೧೯೩೨ದಲ್ಲಿ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಜನಿಸಿದ ಶ್ರೀ ಷಡಕ್ಷರಿ ಗವಾಯಿ ಅವರು ತಂದೆಯವರಿಂದ ಸಂಗೀತದ ಕಡೆಗೆ ಒಲವನ್ನು ಬೆಳೆಸಿಕೊಂಡವರು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಸೇರಿ ಅಲ್ಲಿ ಪಂಡಿತ್ ಪುಟ್ಟರಾಜ ಗವಾಯಿರವಲ್ಲಿ ಸಂಗೀತ ಶಿಕ್ಷಣ ಪಡೆದರು. ಮುಂದೆ ಪಂಡಿತ್ ಪಂಚಾಕ್ಷರಿ ಸ್ವಾಮಿ ಮತಿಘಟ್ಟಿಯವರಲ್ಲಿ ಹೆಚ್ಚಿನ ಶಿಕ್ಷಣ ಪಡೆಯುವ ಅವಕಾಶವೂ ಷಡಕ್ಷರಿ ಅವರಿಗೆ ದೊರೆಯಿತು.

ಆಕಾಶವಾಣಿ ದೂರದರ್ಶನಗಳಲ್ಲಿ ಕಾರ್ಯಕ್ರಮ ನೀಡುವ ಹಂತಕ್ಕೆ ಬೆಳೆದ ಗವಾಯಿಗಳು ಮುಂದೆ ಪಂಡಿತ್ ಚಂದ್ರಶೇಖರ‍ಪುರಾಣಿಕ ಮಠ ಅವರ ಸಲಹೆ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಅಂಕೋಲ, ಭಟ್ಕಳ ಮುಂತಾದ ಸ್ಥಳಗಳಲ್ಲಿ ಶಾಲೆಗಳನ್ನು ತೆರೆದು ಆ ಭಾಗಗಳಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಪಸರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಜವಾಬ್ದಾರಿಯನ್ನು ಗವಾಯಿಗಳು ಸಮರ್ಥವಾಗಿ ನಿರ್ವಹಿಸಿ, ಹಲವಾರು ಗಾಯಕ ವಾದಕರನ್ನು ಮಾಧ್ಯಮಕ್ಕೆ ಕೊಟ್ಟರು ಅನ್ನುವುದು ವಿಶೇಷ. ಅವರ ಶಿಷ್ಯರನೇಕರು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಕಲಾವಿದರಾಗಿ ಹೆಸರು ಮಾಡಿದ್ದಾರೆ.

ಶ್ರೀ ಷಡಕ್ಷರಿ ಗವಾಯಿ ಅವರಿಗೆ ೨೦೦೬-೦೭ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.