ಭಾಮಿನಿ

ವರವಿಭೀಷಣನೆಂದ ಮಾತಿನೊ |
ಳರಿತು ರಾವಣನೆದೆಯೊಳಿಹ ಸುಧೆ |
ಸುರಿದು ದಶಶಿರವುರುಳುವಂದದೊಳೆಚ್ಚನಾ ರಾಮ ||
ಭರದೊಳಾ ರಾವಣನು ವಿಶ್ವಂ |
ಭರನ ರೂಪವ ನೋಡಿ ವೈಷ್ಣವ |
ಶರಕೆ ದೇಹವ ತೆತ್ತನನಿಮಿಷನಿಕರ ನಲಿದಾಡೆ          || ೧ ||

 

ಕೃಷ್ಣಾವತಾರ

ರಾಗ ಕಾಂಬೋಧಿ ಝಂಪೆತಾಳ

ಭೂಮಿಪತಿ ಕೇಳ್ಬಳಿಕ | ದಾಮೋದರನು ಕೃಷ್ಣ | ನಾಮದಿಂ ಜನಿಸಲೀ ಜಗದಿ ||
ಆ ಮಹಾ ಕಂಸನೃಪ | ನಾಮಧುರೆಯಲಿ ದುಷ್ಟ | ನೇಮದಿಂದರ್ದನರಸಾಗಿ       || ೧ ||

ನಗಧರನು ದೇವಕಿಯ | ಮಗನಾಗಿ ಹುಟ್ಟಿತಲೆ | ತೆಗೆವನೆಂಬಾ ಮಾತ ಕೇಳಿ ||
ಅಗಣಿತ ಕುಮಾರಕರ | ಬಗಿದು ನೋಡಿದರು ಹಗೆ | ಸಿಗದಾಯಿತಲ್ಲ ಧರೆಯೊಳಗೆ || ೨ ||

ನಂದಗೋಕುಲದೊಳಿಹ | ನೆಂದು ತಿಳಿದಾ ಕಂಸ | ನೆಂದನಕ್ರೂರನನು ಕರೆದು ||
ನಂದಗೋಕುಲಕೈದಿ | ಚಂದದಲಿ ಕರೆದು ತಾ | ಕಂದರಹ ರಾಮಲಕ್ಷ್ಮಣರ         || ೩ ||

ಬರುವಾ ಚತುದರ್ಶಿಗೆ | ವರಬಿಲ್ಲ ಹಬ್ಬವನು | ಮೆರೆಸಬೇಕೈ ಮಹೋತ್ಸವದಿ ||
ಹರುಷದಿಂದೊರೆದು ಕರ | ತರುವಾಪ್ತರಲಿ ಶಿರೋ | ಭರಣ ನೀನಹೆ ನಮ್ಮ ಕುಲದಿ || ೪ ||

ಒಡೆಯ ! ನಿನ್ನಪ್ಪಣೆಯ | ನಡೆಸದಿರೆ ದ್ರೋಹಬಂ | ದಡಸುವುದೆನುತ್ತ ನೇಮವನು ||
ಪಡೆದನಕ್ರೂರ ತಾ | ಜಡಜಾಂಬಕನ ಸ್ಮರಿಸಿ | ನಡೆದನೈ ಕೃಷ್ಣನೋಲಗಕೆ         || ೫ ||

ರಾಗ ಮಾಧ್ಯಮಾವತಿ ತ್ರಿವುಡೆತಾಳ
(ವೀರ ದಶರಥ ನೃಪತಿ ಇನಕುಲ)

ಬಂದು ಮಣಿದಕ್ರೂರನನು ಗೋ | ವಿಂದ ತಾಬಿಗಿಯಪ್ಪಿಕೊಂಡಾ |
ನಂದದಲಿ ಕೇಳಿದನು ಗುರು ಬುಧ | ಬಂಧು ಬಾಂಧವರೆಲ್ಲರೂ | ಸುಖವೆ | ಎನುತ || ೧ ||

ದೇವ ! ನೀ ಸರ್ವೇಶನಾಗಿರೆ | ಭೂ ವಿಚಾರವನೆಲ್ಲ ತಿಳಿದಿರೆ |
ಈ ವಿನೋದಗಳೇಕೆ ನಿನ್ನೊಡ | ನಾವುದನು ವಿಸ್ತರಿಸಲೀ | ತಿಳಿಯದೆನಗೆ || ೨ ||

ಆದರೊರೆದಪೆನೈ ! ಚತುರ್ದಶಿ | ಯಾದಿನದೊಳಿದೆ ಬಿಲ್ಲಹಬ್ಬವು |
ಭೇದವಿಲ್ಲದೆ ಕರೆಯಲಟ್ಟಿದ | ನಾದುರಾತ್ಮನು ಕಂಸನು | ಎನ್ನನೀಗ       || ೩ ||

ಲೇಸು ಲೇಸಾಯ್ತಯ್ಯ ! ಬಹಳವಿ | ಲಾಸ ವೈತಹೆವೈಸೆ ಭಕ್ತರೊ |
ಳೇಸುಧನ್ಯನೊ ! ನೀನು ದುಷ್ಟನಿ | ವಾಸದಲಿ ಶ್ರೀಗಂಧದ | ಗುಣದೊಳೆನುತ      || ೪ ||

ಭಕ್ತರೊಳಗುತ್ತಮನು ಶುದ್ಧಚ | ರಿತ್ರ ನಿನ್ನಾದರ್ಶನದಿ ಸುಖ | ವಾಯ್ತು ನಡೆ
ಹೋಗುವರೆ ಸಿದ್ಧವೆ | ನುತ್ತ ಹೊರಟನು ರಾಮನ | ಕೂಡಿಕೊಂಡು        || ೫ ||

ರಾಗ ಕೇದಾರಗೌಳ ಅಷ್ಟತಾಳ

ಮರುಗಿ ಕೊಂಡೈತಹ | ತರುಣಿಯರಿಗೆ ಧೈರ್ಯ | ವೊರೆದು ವಿನೋದದಿಂದ ||
ಸರಿಯುತಿರಲು ಕೃಷ್ಣ ತೋರ್ದನಕ್ರೂರಗೆ | ವರ ವಿಶ್ವರೂಪವನು          || ೧ ||

ಬಂದನು ಮಧುರೆಗಾ | ನಂದದಿ ರಜಕನ | ಸಂಧಿಸಿ ಕುಂಬುಜೆಯನು ||
ಚಂದದಿ ತಿದ್ದುತ | ಮುಂದರಿದನು ರಾಜ | ಮಂದಿರವಿದ್ದೆಡೆಗೆ     || ೨ ||

ಬಾಗಿಲೊಳಿದಿರಾಗಿ | ಕುವಲಯಾಪೀಡವೆಂ | ಬಾಗಜ ಮದವುಕ್ಕುತ ||
ಬೀಗುತ್ತ ಬರುತಿ | ರುವಾಗ ಮುಕುಂದನೆ | ಸಾಗಿ ಕೊಂದಿಕ್ಕಿದನು         || ೩ ||

ರಾಗ ಪಂತುವರಾಳಿ ಮಟ್ಟೆತಾಳ

ದುಷ್ಟ ಬಾಲರೇ ! ವಿರೋಧ | ಕಟ್ಟಿ ಪೋಪಿರೇ ||
ತಟ್ಟೆ ನೆಮ್ಮ ಮುಟ್ಟಿಯುದ್ಧ ಕೊಟ್ಟು ನಡೆಯಿರೇ ||
ಶ್ರೇಷ್ಠರಾದಿರೇನು | ಬಹಳ | ಇಷ್ಟವೆನ್ನುತ ||
ಮುಷ್ಟಿಕಾದ್ಯರಿದರು ನಿಂದ | ರೊಟ್ಟುಗಜರುತ || ೧ ||

ಎನಲು ರಾಮಕೃಷ್ಣರವರ | ಘನತೆ ಕಂಡರು ||
ಕುಣಿದು ಹಾರಿ ಕಟ್ಟಿ ಸೆರಗ | ಕಣಕೆ ಬಂದರು ?
ಎನುವುದೇನಗಾಧ ಸತ್ವ | ಗುಣದಿ ಹೊಯ್ದರು ||
ದಣಿದು ಜಟ್ಟಿ ಜನರು ಪ್ರಾಣ | ಹೆಣಗಿಕೊಟ್ಟರು          || ೨ ||

ಬಳಿಕ ಕೃಷ್ಣ ಕಂಸನೇರಿ | ಕುಳಿತ ಪೀಠದ ||
ಬಳಿಗೆ ಬಂದುನಿಂದು ಕೈಯ | ಚಳಕ ತೋರಿದ ||
ಗಳಿಲನಾರ್ದು ಕಂಸ ಮಹಾ | ಬಲರೆ ! ಬಂದಿರೇ ? ||
ಕೊಲದೆ ಬಿಡೆನು ಕರುಳಮಾಲೆ | ಸೆಳೆವೆ ನೋಡಿರೆ     || ೩ ||

ಭಾರಿ ಸದರವೇನೊ ನಮ್ಮೊ | ಳೇರಿ ಬರುವುದೇ ||
ತೇರು ಗೂಳಿಯನ್ನು ಮುರಿದ | ದಾರಿ ಬೇರಿದೆ ||
ದಾರಿಯಿದುವೆ ಮಾರಿಮಸಣ | ಸೇರಿ ಹೋಹುದೇ ? |
ತೋರು ಸತ್ವವೆಂದನಾ ಮು | ರಾರಿ ವೇಗದೇ         || ೪ ||

ಭಾಮಿನಿ

ದುರುಳ ಕಂಸನ ಕೊಂದಮೇಲ್ ಯದು |
ವರರಿಗಭಯವನಿತ್ತು ಕೃಷ್ಣನು |
ಶರಧಿಯಲಿ ಪಟ್ಟಣವ ನಿರ್ಮಿಸಿ ಸುಖದೊಳಿರುತಿರಲು ||
ಪರಮ ಧಾರ್ಮಿಕನಾ ಯುಧಿಷ್ಠಿರ |
ವಿರಚಿಸಿದನಾ ರಾಜಸೂಯಾ |
ಧ್ವರ ಸಮಾಪ್ತಿಯ ಕಾಲದೊಳು ಗಾಂಗೇಯಗಿಂತೆಂದ  || ೫ ||

ರಾಗ ಸಾಂಗತ್ಯ ರೂಪಕತಾಳ

ಅಜ್ಜಯ್ಯ ! ಕೇಳಗ್ರಪೂಜೆಗೆ ತಕ್ಕಂಥ | ಪ್ರಾಜ್ಞರಾರಿ ಸಭೆಯೊಳಗೆ ||
ದುರ್ಜಯರಾಗಿಹ ರಾಜರ ಮಧ್ಯದಿ | ಪೂಜ್ಯರೆನ್ನಿಸೆ ಕಷ್ಟವಲ್ತೇ   || ೧ ||

ಸರ್ವಶಾಸ್ತ್ರವ ಬಲ್ಲ | ಸರ್ವಜ್ಞ ನೀನಿರೆ | ಪೂರ್ವಜನೆಂದು ಕೇಳುವೆಯಾ ? ||
ಸರ್ವ ಶಕ್ತನು ಕೃಷ್ಣ | ನೋರ್ವನಿರಲುಮತ್ತೆ | ಇರ್ವರುಂಟೆ ? ಸಭೆಯೊಳಗೆ         || ೨ ||

ದೇವವೃಂದದಿ ಮಹಾ | ದೇವನು ಆದ್ಯಂತ | ವಾವುದಿಲ್ಲದ ಪರದೈವ ||
ಕಾವಕರ್ತನು ಭಕ್ತಿ | ಗೀವನಂತರ್ಯದಿ | ತಿವಿಕೊಂಡಿಹನು ಸರ್ವತ್ರ      || ೩ ||

ಎನಲೆದ್ದು ಸಹದೇವ | ಘನಪೀಠಾಗ್ರಕೆ ತಂದು | ವಿನಯದೊಳೆತ್ತಿ ಕುಳ್ಳಿರಿಸಿ ||
ವನಧಿ ಶಾಯಿಯ ಪೂಜೆ | ಯನುಗೊಳಿಸಲ್ಕೆ ತಾ | ಕನಲುತೆಂದನು ಶಿಶುಪಾಲ   || ೪ ||

ರಾಗ ಭೈರವಿ ಏಕತಾಳ

ಮರುಳಾದೆಯ ಸಹದೇವ ? ನೀ-ಮುರಿದೈ ನೃಪರಾಳ್ತವನ ||
ದೊರೆಗಿರಲು ಸನ್ಮಾನ | ಆ – ದುರುಳಗೆ ಕೊಡಬಹುದೇನು ?   || ೧ ||

ನೀರಲಿ ಜನಿಸಿದನೀತ | ನೀ – ರ್ನೆರವಿನೊಳಿರುವನು ಆತ |
ಓರೋರ್ವರಿಗಿದೆ ಜೋಡಿ | ನೀ-ಕೋರೈಸಿದೆಯೆಲಾ ಖೋಡಿ    || ೨ ||

ನಗೆಗೆಡೆ ಮಾಡಿದೆಯಲ್ಲಾ | ಈ – ಬಗೆಯಿಂ ಸದ್ಗತಿ ಸಲ್ಲ |
ಸುಗುಣರು ಪಾಂಡವರೆನುತ | ಈ – ಜಗವೆಂಬಾ ನುಡಿ ವ್ಯರ್ಥ  || ೩ ||

ಕಾಗೆಯು ಹಂಸಕೆ ಸರಿಯೆ ? ಮೇಣ್ – ಗೂಗೆಯ ಖಗಪತಿಗೆಣೆಯೇ ?
ಈ ಗೊಲ್ಲನು ಪೀಠವನು | ಏ – ರ್ದಾಗಳೆ ನಮಗೆಣೆಯೆನು ?    || ೪ ||

ಗುರುಹಿರಿಯರೊ ಕ್ಷತ್ರಿಯರೋ | ಮುನಿ-ವರರೋ ಸುಜ್ಞಾನಿಗಳೋ |
ಇರುತಿರೆ ಕಳ್ಳನಿಗಿಂತು | ಕೊಡು – ವರೆ ಪೂಜೆಯ ಹುಲು ಭ್ರಾಂತು       || ೬ ||

ಎನುತ ಕರೂಶಾಧಿಪನು | ಭೋಂ-ಕನೆ ಎದ್ದಾ ಕೃಷ್ಣನನು |
ಠೊಣೆಯಲು ಮುಂದರಿಯಲ್ಕೆ | ಶಂ-ತನಸುತನೆಂದನು ಕ್ಷಣಕೆ  || ೬ ||

ಭಾಮಿನಿ

ಮರುಳೆ ಕ್ಷತ್ರಿಯರಾಯರಿರ ಮುಂ |
ದರಿದು ಜರೆಯುವಿರೇಕೆ ಕೃಷ್ಣನ |
ಚರಿತೆಯನು ಬಣ್ಣಿಸಲು ಫಣಿಪತಿಗಾದರಸದಳವು ||
ತರಳತನದಲಿ ಶಕಟ ಮುಖ್ಯರ |
ತರಿದು ಕಂಸನ ಮುರಿದು ಸುಜನರ |
ಪೊರೆವ ಶ್ರೀ ಪರಮಾತ್ಮನಲಿ ನಿಮಗಹಿತವೇ ಎಂದ    || ೧ ||

ರಾಗ ಮಾರವಿ ಅಷ್ಟತಾಳ
(ಜಾಣನಹುದಹುದೋ ರಾಘವ)

ವೀರನೈ ಭಳಿರೆ ! ಕಳ್ಳರೊಳತಿ – ಧೀರನೈ ಭಳಿರೆ |
ವೀರನಹುದು ಗೊಲ್ಲ | ಕೇರಿಯ ಮನೆ ಮನೆ | ಯಾರಿಲ್ಲದಾಗ ಹೊಕ್ಕು |
ಬೆಣ್ಣೆಯ ಮೆದ್ದ -ಚೋರನಿಂಗೇನು ಸೊಕ್ಕು | ಹೆಂಗಳ ಮುಂದೆ –
ತೋರಲು ಬಲ್ಲೆ ಠಕ್ಕು | ವೀರನೈ    || ೧ ||

ಮಡಿಕೆ ಕುಡಿಕೆ ಯೊಡೆವುದಕೆ | ಹೆಂಗ-ಳೊಡನೆ ಹೋರಾಡಿಗೆಲ್ವುದಕೆ |
ಮಡದಿಯರಪಹಾಸ್ಯ | ವುಡುವ ಸೀರೆಯ ಕದ್ದು | ಹೊಡೆತವನುಂಬುದಕೆ |
ಜಾರೆಯರೊಡ-ನಡಗಿ ಕೊಂಡಾಡಲಿಕೆ |
ಕಲ್ತುದು ಎಲ್ಲ-ನಡೆಯದೆಮ್ಮೊಡನೆ ಜೋಕೆ | ವೀರ      || ೨ ||

ನೀತಿನ್ಯಾಯಗಳುಂಟೆ ನಿನೆಗೆ | ಕುಲಜಾತಿ ಧರ್ಮವ ಬಿಟ್ಟನಗೆ |
ಪಾತಕ ಕೃತ್ಯದಿ ಮಾಯೆ ಮಾಟಗಳಿಂದ | ಸ್ವಾತಿಶಯವ ಪಡೆದೈ |
ನೀರೊಳು ಮನೆ – ಭೀತಿಯಿಲ್ಲದೆ ಕಟ್ಟೆದೈ | ವೀರ      || ೩ ||

ಭಾಮಿನಿ

ಸಾಕ ಮಾಡೆಲೆ ಚೈದ್ಯ ಮಾತಿನೊ |
ಳೇಕೆ ತಪ್ಪನು ಗೈವೆ ಸುಡುಸುಡು |
ಈ ಕುಬುದ್ಧಿಗೆ ಸೈರಿಸಿದೆ ನಾನಿತ್ತ ನುಡಿಯಂತೆ ||
ಸಾಕೆನಿಸಿದರೆ ಮತ್ಸ್ಯ ಮೊದಲಾ |
ದಾಕೃತಿಯೊಳಸುರಾವಳಿಯ ತರಿ |
ದಾ ಕಥೆಯ ನಾ ಮೆರಸದಿರೆನೆಂದನು ಮುರಧ್ವಂಸಿ    || ೧ ||

ರಾಗ ಸೌರಾಷ್ಟ್ರ ತ್ರಿವುಡೆ ತಾಳ

ಅಷ್ಟರೊಳಗಾ ದಂತವಕ್ರನು | ವಿಷ್ಟರನೇರಿದೊಡೆ ಶಾಶ್ವತ |
ಪಟ್ಟಬಂತೇ ಮರಣವಾರಿಗೆ | ತಟ್ಟಿತೆಂದ      || ೧ ||

ಮಾನಬಿಟ್ಟ ನೃಪಾಲರಿಂಧರೆ | ಗೇನು ಚಂದವೊ ? ನ್ಯಾಯಪಾಲನೆ |
ಗಾನು ಹೋರದೆ ಬಿಡೆನು ಕೃಷ್ಣನ | ತ್ರಾಣ ನೋಳ್ಪೆ     || ೨ ||

ಚೈದ್ಯನೆಂದನು ಕ್ರೋಧದಲಿ ಹರಿ | ಯಿದ್ದ ತಾಣಕೆ ನೆಗೆದು ಸಭೆಯಲಿ |
ಬುದ್ಧಿ ಕೆಟ್ಟವರಾರು ? ಕೊಲುವಾ | ರುದ್ರನಹೆಯಾ ?    || ೩ ||

ನೀರೊಳಗೆ ಮೀನಾಗಿ ಬಹೆಯಾ ? | ಕೂರುಮನೊ ? ವಾರಾಹನೊ ? ತೆಗೆ |
ನಾರಸಿಂಹನೆ ಬಂದರರಿವೆನು | ಬಾರಿಸಲ್ಕೆ   || ೪ ||

ಸುಡು ಸುಡೆಲೊ ವಟುವಾಗಿ ಬಲಿಯನು | ಕೆಡಹಿದೆಯೆಲಾ ? ತಾಯತಲೆಯನು
ಕಡಿದ ಪಾಪಿಯೆ ! ಕ್ಷತ್ರಿಯರಿಗೇ | ಕೊಡಲಿಯಾದೈ     || ೫ ||

ನಾಡನುಳಿದಾ ಹೇಡಿ | ಕಪಿಗಳ | ಕೂಡಿಕೊಂಡಾಖೋಡಿ ! ವಾಲಿಯ |
ಮೋಡಿಯಲಿ ಗೆಲಿದಂಥ ಮೋರೆಯ | ನೋಡಲಹುದೇ ?        || ೬ ||

ಇಂತೆನಲು ತಾನಿತ್ತ ಭಾಷೆಯು | ಸಂತೆನುತ್ತಾ ಕೃಷ್ಣನನಿಬರ |
ಸಂತಯಿಸುತಿದಿರೆದ್ದನಾಗ ಕೃ | ತಾಂತನಂತೆ          || ೭ ||

ಫಡ ದುರುಳ ದುಷ್ಟಾತ್ಮರಿರ ! ಬಾ | ಯ್ಬಡಿದು ಏನೇನೊದರುವಿರೆಲಾ |
ಮಡಿವ ಕಾಲವಿದೆಂದು ತಳಿಗೆಯ | ಹಿಡಿದು ನಿಂದ      || ೮ ||

ಎತ್ತಿ ಬಿಸುಟಾಭರಕೆ  ಪೂಜಾ | ಪಾತ್ರೆಯೇ ಹರಿಚಕ್ರವಾಗಿಯೆ |
ಕತ್ತರಿಸಿ ಹಾರಿತ್ತು ಚೈದ್ಯನ | ಮಸ್ತಕವನು     || ೯ ||

ಭಾಮಿನಿ

ದೇವ ವಾದ್ಯಗಳೆಲ್ಲ ಮೊಳಗಲು |
ದೇವ ಮುನಿಗಳು ಸಹಿತ ಕೃಷ್ಣನ |
ಪಾವನಂಘ್ರಿಯ ಸ್ಮರಿಸಲಾಯ್ತಾ ಯಾಗ ಸಂಪೂರ್ಣ ||
ಭೂವಲಯದಲಿ ಶಾಂತಿಯೊದಗ |
ಲ್ಕಾ ವಿರೋಧಿಗಳನ್ನು ಮುರಿದಾ |
ದೇವ ದೇವನು ಕೃಷ್ಣಲೀಲೆಯ ತೋರಿ ಮರೆಯಾದ    || ೧ ||

 

ಬೌದ್ಧಾವತಾರ

ರಾಗ ಕೇತಾರಗೌಳ ಅಷ್ಟತಾಳ

ಧಾರಿಣೀಶ್ವರನೆ ಕೇ | ಳಾರಮಾಧವನು ಸಂ | ಹಾರಗೈಯಲು ಖಳರ ||
ತೋರಿದನೈ ಬೌದ್ಧಾ | ಕಾರವ ತನ್ನ ಶ | ರೀರದಿಂದಳವಡಿಸಿ    || ೧ ||

ಕರೆದು ಪೇಳಿದನು ತ್ರಿ | ಪುರರ ಪಟ್ಟಣಕಾಗಿ | ತೆರಳಿ ವೇದಾದಿಗಳ ||
ಜರೆದು ನಾಸ್ತಿಕ ತತ್ವ | ವರುಹಲು ಬೇಕಯ್ಯ | ದುರುಳರ ವಧೆಗೋಸುಗ  || ೨ ||

ಎಂದು ಮಾಯಾವಿದ್ಯೆ | ಯಂದವ ಬೋಧಿಸ | ಲಂದು ಶಿಷ್ಯರ ಕೂಡುತ ||
ಬಂದಿಳಿದನು ತ್ರಿಪು | ರೇಂದ್ರನ ಪಟ್ಟಣ | ದೊಂದು ನಿವೇಶದಲಿ || ೩ ||

ಭಾಮಿನಿ

ಹರಿದ ಬಟ್ಟೆಯ ಕರದ ಪಾತ್ರೆಯ |
ಧರಿಸಿದತಿಶಯ ಮುನಿಯ ರೂಪದಿ |
ಕರೆ ಕರೆದು ಬೋಧಿಸಿದನಾ ಪಾಷಂಡ ಧರ್ಮವನು ||
ಮೆರೆಯದಿರಲಾ ವಿದ್ಯೆ ಮಾಯಾ |
ದರುಶನವು ಹರಭಕ್ತರೆಡೆಯಲಿ |
ಹರಿಯ ನೇಮದಿ ಬಂದನಾ ನಾರದನು ತತ್ಪುರಕೆ      || ೧ ||

ರಾಗ ಕಾಂಬೋಧಿ ಝಂಪೆತಾಳ

ನಾರದನ ನೋಡಿ ಮುದ | ವೇರಿ ತ್ರಿಪುರೇಶ್ವರನು | ವೀರಾಸನದಲಿ ಕುಳ್ಳಿರಿಸಿ ||
ಸ್ವಾರಿಯೆತ್ತಣದು ನ | ಮ್ಮೂರಿಗೈತಂದ ಹೊಸ | ವಾರತೆಯನರುಹಬೇಕಂದ       || ೧ ||

ಅರಿಯದಾಯಿತೆ ? ಮಹಾ | ಪುರುಷರಹ ಯೋಗಿಗಳು | ಭರದೊಳಿಲ್ಲಿಗೆ ಬಂದ ಸ್ಥಿತಿಯೆ ||
ದರುಶನವಗೈದು ಸ | ಚ್ಚರಿತನಾಗಲು ಪುಣ್ಯ | ದೊರೆವುದೆಂದನು ದೇವಋಷಿಯು  || ೨ ||

ಎನಲು ದೈತ್ಯೇಂದ್ರನಾ | ಮುನಿಯ ಹತ್ತಿರಕೈದಿ | ಮಣಿದೆಂದನರುಹನಾ ಪದಕೆ ||
ಘನ ನೀತಿ ತತ್ವ ಬೋ | ಧನೆಯಿಂದಲೆಮ್ಮವರ | ಜನುಮ ಸಾರ್ಥಕಗೈವುದೆಂದ   || ೩ ||

ದನುಜರಿರ ಕೇಳಿರೈಕ್ಷಣಿಕವಾಗಿರೆ ಲೋಕ | ಬಣಗು ದೈವವ ನಂಬಲೇಕೆ ? ||
ಎನುವೆನಷ್ಟಾಂಗ ಜೀ | ವನ ಮಾರ್ಗದಲಿ ಸೌಖ್ಯ | ವನುಭಸಿರೆಂದನಾ ಯತಿಯೂ || ೪ ||

ಭಾಮಿನಿ

ಮತ್ತೆ ದಾನವರೆಲ್ಲ ಮಾಯಾ |
ಶಾಸ್ತ್ರಗಳ ಪಠಿಸುತ್ತ ದೈವದ |
ಭಕ್ತಿವಿರಹಿತರಾಗಿ ನಾಸ್ತಿಕವಾದವನೆ ಹಿಡಿದು ||
ಮತ್ತರಾಗಿರಲಿತ್ತ ಪರಶಿವ |

ನಿತ್ತನಾಜ್ಞೆಯ ಸುರಸಮೂಹಕೆ |
ಮುತ್ತಿ ತ್ರಿಪುರರ ಪಟ್ಟಣವ ಹುಡಿ ಮಾಳ್ಪುದೆಂದನುತ   || ೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿ ತಾಪಸರಿತ್ತಲಾ ಖಳ | ಜಾಲದೊಡನಾ ತಾರಕಾಕ್ಷನು |
ಕಾಳ ರಾತ್ರಿಯೊಳೆದ್ದು ನುಡಿದನು | ಓಲಗದಲಿ          || ೧ ||

ಸೋಲದಲಿ ಬೆಂಡಾಗಿ ಸ್ವರ್ಗದ | ಬಾಳುವೆಯ ನೀಡಾಡಿ ತ್ರಿದಶರ |
ಜಾಲವೇ ಮೊರೆಯಿಟ್ಟುದೈ ಕಂ | ಕಾಳ ಧರಗೆ || ೨ ||

ಬಂದ ಬಹುಭಂಗಗಳ ತಾಬಗೆ | ದಂದು ಸುರರ ಸಮೂಹದೊಡನೈ |
ತಂದನಿಲ್ಲಿಗೆ ಸಮರಕೆನುತಾ | ಇಂದುಧರನು || ೩ ||

ಬರಲಿ ಸಮರಕೆ ಮೃತ್ಯುಹರನೇ | ಮೆರೆಸಬಲ್ಲನೆ ? ವಿಜಯವೆಮ್ಮಾ |
ಕರತಳದೊಳಿರೆ ಮೃತ್ಯು ಬ್ರಹ್ಮನ | ವರಬಲದಲಿ       || ೪ ||

ಎನುತ ಕೊನೆಮೀಸೆಯನು ತಿರುಹುತ | ದನುಜನೈದಿದನಸ್ತ್ರಶಸ್ತ್ರದ |
ದೊಣೆಯನೇರಿಸಿಕೊಂಡು ರಾಕ್ಷಸ | ಗಣವನೆರಹಿ       || ೫ ||

ರಾಗ ಮಾರವಿ ಏಕತಾಳ

ಹರನಾಗಳೆ ಸುರ | ಗಿರಿ ಚಾಪವ ಝೇಂ | ಕರಿಸಲು ಮೂಲೋಕ ||
ತಿರುಗಿತು ತಿರ್ರನೆ | ದುರುಳರ ತ್ರಿಪುರವು | ಭರದಿಂದೊಡಗೂಡೆ || ೧ ||

ಮತ್ತಾ ಹೂಂಕೃತಿ | ವೆತ್ತು ಬಲಿದಕೈ | ಯೆತ್ತಲು ಗಗನದಲಿ ||
ಮುತ್ತಿತು ಹೊಗೆ ಕಾ | ರ್ಗತ್ತಲೆ ಸಾಗರ | ವತ್ತಿತು ನೀರಸದಿ     || ೨ ||

ತಾರಕ ಸುತನಿಂ | ತಾರೌದ್ರವ ಕಂ | ಡೇರಿದ ಕ್ರೋಧದಲಿ ||
ಕಾರುತ ಕೆಂಗಿಡೆ | ಘೋರಾಕಾರದೊ | ಳಾರುಭಟಿಸುತೆಂದ     || ೩ ||

ಸ್ಮರಹರನಿತ್ತಲು | ಬರುವಸುರರ ಕಂ | ಡುರಿಯುಗುಳುತ ಬೇಗ ||
ಮುರಹರನನು ತಾ | ಪರಿಕಿಸಿ ಬ್ರಹ್ಮನ | ಕರೆದೆಚ್ಚರಿಸಿದನು      || ೪ ||

ಕ್ರೂರದನುಜರೇಂ | ಕಾರುವಿರೇ ಛಲ | ಬಾರದು ಜಯ ನಿಮಗೆ ||
ಭೋರನೆ ಹಿಂದಕೆ | ಸಾರಿರಿ ಎನಲಾ | ತಾರಕ ಸುತನೆಂದ      || ೫ ||

ರಾಗ ಕೇತಾರಗೌಳ ಝಂಪೆತಾಳ

ಹರ ಹರಾ ! ಇದು ಚೋದ್ಯವು | ನಮ್ಮೊಡನೆ – ದುರಕೆ ನೀವ್ ಬಂದ ಪರಿಯೂ ||
ಸರುವೇಶನಾಗಿ ಜಗಕೆ | ಸುರಪಕ್ಷ – ವೆರಸಿನಡೆತಹುದೆ ಹೀಗೆ   || ೧ ||

ನೀತಿ ನ್ಯಾಯವ ಶೋಧಿಸೆ | ನಿಷ್ಪಕ್ಷ-ಪಾತವೇ ನಮ್ಮದೈಸೆ |
ಪಾತಕಿಗಳಾಗೆ ನೀವು | ಬಲ ಸಹಿತ – ವೈತಂದೆವಿಲ್ಲಿಗಾವು      || ೨ ||

ಹಿರೆಭಾಗದೊಡೆತನವನು | ತ್ರಿದಶರಿಗೆ – ಕರೆದಿತ್ತ ನ್ಯಾಯವೇನು ?
ಮರಣವಿರದಂತೆ ಗೈದು | ನಮ್ಮವರ – ತರಿಯುವಿರೆ ನೀತಿಯುಳಿದು     || ೩ ||

ಪಾಪ ಕೃತ್ಯಖಳರಿಗೆ | ಮೃತ್ಯುವಿನ – ರೂಪಾಗಿ ಬಹುದು ಮೇಗೆ |
ಆಪತ್ತಿನಲಿ ಕರಗುತ | ಸೊಕ್ಕುಬರೆ – ಕಾಪಥದಿ ಸಾಯ್ವಿರತ್ತ     || ೪ ||

ಎನಿತು ನ್ಯಾಯವ ಪೇಳ್ದರು | ಉದ್ದುರುಟು – ತನ ವಿರಲು ಕೇಳ್ವರಾರು |
ಕಣೆಯೌಷಧಿಯೆ ತಾಗಲು | ತಿಳಿವುದೆಂ – ದಣಿದನಾ ಕಣೆಯ ಸಾಲು     || ೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತ ತ್ರಿಪುರದ ಅಮೃತ ಕೂಪವು | ಬತ್ತಿಹೋಗಲು ರಾಕ್ಷಸರಪಡೆ |
ಮೃತ್ಯು ವಶವಾಯಿತ್ತು ಶಿವನೆ | ಚ್ಚ ಸ್ತ್ರದಿಂದ  || ೧ ||

ಸಾಲು ಸಂದಣಿಗೊಂಡು ಕೆಡೆದಾ | ಖೂಳ ದೈತ್ಯರ ನೋಡಿ ತ್ರಿಪುರರು |
ಭಾಳನೇತ್ರನ ಮುತ್ತಿದರು ಕ | ಟ್ಟಾಳುತನದಿ  || ೨ ||

ಮರುಳು ದೇವನೆ | ನಿಲ್ಲು ಭಕ್ತರಿ | ಗೆರಡೆಣಿಸಿದಾ ಬಿರುದು ಮೋಸವ |
ಮುರಿವೆವೀಕ್ಷಣವೆಂದು ಹಾಯ್ದರು | ಸರಭಸದಲಿ       || ೩ ||

ಹರನದಾಗಳೆ ರೌದ್ರರೂಪವ | ಧರಿಸಿ ನಾರಾಯಣನ ಬಾಣವ |
ಭರದೊಳೆಚ್ಚನು ಮೇರು ಚಾಪವ | ಕರದೊಳೆತ್ತಿ        || ೪ ||

ಮೂರು ಜಗವಲ್ಲಾಡಿತೊಂದೇ | ಭಾರಿಯೊಳು ತ್ರಿಪುರಂಗಳುರಿಯಲು |
ಧಾರಿಣಿಯೊಳೊರಗಿದರು ಮೂವರು | ಕ್ರೂರ ಖಳರು  || ೫ ||

ಸುರರು ಜಯಜಯವೆನುತ ಹೂಮಳೆ | ಗರೆಯೆ ದುಂದುಭಿ ಘೋಷದಲಿ ವಿ ||
ಸ್ತರಿಸಿತಂದಿಗೆ ತ್ರಿಪುರ ಮಥನದ | ಚರಿತೆಯಿಳೆಗೆ       || ೬ ||

ಕಲ್ಕ್ಯವತಾರ

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತಲಾ ಕಲಿಪುರುಷ ರಾಕ್ಷಸ | ಧೂರ್ತಕಾಮ ಕ್ರೋಧ ಮುಖ್ಯರ |
ಮೊತ್ತ ಕೂಡಿಸಿ ತನ್ನ ಮಹಿಮೆಯ | ಬಿತ್ತುತಿರ್ದ         || ೧ ||

ನಡೆವುದೇ ತನ್ನಾಜ್ಞೆ ಜಗದಲಿ | ಪಡೆವರೇ ಶಕ್ತಿಯಲಿ ಭಾಗ್ಯವ |
ತಡೆದು ದೈವವ ಪೌರುಷದ ಮೇ | ಲಡರು ತಿಹರೇ ?  || ೨ ||

ಪಂಚ ಭೂತಗಳಾಟವನು ತ | ನ್ನಂಚಿನಲಿ ಹಿಡಿದಾಡಿಸುವರೇ ? |
ಸಂಚರಿಪಗ್ರಹತಾರೆಗಳ ಮೇ | ಲ್ಮಿಂಚುತಿಹರೇ ?      || ೩ ||

ಸತ್ವಸರಿಸಮ ಯುಕ್ತಿ ಸಾಹಸ | ವೃತ್ತಿ ಧರ್ಮಾಚರಣೆಯಲಿ ಜನ |
ರೆತ್ತಿಹರೆ ? ಕಾದಾಟದಲಿ ಜಯ | ಸ್ವಾರ್ಥ ಬಿಡದೆ       || ೪ ||

ಇಂತು ಕಲಿಯಪ್ಪಣೆಯೊಳಾ ಭುವ | ನಾಂತರವೆ ಕಂಗೆಡಲು ನಾರದ |
ಕಂತು ಪಿತನಿಂಗರುಹಿದನು ವಿ | ಭ್ರಾಂತನಾಗಿ         || ೫ ||

ರಾಗ ದೇಶಿ ಅಷ್ಟತಾಳ

ಏನಿದು ಸ್ವಾರಿ ಏನಿದು  || ಪಲ್ಲವಿ ||

ಏನಿದು ನಾರದ ಬಲು ವ್ಯಸನದಲೀ | ಕ್ಷೀಣನಾದೈ ಏನೇನಾಯ್ತು ಲೋಕದಲಿ   || ಅ.ಪ ||

ಲಾಲಿಸೊ ದೇವರದೇವ ಶ್ರೀಲೋಲ | ಹಾಳಾಯ್ತು ಲೋಕದ ನಡೆನುಡಿಯೆಲ್ಲ
ತಾಳಲರಿದು ಕಷ್ಟ ಭೂದೇವಿಗಿನ್ನು | ಕೇಳುವರಾರಿಲ್ಲ ನೀಹೊರತಿನ್ನು      || ೧ ||

ಘನ ಶಾಸ್ತ್ರಾದಿಗಳೆಲ್ಲ ಕೇಳದೆ ಹೋಯ್ತು | ಮನೆಮನೆ ಜೂಜು ಸುರೆಯ ಸೂರೆಗಾಯ್ತು ||
ಜನ ಜನರಲ್ಲಿ ಬಂಧು ಬಾಂಧವರಲ್ಲಿ | ಸೆಣಸಾಟವಲ್ಲದಿಲ್ಲವು ಸ್ನೇಹಕೇಳಿ  || ೨ ||

ಸುರಮುನಿಪನೆ ! ನಿನ್ನೊಳೊರೆಯಲೇನುಂಟು | ಧರೆಯಪಾಲನೆಗಿನ್ನೊಂದವತಾರ ಉಂಟು ||
ದುರುಳ ಕಲಿಯ ಮಹಾತ್ಮ್ಯೆಯ ನೋಡುತಿಹೆನು | ಧರಿಸಿ ಬರುವೆನಿದೊ ಕಲ್ಕಿ ರೂಪವನು   || ೩ ||

ರಾಗ ಮಾರವಿ ಅಷ್ಟತಾಳ

ಬಂದನಾ ಹರಿಯು | ಕಲ್ಕಿಯ ರೂಪ – ದಿಂದ ನರಹರಿಯು   || ಪಲ್ಲವಿ ||

ಬಂದನಾ ಮಾಧವನು ಭಾರ್ಗವ | ನಿಂದ ವಿದ್ಯೆಯನೋದಿ ಪುರಹರ |
ನಂದು ಕೊಟ್ಟಾಶಸ್ತ್ರ ಧರಿಸುತ | ಮಂದಮತಿಗಳನಟ್ಟಿ ಬೆರಸುತ    || ಅನು ಪಲ್ಲವಿ ||

ಘನಕುದುರೆಯನೇರಿ ಬಂದ | ಖಡ್ಗ – ವನು ಝಳಪಿಸುತಲೈತಂದ |

ತ್ರಿಣಯನಂತಾ ರೌದ್ರರೂಪದಿ | ಕನಲುತೈತರಲಾಗ ಧಿಮ್ಮನೆ |
ಘನಮದಾಂಧರು ದುಷ್ಟ ಚೇಷ್ಟೆಯ | ಮನೆಮುರುಕರಲ್ಲಲ್ಲಿ ಹಾಯೆನೆ      || ೧ ||

ಓಡಿದನತ್ತಿತ್ತ ಬೇಗ | ಕಲಿ ನೋಡಿದ ಕಲ್ಕಿಯ ವೇಗ |
ಹೇಡಿಯಂದದಿ ತಿರುತಿರುಗಿ ಖಯ | ಖೋಡಿ ಮಾಯಾ ಮಂತ್ರ ಶಕ್ತಿಯೊ |
ಳೋಡಿದನು ಕಾಮಾದಿಸಚಿವರ | ಕೂಡಿ ಕಲಹಾದಿಗಳ ಕೆರಳಿಸಿ || ೨ ||

ಮೋಸ ವಂಚನೆ ದ್ರೋಹಾದಿಗಳು | ಪರ-ದೂಷಣೆ ದ್ವೇಷಾಸೂಯೆಗಳು |
ಲೇಸುಗಾಣದೆ ನಾಶವಾಗಲು | ಆಶೆ ಪಾಶಗಳಡಗಿ ಹೋಗಲು |
ಆಸುರಾಳಿಯ ದೂಷ್ಯಕುಲಗಳ | ನಾಶಗೈದಾವೇಶದಿಂದಲಿ      || ೩ ||

ಕಂದ ಪದ್ಯ

ದುಷ್ಟಾತ್ಮರು ಮರೆಯಾಗಲು |
ಸೃಷ್ಟಿಯು ಮೆರೆವಂತೆ ಸತ್ಯಧರ್ಮಾದಿಗಳಂ |
ಸೃಷ್ಟಿಸಿ ನಾರಾಯಣ ತ |
ನ್ನಿಷ್ಟದೊಳಿರ್ದಂ ದಶಾವತಾರವಂ ತೋರಿಸುತಾ      || ೧ ||

ಸೃಗ್ಧರಾ ವೃತ್ತ

ಇಂತೀ ಲೋಕ ಹಿತಾರ್ಥಮಾಗಿ ಹರಿ ತಾನೀರೈದು ರೂಪಂಗಳ
ತ್ಯಂತೋತ್ಸಾಹದೊಳಾಂತು ದಿವ್ಯ ವಿಭವಂ ತೋರ್ದಾ ಕಥಾ ಚಿತ್ರಮಂ
ಸಂತೋಷಂ ಪಡೆವಂತು ವರ್ಣಿಸಿದೆನೀಕಾವ್ಯಂ ಕಲಾ ಪ್ರೇಮದಿಂ
ದೆಂತೆಂತೋ ನೆರೆದೋದಲೀವನಭವಂ ಸೌಖ್ಯಂ ಸದಾ ಮಂಗಲಂ       || ೧ ||

– ಮಂಗಲ ಪದ –

ಮಂಗಲಂ ಜಯ ಮಂಗಲಂ | ಶ್ರೀ ರಂಗಗೆ – ನೀಲಾಂಗಗೆ |
ಮಂಗಲಂ ವೇದಾಂಗ ವೇದ್ಯ ಶು | ಭಾಂಗಗೆ ನರ – ಸಿಂಗಗೆ    || ೧ ||

ಸೋಮಧರ ಪ್ರಿಯ ಬಲಿಯದರ್ಪ ವಿ | ರಾಮಗೆ – ಸುಖಧಾಮಗೆ |
ಕಾಮಜನಕ ಸುನಾಮ ಭಾರ್ಗವ | ರಾಮಗೆ – ಶ್ರೀರಾಮಗೆ      || ೨ ||

ಭೂರಿಭುವನಾಧಾರ ಧರ್ಮೊ | ದ್ಧಾರಿಗೆ – ಕಂಸಾರಿಗೆ
ಭಾರತಾಹವ ಗೆಲಿಸಿದಾ ಶ್ರೀ | ಶೌರಿಗೆ – ಗಿರಿಧಾರಿಗೆ  || ೩ ||

ಶೀಲಜನ ಪರಿಪಾಲ ಗೋಪೀ | ಬಾಲಗೆ – ಗೋಪಾಲಗೆ
ವ್ಯಾಳ ಶಯನ ವಿಶಾಲ ಲಕ್ಷ್ಮೀ | ಲೋಲಗೆ – ವನಮಾಲಿಗೆ      || ೪ ||

ಧನುಜ ಕುಲ – ಸಂಹನನ ಮಾಯಾ | ಮನುಜಗೆ – ಯದು ತನುಜಗೆ
ಕಣಿಪುರಾಧಿಪ ಕೃಷ್ಣ ಕರುಣಾ | ವನಧಿಗೆ – ಗುಣವನಧಿಗೆ         || ೫ ||

ಕಂದ ಪದ್ಯ

ಕೃತಿಪತಿಯುಡುಪತಿ ಕೃಷ್ಣಂ |
ಕೃತಿ ವಿಷಯಂ ವಿಷ್ಣುಲೀಲೆ ಭಗವತ್ ಚರಿತಾ
ಮೃತಮಿಂತು ಯಕ್ಷಗಾನದ
ಕೃತಿಪೇಳ್ದಂ ವಿಷ್ಣು ಶರ್ಮಕವಿ ಕನ್ನಡದೊಳ್  || ೧ ||

ಅಂತೂ ಪದ್ಯಗಳು ೩೪೧ ಕ್ಕೆ ಶ್ರೀ ಮನ್ಮಹಾ ವಿಷ್ಣುಲೀಲೆ

ದಶಾವತಾರ ಯಕ್ಷಗಾನ ಪ್ರಬಂಧಂ ಪರಿಸಮಾಪ್ತವಾದುದು

ಮಂಗಳ ಮಹಾ ಶ್ರೀ | ಶ್ರೀ | ಶ್ರೀ |