Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿಜಯನಾಥ ಶೆಣೈ

ಪುರಾತನ ಕಲೆ, ಸಂಸ್ಕೃತಿಯನ್ನು ಮೂಲರೂಪದಲ್ಲಿ ಹಿಡಿದಿರಿಸಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಉದಾತ್ತ ಕಾಯಕದಲ್ಲಿ ತೊಡಗಿರುವ, ಕಸದಿಂದ ರಸ ಸೃಷ್ಟಿಸಬಲ್ಲ ಅಪರೂಪದ ರಚನಾತ್ಮಕ ಪ್ರತಿಭೆ ಶ್ರೀ ವಿಜಯನಾಥ ಶೆಣೈ ಅವರು.
ಉಡುಪಿಯಲ್ಲಿ ೧೯೩೪ ರಲ್ಲಿ ಜನಿಸಿರುವ ಶ್ರೀ ಶೆಣೈ ಅವರು ೧೯೬೧ರಲ್ಲಿ ‘ಸಂಗೀತ ಸಭಾ’ ಸಂಸ್ಥೆಯನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಸಂಗೀತದ ಬಗೆಗೆ ವಿಶೇಷ ಅಭಿರುಚಿಯನ್ನು ಮೂಡಿಸಿದರು.
‘ಕರ್ನಾಟಕ ಸಂಘ’ ವನ್ನು ಸ್ಥಾಪನೆ ಮಾಡಿ ಸಾಹಿತ್ಯ, ಸಂಸ್ಕೃತಿಯನ್ನು ಕುರಿತು ಅನೇಕ ಗೋಷ್ಠಿ, ಚರ್ಚೆ, ಸಮಾವೇಶಗಳನ್ನು ಸಂಘಟಿಸಿ, ಬರಹಗಾರರ ಒಕ್ಕೂಟವನ್ನು ರಚಿಸಿ ಕಿರಿಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕಾರ ಕೈಗೊಂಡರು.
ಯಕ್ಷಮಂಡಲ ಚಿತ್ರ ಕಲಾಮಹೋತ್ಸವ, ಮೊದಲಾದ ಕಾಠ್ಯಕ್ರಮಗಳ ಮೂಲಕ ಸಾಂಪ್ರದಾಯಿಕ ಪುರಾತನ ಕಲೆಯ ಪ್ರದರ್ಶನಕ್ಕೆ ನೆರವು ಒದಗಿಸಿದರು. ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಹಳೆಯ ಮನೆಗಳನ್ನು ಕೆಡವಿದಾಗ ಅಲ್ಲಿಗೆ ಹೋಗಿ ಕಲಾತ್ಮಕ, ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಮೌಲಿಕ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನೇ ಬಳಸಿ ಇವರು ಸ್ವತಃ ನಿಮ್ಮಿಸಿದ ಮನೆ ಸಾವಿರಾರು ಸಂಸ್ಕೃತಿ ಪ್ರೇಮಿಗಳನ್ನು ಸೆಳೆಯುತ್ತಿದೆ. ‘ಹಸ್ತಶಿಲ್ಪ’ ಎಂಬ ಹೆಸರನ್ನಿಟ್ಟು ಈ ಮನೆಯನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿಟ್ಟಿದ್ದಾರೆ.
ಮಣಿಪಾಲದ ಸಮೀಪ ಇವರು ನಿಮ್ಮಿಸಿರುವ ‘ಸಂಸ್ಕೃತಿ ಗ್ರಾಮ’ ಅನೇಕ ದೃಷ್ಟಿಗಳಿಂದ ಅಪೂರ್ವವಾಗಿದೆ. ಹಿಂದಿನ ಕಾಲದಲ್ಲಿ ವಾಸಿಸುತ್ತಿದ್ದವರ ಜೀವನ ಶೈಲಿ ಕಣ್ಣಿಗೆ ಕಟ್ಟುವಂತೆ ಈ ಗ್ರಾಮವನ್ನು ನಿಮ್ಮಿಸಿದ ವೈಖರಿ ಬೆರಗುಗೊಳಿಸುವಂತಿದೆ. ಹಳ್ಳಿ ಹಾದಿಯ ಹಳೆ ಮೈಲಿಕಲ್ಲುಗಳು, ಸೀಮೆಎಣ್ಣೆಯ ದೀಪ, ಕಂಬಗಳು, ಚಕ್ಕಡಿಗಳು, ಹೀಗೆ ಕಣ್ಮರೆಯಾಗುತ್ತಿರುವ ಸಂಸ್ಕೃತಿಯ ಜೀವಂತ ಚಿತ್ರವೇ ಇಲ್ಲಿ ರೂಪು ತಳೆದಿದೆ.
ಸಾಹಿತ್ಯ, ಸಂಗೀತ, ಯಕ್ಷಗಾನ, ನೃತ್ಯ, ಜಾನಪದ, ಚಿತ್ರ, ಶಿಲ್ಪ, ನಾಟಕ ಹೀಗೆ ವಿಶೇಷವಾಗಿ ಸಂಸ್ಕೃತಿಯ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ನಾಡಿನ ಹೆಮ್ಮೆಯ ವ್ಯಕ್ತಿ ಶ್ರೀ ವಿಜಯನಾಥ ಶೆಣೈ ಅವರು.