ರೆವರೆಂಡ್ ಪಾತ್ರೋರವರು ಪುತ್ತೂರಿನಲ್ಲಿ ಒಂದು ಪ್ರಿಯೂನಿವರ್ಸಿಟಿ ತರಗತಿಯನ್ನು ತೆರೆಯಬೇಕೆಂದು ಕೇಳಲು ನನ್ನಡೆಗೆ ಮೊದಲು ಬಂದಾಗ ನಾನೇನೂ ಅಷ್ಟು ಉತ್ಸಾಹ ತೋರಲಿಲ್ಲ. ಆದರೆ ಅವರು ನಿರತ್ಸಾಹರಾಗದೆ ತಮ್ಮ ಕೆಲಸ ಮುಂದುವರಿಸಿ ಮತ್ತೆ ನನ್ನ ಬಳಿಗೆ ಬಂದರು. ಅವರ ಚಟುವಟಿಕೆ, ಉತ್ಸಾಹ, ಆವೇಶಗಳನ್ನು ಕಂಡು ನನಗೆ ಪಾದರಸದ ನೆನಪಾಯಿತು. ಇನ್ನೇನು ದಾರಿದ್ರಯವಿದ್ದರೂ ಚಿಂತೆಯಿಲ್ಲ; ಹೃದಯದಲ್ಲಿ ಶ್ರದ್ಧೆ, ತಲೆಯಲ್ಲಿ ಬುದ್ಧಿ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಈ ಸಂಸ್ಥೆ ಒಂದು ನಿದರ್ಶನ.

ಜನತೆಯ ಹೃದಯದಲ್ಲಿ ಇತ್ತೀಚೆಗೆ ವಿದ್ಯೆಯ ವಿಚಾರವಾಗಿ ಒಂದು ಹಸಿವು, ಒಂದು ಬಾಯಾರಿಕೆ ತಲೆದೋರಿದಂತೆ ಕಾಣುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗಾಗಿ, ಕಾಲೇಜುಗಳಿಗಾಗಿ ನಾಡಿನ ಮೂಲೆ ಮೂಲೆಯಿಂದಲೂ ಕೋರಿಕೆಗಳು ಬರುತ್ತಿವೆ. ಆದರೆ ಎಲ್ಲವನ್ನೂ ಸರ್ಕಾರವೆ ನಡೆಸಿಕೊಡುವುದೆಂಬುದು ಇನ್ನುಮುಂದೆ ಆಗ ಹೋಗದ ಕೆಲಸ. ಆದ್ದರಿಂದ ಸಾರ್ವಜನಿಕರು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮುಂದೆ ಬಂದರೆ ಸರ್ಕಾರವೂ ವಿಶ್ವವಿದ್ಯಾನಿಲಯವೂ ಅವರಿಗೆ ಪ್ರೋತ್ಸಾಹ ನೀಡಬಹುದು.

ನಾನು ಈ ಮುಖ್ಯವಾಗಿ ವಿಶ್ವವಿದ್ಯಾನಿಲಯದ ಪರವಾಗಿ ಮಾತನಾಡುತ್ತಿದ್ದೇನೆ. ಸಾರ್ವಜನಿಕ ವಿದ್ಯಾಸಂಸ್ಥೆಗಳಿಗೆ ವಿಚಾರವಾಗಿ ವಿಶ್ವವಿದ್ಯಾನಿಲಯವು ಎಷ್ಟೇ ಸದುದ್ದೇಶದಿಂದ ಪ್ರೇರಿತವಾಗಿದ್ದರೂ ಅದು ತನ್ನದೇ ಆದ ಒಂದು ಅರ್ಹತೆ (Standard) ಯನ್ನು ನಿರೀಕ್ಷಿಸುತ್ತದೆ. ಕಾಲೇಜಿಗೆ ತಕ್ಕ ಕಟ್ಟಡ, ಪಾಠಹೇಳಬಲ್ಲ ಅಧ್ಯಾಪಕರು, ವಿಜ್ಞಾನಬೋಧನೆಗೆ ತಕ್ಕ ಸಲಕರಣೆಗಳು ಇದ್ದ ಹೊರತು ಕಾಲೇಜನ್ನು ಒಪ್ಪಿ, ಅಫಿಲಿಯೇಷನ್ ಕೊಡಲಾಗುವುದಿಲ್ಲ. ಪುತ್ತೂರಿನ ಕಾಲೇಜು ಈ ವಿಚಾರದಲ್ಲಿ ಸೂಕ್ತವಾದ ಕ್ರಮವನ್ನು ಕೈಗೊಂಡಿದೆ; ವಿಶ್ವವಿದ್ಯಾನಿಲಯವು ತಾತ್ಕಾಲಿಕವಾಗಿ ಒಂದು ವರ್ಷದ ಮಟ್ಟಿಗೆ ಇದಕ್ಕೆ ಅಫಿಲಿಯೇಷನ್ ನೀಡಿದೆ.

ನಮ್ಮ ಭರತಖಂಡವನ್ನು ನಾವು ‘ಸೆಕ್ಯುಲರ್ ಸ್ಟೇಟ್’ ಎಂದು ಕರೆದಿದ್ದೇವೆ. ಈ ಮಾತಿಗೆ ‘ಇದೊಂದು ಲೌಕಿಕ ರಾಜ್ಯ, ಹೊಟ್ಟೆ ಬಟ್ಟೆಗಳ ಸಂಪಾದನೆ ಅಥವಾ ಬುದ್ದಿಯ ಬೆಳವಣಿಗೆಯಲ್ಲಿ ಮಾತ್ರವೇ ಅದರ ಆಸಕ್ತಿ; ದೇವರ ಧರ್ಮ ಆತ್ಮಗಳಲ್ಲಿ ಆಸಕ್ತಿಯಿಲ್ಲ’ ಎಂದು ಅರ್ಥಮಾಡಬಾರದು. ಭರತಖಂಡದ ಹಿಮಾಲಯ ಸದೃಶವಾದ ಆದಿಗ್ರಂಥಗಳಿರುವುದು ವೇದದಲ್ಲಿ. ಆ ವೇದದ ಕಾಲದಿಂದ ಇಂದಿನವರೆಗೆ ಇಲ್ಲಿನ ನಾನಾ ಋಷಿಗಳೂ ಬೋಧಕರೂ ಸಾಧಕರೂ ಸಿದ್ಧರೂ ಆಧ್ಯಾತ್ಮಿಕ ಜೀವನದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾರೆ. ಭರತಖಂಡದ ಸ್ವಾತಂತ್ರ್ಯ ಶಿಲ್ಪಿಯಾದ ಆ ಮಹಾತ್ಮನು ಸತ್ಯ ಧರ್ಮಗಳನ್ನು ಸ್ವಾತಂತ್ರ್ಯಕ್ಕಿಂತಲೂ ಅಮೂಲ್ಯವೆಂದು ಪರಿಗಣಿಸಿದ್ದನು. ಸತ್ಯಸಹಿತವಾಗಿ, ಧರ್ಮಸಹಿತವಾಗಿ ಸ್ವಾತಂತ್ರ್ಯ ದೊರೆತರೆ ಸಂತೋಷ; ಅರ್ಧಮದಿಂದ ಅದು ಬರುವುದಾದರೆ ತಾನು ಅದನ್ನು ತಿರಸ್ಕರಿಸುವುದಾಗಿ ಆತನು ಘಂಟಾಘೋಷವಾಗಿ ಹೇಳಿದನು. ಅಂತಹ ಮಹಾತ್ಮನಿಂದ ಲಭ್ಯವಾದ ಈ ಸ್ವಾತಂತ್ರ್ಯ ಹೇಗೆ ತಾನೆ ಧರ್ಮಹೀನ, ಧರ್ಮಬಾಹಿರ ಅಥವಾ ಆಧ್ಯಾತ್ಮಿಕ ವಿಹೀನವಾದೀತು? ಆದ್ದರಿಂದ ‘ಸೆಕ್ಯುಲರ್ ಸ್ಟೇಟ್’ ಎಂಬುದರ ನಿಜವಾದ ಅರ್ಥ ಬೇರೆ ಇದೆ. ಪಾಕಿಸ್ಥಾನದಂತೆ ಅಥವಾ ಇಂಗ್ಲೆಂಡಿನಂತೆ ಇಲ್ಲಿ ಯಾವುದೋ ಒಂದು ಮತ ಅಥವಾ ಒಂದು ಧರ್ಮವನ್ನು ರಾಜ್ಯಮತ, ರಾಜ್ಯಧರ್ಮ ಎಂದು ಘೋಷಿಸುವುದಿಲ್ಲ; ಇಲ್ಲಿ ಎಲ್ಲ ಮತಗಳಿಗೂ ಸಮಾನವಾದ ಸ್ಥಾನ; ಎಲ್ಲ ಧರ್ಮಗಳಿಗೂ ಸಮಾನವಾದ ಹಕ್ಕು; ಇಲ್ಲಿ ಎಲ್ಲರೂ ಸಹೋದರರಂತೆ ಬಾಳಬಹುದು. ಇದೇ ಸೆಕ್ಯುಲರ್ ಸ್ಟೇಟ್. ಆ ಮಾತನ್ನು ಕನ್ನಡಕ್ಕೆ ಭಾಷಾಂತರಿಸುವುದಾದರೆ ‘ಸಮನ್ವಯ ರಾಷ್ಟ್ರ’ ಎನ್ನಬಹುದು.

ಭರತಖಂಡದಲ್ಲಿ ಅನಾದಿಕಾಲದಿಂದಲೂ ಎಲ್ಲ ಮತಗಳ ಸಮನ್ವಯ ಮನೋಧರ್ಮ ಬೆಳೆದು ಬಂದಿದೆ. ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಎಂದು ವೇದ ಘೋಷಿಸಿತು. ಯಾವುದನ್ನು ನಾವು ‘ಭಗವಂತ’ ಅಥವಾ, ‘ಸತ್’ ಎಂದು ಕರೆಯುತ್ತೇವೆಯೊ ಅದು ಒಂದೇ. ಬೇರೆ ಬೇರೆ ದೇಶದವರು, ಭಾಷೆಯವರು ಅದನ್ನು ಬೇರೆ ಬೇರೆ ಹೆಸರಿನಿಂದ ಕರೆಯಬಹುದು. ಹೆಸರಿನಲ್ಲಿ ವ್ಯತ್ಯಾಸವಿರಬಹುದು, ಹೋಗುವ ಹಾದಿಯಲ್ಲಿ ಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಹೋಗಿ ಸೇರಬೇಕಾದ ಗುರಿಯಲ್ಲಿ ಭಿನ್ನತೆಯಿಲ್ಲ. ಶ್ರಿರಾಮಕೃಷ್ಣ ಪರಮಹಂಸರು ಹೇಳುವಂತೆ, ನಾಲ್ಕು ಘಟ್ಟಗಳಿರುವ ಒಂದು ಸರೋವರದಿಂದ ನೀರನ್ನು ಕೊಂಡೊಯ್ಯುವಾಗ ಒಂದರಿಂದ ಒಯ್ಯುವ ಕ್ರೈಸ್ತರು ‘ವಾಟರ್’ ಎಂದು, ಮತ್ತೊಂದರಿಂದ ಒಯ್ಯುವ ಮಹಮದೀಯರು ‘ಪಾನಿ’ಯೆಂದು, ಮಗುದೊಂದರಿಂದ ಕೊಂಡೊಯ್ಯುವ ಹಿಂದು ‘ಜಲ’ವೆಂದು ಕರೆಯಬಹುದು. ಒಬ್ಬನು ಮಣ್ಣಿನ ಪಾತ್ರೆಯಲ್ಲ, ಮತ್ತೊಬ್ಬನು ಚರ್ಮದ ಪಾತ್ರೆಯಲ್ಲ, ಬೇರೊಬ್ಬನು ಚಿನ್ನದ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಬರಬಹುದು. ಯಾವ ಹೆಸರಿನಿಂದ ಕರೆದರೂ, ಯಾವ ಪಾತ್ರೆಯಿಂದ ತಂದರೂ ಅವರು ತರುವುದು ನೀರನ್ನೇ. ಹಾಗೆಯೇ ಈಶ್ವರ, ಭಗವಂತ, ಅಲ್ಲ, ಕ್ರಿಸ್ತ, ರಾಮ-ಯಾವ ಹೆಸರಿನಿಂದ ಕರೆದರೂ ಅದು ಒಂದೇ. ಇಂತಹ ಸಮನ್ವಯ ರಾಷ್ಟ್ರದಲ್ಲಿ ಕೋಮುವಾರು ಭಾವನೆಗೆ ಸ್ಥಾನವಿಲ್ಲ. ಈಗ ಕೋಮುವಾರು ಹಾಸ್ಟಲುಗಳಿಗೆ ವಿಶ್ವವಿದ್ಯಾನಿಲಯವು ಸಹಾಯದ್ರವ್ಯವನ್ನು ನೀಡುವುದಿಲ್ಲ. ಹಿಂದೆ ತೆರೆದ ಕೋಮುವಾರು ಹಾಸ್ಟಲುಗಳಲ್ಲಿಯೂ ಕೂಡ ಇತರ ಕೋಮಿನವರನ್ನು ಒಂದು ಪ್ರಮಾಣದಲ್ಲಿ ಸೇರಿಸಿಕೊಳ್ಳದ ಹೊರತು ವಿಶ್ವವಿದ್ಯಾನಿಲಯ ಸಹಾಯದ್ರವ್ಯವನ್ನು ಮುಂದುವರಿಸುವುದಿಲ್ಲ. ಹೀಗಿರುವಾಗ ರೋಮನ್ ಕ್ಯಾಥೋಲಿಕ್ ಸಂಸ್ಥೆಯೊಂದು ಸ್ಥಾಪಿಸ ಹೊರಟಿರುವ ಪುತ್ತೂರು ಕಾಲೇಜಿನ ವಿಚಾರದಲ್ಲಿ ಶಂಕೆ ತಾಳುವುದು ಸಹಜವಾಗಿಯೆ ಇದೆ. ಆದರೆ ಇಲ್ಲಿ ಎಲ್ಲ ಮತದವರೂ ರೆವರೆಂಡ್ ಪಾತ್ರೋರವರೊಡನೆ ಸಹಕರಿಸಿ, ಉತ್ಸಾಹದಿಂದ ಕಾರ್ಯೋನ್ಮುಖರಾಗಿರುವರೆಂಬುದನ್ನು ತಿಳಿದು, ಇದೊಂದು ಮತದ, ಪಂಥದ, ಜಾತಿಯ, ಪಂಗಡದ ಸಂಸ್ಥೆಯಲ್ಲವೆಂದು ನನಗೆ ಅರ್ಥವಾಯಿತು. ಇದೊಂದು ಉತ್ತಮ ಸಂಸ್ಥೆಯಾಗಲು ಅವಕಾಶವಿದೆಯೆಂದು ಗೋಚರಿಸಿತು. ಆದ್ದರಿಂದಲೆ ಈ ಕಾಲೇಜಿನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲು ನಾನು ಸಂತೋಷದಿಂದ ಒಪ್ಪಿಕೊಂಡೆ.

ಭರತಖಂಡದಲ್ಲಿಯೆ ಹುಟ್ಟಿಕೊಂಡ ಬೌದ್ಧಮತ, ಜೈನಮತ ಮೊದಲಾದ ಬೇರೆ ಬೇರೆ ಮತಗಳನ್ನೂ ಹೊರಗಿನಿಂದ ಬಂದ ಕ್ರೈಸ್ತಮತ, ಇಸ್ಲಾಂಮತ ಮೊದಲಾದುವುಗಳನ್ನೂ ಸೌಹಾರ್ದದಿಂದ ಸಮಾನತೆಯಿಂದ ಕಂಡಿದೆ ಭಾರತದ ಸಮನ್ವಯ ದೃಷ್ಟಿ. ಶ್ರೀ ರಾಮಕೃಷ್ಣಪರಮಹಂಸರು ಹೇಳಿರುವಂತೆ ಎಲ್ಲಿ ನಾಲ್ಕಾರು ಜನ ಸೇರಿ ಭಕ್ತಿಭಾವದಿಂದ ಕೈಮುಗಿಯುತ್ತಾರೊ ಅಲ್ಲಿ ಭಗವಂತ ಆವಿರ್ಭವಿಸುತ್ತಾನೆ. ಆತನು ಯಾವ ರೂಪದಿಂದ ಅಥವಾ ತತ್ವರೂಪದಿಂದ ಬೇಕಾದರೂ ಬರುತ್ತಾನೆ. ಆದ್ದರಿಂದ ನಮ್ಮ ಅಲ್ಪತ್ವದ ಎಲ್ಲೆಯನ್ನು ಭಗವಂತನ ರೂಪಗಳಿಗೆ ಕಲ್ಪಿಸುವುದು ಬೇಡ. ಇಂತಹ ವಿಶಾಲ ತತ್ವದ ಮೇಲೆ ನಿಂತಿರುವ, ಇಂತಹ ಉದಾತ್ತ ದೃಷ್ಟಿಯನ್ನು ತಾಳಿರುವ ಭರತಖಂಡಲದಲ್ಲಿ ಎಲ್ಲ ಮತದವರೂ ಸ್ನೇಹದಿಂದ, ಸಮಾನತೆಯಿಂದ ಬಾಳಲು ಅವಕಾಶವಿದೆ. ”ನಿನ್ನ ದಾರಿಯಲ್ಲಿ ಹೋದರೆ ನರಕಕ್ಕೆ ಹೋಗುತ್ತೀಯೆ, ನನ್ನ ದಾರಿಗೆ ನೀನು ಬಾ” ಎಂದು ಒಂದು ಮತದವರು ಮತ್ತೊಂದು ಮತದವರಿಗೆ ಹೇಳುವುದರಲ್ಲಿ ಅರ್ಥವಿಲ್ಲ. ಎಲ್ಲ ಮತದವರೂ ಭಕ್ತಿಯಿಂದ, ಶ್ರದ್ಧೆಯಿಂದ ತಮ್ಮ ತಮ್ಮ ದಾರಿಯಲ್ಲಿ ಮುಂದುವರಿದರೆ ಗುರಿಯನ್ನು ಮುಟ್ಟುತ್ತಾರೆ. ಇಂತಹ ಉದಾತ್ತ ಭಾರತೀಯ ದೃಷ್ಟಿಗೆ ಯಾವ ಅಧೈರ್ಯವೂ ಇಲ್ಲ, ಯಾವ ಚ್ಯುತಿಯೂ ಇಲ್ಲ. ಅದು ಎಲ್ಲ ಧರ್ಮಗಳನ್ನೂ ಸ್ವಾಗತಿಸುತ್ತದೆ. ನಮ್ಮ ಮಹಾ ಪ್ರಧಾನಿ ನೆಹರು ಅಥವಾ ನಮ್ಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಎಲ್ಲ ಮತಸಂಸ್ಥೆಗಳ ಉತ್ಸವಕ್ಕೂ ಹೋಗುತ್ತಾರೆ, ಅಧ್ಯಕ್ಷತೆ ವಹಿಸುತ್ತಾರೆ, ಆಶೀರ್ವಾದ ಮಾಡುತ್ತಾರೆ, ಆಶೀರ್ವಾದ ಪಡೆಯುತ್ತಾರೆ. ಈ ತತ್ವವನ್ನು ಭಾರತೀಯರೆಲ್ಲರೂ ಗ್ರಹಿಸಬೇಕು. ನಿಜವಾದ ವಿಶ್ವವಿದ್ಯಾನಿಲಯವೆಂದರೆ ಇಂತಹ ವಿಶಾಲ ದೃಷ್ಟಿಯನ್ನು ನಮ್ಮಲ್ಲಿ ಮೂಡಿಸಬೇಕು. ಇಲ್ಲಿ ಆಂಧ್ರಶ್ರದ್ಧೆಗೆ, ಅವಿಚಾರಕ್ಕೆ, ದ್ವೇಷಕ್ಕೆ ಅಥವಾ ಮತದ್ವೇಷಕ್ಕೆ ಅವಕಾಶವಿಲ್ಲ. ವಿಶ್ವವಿದ್ಯಾನಿಲಯದಲ್ಲಿ ನಾವು ಸಾಹಿತ್ಯವನ್ನು ಅಧ್ಯಯನ ಮಾಡುತ್ತೇವೆ. ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ಗ್ರೀಕ್ ಸಾಹಿತ್ಯ, ರಷ್ಯನ್ ಸಾಹಿತ್ಯ – ಯಾವುದೇ ಆಗಿರಲಿ – ಅದನ್ನು ಅಧ್ಯಯನ ಮಾಡುವಾಗ ಅದು ಯಾವ ಜಾತಿಗೆ ಅಥವಾ ಮತಕ್ಕೆ ಸೇರಿದುದೆಂದು ನೋಡುತ್ತೇವೆಯೆ? ವರ್ಡ್ಸ್‌ವರ್ತ್ ಯಾವ ಮತದವನೆಂದು ನಾವು ಆಲೋಚಿಸುತ್ತೇವೆಯೆ? ಎಂದಿಗೂ ಇಲ್ಲ. ಕವಿ ಎಲ್ಲರಿಗೂ ಸೇರಿದವನು. ಹಾಗೆಯೆ ತತ್ವಜ್ಞಾನಿಯೂ ಕೂಡ. ಸಾಕ್ರಟೀಸ್ ಯಾವ ಮತಕ್ಕೆ ಸೇರಿದವನೆಂದರೆ ವಿಶ್ವಮತಕ್ಕೆ ಸೇರಿದವನು. ವಿಶ್ವವಿದ್ಯಾನಿಲಯ ಪ್ರಚೋದಿಸಬೇಕಾಗಿರುವುದು ಇಂತಹ ದೃಷ್ಟಿಯನ್ನು.

ಗ್ರಾಮಾಂತರದ ವಿದ್ಯಾಭ್ಯಾಸವನ್ನು ಕುರಿತು ಎರಡು ಮಾತುಗಳನ್ನು ಆಡುವುದು ಇಲ್ಲಿ ಅಪ್ರಕೃತವಾಗಲಾರದು. ಈಗ ಕೆಲವು ಕಾಲದ ಹಿಂದೆ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಹೈಸ್ಕೂಲುಗಳಿದ್ದರೆ ಹೆಚ್ಚು ಎನ್ನುವ ಸ್ಥಿತಿ ಇತ್ತು. ಕಾಲೇಜುಗಳಂತೂ ಬೆಂಗಳೂರು ಮೈಸೂರಿಗೇ ಮೀಸಲು. ಇವುಗಳಲ್ಲಿ ಓದುತ್ತಿದ್ದವರೆಂದರೆ ಪಟ್ಟಣಿಗರು, ಅದರಲ್ಲಿಯೂ ವಿರಾಮವಿದ್ದ ಶ್ರೀಮಂತರ ಅಥವಾ ಉತ್ತಮ ವರ್ಗದವರ ಮಕ್ಕಳು ಮಾತ್ರ. ಒಂದು ತರಗತಿಯಲ್ಲಿ ಹತ್ತು ಹದಿನೈದು ಜನರಿದ್ದರೆ ಹೆಚ್ಚು. ಉಪಾಧ್ಯಾಯರು ವಿದ್ಯಾರ್ಥಿಯ ಕಿವಿಹಿಂಡಿ, ಕಪಾಳಕ್ಕೆ ಹೊಡೆದು, ಬೆಂಚಿನಮೇಲೆ ನಿಲ್ಲಿಸಿ, ಸ್ಪೆಲ್ಲಿಂಗ್ ಉರುಹೊಡೆಸಿ, ಡಿಕ್ಟೇಷನ್ನಿನ ತಪ್ಪುಗಳನ್ನೆಲ್ಲಾ ಇಂಪೋಸಿಷನ್ ಬರೆಸಿ, ಮನೆಯಲ್ಲಿ ಬಾಯಿ ಪಾಠ ಮಾಡುವಂತೆ ನಿರ್ಬಂಧಿಸಿ, ಕವಾಯತು ಕೊಟ್ಟು, ಸಾಮುಮಾಡಿಸುತ್ತಿದ್ದರು. ಇಷ್ಟೆಲ್ಲಾ ಸಾಧನೆಯ ಫಲವಾಗಿ ವಿದ್ಯಾರ್ಥಿಗೆ ತಕ್ಕ ಮಟ್ಟಿನ ಇಂಗ್ಲಿಷ್ ಬರುತ್ತಿತ್ತು. ಲೋಯರ್ ಸೆಕೆಂಡರಿ ಪಾಸುಮಾಡಿ ಹೈಸ್ಕೂಲಿನಲ್ಲಿ ಕಾಲಿಡುತ್ತಲೇ ದಪ್ಪದಪ್ಪನೆಯ ಇಂಗ್ಲಿಷ್ ಚರಿತ್ರೆ ಅಥವಾ ಇಂಗ್ಲಿಷ್‌ನ ಪಠ್ಯ ಪುಸ್ತಕಗಳು ವಿದ್ಯಾರ್ಥಿಯ ಕೈಗೆ ಬರುತ್ತಿದ್ದುವು. ದಷ್ಟ ಪುಷ್ಟವಾದ ಆ ಪುಸ್ತಕಗಳನ್ನು ಕಂಡು ಅವನಿಗೆ ಖುಷಿಯೋ ಖುಷಿ. ಕನ್ನಡ ಪುಸ್ತಕಗಳು ಅಷ್ಟೇನೂ ಅಂದವಾಗಿಲ್ಲದೆ ಸೊಣಕಲಾಗಿರುತ್ತಿದುವು. ಇದಕ್ಕೆ ತಕ್ಕಂತೆ ಕನ್ನಡ ಪಂಡಿತರು. ಇಂಗ್ಲಿಷ್ ಮೇಷ್ಟು ಸೂಟು, ಬೂಟು, ಟೈ, ಕಾಲರ್ ಹಾಕಿಕೊಂಡು ಲಕ್ಷಣವಾಗಿರುತ್ತಿದ್ದರು. ಆದ್ದರಿಂದ ಇಂಗ್ಲಿಷ್ ಪುಸ್ತಕ, ಇಂಗ್ಲಿಷ್ ಮೇಷ್ಟರು ವಿದ್ಯಾರ್ಥಿಗಳ ಹೆಮ್ಮೆಯಾಗಿದ್ದರು.

ಇಂದು ಕಾಲ ಬದಲಾಯಿಸಿದೆ. ಹಳ್ಳಿಹಳ್ಳಿಗೂ ಹೈಸ್ಕೂಲುಗಳಾಗಿವೆ. ಕಾಲೇಜುಗಳ ಸಂಖ್ಯೆಯೂ ಬೆಳೆಯುತ್ತಿದೆ. ಪ್ರತಿಯೊಂದು ಜಿಲ್ಲೆಗೂ ಒಂದೆರಡು ಕಾಲೇಜುಗಳಾದಂತಾಗಿವೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ಏಳು ಇಂಟರ್‌ಮೀಡಿಯಟ್‌ ಕಾಲೇಜುಗಳನ್ನು ಅಪ್ ಗ್ರೇಡ್ ಮಾಡುವ ವಿಚಾರ ಪತ್ರಿಕೆಗಳಲ್ಲಿ ಪ್ರಸ್ತಾಪಿತವಾಗಿರುವುದನ್ನು ನೀವು ಓದಿರಬಹುದು. ಸರ್ಕಾರದ ಮೇಲೆ ಒಂದು ಬಗೆಯ ಜುಲುಂ ಪ್ರಯೋಗಿಸುವಷ್ಟು ಆಕಾಂಕ್ಷೆ ಜನರಲ್ಲಿ ಕಂಡುಬರುತ್ತಿದೆ. ಕಾಲೇಜುಗಳಿಗೆ ಅಗತ್ಯವಾದ ಅನುಕೂಲ್ಯಗಳನ್ನೆಲ್ಲಾ ಸರ್ಕಾರದಿಂದ ನಿರೀಕ್ಷಿಸದೆ ತಾವೇ ಕಲ್ಪಿಸಿಕೊಳ್ಳಲು ಜನ ಸಿದ್ಧರಾಗಿದ್ದಾರೆ. ಹೀಗೆ ಜನ ಧೈರ್ಯವಾಗಿ ಮುಂದಡಿಯಿಟ್ಟರೆ ಕಾರ್ಯ ಸಿದ್ಧಿಯಾಗಿಯೇ ಆಗುತ್ತದೆ. ಇದರಲ್ಲಿ ಅಧೈರ್ಯ ಸಲ್ಲದು. ತನಗೆ ತಾನು ಸಹಾಯಮಾಡಿಕೊಳ್ಳುವವನಿಗೆ ದೇವರು ಸಹಾಯ ಮಾಡುತ್ತಾನೆ. ತನ್ನ ಕಾಲಮೇಲೆ ತಾನು ನಡೆಯುವವನು ಬೀಳುವಂತಾದರೆ ಯಾರಾದರೂ ನೆರವು ನೀಡುತ್ತಾರೆ. ರ|| ಪಾತ್ರೋರವರು ಒಂದು ದೃಢ ಸಂಕಲ್ಪದಿಂದ ಧೈರ್ಯವಾಗಿ ಮುಂದೆ ಬಂದು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದಕ್ಕೆ ನಾವು ತಾತ್ಕಾಲಿಕವಾಗಿ ಒಂದು ವರ್ಷಕ್ಕೆ ಮಾತ್ರ ಅಫಿಲಿಯೇಷನ್ ಕೊಟ್ಟಿದ್ದರೂ, ಇದನ್ನು ಕಣ್ಣಾರೆ ಕಂಡಮೇಲೆ ಇದು ಶಾಶ್ವತವಾಗುವ ವಿಚಾರದಲ್ಲಿ ನನಗೇನೂ ಸಂದೇಹ ಕಾಣಬರುತ್ತಿಲ್ಲ.

ಹೀಗೆ ಒಂದು ಕಡೆ ವಿದ್ಯಾಸಂಸ್ಥೆಗಳು ಹೆಚ್ಚುತ್ತಿವೆ. ಮತ್ತೊಂದು ಕಡೆ ಇಂಗ್ಲಿಷಿನ ಮಟ್ಟ ಇಳಿದುಹೋಗಿದೆ. ಪಾಠ ಹೇಳುವ ಉಪಾಧ್ಯಾಯರೂ ಗ್ರೇಸ್ ಮಾರ್ಕ್ಸ್ ತೆಗೆದುಕೊಂಡು ಪ್ಯಾಸುಮಾಡಿದವರು. ಅವರಿಗೆ ಇಂಗ್ಲಿಷಿನಲ್ಲಿ ಸರಿಯಾಗಿ ಮಾತಾಡುವುದಕ್ಕೂ ಬರದು, ಬರೆಯುವುದಕ್ಕೂ ಬರದು. ಪದಸಂಪತ್ತಿಗೇ ಅವರಲ್ಲಿ ಅಭಾವ, ಇಂತಹರು ಎಕನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಫಿಲಾಸಫಿ, ಸೈಕಾಲಜಿ ಮೊದಲಾದ ಗಹನ ವಿಚಾರಗಳನ್ನು ಬೋಧಿಸುವುದೇನು? ಇವರಿಂದ ಕಲಿತ ಮಕ್ಕಳನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ನಿರೀಕ್ಷಿಸಿದಾಗ ಏನಾಗಬಹುದು? ಭಾಷೆಯಲ್ಲಿ ಪ್ರಭುತ್ವವಿಲ್ಲದ ಮಕ್ಕಳು ಸ್ವತಂತ್ರವಾಗಿ ಬರೆಯಲು ಸಾಧ್ಯವೆ? ಅವರು ಇತರರಿಂದ ಪ್ರಬಂಧಗಳನ್ನು ಬರೆಸಿಕೊಂಡು ಉರು ಹೊಡೆಯುತ್ತಾರೆ; ಅದನ್ನು ಬತ್ತಳಿಕೆಯಲ್ಲಿ ಇಟ್ಟುಕೊಂಡು ಪರೀಕ್ಷೆಯ ರಣಾಂಗಣಕ್ಕೆ ನುಗ್ಗುತ್ತಾರೆ; ನಿರೀಕ್ಷಿಸಿದ ಪ್ರಶ್ನೆಗಳೇ ಬಂದರೆ ಸರಿಯಾಗಿ ಬರೆಯುತ್ತಾರೆ; ಇಲ್ಲದಿದ್ದರೆ ಇಲ್ಲ. ಅಥವಾ, ಪ್ರಶ್ನೆ ಏನೇಇರಲಿ, ತಮಗೆ ಗೊತ್ತಿರುವ, ಎಂದರೆ ಬಾಯಿಪಾಠ ಮಾಡಿರುವ, ಉತ್ತರವನ್ನೇ ಬರೆಯುತ್ತಾರೆ!

ಈ ದುಸ್ಥಿತಿಯನ್ನು ಗಮನಿಸಿ ಈಗ ಕೆಲವು ವರ್ಷಗಳ ಹಿಂದೆ ನಮ್ಮ ಸಂಸ್ಥಾನದ ಹೈಸ್ಕೂಲುಗಳಲ್ಲಿ ಕನ್ನಡ ಮಾಧ್ಯಮವನ್ನು ಬಳಕೆಗೆ ತಂದರು. ಆಗ ‘ಎಲವನ್ನೂ ಕನ್ನಡದಲ್ಲಿ ಬೋಧಿಸುವುದು ಸಾಧ್ಯವೆ? ಕನ್ನಡದಲ್ಲಿ ಪಠ್ಯಪುಸ್ತಕಗಳೆಲ್ಲಿವೆ?’ ಎಂಬ ದೊಡ್ಡ ಕೂಗೆದ್ದಿತು. ಈಗ ಪಠ್ಯಪುಸ್ತಕಗಳು ರಾಶಿರಾಶಿಯಾಗಿ ಬರುತ್ತಿವೆ; ಪಾಠಗಳನ್ನು ಕನ್ನಡದಲ್ಲಿ ಹೇಳಿಕೊಡುತ್ತಿದ್ದಾರೆ; ಅದು ಸಮರ್ಪಕವಾಗಿ ನಡೆದುಕೊಂಡು ಬರುತ್ತಿದೆ. ಈ ಪದ್ಧತಿ ಶಿಕ್ಷಣ ತತ್ವಕ್ಕೆ ಅನುಸಾರವಾಗಿಯೂ ಇದೆ. ನಾವು ಯಾವ ಭಾಷೆಯಲ್ಲಿ ಹುಟ್ಟಿ ಬೆಳೆದಿದ್ದೇವೆಯೊ ಅದರಲ್ಲಿ ನಮಗೆ ಪ್ರಭುತ್ವ ಬರುವಂತೆ, ವಿಷಯಗಳು ಸ್ಪಷ್ಟವಾಗಿ ಗೋಚರಿಸುವಂತೆ, ಅನ್ಯಭಾಷೆಯಲ್ಲಿ ಗೋಚರಿಸುವುದಿಲ್ಲ. ಸ್ವತಂತ್ರವಾದ ಆಲೋಚನೆ ಪರಭಾಷೆಯಲ್ಲಿ ಸಾಧ್ಯವಿಲ್ಲ. ಈಗ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳೋಣ. ನಮ್ಮ ದೇಶದಲ್ಲಿ ಇಷ್ಟೊಂದು ಕೋಟಿ ಕೋಟಿ ಜನ ಇನ್ನೂರು ವರ್ಷಗಳಿಂದ ಇಂಗ್ಲಿಷ್ ವಿದ್ಯಾಭ್ಯಾಸ ಮಾಡುತ್ತಿದ್ದರೂ, ಎಲ್ಲೊ ಒಬ್ಬ ಸಿ.ವಿ.ರಾಮನ್, ಒಬ್ಬ ಪಿ.ಸಿ.ರಾಯ್ ಎಂದು ಒಂದೆರಡು ಹೆಸರುಗಳನ್ನು ಮಾತ್ರ ಹೇಳಬೇಕಾಗಿದೆ. ಇದು ಸುದ್ಧ ಅಪಮಾನಕರ. ಎಲ್ಲಿಯವರೆಗೆ ನಾವು ಅನ್ಯಭಾಷೆಯಲ್ಲಿ ಜ್ಞಾನಬೋಧೆಯನ್ನು ನಡೆಸುತ್ತಾ ಹೋಗುತ್ತೇವೆಯೋ ಅಲ್ಲಿಯವರೆಗೆ ನಾವು ಅನ್ಯರು ಹೇಳಿದುದನ್ನು ತೆಗೆದುಕೊಂಡು ಬಳಸಬಲ್ಲವೇ ಹೊರತು ಹೊಸದನ್ನು ಸೃಷ್ಟಿಮಾಡುವುದು ಕಷ್ಟಸಾಧ್ಯವಾಗುತ್ತದೆ. ಈ ತತ್ವವನ್ನು ಗ್ರಹಿಸಿದ ಮೈಸೂರು ವಿಶ್ವವಿದ್ಯಾನಿಲಯ ಪ್ರಿಯೂನಿವರ್ಸಿಟಿ ತರಗತಿಯಲ್ಲಿ ಈ ವರ್ಷ ಕನ್ನಡ ಮಾಧ್ಯಮವನ್ನು ಬಳಕೆಗೆ ತಂದಿದೆ. ಇಂಗ್ಲಿಷಿನಲ್ಲಿ ಪ್ರಭುತ್ವವನ್ನು ಸಂಪಾದಿಸಿ ಅಖಿಲ ಭಾರತರಂಗದಲ್ಲಿ ಅಥವಾ ಅಂತರರಾಷ್ಟ್ರದಲ್ಲಿ ಕೆಲಸ ಮಾಡಬೇಕೆನ್ನುವವರು ಇಂಗ್ಲಿಷ್ ಮಾಧ್ಯಮವನ್ನು ತೆಗೆದುಕೊಳ್ಳುವುದಕ್ಕೂ ಅವಕಾಶವಿದೆ. ಒಂದಕ್ಕಿಂತ ಹೆಚ್ಚು ಸೆಕ್ಷನ್ನುಗಳಿರುವ ಪ್ರತಿಯೊಂದು ಕಾಲೇಜಿನಲ್ಲಿಯೂ ಒಂದು ಸೆಕ್ಷನ್ನನ್ನು ಮಾತ್ರ ಕನ್ನಡ ಮಾಧ್ಯಮಕ್ಕೆಂದು ಮೀಸಲಾಗಿರಿಸಿದೆ. ಹತ್ತು ಇಪ್ಪತ್ತು ವರ್ಷಗಳಿಂದ ಪಾಠ ಹೇಳುತ್ತಿರುವ ಪ್ರಾಧ್ಯಾಪಕರು ಇದಕ್ಕಾಗಿ ಕನ್ನಡದಲ್ಲಿ ಪಠ್ಯ ಪುಸ್ತಕಗಳನ್ನು ಬರೆದಿದ್ದಾರೆ. ಈ ಕನ್ನಡ ಮಾಧ್ಯಮದ ಫಲಿತಾಂಶವನ್ನು ಅಂಕಿ ಅಂಶಗಳೊಡನೆ ಸಂಗ್ರಹಿಸಲು ಏರ್ಪಾಟು ಮಾಡಲಾಗಿದೆ. ಆ ಫಲಿತಾಂಶಗಳನ್ನು ಸಾರ್ವಜನಿಕರ ಪರಿಶೀಲನೆಗಾಗಿ ಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂದು ನಾನು ನಿಶ್ಚಯಿಸಿದ್ದೇನೆ.

ಪಠ್ಯ ವಿಷಯಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬೋಧಿಸುವುದರ ಪ್ರಯೋಜನವನ್ನು ಕುರಿತು ಎರಡು ಮಾತು. ಕಾಲೇಜಿಗೆ ಬರುವ ಮುನ್ನ ವಿದ್ಯಾರ್ಥಿ ಕ್ಯಾಟ್, ರ‍್ಯಾಟ್, ಮ್ಯಾಟ್- ಎಂಬ ಮಟ್ಟದಿಂದ ಬಹು ಮೇಲಕ್ಕೇನೂ ಹೋಗಿರುವುದಿಲ್ಲ. ಅವನು ಇಂಗ್ಲಿಷ್‌ನಲ್ಲಿರುವ ಪಾರಿಭಾಷಿಕ ಶಬ್ದಗಳನ್ನು ಉಚ್ಚರಿಸುವುದು ಕೂಡ ಕಷ್ಟ. ಇಂಗ್ಲಿಷಿನಲ್ಲಿ ಲಾಜಿಕ್ಕನ್ನು ಓದುವುದಕ್ಕಿಂತಲೂ ಕನ್ನಡದಲ್ಲಿ ತರ್ಕಶಾಸ್ತ್ರ ಸಂಗ್ರಹವನ್ನು ಓದುವುದು ಅವನಿಗೆ ಹೆಚ್ಚು ಸುಲಭ; ಓದುವ ವಿಷಯ ತನಗೆ ಅರ್ಥವಾಗುವುದೆಂಬ ಆತ್ಮವಿಶ್ವಾಸ ವಿದ್ಯಾರ್ಥಿಗೆ ಮೂಡುತ್ತದೆ. ಈ ನಿಟ್ಟಿನಲ್ಲಿ ನಾವು ಮಾತ್ರವೇ ಅಲ್ಲ; ಇತರ ಅನೇಕ ವಿಶ್ವವಿದ್ಯಾನಿಲಯಗಳು ಪ್ರಯೋಗಗಳನ್ನು ನಡೆಸುತ್ತಾ ಇವೆ. ಅವುಗಳ ಫಲಿತಾಂಶವನ್ನು ಕಾದು ನೋಡೋಣ.

ದೇಶಭಾಷಾಮಾಧ್ಯಮ ಕಲಾವಿಭಾಗಕ್ಕೆ ಅಷ್ಟೇನೂ ಅಹಿತವಾಗಿರದಿದ್ದರೂ ವಿಜ್ಞಾನ ಬೋಧನೆಗೆ ಮಾತ್ರ ಬಹು ನಷ್ಟಕಾರಿಯೆಂಬ ಭಾವನೆ ಕೆಲವರ ತಲೆಯಲ್ಲಿ ತುಂಬಿದೆ. ಅದರಿಂದ ದೇಶದ ಪ್ರಗತಿಗೆ ಕೊಡಲಿಯಿಟ್ಟಂತಾಗುವುದೆಂದು ಅವರ ಎಣಿಕೆ. ವೈದ್ಯ ಅಥವಾ ಎಂಜಿನಿಯರಿಂಗ್‌ ವೃತ್ತಿ ಶಿಕ್ಷಣದಲ್ಲಿ ಬರುವ ಪಾರಿಭಾಷಿಕ ಪದಗಳನ್ನು ಭಾಷಾಂತರ ಮಾಡಲು ಸಾಧ್ಯವೆ – ಎಂಬುದು ಅವರ ಶಂಕೆ. ಇದಕ್ಕೆ ನನ್ನ ಉತ್ತರವಿಷ್ಟೆ. ಪಾರಿಭಾಷಿಕ ಶಬ್ದಗಳನ್ನು ಭಾಷಾಂತರ ಮಾಡುವ ಅವಿವೇಕಕ್ಕೆ ನಾವು ಹೋಗಬೇಕಾದುದಿಲ್ಲ. ಕಾರು ನಡಸುವ ಡ್ರೈವರ್ ಅಥವಾ ಕಂಡಕ್ಟರ್ ಇಂಗ್ಲಿಷಿನಲ್ಲಿ ಪ್ರಾವೀಣ್ಯ ಪಡೆದವರಲ್ಲವಾದರೂ ಅವರು ಕಾರಿನ ನೂರಾರು ಭಾಗಗಳ ಹೆಸರುಗಳನ್ನು ಹಾಗೆಯೇ ಬಳಸುತ್ತಾರೆ. ಕನ್ನಡದಲ್ಲಿಯೇ ಮಾತನಾಡುತ್ತಾರೆ, ಸೊಗಸಾಗಿ ಕಾರನ್ನು ನಡೆಸುತ್ತಾರೆ. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮೊದಲಾದ ವಿಜ್ಞಾನ ವಿಭಾಗಗಳಲ್ಲಿ ಸಹಸ್ರಾರು ಪಾರಿಭಾಷಿಕ ಪದಗಳಿವೆ. ಅವೆಲ್ಲಾ ಗ್ರೀಕ್ ಅಥವಾ ಲ್ಯಾಟಿನ್ ಮೂಲದಿಂದ ಬಂದುವು. ಅವನ್ನು ಮೂಲದಲ್ಲಿರುವಂತೆಯೇ ಕನ್ನಡದಲ್ಲಿ ಬಳಸಿಕೊಳ್ಳುತ್ತೇವೆ. ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಎಂಬುದು ಒಂದು ಹೂವಿನ ಹೆಸರು. ಕನ್ನಡದಲ್ಲಿಯೂ ಅದಕ್ಕೆ ಅದೇ ಹೆಸರು. ಅಂತರರಾಷ್ಟ್ರೀಯವಾದ ಪಾರಿಭಾಷಿಕ ಶಬ್ದಗಳನ್ನು ಹೀಗೆ ಬಳಸಿಕೊಳ್ಳುವುದರಿಂದ ಶಿಕ್ಷಣ ಮಾಧ್ಯಮವನ್ನು ಇಂಗ್ಲಿಷಿನಿಂದ ದೇಶಭಾಷೆಗೆ ಬಳಸಿಕೊಳ್ಳುವುದು ಸುಲಭವಾಗುತ್ತದೆ. ಹೀಗೆ ಹೇಳುವಾಗ ನಾವು ಇಂಗ್ಲಿಷನ್ನು ಸಂಪೂರ್ಣವಾಗಿ ಕೈಬಿಡುತ್ತೇವೆಂದು ಅರ್ಥವಲ್ಲ. ಕಾಲೇಜಿನಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಣ ಕಡ್ಡಾಯವಾಗಿ ಇದ್ದೇ ಇರುತ್ತದೆ. ಇದರಿಂದ ನಾವು ಯಾವ ದೇಶಕ್ಕೇ ಹೋದರೂ, ಯಾವ ಭಾಷೆಯನ್ನೇ ಆಡಿದರೂ ಟೆಕ್ನಿಕಲ್ ಟರ್ಮ್ಸ್ ಒಂದೇ ಆಗಿರುವುದರಿಂದ ಸುಲಭವಾಗಿ ಪಾಠ ಹೇಳಬಹುದು, ಪಾಠ ಕೇಳಬಹುದು. ಈ ಕಾರಣದಿಂದ ಪುತ್ತೂರಿನ ಕಾಲೇಜಿನವರಿಗೂ ಒಂದು ಸಣ್ಣ ಸೂಚನೆ ಕೊಡುತ್ತಿದ್ದೇನೆ. ಒಂದೇ ಪಠ್ಯ ವಿಷಯದ ಎರಡು ಮೂರು ಸೆಕ್ಷನ್ನುಗಳನ್ನು ಇಲ್ಲಿ ತೆರೆಯುವುದಾದರೆ ಒಂದನ್ನು ಕನ್ನಡ ಮಾಧ್ಯಮಕ್ಕಾಗಿ ಮೀಸಲಿಡಿ. ಇದನ್ನು ಬಲಾತ್ಕಾರವಾಗಿ ಹೇರುವುದು ಬೇಡ; ವಿದ್ಯಾರ್ಥಿಗಳು ಅಪೇಕ್ಷಿಸಿದರೆ ಅಡ್ಡಿ ಮಾಡುವುದು ಬೇಡ. ಈಗ ಕನ್ನಡದಲ್ಲಿ ಪಠ್ಯಪುಸ್ತಕಗಳೆಲ್ಲವೂ ಸಿದ್ಧವಾಗಿವೆ. ಆದ್ದರಿಂದ ಈ ವಿಚಾರದಲ್ಲಿ ಶಂಕೆ ಅಧೈರ್ಯಗಳಿಗೆ ಕಾರಣವಿಲ್ಲ. ವಿಶ್ವವಿದ್ಯಾನಿಲಯವು ಕೈಕೊಂಡಿರುವ ಈ ಪ್ರಯೋಗದಲ್ಲಿ ನೀವೂ ಸಾಹಸಿಗಳಾಗಿ. ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಕನ್ನಡದಲ್ಲಿ ಮೈಸೂರಿನ ವಿದ್ಯಾರ್ಥಿಗಳಿಗಿಂತ ಮೇಲ್ಮಟ್ಟದಲ್ಲಿದ್ದಾರೆ. ಈ ಮಾತನ್ನು ನಾನು ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಗಮನಿಸಿ ಹೇಳುತ್ತಿದ್ದೇನೆ. ಆದ್ದರಿಂದ ಕನ್ನಡ ಮಾಧ್ಯಮ ಮೈಸೂರಿಗಿಂತಲೂ ಇಲ್ಲಿ ಹೆಚ್ಚು ಜಯಶೀಲವಾಗುವುದರಲ್ಲಿ ಸಂದೇಹವಿಲ್ಲ.

ವಿದ್ಯೆಯ ಉದ್ದೇಶವೇನು? ಮಕ್ಕಳೇಕೆ ಓದಬೇಕು? ಎರಡು ಕಾರಣಗಳಿಗಾಗಿ. ಅವುಗಳಲ್ಲಿ ಒಂದು ಲೌಕಿಕೋದ್ದೇಶ, ಮತ್ತೊಂದು ಆಧ್ಯಾತ್ಮಿಕ ಉದ್ದೇಶ. ನಮ್ಮ ಹೊಟ್ಟೆಬಟ್ಟೆಗಳಿಗೆ ಸಂಪಾದನೆ ಮಾಡಿಕೊಂಡು ಜೀವನವನ್ನು ಸುಖಮಯವಾಗಿ ಮಾಡಿಕೊಳ್ಳಬೇಕೆಂಬ ಲೌಕಿಕೋದ್ದೇಶವೇ ಬಹು ಜನರ ಆಶಯ. ಇದು ನ್ಯಾಯವೇ. ಹೊಟ್ಟೆಗೆ ಇಲ್ಲದವನು ಆತ್ಮವನ್ನೇನು ಸಾಧಿಸಿಯಾನು? ಆದ್ದರಿಂದ ಹೊಟ್ಟೆಬಟ್ಟೆಗೆ ಬೇಕು. ಆದರೆ ಅಷ್ಟೇಸಾಲದು. ಅನ್ನ ಬಟ್ಟೆಗಳನ್ನು ಸಂಪಾದಿಸುವುದು ಮಾತ್ರವೇ ವಿದ್ಯೆಯ ಗುರಿಯಲ್ಲ. ಅನ್ನ ಬಟ್ಟೆಗಳಿಂದ ಮನುಷ್ಯ ಬರುಕುತ್ತಾನೆ. ಆದರೆ ಅದು ಮನುಷ್ಯನ ಬದುಕಲ್ಲ, ಮೃಗದ ಬದುಕು. ಭಗವಂತ ಮಾನವನಲ್ಲಿ ಒಂದು ಚೇತನವನ್ನಿಟ್ಟಿದ್ದಾನೆ, ಆತ್ಮವನ್ನಿಟ್ಟಿದ್ದಾನೆ. ಅದು ಭಗವಂತನ ಕಡೆ ಮುಂದುವರಿದಂತೆಲ್ಲಾ ಬುದ್ಧಿಶಕ್ತಿ, ಹೃದಯಶಕ್ತಿ ಅಥವಾ ಭಾವಶಕ್ತಿ ವಿಕಾಸವಾಗುತ್ತಾ ಹೋಗುತ್ತದೆ. ಬುದ್ಧಿಶಕ್ತಿಯ ವಿಕಾಸದಿಂದ ತತ್ವ ಬೆಳೆಯುತ್ತದೆ; ಭಾವಶಕ್ತಿಯ ವಿಕಾಸದಿಂದ ಕಾವ್ಯ ಮುಂದುವರಿಯುತ್ತದೆ. ಇದು ಅತ್ಯಗತ್ಯವಾಗಿ ನಡೆಯಬೇಕು. ಇಲ್ಲದಿದ್ದರೆ ಮನುಷ್ಯನು ಅಂದವಾಗಿ ಬಟ್ಟೆ ಹಾಕಿಕೊಂಡ ಪಶುವಾಗುತ್ತಾನೆ.

ನಮ್ಮ ನಾಗರಿಕತೆ ಬೆಳೆದಂತೆ ನಮ್ಮ ಆಧ್ಯಾತ್ಮಿಕತೆ ಅಥವಾ ಆತ್ಮಶ್ರೀಯೂ ಬೆಳೆಯಬೇಕು. ನಮ್ಮವರು ವಿದ್ಯೆಯನ್ನು ಕುರಿತು “ಸಾ ವಿದ್ಯಾ ಯಾ ವಿಮುಕ್ತಯೇ” ಎಂದು ಹೇಳಿದರು. ನಮ್ಮನ್ನು ಮುಕ್ತರನ್ನಾಗಿ ಮಾಡತಕ್ಕಂತಹುದು ಯಾವುದೋ ಅದೇ ವಿದ್ಯೆ. ಲೌಕಿಕ ವಿದ್ಯೆ ನಮ್ಮನ್ನು ಲೌಕಿಕ ದಾಹದಿಂದ ಮುಕ್ತರನ್ನಾಗಿ ಮಾಡುತ್ತದೆ; ಆಧ್ಯಾತ್ಮಿಕ ವಿದ್ಯೆ ನಮ್ಮ ಆತ್ಮ ತೃಷೆಯನ್ನು ಹಿಂಗಿಸುತ್ತದೆ. ಹೀಗೆ ವಿಜ್ಞಾನ, ಕಲೆ-ಎರಡೂ ನಮಗೆ ಬೇಕು. ಇಂದಿನವರೆಗೆ ವಿದ್ಯಾಭ್ಯಾಸಕ್ರಮದಲ್ಲಿ ಬರಿಯ ಕಲೆ ಅಥವಾ ವಿಜ್ಞಾನದ ಅಭ್ಯಾಸವನ್ನು ಮಾತ್ರ ಆಯ್ದುಕೊಳ್ಳಬೇಕಾಗಿತ್ತು. ಇದನ್ನು ಸರಿಪಡಿಸುವುದಕ್ಕಾಗಿ ಸಾಮಾನ್ಯ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ಬೋಧನೆಯನ್ನು ಬಳಕೆಗೆ ತರಲಾಗಿದೆ. ಇದರಿಂದ ವಿಜ್ಞಾನವಿಭಾಗದ ವಿದ್ಯಾರ್ಥಿಗಳು ಸಮಾಜ ವಿಜ್ಞಾನವನ್ನೂ ಕಲಾವಿದ್ಯಾರ್ಥಿಗಳು ಸಾಮಾನ್ಯವಿಜ್ಞಾನವನ್ನೂ ಅಭ್ಯಸಿಸಿ, ಅರಕೆಯಾದುದನ್ನು ಪರಿಪೂರ್ಣಗೊಳಿಸಿಕೊಳ್ಳಲು ಸಹಾಯಕವಾಗಿದೆ.

ಪರಿಪೂರ್ಣತೆಯನ್ನು ಪಡೆಯದ ಮನುಷ್ಯನು ಅಸುಖಿಯಾಗುತ್ತಾನೆ. ಪ್ರಾಚೀನಕಾಲದ ಉಪನಿಷತ್ತಿನ ಋಷಿಯೊಬ್ಬನು ‘ಅಂಧಂ ತಮಃ ಪ್ರವಿಶಂತಿಯೇ ಅವಿದ್ಯಾಂ ಉಪಾಸತೇ! ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ’ ಎಂದು ಹೇಳಿದ್ದಾನೆ. ಬರಿಯ ಅವಿದ್ಯೆಯನ್ನು ಉಪಾಸಿಸುವನು ತಮಸ್ಸಿಗೆ ಇಳಿಯುತ್ತಾನೆ. ಯಾವನು ಬರಿಯ ವಿದ್ಯೆಯನ್ನು ಬೆಳೆಸಿಕೊಂಡು ಹೋಗುತ್ತಾನೆಯೊ ಅವನೂ ಕತ್ತಲೆಗೆ ಇಳಿಯುತ್ತಾನೆ. ವಿದ್ಯೆ ನಮ್ಮನ್ನು ಭಗವಂತನ ಕಡೆಗೆ ಕೊಂಡೊಯ್ಯುವುದು; ಅವಿದ್ಯೆ ಲೌಕಿಕ ಸುಖವನ್ನು ನೀಡುವುದು. ಅವಿದ್ಯೆಯನ್ನು ಸಂಪೂರ್ಣವಾಗಿ ಬಿಟ್ಟೇ ಬಿಡುತ್ತೇನೆಂದು ಬರಿಯ ವಿದ್ಯೆಯನ್ನೇ ಬೆನ್ನಟ್ಟುವವನು ಅವಿದ್ಯೆಯಿಂದ ಇಳಿಯುವುದಕ್ಕಿಂತಲೂ ಭಯಂಕರವಾದ ಕತ್ತಲೆಗೆ ಇಳಿಯುತ್ತಾನೆ. ಈ ಭೂಮಿ ನಮ್ಮ ಆತ್ಮದ ಸಾಧನರಂಗ. ಇಲ್ಲಿ ವಿದ್ಯೆ ಅವಿದ್ಯೆಗಳೆರಡನ್ನೂ ಅಭ್ಯಸಿಸಬೇಕು. ಪರಸ್ಪರ ವಿರುದ್ಧವಾಗದಂತೆ ಅವೆರಡನ್ನೂ ಸಮನ್ವಯಗೊಳಿಸಿಕೊಂಡವರು ಸುಖಿಯಾಗುತ್ತಾರೆ. ಆದ್ದರಿಂದ ನಮ್ಮ ವಿದ್ಯಾಸಂಸ್ಥೆಗಳು ಮಕ್ಕಳಲ್ಲಿ ಇವೆರಡೂ ಬೆಳೆಯುವಂತೆ ನೋಡಿಕೊಳ್ಳಬೇಕು. ಬೇರೆ ಸಂಸ್ಥೆಗಳಲ್ಲಿ ಆಧ್ಯಾತ್ಮಿಕಕ್ಕೆ ಅಷ್ಟು ಬೆಲೆ ಇಲ್ಲದಿರಬಹುದು. ವಿದ್ಯಾಸಂಸ್ಥೆಗಳಲ್ಲಿ ಮಾತ್ರ ಅದಕ್ಕೆ ಅಗತ್ಯವಾಗಿಯೂ ಬೆಲೆ ನೀಡಬೇಕು. ಆದರೆ ಹಾಗೆ ಮಾಡುವಾಗ ಯಾವ ಸಂಕುಚಿತ ಭಾವನೆಯೂ ಸುಳಿಯಬಾರದು. ಇಲ್ಲಿ ಯಾವ ಒಂದು ಮತದ ತತ್ವಗಳನ್ನೂ ಬೋಧಿಸುವುದಲ್ಲ; ಎಲ್ಲ ಮತಗಳ ಉತ್ತಮಾಂಶಗಳನ್ನೂ ತೆಗೆದುಕೊಳ್ಳಬೇಕು. ಎಲ್ಲ ಗುರುಗಳು, ಎಲ್ಲ ಪ್ರವಾದಿಗಳು, ಎಲ್ಲ ಬೋಧಕರು ಹೇಗೆ ಸತ್ಯ, ಧರ್ಮ, ಸೌಂದರ್ಯದ ಕಡೆ ಮುಂದುವರಿದಿದ್ದಾರೆಂಬುದನ್ನು ತೋರಿಸಿಕೊಡಬೇಕು. ಹಾಗಾದಾಗ ಅನ್ಯಮತ ದ್ವೇಷ ಮತ್ತು ಸಂಕುಚಿತ ಭಾವಗಳು ವಿನಷ್ಟವಾಗುತ್ತವೆ; ನಿಜವಾದ ಭಾರತೀಯ ದೃಷ್ಟಿ ಬೆಳೆದಂತಾಗುತ್ತದೆ. ಅಷ್ಟೇ ಅಲ್ಲ, ಪ್ರಪಂಚದ ದೃಷ್ಟಿಯೆಲ್ಲವೂ ಇತ್ತ ಬಾಗುತ್ತದೆ.

ರೋಂ ನಗರದಲ್ಲಿ ಕೇಂದ್ರಸ್ಥಾನವನ್ನು ಮಾಡಿಕೊಂಡಿರುವ ಮತೀಯ ಸಂಸ್ಥೆಯೊಂದು ಇಲ್ಲಿ ಕಾಲೇಜನ್ನು ತೆರೆದಿದೆ. ಭಾರತೀಯರ ದೃಷ್ಟಿ ಮತಾಂತರದ ಕಡೆಗೆ ಹೋಗುವುದಿಲ್ಲ. ಅದರಲ್ಲಿ ನಮಗೆ ನಂಬಿಕೆಯಿಲ್ಲ. ಅಂತರಂಗ ಪರಿವರ್ತನೆ ನಮ್ಮ ಗುರಿ. ಅಮೇರಿಕದಲ್ಲಿ, ಫ್ರಾನ್ಸಿನಲ್ಲಿ, ಇತರ ದೇಶಗಳಲ್ಲಿ ಶ್ರೀ ರಾಮಕೃಷ್ಣಪರಮಹಂಸರ ಅನುಯಾಯಿಗಳು ತೆರೆದಿರುವ ಅನೇಕ ಮಠಗಳೇ ಇದಕ್ಕೆ ಸಾಕ್ಷಿ. ಯಾರೂ ಯಾರ ಮತವನ್ನೂ ಬಿಡಕೂಡದೆಂಬುದೇ ಭಾರತೀಯರ ದೃಷ್ಟಿ, ‘ಎಂತು ಮತ, ಅಂತು ಪಥ,’ ಅಷ್ಟೆ. ನಿನ್ನ ಮತದಲ್ಲಿ ನೀನಿರು, ಅಲ್ಲಿಂದಲೇ ನೇರವಾಗಿ ದೇವರ ಕಡೆ ನಡೆ. ಎಲ್ಲ ಮತಗಳೂ ಆ ದೇವನೆಡೆಗೇ ಕೊಂಡೊಯ್ಯುತ್ತವೆ. ಆಳವಾದ ಸಾಹಿತ್ಯಾಧ್ಯಯನ ಇಂತಹ ಪೂರ್ಣದೃಷ್ಟಿಯನ್ನು ಬೆಳೆಸಬಲ್ಲದು. ವಿದ್ಯಾಸಂಸ್ಥೆಗಳಲ್ಲಿ ಇವನ್ನು ಸಂಪೂರ್ಣವಾಗಿ ಕಲಿಸಿಕೊಡುತ್ತಾರೆಂದು ನಾನು ಹೇಳಲಾರೆ. ಬಹುಶಃ ನಿಮ್ಮಲ್ಲಿ ಒಂದು ರುಚಿಯನ್ನು ಕೆರಳಿಸುತ್ತಾರೆ, ನಿಮಗೆ ಒಂದು ನಾಲಗೆ ಕೊಡುತ್ತಾರೆ. ‘ಸಂಸಾರದ ವಿಷವೃಕ್ಷದಿ ಹಣ್ಣೆರಡಿವೆ ಅಮೃತೋಪ; ಕಾವ್ಯಾಮೃತದಾಸ್ವಾದನ ಮೇಣ್ ಸಜ್ಜನಸಲ್ಲಾಪ!’ ಕ್ಲೇಶಕಷ್ಟಗಳಿಂದ ಕೂಡಿದ ಸಂಸಾರವೆಂಬ ವಿಷವೃಕ್ಷದಲ್ಲಿ ಅಮೃತದಂತೆ ಸ್ವಾದುವಾದ ಎರಡು ಹಣ್ಣಿವೆ – ಒಂದು ಕಾವ್ಯಾಮೃತದ ಆಸ್ವಾದನ, ಮತ್ತೊಂದು ಸಜ್ಜನಸಲ್ಲಾಪ. ವಿಷವೃಕ್ಷದಲ್ಲಿ ಕೂಡ ಅತ್ಯಂತ ಸ್ವಾದುವಾದ ಹಣ್ಣುಗಳು. ಸಾಹಿತ್ಯವು ಯಾವ ದೇಶಕ್ಕೂ ಯಾವ ಮತಕ್ಕೂ ಸೇರಿದುದಲ್ಲ. ಅದು ಎಲ್ಲರನ್ನೂ ನಿಷ್ಪಕ್ಷಪಾತವಾಗಿ ಸ್ವಾಗತಿಸುತ್ತದೆ. ಎಂದು ನಿಮಗೆ ಸತ್ಕಾವ್ಯದ ಆನಂದ ಲಭಿಸುತ್ತದೆಯೊ, ಎಂದು ಸತ್ಸಂಗ ಲಭಿಸುತ್ತದೆಯೊ ಅಂದು ನೀವು ಧನ್ಯರಾದಿರಿ.

ಇನ್ನೊಂದು ಮಾತು. ಈಗಿರುವ ಸ್ಥಿತಿಯಲ್ಲಿ ಹಳ್ಳಿಯ ಹುಡುಗ ಜಾಣನಾದರೆ ಅವನು ಹಳ್ಳಿಗೆ ಎರವಾದಂತೆಯೆ. ಹಳ್ಳಿಯಲ್ಲಿ ಪರೀಕ್ಷೆ ಪಾಸುಮಾಡಿ ಕಾಲೇಜಿಗೆ ಸೇರೋಣವೆಂದು ಬೆಂಗಳೂರಿಗೊ ಮೈಸೂರಿಗೊ ಹೋದ ಹುಡುಗ ಬೇಸಿಗೆ ರಜಕ್ಕೆ ಮನೆಗೆ ಹಿಂದಿರುಗುವುದಿಲ್ಲ. ಅವನಿಗೆ ಪಟ್ಟಣದ ರುಚಿ ಹತ್ತುತ್ತದೆ. ಅಲ್ಲಿಯೆ ಒಂದು ಸರ್ಕಾರಿ ಕೆಲಸವೊ ಕೂಲಿಯೊ ಮಾಡಿಕೊಂಡು ಇದ್ದುಬಿಡುತ್ತಾನೆ. ನಮ್ಮ ವಿದ್ಯಾಭ್ಯಾಸಕ್ರಮ ಜಾಣ್ಮೆಯನ್ನು ಹಳ್ಳಿಯಿಂದ ಹೊತ್ತುಕೊಂಡುಹೋಗಿ ಪಟ್ಟಣಕ್ಕೆ ಹಾಕುವ ಯಂತ್ರವಾಗಿ ಪರಿಣಮಿಸಿದೆ. ಹಾಗಾಗ ಕೂಡದು. ವಿದ್ಯಾಭ್ಯಾಸಮಾಡಲು ಹೋದ ಹಳ್ಳಿಯವರು ಮತ್ತೆ ಹಳ್ಳಿಗೆ ಬಂದು ನೆಲಸುವಂತಾಗಬೇಕು. ಕಾಲೇಜಿನಲ್ಲಿ ನಾವು ಈ ದೃಷ್ಟಿಯನ್ನು ಮೂಡಿಸಿ ಬೆಳೆಸಬೇಕಾಗಿದೆ. ಹಳ್ಳಿಯಲ್ಲಿ ಪಟ್ಟಣದ ಸೌಕರ್ಯಗಳು ಲಭಿಸುವಂತಾದರೆ ಇದು ಸುಲಭವಾದಂತಾಗುತ್ತದೆ. ನಮ್ಮ ಮನೆಯ ಬಾಗಿಲಿಗೆ ವಿದ್ಯುಚ್ಛಕ್ತಿ ಬಂದಂದೆ ಸಮಸ್ತ ಪ್ರಪಂಚವೂ ಬಾಗಿಲಿಗೆ ಬಂದಂತೆ. ಹಾಗೆ ಹಳ್ಳಿಹಳ್ಳಿಗೂ ವಿದ್ಯುಚ್ಛಕ್ತಿ ಬಂದಿತೆಂದರೆ, ಮೈಸೂರಿನಲ್ಲಿ ರೇಡಿಯೋ ಮುಂದೆ ಕುಳಿತು ಯಾವ ಯಾವ ದೇಶಗಳ ಸಂಪರ್ಕವನ್ನು ಇಟ್ಟುಕೊಳ್ಳಬಹುದೊ ಅದೇ ಸಂಪರ್ಕವನ್ನು ಹಳ್ಳಿಯಲ್ಲಿಯೂ ಪಡೆಯಬಹುದು. ಹಳ್ಳಿಯ ಜೀವನ ಸಂಸ್ಕೃತವಾಗಿ ಸುಸಜ್ಜಿತವಾಗಿ ವೈಜ್ಞಾನಿಕವಾಗಿ ಸಾಗಬೇಕು. ಇಂತಹ ಸಂಸ್ಥೆಗಳೂ ಇಲ್ಲಿನ ವಿದ್ಯಾರ್ಥಿಗಳೂ ಅಂತಹ ಕೆಲಸದಲ್ಲಿ ಸಹಕರಿಸುವರೆಂದು ನಾನು ಭಾವಿಸುತ್ತೇನೆ.

ಕಡೆಯದಾಗಿ, ಪ್ರತಿಯೊಬ್ಬನೂ ತಾನು ಎಲ್ಲಿದ್ದರೆ ಅಲ್ಲಿ ಇದ್ದುಕೊಂಡು ತನ್ನ ಪರಿಪೂರ್ಣತೆಯನ್ನೂ ಸಮಾಜದ ಕಲ್ಯಾಣವನ್ನೂ ಸಾಧಿಸಲು ಯತ್ನಿಸಬೇಕು. ‘Sermon on the mount’ ಎಂಬ ಪ್ರಾರ್ಥನೆಯಲ್ಲಿ ‘ನಿನ್ನ ರಾಜ್ಯವು ಬರಲಿ’ ಎಂಬ ಅರ್ಥದ ಮಾತಿದೆ. ಅವನ ರಾಜ್ಯ ಅವನಿರುವಲ್ಲಿಂದ ಇಲ್ಲಿಗೆ ಬರುವುದು ಹೇಗೆ? ಆ ರಾಜ್ಯ ನಮ್ಮ ಹೃದಯಗಳಲ್ಲಿ ಸ್ವಲ್ಪಸ್ವಲ್ಪವಾಗಿ ಅಂಕುರಾರ್ಪಣಗೊಂಡು ಇತರ ಹೃದಯಗಳಿಗೂ ಅದು ಹಬ್ಬಬೇಕು. ಆ ಬಗೆಯಾದ ಆಶಯದಿಂದ ನಾನು ನನ್ನ ಈ ಭಾಷಣವನ್ನು ನನ್ನ ಸಣ್ಣ ಪ್ರಾರ್ಥನೆಯೊಡನೆ ಮುಗಿಸುತ್ತೇನೆ. ಈ ಪ್ರಾರ್ಥನೆ ನನ್ನ ‘ಅಗ್ನಿಹಂಸ’ ಕವನ ಸಂಗ್ರಹದಲ್ಲಿದೆ.

ನಿನ್ನ ಪದಕಮಲದಲಿ ಮನೆ ಮಾಡಿರುವ ನನಗೆ
ಆ ಸ್ಥಾನ ಈ ಸ್ಥಾನ ಎಲ್ಲವಾಸ್ಥಾನ!
ಅಲ್ಲಿಲ್ಲಿ ಎನಲೇನು? ನೀನೆ ಅಡಿಯಿಡುವಲ್ಲಿ
ದಿವ್ಯ ಪದವಿಗಳ್ತೆ ಮಾನಾವಮಾನ!

ಬೆಟ್ಟಗಳನೇರುವೆಯೊ ಕಣಿವೆಗಳನಿಳಿಯುವೆಯೊ
ಕೆಸರುಸುಬುಗಳೊಳಾಡಿ ವಿಹರಿಪೆಯೊ ನೀನು?
ಇಲ್ಲಿ ಸಂಚರಿಸಲ್ಲಿ ಚರಿಸದಿರೆನಲು ನನಗೆ
ನಿನ್ನ ಲೀಲೆಗೆ ಗೆರೆಯನೆಳೆವ ಹಕ್ಕೇನು?

ಎಲ್ಲಿ ನೀ ಪದವಿಡುವೆ ಅಲ್ಲೆ ಉತ್ತಮ ಪದವಿ;
ನಿನ್ನ ಪದವಲ್ಲದಾ ಪದವಿಯೂ ಹೀನ.
ನಿನ್ನಡಿಯ ಪುಡಿಯ ಬಡತನವೆ ಕಡವರ ಕಣಾ;
ನಿನ್ನಡಿಗೆ ದೂರವಿರೆ ಧನಿಕನೂ ದೀನ.

ಭಗವಂತನ ಅಡಿದಾವರೆಯ ಆಸ್ಥಾನದಲ್ಲಿ ಪ್ರಭುಗಳಾಗುವ ಹಕ್ಕನ್ನು ಪಡೆಯುವುದಕ್ಕಾಗಿ ನಾವು ಈ ವಿದ್ಯಾಭ್ಯಾಸ ಮಾಡುತ್ತಿದ್ದೇವೆ – ಎಂಬುದನ್ನು ಮರೆಯದಂತೆ ತಂದೆತಾಯಿಗಳು, ಮಕ್ಕಳು, ಪಾಠಕಲಿಸುವವರು ಮುಂದುವರಿಯಲೆಂದು ನಾನು ಹಾರೈಸುತ್ತೇನೆ.

* * *

[1] ಪುತ್ತೂರು ಕಾಲೇಜಿನ ಆರಂಭೋತ್ಸವದಲ್ಲಿ ಮಾಡಿದ ಭಾಷಣ.