Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ವಾಸುದೇವಾಚಾರ್ಯ

‘ಜನಸೇವೆಯೇ ಜನಾರ್ದನ ಸೇವೆ’ ಎಂಬಂತೆ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿರುವವರು ಶ್ರೀ ಮಟ್ಟು ವಾಸುದೇವಾಚಾರ್ಯ ಅವರು.
ಜನನ ೧೯೨೭ರಲ್ಲಿ ಉಡುಪಿಗೆ ಸಮೀಪದ ಮಟ್ಟು ಎಂಬ ಪುಟ್ಟ ಗ್ರಾಮದಲ್ಲಿ, ಉಡುಪಿ ಸಂಸ್ಕೃತ ಶಾಲೆಯಲ್ಲಿ ಎಂಟು ವರ್ಷ ಸಂಸ್ಕೃತ ಅಭ್ಯಾಸ. ೩ ವರ್ಷ ವೇದಾಧ್ಯಯನ. ಕಾರ್ಕಳದ ವಿದ್ವಾನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಶ್ರೀಯುತರು ಬಳ್ಳಾರಿಗೆ ಬಂದು ಅಲ್ಲಿನ ಪುರಸಭಾ ಪ್ರೌಢಶಾಲೆಯಲ್ಲಿ ಪಂಡಿತ ವೃತ್ತಿ ಆರಂಭಿಸಿದರು. ಅಧ್ಯಾಪಕ ವೃತ್ತಿಯಲ್ಲಿ ಬಿಡುವು ದೊರೆತಾಗಲೆಲ್ಲಾ ಖಾದಿ ಪ್ರಸಾರವನ್ನು ಕೈಗೊಂಡ ಗಾಂಧೀವಾದಿ. ಇವರು ಶಿಕ್ಷಕರಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದರು. ಸರ್ವೋದಯ ಗ್ರಾಮದ ಹರಿಕಾರ, ಕ್ರಾಂತಿಯೋಗಿಯಾಗಿರುವ ಶ್ರೀ ಎಂ. ವಾಸುದೇವಾಚಾರ್ಯರು ದಾನವಾಗಿ ದೊರೆತ ೧೦೦ ಎಕರೆ ಜಾಗದಲ್ಲಿ ಗೋಶಾಲೆ, ವಸತಿ ಶಾಲೆ, ಭೋಜನ ಶಾಲೆ, ಅತಿಥಿಗೃಹ ಹೀಗೆ ಹಲವಾರು ಜನೋಪಯೋಗಿ ಕಟ್ಟಡಗಳನ್ನು ಕಟ್ಟಿಸಿ ಬಳ್ಳಾರಿ ಭಾಗದ ಸುತ್ತಮುತ್ತಲಿನ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಐದು ದಶಕಗಳಿಗೂ ಮೀರಿದ ನಿಸ್ವಾರ್ಥ ತ್ಯಾಗಗಳಿಂದ ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ನಿಸರ್ಗದ ಮಧ್ಯದಲ್ಲಿ ಸ್ಥಾಪಿಸಿರುವ ಸರ್ವೋದಯ ಗ್ರಾಮ
ಗುರುಕುಲವಾಗಿ ಪರಿವರ್ತನೆಯಾಗಿದೆ.
ಆದರ್ಶ ಶಿಕ್ಷಕ, ಸಮಾಜ ಸೇವಾ ಕಾರ್ಯಕರ್ತ, ನಿಸ್ವಾರ್ಥ ಹಾಗೂ ನಿರಾಡಂಬರ ವ್ಯಕ್ತಿ ಶ್ರೀ ಎಂ. ವಾಸುದೇವಾಚಾರ್ಯ ಅವರು.