Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸಿ.ಕೆ.ಜೋರಾಪೂರ

ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಸಿ.ಕೆ.ಜೋರಾಪೂರ ಅಪ್ಪಟ ಕನ್ನಡ ಹೋರಾಟಗಾರ. ಸಾಂಸ್ಕೃತಿಕ ಸಂಘಟನೆಗಳ ಮೂಲಕ ನಾಡಿನ ಹಿರಿಮೆ ಮೆರೆದವರು.
ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯವರಾದ ಜೋರಾಪೂರ ಅವರು ಬಾಲ್ಯದಿಂದಲೂ ಕನ್ನಡಪ್ರೇಮಿ, ಸಾಹಿತ್ಯ ರಚನೆ, ಸಂಘಟನೆಗಳ ಮೂಲಕ ಹೆಸರಾದವರು. ಭವ್ಯಭಾರತಯಾತ್ರೆ, ಜಿಹಾದ ಮತ್ತು ಉಗ್ರಗಾಮಿ, ವಸುಧಾರಾ ಕಾದಂಬರಿ, ಬೆಳಗಾವಿ ಕನ್ನಡ ಚಳವಳಿಗಳು ಮತ್ತು ನಾಡಹಬ್ಬ ಸೇರಿದಂತೆ ೨೨ ಗ್ರಂಥಗಳ ಕರ್ತೃ, ೩ ಗ್ರಂಥಗಳ ಸಂಪಾದಕರು. ೧೯೭೬ರಲ್ಲಿ ನಾಡಹಬ್ಬ ಉತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿಯಾಗಿ ನಾಡಹಬ್ಬ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸತತ ೪೩ ವರ್ಷಗಳಿಂದಲೂ ನುಡಿ ಪರಿಚಾರಿಕೆಗೈದವರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘದ ಉಪಾಧ್ಯಕ್ಷರು, ಯುವಜನಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರು. ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ಜಗಜ್ಯೋತಿ ಸದ್ಭಾವನ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರು.