ಶ್ರೀ ವಿಜ್ಞಾನಿಗೆ ನಮೋ ನಮೋ ||
ವಿಶ್ವರಹಸ್ಯವ ಭೇದಿಸುವ
ಸುಪ್ತ ಸತ್ಯಗಳ ಶೋಧಿಸುವ
ಬಾಳಿಗೆ ಶ್ರೇಯವ ಸಾಧಿಸುವ
ಶ್ರೀ ವಿಜ್ಞಾನಿಗೆ ನಮೋ ನಮೋ.
ಕಾಲ ದೇಶಗಳ ಕೋಶವ ಮೊಗೆವ
ಗ್ರಹ ಮಂಡಲಗಳ ದಾರಿಯ ತುಳಿವ
ಸಾಹಸ ಸಿದ್ಧಿಯ ಧ್ವಜಗಳ ನೆಡುವ
ಶ್ರೀ ವಿಜ್ಞಾನಿಗೆ ನಮೋ ನಮೋ.
ಸದಾ ಪ್ರಶ್ನೆಗಳ ಬಾಗಿಲ ಬಡಿವ
ಹೊಸ ವಿಸ್ಮಯಗಳ ಕಿರಣವ ತೆರೆವ
ಸಾಕ್ಷಾತ್ಕಾರಕೆ ಜೀವವನೆರೆವ
ಶ್ರೀ ವಿಜ್ಞಾನಿಗೆ ನಮೋ ನಮೋ.
ಪಾಚಿಗಟ್ಟಿರುವ ಮೌಢ್ಯವ ತೊಡೆವ
ವಿಚಾರ ಶಕ್ತಿಯ ಹೊನಲನು ತರುವ
ಅರಿವಿನ ಪರಿಧಿಯ ವಿಸ್ತಾರಿಸುವ
ಶ್ರೀ ವಿಜ್ಞಾನಿಗೆ ನಮೋ ನಮೋ.
Leave A Comment