ಬೀದರಿನ ಜನಪ್ರಿಯ ಸಮಾಜಸೇವಾಕರ್ತರೂ, ಸದಾ ಚಟುವಟಿಕೆಯ ಪತ್ರಕರ್ತರೂ ಆಗಿ ಹೆಸರಾದವರು ಖೈಸರ್ ರೆಹಮಾನ್ ಅವರು.
ಐವತ್ತೆಂಟು ವರ್ಷ ವಯಸ್ಸಿನ ಖೈಸರ್ ರೆಹಮಾನ್ ಅವರು ಪ್ರಾರಂಭದಿಂದಲೂ ಬೀದರಿನ ಸಾರ್ವಜನಿಕ ಹಿತಾಸಕ್ತಿಗೆ ದುಡಿದವರು. ಬೀದರ್‌ನ ಸ್ಥಳೀಯ ಪತ್ರಿಕೆಯಾದ ಗವಾನ್ ಉರ್ದು ಮತ್ತು ಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಲೇ, ಬೀದರ್ ನಗರ ಸಭೆಯ ಸದಸ್ಯರೂ, ವಕ್ಸ್ ಸಮಿತಿಯ ಸದಸ್ಯರೂ, ಸೈಕಲ್ ರಿಕ್ಷಾ – ಆಟೋರಿಕ್ಷಾ ಸಂಘದ ಅಧ್ಯಕ್ಷರೂ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷರೂ ಆಗಿ ಶ್ರಮಿಸುತ್ತಿದ್ದಾರೆ. ಬೀದರ್ ಜಿಲ್ಲೆಯ ಹದಿನೈದು ಅಂಶ ಕಾರ್ಯಕ್ರಮ ಸಮಿತಿ ಸದಸ್ಯರಾಗಿ ಬೀದರಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಬೀದರಿನ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಈದ್ದಾ ನಿರ್ವಹಣಾ ಸಮಿತಿ, ಬೀದರಿನ ಸಾರ್ವಜನಿಕರ ಸಲಹಾ ಮತ್ತು ಶಾಂತಿ ಸಮಿತಿಗಳ ಸದಸ್ಯರಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಬೀದರಿನ ಸಾರ್ವಜನಿಕರ ಸಂಘಟಣಾ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀಯುತರು ಶಿಕ್ಷಣ ಕ್ಷೇತ್ರದ ಔನ್ನತ್ಯಕ್ಕೆ ಗಮನ ಹರಿಸಿ, ದಾರುಲ್ ಉಲೂಮ್ ಮಹಮೂದ್ ಗವಾನ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರೂ, ಶಾಂತಿ ವರ್ಧಕ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ. ಬೀದರಿನ ಸಣ್ಣ ಪುಟ್ಟ ವ್ಯಾಪಾರಿಗಳ ಹಿತಾಸಕ್ತಿಗೆ ದುಡಿಯುತ್ತ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹೈದರಾಬಾದಿನ ‘ಸಿಯಾಸತ್’ ಉರ್ದು ಪತ್ರಿಕೆಯ ಪ್ರತಿನಿಧಿ ಕರ್ನಾಟಕ ರಾಜ್ಯ ಉರ್ದು ಪತ್ರಕರ್ತರ ಸಂಘದ ಅಧ್ಯಕ್ಷ ಹೀಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವ ನಿರ್ಭೀತ ಲೇಖನಕ್ಕೆ ಹೆಸರಾದವರು.
ಸಮಾಜಸೇವಕ, ಪತ್ರಕರ್ತ, ಕ್ರೀಡಾ ಪ್ರಚಾರಕರಾಗಿ ಜಾತ್ಯಾತೀತತೆಯನ್ನು ಧೈಯವಾಗಿಟ್ಟುಕೊಂಡು ಶ್ರಮಿಸುತ್ತಿರುವ ಪತ್ರಿಕೋದ್ಯಮಿ ಶ್ರೀ ಖೈಸರ್ ರೆಹಮಾನ್ ಅವರು.
Categories
ಶ್ರೀ ಸಿ. ಬೈಸರ್ ರೆಹಮಾನ್
