Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವೆಂಕಟನಾರಾಯಣ

ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಕನ್ನಡದ ಓದುಗರಿಗೆ ಚಿರಪರಿಚಿತರಾಗಿರುವ ವೆಂಕಟನಾರಾಯಣ ಅವರು ಜನಪರ ಕಾಳಜಿಯ, ಸಾಮಾಜಿಕ ಜವಾಬ್ದಾರಿಯ ಪತ್ರಕರ್ತರು. ಕರಡು ತಿದ್ದುವವರಾಗಿ ವೃತ್ತಿ ಬದುಕಿಗೆ ಪ್ರವೇಶಿಸಿದ ವೆಂಕಟನಾರಾಯಣ ಸ್ವಸಾಮರ್ಥ್ಯದಿಂದ ಉಪಸಂಪಾದಕ, ಹಿರಿಯ ಸಂಪಾದಕ, ಮುಖ್ಯ ಸುದ್ದಿ ಸಂಪಾದಕ, ಸ್ಥಾನಿಕ ಸಂಪಾದಕ ಮುಂತಾದ ಹಲವು ಎತ್ತರಗಳಿಗೆ ಏರಿದವರು. ದೂರದರ್ಶನದಲ್ಲಿ ಸುದ್ದಿ ಸಂಯೋಜಕರಾಗಿಯೂ ಹೆಸರು ಮಾಡಿದವರು. ತಮ್ಮ ಸರಳ ಜೀವನಶೈಲಿಯಿಂದ ಬಡವರ, ದೀನದಲಿತರ ದಿನನಿತ್ಯದ ಬವಣೆಯ ಬದುಕಿಗೆ ಧ್ವನಿಯಾದವರು ಪತ್ರಿಕೋದ್ಯಮದ ಜೊತೆಗೆ ಹಲವು ಸಂಘ ಸಂಸ್ಥೆಗಳ ಒಡನಾಟವಿರಿಸಿಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ೫೦೦ಕ್ಕೂ ಹೆಚ್ಚು ಉಚಿತ ಸಾಮೂಹಿಕ ವಿವಾಹಗಳನ್ನೇರ್ಪಡಿಸಿ ಅಸಹಾಯಕ ಬದುಕುಗಳಿಗೆ ಊರುಗೋಲಾದವರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರಕಿಸಿಕೊಟ್ಟು ಅವರ ಭವಿಷ್ಯದ ಆಶಾಕಿರಣವಾದವರು. ಜನಜಾಗೃತಿ ಮೂಡಿಸುವ ಆಂದೋಲನಗಳಲ್ಲಿ ಅತ್ಯಂತ ಪ್ರೀತಿಯಿಂದ ತೊಡಗಿಸಿಕೊಂಡವರು.
`ಪತ್ರಿಕೋದ್ಯಮವೆಂದರೆ ಪ್ರಜಾಪ್ರಭುತ್ವದ ಕಾವಲುನಾಯಿ’ ಎಂಬ ಮಾತನ್ನು ಅನ್ವರ್ಥವಾಗಿಸುವಂತೆ ಕಳೆದ ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತರು ಶ್ರೀ ವೆಂಕಟನಾರಾಯಣ ಅವರು.