ಘನತೆವೆತ್ತ ಕುಲಪತಿಗಳೆ, ಸನ್ಮಾನ್ಯ ಉಪಕುಪತಿಗಳೆ, ಮಾನ್ಯ ಸೆನೆಟ್ ಸದಸ್ಯರೆ,

ತಾವು ಇಂದು ನೀಡುತ್ತಿರುವ ಈ ವಿಶ್ವಾಸಪೂರ್ವಕವಾದ ಸತ್ಕಾರಕ್ಕಾಗಿ ನಾನು ತಮಗೆಲ್ಲ ಅತ್ಯಂತ ಕೃತಜ್ಞನಾಗಿದ್ದೇನೆ. ತಮ್ಮೆಲ್ಲರ ಈ ಅವ್ಯಾಜ ಪ್ರೀತಿಯ ಸೌಭಾಗ್ಯಕ್ಕೆ ನನ್ನನ್ನು ಪಾತ್ರನನ್ನಾಗಿ ಮಾಡಿರುವ ವಿಶ್ವವಿದ್ಯಾನಿಲಯೆ ಭಗವತಿ ಶ್ರೀ ಸರಸ್ವತಿಯ ಚರಣಗಳಿಗೆ ವಂದಿಸುತ್ತೇನೆ.

ಸಾಹಿತ್ಯ ರೂಪದಲ್ಲಿ ನನ್ನಿಂದ ಹೊಮ್ಮಿರುವ ದೇಶಸೇವೆಗಾಗಿ ನನಗೆ ಈ ಗೌರವ ಸಲ್ಲುತ್ತಿದೆ. ವಾಸ್ತವವಾಗಿ ಈ ಮಹತ್ತಾದ ಸೇವೆಗೆ ನಾನು  ನಿಮಿತ್ತಮಾತ್ರನೆ ಹೊರತು ಮತ್ತೇನೂ ಅಲ್ಲ. ಸತ್ಕೃತಿ ಭುವನದ ಭಾಗ್ಯದ ಫಲವೆಂದು ಪ್ರಾಚೀನ ಕವಿಯೊಬ್ಬನು ಸಾರಿದ್ದಾನೆ. ಯಾವುದನ್ನು ಅವನು ಭುವನ ಎಂದು ಕರೆದನೊ ಅದು ಜೀವನಸಮಷ್ಟಿ ರೂಪವಾದದ್ದು; ಯುಗಶಕ್ತಿ ರೂಪವಾದದ್ದು. ಆದ್ದರಿಂದ ಯಾವ ಮಹಾಕೃತಿಯ ರಚನೆಗಾಲಿ ವ್ಯಕ್ತಿಕವಿ ಪ್ರಣಾಳಿಕೆಯಾಗಿ ನಿಲ್ಲುತ್ತಾನೆ. ಅದರಲ್ಲಿ ಹರಿದುಬರುವ ಶಕ್ತಿ ಸಮಷ್ಟಿಮಾನವನ ಮಹಾಮಾನಸ ಸರೋವರದಿಂದಲೆ ಪ್ರಭಾವವಾದದ್ದು.

ಸ್ವಾತಂತ್ರ‍್ಯಾನಂತರ ಭರತಖಂಡ ಸಾಧಿಸಿರುವ ಮತ್ತು ಸಾಧಿಸುತ್ತಿರುವ ಹಲವಾರು ಪ್ರಮುಖ ವಿಷಯಗಳಲ್ಲಿ ಸಂಸ್ಕೃತಿಯ ಪುನರುದ್ಧಾರ ಒಂದು. ಅನ್ನಕ್ಷೇಮ ವಸನಕ್ಷೇಮಗಳಷ್ಟೆ-ಏಕೆ ಒಂದು ಕೈ ಮಿಗಿಲಾಗಿ-ಆತ್ಮಕ್ಷೇಮ ರಕ್ಷಣೆ ಅತ್ಯಂತಾವಶ್ಯಕ. ನಮ್ಮ ಜೀವನ ಬಹಿರ್ಮುಕವಾಗಿ ಕರ್ಮಮಯವಾಗಿ ಪರಿಪೂರ್ಣವಾಗಿ ಮುಂದುವರಿಯಬೇಕಾದರೆ ಅನ್ನಮಯ ಪ್ರಾಣಮಯಕೋಶಗಳಿಂದ ಮನೋಮಯ ವಿಜ್ಞಾನಮಯ ಕೋಶಗಳವರೆಗಿನ ಎಲ್ಲ ಸಾಧನೆಯೂ ಅತ್ಯವಶ್ಯ. ಇದಕ್ಕೆಲ್ಲ ಸಾಕ್ಷಿಯಾಗಿ ಮೈಸೂರು ವಿಶ್ವವಿದ್ಯಾನಿಲಯ ಏಕಕಾಲದಲ್ಲಿ ಸಾಹಿತಿ-ವಿಜ್ಞಾನಿಗಳಿಗೆ ಈ ಸಮಾರಂಭವನ್ನು ಏರ್ಪಡಿಸಿದೆ.

ಸಂಸ್ಕೃತಿಯ ವಿಕಾಸ ಪ್ರಕಾಶಗಳಿಗೆ ಪ್ರಚಾರ ಪ್ರಸಾರಗಳಿಗೆ ಕೇಂದ್ರ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳೆರಡೂ ಜೊತೆ ಜೊತೆಯಾಗಿ ನಾನಾ ಮುಖವಾಗಿ ಶ್ರದ್ಧಾಪೂರ್ವಕವಾಗಿ ದುಡಿಯುತ್ತಿವೆ. ಸಂಸ್ಕೃತಿಯ ಅಸ್ತಿತ್ವಕ್ಕೂ ಅದರ ವಿಕಾಸಕ್ಕೂ ವಿದ್ಯೆಯೆ ಮೂಲ ಮತ್ತು ಅನಿವಾರ್ಯವಾದ ಸಾಧನ. ಶಾಲಾಕಾಲೇಜುಗಳ ಸಂಖ್ಯೆಯನ್ನು ಅಧಿಕಗೊಳಿಸುವುದು ಮಾತ್ರವಲ್ಲ, ವಯಸ್ಕರ ಶಿಕ್ಷಣವನ್ನು ವಿಸ್ತಾರಗೊಳಿಸುವುದು ಮಾತ್ರವಲ್ಲ, ಶಿಕ್ಷಣ ಪದ್ಧತಿಯಲ್ಲಿ ಕಾಣುವ ಅಸಮರ್ಪಕತೆಯನ್ನು ಹೋಗಲಾಡಿಸಿ ಸಮಗ್ರವೂ ಸಮರ್ಪಕವೂ ಪ್ರಯೋಜನಕಾರಿಯೂ ಆದ ಶಿಕ್ಷಣ ಸರ್ವರಿಗೂ ಒದಗುವಂತೆ ಅದನ್ನು ಪುನರ್ವ್ಯಸ್ಥೆಗೊಳಿಸುತ್ತಿದ್ದಾರೆ. ಸಾಹಿತ್ಯ ಅಕಾಸೆಮಿಯಂಥ ಸಂಸ್ಥೆಗಳ ಮೂಲಕ ತುಂಬ ಪ್ರೋತ್ಸಾಹ ನೀಡುತ್ತಿದ್ದಾರೆ. ಮೈಸೂರು ಸರ್ಕಾರವೂ ಸಂಸ್ಕೃತಿ ಪ್ರಸಾರಕ್ಕೆ ಮೀಸಲಾದ ಶಾಖೆಯೊಂದನ್ನು ತೆರೆದಿದೆ. ಪುಸ್ತಕ ಪ್ರಕಟನೆಗಳ ಮೂಲಕ, ವಿಶ್ವಕೋಶ ಶಬ್ದಕೋಶಗಳ ನಿರ್ಮಾಣದ ಮೂಲಕ, ಗ್ರಂಥಕರ್ತರಿಗೆ ನೆರವು ನೀಡುವುದರ ಮೂಲಕ ಸಂಸ್ಕೃತಿಯ ದಿವ್ಯಜ್ಯೋತಿ ದೇಶದ ಮೂಲೆಮೂಲೆಗೂ ಹರಡುವಂತೆ ಮಾಡುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರವೂ ಎಲ್ಲ ಪ್ರಾಂತೀಯ ಸರ್ಕಾರಗಳೂ ಅಭಿನಂದನಾರ್ಹ.

ಶಿಕ್ಷಣದ ಪುನರ್ವ್ಯವಸ್ಥೆ ಎಂದ ಕೂಡಲೆ ಶಿಕ್ಷಣಮಾಧ್ಯಮದ ಸಮಸ್ಯೆ ಪ್ರಧಾನವಾಗಿ ಎದ್ದು ಕಾಣುತ್ತದೆ. ನಮ್ಮ ಶಿಕ್ಷಣಪದ್ಧತಿಯ ಅಸಮರ್ಪಕತೆಗೆ ಪರಭಾಷಾಮಾಧ್ಯಮವೂ ಬಹುಮಟ್ಟಿಗೆ ಕಾರಣ. ಅದು ಸಮರ್ಪಕವಾಗಲು ಆಯಾ ದೇಶಭಾಷೆಗಳು ಶಿಕ್ಷಣಮಾಧ್ಯವಾಗಬೇಕು. ಅನೇಕ ಪ್ರಾಂತಗಳಲ್ಲಿ ಸೆಕೆಂಡರಿ ದರ್ಜೆಯವರಿಗೆ ದೇಶಭಾಷೆಗಳೆ ಶಿಕ್ಷಣಮಾಧ್ಯಮವಾಗಿವೆ. ನಾಡಿನ ಹಿತಕ್ಕಾಗಿ ಜನತೆಯ ಕ್ಷೇಮವಾಗಿ ಇದು ಆವಶ್ಯಕ. ಆಯಾ ವಿಶ್ವವಿದ್ಯಾನಿಲಯದ ಸುತ್ತಮುತ್ತಣ ಪ್ರದೇಶದಲ್ಲಿ ರೂಢೀಯಲ್ಲಿರುವ ಭಾಷೆ ಶಿಕ್ಷಣಮಾಧ್ಯಮವಾಗಿರತಕ್ಕದ್ದು ಸಹಜ, ಸೂಕ್ತ. ಇದರಿಂದ ವಿಶ್ವವಿದ್ಯಾನಿಲಯದ ಜ್ಞಾನ ಜನತಾಂತರ್ಗತವಾಗಲೂ, ಜನತಾಶಕ್ತಿ ವಿಶ್ವವಿದ್ಯಾನಿಲಯದೊಳಗೆ ಪ್ರವಹಿಸಲೂ, ಆ ಮೂಲಕ ವಿಶ್ವವಿದ್ಯಾನಿಲಯಕ್ಕೂ ಜನತೆಗೂ ನಿಕಟವೂ ಗಾಢವೂ ಆದ ಸಂಪರ್ಕ ಏರ್ಪಟ್ಟು ಅಖಂಡ ಪರಿಪೂರ್ಣತೆಯನ್ನು ಸಾಧಿಸಲು ಅನುಕೂಲವಾಗುತ್ತದೆ. ಇಲ್ಲವಾದರೆ ಈ ಎರಡು ಶಕ್ತಿಗಳೂ ಖಂಡಖಂಡವಾಗಿ ಭಿನ್ನಭಿನ್ನವಾಗಿ ಉಳಿದು ಅನೇಕ ಅಪಾಯಗಳಿಗೆ ಕಾರಣವಾಗಬಹುದು. ಈ ಭಿನ್ನತೆಗಳನ್ನು ಅಳಿಸುವುದು ಸರ್ವರ ಧ್ಯೇಯವಾಗಿರಬೇಕು. ಭಾಷೆ ಈ ಧ್ಯೇಯವನ್ನು ಸಾಧಿಸುತ್ತದೆ.

ದೇಶಭಾಷಾಮಾಧ್ಯಮದಿಂದ ಶಿಕ್ಷಣ ಸುಲಭವಾಗುತ್ತದೆ, ಸರಳವಾಗುತ್ತದೆ, ಪೂರ್ಣಫಲದಾಯಕವಾಗುತ್ತದೆ; ವಿದ್ಯಾರ್ಥಿಯ ಶ್ರಮ ಕಡಮೆಯಾಗುತ್ತದೆ, ಜ್ಞಾನ ವರ್ಧಿಸುತ್ತದೆ, ಖರ್ಚುವೆಚ್ಚ ಮಿತವಾಗುತ್ತದೆ. ವಿದೇಶಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವುದೆ ಕಡಮೆಯೆಂದು ಹೇಳುತ್ತಾರೆ. ಇದರಿಂದ ಅವರು  ಮಾತ್ರ ಮೇಧಾವಿಗಳು, ನಮ್ಮವರು ಬುದ್ಧಿಹೀನರೆಂದು ಭಾವಿಸಲಾಗದು. ಅವರಲ್ಲಿ ಶಿಕ್ಷಣಾನುಕೂಲಗಳು ತುಂಬ ಇವೆ. ನಮ್ಮಲ್ಲಿಲ್ಲ. ಆ ಶಿಕ್ಷಣಾನುಕೂಲಗಳಲ್ಲಿ ದೇಶ ಭಾಷಾಮಾಧ್ಯಮವೂ ಒಂದೆಂಬುದನ್ನು ಮರೆಯಲಾಗದು. ಇದನ್ನು ಮನಗಂಡೇ ಮಹಾತ್ಮಾಗಾಂಧಿ ಮೊದಲಾದ ರಾಷ್ಟ್ರನಿರ್ಮಾಪಕರೂ, ಆಬಟ್, ವುಡ್, ಸಾರ್ಜೆಂಟ್ ಮತ್ತು ಅಮರನಾಥ್ ಝಾ ಮೊದಲಾದ ವಿಖ್ಯಾತ ಶಿಕ್ಷಣತಜ್ಞರೂ ದೇಶಭಾಷಾಮಾಧ್ಯಮದ ಆವಶ್ಯಕತೆಯನ್ನು ಒತ್ತಿ ಒತ್ತಿ ಹೇಳಿದ್ದಾರೆ.

ಇದರಿಂದ ಬೇರೆ ಭಾಷೆಗಳ ಉಪಯುಕ್ತತೆಯನ್ನಾಗಲಿ ಆವಶ್ಯಕತೆಯನ್ನಾಗಲಿ ನಿರ್ಲಕ್ಷಿಸಿದಂತಾಗುವುದಿಲ್ಲ. ನಮಗೆ ಪ್ರಪಂಚದ ಸಂಪರ್ಕ ಮತ್ತು ಪ್ರಪಂಚದ ಜ್ಞಾನ ಬೇಕೇ ಬೇಕು. ಅದಕ್ಕಾಗಿ ಪ್ರಪಂಚಸಾಧಾರಣವಾದೊಂದು ಭಾಷೆ ಬೇಕಾಗುತ್ತದೆ. ಭರತ ಖಂಡದ ಬೇರೆ ಬೇರೆ ಪ್ರಾಂತಗಳ ಅಂತರ್ ವ್ಯವಹಾರಗಳಿಗಾಗಿ, ಅವುಗಳ ಪರಸ್ಪರ ಸಂಬಂಧ ಸಂಪರ್ಕಗಳನ್ನು ರೂಢಿಸುವುದಕ್ಕಾಗಿ ಒಂದುಸರ್ವಸಾಧಾರಣವಾದ ಭಾರತೀಯ ಭಾಷೆ ಬೇಕಾಗುತ್ತದೆ. ಇವರೆಡರ ಜೊತೆಯಲ್ಲಿ, ಇವಕ್ಕಿಂತ ಹೆಚ್ಚಾಗಿ, ಸಾಮಾನ್ಯ ಜನತೆಯಲ್ಲಿ ವಿದ್ಯೆ ಬುದ್ಧಿ ಪ್ರತಿಷ್ಠಿತವಾಗಬೇಕಾದರೆ ದೇಶಭಾಷೆಗಳೇ ಬೇಕು.

ಭರತಖಂಡದ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೆ ದೇಶಭಾಷೆಮಾಧ್ಯಮ ಕಾರ್ಯಗತವಾಗಿದೆ. ಮೈಸೂರು ವಿಶ್ವವಿದ್ಯಾನಿಲಯವೂ ಆ ದಿಕ್ಕಿಗೆ ಮೊದಲ ಹೆಜ್ಜೆ ಇಟ್ಟಿದೆ ನಮ್ಮ ಪ್ರಥಮ ಚಾನ್ಸಲರೂ ಆಳಿದ ಮಹಾಸ್ವಾಮಿಯವರೂ ಆದ ಶ್ರೀಕೃಷ್ಣರಾಜ ಒಡೆಯರು ಮೂವತ್ತು ವರ್ಷಗಳಹಿಂದೆಯೇ ಈ ವಿಶ್ವವಿದ್ಯಾನಿಲಯವನ್ನು ಆರಂಭಿಸುತ್ತ, ಇದು ಕನ್ನಡ ಸಂಸ್ಕೃತಿಯ ಕೇಂದ್ರವಾಗಲಿ, ಅದಕ್ಕಾಗಿ ಸತತವೂ ಶ್ರಮಿಸಲಿ ಎಂದು ಸಂದೇಶವಿತ್ತು, ಕನ್ನಡ ನುಡಿ ಶಿಕ್ಷಣ ಮಾಧ್ಯಮವಾಗಬೇಕೆಂದು ಸೂಚಿಸಿ ಹರಿಸಿದರು.ಅವರ ಆ ಕನಸು ಇಂದು ನನಸಾಗುತ್ತಿದೆ. ಅವರ ಇಷ್ಟದ ಮೇರೆಗೆ ಆರಂಭವಾದ ವಿಶ್ವವಿದ್ಯಾನಿಲಯದ ಗ್ರಂಥಮಾಲೆಗಳು ದಿನೇದಿನೇ ವೃದ್ಧಿಗೊಂಡು ಜನತೆಯ ಆಶೋತ್ತರಗಳಲ್ಲಿ ಈಡೇರಿಸುತ್ತಿವೆ. ವರ್ಷಂ ಪ್ರತಿ ಸಹಸ್ರ ಸಹಸ್ರ ಪ್ರತಿಗಳು ಮಾರಾಟವಾಗುತ್ತಿವೆ. ಇದಕ್ಕಿಂತ ಮಿಗಿಲಾಗಿ ಕಾಲೇಜು ವ್ಯಾಸಂಗಕ್ಕೆ ಸಹಕಾರಿಯಾಗುವ ವಿಜ್ಞಾನಗ್ರಂಥಗಳು ಸಾಕಷ್ಟು ಸಿದ್ಧವಾಗಿವೆ ಎಂದು ತಿಳಿಸಲು ಹೆಮ್ಮೆಯೂ ಸಂತೋಷವೂ ಆಗುತ್ತದೆ. ಕನ್ನಡದಲ್ಲಿ ಎಲ್ಲ ಪಾಠಪ್ರವಚನಗಳನ್ನೂ ನಡೆಸುವ ಸಾಮರ್ಥ್ಯವನ್ನು ಪಡೆದಿದ್ದೇವೆ ಎಂದು ಬಹುಮಂದಿ ಅಧ್ಯಾಪಕರು ಮುಂದೆ ಬಂದಿರುವುದು ಅಭಿನಂದನಾರ್ಹವಾದ ಸಂಗತಿಯಾಗಿದೆ.

ಪ್ರಾದೇಶಿಕತೆ ಎಂಬುದು ಸಂಕುಚಿತ ಭಾವನೆಯಾಗದೆ ವಿಶ್ವವೈಶಾಲ್ಯತೆಗೆ ಅವಿರುದ್ಧವಾಗಿ ನಿಲ್ಲಬೇಕು. ಪ್ರಪಂಚಜೀವನ ಅನೇಕತೆಯಿಂದ ಏಕತೆಯ ಕಡೆಗೆ. ಉಗ್ರಪ್ರಾಂತೀಯತೆಯ ಸ್ವಾರ್ಥತೆ ಸ್ವಪ್ರತಿಷ್ಠೆಗಳು ರಾಷ್ಟ್ರೀಯತೆಯ ಪ್ರೇಮಸೌಹಾರ್ದದಲ್ಲಿ, ಉಗ್ರರಾಷ್ಟ್ರೀಯತೆಯು ಸಂಕುಚಿತಭಾವನೆಗಳು ಅಂತರ ರಾಷ್ಟ್ರೀಯತೆಯ ವಿಶಾಲಭಾವನೆಯಲ್ಲಿ ಲೀನವಾಗದ ಹೊರತು ನಾಡಿಗೆ ಕ್ಷೇಮವಿಲ್ಲ, ಲೋಕಕ್ಕೆ ಕಲ್ಯಾಣವಿಲ್ಲ, ಜೀವನವನ್ನು ಪೂರ್ಣದೃಷ್ಟಿಯಿಂದ ನೋಡಿ, ಅನೇಕತೆಯನ್ನು ಸಮನ್ವಯಗೊಳಿಸುವ ಬುದ್ದಿ ತಲೆದೋರಿದಾಗ ಎಲ್ಲೆಲ್ಲೂ ಸಮತಾಭಾವ ಮೈದೋರಿ, ಸರ್ವೋದಯ ಸಿದ್ಧಾಂತ ಸಂಸ್ಥಾಪಿತವಾಗುತ್ತದೆ.

ಈ ತತ್ತ್ವ ಜೀವನದ ಸಕಲ ಕ್ಷೇತ್ರಗಳಿಗೂ ಅನ್ವಯಿಸುವಂತೆ ಭಾಷಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ದೇಶಭಾಷಾಭಿಮಾನದ ಅತಿರೇಕವಾದ ವ್ಯಾಮೋಹದಿಂದ ರಾಷ್ಟ್ರದ ಕಲ್ಯಾಣಕ್ಕೆ ಭಂಗಬರಬಾರದು, ನಿಜ.  ಹಾಗೆಯೆ ರಾಷ್ಟ್ರಕಲ್ಯಾಣವೆಂಬ ವಿಶಾಲತರಭಾವನೆಯ ನೆವದಲ್ಲಿ ನಮ್ಮ ಸುತ್ತಮುತ್ತಣ ದೇಶದ ಮತ್ತು ಜನತೆಯ ಅಭ್ಯುದಯದ ವಿಷಯದಲ್ಲಿ ನಾವು ಉದಾಸೀನರಾಗಲೂ ಬಾರದು. ಯಾವ ವಿಚಾರದಲ್ಲೂ ಔಚಿತ್ಯದ ಎಲ್ಲೆಯನ್ನು ಮೀರದೆ ಸಮರದೃಷ್ಟಿಯನ್ನು ಸಾಧಿಸಿಕೊಂಡು ಆಯಾ ಪ್ರದೇಶದ, ಅಖಿಲ ಭರತಖಂಡದ ಮತ್ತುಪ್ರಪಂಚದ ಶ್ರೇಯಸ್ಸಿಗೆ ಅನುಕೂಲವಾಗುವಂತೆ ಮುಂಬರಿಯುತ್ತೇವೆಂದು ಹಾರೈಸುತ್ತೇನೆ.

ನನಗೆ ನೀಡಿರುವ ಈ ಗೌರವವು ವಾಸ್ತವವಾಗಿ ಪ್ರವರ್ಧಮಾನವಾಗಿ ಮುಂಬರುತ್ತಿರುವ ದೇಶಭಾಷೆಗಳಿಗೆ ನೀಡಿದ ಗೌರವವಾಗಿದೆ. ಅದಕ್ಕೆ ಕಾರಣರಾದವರಿಗೆಲ್ಲ ಮತ್ತೊಮ್ಮೆ ಕೃತಜ್ಞತಾಪೂರ್ವಕವಾಗಿ ವಂದನಾರ್ಪಣೆ ಮಾಡುತ್ತೇನೆ.

* * *


[1] ತಾ|| ೨೫-೫-೧೯೫೬ರಂದು ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಮಾಡಿದ ಭಾಷಣ.