ಶಿಲ್ಪಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವ ಅಪೂರ್ವ ಕಲಾವಿದ ಶ್ರೀ ಹೆಚ್. ಎನ್. ಕೃಷ್ಣಮೂರ್ತಿ ಅವರು.
ಕರ್ನಾಟಕದ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆ ಹಕ್ಕಲಿನಲ್ಲಿ ೧೯೪೭ರಲ್ಲಿ ಜನಿಸಿದ ಶ್ರೀ ಹೆಚ್.ಎನ್. ಕೃಷ್ಣಮೂರ್ತಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದು, ನಂತರ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಕಲೆಯ ಅಧ್ಯಯನ ನಡೆಸಿದರು.
ಕುವೆಂಪು ಅವರ ಅಪ್ಪಣೆಯ ಮೇರೆಗೆ ಶಾಂತಿನಿಕೇತನದಲ್ಲಿ ಶಿಲ್ಪಕಲೆಯನ್ನು ಅಭ್ಯಸಿಸಿ, ಮಾಡೆಲಿಂಗ್ ಹಾಗೂ ವರ್ಣಚಿತ್ರಗಳಲ್ಲಿ ಐದು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ಶ್ರೀಯುತರು ಕರ್ನಾಟಕಕ್ಕೆ ಹಿಂತಿರುಗಿ ದಾವಣಗೆರೆಯ ಸರ್ಕಾರಿ ಕಲಾ ಮತ್ತು ಕರಕುಶಲ ಶಾಲೆಯಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಮುಖ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀ ಹೆಚ್.ಎನ್. ಕೃಷ್ಣಮೂರ್ತಿ ಅವರು ೧೯೬೭ರಲ್ಲಿ ಕೊಲ್ಕತ್ತದಲ್ಲಿ ಆನಂದ ಮೇಳವನ್ನು, ಪುರುಷತ್ರಯರ ಕಲಾಪ್ರದರ್ಶನವನ್ನು ನಡೆಸಿ, ದಾವಣಗೆರೆಯಲ್ಲಿ ತಮ್ಮ ಚಿತ್ರಗಳ ಪ್ರದರ್ಶನವನ್ನು ನಡೆಸಿದ್ದಾರೆ.
ಅಡಿಕೆ ಕೃಷಿ, ಬೇಟೆ, ಮೀನುಗಾರಿಕೆ, ಕಾಫಿ ಕೃಷಿ ಹೀಗೆ ತಮ್ಮ ಮಲೆನಾಡಿನ ಪರಿಸರದ ವಸ್ತುಗಳನ್ನು ಆಯ್ತು ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಶ್ರೀಯುತರು ವಿವಿಧ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಿದರು. ಶಿಲ್ಪದಲ್ಲಿನ ಅವರ ಅಭಿವ್ಯಕ್ತಿ ಗಾಢವಾದುದು. ಸಿಮೆಂಟ್ ಶಿಲ್ಪಗಳು, ಸಣ್ಣತಲೆಯ ದಡೂತಿ ದೇಹದ ಮಾನವಾಕೃತಿಗಳು ವಿಶಿಷ್ಟವಾಗಿದ್ದು ಅದರ ಮೇಲ್ಮಗೆ ಹಲಸಿನ ಹಣ್ಣಿನ ಮುಳ್ಳಿನಂತೆ ರಚನೆ ಮಾಡಲಾಗಿರುವುದು ಶ್ರೀಯುತರ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ.
ಕರ್ನಾಟಕ ಶಿಲ್ಪ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತರ ಅನೇಕ ಕಲಾಕೃತಿಗಳು ಖಾಸಗಿ ಹಾಗೂ ಸಾರ್ವಜನಿಕ ಸಂಗ್ರಹಗಳಲ್ಲಿವೆ. ಪ್ರಸಕ್ತ ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಲ್ಪಕಲೆಯ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಪೂರ್ವ ಕಲಾವಿದ ಶ್ರೀ ಹೆಚ್. ಎನ್. ಕೃಷ್ಣಮೂರ್ತಿ ಅವರು.
Categories
ಶ್ರೀ ಹೆಚ್.ಎನ್. ಕೃಷ್ಣಮೂರ್ತಿ
