Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ.ಕೆ. ಮೂರ್ತಿ

ರಾಷ್ಟ್ರಮಟ್ಟದ ಖ್ಯಾತಿಯ ಚಲನಚಿತ್ರ ಛಾಯಾಗ್ರಾಹಕ ಶ್ರೀ ವಿ.ಕೆ. ಮೂರ್ತಿ ಅವರು ಮೈಸೂರಿನಲ್ಲಿ ೧೯೨೨ರಲ್ಲಿ ಜನಿಸಿದರು. ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್ ನಲ್ಲಿ ೧೯೪೬ರಲ್ಲಿ ಸಿನಿಮಾಟೋಗ್ರಫಿಯ ಡಿಪ್ಲೊಮೊ ಪಡೆದ ಮೂರ್ತಿಯವರು ಹಿಂದಿ ಚಿತ್ರರಂಗದಲ್ಲೇ ಖಾಯಂ ಆಗಿ ನೆಲೆವೂರಿ ಪ್ರತಿಷ್ಠಿತ ಸಂಸ್ಥೆ ಹಾಗೂ ನಿರ್ದೇಶಕರುಗಳ ಬಳಿ ತಮ್ಮ ಛಾಯಾಗ್ರಾಹಕ ಕೌಶಲ್ಯವನ್ನು ಮೆರೆದವರು.
ಪ್ರಾರಂಭದಲ್ಲಿ ದ್ರೋಣಾಚಾರ್ಯ ಹಾಗೂ ಫಾಲಿಮಿಸ್ತ್ರಿ ಅವರ ಬಳಿ ಸಹಾಯಕರಾಗಿ ದುಡಿದ ಮೂರ್ತಿಯವರು ನಂತರ ೧೯೫೧ರಲ್ಲಿ ಪ್ರಖ್ಯಾತ ನಿರ್ದೇಶಕ ಗುರುದತ್ತರ ಪ್ಯಾಸ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್ ನಂತಹ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಪ್ರಮೋದ್ ಚಕ್ರವರ್ತಿ, ಕಮಲ್ ಅದ್ರೋಹಿ, ರಾಜ್ ಕೋಟ್ಲಿ, ಶ್ಯಾಂ ಬೆನಗಲ್ ಹಾಗೂ ಗೋವಿಂದ ನಿಹಲಾನಿಯಂತಹ ಸಂವೇದನಾಶೀಲ ನಿರ್ದೇಶಕರಿಗೆ ತಮ್ಮ ಸೇವೆಯನ್ನು ಒದಗಿಸಿದರು. ಮೂರ್ತಿಯವರು ಚಿತ್ರೀಕರಿಸಿದ ಇತರ ಪ್ರಮುಖ ಚಿತ್ರಗಳು ಲವ್ ಇನ್ ಟೋಕಿಯೋ, ನಯಾ ಜಮಾನ, ಜುಗ್ಗು, ರಜಿಯಾ ಸುಲ್ತಾನ್, ಪಾಕೀಜಾದ ಕೆಲವು ಭಾಗಗಳು, ತಮಸ್ ಹಾಗೂ ಡಿಸ್ಕವರಿ ಆಫ್ ಇಂಡಿಯಾ ಧಾರಾವಾಹಿ ಮುಂತಾದುವು. ‘ಹೂವು ಹಣ್ಣು’ ಇವರು ಚಿತ್ರೀಕರಿಸಿದ ಏಕೈಕ ಕನ್ನಡ ಚಿತ್ರ.
ಪ್ರಪ್ರಥಮ ಸಿನಿಮಾ ಸ್ಕೋಪ್ ಚಿತ್ರದ ಛಾಯಾಗ್ರಾಹಕರಾದ ಮೂರ್ತಿಯವರಿಗೆ ಫಿಲಂಫೇರ್ ಪ್ರಶಸ್ತಿ, ಚಿತ್ರ ವಿಮರ್ಶಕರ ಪ್ರಶಸ್ತಿ ಹಾಗೂ ಜೀವಮಾನ ಸಾಧನೆಯ ಪುರಸ್ಕಾರಗಳು ಸಂದಿವೆ.ವಯೊಲಿನ್ ವಾದಕರಾದ ಮೂರ್ತಿಯವರು ಕನ್ನಡ ನಾಟಕಗಳನ್ನು ಕೂಡ ಬರೆದು ನಿರ್ದೇಶಿಸಿದ್ದಾರೆ. ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಶ್ರೀಯುತ ವಿ.ಕೆ. ಮೂರ್ತಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಚರಿತ್ರೆಯಲ್ಲಿ ತಮ್ಮ ಹೆಜ್ಜೆ ಜಾಡು ಮೂಡಿಸಿರುವವರು. ಐದು ದಶಕಗಳ ಮೂರ್ತಿಯವರ ಸಾಧನೆ ಅನನ್ಯ ಹಾಗೂ ಅಪೂರ್ವವಾದುದು.