Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ವೈ.ಕೆ. ಮುದ್ದುಕೃಷ್ಣ

ಅಧಿಕಾರದ ಅವಿರತ ದುಡಿಮೆಯ ನಡುವೆಯೂ ತಮ್ಮ ಕಲಾಪ್ರೇಮವನ್ನು ಕಾಯ್ದುಕೊಂಡೇ ಬಂದ ಕಂಚಿನ ಕಂಠದ ಕೋಗಿಲೆ ಶ್ರೀಯುತ ವೈ.ಕೆ. ಮುದ್ದುಕೃಷ್ಣ.
೧೯೪೭ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಟ್ಟ ಮಲೆನಾಡಿನ ಎಡೆಕೆರೆ ಗ್ರಾಮದಲ್ಲಿ ಜನಿಸಿದ ಶ್ರೀಯುತರು ಬಾಲ್ಯದಿಂದಲೆ ಜನಪದ ಹಾಗೂ ಭಾವಗೀತೆಗಳ ಗಾಯನವನ್ನೂ ರೂಢಿಸಿಕೊಂಡುಬಂದರು. ೧೯೮೫ರಲ್ಲಿ ಮೊದಲಿಗೆ ಅಮೆರಿಕಾ ಪ್ರವಾಸ ಮಾಡಿ ತಮ್ಮ ಗಾನಸುಧೆಯನ್ನು ನಾಡಿನಾಚೆಗೂ ವಿಸ್ತರಿಸಿದ ಹೆಗ್ಗಳಿಕೆಗೆ ಪಾತ್ರರು.
ಜಾನಪದ ಗಾರುಡಿಗ ಡಾ. ಎಸ್.ಕೆ. ಕರೀಂಖಾನ್ ಅವರಿಂದ ಜನಪದ ಗಾಯನದಲ್ಲಿ ಪ್ರಭಾವಿತರಾದದ್ದರ ಜೊತೆಗೆ ಸುಗಮ ಸಂಗೀತ ಕ್ಷೇತ್ರದ ದಿಗ್ಗಜಗಳಾದ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಹುಕ್ಕೇರಿ ಬಾಳಪ್ಪ ಮುಂತಾದವರ ಪ್ರಭಾವಕ್ಕೂ ಒಳಗಾದವರು.
ಗಾನಸುಧೆಯಿಂದ ದೇಶ ವಿದೇಶಗಳ ಸಂಗೀತ ಪ್ರೇಮಿಗಳ ಮನಸೆಳೆದ ಶ್ರೀಯುತರ ಸಾಧನೆಗೆ ರಾಜ್ಯ ನಾಟಕ ಅಕಾಡೆಮಿ ಪುರಸ್ಕಾರ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರೀಂಖಾನ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಸನ್ಮಾನಗಳು ಸಂದಿವೆ. ಇಂದಿಗೂ ಸುಗಮ ಸಂಗೀತ ಪರಿಷತ್ ನಂಥ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಅಪರೂಪದ ಕ್ರಿಯಾಶೀಲ ಕಲಾವಿದರು. ಉತ್ತಮ ಸಂಘಟಕರಾದ ಶ್ರೀಯುತರು ತಮ್ಮ ಸೇವಾವಧಿಯಲ್ಲಿ ಕನ್ನಡ ಭವನ ನಿರ್ಮಿಸಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.
ದಕ್ಷ ಆಡಳಿತಗಾರರು ಹಾಗೂ ಸುಗಮ ಸಂಗೀತ ಕ್ಷೇತ್ರವನ್ನು ಪೋಷಿಸಿಕೊಂಡು ಬರುತ್ತಿರುವ ಹೃದಯವಂತ ಕಲಾವಿದರು ವೈ.ಕೆ. ಮುದ್ದುಕೃಷ್ಣ ಅವರು.