೧೧. ಶ್ಲೇಷ
ನಾನಾರ್ಥಮೇಕರೂಪಾಧೀನ-ವಚೋ-ರಚಿತಮಪ್ಪೊಡಕ್ಕುಂ ಶ್ಲೇಷಂ |
ಮಾನಿತಮಳಂಕ್ರಿಯಾನುವಿಧಾನಂ ಮತ್ತಿಂತು ತದುಪಲಕ್ಷ್ಯ-ವಿಕಲ್ಪಂ ||೧೦೯||
೧೦೬. ‘ಮಾನಧನನೆ, ನೀನು ಅಂಥ ದಾನಿಯೆಂದು ಹೊಗಳಿಸುವುದೆಂತು ? ನಿನ್ನ ಹೊನ್ನೆಲ್ಲ ದೀನಾನಾಥರ ಕೈಯಲ್ಲಿಯ ಆಸ್ತಿಯೇ ಎಂದಮೇಲೆ ನೀನು ದಾನಿಯೆನಿಸುವುದು ಹೇಗೆ?’-ಇದು ಹೇತ್ವಾಕ್ಷೇಪ. *ಇಲ್ಲಿ ಹೇತು ಅಥವಾ ಕಾರಣವನ್ನು ಕಲ್ಪಿಸಿ ಹೇಳುವ ಮೂಲಕ, ಪರ್ಯಾಯವಾಗಿ ಸ್ತುತಿಯನ್ನು ಅಲ್ಲಗಳೆಯಲಾಗಿರುವುದರಿಂದ ‘ಹೇತ್ವಾಕ್ಷೇಪ’. ಹೋಲಿಸಿ-ದಂಡಿ, ಐಐ -೧೬೭.*
೧೦೭. ವ್ಯತಿರೇಕಾಲಂಕಾರದ ಪ್ರಭೇದವೇ ಈ ಆಕ್ಷೇಪಾಲಂಕಾರ ಕೂಡ ಎಂದು ನೃಪತುಂಗನ ಉಪದೇಶಕ್ರಮದಿಂದ ಊಹಿಸಿ ವಿಬುಧರು ಅರಿತುಕೊಳ್ಳಬೇಕು. *ಏಕೆಂದರೆ ಔಪಮ್ಯವನ್ನಲ್ಲಗಳೆಯುವ ಉಕ್ತಿಪ್ರಕಾರ ಕೂಡ (ಎಂದರೆ ‘ಆಕ್ಷೇಪ’) ‘ವ್ಯತಿರೇಕ’ ಅಥವಾ ಉಪಮೇಯದ ಅಧಿಕ್ಯದಲ್ಲೇ (ಎಂದರೆ ‘ವ್ಯತಿರೇಕ’ದಲ್ಲೇ) ಪರ್ಯವಸಾನಗೊಳ್ಳುವುದು; ಉಪಮೇಯದಲ್ಲಿ ಉಪಮಾನಕ್ಕಿಂತ ಹೆಚ್ಚಿನ ವಿಶೇಷಾಂಶವನ್ನು ಗಮನಿಸಿಯೇ ಆಕ್ಷೇಪ ಪ್ರವೃತ್ತವಾಗುವುದೆಂದು ತಾತ್ಪರ್ಯ. ಎರಡಕ್ಕೂ ವ್ಯತ್ಯಾಸವಿಷ್ಟೆ-ವ್ಯತಿರೇಕವು ವಿಧಿರೂಪವಾಗಿದ್ದರೆ ((affirmative), ಆಕ್ಷೇಪ ನಿಷೇಧರೂಪವಾಗಿರುತ್ತದೆ (negative); ವ್ಯತಿರೇಕದಲ್ಲಿ ಉಪಮೇಯದೊಡನೆ ಉಪಮಾನ ಕೂಡ ವಾಚ್ಯವಾಗಿದ್ದರೆ, ವ್ಯತಿರೇಕದಲ್ಲಿ ಉಪಮೇಯವೊಂದೇ ವಾಚ್ಯವಾಗಿರುತ್ತದೆ.*
೧೦೮. ನೃಪತುಂಗನ ಮತಾನುಸಾರ, ಉಕ್ತವಾದ ಪ್ರತಿಯೊಂದು ಪದಾರ್ಥದ ಒಂದಿಲ್ಲೊಂದಂಶದ ನಿಷೇಧವೇ ಆಕ್ಷೇಪದ ಪ್ರಕಾರಗಳಲ್ಲೆಲ್ಲ ಮೇಲೆ ಹೇಳಿದಂತೆ ಅನುಗತವಾಗಿ ಕಂಡುಬರುತ್ತದೆ.
೧೦೯. ಏಕರೂಪಾನ್ವಿತವಾದ ಶಬ್ದ ಅನೇಕಾರ್ಥವಾಚಿಯಾಗಿರುವುದೇ ‘ಶ್ಲೇಷ’. ಇದು ಪ್ರಖ್ಯಾತವಾದ ಅಲಂಕಾರ. ಇದರ ಪ್ರಭೇದಗಳು ಹೀಗಿರುತ್ತವೆ-*ಹೋಲಿಸಿ-ದಂಡಿ, II -೩೧೦.*
ಉದಯಾರೂಢಂ ಕಾಂತ್ಯಾಸ್ಪದನನುರಕ್ತಾತ್ಮ-ಮಂಡಳಂ ಕುಮುದಕರಂ |
ಮೃದುತರ-ಕರಂಗಳಿಂದತಿಮುದಮಂ ಲೋಕಕ್ಕೆ ಪಡೆಗುಮಿಂತೀ ರಾಜಂ ||೧೧೦||
ವಿಪುಳತರ-ಕಟಕನುದ್ಯದ್-ದ್ವೀಪ-ಹ[1]ರಿ-ಮಹಿಷೀ-ಮಿ[2]ಷೇವ್ಯನುನ್ನತ-ಪಾದಂ |
ವ್ಯು[3]ಪನೀತ-ಶ್ರೀಫಲದಂ ವಿಪರೀತಕನಪ್ಪನಂತು ಭೂಭೃನ್ನಾಥಂ ||೧೧೧||
೧೧೦. ಉದಯಾರೂಢನಾಗಿ, ಕಾಂತ್ಯಾಸ್ಪದನಾಗಿ, ರಕ್ತಮಂಡಲನಾಗಿ, ಕುಮುದಕರನಾಗಿರುವ ರಾಜನು ತನ್ನ ಮೃದುವಾದ ಕರಗಳಿಂದ ಲೋಕಕ್ಕೆ ಹರ್ಷಾತಿಶಯವನ್ನುಂಟುಮಾಡುವನು. *ಹೋಲಿಸಿ-ದಂಡಿ, MM-೩೧೧. ಇಲ್ಲಿ ರಾಜ=(೧) ಚಂದ್ರ ಮತ್ತು (೨) ಅರಸ. ಚಂದ್ರಪರವಾದಾಗ ಪದಗಳ ಅರ್ಥ ಹೀಗೆ-ಉದಯಾರೂಢ = ಉದಯಾಚಲನ್ನೇರಿದ, ಕಾಂತ್ಯಾಸ್ಪದ = ಕಾಂತಿಪೂರ್ಣ, ರಕ್ತಮಂಡಲ = ಕೆಂಪಾದ ಬಿಂಬವುಳ್ಳವನು, ಕುಮುದಕರ = ಕನ್ನೈದಿಲೆಗಳನ್ನು ಅರಳಿಸುವ ಕಿರಣಗಳುಳ್ಳವನು. ಮೃದುತರಕರಂಗಳಿಂ = ಸುಂದರವಾದ ಕಿರಣಗಳಿಂದ. ಭೂಪತಿ ಪರವಾದಾಗ ಅದೇ ಶಬ್ದಗಳಿಗೆ ಎರಡನೆಯ ಅರ್ಥ ಹೀಗಾಗುತ್ತದೆ-ಉದಯಾರೂಢಂ = ಅತಿಶಯವಾದ ಅಭ್ಯುದಯವನ್ನು ಅಥವಾ ಐಶ್ವರ್ಯವನ್ನು ತಳೆದವನು, ಕಾಂತ್ಯಾಸ್ಪದಂ=ಪ್ರಭಾವಶಾಲಿ, ಅನುರಕ್ತಾತ್ಮಮಂಡಲಂ = ಮಾಂಡಲಿಕರಾದ ರಾಜರು ಹಾಗು ಪ್ರಜೆಗಳೆಲ್ಲರ ಅನುರಾಗಕ್ಕೆ ಪಾತ್ರನು. ಕುಮುದಕರಂ-ಭೂಮಿಗೆ ಹರ್ಷಕರನು, ಮೃದು ತರಕರಂಗಳಿಂ = ಕಡಿಮೆಯಾದ ತೆರಿಗೆಗಳಿಂದ. ಹೀಗೆ ನೋಡಲು ಒಂದೇ ಶಬ್ದರೂಪವನ್ನು ಹೊಂದಿರುವ ಪದಗಳು ಉಭಯಾರ್ಥಕಗಳಾಗಿರುವುದರಿಂದ ಶ್ಲೇಷಾಲಂಕಾರ. ಇದಕ್ಕೆ ‘ಅಭಿನ್ನಪದ’ವೆಂದು ದಂಡಿಯ ಹೆಸರು. ಹೋಲಿಸಿ-ದಂಡಿ, II -೩೧೧.*
೧೧೧. ‘ಈ ಭೂಭೃನ್ನಾಥನು ವಿಪುಲ-ಕಟಕನು, ದ್ವೀಪ-ಹರಿ-ಮಹಿಷೀ ಸಂಸೇವ್ಯನು, ಉನ್ನತಪಾದನು. ಉಪನೀತ ಶ್ರೀಫಲದನು ಮತ್ತು ವಿಪರೀತನು’. *ಇಲ್ಲಿ ಶ್ಲೇಷನು ಉಭಯಾರ್ಥಗಳ ಸಂಯೋಜನೆ ಹೀಗೆ-ಭೂಭೃನ್ನಾಥ=ರಾಜ ಮತ್ತು ಪರ್ವತ. ವಿಶೇಷಣಗಳಿಗೆ ರಾಜಪರವಾದ ಅರ್ಥ-ವಿಪುಲಕಟಕ=ವಿಶಾಲ ರಾಜಧಾನಿಯುಳ್ಳವನು; ‘ಉನ್ನತಪಾದಂ’=ಉನ್ನತವಾದ ಪದವಿಯುಳ್ಳವನು, ‘ವ್ಯುಪನೀತ-ಶ್ರೀ-ಫಲದಂ’=ತಾನು ತಂದ ಧನವನ್ನು ಫಲಪ್ರದವಾಗಿ ದಾನಮಾಡುವವನು, ವಿಪರೀತಕಂ- ಹಗೆಗಳಿಗೆ ಪ್ರಚಂಡನು. ಪರ್ವತಪರವಾದ ಅರ್ಥ ಹೀಗೆ-ವಿಪುಲಕಟಕ=ವಿಶಾಲವಾದ ಪಾರ್ಶೃಗಳುಳ್ಳದ್ದು, ದ್ವೀಪ=ಆನೆ, ಹರಿ=ಸಿಂಹ, ಮಹಿಷೀ=ಎಮ್ಮೆ ಮುಂತಾದ ಪ್ರಾಣಿಗಳಾದ ಸಂಸೇವ್ಯವಾದದ್ದು, ‘ಉನ್ನತಪಾದಂ’=ಎತ್ತರವಾದ ತಪ್ಪಲು ಪ್ರದೇಶವನ್ನುಳ್ಳದ್ದು. ‘ವ್ಯುಪನೀತಶ್ರೀಫಲದಂ’- ಬಿಲ್ವಫಲವನ್ನು ಬಿಡತಕ್ಕದ್ದು. ‘ವಿಪರೀತಕಂ’- ಹಕ್ಕಿಗಳಿಂದ ತುಂಬಿರುವುದು. ಇದು ವಿರೋಧಸ್ಪರ್ಶವಿಲ್ಲದ ಶ್ಲೇಷ. ಹೋಲಿಸಿ-ದಂಡಿ, II -೩೭೧.*
ನೆರೆದ ವಿಸಂವಾದಂ ಪಂಜರ-ಶುಕ-ತತಿಯೊಳ್ ಕುಲಾಲ-ಗೇ[4]ಹಂಗಳೊಳಂ |
ಪರ-ಚಕ್ರ-ಭ್ರಾಂತಿಗಳಧ್ವರದೊಳೆ ನೆಗೞ್ಗುಂ ಮಹಾಹವ-ಧ್ವನಿ ನಿಯತಂ ||೧೧೨||
ಅರಿ-ಗೋತ್ರ-ಭೇದಿ ವಿಬುಧೇಶ್ವರನಲ್ಲಂ ಧೃತ-ಕಳಾ-ಕಳಾಪಂ ದೋಷಾ*
ಕರನಲ್ಲಂ ವಿದಿತೋಮಾ-ವರನಾತ್ತ-ಭುಜಂಗನಲ್ಲನೀ ಭೂಪಾಳಂ ||೧೧೩||
ವರ-ರೂಪಕಾದ್ಯಳಂಕಾರ-ರಚನೆಯೊಳ್ ಮುನ್ನೆ ಪೇೞ್ದು ಬಂದೆಂ ಕೆಲವಂ |
ದೊರೆಕೊಳೆ ಬಗೆಗೀ ತೆಱದಿಂ ನಿರಂತರ-ವಿರುದ್ಧ-ನಿಯಮಿತ-ಶ್ಲೇಷೆಗಳಂ ||೧೧೪||
೧೨. ಉತ್ಪ್ರೇಕ್ಷೆ
ತಱಸಂದು ಪಲವು ತೆಱದಿಂ ನೆ[5]ಱೆದಿರೆ ನೆಗೞ್ದೆರ್ದುದೊಂದು ವಸ್ತು-ಸ್ಥಿತಿಯಂ |
ಮಱಸಿಪೆಱತೊಂದು ಮಾೞ್ಕೆಯಿನಱಪುವುದುತ್ಪ್ರೇಕ್ಷೆಯೆಂಬುದಿಂತದಱ ತೆಱಂ ||೧೧೫||
೧೧೨. ‘ವಿಸಂವಾದ’ ಎಂದರೆ ಹಕ್ಕಿಗಳ ಉಲಿ ಪಂಜರದ ಗಿಳಿಗಳಲ್ಲಿ ಮಾತ್ರ ಇದೆ; ಆದರೆ ಮತ್ತೆಲ್ಲಿಯೂ ‘ವಿಸಂವಾದ’ ಅಥವಾ ಅಸಾಂಗತ್ಯವೆಂಬುದಿಲ್ಲ. ‘ಪರಚಕ್ರಭ್ರಾಂತಿ’ ಎಂದರೆ ಚಕ್ರದ ಗಿರಿಗಿರಿ ಸುತ್ತುವಿಕೆ ಕುಂಬಾರರ ಮನೆಗಳಲ್ಲಿ ಮಾತ್ರ ಇದೆ; ಮತ್ತೆಲ್ಲಿಯೂ ಶತ್ರುಬಲದಮೇಲೆ ಏರಿಹೋಗುವ ಸುದ್ದಿಯಿಲ್ಲ. ದೊಡ್ಡ ‘ಹವ’ ಎಂದರೆ ಹವನದ ಧ್ವನಿ ಮಹಾಯಾಗಗಳಲ್ಲಿದೆ; ಮತ್ತೆಲ್ಲಿಯೂ ದೊಡ್ಡ ಕಾಳಗದ ಸದ್ದಿಲ್ಲ. *ಇದೇ ಮುಂದಿನ ಲಕ್ಷಣಕಾರರ ಪರಿಭಾಷೆಯಲ್ಲಿ ‘ಪರಿಸಂಖ್ಯಾ’ ಎಂಬ ಅಲಂಕಾರವಾಗುತ್ತದೆ. ದಂಡಿಯ ಮತದಂತೆ ‘ನಿಯಮಶ್ಲೇಷ’. ಇಲ್ಲ ಈ ಗ್ರಂಥಕಾರನು ದಂಡಿಯನ್ನೇ ಅನುಸರಿಸುವುದು ಸ್ಪಷ್ಟ. ಹೋಲಿಸಿ-ದಂಡಿ, II -೩೧೯.*
೧೧೩. ಈ ಭೂಪನು ಶತ್ರುಗಳೆಂಬ ‘ಗೋತ್ರ’=ಪರ್ವತಗಳನ್ನು ಭೇದಿಸುವವನಾದರೂ ‘ವಿಬುಧೇಶ್ವರ’ ಎಂದರೆ ದೇವೇಂದ್ರ ಅಲ್ಲ. ಕಲಾಕಲಾಪಗಳನ್ನು ಪಡೆದಿದ್ದರೂ ದೋಷಾಕಾರ ಅಥವಾ ಚಂದ್ರನಲ್ಲ. ಉಮಾಪತಿಯಾದರೂ (ಉಮೆಯೆಂಬ ರಾಣಿಯ ಅಥವಾ ಕೀರ್ತಿವನಿತೆಯ ಕಾಂತನಾದರೂ) ನಾಗಭೂಷಣನಾದ ಶಿವನಲ್ಲ. *ಇಲ್ಲಿ ಶ್ಲೇಷಯ ಜೊತೆಗೆ ವಿರೋಧ ಮತ್ತು ಆಕ್ಷೇಪಾಲಂಕಾರಗಳ ಛಾಯೆಯೂ ಸ್ಪಷ್ಟವಾಗಿ ಕಾಣುತ್ತದೆ.*
೧೧೪. (ಶ್ಲೇಷದ) ಕೆಲವು ಪ್ರಕಾರಗಳನ್ನು ಈಗಾಗಲೇ ರೂಪಕಾದಿ ಅಲಂಕಾರಗಳ ಅಂಗವಾಗಿ ಹೇಳಿದ್ದಾಗಿದೆ. ಇಲ್ಲಿ ಕೊಟ್ಟ ಲಕ್ಷ್ಯಗಳನ್ನು ವಿರುದ್ಧ ಮತ್ತು ನಿಯಮಿತ ಶ್ಲೇಷೆಗಳ ಪರಿಗಳೆಂದರಿಯಬೇಕು. *ಈ ಮಾತು ಕಡೆಯ ಎರಡು ಪದ್ಯಗಳಿಗೆ ಮಾತ್ರ ವ್ಯುತ್ಕ್ರಮವಾಗಿ ಅನ್ವಯಿಸುತ್ತದೆ.*
೧೧೫. (ಚೇತನದ ಅಥವಾ ಅಚೇತನದ) ವಸ್ತುಸ್ಥಿತಿ ನಾನಾಬಗೆಯಿಂದ ಬೇರೆ ಬೇರೆಯಾಗಿಯೇ ಇದ್ದರೂ ಅದನ್ನು ಮರೆಮಾಚಿ ಮತ್ತೊಂದೇ ಎಂದು ಕಲ್ಪಿಸಿ ಹೇಳುವುದು ‘ಉತ್ಪ್ರೇಕ್ಷೆ’ ಎಂಬ ಅಲಂಕಾರ. ಅದರ ಪರಿಗಳು ಹೀಗಿವೆ-ಹೋಲಿಸಿ-ದಂಡಿ, MM-೨೨೧*.
ನಡುವಗಲ ಬಿಸಿಲ್ ತನ್ನಂ ಸುಡೆ ವನ-ಕರಿ ಕಮಲ-ಬಂಧುವೊಳ್ ದಿನಕರನೊಳ್ |
ಕಡುಗಾಯ್ಪೆನೆ ಸರಸಿಜಮಂ ಕಿ[6]ಡಿಸಲ್ ತಾಂ ಪೊಕ್ಕುದಾಗಬ[7]ಗೆದಾ ಕೊಳನಂ ||೧೧೬||
ನೆಲಸಿ ಕಿವಿಯೊಳ್ ಮದಾಯತ-ವಿಲೋಕದೊಳ್ ಪೊಳೆವುದೊಳ್ಪಿನೆಂದೀ ಕರ್ಣೋ-
ತ್ಪಲಮುಮನಾಕ್ರಮಿಸುವುದಿದು ವಿಲಾಸಿನೀ ನಿನ್ನ ಲೋಲ-ಲೋಚನ-ಯುಗಳಂ ||೧೧೭||
೧೩. ಸೂಕ್ಷ್ಮ
ಬಗೆದಿಂಗತ-ಚೇಷ್ಟಾಕಾರ-ಗತಂಗಳಿನಂತರಂಗದೊಳ್ ಮಱಸಿದುದಂ |
ಮಿಗೆ ಸೂಚಿಸುವುದು ಸೂಕ್ಷಾನುಗತಾಳಂಕಾರಮಿಂತು ತದುದಾಹರಣಂ ||೧೧೮||
೧೧೬. ನಡುಹಗಲಿನ ಬಿಸಿಲು ತನ್ನನ್ನು ತುಂಬಾ ಸುಡಲಾಗಿ, ಕಾಡಾನೆಯು ಆ ಸೂರ್ಯನ ಮೇಲೆ ತುಂಬಾ ದ್ವೇಷ ತಾಳಿ, ಅವನ ಬಳಗವಾದ ಕಮಲವನ್ನು ನಾಶ ಮಾಡಲೋ ಎಂಬಂತೆ ಕೊಳವನ್ನು ಹೊಕ್ಕಿತು. *ಇಲ್ಲಿ ಚೇತನವಾದ ಆನೆಯ ಕಾರ್ಯವನ್ನು ಉತ್ಪ್ರೇಕ್ಷಿಸಲಾಗಿದೆ. ಅದು ಬಾಯಾರಿ ನೀರು ಕುಡಿಯಲು, ನೀರಲ್ಲಿ ಸ್ನಾನಮಾಡಲು, ಕಮಲಗಳನ್ನು ತಿನ್ನಲು ಕೊಳವನ್ನು ಹೊಕ್ಕಿದ್ದೇ ವಸ್ತುಸ್ಥಿತಿ. ಅದು ಕವಿ ಕಲ್ಪನೆಯಲ್ಲಿ ಸೂರ್ಯನ ಮೇಲಿನ ದ್ವೇಷ ತೀರಿಸಿಕೊಳ್ಳುವುದಕ್ಕೆ ಎಂದಾಗಿರುವುದರಿಂದ ಉತ್ಪ್ರೇಕ್ಷಾಲಂಕಾರ. ಹೋಲಿಸಿ-ದಂಡಿ, II -೨೨೨-೨೨೩.*
೧೧೭. ಕಿವಿಯಲ್ಲಿ ನೆಲಸಿ ನನ್ನ ದೀರ್ಘಕಟಾಕ್ಷದ ಸೊಬಗನ್ನೇ ತಾನೂ ತಳೆದಿದೆ ಎಂದು-(ಅಸೂಯೆಯಿಂದಲೋ ಏನೋ) ನಿನ್ನ ಚಂಚಲ ನೇತ್ರದ್ವಯವು ಕಣೋತ್ಪಲವನ್ನು ಆಕ್ರಮಿಸುತ್ತದೆ ! *ಹೋಲಿಸಿ-ದಂಡಿ, II -೨೨೯.*
೧೧೮. ಅಂತರಂದಲ್ಲಿ ಗುಪ್ತವಾಗಿಟ್ಟುದನ್ನು ಅಂಗಕ್ರಿಯೆಗಳು, ಮನೋಗತವನ್ನು ಪ್ರಕಟಿಸುವ ಸನ್ನೆಗಳು, ಮುಂತಾದವುಗಳಿಂದ ಸೂಚಿಸುವುದು ‘ಸೂಕ್ಷ್ಮ’ವೆಂಬ ಅಲಂಕಾರ. ಅದರ ಉದಾಹರಣೆ ಹೀಗೆ- *ಇಲ್ಲಿ ಸೂಚ್ಯವಾದ ಸಂಗತಿ ಇಲ್ಲವೆ ಇಂಗಿತವು ಸೂಕ್ಷ್ಮ ಎಂದರೆ ಮೇಲ್ನೋಟಕ್ಕೆ ದುರ್ಜ್ಞೇಯ, ಜಾಣರಿಗೆ ಮಾತ್ರ ತಿಳೀಯಲು ಶಕ್ಯವಿರುವಂತಹುದು, ಎಂಬ ಕಾರಣದಿಂದ ಅಲಂಕಾರದ ಹೆಸರು ಅನ್ವರ್ಥಕ. ಹೋಲಿಸಿ ದಂಡಿ, II -೧೬೦.*
ತಿಳಿಸಲಡಿಗೆಱಗಿದೋಪನ ತಳಂಗಳಾ ತೀಟದಿಂ ಪದಂಗಳೊಳೊಗೆದಾ |
ಪುಳಕ-ಚಯಂಗಳ್ ಕಳೆದುವು ಮುಳಿಸಂ ನಲ್ಲಳ್ಗೆ ಬೆಳ್ಮೊಗಂಗೈದಿರೆಯುಂ ||೧೧೯||
ಪರುಷಾಳಾಪಮುಮತಿನಿಷ್ಠುರ-ವೀಕ್ಷಣ-ಮುಖ-ವಿಕಾರಮುಂ ಮಱಸಿರೆಯುಂ |
ತರಳಾಪಾಂಗಮುಮಾಕೆಯ ದರ-ಹಸಿತಮುಮಱಯೆ ಪೇ[8]ೞ್ಗುಮೆಱಕಮನೆರ್ದೆಯೊಳ್ ||೧೨೦||
Leave A Comment