“ರೂಪಂ ರೂಪವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ

ಸ್ತುತ್ಯಾನಿರ್ವಚನೀಯತಾಖಿಲಗುರೋ ದೂರೀಕೃತಾ ಯನ್ಮಯಾ
ವ್ಯಾಪಿತ್ವಂ ಚ ನಿರಾಕೃತಂ ಭಗವತೋ ಯತ್ತೀರ್ಥಯಾತ್ರಾದಿನಾ
ಕ್ಷನ್ತವ್ಯಂ ಜಗದೀಶ ತದ್ವಿಕಲತಾ ದೋಷತ್ರಯಂ ಮತ್‌ಕೃತಂ!”

“ರೂಪವಿವರ್ಜಿತನಾದ ನಿನನಗೆ ಧ್ಯಾನ ಸಮಯದಲ್ಲಿ ರೂಪಕಲ್ಪನೆ ಮಾಡಿದ್ದೇನೆ. ನಿನ್ನನ್ನು ಸ್ತೋತ್ರಮಾಡಿ ನಿನ್ನ ಅನಿರ್ವಚನೀಯತೆಯನ್ನು ದೂರೀಕರಿಸಿದ್ದೇನೆ. ತೀರ್ಥಯಾತ್ರಾದಿಗಳನ್ನು ಕೈಕೊಂಡು ನಿನ್ನ ವ್ಯಾಪಿತ್ವವನ್ನು ನಿರಾಕರಿಸಿದ್ದೇನೆ. ಹೇ ಜಗದೀಶ, ಬುದ್ಧಿ ವಿಕಲತೆಯಿಂದ ನಾನು ಮಾಡಿರುವ ಈ ಮೂರು ಅಪರಾಧಗಳೂ ಕ್ಷಮಾರ್ಹ, ಸ್ವಾಮಿ!”

ಭಗವಂತನಲ್ಲಿ ಕ್ಷಮಾಯಾಚನೆ ಮಾಡುವ ಭಕ್ತಿಸ್ವಾರಸ್ಯವನ್ನು ಅನುಭವಿಸುವುದಕ್ಕಾಗಿಯೆ ಎಂಬಂತೆ ತೋರುತ್ತದೆ, ಮತ್ತಾವ ಅಪರಾಧಗಳನ್ನೂ ಮಾಡಲಾರದೆ ಅಪರಾಧದರಿದ್ರರಾಗಿದ್ದ ಅದ್ವೈತಜ್ಞಾನಿಯಾದ ಆಚಾರ್ಯರು ಮೇಲೆ ಹೇಳಿದ ಮೂರು ಮಹಾಪರಾಧಗಳನ್ನು ತಮ್ಮ ಕರ್ಮಭಂಡಾರದಿಂದ  ಸಂಶೋಧಿಸಿ ತೆಗೆದು ಪಾಪಾನುಭವದ ಮತ್ತು ಪ್ರಾರ್ಥನಾ ಪುಣ್ಯಾನುಭವದ ಎರಡು ಮಾಯಾ ಭೋಗಗಳನ್ನೂ ಒಟ್ಟಿಗೆ ಅನುಭವಿಸುವ ಯೋಗಕೌಶಲವನ್ನು ಪ್ರದರ್ಶಿಸಿದ್ದಾರೆ!

ಅನೇಕ ಶತಮಾನಗಳ ಹಿಂದೆಯೆ ಭಗವಂತನ ಪಾದಾರವಿಂದಗಳೆಡೆಗೆ ಯಾತ್ರೆ ಹೊರಟಿರುವ ಈ ರೂಪ-ಸ್ತೋತ್ರ-ಯಾತ್ರಾವಿರೋಧಿಯಾದ ಆಚಾರ್ಯರ ಪ್ರಾರ್ಥನಾಸ್ತುತಿ ಇನ್ನೂ ತನ್ನ ನೆಲೆಗೆ ತಲುಪಿಲ್ಲವೆಂದೆ ತೋರುತ್ತದೆ. ಬಹುಶಃ ಭಗವಂತನ ರೂಪಪ್ರೇಮಿಗಳೂ ಭಗವತ್ ಕೀರ್ತನಾ ಕಾಮಿಗಳೂ ತೀರ್ಥಯಾತ್ರಾಕಾಂಕ್ಷಿಗಳೂ ಆಗಿ ಅನವರತ ಜನಿಸುತ್ತಿರುವ ಅಸಂಖ್ಯೇಯ ಭಾಗವತ ಭಕ್ತರ ಹೃದಯಕಾನನದ ಜಟಿಲಪಥದಲ್ಲಿ ಸಿಕ್ಕಿ ಅದು ದಾರಿಗಾಣದೆಯೊ ದಾರಿತಪ್ಪಿಯೊ ತೊಳಲುತ್ತಿರಬಹುದು! ಆದ್ದರಿಂದ ಆ ಪ್ರಾರ್ಥನೆ ಹೊಮ್ಮಿ ಶತಮಾನಗಳಾದರೂ ಅಂದಿನಂತೆ ಇಂದೂ ಪುಣ್ಯ ಕ್ಷೇತ್ರಗಳಿಗೆ ಹೋಗುವ ಹೆದ್ದಾರಿಗಳೂ ಕಿರುದಾರಿಗಳೂ ಕಾಲುದಾರಿಗಳೂ ಬೆಟ್ಟ ಕಿಬ್ಬಿಯ ಇಕ್ಕಟ್ಟಿನ ದಾರಿಗಳೂ ದಣಿದ ಯಾತ್ರಿಕರಿಂದ ಕಿಕ್ಕಿರಿದು ಅವರ ದೇಹಭಾರದಿಂದಲೂ ಕರ್ಮಭಾರದಿಂದಲೂ ಕುಸಿದು ಕುಲುಷಿತವಾದರೂ ಪದಧೂಳಿಯಿಂದ ಪವಿತ್ರವಾಗುತ್ತಲೆ ಇವೆ! ಅನೇಕರು ಆಚಾರ್ಯರ ಈ ಕ್ಷಮಾಯಾಚನೆಯ ಸುಂದರ ಸ್ತೋತ್ರವನ್ನೇ ಹಾಡಿಕೊಳ್ಳುತ್ತಲೆ ಯಾತ್ರೆಯಲ್ಲಿ ದಾರಿ ಸಾಗುವುದಕ್ಕೆ ಬೇಕಾದ ಶಕ್ತಿ ಉತ್ಸಾಹ ಆಹ್ಲಾದಗಳನ್ನು ಪಡೆದುಕೊಳ್ಳುತ್ತಿದ್ದರೂ ಆಶ್ಚರ್ಯಪಡಬೇಕಾಗಿಲ್ಲ.

ಏಕೆಂದರೆ ನಮ್ಮ ದೇಶ ವಿಲಕ್ಷಣದೇಶ. ಇದು ವಿರೋಧಾಭಾಸಗಳ ಬೀಡು. ನಮ್ಮವರು ಭಗವಂತನ ನಿರಾಕಾರತ್ವವನ್ನು ಸಾರಿದಂತೆ ಬೇರೆ ಯಾರೂ ಸಾರಿಲ್ಲ. ದೇವ ದೇವಿಯರ ವಿಗ್ರಹ ಕೋಟಿಗಳನ್ನೂ ನಮ್ಮವರು ಸೃಜಿಸಿದಂತೆ ಬೇರೆ ಯಾರೂ ಸೃಜಿಸಿಲ್ಲ. ನಮ್ಮ ತತ್ತ್ವವೇತ್ತರು ಸ್ಥಾಪಿಸಿರುವಂತೆ ಅಭೇದತ್ವವನ್ನು ಬೇರೆ ಯಾರೂ ಸ್ಥಾಪಿಸಿಲ್ಲ. ವರ್ಣ ಮತ ಜಾತಿ ಪಂಥ ಪಂಗಡ ಆಚಾರಾದಿಗಳಲ್ಲಿ ನಮ್ಮಲ್ಲಿರುವಷ್ಟು ಭೇದಭಾವ ಮತ್ತಾರಲ್ಲಿಯೂ ಇಲ್ಲ. ಗಮ್ಯದ ಏಕತ್ವವನ್ನು ನಮ್ಮವರು ಬೋಧಿಸಿರುವಂತೆ ಅನ್ಯರಾರೂ ಬೋಧಿಸಿಲ್ಲ; ರುಚಿವೈಚಿತ್ರ್ಯ ಮತ್ತು ಋಜು ಕುಟಿಲ ನಾನಾ ಪಥ್ವಗಳನ್ನೂ ನಮ್ಮವರು ಹಟತೊಟ್ಟು ಸಾಧಿಸುತ್ತಿರುವಂತೆ ಅನ್ಯರಾರೂ ಸಾಧಿಸುತ್ತಿಲ್ಲ! ಅಕ್ಷರಶಃ ನಮ್ಮದು ವಿಲಕ್ಷಣ ದೇಶವೆ ನಿಜ; ಇಲ್ಲಿ ಏನು ಬೇಕಾದರೂ ನಡೆಯಬಹುದು; ಯಾವುದಕ್ಕೂ ನಾವು ವಿಸ್ಮಯಪಡಬೇಕಾಗಿಲ್ಲ.

ಹಾಗಾದರೆ ಆಚಾರ್ಯರು, ತೀರ್ಥಯಾತ್ರೆಯನ್ನು ಮತಿವಿಕಲತಾ ದೋಷವೆಂದು ತಮ್ಮ ಯಾತ್ರೆಯೆಲ್ಲಾ ಪೂರೈಸಿದ ಮೇಲೆ ಸಾರಿದ್ದರೂ, ಮುನ್ನಾದರೂ ಅವರು ಆ ತೀರ್ಥಯಾತ್ರೆಯನ್ನೇಕೆ ಕೈಕೊಂಡರು? ಅಥವಾ ಅವರಂತೆಯೆ ಇತರರೂ ಅದನ್ನೇಕೆ ಕೈಕೊಳ್ಳುತ್ತಾ ಬಂದಿದ್ದಾರೆ?

ಯಾವ ಚಾಳಿಯಾಗಲಿ ಪದ್ಧತಿಯಾಗಲಿ ಏನಾದರೊಂದು ಆವಶ್ಯಕತೆಯಿಲ್ಲದೆ ಬಹುಕಾಲದಿಂದಲೂ ನಡೆದುಕೊಂಡು ಬರಲಾರದು. ಮನುಷ್ಯನ ಆತ್ಮದಲ್ಲಿಯೆ ಯಾತ್ರೆಯ ಆವಶ್ಯಕತೆಗೆ ಒಂದು ಆಧಾರವಿರಬಹುದು?

ಮನುಷ್ಯ ವಾಸ್ತವವಾಗಿಯೂ ಈ ಪ್ರಪಂಚದಲ್ಲಿ ಒಬ್ಬ ಪ್ರವಾಸಿ. ಅವನ ಜೀವನ ಸಮಸ್ತವೂ ಒಂದು ಪ್ರವಾಸ. ಜೀವನ ಯಾತ್ರೆ ಎಂಬ ರೂಢಿಯ ರೂಪಕದಲ್ಲಿ ಆ ಸತ್ಯ ಧ್ವನಿತವಾಗುತ್ತದೆ. ಅವನ ನಿವಾಸ, ನಿತ್ಯನಿವಾಸ, ದೇವರು; ಯಾವನನ್ನು ಜಗನ್ನಿವಾಸ ಎಂದು ಕರೆಯುತ್ತೇವೆಯೊ ಆ ಬ್ರಹ್ಮ ಅಥವಾ ಪರಬ್ರಹ್ಮ ಅಥವಾ ಸಚ್ಚಿದಾನಂದ. ಈ ಪ್ರಪಂಚದ ಪ್ರವಾಸದಲ್ಲಿಯೂ ಜೀವ ನಿತ್ಯಸ್ವರೂಪವಾದ ತನ್ನ ನಿಜ ನಿವಾಸವನ್ನು ಹುಡುಕುತ್ತಾ ಹೋಗುವುದೆ ಅದರ ಸಹಜ ಲಕ್ಷಣ, ಹೊಳೆ ಕಡಲನ್ನರಸುತ್ತಾ ಅದರೆಡೆಗೆ ಹರಿಯುವಂತೆ. ಜೀವದ ಆ ಸಹಜಲಕ್ಷಣ ಲಕ್ಷರೂಪಗಳಲ್ಲಿ ಕೋಟಿ ವಿಧಾನಗಳಲ್ಲಿ ಆಯಾ ಲೋಕಸತ್ತತೆಗೆ ಅನುಗುಣವಾಗಿ ಪ್ರಕಟವಾಗುತ್ತದೆ, ಆಯಾ ಜೀವಸಂಸ್ಕಾರ ಬದ್ಧವಾಗಿ, ಬಹಿರ್ಮುಖಿಯಾದಾಗ ಒಂದು ರೀತಿಯಲ್ಲಿ, ಅಂತರ್ಮುಖಿಯಾದಾಗ ಮತ್ತೊಂದು ರೀತಿಯಲ್ಲಿ.

ಒಂದು ಕಡೆಯಲ್ಲಿಯೆ ಬಹಳಕಾಲವಿದ್ದು ಬೇಸರವಾದಾಗ ಹೊರಗೆಲ್ಲಿಯಾದರೂ ತಿರುಗಾಡಿಕೊಂಡು ಬರಲು ಹೋಗುತ್ತೇವೆ. ಹಾಗೆ ಹೊರಗೆ ಹೋಗಲಾಗದವರೂ ಹೋಗಲು ಆಪೇಕ್ಷೆ ಇಲ್ಲದವರೂ ತಮ್ಮೊಳಗೇ ಹೋಗುತ್ತಾರೆ: ಕಾದಂಬರಿ ಓದುತ್ತಾರೆ. ಹಗಲುಗನಸು ಕಾಣುತ್ತಾರೆ ಅಥವಾ ಪುರಾಣ ಕೇಳುತ್ತಾರೆ. ಅಂತೂ ಹೇಗಾದರೂ ದೈಹಿಕವಾಗಿಯೊ ಮಾನಸಿಕವಾಗಿಯೊ ಅಂತಮುರ್ಖ ಬಹಿರ್ಮುಖ ಪ್ರವಾಸೋಪಾಯಗಳಿಂದ ಹೊಸ ಹೊಸ ಉನ್ಮೇಷನವನ್ನು ಸಾಧಿಸುತ್ತಾರೆ. ಈ ಹೊಸಹೊಸದಾಗುವಿಕೆ ಬದುಕಿಗೆ ಅತ್ಯಂತ ಆವಶ್ಯಕ. ಅದು ನಿಂತೊಡನೆಯೆ ಬದುಕು ಮುಗಿದಂತೆಯೆ.

ಮನುಷ್ಯ ತನ್ನಿಂದ ತಪ್ಪಿಸಿಕೊಳ್ಳಲು, ತನ್ನನ್ನು ತಾನೆ ಮೀರಿ ತನ್ನತನದಿಂದ ಪಾರಾಗಲುಎಂತೆಂತಹ ಉಪಾಯಗಳಿಂದ ಎಷ್ಟೆಷ್ಟು ಪ್ರಯತ್ನಿಸುತ್ತಾನೆ! ತನ್ನಿಂದ ಎಂದರೆ ‘ಅಲ್ಪ’ವಾದ ತನ್ನಿಂದ; ಅಥವಾ ತನ್ನ ‘ಅಲ್ಪತ್ವ’ದಿಂದ; ಅಥವಾ ತನ್ನ ಅಹಂಕಾರದಿಂದ. ತಾನು ತಪ್ಪಿಸಿಕೊಳ್ಳುವುದು ಎಂದರೆ ಬೂಮವಾದುದಕ್ಕೆ ನಿರ್ದಿಗಂತವಾದ ಅನುಭವಾಭಿಮುಖವಾಗಿ ಹೋಗುವುದು ಎಂದರ್ಥ. ಈ ಪ್ರವಾಸಪ್ರಯತ್ನ ಆಟವಾಡುವುದು ನಾಟಕ ನೋಡುವುದು ಇತ್ಯಾದಿ ಸಾಮಾನ್ಯ ಮನರಂಜನೆಯ ವ್ಯಾಪಾರಗಳಿಂದ ಹಿಡಿದು ತೀರ್ಥಯಾತ್ರೆ, ಪುರಾಣಶ್ರವಣ, ಬ್ರಹ್ಮಸಾಕ್ಷಾತ್ಕಾರಕ್ಕಾಗಿ ಸಾಧನೆ ತಪಸ್ಯೆಗಳಲ್ಲಿ ನಿರತರಾಗುವುದು ಇತ್ಯಾದಿ ಮಾನವ ಚೇತನದ ಮಹೋನ್ನತ ಸಾಹಸಗಳವರೆಗೆ ವ್ಯಾಫಿಸುತ್ತದೆ.

ಈ ಪ್ರವಾಸ ಮೂರು ಮುಖಗಳಲ್ಲಿ ಸಾಗಲು ಸಾಧ್ಯ. ಒಂದು ಅಧೋಮುಖಿ, ಮತ್ತೊಂದು ಸಮತಲಮುಖಿ, ಇನ್ನೊಂದು ಊರ್ಧ್ವಮುಖಿ, ಮಾದಕ ಮತ್ತು ಲೈಂಗಿಕಾದಿ ಪ್ರಪಂಚಗಳಲ್ಲಿ ತನ್ನನ್ನುತಾನು ಮರೆಯಲೂ ಮೀರಲೂ ಮಾನವ ಕೈಕೊಳ್ಳುವ ಸಾಹಸಗಳೆಲ್ಲ ಅಧೋಮುಖ ಪ್ರವಾಸಕ್ಕೆ ಸೇರುತ್ತವೆ. ಅದರ ಪರಿಣಾಮ ಮೊದಮೊದಲು ಸ್ವಾದುವಾದವರೂ ತುದಿಯಲ್ಲಿ ಕೇಡು: ತನಗೆ, ತನ್ನ ಸಮಾಜಕ್ಕೆ, ತನ್ನ ನಾಡಿಗೆ, ಸಾಹಿತ್ಯ, ಸಂಗೀತ, ಕಲೆ, ಲೋಕವೊಪ್ಪುವ ಅಥವಾ ಮೆಚ್ಚುವ ಯಾವುದಾದರೊಂದು ಸುಧಾರಣೆಯ ಚಳವಳಿ, ರಾಜಕಾರಣ, ರಾಜ್ಯಸಭೆ ಮತ್ತು ಪರಿಷತ್ತುಗಳಲ್ಲಿ ಭಾಗವಹಿಸುವುದು, ದೇಶಭಕ್ತಿಯ ಅಥವಾ ದೇಶರಕ್ಷಣೆಯ ಅಥವಾ ಸಮಾಜ ಸೇವೆಯ ಚಟುವಟಿಕೆಗಳಲ್ಲಿ ಆಸಕ್ತನಾಗುವುದು, ಇತ್ಯಾದಿ ಇತ್ಯಾದಿ ನಮ್ಮ ಸುತ್ತಮುತ್ತ ದಿನವೂ ನಡೆಯುತ್ತಿರುವ ನೂರಾರು ವ್ಯಾಪಾರಗಳಲ್ಲಿ ಮನಃಪೂರ್ವಕವಾಗಿ ಮುಳುಗುವುದೆ, ನಮ್ಮನ್ನು ನಾವು ಮರೆಯುವುದೆ, ಮೀರುವುದೆ, ಸಮತಲಮುಖ ಪ್ರವಾಸ. ಆಧ್ಯಾತ್ಮಿಕ ಶ್ರೇಯಸ್ಸೆ ಧ್ಯೇಯವಾಗಿ, ನಮ್ಮ ಸಮಸ್ತ ಪ್ರಜ್ಞೆಯ ಪೂರ್ಣ ಸಮರ್ಪಣ ದಾರಿಯಾಗಿ, ನಮ್ಮ ಪೂರ್ಣತೆಯ ಅನುಸಂಧಾನಕ್ಕಾಗಿ ನಾವು ಕೈಗೊಳ್ಳುವ ಅತ್ಯಪೂರ್ವ ಸಾಹಸವೆ ಅತ್ಯಂತ ವಿರಳವಾದ ಊರ್ಧ್ವಮುಖ ಪ್ರವಾಸ.

ತೀರ್ಥಯಾತ್ರೆಯೂ ಅಂತಹ ಪ್ರವಾಸಗಳಲ್ಲಿ ಒಂದು. ಅದು ಅದನ್ನು ಕೈಕೊಳ್ಳುವ ವ್ಯಕ್ತಿಯನ್ನೂ ಅದರ ಕಾರಣೋದ್ದೇಶ ಪ್ರಯೋಜನಗಳನ್ನೂ ಅವಲಂಬಿಸಿ ಸಮತಲಮುಖ ಪ್ರವಾಸವಾದರೂ ಆಗಬಹುದು. ವಿಹಾರಕ್ಕಾಗಿ, ವಿಲಾಸಕ್ಕಾಗಿ, ಬೇಸರ ಪರಿಹಾರಕ್ಕಾಗಿ, ಹೊಸ ಊರುಗಳನ್ನೂ ನಾಡುಗಳನ್ನೂ ಜನರನ್ನೂ ಸಂಧಿಸುವ ಸಂತೋಷಕ್ಕಾಗಿ, ಪ್ರಕೃತಿಯ ಸೌಂದರ್ಯ ವೈಚಿತ್ರ್ಯಗಳನ್ನು ಸಂದರ್ಶಿಸುವ ರಸಿಕಾನುಭವಕ್ಕಾಗಿ, ಮನೆಯ ತಾಪತ್ರಯಗಳಿಂದ ಕೆಲಕಾಲವಾದರೂ ದೂರವಾಗುವ ನೆವಕ್ಕಾಗಿ, ಒದಗಿದ ಯಾವುದಾದರೂ ಸಂಕಟದಿಂದ ದೂರವಾಗಿ ಅದನ್ನು ಮರೆಯುವುದಕ್ಕಾಗಿ, ಹೊತ್ತ ಹರಕೆಯನ್ನು ತೀರಿಸಬೇಕೆಂಬ ದೇವಋಣ ವಿಮೋಚನೆಯ ಕರ್ತವ್ಯಕ್ಕಾಗಿ, ದಿವ್ಯಸ್ಥಾನಗಳಿಗೆ ಯಾತ್ರೆ ಹೋಗಿಬಂದು ಜನರ ಗೌರವಾರಾಧನಗಳಿಗೆ ಭಾಜನನಾಗಿ ಪೂಜ್ಯನಾಗುವುದಕ್ಕಾಗಿ ಪುಣ್ಯಕ್ಷೇತ್ರಗಳಿಗೆ ನಾವು ಕೈಕೊಳ್ಳುವ ಪ್ರವಾಸ ಬಹುಮಟ್ಟಿಗೆ ಸಮತಲಮುಖಿ, ಆಧ್ಯಾತ್ಮಿಕ ಭೂಮಿಕೆಯಲ್ಲಿ ಮುಂದುವರಿಯುವುದಕ್ಕಾಗಿ, ಆತ್ಮವಿಕಾಸಕ್ಕಾಗಿ, ಭಗವಂತನಲ್ಲಿ ಶರಣಾಗತಿ ಮತ್ತು ಸರ್ವ ಸಮರ್ಪಣಬುದ್ಧಿ ಸಾಧನೆಗಾಗಿ, ನಮ್ಮ ಯೋಗಕ್ಷೇಮವನ್ನು ಸಂಪೂರ್ಣವಾಗಿ ಭಗವಂತನ ಅಡಿದಾವರೆಗಳಿಗೆ ಅರ್ಪಿಸಿ ಹೃದಯದಲ್ಲಿ ನಿರ್ಭರತೆಯ ಭಾವವನ್ನು ಬಲಿಯುವುದಕ್ಕಾಗಿ, ಅಹಂಕಾರ ವಿಸರ್ಜನತೆಗಾಗಿ, ತಿತಿಕ್ಷೆಗಾಗಿ, ಆಧ್ಯಾತ್ಮದಲ್ಲಿ ಮುಂದುವರಿದ ಸಿದ್ಧಪುರುಷರ ಸಂಗ ಸಂಸರ್ಗ ಸಾನ್ನಿಧ್ಯ ಸಂಪಾದನೆಗಾಗಿ, ಶತಮಾನಗಳಿಂದಲೂ ಕೋಟ್ಯಂತರ ಭಕ್ತರ ಆರ್ತರ ಸಾಧಕರ ಸಿದ್ಧರ ಕರೆಗೇಳಿ ಮೊರೆಗೇಳಿ ಕೃಪೆಯಿಂದಿಳಿದ ಭಗವದನುಗ್ರಹ ಆವಿರ್ಭೂತವಾಗಿರುವ ಜಾಗ್ರತ ಮೂರ್ತಿಸ್ಥಾನಗಳ ಮಹಿಮಾದೀಪ್ತಿಯಿಂದ ಚೇತನದ ತಮಃಪರಿಹಾರ ಮಾಡಿಕೊಳ್ಳುವ ಅವಿದ್ಯಾವರಣಭಂಗ ಸಾಧನೆಗಾಗಿ ಮುಮುಕ್ಷು ಕೈಕೊಳ್ಳುವ ತೀರ್ಥಯಾತ್ರಾರೂಪವಾದ ಪ್ರವಾಸವೆ ಊರ್ಧ್ವಮುಖಿ ಎಂಬ ಹೆಸರಿಗೆ ಅರ್ಹವಾಗುತ್ತದೆ.

ಆದರೆ ಅಂತಹ ಊರ್ಧ್ವಮುಖಪ್ರವಾಸದ ವಿಚಾರವಾಗಿಯೆ ಅಲ್ಲವೆ ಭಗವದ್ಗೀತೆ ಹೀಗೆ ಹೇಳುವುದು:

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ|
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ||

ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೋಗಿಬಂದ ಮಾತ್ರದಿಂದಲೆ ಪವಿತ್ರನಾಗಿಬಿಡುತ್ತೇನೆ ಎಂಬ ನಂಬಿಕೆಯಲ್ಲಿ ಆತ್ಮವಂಚನೆಗೆ ವಿಶೇಷವಾದ ಅವಕಾಶವಿರುವುದನ್ನರಿತೆ ಅನೇಕ ಕವಿಗಳೂ ಸಾಧುಸಂತರೂ ಅದರಿಂದೊದಗುವ ಧಾರ್ಮಿಕ ಸಹಾಯವನ್ನು ಪ್ರಶಂಸಿಸಿರುವುದಕ್ಕಿಂತಲೂ ಹೆಚ್ಚಾಗಿ ಅದರಿಂದೊದಗಬಹುದಾದ ಧಾರ್ಮಿಕ ಅಪಾಯದ ಕಡೆಗೆ ನಮ್ಮ ಗಮನ ಸೆಳೆದಿದ್ದಾರೆ.

ಕಾಶಿಯಲ್ಲಿ ಪ್ರಾಣಬಿಟ್ಟರಾಯಿತು ತನಗೆ ಮೋಕ್ಷವೊದಗುತ್ತದೆ ಎಂಬ ಭಾವನೆ ಒಳ್ಪಿಗೆ ಪ್ರೇರಕವಾಗುವುದಕ್ಕಿಂತ ಹೆಚ್ಚಾಗಿ ಕೇಡಿಗೆ ಕಾರಕವಾಗಬಹುದಲ್ಲವೆ?

ಹುಲಿ ತಿಂದು ಬಿಟ್ಟ ದುರಾಚಾರಿಯೊಬ್ಬನ ಎಲುಬಿನ ಚೂರನ್ನು ಕಾಗೆ ಕಚ್ಚಿಕೊಂಡು ಹೋಗಿ ನೀರಿಗೆ ಬೀಳಿಸಿದ ಮಾತ್ರದಿಂದ ಅವನ ಜೀವವನ್ನು ಕೊಂಡೊಯ್ಯುವುದಕ್ಕಾಗಿ ಯಮದೂತ ದೇವದೂತರಿಗೆ ದೊಡ್ಡದೊಂದು ಕಾಳಗವೇ ನಡೆದು ದೇವದೂತರೆ ಗೆದ್ದು ಅವನ ಆತ್ಮವನ್ನು ವೈಕುಂಠಕ್ಕೆ ಒಯ್ದರು-ಎಂಬ ಕ್ಷೇತ್ರ ಮಹಿಮಾ ಸ್ಥಾಪನೋದ್ದೇಶದ ಕಟ್ಟುಕತೆಯಿಂದ ಪಾಪರುಚಿಯ ಜನಹೃದಯದ ಮೇಲೆ ಏನುತಾನೆ ಅನಾಹುತ ಪರಿಣಾಮ ಆಗಲಾರದು?

ಆದ್ದರಿಂದಲೇ ಎಂದು ತೋರುತ್ತದೆ ನಮ್ಮ ಪುಣ್ಯಕ್ಷೇತ್ರಗಳಲ್ಲಿ ಪಾಪ ಪುರುಷ ಯಾವ ದಂಡನೆಯ ಮತ್ತು ದಂಡಧಾರಿಗಳ ಭಯವೂ ಇಲ್ಲದೆ ತನ್ನ ಭೋಗವಿಲಾಸ ವ್ಯಾಪಾರಗಳಿಗಾಗಿ ಸಂತೆಸಂತೆಗಳನ್ನೆ ತೆರೆದಿಟ್ಟಿದ್ದಾನೆ! ಆದರೆ ಅಂತಹ ಪರಿಸ್ಥಿತಿ ಪುಣ್ಯಕ್ಷೇತ್ರಗಳಿಗೆ ಮಾತ್ರ ವಿಶೇಷವಾದುದೇನೂ ಅಲ್ಲವಷ್ಟೆ? ಎಲ್ಲ ಕ್ಷೇತ್ರಗಳಲ್ಲಿಯೂ ಪಾಪಪುರುಷನಿಗೆ ಸಂತೇಪೇಟೆಗಳಿದ್ದೆ ಇರುತ್ತವೆ.

ಅತಿ ಎಲ್ಲಿಯೂ ಒಳಿತಲ್ಲ. ಅತಿಖಂಡನೆ ಅತಿಶ್ಲಾಘನೆಗಿಂತ ಅನರ್ಥಕಾರಿ ಯಾಗಬಹುದು. ತೀರ್ಥಯಾತ್ರೆಗಳಿಂದಲೂ ಪುಣ್ಯಕ್ಷೇತ್ರಗಳಿಂದಲೂ ನೊಂದಜೀವಕ್ಕೂ ಬೆಂದಲೋಕಕ್ಕೂ ಶಾಂತಿ ಸಮಾಧಾನಗಳು ಮತ್ತೆ ಮತ್ತೆ ದೊರೆಯುತ್ತಿರುವುದರಿಂದಲೆ ಜನರು ಪ್ರಯಾಣದ ಕ್ಲೇಶ, ಕಷ್ಟ, ದುರ್ಗಮತೆ, ಅಪಾಯ, ಕಡೆಗೆ ಸಾವು, ಯಾವುದನ್ನೂ ಲೆಕ್ಕಿಸದೆ ಮತ್ತೆ ಮತ್ತೆ ಅಂತಹ ಪ್ರವಾಸಗಳನ್ನು ಕೈಕೊಳ್ಳುತ್ತಿರುವುದಲ್ಲವೆ? ಅಂತಹ ಪ್ರವಾಸ ಯಾರಿಗೆ ಆವಶ್ಯಕವೊ ಅವರನ್ನು ಮೂಢರೆಂದಾಗಲಿ ಭ್ರಾಂತರೆಂದಾಗಲಿ ಕರೆದರೆ ತಪ್ಪಾಗುತ್ತದೆ, ಆಸ್ಪತ್ರೆಗೆ ಹೋಗುವ ರೋಗಿಯನ್ನು ಮೂಢನೆಂದಾಗಲಿ ಭ್ರಾಂತನೆಂದಾಗಲಿ ಕರೆದರೆ ತಪ್ಪಾಗುವಂತೆ.

ಸ್ವಾಮಿ ಸೋಮನಾಥನಂದರು ತಮ್ಮ ಈ ಪ್ರವಾಸ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಬೇಕೆಂದು ಕೇಳಿದಾಗ ನಾನು ಮೊದಲು ಹಿಂಜರಿದೆ. ಏಕೆಂದರೆ ನನಗೆ ಪುಣ್ಯಕ್ಷೇತ್ರ ಮತ್ತು ತೀರ್ಥಯಾತ್ರೆಗಳ ವಿಚಾರದಲ್ಲಿ ಅಷ್ಟೇನೂ ಶ್ರದ್ಧೆಯಿದೆ ಎಂದು ಹೇಳಿಕೊಳ್ಳಲಾರೆ. ನಾನು ಪೂಜೆಯ ಸಲುವಾಗಿ ದೇವಸ್ಥಾನಗಳಿಗೆ ಕೂಡ ಹೋಗದೆ ಕಾಳುಶತಮಾನಕ್ಕಿಂತಲೂ ಹೆಚ್ಚಾಯಿತೆಂದು ತೋರುತತದೆ. ನಾನು ಜಾತಕ ಪಂಚಾಂಗ ಇತ್ಯಾದಿಗಳ ಕಡೆ ಎಂದೂ ಮುಖ ಹಾಕದಿವನಲ್ಲ. ನನಗೆ ರಾಹುಕಾಲ ಗುಳಿಕಕಾಲಗಳ ಅರ್ಥವೂ ಗೊತ್ತಿಲ್ಲ. ಪಿತೃಗಳಿಗೆ ಶ್ರಾದ್ಧಮಾಡುವುದು ಪಿಂಡ ಅರ್ಪಿಸುವುದು ಇತ್ಯಾದಿಗಳನ್ನು ಕೇಳಿ ಬಲ್ಲೆನೆ ಹೊರತು ಮಾಡುವ ಗೋಜಿಗೆ ಹೋದವನಲ್ಲ. ಹಿಂದೂಧರ್ಮಕ್ಕೆ ಸೇರಿದುವು ಎಂದು ಹೇಳಿಕೊಂಡು ಅನೇಕರು ಆಚರಿಸುವ ಕ್ರಿಯೆಗಳಲ್ಲಿ ಮುಕ್ಕಾಲುಮೂರು ವೀಸಕ್ಕಿಂತಲೂ ಹೆಚ್ಚು ಪಾಲಿಗೆ ನಾನು ಸ್ವಭಾವತಃ ವಿಮುಖವಾಗಿದ್ದೇನೆಂದು ತೋರುತ್ತದೆ. ಹೀಗಿರುವವನು ಕೇದಾರ ಬದರೀನಾಥಾದಿ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೊಗಿರುವವರು ಯಾವ ಯಾವ ನಂಬುಗೆಗಳಿಂದ ಏನೇನನ್ನು ಮಾಡುತ್ತಾರೊ ಅದನ್ನೆಲ್ಲ ಸಹಾನುಭೂತಿಯಿಂದ ನೋಡಿ ಶ್ಲಾಘಿಸುವುದು ಸಾಧ್ಯವಾಗುತ್ತದೆಯೆ? ಅದು ಸಾಧ್ಯವಾಗದಿದ್ದರೆ  ಟೀಕಿಸುವುದು ಮುನ್ನುಡಿ ಬರೆಯುವವನಿಗೆ ಯೋಗ್ಯವೆ, ಸಭ್ಯವೆ? ಮನಸ್ಸಿನಲ್ಲಿ ಖಂಡನೆಯಿದ್ದೂ ಬಾಯಲ್ಲಿ ಮಾತ್ರ ಉಪಚಾರಶ್ಲಾಘನೆ ಮಾಡುವುದು ನನಗೆ ಎಂದಾದರೂ ಸಾಧ್ಯವೆ? ನನ್ನ ಸ್ವಂತ ಅಭಿಪ್ರಾಯವೇನಾದರೂ ಆಗಿರಲಿ; ಇತರ ಹೃದಯಾನುಭವದ ದೃಷ್ಟಿಯಿಂದಲಾದರೂ ಅದನ್ನು ಮೆಚ್ಚಬಹುದಲ್ಲ ಎಂದರೆ, ಮನಸ್ಸಿನಲ್ಲಿ ಇನ್ನೂ ಹಸಿ ಹಸಿಯಾಗಿರುವ ಮೊನ್ನೆ ಮೊನ್ನೆ ನಡೆದ ಕುಂಭಮೇಳದ ಕಾಲ್ದುಳಿತದ ಮರಣಕಾಂಡದ ಪ್ರಕರಣವೂ ಅದಕ್ಕಿಂತಲೂ ಹೆಚ್ಚು ಸಮೀಪವಾಗಿರುವ ಮಾದೇಶ್ವರಬೆಟ್ಟದ ಜಾತ್ರೆಯ ಕಾಲರಾ ಬಲಿಯ ವಾರ್ತೆಯ ಅಸಾಹ್ಯಾನುಭವವೂ ತಮ್ಮ ಅಶ್ಲೀಲ ವಿಕಾರ ಭೀಕರ ರೂಪಗಳಿಂದ ನನ್ನ ಮುಂದೆದ್ದು ನಿಂತು ಹಲ್ಲುಕಿರಿದು ಹಾಸ್ಯ ಮಾಡುವಂತೆ ಭಾಸವಾಯಿತು! ಇಂತಹ ಗುರುಪ್ರಮಾಣದ ಕೇಡಿಗೆ ಕಾರಣವಾಗುವ ಮೌಢ್ಯಗಳನ್ನು ಖಂಡಿಸದೆ ಶ್ಲಾಘಿಸಿದರೆ ಜನಕ್ಕೆ ದ್ರೋಹವೆಸಗಿದಂತಾಗುತ್ತದೆ ಎಂದು ತೋರಿತು. ಈ ಎಲ್ಲ ಇಕ್ಕಟ್ಟಿನಲ್ಲಿ ಸಿಲುಕಿದ ನಾನು ಮುನ್ನುಡಿ ಬರೆದುಕೊಡುತ್ತೇನೆಂದು ಮಾತು ಕೊಡಲಿಲ್ಲ. “ನಿಮ್ಮ ಪುಸ್ತಕ ಓದುತ್ತೇನೆ, ಸಾಧ್ಯವಾದರೆ, ಪ್ರೇರಣೆಯಾದರೆ, ಬರೆಯುತ್ತೇನೆ. ಇಲ್ಲದಿದ್ದರೆ ಇಲ್ಲ. ನಾನು ಬರೆದು ಕೊಡುತ್ತೇನೆಂದು ನೀವು ನಂಬಲೂಬಾರದು, ನಿರೀಕ್ಷಸಲೂಬಾರದು” ಎಂದೆ. ನನ್ನ ಸ್ವಭಾವ ಸರಳತೆಯನ್ನೂ ಅದರ ನಿಷ್ಠುರತೆಯನ್ನೂ ಚೆನ್ನಾಗಿ ಅರಿತಿರುವ ಅವರು‘ಆಗಲಿ’ ಎಂದು ಒಪ್ಪಿಕೊಂಡು, ನನ್ನ ಮನಸ್ಸನ್ನು ಹೊರೆಹೊಣೆ ಎರಡರಿಂದಲೂ ಪಾರುಮಾಡಿ ಅದನ್ನುಹಗುರವನ್ನಾಗಿ ಮಾಡುವುದರಿಂದಲೆ ಮುನ್ನುಡಿಯ ಮೂಡಿಕೆಗೆ ಅಗೆ ಹಾಕಿ ಹೋದರು.

ಪುಸ್ತಕ ಓದಿದೆ, ಧೈರ್ಯವಾಯಿತು. ಸ್ವಾಮಿ ಸೋಮನಾಥಾನಂದರಂತಹ ಭಕ್ತರ ಭಾವಸಂಗವೂ ಜ್ಞಾನಿಗಳ ವಿಚಾರಪೂರ್ಣದೃಷ್ಟಿಯೂ ಸಹಯಾತ್ರಿಗಳಾದ ಪಕ್ಷದಲ್ಲಿ ನಾನೂ ಮೂಢಾಚಾರಿಯಾಗುವ ಭೀತಿಯಲ್ಲದೆ ಹೈಮಾಚಲ ಸಾನಿಧ್ಯಕ್ಕೆ ಯಾತ್ರೆ ಹೋಗಿಬರಬಹುದುದೆಂದು ತೋರಿತು. ಅಷ್ಟೇ ಅಲ್ಲ; ಆಗಲೆ ಅವರಡೊನೆ ಯಾತ್ರೆ ಹೋಗಿಬಂದಂತೆಯೂ ಅನುಭವವಾಯಿತು.

ಕನ್ನಡದಲ್ಲಿ ಪ್ರವಾಸಸಾಹಿತ್ಯ ಹೆಚ್ಚಾಗಿಲ್ಲ; ಅದರಲ್ಲಿಯೂ ಇಂತಹ ಪವಿತ್ರ ಯಾತ್ರೆಯ ತೀರ್ಥಸಾಹಿತ್ಯ. ಸ್ವಾಮಿಗಳು ಹಿಂದೆ ಕಾಶ್ಮೀರದಲ್ಲಿರುವ ಅಮರನಾಥಕ್ಕೆ ಯಾತ್ರೆ ಹೋಗಿ ಬಂದಮೇಲೆ ‘ಅಮರನಾಥಯಾತ್ರೆ’ ಎಂಬ ಹೆಸರಿನ ಹೊತ್ತಿಗೆಯನ್ನು ಬರೆದು ಕನ್ನಡಿಗರಿಗೆ ಆ ಅನುಭವದ ಔತಣವನ್ನು ಉಣಬಡಿಸಿದ್ದರು.ಈಗ ಈ ‘ಹೂಮಾಚಲ ಸಾನಿಧ್ಯದಲ್ಲಿ’ ಎಂಬ ಪುಸ್ತಿಕೆಯಲ್ಲಿ ಹಿಂದಿನದಕ್ಕಿಂತಲೂ ಸಮಧಿಕತರವಾದ ಔತಣವನ್ನು ಉಣಬಡಿಸಿದ್ದಾರೆ.

ಇಲ್ಲಿ ಭಕ್ತಿ ಮೌಢ್ಯಕ್ಕೂ ಮಿಥ್ಯಾಚಾರಕ್ಕೂ ಶರಣಾಗಿಲ್ಲ. ವಿವೇಕ ವಿಚಾರಗಳ ಗೌರವರಕ್ಷೆಯಲ್ಲಿಯೆ ಅದಕ್ಕೆ ದೇವಸ್ಥಾನ ಪ್ರವೇಶವಾಗುತ್ತದೆ. ಮತಿಯ ತೀಕ್ಷ್ಣಖಡ್ಗ ಸದಾ ಒರೆಗಳಚಿದ್ದರೂ ಔದಾರ್ಯದ ಮುಷ್ಟಿಯಲ್ಲಿ ಸಂಯಮ ಶೀಲವಾಗಿ ವರ್ತಿಸುತ್ತಿರುವುದನ್ನು ಕಾಣುತ್ತೇವೆ. ಒಮೊಮ್ಮೆ ಲೇಖಕರು ತೋರಿಸುವ ಸಹಾನುಭೂತಿ ಮಗುವನ್ನು ಕೆಡಿಸುವ ಅಜ್ಜಿಯ ಅತಿಮುದ್ದಾಗುತ್ತದೆಯೊ ಎಂದು ಹೆದರಿಕೆಯಾಗುತ್ತದೆ. ತುಂಗನಾಥದ ಮಹಿಮೆಯನ್ನು ವಿವರಿಸುವ ಪುಸ್ತಕವೊಂದನ್ನು ಅವರು ಓದಿದಾಗ ಆ ಕಟ್ಟುಕಥೆಯ ಉತ್ಪ್ರೇಕ್ಷೆಗೆ ಬೆರಗಾಗಿ ‘ನನ್ನ ಯುಕ್ತಿ ತತ್ತರಿಸಿತು’ ಎಂದು ಹೇಳಿದರೂ ಮುಂದೆ ‘ಯಾರೂ ಭಗವಂತನ ಆಶೀರ್ವಾದಕ್ಕೆ ಬಾಹಿರರಲ್ಲ’ಎಂಬ ವ್ಯಾಖ್ಯಾನದಿಂದ ಅದನ್ನು ವಿವರಿಸ ಹೊರಟು ತಮ್ಮ ಖಂಡನೆಯ ಖಡ್ಗವನ್ನು ಔದಾರ್ಯದ ಒರೆಗೆ ದಬ್ಬಿಬಿಡುತ್ತಾರೆ!

ಆದರೆ ದೇವರ ಹೆಸರಿನಲ್ಲಿ ಮಿಥ್ಯಾಚಾರ ವಂಚನೆ ಇತ್ಯಾದಿಗಳನ್ನು ಕಂಡಾಗ ಲೇಖಕರ ಟೀಕೆ ನಖವೆತ್ತಿ ಅಪ್ಪಳಿಸುವುದನ್ನು ಕಾಣುತ್ತೇವೆ.

“ಬಸ್ಸಿನಿಂದ ಇಳಿದುದೆ ತಡ ಪಂಡರ ತಂಡ ಮುತ್ತಿತು. ಪಂಡರೆಂದರೆ ಉತ್ತರಕಾಂಡದ ತೀರ್ಥಯಾತ್ರೆಯಲ್ಲಿ ಯಾತ್ರಿಕರ ಸಹಾಯಾರ್ಥವಾಗಿರುವ ಒಂದು ಜನ. ಅವರ ಕಸುಬೇ ಯಾತ್ರಿಕರನ್ನು ಸುಲಿದು ತಿನ್ನುವುದು. ಆ ಪೂಜೆ ಮಾಡಿಸಿ, ಈ ಪೂಜೆ ಮಾಡಿಸಿ ಎನ್ನುವರು. ಪಿತೃಗಳನ್ನು ಪರಲೋಕಕ್ಕೆ ಕಳುಹಿಸಲು ಇದು ಶ್ರೇಷ್ಠ ಸ್ಥಾನ ಎನ್ನುವರು. ಇಲ್ಲಿ ದಾನ ಮಾಡಿದರೆ ಒಂದಕ್ಕೆ ಸಾವಿರದಷ್ಟು ಫಲಿಸುವುದು ಎನ್ನುವರು. ಇವರನ್ನು ನೋಡಿದರೆ ಜುಗುಪ್ಸೆ ಬರುವುದು. ಪೂಜೆ ಮಾಡಿಸುವರು. ಆದರೆ ಮಂತ್ರವೇ ಚೆನ್ನಾಗಿ ಬರುವುದಿಲ್ಲ. ಬ್ರಾಹ್ಮಣರೆಂದು ಕರೆಸಿಕೊಳ್ಳುವವರು, ಸ್ನಾನ ಸಂಧ್ಯಾವಂದನೆ ಯಾವುದರ ಆವಶ್ಯಕತೆಯೂ ಇವರಿಗಿಲ್ಲ. ವಿದ್ಯೆಯಿಲ್ಲ, ಸಂಸ್ಕೃತಿಯಿಲ್ಲ. ಜನರನ್ನು ಪೀಡಿಸಿ ದುಡ್ಡು ವಸೂಲುಮಾಡುವ ರಣಹದ್ದುಗಳಂತಿರುವರು. ಸರಿಯಾಗಿ ದುಡ್ಡು ಕೊಡದೆ ಹೋದರೆ ಮನಸ್ವಿ ನಿಂದೆಯ ಮಳೆ ಕರೆಯುವರು. ದಾರಿಯಲ್ಲಿ ಸಿಕ್ಕುವ ಭಿಕ್ಷುಕರನ್ನಾದರೂ ಮೆಚ್ಚಬಹುದು; ಆದರೆ ಈ ಪಂಡರನ್ನು ಸಹಿಸುವುದು ದುಸ್ಸಾಧ್ಯವಾಗುವುದು.”

“ಇದೆ ಊರಿನಲ್ಲಿ ಹಿಂದೆ ಶ್ರೀರಾಮ ತಪಸ್ಸನ್ನು ಮಾಡಿದನಂತೆ. ರಾವಣ ವಧಾನಂತರ ಬ್ರಹ್ಮಹತ್ಯಾ ದೋಷ ಬರಲು ಅದರಿಂದ ಪಾರಾಗಲು ಈ ತಪಸ್ಸು. ಈ ಬ್ರಹ್ಮಹತ್ಯಾದೋಷ ಯಾರನ್ನೂ ಬಿಡುವುದಿಲ್ಲ. ರಾಮನನ್ನೂ ಬಿಡಲಿಲ್ಲ, ಶಿವನನ್ನೂ ಬಿಡಲಿಲ್ಲ. ಶಿವ ಬ್ರಹ್ಮನ ಐದು ತಲೆಗಳಲ್ಲಿ ಒಂದನ್ನು ಉಗುರಿನಿಂದ ಜಿಗುಟಿದಾಗ ಆ ತಲೆ ಅವನ ಕೈ ಬೆರಳಿಗೆ ಅಂಟಿಕೊಂಡಿಂತೆ. ಆ ಪಾಪದಿಂದ ಪಾರಾಗಲು ಶಿವ ಹಿಮಾಲಯದಲ್ಲಿ ಬದರೀನಾಥಕ್ಕೆ ಯಾತ್ರೆ ಮಾಡಬೇಕಾಯಿತು. ಅಲ್ಲಿಗೆ ಹೋದಾಗ ಅದು ಬಿದ್ದು ಹೋಯಿತೆಂದು ಹೇಳುವರು. ತನಗೆ ಏನೂ ಕೆಡಕು ಮಾಡದೆ ಲೋಕಕಂಟಕನಾಗದೆ ಇದ್ದ ವಾಲಿಯನ್ನು ಕೊಂದುದಕ್ಕೆ ರಾಮ ಪಶ್ಚಾತ್ತಾಪ ಪಡಲಿಲ್ಲ. ತಪಸ್ಸು ಮಾಡಲಿಲ್ಲ. ಲೋಕಕಂಟಕನಾದ ರಾವಣನನ್ನು ಸಂಹರಿಸಿದುದಕ್ಕೆ ರಾಮನನ್ನೇ ತಪಸ್ಸು ಮಾಡುವಂತೆ ಜನ ಬಲಾತ್ಕರಿಸಿದರು. ಏಕೆಂದರೆ ರಾವಣ ಜಾತಿಯಲ್ಲಿ ಬ್ರಾಹ್ಮಣನಾಗಿದ್ದನಂತೆ, ವೇದಪಾರಾಯಣ ಮಾಡಬಲ್ಲವನಾಗಿದ್ದನಂತೆ. ಜಾತಿಗೆ ಎಷ್ಟು ಪ್ರಾಶಸ್ತ್ಯ ಕೊಟ್ಟಿರುವವರು ನಮ್ಮವರು ಎಂದುಕೊಂಡೆ. ಅದೇ ಧರ್ಮಶಾಸ್ತ್ರಗಳನ್ನೂ ಪುರಾಣಮಗಳನ್ನೂ ಬೇರೆ ಕೋಮಿನವರು ಬರೆದಿದ್ದರೆ ಅದು ಬೇರೆ ವಿಧವಾಗಿರುತ್ತಿತ್ತು”.

“ಬಾಯಾರಿದಾಗ ನಾವು ನೀರು ಕೊಟ್ಟರೆ ಆಕೆ ನೀರನ್ನು ಕುಡಿಯಲೊಲ್ಲಳು. ಆ ನೀರಿಗೆ ಸ್ವಲ್ಪ ಹಾಲು ಬೆರೆಸಿ ಅದನ್ನು ಕುಡಿದರೆ ಮಾತ್ರ ಆಕೆಯ ಜಾತಿ ಉಳಿಯುವುದು. ಹಾಲಿಗೆ ದೋಷವಿಲ್ಲವಂತೆ. ನೀರಿಗೆ ಮಾತ್ರ ದೋಷವಂತೆ! ಈ ಆಚಾರವನ್ನು ಕಾಪಾಡಿಕೊಂಡು ಬಂದರೆ ದೊಡ್ಡ ಧಾರ್ಮಿಕ ವ್ಯಕ್ತಿಗಳು ತಾವು ಎಂದು ಭಾವಿಸುವರು.”

ಸ್ವಾಮಿಗಳ ಬರವಣಿಗೆಯಲ್ಲಿ ಅಲ್ಲಲ್ಲಿ ಹಿಮಾಲಯದ ಪ್ರಕೃತಿದೃಶ್ಯ ಪರಂಪರೆಯ ಸುಂದರ ವರ್ಣನೆ ಎಷ್ಟು ಕಾವ್ಯಮಯವಾಗಿ ಬಂದಿದೆ! ನದಿ, ಪರ್ವತ, ಶಿಖರ, ಕಾನನ, ಮೇಘಮಾಲೆ, ವಿಶಾಲಗಗನ. ಚಂದ್ರೋದಯ. ಹಿಮರಾಶಿ, ತುಷಾರಪಂಕ್ತಿಯ ಮೇಲೆ ಬೀಳುವ ಬಿಸಿಲು ಬೆಳ್ದಿಂಗಳ  ವರ್ಣಮಯ ಮೋಹಕತೆ ಮೊದಲಾದ ನೂರಾರು ಚಿತ್ರಗಳು ಒಮ್ಮೆ ಮುದ್ದಾಗಿ, ಒಮ್ಮೆ ಚೆಲುವಾಗಿ, ಒಮ್ಮೆ ಸುಂದರವಾಗಿ, ಒಮ್ಮೆ ಮಹತ್ತಾಗಿ, ಒಮ್ಮೆ ಭವ್ಯವಾಗಿ ನಾನಾ ಭಾವ ಭಂಗಿಗಳಲ್ಲಿ ನಮ್ಮ ಬಗೆಗಣ್ಣಿಗೆ ಸುಳಿಯುತ್ತವೆ! ಭಾರತೀಯ ಸಂಸ್ಕೃತಿ ಈ ರಮಣೀಯ ದರ್ಶನೀಯ ಪ್ರಕೃತಿ ಸ್ಥಾನಗಳನ್ನು ಹೇಗೆ ಆಧ್ಯಾತ್ಮಿಕತೆಗೆ ಉಪಯೋಗಿಸಿಕೊಂಡಿದೆ ಎಂಬ ವಿಚಾರವಾಗಿ ಲೇಖಕರು ಹೇಳುವ ಈ ಮಾತುಗಳು ಗಮನಾರ್ಹವಾಗಿವೆ: ‘ಪಾಶ್ಚಾತ್ಯ ಹೋಟೆಲ್‌ ತೆರೆಯುವರು. ನಯಾಗರ ಮೊದಲಾದ ಪ್ರಪಾತದ ಕಡೆ ಹಾಗೇ ಇರುವುದು. ಅಲ್ಲಿಗೆ ಹೋಗುವವರು ವಿಲಾಸಿಗಳು. ಆದರೆ ಭರತಖಂಡದಲ್ಲಿ ಪ್ರಕೃತಿಯ ರಮ್ಯಸ್ಥಳಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುವರು. ಮಹಾ ಪ್ರಪಾತ, ಪರ್ವತಶಿಖರ, ಸಂಗಮ ಸ್ಥಳಗಳೆಲ್ಲ ದೇವದೇವಿಯರ ನೆನಪು ತರುವುವು. ಅಲ್ಲಿ ತಪಸ್ಸು ಮಾಡಿದ ಋಷಿಗಳನ್ನು ಜ್ಞಾಪಿಸುವುವು. ಅಲ್ಲಿಗೆ ಬರುವ ಯಾತ್ರಿಕರ ತಂಡ ವಿಲಾಸಿಗಳಲ್ಲ. ಸೌಂದರ್ಯವನ್ನು ಭೋಗದ ಕಡೆಗೆ ಬೇಕಾದರೂ ತಿರುಗಿಸಬಹುದು, ಪೌರ್ವಾತ್ಯ ಸಂಸ್ಕೃತಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಬ್ರಹ್ಮಸಾಕ್ಷಾತ್ಕಾರದ ಕಡೆಗೆ ಒಯ್ಯುವ ಸೋಪಾನ ಪಂಕ್ತಿಯನ್ನಾಗಿ ಮಾಡಿರುವರು.”

ಈ ಪುಸ್ತಿಕೆಯಲ್ಲಿ ಉದ್ದಕ್ಕೂ ಅಲ್ಲಲ್ಲಿ ತಿಳಿಯಾದ ಹಾಸ್ಯದ ಮುಗುಳುನಗೆ ಮಲರುತ್ತಿರುವುದನ್ನು ನಾವು ನೋಡುತ್ತೇವೆ. ಆ ಹೂಹಾಸ್ಯದ ವಿನೋದಶೀಲದ ಕಟುವಲ್ಲದ ವಿಡಂಬನೆಯ ಲೇಖಕರ ಮನೋಧರ್ಮ ಓದುಗರನ್ನು ಯಾವಾಗಲೂ ಒಂದು ಪ್ರಸನ್ನತೆಯ ಸಾನ್ನಿಧ್ಯದಲ್ಲಿರಿಸಿರುವುದರಿಂದ ಎಲ್ಲಿಯೂ ಉದ್ರೇಕಾನುಭವಕ್ಕೆ ಎಡೆಗೊಡುವುದಿಲ್ಲ.

ಅವರಿಗೆ ದೊರೆತ ಅಡುಗೆಯವನನ್ನು ಕುರಿತು ವರ್ಣನೆ ಎಷ್ಟು ಮೃದುಹಾಸ್ಯ ರಂಜಿತವಾಗಿದೆ: “ಆತ ಜಾತಿಯಲ್ಲಿ ಬ್ರಾಹ್ಮಣ ಎಂದ. ಆತನ ವೇಷ ಭೂಷಣಗಳನ್ನು ನೋಡಿದರೆ ಬ್ರಾಹ್ಮಣ್ಯದ ಯಾವ ಚಿಹ್ನೆಯೂ ಕಾಣುತ್ತಿರಲಿಲ್ಲ. ಬಹುಶಃ ಅವನ ಕೋಟಿನ ಒಳಗಡೆ ದೊಡ್ಡದೊಂದು ಜನಿವಾರ ಇದ್ದಿರಬಹುದು! ಅದೂ ಕೂಡ ಗಾಯಿತ್ರಿ ಮಂತ್ರ ಕೇಳಿ, ನೀರಿನ ಸಂಗ ಮಾಡಿ, ಹಲವು ತಿಂಗಳಾಗಿರಬೇಕು. ಆತ ತೊಟ್ಟ ಅಂಗಿಯಲ್ಲಿ ಎಂಟು ಹತ್ತು ತೇಪೆಗಳಿದ್ದುವು. ಆ ಕೋಟನ್ನು ಮೊದಲು ಯಾವ ಬಟ್ಟೆಯಿಂದ ಮಾಡಿರಬಹುದು ಎಂದು ಹೇಳುವುದೇ ಜಟಿಲ ಪ್ರಶ್ನೆಯಾಗಿತ್ತು. ಆತ ಉಟ್ಟ ಪಂಚೆಯೋ ಫ್ಯಾಕ್ಟರಿಯಲ್ಲಿ ಕೆಲಸಮಾಡುವ ಜನರು ಹಾಕಿಕೊಳ್ಳುವ ಸ್ಪೆಷಲ್ ಉಡುಪನ್ನು ನೆನಪಿಗೆ ತರುತ್ತಿತ್ತು. ಈತ ಹತ್ತಿರ ಬಂದರೆ ಮೂಗನ್ನು ಮುಚ್ಚಿಕೊಳ್ಳಬೇಕಾಗಿತ್ತು. ಈತನೆ ನಮ್ಮ ಒಂದು ತಿಂಗಳ Friend, Philosopher, Guide: ಜೊತೆಗೆ Lord Kitchener ಬೇರೆ. ಅವನಿಗೆ ಪ್ರತಿದಿನ ಸ್ನಾನಮಾಡಿ ಮಡಿಬಟ್ಟೆಯುಟ್ಟು ಅಡಿಗೆ ಮಾಡು ಎಂದು ಹೇಳಿದೆವು. ಅದಕ್ಕೆ ಆತ ಒಪ್ಪಿಕೊಂಡ. ಸ್ನಾನವನ್ನೇನೋ ದಾರಿಯಲ್ಲಿ ಸಿಕ್ಕುವ ನೀರಿನಲ್ಲಿ ಆತ ಮಾಡಬಹುದು. ಆದರೆ ಮಡಿಬಟ್ಟೆ ಉಡಬೇಕಾದರೆ ಅವನ ಹತ್ತಿರ ಬೇರೆ ಬಟ್ಟೆಯೇ ಇರಲಿಲ್ಲ. ನಾವೇ ಆತನಿಗೆ ಎರಡು ಪಂಚೆ ತೆಗೆದುಕೊಟ್ಟು ಇದನ್ನು ಅಡಿಗೆ ಮಾಡುವಾಗ ಮಾತ್ರ ಉಡಬೇಕು ಎಂದೆವು.”

ಆಯಾ ಸನ್ನಿವೇಶಗಳಲ್ಲಿ ಅವುಗಳ ಸಂದರ್ಭವನ್ನು ಗ್ರಹಿಸಿ ಓದಿದಾಗ ಈ ವಾಕ್ಯಗಳು ಎಷ್ಟು ಮಂದಸ್ಮಿತಸುಂದರವಾಗುತ್ತವೆ:

“ನಾನಂತೂ ಪ್ರಾರ್ಥಿಸುವಾಗ, ಮಧ್ಯೆ ಮಧ್ಯೆ ಭಿನ್ನಾಭಿಪ್ರಾಯ ಬರದಂತೆ ಅನುಗ್ರಹಿಸು ಎಂದು ಬೇಡಿಕೊಂಡೆ.”

“ಈ ರಗಳೆಯೆಲ್ಲ ಏತಕ್ಕೆ ಎಂದು, ಇನ್ನೊಂದು ಸಲ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ನಿಂತೆ.”

“ಇಷ್ಟರಲ್ಲೆ ಪರ್ಯವಸಾನವಾಯಿತಲ್ಲ. ಇನ್ನೇನಾದರೂ ಆಗಿದ್ದರೆ ಆಕ್ಷೇಪಣೆ ಮಾಡುವುದಕ್ಕೇ ಯಾರೂ ಇರುತ್ತಿರಲಿಲ್ಲ.”

“ಇಲ್ಲಿ ಬಸ್ಸಿಗೆ ಕಾಯುವುದೇ ಒಂದು ತಪಸ್ಸು ಮಾಡಿದಂತೆ.”

“ಆ ಹೋಟೆಲಿನ ಗೋಡೆಯ ಮೇಲೆ ಕನ್ನಡ ಅಕ್ಷರಗಳಲ್ಲಿ ದೋಸೆ ಇಡ್ಡಲಿ ಮೊದಲಾದುವೆಲ್ಲ ದೊರಕುತ್ತವೆ ಎಂದು ಬರೆದಿತ್ತು. ಅದನ್ನು ನೋಡಿ ಯಾರೊ ಉಡುಪಿ ಬ್ರಾಹ್ಮಣರು ಇರಬಹುದೆಂದು, ಅವರ ಹತ್ತಿರ ಕನ್ನಡ ಮಾತನಾಡಿ, ಸಿಕ್ಕಿದರೆ ದೋಸೆ ಉಪ್ಪಿಟ್ಟು ತಿನ್ನೋಣ ಎಂದು ಹೋದೆವು. ವಿಚಾರಿಸಿದಾಗ ಹೋಟೆಲು ಮಾಲೀಕನಿಗೆ ಕನ್ನಡವೂ ಬಾರದು, ದೋಸೆ ಉಪ್ಪಿಟ್ಟು ಮಾಡುವುದೂ ಬಾರದು. ಹೇಗೆ ಕನ್ನಡದಲ್ಲಿ ಬೋರ್ಡ್ ಬರೆಸಿದೆ ಎಂದಾಗ ಯಾರೊ ಕನ್ನಡ ಮಾತನಾಡುವವರು ಬಂದಿದ್ದಾಗ ಅವರ ಕೈಯಿಂದ ಬರೆಸಿದೆ ಎಂದ. ಅದೆಲ್ಲ ವ್ಯಾಪಾರ ರಹಸ್ಯ!”

“ನೊಣಕ್ಕೆ ತೂಕವಿದೆ ಎಂದು ನನಗೆ ಅರಿವಾದದ್ದು ಕೂಡ ಇದೇ ಪ್ರಥಮ!”

“ಗೋಧಿಹೊಲದಲ್ಲಿ ನಾವು ಫೋಟೋ ತೆಗೆದ ಆ ಹುಡುಗಿಯಂತೆ ಇದ್ದಳು ತಾಯಿ ಗೌರಮ್ಮ.”

“ಆ ಎತ್ತರದಲ್ಲಿ ಬೇಳೆ ಬೇಯುವುದಿಲ್ಲವಂತೆ.”

“ಅವರ ಸತ್ಯಸಂಕಲ್ಪಕ್ಕೆ ಕೂಲಿಗಳು ಭಂಗ ತಂದರೋ ಅಥವಾ ಅವರ ಸಹಾಯಕ್ಕೇ ಬಂದರೋ ತಿಳಿಯದು.”

“ಅದಾದಮೇಲೆ ಉದಕಕುಂಡ ಎಂಬ ಚಿಲುಮೆ ಇದೆ. ಅದರಿಂದ ಜಲಪಾನ ಮಾಡಿದವರಿಗೆ ಪುನರ್ಜನ್ಮವಿಲ್ಲವೆಂದು ದೊಡ್ಡ ಅಕ್ಷರಗಳಲ್ಲಿ ಬರೆದಿರುವವರು. ಜಲಪಾನಕ್ಕೆ ಅರ್ಧಾಣಿ ಮಾತ್ರ ಖರ್ಚು. ಜನನಮರಣಗಳ ಕೋಟಲೆಗಳಿಂದ ಪಾರಾಗುವುದು ಬಹಳ ಸುಲಭ ಇಲ್ಲಿ!”

“ಶಿವನಿಗೇನು ಅನಂತಕಾಲಿವಿದೆ ಮುಂದೆ. ಕಾಲಹರಣಕ್ಕೆ ಪಾರ್ವತಿಯ ಮನರಂಜನೆಗೆ ಬೇಕಲ್ಲ ಕಥೆಗಳು?”

“ಪಾಪ, ಹಿಮಾಲಯದ ಕಲ್ಲು ಗಿಡ ಮರಗಳೆಲ್ಲ, ಭಗವಂತನ ಹೆಸರನ್ನಲ್ಲ, ಔಷಧಿ, ಪಂಚಾಯತ ರಾಜ್ಯ, ಪುಸ್ತಕಭಂಡಾರದ ಹೆಸರನ್ನುಹೊತ್ತು ತಪಸ್ಸು ಮಾಡುತ್ತಿವೆ.”

“ಸ್ವಲ್ಪ ನಿದ್ದೆ ಬಂತೋ ಇಲ್ಲವೋ ಕನಸಿನಲ್ಲಿಯೂ ಗಂಟು ಮೂಟೆ ಕಟ್ಟುತ್ತಿರುವುದು, ನಡೆಯುತ್ತಿರುವುದೇ ಚಿತ್ರ. ನಮ್ಮ ಜೀವನದ ಪೂರ್ವಸೃತಿಯೆಲ್ಲ ಅಳಿಸಿಹೋಗಿತ್ತು. ಮೂಟೆ ಕಟ್ಟುವುದು ನಡೆಯುವುದೆ ನಮ್ಮ ಜಾಗ್ರದವಸ್ಥೆಯ ಮತ್ತು ಕನಸಿನ ಪ್ರಪಂಚ ಕೂಡಾ ಆಗಿ ಹೋಗಿತ್ತು.”

“ಅವರಿಗೆ ಹಸಿ ಸಾಸುವೆ ಜನ ತಿನ್ನುತ್ತಾರೆಯೆ ಎಂದು ಆಶ್ಚರ್ಯ. ನಮಗೆ ಜನ ಸಾಸುವೆ ಎಣ್ಣೆ ಊಟಕ್ಕೆ ಉಪಯೋಗಿಸುತ್ತಾರೆಯೆ ಎಂದು ಆಶ್ಚರ್ಯ.”

“ನೀರು ಅಷ್ಟು ಚಳಿ. ಈ ಪ್ರಾಯಶ್ಚಿತ್ತ ನಾವು ಮಾಡಿರುವ ಪಾಪದ ಸಾಲದಲ್ಲಿ ಯಾವುದಾದರೂ ಒಂದಂಶವನ್ನಾದರೂ ಕಳೆದೇ ಕಳೆಯುವುದು. ನಾನಂತೂ ಸ್ನಾನ ಮಾಡಲಿಲ್ಲ. ಅದರ ನೀರನ್ನು ಕೊಂಚ ತೆಗೆದುಕೊಂಡು ತಲೆಗೆ ಪ್ರೋಕ್ಷಣೆ ಮಾಡಿಕೊಂಡೆ.”

“ಇದುವರೆಗೆ ನಮಗೆ ಕಾಣದ ಜನಿವಾರ ಹೊರಗೆ ಕಂಡಿತು!”

“ಈ ಮಂತ್ರ ಒಂದು ಗೊತ್ತಿದ್ದರೆ ವರ್ಷದಲ್ಲಿ ಆರು ತಿಂಗಳು ಜೀವನಕ್ಕೆ ಯಾವ ಆತಂಕವೂ ಇಲ್ಲ. ನಮ್ಮ ಜನ ದೇವರು ಧರ್ಮದ ಹೆಸರಿನಲ್ಲಿ ಕಾಸು ಬಿಚ್ಚುತ್ತಾರೆ. ಸ್ವಲ್ಪ ಆಲೋಚನೆ ಮಾಡಿದರೆ ಪುನರ್ಜನ್ಮವಿಲ್ಲವೆಂದು ಕೊನೆಗೆ ಸಾರುವುದರಿಂದ ಒಂದೇ ಸಲ ಮುಕ್ತಿ ಪ್ರಾಪ್ತಿಯಾಗಿ ನಮ್ಮ ಸ್ವರ್ಗಸುಖಕ್ಕೆಲ್ಲ ತಿಲತರ್ಪಣ ಕೊಟ್ಟಂತೆಯೆ!”

“ನಮ್ಮಲ್ಲಿ ಕೆಲವರು ಮಾಡುವ ತೀರ್ಥಯಾತ್ರೆಯೂ ಹೀಗೆಯೆ. ಮೇಲೆ ಮಾತ್ರ ಮುದ್ರೆ, ಒಳಗೆ ಯಾವ ಪರಿಣಾಮವೂ ಆಗುವುದಿಲ್ಲ.”

ಇಲ್ಲಿ ಬರುವ ಸ್ಥಳಗಳೆಲ್ಲ ಪವಿತ್ರ ಕ್ಷೇತ್ರಗಳೆ. ಎಲ್ಲದಕ್ಕೂ ಒಂದೊಂದು ಕಥೆಯೊ ಚರಿತ್ರೆಯೊ ಅಂಟಿರುತ್ತದೆ. ಒಂದೊಂದರ ಮಾಹಾತ್ಮ್ಯೆಯನ್ನು ಸಾರುವುದಕ್ಕೂ ಒಂದೊಂದು ಸ್ಥಳ ಪುರಾಣವಿರುತ್ತದೆ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದರು. ಇಲ್ಲಿ ರಾವಣ ತಪಸ್ಸು ಮಾಡಿದ್ದು. ಇಲ್ಲಿ ರಾಮ ತಪಸ್ಸು ಮಾಡಿ ಶಿವನಿಗೆ ತನ್ನ ಕಣ್ಣನ್ನೆ ಅರ್ಪಿಸಿದ್ದು. ಹೀಗೆಲ್ಲ ಎಲ್ಲಿ ನೋಡಿದರೂ ಪುರಾಣಗಳಿಗೂ ಭಾರತಕ್ಕೂ ರಾಮಾಯಣಕ್ಕೂ ಸಂಬಂಧಪಟ್ಟಂತೆ ಕ್ಷೇತ್ರ ಮಾಹಾತ್ಮ್ಯೆ ವರ್ಣಿತವಾಗುತ್ತದೆ. ಆದರೆ ಇದನ್ನೆಲ್ಲ ನಾವು ನಡೆದ ಚರಿತ್ರೆ ಎಂದು ನಂಬುವುದು ಅನಾವರ್ಶಯಕ. ಅವುಗಳ ಉದ್ದೇಶ ಸಂಪೂರ್ಣವಾಗಿ ಭಾವೋಪಯೋಗಿಯೆ ಹೊರತು ಲೋಕೋಪಯೋಗಿಯಲ್ಲ. ಸಾಹಿತ್ಯದಲ್ಲಿ ನಾವು ನಾಮಪದಕ್ಕೆ ವಿಶೇಷಣವನ್ನು ಹಚ್ಚಿ ವಸ್ತುವಿನ ಗುಣೋತ್ಕರ್ಷವನ್ನು ಅನುಭವಕ್ಕೆ ತಂದುಕೊಡಲು ಪ್ರಯತ್ನಿಸುವಂತೆ ಸ್ಥಳಗಳಿಗೂ ಒಂದು ಪವಿತ್ರವೂ ಪ್ರಸಿದ್ಧವೂ ಆದ ವ್ಯಕ್ತಿಯ ಅಥವಾ ಕಥಾ ಪ್ರತಿಮೆಯ ವಿಶೇಷಣವನ್ನು ಹಚ್ಚಿ ಯಾತ್ರಿಕರಲ್ಲಿ ಭಾವೋತ್ಕರ್ಷವನ್ನುಂಟು ಮಾಡುವುದಕ್ಕಾಗಿಯೆ ಸ್ಥಳಪುರಾಣಗಳು ಹುಟ್ಟಿಕೊಂಡಿವೆ. ಆದ್ದರಿಂದಲೆ ಭರತಖಂಡದ ಯಾವ ಪುಣ್ಯ ಸ್ಥಳಕ್ಕೆ ಹೋದರೂ ರಾಮಾಯಣ ಮಹಾಭಾರತ ಪುರಾಣಾದಿಗಳ ಕಥೆ ಅಲ್ಲಿ ಒಂದಲ್ಲ ಒಂದು ನಡೆದೆ ಇರುತ್ತದೆ. ಯಾರೊ ತಪಸ್ಸು ಮಾಡಿಯೆ ಇರುತ್ತಾರೆ. ಯಾವ ತೀರ್ಥವಾದರೂ ಆಗಲಿ ಪರಶುರಾಮ ತಾಯಿಯನ್ನು ಕಡಿದ ಕೊಡಲಿಯನ್ನು ಅಲ್ಲಿ ತೊಳೆದೆ ತೀರಬೇಕು!

ಲೇಖಕರು ಅಲ್ಲಲ್ಲಿ ಅತ್ಯಂತ ಉಚಿತವಾದ ಉನ್ನತವಾದ ಸಂದರ್ಭಗಳಲ್ಲಿ ಸ್ತುತಿ ಸ್ತೋತ್ರ ದಶಕಾದಿಗಳನ್ನೂ ಅವುಗಳ ಕನ್ನಡ ಅನುವಾದಗಳನ್ನೂ ಕೊಟ್ಟಿರುವುದು ಯಾತ್ರೆಯ ಪವಿತ್ರಾನುಭವಕ್ಕೆ ಕಲಶವಿಟ್ಟಂತಾಗುತ್ತದೆ. ಓದುಗರು ತಮ್ಮ ಕಲ್ಪನೆಯಲ್ಲಿ ಆಯಾ ಉತ್ತುಂಗ ಹೈಮಾಚಲ ಶಿಖರಗಳನ್ನೇರಿ ಕುಳಿತು ಹಾಡಿಕೊಂಡರೆ ಅವುಗಳ ದಿವ್ಯಪ್ರಭಾವದಿಂದ ದರ್ಶನಾನ್ವಿತರಾಗಿ ಶಾಂತರಸಾನುಭವವನ್ನು ಆಸ್ವಾದಿಸುವುದರಲ್ಲಿ ಸಂದೇಹವಿಲ್ಲ.

ಬದುಕಿನ ಗುರಿ ಶಾಂತಿ. ಬದುಕನ್ನು ವಿಷಯವಾಗುಳ್ಳ ಸಾಹಿತ್ಯದ ಕೊನೆಯ ಗುರಿಯೂ ಶಾಂತರಸಾಸ್ವಾದನೆಯೆ. ಅವರೆಡೂ ಆಗಿರುವ ಈ ಹೈಮಾಚಲ ಸಾನ್ನಿಧ್ಯ ಯಾತ್ರೆಯ ಪರಿಣಾಮ ತಾನೆ ಹೇಗೆ ಬೇರೆಯಾದೀತು? ಬರೆದವರೂ ಕಾಷಾಯಧಾರಿ!

* * *


[1] ಸ್ವಾಮಿ ಸೋಮನಾಥಾನಂದರ ‘ಹೈಮಾಚಲ ಸಾನ್ನಿಧ್ಯದಲ್ಲಿ’ ಎಂಬ ಹಿಮಾಚಲ ಪ್ರವಾಸ ಕಥನದ ಗ್ರಂಥಕ್ಕೆ ಬರದ ಮುನ್ನುಡಿ