ಸೋಲದೇನಿಂದ್ರಿಯದ ಹಿತದ
ಲೌಕಿಕಕೆ? — ಅಂತೋಡುತಿರ್ದಿತರರಂ ಕೂಡಿ
ಹಿಂಜರಿಯುತಿರ್ದ ವಾಲಿಯ ಸುತನ ಭಂಗಮಂ
ನೋಡಿ, ಕೆರಳಿದು, ರಾಮಚಂದ್ರಂ ಸಹೋದರಗೆ
ಪೇಳ್ದನಂಗದನೆದೆಗೆ ಧೈರ್ಯದಮೃತವನೆರೆದು, ೧೫೦
ಕಪಿವಾಹಿನಿಯ ತಡೆದು, ಕುಂಭಕರ್ಣನ ಮೇಲೆ
ತಿರುಹಲ್ಕೆ, ಲಕ್ಷ್ಮಣನ ಕರೆಗೇಲ್ದನಂಗದಂ.
ನಿಂದನ್ ಸ್ಮೃತಿ ಮರಳ್ದನೋಲ್. ನಾಣ್ಚಿದನ್ ತನ್ನ
ವಿಸ್ಮೃತಿಗೆ ತಾನಿನಿತು ಕನಲಿ. ತಂದೆಯ ನೆನೆದು
ಬಯ್ದುಕೊಂಡನು ತನ್ನ ಪೇಡಿತನಮಂ. ಕೂಡೆ
ಶಿಖರರೋಪಮದ ಶಿರದ ವೃಕ್ಷಗದೆಯನ್ನೆತ್ತಿ
ಮುನ್ನುಗ್ಗಿದನು, ಕೂಗಿದನು, ಕರೆದನೋಡುವ
ವನೌಕಸ ಧ್ವಜಿನಿಯಾ:
“ಬನ್ನಿ, ಕಲಿಗಳೆ, ಬನ್ನಿ!
ನುಗ್ಗಿ ಮುಂದಕೆ! ನಿಲ್ಲಿ, ನಿಲ್ಲಿ, ಓಡುವಿರೆಲ್ಲಿ!
ಇಲ್ಲಿ ನಿಮಗೆಲ್ಲಿ ಮನೆ? ನಿಮ್ಮೋಟಕಿಹುದೆ ಕೊನೆ? ೧೬೦
ಈ ಧರ್ಮ ರಣಧರಣಿಗಿಂ ಮಿಗಿಲ್ ರಕ್ಷಣಾ
ಕ್ಷೇತ್ರಮಿಹುದೇ ಕ್ಷೇಮಚಿಂತನೆಗೆ ? ರಾಮನಿರ್ಪೀ
ಕ್ಷೇಮ ಭೂಮಿಯನುಳಿಯೆ ಕುಂಭಕರ್ಣನ ಬಾಯ್ಗೆ
ಮಿಗಿಲಲಾ ನರಕಗತಿ ನಮಗೆ? ಭೂತಮಲ್ತಿದು:
ಲಂಕೆಯಟ್ಟಿದ ಬರಿ ಬಿಭೀಷಿಕೆ ಕಣಾ! ಬೆದರ್
ಗೊಂಬೆಯಂ ಕಂಡು ಹೆದರುವ ಮಕ್ಕಳೋಲಂತೆ,
ರಕ್ಕಸರ್, ಕಳನ ಕಳಮೆಯ ವೊಲದ ರಕ್ಷಣೆಗೆ
ಮುಂದೊಡ್ದಿಕೊಂಡು ನುಗ್ಗುತ್ತಿರ್ಪ ಈ ತೃಣದ
ಬೆಚ್ಚಲ್ಗಳುಕಿ ಪಲಾಯನ ಪಟುಗಳಾಗುವಿರ
ಮೂಢ ಮೃಗಪಕ್ಷಿಗಳವೋಲ್! ವಿಶ್ವಕರ್ಮನಿಂ ೧೭೦
ದೊರೆತ ವರಬಲವ ಮರೆತಿರೇಂ? ಸೇತುಬಂಧನಕೆ
ನೀವೆತ್ತಿ ಕಿತ್ತು ಪೊತ್ತದ್ರಿ ಧೈರ್ಯವನಿಂದು
ಮರೆತು ಹಗುರಾದಿರಲ್ಲದೆ, ನೆನೆದೊಡಾ ನೆನಹೆ
ಮನಕೆ ಗೌರವವಾಗಿ ನಿಮಗೀವುದಚಲತಾ
ಸ್ಥೈರ್ಯಮಂ. ನೆನೆಯಿಯಾ ದಿವ್ಯಾಶಿಲ್ಪಿಯ ವರದ
ಮಹಿಮೆಯಿಂ ನಿಮಗೀ ಲಭಿಸಿಹ ಭವ್ಯಗಾತ್ರಮಂ.
ನೆನೆಯಿರೈ ತಂಗಿಯೊರ್ವಳ ಕತದಿ ನಮಗೀ
ಸಂಗರದೊಳೊದಗಿಹ ಮಹತ್ ಪಾತ್ರಮಂ! ಬನ್ನಿ;
ಬನ್ನಿ, ಕಲಿಗಳೆ! ನುಗ್ಗಿ; ನುಗ್ಗಿ ಮುಂದಕೆ! ಬಿರಿದು
ತೆರೆವುದಗಲಕೆ ಸಗ್ಗವಾಗಿಲ್, ನಮ್ಮ ಸಯ್ಪಿನ ೧೮೦
ಮುಷ್ಟಿಮುದ್ಗರಕೆ!”
ಸಮರ್ಥನ ಸೂಚನಾಧ್ವನಿಯ
ಶಕ್ತಿಗೆ ಮನೋವಿಕೃತಿಸಂಭವ ಭಯಂ ತೊಲಗಿ
ಕೆಚ್ಚು ಮರುಕೊಳಿಪಂತೆ, ನಿಂದರ್, ನಿಚ್ಚಯ್ಸಿದರ್,
ಮೊಗದಿರುಹಿದರ್, ಕ್ರೋಧಮಂ ಬಗೆಗೆ ತಂದರ್;
ಕಯ್ಗೆ ಸಿಲ್ಕಿದ ಕಯ್ದುಗಳನೆತ್ತಿ, ರಣರೋಷ
ಘೋರ ಘೋಷಕೆ ಸೋರೆ ರಿಪುಹೃದಯಮೊಕ್ಕೊರಲ್
ಕೂಗಿ, ಮುನ್ನುಗ್ಗಿದರು ಕುಂಭಕರ್ಣನ ಮಹಾ
ಮೆಯ್ಯ ಮಂದರಕೊದೆಯೆ ನುಗ್ಗುವ ಕಡೆದ ಕಡಲ
ಹೆದ್ದೆರೆಗಳೋಲ್, ವಿಶ್ವಕಾರ್ಮಿಕ ಕಲಿಗಳಲಾ.
ವಿಶ್ವಕರ್ಮನ ವರ ಮಹಿಮೆಯಿಂದೆ! ಕಾರ್ಮುಕಂ ೧೯೦
ಖಡ್ಗಮೀ ವಾನರಾಯುಧ ನಿಚಯವೇವುವಾ
ಬ್ರಹ್ಮ ವರಬಲ ಗರ್ವಪರ್ವತ ಮಹಾಸುರನ
ಮುಂದೆ? ತರುಷಂಡಮಯ ಶೈಲಖಂಡಂಗಳನೆ
ಕಿತ್ತೆತ್ತಿದರ್, ಕೈದುಗೆಯ್ದರ್; ಕವಣೆಯೆಸೆದರ್
ಕುಂಭಕರ್ಣನ ಪೆಸಪೊತ್ತಾ ಬೃಹತ್ಕೃತಿಗೆ!
ಋಷಭಂ, ಶರಭಂ, ಗವಾಕ್ಷಂ, ಸುಷೇಣಂ.
ಮೈಂದ ದ್ವಿವಿದ ನೀಲ ಕುಮುದರ್; ಪ್ರಭಂಜನಸುತಂ;
ಗವಯಂ, ಗಜಂ; ಪನಸ ತಾರರ್, ವಲೀಮುಖಂ!
ಜಸದಿಂದಮೊಂದೊಂದೆ ಪೆಸರೆ ಪಡೆಗೆಣೆಯಾದ
ಪಡೆವಳರ್ ನುರ್ಗಿಬರೆ, ಪಿರ್ಗಿದುದು ಪೌರುಷಂ; ೨೦೦
ಪೌರುಷ ಪ್ರತಿಮನೆನಲುರ್ಬ್ಬಿ ಪರ್ಬತಮಾಯ್ತು
ಕರ್ಬುರನೊಡಲ್, ತಡಿತ್ ಪ್ರಭೆಯು ಮುದ್ಗರದಿಂದೆ
ಬಡಿದನಂಗದನೆದೆಗೆ, ಕೆಡೆದವನಿಗೆ ಕಾರಿ
ಕೆನ್ನತ್ತರಂ. ಓವೊ, ಯುವರಾಜನಂತುರುಳೆ
ಕೆರಳಿ ಕುದಿದುಕ್ಕಿದುದು ಕುಂಭಕರ್ಣನ ಮೇಲೆ
ಕಪಿಭಟೌಘಾಬ್ಧಿ: ಬೇಂಟೆಯ ನಾಯ್ಗಳೊಂಟಿಗನ
ತಡೆಯಲದು ಹೂಂಕರಿಸಿ ಕೋರದಾಡೆಯ ಮಸೆದು
ಲಟಕಟಿಸಿ, ಮುನ್ಪಾಯಲೊರಲಿ ಬಿಳ್ದುದು ಮೊದಲ
ನಾಯ್, ಕರುಳ್ ತುಳ್ಕಿ, ಪಿನ್‌ಸರಿದು ಮತ್ತುಂ ಕೆರಳಿ
ಮೇಲ್ ಬೀಳಲಿನ್ನುಳಿದ ನಾಯ್ಗಳಾ ಎಕ್ಕಲಂ
ಕಾಡೆ ನಡುಗಲ್ ಗುಡುಗುಡಿಸಿ ತಿವಿದು, ಹೊಡೆ ಹರಿದು ೨೧೦
ಬೀಳೆ ಕೆಲವಂ, ಬರಿ ಬಿರಿದು ಬೀಳೆ ಕೆಲವಂ,
ಎರ್ದೆ ಸೀಳಿ ಬೀಳೆ ಕೆಲವಂ, ಕೊಲ್ವುದೊಡೆಯನೆಯೆ
ಐತಂದು ಗುರಿಯಿಟ್ಟು ಬಿಲ್ಲೆತ್ತಿ ಕುದುರೆಯನೆಳೆದು
ಕೋವಿಗುಂಡಿಡುವಲ್ಲಿ ಪರಿಯಂತಾ: ಬೆಟ್ಟಮಂ
ತಂದು ತನ್ನೆರ್ದೆಗಿಟ್ಟ ದಿಟ್ಟನಿಗೆ, ಪಕ್ಕೆಲ್ವು
ಮುರಿದುದಾ ದ್ವಿವಿದನಿಗೆ, ಶರಭನುರುಳಿದನವನ
ಮುಷ್ಟಿಘಾತಕೆ ಉಸಿರ್ ಕಟ್ಟಿ, ಜಾನುವ ಹತಿಗೆ
ಸಮನಿಸಿತು ಮೂರ್ಛೆ ನೀಲಂಗೆ, ಋಷಭಗೆ ಹರಣ
ಹಿಂಡಿದುದವನ ಬಾಹುಪೀಡನದಿ. ಕೆಡಹಿದನೊದ್ದು ೨೨೦
ಗಂಧಮಾದನನದ್ರಿದೇಹಮಂ. ಗವಾಕ್ಷನಂ
ಗುದ್ದಿ ಶೋಣಿತಪಂಕದಲದ್ದಿ ತೀಡಿದನ್:
ತಿಕ್ಕಿದನ್ ತಾರನಂ ಪನಸಂಗೆ : ಬೀಸಿದನ್
ಮಣ್ಮುಕ್ಕಲಿರ್ವರ ಮೊಗಂ! ಭಯಕಂರಮಿಂತು
ಗ್ರೀಷ್ಮ ಶುಷ್ಕಾರಣ್ಯಮಂ ದಹಿಪ ದವದಂತೆ
ರಕ್ಕಸನ ಸಂಗ್ರಾಮಮಳುರೆ ಪ್ರಭಂಜನ ಸುತಂ.
ತಾನುಂ ಭಯಂಕರಾಕೃತಿಗುರ್ಬ್ಬಿ, ಸಾನುಮಯ
ಶೃಂಗಮಂ ಕಿತ್ತೆತ್ತಿ. ನೀರ ಭಾರಕೆ ಜೋಲ್ವ
ಪೆರ್ಮೆಯ್ಯ ಕರ್ ಮೋಡಮಂ ಪೊತ್ತು ತರ್ಪುರುವ
ಕಾರ್ಗಾಳಿಯೋಲದು ಕುಂಭಕರ್ಣನ ತಲೆಯ ೨೩೦
ಮಲೆಗೆಸೆದನಿಟ್ಟನಾಕಾಶದಿಂ! ದೈತ್ಯಾದ್ಭುತನ
ಮಹಾ ಮಣಿಕಿರೀಟಂ ಕೆದರಿ ಕರೆದುದು ಕಿಡಿಕಿಡಿಯ
ರತುನ ವಯಿರಗಳುಳುಕೆವಳೆಯಾಲಿಕಲ್ಗಳಂ!
ಗಿರಿಕೂಟಮವನ ಮಂಡೆಗೆ ತಾಗಿದುದು ತಡಂ,
ಸದ್ದೆದ್ದು, ಬೆಸುಗೆಗಳಚಿದ ಬಂಡೆ ಬಿದ್ದುವು
ಕೆಲಕೆ ಸಿಡಿದು. ಕಲ್ ಮರಂಗಳ ಮಳೆಗೆ ಮಡಿದರಾಳ್;
ತೇರ್ ಗುದುರೆಯುರಳಿದುವು; ಘೀಳಿಟ್ಟುವಾನೆಗಳ್
ತಿರೆಗೆ ತಲೆಯೂರಿ. ಕೆನ್ನವಿರ್ ಮುಡಿ ಕೆದರಿತಾ
ರಾಕ್ಷಸಗೆ, ದೆಸೆದೆಸೆಗೆ ಜಡೆಜಡೆಯ ಬಲ್ಗೂದಲಂ
ಕೊಡಹಿ. ರಕುತದ ಧಾರೆಯಂ ಲೆಕ್ಕಿಸದೆ, ಹತಿಗಿನಿತೆ ೨೪೦
ಗತಚೇತನಂ ಮುಹೂರ್ತದಿ ಮತ್ತೆ ಮೆಯ್ ತಿಳಿದು,
ನರಮತಿಗತೀತಮೆನೆ ಕುಪಿತನೆತ್ತಿದನಿಂದ್ರ
ಹೃದ್ರಕ್ತದೊಳ್ ಮಿಂದ ಮುದ್ಗರವನಿಟ್ಟನಯ್
ಹನುಮ ವಕ್ಷಕ್ಕೆ: ಕೈಲಾಸದೊಳ್ ನಿಂದಖಿಲ
ಲೋಕಕ್ಕೆ ಸಾಕ್ಷಿಯಾಗಿರ್ದುಮೆಯ ಕಯ್ ಬೆಮರಿ
ಬಿಗಿದುದಯ್ ಶಿವನ ಕಯ್ಯಂ! ನಿಶಚರನಿಟ್ಟ
ಸಿಡಿಲಹೊಡೆತಕೆ ಚೀರ್ದನನಿಲಾತ್ಮಜಂ, ನಡುಗೆ
ಕಪಿಸೇನೆ, ತಲ್ಲಣಿಸಿ, ತತ್ತರಿಸಿ, ತಲೆತಿರುಗಿ,
ಮೂಗು ನೆತ್ತರ್ ಕಕ್ಕಿ ಬಿದ್ದನವನಿಗೆ, ಊಘೇ
ಎಂದೊದರೆ ರಾಕ್ಷಸ ಕಂಠ ಕೋಟಿ!
ವಜ್ರ ವಪು ೨೫೦
ಹನುಮನಂ ಕೆಡಹಿ, ಮುಂದಕೆ ನುಗ್ಗಿ ಬುರತಿರ್ದ
ರಿಪುವಜ್ರಗಿರಿಗೆ ತಾಗಿದನೂರ್ಮಿಲಾ ಸ್ವಾಮಿ.
ಬತ್ತಳಿಕೆ ಬರಿದಾಯ್ತು; ಮೇಣೆಯ್ಯಮಿಗಮಾಯ್ತು
ಶತ್ರುತನು; ಕಯ್ಯ ಧನುವೊಂದುಳಿದುದನಿತರೊಳ್
ತನ್ನ ಸರಳೇ ತರಿದ ಕುಂಭಕರ್ಣನ ಕರದ
ಮುದ್ಗರಂ ಬಿದ್ದ ಭಾರಕೆ ಬಸವಳಿದನೊರಗಿ
ಮೇದಿನಿಗೆ. ಪರಿದ ತೋಳ್ ಲೋಹಿತ ಸ್ರೋತಮುಂ
ಸೋರುತಿರೆ. ಏರ್ವಡೆದ ಪುಲಿಯವೋಲಬ್ಬರಿಸಿ
ಕೆಂಗಣ್ಣಳಿಂ ನೋಡಿ, ಮುಖ್ಯವೈರಿಯನರಸಿ
ಕಂಡನು ಅದೂರದಲಿ ಸುಗ್ರೀವನಂಗರಕ್ಷೆಯ ೨೬೦
ಕೋಸಲೇಶ್ವರನಾ. ಮಹಾತ್ರಿಶೂಲವನೆತ್ತಿ
ವಾಮಾಕರದಿಂ, ನುಗ್ಗಿದನು ರಾಮನಿರ್ದೆಡೆಗೆ,
ಕೋವಿಗಾರನ ಮೇಲೆ ಪಾಯ್ವ ಪೆರ್ಬುಲಿಯಂತೆ
ಗುಡುಗುಡುಸಿ, ಕಂಡನು ಗಜಂ, ದಿಗ್ಗಜೋಪಮಂ;
ಈ ಬೂತನೆಂತಾದೊಡಂ ದಾಶರಥಿಯಿಂದೆ
ದೂರಮೊಯ್ದುಪೆನೆಂದು ಜಾನಿಸುತುಪಾಯಮಂ
ಬಂದಿಡಿದನಾ ರಾಕ್ಷಸನ ಬೆನ್ಗೆ. ಜಗ್ಗನೆ ನಿಂದು,
ಸಿಗ್ಗುರಿದುರಿದು ತಿರುಗಿದನು ದಾನವಂ, ಕೆರಳಿ
ನೋಡಿದನು ಬಳಿನಿಂದು ನಗುತಿರ್ದು ವಾನರ
ಮಹಾಕುಬ್ಬನಂ, ಹಾಸ್ಯನೇತ್ರದ ವಿನೋದಾಸ್ಯನಂ, ೨೭೦
ಪಿಡಿಯಲೆಡೆಗೈ ಚಾಚಿ, ಬಾಚಿದನು ಬರಿಗಾಳಿಯಂ,
ನೆಲಕೆ ಹತ್ತಿರೆ ಬಗ್ಗಿ, ಜುಣುಗಿ, ಲಂಘಿಸಿ, ಚಿಮ್ಮಿ,
ಸರ್ರನೆ, ಪೆಡಂ ಮೆಟ್ಟಿ, ಗಿರ್ರನೆ ತಿರುಗಿ ಬಂದು,
ಮತ್ತೆ ಗುದ್ದಿದನವನ ಬೆನ್ಗೆ, ವಿಷಾದದೊಳದ್ದಿ
ಖಿನ್ನಚೇತಸವಾದ ವಾನರ ಧ್ವಜಿನಿಯಲಿ
ಗೊಳ್ಳೆಂದು ನಗೆಯೆದ್ದುದೇನೆಂಬೆನಚ್ಚರಿಯಾ!
ಕಿನಿಸಿ, ಕಂಗನೆ ಕನಲಿ, ಮತ್ತೆ ತಿರುಗಿದನತ್ತ
ಇಂದ್ರಾರಿ, ಅತ್ತ ತಿರುಗಿದೊಡಿತ್ತ ನೆಗೆದನ್;
ಇತ್ತ ತಿರುಗಿದೊಡಿತ್ತ ನೆಗೆದನ್, ತಿರುಗಿದನ್,
ಸುತ್ತಿದನ್; ಸುತ್ತಿದನ್; ತಿರುಗಿದನ್, ತಿರುತಿರುಗಿ
ತಲೆ ತಿರುಗತೊಡಗಿದುದು, ಕಣ್ಸುತಿ, ಕಾಲ್ತೊಡರಿ, ೨೮೦
ತತ್ತರಿಸುತೆಂತಾದೊಡಂ ನೀಂತು, ಶೂಲಮಂ
ತಡವಿದನು ಮತ್ತೆ , ರಾಕ್ಷಸನಂತು ಶೂಲಮಂ
ಕೈಕೊಳೆ ಗಜಂ, ಕಪಿಧ್ವಜಂ, ಅಲ್ಲಿ ನಿಲ್ಲದೆ
ನಗುತ್ತೊಡಿದನು ದನುಜನೆದೆಯುರಿಯೆ, “ಕಪಿಯಲಾ
ನೀಂ; ಕಪಿಧ್ವಜನಲ್ತು! ತಿಕ್ಕಿದಲ್ಲದೆ ನಿನ್ನ
ಬಿಟ್ಟಪೆನೆ? ಎನುತ ಬೆಂಬುತ್ತಿದನು ಗಜನಂ
ದಶಾನನಾವರಜಂ ಮಹಾಭೀಳ ಶೂಲವಾಣಿ,
ಪೀಡಿಸಿದ ತೋಳನಂ ಕಾಡಾನೆಯಟ್ಟುವೊಲ್
ಗಜನನಟ್ಟುತ್ತಿರ್ದ ಕುಂಭಕರ್ಣನ ಕಂಡು ೨೯೦
ನಗೆಗಡಲೊಳದ್ದಿದುಚುಭಯ ಸೇನೆ; “ಕಾಣಿರೋ
ಕಪಿವೀರನಂ! ಪಲಾಯನ ಪಟುಭಟನ ಚಟುಲ
ವೇಗಮಂ! ಧೀರನೈಸಲೆ, ನೋಡಿ ಸಗ್ಗಮಂ
ಕೊಳ್ಳೆವೊಡೆಯಲ್ಕೋಡುವದಟಿದೈಸಲೆ ದಿಟಂ!
ಕಂಡು ಕಲಿಯಿರೊ, ಕಲಿಗಳಿರ, ಷಂಡನೀತನಿಂ
ಕಲಿತನದ ಕಲ್ಪಿಯಂ!” ಇಂತು ತಮತಮಗಿವರ್
ಅಳ್ಳೆಯಳ್ಳಿರಿವಂತೆ ನಗುತಿರೆ ನಿಶಾಚರರ್,
ನಕ್ಕರ್ ಕಪಿಧ್ವಜರುಮಾ ತಮ್ಮ ಹಾಸ್ಯಪ್ರಿಯನ
ನೂತನ ಪ್ರಹಸನಪ್ರಸ್ತಾವನಾ ಚತುರ
ಸೂತ್ರಧಾರತೆಗೆ: “ಕಾಣಿರೊ, ಕೋಣಪನ ಮತಿಗೆ ೩೦೦
ಕಳ್ಳಂ ಕುಡಿಸಿ, ಗತಿಗೆ ಮೂಗುದಾಣವನಿಕ್ಕಿ,
ಪಡೆಪಡೆಯ ಬೇಸರವನಾರಿಸಲ್, ಕುಣಿಕುಣಿಸಿ
ಸೆಳೆದೊಯ್ಯುತಿಹನೆಮ್ಮ ಹಾಸ್ಯ ವಿದ್ಯಾಕುಶಲ
ಸೇನಾನಿ! ಬನಿ, ನೋಳ್ಪಂ! ನಿಮ್ಮುಲ್ಲಸಮೆ ತೆರಂ!
ಕಾಣ್ಬಮೀ ಕುಂಭಕರ್ಣನ ಕರಡಿಯಾಟಮಂ!”
ಪಿಡಿದನಾ ಪಿಡಿದನೆನೆ ತನ್ನೆಡದ ತೋಳ್ಸೊಂಡಿಲಂ
ರಾಕ್ಷಸಂ ನೀಡೆ, ಚಕ್ಕನೆ ನಿಂತು, ಫಕ್ಕಕೆ ಚಿಮ್ಮಿ,
ದಿಕ್ಕನೆ ತೊರೆದು ಬೇರೆ ದಿಕ್ಕೋಡಿದನು ಗಜಂ.
ರಾಕ್ಷಸ ಸ್ಥೂಲಕಾಯಂ ತನ್ನ ರಭಸಕ್ಕೆ
ತಾನೆ ಮುಂದೋಡಿದುದು. ಹಿಂದಕೆಳೆದುದು ಮನಂ. ೩೧೦
ಅತ್ತಲೆಳೆದುದು ದೇಹವೇಗಂ ಪದದ್ವಯವನ್,
ಇತ್ತಲೆಳೆದುದು ಚಿತ್ತವೇಗಂ ಬೃಹಚ್ಛಿರವನ್;
ಅತ್ತಲಿತ್ತಲ್ ತೂಗಿ ತೊನೆದನ್! ಅದನ್ ಕಂಡು
ನಗೆವೊನಲ್ ನೆರೆಯುಕ್ಕಿತಿರ್ಕೆಲದ ಬಲತಟಂ
ಗೊಳ್ಳನೆ ಕುಸಿದು ಬೀಳೆ, ಅವಮಾನಕುರೆ ಕನಲಿ,
ಕೋಪಶಿಖಿ ದಳ್ಳುರಿದು ಬೆಂಬತ್ತಿದನು ಮತ್ತೆ
ಕಿಲಕಿಲನೆ ನಗುತೋಡುತಿರ್ದ ಕಪಿವೀರನಂ.
ಕೊಂಕಿ ಡೊಂಕುತೆ, ನಿಂದು ಪರಿಯುತ್ತೆ, ಬೆನ್ದೆಸೆಗೆ
ಬಳಕುತ್ತೆ , ಕಾಲ್ ನಡುವೆ ಪೊಕ್ಕು ಜುಣುಗುತೆ, ಮತ್ತೆ
ರಕ್ಕಸಂ ಪುಗಲಾರದಿಕ್ಕಟ್ಟಿನೊಳ್ ನುಗ್ಗಿ ೩೨೦
ಸಿಕ್ಕಿಸುತೆ, ಹೊಂಚಿ ಹೊಮ್ಮುತೆ ಚಿಮ್ಮಿ ವಂಚಿಸುತೆ,
ಮೂರು ಸೂಳ್ ಸುತ್ತಿಸಿದನಸುರೇಂದ್ರನಂ ಗಜಂ
ದುರ್ಗತ್ರಿಕೂಟಮಂ ಲಖೆಯಾ! ಪೇಳ್ವೆನೇಂ
ಕುಂಭಕರ್ಣ ಸ್ಥಿತಿಯ ಪರಿಹಾಸಮಂ? ಮುಡಿಗೆದರೋ,
ಮೈಬೆವರೊ, ಸುಯ್ಲುಗಳೊ, ಹೊಯ್ವಳ್ಳೆಗಳೊ, ಸೋರ್ವ
ಶೋಣಿತವೊ, — ವಿಕಟ ಭೈರವವಾದುದಾ ರುಂದ್ರ
ಹಾಸ್ಯದೃಶ್ಯಂ.
“ಇನ್ ತಳ್ವುದನುಚಿತಂ, ನೃಪೇಂದ್ರ
ಬಿನದಮೆ ಬಿಸದಮಪ್ಪುದಿನ್ ತಡೆಯೆ, ಮುನ್ನಮಾನ್
ಪೇಳ್ದೆನಲ್ಲವೆ ನಿನಗೆ ನನ್ನ ಈ ಅಗ್ರಜನ
ವರ ಬಲಾನ್ವಿತ ಮಹಾ ಮಹಿಮೆಯಂ? ಪೂಜ್ಯನ್,
ಪರದಾರ ಸೋದರನ್, ರುದ್ರ ಭಕ್ತನ್! ತನ್ನ
ಪಕ್ಷದ ಅಧರ್ಮದೌರ್ಬಲ್ಯಮೊಂದಿರದಿರಲ್
ತ್ರೈಜಗದೊಳಿರ್ದದಾರ್ ಈತನನ್ ತಡೆವವರ್?
ಈಗಳುಂ ಧರ್ಮಾಸ್ತ್ರಮಲ್ಲದೆಯೆ ನಾಮಲ್ತು
ಗೆಲ್ವುದಿವನಂ, ಕಾಣ್ ಮಹಾಕ್ರುದ್ಧನಂ, ಭ್ರುಕುಟಿ
ಬದ್ಧನಂ, ಲಯಕಾಲದಂತಕೋಪಮ ಯುದ್ಧ
ಸಿದ್ಧನಂ! ನಿನ್ನ ಬಿಲ್ಗೇರದಿದೆ ಹೆದೆ,ನಿನ್ನ
ಮಂತ್ರಾಸ್ತೃದೆಸುಗೆಯಿಂ ಜೇಗೆಯ್ಯದಿರೆ ನಾರಿ,
ಧ್ವಜಮಾತ್ರಮಪ್ಪುದೆ ದಿಟಂ ವಾನರಧ್ವಜಿನಿ!
ಶಿವ ಶಿವಾ ಸಹಿತ ಕೈಲಾಸ ಕಂಪನಕಾರಿ ೩೪೦
ತನ್ನಖಿಲ ಲಯಶಕ್ತಿಯಂ, ಕೊನೆಯ ರಣಕಾಗಿ,
ಕರೆಯುತಿಹನದೊ ತನ್ನ ಪುರುಷಕಾರದ ಮಹತ್
ಪಾಳಾತದಿಂ!”
ವಿಭೀಷಣನೆನಲ್ ಪ್ರಜ್ಞಾನಿ
ರಾಮಚಂದ್ರಂ; “ದೈತ್ಯಪೂಜ್ಯ, ಕರ್ಮ ಸಮೆದು
ಪೊಳ್ತು ಬರೆ, — ಬಹುಜೀವರದು, ಅವನದೊರ್ವನದೆ
ಅಲ್ತು; — ನೋಡುತಿರು, ಅಪ್ಪುದಪ್ಪುದು ತಪ್ಪದೆಯೆ!
ನನ್ನ ದೆಸೆಗಿವನಳ್ಕನುಳಿ.” ಎನುತ್ತುಗ್ರಧೀ,
ಜಡೆವಿತ್ತ ನವಿರಗುರ್ವಿನ ಮೊಗದ ದಾಶರಥಿ,
ನಿಂದನಚಲಂ ಧನುಷಾಣಿ, ಬಾಣಧಿ ನಿಮಿರೆ
ಬೆನ್ನಿನಲಿ!
ಇತ್ತಲಿವರಿಂತು ಸಂವಾದಿಸಿರೆ ೩೫೦
ಅತ್ತಲಾ ಕುಂಭಕರ್ಣ ಮೀಸೆ ಹೊಗೆಯಾಯ್ತು.
ಅಗ್ನಿಯನುಗುಳ್ವ ಜೀರ್ಕೋವಿಯಾದುದು ಮೊಗಂ,
ದೈತ್ಯನಂಗಾಂಗದಿಂ ಜ್ವಾಲೋರ್ಮಿಗಳ್ ಪೊಣ್ಮೆ,
ವಿದ್ಯುದುರಗಂಗಳೊಲ್ ದೆಸೆದೆಸೆದೆಸೆಗೆ ಚಿಮ್ಮಿ,
ನಿಡುನೀಳ್ದ ನಾಲಗೆಗಳಿಂ ನೆಕ್ಕಿದವು, ಸುತ್ತಿ
ನಿಂದ ವನನರ ದಳಂ ಧಗಧಗನುರಿದು ಸೀದು
ಕರ್ಮಸಿ ಸುರುಳ್ವವೋಲ್, ಉರಿಯ ಕಾರುವ ಗಿರಿಯ
ರೂಪಾನುಸಂಧಾನದಿಂ ಜಗದ್ ಭೀಕರಂ
ತಾನಾಗಿ ಮುನ್ನುಗ್ಗಿದನು, ಬೀದಿವರಿದನ್,
ಲಯೌರ್ವಾನಳಂ ಪಾಯೆ ಕುದಿಕುದಿದು ಹಿಮ್ಮೆಟ್ಟಿ ೨೬೦
ಬತ್ತುವಂಭೋಧಿಯಾಗಲ್ ವನಾಲಯ ಚಮೂ
ಸಮುದ್ರಂ, ರೋದಿಸಿದರೊಳರಿದರ್, ಪೆಳರಿದರ್,
ಕೆಟ್ಟೆವೋ ರಾಮನಂ ಕಟ್ಟಿಕೊಂಡೆಂದೊರಲಿ
ಪುಯ್ಯಲ್ಚುತೋಡತೊಡಗಿದರತ್ತಲಿತ್ತಲ್
ಮನಂಗೆಟ್ಟು. ತಡೆಯಲಾರದೆ ತನ್ನವರ ಗತಿಗೆ,
ರವಿ ರಕ್ಷಣೆಯ ಬೇಡಿ, ನಡೆದನಸುರಂಗಿದಿರ್
ರವಿತನೂಜಂ. ಮಗ್ನನಾದನೆ ಕಪೀಂದ್ರಂ
ಮಹಾಸುರ ಲಯಾಗ್ನಿಯೊಳ್? ವಿಘ್ನ ಬಂದುದೆ ಕುಲದ
ಕೀರ್ತಿಗೆ? ಪ್ರತಿಜ್ಞೆಗಾದುದೆ ಭಂಗಮೆಂದಾ ನಳಂ
ರಚಿಸಿದನು, ತನ್ನ ತಂದೆಯ ಶಿಲ್ಪ ಬಲದಿಂ, ೩೭೦
ಕಡಲ್ಗಳನೆ ಮೊಗೆಮೊಗೆದು ತೊರೆಗರೆವ ಮಾನಸಿಕ
ಜಳಯಂತ್ರ ಮೇಘಂಗಳಂ, ಕುಂಭಕರ್ಣಂಗೆ
ಕುಂಭಾಭಿಷೇಕಮಾದುದೊ ಮೃತ್ಯುಹಸ್ತದಿಂ
ಪೇಳೆನಲ್ ! ಮೆಲ್ಲಮೆಲ್ಲನೆ ನಂದತೊಡಗಿತಯ್
ನಿಶಾಚರ ಪಿಶಾಚಾನಲಂ. ಭಯಂ ಬಡಿದುದನೆ
ಕಂಡರೆಲ್ಲರು ದಶಗ್ರೀವಾನುಜ ಮಹಾಭೀಳ
ಬಾಹುರಾಹುಗ್ರಸ್ತ ಸುಗ್ರೀವ ಸೂರ್ಯನಂ,
ತಾಪಮೂರ್ಛಿತ ವೀರ್ಯನಂ, ಸಿಕ್ಕಿದುದು ಶಿರಂ,
ಮಿಕ್ಕಿ ಮೆಯ್ಯೇವುದೆನ್ನುತೆ ರಕಸಂ, ಜವಂ
ಕಪಿಕುಲಪ್ರಾಣಮನೆ ಪೊತ್ತುಯ್ವವೊಲ್, ಪೊತ್ತು ೩೮೦
ನಡೆದನೊ ರುಮಾ ಭಾಳ ಬಿಂದು ಕುಂಕುಮಸಿಂದು
ಪೂರ್ಣೇಂದುವಂ!
“ಸಿಕ್ಕಿದನೊ ದೊರೆ ರಕ್ಕಸನ
ಕಯ್ಗೆ, ರಕ್ಷಿಸೊ, ರಾಮ, ನಿನ್ನ ಹೃನ್ಮಿತ್ರನಂ!”
ಎನುತಮೊಕ್ಕೊರಲೊರಲುತಿರೆ ಕಪಿಕಟಮಾ
ಋಕ್ಷದ್ವಜಂ ವದ್ಧನಿನ್ನೊಮ್ಮೆ ತ್ರಿವಿಕ್ರಮ
ಪ್ರದಕ್ಷಿಣೆಗೆ ಮುಂಬರಿವನೊಲ್ ಪರಿದು, ತಡೆದಾನಾ
ಅಮರೇಂದ್ರವೈರಿಯಂ, ಸಿಡಿಲ ಸಾಟಿಯೆ ಹಿಡಿದ
ತನ್ನೆಡದ ಕೈಯ ಶೂಲದಿನಿಡಲ್ ಜಾಂಬವಗೆ
ಕುಂಭಕರ್ಣಂ, ಪಿಡಿದನದನೇವೇಳ್ವೆನದ್ಭುತಕೆ!
ಪಿಡಿದು, ಮುದುಕಂ ಮುರಿದೆಸೆದನದನೊತ್ತಿ ತನ್ನ
ಮೊಳಕಾಲ್ಗಳಿಂ, ವಾಲಿಯವರಜನನಿತರೊಳ್
ಮೆಯ್ತಿಳಿದನರಿತನು ಅಪಾಯಮಂ, ನೆನೆದನು
ಉಪಾಯಮಂ, ಕಚ್ಚಿ ಕಿವಿಗಳನುಸಿರ್ ಕಟ್ಟೆ
ಬಾಯ್ಮುಚ್ಚಿ, ಚಕ್ಕಳಗುಳಿಯನಿಕ್ಕಿದನು, ಪಕ್ಕೆ
ಬಿರ್ಬ್ಬಿರಿ ಬಿರಿಯುವಂತೆ, ನಕ್ಕನೋ? ಕೂಗಿದನೊ?
ಕುಣಿಕುಣಿದನಾನೆ ಮೆಯ್ ಕೊಡಹುವಂದದಿ; ಕೊಡಹಿ,
ಕಪಿರಾಜನಂ ಕೆಡಪಿ, ತುಳಿಯಲ್ಕೆ , ಬೆನ್ಗೇರ್ದ
ಚಿರತೆಯೊಲ್ ನಖಮೊತ್ತೆ ತಳ್ತು ಕುಳ್ತುರುಳದೆಯೆ
ಪಟ್ಟುವಿಡಿದಿರ್ದಾತನಂ, ತನ್ನ ಕರಿಕರೋಪಮ
ಹಸ್ತದಿಂ, ಕಿತ್ತೆತ್ತಿ ನೆಲಕ್ಕಿಕ್ಕಿದನು ಕುಕ್ಕಿ.
ಸುಗ್ರೀವ ಕಂಕಾಲ ಪಂಜರದ ಶಿಥಿಲತೆಗೆ
ಪಾರದಿರುತಿರ್ದುದೇ ಪ್ರಾಣಕೀರಂ? ಚಿಮ್ಮಿ
ಪೊಡೆಸೆಂಡವೊಲ್ ಪುಟಂನೆಗೆದು ಬರ್ದುಕಿದನಲಾ!
ಬೆನಕನಂ ಕರೆದಳ್; ಒರೆದಳ್ ಭವಾನಿ: “ನಡೆ,
ವಿನಾಯಕ, ಪ್ರಫುಲ್ಲಿಸು ರಘೂತ್ತಮ ಮನೋಂಬುಜದಿ
ಅಭವ ಸಂಜ್ಞಾನ ಮಹದಿಚ್ಛೆಯಂ.”ಅತೀಂದ್ರಿಯ
ವಿಧಾನಕೆ ವಿಲಂಬಮೆತ್ತಣದೊ? ಸುಮುಹೂರ್ತಮಂ
ತಿಳಿದನಪರೋಕ್ಷಮಾ ವಶಿಷ್ಠಪ್ರಬೋಧಿತಂ.
ಅವಶಮೆನೆ ತಪ್ತ ತಾಮ್ರಾಕ್ಷನಾದನ್. ಖಂಡ —
ಪರಶುವೆ ಪಿನಾಕಮಂ ತುಡುಕಿದನೆನಲ್ ಉಗ್ರ ೪೧೦
ಕೋದಂಡಧರನಾಗಿ, ಉಪಮಾ ದರಿದ್ರತೆಗೆ
ಕವಿಕಪಾಲಕರೆ ಸರಸತಿಯೆ ಶಿವವೃತ್ತಿಯಂ
ಕೈಕೊಂಡು ಭಿಕ್ಷಾಟನೆಗೆ ಹೊರಮಡುವಳೆನಲ್,
ಕುಂಭಕರ್ಣಂಗೆರಡುಮಡಿ ಜಗದ್ ಭೀಕರಂ
ಭಾವೋಗ್ರನಾಗಿ, ಸುಗ್ರೀವ ಜಾಂಬವರಸರು
ಸಂಗ್ರಾಮ ಧರೆಗೆ ನಡೆದನು ರಾಮನತಿಭೀತಿ
ಸಂಚರಿಸಿ ಕಂಪಿಸೆ ಕನಕಲಂಕೆ? ಕಂಡನಾ
ದೈತ್ಯ ದೈತ್ಯಂ ತನ್ನನಂಡಲೆಯೆ ಬರುತಿರ್ದ
ಕೋದಂಡಪಾಣೆಯಂ, ಕಂಡುದೆ ತಡಂ ಹಿಗ್ಗಿ,
ಕೇಕೆ ಹಾಕಿದನಟ್ಟಹಾಸಕೆ ತ್ರಿಕೂಟಗಿರಿ ೪೨೦
ಗಹ್ವರ ಗುಹಾ ಧ್ವನಿಗಳನುರಣಿಸೆ, ನುಸಿಗಳಿಗೆ
ಕೀಳ್ ಗಣ್ಚಿ ಸುಗ್ರೀವ ಜಾಂಬವ ಪ್ರತಿಭಟನೆಯಂ,
ಜಾನು ತಾಡನದಿಂದವರ್ಗಳಂ ಕೆಲಕ್ಕೊತ್ತಿ
ಓಸರಿಸಿ ಬೀಸೆಸೆದು ಧಾವಿಸಿದನವನಿಜಾ
ಪ್ರಾಣಮೂರ್ತಿಯ ಸನ್ನಿಧಾನಕ್ಕೆ: “ಲಭಿಸಿದೆಯೆಲಾ
ಕೊನೆಗೆ ನೀನ್: ಎನ್ನ ಸಯ್ಪಿದು ದಿಟಂ! ದೊರೆಯುವೆಯ
ಬರಿದೆ ನಾವರಿಸಿದರೆ? ನಿನ್ನಡಗುದಾಣದಿಂ
ನೀಂ ಪೊರಮಡುವವೊಲ್ ಕೆರಳ್ಚಿದಲ್ಲದೆ ನಮಗೆ
ಬಹಿರಂಗವಾಗುವೆಯ? ಅನ್ಯರಿಗೆ ಕೈದುಗಳ್.
ನಿನ್ನನ್ನರಂ ತಾಗಲೆಮೆಗೆ ಕಯ್ದುಗಳೇಕೆ
ಕಲಿಗಳಿಗೆ?” ತನ್ನ ತಾನ್ ಮರೆತನೋಲ್, ಉನ್ಮತ್ತ ೪೩೦
ರೋಷದಿಂ ಧಾವಿಸಿದನಾ ರಾಕ್ಷಸಾದ್ಬುತನ್,
ಗುಂಡುಗಾಯಂಗೊಂಡು ಕಡುನೊಂದ ಪಡುಮಲೆಯ
ಪಟ್ಟೆಹುಲಿ ಕೋವಿಯಾಳಂ ಸೀಳಲಬ್ಬರಿಸಿ
ಕುಪ್ಪಳಿಸುವಂತೆವೋಲ್!
ಅಪ್ಪಳಿಸಿ ನೆಗೆಯ, ನೆಲಂ
ಜರ್ಗ್ಗಿದುದು, ಗುಡುಗಿತಂಬರಮಂಬರೌಕಸರ್
ಬೆದರಿ ರಾಮಕ್ಷೇಮ ಶಂಕೆಗವತರಿಸಿದರ್,
ನಿಂದರ್ ನೆಲಸಿ ರಾಮನಂಗಾಂಗಗಳಲವರ
ರಕ್ಷಣೆಯ ತಮ್ಮ ರಕ್ಷಣೆಗೆ, ಬಲಿಯಾದುದೆ
ಅಯೋಧ್ಯೆ ಲಂಕೆಯ ಮಾರಿಗೆನುತೆ ಕಿಷ್ಕಿಂಧೆಯರ್ ೪೪೦
ದಳದಳಮೆ ಪಾಯ್ದರು ನಿಶಾಚರನ ಸಮ್ಮುಖಕೆ.
“ತಡೆ, ತಡೆ, ಪಿಶಾಕೇಂದ್ರ: ತಿರುಗು ತಿರುಗಿತ್ತಣ್ಗೆ.
ನಾವಿರಲ್, ಗೆಲ್ಲದೆಮ್ಮಂ, ಸ್ವಾಮಿ ಸನ್ನಿಧಿಗೆ
ನೀನೆಂತು ಸೇರುವಯ್?” ಎನುತಿಂದ್ರಿಯಂಗಳ್
ಮುಮುಕ್ಷುವಂ ಮುತ್ತುವೊಲ್ ಕುಂಭಕರ್ಣನಮೇಲೆ
ಮುಗ್ಗಿದರು ರಣಲಗ್ಗೆಯಂ, ರಾಗವೇಗದಿಂ,
ವಿದ್ವೇಷದಿಂ, ವೈರಭಾವ ಸಾಧಕನಂತೆ,
ತಮ್ಮಮೇಲೇರಿ ಬರುತಿರ್ದಂಗೆ ರಾಮನಿಸೆ
ವರ ಖರ ಶರಂಗಳನವಂ ತರಿದಿಕ್ಕಿ, ‘ನಿನ್ನ ಹೃದ್
ರಕ್ತ ರಸದೊಳಗದ್ದಿದಲ್ಲದೆಯೆ ತಣಿಯದೀ ೪೫೦
ನನ್ನ ಮುದ್ಗರ ಮುಷ್ಠಿ ತೃಷ್ಣೆ!’ ಎನುತ್ತಾರ್ದು
ತುಡುಕಿದನು, ನಖಮಮರೆ, ಜನಕರಾಜನ ಮಗಳ
ಮಾಂಗಲ್ಯ, ಸಂಸ್ಪರ್ಶ ರೋಮಹರ್ಷಂಕರನ
ವಕ್ಷ ವೈಕುಂಠಮಂ, ಶಕ್ತಿ ದೈವಿಕಮಲ್ತೆ
ದುಂದುಭಿ ಕಳೆವರವನಂದು ಬಿಲ್ದುದಿಯಿಂದೆ
ಚಿಮ್ಮಿದವನಂ ತಮ್ಮನೆಂಬೊಂಗೆ? ಲಜ್ಜೆಯಿಂ
ಪಿಂಜರಿಯುತೊಂದೆರಳ್ ಪಜ್ಜೆ, ನಿಂದನಚಲಂ,
ಕೈಲಾಸ ಭರಮಯ್ತೆನಲಾತ್ಮ ಗೌರವಂ, ಮೇಣ್
ಕೋದಂಡದಗ್ರದಿಂ ನೂಂಕಿ ಸಿಡಿದನ್ : ಜಡಮೆ?
ಜಡಬುದ್ಧಿ ಮೇಯಂಮೆ ತಪಶ್ಚೇತನಂ ? ಸಿಡಿದು ೪೬೦
ಕೆಡೆದುದೊ ಬೃಹದ್ದೇಹಮೊಂದು ಬಿಲ್ಲಂತರಕೆ
ರಾಕ್ಷಸನಾ ! ದನುಜ ವಾನರ ದಳಗಳೆರಡುಮುಂ
ಬಿಲ್ಲು ಬೆರಗಾಗಿ ನೋಡುತಿರೆ, ದಾನವ ಜಟ್ಟಿಗಂ
ಮೇಲೆಳ್ದು, ಮೈಕೊಡಹಿ. ಘೋರನಾದಂ ಕೂಗಿ
ಮರಳಿ ಮೇಲ್ವಾಯೆ ರಾಘವನೆಚ್ಚನೈಂದ್ರಮಂ
ನಿಶಿತಾಸ್ತ್ರಮಂ. ತಡೆಯೆ ಚಾಚಿದೆಡಗೈಯನದು
ಕಡಿದು ತುಂಡರಿಸೆ, ಯಾತನೆಗೆ ಭೀಕರನಾಗಿ
ಹೋಯೆಂದೊರಲ್ದು ಪಾಯ್ದುನು ಕಾಲಯಮನಂತೆ,
ಲಯಭೈರವಾಟೋಪದಿಂ ಬರ್ವ ರಕ್ತಾರ್ದ್ರ
ರಣರೌದ್ರನಂ ಕಂಡು, ಸರ್ವಮಂಗಳೆಯಂ ೪೭೦
ಭವಾನಿಯಂ ನೆನೆದು ಶಕ್ತ್ಯಸ್ತ್ರಮಂ ಸೆಳೆದನಯ್
ತೂಣೀರದಿಂ, ಶಿವನೆ ಕಾತರಿಸೆ!
“ಕೇಳ್, ಗಿರಿಜೆ,
ಬ್ರಹ್ಮ ವರಬಲ ಬಲಿಷ್ಠಂ, ಶಕ್ತಿಗಳಿಯುವನೆ
ಮದ್‌ಭಕ್ತನೀ ಕುಂಭಕರ್ಣಂ? ಪರಾಭವಂ
ನಿನಗಾಗಲಾಂ ಸಹಿಸೆನಿದೊ; ಈ ತ್ರಿಶೂಲಮಂ
ಕಳುಹಿಪೆನ್; ನಿನ್ನ ಶಕ್ತ್ಯಾಯುಧಕೆ ನೆರಮಾಗಿ,
ದೈತ್ಯಭಕ್ತನ ಶಿರವನರಿದು, ನಮ್ಮೆಡೆಗವನ
ಕಳುಹಲ್ಕೆ!”
ಬೆಳ್ಳಿವೆಟ್ಟಿಂ ಬೀಸಿದನು ಶಿವಂ
ರುದ್ರತ್ರಿಶೂಲಮಂ, ಪೊಕ್ಕುದಾಕಾಶಮಂ
ಮರ್ತ್ಯ ಪೃಥ್ವೀ ತತ್ತ್ವದಾ, ವಿಕಂಪಿಸಿತು ಭೂ; ೪೮೦
ಸ್ವಂದಿಸಿತನಿಲಮಂಡಲಂ, ಭಯಪುಲಕಿತಮೆನಲ್;
ವಾನರರ್ ರಾಕ್ಷಸರ್ ಚಕಿತನೇತ್ರರ್ ನೋಡೆ,
ಮೈದೋರ್ದುದೊಂದು ಪಗಲರಿಲೆನಲ್, ಗೋಚರಿಸಿತಾ
ತ್ರಿಣೇತ್ರಾಯುಧಂ, ಉರಿದುರಿದಳ್ಕೆ ಬೀಳ್ವಂತೆರಗಿ
ಸಹಗಮಿಸಿತಿನಕುಲನ್ ರಾವಣಾನುಜ ಶಿರಕೆ
ಗುರಿಯೆಚ್ಚ ಶಕ್ತಿಮಂತ್ರದ ಬಾಣಚೇತನಕೆ!
ಸುಸಜ್ಜಿತಾಯುಧಾಗಾರಮೆನೆ ವಜ್ರದ
ಶಿರತ್ರದಿಂದುರ್ಕಿನ ತನುತ್ರದಿಂದಶನಿವೊಲ್
ನುರ್ಗ್ಗಿ, ಕೆನ್ನೀರು ತೊರೆಬಸಿವೆರಡು ತೋಳ್ಗಳಂ
ಮುನ್ ಚಾಚಿ, ಬಡಿಯೆ ಪಾಯುತ್ತಿರ್ದ ರಕ್ಕಸದಟನ ೪೯೦
ಮೆಯ್ಯೊಳವಿತಿರ್ದ ಭೈರವನೀಕ್ಷಿಸಲ್ ತನ್ನ
ಸ್ವಾಮಿಯ ತ್ರಿಶೂಲಮಂ, ಸಂಕೇತಮಂ ಗ್ರಹಿಸಿ,
ನೆಗೆದನಲ್ಲಿಂ ಪೊರಗೆ ಕೈಲಾಸದತ್ತಣ್ಗೆ.
ಬಂದು ತಾಗಿತು ತಲೆಗೆ ಶಿವಸಹಿತ ಶಕ್ತ್ಯಾಯುಧಂ.
ಕಂಡರೆಲ್ಲರು ದಶಗ್ರೀವ ಸೋದರ ಶಿರಂ
ಧರೆಗುರುಳ್ವಾಭೀಳ ದೃಶ್ಯಮಂ! ಪೇಳ್ವುದೇಂ,
ಪೆರತೊಂದು ಕುಂಭಕರ್ಣಂಗಾದುದನುಭವಂ
ಲೋಕಾತಿಗಂ:
ತಿರೆ ನುಗ್ಗಿತಾಗಸಕೆ. ತತ್ತರಿಸಿ
ರವಿಯ ಬಿಂಬಂ ತಾಗಿದುದು ಶಶಿಯ ಬಿಂಬಕ್ಕೆ,
ತುಂಬಿದುದು ವರ್ಣವರ್ಣ ವಿಚಿತ್ರಮೊರ್ ಜ್ಯೋತಿ ೫೦೦
ಭುವನಾಂಡಮಂ, ನಾದಮಯ ವಾಯುಮಂಡಲಂ
ನಕ್ಷತ್ರ ವೃಷ್ಟಿಮಯಮಾದತ್ತು. ಹಬ್ಬಿದುವು
ಹೊಗೆ ಬೆಂಕೆಗಳ್, ನೀಲಿಗೆಂಪುಗಳ್, ಸೂರ್ಯಬಿಂಬಂ
ಬಡಿದ ರಭಸಕೆ ಮುರಿದ ಕೋಡಿನ ಕೋರೆದಿಂಗಳ್
ತಿವಿಯೆ, ಸೀಳಿದು ಪೊಡವಿ ಪುಡಿವೋಯ್ತು. ಕಣ್ ಕೇಳ್ದು,
ಕಿವಿ ಕಂಡು, ಕರ್ಮ ಪಲ್ಲಟವಾದುದಿಂದ್ರಿಯಕೆ.”
ಪೊರ್ದಿದುದು ಪಂಚತ್ವಮಂ, ಅಹಂಕೃತಿಲಯದಿ,
ಪಂಚೇಂದ್ರಿಯಪ್ರಪಂಚಂ ಅತೀಂದ್ರಿಯದೊಂದು
ದರ್ಶನಾನಂದದೊಳ್ ಮುಳುಗಿತಾತ್ಮಪ್ರಜ್ಞೆ
ನಿರ್ವಿಕಲ್ಪಪ್ರಲಯ ಯೋಗಕ್ಕೆ!
ಇತ್ತಲಿದೊ ೫೧೦
ಕಾಣ್: ಮೈಥಿಲೀ ಧವಂಗದೆತ್ತಣಾವೇಶವೊ?
ಸಮಾಧಿಸ್ಥನಂತೆ ನಿಷ್ಪಂದ ತನು ನಿರ್ನಿಮೇಷಂ
ನಿಂದನಂತರ್ಮುಖಿ, ಅಲೋಕಸಾಮಾನ್ಯಮಂ
ಅನುಭವಿಸುತಂತಸ್ಥ ಸರ್ವತ್ವಮಂ, ವ್ಯಷ್ಟಿಯೊರ್
ಸತ್ತ್ವಸರ್ವಸ್ವಮಂ ಪಿಳಿದು ಪೀರ್ದುದೊ ವಿರಾಟ್
ಪೂರ್ಣತ್ವಮೆನೆ, ಶೂನ್ಯಸಂಸಾರನೊಯ್ಯನೆಯೆ
ಬಿಲ್ಲ ಮೇಲೊರಗಿ, ಕುಸಿದನು ತನ್ನ ರಕ್ತಮಯ
ನೀಲಿಮೆಯ ಶುಭಗಾತ್ರಮಂ. ಹೊದಿಸಿದುದು ಬೈಗು
ಲೋಹಿತಾಭವ ತಮಿಸ್ರಾಂಚಲದಿನವನಿಯಂ,
ಘೋಷಿಸಿದುವಿರ್ಕೆಲದ ತೂರ್ಯಗಳ್ ರಜನೀ ೫೨೦
ವಿರಾಮಮಂ ಸಂಗ್ರಾಮದಾ. ವಿಶ್ರಮಿಸಿತಯ್
ರಣಕ್ಲಾಂತರಂತೆವೋಲ್, ಕ್ಷಣದಾ ಕ್ಷಣಿಕಶಾಂತಿ!