ಇಂದು ನಮ್ಮ ದೇಶದ ಮನಸ್ಸನ್ನು ಕುದಿಸುತ್ತಿರುವ ಸಮಸ್ಯೆಗಳಲ್ಲಿ ಭಾಷಾ ಸಮಸ್ಯೆಯೂ ಒಂದು ಪ್ರಮುಖಸ್ಥಾನ ಪಡೆದಿದೆ. ಪ್ರಾದೇಶಿಕ ದೃಷ್ಟಿಯಿಂದ, ಅಖಿಲ ಭಾರತೀಯ ದೃಷ್ಟಿಯಿಂದ, ಅಂತರರಾಷ್ಟ್ರೀಯ ದೃಷ್ಟಿಯಿಂದ, ಜ್ಞಾನಾರ್ಜನೆಯ ದೃಷ್ಟಿಯಿಂದ ವಿದ್ಯಾಪ್ರಸಾರದ ದೃಷ್ಟಿಯಿಂದ, ಸಂಸ್ಕೃತಿಯ ದೃಷ್ಟಿಯಿಂದ, ನಾನಾ ದೃಷ್ಟಿಗಳಿಂದ ವಿವಿಧಾಭಿಪ್ರಾಯಗಳು ರಣರಂಗದಲ್ಲಿ ತುಮಲಯುದ್ಧ ಹೂಡಿದಂತಿದೆ. ಆಯಾ ಪ್ರದೇಶದ ದೇಶಭಾಷೆಗೆ ಅಲ್ಲಲ್ಲಿ ಪ್ರಾಧಾನ್ಯವಿರಬೇಕೆನ್ನುವವರು ಕೆಲವರು; ಅಖಿಲ ಭಾರತೀಯವೆಂದು ಒಪ್ಪಿಕೊಂಡಿರುವ ಸಂಯುಕ್ತಭಾಷೆಗೆ ಪ್ರಥಮ ಸ್ಥಾನವಿರಬೇಕು ಎನ್ನುವವರು ಕೆಲವರು. ಸರ್ವ ವಿದ್ಯಾಶಾಸ್ತ್ರಗಳಿಗೂ ಆಗರವಾಗಿ, ವ್ಯಾವಹಾರಿಕ ದೃಷ್ಟಿಯಿಂದಲೂ ಅಂತರ ರಾಷ್ಟ್ರೀಯವಾಗಿರುವ ಇಂಗ್ಲಿಷ್ ಭಾಷೆಗೆ ಪ್ರಥಮ ಸ್ಥಾನವಿರಬೇಕೆಂದು ಕೆಲವರು.

ಈ ವಿಚಾರಮಂಥನ ನಿನ್ನೆಮೊನ್ನೆಯದಲ್ಲ. ಸ್ವಯಂ ಗಾಂಧಿಜಿಯೆ ಇವುಗಳನ್ನು ಕೂಲಂಕುಷವಾಗಿ ಚರ್ಚಿಸಿ, ತಮ್ಮ ನಿರ್ಧಾರಗಳನ್ನು ಸಕಾರಣವಾಗಿ ವಾದಿಸಿ, ನಾಡಿನ ಮುಂದೆ ಇಟ್ಟು ಹೋಗಿದ್ದಾರೆ. ಅಲ್ಲದೆ ದೇಶ ವಿದೇಶಗಳ ತಜ್ಞರೂ ಮನಃಶಾಸ್ತ್ರೀಯವಾಗಿ ಪರಿಶೀಲಿಸಿ ತಮ್ಮ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ. ನಾಡಿನ ಅಗ್ರಗಣ್ಯ ದೇಶಭಕ್ತರೂ ತಮ್ಮ ನಿಷ್ಪಕ್ಷಪಾತ ವಾದ ನಿರ್ಣಯಗಳನ್ನು ಆಗಿಂದಾಗ್ಗೆ ಘೋಷಿಸುತ್ತಾ ಬಂದಿದ್ದಾರೆ. ಈ ವಿಚಾರವಾಗಿ ಇನ್ನು ಸಾಕು ಎಂಬಷ್ಟು ಚರ್ಚೆ ನಡೆದಿದೆ. ಈ ಸಮಸ್ಯೆ ವಾದ ಪ್ರತಿವಾದದ ಎಲ್ಲೆಯನ್ನು ದಾಟಿ ಇತ್ಯರ್ಥದ ಸೀಮೆಯನ್ನು ಮುಟ್ಟಿದೆ ಎಂದು ಹೇಳಬಹುದು.

ಒಟ್ಟಿನಲ್ಲಿ ಆ ಇತ್ಯರ್ಥವನ್ನು ಹೀಗೆ ವಿವರಿಸಬಹುದು. ಆಯಾ ಪ್ರಾಂತಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಪ್ರಥಮಸ್ಥಾನ ಸಲ್ಲಬೇಕು. ಅಂತರ ಪ್ರಾಂತೀಯ ವ್ಯವಹಾರ ದೃಷ್ಟಿಯಿಂದ ಮತ್ತು ಕೇಂದ್ರದ ಆಡಳಿತ ದೃಷ್ಟಿಯಿಂದ ಅಖಿಲ ಭಾರತೀಯವಾದ ಸಂಯುಕ್ತ ಭಾಷೆಗೆ ಎರಡನೆ ಸ್ಥಾನ ಕೊಡಬೇಕು. ಅಂತರರಾಷ್ಟ್ರೀಯವಾದ ಭಾಷೆಗೆ ಅಥವಾ ಭಾಷೆಗಳಿಗೆ ಐಚ್ಛಿಕ ಸ್ಥಾನ ಕೊಡಬೇಕು. ಆಯಾ ಪ್ರಾಂತಗಳಲ್ಲಿ ಆಯಾ ದೇಶಭಾಷೆಗಳೆ ಆಡಳಿತ ಭಾಷೆಗಳಾಗಿರಬೇಕು. ಅಲ್ಲಿಯ ಶಿಕ್ಷಣವೆಲ್ಲ ಎಲ್ಲ ಮಟ್ಟಗಳಲ್ಲಿಯೂ ದೇಶ ಭಾಷಾ ಮಾಧ್ಯಮದಲ್ಲಿಯೆ ಸಾಗಬೇಕು.

ಈ ಸ್ಥೂಲವಿವರಣೆ ಬಹುಜನ ಸಮ್ಮತವಾಗಿರುವುದರಲ್ಲಿ ಸಂದೇಹವಿಲ್ಲ.

ಆದರೆ ಭಾಷೆಗಳ ಸ್ಥಾನವನ್ನು ಹೀಗೆ ನಿರ್ಣಯಿಸುವಾಗ ಅನೇಕರು ತಪ್ಪು ಅಭಿಪ್ರಾಯಗಳ ದೆಸೆಯಿಂದ ಆತಂಕಗೊಳ್ಳುತ್ತಾರೆ. ಅದರಲ್ಲಿಯೂ ಇಂಗ್ಲಿಷನ್ನು ಚೆನ್ನಾಗಿ ಅಭ್ಯಾಸಮಾಡಿ ಅದರ ಸಾಹಿತ್ಯವನ್ನು ತಣಿಯುಂಡು ಸವಿದು, ಅದರ ವೈಭವಕ್ಕೂ ವೈಶಾಲ್ಯಕ್ಕೂ ಮಾರುಹೋದವರಿಗೆ ಸಹಿಸಲಸಾಧ್ಯವಾದ ಸಂಕಟವಾಗುತ್ತದೆ. ಇಂಗ್ಲಿಷ್ ಭಾಷೆಯ ಮೂಲಕವೇ ತಮ್ಮ ಲೌಕಿಕ ಅಭ್ಯುದಯವನ್ನು ಸಾಧಿಸಿಕೊಂಡವರಿಗಂತೂ ಆ ಭಾಷೆಯಿಂದಲ್ಲದೆ ಬೇರೆ ಯಾವ ಭಾಷೆಯಿಂದಲೂ ಅಭ್ಯುದಯ ಸಾಧ್ಯವೇ ಇಲ್ಲ ಎಂಬಂತೆ ಭಾಸವಾಗುತ್ತದೆ. ನಮ್ಮ ಪ್ರಾಚೀನವಾದ ದೇಶಭಾಷೆಗಳ ಸಾಹಿತ್ಯದ ಅಥವಾ ಪ್ರಪ್ರಾಚೀನವಾದ ಸಂಸ್ಕೃತ ಸಾಹಿತ್ಯದ ವೈಭವ ವೈಶಾಲ್ಯಗಳ ಪರಿಚಯವಿಲ್ಲದೆ ಇರುವ ಇಂಗ್ಲಿಷ್ ವಿದ್ವಾಂಸರಿಗಂತೂ ಇಂಗ್ಲಿಷ್ ಭಾಷೆಯನ್ನು ಈ ಗಣ್ಯ ಸ್ಥಾನದಿಂದ ಅಲುಗಿಸಿದರೆ ಭರತಖಂಡವೆಲ್ಲ ಕಗ್ಗತ್ತಲೆಯಲ್ಲಿ ಅದ್ದಿ ಹೋಗುತ್ತದೆ ಎಂದೇ ನಂಬಿಕೆ. ಅಂಥವರ ಭಯಾಶಂಕೆಗಳ ಸಾಧಾರ ನಿರಾಧಾರ ಸತ್ಯಾಸತ್ಯತೆಗಳೇನೇ ಇರಲಿ ಅದರ ವಿಶ್ಲೇಷಣಕ್ಕೆ ಹೋಗದೆ, ಇನ್ನು ಮುಂದೆ ಇಂಗ್ಲಿಷಿಗೆ ಭಾಷಾದೃಷ್ಟಿಯಿಂದ, ಸಾಹಿತ್ಯದೃಷ್ಟಿಯಿಂದ ನಮ್ಮ ದೇಶದಲ್ಲಿ ಇರಬೇಕಾದ ಸ್ಥಾನವೇನು? ಅದು ಯಾವ ರೂಪದಲ್ಲಿ, ಯಾವ ಪ್ರಮಾಣದಲ್ಲಿ, ಎಷ್ಟರಮಟ್ಟಿಗೆ, ಎಷ್ಟು ಜನಕ್ಕೆ ಬೇಕಾಗುತ್ತದೆ, ಎಂಬೆಲ್ಲ ವಿಷಯಗಳನ್ನು ಕುರಿತು ಆಲೋಚಿಸುತ್ತೇವೆ.

ದೇಶಭಾಷೆಗೆ ಪ್ರಥಮಸ್ಥಾನ ಸಲ್ಲಬೇಕು. ದೇಶಭಾಷೆ ಶಿಕ್ಷಣ ಮಾಧ್ಯಮವಾಗಬೇಕು. ಎಂದೊಡನೆ ಕೆಲವರು ಇಂಗ್ಲಿಷ್ ಭಾಷಾಸಾಹಿತ್ಯಗಳಿಗೆ ಸಂಪೂರ್ಣ ಅರ್ಧಚಂದ್ರ ಪ್ರಯೋಗವಾಗಿಬಿಡುತ್ತದೆ ಎಂದು ವ್ಯಾಖ್ಯಾನಮಾಡಿ ದೇಶಭಾಷಾವಾದಿಗಳನ್ನು ಸ್ವಭಾಷಾಭ್ರಾಂತರೆಂದೂ ವಿದ್ವಾಸಂಸ್ಕೃತಿ ವಿದ್ವೇಷಿಗಳೆಂದೂ ಸಂಕುಚಿತ ಮನೋಭಾವದವರೆಂದೂ ಟೀಕಿಸಿ ಖಂಡಿಸುತ್ತಾರೆ. ಇಂಗ್ಲಿಷ್ ಮೋಹಿಗಳ ಈ ಪ್ರಥಮಭ್ರಾಂತಿ ಮೊದಲು ನಿರಸನಗೊಳ್ಳಬೇಕು. ಇಂಗ್ಲಿಷ್ ಭಾಷೆಯ ಯೋಗ್ಯತೆ, ಅದರ ವ್ಯಾಪ್ತಿ, ಅದರಿಂದೊದಗುವ ಪ್ರಜ್ಞಾ ವೈಶಾಲ್ಯ, ಅದು ನಮ್ಮಲ್ಲಿ ಪ್ರಚೋದಿಸಿರುವ ವಿಚಾರಬುದ್ಧಿ, ಅದರಿಂದ ಮುಂದೆ ಎಂದೆಂದಿಗೂ ನಮಗೆ ಲಭಿಸಲಿರುವ ಸಂಪರ್ಕಸಹಾಯ ಮೊದಲಾದವುಗಳನ್ನೆಲ್ಲ ಅರಿತವರಾರೂ ಬ್ರಿಟಿಷ್‌ರನ್ನು ಓಡಿಸಿದಂತೆ ಇಂಗ್ಲಿಷ್ ಭಾಷೆಯನ್ನೂ ಓಡಿಸಬೇಕೆಂದು ಹೇಳುವ ಅವಿವೇಕಕ್ಕೆ ಹೋಗಲಾರರು. ಹಾಗೆ ಹೇಳುವವರನ್ನು ಪ್ರಚ್ಛನ್ನ ದೇಶದ್ರೋಹಿಗಳೆಂದು ಕರೆಯಬೇಕಾಗುತ್ತದೆ. ಅದ್ದರಿಂದ ಇಂಗ್ಲಿಷ್ ನಮ್ಮೊಡನೆ ಉಳಿಯಬೇಕೆಂಬುದರಲ್ಲಿ ಭಿನ್ನಾಭಿಪ್ರಾಯವಿರುವುದಕ್ಕೆ ಅವಕಾಶವೆ ಇಲ್ಲ.

ಇಂಗ್ಲಿಷ್ ಉಳಿಯಬೇಕೆಂದು ನಿಶ್ಚಿಯಿಸಿದಮೇಲೆ ನಮ್ಮ ಮುಂದೆ ಏಳುವ ಪ್ರಶ್ನೆ: ಅದು ಯಾವ ರೂಪದಲ್ಲುಳಿಯಬೇಕು? ಯಾವ ಪ್ರಮಾಣದಲ್ಲಿ? ಯಾರಿಗೆ? ಏತಕ್ಕೆ? ಯಾವ ಯಾವ ಉದ್ದೇಶಗಳಿಗಾಗಿ?

ಇಂಡಿಯಾಕ್ಕೆ ಇಂಗ್ಲಿಷ್ ಬಂದದ್ದು ಮುಖ್ಯವಾಗಿ ರಾಜಕೀಯ ಕಾರಣಗಳಿಂದಾಗಿ. ಅದನ್ನು ಅಧಿಕಾರಿಭಾಷೆಯೆಂದು ಘೋಷಿಸಿ ಕಡ್ಡಾಯವಾಗಿ ಅದನ್ನೆಲ್ಲರೂ ಕಲಿಯಬೇಕೆಂದು ವಿಧಿಸಿದುದೂ ಅದೇ ಕಾರಣಕ್ಕಾಗಿ. ಬಹು ಜನರು ನಮ್ಮ ದೇಶದಲ್ಲಿ ಇಂಗ್ಲಿಷನ್ನು ಕಲಿತುದಕ್ಕೆ ಕಾರಣವೂ ರಾಜಕೀಯವೆ. ಅಥವಾ ಅದರಿಂದ ಉದ್ಭವಿಸುವ ಆರ್ಥಿಕಾದಿ ಪ್ರಯೋಜನಕ್ಕಾಗಿ. ಅದನ್ನೀಗಲೂ ಬಯಸುವ ಬಳಸುವ ಜನರಲ್ಲಿ ಬಹುಪಾಲು ಲೋಕೋಪಯೋಗ ದೃಷ್ಟಿಯನ್ನೇ ಹೊಂದಿರುತ್ತಾರೆ. ಆದರೆ ಈಗ ನಮ್ಮ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಸ್ವತಂತ್ರ ಭಾರತ ಬೇರೊಂದು ಭಾಷೆಯನ್ನು ತನ್ನ ಅಧಿಕಾರಿ ಭಾಷೆಯನ್ನಾಗಿ ಆರಿಸಿದೆ. ಈ ಹೊಸ ಪರಿಸ್ಥಿತಿಯಲ್ಲಿ ಇಂಗ್ಲಿಷಿಗೆ ಸಲ್ಲಬೇಕಾದ ಸ್ಥಾನ ಯಾವುದು? ಇಂಗ್ಲಿಷನ್ನು ಬಿಡುವಂತಿಲ್ಲ; ಆದರೆ ಅದಕ್ಕೆ ಹಿಂದಿದ್ದ ಸ್ಥಾನವನ್ನು ಕೊಡುವಂತೆಯೂ ಇಲ್ಲ.

ಇನ್ನು ಮುಂದೆ ಇಂಗ್ಲಿಷ್ ಹಲವರು ಕಲಿಯುವ ಭಾಷೆಯಲ್ಲ; ಕೆಲವರು ಕಲಿಯಬೇಕಾದ ಭಾಷೆ.

ಇನ್ನು ಮುಂದೆ ಅನೇಕರಿಗೆ ಬೇಕಾದ ಇಂಗ್ಲಿಷಿನ ಮಟ್ಟವೆಂದರೆ ಅದನ್ನೋದಿ ಅರ್ಥಮಾಡಿಕೊಳ್ಳುವಷ್ಟೆ ಹೊರತು ಅದರಲ್ಲಿ ಸಂಭಾಷಿಸುವುದಾಗಲಿ, ಭಾಷಣ ಮಾಡುವುದಾಗಲಿ, ಬರೆಯುವುದಾಗಲಿ ಅಲ್ಲ.

ಈ ದೃಷ್ಟಿಯಿಂದ ನಮ್ಮ ಅಧ್ಯಯನ ಕ್ರಮದಲ್ಲಿ ಅದಕ್ಕೆ ಗಾಂಧೀಜಿ ಕೊಟ್ಟಿರುವ ಐಚ್ಛಿಕ ಭಾಷಾಸ್ಥಾನವೆ ಯೋಗ್ಯವಾದದ್ದು. ಅದಕ್ಕೆ ಈಗ ಕೊಟ್ಟಿರುವ ಪ್ರಥಮ ಭಾಷಾಸ್ಥಾನ ದೇಶಕ್ಕೆ ಹಾನಿಕರ. ನಮ್ಮ ಬಾಲಕರ ಹಾಗೂ ತರುಣರ ಮನಶ್ಯಕ್ತಿಯನ್ನೆಲ್ಲ ಅಪವ್ಯಯಗೊಳಿಸಿ, ಅವರನ್ನು ಪರೀಕ್ಷೆಗಳಲ್ಲಿ ಅನ್ಯಾಯವಾಗಿ ಅನುತೀರ್ಣರನ್ನಾಗಿ ಮಾಡುವುದರಿಂದ ಅವರ ಹೃದಯದ ಆಶಾಭಾವನೆಯನ್ನೆ ಮೊಳಕೆಯಲ್ಲಿಯೆ ಚಿವುಟಿಹಾಕಿ ನಿರಾಶೆಯನ್ನೂ ಅಧೈರ್ಯವನ್ನೂ ತಂದೊಡ್ಡಿ. ಅವರ ಬದುಕನ್ನೆ ಬಯಲುಗೊಳಿಸುವ ಸಾಧನೆಯಾಗಿದೆ ಈ ಪರಭಾಷೆ! ನಮ್ಮ ಮಕ್ಕಳು ತಮಗೆ ‘ಸಹಜ’ವಾದ ನೆಲದ ನುಡಿಯನ್ನು ಕಲಿತು ಇನ್ನೇನು ಭಾಷೆಯಿಂದ ಭಾವಕ್ಕೂ ಜ್ಞಾನಕ್ಕೂ ರೆಕ್ಕೆಗೆದರಿ ಹಾರಬೇಕು ಎನ್ನುವಷ್ಟರಲ್ಲಿ ಈ ಹೊರಭಾಷೆಯ ಕಲ್ಲುಚಪ್ಪಟಿಯನ್ನು ಅವರ ತಲೆಗಳ ಮೇಲೆ ಹೇರುತ್ತೇವೆ! ಸರಿ, ಕನ್ನಡದಲ್ಲಿ ಕಲಿತುಬಿಟ್ಟಿದ್ದ ಬೆಕ್ಕು ಇಲಿ ಚಾಪೆ ಟೋಪಿಗಳನ್ನೆ ಮತ್ತೆ ಕ್ಯಾಟ್ ರ‍್ಯಾಟ್ ಮ್ಯಾಟ್ ಹ್ಯಾಟ ಎಂದು ತಮಗೆ ಅರ್ಥವಾಗದ ಸ್ಪೆಲ್ಲಿಂಗ್ ಸಹಿತವಾಗಿ ಬಾಯಿಪಾಠ ಮಾಡಬೇಕು! ಕನ್ನಡದಲ್ಲಿ ದೊಡ್ಡ ದೊಡ್ಡ ಹೊತ್ತಗೆಗಳನ್ನು ಉಲ್ಲಾಸದಿಂದ ಓದಿ, ಭಾವಕ್ಕೂ ಚಿಂತನಕ್ಕೂ ಕಣ್ಣರಳಿ ಎದೆಯರಳಿ, ಸಾಹಸಿಯಾಗಿ ಮುನ್ನುಗ್ಗಲೆಳಸುವ ಮಾಧ್ಯಮಿಕ ಶಾಲೆಯ ಬಾಲಕನ ಹಸುರು ಚೇತನ ಇಂಗ್ಲಿಷ್ ಭಾಷಾಬಂಡೆಗೆ ಮುಗ್ಗುರಿಸಿ ಹಸುರುಗಟ್ಟಿ ಉಸಿರುಗಟ್ಟಿ ಸೋತು ನಿಲ್ಲುವುದನ್ನು ಮಕ್ಕಳಿದ್ದು ಅವರ ಓದಿನ ಕಡೆಗೆ ಒಂದಿನಿತಾದರೂ ಗಮನ ಕೊಟ್ಟವರೆಲ್ಲರೂ ನೋಡಿಯೆ ಇರುತ್ತಾರೆ. ಅಲ್ಲದೆ ಹಳ್ಳಿಹಳ್ಳೀಗೂ ಹೈಸ್ಕೂಲುಗಳೇಳುತ್ತಿರುವ ಈ ಸಮಯದಲ್ಲಿ, ಅಲ್ಲಿ ಇಂಗ್ಲಿಷ್ ಪಾಠ ಹೇಳುವ ಬೋಧಕರ ಮಟ್ಟವೂ ತುಂಬ ಇಳಿದು ಹೋಗಿರುವುದರಿಂದಲೂ, ಬಾಲಕರ ಸಂಖ್ಯೆ ಮತ್ತು ಸಂಸ್ಕಾರ ವೈವಿಧ್ಯಗಳಲ್ಲಿ ಹಿಂದಣಕ್ಕಿಂತ ವಿಪುಲ ವ್ಯತ್ಯಾಸಗಳಾಗಿರುವುದರಿಂದಲೂ, ಮೊದಲಿನಂತೆ ಬೆಂಚಿನ ಮೇಲೆ ನಿಲ್ಲಿಸಿ, ಕಿವಿ ಹಿಂಡಿ, ಚಡಿ ಏಟುಕೊಟ್ಟು, ಫರಂಗಿಮಣೆ ಕೂರಿಸಿ, ಕಪಾಳಕ್ಕೆ ಬಿಗಿದು, ಬಾಯಿಪಾಠ ಮಾಡಿಸಿ, ವ್ಯಕ್ತಿ ವ್ಯಕ್ತಿಗೆ ಗಮನಕೊಡುವ ಇಂಡಿವಿಜುಯಲ್ ಅಟೆನ್‌ಷನ್ನಿನ ಕಸರತ್ತಿಗಾಗಲಿ ಕವಾಯಿತಿಗಾಗಲಿ ಈಗ ಅವಕಾಶವೆ ಇಲ್ಲ! ಹೀಗೆ ಪರೀಕ್ಷೆ ಪರೀಕ್ಷೆಯಲ್ಲಿಯೂ ಒಂದೊಂದು ಮೆಟ್ಟಲಲ್ಲಿಯೂ ‘ಕೃಪೆ’ಯೆ ರಟ್ಟೆ ಹಿಡಿದು ಎತ್ತಿ ಮೇಲಿನ ಮೆಟ್ಟಲಿಗೆ ಹಾಕಿದ ಹುಡುಗನ ಇಂಗ್ಲಿಷ್ ಜ್ಞಾನದ ದೋಣಿ ಹೇಗೊ ಕಾಲೇಜಿನ ಜಲಪಾತ ಪ್ರಪಾತದ ವರೆಗೂ ಸಾಗುತ್ತದೆ. ಅದುವರೆಗೂ ಏನೋ ಎಂತೋ ಅಂಕು ಡೊಂಕು ಹರಿವ ಹೊಳೆ ಮಾತ್ರವಾಗಿದ್ದ ಇಂಗ್ಲಿಷು ಬಾಲಕನ ಕಣ್ಣಿಗೆ ಇದ್ದಕ್ಕಿದ್ದಂತೆ ಪ್ರಪಾತಕ್ಕೆ ಧುಮುಕುವ ಜಲಪಾತವಾಗಿ ಪರಿಣಮಿಸುತ್ತದೆ. ಇನ್ನೇನು ಮಾಡುತ್ತಾನೆ? ಪಾಪ, ಅದುವರೆಗೂ ತಾನು ಮಾಡುತ್ತಿದ್ದ ಅಲ್ಪ ಸ್ವಲ್ಪ ಪ್ರಯತ್ನದ ಹುಟ್ಟನ್ನೂ ಹೊಳಗೇ ಎಸೆದು, ಸುಮ್ಮನಾಗಿ, ದೋಣಿ ಮುಂಬರಿದು ತನಗೊದಗುವ ‘ಗತಿಯ’ ರುದ್ರರಮಣೀಯತೆಯ ರಸಾಸ್ವಾದನೆಯಲ್ಲಿ ತೊಡಗಬೇಕಾಗುತ್ತದೆ! ಅವನಿಗಿರುವ ಧೈರ್ಯ ಒಂದೇ ಒಂದು: ಈ ಅನಾಹುತದಲ್ಲಿ ತನ್ನೊಡನೆ ಸಮಪಾಲುಕೊಳ್ಳಲು ಒಡನಾಡಿಗಳು ಅಸಂಖ್ಯೇಯವಾಗಿದ್ದಾರೆ!

ದಡದಲ್ಲಿ ನಿಂತು ನೋಡುವ ಹಿರಿಯರ ಇತ್ಯರ್ಥವೇನು? ಹುಡುಗರೆಲ್ಲ ಈಚೀಚೆಗೆ ದಡ್ಡರಾಗುತ್ತಿದ್ದಾರೆ! ಸ್ಟಾಂಡರ್ಡ್ ತುಂಬ ಇಳಿದು ಹೋಗಿದೆ! ಹಾಗಾದರೆ ಏನು ಮಾಡಬೇಕು? ಇನ್ನಷ್ಟು ಇಂಗ್ಲಿಷ್ ಪಠ್ಯಪುಸ್ತಕ ಹೆಚ್ಚಿಸಿ! ಗ್ರಾಮರ್ ಲೇಹ್ಯ ಇನ್ನೂ ಸ್ವಲ್ಪ ಹೆಚ್ಚಾಗಿ ತಿನ್ನಿಸಿ! ಪರಿಣಾಮ: ಪರೀಕ್ಷೆಯ ಫಲಿತಾಂಶ ಪ್ರಕಟಣೆ ಸಮಯದಲ್ಲಿ ಮತ್ತೆ ‘ಕೃಪೆ’ಯೆ ಕೈ ಹಿಡಿದು ಎತ್ತಬೇಕು. ಮುಂದಿನ ಮೆಟ್ಟಲಿಗೆ.

ಈ ನಾಟಕ-ದುರಂತನಾಟಕ-ಇನ್ನು ಸಾಕು. ಇನ್ನು ಮುಂದೆ ಇಂಗ್ಲಿಷಿನ ಈ ನೀರು ನೀರು ಸಮಾರಾಧನೆ ನಿಲ್ಲಬೇಕು. ಅದಕ್ಕೆ ಬದಲಾಗಿ ಆಯ್ದ ಕೆಲವರಿಗೆ ಮಾತ್ರ ಗಟ್ಟಿ ಇಂಗ್ಲಿಷಿನ ಪುಷ್ಟಿಯೊದಗುವಂತೆ ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಭಾಷೆಗಳ ಸ್ಥಾನ ನಿರ್ಣಯವಾಗಬೇಕು. ಇನ್ನು ಮುಂದೆ ಇಂಗ್ಲಿಷ್ ಎಲ್ಲರಿಗೂ ಬೇಡ: ಹಲವರಿಗೆ ಕೊಂಚಮಟ್ಟಿಗೆ ಬೇಕು; ಕೆಲವರಿಗೆ ಮಾತ್ರ ಚೆನ್ನಾಗಿಯೇ ಬೇಕು.

ಇಂಗ್ಲಿಷ್ ಕಲಿಯುವವರನ್ನು ಎರಡು ವಿಭಾಗವಾಗಿ ವಿಂಗಡಿಸಬಹುದು. ಭಾಷಾದೃಷ್ಟಿಯಿಂದ ಕಲಿಯುವವರು; ಸಾಹಿತ್ಯದೃಷ್ಟಿಯಿಂದ ಕಲಿಯುವವರು. ಭಾಷಾದೃಷ್ಟಿಯಿಂದ ಕಲಿಯುವವರಿಗೆ ಇಂಗ್ಲಿಷಿನ ಪರಿಚಯ ಚೆನ್ನಾಗಿ ಆಗಬೇಕು. ಅವರು ಆ ಭಾಷೆಯಲ್ಲಿ ಚೆನ್ನಾಗಿ ಓದಲೂ ಬರೆಯಲೂ ಮಾತನಾಡಲೂ ಭಾಷಣ ಮಾಡಲೂ ಬಲ್ಲವರಾಗಬೇಕು. ಅವರು ನಮಗೂ ಅಂತರರಾಷ್ಟ್ರೀಯ ಪ್ರಪಂಚಕ್ಕೂ ಸಾಹಿತ್ಯದಲ್ಲಿ, ಶಾಸ್ತ್ರದಲ್ಲಿ, ರಾಜಕೀಯದಲ್ಲಿ ಸಂಪರ್ಕ ಕಲ್ಪಿಸುವ ಸಾಧನಗಳಾಗಬೇಕು. ಇಂಥವರಿಗೆ ವಿದ್ಯಾಭ್ಯಾಸದ ಮೇಲಿನ ಮಟ್ಟದಲ್ಲಿ, ವಿಶೇಷವಾಗಿ ಸಾಹಿತ್ಯ ವಿಷಯಗಳಲ್ಲಿ, ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದ್ದರೆ ಲೇಸು. ಏಕೆಂದರೆ ಅವರ ಉದ್ದೇಶವೇ ಆ ಭಾಷೆಯಲ್ಲಿ ಉದ್ದಾಮ ಪಾಂಡಿತ್ಯ ಸಂಪಾದನೆ.

ಆದರೆ ಇಂಗ್ಲಿಷನ್ನು ಆ ಭಾಷೆಯಲ್ಲಿರುವ ವಿಪುಲವಾದ ವಿವಿಧವಾದ ಶ್ರೀಮಂತವಾದ ಸಾಹಿತ್ಯಕ್ಕಾಗಿ ಅಭ್ಯಾಸ ಮಾಡುವವರ ವಿಯವೆ ಬೇರೆ. ಅವರಿಗೆ ಬೇಕಾದುದು ಭಾಷೆಯಲ್ಲ; ಕಾವ್ಯ, ಸಾಹಿತ್ಯ, ಅಲ್ಲಿಯ ಕವಿಗಳು, ಅಲ್ಲಿಯ ನಾಟಕಕಾರರು. ಅಲ್ಲಿಯ ತತ್ವ್ತಜ್ಞಾನಿಗಳು, ಅಲ್ಲಿಯ ರಾಜಕಾರಣಿಗಳು, ಸಹೃದಯರಿಗೆ ಜಿಜ್ಞಾಸುಗಳಿಗೆ ನೀಡುವ ರಸಾಂಶ, ಚಿಂತನಾಂಶ, ಸತ್ತ್ವ. ಇಂಗ್ಲಿಷನ್ನು ಅದರ ಸಾಹಿತ್ಯಕ್ಕಾಗಿ ಅಭ್ಯಾಸ ಮಾಡುವವರು ಆ ಭಾಷೆಯಲ್ಲಿ ಮಾತನಾಡುವುದನ್ನು ಅಭ್ಯಾಸ ಮಾಡಬೇಕಾಗಿಲ್ಲ; ಅದರಲ್ಲಿ ಬರೆಯುವುದಕ್ಕೂ ಶ್ರಮಿಸಬೇಕಾಗಿಲ್ಲ; ಅದನ್ನು ಓದಿ ಅರಿಯಬೇಕಾದುದೆಷ್ಟೊ ಅಷ್ಟೆ. ಆದ್ದರಿಂದ ಅವರು ಇಂಗ್ಲಿಷ್ ಸಾಹಿತ್ಯವನ್ನು ದೇಶಭಾಷಾ ಮಾಧ್ಯಮದ ಮೂಲಕವೆ ಅಭ್ಯಾಸಮಾಡಿದರೆ ಅದರ ರಸಸತ್ವ್ತ ಸುಲಭವಾಗಿ ಶೀಘ್ರವಾಗಿ ಜೀರ್ಣವಾಗಿ ರಕ್ತಗತವಾಗುತ್ತದೆ. ಎಲ್ಲ ದೇಶಗಳಲ್ಲಿಯೂ ಪರಭಾಷೆಯ ಸಾಹಿತ್ಯವನ್ನು ಸ್ವಭಾಷೆಯ ಮೂಲಕ ಕಲಿಯುವುದೇ ರೂಢಿ, ಸಹಜ ರೀತಿ. ಏಕೆಂದರೆ ಅವರ ಉದ್ದೇಶ ಆ ಪರಭಾಷೆಯಲ್ಲಿ ಬರೆಯುವ ಮಾತನಾಡುವ ಪಾಂಡಿತ್ಯ ಸಂಪಾದನೆಯಲ್ಲ,ಅ ದರ ಸಾಹಿತ್ಯದ ಸತ್ತ್ವದ ಆಸ್ವಾದನೆ ಮಾತ್ರ. ನಮ್ಮ ದೇಶದಲ್ಲಿ ಪರಕೀಯರ ಸೌಕರ್ಯಾರ್ಥವಾಗಿ ಆ ಭಾಷೆಯಲ್ಲಿ ಬರೆದು ಮಾತಾಡುವುದಕ್ಕಾಗಿಯೆ ನಮ್ಮ ವಿದ್ಯಾಭ್ಯಾಸ ಏರ್ಪಟ್ಟುದುದರಿಂದ ನಾವು ಪರಭಾಷಾ ಸಾಹಿತ್ಯವನ್ನು ಆ ಭಾಷಾ ಮಾಧ್ಯಮದಿಂದಲೇ ಕಲಿಯಬೇಕಾಯಿತು. ಮೊದಲಿನಿಂದಲೂ ಆ ಸಾಹಿತ್ಯವನ್ನು ನಮ್ಮ ಭಾಷೆಯ ಮಾಧ್ಯಮದಿಂದಲೇ ಕಲಿಸಿದ್ದರೆ ನಮ್ಮವರಿಗೆ ಈಗ ಒದಗಿರುವ ರಸಪುಷ್ಟಿಗಿಂತಲೂ ಸಾವಿರ ಪಾಲು ಹೆಚ್ಚಿನ ರಸಪುಷ್ಟಿ ಒದಗುತ್ತಿತ್ತು. ಪರಭಾಷಾ ಮಾಧ್ಯಮದಿಂದಲೆ ಕಲಿಯುವ ವಿಕಾರ ಪರಿಸ್ಥಿತಿ ಎಷ್ಟರಮಟ್ಟಿಗೆ ಮುಂದುವರಿದಿದೆಯೆಂದರೆ-ಷೇಕ್ಸ್‌ಪಿಯರ್, ಮಿಲ್ಟನ್, ವರ್ಡ್ಸ್‌ವರ್ತ್‌ಮೊದಲಾದ ಕವಿಗಳ ಕೃತಿಗಳನ್ನು ಕನ್ನಡದ ಮೂಲಕ ಪಾಠ ಹೇಳಬಹುದೆಂಬ ಸಂಗತಿ ಇಂದಿಗೂ ಅನೇಕರಿಗೆ ದಿಗ್‌ಭ್ರಾಂತಿಕರ ವಿಸ್ಮಯವಾಗಿದೆ. ಆದರೆ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಜನೆಮಾಡಿ, ಅಲ್ಲಿಯೆ ಅಧ್ಯಾಪಕರಾಗಿ ಸೇರಿ, ತಾವೇ ವಿದ್ಯಾರ್ಥಿಗಳಾಗಿಯೂ, ಅಧ್ಯಾಪಕರಾಗಿಯೂ, ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನೂ, ಸಾಹಿತ್ಯ ರಸಾಸ್ವಾದನಾ ಶಕ್ತಿಯನ್ನೂ ಗಮನಿಸುತ್ತ ಬಂದವರಿಗೆ ನಿಜಸ್ಥಿತಿ ಚೆನ್ನಾಗಿ ಗೊತ್ತು. ಇಂಗ್ಲಿಷ್ ಭಾಷೆಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಗೊಳಿಸುವ ಶಕ್ತಿ ಏನೇನೂ ಇಲ್ಲದ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಮ್ಯಾಕ್‌ಬೆತ್ ಪಾತ್ರದ ವಿಚಾರವಾಗಿ ಪ್ರಬಂಧ ಬರೆಯುವ ಸಂಕಟ ಒದಗಿದರೆ ಏನುಮಾಡುತ್ತಾನೆ? ಪೂರ್ವಸಿದ್ಧತೆ ಮಾಡಿದ ಪ್ರಬಂಧವನ್ನು ಗಟ್ಟಿಮಾಡಿದ್ದರೆ ಅದನ್ನು ಉತ್ತರ ಪತ್ರಿಕೆಗೆ ಇಳಿಸಿ ತೇರ್ಗಡೆಹೊಂದುತ್ತಾನೆ. ಅಂತಹನಿಗೆ ನಿಜವಾಗಿಯೂ ಷೇಕ್ಸ್‌ಪಿಯರ್ ನಾಟಕ ರಸಾಸ್ವಾದನೆಯಿಂದ ಅರಿವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಅದೇ ಇನ್ನೊಬ್ಬ ವಿದ್ಯಾರ್ಥಿಗೆ ಅದರ ಅರಿವು ಸ್ವಲ್ಪ ಮಟ್ಟಿಗೆ ಆಗಿದ್ದರೂ ಅದನ್ನು ಬರೆಯುವ ಭಾಷಾಸಾಮರ್ಥ್ಯವಿಲ್ಲದೆ ತಪ್ಪುತಪ್ಪಾಗಿ ಏನನ್ನೊ ಬರೆದು ಫೆಯಿಲ್ ಆಗುತ್ತಾನೆ. ತನ್ನ ಭಾಷೆಯಲ್ಲಿಯೆ ಉತ್ತರ ಬರೆಯುವ ಸ್ವಾತಂತ್ರ್ಯ ಅವನಿಗಿದ್ದಿದ್ದರೆ ಮ್ಯಾಕ್‌ಬೆತ್ ಪಾತ್ರವನ್ನು ಕುರಿತು ಚೆನ್ನಾಗಿಯೆ ಬರೆಯುತ್ತಿದ್ದನೆಂಬುದರಲ್ಲಿ ಸಂದೇಹವಿಲ್ಲ. ಈಚೀಚೆಗೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಭಾಷೇತರ ವಿಷಯಗಳಲ್ಲಿ ಮೊದಲಿಗಿಂತಲೂ ಸಮಧಿಕ ಪ್ರಮಾಣದಲ್ಲಿ ಅನುತ್ತೀರ್ಣರಾಗುತ್ತಿರುವುದಕ್ಕೆ ಮುಖ್ಯಕಾರಣ ಇಂಗ್ಲಿಷ್ ಭಾಷಾ ಮಾಧ್ಯಮವೇ ಹೊರತು ವಿಷಯಗಹನತೆಯೂ ಅಲ್ಲ, ವಿದ್ಯಾರ್ಥಿವರ್ಗದ ಬುದ್ದಿಶಕ್ತಿಯ ಸರ್ವತ್ರಾವನತಿಯೂ ಅಲ್ಲ. ಆದ್ದರಿಂದ ಇಂಗ್ಲಿಷನ್ನು ಅದರ ಸಾಹಿತ್ಯಕ್ಕಾಗಿ ಅಭ್ಯಾಸಮಾಡುವ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿಯೆ ಪಾಠ ಹೇಳಬೇಕು, ಪರೀಕ್ಷೆ ನಡೆಸಬೇಕು.

ಇಂಗ್ಲಿಷನ್ನು ಅದರ ಪ್ರಥಮ ಭಾಷಾಸ್ಥಾನದಿಂದ ಸದ್ಯಕ್ಕೆ ದ್ವಿತೀಯ ಸ್ಥಾನಕ್ಕೆ ಇಳಿಸಿ, ಕನ್ನಡವನ್ನು ಪ್ರಥಮ ಭಾಷಾ ಸ್ಥಾನಕ್ಕೆ ಏರಿಸಿ, ಪ್ರಥಮ ಭಾಷೆಯ ಮೂರು ಪ್ರಶ್ನೆ ಪತ್ರಿಕೆಗಳಲ್ಲಿ ಒಂದನ್ನು ಇಂಗ್ಲಿಷ್ ಸಾಹಿತ್ಯ ಎಂಬ ಹೆಸರಿನಲ್ಲಿ ಇಂಗ್ಲಿಷ್ ಸಾಹಿತ್ಯಕ್ಕೆ ಮೀಸಲಾಗಿರಿಸಿ, ಕನ್ನಡದಲ್ಲಿ ಪಾಠ ಹೇಳಿ, ಕನ್ನಡದಲ್ಲಿಯೆ ಉತ್ತರ ಬರೆಯುವಂತೆ ಮಾಡಿದರೆ, ನಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಹೊರೆಯನ್ನು ತಪ್ಪಿಸುವುದರ ಜೊತೆಗೆ, ಇಂಗ್ಲಿಷ್ ಸಾಹಿತ್ಯದ ರಸಾಮೃತವನ್ನು ಪಾನ ಮಾಡಿಸಿದಂತಾಗಿ, ಅವರ ಪುಷ್ಟಿ ಈಗಿರುವುದಕ್ಕಿಂತಲೂ ನೂರ್ಮಡಿ ಹೆಚ್ಚುವುದರಲ್ಲಿ ಸಂದೇಹವಿಲ್ಲ.

ಇಂಗ್ಲಿಷ್ ಹೋದರೆ ಎಲ್ಲ ಕೊಚ್ಚಿಹೋಗುತ್ತದೆ ಎಂದು ಕೂಗಿಕೊಳ್ಳುವವರಿಗೆ ಇನ್ನೂ ಒಂದು ಸಮಾಧಾನ ಹೇಳಬೇಕಾಗುತ್ತದೆ. ಮೇಲೆ ವಿವರಿಸಿದಂತೆ, ಇಂಗ್ಲಿಷ್ ಸಂಪೂರ್ಣವಾಗಿ ಹೋಗುವುದಿಲ್ಲ. ಹಲವರಲ್ಲಿ ಸಾಹಿತ್ಯವಾಗಿ ಉಳಿದಿರುತ್ತದೆ. ಕೆಲವರಲ್ಲಿ ಭಾಷೆಯಾಗಿಯೂ ಉಳಿಯುತ್ತದೆ. ಅಲ್ಲದೆ ಇಂಗ್ಲಿಷ್ ಕಲಿಯದ ಇತರ ಬಹು ಜನರಿಗೂ ಇಂಗ್ಲಿಷ್ ಮೋಹಿಗಳು ಊಹಿಸುವಂತೆ ಯಾವ ತೆರನಾದ ಭಾವನಷ್ಟವಾಗಲಿ ಬುದ್ಧಿದಾರಿದ್ಯ್ರವಾಗಲಿ ಸಂಭವಿಸುವುದಿಲ್ಲ. ಏಕೆಂದರೆ ಕನ್ನಡದ ಈಗಿನ ಸ್ಥಿತಿ ಇಪ್ಪತ್ತಯ್ದು ಮೂವತ್ತು ವರ್ಷಗಳ ಹಜಿಂದೆ ಇದ್ದ ಸ್ಥಿತಿಯಲ್ಲ. ಈಗ ಇಂಗ್ಲಿಷ್ ಒಂದಕ್ಷರ ಬರದಿದ್ದವನೂ ಕೂಡ ಆಗ ಇಂಗ್ಲಿಷಿನ ಮೂಲಕವೇ ಪಡೆಯಬೇಕಾಗಿದ್ದ ಭಾವದ ಮತ್ತು ಬುದ್ಧಿಯ ಪುಷ್ಟಿಗಳನ್ನು ಕನ್ನಡದ ಮೂಲಕವೇ ಪಡೆಯಬೇಕಾಗಿದ್ದ ಭಾವದ ಮತ್ತು ಬುದ್ದಿಯ ಪುಷ್ಟಿಗಳನ್ನು ಕನ್ನಡದ ಮೂಲಕವೇ ಯಥೇಚ್ಛವಾಗಿ ಪಡೆಯುವಷ್ಟರ ಮಟ್ಟಿಗೆ ಕನ್ನಡ ವಾಙ್ಮಯ ಸಾಹಿತ್ಯದ ಮತ್ತು ಶಾಸ್ತ್ರದ ವಿವಿಧ ಶಾಖೆಗಳಲ್ಲಿ ಮುಂಬರಿದಿದೆ; ದಿನದಿನಕ್ಕೂ ಬೆಳೆದು ಪ್ರಗತಿ ಹೊಂದುತ್ತಿದೆ. ಅಷ್ಟೇ ಅಲ್ಲ, ಇಂಗ್ಲಿಷ್ ಸಾಹಿತ್ಯವನ್ನೂ ಆಮೂಲಾಗ್ರವಾಗಿ ಓದಿದವರೂ ಬೆಕ್ಕಸಬಡುವಂತಹ ಸಾಹಿತ್ಯ ಶೃಂಗಗಳೂ ಕನ್ನಡದಲ್ಲಿ ಕೆಲವಾದರೂ ಮೂಡಿವೆ. ಹಿಂದಿನ ಮತ್ತು ಇಂದಿನ ಕನ್ನಡ ಸಾಹಿತ್ಯದ ರಸಸಾಗರದಲ್ಲಿ ಮುಳುಗಿದವನು ತಾನು ಇಲ್ಲಿ ಅನುಭವಿಸದಿದ್ದ ಅಥವಾ ಅನುಭವಿಸಲಾರದಿದ್ದ ಯಾವ ನೂತನತೆಯನ್ನಾಗಲಿ ರಸೋನ್ನ್ಮೇಷವನ್ನಾಗಲಿ ಅಲ್ಲಿ ಕಂಡು ಕರುಬುವ ಪರಿಸ್ಥಿತಿಯಿಂದ ನಾವು ಬಹುದೂರ ಮುಂದುವರಿದಿದ್ದೇವೆ. ತಾವು ವಿದ್ಯಾರ್ಥಿಗಳಾಗಿದ್ದಾಗ ಓದಿದ್ದ ಅಥವಾ ಶಾಲಾ ಕಾಲೇಜುಗಳಲ್ಲಿ ಕಡಮೆ ಸಂಬಳದ ಬಡ ಉಪಾಧ್ಯಾಯರಿಂದ ಪಾಠ ಕೇಳಿದ್ದ ಅಂತಸ್ತಿನಲ್ಲಿಯೆ ಕನ್ನಡ ಈಗಲೂ ಇದೆ ಎಂದು ಭ್ರಮಿಸಿರುವ ರಾಜ್ಯ ಲಲಾಟ ಲೇಖನ ನೌಕೆಯ ಕರ್ಣಾಧಾರರಾಗಿರುವ ವಯಸ್ಕ ಮಹನೀಯರು ಮಾತ್ರ ಕನ್ನಡದ ಶಕ್ತಿಯ ವಿಚಾರವಾಗಿ ಶಂಕಿಸಬಹುದೆ ವಿನಾ ಉಳಿದ ತಿಳಿದವರಾರೂ ಶಂಕಿಸರು.

* * *