ವಸ್ತುನಿಷ್ಠ ವರದಿಗಾರರು, ಖಚಿತ ಬರವಣಿಗೆಗೆ ಮಾದರಿ ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು.
೧೯೪೭ ರಲ್ಲಿ ಸಂಯುಕ್ತ ಕರ್ನಾಟಕದ ವರದಿಗಾರರಾಗಿ ವೃತ್ತಿಯನ್ನು ಆರಂಭಿಸಿದ ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು ಸುದ್ದಿ ಸಂಪಾದಕರಾಗಿ, ಸಹಾಯಕ ಸಂಪಾದಕರಾಗಿ ಹೆಸರು ಗಳಿಸಿ, ೧೯೮೩ ರಲ್ಲಿ ಸಂಪಾದಕರಾಗಿ ನಿವೃತ್ತಿ ಹೊಂದಿದರು. ಕನ್ನಡದ ಪ್ರಮುಖ ಪತ್ರಿಕೋದ್ಯಮಿಗಳಲ್ಲಿ ಒಬ್ಬರಾದ ಶ್ರೀಯುತರು ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ್ದ ಅಖಿಲ ಭಾರತೀಯ ಸೇವಾದಳದ ಸಂಘಟಕರಲ್ಲೊಬ್ಬರು.
೧೯೬೫ರಲ್ಲಿ ಕಾರವಾರದಲ್ಲಿ, ೧೯೮೨ ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿರುವ ಶ್ರೀಯುತರು ಅನೇಕ ಪತ್ರಕರ್ತರ ಶಿಬಿರಗಳು ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದ ಪ್ರತಿಷ್ಠಿತ ಕನ್ನಡ ಪ್ರಕಾಶನ ಸಂಸ್ಥೆ ಮಿಂಚಿನಬಳ್ಳಿ ಗ್ರಂಥಮಾಲೆಯ ಪುನರುಜ್ಜಿವನ ಕಾರ್ಯದಲ್ಲಿ ಸ್ತುತ್ಯಾರ್ಹ ಸೇವೆ ಸಲ್ಲಿಸಿರುವ ಶ್ರೀಯುತರು ಆರು ಸ್ವತಂತ್ರ ಕೃತಿಗಳನ್ನು, ಮೂರು ಭಾಷಾಂತರ ಕೃತಿಗಳನ್ನು, ಐದು ಸಂಪಾದಿತ ಗ್ರಂಥಗಳನ್ನು ರಚಿಸಿದ್ದಾರೆ. ಗಾಂಧಿ ವಿಚಾರಧಾರೆ, ಸರ್ವೋದಯ ತತ್ತ್ವಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶ್ರೀ ದಾನಿ ಅವರು ಕುಮಾರವ್ಯಾಸ ಭಾರತದ ವಿಶೇಷ ಅಧ್ಯಯನ ಮಾಡಿದ್ದಾರೆ. ವಿವಿಧ ಪತ್ರಿಕೆಗಳು, ವಿಶೇಷಾಂಕಗಳು ಹಾಗೂ ಸ್ಮರಣ ಸಂಚಿಕೆಗಳಿಗೆ ಶ್ರೀಯುತರು ಬರೆದಿರುವ ನೂರಾರು ಲೇಖನಗಳು ಮೌಲಿಕವಾದವು.
ಪತ್ರಿಕಾರಂಗದಲ್ಲಿ ನಿಷ್ಠೆ, ಪ್ರಾಮಾಣಿಕತೆ, ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿರುವ ಪತ್ರಕರ್ತರು ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು.
Categories
ಶ್ರೀ ಸುರೇಂದ್ರ ಭೀಮರಾವ್ ದಾನಿ
