ಕನ್ನಡ ಚಲನಚಿತ್ರದ ರಂಗದ ಜನಪ್ರಿಯ ನಟರಾಗಿ, ಉದಯ ಟಿ.ವಿ.ಯ ಪ್ರಧಾನ ಕಾರ್ಯನಿರ್ವಾಹಕರಾಗಿ ಕಲಾರಸಿಕರ ಹೃದಯವನ್ನು ಸೂರೆಗೊಂಡಿರುವ ಪ್ರಣಯರಾಜ ಶ್ರೀ ಶ್ರೀನಾಥ್ ಅವರು.
ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ರಂಗಭೂಮಿಗೆ ಕಾಲಿರಿಸಿದ ಶ್ರೀನಾಥ್ ಅವರು `ಪ್ರಭಾತ್ ಕಲಾವಿದರು’, ನಟರಂಗ, ವೇದಿಕೆ ಸಂಸ್ಥೆಗಳಲ್ಲಿ ಅಭಿನಯಿಸುತ್ತ ಮೇಲೇರಿದರು. ೧೯೬೬ರಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ‘ಮಧುರಮಿಲನ’ ಇವರ ಮೊದಲ ಚಿತ್ರ `ಶುಭಮಂಗಳ’ ಚಿತ್ರ ಇವರನ್ನು ತಾರಾ ಪಟ್ಟಕ್ಕೆ ಏರಿಸಿತು. ಡಾ|| ರಾಜಕುಮಾರ್ ಅವರ ನಂತರ ೧೦೦ ಸಿನಿಮಾಗಳಲ್ಲಿ ಅಭಿನಯಿಸಿದ ಎರಡನೆಯ ನಾಯಕ ನಟರು ಇವರು. ೧೬೮ ಚಲನಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ೬೧ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೂವತ್ತೇಳು ಚಲನಚಿತ್ರಗಳಲ್ಲಿ ಅಭಿನಯಿಸಿದ ಶ್ರೀನಾಥ್-ಮಂಜುಳಾ ಜೋಡಿ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ತಾರಾ ಜೋಡಿ ಎಂದು ಪ್ರಸಿದ್ದಿ ಪಡೆದಿದೆ. ಎಲ್ಲರೊಡನೆಯೂ ಸ್ನೇಹ ವಿಶ್ವಾಸದಿಂದ ನಡೆದುಕೊಳ್ಳುವ ಶ್ರೀನಾಥ್ ‘ಅಜಾತಶತ್ರು’ವೆಂದು ಪ್ರಖ್ಯಾತರಾಗಿದ್ದಲ್ಲದೆ ಐದು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಮಾಡಿದ್ದಾರೆ. ಅಭಿನಯ ಚಕ್ರವರ್ತಿ, ನಟನ ಕಲಾ ಸಾರ್ವಭೌಮ, ಅಭಿನಯ ಕಲಾರತ್ನ, ಮೊದಲಾದ ಬಿರುದುಗಳು ಇವರಿಗೆ ಸಂದಾಯವಾಗಿವೆ.
‘ಬೆಸುಗೆ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದಲ್ಲದೆ ನಾಡಿನ ಅನೇಕ ಸಂಘ ಸಂಸ್ಥೆಗಳು, ಮಠಮಾನ್ಯಗಳು ಶ್ರೀನಾಥ್ ಅವರನ್ನು ಸನ್ಮಾನಿಸಿ ಬಿರುದು, ಬಾವಲಿಗಳನ್ನು ನೀಡಿವೆ.
ಕನ್ನಡದಲ್ಲಿ ಉದಯ ಟಿ.ವಿ. ವಾಹಿನಿಯನ್ನು ಪ್ರಾರಂಭಿಸಿ ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ಪ್ರಪಂಚದಾದ್ಯಂತ ಬಿತ್ತರಿಸಿದ ಕೀರ್ತಿ ಶ್ರೀನಾಥ್ ಅವರದು.
ಹಲವಾರು ಸೇವಾ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು ಅನೇಕ ಸಮಾಜಹಿತದ ಕಾಠ್ಯಕ್ರಮಗಳಲ್ಲಿ ಪೋಷಕರಾಗಿದ್ದಾರೆ, ದಾನಿಗಳಾಗಿದ್ದಾರೆ.
ರಂಗಭೂಮಿಯಿಂದ ಚಲನಚಿತ್ರ ರಂಗ, ಟಿ.ವಿ. ವಾಹಿ, ಕಲೆ ಹಾಗೂ ಸಂಸ್ಕೃತಿ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಜನಪ್ರಿಯ ಕಲಾವಿದರು ಶ್ರೀ ಶ್ರೀನಾಥ್ ಅವರು.
Categories
ಶ್ರೀ ಶ್ರೀನಾಥ್
