ಷಡಕ್ಷರದೇವ

ಒಂದು ಊರು. ಕೋಳೂರು ಎಂದು ಅದರ ಹೆಸರು. ಅಲ್ಲಿ ಒಬ್ಬ ಭಕ್ತ. ಅವನ ಹೆಸರು ಶಿವದೇವ. ಅವನಿಗೊಬ್ಬ ಮಗಳು. ಅವಳಿಗೆ ಕೊಡಗೂಸು ಎಂದು ಹೆಸರು.

ಶಿವದೇವ ಪ್ರತಿದಿನ ತನ್ನ ಇಷ್ಡದೈವ ಶಿವಲಿಂಗಕ್ಕೆ ಭಕ್ತಿ ಯಿಂದ ಪೂಜೆ ಮಾಡಿ ಹಾಲನ್ನು ನೈವೇದ್ಯ ಮಾಡುವನು.

ಒಂದು ದಿನ ಶಿವದೇವ ದೇವತಾಕಾರ್ಯಕ್ಕಾಗಿ ನೆರೆ ಊರಿಗೆ ಹೋಗಬೇಕಾಯಿತು. ಹೋಗುವಾಗ ತನ್ನ ಹೆಂಡತಿ ಯನ್ನೂ ಕರೆದುಕೊಂಡು ಹೋದ. ಮನೆಯಲ್ಲಿ ತನ್ನ ಮಗಳನ್ನು ಕರೆದು ಪ್ರಿತಿಯಿಂದ ಗಲ್ಲವನ್ನು ಹಿಡಿದು ಮುದ್ದಿಸಿದ. ಅವಳಿಗೆ, “ಮಗಳೇ, ನೀನು ಮನೆ ಬಿಟ್ಟು ಎಲ್ಲಿಗೂ ಹೋಗ ಬೇಡ. ನಾನು ಬರುವಾಗ ನಿನಗೆ ಬಣ್ಣದ ಗೊಂಬೆ, ಹೊಸ ವಸ್ತ್ರಗಳನ್ನು ತಂದುಕೊಡುವೆನು” ಎಂದು ಹೇಳಿದ. “ಆದರೆ ನಾನು ಬರುವವರೆಗೆ ಶಿವಲಿಂಗ ವ್ರತವನ್ನು ನಡೆಸಬೇಕು, ಪ್ರತಿ ದಿನ ಒಂದು ಒಳ್ಳ ಹಾಲನ್ನು ನೈವೇದ್ಯ ಮಾಡಬೇಕು, ಖಂಡಿತ ತಪ್ಪಿಸಬಾರದು” ಎಂದು ತಿಳಿಹೇಳಿದ. ತಪ್ಪದೆ ಅವನ ಮಾತನ್ನು ನಡೆಸುವುದಾಗಿ ಭರವಸೆ ಕೊಟ್ಟಳು ಮಗಳು. ತಂದೆ ಊರಿಗೆ ಹೋದ.

ನೀನು ಹಾಲು ಕುಡಿಯದಿದ್ದರೆ-

ಮರುದಿನ ಕೊಡಗೂಸು ಸ್ನಾನಮಾಡಿ ಮಡಿಬಟ್ಟೆಯನ್ನು ಧರಿಸಿಕೊಂಡಳು. ಮನೆಯ ಆಕಳಿನ ಹಾಲನ್ನು ತೆಗೆದುಕೊಂಡು ಸಡಗರದಿಂದ ಶಿವಾಲಯಕ್ಕೆ ಹೋದಳು. ಅಲ್ಲಿ ಭಕ್ತಿಪೂರ್ವಕ ಶಿವನ ಪೂಜೆಯನ್ನು ಮಾಡಿದಳು.

ಅನಂತರ ನೈವೇದ್ಯಕ್ಕೆ ತಂದ ಹಾಲಿನ ಬಟ್ಟಲನ್ನು ವಿಗ್ರಹದ ಮುಂದೆ ಇಟ್ಟಳು. “ದೇವಾ, ಹಸಿದಿರುವೆ, ಹಾಲನ್ನು ಕುಡಿ” ಎಂದು ಹೇಳಿ ಕಂಬದ ಮರೆಗೆ ಹೋಗಿ ನಿಂತಳು.

ಆದರೆ ದೇವರು ಬರಲಿಲ್ಲ. ಹಾಲನ್ನು ಕುಡಿಯಲಿಲ್ಲ. ಹುಡುಗಿಗೆ ಬಹಳ ಕಳವಳವಾಯಿತು. “ಶಂಕರ, ಯಾವ ಕಾರಣದಿಂದ ನೀನು ಹಾಲು ಕುಡಿಯದೆ ಸುಮ್ಮನೆ ಇರುವೆ? ನಾನು ಮನೆಯಿಂದ ಬಂದದ್ದು ತಡವಾಯಿತೆ? ಹಾಲು ಕಾದದ್ದು ಸಾಲದೆ? ಅಥವಾ ಆರಿಹೋಯಿತೋ? ಏನಾಯಿತು ಹೇಳು” ಎಂದು ಕೇಳಿದಳು, ಬೇಡಿದಳು, ಕಣ್ಣೀರು ಸುರಿಸಿದಳು. “ಈ ಹಾಲು ಬಿಸಿಯಾಗಿದೆ, ಸಿಹಿಯಾಗಿದೆ, ಬೇಗ ಕುಡಿ” ಎಂದು ತಿಳಿಹೇಳಿದಳು.

ಶಿವ ಮಾತನಾಡಲಿಲ್ಲ, ಹಾಲನ್ನು ಕುಡಿಯಲಿಲ್ಲ. ಕೊಡಗೂಸು, “ನೀನು ಕುಡಿಯಲು ಒಪ್ಪಿದರೆ ಮನೆಯಲ್ಲಿ ಇರುವ ಇನ್ನುಳಿದ ಸವಿ ತಿನಿಸುಗಳನ್ನು ತರುತ್ತೇನೆ” ಎಂದು ಒಲಿಸಲು ಪ್ರಯತ್ನಿಸಿದಳು. ಉಹುಂ, ಎಷ್ಟು ಹೇಳಿದರೂ ಶಿವ ಹಾಲನ್ನು ಕುಡಿಯಲಿಲ್ಲ, ಮಾತನಾಡಲಿಲ್ಲ.

 

‘ಶಿವನು ಹಾಲು ಕುಡಿಯದೆ ಹೋದರೆ ತಂದೆಗೆ ಏನು ಹೇಳಲಿ?’

ಕೊಡಗೂಸಿಗೆ ಕೋಪ ಬಂದಿತು. ದುಃಖವಾಯಿತು. ’ಶಿವ ಹಾಲು ಕುಡಿಯದೆ ಹೋದರೆ ತಂದೆಗೆ ತಾನು ಏನು ಹೇಳಬೇಕು? ತಂದೆ ಸಿಟ್ಟಾಗುವನಲ್ಲ!’ ಎಂದು ಚಡಪಡಿಸಿದಳು ಏನೂ ಅರಿಯದ ಹುಡುಗಿ. ತನ್ನ ತಂದೆ ಹಾಲನ್ನು ತಂದಾಗ ಶಿವನೇ ಅದನ್ನು ಕುಡಿಯುತ್ತಿದ್ದ  ಎಂದು ಆ ಹುಡುಗಿಯ ನಂಬಿಕೆ.

ಕೊನೆಗೆ ಅವಳು ಯಾವ ದಾರಿಯೂ ಕಾಣದೆ ಶಿವನಿಗೆ ಹೇಳಿದಳು; “ನೀನು ಹಾಲು ಕುಡಿಯದಿದ್ದರೆ ನಾನು ಈ ಕಂಬಕ್ಕೆ ತಲೆ ಚಚ್ಚಿಕೊಳ್ಳುತ್ತೇನೆ!”

ಉಹುಂ, ಶಿವ ಅಲ್ಲಾಡಲಿಲ್ಲ, ಹಾಲು ಕುಡಿಯಲಿಲ್ಲ.

ಕೊಡಗೂಸು ಕಲ್ಲಿಗೆ ತಲೆ ಕೊಟ್ಟಳು.

ಶಿವನಿಗೆ ‘ಅಯ್ಯೋ’ ಎನ್ನಿಸಿತು. ಇವಳ ಮುಗ್ಧ ಭಕ್ತಿಗೆ ಮೆಚ್ಚಿದ. ಪ್ರತ್ಯಕ್ಷನಾದ. ಹಾಲನ್ನು ಕುಡಿದ, ಅವಳಿಗೆ ಆಶೀರ್ವದಿಸಿ ಮತ್ತೆ ಮೊದಲಿನಂತಾದ. ಕುಡಿದನಲ್ಲಾ ಎಂಬ ಸಂತೋಷ. ಆಗಲೂ, “ತಂದೆ ಬಂದಮೇಲೆ ಇದೆಲ್ಲವನ್ನೂ ಹೇಳುತ್ತೇನೆ, ನೋಡುತ್ತಿರು” ಎಂದು ಶಿವನಿಗೆ ಎಚ್ಚರಕೊಟ್ಟೇ ಹೊರಟಳು.

ಈ ಕಥೆಯನ್ನು ಹೇಳಿರುವವನು ಕವಿ ಷಡಕ್ಷರದೇವ. ಕೋಳೂರು ಕೊಡಗೂಸಿನ ಮುಗ್ಧ ಸ್ವಭಾವ, ಶಿವನ ದೇವಾಲಯಕ್ಕೆ ಹೊರಡುವಾಗ ಅವಳ ಸಡಗರ, ಶಿವನು ಹಾಲನ್ನು ಕುಡಿಯದಿದ್ದಾಗ ಅವಳ ದುಗುಡ, ಕಡೆಯಲ್ಲಿ ಅವಳ ಸಂತೋಷ-ಇದನ್ನೆಲ್ಲ ಕಣ್ಣಿಗೆ ಕಟ್ಟುವಂತೆ,  ಹೃದಯಕ್ಕೆ ಮುಟ್ಟುವಂತೆ ವರ್ಣಿಸುತ್ತಾನೆ. ಇಂತಹ ಹಲವು ಕಥೆಗಳನ್ನು ಹೇಳಿದ್ದಾನೆ ಈ ಕವಿ.

ಕನ್ನಡ ಸಾಹಿತ್ಯಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಹದಿನೇಳನೆಯ ಶತಮಾನದಲ್ಲಿ ಷಡಕ್ಷರ ದೇವನು ಹಿರಿಯ ಕವಿಗಳ ಸಾಲಿನಲ್ಲಿ ಬರುತ್ತಾನೆ.

ಜೀವನ

ಮುಪ್ಪಿನ ಷಡಕ್ಷರಿ, ದೊಡ್ಡ ಷಡಕ್ಷರಸ್ವಾಮಿ, ಷಡಕ್ಷರದೇವ, ವಿರಕ್ತ ಷಡಕ್ಷರಿ, ಷಡಕ್ಷರಾಮಾತ್ಯ ಎಂಬ ಐವರು ಕವಿಗಳು ಕನ್ನಡ ಸಾಹಿತ್ಯದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರಲ್ಲಿ ಷಡಕ್ಷರದೇವನು ಕನ್ನಡ-ಸಂಸ್ಕೃತ ಭಾಷೆಗಳೆರಡರಲ್ಲಿಯೂ ಅನೇಕ ಗ್ರಂಥಗಳನ್ನು ರಚಿಸಿ, ಉಭಯಭಾಷಾವಿಶಾರದ ಎನಿಸಿಕೊಂಡಿದ್ದಾನೆ. ಇವನು ಸುಮಾರು ೧೬೩೬ರಲ್ಲಿ ಜನಿಸಿದನು. ಇವನ ತಂದೆ-ತಾಯಿ ಯಾರು ಎಂದು ತಿಳಿದುಬಂದಿಲ್ಲ. ಈತನ ಜನನಸ್ಥಳ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದನಗೂರು. ಆದರೆ ಈತನು ಎಳಂದೂರಿನ ಷಡಕ್ಷರದೇವನೆಂದೇ ಹೆಸರುವಾಸಿ ಆಗಿದ್ದಾನೆ. ಷಡಕ್ಷರದೇವನು ತನ್ನ ಬಾಲ್ಯ ಶಿಕ್ಷಣವನ್ನು ಎಳಂದೂರಿನಲ್ಲಿಯೇ ಮುಗಿಸಿದ. ಇವನು ತನ್ನ ಎಳೆಯ ವಯಸ್ಸಿನಲ್ಲಿಯೇ ಕಾವ್ಯ ರಚಿಸು ತ್ತಿದ್ದುದರಿಂದ ಆತನ ಸಹ ಅಧ್ಯಾಯಿಗಳು ಆತನನ್ನು ‘ಕವಿಶೇಖರ’ ಎಂದು ಕರೆಯುತ್ತಿದ್ದರು. ಈತನ ಅಂಕಿತ ‘ಶಿವಲಿಂಗ’.

ಷಡಕ್ಷರದೇವನು ದನಗೂರಿನ ಹಿರೇಮಠದ ಸ್ವಾಮಿ ಯಾಗಿದ್ದ. ಅಲ್ಲಿ ಈಗಲೂ ಆತನ ಮಠವಿದೆ, ತಪೋಭೂಮಿ ಯಿದೆ. ಷಡಕ್ಷರದೇವನ ಪುಣ್ಯಾಶ್ರಮವಿದೆ. ಆತನಿಗೆ ಪ್ರಿಯ ವಾದ ಶಿವಲಿಂಗೇಶ್ವರ ದೇವಾಲಯವನ್ನು ನಾವು ಈಗಲೂ ಕಾಣಬಹುದು.

ಷಡಕ್ಷರದೇವ ಶಾಸ್ತ್ರಾಭ್ಯಾಸ ಮಾಡಿ ಹೆಚ್ಚಿನ ಪಾಂಡಿತ್ಯ ಹೊಂದಿದ. ಅನಂತರ ಎಳಂದೂರಿನಲ್ಲಿ ರಾಜಗುರುವಾಗಿ ತನ್ನ ಜೀವನದ ಬಹುಭಾಗವನ್ನೆಲ್ಲ ಅಲ್ಲಿಯೇ ಕಳೆದ. ಈಗಲೂ ಎಳಂದೂರಿನಲ್ಲಿರುವ ‘ದನಗೂರು’ ದೇವರ ಗದ್ದುಗೆಯು ಈತನ ಮಠವೆಂದು ಹೇಳುತ್ತಾರೆ. ಮಠದಲ್ಲಿರುವ ಸಮಾಧಿಯೇ ಕವಿ ಸಮಾಧಿ ಎಂದು ಹೇಳುತ್ತಾರೆ.

ಆತನಿಗೆ ರಾಜಾಶ್ರಯವಿರಲಿಲ್ಲ. ಆದರೆ ರಾಜ ಮನೆತನಗಳು ಆತನಿಗೆ ಭಕ್ತಿ-ವಿಶ್ವಾಸ-ಆದರಗಳನ್ನು ತೋರಿ ಗೌರವಿಸಿದವು. ಷಡಕ್ಷರದೇವನು ಆಜನ್ಮ ಬ್ರಹ್ಮಚಾರಿಯಾಗಿ ಉಳಿದು, ತನ್ನ ಇಡೀ ಜೀವನವನ್ನು ಸಮಾಜಸೇವೆಗಾಗಿ ಮುಡಿಪಾಗಿರಿಸಿದ.

ಶಿವನಂ ತದೀಯ ಶರಣವ್ರಜಮಂ

ಷಡಕ್ಷರದೇವನು ತನ್ನ ವಂಶ ಪರಂಪರೆಯನ್ನು ವೀರಶೈವ ಪೂರ್ವಾಚಾರ್ಯರಾದ ರೇಣುಕಾಚಾರ್ಯರಿಂದ ಪ್ರಾರಂಭಿಸಿದ್ದಾನೆ. ತಾನು ರೇಣುಕರ ಗುರುಪರಂಪರೆಯವ ನೆಂದು ಹೇಳಿಕೊಂಡಿದ್ದಾನೆ. ತನ್ನ ಎಲ್ಲ ಕಾವ್ಯಗಳಲ್ಲಿಯೂ ಶಿವಪಾರ್ವತಿ, ಗಣಪತಿ, ಷಣ್ಮುಖ, ವೀರಭದ್ರ ಮುಂತಾದ ದೇವತೆಗಳನ್ನು ಭಕ್ತಿಯಿಂದ ವರ್ಣಿಸಿದ್ದಾನೆ. ಆತನು ದೇವತೆ ಗಳನ್ನು ಸ್ಮರಿಸುವುದರೊಂದಿಗೆ ಪೂರ್ವದ ಶರಣ ಕವಿಗಳನ್ನು ಭಕ್ತಿಯಿಂದ ನೆನೆದಿದ್ದಾನೆ. ಹರಿಹರ ಎಂಬುವನು ಹಿರಿಯ ಕವಿ. ಷಡಕ್ಷರದೇವನು ಹರಿಹರನು ನಡೆದ ಮಾರ್ಗದಲ್ಲಿಯೇ ತಾನೂ ನಡೆಯುವೆನೆಂದು ಹೇಳಿ ಕೊಂಡಿದ್ದಾನೆ. ಈ ಭೂ ಮಂಡಲದಲ್ಲಿ ಇರುವ ಅನೇಕ ರಾಜಮಹಾರಾಜರನ್ನು ಮತ್ತು ಶ್ರೀಮಂತರನ್ನು ಕವಿಗಳಾದವರು ಹೊಗಳಿದರು. ಅವರಿಗೆ ಇಂದ್ರಚಂದ್ರನೆಂದು ಇಲ್ಲಸಲ್ಲದ ವಿಶೇಷಣಗಳನ್ನು ಉಪ ಯೋಗಿಸಿದರು. ಆದರೆ ಅವರೋ ಇತರರಂತೆಯೇ ಹುಟ್ಟು-ಸಾವುಗಳಿಗೆ ಸಿಕ್ಕವರು. ಇಂಥ ವ್ಯಕ್ತಿಗಳ ಮೇಲೆ ಕಾವ್ಯವನ್ನು ಬರೆದು ಅನೇಕ ಕವಿಗಳು ಕೂಡಾ ಕೆಟ್ಟು ಹೋದರು.

ಹರಿಹರನು ಹಂಪಿಯ ವಿರೂಪಾಕ್ಷನಿಗೆ ತನ್ನ ನಾಲಗೆ ಯನ್ನು ಮಾರಿಕೊಂಡೆ ಎಂದು ಹೇಳಿದ್ದಾನೆ. ಹಾಗೆಯೆ ಷಡಕ್ಷರ ದೇವನೂ ಶಿವಸ್ತುತಿಗಾಗಿ ತನ್ನನ್ನು ಮಾರಿಕೊಂಡನು.

‘ಮಹಿತ ಮಹಿಮಾ
ಸ್ವದನಂ ಶಿವನಂ ತದೀಯ ಶರಣವ್ರಜಮಂ
ಪದೆದು ಮುದ ಮೊದವೆ ಬಲ್ಲಂ
ದದೆ ನುತಿಪೆಂ ನುತಿಸೆನುಳಿದ ಸುರರಂ ನರರಂ’

ಎಂದ. ‘ಶಿವನನ್ನೂ ಅವನ ಶರಣರನ್ನೂ ನನಗೆ ತಿಳಿದಂತೆ ಸ್ತುತಿಸುತ್ತೇನೆ. ಇತರ ದೇವತೆಗಳನ್ನೂ ಮನುಷ್ಯರನ್ನೂ ಸ್ತುತಿಸು ವುದಿಲ್ಲ’ ಎಂದು ಘೋಷಿಸಿದ.

ಹಿರಿಯ ಕವಿ

‘ಸರಸಜನಮಾನಿಗ’, ‘ಉಭಯ ಕವಿತಾವಿಶಾರದ’, ‘ಯೋಗಿಜನಮಂಡಿತ’ ಎಂಬ ಬಿರುದುಗಳು ಈತನಿಗೆ ಇದ್ದವು. ಅಲ್ಲದೆ ಈತನಿಗೆ ವೀರಶೈವ ಶಾಸ್ತ್ರಗಳಲ್ಲಿ ಅಪಾರ ಜ್ಞಾನ ವಿದ್ದುದರಿಂದ ಪಂಡಿತರು ಈತನನ್ನು ‘ಷಟ್‌ಸ್ಥಲ ಶಾಸ್ತ್ರದರ್ಶನಾಂಕ’ ಎಂದು ಕರೆಯುತ್ತಿದ್ದರು. ಪ್ರತಿಭೆ, ಪಾಂಡಿತ್ಯ ಮತ್ತು ಕಲ್ಪನೆ ಈ ಮೂರರ ಮುಪ್ಪರಿಯು ಈತನ ಕಾವ್ಯಗಳಿಂದ ತಿಳಿಯುತ್ತದೆ.

ಚಂಪು ಕೃತಿಗಳಾದ ‘ರಾಜಶೇಖರ ವಿಳಾಸ’, ‘ವೃಷಭೇಂದ್ರ ವಿಜಯ’ (ಬಸವರಾಜ ವಿಜಯ) ಮತ್ತು ‘ಶಬರ ಶಂಕರ ವಿಳಾಸ’ ಎಂಬ ಮೂರು ಕಾವ್ಯಗಳನ್ನು ರಚಿಸಿದ್ದಾನೆ. ಸಂಸ್ಕೃತದಲ್ಲಿ ‘ಕವಿಕರ್ಣರಸಾಯನ’ ಎಂಬ ಕಾವ್ಯವನ್ನೂ ರಚಿಸಿದ್ದಾನೆ. ಅಲ್ಲದೆ ಅನೇಕ ಸಂಸ್ಕೃತ ಲಘು ಕಾವ್ಯಗಳನ್ನು ಬರೆ ದಿದ್ದಾನೆ. ಷಡಕ್ಷರದೇವನು ತನ್ನ ಕಾವ್ಯಗಳಲ್ಲಿ ವರ್ಣನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ್ದಾನೆ. ಚಂಪು ಕೃತಿಗೆ ಸೀಮಾಪುರುಷ ನೀತನು. (ಗದ್ಯ, ಪದ್ಯ ಎರಡನ್ನೂ ಬಳಸುವ ಕೃತಿಗೆ ‘ಚಂಪು ಕೃತಿ’ ಎಂದು ಹೆಸರು.) ಮಹಾಕವಿಗಳಾದ ಪಂಪ, ರನ್ನ, ನಾಗಚಂದ್ರ, ಹರಿಹರ ಈ ಕವಿಗಳ ಸಾಲಿನಲ್ಲಿ ನಿಲ್ಲತಕ್ಕವನು. ಕನ್ನಡ ಚಂಪು ಸಂಪ್ರದಾಯದ ಮಹಾಕವಿಗಳಲ್ಲಿ ಪಂಪನು ಆದಿ, ಷಡಕ್ಷರದೇವನು ಕೊನೆ.

ಕವಿಯ ಹೊಣೆ

ಪ್ರತಿಭೆಯಲ್ಲದೇ ಕಾವ್ಯದೃಷ್ಟಿ ಸಾಧ್ಯವಿಲ್ಲ. ಕವಿತ್ವ ಕಲಿಸಿದರೆ ಬರುವ ಕಸುಬಲ್ಲ. ಅದು ದೈವದತ್ತವಾದ ಉಡುಗೊರೆ. ಸುಂದರವಾದ ಕಾವ್ಯ ಬರೆಯಲು ದೇವರ ಅನುಗ್ರಹ ಬೇಕು.

ಶಾಸ್ತ್ರಗಳನ್ನು ಕಷ್ಟಪಟ್ಟು ಅಭ್ಯಾಸ ಮಾಡಿ ಯಾರಾದರೂ ಚೆನ್ನಾಗಿ ತಿಳಿದುಕೊಳ್ಳಬಹುದು. ಆದರೆ ಕಾವ್ಯವನ್ನು ಪ್ರಯತ್ನ ದಿಂದ ಅಥವಾ ಅಭ್ಯಾಸದಿಂದ ಮಾತ್ರವೇ ರಚಿಸಲು ಸಾಧ್ಯ ವಿಲ್ಲ. ನವಕವಿತೆ ಎಂಬ ಚಿಂತಾರತ್ನವು ಶಿವನ

ಕೃಪೆಯಿಲ್ಲದವನಿಗೆ, ಪೂರ್ವಾರ್ಜಿತ ಪುಣ್ಯ ದೊರೆಯ ಲಾರದು ಎನ್ನುತ್ತಾನೆ ಷಡಕ್ಷರದೇವ.

ಹೀಗೆಂದರೆ ಇನ್ನೊಂದು ವಿಷಯವನ್ನು ಹೇಳಿದ ಹಾಗಾಯಿತು. ಕಾವ್ಯ ಬರೆಯುವ ಶಕ್ತಿ ಇದ್ದವನು ಅದನ್ನು ಎಚ್ಚರಿಕೆಯಿಂದ, ಸಾರ್ಥಕವಾಗಿ ಬಳಸಬೇಕು. ಹಣಕ್ಕಾಗಿ ಅಥವಾ ಕೀರ್ತಿಗಾಗಿ ಅಥವಾ ಯಾರೋ ರಾಜನನ್ನೋ ಶ್ರೀಮಂತನನ್ನೋ ಸಂತೋಷಪಡಿಸುವುದಕ್ಕೆ ಬಳಸಿ ವ್ಯರ್ಥ ಮಾಡಬಾರದು.

ಹಾಗಾದರೆ ಒಳ್ಳೆಯ ಕಾವ್ಯ ಹೇಗಿರಬೇಕು? ಅದನ್ನು ಹೇಳುತ್ತಾನೆ ಷಡಕ್ಷರದೇವ.

ಮೊಟ್ಟಮೊದಲು ಕಾವ್ಯ ಮನಸ್ಸಿಗೆ ಸಂತೋಷವನ್ನು ಕೊಡ ಬೇಕು. ತಂಪಾದ ಗಾಳಿಯಂತೆ, ಭ್ರಮರದ ನಿನಾದದಂತೆ, ನಂದನವನದಂತೆ ತನ್ನ ಕಾವ್ಯ ಚಿತ್ತಾಕರ್ಷಕವಾಗಿದೆ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾನೆ.

ಒಳ್ಳೆಯ ಕವಿ ಯಾರು?

ಮೋಡಗಳಿಗೆ ಹೆದರಿ ಸೂರ್ಯನು ತನ್ನ ಕಿರಣಗಳನ್ನು ಪಸರಿಸದೆ ಇರುವನೇ? ಹಾಗೆಯೇ ಸತ್ಕವಿಯಾದವನು ಕೆಟ್ಟ ವರಿಗೆ ಹೆದರಿ ಕಾವ್ಯ ರಚಿಸದೇ ಇರುವುದಿಲ್ಲ. ಕಾಗೆಯು ಸಿಹಿಯಾದ ಮಾವಿನಹಣ್ಣನ್ನು ಬಿಟ್ಟು ಬೇವಿನಕಾಯಿಯನ್ನೇ ತಿಂದು ಅದರಲ್ಲಿಯೇ ಸಂತೋಷಪಡುತ್ತದೆ. ಹಾಗೆಯೇ

ಕುಕವಿಯಾದವನು ಕಾವ್ಯದಲ್ಲಿರುವ ಒಳಿತನ್ನು ನೋಡದೆ ದೋಷವನ್ನೇ ಹುಡುಕುವನು. ತಪ್ಪುಗಳನ್ನು ಹುಡುಕುವುದ ರಲ್ಲಿಯೇ ಅವನಿಗೆ ಸಂತೋಷ. ಸಜ್ಜನರು ಮಾತ್ರ ಕಾವ್ಯದಲ್ಲಿ ಒಳಿತನ್ನು ಕಾಣುವರು.

ದುಂಬಿಗೆ ಪುಷ್ಪದ ಪರಾಗ ಬೇಕು. ಪಕ್ವವಾದ ಹಣ್ಣೆಂದರೆ ಗಿಳಿಗೆ ಪ್ರೀತಿ. ಎಳೆಯ ಚಿಗುರು ಕೋಗಿಲೆಗೆ ಇಷ್ಟ. ಹೀಗೆ ಒಂದೇ ವೃಕ್ಷದ ಪುಷ್ಪ, ಫಲ, ಪಲ್ಲವಗಳಲ್ಲಿ ಒಂದೊಂದು, ಒಂದೊಂದು ಪಕ್ಷಿಗೆ ಪ್ರಿಯವೆನಿಸುತ್ತದೆ. ಹಾಗೆಯೇ ಕಾವ್ಯ ದಲ್ಲಿಯ ಶಬ್ದ, ಅರ್ಥ, ಅಲಂಕಾರ, ರಸ, ಭಾವಗಳಲ್ಲಿ ಒಂದೊಂದನ್ನು ಒಂದೊಂದು ಬಗೆಯ ಜನರು ಅಪೇಕ್ಷಿ ಸುವರು. ಆದ್ದರಿಂದ ನನ್ನ ಕಾವ್ಯದಲ್ಲಿ ಎಲ್ಲವನ್ನೂ ತರಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾನೆ ಷಡಕ್ಷರದೇವ.

ಷಡಕ್ಷರಿ

’ರಾಜಶೇಖರ ವಿಳಾಸ’ವು ಷಡಕ್ಷರಿಯು ರಚಿಸಿದ ಮೊದಲನೆಯ ಕಾವ್ಯ. ಪಂಚಾಕ್ಷರಿ ಮಂತ್ರದ ಹಿರಿಮೆಯನ್ನು ಹೇಳುವುದು ಈ ಕಾವ್ಯದ ಉದ್ದೇಶವಾಗಿದೆ. ’ನಮಃ ಶಿವಾಯ’ ಎಂಬುದೇ ಪಂಚಾಕ್ಷರಿ ಮಂತ್ರ. ನಮಃ ಶಿವಾಯ ಎಂಬ ಸಂಸ್ಕೃತ ಪದದಲ್ಲಿ ಐದು ಅಕ್ಷರಗಳಿವೆ. ಅಂತೆಯೇ ಅದಕ್ಕೆ ಪಂಚಾಕ್ಷರಿ ಮಂತ್ರವೆಂಬ ಹೆಸರು ಬಂದಿದೆ. ’ಶಿವನಿಗೆ ವಂದಿಸುತ್ತೇನೆ’ ಎಂದು ಅದರ ಅರ್ಥ.

‘ಓಂ ನಮಃ ಶಿವಾಯ’ ಎಂಬ ಪದದಲ್ಲಿ ಆರು ಅಕ್ಷರ ಗಳಿರುವುದರಿಂದ ಅದನ್ನು ‘ಷಡಕ್ಷರಿ’ಯೆಂದು ಹೇಳುತ್ತಾರೆ. ಈ ಕವಿಯ ಹೆಸರೂ ಅದೇ.

ಷಡಕ್ಷರದೇನವನು ‘ರಾಜಶೇಖರ ವಿಳಾಸ’ವನ್ನು ಬರೆದ ದ್ದನ್ನು ಕುರಿತು ಒಂದು ಕಥೆಯನ್ನು ಹೇಳುತ್ತಾರೆ.

ನೇಮಿಚಂದ್ರ ಎಂಬುವನು ಒಬ್ಬ ಕವಿ. ಅವನ ಒಂದು ಕೃತಿ ‘ಲೀಲಾವತಿ’. ಅದು ಬಹು ಜನಪ್ರಿಯವಾದ ಕಾವ್ಯ.

ಎಳಂದೂರಿನಲ್ಲಿ ಒಂದು ದಿನ ‘ಲೀಲಾವತಿ’ ಗ್ರಂಥ ಮೆರವಣಿಗೆ ನಡೆಯಿತು. ಷಡಕ್ಷರದೇವನು ಇದಕ್ಕಿಂತಲೂ ಹೆಚ್ಚು ರಸಭರಿತವಾದ, ಸರ್ವಮಾನ್ಯವಾದ ಕಾವ್ಯ ಬರೆಯು ವುದಾಗಿ ಹೇಳಿದನು.  ಈ ವಿಷಯ ನಿರ್ಣಯ ಆಗುವವರೆಗೆ ಮೆರವಣಿಗೆ ನಿಲ್ಲಿಸಲು ತಿಳಿಸಿದನು. ಅನಂತರ ಒಂದು ವರ್ಷ ದೊಳಗಾಗಿ ‘ರಾಜಶೇಖರ  ವಿಳಾಸ’ ಎಂಬ ಮಹಾಕಾವ್ಯವನ್ನು ರಚಿಸಿದನು. ಪಂಡಿತರಿಂದ ‘ಲೀಲಾವತಿ’ ಗ್ರಂಥಕ್ಕಿಂತಲೂ ಹೆಚ್ಚು ರಸಭರಿತವಾಗಿದೆ ಎಂದು ಪ್ರಶಂಸೆ ಪಡೆದನು. ಕೊನೆಗೆ ಈ ಗ್ರಂಥದ ಮೆರವಣಿಗೆ ನಡೆಯಿತು.

ರಾಜಶೇಖರ ವಿಳಾಸದ ಕಥೆ

ತಮಿಳು ನಾಡಿನಲ್ಲಿ ಧರ್ಮವತಿ ಎಂಬ ಊರು. ಅಲ್ಲಿ ಸತ್ಯೇಂದ್ರಚೋಳ ಭೂಪಾಲನೆಂಬ ರಾಜನು ಆಳುತ್ತಿದ್ದನು. ಆತನು ಕಟ್ಟುನಿಟ್ಟಾಗಿ ನ್ಯಾಯದಿಂದಲೇ ನಡೆಯುವವನು. ಅವನ ಹೆಂಡತಿ ಅಮೃತಮತಿ, ಶಿವಭಕ್ತ ಶ್ರೇಷ್ಠನಾದ ರಾಜಶೇಖರ ರಾಜನ ಮಗ.

ಮಂತ್ರಿಯ ಮಗ ಮಿತವಚನನು ರಾಜಶೇಖರನಿಗೆ ಆತ್ಮೀಯ ಮಿತ್ರ.

ಒಂದು ದಿನ ಸಾಮಂತರಾಜರು ಎರಡು ಪಳಗದ ಕುದುರೆ ಗಳನ್ನು ತಂದುಕೊಟ್ಟರು. ಕುದುರೆಗಳನ್ನು ನೋಡಿ ರಾಜ ಶೇಖರನಿಗೆ ಅವನ್ನು ಹತ್ತಿ ಸವಾರಿ ಮಾಡಬೇಕು, ವಿಹಾರಕ್ಕೆ ಹೋಗಬೇಕು ಎನ್ನಿಸಿತು. ಮಿತವಚನನನ್ನು ತನ್ನ ಜೊತೆಗೆ ಕರೆದ. ಮಿತವಚನನು, “ಈ ಕುದುರೆಗಳು ಪಳಗಿಲ್ಲ. ಇವನ್ನು ಹತ್ತಿಕೊಂಡು ಜನ ತುಂಬಿದ ಊರಿನಲ್ಲಿ ಹೋಗುವುದು ವಿವೇಕವಲ್ಲ. ಅನಾಹುತವಾಗಬಹುದು. ಯಾರಿಗಾದರೂ

ಕೆಡುಕಾದರೆ ಸತ್ಯೇಂದ್ರಚೋಳ ಮಹಾರಾಜನು ಕೆಡಕು ಮಾಡಿದ ವರಿಗೆ ಶಿಕ್ಷೆ ಮಾಡುತ್ತಾನೆ. ಅವನಿಗೆ ಪ್ರಜೆಗಳೆಂದರೆ ಬಹಳ ಆದರ” ಎಂದು ಎಚ್ಚರಿಸಿದ. ಆದರೆ ರಾಜಕುಮಾರ ಕೇಳಲಿಲ್ಲ., ಚರ್ಚೆ ನಡೆಯಿತು. ಕಡೆಗೆ ರಾಜಶೇಖರನು ಮಿತವಚನನಿಗೆ, “ಇದರ ಹೊಣೆಯೆಲ್ಲ ನನ್ನದು. ಏನಾದರೂ ಕೆಟ್ಟದಾದರೆ ನಾನೇ ಹೊಣೆ ಹೊರುತ್ತೇನೆ. ಹೋಗೋಣ ಬಾ” ಎಂದ. ಮಿತವಚನನೂ ಎಷ್ಟೋ ವಾದಿಸುತ್ತಾನೆ! ‘ದೇವರ ಇಚ್ಛೆ ಯಂತಾಗಲಿ’ ಎಂದು ಸ್ನೇಹಿತನೊಡನೆ ಹೊರಡಲು ಒಪ್ಪಿದ.

ಇಬ್ಬರೂ ಹೊರಟರು.

ಈ ಊರಿನಲ್ಲಿ ತಿರುಕೊಳವಿನಾಚಿ ಎಂಬವಳೊಬ್ಬಳು ಶಿವಭಕ್ತೆ. ಅವಳ ಮಗ ಶಂಕರ. ಸ್ನೇಹಿತರು ಬರುವಾಗ ಮಿತ ವಚನನ ಕುದುರೆಯ ಕಾಲಿಗೆ ಸಿಕ್ಕಿ ಶಂಕರನು ಸತ್ತಹೋದ! ಹುಡುಗನ ತಲೆ ಕತ್ತರಿಸಿ ಬಿತ್ತು. ‘ಶಿವಶಿವಾ, ಶಿವಭಕ್ತೆಯ ಮಗ ಸತ್ತ’ ಎಂದು ಜನ ಸೇರಿದರು. ತಾಯಿಯೂ ಓಡಿ ಬಂದಳು. ಕಲ್ಲು ಕರಗುವಂತೆ ಅತ್ತಳು. “ಅರಗಿಳಿಯ ಕತ್ತು ಮುರಿದಂತೆ ನನ್ನ ಮುದ್ದುಮಗನ ತಲೆಯನ್ನು ಕತ್ತರಿಸಿದವರು ಯಾರು?” ಎಂದು ಜನರನ್ನು ಕೇಳಿದಳು. ಸಂಗತಿ ತಿಳಿಯಿತು. ತನ್ನ ಮಗನ ರುಂಡ-ಮುಂಡಗಳನ್ನು ಉಡಿಯಲ್ಲಿ ಇಟ್ಟುಕೊಂಡು ಅರಮನೆಗೆ ಬಂದಳು. ರಾಜನಲ್ಲಿ ಮೊರೆ ಇಟ್ಟಳು.

ರಾಜನಿಗೆ ಪ್ರಜೆಗಳಲ್ಲಿ ತುಂಬಾ ಪ್ರೀತಿ. ಅಲ್ಲದೆ ಅವನು ಶಿವಭಕ್ತ. ಶಿವಭಕ್ತರಿಗೆ ಕೆಡಕು ಮಾಡುವುದು ಶಿವನಿಗೆ ದ್ರೋಹ ಮಾಡುವುದಕ್ಕಿಂತ ದೊಡ್ಡ ಅಪರಾಧ ಎಂದು ಅವನು ನಂಬಿ ದವನು. ತಿರುಕೊಳವಿನಾಚಿಯ ದುಃಖವನ್ನು ಕಂಡು ಅವನು ತಳಮಳಿಸಿದ. ‘ಯಾರು ಈ ಹುಡುಗನನ್ನು ಕೊಂದರೋ ಅವರಿಗೂ ಮರಣದಂಡನೆಯಾಗಬೇಕು’ ಎಂದು ನಿರ್ಧರಿಸಿದ.

ಸರಿ, ರಾಜಶೇಖರ ಮತ್ತು ಮಿತವಚನರ ವಿಚಾರಣೆ ಆಯಿತು. “ಹುಡುಗ ನನ್ನ ಕುದುರೆಯ ಕಾಲಿಗೆ ಸಿಕ್ಕಿ ಸತ್ತ. ಅವನ ಸಾವಿಗೆ ನಾನೇ ಕಾರಣ” ಎಂದ ಮಿತವಚನ. “ಹೋಗುವುದು ಬೇಡ ಎಂದು ಅವನು ಹೇಳಿದ. ಇದರಿಂದ ಏನಾದರೂ ಅನಾಹುತವಾದರೆ ಹೊಣೆ ನನ್ನದು ಎಂದು ನಾನು ಹೇಳಿದೆ. ಹೊಣೆ ನನ್ನದು” ಎಂದು ರಾಜಶೇಖರ ಹೇಳಿದ.

ರಾಜನು ಇಬ್ಬರ ಮಾತನ್ನೂ ಕೇಳಿದ. ತನ್ನ ಮಗ ರಾಜಶೇಖರನೇ ಅಪರಾಧಿ ಎಂದು ತೀರ್ಮಾನಿಸಿದ.

ರಾಜಶೇಖರನನ್ನು ಕೊಂದು ಅವನ ತಲೆಯನ್ನು ಶಂಕರನ ತಲೆಗೆ ಪ್ರತಿಯಾಗಿ ಒಪ್ಪಿಸಬೇಕೆಂದು ಮಂತ್ರಿಗೆ ರಾಜ ಆಜ್ಞೆ ಮಾಡಿದ.

ಮಂತ್ರಿಗೆ ಈಗ ಕಷ್ಟವಾಯಿತು. ರಾಜಪುತ್ರನನ್ನು

ಕೊಲ್ಲಲಾರ, ರಾಜಾಜ್ಞೆಯನ್ನು ಮೀರಲಾರ. ಕಡೆಗೆ ಮಂತ್ರಿಯು ತಾನೇ ತಲೆಯನ್ನು ಕತ್ತರಿಸಿಕೊಂಡ.

ದೊರೆ ಸಂದಾಯಿ ಎಂಬ ಸೇವಕನಿಗೆ “ರಾಜಶೇಖರನ ತಲೆಯನ್ನು ಕತ್ತರಿಸು” ಎಂದು ಅಪ್ಪಣೆ ಮಾಡಿದ. ತಾನು ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿದ್ದರೆ ಸಂದಾಯಿ ತನ್ನನ್ನು ಕೊಲ್ಲಲಾರ ಎಂದು ತಿಳಿದ ರಾಜಶೇಖರ, ಮಂತ್ರವನ್ನು ಜಪಿಸುತ್ತ ತನ್ನ ತಲೆಯನ್ನು ಕತ್ತರಿಸಿಕೊಂಡ. ಸಂದಾಯಿಯೂ ಹಾಗೆಯೇ ಪ್ರಾಣ ಬಿಟ್ಟ. ತನ್ನ ಮಗನ ತಲೆಗೆ ಬದಲು ಎರಡು ತಲೆಗಳನ್ನು ಕೊಟ್ಟ ರಾಜನ ನಿಷ್ಠೆಗೆ ತಲೆಬಾಗಿ ತಿರುಕೊಳ ವಿನಾಚಿಯು ತಲೆ ಕತ್ತರಿಸಿಕೊಂಡಳು.

ಹೀಗೆಯೇ ಕಥೆ ಮುಂದುವರಿಯುತ್ತದೆ. ದುಃಖದಿಂದ ಅನೇಕರು ಸಾಯುತ್ತಾರೆ. ರಾಜನೂ ಸಾಯುತ್ತಾನೆ.

ಕಡೆಗೆ ಈಶ್ವರನು ಪ್ರತ್ಯಕ್ಷನಾಗಿ, ಮಹಾರಾಣಿ ಅಮೃತ ಮತಿಗೆ, “ಒಂದು ವರವನ್ನು ಕೇಳು, ಕೊಡುತ್ತೇನೆ” ಎಂದ.

ಗಂಡನೂ ಸತ್ತುಬಿದ್ದಿದ್ದಾನೆ, ಮಗನೂ ಸತ್ತು ಬಿದ್ದಿದ್ದಾನೆ. ‘ಒಂದು ವರವನ್ನು ಕೇಳು’ ಎನ್ನುತ್ತಾನೆ ಈಶ್ವರ.

ಅಮೃತಮತಿ ವರವನ್ನು ಕೇಳಿದಳು: “ತಿರುಕೊಳ ವಿನಾಚಿಯ ಮಗ ಶಂಕರ ಬದುಕಲಿ!”

 

ಕವಿ ಷಡಕ್ಷರದೇವ

ಅವಳ ಔದಾರ್ಯಕ್ಕೆ ಶಿವನೂ ತಲೆದೂಗಿದ. “ಇನ್ನೊಂದು ವರವನ್ನು ಬೇಡು” ಎಂದ.

“ತಿರುಕೊಳವಿನಾಚಿ ಬದುಕಲಿ” ಎಂದು ಬೇಡಿದಳು ಅಮೃತಮತಿ.

ಗಂಡನನ್ನು ಬದುಕಿಸಿಕೊಳ್ಳಲಿಲ್ಲ. ಮಗನನ್ನು ಬದುಕಿಸಿ ಕೊಳ್ಳಲಿಲ್ಲ, ಬಡ ಶಿವಭಕ್ತೆ-ಅವಳ ಮಗನನ್ನು ಬದುಕಿಸಿ ಕೊಂಡಳು ಅಮೃತಮತಿ. ಅವಳ ಬುದ್ಧಿ ನಿಜವಾಗಿ ಅಮೃತವೇ.

ಈಶ್ವರನು ಅವಳ ನಿರ್ಮಲ ಮನಸ್ಸನ್ನು ಮೆಚ್ಚಿ ಎಲ್ಲರನ್ನೂ ಬದುಕಿಸಿದ. ಎಲ್ಲರನ್ನೂ ಕೈಲಾಸಕ್ಕೆ ಕರೆದೊಯ್ದ.

ಇದು ‘ರಾಜಶೇಖರ ವಿಳಾಸ’ದ ಕಥೆ.

ತಿರುಕೊಳವಿನಾಚಿಯ ದುಃಖ

‘ಶಿವನಂ ತದೀಯ ಶರಣ ವ್ರಜಮಂ’ ಸ್ತುತಿಸುವುದು ತನ್ನ ಉದ್ದೇಶ ಎಂದು ಹೇಳಿದ ಕವಿ, ಈ ಕಾವ್ಯದಲ್ಲಿ ಶಿವಭಕ್ತಿಯ ಹಿರಿಮೆಯನ್ನು ಸಾರಿದ್ದಾನೆ. ಪಂಚಾಕ್ಷರಿ ಮಂತ್ರದ ಶಕ್ತಿಯನ್ನು ಸಾರಿದ್ದಾನೆ.

ಇಷ್ಟೇ ಅಲ್ಲ. ಕಥೆಯನ್ನು ಹೇಳುವಾಗ ಸಂತೋಷ-ದುಃಖ ಗಳನ್ನು ಸಹಜವಾಗಿ ನಿರೂಪಿಸುತ್ತಾನೆ. ಅವರ ಸುಖದುಃಖ ನಮ್ಮವು ಎನ್ನಿಸುವಂತೆ ಮಾಡುತ್ತಾನೆ. ಇದಕ್ಕೆ ಒಂದು ಉದಾಹರಣೆ ಶಂಕರನ ಸಾವಿನಿಂದ ತಿರುಕೊಳವಿನಾಚಿಯ ದುಃಖದ ನಿರೂಪಣೆ.

ಐದು ವರ್ಷದ ಬಾಲಕ ಶಂಕರನು ಜನಸಂದಣಿಯಲ್ಲಿ ಸಿಕ್ಕಿಕೊಂಡು ದಾರಿಕಾಣದೇ ತೊಳಲುತ್ತಿರುತ್ತಾನೆ. ಅಷ್ಟರಲ್ಲಿಯೇ ಕುದುರೆಗಳು ವಾಯವೇಗದಿಂದ ಧಾವಿಸಿ ಬರುತ್ತವೆ. ರಾಜ ಶೇಖರನ ಕುದುರೆಯಿಂದ ಪಾರಾದ ಮಗು ಮಿತವಚನನ ಕುದುರೆಯ ಕಾಲಿಗೆ ಸಿಕ್ಕು ತಲೆಯು ಕತ್ತರಿಸಿ ಬೀಳುವುದು. ರಕ್ತ ಧಾರೆಯಾಗಿ ಹರಿಯಹತ್ತಿತು. ಅತ್ತ ನೀರಿಗೆ ಹೋಗಿ ಮನೆಗೆ ಬಂದ ತಾಯಿಯು ಶಂಕರನನ್ನು ಕಾಣದೆ ಗಾಬರಿಗೊಂಡಳು. ಅವನನ್ನು ಹುಡುಕುವುದಕ್ಕಾಗಿ ಬೀದಿಗೆ ಬಂದಳು. ಆನೆಯ ಕಾಲಿಗೆ ಸಿಕ್ಕನೋ ರಥದ ಗಾಲಿಗೆ ಸಿಕ್ಕನೋ ಇಲ್ಲವೆ ಕುದುರೆಯ ಕಾಲಿಗೆ ಸಿಕ್ಕನೋ ಎಂದು ಬಾಯಿಬಿಡುತ್ತಿರುವಾಗಲೇ ಮಗನು

ಸತ್ತ ಸುದ್ದಿಯನ್ನು ಕೇಳಿ  ಒಮ್ಮೆಲೆ ಆಕಾಶವೇ ಕಳಚಿ ಬಿದ್ದಂತಾಯಿತು. ‘ಎಳೆ ಗಿಳಿಯ ಕೊರಳನ್ನು ಯಾರು ಮುರಿದರು? ಮರಿ ಹಂಸದ ರೆಕ್ಕೆಯನ್ನು ಯಾರು ಮುರಿದರು?’ ಎಂದು ಪರಿಪರಿ ಯಾಗಿ ದುಃಖಿಸಿದಳು. ತನ್ನ ಮಗ ಚಿರ ಆಯುಷಿ ಆಗುತ್ತಾನೆ, ಅಷ್ಟೈಶ್ವಯ ಉಳ್ಳವನಾಗುತ್ತಾನೆ ಎಂದು ತಿಳಿದಿದ್ದಳು. ಆದರೇನು! ‘ತಿಳಿವಿಲ್ಲದೇ ಮಗನೇ ತುರಗ ಹತಿಯಿಂ ಮಡಿದೈ!’ ಎಂದು ತನ್ನ ಆಸೆಯು ಮಣ್ಣುಗೂಡಿದುದನ್ನು ನೆನೆದು ಕೊಳ್ಳುತ್ತಾಳೆ. ‘ಕುದುರೆಯ ಕಾಲಿಗೆ ಸಿಕ್ಕಾಗ ಅಮ್ಮಾ ಎಂದು ಕರೆದೆಯಾ’ ಎಂದು ಕೇಳುತ್ತಾಳೆ.

ತಿರುಕೊಳವಿನಾಚಿಯು ತನ್ನ ಎಳೆಯ ಮಗನ ದೇಹವನ್ನು ಎತ್ತಿಕೊಂಡು ಅಪ್ಪಿ ಅಲ್ಲಿಂದ ಎದ್ದು ತನ್ನ ಮನೆಗೆ ಬಂದಳು. ರುಂಡ-ಮುಂಡವನ್ನು ಕೂಡಿಸಿ, ”ಓರಗೆಯ ಮಕ್ಕಳು ಶಂಕರ ನೆಲ್ಲಿ ಎಂದು ಬಂದು ಕೇಳಿದರೆ ಅರಸನ ಕುದುರೆಯಿಂದ ಮಡಿದನೆಂದು ಹೇಳಲೇ? ನಿನ್ನನ್ನು ನೋಡುವ ಕಣ್ಣು

ಒಡೆದಿದೆ. ನಿನ್ನ ಜೊತೆ ಮಾತನಾಡುವ ನಾಲಗೆಯು ಮುದುಡಿದೆ. ನಿನ್ನನ್ನು ಎತ್ತಿ ಆಡಿಸುವ ನನ್ನ ಕೈಗಳು ನಿಸ್ಸತ್ವವಾಗಿವೆ. ನಿನ್ನ ಗುಣಗಾನ ಮಾಡುವ ನನ್ನ ಬಾಯಿಯು ಬೆಂದುಹೋಗಿದೆ” ಎಂದು ಮಗನು ಆಡಿದ ಸ್ಥಾನವನ್ನು ಆತನು ಮಲಗಿದ ಹಾಸಿಗೆ ಯನ್ನು, ಉಂಡ ತಾಣವನ್ನು ಇನ್ನೆಂತು ನೋಡಲಿ ಎಂದು ನುಡಿವಲ್ಲಿ ಕವಿಯು ತಾಯಿಯ ಕರುಳನ್ನೇ ಎತ್ತಿ ಕಾವ್ಯ ದಲ್ಲಿಟ್ಟಂತಿದೆ.

ಹಿರಿಮೆಯ ಚಿತ್ರ

ಮನುಷ್ಯರು ಎಷ್ಟು ಎತ್ತರ ಏರಬಹುದು, ಎಂತಹ ಘನತೆ ಯನ್ನು ಪಡೆಯಬಹುದು ಎಂಬುದನ್ನು ಈ ಕಾವ್ಯದಲ್ಲಿ ಷಡಕ್ಷರದೇವ ಚಿತ್ರಿಸಿದ್ದಾನೆ. ರಾಜನಿಗೆ ಒಬ್ಬನೇ ಮಗ; ಬಹು ದಿನಗಳು ಮಕ್ಕಳಿಲ್ಲದೆ, ದುಃಖಿಸಿ, ಗುರು ಕೃಪೆಯಿಂದ ಪಡೆದ ಮಗ. ಆದರೂ ರಾಜ, ಶಿವಭಕ್ತೆಯ ಮಗನ ಮರಣಕ್ಕೆ ಕಾರಣನಾದ ಎಂದು ಅವನಿಗೆ ಮರಣದಂಡನೆ ವಿಧಿಸುತ್ತಾನೆ. ಎಂತಹ ನ್ಯಾಯನಿಷ್ಠೆ! ಅಧಿಕಾರದಲ್ಲಿರುವವರಿಗೆ ಮಾದರಿ ಇವನು. ರಾಜ ಒಂದು ರೀತಿಯಲ್ಲಿ ದೊಡ್ಡವನೆನಿಸಿದರೆ ರಾಣಿ ಮತ್ತೊಂದು ರೀತಿಯಲ್ಲಿ ದೊಡ್ಡವಳೆನಿಸುತ್ತಾಳೆ, ಗಂಡನೂ ಮಗನೂ ಸತ್ತಿರುವಾಗ ಶಿವನೇ ಪ್ರತ್ಯಕ್ಷನಾಗಿ ‘ವರಗಳನ್ನು ಬೇಡು’ ಎಂದರೆ, ತಿರುಕೊಳವಿನಾಚಿಯನ್ನೂ ಅವಳ ಮಗ ನನ್ನೂ ಬದುಕಿಸುವಂತೆ ಪ್ರಾರ್ಥಿಸುತ್ತಾಳೆ. ಇವರಲ್ಲದೆ, ಅಪ ರಾಧ ಎನ್ನದು ಎಂದು ಧೈರ್ಯದಿಂದ ಸತ್ಯವಚನವನ್ನು ನುಡಿದು ತಾನೇ ಶಿಕ್ಷೆಯನ್ನು ಅನುಭವಿಸಲು ಮುಂದಾಗುವ ರಾಜಶೇಖರ, ರಾಜಾಜ್ಞೆಯನ್ನು ಪಾಲಿಸಲು ಹೋಗಿ ಒಬ್ಬ ಶಿವ ಶರಣನಾದ ಯುವರಾಜನನ್ನು ಕೊಲ್ಲುವುದು ಹೇಗೆ ಎಂದು ತೊಳಲಾಟದಲ್ಲಿ ಬಿದ್ದು ಕೊನೆಯಲ್ಲಿ ತಾನೇ ಮರಣವನ್ನಪ್ಪಿದ ಮಂತ್ರಿ, ರಾಜಾಜ್ಞೆಯನ್ನು ಪಾಲಿಸಿ ಸೇವಕನಿಷ್ಠೆಯನ್ನು ತೋರಿಸಿ ಕೊನೆಗೆ ತಾನು ಹತನಾದ ಸಂದಾಯಿ, ಸೇವಕನಿಷ್ಠೆಗೆ ಪ್ರತಿ ನಿಷ್ಠೆಯನ್ನು ತೋರಿಸಿದ ತಿರುಕೊಳವಿನಾಚಿ ಎಲ್ಲರೂ ಒಂದೊಂದು ತತ್ವಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ಆದರ್ಶ ಜೀವಿಗಳು. ಇವರೆಲ್ಲ ತಮಗಿಂತ ದೊಡ್ಡದಾದ ತತ್ವ ಕ್ಕಾಗಿ, ಆದರ್ಶಕ್ಕಾಗಿ ಬದುಕುವವರು, ಪ್ರಾಣವನ್ನೇ ಕೊಡಲು ಸಿದ್ಧರಾದವರು.

ಈ ಕಾವ್ಯದಲ್ಲಿ ಮಾನವ ಸ್ವಭಾವದ ಸಹಜತೆ ಇದೆ. ರಸಿಕತೆಯ ಮಡುವಿದೆ. ವರ್ಣನೆಗಳ ಸೊಗಸಿದೆ. ಈ ಕಾವ್ಯದ ಶೃಂಗಾರ ಹಾಗೂ ಕರುಣರಸಗಳಂತೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿಯೇ ಹೆಸರು ಪಡೆದಿದೆ. ಈ ಕಾವ್ಯದಲ್ಲಿ ಬರುವ ವ್ಯಕ್ತಿಗಳು ಸತ್ಯನಿಷ್ಠೆ, ಶಿವಭಕ್ತಿಗಳಿಂದ ಕೂಡಿದ ಶ್ರೇಷ್ಠ ಮಾನವ ರಾಗಿದ್ದಾರೆ. ಕಾವ್ಯವು ವೀರಶೈವ ಧರ್ಮದ ಬೆಳಕನ್ನು ನೀಡು ತ್ತಿದ್ದರೂ ಆ ಬೆಳಕಿನಲ್ಲಿ ಎಲ್ಲರಿಗೂ ಜ್ಞಾನೋದಯವಾಗುವಂತೆ ಕವಿಯು ಹೇಳಿದ್ದಾನೆ.

ಬಸವರಾಜ ವಿಜಯ

‘ಬಸವರಾಜ ವಿಜಯ’ ಈ ಕವಿಯ ಇನ್ನೊಂದು ಕೃತಿ. ೪೨ ಆಶ್ವಾಸಗಳಿವೆ. ಈ ಕಾವ್ಯದಲ್ಲಿ ಒಟ್ಟು ಮೂರುಸಾವಿರದ ನಾಲ್ಕು ನೂರ ಐವತ್ತೈದು ಪದ್ಯಗಳಿವೆ. ಅಲ್ಲಲ್ಲಿ ಗದ್ಯಭಾಗವೂ ಇದೆ. ಭಕ್ತಿರಸ ಪ್ರಧಾನವಾದ ಕಾವ್ಯವಿದು. ಈ ಕಾವ್ಯದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಚರಿತ್ರೆ ಹಾಗೂ ಅವರ ಪವಾಡ ಗಳನ್ನು ಹೇಳಲಾಗಿದೆ. ತಮಿಳುನಾಡಿನ ೬೩ ಪುರಾತನ ಚರಿತ್ರೆ ಇದೆ. ಕಾಶ್ಮೀರದ ಮೋಳಿಗೆಯ ಮಾರಯ್ಯ, ಗುಜರಾತಿನ ಓಹಿಲಯ್ಯ, ಆಂಧ್ರದ ಉರಿಲಿಂಗಪೆದ್ದಿ, ಕರ್ನಾಟಕದ ಶರಣಶ್ರೇಷ್ಠರಾದ ದೇವರ ದಾಸಿಮಯ್ಯ, ಏಕಾಂತ ರಾಮಯ್ಯ, ಶಂಕರ ದಾಸಿಮಯ್ಯ, ಕಿನ್ನರಿ ಬ್ರಹ್ಮಯ್ಯ, ಮಡಿವಾಳ ಮಾಚಯ್ಯ ಮತ್ತು ಅಕ್ಕಮಹಾದೇವಿ ಮೊದಲಾದವರ ಕಥೆಗಳು ಇವೆ. ವೀರಶೈವಧರ್ಮ ತತ್ವಗಳ ನಿರೂಪಣೆಯೂ ಅಲ್ಲಲ್ಲಿ ಬಂದಿದೆ. ಸಾಹಿತ್ಯ ಮತ್ತು ಧರ್ಮ ಅದರಲ್ಲಿ ಅಡಕವಾಗಿವೆ.

ಈ ಕಾವ್ಯ ಬಸವಣ್ಣನವರ ಜೀವನದ ಕಥೆ ಮಾತ್ರವಲ್ಲ. ಅವರ ಭಕ್ತಿಯ ಭವ್ಯ ಚಿತ್ರವಿದೆ. ಬಸವಣ್ಣನವರು ಮಾದರಸ-ಮಾದಲಾಂಬಿಕೆ ಎಂಬ ಶಿವಭಕ್ತರ ಮಗ. ತಂದೆತಾಯಿ ಸಂಪ್ರದಾಯದಂತೆ ಉಪನಯನ ಮಾಡಲು ನಿರ್ಧರಿಸಿದಾಗ ಒಪ್ಪಲಿಲ್ಲ. ಮುಂದೆ ಅವರು ಅಕ್ಕ ನಾಗಲಾಂಬಿಕೆಯ ಜೊತೆ ಕೂಡಲಸಂಗಮಕ್ಕೆ ಬಂದರು. ಕಲ್ಯಾಣದಲ್ಲಿ ಬಿಜ್ಜಳ ಎಂಬ ರಾಜ. ಅವನ ಮಂತ್ರಿ ಬಲದೇವನು ನಿಷ್ಠ ಶಿವಭಕ್ತ. ಅವನ ಮಗಳು ಗಂಗಾಂಬಿಕೆಯನ್ನು ಕೊಟ್ಟು ಬಸವಣ್ಣವನವರಿಗೆ ಮದುವೆಯಾಯಿತು. ಬಲದೇವನು ತೀರಿಕೊಂಡನಂತರ ಬಿಜ್ಜಳನ ಕೋರಿಕೆಯಂತೆ ಬಸವಣ್ಣನವರು ಮಂತ್ರಿಯಾದರು. ಬಸವೇಶ್ವರರು ಮಂತ್ರಿಯಾಗಿ ಪ್ರಜಾರಕ್ಷಣೆ ಮಾಡುವುದರ ಜೊತೆಗೆ ಭಕ್ತರಗಾಗಿ ಧರ್ಮರಕ್ಷಣೆಯ ಕಾರ್ಯವನ್ನೂ

ಕೈಗೊಂಡರು. ಶಿವನನ್ನೂ ಶಿವಶರಣರನ್ನೂ ಪೂಜಿಸಿದರು. ನುಡಿದಂತೆ ನಡೆದರು.

ವೈರಾಗ್ಯಮೂರ್ತಿ ಅಲ್ಲಮಪ್ರಭು ಭಕ್ತರ ಉದ್ಧಾರ ಮಾಡುತ್ತ ಕಲ್ಯಾಣಕ್ಕೆ ಬರುವರು. ನಿತ್ಯವೂ ಸಾವಿರಾರು ಜಂಗಮರಿಗೆ ಪ್ರಸಾದವು ಸಲ್ಲುತ್ತಿತ್ತು. ಪ್ರಭುವಿಗೆ ನಮಸ್ಕರಿಸಿ ಬವಣ್ಣನವರು ಪ್ರಸಾದ ಸ್ವೀಕರಿಸಲು ವಿನಂತಿಸಿಕೊಂಡರು. ಎಲ್ಲರಿಗೂ ತಯಾರಿಸಿದ ಪ್ರಸಾದವು ಪ್ರಭುದೇವರೊಬ್ಬರಿಗೆ ಸಾಲದಾದಾಗ ಬಸವಣ್ಣನವರು ತಮ್ಮನ್ನೇ ಅರ್ಪಿಸಲು ಸಿದ್ಧರಾದರು. ಆಗ ಪ್ರಭು ಈತನ ಭಕ್ತಿಗೆ ಮೆಚ್ಚಿ ಆಶೀರ್ವದಿಸಿದರು. ಹರಳಯ್ಯ, ಮಧುವಯ್ಯರೆಂಬ ಶಿವಭಕ್ತರು ಬಸವಣ್ಣನವರ ಅನುಮತಿ ಯನ್ನು ಪಡೆದು ಶರೀರಸಂಬಂಧವನ್ನು ಬೆಳೆಸಿದರು. ಇದೇ ಸಮಯವನ್ನು ಸಾಧಿಸಿ ಕೆಲವು ದುಷ್ಟರು ಬಿಜ್ಜಳನ ಎದುರಿಗೆ ಚಾಡಿ ಹೇಳುವರು. ಅವರಿಗೆ ದಿನದಿನಕ್ಕೆ ಹಬ್ಬುತ್ತಿರುವ ಬಸವಣ್ಣನವರ ಕೀರ್ತಿಯನ್ನು ಸಹಿಸಲಾಗಲಿಲ್ಲ. ಚಾಡಿಯ ಮಾತಿಗೆ ಮರುಳಾದ ಬಿಜ್ಜಳನು ಹರಳಯ್ಯ, ಮಧುವಯ್ಯರ ಕಣ್ಣು ಕೀಳಿಸಿದ. ಇದು ಶಿವದ್ರೋಹವಾಯಿತೆಂದು ಬಸವಣ್ಣ ಕೆಲವು ಶರಣರಿಂದೊಡಗೂಡಿ ಕಲ್ಯಾಣ ಬಿಟ್ಟು ಕೂಡಲ ಸಂಗಮನಾಥನ ಬಳಿಗೆ ಬಂದರು. ಅಲ್ಲಿ ‘ಬೆಳಗಿನೊಳು ಬೆಳಗು ಬೆರೆದಂತೆ’ ಬಸವಣ್ಣ ಸಂಗಮೇಶ್ವರನಲ್ಲಿ ಐಕ್ಯವಾದರು.

ನಿತ್ಯ ಸುಖದ ಮಾರ್ಗ

‘ಬಸವರಾಜ ವಿಜಯ’ವು ಒಂದು ಕಥಾಗುಚ್ಛ. ಅನೇಕ ಮಂದಿ ಶಿವಶರಣರ ಮತ್ತು ಶರಣೆಯರ ಕಥೆಗಳು ಈ ಕಾವ್ಯದಲ್ಲಿ ಸೇರಿವೆ. ಕೋಳೂರು ಕೊಡಗೂಸಿನ ಕಥೆ ಬರುವುದು ಈ ಕಾವ್ಯದಲ್ಲೇ.

ಬಿಜ್ಜಮಹಾದೇವಿ ಇನ್ನೊಬ್ಬ ಮುಗ್ಧ ಶರಣೆ. ಅವಳು ಪುರಾಣದಲ್ಲಿ ಶಿವನ ವಿಷಯ ಕೇಳು ತ್ತಾಳೆ. ಅವನಿಗೆ ತಾಯಿ ಇಲ್ಲ ಎಂದು ಕೇಳಿ, ಅವನನ್ನು ಆರೈಕೆ ಮಾಡುವವರು ಯಾರೂ ಇಲ್ಲ ಎಂದು ಮರಗುತ್ತಾಳೆ. ತಾನೇ ಶಿವನಿಗೆ ತಾಯಿಯಾಗಬೇಕೆಂದು ಸಂಕಲ್ಪ ಮಾಡುತ್ತಾಳೆ. ಅನನ್ಯ ಭಕ್ತಿಯಿಂದ ಭಜಿಸಿ ಶಿವನನ್ನು ಪ್ರತ್ಯಕ್ಷ ಮಾಡಿಕೊಳ್ಳುತ್ತಾಳೆ. ಶಿವಶಿಶುವನ್ನು ತೊಟ್ಟಿಲಲ್ಲಿ ಇಟ್ಟು ತೂಗಿದ ಮಹಾಮಾತೆ ಇವಳು. ಶಿರಿಯಾಳ ಎಂಬ ಉಗ್ರ ಶಿವಭಕ್ತನ ಕಥೆಯೂ ಈ ಕಾವ್ಯದಲ್ಲಿ ಬರುತ್ತದೆ. ಷಡಕ್ಷರದೇವನ ಕಥನಕಲೆ ಅತ್ಯಂತ ಪ್ರಶಂಸನೀಯ ಈ ಕಾವ್ಯವು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನ ಧಾರ್ಮಿಕ, ಸಾಮಾಜಿಕ ಕ್ರಾಂತಿಕಾರಕ ಶರಣರ ಕಥೆಗಳಂತೆ ಕೂಡಿದೆ. ಈ ಕಾವ್ಯ ಬರೆಯುವಾಗ ಕವಿಯ ಮನಸ್ಸು ಪರಿಪಕ್ವ ಹೊಂದಿರುವುದು. ಆದ್ದರಿಂದ ಕಾವ್ಯಸಿದ್ಧಿ ಯನ್ನು ಪಡೆದಿದೆ. ಈ ಕಾವ್ಯದಲ್ಲಿ ಬರುವ ಕಥಾವಸ್ತುವು ಈ ಮೊದಲು ಪಾಲ್ಕುರಿಕೆಯ ಸೋಮನಾಥನ ತೆಲುಗು ಕೃತಿಯಲ್ಲಿ ಬಂದಿದೆ. ಕಂಚಿಯ ಶಂಕರಾಧ್ಯ, ಭೀಮಕವಿಯ ಬಸವ ಪುರಾಣದಲ್ಲಿಯೂ ಬಂದಿದೆ. ಅವುಗಳಲ್ಲಿಯ ವಸ್ತುವನ್ನು ಬಳಸಿಕೊಂಡರೂ ದೃಷ್ಟಿಕೋನ ಮಾತ್ರ ಹೊಸದಾಗಿದೆ. ಬಸವಣ್ಣನವರ ಭಕ್ತಿಗೆ ಕವಿ ಮಾರುಹೋಗಿದ್ದಾನೆ. ಲೌಕಿಕ ಮಾನವರ ಸ್ವಭಾವವನ್ನು ಕವಿಯು ಚೆನ್ನಾಗಿ ಬಲ್ಲವನಾಗಿದ್ದಾನೆ. ಅಲೌಕಿಕ ಗುಣವುಳ್ಳ ಶರಣ ಶರಣೆಯರ ಚಿತ್ರಗಳನ್ನು ಚಿತ್ರಿಸಿದ್ದರೂ ಅವುಗಳಲ್ಲಿ ಸಹಜತೆ ಇದೆ.

ನಮ್ಮ ಸುತ್ತಮುತ್ತ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಜೀವನದಲ್ಲಿ ಸುಖವೂ ಉಂಟು, ಕಷ್ಟವೂ ಉಂಟು. ಇಂತಹ ಲೌಕಿಕ ಜೀವನದಲ್ಲಿ ಮನುಷ್ಯರು ಸದಾ ಚರಣೆಯಿಂದ ಇದ್ದು ನಿತ್ಯಸುಖವನ್ನು ಪಡೆಯುವ ಮಾರ್ಗವನ್ನು ಕವಿ ತೋರಿಸಿಕೊಟ್ಟಿದ್ದಾನೆ. ಈ ಕಾವ್ಯದಿಂದ ಮನಸ್ಸಿಗೆ ನೆಮ್ಮದಿ ಸಿಕ್ಕುತ್ತದೆ, ಬಾಳು ಬಂಗಾರವಾಗುತ್ತದೆ.

ಶಬರ ಶಂಕರ ವಿಳಾಸ

ಶಬರ ಶಂಕರ ವಿಳಾಸವು ಒಂದು ಸುಂದರ ಕಾವ್ಯ. ಮಹಾ ಭಾರತದಿಂದ ಈ ಕಥೆಯನ್ನು ಆಯ್ದುಕೊಳ್ಳಲಾಗಿದೆ. ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಶಬರ ಶಂಕರ ಲೀಲೆಯೂ ಒಂದು.

ಶಬರ ಶಂಕರ ವಿಳಾಸದಲ್ಲಿ ಐದು ಆಶ್ವಾಸಗಳಿವೆ. ಇದರಲ್ಲಿ ಕಥೆಗಿಂತಲೂ ವರ್ಣನೆಯೇ ಅಧಿಕವಾಗಿದೆ. ಇಲ್ಲಿಯ ಕಥಾ ನಾಯಕ ಶಿವ. ಅರ್ಜುನನು ತನ್ನ ಶಿವಭಕ್ತಿಯಿಂದ, ಸಾಹಸ ದಿಂದ ಪಾಶುಪತಾಸ್ತ್ರವನ್ನು ಪಡೆಯುವುದೇ ಮೂಲ ಕಥೆ.

ಸಂಸ್ಕೃತದ ಭಾರವಿಯು ಕಿರಾತಾರ್ಜುನೀಯ ಎಂಬ ಕಾವ್ಯ ಬರೆದಿದ್ದಾನೆ. ಕನ್ನಡದಲ್ಲಿ ಪಂಪನು ವಿಕ್ರಮಾರ್ಜುನ ವಿಜಯ ಎಂಬ ಕಾವ್ಯವನ್ನು ಬರೆದಿದ್ದಾನೆ. ಕುಮಾರವ್ಯಾಸನು ಮಹಾ ಭಾರತವನ್ನು ಬರೆದಿದ್ದಾನೆ. ಇವೆಲ್ಲವುಗಳಲ್ಲಿ ಕಿರಾತ ಲೀಲೆಯು ಬಂದಿದೆ.

ಶಬರ ಶಂಕರ ವಿಳಾಸವೆಂದರೆ ಶಂಕರನು ಶಬರ (ಬೇಡ)ನ ವೇಷ ಧರಿಸಿ ಲೀಲೆಯನ್ನು ಮೆರೆದದ್ದು ಎಂದು ಅರ್ಥ. ‘ಶಂಕರ’ ಎಂದರೆ ಕಲ್ಯಾಣ ಮಾಡುವವನು. ಕೃಪಾಸಾಗರನಾದ ಶಿವನು ಅರ್ಜುನನ ಭಕ್ತಿ ಹಾಗೂ ಸಾಹಸಗಳನ್ನು ಪರೀಕ್ಷಿಸಿ ಆತನಿಗೆ ವರದಾನ ಮಾಡಿದ ಸನ್ನಿವೇಶವು ಇಲ್ಲಿ ಬಂದಿದೆ. ಭಕ್ತಿ ವೀರರಸಗಳು ಇದರಲ್ಲಿ ರಸವತ್ತಾಗಿ ಮೂಡಿ ಬಂದಿದೆ.

ಪಾಂಡವರಲ್ಲಿ ಅರ್ಜುನ ಒಬ್ಬ. ಅವನು ಶಿವನನ್ನು ಮೆಚ್ಚಿಸಿ ಪಾಶುಪತ ಎಂಬ ಅಸ್ತ್ರವನ್ನು ಪಡೆಯಲು ಇಂದ್ರಕೀಲ ಪರ್ವತದ ಪ್ರದೇಶಕ್ಕೆ ಬರುತ್ತಾನೆ. ಉಗ್ರವಾದ ತಪಸ್ಸನ್ನು ಮಾಡುತ್ತಾನೆ. ಅವನನ್ನು ಅಲ್ಲಿಂದ ಬೇರೆಡೆಗೆ ಕಳುಹಿಸಬೇಕು, ಇಲ್ಲವೇ ತಮಗೆ ಬೇರೆ ಶಾಂತವಾದ ಸ್ಥಳವನ್ನು ಕೊಡಿಸಬೇಕು ಎಂದು ಆ ಪ್ರದೇಶದ ಋಷಿಗಳು ಶಿವನ ಬಳಿಗೆ ಬರುತ್ತಾರೆ. ಅವರಿಗೆ ಸಮಾಧಾನ ಮಾಡಿ ಕಳುಹಿಸಿ, ಅರ್ಜುನನ್ನು ಪರೀಕ್ಷಿಸಲು ಶಿವನು ಇಂದ್ರಕೀಲ ಪರ್ವತಕ್ಕೆ ಪಾರ್ವತಿಯೊಡನೆ ಹೋಗಲು ನಿರ್ಧರಿಸುತ್ತಾನೆ.

ಶಿವ ಪಾರ್ವತಿಯರು ಕಿರಾತ ಕಿರಾತಿಯರ ವೇಷದಲ್ಲಿ ಭಕ್ತರ ಹಿತಕ್ಕಾಗಿ ಶಿವನು ಶಬರ ಶಂಕರ ಲೀಲೆಯನ್ನು ತೋರಿಸಿದರನು. ಶಿವ ಶಬರನಾಗಿ, ಪಾರ್ವತಿ ಶಬರಿಯಾಗಿ ವೇಷ ಬದಲಿಸಿಕೊಂಡರು. ತಲೆಯಲ್ಲಿಯ ಸರ್ಪವು ಸುತ್ತಿದ ಬಳ್ಳಿಯಾಯಿತು. ಗಂಗೆಯು ಹೂವಿನ ಮಾಲೆಯಾದಳು.

ಪಾರ್ವತಿಯು ಕಿರಾತೆಯ ವೇಷದಲ್ಲಿ ಕಾಣಿಸಿಕೊಂಡಳು. ಆಕೆಯ ಸಂಜೆಗೆಂಪಿನಂತಹ ಕಾಂತಿಯು ಚಿಗುರೆಲೆಯ ಉಡುಪಾಯಿತು. ನಕ್ಷತ್ರಗಳು ಕೊರಳ ಹಾರವಾದವು. ಶುಕ್ರ ಮಂಡಲವು ಮೂಗುತಿಯಾಯಿತು. ಇದೇ ರೀತಿ ಶಿವನ ಪರಿವಾರದವರೂ ಬೇಡ ಬೇಡತಿಯರಾಗಿ ವೇಷ ಧರಿಸಿದರು. ವಿಧವಿಧದ ಆಯುಧಗಳನ್ನು ಹಿಡಿದುಕೊಂಡರು. ಬೇಟೆಯ ನಾಯಿಗಳನ್ನು ಕರೆದುಕೊಂಡು ಇಂದ್ರಕೀಲ ಪರ್ವತಕ್ಕೆ ತೆರಳಿದರು.

ಶಬರನು ತನ್ನ ಪರಿವಾರದೊಂದಿಗೆ ಧ್ವನಿಮಾಡುತ್ತ ಬರು ತ್ತಿರುವಾಗ ಒಂದು ಕಾಡುಹಂದಿಯು ಅವರ ಮುಂದೆ ಹಾಯ್ದು ಹೋಯಿತು. ಆಗ ಅದನ್ನು ಬೆನ್ನಟ್ಟಿ, ಬಡಿ, ಹೊಡೆ, ಚುಚ್ಚು, ಬಾಣಬಿಡು, ಬಲೆ ಬೀಸು ಎಂದು ಒಬ್ಬರಿಗೊಬ್ಬರು ಚೀರುತ್ತ ಅದರ ಮೇಲೆ ಹೋದರು. ಆ ಕಾಡುಪ್ರಾಣಿಯು ಅನೇಕರನ್ನು ಕೆಡಹುತ್ತ, ಗಾಯಗೊಳಿಸುತ್ತ ಮುಂದೆ ಸಾಗಿತ್ತು. ಆಗ ಶಬರನ ವೇಷದಲ್ಲಿದ್ದ ಶಿವನು ಬೇಟೆಗಾರರನ್ನು ರಕ್ಷಿಸಲು ತಾನೇ ಮುಂದೆ ಬಂದನು. ಆ ಕಾಡುಹಂದಿಯು ಶಬರ(ಶಿವ)ನ ಹೊಡೆತದ ನೋವಿನಿಂದ ಬೇಕಾದತ್ತ ಓಡುವಾಗ ಅರ್ಜುನನು ತಪಸ್ಸಿಗೆ ಕುಳಿತ ಕಡೆಗೇ ಬಂದಿತು. ಆ ಕರ್ಕಶ ಧ್ವನಿಯನ್ನು ಕೇಳಿದ ಅರ್ಜುನನು ತಪಸ್ಸಿನಿಂದ ಎಚ್ಚೆತ್ತು ಅದರ ಉಪಟಳ ವನ್ನು ತಡೆಯುವುದಕ್ಕಾಗಿ ಅದರ ಮೇಲೆ ಬಾಣ ಪ್ರಯೋಗಿಸಿ ದನು. ಆ ಹೊಡೆತದಿಂದ ಹಂದಿಯು ನೆಲಕ್ಕುರುಳಿ ಬಿದ್ದಿತು.

ಆ ಹಂದಿಯನ್ನು ಅಟ್ಟಿಕೊಂಡು ಶಬರನೂ ಕೂಡ ಆ ಸ್ಥಳಕ್ಕೆ ಧಾವಿಸಿ ಬಂದನು.

ಇಲ್ಲಿಂದ ಮುಂದೆ ಶಿವನಿಗೂ ಅರ್ಜುನನಿಗೂ ವಾಗ್ವಾದವಾಗುತ್ತದೆ. ಬೇಡನ ವೇಷದ ಶಿವ, ಹಂದಿ ತನ್ನದು ಎನ್ನುತ್ತಾನೆ. ಅರ್ಜುನ, “ಹಂದಿಯನ್ನು ಕೊಂದವನು ನಾನು, ಅದು ನನಗೆ ಸೇರಬೇಕು” ಎನ್ನುತ್ತಾನೆ. ಜೊತೆಗೆ, “ನಿನ್ನ ಶೌರ್ಯವನ್ನು ಕಾಡಿನ ನರಿ, ಜಿಂಕೆಗಳಲ್ಲಿ ತೋರಿಸು. ನನ್ನನ್ನು ಕೆಣಕಬೇಡ. ನಿನ್ನ ಸ್ಥಿತಿ ಆನೆಯು ಸಿಂಹವನ್ನು ಕೆಣಕಿ ದಂತಾದೀತು” ಎಂದು ಎಚ್ಚರಿಸುತ್ತಾನೆ. ಶಿವ ಅವನನ್ನು ಹಾಸ್ಯ ಮಾಡುತ್ತಾನೆ. “ಖಡ್ಗ, ಬಿಲ್ಲು ಬಾಣ ಹಿಡಿದಿದ್ದೀಯೆ, ನೀನೆಂತಹ ತಪಸ್ವಿ?” ಎನ್ನುತ್ತಾನೆ. ಒಳಗೊಳಗೇ ಅವನಿಗೆ ಅರ್ಜುನನನ್ನು ಕಂಡು ಸಂತೋಷ. “ನೋಡು ನಾಲ್ಕು ತಿಂಗಳು ತರಗೆಲೆಗಳನ್ನು ತಿಂದುಕೊಂಡಿದ್ದ. ಇನ್ನು ನಾಲ್ಕು ತಿಂಗಳು ಗಾಳಿಯೇ ಇವನ ಆಹಾರ. ದೇಹವನ್ನು ಹೇಗೆ ನಿಗ್ರಹಿಸಿದ್ದಾನೆ!” ಎಂದು ಮೆಚ್ಚುಗೆಯಿಂದ ಪಾರ್ವತಿಗೆ ಹೇಳುತ್ತಾನೆ. ಕಡೆಗೆ ಇಬ್ಬರಿಗೂ ಯುದ್ಧವೇ ನಡೆಯುತ್ತದೆ.

ಅರ್ಜುನನು ಕೋಪದಿಂದ ಶಬರನ ಮೇಲೆ ಬಾಣ ಬಿಡ ತೊಡಗುವನು. ಶಿವನು ಅವನ್ನೆಲ್ಲ ಮಧ್ಯದಲ್ಲಿಯೇ ಕತ್ತರಿಸು ತ್ತಾನೆ. ಆಗ ಅರ್ಜುನನು, “ಎಲೈ ಶಬರಾ, ನಿನ್ನ ಬಿಲ್ಲಾಳುತನ ಹೊಗಳತಕ್ಕುದು” ಎಂದು ಹೊಗಳಿ ಮತ್ತೆ ಬಾಣಗಳನ್ನು ಪ್ರಯೋಗಿಸುವನು. ಅವುಗಳನ್ನು ಶಿವನು ಮತ್ತೆ ಕತ್ತರಿಸ ತೊಡಗುವನು.

ಅಷ್ಟರಲ್ಲಿಯೇ ಅರ್ಜುನನ ಬತ್ತಳಿಕೆ ಯಲ್ಲಿಯ ಬಾಣಗಳೆಲ್ಲ ತೀರಿಹೋಗುತ್ತವೆ. ಮಲ್ಲಯುದ್ಧ ನಡೆಯುತ್ತದೆ.

ನೋಡುವವರು ನಡುಗುವಂತಹ ಭಯಂಕರ ಮಲ್ಲಯುದ್ಧ ಅದು. ಒಬ್ಬರು ಇನ್ನೊಬ್ಬರ ತೊಡೆ, ಭುಜ, ಎದೆ, ತಲೆಗಳಿಗೆ ಹೊಡೆಯುತ್ತಾರೆ. ಅವರಿಬ್ಬರ ಕಾಳಗ ನೋಡಿದ ಶಿವಗಣವು ಆಶ್ಚರ್ಯಪಡುತ್ತದೆ. ಅರ್ಜುನನ ಸಾಹಸವನ್ನು ಶಿವನು ಮನ ದಲ್ಲಿಯೇ ಮೆಚ್ಚುತ್ತಾನೆ. ಶಿವನು ಪಾರ್ಥನನ್ನು ತುಳಿದು ಮೆಟ್ಟುತ್ತಾನೆ. ಅರ್ಜುನನ ಬಾಯಿ ಮೂಗುಗಳಿಂದ ರಕ್ತ ಚಿಮ್ಮತೊಡಗುವುದು. ಭಕ್ತನ ಸ್ಥಿತಿಯನ್ನು ನೋಡಿ ಪರಮೇಶ್ವರ ಮರುಗುತ್ತಾನೆ.

ನೆಲಕ್ಕೆ ಬಿದ್ದ ಅರ್ಜುನನ ಬಿಂಕ ಮಾಯವಾಗುವುದು. ಸೋತೆನೆಂಬ ಭಾವ ಅವನ ಮನಸ್ಸನ್ನು ಆವರಿಸುವುದು. ’ಒಬ್ಬ ಸಾಮಾನ್ಯ ಬೇಡನಿಂದ ನಾನು ಸೋತೆನೇ’ ಎಂದು ಅವಮಾನದಿಂದ ನೊಂದುಕೊಳ್ಳುತ್ತಾನೆ.

ಈಗ ಅರ್ಜುನನಿಗೆ ಇನ್ನೊಂದು ಯೋಚನೆ ಬರುತ್ತದೆ. ‘ಜಗತ್ತಿಗೆ ಏಕೈಕ ವೀರನೆಂದು ಹೆಸರುಗಳಿಸಿದ ನಾನು ಈ ಬೇಡನಿಂದ ಸೋಲುವುದೆಂದರೆ ನಗೆಗೇಡೇ ಸರಿ. ಶಿವಭಕ್ತನಾದ ನನಗೇಕೆ ಸೋಲು? ನಾನು ಶಿವನನ್ನು ಮರೆತದ್ದರಿಂದ ಸೋಲಾಗಿರಬಹುದೆ?’ ಎಂದು ಯೋಚಿಸುತ್ತಾನೆ. ಮಳಲಿನ ಲಿಂಗ ಮಾಡಿ ಕಾಡು ಹೂಗಳನ್ನು ಏರಿಸಿ ಲಿಂಗಪೂಜೆ ಮಾಡುತ್ತಾನೆ. ‘ನನಗೆ ಜಯವಾಗಲಿ’ ಎಂದು ಬೇಡಿ ಕೊಳ್ಳುತ್ತಾನೆ. ತನಗೇ ಯುಶಸ್ಸು ಎಂದು ಭಾವಿಸಿ, ಭುಜಗಳನ್ನು ತಟ್ಟಿ ಬೇಡನ ಕಡೆ ತಿರುಗುತ್ತಾನೆ.

ಮಳಲಿನ ಲಿಂಗದ ಮೇಲೆ ಏರಿಸಿದ ಹೂಗಳು ಬೇಡನ ತಲೆಯ ಮೇಲಿವೆ!

ಅರ್ಜುನ ಬೆರಗಾಗುತ್ತಾನೆ. ಸತ್ಯ ಹೊಳೆಯುತ್ತದೆ-ಬೇಡ ಶಿವನೇ!

ಪಶ್ಚಾತ್ತಾಪದಿಂದ ಅರ್ಜುನ ಕರಗಿ ನೀರಾಗುತ್ತಾನೆ. ‘ಅಯ್ಯೋ, ಎಂತಹ ಕೆಲಸ ಮಾಡಿದೆ! ನನ್ನ ದೇವರಿಗೇ ಅಪಮಾನದ ಮಾತುಗಳನ್ನಾಡಿ, ಅವನೊಡನೆ ಯುದ್ಧ ಮಾಡಿದೆನಲ್ಲ!’ ಎಂದು ಬೇಯುತ್ತಾನೆ. ಭಕ್ತಿಯಿಂದ ಶಿವನಿಗೆ ನಮಸ್ಕರಿಸುತ್ತಾನೆ. ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸಲು ಬೇಡಿಕೊಳ್ಳುತ್ತಾನೆ. ಆಗ ಶಿವನು ಆತನನ್ನು ಸಂತೈಸುತ್ತಾನೆ. ಆತನನ್ನು ಅಪ್ಪಿಕೊಳ್ಳುತ್ತಾನೆ, ತನ್ನ ನಿಜರೂಪದ ದರ್ಶನವನ್ನು ತೋರಿಸುತ್ತಾನೆ.

 

ಲಿಂಣದ ಮೇಲೆ ಏರಿಸಿದ ಹೂಗಳು ಬೇಡನ ತಲೆಯ ಮೇಲಿವೆ !

ಅರ್ಜುನನು ಶಿವನನ್ನು ಅಡಿಯಿಂದ ಮುಡಿಯವರೆಗೆ ಕಣ್ಣಿಟ್ಟು ನೋಡಿ ಆನಂದಿತನಾದನು. ಆನಂದದ ಭರದಲ್ಲಿ ಶಿವನಾಮವನ್ನು ಪಠಿಸಿದನು. ತಾನು ಮಾಡಿದ ಅಪರಾಧಕ್ಕೆ ಕ್ಷಮೆ ಕೇಳಿಕೊಂಡನು.

ಶಿವ ಹೇಳಿದ: “ಅರ್ಜುನಾ, ನಿನ್ನ ಕಟು ನುಡಿಗಳೇ ನನಗೆ ಮಂತ್ರ. ನೀನು ನನ್ನ ಮೇಲೆ ಬಿಟ್ಟ ಬಾಣಗಳೇ ನನಗೆ ಹೂಗಳು. ನಿನ್ನ ಮುಷ್ಠಿ ಯುದ್ಧವೇ ನನಗೆ ಪಾದಪೂಜೆ. ನಾನು ನಿನ್ನ ಭಕ್ತಿಗೆ ಸಂತುಷ್ಟನಾಗಿದ್ದೇನೆ. ನಿನ್ನ ಸಾಹಸವನ್ನು ಮೆಚ್ಚಿ ಕೊಂಡಿದ್ದೇನೆ.”

ಶಿವನು ಅರ್ಜುನನ ಮಹಿಮೆಯನ್ನು ಗಿರಿಜೆಗೆ ವರ್ಣಿಸಿ ದನು. ಅರ್ಜುನನು ಪಾರ್ವತಿಗೆ ವಂದಿಸಿ ಅವಳನ್ನು ಸ್ತುತಿಸಿ ದನು. ಇಬ್ಬರೂ ಅವನನ್ನು ಆಶೀರ್ವದಿಸಿದರು. ಶಿವನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ಕೊಟ್ಟರೆ, ಪಾರ್ವತಿಯು ಅಂಜನಾಸ್ತ್ರವನ್ನು ಕೊಟ್ಟಳು. ಅರ್ಜುನನ ತಪಸ್ಸು ಫಲಿಸಿತು. ಆತನನ್ನು ಬೀಳ್ಕೊಟ್ಟು ತನ್ನ ಪರಿವಾರದೊಂದಿಗೆ ಶಿವ ಪಾರ್ವತಿಯರು ಕೈಲಾಸ ಪರ್ವತಕ್ಕೆ ಮರುಳುವುದರೊಂದಿಗೆ ಕಾವ್ಯಕ್ಕೆ ಮಂಗಳವಾಗುತ್ತದೆ.

‘ಕವಿ ಕರ್ಣ ರಸಾಯನಂ’ ಇದೂ ಷಡಕ್ಷರದೇವನ ಕಾವ್ಯ. ಇದು ಸಂಸ್ಕೃತದಲ್ಲಿದೆ. ಇದು ಅಲಂಕಾರ ಪ್ರಧಾನವಾಗಿದ್ದು ಇದರಲ್ಲಿ ವರ್ಣನೆಗಳು ಹೇರಳವಾಗಿವೆ. ಪೂರ್ಣ ಪ್ರತಿ ಈವರೆಗೂ ದೊರೆತಿಲ್ಲ. ದೊರೆತ ಪ್ರತಿಯಲ್ಲಿ ಕಥೆ ಪೂರ್ಣವಾಗಿಲ್ಲ.

ಷಡಕ್ಷರನ ಕಾವ್ಯದ ಅಗ್ಗಳಿಕೆ

ಮಹಾಕವಿ ಷಡಕ್ಷರದೇವನು ತನ್ನ ಕಾವ್ಯದ ಮಹತ್ವವನ್ನು ಹೇಳಿದ್ದಾನೆ. ನನ್ನ ಕಾವ್ಯವು ಚಿಂತಾಮಣಿಯಂತೆ ಇದೆ. ನವಕಲ್ಪ ವೇದದಂತೆ ಪಂಡಿತರಿಗೆ ಮಂಗಳಪ್ರದವಾಗಿದೆ. ಇದರ ಶ್ರೇಷ್ಠತೆಯನ್ನು ಬಲ್ಲವರು ಮೆಚ್ಚುವರು. ಮಂಗಳಪ್ರದನೂ ಮೃತೃಂಜಯನೂ ಆದ ಶಿವನಂತೆ ತನ್ನ ಕಾವ್ಯಗಳು ಶಾಶ್ವತ. ಇಂತಹ ಸತ್ಕೃತಿಯನ್ನು ಆಲಿಸಿದವರಿಗೆ ಸದ್ಗತಿ ಪ್ರಾಪ್ತ ವಾಗುತ್ತದೆಂದು ಕವಿ ವಿಶ್ವಾಸದಿಂದ ಹೇಳಿದ್ದಾನೆ.

ಕಾವ್ಯದ ಉದ್ದೇಶ, ಕಾವ್ಯದಲ್ಲಿ ಕವಿ ಏನು ಹೇಳುತ್ತಾನೆ ಎಂಬುದಷ್ಟೇ ಮುಖ್ಯವಲ್ಲ, ಅಲ್ಲವೆ? ಹೇಳುವುದನ್ನು ಹೇಗೆ ಹೇಳುತ್ತಾನೆ ಎಂಬುದೂ ಮುಖ್ಯ. ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತೆ, ಕಣ್ಣಿಗೆ ಕಟ್ಟುವಂತೆ, ಹೃದಯವನ್ನು ಒಲಿಸುವಂತೆ ಹೇಳಬೇಕು. ಷಡಕ್ಷರದೇವ ದೊಡ್ಡ ವಿದ್ವಾಂಸ. ಸಂಸ್ಕೃತವನ್ನು ಬಲ್ಲವನು. ಒಮ್ಮೊಮ್ಮೆ ಬಹು ಪಾಂಡಿತ್ಯಪೂರ್ಣವಾಗಿ ಬರೆಯಬಲ್ಲ. ಅವನದೊಂದು ಪ್ರಸಿದ್ಧ ಪದ್ಯ ಇದೆ.

ಆಂಭಃ ಕುಂಭೀನ ಕುಂಭೀನ ಸಮಕರ ಮಹಾ
ಕೂರ್ಮಕೀರ್ಣೋರ್ಮಿಮಾಲಾ
ಜೃಂಭದ್ಧಂಬೋಳಿ ಹಸ್ತಾಹತಚಕಿತಗತಕ್ಷ್ಮಾಧ್ರ
ವಿಸ್ಫಾರವಿದ್ಯು
ತ್ಸಂಭಿನ್ನಾಂ ಭೋಭೃದುದ್ಯತ್ತಟಚಿಟುಳನ್ಮೀನ
ಫೇನ ಪ್ರತಾನಂ
ಶುಂಭದ್ಗಂಭೀರಮಂ ರಂಜಿಸಿದುಮಮ
ದತ್ತೇಂದ್ರಭದ್ರಂ ಸಮುದ್ರಂ

ಓದುವುದೇ ಕಷ್ಟ, ಅಲ್ಲವೆ? ಕಷ್ಟಪಟ್ಟು ಓದಿದರೂ ಅರ್ಥವಾಗುವುದಿಲ್ಲ. ಇದೇನು ಕನ್ನಡವೋ ಸಂಸ್ಕೃತವೋ ಎಂದು ಅನುಮಾನ ಬರುತ್ತದೆ-ಅಷ್ಟೊಂದು ಸಂಸ್ಕೃತ ಶಬ್ದಗಳು. ಆದರೆ ಸುಲಭವಾದ ಶಬ್ದಗಳಲ್ಲಿಯೂ ಈತ ಬರೆಯಬಲ್ಲ. ‘ರಾಜಶೇಖರ ವಿಳಾಸ’ದಲ್ಲಿ

ಅಲ್ಲಿ ಮಾಮರದಲ್ಲಿ ಮಲ್ಲಿಕಾಲತೆಯಲ್ಲಿ
ಎಳೆಯಸುಗೆ ಮರದಲ್ಲಿ ಜಳುರುಹಾಕರದಲ್ಲಿ
ಸಂಪಗೆಯ ತರುಗಳೊಳ್ ಸೊಂಪಿಡಿದ
ಸುರಯಿಯೊಳ್
ಪಾದರಿಯ ಮರದಲ್ಲಿ ಮಾಧವಿಯ ಲತೆಯಲ್ಲಿ |

ಎಂದು ಪ್ರಾರಂಭವಾಗುವ ದೀರ್ಘ ವರ್ಣನೆಯನ್ನು ಓದಬೇಕು; ಭಾಷೆ ಸುಲಭ, ಶಬ್ದಗಳು ಕಿವಿಗೆ ಮಧುರ, ಇಡೀ ದೃಶ್ಯ ಕಣ್ಣಿಗೆ ಕಟ್ಟುತ್ತದೆ. ಒಂದು ಕಡೆ ಮಾಗಿಯನ್ನು ಕವಿ ವರ್ಣಿಸುತ್ತಾನೆ:

ಚಳಿಗಾಲದೆ ಪೇರಾಲದ
ಕೆಳಗಿರ್ಪನಿತರೊಳೆ ಚಪಲಕಪಿ ನಿಡುಗೋಡಂ
ಸೆಳೆದಲುಗೆ ಸೂಸುವೆಲೆವನಿ
ಗಳಿನೊರ್ವಂ ನೆನೆದು ನಡುಗಿ ಸಿಡಿಮಿಡಿಗೊಂಡಂ |

ಚಳಿ, ಮೈ ಗಡಗಡ ನಡುಗುತ್ತಿದೆ. ದಾರಿಗನೊಬ್ಬ ಚಳಿಯನ್ನು ಸಹಿಸಲಾರದೆ ದೊಡ್ಡ ಆಲದಮರದ ಕೆಳಗೆ ನಿಂತಿದ್ದಾನೆ. ಕೋತಿಯೊಂದು ರೆಂಬೆಯಿಂದ ರೆಂಬೆಗೆ ಹಾರಿದೆ. ಮಂಜಿನ ನೀರು ಎಲೆಗಳಿಂದ ದಾರಿಗನ ಮೇಲೆ ಸುರಿಯುತ್ತದೆ. ಮೊದಲೇ ಚಳಿಯಿಂದ ಹಲ್ಲು ಕಡಿಯುತ್ತಿದ್ದ ದಾರಿಗನಿಗೆ ಸಿಟ್ಟು ಬಂದಿತಂತೆ! ಎಂತಹ ಚಿತ್ರ! ಕೋಳೂರು ಕೊಡಗೂಸು ಈಶ್ವರನನ್ನು ಬೇಡುವುದು, ಕಾಡುವುದು, ಒಲಿಸುವುದು ಬಹು ಸುಂದರವಾಗಿ ನಿರೂಪಿತವಾಗಿದೆ. ‘ಎಲೆ ದೇವಾ, ಪಸಿವು ನಿನಗೆ ಏಂ ಆಗದೋ, ಪಾಲೆ ಏಂ ಕಾಯದೋ, ಪೊತ್ತಿತೋ, ಬಿಸುವಾರಿರ್ದುದೋ, ಕಮ್ಮನಾಗದೋ, ಇಂಪೇರದೋ, ಕಣ್ಗೆ ರಂಜಿಸದೋ’ ಎಂದು ಕಳವಳಿಸುತ್ತಾಳೆ. ’ಮಹೇಶಂ ನುಡಿಯಂ, ಪಾಲ್ಗುಡಿಯಂ, ಅಕಟಕಟಾ ಇನ್ನೇಂ ಗೆಯ್ವೆಂ’ ಎಂದು ಹಲಬುತ್ತಾಳೆ. ಕಡೆಗೆ ಕರುಣೆ ತೋರಿ ಶಿವನು ಹಾಲು ಕುಡಿದನಂತರ, ’ಜನಕಂ ಬಂದೊಡೆ ಪೇಳ್ದಪೆಂ ಇನಿತೆಲ್ಲವಂ ಅಯ್ಯಾ ಮರೆಯದಿರ್’ ಎಂದು ಅವನನ್ನು ಎಚ್ಚರಿಸುತ್ತಾಳೆ!

ಷಡಕ್ಷರದೇವನು ಧರ್ಮಜಾಗೃತಿಯನ್ನು ಮಾಡಿದ, ಮಾತ್ರವಲ್ಲ, ಉದಾತ್ತವಾದ ವ್ಯಕ್ತಿಗಳನ್ನು ಜೀವಂತವಾಗಿ ಚಿತ್ರಿಸಿದ, ಅವನ ವರ್ಣನೆಗಳು ದೃಶ್ಯವನ್ನು, ಸನ್ನಿವೇಶವನ್ನು ಕಣ್ಣಮುಂದೆ ನಿಲ್ಲಿಸುತ್ತವೆ. ಅವನ ಕಾವ್ಯವನ್ನು ಓದುವುದೆಂದರೆ ನಿರ್ಮಲ ಮನಸ್ಸಿನ, ನಿರ್ಮಲ ಚರಿತ್ರೆಯ ಮಾನವರ ಸಹವಾಸದಿಂದ ನಾವೂ ಉದಾತ್ತರಾಗುವ ಅನುಭವ.