ರಾಮಕೃಷ್ಣರು ದಿವ್ಯ ಯೋಗ ಧನುವಿಗೆ ತೊಟ್ಟ
ಬ್ರಹ್ಮಾಸ್ತ್ರ ನೀನು
ವಿಶ್ವದಂತಸ್ಸತ್ವ ಮೂರ್ತಿಗೊಂಡಿಳೆಗಿಳಿದ
ಕ್ರತು ಶಕ್ತಿ ನೀನು
ಸಂಶಯದ ದುರ್ಗವನು ಸೀಳೆ ಶ್ರದ್ಧೆಯ ಧ್ವಜವ
ನಟ್ಟ ವಿಜಿಗೀಷು
ಪರಮಹಂಸಾಚಲದ ಶಿವಗಂಗೆಯನು ತಂದು
ಜಗಕೆಲ್ಲ ಹರಿಸಿರುವ ಯೋಗ ಪುರುಷ
ಮುಟ್ಟಿದ್ದು ಹೊನ್ನಾಯ್ತು ದಿವ್ಯ ಪರುಷ !

ನಿನ್ನ ವಾಣಿಯು ತಟ್ಟಿ, ಚಿಪ್ಪೊಡೆದು ಅದರಲ್ಲಿ
ಹುದುಗಿದವರೆದ್ದೆದ್ದು ಹೊರ ಬಂದರು.
ಕ್ರಿಮಿ ಎಂದು ಮಲಗಿದವರೆದ್ದು ಕುಲಶೈಲದೊಲು
ಮುಗಿಲೆಡೆಗೆ ಮುಡಿ ಎತ್ತಿ ನಿಂತುಕೊಳಲು
ಏಳು ಕಡಲಿನ ತೆರೆಯು ತಾಳವನು ಹಾಕಿದವು
ದಿಕ್ಕು ದೆಸೆ ಹಾಡಿದವು ಜಯಗಾಥವ !
ಪೂರ್ವ ಪಶ್ಚಿಮವೆರಡು ಒಂದನೊಂದನ್ನಪ್ಪಿ
ಕಂಡುಕೊಂಡವು ದಿವ್ಯ ಹೃದಯಾರ್ಥವ !

ನೆಲಕು ಮುಗಿಲಿಗು ಏಕವಾಗಿ ನಿಂತ ಮಹಾಂತ
ನಿನ್ನಡಿಯ ಗಂಗೆಯಲಿ ಕರಗಲೀ ಸಾಂತ !