ರಾಗ ಮಾರವಿ ಏಕತಾಳ

ಮತ್ತೆ ಬಲಿಯು ಶಿರವೆತ್ತಿ ಹಿಡಿಯೆ ಪರ | ಮಾತ್ಮನು ಕಾಲೆತ್ತಿ ||
ಒತ್ತಿದನಾತನ | ಮಸ್ತಕವನು ತ | ನ್ನಾತ್ಮದಿ ಭಲೆಯೆನುತ       || ೨ ||

ಭಕ್ತರೊಳಗೆ ಸ | ರ್ವೋತ್ತಮನೇ ತವ | ಭಕ್ತಿಗೆ ಮೆಚ್ಚಿದೆನು ||
ಚಿತ್ತದ ಬಯಕೆಯ | ವಿಸ್ತರಿಸೆನಲಾ | ದೈತ್ಯನು ಮಣಿದೆಂದ      || ೩ ||

ಶ್ರೀರಮಣನು ಮೈ | ದೋರಿದ ಮೇಲೆ ವಿ | ಚಾರವು ಬೇರುಂಟೆ ? ||
ದ್ವಾರದೊಳನುದಿನ | ತೋರುತ ಪೂರೆಯೈ | ಕೀರುತಿ ಮೆರೆವಂತೆ        || ೪ ||

ಅಂತಾಗಲಿ ನಾ | ನಿಂತಿಹೆ ನಿಲ್ಲಿಯೆ | ಚಿಂತಿಸ ಬೇಡೆನುತ ||
ಕಂತುಪಿತನು ಮೈ | ಯಾಂತಿಹನಾತನ | ಪಂಥಕೆ ಮನಸೋತು         || ೫ ||

 

ಪರಶುರಾಮಾವತಾರ

ರಾಗ ಕೇತಾರಗೌಳ, ಅಷ್ಟತಾಳ

ಧರಣಿಪ ಕೇಳಿನ್ನಾ | ದರೆ ಕಾರ್ತವೀರ್ಯನ | ಚರಿತೆಯನೊರೆವೆನಯ್ಯ ||
ವರಮಾಹಿಷ್ಮತಿಪುರ | ದರಸಾಗಿ ಮೆರೆವನು | ಪರಿಪರಿ ವೈಭವದಿ         || ೧ ||

ಗುರುಗಳಾಶೀರ್ವಾದ | ಬಲದಿ ರಾಜರ ಗೆದ್ದು | ವರಚಕ್ರವರ್ತಿಯಾಗಿ ||
ಇರಲು ತಾನೊಂದಿನ | ಹರುಷದೊಳಿಳಿತಂದ | ಪರಮ ನಾರದಲ್ಲಿಗೆ      || ೨ ||

ಇದಿರೆದ್ದು ಸಿಂಹಪೀ | ಠರದಲಿ ಕುಳ್ಳಿರಿಸುತ್ತ | ಮುದದಿ ಭೂಮೀಶ್ವರನು ||
ಅಧಿಕ ಭಾಗ್ಯದೊಳಿದ್ದ | ಪದವಿಗೆ ಕೊರತೆಯಾ | ವುದಕಂಡೆ ಹೇಳೆಂದನು || ೩ ||

ಮಾನವೇಶ್ವರ ನಿನ್ನಾ | ಸ್ಥಾನವ ಬಣ್ಣಿಸ | ಲಾನು ತಿಳಿಯೆನಾದರು |
ಏನೇನ ಕೇಳ್ದರು | ತಾನೆ ಕೊಡುವ ಕಾಮ | ಧೇನು ವಿದ್ದರೆ ಚೆಂದವು      || ೪ ||

ವನವ ಸೇರಿದ ಮೌನಿ | ವರರದರಿಂದಲಿ | ಘನಭಾಗ್ಯ ಪಡೆಯುತಿರೆ ||
ಜನಪ ನೀನಂಥ ಸಾ | ಧನವ ಸಾಧಿಸಿಡರೆ | ನಿನಗಾರು ಸರಿ ಜಗದಿ      || ೫ ||

ಎಂದು ನಾರದನು ಸಾ | ನಂದದಿ ನಡೆಯಲು | ಬಂದರು ವನಚರರು ||
ಇಂದು ವನಕೆ ನಡೆ | ತಂದು ಕಾಳ್ಮಿಗಗಳ | ಕೊಂದಿಕ್ಕಬೇಕೆಂದರು        || ೬ ||

ರಾಗ ಮುಖಾರಿ ಏಕತಾಳ
(ಆಡುತ್ತಾಡುತ್ತ ಬಂದ ರಾಮ)

ಬೇಟಿಗೆನ್ನುತ ಪೊರಟನೃಪನು || ಕೃತವೀರ್ಯಸುತನು  || ಪಲ್ಲವಿ ||

ಕೂಟದ ಮೃಗಗಳ ಕಾಟವ ನಿಲಿಸಲು | ಬೇಟೆಗಾರರೊಡ ನಾಟವನಾಡುತ  || ಅ.ಪ ||

ಹಂದಿ ಕರಡಿ ಕಾಡಾನೆಗಳ | ಕಾಡ್ಕೋಣಗಳ ಸಂದು ಗೊಂದಿನೊಳಿಕ್ಕಿ ಬಹಳ |
ನಿಂದು ಮಹಾ ಮೃಗ ವೃಂದವ ಕೆಡಹುತ | ಮುಂದರಿದನು ತನ್ನೆಡಬಲ ನೋಡಿ    || ೧ ||

ಇಂತು ಬೇಟೆಯನಾಡುತಾಗ | ನೋಡಲು ಮುಂಭಾಗಬಂತೊಂದು ಮೃಗದ ಭಾರಿ ಬೇಗ |
ಹೊಂತಕಾರರೊಳು ಪಂಥವನಾಡುತ | ಮುಂತೈದಿತು ಜಮದಗ್ನಿಯ ಬಳಿಗೆ       || ೨ ||

ಭಾಮಿನಿ

ದೂರದಲಿ ಕಂಡಾ ಮಹೀಶನ |
ವೀರ ಪರಿವಾರವನು ಕರೆಸುತ |
ಭೂರಿ ಭೋಜನದಿಂದ ತೃಪ್ತಿಯ ಗೈಯಲಾ ಮುನಿಪ ||
ಭಾರಣೆಯು ಹಿರಿದಾಯ್ತು ಮನದವಿ |
ಕಾರದಲಿ ಸುರಧೇನುವನು ತ |
ನ್ನೂರಿಗೊಯ್ಯಲು ಬಗೆದನಾ ನೃಪಕೃಪಣ ವೃತ್ತಿಯಲಿ   || ೧ ||

ಕಂದ ಪದ್ಯ

ವನವಾಸಿಗಳಿಂಗೇತಕೆ | ಘನವಸ್ತುಗಳೆಂದು ಸುರಭಿಯಂ ಹಿಡಿದಾಂತಾ ||
ಜನಪಾಲಕ ಸೆಳದೊಯ್ಡಂ | ಮನಮರುಕದೊಳಿರ್ದನಂದು ಮುನಿಯಾಶ್ರಮದೊಳ್         || ೧ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಹೋಮಧೇನುವನೊಯ್ದ ಬಗೆಯಾ | ಭೀಮ ವಿಕ್ರಮಿ ಪರಶುರಾಮನು |
ತಾಮನದಿ ತಿಳಿದೈದಿದನು ಲಯ | ಭೀಮನಂತೆ       || ೧ ||

ತಾತ ನೀ ಬಿಡು ಶೋಕವನು ಭಯ | ಭೀತನಾಗದಿರಿನ್ನು ಸುರಭಿಯ |
ಪಾತಕಿಯು ಕೊಂಡೊಯ್ದನೇ ನೃಪ | ನೀತಿ ಮರೆತು   || ೨ ||

ಕೊಡು ತನಗೆ ನೇಮವನು ಪಾರ್ಥಿವ | ಗಡಣವೇ ಬರಲಿದಿರು ಧೂರ್ತರ |
ಕೆಡಹಿ ತಹೆನಾ ಧೇನುವನು ಮನ | ಮಿಡುಕಲೇಕೆ      || ೩ ||

ನಡೆ ಮಗನೆ ನೀತಿಯೊಳು ಕ್ಷತ್ರಿಯ | ರೆಡೆಯೊಳಪಕೀರ್ತಿಯನು ತಾರದೆ |
ಪಡೆಯೊ ಸುರಭಿಯನೆಂದು ಕಳುಹಿದ | ಮೃಡ ಮುನೀಂದ್ರ      || ೪ ||

ತಿರುಹಿ ಹೆಗಲಿನೊಳನಾಂತು ಪರಶುವ | ಉರಿಮಸಗುತಾ ಪರಶುರಾಮನು |
ತೆರಳಿದನು ಮಾಹೀಷ್ಮತಿಗೆ ಪುರ | ಹರನ ತೆರದಿ       || ೫ ||

ದೂರದಿಂದಲಿ ತೋರಿ ಬರುವವಿ | ಕಾರ ಕಂಡಾ ದ್ವಾರಪಾಲರು |
ಸಾರಿ ಪೇಳ್ದರು ಕಾರ್ತವೀರ್ಯಗೆ | ದೂರಿಕೊಂಡೂ     || ೬ ||

ರಾಗ ಭೈರವಿ ಏಕತಾಳ

ಯಾರೆಲ ನಮ್ಮೀಪುರಕೆ | ಬಂದ | ಕಾರಿಯವೇನುದ್ಧತಿಕೆ |
ತೋರುವೆ ರೌದ್ರಾಕಾರ | ನಾ ವಾರೆಂದರಿತೆಯ ಪೋರ         || ೧ ||

ಅರಿತಿಹೆ ನಿನ್ನಯ ಕಥೆಯ | ನೀ | ನರಿಯೈ ನಮ್ಮಾ ಸ್ಥಿತಿಯ |
ವರ ಜಮದಗ್ನಿಯ ಸುತನು | ನಿ | ಷ್ಠುರ ಕ್ಷತ್ರಿಯರಂತಕನು      || ೨ ||

ಸಾಕೆಲೊ ಹೆಮ್ಮೆಯ ಮಾತು | ಹೋ | ಗಾಕಡೆ ತೋರೆಲೊ ಭ್ರಾಂತು |
ಲೋಕದ ನೃಪರಲಿ ಕದನ | ನಿನ | ಗೇಕೆ ಜಗಳವತಿ ಕಠಿನ       || ೩ ||

ಸಾಧುಜನರ ಮುಖ ಹೊಡೆದು | ನ | ಮ್ಮಾ ಧೇನುವ ಸೆಳೆದೊಯ್ದು |
ಬಾಧಕನಾಗಿರೆ ಜಗಕೆ | ನಾ | ಛೇದಿಸದಿರೆನೈ ಕ್ಷಣಕೆ   || ೪ ||

ಜನಪಾಲಕ ನಾನೆನುತ | ಆ | ದನವನು ತಂದಿಹೆನಿತ್ತ |
ಘನರತ್ನಾದಿಗಳೆಲ್ಲ | ಕಾ | ನನ ವಾಸಿಗೆ ಲೇಸಲ್ಲ       || ೫ ||

ಏನಂದೆಯೊ ಹುಲು ನೃಪನೆ | ನೃಪ | ರಾನೀತಿಯ ತಿಳಿದಿರೆನೆ |
ಹೀನೈಸುತ ನಿಜಪಿತನ | ಸುರ | ಧೇನುವನೊಯ್ವುದೆ ಹೀನ     || ೬ ||

ಬಿರುಸಾಯ್ತಲ ಮಾತುಗಳು | ನಾ | ತರಳನೆನುತ ಸೈರಿಸಲು |
ಉರಿಯುತ್ತಿದೆ ಕಿಚ್ಚೆನುತ | ಕೋಲ್ | ತಿರುಹಿಸುತೆಚ್ಚನು ಮತ್ತಾ  || ೭ ||

ಖಂಡಿಸುತಲೆ ಭಾರ್ಗವನು | ದೋ | ರ್ದಂಡಂಗಳನೆಲ್ಲವನು |
ತುಂಡುಗೈವೆನೆಂದೆನುತ | ಪ್ರ | ಚಂಡಾಸ್ತ್ರಂಗಳನೆಸೆದ || ೮ ||

ಅನಿಮಿಷರೆಲ್ಲರು ಕೂಡಿ | ಜಯ | ದನಿ ಮಾಡುತ್ತಿರೆ ನೋಡಿ |
ಹೆಣಗಿದರತಿ ಸತ್ವದಲಿ | ಕೂ | ರ್ಗಣಿಗಳ ಮಳೆ ಹೊಸುತಲಿ     || ೯ ||

ಭಾಮಿನಿ

ಪೇಳಲೇನಾ ಭುಜ ಸಹಸ್ರನ |
ತೋಳುಗಳ ಕತ್ತರಿಸಿ ಧಿಮ್ಮನೆ |
ಬೀಳಲೆಚ್ಚೊಡೆ ಜೀವ ಹಾರಿತು ಚಕ್ರರೂಪದಲಿ ||
ಮೇಲೆ ಭಾರ್ಗವ ಹೋಮ ಧೇನುವ |
ಲೀಲೆಯಿಂದೊಡಗೊಂಡು ತಾತನ |
ಕಾಲಿಗೊಪ್ಪಿಸಿ ಕೊಟ್ಟನಮರರ ವಿಜಯ ಘೋಷದಲಿ    || ೧೦ ||

ಕಂದ ಪದ್ಯ

ಮತ್ತೆತರಿದು ಜಮದಗ್ನಿಯ | ಕಿತ್ತೊಯ್ಯಲು ಧೇನುವಾ ನೃಪಾತ್ಮಜರದರಿಂ ||
ಕ್ಷತ್ರಿಯರಳಿದರ್ ತಾವಿ | ಪ್ಪತ್ತೊಂದಾವರ್ತಿ ಪರಶುರಾಮನ ಕೈಯೊಳ್  || ೧ ||

 

ರಾಮಾವತಾರ

ವಾರ್ಧಿಕ

ದಶಕಂಠ ಮೊದಲಾದ ರಾಕ್ಷಸರ ವಧೆಗಾಗಿ |
ಬಿಸಜಾಕ್ಷನುದಿಸಿದಂ ರಾಮನಾಮದಿ ತನ್ನ |
ವಸುಧೆಯಂ ತೊರೆದನಯ್ಯನ ಸತ್ಯಕಾಗಿ ಹದಿನಾಲ್ಕಬ್ಧ ವನವಾಸಕೆ ||
ಬಿಸಜಾಯತಾಕ್ಷ ಸೀತಾಲಕ್ಷ್ಮಣರ ಕೂಡಿ |
ಕುಶಲದಿಂ ಬಂದಿರ್ದನಾ ಪಂಚವಟಿಯೊಳಗೆ |
ಅಸುರ ರಾವಣನ ಮತದಂತೆ ಮಾರೀಚ ಮೃಗವಾಗಿ ಕುಣಿದೈತಂದನು   || ೧ ||

ರಾಗ ಜುಂಜೋಟಿ ಆದಿತಾಳ
(ಅಂಜ ಬೇಡಲೆ ಸೀತೆ)

ನೋಡ ಬಾರೆಲೆ ರಾಮ | ನಲಿದಾಡುತಿದೆ ಪ್ರೇಮ |
ಕಾಡಿನೊಳಗೋಡಿ ಕುಣಿದಾಡುವ ಮೃಗವ    || ೧ ||

ಹೊನ್ನ ಬಣ್ಣದ ಮೈಯು | ಪಂಚ ವರ್ಣದ ಗೆರೆಯು |
ಕಣ್ಣಾರೆ ಕಾಣದಂಥ ಚಿನ್ನದ ಮರಿಯು         || ೨ ||

ಸಣ್ಣ ಹೆಜ್ಜೆಯ ನಾಟ್ಯ | ಏನು ಸುಂದರ ನೋಟ |
ಮಿಣ್ಣನೆ ನೀಹಿಡಿದು ತಾರೋ | ಕುಣಿಸಿ ಕೊಂಡಪೆನು    || ೩ ||

ರಾಗ ಸುರುಟಿ, ಏಕತಾಳ

ಕೇಳಬಲಾಮಣಿಯೇ | ಸೈರಣೆ | ತಾಳು ಸುಗುಣ ಮಣಿಯೆ |
ಖೂಳರಮಾಯಕ ಮಾಟವಿದೆಮ್ಮನು | ಗೋಳುಗುಡಿಸುವಾ ಕಾರ್ಯವು ನೋಡ   || ೧ ||

ಎರೆಯನೆ ನಿನಗೇನ | ಪೇಳಲಿ | ಮರುನುಡಿಯೇಕಿನ್ನು |
ದುರುಳರ ಮಾಯೆಗಳೆಂತಾದರು ನೀ | ಕರೆದೀಯೈಕ್ಷಣ ಸೈರಿಸದೆನಗೆ   || ೨ ||

ಛಲವೇಕೆಲೆ ಬಾಲೆ | ದುರುಳರು |  ಸುಳಿಯುತ್ತಿಹರಿಲ್ಲೆ |
ಬಲು ಕಷ್ಟವು ಬರಲಿರುವುದು ನೋಡಾ | ಬಳಿಕೇನಾದರು ದೂರಲು ಬೇಡ          || ೩ ||

ಎನುತಾ ರಾಘವನು | ಕರೆದಂ | ದನು ಲಕ್ಷ್ಮಣನನ್ನು |
ದನುಜರ ಬಾಧೆಗೆ  ಬೆದರದೆ ಇಲ್ಲಿಯೆ | ಜನಕಾತ್ಮಜೆಯನು ಕಾದಿಹುದೆಂದು        || ೪ ||

ಹಿಡಿದನು ಬಿಲುಬಾಣಾ | ಮೃಗದಾ | ಯೆಡೆಗೋಡಲು ಜತನ |
ಬಿಡದಾ ಕಾಡಿನೊಳಾಡುತ ದೂರಕೆ | ನಡೆದೈದಲು ಧೃತಿಗುಂದಿದ ರಾಮ || ೫ ||

ಕಂದಪದ್ಯ

ಬಿಡೆಬಾಣವ ಮಾರೀಚಂ |
ತಡೆಯದೆ ಹಾ ರಾಮ ಲಕ್ಷ್ಮಣಾ ಹಾ ಎನುತಂ ||
ನುಡಿಯಲ್ಕಾನುಡಿ ಕೇಳ್ದಾ |
ಪೊಡವಿಯ ಸುತೆಯೆಂದಳಾ ಸುಮಿತ್ರಾತ್ಮಜನೊಳ್   || ೧ ||

ರಾಗ ಕಾಂಬೋಧಿ ಝಂಪೆತಾಳ

ಕೇಳ್ದೆಯಾ ಸೌಮಿತ್ರಿ | ಯಾಳ್ದನಾ ನುಡಿಯನ್ನು |
ತಾಳ್ದು ಕೊಂಡಿಹನೆಂತೊ ವ್ಯಥೆಯ ||
ಖೂಳರೆಡೆಯಲಿ ಸಿಲುಕಿ | ಗೋಳಿಡುವನೈ ಬೇಗ |
ಏಳು ನಡೆಹೋಗಿ ಬಾರಯ್ಯ         || ೧ ||

ತಾಯೇ ಭ್ರಮೆಯಾಯ್ತೆ ರಘುರಾಯನಾ ನುಡಿಯಲ್ಲ |
ನೋಯಲುಂಟೇ ದೈತ್ಯರಿಂದ ||
ರಾಯರಳಿದಾ ಮೇಲೆ | ಮೇಯುವಾಮನಸಾಯ್ತೆ |
ಬಾಯ ಡಂಭವ ಬಲ್ಲೆ ನಾನು        || ೨ ||

ಅನಿತರಲಿ ರಾಮ ಹಾ | ಎನುತ ಚಂದ್ರಾರ್ಕರನು |
ನೆನೆದು ಮುನ್ನೋಡಿ ಲಕ್ಷ್ಮಣನು ||
ಜನನಿ ಈ ಸ್ಥಳ ಮೀರಿ | ಮಿನುಗ ಬೇಡೆಂದೆನುತ |
ಮಣಿದು ಹೊರಟನು ರಾಮನಡೆಗೆ   || ೩ ||

ಅಷ್ಟರಲಿ ಯತಿವೇಷ | ತೊಟ್ಟು ಸೀತೆಯ ಬಳಿಗೆ
ಥಟ್ಟನೈದಿದನು ದಶಕಂಠ ||
ಸೃಷ್ಟಿಯನು ಸುತ್ತಿಬಹ | ಶ್ರೇಷ್ಠ ಸಾಧುಗೆ ಭಿಕ್ಷೆ |
ಕೊಟ್ಟು ಬೀಳ್ಕೊಡಲು ಬೇಕೆಂದ      || ೪ ||

ಚಂದವಾಯಿತು ಸ್ವಾಮಿ | ಬಂದುದೊಳಿತಾಯ್ತು ನಾ |
ನಿಂದು ಕೊಡಲೇನು ಆಶ್ರಮದಿ ||
ಮುಂದರಿಯಲಾರೆನಾ | ಕಂದ ಲಕ್ಷ್ಮಣನಾಜ್ಞೆ |
ಯೊಂದಿಹುದು ಕೊಡಲಾಗದಯ್ಯ    || ೫ ||

ಏತಕಾ ಮಾತು ದನು | ಜಾತರಿಗೆ ಕೊಡಬೇಡ |
ಈ ತರದ ಯೋಗಿಗಳ ಕರೆದು ||
ಪ್ರೀತಿಯಿಂದೀಯದಿರೆ | ಪಾತಕವೆ ಹೊರತು ನೃಪ |
ನೀತಿಯೇ ಕುಲನಾಶವಹುದು        || ೬ ||

ಭಾಮಿನಿ

ಸೀತೆಯಾನುಡಿ ಸತ್ಯವೆಂದೇ |
ಯಾತು ದಾನವಗೀಯೆ ಭಿಕ್ಷೆಯ |
ಭೀತಿಯಲಿ ನೆಲಸಹಿತ ಪುಷ್ಪಕದೊಳಗೆ ಕುಳ್ಳಿರಿಸಿ ||
ವಾತಮಾರ್ಗದೊಳೇರಿ ಲಂಕಾ |
ನಾಥ ನಡರಿದನತ್ತಲಾ ರಘು |
ನಾಥನನು ಕಂಡೊರೆದನಾ ಸೌಮಿತ್ರಿಯಿಂತೆಂದು      || ೧ ||

ರಾಗ ಕೇತರಗೌಳ, ಅಷ್ಟತಾಳ

ಅಣ್ಣಯ್ಯ ಕ್ಷಮಿಸಬೇ | ಕೆನ್ನಪರಾಧವ | ನಿನ್ನಾಜ್ಞೆಗೆರಡಿಲ್ಲವು ||
ಚೆನ್ನಾದ ನುಡಿಗಳ | ಮನ್ನಿಸದಾ ಸೀತೆ | ಯೆನ್ನನಟ್ಟಿದಳು ದೇವ || ೧ ||

ಕಂದ ಸೈರಿಸು ಎನ್ನ | ಮುಂದೆ ನೂಕಿದಮೇಲೆ | ಹಿಂದಟ್ಟಿದಳೆ ನಿನ್ನನು ||
ಬಂದುದಾಯ್ತಿನ್ನೇನು | ನೊಂದುಕೊಳ್ಳದೆ ಸೀತೆ | ಯಂದವ ನೀಕ್ಷಿಸುವ   || ೨ ||

ಎನುತ ಬಂದರು ಹಿಂದೆ | ವನಮೃಗವನು ಕೊಂಡು | ಜನಕಜೆಯಿದ್ಧೆಡೆಗೆ ||
ವನಿತೆಯ ಕಾಣದೆ | ಕಣು ಕಾಣದವರಂತೆ | ಘನಚಿಂತೆಯೊಳಗಾದರು    || ೩ ||

ಹುಡುಕಿದರಲ್ಲಲ್ಲಿ | ಕಡೆಗೆ ಸುಗ್ರೀವಗೆ | ಕೂಡಿಸುತ ಪಟ್ಟವನು ||
ಮಡುಹಲು ವಾಲಿಯ | ಪಡೆಗೂಡಿ ಕಪಿಗಳು | ನಡೆದರು ದೆಸೆದೆಸೆಗೆ      || ೪ ||

ಧರಣಿಜೆಯನು ಕಂಡು | ಗುರುತಿಗೀಯುಂಗುರ | ಕರೆದು ಕೊಟ್ಟಾಬಳಿಕ ||
ಸರುವವ ತಿಳಿದು ಬಂ | ದೊರೆವುದೆಂದಾ ರಾಮ | ಮರುತಜನೊಡನೆಂದನು      || ೫ ||

ವೀರ ಸಂಪಾತಿಯು | ತೋರಿದ ಮಾರ್ಗದಿ | ಸಾರಿದ ಹನುಮಂತನು ||
ಹಾರಿದನಬುಧಿಯ | ಮಾರುತ ವೇಗದಿ | ಭಾರಿ ಲಂಕಾಪುರಕೆ   || ೬ ||

ಕಂಡನು ರಕ್ಕಸ | ಹಿಂಡನು ದೈತ್ಯರ | ಹೆಂಡಿರ | ಮನೆಗಳನು ||
ಭಂಡ ರಕ್ಕಸಿಯರ | ಮಂಡಲದೊಳಗಿಹ | ಅಂಡಜಾಸನ ಸತಿಯ        || ೭ ||

ರಾಗ ದೇಶಿ ಏಕತಾಳ
(ಹಸ್ತಿನಾಪುರದಿಂದ ಬಂದೆವಮ್ಮ)

ಪಾದಭಕುತನೆಂಬ ಮಾತ – ಲಾಲಿಸಮ್ಮ |
ರಾಮ – ಪಾದ ಭಕುತ ಹನುಮಂತ ನಾ-ನೋಡೆಯಮ್ಮ |
ಶೋಧಿಸುತ್ತಲಿಲ್ಲಿ ಬಂದೆ – ಲಾಲಿಸಮ್ಮ |
ನಿಮ್ಮ ಪಾದನೋಡಿ ಧನ್ಯನಾದೆ – ಲಾಲಿಸಮ್ಮ        || ೧ ||

ನಿಮ್ಮ ನೋಡಲೆನ್ನ ಕಳುಹಿಕೊಟ್ಟರಮ್ಮ |
ಸತ್ಯ – ವಮ್ಮನಂಘ್ರಿಗಿದುವೆ ಗುರುತು ಕೇಳೆಯಮ್ಮ |
ನಿಮ್ಮ ಬರವ ಕಾಯುತಿಹರು – ಲಾಲಿಸಮ್ಮ |
ಕಪಿಗಳೆಮ್ಮ ಸುಗ್ರೀವನು ಸಹ ಕೇಳ್ವರಮ್ಮ    || ೨ ||

ಹನುಮನೆಂದ | ಸತ್ಯ ವಚನ – ಕೇಳುತಾಗ |
ಸೀತೆ – ಮನಸ್ಸಿನ ಸಂದೇಹವಿಟ್ಟು ಪೇಳ್ದಳಾಗ |
ಇನಿಯನೆಂದು ತೋರಲಿಹನೊ ಪೇಳು ಈಗ |
ಸರ್ವ-ರನಿತು ಸುಖದೊಳಿರುವರೇನೊ ಪೇಳು ಬೇಗ  || ೩ ||

ದೂರವಿಲ್ಲ ಎಂಟೆ ದಿನಕೆ ಬರುವರಮ್ಮ |
ಸೈನ್ಯ – ಸೇರಿಸಿ ಸೇತುವೆಕಟ್ಟಿ ಬರುವರಮ್ಮ |
ಕ್ರೂರ ರಾಕ್ಷಸರನು ಕೊಂದು ಹೋಹರಮ್ಮ |
ನಿಮ್ಮ – ಸೇರಿಸಿ ತೇರಿನಮೇಲೆ ಹೋಹರಮ್ಮ         || ೪ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಎನುತ ಧೈರ್ಯವ ಹೇರಿ ಚೂಡಾ | ಮಣಿಯನಾಂತಾ ಹನುಮನೊಯ್ಯನೆ |
ವನವ ಹೊಕ್ಕನು ಭರಿತ ಫಲಗಳ | ತಿನಲು ಬೇಗ      || ೧ ||

ವೀರ ರಾವಣನರಿತು ಕೆಂಗಿಡಿ | ಕಾರಿದನು ವನವನವಲಂಘಿಸಿ |
ಘೋರರಕ್ಕಸಪಡೆಯನಿಕ್ಕಿದ | ವಾರತೆಯನು || ೨ ||

ಘಳಿಲನಪ್ಪಣೆಯಿತ್ತನಾಕಪಿ | ಬಲವ ಮುರಿಯಲು ಸೆಳೆದು ಬಾಲಕೆ |
ಜ್ವಲನ ಸಂಸ್ಕೃತಿಗೆಯ್ದು ಹಿಂದಕೆ | ಕಳುಹಿರೆನುತ       || ೩ ||

ಬಾಲ ಸುಟ್ಟಾಕ್ಷಣಕೆ ಮಾರುತಿ | ಮೇಲೆ ಹಾಯ್ದನು ಲಂಕೆ ಸುತ್ತಲು |
ಧಾಳಿಗೊಟ್ಟಾ ಬಳಿಕ ಶರಧಿಯ | ತೇಲಿ ಬಂದ          || ೪ ||

ಭಾಮಿನಿ

ಮಾರುತಿಯ ಮುಖದಿಂದ ಲಂಕೆಯ |
ದಾರಿ ತಿಳಿದಾ ಕಪಿಗಳೆಲ್ಲರು |
ಸೇರಿ ಸಾಗರ ಬಲಿದು ಸೇತುವ ದಾಟಿದರು ಮುಂದೆ ||
ಘೋರ ದಶಕಂಧರನ ಲಂಕೆಯ |
ನೇರಿ ಧಾಳಾಧೂಳಿಯೆಬ್ಬಿಸಿ |
ಕ್ರೂರ ರಾಕ್ಷಸ ಕುಲವ ಸವರಿದರೆನಿತೊ ಸಾಹಸದಿ     || ೧ ||

ರಾಗ ಕೇದಾರಗೌಳ, ಝಂಪೆತಾಳ

ಬನ್ನಿರೊ ಭಟರು ಬೇಗ | ಕಲಿ ಕುಂಭ – ಕರ್ಣನನು ಕರೆಯಿರೀಗ
ಇನ್ನು ಸಾಕಾ ನಿದ್ರೆಯೂ | ಎಬ್ಬಿಸಿರೊ – ಪೂರ್ಣಾವಾಯ್ತಾ ಅವಧಿಯು    || ೧ ||

ಎಂದು ರಾವಣನುಸುರಲು | ರಾಕ್ಷಸರ – ವೃಂದವೇ ನಡೆದಾಗಲು |
ಬಂದು ಹಿಡಿದೆಬ್ಬಿಸಲ್ಕೆ | ತೀರದಿರೆ – ತಂದರಾನೆಗಳ ಕಳಕೆ     || ೨ ||

ಎದ್ದು ಕುಳಿತಾರ್ಭಟಿಸಿದ | ತಿಂಬೆ ನಾ – ನಿದ್ದ ಲೋಕಗಳನೆಂದ |
ಬಿದ್ದವಾತನ ಕೆಲದಲಿ | ತಿನಿಸುಣಿಸು – ಇದ್ದಷ್ಟು ಭುವನಗಳಲಿ   || ೩ ||

ಬಂದನಾ ಕುಂಭಕರ್ಣ | ರಾವಣನೊ – ಳೆಂದನೀಕರೆದುದೇನಾ |
ಮುಂದೆ ನುಡಿಯೇನಪ್ಪಣೆ | ಯಾರನೆಳೆ – ತಂದು ಕೊಡಬೇಕು ತಾನೆ    || ೪ ||

ಹೋಗು ನಡೆಯುದ್ಧಕೀಗ | ರಾಮಬಲ – ಸಾಗಿ ಬಂತೈ ಸರಾಗ |
ಬೀಗುತಿಹ ನರವಾನರ | ಪಡೆಯ ಮುರಿ – ದೀಗ ತಾ ಜಯದ ಭಾರ     || ೫ ||

ಕಂದ ಪದ್ಯ

ರಾವಣನಪ್ಪಣೆಯಂ ಪಡೆ | ದಾ ವಾನರ ಸೈನ್ಯದೆಡೆಗೆ ನಡೆದಾವೀರಂ ||
ಮಾ ವೈರದಿ ಕಾದುತ್ತಿರ | ಲಾವೇಗದಿತಡೆದು ನುಡಿದನಾ ರಘುರಾಮಂ   || ೧ ||

ರಾಗ ಶಂಕರಾಭರಣ ಮಟ್ಟೆತಾಳ
(ಭಾನುತನುಜ ಭಳಿರೆಯನುಜ)

ಭಳಿರೆ ಯಾರೆಲಾ ಮದಾಂಧ | ತಿಳಿಯದಾದೆಲಾ ? |
ತಲೆಯ ಕೊಟ್ಟು ಮೃತ್ಯುಲೋಕ | ಕಿಳಿದು ಹೋಹೆಲಾ ||
ಎಲವೊ ಮನುಜ ! ಸಾಕು ನಮ್ಮ ಕಲಹ ಸುಲಭವೇ ? |
ಇಳೆಯ ಮೂರನಾಳ್ವನನುಜ | ನೊಳು ವಿನೋದವೇ ?         || ೧ ||

ಖೂಳ ! ನಿಮಗದೇನು ಯುದ್ಧ | ತಾಳಲರಿವಿರೇ ? ||
ಬಾಲೆ ಸೀತೆಯನ್ನು ಕದ್ದು ಬಾಳಲರಿವಿರೇ ? ||
ಬಾಳಲುಂಟೆ ?  ಶೂರ್ಪನಖಿಯ | ಗೋಳು ಹೊಯ್ಸಿರೇ ?       || ೨ ||

ತಾಳಲಹುದೆ ನಮ್ಮ ಭಟರ | ಸೀಳುಗೈದಿರೇ ? ||
ಧೂರ್ತೆ ಶೂರ್ಪನಖಿಯ ಹಾಗೆ | ಮತ್ತನಾದೆಯಾ ? ||
ಸತ್ತಬಳಗದಂತೆ ಸಾಯ | ಲೆತ್ತಿ ಬಂದೆಯಾ ? ||
ಮರ್ತ್ಯರನ್ನು ತುತ್ತುಗೊಳುವ | ರಕ್ತ ತಿಳಿಯೆಯಾ ? ||
ಕಿತ್ತು ಹಗೆಯ ಸೀಳೆತೆಗೆವ | ಶಕ್ತಿಯಿದೆ ಭಲಾ || ೩ ||

ಮಡಿವ ಕಾಲಕಿದುವೆ ಮದ್ದು | ಕೊಡುವೆನೆನ್ನುತ ||
ಬಿಡಲು ರಾಮನಸ್ತ್ರಜಾಲ | ಕಡುಹ ತೋರುತ ||
ಕಡಿದು ಮತ್ತೆ ಘೋರ ಬಾಣ | ದಡಿಗನೆಸೆದನು ||
ಹೊಡೆದು ತೃಪ್ತಿಗೈವೆ ಭೂತ | ಗಡಣಕೆಂದನು || ೪ ||

ಭಾಮಿನಿ

ವೀರ ವೈಷ್ಣವ ಬಾಣವನು ಬಿಡ |
ಲಾರಘುಜನಾಕ್ಷಣಕೆ ಯಮಪುರ |
ಸೇರಿದನು ಕಲಿಕುಂಭಕರ್ಣನು ದನುಜರಾಯೆನಲು ||
ಘೋರವಾಯ್ತಾ ಸಮರ ಸರ್ವ ಸು |
ರಾರಿಗಳ ಸಂಹಾರದಲಿ ಕಿಡಿ |
ಕಾರುತಾ ದಶಕಂಠನೊಬ್ಬನೆ ನಿಂದನಿದಿರಾಗಿ || ೧ ||

ರಾಗ ಭೈರವಿ ಅಷ್ಟತಾಳ

ವೀರ ರಾವಣನ ಕಂಡು | ರಾಘವ ರಥ – ವೇರಿ ಚಾಪವನೆ ಕೊಂಡು |
ಕ್ರೂರ ರಾಕ್ಷಸರ ಸಂಹಾರವಾದರು ಗರ್ವ | ಜಾರದೆ ಹೋಗೆಂದನು       || ೧ ||

ಬಿಡುವೆನು ಪೌರುಷವ | ನಮ್ಮವರೆಲ್ಲ – ಮಡಿದರು ಬಿಡೆದ್ವೇಷವ |
ಹೊಡೆದು ಭೂತಾಹುತಿ ಕೊಡುವೆ ನಿಮ್ಮೆಲ್ಲರ | ತಡೆಯೆಂದನಾ ರಾವಣ   || ೨ ||

ಸಾರಿ ಹೇಳುವೆನಿದಕೋ | ಮೃತ್ಯುವ ಮುಖ – ಸೇರುವ ಪಂಥವೇಕೋ ? |
ನಾರಿಸೀರೆಯನಿತ್ತು ತಮ್ಮನೊಳೊಡಗೂಡಿ | ಪಾರುಪತ್ಯವ ನಡೆಸೊ     || ೩ ||

ಸೀತೆಯ ಬಿಡುವುದುಂಟೆ ? | ರಾಕ್ಷಸ ಕುಲ – ಕೇತುವ ಕರೆವುದುಂಟೇ |
ನೀತಿಯ ಬಿಟ್ಟನುಜಾತೆಯ ಭಂಗಿಸಿ | ದಾತಪ್ಪಿಗೇನು ಶಾಂತಿ   || ೪ ||

ಮಾನ ಬಿಟ್ಟರೆ ಹಾನಿಯ | ಹೊಂದುವರೈಸೆ – ನೀನೆಲ್ಲ ತಿಳಿದೆಮ್ಮಯ |
ಮಾನಿನಿಯನು ಸೆಳೆದೊಯ್ದೆಯದಕೆ ಶಿಕ್ಷೆ | ನಾನೀಯದಿರೆ ನೋಡೆಲಾ    || ೫ ||

ಶಿಕ್ಷಿಸಲರಿವೆಯೇನೋ | ವಾಲಿಯ ನ್ಯಾಯ – ಪಕ್ಷದಿ ಮುರಿದೆಯೇನೋ |
ಶಿಕ್ಷಣವಿಲ್ಲದ ಕಪಿ ಸೈನ್ಯದೊಡಗೂಡಿ | ರಕ್ಷೆಗೈಯಲು ಬಲ್ಲೆಯ    || ೬ ||

ಸಾಕೆಲಾ ಹೀನಜ್ಞಾನ | ತನ್ನಣ್ಣನ – ನೂಕಿ ಬಿಟ್ಟೈ ತಮ್ಮನ |
ನಾಕದವರ ಗೆದ್ದು ಬಳಲಿಸಿದೈ ಬಲು | ಲೋಕ ಪಾಲರ ರಾಯರ          || ೭ ||

ಹೆಚ್ಚು ಮಾತಾಡದಿರೋ | ರಾಜ್ಯವ ಬಿಟ್ಟು – ದುಶ್ಚೇಷ್ಟೆಯಾಡದಿರೋ |
ಕಿಚ್ಚಿನಂತಾ ಬಾಣವರ್ಷವ ಕೊಳ್ಳೆಂದು |  ಎಚ್ಚನಸ್ತ್ರಂಗಳನು     || ೮ ||

ಕಡಿದು ಶ್ರೀರಾಘವನು | ರಾವಣನ ಬೆ – ಳ್ಗೊಡೆಯ ಸಾಲ್ದಲೆಗಳನು ||
ಕಡಿಯಲು ಚಿಗುರಿತು ಹೃದಯದ ಸುಧೆಯಿಂದ | ಪೊಡವಿಯೆ ಬೆರಗಾಯಿತು        || ೯ ||