ಗದುಗಿನಲ್ಲೊಂದು ಆಶ್ರಮ. ಅದೊಂದು ಸಂಗೀತದ ಗುರುಕುಲ. ಅದರ ತುಂಬೆಲ್ಲ ಸಂಗೀತದ ಝೇಂಕಾರ. ಒಂದೆಡೆ ಹಾರ್ಮೋನಿಯಂ, ಮತ್ತೊಂದೆಡೆ ತಬಲಾ, ಇನ್ನೊಂದೆಡೆ ಗಾಯನದ ಸುನಾದ. ಹಗಲು-ಇರುಳು ಅಲ್ಲಿ ಸಂಗೀತದ ಜಾತ್ರೆ, ಅಂಧ-ಅನಾಥ-ಅಂಗವಿಕಲ ಮಕ್ಕಳು ಒಬ್ಬರ ಹೆಗಲ ಮೇಲೆ ಒಬ್ಬರು ಕೈಯಿಟ್ಟು ನಡೆದಾಡುವ ದೃಶ್ಯ ಅಲ್ಲಿ ಸಾಮಾನ್ಯ.

ಹೆತ್ತವರಿಗೆ ಹೊರೆಯಾಗಿ, ಸಮಾಜದ ಕಣ್ಣಲ್ಲಿ ಅನಾಥರೆನಿಸಿದ ಬಾಲಕರಿಗೆಲ್ಲ ಅಲ್ಲಿ ಆಶ್ರಯ. ಅದು ಅಂಧರ ಬಾಳಿನ ಅಂದದ ಅರಮನೆ. ಮೇಲು-ಕೀಳು ಜಾತಿಯವರೆಲ್ಲ ಅಲ್ಲಿ ಸಹಭೋಜಕರು. ಅಲ್ಲಿ ಸಂಗೀತವೇ ಒಂದು ಜಾತಿ. ಗದ್ದುಗೆಯಲ್ಲಿ ಧ್ಯಾನ ಮೌನಿಯಾಗಿ ಕುಳಿತ ಗಾನಯೋಗಿಗೆ ಅಲ್ಲಿ ನಿತ್ಯ ನಾದ ನೈವೇದ್ಯ. ನಾದ ಭಿಕ್ಷೆ ಬೇಡಲು ಬಂದವರಿಗೆಲ್ಲ ಅಲ್ಲಿ ನಾಧಾಶ್ರಮ ಉಚಿತ ವಸತಿ, ನಾದ ವಿದ್ಯೆ ಧಾರೆಯೆರೆಯುವ ಮುಕ್ತ ಸಂಗೀತ ವಿಶ್ವವಿದ್ಯಾಲಯ. ಅಂತಹ ಒಂದು ವೈಶಿಷ್ಟಪೂರ್ಣ ನಾದ ನಿಕೇತನ ವಿಶ್ವದಲ್ಲಿ ಮತ್ತೊಂದಿಲ್ಲವೆಂಬ ಅಗ್ಗಳಿಕೆ. ಸರ್ಕಾರದ ಅನುದಾನವಿಲ್ಲದೆ  ಕೇವಲ ಸಮಾಜದ ಆಸರೆಯಲ್ಲಿ ನಡೆಯುವ ಒಂದು ವಿನೂತನ ಸಂಸ್ಥೆ. ಅದರ ಹೆಸರು “ಶ್ರೀ ವಿರೇಶ್ವರ ಪುಣ್ಯಾಶ್ರಮ” ಅದು ಸ್ಥಾಪನೆಯಾದದ್ದು ೧೯೧೪ ರಲ್ಲಿ, ಅದನ್ನು ಸ್ಥಾಪಿಸಿದವರು ಸ್ವರ ಸಿಂಹಾಸನಾಧೀಶ್ವರ ನಾದಯೋಗಿ ಪಂ. ಪಂಚಾಕ್ಷರ ಗವಾಯಿಗಳು. ಆಶ್ರಮಕ್ಕೆ ಭೂಮಿ ದಾನನೀಡಿ, ಅದರ ಸ್ಥಾಪನೆಗೆ ಕಾರಣರಾದವರು ಮಹಾದಾನಿ ಗದುಗಿನ ಬಸರೀಗಿಡದ ಶ್ರೀ ವೀರಪ್ಪನವರು.  ಆಶ್ರಮದ ಸೂತ್ರಧಾರರು, ನಾದ ಪೀಠದ ಕುಲಗುರುಗಳಾದ ಕವಿ ಪಂ. ಪುಟ್ಟರಾಜ ಗವಾಯಿಗಳು.

ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ, ಕೀರ್ತನ, ನಾಟಕ, ಕವಿ, ಲೇಖಕರಾದವರಿಗೆ ಲೆಕ್ಕವಿಲ್ಲ. ಅಲ್ಲಿ ಇಂದಿಗೂ ನೂರಾರು ವಿದ್ಯಾರ್ಥಿಗಳು ಸಂಗೀತ ಸಾಧನೆ ಮಾಡುತ್ತಿದ್ದಾರೆ. ಆಶ್ರಮದಲ್ಲಿ ಸಂಗೀತ ಶಿಕ್ಷಣ ಪಡೆದವರು ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಾರತದ ತುಂಬೆಲ್ಲ ಆಶ್ರಮದ ಕಲಾವಿದರು ವ್ಯಾಪಿಸಿಕೊಂಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಆಶ್ರಮದ ಕಲಾ ಬಳಗವಿದೆ. ಪದ್ಮಭೂಷಣ ಪಂ. ಬಸವರಾಜ ರಾಜಗುರು, ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಪಂ.ಸಿದ್ದರಾಜು ಜಂಬಲದಿನ್ನಿ, ಪಂ. ಮೃತ್ಯುಂಜಯ ಬುವಾ ಪುರಾಣಿಕರಮಠ, ಪಂ. ಚಂದ್ರಶೇಖರ ಪುರಾಣಿಕಮಠ, ಪಂ. ಅರ್ಜುನ ಸಾನಾಕೋಡ, ಪಂ. ಆರ್. ವಿ. ಶೇಷಾದ್ರಿ ಗವಾಯಿ, ಪಂ. ಸೋಮನಾಥ ಮರಡೂರ, ಪಂ. ಬಿ. ಎಸ್. ಮಠ (ಚಿತ್ತರಗಿ), ಪಂ. ವೀರೇಶ ಮದರಿ (ಮದ್ರಾಸ್) ಪಂ. ಸಿದ್ದೇಶ ಕುಮಾರ, ಪಂ. ಎಂ. ವೆಂಕಟೇಶ ಕುಮಾರ, ಸಂ. ರಾಜಗುರು ಗುರುಸ್ವಾಮಿ ಕಲಕೇರಿ, ಪಂ. ಈಶ್ವರ ಮೋರಗೇರಿ, ಶ್ರೀ ಡಿ. ಕುಮಾರದಾಸ, ಸಿದ್ಧರಾಮಸ್ವಾಮಿ ಕೋರವಾರ (ಭೂತಾಲ) ಮುಂತಾದ ಸಂಗೀತ ದಿಗ್ಗಜರು ಆಶ್ರಮದ ಶಿಷ್ಯರೆಂಬುದು ಹೆಮ್ಮೆಯ ಮಾತು.

ಶ್ರೀ ವೀರೇಶ್ವರ ಪುಣ್ಯಾಶ್ರಮದ ಕುಲಗುರುಗಳಾದ ಕವಿ ಪಂ. ಪುಟ್ಟರಾಜ ಗವಾಯಿಗಳ ಕರ್ತೃತ್ವ ಶಕ್ತಿ ಅಪಾರ. ಅವರಿಗೀಗ ೯೨ ವರ್ಷ ವಯಸ್ಸು. ಅವರು ತ್ರಿಕಾಲ ಲಿಂಗಪೂಜಾ ನಿಷ್ಠರು ತ್ರಿಭಾಷಾ ಕವಿಗಳು. ಅವರ ಪ್ರಯತ್ನದ ಫಲವಾಗಿ ಆಶ್ರಮ ತುಂಬ ಅಭಿವೃದ್ಧಿ ಹೊಂದುತ್ತ ಸಾಗಿದೆ. ಅವರ ಸಂಗೀತ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಶಿಷ್ಯರು, ಅಭಿಮಾನಿಗಳು, ಸಮಾಜದ ಸರ್ವರು ಅವರಿಗೆ ಏರ್ಪಡಿಸಿರುವ ತುಲಾಭಾರಗಳ ಇತ್ತೀಚಿನ ಸಂಖ್ಯೆ ೧೫೫೦ ದಾಟಿದೆ. ಬಹುಶಃ ಇಷ್ಟೊಂದು ಸಂಖ್ಯೆಯ ತುಲಾಭಾರಗಳು ಜಗತ್ತಿನ ಯಾವ ವ್ಯಕ್ತಿಗೂ ನೆರವೇರಿದ ಉದಾಹರಣೆ ಇಲ್ಲ. ಇದೊಂದು ವಿಶ್ವದಾಖಲೆ. ಅದು ಇಷ್ಟರಲ್ಲೇ ಗಿನ್ನೀಸ್ ದಾಖಲೆಗೆ ಸೇರಲಿದೆ. ಶ್ರೀ ವೀರೇಶ್ವರ ಪುಣ್ಯಾಶ್ರಮ ಈಗ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಕವಿ ಪಂ. ಪುಟ್ಟರಾಜ ಗವಾಯಿಗಳ ಅಂಧರ ವಸತಿ ಗೃಹ, ಪಿ.ಪಿ.ಜಿ. ವಸತಿ ಬ್ರೈಲ್ ಶಾಲೆ, ಸಂಸ್ಕೃತ ಪಾಠಶಾಲೆ, ಕುಮಾರೇಶ್ವರ ಕೃಪಾ ಪೋಷಿತ ಸಂಗೀತ ಪಾಠಶಾಲೆ, ಪಿ.ಪಿ.ಜಿ.ಕಲಾ ಮಹಾವಿದ್ಯಾಲಯ, ಪಂ. ಪಂಚಾಕ್ಷರ ಗವಾಯಿ ಸಂಗೀತ ಮಹಾವಿದ್ಯಾಲಯ ಮುಂತಾದ ಸಂಸ್ಥೆಗಳನ್ನು ಈ ಆಶ್ರಮ ನಡೆಸುತ್ತಿದೆ. ಈ ಆಶ್ರಮದ ಆವರಣದಲ್ಲಿ ಅಮೇರಿಕದ ರೋಟರಿ ಸಂಸ್ಥೆ ೨೫ ಲಕ್ಷ ರೂ. ವೆಚ್ಚದ ಅಂಧರ ವಸತಿ ಸಮುಚ್ಚಯ ನಿರ್ಮಿಸಿದೆ. ಈ ಆಶ್ರಮದ ಒಂದು ಅಂಗ ಸಂಸ್ಥೆ ದಾವಣಗೆರೆಯಲ್ಲಿದೆ. ಅದು ಸಹ ಶ್ರೀ ವೀರೇಶ್ವರ ಪುಣ್ಯಾಶ್ರಮ ಎಂಬ ಹೆಸರನ್ನೇ ಹೊತ್ತಿದೆ.

ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕ ಪೂಜ್ಯ ಲಿಂ. ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳ ಪುಣ್ಯ ಸ್ಮರಣೆಯ ನಿಮಿತ್ತ ಆಶ್ರಮದಲ್ಲಿ ಜೂನ್ ತಿಂಗಳಲ್ಲಿ (ಜೇಷ್ಠ ಬಹುಳ ಪಂಚಮಿ) ಬೃಹತ್ ಪ್ರಮಾಣದಲ್ಲಿ ಸಂಗೀತ ಸಮಾರಾಧನೆ ಮೂರು ದಿನ ರಾತ್ರಿ ಹಗಲು ನಡೆಯುತ್ತದೆ. ದೇಶದ ಮಹಾನ್ ಸಂಗೀತಗಾರರು. ಆಶ್ರಮದ ಶಿಷ್ಯರು, ಅಭಿಮಾನಿಗಳ ಅಪಾರ ಜನಸಾಗರ ಅಲ್ಲಿ ನೆರೆದಿರುತ್ತದೆ. ಸಂಗೀತ ಜಗದ್ಗುರು ಪಂ. ಪಂಚಾಕ್ಷರಿ ಗವಾಯಿಗಳ ತೇರು ಸಾಗುತ್ತದೆ. ಸಂಗೀತ ಸಂತನೊಬ್ಬನಿಗೆ ತೇರು ಎಳೆಯುವುದು ಜಗತ್ತಿನಲ್ಲಿಯೇ ಏಕಮೇವ ಉದಾಹರಣೆ. ಅಂತೆಯೇ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಗೀತ ಸಾಧಕರ ತೀರ್ಥಕ್ಷೇತ್ರ, ನಾದೋಪಾಸಕರ ಮುಕ್ತಿಧಾಮ. ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ, ಸಂಗೀತ ನೃತ್ಯ ಅಕಾಡೆಮಿ ಸಂಗೀತ ಸಂಸ್ಥೆಗಳಿಗೆ ನೀಡುವ ೨೦೦೧ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ನೀಡಿ ಗೌರವಿಸಿದೆ.