Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಹುಲ್ ದ್ರಾವಿಡ್

ಅಂತರಾಷ್ಟ್ರೀಯ ಕ್ರಿಕೆಟ್ಟಿನ ಭರವಸೆಯ ಬ್ಯಾಟ್ಸ್‌ಮನ್, ಭಾರತ ಕ್ರಿಕೆಟ್ ತಂಡದ ಉಪನಾಯಕ. ಕರ್ನಾಟಕದ ಹೆಮ್ಮೆಯ ಕ್ರೀಡಾಪ್ರತಿಭೆ ಶ್ರೀ ರಾಹುಲ್ ದ್ರಾವಿಡ್.

೧೯೭೩ರಲ್ಲಿ ಜನನ, ಬೆಂಗಳೂರಿನ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ, ಬಿ.ಕಾಂ. ಪದವಿ ಗಳಿಕೆ, ಎಳೆಯ ವಯಸ್ಸಿನಲ್ಲಿಯೇ ಕ್ರಿಕೆಟ್ ಲೋಕಕ್ಕೆ ಪ್ರವೇಶ. ಮೊದಲ ದರ್ಜೆಯ ಅನೇಕ ಪಂದ್ಯಗಳಲ್ಲಿ ಭಾಗಿ, ಯಶಸ್ವಿನ ಮೆಟ್ಟಿಲೇರಿದ ಗಟ್ಟಿ ಅಡಿಗಳು. ೧೯ ವರ್ಷದೊಳಗಿನ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಹುದ್ದೆಯ ಗೌರವ.

ರಣಜಿ ಟ್ರೋಫಿ ಕ್ಷೇತ್ರಕ್ಕೆ ಪದಾರ್ಪಣೆ. ೩೭ ಪಂದ್ಯ, ೫೨ ಇನ್ನಿಂಗ್ಸ್‌, ೭ ಅಜೇಯ ಇನ್ನಿಂಗ್ಸ್, ೩೬೨೮ ರನ್ನುಗಳು, ೮೦.೮೪ರ ಸರಾಸರಿ, ೧೪ ಶತಕಗಳು ೧೬ ಅರ್ಧಶತಕಗಳು, ೭ ಪಂದ್ಯಗಳಲ್ಲಿ ನಾಯಕತ್ವ – ಹೀಗೆ ಸಾಗಿರುವ ಉಜ್ವಲ ಸಾಧನೆ.

ದುಲೀಪ್ ಟ್ರೋಫಿ, ಇರಾನಿ ಟ್ರೋಫಿ ಪಂದ್ಯಗಳಲ್ಲಿಯೂ ಅತ್ಯುತ್ತಮ ಸಾಧನೆ. ಆಯ್ಕೆ ಸಮಿತಿಯಿಂದ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ ಗೆ ವೀರೋಚಿತ ಸ್ವಾಗತ. ೪೮ ಟೆಸ್ಟ್‌ಗಳು, ೮೪ ಇನ್ನಿಂಗ್ಸ್‌ಗಳು, ೪೦೩೩ ರನ್ನುಗಳು, ಸರಾಸರಿ ರನ್ನು ಸಂಖ್ಯೆ ೫೩.೭೭.೯ ಶತಕಗಳ, ೨೧ ಅರ್ಧ ಶತಕಗಳ ಹೆಮ್ಮೆಯ ಕೊಡುಗೆ, ತಾಳ್ಮೆಯ ಕಲಾತ್ಮಕ ಆಟಗಾರನೆಂಬ ಪ್ರಶಂಸೆ. ಓಲಾಡುವ ಇನ್ನಿಂಗ್ಸ್‌ಗೆ ಲಂಗರು ಹಾಕಬಲ್ಲ ನಂಬಿಕೆಯ ಬ್ಯಾಟ್ಸ್‌ಮನ್, ಏಕದಿನದ ೧೬೩ ಪಂದ್ಯಗಳಲ್ಲಿ ಆಡಿದ ಅಮೂಲ್ಯ ಅನುಭವ, ೫೧೯೦ ರನ್ನುಗಳ ಗಳಿಕೆ.

ಅರ್ಜುನ್ ಪ್ರಶಸ್ತಿ ೧೯೯೯ರ ಸಿಯೆಟ್ ಬೆಸ್ಟ್ ಕ್ರಿಕೆಟರ್, ವಿಸ್ಟನ್ ಕ್ರಿಕೆಟರ್ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಭೂಷಿತ. ಕನ್ನಡಿಗರ ಕಣ್ಮಣಿ, ಭಾರತದ ಹೆಮ್ಮೆಯ ಪುತ್ರ ರಾಹುಲ್ ದ್ರಾವಿಡ್ ಅವರು.