ಪುಣ್ಯ ಹೃದಯದ ಸುಧಾ ಸಂಗಾನುರಕ್ತಿಯಿಂ
ಬ್ರಹ್ಮಾಸ್ತ್ರಮಾ ಪುಲಸ್ತ್ಯಜನ ವಕ್ಷದೊಳಾಳ್ದು
ಪೀರ್ದುದಯ್‌ ಪ್ರಾಣಪೀಯೂಷಮಂ. ಹಯಬಲಕೆ
ಜಿಹ್ವೆ ಜೋಲ್ವನಿತು ಜವದಿಂದೆ, ರುಧಿರಸ್ರಾವ
ಘೋರನಂ, ಬಾಣಪುಂಖಂಡಬಿಡಿದ ವಾಮಕರ
ಧೀರನಂ, ಭ್ರಾಂತಿಗದ್ದಿದ ಮತಿವಿಕಾರದಾ
ದೈತ್ಯೇಂದ್ರನಂ ತಂದನರಮನೆಗೆ, ತವಕದಲಿ
ತೇರೆಸಗಿ, ಸೂತನೇಕಾಂಗಿ, ಮಹಾತಿ ಖೇದದಲಿ
ಹಬ್ಬಿದುದು ಕಳವಳಂ. ತಬ್ಬಿತು ಭೀತಿ ಪರಿಜನಕೆ.
ಬೆಬ್ಬಳಿಸಿದರು ಬೆಜ್ಜರುಬ್ಬೆಗದೊಳಸ್ತ್ರಮಂ      ೧೦
ತೆಗೆವ ಪರಿಯರಿಯದತಿ ಚಿಂತೆಯಿಂ. ತೇರಿಂದೆ
ಪಲ್ಲಕ್ಕಿಗಿಳಿಸಿ ಮೂರ್ಛಿತ ಮಹಾರಾಜನಂ
ಮಲಗುಮಂಚಕೆ ಮೆಲ್ಲನೊಯ್ದರು ಮಹಾರಾಣಿ
ಮಂಡೋದರಿಯ ಧೃತಿಯ ಸನ್ನಿಧಿಗೆ.
ಕಾಣುತಾ
ಪ್ರಿಯನ ನೆತ್ತರ್ ಸೋರ್ವ ಗಾತ್ರದಾ ರಣರುದ್ರ
ಭಂಗಿಯಂ, ಬ್ರಹ್ಮ ಶರ ಸಂಗಿಯಂ, “ಹಾ ಸ್ವಾಮಿ,
ಪೂಣ್ಕೆ ಸಂದುದೆ? ತೋರು ತೋರೆನಗೆ ಸೆರೆವಿಡಿದ
ಮೈಥಿಲೀನಾಥನಂ!” ಎಂದು ಸುಯ್‌ಸುಯ್ದಳುತೆ
ದಶಕಂಠನರ್ಧಾಂಗಿ ಶೈತ್ಯೋಪಚಾರಮಂ
ತಾನೆಸಗಿ, ಬೆಸಸಿದಳು, ಮಂತ್ರಶುಶ್ರೂಷೆಯಂ            ೨೦
ಶಸ್ತ್ರ ಶಾಸ್ತ್ರ ಚಿಕಿತ್ಸೆಯಾ. ಮರಳಿದತ್ತೊಯ್ಯನೆ
ಮಹೀ ಪ್ರಜ್ಞೆ. ಕೆಲಕೆ ಹೊರಳಿದನಿನಿತು ನರಳಿದನ್‌
ನೋವಿಂಗೆ, ಕಣ್ದೆರೆದು ನೋಡಿದನ್‌; ಕೊಡಹಿದನ್‌
ವಿಸ್ಮರಣೆಯಂ, ತಿರುಗಿದನ್‌ ಸ್ಮೃತಿಯ ಜಾಗ್ರತಕೆ.
ವದನಕೊಲಿದುದು ಶಾಂತಿ, ಸಂತೋಷ ಚಿತ್ತಮಂ
ಕನ್ನಡಿಸಿದುದು ನಯನ ಕಾಂತಿ. ಹೆಮ್ಮೆಯ ನಗೆಯ
ಮುಗುಳಂ ಮಲರ್ದುದಧರಂ. ಪ್ರಿಯೆಯ ಮೊಗನೋಡಿ
“ಸಿಂಗರಿಸವೇಳೆಮ್ಮ ಪುರವನಿತೆಯಂ ರಾಜ್ಞಿ,
ಪೊಸ ತಳಿರು ತೋರಣಗಳಿಂ! ಶುಭದ ವಾರ್ತೆಯಂ
ಘೋಷಿಸಲಿ ಮಂಗಳದ ವಾದ್ಯಗಳ್‌! ಲಂಕಾ   ೩೦
ಲತಾಂಗಿಯರ್ ಸಂಗೀತದಿಂದುಲಿಯಲೀ ಮಹಾ
ರಾವಣವಿಜಯ ಕಥಾ ಕಾವ್ಯಮಂ! ಗೆಲ್ದೆನಾ
ರಾಮನಂ! ಸೆರೆವಿಡಿದೆ ತಂದಿಹೆನ್‌!” ಎಂದಿನಿತು
ಶಂಕೆಯಿಂ ತನ್ನ ಸುತ್ತುಂ ದಿಟ್ಟಿಸುತೆ, ಮತ್ತೆ,
ತಮ್ಮ ಕಟ್ಟೇಕಾಂತಮಂ ಮನದಿ ನಿಚ್ಚಯಿಸಿ,
“ನೋಡಿಲ್ಲಿ! ಭದ್ರಮುಷ್ಟಿಯೊಳೆಂತು ಪಿಡಿದಿಹೆನ್‌
ಭುವನೈಕವೀರನಂ! ಕೊಳ್ಳಿದಂ ಕಪ್ಪಮಂ.
ಕಾಣ್ಕೆಗೊಡು ಮಾತೆ ಸೀತೆಗೆ ‘ನಿನಗೆ ಸೋಲ್ತವಂ.
ನಿನಗೆ ತಾನೆಯೆ   ಸೋಲ್ತು, ನೀಂ ಸೋಲ್ತಾತನಂ
ಗೆಲ್ದೊಪ್ಪಿಸಿಹನದಕೆ ತಪ್ಪಂ ಕ್ಷಮಿಪು’ದೆಂದು!” ೪೦
“ನೀಂ ಪಿಡಿದುದಿದು ಬಾಣಪುಂಖಂ, ಮಹಾಮತಿ;
ರಘುತ್ತಮನ ಗಾತ್ರಮೆಂಬೀ ಭ್ರಾಂತಿಯಿಂ ಬರಿದೆ
ಕಿಳ್ತೆಸೆಯಲರ್ಹವಾದುದನಿಂತು ಬಿಗಿದಪ್ಪಿ
ತಪ್ಪುತಿರ್ಪಯ್‌.”
ರೋದುಸುತ್ತೊರೆದ ಮಯಸುತೆಗೆ
ಪುರ್ಬುಗಂಟಿಕ್ಕಿ ನುಡಿದನು ಕರ್ಬುರೇಶ್ವರಂ :
‘ಭ್ರಾಂತಿಯಾರ್ಗೆಲೆಗೆ? ನಿನಗೆಯೊ ನನಗೊ? ರಾಮನಂ
ಪ್ರಾಣರೂಪದಿನಿಲ್ಲಿ ಪಡೆದಿಹೆನ್‌ ಪೂರ್ಣಮಂ!
ಅಲ್ಲಿ ಗೋಳಿಡುತಿಹರ್ ವಾನರರ್, ರಾಮನ
ಕಳೇಬರಕೆ ವೈದ್ಯನೈವೇದ್ಯಂಗಳನೊಡರ್ಚಿ.
ನೀಂ ಪತಿವ್ರತೆಯಪ್ಪೊಡೆನ್ನೆಂದುದಂ ಮಾಡು! ೫೦
ನನ್ನ ವಕ್ಷದಿನೆಳೆದು ತೆಗೆಯಿದಂ, ಸೀತೆ ಮೇಣ್‌
ನೀನಲ್ಲದನ್ಯರಿಂದಾಗದೀ ರಾಮನ ಮಹಾನ್‌
ಶರಶರೀರಮಂ ಸ್ಪರ್ಶಿಸಲ್ಕೆ!”
ಪತಿಯಾಣತಿಗೆ
ಪ್ರತಿ ನುಡಿಯಲಾರದೆ ಪತಿವ್ರತೆ ಮಹಾಸ್ತ್ರದಿಂ
ಸಡಿಲಿಸಿನಿಯನ ಮುಷ್ಟಿಯಂ, ಪಿಡಿಪನೋಸರಿಸಿ,
ತಾನೆ ಬಲ್ವಿಡಿವಿಡಿದು, ಕಿತ್ತೆಳೆದಳೆತ್ತಿದಳ್‌
ಹಮ್ಮೈಸಿ ನಡುಗಿ: ಹಾ ಹಾ ಅಯ್ಯೊ ಕೆಟ್ಟೆನಯ್‌
ಕೊಂದೆನೆಂದೊರಲಿದಳು ಕಂಡು ನೆತ್ತರ್ ವೊನಲ್‌
ಚಿಮ್ಮಿದೋಕುಳಿಬುಗ್ಗೆಯಂ! ರಾವಣನ ಮುಷ್ಟಿ
ತೊರೆದುದೆ ತಡಂ, ವಕ್ಷಮೋಕರಿಸಿದುದೆ ತಡಂ         ೬೦
ತನ್ನನಾ ಬ್ರಹ್ಮಬಾಣಂ ರಾವಣಪ್ರಾಣಮಂ
ಪೀರ್ದು ಪಡೆದುದು ಮೋಕ್ಷಮಂ ರಾಮನಾತ್ಮದಲಿ!
ಕೂಡೆ, ಕಪಿಸಮಿತಿ ಘೇಘೇ ಎನುತೆ ಕುಣಿದಾಡೆ,
ಮೈದೋರ್ದುದತ್ತಲಾ ರಘುಕುಲೋತ್ತಮ ಚಿತ್ತ
ಪರ್ವತದ ಚೂಡಮಂ ಮುತ್ತಿರ್ದ ಕತ್ತಲೆಯ
ಕಡಲಿನಂಚಿನಲಿ ಚೈತನ್ಯ ಚಂದ್ರೋದಯಂ!
ತಲ್ಲಣಿಸಿತಾದಿಜಲೊಮದಿರಿತವನೀ ತಲಂ.
ಭಾರ ಪರಿಹಾರಕೆನೆ ದಿಗಿಭತತಿ ಬೆನ್‌ಗೊಡಹೆ,
ತೊನೆದುವು ನಗಂಗಳಸ್ಥಿರತೆಯಿಂ. ಮಿಂಚೆನಲ್‌
ಸಂಚಿರಿಸಿತಾಹ್ಲಾದ ಲಹರಿ, ಲೋಕತ್ರಯದ   ೭೦
ತನು, ಕಂಟಕ ವಿಮೋಚನಾನಂದದಿಂ, ಪುಲಕ
ಕಂಟಕಿತಮಪ್ಪಂತೆವೋಲ್‌. ಭವ್ಯಪೌರುಷವೊಂದು
ಜನ್ಮಾಂತರಂ ಬಡೆಯೆ ಕಣ್ಮರೆಯಾದ ಸಂಕಟಕೆ
ಸೃಷ್ಟಿ ಖಿನ್ನತೆಯಾಂತ ತೆರದಿ ಘೋರಾಂಧತಾ
ತಿಮಿರಮಾಕ್ರಮಿಸಿತು ಅಮಾವಾಸ್ಯೋದರದ
ರೋದೋಂತಮಂ.ಅಸುರರಶ್ರುಗಳೊ ಮೇಣ್‌ ಸುರರ
ಬಾಷ್ಟಗಳೊ? ತಾರೆಗಳ್‌ ವೆರಸಿ ಕರೆದುದು ಕುಸುಮ
ವೃಷ್ಟಿ. ನಂದಿಗ್ರಾಮ ಪರ್ಣಕುಟಿಯಲ್ಲಿರುಳ್‌
ನಿದ್ರಿಸಿರ್ದಾ ಭರರದೇವರಿಗೆ ಸೋದರಂ
ಪಿಂ ಮರಳ್ದಂತೆ ಕನಸಾಗಲಲ್ಲಿಂದೆಳ್ದು         ೮೦
ಪೂಜಾಗ್ರಹಂಬೊಕ್ಕು ಪ್ರಾರ್ಥಿಸಲ್‌ ತೊಡಗಿದನ್‌
ಶಿವ ಮಹಚ್ಛಕ್ತಿಯಂ. ಕ್ಷುದ್ರಶೋಕಾತೀತ
ಭೂಮ ಘಟನೆಯದಲ್ತೆ? ಮಂಡೋದರೀ ದೇವಿ
ಸ್ವಾಮಿಯ ಕಳೇಬರದ ಚರಣದೆಡೆ ಕೆಡೆದಳಯ್‌
ನಿಷ್ಟಂದ ನೀರವ ಶಿಲಾಪ್ರತಿಮೆಯೋಲಂತೆ.
ಲೋಕಮೆಲ್ಲಂ ಹರ್ಷ ಶೋಕಮಯವಾಯ್ತು, ಕೇಳ್‌,
ಶ್ರೀರಾಮನುದ್ಬೋಧನದ ಮತ್ತೆ ರಾವಣನ
ನಿಧನ ಯೋಗದ ಶ್ರೀಮುಹೂರ್ತದಲಿ!
ಮೂರ್ಛೆಯೊ?
ಸಮಾಧಿಯೊ? ಧರಾತ್ಮಕಜಾನಾಥನೆಳ್ಚರ್ತೊಡನೆ
ಲೋಕ ಲೋಕಲಾಂತರದ ಚಿದಾಕಾಶ ತನುಗಳಂ       ೯೦
ತೊರೆದು ಮರ್ತ್ಯಕ್ಕಿಳಿದುಮಲ್ಲಿ ತನನ್ನಮಯ
ಕೋಶಮಂ ಪುಡುಕುವಂದದಿ ಸುತ್ತಲುಂ ನೋಡಿ
“ಎಲ್ಲಿ ನನ್ನೊಡಲೆಲ್ಲಿ, ಪೇಳ್‌, ತಾಯಿ ಕೌಸಲ್ಯಾ
ತನೂಜತನು?” ಎಂದರಸುತಿರಲಂಜನಾಸೂನು
ತಿಳಿದು “ಇಲ್ಲಿಹುದಿಲ್ಲಿ, ದೇವ. ಅವತರಿಸಿದಕೆ
ಈ ನೀಲವಿಗ್ರಹಕೆ!” ಎನೆ ಕೇಳ್ದ ವನಚರರ್
ಬೆರಗುವೋಗಿರೆ, ಸುಯ್ದು , ಮುಂದಿರ್ದರಂ ಗ್ರಹಿಸಿ,
ಮರುತಾತ್ಮಜನನಿಂಗಿತದಿ ನೋಡಿ ನಸುನಗುತೆ,
ಮತ್ತೆ ಮರ್ತ್ಯತ್ವದೊಳ್‌ ಸುಷ್ಠು ಸಂಸ್ಥಿತನಾಗಿ,
ಕೇಳ್ದನ್‌ ಕಪೀಂದ್ರನಂ: “ಎಲ್ಲಿ ಲಕ್ಷ್ಮಣನೆಲ್ಲಿ     ೧೦೦
ಪೇಳ್‌? ಸುಖಿಯೆ?” “ದೇವ, ಮಂತ್ರೌಷಧೀಮಹಿಮೆಯಿಂ
ಸುಕ್ಷೇಮಿ ತಾಂ ವಿಶ್ರಮಿಸುತಿಪ್ಪನೋಷಧೀ
ಮಂಚದೊಳ್‌.” “ಅದೇನದೇನಾಲಿಸಿಂ!” “ಲಂಕೆಯಿಂ
ಮೊಳಗುತಿವೆ!” “ರಣಭೇರಿಯಲ್ತದು!” “ಮರಣಭೇರಿ೧”
ಕಿವಿಗೊಟ್ಟರನಿಬರುಂ. ಬೆದರಿ ಫಾಲ್ಗುಣ ನಿಶಾ
ಪ್ರಾಚೀದಿಶಾಮುಖಂ ಬೆಳ್ಪೇರ್ವವೋಲ್‌ ಧಳಂ
ಧಳಧಳಂ ಮೊಳಗಿದುದು ದುಃಖಭೇರೀಧ್ವಾನ
ರುಂದ್ರಘೋಷಂ, ಶೋಕವಾದ್ಯಂಗಳಿಂ ಕೂಗಿ
ಸಾರುವಂದದಿ ಲಂಕೆ ಲೋಕ ಲೋಕಾಂತರಕೆ
ರಾವಣ ಮರಣ ವಾರ್ತೆಯಂ!
ತೋರ್ದುದನಿತರೊಳ್‌      ೧೧೦
ಮೂಡುವೆಟ್ಟಿನ ಮುಡಿಯ ಮಂಚಿಕೆಯ ಮೇಲ್ಮೂಡಿ
ಚೈತ್ರ ಪ್ರಥಮ ದಿನದ ಚಾಮೀಕರೋಜ್ವಲ
ದಿವಾಕರನ ಮಂಡಲಂ, ನವ ಜೀವನೋದಯದ
ಮಧುಮಾಸದುದಯಮಂ ಭೂಮಂಡಲಕೆ ಸಾರಿ,
ಪ್ರಭುಸಹೋದರ ವಿಭೀಷಣನೆಡೆಗೆ ಬಂದುದು
ಪುರಪ್ರಮುಖ ಗೋಷ್ಠಿ. ಕಂಬನಿವೆರಸಿ ಶಿರಂಬಾಗಿ
ಕೈಮುಗಿದು ನಿಂದವರ್ಗಾತನೆಂದನ್‌: “ಮೊದಲ್‌
ಕೈಮುಗಿಯಿಮಾ ಪ್ರಭುಗೆ. ರಾಮನಾಜ್ಞೆಯೆ ನಮಗೆ
ಶಿಷ್ಯಪಥ್ಯಂ.” “ನಿನ್ನ ಪೇಳ್ವುದಿನ್ನೆಮಗಾಜ್ಞೆ.
ಸ್ವಾಮಿ ನೀನ್‌.” ಎನುತವರ್ ರಾವಣಾನುಜಮತದಿ     ೧೨೦
ತನಗೆ ವಂದಿಸೆ, ದಾಶರಥಿ: “ರಾಕ್ಷಸೋತ್ತಮ,
ಸ್ವತಂತ್ರನಯ್‌ ನೀನ್‌. ಮನ್ನಿಸೀ ಸ್ವಾಮಿನಿಷ್ಠರಂ.
ನಿಷ್ಠುರಾಚರಣೆಗಿದು ವೇಳೆಯಲ್ತೆಮಗೆ. ಕೇಳ್‌
ಕಷ್ಟಮೇನೆಂದು” ಕಿವಿಗೊಟ್ಟಮಗೆ ಪೇಳ್ದುದು
ವಿಭೀಷಣಂಗಾ ಸಮಿತಿ:
“ರಾಕ್ಷಸ ಮಹಾನೃಪಂ,
ಬಾಣದಿಂದೆರ್ದೆಯೊಳೇರ್ವಡೆದು ಪಿಂತಿರುಗಿದನ್‌
ರಣರಂಗದಿಂ ನಿನ್ನೆ ಬೈಗಿನಲಿ. ಪೋದಿರುಳ್‌
ತಾನಾದನಸ್ತಂಗತಾಸು. ಮಾರಾಣಿಯುಂ
ಪತಿಪಾದ ಮೂಲದೊಳ್‌ ಪಟ್ಟು ಪೊಂದಿದಳಿರುಳೆ
ಇಚ್ಛೆಸಾವಂ!”
“ಧನ್ಯೆ! ಪುಣ್ಮಾತ್ಮೆ! ಮಾತಾಯಿ!                                         ೧೩೦
ಹದಿಬದೆಯರರಸಿ ದಲ್‌!” ನೆರೆದ ವಾನರರಿಂತು
ತಮ ತಮಗೆ ಮಂಡೋದರಿಯ ಪೊಗಳುತಿರೆ, ಮತ್ತೆ
ಮುಂಬರಿದುದಾ ಗೋಷ್ಠಿ:
“ಲಂಕೆಯದ್ದಿಹುದಳಲ
ಕಡಲಿನೊಳ್‌, ಮನೆ ಮನೆಯುಮಳುತಿಹುದು ಸಾವ್‌ಸಿಡಿಲ್‌
ಬಡಿದು. ನಿನ್ನನೆ ನೆನೆಯುತಿಹುದೊಮ್ಮನದಿ ಲಂಕೆ,
ಹೇ ವಿಭೀಷಣ ಮಹಾತ್ಮಾ! ಈ ಮಹಾ ವಿಪತ್‌
ಸಮಯದೊಳ್‌ ಕಾಣೆವನ್ಯರನಾರನುಂ ಪೊರೆವ
ಸತ್ತ್ವದ ಸಮರ್ಥರಂ. ಬಂದು ಕೈಹಿಡಿದೆತ್ತು ನೀಂ
ಮುಳುಗುವಾ ನಿನ್ನ ಭೂಮಾತೃವಂ. ಕಾಯುತಿದೆ
ನಿನ್ನಗ್ರಜ ಕಳೇಬರಂ ನಿನ್ನ ಬರುವುದನೆ
ತನ್ನ ಸತ್‌ಕ್ರಿಯೆಗೆ. ದೊಡ್ಡಯ್ಯನೆಡೆ ಕುಳ್ತನಲೆ  ೧೪೦
ನಿನ್ನ ಮಗಳಳುತಿಹಳ್‌. ಮೇಘನಾದನ ಮಡದಿ
ತಾರಾಕ್ಷಿದೇವಿಯರ್ ನಿನ್ನಾಗಮನಕಾಗಿ
ನೋಂತಿಹರ್ ಪಸಿದು, ಶಿಶು ವಜ್ರಾರಿಗೆರ್ದೆಗೊಡದೆ!
ನಿನ್ನರಸಿ ಸರಮಾ ಮಹಾದೇವಿಯರ ಕೈಯೊಳಾ
ಕಂದನಾಕ್ರಂದಿಸುತ್ತಿಹನಯ್‌ ಅನಾಥನೋಲ್‌!”
ಕಲ್ಲಾದೊಡೇನೈಕಿಲ್‌? ಅದು ನೀರ್ ಘನಿತುದಲ್ತೆ?
ಕರಗಿದನ್‌; ಮರುಗಿದನ್‌; ಪ್ರವಿಕಂಪಿಸಿದುದಯ್‌
ವಿಭೀಷಣನ ಭೀಷಣಸ್ಥಿರತೆಯುಂ. ಮುಕ್ತಾಶ್ರು
ಬಿಂದುವೊಂದೆರಡೊಸರಿದುವು ದಮನಯತ್ನಮಂ
ನಿಷ್‌ಫಲಂಗೊಳಿಸಿ. ಕಂಡದನೆಂದನಿಕ್ಷ್ವಾಕು    ೧೫೦
ವಂಶಜಂ: “ದಮನಗೆಯ್‌ ದುಃಖಮಂ, ದನುಜವರ;
ಸಂತವಿಡು ನಡೆ ಲಂಕೆಯಂ, ತವಿಸು ಬೆಂಕೆಯಂ
ಬಂಧುಜನ ಮನದಿ.  ಪಿರಯಣ್ಣಂಗೆ ತೀರ್ಚಂತೆ
ಲೌಕಿಕದ ಕೊನೆಯ ಕರ್ತವ್ಯಮಕಂ. “ಶಂಕೆಯಿಂ-
ದಾಂದೋಲಿತಾಂತಃಕರಣನಾಗಿ ರಾಕ್ಷಸಂ
ಬೆಸಗೊಳಲ್‌; “ದಾಕ್ಷಿಣ್ಯಮಿರ್ಕೆ; ನಿನಗದು ಪ್ರಿಯಮೆ?
ಲೋಕಕಂಠಕನಾಗಿ ನಿನ್ನನಂತಳಲಿಸಿದ
ನಿನ್ನ ವೈರಿಗೆ ನಾಂ ನೃಪೇಂದ್ರಂಗುಚಿತಮಪ್ಪ ಮೇಣ್‌
ಪ್ರಭುಯೋಗ್ಯ ಮೇಣ್‌ ವೀರಾರ್ಹ ಮರ್ಯಾದೆಗಳ್‌ ವೆರಸಿ          ೧೬೦
ಅಗ್ನಿಕಾರ್ಯಂಗೈವುದದು ನಿನಗೆ, ಪೇಳ್‌, ಪ್ರಿಯಮೆ?”
ಸಕುರುಣಂ ದರಹಸಿತ ಮುಖದಿಂದೆ ರಾಘವಂ:
“ಮುಂದೆ, ಮುಂ ಭವದಿ, ಮಗನಾಗಿ ಸಂಭವಿಪಂಗೆ
ತಂದೆಯಾಗುವನಿಂದೆ ಸಂಸ್ಕೃವೆಸಗುವೊಲ್‌,
ನೀನಿಂದ ಉ ರಾವಣಂಗೆಸಪ ಸತ್‌ಕ್ರಿಯೆಯೊಳಾಂ
ಸುಪ್ರೀತನೆಂ! ವೈರಿಯಾದೊಡಮೆನಗೆ ಸಮಂ
ಆ ದಿವಂಗತ ದೈತ್ಯನತುಳ ವೀರ್ಯದೊಳಾತ್ಮ
ಸತ್ತ್ವದೊಳ್‌ ನಿರ್ಭೀತಿಯೊಳ್‌ ತೇಜದೊಳ್, ಮತ್ತೆ
ಚಿತ್ತಶುದ್ಧಿಯೊಳಂತೆ ಚಿತ್‌ತಪಸ್‌ ಶಕ್ತಿಯಲಿ!
ಯುದ್ಧದೊಳ್‌ ಗೆಲ್‌ಸೋಲ್ಗಳೇನ್‌? ಪರಾಕ್ರಮಮಲ್ತೆ      ೧೭೦
ಪುರುಷಾರ್ಥಮಾ ದೃಷ್ಟಿಯಿಂದಸುರರಾಜನಂ
ಮೀರ್ದ ಕಲಿಗಳನಿನ್ನೆಗರಿಯದೀ ಸೃಷ್ಟಿ ಮೇಣ್‌
ವಿಧಿ ಕಲ್ಪನಾ ದೃಷ್ಟಿ! ತೊರೆ ಶಂಕೆಯಂ, ಅಸುರೋತ್ತಮ,
ಲಂಕೆಗೀಗಳ್‌ ತೆರಳ್‌. ನಿನ್ನಿಷ್ಟಮೆನ್ನಾಜ್ಞೆಯಂ
ಮೇಣ್‌ ಲೋಕಮರ್ಯಾದೆಯಂ ನಡಸು ಸೋದರಗೆ
ರಾಜಗೌರವ ಸಹಿತಮಪರಸಂಸ್ಕಾರಮಂ.”
ರಾಮನಾಜ್ಞೆಗೆ ಬಾಗಿ ನಡೆದನು ವಿಭೀಷಣಂ
ಲಂಕೆಗೆ, ಪುರಪ್ರಮುಖ ಗೋಷ್ಠಿ ಪರಿವೇಷ್ಟಿತಂ,
ಶೋಕ ಸಂತಪ್ತ ಪಾಪಿಯ ಚೇತನಂಬುಗುವ
ದಿವ್ಯಕೃಪೆಯಂತೆ. ಚುಂಬಿಸುವ ಪೊಂಬಿಸಿಲಳುರಿ       ೧೮೦
ರುಕ್ಮತೋಯವೆನೆ ತೊಳೆದುದು ಭುವನ ಮಂಡಲವ!
ಇಳಿದೇರಿ ಮರ ಪೊದೆಯ ಚೆಲ್ವಿನ ನತೋನ್ನತ
ವನಾದ್ರಿ ಸೀಮೆಯನಾ ವಿಭೀಷಣಂ ಮರೆಯಾಗೆ,
ರಾಮಚಂದ್ರಂ ದುಃಖ ಗುರುಭಾರ ವಾಣಿಯಿಂ
ಪ್ಲವಗ ಲಾಂಛನ ರಾಜ ಚಂದ್ರಂಗೆ:
“ಕಪಿರಾಜ,
ಶಿಬಿರದೊಳಿದಂ ಸಾರವೇಳ್‌, ರಣದಿ ಮಡಿದರಿಗೆ,
ತಮತಮಂಗುಚಿಮಪ್ಪವರವರ ಯೋಗ್ಯತೆಗೆ
ತಗುವ ಗೌರವದೊಡನೆ, ಕೊನೆಯ ಕರ್ಮಂಗಳಂ
ಮಾಳ್ಪಾಜ್ಞೆಯಂ. ಲೊಂಕೆಯಿನ್ನೆಮಗೆ ಹಗೆಯಲ್ಲ:
ಲಂಕಾನಿವಾಸಿಗಳ್‌ ತಂತಮ್ಮ ನಂಟರ       ೧೯೦
ಕಳೇಬರಂಗಳನರಸಿ ರಣಭೂಮಿಗೈತರಲ್‌
ವೈರವನುಳಿಯವೇಳ್ಕುಮೆಂದು. ನಾನುಂ ಮಿಂದು
ಜಲಧಿ ಜಲದಿಂ ತಿಲೋದಕವೀವೆನನಗಾಗಿ
ರಣಯಜ್ಞ ಕುಂಡದೊಳ್‌ ಬೇಳ್ವೆವಟ್ಟಾತ್ಮರಿಗೆ,
ಲೌಕಿಕ ಕೃತಜ್ಞತಾ ಸಂಕೇತಮಾಗಿ; ಮೇಣ್‌
ಪ್ರಾರ್ಥಿಸುವೆನವರಾತ್ಮ ಮಂಗಲಾರ್ಥಂ, ಪ್ರಾಣಮಯ
ಮೇಣ್‌ ಮನೋಮಯದ ನೈವೇದ್ಯಂಗಳಂ ನೀಡಿ.”
ಅಂತ್ಯೇಷ್ಟಿಗಿಂತಾಣತಿಯನಿತ್ತು, ಇನಕುಲನ್‌,
ಚಿಂತಾಬ್ಧಿಗದ್ದವೋಲಂತರ್ಮುಖತೆವತ್ತು,
ಮೌನಿ, ನೋನುತೆ ವಿವಿಕ್ತತೆಗೆ, ಕಡಲಂ ಕುರಿತು          ೨೦೦
ನಡೆದನಯ್‌, ‘ಶಂಕೆ ಬೇಡೆಮಗೆ ನಿರಪಾಯಮೀ
ಲಂಕೆಯಿನ್‌’ ಎನುತೆ ಮೆಯ್ಗಾವಲಾಳ್ಗಳುಮಂ
ವಿಸರ್ಜಿಸಿ, ಸಮುದ್ರಾಭಿಮುಖಿಯಾದ ಬೇರೊಂದು
ಸುಗಭೀರ ಸಾಕಾರ ಮನುಷ್ಯತಾ ಪಯೋಧಿಯೋಲ್‌!
ಬೈಗುವರಮಂದಾರುಮಾ ಚಂಡ ಕಿರಣ ಕುಲ
ಮಂಡನನ ಮೂರ್ತಿಯಂ ಕಂಡರಿಲ್ಲರಸಿಯುಂ.
ಕಡಲ ದಂಡೆಯೊಳಿರ್ದನೆಂದರ್ ಕೆಲರ್, ಸುಡುವ
ಸೂಡಿನೆಡೆ ಕಂಡೆವೆಂದರ್ ಕೆಲರ್, ಚಿತೆಗೇರ್ದ
ಕೆಳೆಯನ ಪೆಣಂ ಪೊತ್ತುತಿರ್ದುದಂ ಕಂಡದಕೆ
ನಾನಳುತ್ತಿರ್ದೆನಾ ಪೊತ್ತಾಳಾಪದ್‌ಬಂಧು     ೨೧೦
ಬಂದು, ಸೋಂಕಿಗೆ ಸೊಗೆಯಿಪಂತೆ ಬೆನ್ನಂ ತಟ್ಟಿ,
ಸಂತಯ್ಸಿದನು ತನ್ನನೆಂದನೊರ್ವಂ! ತನ್ನ
ಮಿತ್ರನೊರ್ವಂ ಸತ್ತವೋಲಿರ್ದ ತನ್ನಾ
ಕಳೇಬರವನೆತ್ತಿ ಸಿದಿಗೆಯೊಳಿಟ್ಟು, ಬೆಂಕೆಯಂ
ತೋರುತಿರೆ, ‘ಏಳಣ್ಣ! ಮಲಗಿರ್ಪೆಯೇಕಿಂತು?
ಬೇಗಮೇಳ್‌! ಅದೊ ಪೊತ್ತುತಿಹುದಗ್ನಿ!’ ಎನುತ್ತೆನುತೆ
ಕರೆದೆಳ್ಚರಿಸೆ, ಕಣ್‌ ತೆರೆಯುತೆದ್ದು ನೋಡಿದೆನ್‌
ರಘುರಾಮ ಮೂರ್ತಿಯಂ! ಮಣಿದೆನ್‌ದಯಾಸಿಂಧು,
ಬರ್ದುಕಿಸಿದೆ ನೀನೆಂದು! ಮಣಿದನ್‌ದಯಾಸಿಂಧು,
ಪ್ಲವಗವೀರಂ! ಕಂಡರೆಂದರ್ ಕೆಲರ್ ಕೇಳ್ದವರ್,          ೨೨೦
ಮಂಡೋದರೀ ದೇವಿಯಂ ತನ್ನ ಗಂಡನೆಡೆ
ಸೂಡೊಂದರೊಳೆ ಸುಡುತ್ತಿರ್ದಾ ವಿಭೀಷಣನ
ಸನಿಹದಲಿ! ಅಲ್ಲಲ್ಲಿ ಎಲ್ಲೆಲ್ಲಿಯುಂ ‘ಕಂಡೆನ್‌
ಆನಿಲ್ಲಿ, ಕಂಡೆನಾನಲ್ಲಿ’ ಎಂದವರಿವರ್
ರಾಮನಂತರ್ರಾ‍ಮಿ ರಾಮನಖಿಲವ್ಯಾಪಿ
ರಾಮಮಯಮೀ ವಿಶ್ವಮೆಂಬ ತತ್ತ್ವವನಿಂತು
ತಂತಮ್ಮ ಪ್ರತಿಮೆಯಿಂ ಪ್ರತಿಭಾನುರೂಪಮಂ
ಸಾರುತಿರಲಪ್ರತಿಮ ಪುರುಷೋತ್ತಮ ಜಗದ್‌
ವಿಭೂತಿಯಂ, ಕಂಡನೈ ವಾನರಭಟಂ ವಹ್ನಿ,
ರಂಹನಪರಕ್ರಿಯೆಯನೆಸಗಿ ಕಡಲೊಳ್‌ ಮಿಂದು          ೨೩೦
ಶಿಬಿರಕೈತರುತಿರ್ದವಂ, ಬೈಗುಗಪ್ಪಿನೊಳ್‌
ತಾನೊರ್ವನೆಯೆ ಜಲಧಿಯಿಂ ಪಿಂತಿರುಗುತಿರ್ದ
ರಾವಣಾರಾಶಿ ಸೀತಾನಾಥನಂ! ಕೈಮುಗಿದ
ಕಪಿವೀರನಂ ನೋಡಿ:
“ನಿನ್ನನೆಲ್ಲಿಯೊ ಕಂಡ
ಕುರುಪಿರ್ಪುದೈ! ಎಂದುಮೊಡನೆ “ಓವೋ ವಹ್ನಿ
ನೀನಲ್ತೆ? ನಿನ್ನ ಕೆಳೆಯಂ ರಂಹನೆಲ್ಲಿದನ್‌?”
“ಬೂದಿಗೆಯ್ದಿದೆತಾನೆ ಮಿಂದು ಬಂದೆನ್‌, ಪ್ರಭೂ,
ರಂಹನಂ.”
“ಕಾಯಮಂ?”
“ಅಮ್ಪದಮ್ಪದು, ಒಡೆಯ.
ಬಲ್ಲೆನಾತ್ಮವನಮೃತಮೆಂದು. ಬಾಯ್‌ ತಪ್ಪಿದೆನ್‌.”     ೨೪೦
“ಲೋಕರೂಢಿಯನೊರೆದೆಯೈ, ತಪ್ಪದರೊಳೇನ್‌?
ಅಲ್ಲದಾತ್ಮವನಮೃತಮೆಂದು ಕೇಳ್ದವರೆನಿತೊ,
ಕಂಡರಲ್ಪಂ.”
“ಅನಿತೆ; ನನ್ನರಿವುಮದಕಿಂ ಮಿಗಿಲ್‌
ಮುಂಬರಿದುದಿಲ್ಲ. ನಂಬಿದೆನೆನ್ನ ಗುರುವೊರೆದುದಂ,
ತಾಂ ಕಂಡ ನನ್ನಿಯಂ.”
“ಆ ಶ್ರದ್ದೆ ದಲ್‌ ವಿದ್ಯೆ!
ಸಾಲ್ಗುಮದೆ ದಾಂಟಲ್ಕವಿದ್ಯೆಯಂ. ಆದೊಡಂ.
ಕೇಳ್‌ ವಹ್ನಿ. ಕಾಣಲ್ಕುಮಪ್ಪುದಮೃತತ್ವಮಂ.”
“ನನ್ನೊಡೆಯ, ನೀನ್‌ ಮುಂದೆ ನಿಂತಿರಲ್‌, ನನಗದಕೆ
ಬೇರೆವೇಳ್ಕಮೆ ಪವಣ್‌?”
“ನಿನ್ನಂಥೆ ನಾನ್‌ ಕಣಾ
ನನಗದೇಂ ಕೋಡೊಳವೆ? ನಾನುಂ ಮನುಷ್ಯನೆಯೆ.    ೨೫೦
ಉಸಿರೆಳೆವನುಣುವೆನಾಶಿಸುವೆನೊಲಿವೆನ್‌ ಮುನಿವೆನ್‌
ಮೋಹಿಪೆನ್‌ ನಿನ್ನವೊಲೆ!”
“ನನಗದೇ ಸೋಜಿಗಂ,
ದೇವ! ನಮ್ಮಂತಿರ್ಪ ನೀನದೆಂತಬ್ಧಿಯಂ
ಪಿನ್ನೂಂಕಿದತ್‌ ಸೇತುಬಂಧನದೊಳಂದು ಪೇಳ್‌?
ಮೇಣಬ್ಧಿಯಂ ನೂಂಕಬಲ್ಲವನದೇಕೆ ಪೇಳ್‌
ನಮ್ಮನ್ನರಲ್ಪರ ನೆರಂ ಬೇಡಿದನ್‌?”
“ಕುಶಲಿ
ನೀಂ ಬರಿಯ ಕಲಿಯಲ್ತು.” ನಕ್ಕು ದೈತ್ಯಧ್ವಂಸಿ
ಮೆಚ್ಚಿದನು ಸಾಮಾನ್ಯ ಸೈನಿಕನ ಕೆಚ್ಚದಂ.
ವೀರೋಚಿತಂ ವಿಷಾದವಿಹೀನಮೆನೆ ವಹ್ನಿ
ಗೆಳೆಯನಳಿವಿನ ನೋವನೆರ್ದೆಯೊಳಾರ್ಪಿಂದೊತ್ತಿ
ನುಡಿಯುತಿರ್ದುದನರಿತು: “ಕಲಿಗಳೊಳ್‌ ಕಲಿಯೈಸೆ   ೨೬೦
ನಿನ್ನ ಮಿತ್ರಂ, ವಹ್ನಿ?”
“ಪೆರ್ಮೆಸಾವ್ ಸತ್ತನ್‌
ಮಹಾಪ್ರಭೂ!” ಸ್ಮರಣ ಸಾಧ್ಯವನನಿತುಮಂ, ಮೊನ್ನೆ
ರಾಮನೆಡೆ ನಿಂದನಿಲಜಂ ರಾಮನಾಜ್ಞೆಯಿಂ
ರಾಮಮಯವಾದ ಕಪಿಸೇನೆ ರಾವಣರೂಪಿ
ರಾಕ್ಷಸಧ್ವಜಿನಿಯಾ ಮೂಲಬಲವಂ ಕಡಿದು
ನಿರ್ಮೂಲನಂಗೆಯ್ದ ದಿನದಂದು ಕಂಡುದಂ,
ರಂಹನಂತಿಮ ಸಾಹಸದ ಕಥೆಯನೆಲ್ಲಮಂ
ಬಿತ್ತರಿಸಿದನು ವಹ್ನಿ, ಚಿತ್ತವಿಟ್ಟಾಲಿಸಿ
ದಶಾನನ ನಿಷೂದನಂ:
“ಕಲಿಗಳೊಳ್‌ ಕಲಿ ದಿಟಂ
ನಿನ್ನ ಕೆಳೆಯಂ, ವಹ್ನಿ. ಸಾರ್ಥಕಮವನ ಬಾಳ್‌!         ೨೭೦
ಸಾರ್ಥಕಮವನ ಸಾವದಕೆ ಮಿಗಿಲ್‌!”
“ಧನ್ಯರ್ ದಿಟಂ,
ಪ್ರಭೂ ಈ ಮಹಾ ಸಮರಯಜ್ಞಕಸು ತೆತ್ತವರ್.”
“ಬರ್ದುಕಿರ್ಪರುಂ, ವಹ್ನಿ.!”
“ದಿಟಮೊಡೆಯ. ನಿನ್ನೊಡನೆ,
ನಿನ್ನಿದಿರ್ ನಿಂದು, ಸಂವಾದಿಸುವ ಸಯ್ಪದೇಂ
ಸಾಮಾನ್ಯಮಲ್ತು; ಬಹು ಜನ್ಮಗಳ್‌ ದುಡಿದೊಂದು
ಪುಣ್ಯಫಲಮೈಸೆ!”
“ಅವರವರಿಗವರವರೊಳ್ತು.
ನಿನಗೆ ನಿನ್ನದು; ರಂಹಗಾತನದು…..ದುಃಖಮೆ, ವಹ್ನಿ,
ಮಿತ್ರಮರಣಂ ನಿನಗೆ?
“ಬರ್ದುಕಿರ್ದೊಡಾತನುಂ
ಸುಖಮಿರ್ಮಡಿಸುತಿರ್ದುದೆಂಬೆನ್‌, ಮಹಾಪ್ರಭೂ.”
“ಪೇಳ್‌ ಅವಮ ಬರ್ದುಕಿ ಬರ್ಪುದು ನಿನಗೆ ಸಮ್ಮತಮೆ?”        ೨೮೦
“ಬರ್ದುಕಿ ಬರ್ಪುದು? ಸತ್ತವನ್‌! ನಾನೆ ಸುಟ್ಟವನ್‌!
ಸತ್‌ವರ್ ಬರ್ದುಕಿ ಬರ್ಪುದದೆಂತು, ನನ್ನೊಡೆಯ?”
“ನಿನಗೇಕದೆಲ್ಲ? ನಿನಗೊಪ್ಪಿಗೆಯೆ ಪೇಳ್‌? ನೀನೆ
ಕಾಣ್ಬಂತೆ ಕರೆವೆನವನಂ!”
ಬೆಚ್ಚಿದನು ಕಪಿಭಟಂ!
ಆರ ಭಯಕಬುಧಿ ತನ್ನಾದಿಯಧಿಕಾರದಾ
ಸ್ಥಾಣುಮರ್ಯಾದೆಯಂ ತ್ಯಜಿಸಿ, ಕಂಪಿಸಿ , ಕುದಿದು
ಸುಗಿದು ಸೆಡೆತುದೊ ಆ ಮಹಚ್ಚಿತ್ತಪೋಬಲಮೆ
ತಾಂ ತನ್ನ ಮುಂದಿರ್ಪುದಂ ಗ್ರಹಿಸಿ, ಕೈಮುಗಿದು
ಬಿನ್ನಯ್ಸಿದನು ವಾನರೋತ್ತಮಂ ವಹ್ನಿ:
“ಮಾಣ್‌,
ಮಾಣ್‌, ಮಹಾಪುರುಷ ಮಾಣ್‌! ನೀನ್‌ ಕರೆಯೆ ಬರದಿನ್‌!         ೨೯೦
ತನ್ನ ನಿಯಮೋಲ್ಲಂಘನೆಗೆ ಮಿಗಿಲ್‌ ಬೆದರುವಳ್‌
ಮಾಯೆ ನಿನ್ನಾಜ್ಞೆಯುಲ್ಲಂಘನಗೆ! ಮನಮೇಕೊ
ಕಳವಳಂಗೊಳುತಿರ್ಪುದಾಶೆಯಂ ಚಿಃಗೈದು!
ಕಾಳ್ಮರಗಳಡಿ ಬಯಸುವೋಲ್‌ ಕಲ್ಪವೃಕ್ಷದಡಿ
ಬಯಸುವೊಡೆ, ಬಯಕೆಗೆಳ್ಚರಿಕೆವೇಳ್ಕುಂ! ಮತ್ತೆ
ತಪ್ಪಿದೆನ್‌, ಏನ್‌ ಬಯಕೆ ಬಯಸಿದೆನ್! ಭೀಕರಂ!”
ತನಗೆ ನೆಳಲಿರ್ಪುದಂ ಪರಿಕಿಸುತ್ತಿರ್ದ್ದನಂ,
ಪ್ರಕೃತಿ ಸಂಭವಮಹುದೊ ವಿಕೃತಿ ತಾನಿರಬಹುದೊ
ಎಂಬ ಶಂಕೆಯ ಛಾಯೆ ಸುಳಿಯುತಿರ್ದಾತ್ಮನಂ,
ವಹ್ನಿಯಂ, ನಸುನಗುತ್ತೀಕ್ಷಿಸಿ, ನರೋತ್ತಮಂ  ೩೦೦
ತಾಳ್ಮೆಯಿಂ ಬಳಿಸಾರ್ದು, ಸಂಶಯವನಟ್ಟುವೋಲ್‌
ತೋಳ್‌ತಟ್ಟಿ:
“ಪ್ರಾಜ್ಞನೈ ನೀಂ ಪ್ಲವಮಗೋತ್ತಮ.
ಅನನ್ವಯಕ್ಕಳ್ಕುತಿದೆ ನಿನ್ನ ಮರ್ತ್ಯಪ್ರಜ್ಞೆ.
ನಿನಗವಂ ಮಗನಾಗಿ ಪುಟ್ಟುವೊಡೆ ಬೆದರ್ವೆಯೇಂ?”
“ಬೆದರಿಕೆಯೆ? ಅದೆ ತಾಂ ಮಹೋತ್ಸವಕೆ ಕಾರಣಂ,
ಭುವನ ಗುರು!”
“ದೈವೇಚ್ಛೆ ಎಂತಿಪ್ಪುದಂತಕ್ಕೆ
ವಹ್ನಿ.” ರವಿ ಮುಳುಗಿ, ಮೂಡಣ ದೆಸೆಗೆ ಪಡುಗೆಂಪು
ಪಸರಿಸುತ್ತಿರೆ, ನೋಡಿ ರಾಘವಂ: “ಅದೇಕಿನಿತು
ಪೊಳ್ತಾದುದಯ್‌ ನಿನಗೆ ಮಿತ್ರನಗ್ನಿಕ್ರಿಯೆಗೆ?”
“ಶೆನಾನಿ ದಧಿಮುಖಂಗನಲಸಂಸ್ಕಾರದೊಳ್‌                        ೩೧೦
ಸೇವೆಯಂ ಸಲಿಸಿ, ಪುಡುಕಿದೆನೆನ್ನ ಕಳೆಯನಂ
ವಾನರಾಸುರರ ಶವಗಳ ಜಟಿಲರಾಶಿಯೊಳ್‌.
ಬಳ್ಳಗಿದು ಪುಳು ಕೊರೆದುಮೂದಿದ ಪೆಣಂಗಳಂ
ತೆಗೆತೆಗೆದರಸಿ ಕಂಡೆನಾ ರಂಹನಾಗಿರ್ದ
ಕುಣಪಮಂ, ಕ್ಷತಗಳಿಂ ವ್ರಣಗಳಿಂ ತುಳಿತದಿಂ
ಗುರುತಾಗದನಿತು ವಿಕೃತಿಯನಾಂತುದಂ! ಪೊಳ್ತು
ತನ್ನ ಪಾದಾಗ್ರಮಂ ಪಡುಮಲೆಯೆ ನೆತ್ತಿಯೊಳ್‌
ಮಡಗಿ ದಿನಮಣಿಯಾಗುತಿರ್ದತ್ತು.”
“ಬಿಡು, ವಹ್ನಿ;
ಕಾರ್ಯದ ವಿಲಂಬನಕೆ ನೀನೊರೆವ ಕಾರಣಂ
ತಾನದನೆ ಮೀರ್ವನಿತು ಬೀಭತ್ಸಮಯ್‌….ಬಳ್ಳು         ೩೨೦
ಕೇಳೊಳುತಿವೆ! ಕರ್ಪೇರುತಿದೆ ಕಾಳರಾತ್ರಿ!
ಬಾ, ಪೋಗುವಂ ಶಿಬಿರದತ್ತಣ್ಗೆ.”
ಕಳ್ತಲೊಳ್‌
ದಾಶರಥಿಯೆಡೆಯೆ ನಡೆಯುತೆ ವಹ್ನಿ, ಶಿಬಿರದೆಡೆ
ಕೈವಿಡಿದು ನಲ್‌ ನುಡಿದ ರಘುಜನಂ ಬೀಳ್ಕೊಟ್ಟು,
ತನ್ನ ಪಾಳೆಯಕೆಯ್ದಿ, ತಡವಾದುದೇಕೆಂದು
ಬೆಸಗೊಂಡ ಸೈನಿಕ ಸಹೋದ್ಯೋಗಿಗಳ ಮುಂದೆ,
ಸ್ವಾಮಿಯಂ ಕಂಡ ಸೈಪಂ ಮತ್ತೆ ನಡೆದುದಂ
ನುಡಿದುದಂ ಪೆರ್ಮೆಯಿಂದೊರೆಯುತಿರೆ , ನಂಬದೆಯೆ
ನಗುಮೊಗದಿ ಪೇಳ್ದರಾತಂಗೆ:
“ನಿನ್ನಂತೆವೋಲ್‌
ಇಂದಾತನಂ ಕಂಡೆವೆಂದವರೆನಿತೊ ಮಂದಿ!
ನಿಂದು ಸಂಜೆಯೊಳವಂ ಕಪಿಮುಖ್ಯರೊಡಗೂಡಿ
ಮಂತ್ರಿಸುತ್ತಿರ್ದನೈಸಲೆ ಮುಂದೆ ಮಾಳ್ಪುದಂ!”
ಗಹಗಹಿಸಿ ನಕ್ಕು ರಂಹನ ಸಖಂ: “ನಿಮ್ಮೊಡನೆ
ನಾನಿಲ್ಲಿ ನುಡಿಯುತಿರ್ಪುದುಮಂತೆ ಪುಸಿಯಲ್ತೆ!
ನಾನಿಲ್ಲಲಿ ನಿಮ್ಮೆಲರಂ ನೋಡುತಿರ್ಪುದುಂ
ಪುಸಿಯಲ್ತೆ! ನೀಮೆನಗೆ ಪೇಳ್ದುದುಂ ಕೇಳ್ದುದುಂ
ಪುಸಿಯಲ್ತೆ! ಪುಸಿಯಪ್ಪೊಡಿವು, ರಾಮಭದ್ರನಂ
ನಾಂ ಕಂಡುದುಂ, ಕೇಳ್ದುದುಂ, ನುಡಿದುದುಂ ಮತ್ತೆ
ಮೈ ಮುಟ್ಟಿದುದುಮೆಲ್ಲಮುಂ ವಿಕೃತಿ ಜನ್ಯಗಳ್‌,
ಭ್ರಾಂತಿಗಳ್‌, ಮಿಥ್ಯೆ ದಿಟಂ!”
ಇತ್ತಲಿಂತಿಂತೆ    ೩೪೦
ಶಿಬಿರ ಶಿಬಿರದಿ ಬೀಡುಬೀಡಿನೊಳ್‌ ದ್ರುಮಯೋಧಿ
ಸೈನಿಕರ್ ತಂತಮ್ಮ ಸತ್ಯದ ಸಮರ್ಥನೆಗೆ
ವಾದಿಸುತ್ತಿರಲತ್ತಲಾ ಕೋಸಲೇಶ್ವರಂ
ಕಪಿಮುಖ್ಯರೊಡನೆ ಮುಂದಣ ನೀತಿಯಂ ನೆನೆದು,
ತನ್ನಂತರಂಗದೊಳ್‌ ನಿಚ್ಚಯಿಪುದಂ ತಾನೆ
ತರಿಸಂದು, ಕಾಯುತಿರ್ದನು ರಾಕ್ಷಸೋತ್ತಮ
ವಿಭೀಷಣಾಗಮನಮಂ.
ಅತ್ತಲ್‌ ಪ್ರಭಾತದೊಳ್‌
ನಗರಿಯಂ ಪೊಕ್ಕು ರಾವಣನಣುಗದಮ್ಮಂ
ಹಿತೋಚಿತದ ನುಡಿಯಮರ್ದ್ದಿಂ ಸಂಕಟವನಿನಿತೆ
ತವಿಸಿ, ದೈತ್ಯೇಂದ್ರನಪರಕ್ರಿಯೆಗೆ ಸುವಿಶಾಲ             ೩೫೦
ಸಾಗರದ ವಿಪುಲ ನೀಲಿಮೆಗಂಚಿನಂತೆಸೆವ
ವಿಸ್ತರದ ವೇಲಾ ಬೃಹಚ್ಚಿಕತ ವೇದಿಯೊಳ್‌
ವಿರಚಿಸಲ್ಕಾಣತಿಯನಿತ್ತನ್‌ ಚಿತಾಮಂಚಮಂ,
ಚಂದನೇಂಧನ ರುಚಿರಮಂ, ರಾಂಕವಾಸ್ತರಣ
ಮೇಣ್‌ ಪದ್ಮಕೋಶೀರ ರಮಣೀಯಮಂ. ರಾಜ
ರಾಜ್ಞಿಯರ ಪೂಜಿತ ಕಳೇಬರಂಗಳೇರ್ದುವಯ್‌
ಮಸಣದೇರಂ. ರಾಜಗೌರವಕೆ ಮೊಳಗುತಿರೆ
ವಾದ್ಯಗಳ್‌, ರಾಜಭಕ್ತಿಗೆ ಸೇನೆಯಿರ್ಕೆಲದಿ
ತಲೆಬಾಗಿ ಸಾಗಿಬರೆ, ರಾಜನೊಲ್ಮೆಗೆ ಪ್ರಜಾ
ಕೋಟಿ ತಿರೆ ತೊಯ್ವವೋಲಳುತೆ ತೆರೆತೆರೆಯಾಗಿ      ೩೬೦
ಕಡಲ ದಂಡೆಗೆ ಪೊನಲ್‌ ಪರಿವವೋಲೆಯ್ದಿಬರೆ,
ಶೋಕಮಯ ಮೆರವಣಿಗೆ ನಡೆದುದು ಮಹಾಂಭೋಧಿ
ತಟಕೆ. ಸೌರಭ ಪುಷ್ಟಯವನಿಕಾವೃತಮಾಗಿ
ಶ್ರೀ ರಾವಣನ ಮೇಣ್‌ ಸತೀ ಮಂಡೋದರಿಯ
ಕಳೇಬರಗಳಾರೂಢಮಾದುವು ಚಿತೆಯ ಗಂಧ
ಬಂಧುರ ಮನೋಜ್ಞಾ ಲಾವಂಚಮಯ ಮಂಚಮಂ.
ಅಸುರ ಋತ್ವಿಕ್ಕುಗಳ ಚರಮ ಋಙ್ಮಂತ್ರಗಳ
ಗೇಯದೊಡನೊಡನೆ ಅನಲೆಯ ತಂದೆ ಕಿರ್ಚಿಡಲ್‌
ಪೆರ್ಚಿದತ್ತಾಕಾಶ ಚುಂಬಿ ಗೋಪುರದಂತೆ
ಸಗ್ಗಕ್ಕೆ ತೋರ್ಬೆರಳೆನಲ್‌ ಚೈತ್ಯ ಸಪ್ತಾರ್ಚಿ   ೩೭೦
ನೋಡುತಿರೆಯಿರೆ ಜಗತ್‌ತ್ರಯ ಭಯಂಕರ ದೈತ್ಯ
ರಾಜ ರಾಜೇಂದ್ರ ಲಂಕೇಶ್ವರನ ದಶಶಿರನ
ರಾವಣನ ದೇಹಮಾ ರಾಜರಾಜೇಶ್ವರಿಯ
ಮಂಡೋದರಿಯ ಕಾಯದೊಡನೆ ರಾಶೀಕೃತಂ
ಶ್ವೇತಭಸ್ಮಾವಶೇಷಂ ಮಾತ್ರ ತಾನಾಗಿ
ಪರಿಣಾಮಗೊಂಡುದು, ಜಗನ್ಮಿಥ್ಯೆಯಂ ಸಾರ‍್ವ
ಸಂಕೇತ ಸಾಕ್ಷಿಯೋಲ್‌. ಜಲಧಿಜಲಮಂ ಮಿಂದು,
ತೊಯ್ದರುವೆಯಿಂ ಬಂದು, ದೂರ್ವಾಭಿಮಿಶ್ರಿತಂ
ತಿಲ ತೀರ್ಥಮಂ ದಾನವಿತ್ತು ವಿಧಿಪೂರ್ವಕಂ,
ಪಿರಯಣ್ಣನೊಂದು ನೆನಪಿನ ಪುಣ್ಯಕಭಿನಮಿಸಿ,            ೩೮೦
ದುಃಖಾಗ್ನಿ ದಗ್ಧಹೃದಯರ್ಗೆ ಸಾಂತ್ವನ ದುಗ್ಧ
ಸುಸ್ನಿಗ್ಧ ವಾಗಮೃತವೆರೆದೊರೆದು ಸಂತೈಸಿ,
ಪುರಮಂ ಪುಗಿಸಿ, ರಾಕ್ಷಸ ಮಹಾನುಭಾವಂ
ವಿಭೀಷಣಂ ಬಂದನಾ ರಾತ್ರಿಯೆ, ತನ್ನ ಪಥಮಂ
ಕಾಯ್ದು ತವಕಿಸುತಿರ್ದ ರಾಮನ ದಿವ್ಯ ಸನ್ನಿಧಿಗೆ.