Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿದ್ದಲಿಂಗಯ್ಯ

ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಸಿಕರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿರುವ ಪ್ರತಿಭಾವಂತ ಚಲನಚಿತ್ರ ನಿರ್ದೇಶಕರು ಶ್ರೀ ಸಿದ್ದಲಿಂಗಯ್ಯ ಅವರು.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ, ತರೂರು ಗ್ರಾಮದ ಕೃಷಿಕ ಕುಟುಂಬದಲ್ಲಿ ೧೯೩೬ ರಲ್ಲಿ ಜನಿಸಿದ ಶ್ರೀ ಸಿದ್ದಲಿಂಗಯ್ಯನವರಿಗೆ ಎಳವೆಯಲ್ಲಿಯೇ ಅಭಿನಯದಲ್ಲಿ ಆಸಕ್ತಿ, ತಾತ, ಸೋದರಮಾವ ಹಳ್ಳಿಯ ಪ್ರತಿಷ್ಠಿತ ಕಲಾವಿದರಾಗಿದ್ದುದು ಈ ಆಸೆಗೆ ಸ್ಫೂರ್ತಿ.
ಮಾಧ್ಯಮಿಕ ಶಿಕ್ಷಣದ ನಂತರ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಡಚಣೆಯಾದಾಗ ಕಲಾವಿದನಾಗಬೇಕೆಂಬ ಹೆಬ್ಬಯಕೆಯಿಂದ ಮೈಸೂರಿಗೆ ಪ್ರಯಾಣ. ಫೋರ್‌ಬಾಯ್ ಆಗಿ ನವಜ್ಯೋತಿ ಸ್ಟುಡಿಯೋದಲ್ಲಿ ವೃತ್ತಿ ಆರಂಭಿಸಿ, ಲೈಟ್‌ಬಾಯ್ ಆಗಿ, ನಿರ್ದೇಶಕ ಶಂಕರ್‌ಸಿಂಗ್‌ ಅವರಿಗೆ ಸಹಾಯಕ ನಿರ್ದೆಶಕರಾಗಿ ಹಂತಹಂತವಾಗಿ ವೃತ್ತಿಯಲ್ಲಿ ಬೆಳೆದ ಶ್ರೀಯುತರು ೧೯೫೬ರಲ್ಲಿ ಮದ್ರಾಸಿಗೆ ತೆರಳಿ ಬಿ. ವಿಠಲಾಚಾರ್ಯರಲ್ಲಿ ಸಹಾಯಕರಾಗಿ ಅವರ ಸಂಸ್ಥೆಯ ೧೫ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೆ ವೈ. ಆರ್. ಸ್ವಾಮಿ, ಕೆ.ಎಸ್.ಎಲ್. ಸ್ವಾಮಿ ಮೊದಲಾದ ನಿರ್ದೆಶಕರೊಂದಿಗೆ ಕೆಲಸ ಮಾಡಿ ಅನುಭವ ಗಳಿಸಿದರು.
೧೯೬೯ರಲ್ಲಿ ನಿರ್ದೇಶಿಸಿದ ಚಲನಚಿತ್ರ ‘ಮೇಯರ್ ಮುತ್ತಣ್ಣ’ ದಿಂದ ಭಾಗ್ಯದಯ. ಅಲ್ಲಿಂದ ಎರಡು ವರ್ಷಕ್ಕೂ ಹೆಚ್ಚು ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ ನಿರ್ದೇಶನ ಶ್ರೀಯುತರಿಗೆ ಯಶಸ್ಸು ತಂದುಕೊಟ್ಟಿತು. ಕರ್ನಾಟಕ ಸರ್ಕಾರದಿಂದ ಈ ಚಿತ್ರಕ್ಕೆ ಚಿತ್ರನಾಟಕ ಹಾಗೂ ದ್ವಿತೀಯ ಚಿತ್ರ ಪ್ರಶಸ್ತಿ, ತಾಂತ್ರಿಕ ಪರಿಣತಿಯೆಂಬ ಹೆಗ್ಗಳಿಕೆ ಗಳಿಸಿಕೊಟ್ಟ ದೃಶ್ಯ ಹೊಂದಿರುವ ಭೂತಯ್ಯನ ಮಗ ಅಯ್ಯು ಚಿತ್ರಕ್ಕೆ ಸಂಭಾಷಣೆ, ನಿರ್ದೇಶನ, ಚಿತ್ರನಾಟಕ, ಪ್ರಥಮ ಚಿತ್ರದ ಪ್ರಶಸ್ತಿ, ಈ ಚಿತ್ರವು ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ಅನುವಾದಗೊಂಡಿತು. ಅಲ್ಲದೆ ೧೯೯೩ -೯೪ ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಶ್ರೀಯುತರಿಗೆ ಸಂದಿದೆ. ದೂರದ ಬೆಟ್ಟ, ತಾಯಿ ದೇವರು, ನ್ಯಾಯವೇ ದೇವರು, ನಮ್ಮ ಸಂಸಾರ, ಹೇಮಾವತಿ ಬಾಳು ಬೆಳಗಿತು ಮೊದಲಾದವು ಶ್ರೀಯುತರ ಪ್ರಮುಖ ಚಿತ್ರಗಳು, ಕಲಾವಿದರ ಸಾಮರ್ಥ್ಯ ಗುರುತಿಸಿ ಸಮರ್ಥವಾಗಿ ಬಳಸಿಕೊಂಡು ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಹೊಸ ಕಲಾವಿದ, ತಂತ್ರಜ್ಞರನ್ನು ಪರಿಚಯಿಸಿದ ಅವಿಸ್ಮರಣೀಯ ಚಿತ್ರಗಳನ್ನು ನಿರ್ದೇಶಿಸಿದ ಪ್ರತಿಭಾವಂತ ನಿರ್ದೇಶಕರು ಶ್ರೀ ಸಿದ್ಧಲಿಂಗಯ್ಯ ಅವರು.