Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ವಿ.ಆರ್. ಗೌರಿಶಂಕ‌

ಶೃಂಗೇರಿ ಸಂಸ್ಥಾನವನ್ನು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಕೊಂಡೊಯ್ದ ಅಪರೂಪದ ಸಾಧಕ ಶ್ರೀ ಗೌರಿಶಂಕರ ಅವರು.
೧೯೫೪ರಲ್ಲಿ ಜನಿಸಿದ ಶ್ರೀ ವಿ. ಆರ್. ಗೌರಿಶಂಕರ ಮೂಲತಃ ಇಂಜಿನಿಯರಿಂಗ್ ಪದವೀಧರರು. ತಮ್ಮ ಜ್ಞಾನ ಹಾಗೂ ಸಾಮರ್ಥ್ಯವನ್ನೆಲ್ಲ ಧಾರೆಯೆರೆದು ಶೃಂಗೇರಿ ಮಠದ ಕಟ್ಟಡ ನಿರ್ಮಾಣಮಾಡಿ ಶೃಂಗೇರಿ ಮಠದ ಭವ್ಯತೆಗೆ ಕಾರಣಪುರುಷರಾದರು. ಒಮ್ಮೆಲೆ ೩,೦೦೦ ಜನರು ಕುಳಿತು ಊಟ ಮಾಡುವ ಭೋಜನಗೃಹ, ವೈಶಿಷ್ಟ್ಯಪೂರ್ಣ ವೇದ ಪಾಠಶಾಲೆ, ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನಾ ಕೇಂದ್ರ, ಆಕರ್ಷಕ ಗುರುಭವನ, ವಿದ್ಯಾತೀರ್ಥ ಸೇತುವೆಗಳಂಥ ವೈಶಿಷ್ಟ್ಯತೆಗಳನ್ನುಳ್ಳ ಶೃಂಗೇರಿ ಸಂಸ್ಥಾನ ನಿರ್ಮಾಣವಾದದ್ದು ಶ್ರೀ ಗೌರಿಶಂಕರರ ಸಾರ್ಥಕ ಸಾಧನೆಯ ಹೆಗ್ಗುರುತು.
ಶೃಂಗೇರಿ ಸಂಸ್ಥಾನವನ್ನು ಕೇವಲ ಧಾರ್ಮಿಕ ಕಟ್ಟುಪಾಡುಗಳಿಗೆ ಸೀಮಿತಗೊಳಿಸದೆ ಅದಕ್ಕೆ ಸಮಾಜ ಸೇವೆಯ ವಿಶಾಲ ರೂಪ ನೀಡಿದ ಹಿರಿಮೆ ಶ್ರೀಯುತರದು. ವಿದ್ಯಾರ್ಥಿಗಳಿಗೆ ಅನ್ನದಾಸೋಹ, ದತ್ತಿಗ್ರಾಮ ಯೋಜನೆ, ಸ್ವಸ್ಥ ಆರೋಗ್ಯ ಯೋಜನೆ, ವಿಕಲಾಂಗರಿಗೆ ನೆರವು ಯೋಜನೆ, ಮಾನಸಿಕ ಅಸ್ವಸ್ಥ ಮಕ್ಕಳ ಸಂರಕ್ಷಣಾ ಯೋಜನೆಗಳ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿಯೂ ಅತ್ಯುತ್ತಮ ಸಂಘಟಕರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರಿಗೆ ಬಂದಿರುವ ಸನ್ಮಾನ, ಪ್ರಶಸ್ತಿ, ಬಿರುದುಗಳು ಅಪಾರ. ಅಮೆರಿಕದ ವಿಶ್ವಶಾಂತಿ ಧಾರ್ಮಿಕ ಸಮ್ಮೇಳನ ೨೦೦೦ದಲ್ಲಿ ಭಾಗವಹಿಸಿ ಭಾಷಣ ಮಾಡಿದ ಹಿರಿಮೆ ಶ್ರೀಯುತರದು.
ಸಮಾಜ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿರುವ ಮಾನವೀಯ ದೃಷ್ಟಿಯ ಮಹಾನ್ ವ್ಯಕ್ತಿ ಶ್ರೀ ವಿ.ಆರ್. ಗೌರಿಶಂಕರ ಅವರು.