Categories
ಕಿರುತೆರೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿಹಿಕಹಿ ಚಂದ್ರು

ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯನ್ನು ವಿಶಿಷ್ಟ ಬಗೆಯಲ್ಲಿ ಬೆಳಗಿ ಜನಮಾನಸವನ್ನು ರಂಜಿಸಿದ ಕಲಾಪ್ರತಿಭೆ ಸಿಹಿಕಹಿಚಂದ್ರು. ನಟ, ನಿರ್ದೇಶಕ, ಧಾರಾವಾಹಿಗಳ ನಿರ್ಮಾಪಕ, ಅಡುಗೆ ಪ್ರಚಾರಕ ಹಾಗೂ ಹಾಸ್ಯಗಾರನಾಗಿ ಅವರದ್ದು ಬಹುಮುಖ ಪ್ರತಿಭಾದರ್ಶನ. ಸಿಹಿಕಹಿ ಚಂದ್ರು ಎಂದೇ ಜನಜನಿತರಾದ ಚಂದ್ರಶೇಖರ್ ಬಾಲ್ಯದಿಂದಲೂ ಕಲಾಮೋಹಿ, ನಟನೆಯ ಗೀಳು, ಬಣ್ಣದ ಹುಚ್ಚು. ಕಾಲೇಜು ದಿನಗಳಿಂದಲೂ ರಂಗಸಖ್ಯ. ಶೇಕ್ಸ್‌ಪಿಯರ್ ಅವರ ಏ ಕಾಮಿಡಿ ಆಫ್ ಎರರ್ಸ್‌ನ ಕನ್ನಡ ರೂಪಾಂತರ ನೀನಾನಾದ್ರೆ ನಾನೀನೇನ? ಚಂದ್ರು ಅಭಿನಯಿಸಿದ ಜನಪ್ರಿಯ ಹಾಸ್ಯನಾಟಕ. ರಂಗಭೂಮಿಯಿಂದ ೯೦ರ ದಶಕದಲ್ಲೇ ಕಿರುತೆರೆ ಜಿಗಿದ ಚಂದ್ರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಸಿಹಿಕಹಿ’ ಧಾರಾವಾಹಿಯಿಂದ ಜನಪ್ರಿಯರು. ಅಂದಿನಿಂದಲೇ ಸಿಹಿಕಹಿಚಂದ್ರುವಾಗಿ ರೂಪಾಂತರ. ಬ್ಯಾಂಕ್ ಜನಾರ್ದನ್, ಉಮಾಶ್ರೀ ಜತೆಗಿನ ಚಂದ್ರು ಅವರ ಹಾಸ್ಯ ಸನ್ನಿವೇಶಗಳು ಇಂದಿಗೂ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಹಲವು ಚಿತ್ರಗಳಲ್ಲಿ ನಟಿಸುತ್ತಲೇ ಧಾರಾವಾಹಿಗಳ ನಿರ್ಮಾಣಕ್ಕೆ ಇಳಿದ ಚಂದ್ರು ಸಿಲ್ಲಿಲಲ್ಲಿ, ಪಾಪಪಾಂಡು ಜನಪ್ರಿಯ ಧಾರಾವಾಹಿಗಳ ನಿರ್ದೇಶಕರು. ಅಡುಗೆ ಮಾಡುವುದು ಚಂದ್ರು ಅವರ ಪರಮಾಪ್ತ ಕಲೆ. ಈ ಕಲೆಯನ್ನೇ ಆಧಾರವಾಗಿಟ್ಟುಕೊಂಡು ಖಾಸಗಿವಾಹಿನಿಗಳಲ್ಲಿ ಶೋ ನಡೆಸಿದ ಜನಾನುರಾಗಿಯಾದ ಹೆಗ್ಗಳಿಕೆ. ಬದುಕು ಸಾಗಿದ ಹಾದಿಯಲ್ಲಿ ನಡೆಯುತ್ತಲೇ ಬಹುಬಗೆಯ ಪಾತ್ರ-ಆಸಕ್ತಿಯಿಂದ ಗೆದ್ದ ಸಿಹಿಕಹಿ ಚಂದ್ರು ಕಲೆಯಿಂದಲೇ ಬದುಕುಕಟ್ಟಿಕೊಂಡು ಬೆಳಗಿದ ಅಪರೂಪದ ಕಲಾವಂತರು.