Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಲಿಂಗದೇವವೀರರು ಮಹಾದೇವಪ್ಪ

ಹಳೇ ಮೈಸೂರು ಭಾಗದ ವಿಶಿಷ್ಟ ಜಾನಪದ ಕಲೆ ವೀರಗಾಸೆ ನೃತ್ಯ ಪದ್ಧತಿಯಲ್ಲಿ ಸಾಧನೆ ಮಾಡಿ ಹೆಸರಾದವರು ಲಿಂಗದೇವವೀರರು ಮಹಾದೇವಪ್ಪ ಅವರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೧೯೬೦ರಲ್ಲಿ ಜನನ, ಚಿಕ್ಕಂದಿನಿಂದಲೇ ವೀರಭದ್ರನ ಕುಣಿತದಲ್ಲಿ ತರಬೇತಿ ಪಡೆದು ಆ ಕಲೆಗಾಗಿ ಬದುಕನ್ನೇ ಮೀಸಲಿಟ್ಟವರು ಶ್ರೀಯುತರು.
ಹಳ್ಳಿಗಾಡಿನಲ್ಲಿ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಜಾನಪದ ನೃತ್ಯ, ಕಂಸಾಳೆ, ಹಾಡು, ನಾಟಕಗಳ ಪ್ರದರ್ಶನ ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಮಹಾದೇವಪ್ಪ ಅವರು ಹಾಜರ್, ಬೇರೆಯವರು ನೃತ್ಯ ಮಾಡುವುದನ್ನು ನೋಡನೋಡುತ್ತ ಆ ನೃತ್ಯ ಮಾಡುವ ಕಲಾವಿದರ ಹಾವಭಾವ, ವೀರಭದ್ರನ ಕುರಿತು ಹೇಳುವ ಪದಗಳ ಧಾಟಿಯನ್ನು ಹಾಗೂ ಹೆಜ್ಜೆ ಹಾಕುವ ವಿಧಾನವನ್ನು ಕರಗತ ಮಾಡಿಕೊಂಡು ಮುಂದೆ ವೀರಭದ್ರ ಕುಣಿತದ ಅಪ್ರತಿಮ ಕಲಾವಿದರೆನಿಸಿದರು. ಶ್ರೀಯುತರು ನಮ್ಮ ರಾಜ್ಯದಲ್ಲಿ ಮಾತ್ರವೇ ಅಲ್ಲದೇ ಹೊರರಾಜ್ಯಗಳಲ್ಲೂ ವೀರಭದ್ರನ ಕುಣಿತ ಪ್ರದರ್ಶನ ನೀಡುವ ಮೂಲಕ ಕಲೆಯನ್ನು ಪ್ರಚುರಪಡಿಸಿರುವರು. ರಾಜಧಾನಿ ದೆಹಲಿಯಲ್ಲೂ ವೀರಭದ್ರ ನೃತ್ಯ ಪ್ರದರ್ಶನ ನೀಡಿ ಶ್ರೀಮತಿ ಸೋನಿಯಾ ಗಾಂಧಿ ಅವರಿಂದ ಪ್ರಶಂಸೆಗೆ ಪಾತ್ರರು.
ವೀರಗಾಸೆ ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ೨೦೦೬ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರಶಸ್ತಿ, ಸುತ್ತೂರು ಶ್ರೀ ಕ್ಷೇತ್ರ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಅವರಿಗೆ ಲಭಿಸಿರುವ ಗೌರವ ಅಸಂಖ್ಯ.
ವೀರಭದ್ರನ ಕುಣಿತವನ್ನು ಪರಿಶ್ರಮದಿಂದ ಅಭ್ಯಾಸ ಮಾಡಿ ಪ್ರದರ್ಶನಗಳನ್ನು ನೀಡುತ್ತ ಆ ಕಲೆಯನ್ನು ಜೀವಂತವಾಗಿಸಿರುವವರು ಶ್ರೀ ಲಿಂಗದೇವವೀರರು ಮಹಾದೇವಪ್ಪ.