ಯಾವ ಮಹಾಕವಿಯಾಗಲಿ ಸಮಷ್ಟಿಚಿತ್ರಸ್ವರೂಪವಾದ ಜನಮನೋಭೂಮಿಕೆಯಲ್ಲಿ ಸ್ಪಷ್ಟವಾಗಿ ಖಚಿತವಾಗಿ ಶಾಶ್ವತವಾಗಿ ನಿಂತಿರುವ, ಮಹಾಭಾರತ ರಾಮಾಯಣಗಳಂತಹ ಕಥಾನಕಗಳ ಮುಖ್ಯಘಟನೆಗಳನ್ನಾಗಲಿ ಪಾತ್ರಗಳನ್ನಾಗಲಿ ಅತಿಯಾಗಿ ಬದಲಿಸಲಾರ; ಹಾಗೆ ಮುಲದ ಸ್ವರೂಪವೇ ಮರೆಯಾಗುವಂತೆ ಬದಲಿಸಲೂ ಬಾರದು.

[2] ಅಂತೆಯೆ ಯಾವ ಕವಿಯಾದರೂ ಕರ್ಣನ ಪಾತ್ರವನ್ನು ಚಿತ್ರಿಸ ಹೊರಟರೆ ಆ ಪಾತ್ರಕ್ಕೆ ಮಾತೃಕೆಯಾದ ವ್ಯಾಸಭಾರತದ ಚೌಕಟ್ಟಿನಲ್ಲಿಯೆ ತನ್ನ ಪಾತ್ರವನ್ನು ಅರಳಿಸಬೇಕಾಗುತ್ತದೆ. ಹಾಗೆ ನೋಡಿದಲ್ಲಿ ಪಂಪನ ಕರ್ಣನಿಗೂ ವ್ಯಾಸರ ಕರ್ಣನಿಗೂ ಹೆಚ್ಚೇನೂ ಕಡಿದಾದ ವ್ಯತ್ಯಾಸ ಕಾಣಬರುವುದಿಲ್ಲ.

ಕನ್ನಡದ ಮೊಟ್ಟಮೊದಲ ಭಾರತಮಹಾಕಾವ್ಯವಾದ ಪಂಪನ ಈ ಕೃತಿ ವ್ಯಾಸರ ಕರ್ಣನನ್ನು ಎಷ್ಟು ಮನೋಹರವಾಗಿ ಕನ್ನಡಕ್ಕೆ ತರಲು ಸಾಧ್ಯವೋ ಅಷ್ಟೂ ಮನೋಹರವಾಗಿ ತಂದಿದೆ. ಅಲ್ಲಲ್ಲಿ ಮಾಡಿಕೊಂಡಿರುವ ಸಣ್ಣ ಪುಟ್ಟ ವಿವರದ ವ್ಯತ್ಯಾಸಗಳು ಕರ್ಣನ ಪಾತ್ರವನ್ನು ರಮಣೀಯತರವಾಗುವಂತೆ ಮಾಡಿವೆ. ಅಷ್ಟೇ ವಿನಾ ಯಾವ ವಿಧವಾದ ದರ್ಶನಧ್ವನಿಯೂ ಹೊಮ್ಮುವಂತೆ ಹೆಚ್ಚೇನೂ ವ್ಯತ್ಯಾಸಗೊಂಡಿಲ್ಲ.

ಪಂಪನ ದೃಷ್ಟಿಯಲ್ಲಿ ವಿಕ್ರಮಾರ್ಜುನವಿಜಯ ಲೌಕಿಕಕೃತಿ. “ಬೆಳಗುವೆನಿಲ್ಲಿ ಲೌಕಿಕಮನ್” ಎಂದು ಅವನೇ ಹೇಳಿಕೊಂಡಿದ್ದಾನೆ. ಆದ್ದರಿಂದಲೆ ಅವನ ಪಾತ್ರಗಳು ಗುಣಪ್ರಮಾಣದಲ್ಲಿ ಎಂತಹ ಔನ್ನತ್ಯಕ್ಕೇರಿದರೂ ಮನುಷ್ಯತ್ವಕ್ಕೂ ಮಾನವ ಲೋಕಕ್ಕೂ ಹೆಚ್ಚು ಸಮೀಪವಾಗಿಯೆ ಚರಿಸುತ್ತವೆ.

ಪಂಪಕವಿ ಮೂರು ಮುಖ್ಯ ಸೂತ್ರಗಳಲ್ಲಿ ಕರ್ಣನ ಜೀವನವನ್ನು ನೆಯ್ದಿದ್ದಾನೆ:  ಒಂದು – ‘ಕರ್ಣಂಗೆ ದಲ್ ಒಡ್ಡಿತ್ತು ಭಾರತಂ.’ ಎರಡು – ‘ನನ್ನಿಯೊಳಿನತನಯಂ.’ ಮೂರು – ‘ಕರ್ಣರಸಾಯನಮಲ್ತೆ ಭಾರತಂ.’ ಉಳಿದುವು ಏನಿದ್ದರೂ ಹಾಸುಹೊಕ್ಕಾಗುವ ಉಪಸೂತ್ರಗಳಂತೆ. ಪಂಪನ ಕರ್ಣನಿಗೆ ಇನತನಯ ಎಂಬ ಹೆಸರಿರುವಂತೆ ಅವನು ಕಾನೀನ ಎಂಬ ಹೆಸರಿಗೂ ಪಾತ್ರನಾಗಿದ್ದಾನೆ. ಈ ಕಾನೀನ ಎಂಬ ಮೂರಕ್ಕರದ ಮಾತು ಕರ್ಣನ ಲಲಾಟಲಿಪಿಯಾಗಿ ಪರಿಣಮಿಸಿದೆ. ಅವನ ಜೀವನದ ದುರಂತತೆಗೆ ಬೀಜಾಕ್ಷರಸ್ವರೂಪವಾಗಿದೆ. ಕರ್ಣನ ದುರಂತತೆ ಮೊದಲುಗೊಂಡಿರುವುದಾದರೂ ಅವನ ಹುಟ್ಟಿನಲ್ಲಿ. ಅದು ಈ ಕಾನೀನ ಎಂಬ ಪದದಲ್ಲಿ ಧ್ವನಿತವಾಗಿದೆ. ಕರ್ಣನ ಜೀವನ ಹೀಗಲ್ಲದೆ ಮತ್ತಾವ ರೀತಿಯಿಂದಲಾದರೂ ಬೆಳೆದಿದ್ದರೆ, ಒಂದು ವೇಳೆ ಅವನು ‘ನನ್ನಿಯೊಳ್ ಇನತನಯನ್’ ಆಗಿಲ್ಲದಿದ್ದರೆ, ಭಾರತ ಕಥೆಯ ರೀತಿ ವಿಧಾನ ಗತಿಗಳೆ ಬೇರೆಯಾಗುತ್ತಿದ್ದುವು. ‘ಕರ್ಣಂಗೆ ದಲ್ ಒಡ್ಡಿತ್ತು ಭಾರತಂ’ ಎಂಬ ಕವಿಯ ಮಾತು ಈ ದೃಷ್ಟಿಯಿಂದಲೆ ಸತ್ಯವಾಗಿದೆ. ಇಂತಹ ಕರ್ಣನ ನನ್ನಿಯ ಕಥೆಯಿಂದಲೆ ಭಾರತ ‘ಕರ್ಣರಸಾಯನ’ವಾಗಿದೆ.

ಕರ್ಣವನ್ನು ಪಡೆದ ತಾಯಿ ಲೋಕಾಪವಾದಕ್ಕೆ ಹೆದರಿ ‘ನಿಧಾನ ಮನೀಡಾಡುವಂತೆ’ ಗಂಗೆಯಲ್ಲಿ ಬೀಸಾಡಿದರೆ, ಮಕ್ಕಳಿಲ್ಲದ ಮಚ್ಚಿಗ ಬಾಳ ದಿನೇಶನ ನೆಳಲು ನೀರಿನಲ್ಲಿ ನೆಲಸಿದ್ದಂತೆ ಕಾಣುತ್ತಿದ್ದ ಆ ಕಾನೀನನನ್ನು ನಿಧಿಗಂಡನಂತೆ ತೆಗೆದೆತ್ತಿ ಬಿಗಿದಪ್ಪಿಕೊಳ್ಳುತ್ತಾನೆ. ಅಂತಾಗಿ ಕರ್ಣನ ಬಾಳು ಮಹಾಭಾರತದಲ್ಲೆಲ್ಲಾ ಈಡಾಡಿದ ನಿಧಿಯಂತಾಗುತ್ತದೆ.

ರಾಧೇಯನಾದ ಆತನ ತ್ಯಾಗ, ನನ್ನಿ, ಬಿಲ್‌ಬಲ್ಮೆ ಜನರ ಕಿವಿಯಿಂದ ಕಿವಿಗೆ ಹರಿದುದರಿಂದ ರಾಧೇಯ ಕರ್ಣನಾಗುತ್ತಾನೆ. ಮುಂದೆ ಕೌರವನಿಂದ ಅಂಗರಾಜ್ಯಾಭಿಷಿಕ್ತನಾಗಿ ಅಂಗಾಧಿಪತಿಯಾಗುತ್ತಾನೆ. ಆದರೂ ‘ಕಾನೀನ’ ಎಂಬ ಹೆಸರು ಮಾತ್ರ ಅವನನ್ನು ಅಭಿಶಾಪದಂತೆ ಅಟ್ಟುತ್ತಲೆ ಇರುತ್ತದೆ.

ಕರ್ಣನ ಜೀವನದಲ್ಲಿ ಒದಗಿ ಬಂದ ನೂರಾರು ಪರೀಕ್ಷೆಗಳಲ್ಲಿ ಅತ್ಯಂತ ಉಗ್ರತಮವಾದ ಅಗ್ನಿನಿಕಷವೆಂದರೆ ಕೃಷ್ಣನ ಭೇದೋಪಾಯ. ಭಗ್ನ ಸಂಧಿಯಾದ ಮೇಲೆ ಕರ್ಣನಲ್ಲಿ ಎಂದೂ ಇಲ್ಲದ ಬಾಂಧವ್ಯವನ್ನು ತೋರುತ್ತ ಬಂದ ಕೃಷ್ಣ ಅವನನ್ನು ತನ್ನೊಡನೆ ಕರೆದೊಯ್ದು, ಅವನ ಜನ್ಮವೃತ್ತಾಂತವನ್ನು, ಅವನು ಕೇಳದಿದ್ದರೂ, ತಿಳಿಸುತ್ತಾನೆ. ಆದರೆ ಇದಕ್ಕಿಂತಲೂ ಭಯಂಕರವಾದ ಸಂಗತಿಯೆಂದರೆ ಕೌರವ ಕರ್ಣರ ಸ್ನೇಹಮಂದಿರವನ್ನೆ ಪುಡಿ ಮಾಡಲೆಳಸು ವಂತಹ ಸಿಡಿಮದ್ದನ್ನು ಕೃಷ್ಣ ಕರ್ಣನ ಕಿವಿಯಲ್ಲರೆದದ್ದು.

ಸೂತಪುತ್ರನಾದ ಕರ್ಣನನ್ನು ಅಂಗಾಧಿಪತಿಯನ್ನಾಗಿ ಮಾಡಿಕೊಂಡು, ಆದರಿಸಿ, ಪ್ರೀತಿಸಿ, ತನ್ನ ಪ್ರಾಣಮಿತ್ರನನ್ನಾಗಿ ಮಾಡಿಕೊಂಡುದಕ್ಕೆ ಸ್ವಾರ್ಥ  ಕಾರಣವೊಂದಿದೆ. ಗಂಗಾತೀರದಲ್ಲಿ ಹಿಂದೆ ಒಂದು ದಿನ ಬೇಟೆಯಾಡುತ್ತಿದ್ದಾಗ ಸತ್ಯಂತಪರೆಂಬ ದಿವ್ಯಜ್ಞಾನಿಗಳು ಕರ್ಣ ಕೌರವರನ್ನು ಕಂಡಾಗ ಅವರಲ್ಲಿ ಕರ್ಣನನ್ನು ಮಾತ್ರ ಸತ್ಕರಿಸಿದರಂತೆ! ಅದನ್ನು ಕಂಡು ಮಚ್ಚರಗೊಂಡ ಕೌರವ, ಕರ್ಣನನ್ನು ಅತ್ತ ಕಳುಹಿ, ತನಗೆ, ರಾಜರಾಜನಾದ ತನಗೆ, ಹಾಗೆ ಅಗೌರವಿಸಿ ಮೀಂಗುಲಿಗನಾದ ಕರ್ಣನಿಗೇಕೆ ಸತ್ಕಾರವಿತ್ತಿರಿ? ಎಂದು ಋಷಿಗಳನ್ನು ಕೇಳುತ್ತಾನೆ. ಅವರಿಂದ ಕರ್ಣಜನ್ಮವೃತ್ತಾಂತವನ್ನು ತಿಳಿದ ಕೌರವ ‘ಪಾಟಿಸುವೆನೊಯ್ಯನೆ ಮುಳ್ಳೊಳೆ ಮುಳ್ಳನ್’ ಎಂದು ಎದೆಯೊಳಗೆ ಹಿಗ್ಗಿ ಕರ್ಣನನ್ನು ನಯದಿಂದ ಪೆರ್ಚಿಪೊರೆದನಂತೆ! ಎಂತಹ ಭೇದೋಪಾಯದ ಭಯಂಕರ ಸಿಡಿಮದ್ದು? ಅದನ್ನು ಕೇಳಿದ ಕರ್ಣನ ಮನಸ್ಥಿತಿಯಾದರೂ ಏನಾಗಿದ್ದಿರಬೇಕು? ಅದನ್ನು ಅರಿವುದಾದರೂ ಎಂತು? ತಾಯಿಲ್ಲದೆ ಪಿತನಿಲ್ಲದೆ ಕುಲಹೀನನೆಂದು ಕರೆಸಿಕೊಂಡು ನೂರಾರು ವಿಧವಾದ ಯಾತನೆಯನ್ನನುಭವಿಸುತ್ತಿದ್ದ ಅವನಿಗೆ ಸೂರ್ಯನೆ ತಂದೆ, ಕುಂತಿಯೆ ತಾಯಿ, ಪಾಂಡವರೆ ತಮ್ಮಂದಿರು ಎಂದು ತಿಳಿದಂದು ಹೃದಯದಲ್ಲಿ ಎಂಥ ಸಂವೇದನೆಯಾಯಿತೋ! ಆದರೆ ಅಷ್ಟರಲ್ಲೆ ಕೌರವನ ಕೌಟಿಲ್ಯವನ್ನು ಹೇಳಿ ಭೇದಿಸಲು ಯತ್ನಿಸಿತು ಕೃಷ್ಣನ ಕೌಟಿಲ್ಯ.

ಕೃಷ್ಣ ತನ್ನ ಹುಟ್ಟನ್ನೇಕೆ ಅರುಹಿದನೋ ಎಂದು ಕರ್ಣ ಮೊದಲು ಚಿಂತಿಸುತ್ತಾನೆ. ಕೃಷ್ಣ ಭೇದೋಪಾಯವೂ ಭಗ್ನವಾಯಿತೆಂಬುದಕ್ಕೆ ಅದೇ ಸಾಕು ಪ್ರಬಲಸಾಕ್ಷಿ. ಕರ್ಣನ ಮನಸ್ಸು ಕೃಷ್ಣ ಹೇಳಿದ ಕೌರವನ ಕೌಟಿಲ್ಯದ ಕಡೆಗೆ ಹರಿಯದೆ ಮಧುಸೂದನ ತನ್ನ ಹುಟ್ಟು ಹೇಳಿ ಕೌರವನನ್ನು ಭೇದಿಸಿದನಲ್ಲಾ, ಕೌರವನಿಗೆ ದೈವ ಬಲವಿಲ್ಲದಾಯಿತಲ್ಲಾ ಎಂದು ಚಿಂತಿಸತೊಡಗುತ್ತದೆ. ಕೃಷ್ಣ ಹೇಳಿದ ಕೌರವನ ಸ್ನೇಹದ ಛದ್ಮನೆಯನ್ನು ನಂಬುವುದಿರಲಿ, ನಂಬಬಾರದೆಂದೂ ಕೂಡ ಅವನ ಮನಸ್ಸು ಆಲೋಚಿಸುವುದಿಲ್ಲ. ಹಿಂದೊಂದು ದಿನ, ಅಂತಃಪುರದಲ್ಲಿ, ತನ್ನ ಸ್ನೇಹಿತನ ಪಟ್ಟದರಸಿಯೊಡನೆ ಪಣವೊಡ್ಡಿ ನೆತ್ತವಾಡುತ್ತಿದ್ದಂದು, ಸೋತ ಭಾನುಮತಿ ಸೋಲವನ್ನು ಕೊಡದೆ ತಪ್ಪಿಸಿಕೊಳ್ಳಲೆಳಸಿದುದೂ; ಆಗ ಆ ಕಲಹದಲ್ಲಿ ಪಣವಾಗಿ ಒಡ್ಡಿದ್ದ ಅವಳ ಮುತ್ತಿನ ಹಾರ ಹರಿದುಹೋಗುವುದೂ, ಅದನ್ನು ನೋಡಿ ಏನು ಅಚಾತುರ್ಯವಾಗಿ ಹೋಯಿತು ಎಂದು ತಾನು ಅಳುಕುತ್ತಿದ್ದುದೂ, ದುರ್ಯೋಧನ ಮತ್ತು ಚೆಲ್ಲಿರುವುದನ್ನೂ ಕರ್ಣನ ಮನಸ್ಥಿತಿಯನ್ನೂ ಕಂಡು ‘ಇವನಾಯ್ವುದೊ ತಪ್ಪದೆ ಪೇಱೆಮ್’ ಎಂದು, ಗಮನವನ್ನು ಮುತ್ತನ್ನು ಆಯುವ ಕಡೆಗೆ ಹರಿಸಿ, ಆದುದು ಅಚಾತುರ್ಯವೆ ಅಲ್ಲ ಎಂಬಂತೆ ವರ‍್ತಿಸಿ, ಅವನ ಅಳುಕನ್ನು ಪರಿಹರಿಸಿದುದೂ; ಎಲ್ಲ ಚಿತ್ರವೂ ಕರ್ಣನ ಸ್ಮೃತಿ ಪಟಲದ ಮೇಲೆ ಹಾಯ್ದು ಹೋಗುತ್ತವೆ. “ನೆತ್ತಮನಾಡಿ ಭಾನುಮತಿ ಸೋಲ್ತೊಡೆ, ಸೋಲಮನ್ ಈವುದೆಂದು ಕಾಡುತ್ತಿರೆ, ಲಂಬಣಂ ಪಱೆಯೆ, ಮುತ್ತಿನ ಕೇಡನೆ ನೋಡಿ ನೋಡಿ, ಬಱ್ಕುತ್ತಿರೆ, ಏವಮಿಲ್ಲದೆ ಇವನಾಯ್ವುದೊ ತಪ್ಪದೆ ಪೇಱೆಮ್, ಎಂಬ ಭೂಪೋತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ ಬೇಡ ನಲ್ಲನೇ?”

ಇಲ್ಲಿ ವ್ಯಕ್ತವಾದ ರಾಧೇಯನ ಸ್ನೇಹಶಕ್ತಿಯ ಹೊಡೆತಕ್ಕೆ ರಾಜತಂತ್ರಜ್ಞ ಕೃಷ್ಣ ಭೇದೋಪಾಯ, ಕೌಟಿಲ್ಯ, ಕುಯುಕ್ತಿಗಳೆಲ್ಲವೂ ನುಚ್ಚುನೂರಾಗುತ್ತವೆ. ಮುಂದೇನೂ ನುಡಿಯಲರಿಯದೆ ಅವನು ಹಿಂದಿರುಗಬೇಕಾಗುತ್ತದೆ.

ಮುಳ್ಳಿಂದ ಮುಳ್ಳು ತೆಗೆಯುವಂತೆ, ಪಾಂಡವರನ್ನು ಕರ್ಣನಿಂದಲೇ ನಿರ್ಮೂಲ ಮಾಡಿಸಬೇಕೆಂಬ ಸ್ವಾರ್ಥಮೂಲವಾದ ಅಭಿಸಂಧಿ ಮಾತ್ರವಿದ್ದಿದ್ದರೆ, ಸ್ನೇಹ ಈ ಆತ್ಮೀಯತೆಯ ಅಂತಃಪುರದ ರಾಜರಾಜೇಶ್ವರಿಯ ಎಡೆಗೆ ಏರಲು ಹೇಗೆ ತಾನೆ ಸಾಧ್ಯವಾಗುತ್ತಿತ್ತು? ರಾಜರಾಣಿಯರ ಸರಸ ಸಲ್ಲಾಪಗಳನ್ನು ಕರ್ಣ ಕುರುಚಕ್ರವರ್ತಿಯ ಅಂತಃಪುರದಲ್ಲಿದ್ದು ಕೇಳಿ ನೋಡುತ್ತಿದ್ದನೆಂದಿದ್ದರೇ ಸಾಕಿತ್ತು. ಅವರಿಬ್ಬರ ಅಗಾಧ ಮೈತ್ರಿಯನ್ನು ಸಾರಿ ಹೇಳುವುದಕ್ಕೆ. ಆದರೆ ನೆತ್ತವಾಡುವಷ್ಟರ ಮಟ್ಟಿನ ನಿರ್ಮಲ ಮೈತ್ರಿ ಬೆಳೆದಿರಬೇಕಾದರೆ ಆ ಮೈತ್ರಿಗೆ ಕಳಂಕಾರೋಪ ಮಾಡಲು ಸಾಧ್ಯವೇ? ಆದ್ದರಿಂದಲೆ ಆ ವಿಚಾರದಲ್ಲಿ ಕೃಷ್ಣನ ಬಾಯಿ ಮುಚ್ಚಿ ಹೋದದ್ದು.

ಈ ಒಂದು ಘಟನೆ ಪಂಪ ಅರಿಕೇಸರಿಯರ ಜೀವನದಲ್ಲಿಯೆ ನಡೆದಿದ್ದಿರಬಹುದೆಂದು ತೋರುತ್ತದೆ. ಅಥವಾ ಅರಿಕೇಸರಿಯು ಆಸ್ಥಾನದಲ್ಲಿದ್ದ ಕರ್ಣನಂತಹ ಮತ್ತೊಬ್ಬ ಮಿತ್ರನ ಜೀವನದಲ್ಲಿ ಇಂತಹದೊಂದು ಘಟನೆ ನಡೆದಿದ್ದುದನ್ನು ಪಂಪ ತನ್ನ ಕಾವ್ಯದಲ್ಲಿ ಉಪಯೋಗಿಸಿಕೊಂಡಿದ್ದಾನೆ ಅಷ್ಟೆ.

ಮುಂದೆ ಕೃಷ್ಣ ಕಳುಹಿಸಿದ ಕುಂತಿ ಬಂದು ಮಗನನ್ನು ಬೇಡುವ ಸನ್ನಿವೇಶದಲ್ಲಿ ಕರ್ಣ ನುಡಿಯುವ ಒಂದು ಮಾತು ಮೇಲೆ ಕೃಷ್ಣನಿಗೆ ಹೇಳಿದ ಮಾತಿನಷ್ಟೆ ಪರಿಣಾಮಕಾರಿಯಾಗಿದೆ.

ಮೀಂಗುಲಿಗನೆನ್ ಆಗಿಯುಮ್ ಅಣಮ್
ಆಂ ಗುಣಮನೆ ಬಿಸುಟೆನಿಲ್ಲ; ನಿಮಗಂ ಮಗನಾ
ದಂಗೆನಗೆ ಬಿಸುಡಲ್ ಅಕ್ಕುಮೆ?
ನೀಂ ಗಳ ಪಂಬಲನೆ ಬಿಸುಡಿಮ್ ಇನ್ ಎನ್ನೆಡೆಯೊಳ್.

ಎಂತಹ ಮಾತು! ಆದರೇನು? ವ್ಯಾಪಾರಕ್ಕಾಗಿ ಬಂದ ತಾಯಿ ಸರಳನ್ನು ಬೇಡಿ ಪಡೆದು ಕೊಂಡು ಹೋಗುತ್ತಾಳಷ್ಟೆ.

ತನ್ನ ಜನ್ಮವೃತ್ತಾಂತ ಕೃಷ್ಣನಿಂದ ತಿಳಿದಂತೆ ತಾನು ಎಂಥ ದುಃಖಿ ಎಂಬುದೂ ಕರ್ಣನಿಗೂ ತಿಳಿಯಿತು. ತನ್ನ ಸ್ವಾಮಿಗೆ ದೈವಬಲವಿಲ್ಲ ಎಂಬುದು ಮಾತ್ರವಲ್ಲ ತನಗೂ ದೈವಬಲ ಒಂದಿನಿತೂ ಇಲ್ಲವೆಂಬುದು ತಿಳಿಯುತ್ತದೆ. ತನ್ನ ಸ್ವಾಮಿಯ ಅಳಿವು ಸ್ವತಸ್ಸಿದ್ಧವೆಂದೂ ಹೊಳೆಯುತ್ತದೆ. ಅಂತಾಗಿ ಆಳ್ದನಿಗೆ ತನ್ನನ್ನು ತಾನು ಬೇಳುವುದೆ ಪರಮಯೋಗ್ಯವಾದ ಕರ್ತವ್ಯವೆಂದು ದೃಢಸಂಕಲ್ಪಕ್ಕೆ ಬರುತ್ತಾನೆ.

ಕುರುಪತಿಗಿಲ್ಲ ದೈವಬಲಮ್, ಆಜಿಗೆ ಮೇಲ್ಮಲೆಗೆಯ್ವರಾಗಳುಂ
ಗುರು,  ಗುರುಪುತ್ರ, ಸಿಂಧುಸುತರ್. ಆಳ್ದನುಮ್ ಎನ್ನನೆ ನೆಚ್ಚಿ, ಪೆರ್ಚಿ, ಮುಂ
ಪೊರೆದನ್. ಇದಿರ್ಚಿ ಕಾದುವರುಮ್ ಎನ್ನಯ ಸೋದರರ್. ಎಂತು ನೋಡಿ ಕೊ
ಕ್ಕರಿಸದೆ ಕೊಲ್ವೆನ್? ಎನ್ನೊಡಲನ್ ಆಂ ತವಿಪಂ ರಣರಂಗ ಭೂಮಿಯೊಳ್!

ಗುರುವಾಗಲಿ ಗುರುಪುತ್ರ ಸಿಂಧುಪುತ್ರರಾಗಲಿ, ತನ್ನ ಸ್ವಾಮಿಯಲ್ಲಿ ತನ್ನಂತೆ ಪೂರ್ಣನಿಷ್ಠೆಯಿಲ್ಲದವರೆಂಬ ಸಂಶಯವಿದ್ದುದರಿಂದಲೆ ಅವನಿಗೆ ತನ್ನ ಸ್ವಾಮಿಕಾರ್ಯದಲ್ಲಿ ತನ್ನ ಪಾತ್ರವೇನೆಂಬುದು ಸ್ಪಷ್ಟಗೊಂಡಿತು. ಈ ಕಾರಣದಿಂದಲೆ, ಭೀಷ್ಮರಿಗೆ ಸೇನಾಧಿಪತ್ಯವನ್ನು ವಹಿಸಿಕೊಟ್ಟಾಗ ಕರ್ಣ ಸ್ವಲ್ಪ ಮೇರೆ ಮೀರಿ ವರ್ತಿಸುತ್ತಾನೆ. ಭೀಷ್ಮರನ್ನು ಹಳಿಯುವುದು ಮಾತ್ರವಲ್ಲ, ಪಟ್ಟಕಟ್ಟುವುದಾದರೆ ತನಗೆ ಕಟ್ಟು ಎಂದು ಎದೆ ತಟ್ಟುತ್ತಾನೆ.

ಏಕೆ ಹೀಗೆ ವರ್ತಿಸುತ್ತಾನೆ ಕರ್ಣ? ಭೀಷ್ಮರ ವಿಷಯದಲ್ಲಿ ಅವನಿಗೆ ಮೊದಲಿದ್ದ ಪೂಜ್ಯ ಭಾವನೆ ಅವರು ತನ್ನ ವಂಶಪಿತಾಮಹರೆಂದು ತಿಳಿದ ಮೇಲೆ ಇಮ್ಮಡಿಗೊಂಡಿರಬಾರದಾಗಿತ್ತೆ? ಹಾಗಿದ್ದರೇಕೀ ನುಡಿ? ಅದಕ್ಕೆ ಮೇಲೆ ಹೇಳಿದ ಕಾರಣವೆ ಮುಖ್ಯವಾದದ್ದು. ಅದನ್ನೇ ಭೀಷ್ಮರೂ ಕೂಡ ಮತ್ತೊಂದು ರೀತಿಯಲ್ಲಿ ಹೇಳುತ್ತಾರೆ:

ಕಲಿತನದುರ್ಕ, ಜವ್ವನದ ಸೊರ್ಕು, ನಿಜೇಶನ ನಚ್ಚು, ಮಿಕ್ಕ ತೋ
ಳ್ವಲದ ಪೊಡರ್ಪು, ಕರ್ಣ, ನಿನಗುಳ್ಳನಿತು ಏನ್‌ಎನಗುಂಟೆ? ಭಾರತಂ
ಕಲಹಮ್, ಇದಿರ್ಚುವಂ ಹರಿಗನ್, ಅಪ್ಪೊಡೆ ಮೊಕ್ಕಳಮೇಕೆ ನೀಂ ಪಳಂ
ಚಲೆದಪೆ, ಅಣ್ಣ? ಸೂಱ್ ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್!

ಅವರು ಹೇಳಿದ ‘ಸೂೞ್ ಪಡೆಯಲಪ್ಪುದು ಕಾಣ ಮಹಾಜಿ ರಂಗದೊಳ್’ ಎಂಬ ಮಾತೆ ಸಾಕ್ಷಿ ಕರ್ಣನ ಶಂಕೆಗೆ! ಕರ್ಣನಿಗೂ ಸೂೞ್ ಬರುತ್ತದಂತೆ! ಆದರೆ ಅವನೆ ಕೊನೆಯಿಲ್ಲ; ಅವನದೂ ಸರದಿ ಮಾತ್ರ! ಮಹಾಭಾರತದ ಯುದ್ಧದ ಪೂರ್ವವಿಧಿ ಲಿಖಿತವನ್ನು ಭೀಷ್ಮರು ಓದುತ್ತಾರೆ, ಮೇಲಿನ ಮಾತಿನಲ್ಲಿ. ಕರ್ಣನಿಗೂ ಅದರ ಅರಿವಾಗಿದ್ದುದರಿಂದಲೆ ಅವನು ತನ್ನನ್ನು ತಾನೆ ಮಹಾಜಿಯಜ್ಞದಲ್ಲಿ ತವಿಸಿಕೊಳ್ಳುವುದಾಗಿ ನಿರ್ಧಾರಕ್ಕೆ ಬಂದಿರುತ್ತಾನೆ.

ಭೀಷ್ಮಕರ್ಣರ ಈ ಮಾತಿನ ನಡುವೆ ದ್ರೋಣರು ಕರ್ಣನನ್ನು ಕುರಿತು ಕಹಿಯಾದ ಒಂದು ಮಾತನಾಡಿರುತ್ತಾರೆ. ಭೀಷ್ಮರನ್ನು ಹಳಿದ ಕರ್ಣನ ನಾಲಗೆ ಅವನ ಕುಲಕ್ಕೆ ತುಬ್ಬುಗಾರ ಎಂದು ಹೇಳಿರುತ್ತಾರೆ. ಹುಟ್ಟಿದಂದಿನಿಂದಲೂ ಅದೇ ಕುಲ, ಕುಲ, ಎಂಬ ಮಾತನ್ನೆ ಕೇಳಿನೊಂದು ರೋಸಿ ಹೋಗಿದ್ದ ಕರ್ಣನ ಹೃದಯ ದ್ರೋಣರ ಮಾತಿಗೆ ಕೆರಳಿ ನುಡಿಯುತ್ತದೆ. ತಾನು ಎಲ್ಲರಿಗೂ ಪವಿತ್ರವಾದ ಕುಲದಲ್ಲಿ ಸಂಭವಿಸಿದವನೆಂಬುದು ತಿಳಿದಿದ್ದರೂ ಅವನ ಗಮನ ಕುಲ ಎಂದು ನಾವು ಕರೆಯುವ ಕುಲದ ಕಡೆಗೆ ಹರಿಯುವುದಿಲ್ಲ :

ಕುಲಮನೆ ಮುನ್ನಮ್ ಉಗ್ಗಡಿಪಿರ್, ಏಂ ಗಳ! ನಿಮ್ಮ ಕುಲಂಗಳಾಂತು
ಮಾರ್ಮಲೆವನನ್ ಅಟ್ಟಿ ತಿಂಬುವೆ? ಕುಲಂ ಕುಲಮಲ್ತು, ಚಲಂ, ಕುಲಂ, ಗುಣಂ
ಕುಲಮ್, ಅಭಿಮಾನಮ್ ಒಂದೆ ಕುಲಮ್, ಅಣ್ಮು ಕುಲಂ, ಬಗೆವಾಗಳ್ ಈಗಳ್ ಈ
ಕಲಹದೊಳ್, ಅಣ್ಣ, ನಿಮ್ಮ ಕುಲವಾಕುಲಮಂ ನಿಮಗುಂಟು ಮಾಡುಗುಂ!

ಮೇಲಿನ ಮಾತಿನಲ್ಲಿ ಕರ್ಣನು ದ್ರೋಣರ ವಿಚಾರಸರಣಿಯನ್ನು ಕುರಿತು ಕೆರಳಿರುವನೆ ಹೊರತು ಗುರುದ್ರೋಣರನ್ನು ಕುರಿತಲ್ಲ. ಈ ಮಾತಿನ ಸತ್ಯ, ಮುಂದೆ, ಭೀಷ್ಮರಾದ ಮೇಲೆ ತನಗೆ ಸರದಿ ಬಂದಾಗ ಕರ್ಣನಾಡುವ ಮಾತಿನಲ್ಲಿ ಸುಸ್ಪಷ್ಟವಾಗಿದೆ; ಅದು ಅವನ ಸಹಜವಿನಯಕ್ಕೆ ಸಾಕ್ಷಿಯಾಗಿದೆ:

ಸುರಸಿಂಧೂದ್ಭವನಿಂ ಬಱೆಕ್ಕೆ ಪೆಱರಾರ್ ಸೇನಾಧಿಪತ್ಯಕ್ಕೆ? ತ
ಕ್ಕರೆ ಲೋಕೈಕಧನುರ್ಧರಂ ಕಳಶಜಂ ತಕ್ಕಂ. ನದೀನಂದನಂ
ಗೆ ರಣಕ್ಕಾಂ ನೆರಮಾದೆನ್ ಅಪ್ಪೊಡೆ ಇನಿತೇಕೆ ಆದಪ್ಪುದು? ಈಪೊಱ್ತೆ ಪೊ
ೞ್ತೆರವೇಡ ಈವುದು ಬೀರವಟ್ಟಮನ್ ಆದಂ ದ್ರೋಣಂಗೆ ನೀಂ ಭೂಪತೀ!

ಕರ್ಣನ ಸರದಿಯೂ ಬಂತು. ಅಂದು ಭೀಷ್ಮರನ್ನು ಮೂರು ಬಾರಿ ಪ್ರದಕ್ಷಿಣಿಗೊಂಡು ಅವರಲ್ಲಿ ಕ್ಷಮಾಭಿಕ್ಷೆ ಬೇಡುವ ದೃಶ್ಯವಂತೂ ಯಾರಿಗಾದರೂ ಕರ್ಣನ ವಿಷಯದಲ್ಲಿ ನಮಸ್ಕಾರಬುದ್ಧಿ ಬರುವಂತೆ ಮಾಡದಿರದು:

ಆಮ್ ಮಾತಱುಯದೆ ಮುಳಿದುಂ
ನಿಮ್ಮಡಿದುಂ ನೋಯೆ ನುಡಿದೆನ್, ಉಱದೆ ಏಳಿಸಲ್ ಏನ್
ಎಮ್ಮಳವೆ? ಮಱೆವುದು ಆ ಮನದ
ಉಮ್ಮಚ್ಚರಮ್, ಅಜ್ಜ! ನಿಮ್ಮನ್ ಎರೆಯಲೆ ಬಂದೆಂ!

ತ್ಯಾಗಮೂರ್ತಿ ಕರ್ಣನ ವಿನಯಶ್ರೀಮಂತಿಕೆಯನ್ನು ಕಂಡ ಭೀಷ್ಮರು ಅವನು ಕುಲಹೀನನಲ್ಲ, ತಮ್ಮ ವಂಶಸ್ಥನೆ ಇರಬೇಕು, ಎಂದು ಭಾವಿಸುತ್ತಾರೆ. ಮಾತ್ರವಲ್ಲ, ತಮ್ಮ ಗುರುಗಳಲ್ಲಿ ಕಲಿತ ಕರ್ಣ ತಮ್ಮ ಬಂಧುವೆಂದು ಬಾಯ್ತುಂಬ ನುಡಿಯುತ್ತಾರೆ. ಭೀಷ್ಮರ ಇಂತಹ ಸಮಸ್ಕಂಧಬಂಧುವಾಗುವ ಭಾಗ್ಯ ಮಹಾಭಾರತದಲ್ಲಿ ಕರ್ಣನಿಗಲ್ಲದೆ ಮತ್ತಾರಿಗೆ?

ಅರ್ಜುನನೆ ತನ್ನನ್ನು ಯುದ್ಧದಲ್ಲಿ ಮಾರಾಂತ ವೇಳೆಯಲ್ಲಿ ಕರ್ಣ ‘ಪುರಿಗಣೆ’ಯನ್ನು ತೊಡದೆ ರೌದ್ರಶರವೊಂದಕ್ಕೆ ಕೈನೀಡುತ್ತಾನೆ. ಅಷ್ಟೆ ಅಲ್ಲ; ಶಿರೋಭಾಗಕ್ಕೆ ಉದ್ದೇಶಪೂರ್ವಕವಾಗಿಯೆ ಪ್ರಯೋಗಿಸುತ್ತಿದ್ದ ಆ  ಬಾಣವನ್ನು ಎದೆಗೆ ತೊಡೆಂದು ಶಲ್ಯನು ನುಡಿದರೂ ಕೇಳುವುದಿಲ್ಲ. ನಿಷ್ಪಲಗೊಂಡ ಆ ಬಾಣ ಹಿಂದೆ ಬಂದು ತನ್ನನ್ನು ಮತ್ತೆ ಪ್ರಯೋಗಿಸೆಂದು ಕೇಳಿಕೊಂಡರೂ ಅದಕ್ಕೆ ಕಿವಿಗೊಡದೆ ಮುಗಳ್ನಗೆ ನಗುತ್ತ ‘ನೀನು ಯಾರೆಂದು ತಿಳಿಯದೆ ತೊಟ್ಟೆ, ತಿಳಿದಮೇಲೆ ಇನ್ನು ತೊಡುವೆನೆ?’ ಎಂದು ನಿರಾಕರಿಸುತ್ತಾನೆ. ಕರ್ಣನ ನನ್ನಿಗೆ ಇದಕ್ಕಿಂತಲೂ ಬೇರಾವ ನಿದರ್ಶನ ಬೇಕು? ತನ್ನ ತಾಯಿಗೆ ಪುರಿಗಣೆಯನ್ನು ತೊಡುವುದಿಲ್ಲವೆಂದು ಕೊಟ್ಟಮಾತನ್ನು ನಡೆಸಿಕೊಂಡ. ಆದರೆ ಅವನು ಪುರಿಗಣೆಯನ್ನು ಬಿಟ್ಟು ತೊಟ್ಟಂತಹ ಬೇರೊಂದು ಬಾಣವಾದರೂ ಉಗ್ರತರವಾದ ಸರ್ಪಾಸ್ತ್ರವೆ ಆಗಿತ್ತು. ಅದು ಹಾಗೆಂದು ತಿಳಿದಿದ್ದರೆ ಅದನ್ನು ತೊಡುತ್ತಿರಲಿಲ್ಲವಂತೆ!

ಏಕಗ್ರಾಹಿ ಒರಟಿ ಎಂದು ಬೈದು ಶಲ್ಯನು ಧಿಕ್ಕರಿಸಿ ಹೊರಟು ಹೋದ ಮೇಲೂ ಏಕಾಂಗಿಯಾಗಿಯೆ ಕರ್ಣ ಯುದ್ಧ ಮಾಡುತ್ತಿದ್ದರೆ ಧರ್ಮದೇವತಾ ಪ್ರತಿಮೆಯಾದ ಭೂದೇವಿ ಮುನಿದು ಅವನ ರಥವನ್ನು ನುಂಗುತ್ತಾಳೆ. ಅದಕ್ಕೆ ಕಾರಣ ಅವನ ಧರ್ಮವಲ್ಲ; ಅವನು ವಹಿಸಿಕೊಂಡ ಪಕ್ಷದ ಧರ್ಮ. ಕರ್ಣನು ನಿಂತ ಪಕ್ಷ ಹುಸಿನೆಲವಾಗಿತ್ತು. ಆದರೂ ಆತ್ಮಧರ್ಮಶಕ್ತಿಯಿಂದ ರಥವನ್ನು ಮೇಲೆತ್ತುತ್ತಾನೆ. ಆದರೇನು? ದೈವೀ ಪಕ್ಷಕ್ಕೆ ಇದಿರಾಂತ ಆಸುರೀಪಕ್ಷಕ್ಕೇ ಪರವಾಗಿ ನಿಂತು ಅವನ ಅಸಹಾಯ ಸಾಹಸ ನಡೆಯದಾಗುತ್ತದೆ; ವಿಫಲವಾಗುತ್ತದೆ.

ರಥದ ಗಾಲಿಯನ್ನು ಮೇಲೆತ್ತುವಂದು ಕರ್ಣನನ್ನು ಕೊಲ್ಲೆಂದು ಕೃಷ್ಣ ಅರ್ಜುನನನ್ನು ಪ್ರಚೋದಿಸುತ್ತಾನೆ. ಕರ್ಣನಲ್ಲಿ ಸೋದರಭಾವವನ್ನು ಅನುಭವಿಸುತ್ತಿದ್ದ ಅರ್ಜುನ ಹಿಂದು ಮುಂದು ನೋಡುವನಿತರಲ್ಲೆ ಕರ್ಣನ ತೇಜಸ್ಸು ತಾನು ಎತ್ತಣಿಂದ ಬಂದಿತೋ ಅತ್ತಣಿಗೆ ರವಿಯೆಡೆಗೆ ತೆರಳುತ್ತದೆ.

ಪಂಪಕವಿ ತನ್ನಾಳ್ದನಾದ ಅರಿಕೇಸರಿಯನ್ನು ಅರ್ಜುನನೊಡನೆ ತಗುಳ್ಚಿ ತನ್ನ ಕೃತಿರಚನೆಯನ್ನು ಮಾಡಿದ್ದರೂ ಮಹಾಭಾರತದಲ್ಲಿ ಪ್ರತಿ ನಾಯಕನಾದ ಕರ್ಣನ ಪಾತ್ರ ಎಂತಹದೆಂಬುದನ್ನು ಅವನು ವಿಮರ್ಶಕನಾಗಿಯೂ ಪರಿಶೀಲಿಸಿದ್ದಾನೆ. ಮಹಾಭಾರತದ ಎಲ್ಲ ವ್ಯಕ್ತಿಗಳ ಆಳ ಎತ್ತರಗಳನ್ನು ಅಳೆದು ತೂಗಿ ತನ್ನ ಕೃತಿಯ ಕೊನೆಯಲ್ಲಿ ಹೇಳುತ್ತಾನೆ ‘ನನ್ನಿಯೊಳಿನತನಯಂ!’ ಎಂದು.

ಕೊನೆಯದಾಗಿ ಕವಿಯ ಅನುಕಂಪನಶೀಲವಾದ ಮಹಾಪ್ರತಿಭೆ ಕರ್ಣಾವಸಾನದಲ್ಲಿ ಅವನ ಗೌರವಾರ್ಥವಾಗಿ ಈ ಕವನ ಮಣಿಕಲಶದಲ್ಲಿ ಸೌರ ಗಭಸ್ತಿಯನ್ನಿಟ್ಟು ಮಂಗಳಾರತಿಯೆತ್ತಿ ನಾಲ್ಕೆ ಪಂಕ್ತಿಗಳಲ್ಲಿ ಒಂದು ಮಹಾಪ್ರಗಾಥವನ್ನೆ ಹಾಡುತ್ತಿದೆ, ದಿಗ್ಗಜಗಳೆ ಕಿವಿನಿಮಿರಿ ಆಲಿಸುವಂತೆ!

ನೆನೆಯದಿರ್, ಅಣ್ಣ, ಭಾರತದೊಳ್ ಇನ್ ಪೆಱರಾರುಮನ್; ಒಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ; ಕರ್ಣನೊಳ್ ಆರ್ ದೊರೆ? ಕರ್ಣನೇಱು, ಕ
ರ್ಣನ ಕಡುನನ್ನಿ, ಕರ್ಣನಳವು, ಅಂಕದ ಕರ್ಣನ ಚಾಗಮ್ ಎಂದು ಕ
ರ್ಣನ ಪಡೆಮಾತಿನೊಳ್ ಪುದಿದು, ಕರ್ಣರಸಾಯನಮಲ್ತೆ ಭಾರತಂ!

ಹೌದು! ಕರ್ಣರಸಾಯನಮಲ್ತೆ ಭಾರತಂ!

* * *


[1] ಪ್ರೊ. ಎ.ಆರ್.ಕೃಷ್ಣಶಾಸ್ತ್ರಿಗಳಿಗೆ ಅರ್ಪಿಸಿದ ‘ಅಭಿನಂದನೆ’ ಎಂಬ ಸಂಭಾವನಾ ಗ್ರಂಥಕ್ಕೆ ಬರೆದ ಲೇಖನ.

[2] ಕವಿಕೃತಿಯ ಅನನ್ಯಪರ-ತಂತ್ರತೆ ಎಂಬ ವಿಮರ್ಶಪ್ರಬಂಧವನ್ನು ನೋಡಿ, ‘ದ್ರೌಪದಿಯ ಶ್ರೀಮುಡಿ’ಯಲ್ಲಿ.