ವಿಶಿಷ್ಟ ಜಾನಪದ ಕಲೆಯ ಹಗಲುವೇಷ ಪ್ರಕಾರದಲ್ಲಿ ಪ್ರಭುತ್ವ ಪಡೆದ ಹಿರಿಯ ಕಲಾವಿದರು ಶಿವಲಿಂಗಪ್ಪ ಅವರು. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಯಾಪಲಪರ್ವಿ ಗ್ರಾಮದ ಈ ಜಾನಪದ ಕಲಾಕುಸುಮಕ್ಕೀಗ ೬೦ರ ಹರೆಯ. ಅಲೆಮಾರಿ ಬದುಕು ಸಾಗಿಸುತ್ತ, ಗ್ರಾಮಗಳ ಹೊರಗೆ ಗುಡಾರಗಳಲ್ಲಿ ದಿನದೂಡುವ ವಿಶಿಷ್ಟ ಜೀವನಶೈಲಿ. ಬದುಕಲು ಆಸ್ತಿ, ಮನೆಗಳ ಹಂಗು ಬೇಕಿಲ್ಲ ಎನ್ನುವ ನಿಜ ಅನಿಕೇತನ. ಈ ಜಾನಪದ ಜಂಗಮರ ಬಳಿ ಇರುವ ಆಸ್ತಿಯೆಂದರೆ ಹಾರ್ಮೋನಿಯಂ, ತಬಲ ಹಾಗೂ ವೇಷಭೂಷಣದ ಉಡುಪುಗಳು ಮಾತ್ರ.
ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಶ್ರೀಯುತರ ಮಾತೃಭಾಷೆ ತೆಲುಗು ಮತ್ತು ಬುಡ್ಡ. ಅವರು ಕನ್ನಡ, ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲೂ ಮಾತನಾಡಬಲ್ಲ ಬಹುಮುಖ ಪ್ರತಿಭೆ, ಹನ್ನೆರಡು ಮಂದಿ ಹಗಲುವೇಷಗಾರ ಕಲಾವಿದರ ತಂಡ ರಚಿಸಿಕೊಂಡಿರುವ ಶ್ರೀಯುತರು ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸುರ, ಜಟಾಸುರನ ವಧೆ, ಸುಂದ ಉಪಸುಂದ ಇವೇ ಮೊದಲಾದ ಪ್ರದರ್ಶನಗಳಿಗೆ ಹಗಲುವೇಷ ಹಾಕುವರು.
ಹಂಪಿ, ಮೈಸೂರು ದಸರಾ ಉತ್ಸವಗಳಲ್ಲಿ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲೂ ಹಗಲುವೇಷ ಪ್ರದರ್ಶನ ನೀಡಿದ ಹೆಗ್ಗಳಿಕೆ. ಶ್ರೀಯುತರ ಪ್ರತಿಭೆಯನ್ನು ಪರಿಗಣಿಸಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಿಂದ ಹಲವಾರು ಪ್ರಮಾಣ ಪತ್ರ, ಪ್ರಶಸ್ತಿಗಳ ಗೌರವ ಲಭಿಸಿದೆ.
ಅಲೆಮಾರಿ ಜೀವನ ಸಾಗಿಸಿದರೂ ಅಳಿಯುತ್ತಿರುವ ಹಗಲುವೇಷ ಕಲೆಯನ್ನು ಬೆಳೆಸುತ್ತಿರುವವರು ಶ್ರೀ ಶಿವಲಿಂಗಪ್ಪ.
Categories