Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳಿಗೇ ಮಠ ಮಾನ್ಯಗಳು ಸೀಮಿತವೆಂಬ ನುಡಿಗೆ ಅಪವಾದವೆಂಬಂತೆ ನಿಡುಮಾಮಿಡಿ ಮಠವನ್ನು ಮಾನವ ಧರ್ಮಪೀಠವಾಗಿಸಿ ವೈಚಾರಿಕವಾಗಿ, ಸಾಮಾಜಿಕ ಬದಲಾವಣೆಗೆ ತೊಡಗಿಸಿದ ಸಿಡಿಲ ಸನ್ಯಾಸಿ, ಕವಿ, ಚಿಂತಕ, ಸಮಾಜವಾದಿ, ಸಮಾಜಸೇವಕ ಶ್ರೀಯುತ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು.
ಉನ್ನತ ಶಿಕ್ಷಣ ಪಡೆದೂ ಒಂದು ಮಠದ ಸ್ವಾಮೀಜಿಯಾದ ಶ್ರೀಯುತರು ಮಠದ ಕಾರ್ಯಚಟುವಟಿಕೆಗಳಿಗೆ ಇದ್ದ ಎಲ್ಲೆಯನ್ನು ವಿಸ್ತರಿಸಿ ಮಠಗಳು ಸಾಮಾಜಿಕ ಚಿಂತನೆಗೆ, ಶೈಕ್ಷಣಿಕ ಪ್ರಗತಿಗೆ, ವೈಚಾರಿಕ ಪ್ರಖರತೆಗೆ ಮಾರ್ಗದರ್ಶಕ ಕೇಂದ್ರಗಳಾಗಬಲ್ಲವು ಎಂಬುದನ್ನು ತೋರಿಸಿಕೊಟ್ಟ ಬಸವ ಪಥದ ವಿಚಾರವಾದಿ ಸಾಹಿತಿಗಳಿವರು. ವ್ಯವಸ್ಥೆಯ ಅಸಮಾನತೆಯ ವಿರುದ್ಧ ಸದಾ ದನಿಯೆತ್ತುವ ಜನಪರ ಚಿಂತಕರಿವರು. ಸರಳ ನಡೆ, ನೇರ ನುಡಿ, ದೀನ ದುರ್ಬಲಪರವಾದ ಸಮಾಜೋದ್ಧಾರ ಕಾಯಕ, ಇವರ ಬದುಕಿನ ಪರಿ ಶ್ರೀಯುತರ ಸುಳ್ಳು ಸೃಷ್ಟಿಗಳು ಎಂಬ ಕವನ ಸಂಕಲನ ಬಹು ಚರ್ಚಿತ.
ದೀನ ದಲಿತರ ಸಮಾನತೆಗೆ, ಶೈಕ್ಷಣಿಕ ಪ್ರಗತಿಗೆ, ಮಹಿಳಾ ಸಮಾಜದ ಉದ್ಧಾರಕ್ಕೆ ಸದಾ ದುಡಿಯುವ ಶ್ರೀಯುತರ ಸೇವೆಗೆ ಸಂದ ಗೌರವ ಸನ್ಮಾನಗಳು ಹಲವು. ಯೋಗಿ, ಚಿಂತಕ, ಸಾಮಾಜಿಕ ಪರಿವರ್ತನೆಗೆ ಸದಾ ದುಡಿವ ಚೇತನ ಶ್ರೀ ನಿಡುಮಾಮಿಡಿ ಸ್ವಾಮೀಜಿ ಅವರು.