ರಾಗ ಕೇತಾರಗೌಳ ಅಷ್ಟತಾಳ

ನಾರದ ಮುನಿ ನಿನ್ನ | ಸ್ವಾರಿಯೆಲ್ಲಿಗೆ ಹೊಸ | ವಾರತೆಯುಂಟೆ ಪೇಳು ||
ಈರೇಳು ಭುವನ ಸಂ | ಚಾರದೊಳಿಹ ನಿನ್ನ | ಮೋರೆ ಕಾಂಬುದೆ ಕಷ್ಟವು || ೧ ||

ಸನಕಾದಿಗಳೆ ನಿಮ್ಮ | ಗುಣವ ಬಣ್ಣಿಸುವರೆ | ದನುಜಾಂತಕನೆ ಬಲ್ಲನು |
ಅಣುಗರ ಹಾಗಿದ್ದು | ಘನ ಸುಜ್ಞಾನಿಗಳಾಗಿ | ದಣಿದು ಹೋಗುವುದೆಲ್ಲಿಗೆ   || ೨ ||

ಪೋದಪೆವೈ ಮಧು | ಸೂದನನೆಡಗೆ ಈ | ಹಾದಿಯೊಳ್ ವೈಕುಂಠಕೆ ||
ಬೋಧರೂಪನ ದರ್ಶ | ನಾದಿಗಳಿಂ ಸುಖ | ಸಾಧಿಸಲಾಗದೇನೈ         || ೩ ||

ಮೌನಿವರ್ಯರೆ ನಿಮ | ಗೇನೆಂಬೆ ಹರಿಯನು | ಕಾಣಬಿಟ್ಟಪಳೆ ಲಕ್ಷ್ಮೀ ||
ಮೀನಾಗಿ ಸುತ್ತಾಡಿ ಮಂದರಾದ್ರಿಯನೆತ್ತಿ | ಕ್ಷೀಣಗೊಂಡಿಹನೈಸೆಲೆ        || ೪ ||

ಸನಕ ಮುಖ್ಯರೆ ತಡೆಯಿರೈ | ನಾ | ವಿನಯದಲಿ ಮುಂದೈದಿ ನಾರಾ |
ಯಣನ ದರ್ಶನಪಡೆದು | ಸಕಲವ ತಿಳಿದು ಬಹೆನೆನುತಾ ||

ಕ್ಷಣದಿ ನಾರದನೈದಿ ನುಡಿದನು | ಜಿನುಗದಿರಿ ಹಿಂದಾಗಿ ಬಹುಮುನಿ |
ಜನಕೆ ದಾರಿಯ ಬಿಡದಿರೆಂದಾ | ಜಯವಿಜಯರಿಂಗೆ    || ೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನಾರದನ ನುಡಿಕೇಳಿ ಬಳಿಕಾ | ದ್ವಾರಪಾಲರು ಗರುವದಿಂದು |
ಬ್ಬೇರಿನಿಂದರು ಸನಕ ಮುಖ್ಯರ | ದಾರಿಗಿದಿರು         || ೧ ||

ತಡೆಯಿರೈ ಮಾಧವನ ದರ್ಶನ | ಪಡೆವ ಕಾಲವಿದಲ್ಲ ಹಿಂದಕೆ |
ನಡೆಯಿರೈ ಬಲು | ಹುಡುಗರಾಟವು  ನಡೆಯದಿಲ್ಲಿ      || ೨ ||

ದುರುಳರಾದಿರೆ ಲೇಸು | ನಮ್ಮಯ | ಭರವನರಿಯದೆ ಹೋದಿರೇ ಹರಿ |
ದರುಶನಕೆ ತಡೆಯಾದಿರೇ | ಬಿಡಿ ಮರುಳತನವ       || ೩ ||

ದುಷ್ಟತನಕಿದೆ ಹಿಡಿರಿ ಶಾಪವ | ಕೊಟ್ಟೆಪೆವು ಶಿಕ್ಷೆಯನು ಧರೆಯಲಿ |
ಹುಟ್ಟಿರೈ ರಾಕ್ಷಸರ ಗುಣದಲಿ | ಭ್ರಷ್ಟರಾಗಿ     || ೪ ||

ಎಂದೆನಲು ಜಯವಿಜಯರಾಗ ಸ | ನಂದನಾದ್ಯರ ಶಾಪದುರಿಯೊಳು |
ನೊಂದು ನುಡಿಯಲು ಸಂತವಿಸಿದನು | ಇಂದಿರೇಶ    || ೫ ||

ರಾಗ ಸುರುಟಿ ಏಕತಾಳ

ಚಿಂತೆಯದೇಕಿನ್ನು | ಗರ್ವದೊ | ಳಾಂತಿರೆ ಶಾಪವನು |
ಭ್ರಾಂತಿಯೊಳೀತೆರ ಮುನಿಗಳ ಘನತೆಯ | ಅಂತರವರಿಯದೆ ಕೆಣಕುವುದೇನೈ    || ೧ ||

ಮುನಿಗಳೆಂದ ಮಾತು | ಸತ್ಯವು | ಅನುಭವಿಸುವುದಿಂತು |
ವಿನಯದೊಳೆನ್ನಡಿ ಭಕುತಿಯೊಳೇಳನೆ | ಜನುಮಾಂತರದಲಿ ಬರುವುದು ಹೀಗೆ    || ೨ ||

ಭಕ್ತಿಯೊಳಾಗದಿರೆ | ಶಾಪನಿ | ವೃತ್ತಿಯ ಹೊಂದುವರೆ |
ದೈತ್ಯರೆನಿಸಿ ಜನ್ಮತ್ರಯದಲಿ ಸಾ | ಮರ್ಥ್ಯವ ತೋರಿಸಿ ಮುಕ್ತಿ ಪಡೆಯಿರೈ         || ೩ ||

ಎನಲವರಾನುಡಿಗೆ | ಮರುಗುತ | ಮಣಿದೆಂದರು ಕಡೆಗೆ |
ದನುಜರಾಗಿ ಮೂರ್ಜನುಮವ ತಳೆದು | ಘನತೆಯ ತೋರಿಸಿ ಬರಲಿಹೆವೆಂದು     || ೪ ||

 

ವರಾಹಾವತಾರ

ಕಂದ

ಸನಕಾದ್ಯರ ಶಾಪದೊಳಂ | ವನಜಾಕ್ಷನ ದ್ವಾರಪಾಲರಾಕಶ್ಯಪನಾ ||
ತನುಜಾತರಾದರಿಳೆಯೊಳ್ | ಎನಲೇನೊಂದಿವಸ ನುಡಿದನಾ ಹಿರಣ್ಯಾಕ್ಷಂ        || ೧ ||

ರಾಗ ಭೈರವಿ ಝಂಪೆತಾಳ

ದೈತ್ಯರೆಲ್ಲರು ಕೇಳಿ | ಮೃತ್ಯುಂಜಯನದಯದಿ |
ಪೃಥ್ವಿಯಗಲದ ಪಾರು ಪತ್ಯವೆಮಗಾಯ್ತು     || ೧ ||

ಪರಮೇಷ್ಟಿಯೆನಗಿತ್ತ | ವರಬಲದೊಳಿಂದ್ರಾದಿ |
ಸುರನರರ ಪಟ್ಟವನು | ಮುರಿದು ವಶಗೈದೆ   || ೨ ||

ಆದರೇನೊಂದುಂಟು | ಮಾಧವನ ಗೆಲಿದು ಹಗೆ |
ಸಾಧಿಸಿದರೆಮಗೆ ಸರಿ | ಯಾದವರ ಕಾಣೆ     || ೩ ||

ಎಂದಾ ಹಿರಣ್ಯಾಕ್ಷ | ಹಂದೆತನದಿಂದೊರೆಯೆ |

ಬಂದನಲ್ಲಿಗೆ ನಾರ | ದೇಂದ್ರನತಿಜವದಿ       || ೪ ||

ಘನತರಾಸನವಿತ್ತು | ಮಣಿದು ಕೈ ಮುಗಿದೆಂದ |
ನೆನಗೆ ಸರಿಯುಂಟೆ ಪೇ | ಳನಿಮಿಷಾದ್ಯರಲಿ  || ೫ ||

ಮಾರಪಿತನಲ್ಲದೆಯೆ | ಬೇರಿಲ್ಲ ಹಗೆಯೆಮಗೆ |
ತೋರಿ ಕೊಟ್ಟರೆ ಸಾಕು | ತೀರಿಸುವೆನವನಾ  || ೬ ||

ರಾಗ ಕಾಫಿ ಅಷ್ಟತಾಳ

ಮನಮೆಚ್ಚಿದೆನು ನಿನ್ನ ಮನದಭಾವನೆಗೆ |
ವನಜನಾಭನೆ ಬಂದು ತೋರ್ಪನೆ ಹೀಗೆ ||
ವನಧಿಯೊಳಿರ್ದರು ಮಾಲಕ್ಷ್ಮಿಯೊಡನೆ |
ವಿನಯದಿ ಪೊರೆವನೈ ಭೂದೇವಿಯನ್ನೇ      || ೧ ||

ಭೂಮಿದೇವಿಗೆ ಕಷ್ಟವಾದರೆ ಬಹನು |
ನಾನಾರೂಪಾವನಾಂತು ಮೈದೋರಲಿಹನು ||
ತಾಮಸವಿರದೆ ಗೋಗರ್ಭದೊಳಿರುವ |
ಭೂಮಿಯ ಹಿಡಿದು ಸಾಧಿಸು ಹಗೆತನವ      || ೨ ||

ರಾಗ ಭೈರವಿ ಏಕತಾಳ

ಸುರ ಮುನಿಪನ ಬೀಳ್ಕೊಟ್ಟು | ಪುರ ಹರನೆನೆ ರೋಷವ ತೊಟ್ಟು |
ಶರಧಿಯೊಳಡಗಲಿ ಹರಿಯ | ಸಂ ಹರಿಸದೆ ಬಿಡೆನಾ ಹಗೆಯ    || ೧ ||

ಮೇಲಣ ಲೋಕದೊಳಿರಲಿ | ಪಾತಾಳವನೇ ಹೊಕ್ಕಿರಲಿ |
ಏಳು ಸಮುದ್ರವ ಕಡೆದು | ನಾ ಸೀಳುವೆನಾತನ ಹಿಡಿದು        || ೨ ||

ನಡೆಯಲಿ ಸೇನೆಯು ಮುಂದೆ | ಸುರ ಗಡಣವೆ ತಡೆಯಲಿ ಹಿಂದೆ |
ಕೆಡಿಸಲಿ ಯಜ್ಞಾದಿಗಳ | ಹುಡಿ ಹುಡಿ ಗೈಯಲಿ ಲೋಕಗಳ       || ೩ ||

ಗದೆಗೊಂಡೆದ್ದಾ ಭರಕೆ | ನೆಲ ನದುರಲು ಹೊಡೆದಾರ್ಭಟಕೆ |
ತ್ರಿದಶರು ಮರುಗಿದರಾಗ | ಧರೆ ಯೆದೆಗೆಟ್ಟೋಡಿತು ಬೇಗ       || ೪ ||

ಬೆರಸುತ ಬಂದನು ಖಳನು | ಕಟುಕರ ತೆರದಲಿ ಭೂಮಿಯನು |
ಸಿರಿಯರಸನೆ ಪೊರೆಯನುತ | ಸಾಗರ ಸೇರಲು ಬಿಡದಾತ     || ೫ ||

ರಾಗ ಸೌರಾಷ್ಟ್ರ, ತ್ರಿವುಡೆ ತಾಳ

ಸಿಕ್ಕಿದೆಯೆಲಾ ದ್ರೋಹಿ ನಿನ್ನಾ | ಸೊಕ್ಕ ಮುರಿಯುವೆನೀ ಸಮುದ್ರದೊ |
ಳಿಕ್ಕಿಕೆಡಹುವೆ ನೋಡು ಭುಜಗಳ | ಶಕ್ತಿಯನ್ನು         || ೧ ||

ಎನುತ ಬೊಬ್ಬಿರಿದೆತ್ತಿ ಹಿಡಿದಾ | ವನಧಿಯಲಿ ಹಾಯ್ಕಿದರೆ ಧಾತ್ರೀ ||
ವನಿತೆ ಮರುಗಿದಳಂಬುಜಾಕ್ಷನ | ಗುಣವ ನೆನೆದು ||   || ೨ ||

ಅರರೆ ಏನದ್ಭುತವು ಭೂಮಿಯ | ಶರಧಿ ಮಧ್ಯದೊಳಿಕ್ಕಿದನೆ ಖಳ |
ಬರಲಿ ಸಾಹಸ ನೋಳ್ಪೆನೆಂದಾ | ಹರಿಯು ಭರದಿ      || ೩ ||

ಘೋರರೌದ್ರಾಕಾರವಾಂತಾ | ನೀರೊಳಗೆ ವಾರಾಹಾ ರೂಪವ |
ತೋರುತೆದ್ದನು ದೈತ್ಯ ಕುಲಗಿರಿ | ಜಾರುವಂತೆ        || ೪ ||

ಫಡ ಫಡೆಲವೋ ದುಷ್ಟ ನಿನ್ನೆದೆ | ಯೊಡೆದು ಶೈಮಿನಿಗಟ್ಟಲಿಹೆನೈ |
ಪೊಡವಿಯನು ಸೆಳೆದೊಯ್ದ ದುಷ್ಫಲ | ವಡಸಿತಿದಕೊ  || ೫ ||

ಯಾರು ನೀನೆಲೆ ಹಂದಿ ನಿನ್ನವ | ತಾರವತಿಲೇಸಾಯ್ತು ಹಗೆತನ |
ತೀರಿಸಲ್ಕೆಡೆಯಾಯ್ತು ಸತ್ವ | ತೋರಿಸೀಗ   || ೬ ||

ಎಂದೆನೆಲು ವಾರಾಹ ಮೂರ್ತಿಯು | ಒಂದೆ ಕ್ಷಣದಲಿ ಸೀಳಿ ಬಿಸುಟನು |
ಮುಂದರಿವ ಶತಕೋಟಿ ರುದ್ರರ | ಅಂದದಿಂದ         || ೬ ||

 

ನೃಸಿಂಹಾವತಾರ

ಕಂದ

ಸುಮನಸರೆಲ್ಲರು ಜಯವೆನೆ | ರಮೆಯರಸಂ ಭೂಮಿ ದೇವಿಯಂ ತಂದಿರಿಸಲ್||
ಭ್ರಮಿಸುತ ಹಿರಣ್ಯ ಕಶ್ಯಪ | ನಮರರ ಧ್ವನಿ ಕೇಳಿ ನುಡಿದ ನಿಂತಾ ಸಭೆಯೊಳ್     || ೧ ||

ರಾಗ ಕಾಂಬೋಧಿ ಝಂಪೆತಾಳ

ದನುಜರಿರ ಕೇಳಿರೆ | ಮ್ಮನುಜನಳಿದನು ಮಹಾ | ವನಧಿಯಲಿ ಹರಿಗೈದ ಮೋಸ ||
ಬಣಗು ಹಂದಿಯ ರೂಪ | ವನು ಧರಿಸಿ ಕೊಂದನೈ | ಗಣಿಸದೆಮ್ಮೀ ದೈತ್ಯಬಲವ   || ೧ ||

ಸುರರ ಮಾತಿನಲಿ ಸಂ | ಹರಿಸುತಿರೆ ನಮ್ಮವರ | ಬರಿದೆ ಕುಳಿತರೆ ಸೌಖ್ಯವುಂಟೆ ||
ಸರುವರೊಟ್ಟಾಗಿ ನಿ ರ್ಜರರ ಕುಲವನು ಸದೆದು | ಪುರುಷತನವನು ಮೆರೆಸಬೇಕು || ೨ ||

ಹೋಮ ನೇಮಗಳು ನಿ | ರ್ನಾಮವಾಗಲಿ ಬುಧ | ಸ್ತೋಮವಳಿಯಲಿ ಧರ್ಮಸಭೆಯು |
ಆ ಮಹಾ ಜಗವೆನ್ನ | ನಾಮದಿಂದಿರಲಿ ಸು | ಕ್ಷೇಮವಾಗಲಿ ದೈತ್ಯಕುಲಕೆ || ೩ ||

ಅರಸನಪ್ಪಣೆಯಂತೆ | ಹೊರಟರೈ ನಾಲ್ದೆಸೆಗೆ | ದುರುಳರಾರ್ಭಟಿಸಿ ಬಹುವಿಧದ ||
ಧರಣಿಯನು ಸುತ್ತಿದರು | ಧರ್ಮ ಕರ್ಮಾದಿಗಳ | ಮುರಿದಿಕ್ಕಿದರು ಸಾಧು ಜನರ  || ೪ ||

ಭಾಮಿನಿ

ಕೇಳಿರೈ ಮುಂಗತೆಯ ಲಕ್ಷ್ಮೀ |
ಲೋಲನಂಘ್ರಿಯ ಭಕ್ತಿ ಬಿಡದಾ |
ಬಾಲನುದಿಸಿದನಾಖಳಗೆ ಪ್ರಹ್ಲಾದನಾಮದಲಿ ||
ಪಾಲಿಸಿದನಾ ಬಳಿಕ ವಿದ್ಯೆಯ |
ಲೀಲೆಯಿಂದೋದಿಪರೆ ಗುರುಕುಲ |
ಪಾಲಕರ ಕರೆದಿತ್ತನಾ ದಿತಿಜಾತನತ್ಮಜನ    || ೧ ||

ರಾಗ ಕೇತಾರಗೌಳ, ಅಷ್ಟತಾಳ

ಕರೆದು ಕೈಯೆತ್ತಿ ಕು | ಳ್ಳಿರಿಸಿ ಬರೆಸಿದರು | ಭರದಿಚಂಡಾಮರ್ಕರು ||
ಹರನಮೋ ಶಿವಯೆಂದು | ಬರೆಯೆನೆ ಬರೆದನು | ಹರಿನಮೋ ಹರಿಯೆನುತ        || ೧ ||

ಶ್ರೀ ಮಹಾಪಾರ್ವತೀ | ವರನೆನೆ ಬರೆದನು | ಮಾಮನೋಹರನೆನ್ನುತ ||
ಶ್ರೀ ಮಹಾವಿಷ್ಣುವ | ನಾಮ ಹೊರತು ಪೇಳ | ನಾಮಹೇಶ್ವರನೆಂಬುದ   || ೨ ||

ಹರ ಹರ ಮಹಾದೇವ | ಏನೇನೆಂದರು ಕೇಳ | ಹರಿಯ ನಾಮಾವಳಿಯ ||
ಬರೆವನಲ್ಲದೆ ತಿದ್ದಿ | ಬರೆಸಲು ಬಾರನು | ಪರಮಾರ್ಥವನೆ ಪೇಳ್ವನು     || ೩ ||

ಮಗುವೆ ನೀನೇತಕೆ | ಜಗದೀಶ್ವರನ ಬಿಟ್ಟು | ಹಗೆಯ ಕೊಂಡಾಡುವೆಯಾ ||
ಜಗವನುಂಗುವ ನಿನ್ನ | ಪಿತನು ಕೇಳ್ದರೆ ನಮ್ಮ | ತೆಗೆವನು ಕೋಪದಲಿ    || ೪ ||

ಗುರುಗಳಾದರು ನಿಮ | ಗೊರೆಯಲುಂಟೈ ಕೇಳಿ | ವರಸಚರಾಚರವ ||
ಪೊರೆವಚ್ಯುತನ ಪಾದ | ಸ್ಮರಣೆಯಿಂದಲಿ ಮೋಕ್ಷ | ದೊರೆಯದೆ ಹೋಹುದೇನೈ   || ೫ ||

ವಾರ್ಧಕ

ಏನಗೈದರು ಸಾನುರಾಗದಿಂ ವೇಗದಿಂ |
ತಾನೆ ತಿದ್ದಲು ಬಾರದಾ ಪ್ರಹ್ಲಾದನಂ |
ದಾನವೇಶ್ವರನೆಡೆಗೆ ಕರೆತಂದು ಬಿಟ್ಟರಾ ಗುರುಗಳಿರ್ವರು ಭಯದಲಿ |
ಹೀನರಾದೆವು ನಿನ್ನ ಮಗನ ದುರ್ಬುದ್ಧಿಗಳ |
ನೀನೆ ತಿದ್ದಲುಬೇಕು ತೀರದಾಯ್ತೆಮಗೆ ನಾ |
ವೇನೆಂದರಂಬುಜಾಕ್ಷನ ಬಿಟ್ಟು ಶಿವನಾಮಗಳ ಸರ್ವಥಾ ನುಡಿಯನು     || ೧ ||

ಕಂದ

ಖೂಳರು ನೀವೇ ನಮ್ಮಯ |
ಬಾಲಕನೇಂಬಲ್ಲ ಹರಿಯ ನಾಮಾವಳಿಯಂ ||
ಶಾಲೆಯೊಳೋದಿಸಿ ಹರಿಕಥೆ |
ಹೇಳ್ವಿರೆ ಸಾಕೆಂದು ಗಜರಿದಂ ದನುಜೇಂದ್ರಂ ||

ರಾಗ ಶಂಕರಾಭರಣ ತ್ರಿವುಡೆತಾಳ

ಒಡನೆ ಪ್ರೀತಿಯೊಳೆತ್ತಿ ಬಾಲನ | ತಡವರಿಸುತಾ ದೈತ್ಯನು |
ನುಡಿದನೀಪರಿ ಚೇಷ್ಟೆಗಳ ಬಿಡು | ತಡೆಯದೆಮಗೆ      || ೧ ||

ಪರಶಿವನ ಬಿಟ್ಟನ್ಯ ದೇವವ | ಸ್ಮರಿಸಲೇಕೊ ದಿತಿಜರ |
ತರಿದು ತ್ರಿದಶರ ಪೂರೆವ ಮೂರ್ಖನೊ | ಳೆರಕವಹುದೇ        || ೨ ||

ತಾತ ಕೇಳಚ್ಚುತನು ಜಗದಧಿ | ನಾಥನೈಸೇ ಸುಜನರ |
ಪ್ರೀತಿಯಲಿ ರಕ್ಷಿಸುವನಧಮರ | ಘಾತಿಸುತ್ತ  || ೩ ||

ತರಳ ನೀ ತಿಳಿದಿಲ್ಲವಾತನ | ಹಿರಿದು ಮಾಯಾ ಮಂತ್ರವ |
ಕಿರಿಯ ತಂದೆಯ ಕ್ರೋಢರೂಪಿನೊ | ಳಿರಿದನಲ್ತೆ      || ೪ ||

ಮಡುಹಿದವರಾರಿಲ್ಲ ತಾನೆ | ಮಡಿದನಯ್ಯೊ ಪಾಪದೊ |
ಳೆಡಹಿ ಬೀಳುವುದೇಕೊ ಶ್ರೀಶನ | ಅಡಿಯ ಮರೆತು    || ೫ ||

ರಾಗ ಭೈರವಿ ಅಷ್ಟತಾಳ

ಏನೆಂದೆಯೆಲೊ ಫೋರನೆ | ಸರ್ವವಬಲ್ಲ | ಜ್ಞಾನಿಯಾದೈ ಧಿಮ್ಮನೆ |
ಶ್ರೀನಿವಾಸನ ಗುಣಗಾನವ | ಮಾಡುತ್ತ | ಹೀನೈಸುವೆಯ ಮರುಳೆ        || ೧ ||

ಕೋಪಿಸಬೇಡ ತಾತ | ದ್ವೇಷವ ಕಟ್ಟ | ಲಾವುದೇನೈ ಸುಕೃತ |
ಶ್ರೀಪತಿಯನು ಬಿಟ್ಟು ಬಾಳಲುಂಟೇ | ದುಷ್ಟ | ಪಾಪಿಯಾಗೆನು ಲೋಕದಿ  || ೨ ||

ಎನಲು ಹೂಂಕರಿಸಿದನು | ಸಭೆಯೊಳೆದ್ದು – ಕನಲುತೆಂದನು ಖಳನು ||
ತನಯನಲ್ಲಾ ಮಾರಿಮುಖನೆಮ್ಮ | ವಂಶಕೆ | ಹನನಗೈವಾ ಮೃತ್ಯುವೆ    || ೩ ||

ದಡಗಿರಿರ್ವರ ಕರೆದ | ಶೂಲದ ಮೊನೆ | ಗಿಡುವರೆ ನೇಮಿಸಿದ ||
ನಡೆಯದಾಯಿತು ಕಾರ್ಯ ಕಡಲಿನೊಳಿಟ್ಟರು | ಒಡನೆದ್ದು ಬರುತಿರ್ದನು || ೪ ||

ಘೋರ ರಾಕ್ಷಸರೊಮ್ಮೆಗೆ | ಪರ್ವತದಿಂದ | ಹಾರಿಸಿದರು ಕೆಳಗೆ ||
ಕ್ರೂರ ಪರ್ವತಗಳ ತಂದೇರಿಸಿದರು | ಪ್ರಾಣ | ಜಾರದಾಯಿತು ಬಾಲನ  || ೫ ||

ಭಾಮಿನಿ

ಖಳಹಿರಣ್ಯಕನಧಿಕ ಕೋಪೋ |
ತ್ಕರ ದೊಳಾರ್ಭಟಿಸುತ್ತ ಮಡದಿಯ ||
ಕರೆದು ಗರಳವನೆರೆದು ಕೊಡು ಹೋಗೆಂದು ನೇಮಿಸಿದ ||
ಹರ ಹರಾ ಮಾದೇವ ಎಂದಾ |
ದರದಿ ತರಳನ ಕರೆದು ವಿಷವನು ||
ಕರದೊಳೇರಿಸಿ ಮರುಗಿದಳು ಹರಿಕೃಷ್ಣ ಹಾಯೆನುತ   || ೧ ||

ರಾಗ ಘಂಟಾರವ ಆದಿತಾಳ
(ಏನಯ್ಯ ಪವನಜನೆ)

ಏನ ಮಾಡಲಿ ಶಿವನೆ ಬಾಲಗೆ ಮೃತ್ಯು | ನಾನಾದೆನಲ್ಲೊ ಹರನೆ ||
ಪ್ರಾಣನಾಥನ ಮಾತನು | ಪೂರೈಸುವರೆ | ಏನುಪಾಯವೊ ಕಾಣೆನು     || ೧ ||

ಹುಟ್ಟಿದ ಮಕ್ಕಳನ್ನೇ | ಬಲಿಕೊಡುವ ಪಾಪಿ | ದುಷ್ಟರುಂಟೇ ಶಿವನೆ ||
ಸೃಷ್ಟಿಯೊಳೆನ್ನ ಹಾಗೆ | ದುಃಖಾತ್ಮರಾಗಿ | ಹುಟ್ಟಿ ಬಾಳುವರೆ ಹೀಗೆ        || ೨ ||

ಎಳೆಮಕ್ಕಳೊಡನಾಡುವ | ಮೋಹದಿ ಮುದ್ದು | ಕಲಿಸುತ್ತಲಿಹ ಶಿಶುವ |
ಕೊಲೆಗೈದು ಬಾಳುವುದು | ಹೊಲ್ಲೆಹವೈಸೆ | ಕಳೆವೆನೀತನುವನಿಂದು     || ೩ ||

ಮರುಗುವುದೇತಕಮ್ಮ | ಪಾನವ ಮಾಳ್ಪೆ | ಗರಳವೆಲ್ಲಿದೆ ತೋರಮ್ಮ |
ತರಳ ಧ್ರುವನಿಗೊಲಿದಾ | ಶ್ರೀಹರಿಯೆಮ್ಮ | ಪರಿಪಾಲಿಪನು ಸರ್ವದಾ    || ೪ ||

ಕಂದ

ಇಂತಾ ಪ್ರಹ್ಲಾದನು ವಿಷ |
ವಾಂತಾಗಳೆ ಶ್ರೀಶನಂಘ್ರಿಯಂ ಸ್ಮರಿಸುತ್ತಾ |
ಸಂತೋಷದೊಳೀಂಟಲು ಸುರ |
ಸಂತತಿ ಭೋಯೆಂದು ಸುರಿದರಮೃತದ ಮಳೆಯಂ   || ೧ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಇನಿತು ನಾನಾ ಮಾಯೆ ಮಾಟಗ | ಳಣುಗ ನಾ ಮೈಸೋಕದಿರೆ ಖಳ |
ಕನಲಿದನು ಹರಿಮಹಿಮೆಯೆಂತುಟೊ | ಎನುತ ಮನದಿ || ೧ ||

ಎಲೆಲೆ ದುಷ್ಟ ಕುಮಾರ ನಿನ್ನಾ | ತಲೆಯ ಕಾಯ್ವಾದೈವವಾವುದೊ |
ಕಳಕೆ ತೋರಲ್ಲದಿರೆ ನಾನಿ | ನ್ನುಳಿಯಗೊಡೆನು        || ೨ ||

ತೋರಲೇಕೆ ಸಮಸ್ತ ಭುವನವ | ಮೀರುವಾ ಪರಮಾತ್ಮನಿಲ್ಲದ |
ಬಾರಿವಸ್ತುಗಳುಂಟೆ ಜ್ಞಾನಕೆ | ತೋರುತಿಹನು         || ೩ ||

ಸುಡು ಸುಡಾ ನುಡಿ ಸತ್ಯವಾದರೆ | ತಡೆಯದೀಕ್ಷಣನೊಳ್ಪೆನೆಂದಾ |
ದಡಿಗನೊದೆದನು ಸ್ತಂಭವೇ ನಡ | ನಡುಗುವಂತೇ    || ೪ ||

ಮೂರುಜಗವಲ್ಲಾಡೆ ದಿಕ್ತಟ | ಚೀರಿತಾಗಳೆ ಸ್ತಂಭ ಮಧ್ಯದಿ |
ತೋರಿತದ್ಭುತ ನಾರಸಿಂಹಾ | ಕಾರವೊಡನೆ || ೫ ||

ಏನಿದಚ್ಚರಿ ಯೀಮಹಾಮೃಗ | ಮಾನವಾಕಾರದಲಿ ಕಾಂಬುದು |
ಏನಮಾಳ್ಪೆನೆನುತ್ತ ಚದರಿದ | ಸ್ಥಾನದಿಂದ    || ೬ ||

ಫಡ ದುರಾತ್ಮನೆ  ನಿಲ್ಲು ತಡೆ ತಡೆ | ಒಡಲ ಬಗಿದಪೆ ನೋಡು ವೈರದಿ |
ನಡೆಸಿದಾ ಪಾತಕಕೆ ಶಿಕ್ಷೆಯ | ಕೊಡುವೆನೆನನುತ      || ೭ ||

ಬೆರಸಿ ಬೆನ್ನಟ್ಟಿದನು ನರಹರಿ | ಯರರೆ ಚೋದ್ಯವಿದೆನುತ ರಾಕ್ಷಸ |
ಕರದಿ ಖಡ್ಗವನೆತ್ತಿ ಹೊಯ್ದನು | ಸರಭಸದಲಿ  || ೮ ||

ಭಾಮಿನಿ

ಏನೆನೆಂಬೆನು ನಾರಸಿಂಹನ |
ತ್ರಾಣವೆನಿತೋ ದೈತ್ಯನನು ಹಿಡಿ ||
ದಾನಖಾಗ್ರದಿ ಸೀಳಿ ಬಿಸುಟನು | ಸಂಜೆ ಹೊತ್ತಿನಲಿ ||
ಕಾಣುತಲೆ ವಿಧಿಭವ ಸಮಸ್ತರು |
ದೀನಭಾವದೊಳಿರಲು ರೋಷವ |
ಮಾಣಿಸಲು ಪ್ರಾರ್ಥಿಸಿದನಾ ಪ್ರಹ್ಲಾದನಚ್ಯುತನ        || ೧ ||

ರಾಗ ತುಜಾವಂತು ಝಂಪೆತಾಳ

ಜಯತು ಜಯಮಾಂಪಾಹಿ | ಜಯತು ಶ್ರೀಲೋಲ |
ಭಯನಿವಾರಕ ತ್ರಾಹಿ | ಜಯತು  ಗುಣಮಾಲಾ  || ಪಲ್ಲವಿ ||

ಧನ್ಯನಾದೆನು ದೇವ | ನಿನ್ನ ದರುಶನದಿಂದ | ಇನ್ನೇನು ದೈತ್ಯನಸು | ನಿರ್ನಾಮವಾಯ್ತು ||
ಕಣ್ಣಾರೆ ಕಾಣುವರೆ | ನಿನ್ನ ಸೌಮ್ಯಾಕಾರ | ಮುನ್ನಿನಂದದಿ ತೋರಿ | ಮನ್ನಿಸೆನ್ನುವನು        || ೧ ||

ಎಂದುದಾಲಿಸಿ ದಯಾ | ಸಿಂಧು ಶಾಂತಾಕಾರ | ದಿಂದ ತೋರಿದನು ಹಾ | ಕಂದ ನಿನ್ನಿಂದ ||
ಚಂದವಾಯಿತು ಜಗಕೆ | ಮುಂದೆ ನೀನರಸಾಗಿ | ನಿಂದು ಸೌಖ್ಯದಿ ಬಾಳ್ವುದೆಂದು ಹರಸಿದನು        || ೨ ||

 

ವಾಮನಾವತಾರ

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಇತ್ತ ಶೋಣಿತ ಪತ್ತನದಿ ಬಲಿ | ವಿಸ್ತರಿಸಿದನು ನೂರುಯಾಗವ |
ದೈತ್ಯಗುರುಭಾರ್ಗವನ ಪೌರೋ | ಹಿತ್ಯದಿಂದ         || ೧ ||

ಬಂಧು ಬಾಂಧವವೃಂದದೊಡನಾ | ನಂದದಲಿ ಗುರುಬುಧ ಸಮಸ್ತರು |
ಬಂದು ಕೇಳ್ದುದನೀಯುತಿರ್ದನು | ಸಾಂದ್ರವಾಗಿ       || ೨ ||

ಇನಿತು ಬಲಿ ಬಹುದಾನಿಯೂಗಿಹ | ಘನ ಚರಿತ್ರೆಯ ಕೇಳುತಲ್ಲಿಗೆ |
ವನಜನೇತ್ರನು ಬಂದನಾಮುನಿ | ತನಯನಾಗಿ        || ೩ ||

ನೋಡಿದನು ದಿವ್ಯಪ್ರಕಾಶದಿ | ಮೂಡಿಬಹ ಬಾಲಾರ್ಕನನು ತೆಗೆ |
ದಾಡಿ ಪೀಠವನೇರಿಸುತ ಕೊಂ | ಡಾಡುತೆಂದ         || ೪ ||

ಕುಶಲವೇ ಮಗು ನಿನ್ನ ಸ್ವಾರಿಯೊ | ಳಸುರಕುಲವೇ ಪುಣ್ಯಪಡೆಯಿತು |
ಹೊಸತು ಯಾಚನೆಯುಂಟೆ ಕೊಡುವೆನು | ಮಿಸುಕದೀಗ        || ೫ ||

ಕೊಡುವೆಯಾದರೆ ಮೂರುಪಾದದೊ | ಳಡಗುವಾ ಭೂಮಿಯನು ಕೊಡುನಾ |
ನಡೆಸುವೆನು ತಪವಲ್ಲಿ ಶಾಶ್ವತ | ಪಡೆದು ಸುಖವ      || ೬ ||

ಮರುಳೆಲಾ ಬಾಲಕನೆ ತಿಳಿಯೆಯ | ದೊರೆಗಳಿಗೆ ದೊರೆಯಲ್ಲವೇನಾ |
ಹಿರಿದು ಯಾಚನೆ ಗೈಯದೀತೆರ | ವೊರೆವುದೇನ್ಯೆ      || ೭ ||

ರಾಗ ಸಾಂಗತ್ಯ ರೂಪಕತಾಳ

ಅಷ್ಟರೊಳಗೆ ಗುರು | ಪಟ್ಟವಿಳಿದು ಶುಕ್ರ | ತಟ್ಟನೆಂದನು ಬಲಿಯೊಡನೆ    || ೧ ||

ಪುಟ್ಟ ಬಾಲಕನೆಂದು | ಕೊಟ್ಟೆಯಾದರೆ ಭೂಮಿ | ಕೆಟ್ಟುಹೋಹುದು ಕಾರ್ಯವೆಲ್ಲ ||
ಆ ಮಹಾ ವಿಷ್ಣುವೆ | ವಾಮನಾಕೃತಿಯಿಂದ | ಭೂಮಿಯ ಕೇಳಬಂದಿಹನು ||
ಸಾಮದಿ ಕೊಡದೆ ನೀರ್ನಾಮವಾಗದೆ ಸುಖ | ಕ್ಷೇಮದೊಳಿಹ ದಾರಿನೋಡು       || ೨ ||

ಗುರುವೆ ನಿಮ್ಮಯ ಮಾತಿ | ಗೆರಡಿಲ್ಲವಾದರು | ಕರೆದಿತ್ತ ಭಾಷೆ ತಪ್ಪಿದರೆ ||
ಜರಿವುದು ಕೀರ್ತಿಯೀ | ತರಳನು ಹರಿಯಾಗಿ | ಬರಲಿ ಬಿಡೆನು ಸತ್ಯಪಥವ        || ೩ ||

ಎಂದು ಧಾರೆಯ ನೆರೆ | ವಂದಿಗೆ ಜಲಪಾತ್ರೆ | ಬಂದು ಹೊಕ್ಕನು ಕಪ್ಪೆಯಾಗಿ ||
ಮಂದರಧರನಾಗ | ನಿಂದು ತಿವಿಯೆ ಬೇಗ | ಒಂದು ಕಣ್ಣಾಯ್ತು ಶುಕ್ರನಿಗೆ || ೪ ||

ರಾಗ ಆಹೇರಿ ಝಂಪೆತಾಳ

ಏನೆಂಬೆನಾಶ್ಚರ್ಯವ | ವಾಮನಗೆ ದಾನವೀಯಲು ದಾನವ   || ಪ ||

ಆ ಮಹಾಮಹಿಮನೊಂದೇ | ಮುಹೂರ್ತದಿ ಬೆಳೆದು | ವಾಮನಾಕಾರವನು |
ಭೂಮಿಯಿಂದಾಕಾಶ | ಸೀಮೆವರೆಗಾವರಿಸಿದಾ |
ವಿಶ್ವದಾರಾಮದಿಂ ಹೊರಗೆ ತೋರ್ದ | ಏನೆಂಬೆ       || ೧ ||

ಎರಡು ಪಾದಗಳಿಡಲು | ಧರಣಿ ಸಾಕಾಗದಿರೆ | ಪರಮ ವಿಶ್ವಾಕಾರ |
ನರಿತೊಂದು ಪಾದವನು | ವರಮಹಾಧರೆ ಗಿರಿಸಿದಾ |
ಮತ್ತೊಂದು ಚರಣವನು ನಭಕಿರಿಸಿದ | ಏನೆಂಬೆ       || ೨ ||

ಮೂರನೆಯ ಚರಣಕಾ | ಧಾರವಿಲ್ಲದೆ ಹೋಗೆ | ನಾರಾಯಣನು ದಯಾ |
ಭಾರದಲಿ ಕರೆದೆಂದ | ತೋರಿಸೈ ಸ್ಥಳವೆನೆಂದು |
ಬಲಿಯು ತಾ ತೋರಿದನು ಶಿರವನಂದು | ಏನೆಂಬೆ    || ೩ ||