Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ ಹೊನ್ನಪ್ಪ

ಮೊಟ್ಟ ಮೊದಲ ಬಾರಿಗೆ ಕರ್ನಾಟಕಕ್ಕೆ ಕಬಡ್ಡಿ ಕ್ರೀಡೆಯಲ್ಲಿ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿ ತಂದು ಕೊಟ್ಟ ಕನ್ನಡದ ಕುವರ ಶ್ರೀ ಸಿ ಹೊನ್ನಪ್ಪ ಅವರು. ಜನನ ೧೯೭೩ರಲ್ಲಿ, ವೃತ್ತಿಯಿಂದ ಬ್ಯಾಂಕ್ ಅಧಿಕಾರಿ.

ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶ್ರೀ ಸಿ ಹೊನ್ನಪ್ಪ ಅವರು, ತಮ್ಮ ೧೭ನೆಯ ವಯಸ್ಸಿನಲ್ಲಿಯೇ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಹೊಮ್ಮಿದ ಅಪ್ರತಿಮ

ಪ್ರತಿಭಾವಂತ.

ಕರ್ನಾಟಕದ ಕ್ರೀಡಾ ತಂಡವನ್ನು ಉಪನಾಯಕರಾಗಿ ಹಾಗೂ ನಾಯಕರಾಗಿ ಪ್ರತಿನಿಧಿಸಿದ್ದು ಮಾತ್ರವಲ್ಲ, ಅಂತರಾಷ್ಟ್ರೀಯ ಏಷ್ಯನ್ ಕ್ರೀಡಾಕೂಟದಲ್ಲಿ ಉಪನಾಯಕರಾಗಿ ಭಾರತವನ್ನು ಪ್ರತಿನಿಧಿಸಿದ್ದು ಇವರ ಹೆಗ್ಗಳಿಕೆ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ದಕ್ಷಿಣವಲಯ ಚಾಂಪಿಯನ್‌ ಷಿಪ್ ಮತ್ತು ಫೆಡರೇಷನ್ ಕಪ್ ಟೂರ್ನ್‌ಮೆಂಟ್ ಗಳಲ್ಲಿ ಭಾಗವಹಿಸಿದ ಹಿರಿಮೆಗೆ ಶ್ರೀಯುತರು ಪಾತ್ರರು. ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಈ ಅಪ್ರತಿಮ ಉತ್ಸಾಹಿ ಕ್ರೀಡಾಪಟುವನ್ನು ಅರಸಿ ಬಂದ ಬೆಳ್ಳಿ ಪದಕ, ಚಿನ್ನದ ಪದಕ ಹಾಗೂ ಪ್ರಶಸ್ತಿಗಳು ಅಸಂಖ್ಯಾತ, ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ರೈಡರ್ ಮತ್ತು ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ ಪಡೆದಿರುವ ಶ್ರೀ ಹೊನ್ನಪ್ಪನವರು ಇತ್ತೀಚೆಗೆ ಭಾರತ ಸರ್ಕಾರದ ಅತ್ಯುನ್ನತ ಅರ್ಜುನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ ಹಾಗೂ ಬೆಂಗಳೂರು ನಗರ ಮಹಾಪೌರರಿಂದ ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಪ್ರಶಸ್ತಿ ಪದಕಗಳ ಸರದಾರನಾದ ಶ್ರೀ ಹೊನ್ನಪ್ಪನವರು ಕರ್ನಾಟಕದ ಸುಪುತ್ರ; ಸರಳ ಸಜ್ಜನಿಕೆಯ ವಿನಯ ಸಂಪನ್ನ.