ನಕ್ಷತ್ರ ಖಚಿತ ಮೇಖಳೆಯಾದುದಯ್‌ವೇಳೆ
ಕೃಷ್ಣಾಂಬರಾ ನಿಶಿ ಚತುರ್ದಶಿಗೆ, ನಡುರಾತ್ರಿ,
ಶ್ರೀರಾಮ ಚಿತ್ತಪಸ್‌ತೇಜಮುರಿಪಿದ ತನ್ನ
ಮೂಲಬಲ ಸಂಹೃತಿಗೆ ಧೃತಿ ಕಲಂಕಿದ ರೋಷ
ರಕ್ತಾಕ್ಷ ರಾತ್ರಿಂಚರೇಶ್ವರಂ, ಪೇಳ್‌ತಾಯೆ
ಓ ವಾಗಧಿಷ್ಠಾತ್ರಿ, ತೊಡಗಿಹನದೇನಂ
ಮಹತ್‌ಪೂಜೆಯಂ ಶರ್ವಮಂದಿರದೊಳೇಕಾಂಗಿ?
ಜ್ಞಾನಧಿದೇವಿ ನೀಂ, ಮೇಣ್‌ವಿಜ್ಞಾನ ನೇತ್ರಿ:
ಹೊರ ನನ್ನಿಯೊಂದಲ್ಲದಂತಶ್ಚಕ್ಷು ತಾಂ ಕಾಣ್ಬ
ಲೌಕಿಕಾತೀತಮಹ ನಿತ್ಯಸತ್ಯಂಗಳಂ            ೧೦
ತೋರೆನಗೆ, ದೇವಿ, ವಿಶ್ವಾಂತರಾತ್ಮೆ! ಸ್ಥೂಲಮಂ
ಸೂಕ್ಷ್ಮಮಂ, ಕೋಶಗಳಿತರ ಕಾಲಮಂ
ದೇಶಮಂ, ಕಾರಣವನಂತೆ ಕಾರಣದಾಚೆ
ಲೀಲಾ ಮಹೋದ್ದೇಶಮಂ ಬಲ್ಲೆ ನೀಂ: ಕವಿಗೆ
ಕೃಪೆಗೆಯ್‌, ಅಇವದ್ಯೆ, ಹೇ ವಿದ್ಯೆ, ವಿದ್ಯಾತೀತೆ!
ಬಹಿರ್ ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು; ಅಲೌಕಿಕ ನಿತ್ಯಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ
ಶ್ರೀ ಕುವೆಂಪುವ ರಚಿಸಿದೀ ಮಹಾಛಂದಸಿನ
ಕೃತಿಮೇರು, ಕೇಳ್‌, ಜಗದ್ಭವ್ಯ ರಾಮಾಯಣಂ!           ೨೦
ರತ್ನಪ್ರದೀಪಮಯ ಹೇಮಮಂದಿರದಲ್ಲಿ
ಸಂಕಲ್ಪ ಸಿದ್ಧಿಗೆ ಮಹಾದುರ್ಗೆಯಂ ತಣಿಸಿ
ವೈರಿವಿಧ್ವಂಸನ ವರಂಗಳಂ ಪಡೆಯಲ್‌
ಮನಂದಂದು ದೃಢಮತಿ ತಪಃಕೃತಿಯೊಳಿರ್ದ್ದಂ
ದಶಾನನಂ. ಧವಳ ಶಿವ ವಕ್ಷ ವೇದಿಯನೇರಿ,
ಜೋಲ್ವ ಜಿಹ್ವೆಯ ಶೋಣಿತಸ್ರೋತಮಂ ಕಾರಿ,
ರುಂಡ ಮಾಲಾಭೀಳ ಕಂಠಾವತಂಸದಿಂ
ನರಕರ ಸ್ತೋಮ ವಿರಚಿತ ಕಟಿಯ ವಸ್ತ್ರದಿಂ
ಬಹು ಬಾಹು ಭೀಕರಾಯುಧಪಾಣಿ, ದಿಗ್‌ವ್ಯಸ್ತ
ಕಾಳೋಗ್ರ ವೇಣಿ, ತ್ರಿಣೇತ್ರೆ , ತ್ರಿಜಗನ್ಮಾತೆ,   ೩೦
ಮಾಯೆ ಮೇಣ್‌ಪ್ರಕೃತಿ ಮೇಣ್‌ಶಕ್ತಿ ಮೇಣ್‌ಲೀಲೆ,
ಸೃಷ್ಟಿಸ್ಥಿತಿಪ್ರಲಯ ಶೀಲೆ ತಾನೆಸೆದಳಯ್‌
ದೈತ್ಯ ಪೂಜಾ-ಮೂರ್ತಿ, ಕಾಲಾತ್ಮಕೆ, ಕರಾಳಿ,
ನಾಟ್ಯ ಭಂಗಿಯ ಜಗನ್ನಟರಾಜ್ಞಿ! ಸುತ್ತುಂ
ಜಪಾ ಕುಸುಮ ಕುಂಕುಮ ಬಲಿಗಳೆಸೆದುವಯ್‌ಕರ್ಣ
ಪೆಳರ್ವವೋಲ್‌. ವರಲೋಭಿ ಲೋಹಿತಾಂಬರ ಶೋಭಿ
ರಾವಣಂ ಹೋಮ ಧೂಮಾವರಣ ನೀಲಾಭ
ಕಾಳಿಕಾ ಮೂರ್ತಿಯಂ ದಿಟ್ಟಿ ನಟ್ಟೀಕ್ಷಿಸುತೆ
ಕಾಯುತಿರ್ದನು ತನ್ನಭೀಷ್ಟಕೆ ಮುಹೂರ್ತದಮಂ
ತನ್ನಿಷ್ಟ ದೇವತಾವಿಷ್ಕಾರದಾ. ಸೃಷ್ಟಿಯುಂ     ೪೦
ನಿಂದುದುತ್ಕಂಠ ಭೀತಿಯಿನಸುರ ದೃಷ್ಟಿಗ್ರಹಂ
ಬಡಿದವೋಲ್‌. ದೈತ್ಯಭಕ್ತನ ಭೀಷ್ಮಭಕ್ತಿಗೆ
ಜಗಜ್ಜನನಿ ತನ್ನ್‌ಅಚಿತ್‌ತಾಟಸ್ಥ್ಯಮಂ ತೊರೆದು
ಗೋಚರಿಸಲೆಳಸುತಿರೆ ಚಿದ್ರೂಪದಿಂ: “ತಾಳ್‌,
ಮಹಾ ತಾಯಿ, ತಾಳ್‌!” ದೇವಗಣಮೊದರಿದುದು ಗಗನ
ಗಂಘಾಮೃತಾರ್ಘ್ಯಪಾದ್ಯಂಗಳಿಂ ತಾಯ್ಗೆರಗಿ.
“ನೀನಿಂದು ಮೈದೋರಲೀ ಭುವನಭೀಕರಗೆ
ಕೇಳ್ವನು ವರಂಗಳಂ ಧರ್ಮಕ್ಷಯಕೆ ದಿಟಂ
ಸಾಧನಗಳಂ!” ಹೊಸ್ತಿಲೊಳ್‌ನಿಂದಳೋಲಂತೆ
ಚಿತ್ತಚಿತ್ತುಗಳೆಡೆಯೊಳಿರ್ಬಗೆಯೊಳಾ ದುರ್ಗೆ   ೫೦
ಅತ್ತಲಿತ್ತಲ್‌ತೂಗಿದಳ್‌ಲೀಲಾ ವಿನೋದೆ!
ಕಾಲ್ವಿಡಿದ ದೇವರ್ಕಳಿಗೆ ಸಮಾಧಾನಮಂ
ಮುಗುಳುನಗೆಯಿಂ ಮನೋಗೋಚರಮೆನಲ್‌ದೇವಿ
ಸೂಚಿಸುತಿರಲ್‌, ತಾಯಿ ತಡೆದುದಕೆ ಕಡುಮುಳಿದು
ತುಡುಕಿದನು ಕಡುಗಮಂ ದೈತ್ಯರೊಡೆಯಂ:
“ಏಕೆ
ತಡೆಯುತಿಹೆ, ತಾಯಿ? ಭಕ್ತನ ಧೃತಿ ಪರೀಕ್ಷೆಗೇಂ?
ಪೂ ಪಣ್ಣು ಬಲಿ ನಿನಗೆ ಸಾಲದಿರೆ, ಇದೊ ನೋಡು,
ಒಂದುರುಳಲಾಯೆಡೆಯೆ ಮತ್ತೊಂದು ಮೂಡುವಾ
ಹತ್ತು ತಲೆಗಳ ವರೆಗೆ ಕತ್ತರಿಸಿ ಕೊಡಲೆನಗೆ
ಇರ್ಪುದಾಯುಶ್ರೀ! ನಿವೇದಿಸುವೆನಿದೆ ಕೊಳ್‌!”           ೬೦
ವಿಕಂಪಿಸೆ ಶಿಲಾಶರೀರಂ, ವಿಕಂಪಿಸಿತು ಕೇಳ್‌
ಶಿವಮಂದಿರಂ! ತಟಿದ್‌ರೋಚಿಮಯ ವೀಚಿಮಯ
ಸಾಗರಂ ಮೇರೆಯಿಲ್ಲದ ಮಹಾದೂರದಿಂ
ಮೇಲ್ವಾಯ್ದುದಾ ರುಂಧ್ರ ದರ್ಶನಕೆ ಚೇತನಂ-
ಗೆಟ್ಟನೋಲುರುಳಿದನು ದೈತ್ಯೇಂದ್ರನದ್ಭುತ
ಸಮಾಧಿಗಾ ಸ್ವಾಪ್ನಿಕ ಮನೋಮಯಕೆ.:
“ಅದಾರಲ್ಲಿ?
ಧಾನ್ಯಮಾಲಿನಿ! ಅದೇಕಿಲ್ಲಿ ನೀನೀ ಪಾಳು
ದೇಗುಲದಿ? ಏನ್‌ಗೆಯ್ವೆಯೀ ಗೂಬೆಗತ್ತಲೊಳ್‌
ನೀನೊರ್ವಳೆಯೆ, ಪ್ರಿಯೆ? ಹುಬ್ಬುಗಂಟಿಕ್ಕದಿರ್!
ನೀನೇಂ ಪಿಶಾಚಿಯೆ? ಪ್ರಿಯೆ ಎಂಬುದಪ್ರಿಯಮೆ?       ೭೦
ಏನ್‌ಭ್ರಾಂತಿ ನನಗೆ ? ನಿನ್ನಂ ಚಿತೆಯೊಳುರಿಪಿದೊಲ್‌
ಕನಸಾದುದೀ ಜಾಗ್ರತಕೆ ಬರ್ಪ ಮುನ್ನಮಾ
ನಿಷ್ಠುರಸ್ವಪ್ನಪ್ರಪಂಚದೊಳ್‌! ಇದಾವುದೀ
ಸೀಮೆ? ಲಂಕೆಯೆ? ಅಲ್ತು! ಕನಕಲಂಕೆಯೊಳೆಲ್ಲಿ
ಪಾಳ್ಗುಡಿಯ ಗೂಬೆಗತ್ತಲ್‌ಮಸಣದೀ ಶಿಥಿಲ
ಶೀತಲ ನಿಶೀಥಿನಿಯ ಸುಪ್ತಿಮಯ ನಿಶ್ಶಬ್ದ
ನಿರ್ಜನತ್ವಂ? ಅದೇಕುಸಿಕನಿಹೆ? ಮೂಗಿಯೇಂ
ಮೇಣೆನ್ನ ಮೇಲ ‌ಮುಳಿಸೊ?”
“ಗುರುತು ಸಿಕ್ಕದೆ ನಿನಗೆ?
ನಾನೆ  ಲಂಕಾಲಕ್ಷ್ಮೀ! ಈ ಪಾಳೆ ಆ ಲಂಕೆ!”
“ಪುಸಿಯದಿರ್; ಕನಕಮಯಮಾ ನನ್ನತುಳ ಲಂಕೆ!                                          ೮೦
ತ್ರೈಭುವನ ಲಕ್ಷ್ಮಿ ಆ ನನ್ನ ಲಂಕಾಲಕ್ಷ್ಮಿ!”
“ಸುಕೃತಿಗಳ್ಗಾಂ ಶ್ರೀ; ಅಲಕ್ಷ್ಮಿ ತಿಳಿ ನಾಂ ಸ್ವಯಂ
ಪಾಪರುಚಿಗಳ್ಗೆ! ನೀಂ ಬಣ್ಣಿಪಾ ಲಂಕೆ, ಮೇಣ್‌
ನೀಂ ಪೊಗಳ್ವಾ ಲಕ್ಷ್ಮಿ, ಕಳೆದ ಕನಸುಗಳಲ್ತೆ!
ಕಾಣಿದೊ ಮುರಿದ ಕಿರೀಟಂ, ಮಣಿಗಣಗಳುದುರಿ
ದಾರಿದ್ರ್ಯ ಸಾಕ್ಷಿ! ಮಲಿನಂ ಛಿನ್ನ ಚೀನಾಂಬರಂ!
ಬಳೆಯೊಡೆದ ಬೋಳುಗೈ! ತೈಲಮಿಲ್ಲದ ವೇಣಿ
ಪೊದರಾಗಿಹುದು ಪಿಣಿಲ್ಗೊಂಡು! ಶಸ್ತ್ರಕ್ಷತಂ
ಶತವಿಕ್ಷತಂ ಗೆಯ್ದು, ನೋಡು, ಜಜ್ಜರಿತಮೀ
ಮೆಯ್‌! ಸೋರ್ದು ನೆತ್ತರವೊನಲ್‌ತತ್ತರಿಸುತಿಹೆನ್‌     ೯೦
ಪತನಾಭಿಮುಖಿ! ಪೊರವರಾರ್? ಮೊರೆಗೇಳ್ವರಾರ್?”
ಕಂಗೆಟ್ಟ ಲಂಕಿಣಿ ನಿರಾಭರಣಹಸ್ತದಿಂ
ನಿರ್ವೀರ್ಯ ವದನಮಂ ಮುಚ್ಚುತಳತೊಡಗಿದಳ್‌.
ಲಂಕಾಧಿನಾಥನಾ ಕಂಕಾಲ ಮಯಿಯಂ
ಅನಾಥೆಯೋಲಾಕ್ರಂದಿಸುತ್ತಿರ್ದಳಂ ನೋಡಿ
ಬಿಂಕಂ ಜಗುಳ್ದು:
“ನಾಂ ಬರ್ದುಕಿರ್ದ್ದು ಸತ್ತನೆಂ!
ನಿನ್ನನಾರ್ ಈ ಗತಿಗೆ ತಂದವರ್ ಪೇಳ್‌, ತಾಯಿ
ದೇವತೆಗಳಾಳ್ಗಳಮರಾವತಿಯೆ ತೊಳ್ತು; ಪೇಳ್‌,
ನಿನಗೇತಕೀ ಪಾಡು?”
“ನಿನ್ನಿಂದಲೆಯೆ ನನಗೆ
ಬಂದುದೀ ಗೋಳ್‌! ವಾನರಧ್ವಜಿನಿಯಿಂ, ಅಯ್ಯೊ,       ೧೦೦
ಮಕ್ಕಳೆಲ್ಲರ್ ಮಡಿದರೆನಗುಮೀ ಗತಿಯಾಯ್ತು!”
ಓಹೊ ಮರೆತಿರ್ದೆನದನಾಂ, ಏಕೊ? ಸೋಜಿಗಂ!
ಏನ್‌ವಿಚಿತ್ರಮೊ ಇಲ್ಲಿ! ಏನೇನೊ ಮೂಡುತಿದೆ
ಮನಕೆ; ಬೇಕಾದುದೆಯೆ ಮರೆಯುತಿದೆ! ಬಂದೆನಾಂ
ಇಲ್ಲಿಗದೆ ಉದ್ಯೋಗಮಾಗಿ, ಯುದ್ಧಂ ನಾಳೆ
ಸಿದ್ಧಿಪುದೆನಗೆ ಕಪಿಧ್ವಜನಿಯೊಳ್‌, ರಾಮನಂ
ಗೆಲ್ವ ಸಿದ್ಧಿಗೆ ಶಿವಾಣಿಯ ಕೃಪೆಯನೆರೆಯಲ್ಕೆ
ಪೋದಪೆನ್‌. ಅಧೀರೆಯಾಗದಿರೆಲೆಗೆ ಲಂಕೆ. ನೀನ್‌
ನಾಳೆಯೆ ಮರಳಿ ಕಿರೀಟಿನಿ ದಿಟಂ ಮುನ್ನಿನೋಲ್‌,
ಮೇಣ್‌ಮೊದಗ್ಗಿಂ ಮಿಗಿಲ್‌!”
“ಕಟುದಿಟಂ. ದನುಜೇಂದ್ರ ೧೧೦
ನಿನ್ನ ವಾಕ್‌ಸಿದ್ಧಿ!”
“ಮತ್ತೇಕೆ ಕಂಬನಿಗೆರೆವೆ?
ಸುಯ್ವೆ?”
“ಸಿದ್ಧಿ ತಾನಪ್ಪೊಡಂ, ನನ್ನ ಮಕ್ಕಳ್‌
ಲೆಕ್ಕಂಗಿಡಲ್‌ಮಡಿವರೆಂದಳ್ಕು೧ ಬರಿದಾಗೆ
ಲಂಕೆ, ಸಿಂಹಾಸನವನೇರ್ದೊಡೇಂ? ಮಸಣಕೆನ್ನಂ
ರಾಣಿಯಾಗಿಪ್ಪೆಯೇಂ? ಕೊಲೆ ಸಾಲ್ಗುಮೀ ಛಲಂ
ಮಾಣ್‌!”
“ಮತ್ತೆ? ನಿನ್ನಾಸೆಯೇನ್‌?”
“ನನ್ನಾಸೆಯೇನೆ?
ನಿನ್ನಂತರಾತ್ಮದೊಳ್‌ ಸಂಚರಿಸುತಿರ್ಪುದಯ್‌,
ಪುಡುಕಿ ಕಾಣ್‌?”
“ರಾಮನಂ ಗೆಲ್ದು ಮೈಥಿಲಿಗಾತನಂ
ಕಪ್ಪಂಗುಡುವುದೆಂಬೆಯೇನ್‌?”
“ಅಹಂಕಾರಕ್ಕೆ
ಬಲಿಗೊಡುವೆಯೇನ್‌ ಲಂಕಾಪ್ರಜಾಸಂಖ್ಯೆಯಂ?         ೧೨೦
ಸಾಲದೇನಾದ ಬಲಿ? ತಾಯ್ ಸಂಕಟವನೇಕೆ
ಪೆರ್ಚಿಪೀ ಪೇಡಿತನಮಯ್‌? ನಿನ್ನ ಬಿಂಕಕ್ಕೆ
ಬೆಳೆಯವೇಳ್ಕುಮೆ ವಿಧವೆಯರ ಸಂಖ್ಯೆ? ಮಕ್ಕಳಂ
ಕಳೆದುಕೊಳ್ವಬ್ಬೆಯರ ಸಂಖ್ಯೆ? ಕೂಳ್‌ಕೊಡುವರಂ
ಬಲಿಗೊಡುವನಾಥ ಶಿಶು ಸಂಖ್ಯೆ?”
“ಬಯ್ಯದಿರೆಲೆಗೆ
ಲಂಕೆ. ನಾಳೆಯ ಸಮರಕಾನೊರ್ವನೆಯೆ ಮಲೆವೆನ್‌.
ನಿನ್ನ ಕಂದರೊಳೊರ್ವನಾದೊಡಂ ಮಡಿಯನಿನ್‌!
ಇನ್ನುಳಿದುದೆನ್ನ ಕಾರ್ಯ್ಯಂ. ನಿನ್ನವರನಾನ್‌ದಿಟಂ
ಕೊಲಿಸೆನಿನ್‌. ಇತ್ತೆನಿದೊ ಭಾಷೆಯನ್‌; ಕೊಳ್‌, ಕೃಪಣೆ!.
ಬೀಳ್ಕೊಡೆನ್ನಂ; ಪೋಪೆನೌದಾರ್ಯಮಿರ್ಪೆಡೆಗೆ,          ೧೩೦
ಜಗದಂಬೆ ಶಿವೆಯ ಸಂದರ್ಶನಕೆ!”
“ನಾನೆ ಶಿವೆ!
ಕಾಣದೇನಯ್‌?”
“ಅದೆಂತು?”
“ಕಣ್ಣಂತೆ ಕಾಣ್ಕೆಯಯ್‌!”
ನೋಡಿದನು ಬೆರಗಾಗಿ ದಾನವೇಂದ್ರಂ, ಜ್ಯೋತಿ
ತಾಂ ಘನೀಭೂತಮಾಯ್ತೆನೆ ಮೆರೆದುದಂಬಿಕಾ
ಶ್ರೀಮೂರ್ತಿ, ಪಾಳ್ಗುಡಿಗೆ-ಬದಲೊಂದು ಪರ್ಬಿದುದು
ಹೇಮ ನೀಹಾರಿಕೆ, ವಿಯತ್ತಳವನಾಕ್ರಮಿಸಿ;
ಗೂಬೆಗತ್ತಲ್‌ಪರಿದುದಿಂದ್ರಕಾರ್ಮುಕ ಕಾಂತಿ
ತುಂಬಿದತ್ತಾಕಾಶ ಪದವಿಯಂ. ಕಾಣುತೆ
ಅತೀಂದ್ರಿಯ ನಿರಾಕರದತಿಮನೋತತ್ತ್ವೆಯಂ
ವರ್ಣನಾತೀತ ವರವರ್ಣಿನಿಯನಂಬೆಯಂ     ೧೪೦
ಭಾವಾಶ್ರುಮಯ ನೇತ್ರನೆರಗಿದನು ರಾವಣಂ
ಗದ್ಗದಿಸುತರ್ಭಕನವೋಲ್‌:
“ದುಃಖಮೇನ್‌, ಕಂದ.
ನಿನಗೆ, ಲಂಕೇಶ್ವರಗೆ, ತ್ರಿಜಗದ್‌ಭಯಂಕರಗೆ,
ಬಹು ತಪೋನಿಷ್ಠಂಗೆ, ಬಹು ವರ ಬಲಿಷ್ಠಂಗೆ,
ಕಲಿ ವರಿಷ್ಠಂಗೆ?”
“ಮೂದಲಿಸದಿರ್ ಅಜ್ಞೆಯೋಲ್‌,
ಸರ್ವಜ್ಞೆ, ನಿನ್ನ ಲೀಲೆಯನರಿಯೆನೆಂದಲ್ತು,

ನೀನಾಡಿಸಿದವೊಲೆ ಜಗನ್ನಾಟಕಂ. ನಿನ್ನ
ಇಚ್ಛಾ ಸೂತ್ರಮಿತ್ತಲೆಳೆದರೆ ರಾವಣೋತ್ಕರ್ಷ,
ಅತ್ತಲೆಳೆದರೆ ವೈರಿಯುತ್ಕರ್ಷ! ಪಾತ್ರಮನ್‌
ಸೋಲು ಗೆಲು ಸುಖದುಃಖ ಸೂತ್ರಂಗಳಿಂ ಪಿಡಿದು        ೧೫೦
ಆಡಿಪುದೆ ನಿನಗೆ ಹರ್ಷಂ! ಗಾಳಿಪಟಗಳಂ
ಆಡಿಸುವವೋಲ್‌! ನನ್ನ ಈ ದುಃಖಮುಂ ನಿನ್ನ
ಇಚ್ಛೆಯೆ ದಿಟಂ! ಅಲ್ಲದಿರೆ ತಿಳಿದುತಿಳಿದುಮೀ
ಶೋಕಮೆನ್ನಂ ದಹಿಸುತಿರ್ದುದೆ? ಅದಾತ್ಮಕ್ಕೆ
ಸಂಸ್ಕಾರಮಲ್ತೆ? ಜೀವಂಗಳಂ ಮಸೆಯಲ್ಕೆ,
ನಿಶಿತಗೊಳಿಸಲ್ಕೆ, ಬೆಳಗಲ್ಕೆ ದುಃಖಭೋಗಂ
ತಾಂ ಸಾಣೆಯಲ್ತೆ?”
“ಈ ಬುದ್ಧಿ ಸಿದ್ಧಿಯ ನೆಲೆಗೆ
ನಿಲ್ವಿನಂ ನಿನಗೆ ತಪ್ಪದು ನಾಟಕವನಲೆವ
ಪಾತ್ರಕರ್ಮಂ”.
“ಹಿಂಜರಿಯೆನದಕೆ. ನೀಡೆನಗೆ
ಬಲ್ಮೆಯಂ; ನಾಟಕದೊಳಭಿನಯಕೆ ತಗುವಂತೆ        ೧೬೦
ಚಾತುರ್ಯಮಂ.”
“ಬೇಡಿದುದನಾಂ ನೀಡುವೆನ್‌,
ನೀಡದುದುಮುಂಟೆ ಭಕ್ತಂಗೆ?”
“ದಶರಥಸುತಂ
ರಣದಿ ಸೋಲ್ವಂತೆನಗೆ ಮಾಡು ಕೃಪೆಯನ್‌!”
“ತಥಾಸ್ತು!”
“ಸೀಥೆ ವಶವಪ್ಪಂತೆ!”
“ತಥಾಸ್ತು!”
“ನೀಂ ತಾಯ್‌ದಿಟಂ!
ನೀಂ ಕೃಪಾಬ್ಧಿಯೆ ದಿಟಂ! ರಾಮ ಜಯಕಿಂ ಮಿಗಿಲ್‌
ಸೀತೆ ಸೋಲ್ವದೆ ಸೋಜಿಗಂ!”
“ಸೋಜಿಗಮದೇಕೆ?
ಒಲಿದ ಕಂದಗೆ ತಾಯಿ ಸೋಲ್ವುದೇನಚ್ಚರಿಯೆ?
ಸಹಜಂ!”
“ಅದೇನ್‌ಮತ್ತೆ ವಕ್ರೋಕ್ತಿ!”
“ವಕ್ರಮೇನ್‌!
ನಿನ್ನೆರ್ದೆಯ ಗೂಢವೃತ್ತಿಗೆ ನನ್ನದುಕ್ತಿಯಯ್‌!”
“ಸೀತೆ ಸೋಲ್ವಳೆ? ರಾಮನಂ ಗೆಲ್ವೆನಿದು ದಿಟಮೆ?”     ೧೭೦
“ಸೀತೆಯಾಲಿಂಗಿಪಳ್‌, ಚುಂಬಿಸೆರ್ದೆಗೊತ್ತುವಳ್‌;
ರಣದಿ ರಾಮನ ಸೋಲಿಪಯ್‌ಪುನರ್‌ಜನ್ಮದೊಳ್‌೧
ಕಾಣ್‌ತೋರ್ಪುದಂ:”
ತಿರೋಹಿತಮಾದುದಾ ದರ್ಶನಂ.
ಮಿಳ್ಮಿಳನೆ ನೋಡುತಿರ್ದಸುರದೃಷ್ಟಿಗೆ ಮುಂದೆ
ಮೆರೆದತ್ತದೊಂದು ದೇವಾಲಯಂ . ಪೀಠಾಗ್ರದೊಳ್‌,
ದೇವವಿಗ್ರಹಮಲ್ತು, ನಿಂದುದೊಂದಶ್ವಂ
ಮಹದ್‌ಭೀಮತನು, ತನ್ನ ಪಿಂಗಾಲ್ಗಳನ್ನೂರಿ,
ನರ್ತಿಸುತೆ, ನೆಲವನೊದೆದುದು ಖುರಪುಟಧ್ವನಿಗೆ
ಕೆನೆವ ಹೇಷೆಗೆ ದಶಗ್ರೀವಾಸು ಗದ್‌ಗದಿಸೆ!     ೧೮೦
ಇದೇನಿದೇನೆನುತಿರಲ್‌, ದೀರ್ಘಖಡ್ಗಂಬಿಡಿದು
ಮೂಡಿದುದು ನಭದೊಳ್‌ಬೃಹನ್ಮುಷ್ಟಿ. ಇಳಿದುದದು
ಕುದುರೆಯ ಕೊರಳ್ಗೆ. ಕತ್ತರಿಸುಳ್ದುದು ಮಂಡೆ
ಮಣ್ಗೆ. ಖಂಡೆಯಮಿರದೆ ಕಾರಿದುದು, ನೆತ್ತರ್
ಪೊನಲ್ವರಿಯೆ. ಓಡಿ ದಶಶಿರನೇರಿದನು ಬಳಿಯೆ
ಹೊಳೆದಡದೊಳಿರ್ದೊಂದು ದೋಣಿಯಂ. ರುಂಡದಿಂ
ಬೇರ್ವರಿದು ದಿಂಡುರುಳ್ದಶ್ವಮುಂಡಂ ನೆಗೆದು,
ಕುಪ್ಪಳಿಸಿ, ಬಿದ್ದೆದ್ದು ಕುಣಿಕುಣಿದು, ಹಾರಾಡಿ,
ದೊಪ್ಪನಪ್ಪಳಿಸಿಳೆಗೆ ಚಿಮ್ಮಿ ಮುಂಬರಿದುದಾ
ಮಂಡೋದರಿಯ ಗಂಡನಿರ್ದೆಡೆಗೆ. ಬಿರುಬಿರನೆ           ೧೯೦
ತೇಲ್ದುದಸುರನ ನೌಕೆ. ನೆನೆಗೆದು ಮುಂದುರುಳಿ
ಧುಮ್ಮಿಕ್ಕಿದುದು ದುಢುಮ್ಮನೆ ಕುದುರೆಮುಂಡಂ
ನದೀ ಜೀವನಂ ನೆತ್ತರೋಕುಳಿಯಾಗಿ ಕೆರಳೆ.
ತೆರೆ ಮಸಗಿದುದು. ದೋಣಿ ಮಗುಚಿತು. ದಶಾನನಂ
ರಕ್ತಮಯ ಜೀವನ ತರಂಗಿಣಿಯ ವಾಹದೊಳ್‌
ಸಿಲ್ಕಿದನ್‌; ತೇಲ್ದನೀಜಿದನಯ್ಯೊ ಕಂತಿದನ್‌;
ಮುಳುಗಿದನ್‌, ಮುಳುಗಿದನ್‌, ಕೆಳಕೆಳಗೆ ಮುಳುಗಿದನ್‌.
ತೆಕ್ಕನೆಯೆ, ಕುಂಭಕರ್ಣನ ಕಂಡು , ಕೂಗಿದನ್‌
ತಮ್ಮನಂ. ಬರ್ದುಕುವಾಸೆಗೆ ಸಹೋದರರಿರ್ವರುಂ
ಹೊಳೆಯೊಡನೆ ಹೋರಾಡಿ ದಡಕೇರ್ದರೇನಿದೇನ್‌       ೨೦೦
ಶಿಶುಗಳೋಲ್‌! ಸುತ್ತಲೆಸೆದಿರ್ದುದೊಂದಾಶ್ರಮಂ.
ಚಿತ್ತಕಾದುದು ತಪಶ್ಯಾಂತಿ . ಮರೆತುದು ಮನಂ
ತನ್ನ ಪಿಂತಣ ಪೂರ್ವಮಂ. ನೆನೆಯಲೆಳಸಿದನ್‌.
ಯತ್ನಮನಿತುಂ ವ್ಯರ್ಥಮಾದತ್ತು. ವಿಸ್ಮೃತಿಯ
ವೈತರಣಿಗಳ್ದುದಾತ್ಮಂ. ಶಿಶು ಶರೀರದಿಂ
ಸಹೋಧರಂ ಕುಂಭಕರ್ಣಂ ಪಸುಳೆಯೋಲಂತೆ
ರೋದಿಸುತ್ತಿರ್ದುದಂ ಕಂಡಾ ಶಿಶುಶರೀರಿ
ತಾನುಮಳತೊಡಗಿದನು ದೈತ್ಯೇಂದ್ರನಾಗಳೆಯೆ
ಪುಟ್ಟಿದರ್ಭಕನಂತೆವೋಲ್‌. ಬಂದಳಲ್ಲಿಗದೊಲ
ಸೀತೆ! ಮಕ್ಕಳನೆತ್ತಿ ಮುದ್ದಾಡಿದಳ್‌! ಪಾಡಿ     ೨೧೦
ಮೊಲೆಯೂಡಿದಳ್‌! ತೊಡೆಯನೇರಿಸಿದಳೆರ್ದೆಗಪ್ಪಿ
ಲಲ್ಲಯ್ಸಿದಳು ತನ್ನವಳಿಮಕ್ಕಳಂ, ತಮ್ಮನಂ
ಕುಂಭಕರ್ಣನನಂತೆ ತನ್ನನುಂ!
ತಾನಂತು
ತನ್ನ ತಮ್ಮಂವೆರಸು ಶಿಶುವಾಗುತಾಶ್ರಮದಿ
ಜಾನಕಿಯ ತೊಡೆಯ ಮೇಲಾಡುತಿರ್ದದ್ಭುತಕೆ
ಬೆಬ್ಬಳಿಸುತೆಳ್ಚರ್ತು, ತನ್ನತನಮಂ ಮತ್ತೆ.
ವಿಸ್ಮರಣ ಮರಣದಿಂದೆತ್ತಿ ಸುಸ್ಮೃತಿಗೆಳೆದು
ಸಂಸ್ಥಾಪಿಸುವನಂತೆವೋಲ್‌, ಕರೆದು ಕರೆದದೊರಲಿ
ಕೂಗಿದನ್‌: “ಮಂಡೋಡರೀ! ಮಯಾತ್ಮಜೇ! ಪ್ರಿಯೇ!
ರಕ್ಷಿಸೆನೆನ್ನ!”
ಪಸುಳೆಯಳುಗೇಳ್ದು ಪೂಜಾ           ೨೨೦
ನಿಕೇತನಂಬೊಕ್ಕ ವಿಸ್ಮಿತೆ, ಮಯನ ನಂದನೆ,
ದಶಾಸ್ಯನಾ ದುಃಸ್ವಪ್ನಚೇಷ್ಟಿತಕೆ ತಳಮಳಿಸಿ,
ಮೀಸೆವೊತ್ತಂ ಮಹಾ ದೈತ್ಯ ಚಕ್ರೇಶ್ವರಂ
ಪೊಸೆತ….ಪುಟ್ಟಿದ ಪಸುಳೆಯಂದದಿಂದಳುವಾ
ವಿಕಾರಕುರೆ ಬೆದರಿ, ತನ್ನಂಕತೂಲದಿನವನ
ತಲೆಗೆ ದಿಂಬೆಸಗಿ, ತೊಡಗಿದಳು ಪಣೆಬೆಮರೊರಸಿ
ಬೀಸಿ ಬಿಜ್ಜಣವಿಕ್ಕಿ ಶಿಶಿರೋಪಚಾರಮಂ.
ನುಡಿಸಿದಳ್‌ನಾಥನಂ, ಪುರುಹೂತ ಜೇತನಂ,
ಪಸುಳೆವೊಲ್‌ಭೀತನಂ! ಬಿಗಿದಪ್ಪಿ ಚುಂಬಿಸುತೆ
ಕರೆಕರೆದು ಮೈದಡವಿ ಮತ್ತೆ ಜಾಗ್ರಜ್ಜಗಕೆ                         ೨೩೦
ಸ್ವಪ್ನದಿಂದಾತನಂ ತುಯ್ದೊಯ್ದು ತೆಗೆದೆತ್ತಿ
ತಂದಳ್‌ಪತಿಪ್ರಾಣೆ. ಮೇಣ್‌ತನ್ನಂ ಪೆಸರ್ ವಿಡಿದು
ಕರೆಯುತೆಳ್ಚರಂಗೆ: “ಬಳಿಯೊಳಿಹೆನಾಂ, ಸ್ವಾಮಿ;
ಬೆದರಿದರ್ ಪಾಳ್ಗನಸದರ್ಕ್ಕೆ!”
“ಕನಸಲ್ತು ನಾಂ
ಕಂಡುದದು! ನನೀಗಳೆಲ್ಲಿಹೆನ್‌ಪೇಳ್‌, ಪ್ರಿಯೆ?”
“ಲಂಕೆಯೊಳ್‌, ನಮ್ಮರಮನೆಯ ಶೈವಮಂದಿರದಿ!”
“ನನ್ನ ಮೆಯ್ಯೆಲ್ಲಿ? ಮೊಗಮೆಲ್ಲಿ?”
“ಇಲ್ಲಿಹವಿಲ್ಲಿ!”
“ನಾನರ್?”
“ದಶಗ್ರೀವನಸುರೇಶ್ವರಂ! ಮತ್ತೆ
ಮಂಡೋದರೀ ಜೀವಿತೇಶ್ವರಂ!”
“ಅಹುದಹುದೆ!
ಪ್ರಿಯೆ, ಬರಿಯ ಮರೆವಲ್ತು, ಪ್ರಜ್ಞಾಪ್ರಲಯದಿಂ                   ೨೪೦
ಜಗುಳ್ದವೋಲಾದುದೆನ್ನಾತ್ಮಂ ಪುನರ್ಭವಕೆ,
ತನ್ನಹಂಕಾರದೀ ಪುರುಷಕಾರವನೆಲ್ಲಮಂ
ತೃಣಕೆಣೆ ವಿಸರ್ಜಿಸುತ್ತಗ್ನಿವೈತರಣಿಗೆ!
ಮಹಾ ಪ್ರಯತ್ನದಿನಲ್ತೆ ಪಿಂತಿರುಗಿದೆನ್‌!” ನಕ್ಕು
ನುಡಿದನ್‌: “ಏನೋದಮಂ ಕೇಳ್‌,ನಲ್ಲೆ: ಆವುದೋ
ಖುಷ್ಯಾಶ್ರಮದೊಳಾಂ ದಿವಂಗತ ಸಹೋದರಂ
ವೆರಸಿ ವೈದೇಹಿಗಾತ್ಮಜರಾಗಿ ತೊಡೆಯೇರ್ದು
ರೋದುಸತ್ತಿರ್ದವೋಲ್‌….”
ಮುನ್ನೊರೆಯಲಮ್ಮದೆಯೆ
ಕೆಮ್ಮನಿರ್ದಾಣ್ಮಂಗೆ ಮಯನ ಸುತೆ “ಕನಸಾಯ್ತೆ?”
ಎನೆ, ದೇವದಾನವ ಭಯಂಕರಂ ತಲೆಯೊಲೆದು                          ೨೫೦
ಸುಯ್ದು “ಅಲ್ತಲ್ತು! ಅದು ಕನಸ ಪಾಂಗಲ್ತು!”
“ಮೇಣ್‌?”
“ಅನುಭವ ವಿಶೇಷಮಂ ಪೇಳ್ವೆನೆಂತಾಂ, ಮಡದಿ?
ಪೋಲ್ವೆಗಮಸದಳಂ, ಅಸಾಮಾನ್ಯಮಾ ನಿರುಪಮಂ,
ನನಗುಮದು ಇದೆ ಮೊದಲ್‌! ಎಂತುಮದು ಕನಸಲ್ತು!”
“ಸೀತೆಯೊಳ್‌ನಿನಗೀಗಳಿರ್ಪೊಂದು ಸಾತ್ತ್ವಿಕದ
ಭಾವಶುದ್ಧಿಯೆ ದಿಟಂ ಪ್ರತಿಮೆಯಂ ಪಡೆದುದಾ
ಸ್ವಪ್ನದೊಳ್‌.”
“ತಂದೆಯುಪದೇಶಮಾದುದೊ ನಿನಗೆ?”
“ಪೇಳ್ದಳೆತ್ತಿಗೆ ನಿನ್ನ ವೀರಧರ್ಮಂ ನೆನೆದ ಆ
ಭವ್ಯ ಪಥಮಂ!”
“ಸಮ್ಮತಮೊ ನಿನಗೆ? ಪೇಳ್‌, ದೇವಿ!
ಪಾಪಿಯಂ ಕೈಬಿಡದೆ ಪುಣ್ಯಕೊಯ್ಯುವ ದೇವಿ          ೨೬೦
ನನಗೆ ನೀನೊರ್ವಳೆಯೆ ದಲ್‌!” ಪ್ರಶಂಸೆಗೆ ಬಾಗಿ
ತನ್ನ ಕಾಲ್ವಿಡಿದವಳ ಕಣ್ಣೀರ್ ವೊರಸಿ: “ದಿಟಂ,
ದೇವಿ ನೀನೊರ್ವಳೆಯೆ ರಾವಣಗೆ! ಮೇಣ್‌ಸೀತೆ!”
ಮನದಿ ಮೂಡಿದ ಮೈಥಿಲಿಯ ಚಿತ್ರಕಸುರಂ
ನಮಸ್ಕರಿಸಿ, ಮಂಡೋದರಿಯ ಮೆಯ್ಗೆ ಮುಳ್ಳೇಳೆ
ಪೇಳ್ದನಂತಸ್ಥಮಂ: “ನಿನಗಿಂ ಮಿಗಿಲ್‌ಸೀತೆ
ನನಗೆ ದೇವತೆ, ಮಾತೆ! ಶ್ರದ್ಧೆಗೆಟ್ಟಿರ್ದೆನಗೆ
ಶ್ರದ್ಧೆಯಂ ಮರುಕೊಳಿಸುತಾತ್ಮದುದ್ಧಾರಮಂ
ತಂದ ದೇವತೆ, ಪುಣ್ಯಮಾತೆ!”
“ನಾಂ ಧನ್ಯೆ ದಲ್‌!

ಬಾಳ್‌ಸಾರ್ಥಕಂ! ಸಾವೊ ಬದುಕೊ? ಇನ್ನೆನಗಿರದು    ೨೭೦

ವ್ಯಥೆ: ತಿಳಿದೊಡೀ ನಿನ್ನ ಹೃದಯಂ ತ್ರಿಮೂರ್ತಿಗಳ್‌
ಬಂದು ಮೀಯರೆ ಅಲ್ಲಿ?”
“ನೀನೊಲರ್ವಳಲ್ಲದೆಯೆ
ಮತ್ತೆ ನಂಬುವರಾರದಂ?” “ಪಣಮಿಟ್ಟು ನಂಬಿಪೆಂ
ನನ್ನ ಮಾಂಗಲ್ಯಮಂ!”
“ಬಿಡು, ಮಹಾರಾಣಿ ನೀಂ:
ಆರ ನಂಬಿಸಿ ನಿನಗೆ ಆಗಬೇಕಾದುದೇವ್‌,
ಲಂಕೇಶ್ವರನಿಗೆ?”
“ಸ್ವಾರ್ಥಸಾಧನೆಗೆ! ರಕ್ಷಿಸಲ್‌
ನನ್ನ ಮಾಂಗಲ್ಯಮಂ!”
“ಕೈಲಾಸ ಸುಸ್ಥಿರಂ
ಮಾಂಗಲ್ಯಮೇಗಳುಂ ನಿನಗೆ!”
“ಕೈಲಾಸಮುಂ
ನಿನ್ನ ಕೈಯಿಂದಲುಗಿತಲ್ತೆ?”
“ಅಲುಗಿತು ವಲಂ!”
“ರಾಮನರ್ಧಾಂಗಿಯಂ ನಾನೆ ಕಪ್ಪಂಗೊಟ್ಟು  ೨೮೦
ತಪ್ಪೊಪ್ಪಿಕೊಳ್ವೆನ್‌ಕ್ಷಮಾ ಭಿಕ್ಷೆಯಂ ಬೇಡಿ!”
“ಬೇಡ ನಿನಗಾ ಶ್ರಮಂ. ನನಗಿರಲಿ ಆ ಶಿಕ್ಷೆ!”
“ಶಿಕ್ಷೆಯೆಂದರಿಯದಿರ್.”
“ಶಿಕ್ಷೆಯಲ್ತು, ತಿತಿಕ್ಷೆ.
ಮೇಣ್‌ವೀರದೀಕ್ಷೆ!”
“ದೇವಿಯನುಯ್ವೊಡಾನೊಡನೆ
ಬಂದಪೆನ್‌!”
“ಸೀತೆ ನನ್ನಂ ಗೆಲ್ದಳದರಿಂದೆ
ರಾಮನಂ ತಂದು ಕಪ್ಪಂಗುಡುವೆನಾತನಂ
ಕದನಮುಖದೊಳ್‌ಗೆಲ್ದು!”
“ರಾಮನಪ್ರಾಕೃತಂ.
ಮಾರ್ಕೊಕಳ್‌, ಮುಕ್ತಿಯಲ್ಲದೆ ಬೇರೆ ಜಯಮುಂಟೆ?”
“ಕಾಳೆಗದೊಳಾತನಂ ಸೋಲಿಸಸದೆನಗೆ ಮುಕ್ತಿ
ತಾನಿಹುದೆ? ನನಗೆ ವರವಿತ್ತ ಮಾಹೇಶ್ವರಿಯ ೨೯೦
ಜಿಹ್ವೆ ನನ್ನಿಯ ತವರ್, ತೊದಲಾಗದೇಗಳುಂ!”
“ತೊದಲಾಗದಾದೊಡಮನಂತ ಮುಖಿ ಅದು ಕಣಾ!
ನಾವೊಂದು ಮೊಗದೊಳಾಶಿಸಿದರದು ಬೇರೊಂದು
ನಮ್ಮೂಹೆಗಳವಲ್ಲದಿಹ ಮೊಗದಿ ಕೈಗೂಡಿ
ನಡಸುವುದು ತನ್ನಚ್ಛೆಯಂ!”
“ನೀಂ ಪತಿವ್ರತೆ.
ಅಮಂಗಳ ಮನೋರಥವನುಳಿದ ಶುಭಬುದ್ಧಿಯಿಂ
ಶುದ್ಧನಾನುಂ. ಜಗನ್ಮಾತೆ ವರವಿತ್ತಿಹಳ್‌.
ಚಿಂತೆಯೇಕಿನ್‌? ನೋಡು, ಮೂಡುದೆಸೆಯೊಳ್‌ ಕೆಂಪು
ಕಣ್ದೆರೆಯುತಿಹುದಶೆಯೋಲ್‌. ಇಂದು ಏಕಾಂಗಿ            ೩೦೦
ನಡೆವೆನಾಂ ಕಾಳಗಕೆ. ಕೊಲ್ವುದಲ್ತೆನಗೆ ಗುರಿ.
ಸೀತಾ ಶುಭೋದಯಕೆ ಗೆಲ್ವುದಲ್ಲದೆ ನನಗೆ
ಗುರಿ ಕೊಲ್ವುದಲ್ತು.”
“ವೈರಿಗೆ, ತಿಳಿಯದೀ ಹೃದಯ
ಪರಿವರ್ತನಂ!” “ತಿಳಿಯಬಾರದದೆ ವೀರತೆಗೆ
ದೀಕ್ಷೆ! ಪೇಳ್ದೊಡಮದಂ ನಂಬರಾರುಂ! ಪೇಳೆ
ಪೇಡಿತನಮಲ್ಲದನ್ಯಪ್ರಯೋಜನಮೆನಗೆ
ತೋರದು, ಮಹಾರಾಜ್ಞಿ, ಯಾಚಿಸುವೆನೊಂದನಾಂ
ನಿನ್ನನೀ ನನ್ನ ಪೂಣ್ಕೆಯನಾರ್ಗಮೊರೆಯದಿರು:
ಹೃದಯ ಗಹ್ವರದಲ್ಲಿ ಭವ್ಯಕೃತಿಯಾಗಿರಲಿ
ನನ್ನ ನಿನ್ನೀ ದಿವ್ಯಗುಹ್ಯಂ. ಜಗತ್ರಯಂ           ೩೧೦
ತಿಳಿವುದೀ ಪೂಣ್ಕೆ ಕೈಗೂಡಲಲ್ಲದಿರೆ, ಪೋ,
ಪೇಳ್ದ ನೀನೆಯೆ ನಗೆಗೆ ಪಕ್ಕಾಗುವಣಕಮಂ
ಸಹಿಸದೆನ್ನಾತ್ಮಂ! ತೆರಳ್‌, ಪೋಗು. ಸೀತೆಯಂ
ಸೇವಿಸುತ್ತಿರು, ರಾಮನಂ ಗೆಲ್ದು ಸೆರೆವಿಡಿದು
ತರ್ಪನ್ನೆಗಂ!”
ಮುಡಿಯನಡಿಗಿಟ್ಟು ನಮಿಸಿದಳ್‌.
ಶಿರದೊಳಾಂತಳು ಪತಿಚರಣಧೂಳಿಯಂ. “ಗೆಲ್ಗೆ
ನಿನ್ನೀ ಪವಿತ್ರತಮ ವಿಜಯಯಾತ್ರಾ ರಣಂ!”
ಎಂಬ ಹೃದಯಧ್ವನಿಗೆ ಬಾಷ್ಟಂಗಳುರುಳುತಿರೆ
ಬೀಳ್ಕೊಂಡಳಿನಿಯನಂ ಲಂಕಾ ಮಹಾರಾಜ್ಞಿ!
ನೇಸರನ್ನೆಗಮುದಯ ದಿಗುರೇಖೆಯಂ ಬರೆದು
ಕೆತ್ತಿ ಬಿಡಿಸಿದನಿರುಳಿನಂಬರದಂಚಲದಿ, ಕಾಣ್‌,            ೩೨೦
ಉಷಾಗಮನಕೆತಿದೊಸಗೆಯ ತೋರಣಂಬೋಲ್‌.
ತ್ರಿಕೂಟಾದ್ರಿ ಶಿಖರಮಂದಿರದೆಳ್ತರದೊಳಿರ್ದ
ದಶಕಂಠನಾ ದಿವ್ಯದೃಶ್ಯಾವತರಣಮಂ
ನಿಡುವೊಳ್ತು ನೋಡಿದನ್‌. ತನಗೆ ತಾನೆಂದನ್‌:
“ಇದೇನಿಂದು ಪಿಂತೇಗಳೆನಗೆ ಪೊಳ್ತರೆಯಿಂತು
ಸೊಗಸಿತಿಲ್ಲೆನೆ ಸೊಬಗು ನನ್ನಂತರಾತ್ಮಮಂ
ಬೆಳಗುತಿದೆ? ಜೇನ್ಮಳೆಯೆ ಕರೆಯುತಿದೆ! ಪಾಲ್‌ಪೊನಲ್‌
ನಾಳನಾಳದಿ ಪರಿಸುತಿರ್ಪುದಮೃತತ್ವಮಂ.
ಶಾಂತಿಯಂ, ಪರಿಸುತಿರ್ಪುದಮೃತತ್ವಮಂ
ಶಾಂತಿಯಂ, ವೀರ್ಯಮಂ, ಶಕ್ತಿಯಂ, ತೇಜಮಂ,
ನಿಧನ ನಿಧುವನ ಪದದ ಮಧುರ ಚೈತನ್ಯಮಂ!”         ೩೩೦