ವಿಷ್ಣುಲೀಲೆ

ಸೃಗ್ಧರಾ ವೃತ್ತ

ಶ್ರೀಕಾಂತಂ ಲೋಕನಾಥಂ ಪ್ರಕಟಿತನಿಗಮೋದ್ಧಾರನುದ್ದಾಮ ಭಕ್ತಾ |
ನೇಕಾಭೀಷ್ಟ ಪ್ರದಾತಂ ಬಲಿಭುಜ ಮಥನಂ ನಾರಸಿಂಹಂ ಮಹಾಕೂ |
ರ್ಮಾಕಾರಂ ಜಾಮದಗ್ನ್ಯಂ ದಶಶಿರಕುಲ ವಿಧ್ವಂಸನರ್ಹತ್ಸ್ವರೂಪಂ |
ಶ್ರೀಕೃಷ್ಣಂ ರಕ್ಷಿಸೆಮ್ಮಂ ಕಲಿಕಲುಷಹರಂ ಜ್ಞಾನ ವಿಜ್ಞಾನಗಮ್ಯಂ ||

ಭಾಮಿನಿ

ಶ್ರೀ ಗಜಾನನ ವಿಘ್ನನಾಶನ |
ಭೋಗಿಭೂಷನ ಸುತನೆ ವಿದ್ಯಾ |
ಸಾಗರನೆ ಪರಿಪೂರ್ಣ ಜಗದಾನಂದ ಕಾರಣನೆ |
ನಾಗಸುರನರ ಮುನಿಜನಸ್ತುತ |
ಭೋಗ ಭಾಗ್ಯಪ್ರದನೆ  ಭವಭಯ |
ರೋಗವೈದ್ಯನೆ ಪಾಲಿಸೈ ಶುಭಮತಿಯನೆಮಗಿತ್ತು     || ೧ ||

ಕಂದಪದ್ಯ

ವೀಣಾಪುಸ್ತಕಪಾಣಿಯೆ | ಗಾನ ವಿನೋದಿನಿಯೆ | ಕಮಲಯೋನಿಯ ಸತಿಯೇ |
ಜ್ಞಾನನಂದಪ್ರದೆ ಗೀ | ರ್ವಾಣಿಯೆ ಸುಡಿಸೆನ್ನ ರಸನೆಯೊಳ್ ಮಂಗಲಮಂ         || ೧ ||

ದ್ವಿಪದಿ

ಆದಿಕವಿ ವಾಲ್ಮೀಕಿ ವ್ಯಾಸರನುಸ್ತುತಿಸಿ ||
ವೇದಶಾಸ್ತ್ರ ಪುರಾಣ ಕೋವಿದರ ಸ್ಮರಿಸಿ      || ೧ ||

ಗುರುಹಿರಿಯರಂಘ್ರಿಗಳನೆನೆದು ಬರೆದಪೆನು ||
ಹರಿಯುಹತ್ತವತಾರಗೆಯ್ದ ಚರಿತೆಯನು       || ೨ ||

ಮತ್ಸ್ಯರೂಪದಿ ತೊಡಗಿ ಹರಿಕಲ್ಕಿಯಾಗಿ ||
ಪೃಥ್ವಿಯನು ಕಾಯ್ದನಾನಂದಮಯನಾಗಿ     || ೩ ||

ಸೂತವೈಶಂಪಾಯನರು ಪೇಳಿದುದನು ||
ನಾ ತಿಳಿದ ಯಕ್ಷಗಾನದಿ ವಿವರಿಸುವೆನು      || ೪ ||

ಕಿರಿದಾಗಿ ಹಿರಿದಾಗಿ ಮೆರೆವ ಹರಿಲೀಲೆ ||
ಒರೆಯಲಳವಲ್ಲವಾದರು ಬರೆವೆನಿಲ್ಲೇ         || ೫ ||

ದೋಷವಿರೆಬಲ್ಲವರು ತಿದ್ದಿ ಶರಣೆಂಬೆ ||
ದೋಷವಿಲ್ಲದ ಮನುಜ ಕೃತಿಯಾವುದೆಂಬೆ    || ೬ ||

ರಾಗ ಕಾಂಬೋದಿ ಝಂಪೆತಾಳ

ಸುರಮುನಿಗಳಿರ ಕೇಳಿ | ಸರಸಿಜಾಕ್ಷನು ಸಿರಿಯ | ಸರಿಸದಲಿ ಯೋಗನಿದ್ರೆಯನು ||
ಮರೆತು ಸೃಷ್ಟಿಸಿದನಾ | ಪರಮೇಷ್ಟಿಯನು ತನ್ನ | ವರನಾಭಿಕಮಲ ಮಧ್ಯದಲಿ     || ೧ ||

ಕರೆದಿತ್ತನಾತನಿಗೆ | ವರಸೃಷ್ಟಿಯಧಿಕಾರ | ಹರಗೆ ಪ್ರಳಯದ ಪಾರುಪತ್ಯ ||
ಇರಲಿ ತನಗೆಲ್ಲವನು | ಹೊರೆವ ಭಾರವೆನುತ್ತ | ಹರಿನಿರೂಪಿಸಿ ನಿದ್ರೆಗೈದ || ೨ ||

ಎನೆ ಹಸಾದವೆನುತ್ತ | ವನಜಪೀಠನು ರಜೋ | ಗುಣದಿಂದ ಸೃಷ್ಟಿಸಲ್ಕಾಗ ||
ಜನಿಸಿದರು ಘೋರರೂ | ಪಿನ ದನುಜರಿರ್ವರಾ | ವನಜಾಂಬಕನ ಕಿವಿಗಳಿಂದ     || ೩ ||

ರಾಗ ಮಾರವಿ ಏಕತಾಳ

ಏನಾಶ್ಚರ್ಯವು ಜಲವಲ್ಲದೆ ಮ | ತ್ತೇನನು ಕಾಣಿವಲಾ ||
ಈ ನೀರಿನೊಳೆಮ್ಮನು ಹೆತ್ತವರಾರ್ ? | ಕಾಣಲು ಬೇಕೀಗ      || ೧ ||

ಕಳವಳವೇಕೆಲೆ ಅಗ್ರಜ ನೋಡಾ | ಮಲಗಿಹನೋರ್ವಾತ ||
ಜಲಜಾಗ್ರದೊಳಿಹ ಮತ್ತೋರ್ವನು ಬಿಡು | ಹಳಚಲು ಬೇಕೀಗ   || ೨ ||

ತಡೆಯೇತಕೆ ನಡೆ ಹೊಡೆದೆಚ್ಚರಿಸುವ | ಜಡಧಿಯೊಳಡಗಿದರು |
ಬಡಕುರಿಯನು ತಿಂದಡಗಿಸಬೇಕೈ | ಒಡಲಿನ ಹಸುವೆಯನು    || ೩ ||

ಎಂದಾ ರಾಕ್ಷಸರೊಂದಾಗಿಯೆ ಘೋ | ಯೆಂದು ಬೆರಸಿ ಬರಲು ||
ನೊಂದಾ ಬ್ರಹ್ಮನು ಮಾಯೆಯನೆಬ್ಬಿಸಿ | ವಂದಿಸಿದನು ಹರಿಗೆ   || ೪ ||

ರಾಗ ಸುರುಟಿ ಏಕತಾಳ

ರಕ್ಷಿಸೆನ್ನ ದೊರೆಯೇ ಸರ್ವಾ | ಧ್ಯಕ್ಷ ನಿನ್ನ ಮರೆಯೆ |
ಭಕ್ಷಿಸಲೈತಹ ದನುಜಾಧಮರನು | ಶಿಕ್ಷಿಸಬೇಕೈ ಲಕ್ಷ್ಮೀಪತಿಯೆ  || ೧ ||

ಬಳಲದಿರೈ ಮನದಿ ಸೈರಣೆ | ಗೊಳುತಿರು ನಿರ್ಭಯದಿ |
ಖಳರಿರ್ವರ ಸಂಹರಿಸದೆ ಬಿಡೆನೈ | ಕಳವಳಿಸದೆ ನಿನ್ನೂಳಿಗನಡೆಸೈ      || ೨ ||

ಭಾಮಿನಿ

ಎನುತ ಮಾಯಾಮಹಿಮನಾಗಳೆ |
ಘನಪರಾಶಕ್ತಿಯನು ಧ್ಯಾನಿಸೆ |
ಕ್ಷಣದೊಳಾಕೆಯನೊಲಿಸಿ ದಿವ್ಯವರ ಪ್ರಸಾದದಲಿ ||
ಗಣಿಸಲರಿಯದ ಶಕ್ತಿಸಾಹಸ |
ಗುಣದಿ ಹೂಂಕರಿಸಿದನು ಸಮರಾಂ |
ಗಣಜಲಧಿಯೇ ಬತ್ತುವಂದದಿ ರಾಕ್ಷಸರ ನೋಡಿ        || ೧ ||

ರಾಗ ಭೈರವಿ ಏಕತಾಳ

ದಡಿಗರೆ ಗಜರುವಿರೇಕೆ | ನಮ್ಮೊಡನೆ ಕಾದುವಿರೆ ಜೋಕೆ |
ಕೆಡುಕನು ತಂದೊಡ್ಡುವಿರೆ | ತಲೆ ಕಡಿದಿಕ್ಕುವೆ ನಾ ಭಳಿರೆ        || ೧ ||

ಹೋಗಾಚೆಗೆ ನಿನ್ನುವನು | ತಿಂದು ತೇಗುವ ಮೊದಲಾತನನು |
ವೇಗದಿ ನುಂಗದೆ ಬಿಡೆವು | ಮಾ ಸಾಗರವನೆ ಕುಡಿದಪೆವು      || ೨ ||

ಎನುತಾ ದೈತ್ಯರು ನೆಗೆದು | ಬ್ರ ಹ್ಮನಿಗಿಟ್ಟರು ಗದೆಜಡಿದು ||
ವನಜಾಕ್ಷನು ಚಕ್ರವನು | ಭೋಂಕನೆ ತೆಗೆದೆಚ್ಚನು ತಾನು       || ೩ ||

ಸರಿಸಮ ಕಾದುತ್ತಿರಲು | ಹರಿ ಕರೆದೆಂದನು ದೈತ್ಯರೊಳು |
ವರಗಳ ನೀವೆನು ನಿಮಗೆ | ಮನದಿರವನು ಪೇಳಿರಿ ಎನಗೆ       || ೪ ||

ಬೇಡಲು ಬಂದಿಹೆವೇನೋ | ನೀ ಬೇಡಿಕೊ ಕೊಡುವೆವು ಕಾಣೋ |
ನೀಡಿರಿ ಚಕ್ರಕೆ ಶಿರವ | ಎಂದು ಬೇಡಿದನಾ ಹರಿ ವರವ          || ೫ ||

ಭಾಮಿನಿ

ಬಳಿಕ ಮಧುಕೈಟಭರು ಮಾಯಾ |
ಬಲವನರಿಯದೆ ನುಡಿದರವನೀ |
ತಳದೊಳಲ್ಲದೆ ಜಲದಿ ವಧಿಸಲು ಬಾರದೆನೆ ಖಳರು ||
ನಳಿನ ನೇತ್ರನು ಘೋರ ರೂಪವ |
ತಳೆದು ತೊಡೆಯೊಳಗಿಟ್ಟು ದೈತ್ಯರ |
ತಲೆಯನರಿದಾ ಮೇಲೆ ಮೇದಿನಿಯಾಯ್ತು ಜಲಧಿಯಲಿ || ೧ ||

 

ಮತ್ಸ್ಯಾವತಾರ

ರಾಗ ಮಾರವಿ ಏಕತಾಳ

ಬಳಿಕ ವಿಧಾತ್ರನ ಮುಖದಿಂದೊಗೆದುವು | ಬಲುವೇದಾದಿಗಳು ||
ಖಳ ಸೋಮಕನಾ ಬ್ರಹ್ಮನ ಬಳಿಯಿಂ | ಮುಳಿದೆದ್ದನು ಭರದಿ   || ೧ ||

ಜನಿಸಿದವೇಕೋ ನಾಲ್ಮೊಗದಿಂದಲಿ | ಘನತರ ಮೂರ್ತಿಗಳು ||
ಅಡಗಿಸಬೇಕೀ ವೇದಗಳಿದ್ದರೆ | ದನುಜರಿಗೆಡೆಯುಂಟೆ  || ೨ ||

ನಿದ್ರೆಯೊಳಿರುವಾ ಬ್ರಹ್ಮನ ಬಳಿಯಿಂ | ದೊಯ್ದಾವೇದಗಳ |
ಮಧ್ಯಸಮುದ್ರದೊಳದ್ದಲು ಬೇಕೆಂ | ದೊಯ್ದನು ಬಲು ಖೂಳ    || ೩ ||

ನಾರಾಯಣನದ ಕಾಣುತ ಮತ್ಸ್ಯಾ | ಕಾರವ ಕೈಕೊಂಡು |
ಸಾರಿದನಾ ಸತ್ಯವ್ರತನಾಶ್ರಯ | ಕಾರುಣ್ಯವ ಬೇಡಿ    || ೪ ||

ರಾಗ ಕೇತಾರಗೌಳ ಝಂಪೆತಾಳ

ಭಳಿರೇ ಏನಾಶ್ಚರ್ಯವು | ಜಲಪಾತ್ರೆ | ಯೊಳ ಹೊಕ್ಕ ಕಿರುಮತ್ಸ್ಯವು ||
ಬೆಳೆ ಬೆಳೆದು ನದಿನದಗಳ | ಆಕ್ರಮಿಸಿ ಜಲಧಿಯಿಂ ಮೇಲಾಯ್ತಲಾ       || ೧ ||

ಏನು ಮಾಯಾ ವಿದ್ಯೆಯೋ | ರಾಕ್ಷಸರು | ತಾನೆ ಗೈದ ಕುತಂತ್ರವೊ |
ಮೀನಾಗಿ ಬಂದೆನ್ನನು | ಪರಿಕಿಸಲು | ಶ್ರೀನಿವಾಸನೆ ಬಲ್ಲನು    || ೨ ||

ಎಂದು ಕಳವಳಿಸುತಿರಲು | ಹರಿನುಡಿದ | ನಿಂದಿಗೇಳನೆ ದಿನದೊಳು |
ಬಂದಪುದು ಪ್ರಳಯಕಾಲ | ಹಡಗೇರಿ | ನಿಂದು ರಕ್ಷಿಸುವುದೆಲ್ಲ   || ೩ ||

ಮಾಧವನ ಮತಿನಂತೆ | ಪ್ರಳಯ | ಬರ ಲೈದಿತಾ ನೌಕೆ ಮತ್ತೆ |
ಸಾಧನಗಳನು ತುಂಬಿದ | ನೃಪನದರೊ | ಳಾ ದಿನಂಗಳ ನೂಕಿದ        || ೪ ||

ರಾಗ ಶಂಕರಾಭರಣ ಮಟ್ಟೆತಾಳ

ಇತ್ತ ಕೇಳಿರೀ ಮಹಾತ್ಮೆ | ಮತ್ಸ್ಯ ರೂಪದಿಂದ ಹರಿಯು |
ಸಪ್ತಸಾಗರಗಳ ತುಂಬಿ | ಸುತ್ತ ನೋಡಿದ ||
ಗೊತ್ತು ಕಾಣದಿರಲು ಜಲವ | ನೊತ್ತಿ ಪಾತಾಳಕಿಳಿದ |
ದೈತ್ಯನ್ನು ಹಿಡಿದು ಮುಖದೊ | ಳೆತ್ತಿಕೊಂಡನು         || ೧ ||

ಏನಿದೇನು ಜಲವ ಮಿಕ್ಕ | ಮೀನಿದಾಶ್ಚರ್ಯವೈಸೆ |
ತ್ರಾಣವೆನಿತೊ ಕಾದಲಿರುವ ಸ್ಥಾನವೆಲ್ಲಿದೆ ||
ಕಾಣಬೇಕೆನುತ್ತ ಕೆಲಕೆ | ದಾನವೇಂದ್ರ ಸಾರುತಿರಲು |
ಶ್ರೀನಿವಾಸನವನ ಕಡಿದು | ಬೇನೆಗೊಳಿಸಿದ  || ೨ ||

ದುಷ್ಟತಮನೆ ವೇದಕುಲವ | ನಷ್ಟಗೊಳಿಸಲಿದೆಯಲ್ಲೊ |
ಸೃಷ್ಟಿಕರ್ತನಿಂಗೆ ಮೋಸಕೊಟ್ಟು ನಡೆದೆಲೋ ||
ಇಷ್ಟು ಸಹಸಬಂತೆ | ಕಾಲ | ಕಷ್ಟವಾಯ್ತೆನುತ್ತ ಖಳನ |
ಗಟ್ಟಿ ಹಿಡಿದು ಶಿರವನೊಡೆದು | ಹೊಟ್ಟೆ ಸೀಳಿದ         || ೩ ||

ತ್ರಿದಶರೆಲ್ಲ ಕೂಡಿ ನೋಡಿ | ಮುದದಿ ಸ್ತೋತ್ರ ಹಾಡುತಿರಲು |
ಪದುಮ ನೇತ್ರನಮಲವೇದ | ಗಳನುತೋರಿದ ||
ಹದುಳದಿಂದ ಸತ್ಯವ್ರತಗೆ | ಅಧಿಕ ಪದವನಿತ್ತು ತನ್ನ |
ಸದನಕೈದಲಾಯ್ತು ಜಗಕೆ | ವಿವಿಧ ಭಾಗ್ಯವು || ೪ ||

 

ಕೂರ‍್ಮಾವತಾರ

ಭಾಮಿನಿ

ಬಳಿಕ ಮಧು ಸೂದನನು ತ್ರಿದಶರ |
ಬಳಗವನು ಸಂತೈಸಿ ಭುವನಂ |
ಗಳನು ಪಾಲಿಸುತಿರಲು ಕಾಲಾಂತರಕೆ ವಿಧಿವಶದಿ ||
ಮುಳುಗಿತೈ ವಾರಿಧಿಯೊಳಮರರ |
ನಿಳಯದೈಸಿರಿ ಮುನಿಯ ಶಾಪದ |
ಬಲವದೆನಿತೋ ಎಂದು ಮರುಗುತ್ತಿರ್ದನಾಶಕ್ರ        || ೧ ||

ರಾಗ ನೀಲಾಂಬರಿ, ರೂಪಕತಾಳ
(ಅಕಟಕಟೀ ನಾಡಲಿ ಸುರನಿಕರಕೆ)

ಹರ ಹರ ಇನ್ನೇನ್ಮಾಡಲಿ | ಮರೆಯಾಯ್ತೆಮ್ಮಯ ಸಂಪದ |
ಬರುವಾ ಭಾಗ್ಯವ ಕಾಲಿಂ | ದೊರಸುತ ಕೆಟ್ಟನಲಾ ||
ವರಮುನಿಗಳ ಗಣಿಸದೆ ನಾ | ಗರುವ ದೊಳಾಂತೆನು ಶಾಪವ |
ಮುರಿಯಿತು ಮಾನವು ಸ್ವರ್ಗದ | ದೊರೆತನವೆನಗೇಕೆ || ೧ ||

ಯಾರಿಗೆ ಪೇಳಲಿ ಕಷ್ಟದ | ಭಾರವ ಹೊರುವವರಿಹರೇ |
ನಾರಾಯಣನಿದ ಕೇಳ್ದರು | ದೂರದೆ ಬಿಡನೆನುತ ||
ಭಾರಿ ಮನೋ ವ್ಯಥೆಯಲಿ ಜಂ | ಭಾರಾತಿಯು ಕರಗುತ್ತಿರೆ |
ನಾರದನೈತಂದನು ದನು | ಜಾರಿಯಸ್ಮರಿಸುತ್ತ        || ೨ ||

ಏನಿದು ಪುರುಹೂತನೆ ಬಗೆ | ಬೇನೆಯದಾರಿಂದಾಯಿತು |
ದಾನವರೇಂಗೈದರೋ ನುಡಿ | ನಾನರಿದಪೆನೆನುತ ||
ಜ್ಞಾನದೊಳೀಕ್ಷಿಸಿದನುಮತಿ | ಹೀನತೆಯಲಿ ಘನ ಮೌನಿಯ |
ಹೀನಯಿಸುತ ಪಡೆದಾ ಬಲು | ಹಾನಿಯೆನೆಲ್ಲವನು     || ೩ ||

ನಡೆದುದನೇ ಚಿಂತಿಸಿ ಮನ | ಮಿಡುಕಿದರೇಂ ಫಲವಿಹುದೈ |
ಕಡಲನು ಮಥಿಸುತ ಬೇಗನೆ | ಪಡೆಯೈಶ್ವರ್ಯಗಳ ||
ಕಡುಹಗೆಗಳ ಜತೆಗೂಡುತ | ಕಡೆಯಲು ಬೇಕದರಿಂದಲೆ |
ನುಡಿಯೈ ಹರಿಹರಂಘ್ರಿಗೆ | ಕೊಡುವರು ಸಮ್ಮತಿಯ   || ೪ ||

ವಾರ್ಧಿಕ

ಎಂದಾಗ ಮುನಿನಾರದೇಂದ್ರನಂ ಬೀಳ್ಕೊಟ್ಟು |
ಸಂದೇಹವಿರದೆ ಸುರ ಸಂದೋಹವಂ ಕೂಡಿ |
ಬಂದು ನುಡಿದಾ ಮುಕುಂದನನೇಮವಂ ಪಡೆದು ಅಂಧಕಾಂತಕಗೆ ತಿಳಿಹಿ ||
ಮುಂದೆ ನಡೆದಾ ದೈತ್ಯ ವೃಂದವಂ ನೋಡಿ ಬಗೆ |
ದಂದವಂ ಸೂಚಿಸಲು ವೃಂದಾರಕರ ಬಳಿಯೊ |
ಳೊಂದಾದರೈ ಕಾಲನೇಮಿವೃಷಪರ್ವ ಜಂಭಾದಿ ರಾಕ್ಷಸ ವೀರರು        || ೧ ||

ರಾಗ ದೇಶಿ ಅಷ್ಟತಾಳ
(ಏನಯ್ಯಾ ! ಇಂಥಾದೇನಯ್ಯ)

ಬಂದರು ನಡೆತಂದರು     || ಪಲ್ಲವಿ ||

ಬಂದರು ದೇವ ದಾನವರೊಂದುಗೂಡಿ |
ನಿಂದರು ಕ್ಷೀರ ಸಮುದ್ರದ ನೋಡಿ   || ಅನುಪಲ್ಲವಿ ||

ಎಳೆದು ತಂದಿಟ್ಟರು ಮಂದರಗಿರಿಯ | ಬಲದಲಿ ತಂದು ಸುತ್ತಿದರು ವಾಸುಕಿಯ |
ಬಲುಬಗೆ ದಿವ್ಯೌಷಧಿಗಳ ತಂದಿಕ್ಕಿ | ನಲಿದಾಡಿದರು ಮಹಾನಂದದೊಳುಕ್ಕಿ        || ೧ ||

ಏನೆಂಬೆನತಿಶಯ ಮಂದರಶೈಲ | ಆನೀರೊಳಿಳಿದು ಹೊಕ್ಕಿತು ಪಾತಾಳ |
ದಾನವಾಂತಕನೆದ್ದು ಕೂರ್ಮಾಕೃತಿಯನು | ತಾನೆತ್ತಿ ಹಿಡಿದನು ಪೊಗಳಲೇನದನು          || ೨ ||

ಹಿಡಿದರು ಫಣಿಯ ಮಸ್ತಕವನ್ನು ಸುರರು | ಹಿಡಿಯದಾದರು ಬಾಲವನ್ನು ರಾಕ್ಷಸರು |
ದಡಿಗರೆ ನಾವೇನು | ಬಲವಂತರಿರಲು | ಕಡುಹೀನರಾದೆವೆಂದಾರ್ಭಟ ಕೊಡಲು   || ೩ ||

ಶ್ರೀಲೋಲನಪ್ಪಣೆಯಾಗೆ ನಿರ್ಜರರು | ಬಾಲದ ಬಳಿಯೊಳೊಟ್ಟಾಗೆ ರಾಕ್ಷಸರು |
ತಾಳದೆ ಭೀತಿಯ ಹಿಡಿದರು ತಲೆಯ | ಕೀಳು ದುರ್ಜನರಲ್ಲಿ ನುಡಿವುದೆ ನ್ಯಾಯ    || ೪ ||

ಎಳೆದರು ಬಾಲವ ಸುರರೊಂದು ಕಡೆಗೆ | ಸೆಳೆದರು ದೈತ್ಯರು ತಲೆಯೊಂದು ಕಡೆಗೆ |
ಗಳಿಲನೆ ಸಾಹಸ್ರ ಫಣಿಗಳ ಜ್ವಾಲೆ | ಸುಳಿದು ಹಾಲಾಹಲವುಕ್ಕಿತು ಮೇಲೆ || ೫ ||

ರಾಗ ಮಾರವಿ ಏಕತಾಳ

ಮೊರೆ ಮೊರೆದೈತಹ ಗರಳವ | ಕಂಡಾ | ಭರದಿ ಸುರಾಸುರರು ||
ತರಹರಿಸದೆ ಹಿಂ | ಜರಿದೋಡಿದರಾ | ಪುರಹರನಿದ್ದೆಡೆಗೆ        || ೧ ||

ಹರ ಹರ ಗಂಗಾ | ಧರ ಮಾಹೇಶ್ವರ | ಗಿರಿಜಾವಲ್ಲಭನೆ |
ಉರಗಾಭರಣನೆ ಪರಿಪಾಲಿಸು ಎಂ | ದೆರಗಿದರಾತನಿಗೆ         || ೨ ||

ಕಂಡಾ ರುದ್ರನು | ಸುರದೈತೇಯರ | ತಂಡದೊಡನೆಬಂದು |
ಚಂಡಕರಾಗ್ರದಿ | ತೆಗೆದಾಪೋಶನ | ಗೊಂಡನು ದುರ್ವಿಷವ     || ೩ ||

ಕಡೆಯಲು ಮತ್ತಾ | ಕಡಲನು ಧಿರ್ರನೆ | ನಡುಗಲು ಮೂಲೋಕ |
ಜಡಜಾಕ್ಷನು ಕೈ | ಕೊಡಲಾ ಕೌಸ್ತುಭ | ಒಡನುದಿಸಿತು ಜಲದಿ   || ೪ ||

ಜನಿಸಿತು ಬಳಿ ಕಾ | ಘನ ಸುರಧೇನುವು | ವಿನುತ ಮಹಾಹಯವು |
ಕ್ಷಣದಿಂದೈರಾವತ | ಕಲ್ಪದ್ರುಮ | ವೆನಿತೋ ಸಂಭ್ರಮದಿ        || ೫ ||

ಪರಿ ಪರಿ ದಿವ್ಯಾ | ಭರಣದಿ ಶೋಭಿಪ | ತರುಣಿಯರುದಿಸಲ್ಕೆ ||
ಕರೆದಿತ್ತನು ಶ್ರೀ | ಹರಿಯೀಯೆಲ್ಲವ | ಸುರನಾಥನ ವಶಕೆ         || ೬ ||

ಕಂದ

ಗರಗರನೆ ಮಂದರಾಚಲ | ತಿರುಗುತ್ತಿರೆ ಚಂದ್ರನುದಿಸಿದಾ ಬಳಿಯಿಂದಂ ||
ಸಿರಿದೇವಿಯು ಮೈದೋರುತ | ಹರುಷದಿ ವರಿಸಿದಳು ಹರಿಯ ವೃಕ್ಷಸ್ಥಳವಂ        || ೧ ||

ರಾಗ ಶಂಕರಾಭರಣ ಮಟ್ಟೆತಾಳ

ಜನಪ ಕೇಳು ಮತ್ತೆ ಮಹಾ | ವನಧಿ ಮಥನಗೈಯುತಿರಲು |
ಜನಿಸಿತೈ ವಾರುಣಿಯು ಸುರಾಂ | ಗನೆಯ ರೂಪದಿ ||
ದನುಜರಾಗ ಸುತ್ತ ನಿಂದು | ಜುಣುಗಲೇಕೆ ಹಿಡಿರೆನುತ್ತ |
ಬಣಗುತನದಿ ಸೆಳೆದುಕೊಂಡ | ರೆನುವುದೇನದ        || ೧ ||

ಬಳಿಕ ತೋರಿತೈ ಸುಧಾಬ್ಧಿ | ಕಲಶವಾಂತು ದೇವ ವೈದ್ಯ
ಜಲಧಿಯಿಂದಲೆದ್ದು ಬಂದ | ಬಲು ವಿನೋದದಿ ||
ಭಳಿರೆ ಭಾಪು ಮಝರೆ ಬಿಡಿರಿ | ಕಲಶವನ್ನು ಮುಟ್ಟದಾಚೆ |
ತೊಲಗಿರೆಂದು ದನುಜರಿದಿರು | ಬಳಸಿ ಬಂದರು       || ೨ ||

ಕಂದ

ಅನಿತರೊಳಾ ಸುಮನಸರೋ | ಯೆನೆ ಜಯಜಯವೆಂದು ಪ್ರಾರ್ಥಿಸುತ್ತಿರೆ ವನಜೇ ||
ಕ್ಷಣನೊಯ್ಯನೆ ಬಂದಂ ಸುರ | ಗಣಿಕೆಯ ತೆರನಾಟ್ಯವಾಡುತಾ ಖಳರಿದಿರೊಳ್    || ೧ ||

ರಾಗ ಸಾರಂಗ ಅಷ್ಟತಾಳ
(ದೊರೆರಾಯ ಲಾಲಿಸಯ್ಯಾ)

ಇವಳಾವಳಯ್ಯ ನೋಡಿ | ಈ ಕಡೆ ಬಹ | ಯುವತಿ ಮನ್ಮಥನ ಜೋಡಿ ||
ಕುವಲಯ ನೇತ್ರೆ ವೈಯಾರಿ ಶೃಂಗಾರಿ ನ | ಮ್ಮವರೆಡೆಗೋಡಿ ಬರುವ ಚೆಂದನೋಡಿ       || ೧ ||

ದುಡುಕುವುದೇಕೆ ಮುಂದೆ | ಕೇಳುವ ಮುದ್ದು | ಕೊಡುವ ಮೆಲ್ನುಡಿಗಳಿಂದೆ |
ಕಡಲಗರ್ಭದಿ ಬಂದ ನೀರೆಯಾದರೆ ಲೇಸು | ಹಿಡಿದು ಸೇವಿಸಬೇಕು ಸುಧೆಯ ನಾವೀಗ     || ೨ ||

ದನುಜರ ನುಡಿಯ ಕೇಳಿ | ಬಂದಳು ಮುಂದೆ ಕುಣಿಕುಣಿದಾಡುತಲಿ ||
ಮನಸಿಜನಾನೆಯಂದದಿ ಮೋಹಿನಿದೇವಿ | ಯನಿಬರೊಳೆಂದಳು ಬಲು ಮೋಜು ಮಾಡಿ     || ೩ ||

ಬರಿದೆ ಹೋರಾಡದಿರಿ | ನೀವೊಟ್ಟಾಗಿ ಶರಧಿಯ ಮಥಿಸಿದಿರಿ |
ಸರಿಸಮನಾಗಿ ಸೇವಿಸಲು ಭಾಗಿಗಳಾಗೆ | ಪರಮ ಪೀಯೂಷ ಪಾತ್ರೆಯ ಮುತ್ತಲಹುದೊ   || ೪ ||

ಬಿಡು ಬಿಡಾಮಾತು ಬೇರೆ | ಸರ್ವವು ಸುರರೆಡೆಗಾಯಿತಲ್ಲೊ ನೀರೆ |
ಕಡೆಗೆ ಬಂದಮೃತವ ಬಿಡುವುದುಂಟೆ ಬಾಲೆ | ನಡುವೆ ನೀನಿಂತು ನಮ್ಮೆಡೆಗೆ ಬಡಿಸಬೇಕು   || ೫ ||

ರಾಗ ಪಂತುವರಾಳಿ ಮಟ್ಟೆತಾಳ

ಎನಲು ದೇವ ದೈತ್ಯರೆಲ್ಲ | ರೊಂದೆ ಮತದೊಳು ||
ಹೆಣಗದೆರಡು ಪಂಕ್ತಿಯಾಗಿ | ಕುಳ್ಳಿರೆಂದಳು ||
ದನುಜರಾಗ ಮೋಹದೃಷ್ಟಿ ಬಿಡದೆ ಕುಳಿತರು |
ಅನಿಮಿಷರ್ಕಳೆರೆದ ಸುಧೆಯನುಣುತಲಿರ್ದರು || ೧ ||

ನೋಡಿ ಮೆಲ್ಲನೆದ್ದು ಸುರರ | ಕೂಡಿಸವಿದನು |
ಖೋಡಿ ಸ್ವರ್ಭಾನುವೆಂಬ | ಹೇಡಿ ದೈತ್ಯನು ||
ಗೂಢವರಿತು ಹರಿಯು ಚಕ್ರ | ಹೂಡಲಿದಿರಿಗೆ ||
ರೂಢಿಯಾಯ್ತು ರಾಹುಕೇತು ನಾಮವವನಿಗೆ  || ೨ ||

ಭಾಮಿನಿ

ಈ ಪರಿಯೊಳಸುರಾಂತಕನು ಸ್ತ್ರೀ |
ರೂಪವನು ಮರೆಗೈದು ತನ್ನಸ್ವ |
ರೂಪವನು ತೋರಲ್ಕೆ ಕಣ್‌ತೆರೆಯಿತ್ತು ರಾಕ್ಷಸರ ||
ತಾಪವೇರಿತು ತಮ್ಮ ಮನದನು |
ತಾಪದುರಿಯಿಂದುಕ್ಕಿ ಬರುವಾ |
ಕೋಪದಲಿ ಕಲಿ ಕಾಲ ನೇಮಿಯು ನುಡಿದನಿಬರೊಳು ||         || ೧ ||

ರಾಗ ಕೇತಾರ ಅಷ್ಟತಾಳ

ಅರರೆ ಕೆಟ್ಟಿತು ಕಾರ್ಯವೆಲ್ಲವೂ | ಜ್ಞಾನ ಮರೆತು ಮೋಹದಿ ಬಿದ್ದು ಸೋತೆವು |
ಗರುಡಾರೂಢನ ಮಾಯೆಯಿದು ನೋಡಿ | ತ್ರಿದಶರ ಕೂಟ ಕೂಡಿ ಗೈದಾ ಮೋಡಿ  || ೧ ||

ಎಂದು ಭೋಂಕನೆ ಎದ್ದು ಬಂದನು | ದೇ | ವೇಂದ್ರಗಿದಿರು ನಿಂದು ಜರೆದನು |
ಮಂದ ಮತಿಗಳೊಂದು ಗೂಡುತ್ತ | ಸುರ | ವೃಂದವ ಕವಿದರು ಕನಲುತ್ತ || ೨ ||

ದಡಿಗನಾದೈ ಇಂದ್ರ ನಿಲು ನಿನ್ನ ತಲೆ | ಹೊಡೆದು ಬುದ್ಧಿಯ ಕಲಿಸುವೆ ಮುನ್ನ |
ಒಡಗೂಡಿ ನಾವೆಲ್ಲ ಮಥಿಸಿರೆ ನೀವೆ | ಪಡೆದು ಪೀಯೂಷವನುಂಡಿರೆ |    || ೩ ||

ಹೋಗು ಹೋಗಾಚೆಗೆ ಯೆಲೊ ಖೂಳ ಭಾಗ್ಯ | ಸಾಗಿ ಬಹುದೆ ದುಷ್ಟ ಜನಕೆಲ್ಲ |
ಯೋಗವಿಲ್ಲದೆ ಕಳಕೊಂಡಿರಿ | ಸುಧಾ ಭಾಗವ ಪಡೆಯದೆ ಜರೆವಿರಿ        || ೪ ||

ಹಿರಿಯರೆಮಗೆ ಮಾನವೀಯದೆ | ಸುಧೆ ಯೆರೆದು ಕೊಂಡಿರಿ ಧರ್ಮನೋಡದೆ |
ಮರೆವುದುಂಟೇ ನಿಮ್ಮ ಮೋಸವ | ಎಂದು ಸುರಿದನಿಂದ್ರಗೆ ದೈತ್ಯನಸ್ತ್ರವ || ೫ ||

ಹೋರಾಡಿದರು ಸಮ ಸತ್ವದಿ | ಓರ್ವ ರೋರುವರೊಂದೊಂದು ರೂಪದಿ |
ಕ್ರೂರ ಶಂಬರ ಜಂಭ ಮುಖ್ಯರು | ವಹ್ನಿ ಮಾರುತ ಮುಖ್ಯ ದಿಕ್ಪಾಲರು    || ೬ ||

ದೇವಕುಲದ ಸತ್ವ ಕುಂದಲೂ | ಲ | ಕ್ಷ್ಮೀ ವರನಂಘ್ರಿಯ ಜಪಿಸಲೂ |
ಕಾವನಯ್ಯನು ಚಕ್ರತಿರುಹಿಸಿ | ಬಿಟ್ಟ ನಾವಿರೋಧಿಗಳೆಡೆ ಹಾರಿಸಿ         || ೭ ||

ಭಾಮಿನಿ

ತಿರು ತಿರುಗಿ ಬಹ ಚಕ್ರದುರುಬೆಯ |
ತರಹರಿಸದಾ ದುಷ್ಟ ದನುಜರು |
ತೆರಳಿದರು ಕೆಲರಸುವ ಮರೆದರು ಕೆಲರು ಕಳಕಳಿಸಿ ||
ಹೊರಳಿದರು ಬಳಿ ಕಾಯ್ತು ಮಂಗಲ |
ಹರುಷದಿಂದಾಡುತ್ತ ಸ್ವರ್ಗವ |
ನಿರದೆ ಹೊಕ್ಕರು ದೇವತೆಗಳಚ್ಚುತನ ಕೊಂಡಾಡಿ      || ೧ ||

 

ಜಯ ವಿಜಯರ ವೃತ್ತಾಂತ

ಕಂದ

ಇತ್ತಲ್ ಸನಕಾದ್ಯರ್ ಪುರು |
ಷೋತ್ತಮನಡಿಯಂ ನಿರೀಕ್ಷಿಪಾಭರದಿಂದಂ ||
ಅತ್ಯಾನಂದದೊಳೈದುವ |
ಹೊತ್ತಿನೊಳಿದಿರಾಗಿ ಕಂಡರಾನಾರದನಂ     || ೧ ||