Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸಿ.ವಿ. ಗೋಪಿನಾಥ್

ದೂರಸಂಪರ್ಕ ಇಂಜಿನಿಯರಾಗಿ, ತಾಯುಡಿಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವವರು ಶ್ರೀ ಸಿ.ವಿ.ಗೋಪಿನಾಥ್ ಅವರು.
೧೯೪೫ರಲ್ಲಿ ಹುಟ್ಟಿದ ಶ್ರೀ ಸಿ.ವಿ. ಗೋಪಿನಾಥ್ ಬಿಸಿನೆಸ್ ಮ್ಯಾನೇಜ್ಮೆಂಟಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಿ.ಎಸ್.ಎನ್.ಎಲ್.ನಲ್ಲಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿ, ಭಾರತಾದ್ಯಂತ ಕೆಲಸ ಮಾಡಿರುವ ಶ್ರೀಯುತರು ತಾವು ಸೇವೆ ಸಲ್ಲಿಸಿದ ಸ್ಥಳಗಳಲೆಲ್ಲ ಕನ್ನಡ ಸಂಘಗಳನ್ನು ಸ್ಥಾಪಿಸಲು ಕಾರಣಕರ್ತರಾಗಿದ್ದಾರೆ. ಜಬ್ಬಲ್ಪುರ, ಅಹಮದಾಬಾದ್ ಮತ್ತು ದೆಹಲಿಯ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, ದೆಹಲಿ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಳಿದಾಸ ಮಾನಸ ಸರೋವರ ಯಾತ್ರಾ ತಂಡಗಳಿಗೆ ಸಂಪರ್ಕಾಧಿಕಾರಿಯಾಗಿ ಹೋಗಿದ್ದು, ಅಲ್ಲಿನ ವಿವರಗಳನ್ನು ವಿಡಿಯೋಕರಣ ಮಾಡಿಕೊಂಡು ಸಿ.ಡಿ. ಡಿಸ್ಕ್ಗಳನ್ನು ಮಾಡಿದ್ದಾರೆ ಹಾಗೂ ಅದನ್ನು ರಾಷ್ಟ್ರಾದ್ಯಂತ ಪ್ರಚುರಪಡಿಸಿದ್ದಾರೆ.
ಗುಜರಾತಿ, ಮರಾಠಿ, ಬೆಂಗಾಲಿ, ಹಿಂದಿ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳನ್ನು ಮಾತನಾಡಬಲ್ಲ, ವೇದಗಳನ್ನು, ಸಂಸ್ಕೃತ ಶ್ಲೋಕಗಳನ್ನು ಕಲಿಸುವ ಗೋಪಿನಾಥ್ ಅವರು ಸಾಂಪ್ರದಾಯಿಕ ಶಾಲೆಯನ್ನು ನಡೆಸುತ್ತಿದ್ದಾರೆ. ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗೂ ಶ್ರೀಯುತರ ಸಂದರ್ಶನಗಳು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರಗೊಂಡಿವೆ.
ಹೊರನಾಡ ಕನ್ನಡಿಗರಾಗಿ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವಕರಲ್ಲಿ ಪಸರಿಸುತ್ತಿರುವವರು ಶ್ರೀ ಸಿ.ವಿ. ಗೋಪಿನಾಥ್ ಅವರು.