Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ವಿ.ಟಿ. ಕಾಳೆ

ಕಲಾವಿದ, ಶಿಕ್ಷಕ, ಬರಹಗಾರ ನಾಟಕಕಾರ, ನಿರ್ದೇಶನ ಹಾಗೂ ಸಿನಿಮಾ ನಟನಾಗಿಯೂ ವಿ.ಟಿ. ಕಾಳೆಯವರದು ಬಹುಮುಖ ಪ್ರತಿಭೆ,
೧೯೩೪ರಲ್ಲಿ ಬಿಜಾಪುರ ಜಿಲ್ಲೆಯ ಹುನಗುಂದದ ಬಡರೈತ ಕುಟುಂಬದಲ್ಲಿ ಕಾಳೆಯವರ ಜನನ, ಬಾಲ್ಯದ ಕಲಾಸಕ್ತಿಯನ್ನು ಪ್ರೀತಿಯಿಂದ ಪ್ರೋತ್ಸಾಹಿಸಿ ಬೆಳಸಿದವರು ಹಿರಿಯ ಕಲಾವಿದ ಶ್ರೀ ಟಿ.ಪಿ. ಅಕ್ಕಿಯವರು, ಅವರ ವಿಜಯ ಕಲಾಮಂದಿರವೇ ಕಾಳೆಯವರಿಗೆ ಕಲೋಪಾಸನೆಗೆ ಸ್ಫೂರ್ತಿಯ ಸೆಲೆ. ೧೯೫೩ರಲ್ಲಿ ಮುಂಬಯಿಯ ಜೆ.ಜೆ. ಕಲಾಶಾಲೆಯ ಡಿಪ್ಲೊಮಾ ಪದವಿ. ನಂತರ ಸಾಧನಾ ರಂಗವೇ ಬೋಧನಾರಂಗ ಆಗಲು ವಿಜಯ ಕಲಾಮಂದಿರದಲ್ಲೇ ಶಿಕ್ಷಕನಾಗಿ ಕಲಾಸೇವೆಯ ಮುಂದುವರಿಕೆ. ನಂತರ ೧೯೬೪ರಿಂದ ಸಂಡೂರಿನ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಸೇವಾನಿರತರು.
ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ರಾಜ್ಯದ ದೇವಾಲಯಗಳ ಭಿತ್ತಿ ಚಿತ್ರಗಳ ನಕಲು ಮಾಡವ ಯೋಚನೆಯಲ್ಲಿ ಕಾಳೆಯವರ ಪಾತ್ರ ದೊಡ್ಡದು. ಶ್ರವಣಬೆಳಗೊಳದ ಜೈನ ಹಾಗೂ ಶಿರಾದಲ್ಲಿರುವ ರೇವಣಸಿದ್ಧೇಶ್ವರ ದೇವಾಲಯಗಳ ಭಿತ್ತಿ ಚಿತ್ರಗಳ ನಕಲು ಕಾರ್ಯದಲ್ಲಿ ಕಾಳೆಯವರು ತೋರಿರುವ ಕಲಾನೈಪುಣ್ಯ ಶ್ಲಾಘನೀಯ.
ಮಕ್ಕಳಿಗೆ ಚಿತ್ರಕಲೆ ಕಲಿಸುವುದರ ಬಗ್ಗೆ ಇವರ ಕಲಾಪರಿಚಯ ಪುಸ್ತಕ ಬರಹಗಾರನಾಗಿ ಕಾಳೆಯವರ ಸಂವೇದನಾಶೀಲತೆಗೆ ನಿದರ್ಶನ. ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ. ಪ್ರಶಂಸೆ, ಭಾರತದಾದ್ಯಂತ ನಡೆಯುವ ಕಲಾಪ್ರದರ್ಶಗಳಲ್ಲಿ ಇವರ ಕೃತಿಗಳ ಪ್ರದರ್ಶನ ಹಾಗೂ ಆನೇಕ ಏಕವ್ಯಕ್ತಿ ಪ್ರದರ್ಶನಗಳು ಪ್ರಶಂಸೆಗಳಿಸಿವೆ ಕಾಳೆಯವರು ವಿಭಿನ್ನ ಪ್ರತಿಭೆಯ ಕಲಾವಿದ, ನಾಟಕಕಾರ, ನಿರ್ದೇಶಕ-ನಟನಾಗಿ ರಂಗ ಹಾಗೂ ಚಲನ ಚಿತ್ರಗಳಲ್ಲಿ ಇವರದು ಶ್ರೀಮಂತ ಅನುಭವ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ”ಮಾನಸವೀಣೆ” ಚಿತ್ರಗಳ ಅಭಿನಯ ಇವರ ಪ್ರತಿಭೆಯ ಮತ್ತೊಂದು ಹೆಗ್ಗಳಿಕೆ.