ಇಂಗ್ಲಿಷ್ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲು ಬಂದಿರುವ ಉಪಾಧ್ಯಾಯ ಸದಸ್ಯರೆ, ಮಹಿಳೆಯರೆ, ಮಹನೀಯರೆ,

ನೀವು ಭಾವಿಸಿರುವುದಕ್ಕಿಂತಲೂ ಅತ್ಯಂತ ಗುರುತರವಾಗಿ ತೋರುತ್ತಿರುವ ಒಂದು ಮಹಾತ್ಕಾರ್ಯದ ನಿರ್ಣಯದಲ್ಲಿ ನೀವು ಇಂದು ತೊಡಗಿದ್ದೀರಿ-ಎಂದು ನನ್ನ ಭಾವನೆ. ಏಕೆಂದರೆ, ಭಾರತೀಯ ಜೀವನದ ಪ್ರಗತಿಯ ಮೂಲಸೂತ್ರಗಳನ್ನು ಹಿಡಿದು ನಿರ್ಣಯಿಸಬೇಕಾದ ಭಾಷೆಯ ವಿಷಯವಾಗಿ ತಾವೆಲ್ಲ ಇಲ್ಲಿ ನೆರೆದು ವಿಚಾರ ಮಾಡಿ ನಿರ್ದಿಷ್ಟವಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದೀರಿ. ಇದು ಸರಿಯೆಂದು ತೋರುತ್ತದೆ. ಇಂಗ್ಲಿಷ್ ಭಾಷೆ ನಮ್ಮನ್ನು ಆಳುತ್ತಿದ್ದ ಬ್ರಿಟಿಷರ ಭಾಷೆಯಾಗಿದ್ದಾಗ ಬಹುಶಃ ಆ ಭಾಷೆಗೆ ರಕ್ಷಣೆ ಪೋಷಣೆಗಳನ್ನು ಕೊಡುವುದು ಅನಾವಶ್ಯಕವಾಗಿದ್ದಿತು. ಏಕೆಂದರೆ, ಆಳುವವರ ಭಾಷೆ ಆಳುವ ಭಾಷೆ; ಒಂದು ರೀತಿಯಾದ ದಂಡ ವಿಧಾನದಿಂದಲೆ ಅದು ನಮ್ಮನ್ನು ಆಕರ್ಷಿಸುತ್ತಿದ್ದಿತು. ಅಲ್ಲದೆ, ಅದರಿಂದ ಆಗುತ್ತಿದ್ದ ಆರ್ಥಿಕ ಪ್ರಯೋಜನವೂ ಅದರ ಅಭ್ಯಾಸಕ್ಕೆ ಒಂದು ಮಹತ್ ಪ್ರೇರಣೆಯಾಗಿತ್ತು.

ಈ ಮನೋಭಾವ ಕ್ರಮೇಣ ಬದಲಾಯಿಸಿತು. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಮಹತ್‌ಸಂಗ್ರಾಮ ನಡೆಯುತ್ತಿದ್ದಾಗ ಇಂಗ್ಲಿಷರನ್ನೆಂತೊ ಇಂಗ್ಲಿಷ್ ಭಾಷೆಯನ್ನೂ ಅಂತೆಯೆ ವೈರಿಯೆಂದು ಭಾವಿಸಲಾಯಿತು. ಆದರೆ ಅಂಥ ಭಯಂಕರ ಸತ್ಯಾಗ್ರಹ ಸಂಗ್ರಾಮದ ಸಂದರ್ಭದಲ್ಲಿಯೂ, ಪರಕೀಯರ ಮತ್ತು ಅವರಿಂದ ಪ್ರೇರಿತರಾದವರ ಲಾಠಿಯ ಏಟು ನಮ್ಮವರ ಮೈಯನ್ನು ಮುಪ್ಪು ಮಾಡುತ್ತಿದ್ದ ಕಾಲದಲ್ಲಿಯೂ ನಾನು ಇಂಗ್ಲಿಷ್ ಭಾಷೆಯನ್ನು ಸ್ವಲ್ಪವೂ ದ್ವೇಷಿಸಿದವನಲ್ಲ. ಅದರ ವಿಚಾರವಾಗಿ ನನ್ನ ಗೌರವ ಸ್ವಲ್ಪವೂ ಕಡಿಮೆಯಾಗಲಿಲ್ಲ. ಭಾಷೆಯನ್ನೂ ಮತ್ತು ಭಾಷೆಯಾಡುತ್ತಿದ್ದವನನ್ನೂ ಒಂದೇ ಕಾರಣಕ್ಕಾಗಿ ದ್ವೇಷಿಸುವುದು ಪಶುಮನೋ ವೃತ್ತಿಯೆಂದು ನನ್ನ ಭಾವನೆ.

ನನ್ನ ವಿಧ್ಯಾರ್ಥಿದಶೆಯಲ್ಲಿ ಕನ್ನಡವೆಂಬುದು ಏನೋ ಪರೀಕ್ಷೆಗಾಗಿ ಓದುವ ಒಂದು ವಿಷಯವಾಗಿತ್ತು; ನನ್ನ ಅಭಿಮಾನವೆಲ್ಲ ಇಂಗ್ಲಿಷಿಗೆ ಮೀಸಲಾಗಿತ್ತು. ಬಹುಶಃ ನಿಮಗಾರಿಗೂ ಎಂದೂ ಇಲ್ಲದೆ ಇರುವಷ್ಟು ತಿರಸ್ಕಾರ (ಹಾಗೆಂದರೆ ಪ್ರಶಂಸೆಯಾದೀತೊ ಏನೊ!) ಅಥವಾ ಉದಾಸೀನವಿತ್ತು, ನನಗೆ ಕನ್ನಡದ ಮೇಲೆ. ನಾನು ಹೈಸ್ಕೂಲು ಮೊದಲನೆಯ ತರಗತಿಯಿಂದ ಮೊದಲ ವರ್ಷದ ಬಿ.ಎ. ಮುಗಿಯುವವರೆಗೆ ಇಂಗ್ಲಿಷಿನ ಕಟ್ಟಭಿಮಾನಿಯಾಗಿದ್ದೆ. ಇಂಗ್ಲಿಷ್ ಕವಿಗಳು, ನಾಟಕಕಾರರು (ಕಾದಂಬರಿಗಳನ್ನು ನಾನು ಮೂಸಿಯೂ ನೋಡಿದವನಲ್ಲ) ನನ್ನ ಜೀವ ಜೀವಾಳವಾಗಿದ್ದರು. ಜಗತ್ತಿನ ಪ್ರಸಿದ್ಧ ಕವಿಯಾಗಬೇಕೆಂದು ನಾನು ಭ್ರಮಿಸಿದ್ದೆ. ಇಂಗ್ಲಿಷಿನಲ್ಲಿಯೆ ಕವಿತೆಗಳನ್ನೂ ಪ್ರಾರಂಭಿಸಿ ಹೈಸ್ಕೂಲಿನ ಕಡೆಯ ತರಗತಿಯಲ್ಲಿ ಓದುವ ವೇಳೆಗೆ “Beginner’s Muse” ಎಂಬ ಹೆಸರಿನಿಂದ ಇಂಗ್ಲಿಷ್ ಕವನ ಸಂಗ್ರಹವೊಂದನ್ನು ಅಚ್ಚು ಹಾಕಿಸಿದೆ. ಆ ಕವನಗಳೆಲ್ಲ ಕೇವಲ ಅನುಕರಣದ ಕವನಗಳು. ಮಿಲ್ಟನ್, ವರ್ಡ್ಸ್ ವರ್ತ್, ಷೆಲ್ಲಿ-ಮೊದಲಾದ ಕವಿಗಳಿಂದ ಮತ್ತು ಬ್ಯಾಲೆಡ್ ಕವನಗಳಲಿಂದ ಭಾವಗಳನ್ನು ಎತ್ತಿಕೊಂಡು ಕವನಗಳನ್ನು ರಚಿಸಿದೆ. ನನ್ನ ಮನಸ್ಸು ಕ್ರಮೇಣ ದಾರ್ಶನಿಕ ಕವಿಗಳ ಕಡೆಗೆ ತಿರುಗಿತು. ಗ್ರೀಸ್, ರೋಮ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್-ಮೊದಲಾದ ದೇಶಗಳ ತತ್ತ್ವಶಾಸ್ತ್ರಜ್ಞರ ಕೃತಿಗಳನ್ನೆಲ್ಲ ಇಂಗ್ಲಿಷ್ ಭಾಷೆಯ ಮೂಲಕ ತಕ್ಕಮಟ್ಟಿಗೆ ಅಧ್ಯಯನ ಮಾಡಿದೆ. ಇಷ್ಟೇ ಅಲ್ಲ, ನಮ್ಮ ಸ್ವಂತ ಆಸ್ತಿಯಾದ ವೇದ, ಉಪನಿಷತ್ತು, ದರ್ಶನಗಳನ್ನೂ ಇಂಗ್ಲಿಷ್ ಮುಖಾಂತರವಾಗಿಯೆ ಮೊದಲು ನಾನು ಅಧ್ಯಯನ ಮಾಡಿದ್ದು. ದೇವಭಾಷೆಯಲ್ಲಿನ ಪವಿತ್ರ ವಿಷಯಗಳನ್ನು ಓದಬಾರದು, ಕೇಳಬಾರದು ಎಂದು ಭಯ ಭೀತಿಗಳಿದ್ದ ಕಾಲದಲ್ಲಿ ಇಂಗ್ಲಿಷ್ ತನ್ನ ಭಾಷಾಂತರಗಳ ಮೂಲಕ ಇವುಗಳಿಗೆಲ್ಲ ಪ್ರವೇಶವನ್ನು ನೀಡುದುದರಿಂದ ಅದಕ್ಕೆ ಸಂಸ್ಕೃತಕ್ಕಿಂತಲೂ ಹೆಚ್ಚು ಗೌರವ ಸಲ್ಲುವುದು ಸ್ವಾಭಾವಿಕವಾಗಿತ್ತು. ನಾನು ಅದೇ ದಿಕ್ಕಿನಲ್ಲಿ, ಅದೇ ದಾರಿಯಲ್ಲಿ ಮುಂದುವರಿದಿದ್ದರೆ ಏನಾಗುತ್ತಿತ್ತೊ! ನನ್ನ ದಾರಿ ದಿಕ್ಕುಗಳನ್ನು ಬದಲಾಯಿಸಿದವರು ಒಬ್ಬ ಐರಿಷ್ ಕವಿ, ಕಸಿನ್ಸ್ ಅವರು. ಅವರು ಮೈಸೂರಿಗೆ ಬಂದಿದ್ದಾಗ ನನ್ನ ಅಧ್ಯಾಪಕರೊಬ್ಬರ ಪ್ರಚೋದನೆಯಂತೆ ನನ್ನ ಇಂಗ್ಲಿಷ್ ಕವನಗಳನ್ನು ಅವರಿಗೆ ತೋರಿಸಿದೆ. ಅವರು ಆ ಕವನಗಳನ್ನೆಲ್ಲ ಓದಿ, ನನ್ನ ಖಾದಿ ಉಡುಪನ್ನು ಆಮೂಲಚೂಲವಾಗಿ ಗಮನಿಸಿ, “ಉಡುಪು ಖಾದಿ, ಕವನ ಇಂಗ್ಲಿಷ್-ಹೀಗೇಕೆ? ನಿಮ್ಮ ಭಾಷೆ ಇಲ್ಲವೆ? ಅದರಲ್ಲಿ ಬರೆಯಲಾಗುವುದಿಲ್ಲವೆ?” ಎಂದು ಕೇಳಿದರು. ಪ್ರಶಂಸೆಯನ್ನು ಕೇಳಲು ಹೋಗಿದ್ದ ನನಗೆ ವರ ಟೀಕೆ ಸರಿದೋರಲಿಲ್ಲ. ಅವರನ್ನು ಒಬ್ಬ ಆಂಗ್ಲ ‘ಕಾಂಗ್ರೆಸ್ ವ್ಯಕ್ತಿ’ಯೆಂದು ಮನಸ್ಸಿನಲ್ಲಿಯೆ ಗೊಣಗಿಕೊಂಡು, “ಇಂಥ ಗಹನ ವಿಚಾರಗಳನ್ನು ಕನ್ನಡದಲ್ಲಿ ಹೇಳುವುದು ಅಸಾಧ್ಯ. ಅದರ ಛಂದಸ್ಸಿನಲ್ಲಿ ಯಾವ ವೈವಿಧ್ಯವೂ ಇಲ್ಲ” ಎಂದೆ. ಅವರು ಒಂದೇ ಮಾತು ಹೇಳಿದರು. “ಕನ್ನಡದಲ್ಲಿ ಏನಿದೆಯೊ ನನಗೆ ಗೊತ್ತಿಲ್ಲ; ಆದರೆ ಬಂಗಾಳಿಯನ್ನು ಕುರಿತು ಹೇಳುವುದಾದರೆ ಹಿಂದೆ ಇಲ್ಲದುದನ್ನು ಇಂದು ಅವರು ಸೃಷ್ಟಿಸಿಕೊಂಡಿದ್ದಾರೆ. ರವೀಂದ್ರನಾಥ ಠಾಕೂರರು ಛಂದಸ್ಸಿನ ವೈವಿಧ್ಯದಲ್ಲಿ ಇಂಗ್ಲಿಷನ್ನು ಮೀರಿಸಿದ್ದಾರೆ. ನೀವೂ ಹಾಗೆ ಮಾಡಬೇಕು” ಎಂದರು. ನಾನು ಅದೆಲ್ಲ ಅಸಾಧ್ಯವೆಂದುಕೊಂಡು ಕೇವಲ ನಿರಾಶೆಯಿಂದ ಹೊರಗೆ ಬಂದೆ. ಬರುವ ದಾರಿಯಲ್ಲಿ ಕಸಿನ್ಸ್ ಅವರ ಹೇಳಿಕೆಯ ಪರಿಣಾಮವಾಗಿಯೊ ಅಥವಾ ಅದರಿಂದ ನನ್ನ ಮನಸ್ಸಿನ ಮೇಲಾದ ಪರಿಣಾಮದಿಂದಲೂ ಒಂದು ಕನ್ನಡ ಹಾಡು ನನ್ನ ಮನಸ್ಸಿನಲ್ಲಿ ಮೂಡಿ ಬಂದಿತು. ಅದನ್ನು ಈಗ ಯಾರಾದರೂ ಕೇಳಿದರೆ ಬಿದ್ದು ಬಿದ್ದು ನಕ್ಕಾರು. ಆ ಹಾಡನ್ನು ನನ್ನ ಕೊಠಡಿಯಲ್ಲಿದ್ದ ಸಹಪಾಠಿ ರಾಗಸಹಿತವಾಗಿ ಹಾಡಿದರು. ನಮ್ಮ ಸಂಗೀತ ಗಾರರು ಏಣನ್ನು ಕೊಟ್ಟರೂ ತಮ್ಮ ಕಲಾಮಹಿಮೆಯಿಂದ ಅದನ್ನು ಅಪರಂಜಿಯಾಗಿ ಮಾಡುತ್ತಾರೆ. ನನ್ನ ಗೆಳೆಯರು ಒಳ್ಳೆಯ ಸಂಗೀತಗಾರರು; ಕವನವನ್ನು ಸೊಗಸಾಗಿ ಹಾಡಿದರು. ಅದರ ಯೋಗ್ಯತೆಯಿಂದಲ್ಲದಿದ್ದರೂ ಸಂಗೀತದ ಪ್ರಭಾವದಿಂದ ಅದು ಬಲು ಸೊಗಸಾಗಿ ಕಾಣಿಸಿತು. ಆಗ ನನಗನಿಸಿತು-ಇಂಗ್ಲಿಷಿನಲ್ಲಿ ಬರೆದರೆ ಹಾಡುವುದಕ್ಕಾಗುವುದಿಲ್ಲ. ರಾಗವಾಗಿ ಓದುವುದಕ್ಕೂ ಆಗುವುದಿಲ್ಲ. ಕನ್ನಡದಲ್ಲಿ ಬರೆದರೆ ಈ ಎರಡೂ ಉಂಟು-ಎಂದು. ನನ್ನನ್ನು ಕನ್ನಡದಲ್ಲಿ ಬರೆಯಲು ಪ್ರೇರಿಸಿದ ಸಂದರ್ಭವಿದು.

ನಾನು ಸವ್ಯಸಾಚಿಯಾಗುವೆನೆಂಬುದು ಕೆಲಕಾಲ ನನ್ನ ಕನಸಾಯಿತು. ಒಂದು ಕೈಯ್ಯಲ್ಲಿ ಇಂಗ್ಲಿಷ್‌, ಮತ್ತೊಂದು ಕೈಯ್ಯಲ್ಲಿ ಕನ್ನಡ ನನ್ನ ಹಿಡಿಕೆಯಲ್ಲಿ ನಿಲ್ಲುವುದೆಂದು ನಾನು ಭಾವಿಸಿದ್ದೆ. ಆದರೆ ಕವಿತಾದೇವತೆ ಏಕ ಪತ್ನೀವ್ರತಸ್ಥನಂತೆ ವ್ಯವಹರಿಸುವವಳು. ಆದ್ದರಿಂದಲೆ ಎರಡನ್ನೂ ಮುಂದುವರಿಸಲು ನನ್ನನ್ನು ಬಿಡಲಿಲ್ಲ. ಸ್ವಭಾವ ಸಹಜವಾಗಿಯೆ ನಾನು ಕನ್ನಡದ ಕಣಕ್ಕಿಳಿದೆ. ಅದು ಕನ್ನಡದ ನವೋದಯವಾಗುತ್ತಿದ್ದ ಕಾಲ. ದಿವಂತ ಬಿ.ಎಂ.ಶ್ರೀ ಮೊದಲಾದವರ ಕವನಗಳು ಆಗತಾನೆ ಮಾಸಪತ್ರಿಕೆಗಳಲ್ಲಿ ಬರುತ್ತಿದ್ದುವು. ಮನಸ್ಸು ಅವುಗಳ ಕಡೆ ಒಲಿಯಿತು; ಕನ್ನಡದಲ್ಲಿ ಬರಹ ಮುಂದೆ ಸಾಗಿತು; ನನ್ನ ಭಾವನೆ ಬದಲಾಯಿಸಿತು. ಪ್ರೊ|| ಶಾಂತವೀರಪ್ಪನವರು ಇಂಗ್ಲಿಷ್ ಸಾಹಿತ್ಯವನ್ನು ಈಗತಾನೆ ಬೇಕಾದಷ್ಟು ಹೊಗಳಿದ್ದಾರೆ. ನಮ್ಮ ಸಾಹಿತ್ಯ ಪರಿಚಯವಾಗುವುದಕ್ಕೆ ಮುಂಚೆ ನನಗೂ ಇಂಗ್ಲಿಷ್ ಎಂಬುದು ಅದ್ವಿತೀಯ ಎಂಬ ಭಾವನೆ ಇತ್ತು. ಅದನ್ನು ಅಲ್ಲಗಳೆದವರೊಡನೆ ದೈಹಿಕ ಸ್ಪರ್ಧೆಗೂ ಸಿದ್ಧನಾಗುವಷ್ಟು ನಾನು ಇಂಗ್ಲಿಷ್ ಪ್ರೇಮಿಯಾಗಿದ್ದೆ. ನಮ್ಮ ಸಾಹಿತ್ಯ ದರ್ಶನಗಳ ಪರಿಚಯವಾದ ಮೇಲೆ ಆ ದೃಷ್ಟಿ ಬದಲಾಯಿಸಿತು.

‘ನಮ್ಮ’ ಎಂದು ಹೇಳಿದಾಗ ಕನ್ನಡ ಸಂಸ್ಕೃತಗಳೆರಡೂ ಎಂದು ನನ್ನ ಅರ್ಥ. ಭಾರತೀಯ ಭಾಷೆಗಳಿಗೆಲ್ಲಾ ಸಂಸ್ಕೃತ ತಾಯಿನೆಲೆಯಾಗಿ ಹಿಂದೆ ನಿಂತಿದೆ. ಕನ್ನಡ ಚೆನ್ನಾಗಿ ತಿಳಿದವರೆಂದರೆ ಸಂಸ್ಕೃತ ಬಹುಮಟ್ಟಿಗೆ೪ ತಿಳಿದವರೆಂದೇ ಅರ್ಥ. ಆದ್ದರಿಂದ ನಮ್ಮ ಸಾಹಿತ್ಯ ದರ್ಶನ ಗ್ರಂಥಗಳನ್ನು ಪರಿಚಯ ಮಾಡಿಕೊಂಡ ಮೇಲೆ ನನಗನಿಸಿತು; ನಾವು ಎಷ್ಟಾದರೂ ಹಿಮಾಚಲಯ ಮಕ್ಕಳು; ಪಾಶ್ಚಾತ್ಯರು ಆಲ್ಪ್ಸ್ ಪರ್ವತದ ಮಕ್ಕಳು ಎಂದು! ಅವರು ವಿಜ್ಞಾನದಲ್ಲಿ ಬಹು ಮುಂದುವರಿದ್ದಾದರೆ.  ಆದರೆ ದರ್ಶನದಲ್ಲಿ ಅವರನ್ನು ಕುಬ್ಜರೆಂದು ಕರೆಯಬೇಕಾಗುತ್ತದೆ. ಇನ್ನು ಮುಂದೆ ನಾವು ಏರಲಿರುವ ಎತ್ತರ ಭಗವತಿ ವಾಗ್ಧೇವಿ ನಮ್ಮಲ್ಲಿ ಸೃಷ್ಟಿಸುವ ಮಹಾಕವಿಗಳನ್ನೂ ಮಹಾ ದಾರ್ಶನಿಕರನ್ನೂ ಅವಲಂಬಿಸುತ್ತದೆ. ನಮ್ಮ ಭಾಷೆಗೆ ಜಗತ್ತಿನ ಯಾವ ಭಾಷೆಯ ಶ್ರೀಮಂತತಗಾದರೂ ಹಗಲೆಣೆಯಾಗಿ ನಿಲ್ಲುವ ಶಕ್ತಿಯಿದೆ.

ನಾನು ಇಂಗ್ಲಿಷ್ ಭಾಷೆಯ ದ್ವೇಷಿಯಲ್ಲ. (ಪ್ರೊ|| ಶಾಂತವೀರಪ್ಪನವರೂ ‘ಅಲ್ಲ’ ಎಂದು ಹೇಳಿದ್ದಾರೆ) ಈಗಲೂ ನಾನು ಬಹುಶಃ ಕನ್ನಡ ಪುಸ್ತಕಗಳನ್ನು ಓದುವುದಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಗ್ರಂಥಗಳನ್ನು ಓದುತ್ತಿದ್ದೇನೆ. ಇದಕ್ಕೆ ಮುಖ್ಯ ಕಾರಣವೆಂದರೆ ಬೇರೆ ಬೇರೆ ಅತಿ ವಿವರದ ಶಾಸ್ತ್ರಗಳನ್ನು ಓದುವ ಅಭೀಪ್ಸೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಭಾಷಣದಲ್ಲಿ ನಾನು ಮೂರು ಮುಖ್ಯ ವಿಷಯಗಳನ್ನು ಪ್ರತಿಪಾದಿಸಿ ಮಾತನಾಡಿದ್ದೇನೆ. ನಮ್ಮಲ್ಲಿ ವಿಜ್ಞಾನದಲ್ಲಾಗಲಿ ಸಾಹಿತ್ಯದಲ್ಲಾಗಲಿ ಉತ್ತಮ ಕಾರ್ಯವನ್ನು ಮಾಡಬೇಕೆಂದಿರುವವರಿಗೆ ಮೂರು ಭಾಷೆಗಳ ಸಮರ್ಪಕವಾದ ಪರಿಚಯ ಅತ್ಯಂತ ಆವಶ್ಯಕ. ಮೊದಲನೆಯದಾಗಿ ಪ್ರಾದೇಶಿಕ ಭಾಷೆ, ಈಗ ನಮ್ಮ ಕನ್ನಡ. ಎರಡನೆಯದಾಗಿ ಅಂತರರಾಷ್ಟ್ರೀಯವಾಗಿ ಸಮಸ್ತ ತಿಳಿವಳಿಕೆಯ ಭಂಡಾರಕ್ಕೂ ಗವಾಕ್ಷವನ್ನು ತೆರೆಯುವ ಇಂಗ್ಲಿಷ್. ಮೂರನೆಯದಾಗಿ ಭಾರತೀಯ ತತ್ತ್ವಶಾಸ್ತ್ರ ಸಾಹಿತ್ಯಾದಿ ವಿಚಾರಗಳನ್ನು ಅರಿಯಲು ಸಾಧಕವಾದ ಸಂಸ್ಕೃತ. ವಿಶೇಷವಾದ ಜ್ಞಾನವನ್ನು ಪಡೆಯುವವರಿಗೆ ಈ ಮೂರು ಭಾಷೆಗಳ ಉತ್ತಮಜ್ಞಾನ ಅತ್ಯಂತ ಆವಶ್ಯಕ. ಕೇವಲ ತೇಲಿಕೆಯ ನೀರು ನೀರಾದ ಪರಿಚಯ ಸಾಲದು. ಈಚೆಗೆ ನಮ್ಮ ಬಿ.ಎ., ಬಿ.ಎಸ್‌ಸಿ. ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹೋಗುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವೃತ್ತಾಂತ ಪತ್ರಿಕೆಗಳನ್ನು ಓದಿ ಅರ್ಥಮಾಡಿಕೊಳ್ಳುವುದೂ ಕಷ್ಟವಾಗಿದೆ. ಸಾಮಾನ್ಯರ ವಿಚಾರ ಬೇರೆ. ಸಂಶೋಧಕರಿಗೆ, ತಜ್ಞರಿಗೆ ಇಂಗ್ಲಿಷಿನ ಆಳವಾದ ಪರಿಚಯ ಆವಶ್ಯಕ.

ಇಲ್ಲಿ ನೀವೆಲ್ಲರೂ ಸೇರಿರುವುದು ವಿಚಾರ ಮಾಡುವುದಕ್ಕಾಗಿ. ಈ ವಿಚಾರ ಗೋಷ್ಠಿಯಲ್ಲಿ ನಮ್ಮ ನಾಡಿನ ಹಿತವನ್ನು ಕುರಿತು ಸಮಾಲೋಚನೆ ಮಾಡುವುದು ಅತ್ಯಂತ ಆವಶ್ಯಕ. ನಮ್ಮ ನಾಡಿನ ಲಕ್ಷಾಂತರ ಮಕ್ಕಳ ಉದ್ಧಾರ ಅಥವಾ ಅಧೋಗತಿ ನಮ್ಮ ನಿರ್ಣಯಗಳ ಮೇಲೆ ನಿಂತಿದೆ. ವಿವೇಚನೆಯಿಂದ ನಡೆದುಕೊಂಡರೆ ವಿದ್ಯಾರ್ಜನೆಯ ಹೆಸರಿನಲ್ಲಿ ಹಾಳಾಗುತ್ತಿರುವ ಕೋಟ್ಯಂತರ ರೂಪಾಯಿಗಳನ್ನು ಸಾರ್ಥಕಗೊಳಿಸಬಹುದು. ನಾನು ಪರಾಧ್ಯಾಪಕನಾಗಿದ್ದಾಗ ಈ ವಿಚಾರ ಅರ್ಥವಾಗುತ್ತಿರಲಿಲ್ಲ. ವೈಸ್‌ಛಾನ್ಸಲರ್ ಆದಮೇಲೆ ಪ್ರತಿ ಪರೀಕ್ಷೆ ನಡೆದಾಗಲೂ ಆಗುವ ಆರ್ಥಿಕ ಮಾನಸಿಕ ನಷ್ಟವನ್ನು ಕಂಡು, ನಮ್ಮ ದೇಶದ ದುಃಸ್ಥಿತಿಯನ್ನು ನೋಡಿ ಮರುಗುವಂತಾಗಿದೆ. ಈ ಸ್ಥಿತಿಯಲ್ಲಿ ನಾವು ಏನು ಮಾಡಬೇಕು? ಉಸುಬಿನಲ್ಲಿ ಸಿಕ್ಕಿಬಿದ್ದಿದ್ದೇವೆ. ಉಪಾಧ್ಯಾಯರೂ ಮಕ್ಕಳೂ ಈ ಉಸುಬಿನಲ್ಲಿ ಸಿಕ್ಕಿ ನರಳುತ್ತಿದ್ದಾರೆ. ಯಾರು ಯಾರನ್ನು ಎತ್ತುವುದು? ಈ ಸಂಕಟದಿಂದ ಪಾರಾಗುವುದೆ ಕಷ್ಟವಾಗಿದೆ. ಈ ವಿಚಾರಗಳನ್ನು ಚೆನ್ನಾಗಿ ಮನನಮಾಡಿ ದೇಶದ ಅಭ್ಯುದಯದ ದೃಷ್ಟಿಯಿಂದ ನೀವು ನಿರ್ಣಯಗಳನ್ನು ಮಾಡಬೇಕು. ನನ್ನ ಕೆಲವು ಅಭಿಪ್ರಾಯಗಳನ್ನು ನಿಮ್ಮ ಮುಂದೆ ಹೇಳುತ್ತೇನೆ.

ಸ್ವಾತಂತ್ರ್ಯಪೂರ್ವದಲ್ಲಿ ಇಂಗ್ಲಿಷಿನಲ್ಲಿ ಸ್ಥಾನ ಈಗ ಸಂಪೂರ್ಣವಾಗಿ ಬದಲಾವಣೆ ಹೊಂದಿದೆ. ಹಿಂದೆ ದೇಶಭಾಷೆಗಳು ಅವನತ ಮತ್ತು ಅವಮಾನಿತಸ್ಥಿತಿಯಲ್ಲಿದ್ದುವು. ಆದರೆ ಈಗ ಮೂವತ್ತು ವರ್ಷಗಳಲ್ಲಿ ಕಾಲ ಬದಲಾಯಿಸಿದೆ. ಪ್ರಥಮವರ್ಗಕ್ಕೆ ಸೇರಿದ ಕೃತಿಗಳು ಕನ್ನಡದಲ್ಲಿ ಮೂಡಿವೆ. ಇತರ ದೇಶಭಾಷೆಗಳಲ್ಲಿ ಏನಾಗಿದೆ ಎಂಬುದನ್ನು ಅಧಿಕಾರವಾಣಿಯಿಂದ ಮಾತಾಡಲು ನನಗೆ ಸಾಧ್ಯವಿಲ್ಲ. ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿರುವ ”Contemporary Literature” ಎಂಬ ಪುಸ್ತಕ ಭಾರತದ ಇತರ ದೇಶಭಾಷೆಗಳು ಸಾಧಿಸಿರುವ ಪ್ರಗತಿ ಅಲ್ಪವಾದುದಲ್ಲ ಎಂದು ತಿಳಿಸುತ್ತದೆ.

ನಾವು ಇಂದು ಇಂಗ್ಲಿಷ್ ಭಾಷೆಯನ್ನು ಅಂತರರಾಷ್ಟ್ರೀಯ ಭಾಷೆ ಎಂದು ವಾದಿಸುತ್ತಿದ್ದೇವೆ. ಯಾವ ದೇಶಕ್ಕೆ ಹೋದರೂ ಇಂಗ್ಲಿಷ್ ತಿಳಿದವರು ಕೆಲವರಾದರೂ ಇರುವುದರಿಂದ ಇಂಗ್ಲಿಷ್‌ನಲ್ಲಿ ವ್ಯವಹರಿಸಬಹುದು. ಈ ದೃಷ್ಟಿಯಲ್ಲಿ ಇಂಗ್ಲಿಷ್ ಅಂತರರಾಷ್ಟ್ರೀಯ ಭಾಷೆ. ಆದರೆ ನಾವು ಭಾವಿಸಿದ ಪ್ರಮಾಣದಲ್ಲಿ ಇಂಗ್ಲಿಷ್‌ನ ವ್ಯಾಪ್ತಿ ಅನೇಕ ದೇಶಗಳಲ್ಲಿ ಕಂಡುಬರುವುದಿಲ್ಲ. ಯಾವ ದೇಶಕ್ಕೆ ಹೋದರೂ ಇಂಗ್ಲಿಷ್ ತಿಳಿದವರು ಕೆಲವರಾದರೂ ಇರುತ್ತಾರೆ, ನಿಜ. ಇಂಗ್ಲಿಷ್ ಭಾಷೆಯಲ್ಲಿ ಇತರ ದೇಶಗಳ ಉತ್ತಮ ಕೃತಿಗಳೆಲ್ಲ ಭಾಷಾಂತರವಾಗಿವೆ; ಆದ್ದರಿಂದ ಇಂಗ್ಲಿಷ್ ಭಾಷೆ ಕರಗತವಾದರೆ ಸ್ವಲ್ಪ ಹೆಚ್ಚು ಕಡಿಮೆ ಪ್ರಪಂಚದ ಸಾಹಿತ್ಯ, ವಿಜ್ಞಾನ ಮೊದಲಾದ ಜ್ಞಾನವನ್ನೆಲ್ಲ ಬಹುಮಟ್ಟಿಗೆ ತಿಳಿಯಲು ಸಹಾಯಕವಾಗುತ್ತದೆ. ಆದರೆ ಈಗ ಸಂಸ್ಕೃತವನ್ನು ಒಳಗೊಂಡು ನಮ್ಮ ದೇಶಭಾಷೆಗಳಲ್ಲಿರುವ ಸಂಪತ್ತು ಹಾಗೂ ನಮಗೆ ಬರಬಹುದಾದ ಸಂಪತ್ತುಗಳನ್ನು ಭಾವಿಸಿದಾಗ ನಾವೇನೂ ಕುಗ್ಗಬೇಕಾಗಿಲ್ಲ, ತತ್ತರಿಸಬೇಕಾಗಿಲ್ಲ. ಈಗ ಇಂಗ್ಲಿಷ್ ಇನ್ನೂರು ಮುನ್ನೂರು ವರ್ಷಗಳಲ್ಲಿ ಸಾಧಿಸಿರುವುದನ್ನು ನಾವು ಇನ್ನು ಐವತ್ತು ಅರುವತ್ತು ವರ್ಷಗಳಲ್ಲಿಯೆ ಸಾಧಿಸಬಹುದು. ಈಗ ಇಂಗ್ಲಿಷ್ ದೊಡ್ಡದೊ ಅಲ್ಲವೊ ಎಂಬ ಪ್ರಶ್ನೆಯಲ್ಲ, ನಮ್ಮ ಮುಂದಿರುವುದು. ಇಂಗ್ಲಿಷನ್ನು ಎಷ್ಟರಮಟ್ಟಿಗೆ ಬಳಸಬೇಕೆಂಬುದನ್ನು ನಾವು ಇಂದು ನಿಶ್ಚಯಸಬೇಕಾಗಿದೆ.

ಸ್ವಾತಂತ್ರ್ಯೋತ್ತರದ ತರುವಾಯ ಇಂಗ್ಲಿಷ್ ವಿದ್ಯಾಭ್ಯಾಸದ ರೀತಿ ವ್ಯತ್ಯಾಸವಾಗಿದೆ. ಹಿಂದೆ ಒಂದು ತರಗತಿಯಲ್ಲಿ ಹದಿನೈದು ಮಂದಿ ವಿದ್ಯಾರ್ಥಿಗಳಿರುತ್ತಿದ್ದರು. ಆಗ ಮನೆಯಲ್ಲಿ ”Private Tution” ಕೊಡಿಸುವ ಆವಶ್ಯಕತೆ ಇರಲಿಲ್ಲ. ತರಗತಿಯಲ್ಲಿ ಉಪಾಧ್ಯಾಯರು ಬೋಧನೆಯಲ್ಲಿ ಹೆಚ್ಚು ಶ್ರದ್ಧೆ ವಹಿಸುತ್ತಿದ್ದರು. ತಪ್ಪುಗಳನ್ನು ಹೇಳಿ ಬರೆಯಿಸಿ, ತಪ್ಪು ಹೇಲಿದ ವಿದ್ಯಾರ್ಥಿಯ ಕಿವಿಯನ್ನು ಸರಿಯಾಗಿ ಹೇಳಿದ ವಿದ್ಯಾರ್ಥಿಯ ಕೈಯಿಂದ ಹಿಂಡಿಸಿ, ಬಾಯಿಪಾಠ ಮಾಡಿಸಿ, ಇಂತಹ ಅನೇಕ ‘ಡ್ರೀಲ್’ ಮಾಡಿಸಿ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಆಗ ಶಾಲೆಗೆ ಬರುತ್ತಿದ್ದ ಮಕ್ಕಳು ಕೂಡ ಉತ್ತಮವರ್ಗದಿಂದ, ಶ್ರೀಮಂತರ ಮನೆಗಳಿಂದ ಬರುತ್ತಿದ್ದರು. ಬರುತ್ತ ಬರುತ್ತ ಈ ಹದಿನೈದು ಜನವಿರುತ್ತಿದ್ದ ತರಗತಿಯ ಸಂಖ್ಯೆ ಬೆಳೆದು ಇಂದು ನೂರೈವತ್ತಾಗಿದೆ. ಶತಮಾನಗಳಿಂದ ವಿದ್ಯೆ, ಅಕ್ಷರ, ಸಂಸ್ಕೃತಿ ಎಂಬುದನ್ನು ಮೂಸಿಕೂಡ ನೋಡದೆ ಇರುವ ಮನೆತನಗಳಿಂದ ಬಂದ ಮಕ್ಕಳು ಇಂದು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಶ್ರೀಮಂತರ ಅಥವಾ ವಿದ್ಯಾವಂತರ ಮಕ್ಕಳಿಗಿರುವ ”Private Tuition” (ಮನೆಯ ಪಾಠದ) ಸೌಲಭ್ಯ ಒಂದೂ ಇಲ್ಲ. ಈ ಮಕ್ಕಳಿಗೆ ಉತ್ತಮ ಆರ್ಥಿಕ ಸಾಮರ್ಥ್ಯವನ್ನು ಪಡೆಯುವ ಅನುಕೂಲಗಳಿಲ್ಲ; ಮನೆಯಲ್ಲಿ ಸಂಸ್ಕೃತಿಯ ವಾತಾವರಣವೂ ಇಲ್ಲ. ಇಂತಹ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾಗಿದೆ. ಹಿಂದೆ ಹೈಸ್ಕೂಲ್ ಮತ್ತು ಕಾಲೇಜುಗಳು ಜಿಲ್ಲೆಯ ಕೇಂದ್ರಗಳಲ್ಲಿ ಅಥವಾ ಮೈಸೂರು ಬೆಂಗಳೂರು ಅಂತಹ ನಗರಗಳಲ್ಲಿದ್ದುವು. ಅಲ್ಲಿ ವ್ಯಾಸಂಗ ಮಾಡುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಈಗ ದೊಡ್ಡ ದೊಡ್ಡ ಹಳ್ಳಿಗಳಲ್ಲಿಯೂ ಹೈಸ್ಕೂಲುಗಳಿವೆ. ಕಾಲೇಜುಗಳೂ ಪ್ರಾರಂಬವಾಗುತ್ತಿವೆ. ಹಿಂದೆ ಪ್ರಾಥಮಿಕಶಾಲೆಯನ್ನು ತೆರೆಯುವುದೇ ಕಷ್ಟವಾಗಿದ್ದ ಕಡೆ ಇಂದು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಬದಲಾಯಿಸಿರುವ ಈ ಸನ್ನಿವೇಶವನ್ನು ಉಪಾಧ್ಯಾಯರೂ ಶಿಕ್ಷಣತಜ್ಞರೂ ಚೆನ್ನಾಗಿ ಅರಿಯಬೇಕು.

ಈ ವರ್ಷದ ಎಸ್.ಎಸ್.ಎಲ್‌.ಸಿ ಪರೀಕ್ಷೆಗಾಗಿ ಇಟ್ಟಿರುವ ‘ಟೆಕ್ಸ್ಟ್‌’ ತೆಗೆದುಕೊಂಡು ಅಲ್ಲಿರುವ ಕೆಲವು ಪದ್ಯ ಭಾಗಗಳನ್ನು ಓದಿ ನೋಡಿ. ಅವುಗಳನ್ನು ಇಂಗ್ಲಿಷಿನಲ್ಲಿಯೆ ವಿವರಿಸಿದರೆ ವಿದ್ಯಾರ್ಥಿಗಳಿಗೆ ಹೇಗೆ ತಾನೆ ತಿಳಿದೀತು! ಅನೇಕ ಮಕ್ಕಳಿಗೆ ಇಂಗ್ಲಿಷ್ ಗಂಧವೆ ಗೊತ್ತಿಲ್ಲ. ಹೋಗಲಿ, ಅವರಿಗೆ ಆ ಪದ್ಯಗಳಲ್ಲಿ ಬರುವ ವಿಷಯವಾದರೂ ತಿಲಿಯಲೆಂದರೆ, ಇಂಗ್ಲಿಷ್ ಉಪಾಧ್ಯಾಯರು ಕನ್ನಡದಲ್ಲಿ ವಿವರಿಸಿ ಪಾಠ ಹೇಳುವುದಿಲ್ಲ. ಕನ್ನಡದಲ್ಲಿ ಪಾಠ ಹೇಳಿದರೆ ಕೆಲವರು ತಮ್ಮ ಘನತೆಗೆ ಧಕ್ಕೆಯಾಗುವುದೆಂದು ಭಾವಿಸುವವರಿದ್ದಾರೆ. ಕೆಲವರಿಗೆ ಮೇಲಿನ ಅಧಿಕಾರಿಗಳ ಭೀತಿ ಇರಬಹುದು. ಈ ಸ್ಥಿತಿಯಲ್ಲಿ ಮಕ್ಕಳಿಗೆ ಆಗುತ್ತಿರುವ ನಷ್ಟವನ್ನು ಯಾರೂ ಗಮಮನಿಸುತ್ತಿಲ್ಲ. ಉಪಾಧ್ಯಾಯರು ತಮ್ಮ ಹೃದಯವನ್ನು ಶೋಧಿಸಿಕೊಳ್ಳಬೇಕಾಗಿದೆ. ಎಲ್ಲರೂ ಈ ಪರಿಸ್ಥಿತಿಯನ್ನು ಯೋಚಿಸಿ ಮುಂದೆ ಇಂಗ್ಲಿಷ್ ಕಲಿಸುವ ವಿಧಾನವನ್ನೆ ಬದಲಾಯಿಸಬೇಕು.

ಈ ವಿಚಾರವನ್ನು ಯೋಚಿಸಿಯೇ ನಾನು “ನಮಗೆ ಬೇಕಾಗಿರುವ ಇಂಗ್ಲಿಷ್‌” ಅನ್ನು ಕುರಿತು ಕನ್ನಡದಲ್ಲಿ ಒಂದು ಲೇಖನವನ್ನು ಬರೆದೆ. ಅದನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿಸಿ ”The English we need” ಎಂಬ ಸಣ್ಣ ಪುಸ್ತಕವನ್ನೂ ಅಚ್ಚು ಹಾಕಿಸಿದ್ದೇನೆ. ಇಂಗ್ಲಿಷ್ ನಮಗೆ ಬೇಕು ಎಂಬ ವಿಚಾರದಲ್ಲಿ ಸಂದೇಹವಿಲ್ಲ. ಆದರೆ ಯಾರಿಗೆ ಬೇಕು? ಎಷ್ಟು ಬೇಕು? ಏತಕ್ಕೆ ಬೇಕು? ಈ ಮೂರನ್ನು ಮಾತ್ರ ಚೆನ್ನಾಗಿ ಗಮನಿಸಬೇಕು.

ಹೈಸ್ಕೂಲಿನಲ್ಲಿರುವ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯುವ ಕಷ್ಟವನ್ನು ಕುರಿತು ಪ್ರಸ್ತಾಪಿಸಿದ್ದೇನೆ. ಇನ್ನು ವಿಶ್ವವಿದ್ಯಾನಿಲಯವನ್ನು ತೆಗೆದುಕೊಂಡರೆ, ಅಲ್ಲಿನ ವಿದ್ಯಾರ್ಥಿಗಳ ಇಂಗ್ಲಿಷ್ ಉತ್ತರಪತ್ರಿಕೆಗಳನ್ನು ತೆಗೆದು ನೋಡಿ ಅಧ್ಯಾಪಕರು ಮರುಭೂಮಿಯಲ್ಲಿ ನೀರನ್ನು ಹುಡುಕುವಂತೆ ಸ್ವಲ್ಪ ಆಧಾರ ಸಿಕ್ಕಿದರೂ ಸಾಕು -‘ನಂಬರ್’ ಕೊಡೋಣವೆಂದು ಹೊರಟರೂ, ಪಾಪ, ಅವರಿಗೆ ಹತಾಶೆ. ಅಧ್ಯಾಪಕರು ಎಷ್ಟು ಉದಾರಿಗಳಾದರೂ ಶೇಕಡ ಇಪ್ಪತ್ತುಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗುವುದೂ ಸಾಧ್ಯವಿಲ್ಲ. ವಿದ್ಯಾರ್ಥಿಗಳು, “ನಾವು ಇಂಗ್ಲಿಷಿಗೆ ಕಷ್ಟಪಡುವಷ್ಟು ಇನ್ನು ಯಾವುದಕ್ಕೂ ಇಲ್ಲ, ಆದರೂ ಇಂಗ್ಲಿಷ್‌ನಲ್ಲಿ ನಮ್ಮನ್ನು ತಳ್ಳಿಬಿಡುತ್ತಾರಲ್ಲ!” ಎಂದು ನೊಂದುಕೊಳ್ಳುತ್ತಾರೆ. ‘ಗ್ರೇಸ್’ ಅಂಕಗಳ ಕೃಪೆಯಿಂದ ಶೇಕಡ ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಕಷ್ಟದಿಂದ ತೇರ್ಗಡೆಯಾಗಿ ವಿಶ್ವವಿದ್ಯಾನಿಲಯಕ್ಕೆ ಬರುತ್ತಾರೆ. ಅನೇಕ ವಿದ್ಯಾರ್ಥಿಗಳು ಕನ್ನಡ, ಗಣಿತ ಇತ್ಯಾದಿ ಬೇರೆ ವಿಷಯಗಳಲ್ಲಿ ಶೇಕಡ ೫೦, ಶೇಕಡ ೬೦ ಅಂಕಗಳನ್ನು ತೆಗೆಯುವವರು ಇಂಗ್ಲಿಷಿನಲ್ಲಿ ಶೇಕಡ ೧೫ ಅಂಕಗಳನ್ನು ಪಡೆಯುವುದೂ ಕಷ್ಟವಾಗಿರುತ್ತದೆ. ಈ ಸ್ಥಿತಿಯಲ್ಲಿಯೇ ಬಿಟ್ಟರೆ ತೇರ್ಗಡೆಯಾಗುವವರ ಸಂಖ್ಯೆ ಅತಿ ಕಡಿಮೆಯಾಗುತ್ತದೆ. ಅದರ ಪರಿಣಾಮವಾಗಿ ಭಯಂಕರ ಚಳವಳಿಗೂ ಗಲಾಟೆಗಳಿಗೂ ಅವಕಾಶವಾಗುವುದೆಂಬ ಭಯದಿಂದ ‘ಗ್ರೇಸ್’ ಸೇರಿಸುವುದು ಇಂದು ಅಭ್ಯಾಸವಾಗಿದೆ. ‘ಗ್ರೇಸ್’ ಸೇರಿಸುವುದನ್ನು ಕುರಿತು ಯೋಚಿಸಿದರೆ, ನಾವು ಮಾಡುತ್ತಿರುವ ಕೆಲಸ ಆತ್ಮವಂಚನೆಯಲ್ಲವೆ ಎಂದೆನಿಸುತ್ತದೆ. ಇಂಗ್ಲಿಷಿನಲ್ಲಿ ಒಂದು ಪತ್ರವನ್ನು ಸರಿಯಾಗಿ ಬರೆಯಲು ತಿಳಿಯದ, ಕ್ರಿಯಾಪದವನ್ನು ಎಲ್ಲಿ ಹಾಕಬೇಕೆಂದು ತಿಳಿಯದ ವಿದ್ಯಾರ್ಥಿಗಳು ಇಂಗ್ಲಿಷಿನಲ್ಲಿ ಗಹನವಾದ ವಿಚಾರವನ್ನು ಬರೆಯತೊಡಗಿದರೆ ಉತ್ತರ ಯಾವ ಮಟ್ಟದಲ್ಲಿದ್ದೀತು? ಯಾರ ಹತ್ತಿರವೊ ಬರೆಸಿ ಬಾಯಿಪಾಠಮಾಡಿ, ಅದೃಷ್ಟವಶಾತ್ ಬಾಯಿಪಾಠ ಮಾಡಿದ್ದಕ್ಕೂ ಪ್ರಶ್ನೆ ಬಂದಿದ್ದಕ್ಕೂ ಹೊಂದಿಕೆಯಾಗಿ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕಾಗಿದೆ. ಬಾಯಿಪಾಠಮಾಡಿದ ಪ್ರಶ್ನೆಗಳು ಬಾರದಿದ್ದರೆ ಆ ವಿದ್ಯಾರ್ಥಿಗಳ ವಿಚಾರ ಗೊತ್ತೇ ಇದೆ.

ಈ ವಿಚಾರಗಳನ್ನು ಪರಿಶೀಲಿಸಿ ಇಂಗ್ಲಿಷ್ ಎಲ್ಲರಿಗೂ ಆವಶ್ಯಕವೆ? ಎಂಬುದನ್ನು ನಿರ್ಣಯ ಮಾಡಬೇಕು. ನಮ್ಮ ಕರ್ಣಾಟಕದಲ್ಲಿ ಎಷ್ಟು ಮಂದಿ ವಿದ್ಯಾರ್ಥಿಗಳು ಅಖಿಲ ಭಾರತದ ರಂಗಕ್ಕೆ ಹೋಗುತ್ತಾರೆ? ಎಷ್ಟು ಮಂದಿ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ರಂಗಕ್ಕೆ ಪ್ರವೇಶಿಸುತ್ತಾರೆ?-ಈ ವಿಚಾರವನ್ನು ಮನನಮಾಡಬೇಕು. ಅಖಿಲ ಭಾರತೀಯ ರಂಗಕ್ಕೆ ಪ್ರವೇಶಿಸುವವರಿಗೆ ಇಂಗ್ಲಿಷ್ ಬೇಕು. ಅಂತಹ ವಿದ್ಯಾರ್ಥಿಗಳ ಪ್ರಮಾಣ ಎಷ್ಟು? ಅಂತರರಾಷ್ಟ್ರೀಯ ಸ್ಥಾನಮಾನಗಳಲ್ಲಿ ರಾಜಕೀಯ, ವೈಜ್ಞಾನಿಕ ಇತ್ಯಾದಿ ಶಾಖೆಗಳಿಗೆ ಪ್ರವೇಶಿಸುವವರಿಗೆ ಇಂಗ್ಲಿಷ್ ಭಾಷೆಯ ಜ್ಞಾನ ಆವಶ್ಯಕ. ಇನ್ನು ಕರ್ಣಾಟಕದಲ್ಲಿಯೆ ಇದ್ದು ತಮ್ಮ ಜೀವನವನ್ನು ರೂಪಿಸಿಕೊಳ್ಳುವವರೂ ಇದ್ದಾರೆ. ಈ ಮೂರುವರ್ಗದ ವಿದ್ಯಾರ್ಥಿಗಳನ್ನು ವಿಭಾಗಮಾಡಿಕೊಂಡು ಯಾರು ಯಾರಿಗೆ ಎಷ್ಟು ಇಂಗ್ಲಿಷ್ ಬೇಕು ಎಂಬುದನ್ನು ನಿಷ್ಕರ್ಷಿಸಬೇಕು.

ನಮ್ಮಲ್ಲಿ ಬಹುಜನರಿಗೆ ಓದಿ ವಿಷಯವನ್ನು ತಿಳಿದುಕೊಳ್ಳುವಷ್ಟು ಇಂಗ್ಲಿಷ್ ಬಂದರೆ ಸಾಕು. ಅದಕ್ಕಿಂತ ಕಡಿಮೆ ಸಂಖ್ಯೆಯ ಜನರಿಗೆ ಇಂಗ್ಲಿಷ್ ಮಾತನಾಡುವ ಮತ್ತು ಓದುವ ಜ್ಞಾನ ಬೇಕು. ಅದಕ್ಕಿಂತಲೂ ಕಡಿಮೆ ಸಂಖ್ಯೆಯ ಜನರಿಗೆ ಇಂಗ್ಲಿಷ್ ಮಾತನಾಡುವ, ಓದುವ, ಬರೆಯುವ ಜ್ಞಾನ ಬೇಕು. ಈಗ ನನಗೆ ಸಂಸ್ಕೃತ ಮಾತನಾಡಲು ಬರುವುದಿಲ್ಲ. ಆದರೆ ಸಂಸ್ಕೃತ ಗ್ರಂಥಗಳನ್ನು ಓದಿ ವಿಷಯವನ್ನೂ ವಿಚಾರವನ್ನೂ ಗ್ರಹಿಸುತ್ತೇನೆ. ಬಂಗಾಳಿ ಭಾಷೆಯಲ್ಲಿ ಮಾತನಾಡಲು ನನಗೆ ಬರುವುದಿಲ್ಲ. ಆದರೆ ಪುಸ್ತಕಗಳನ್ನು ಓದಿ ಅದರ ವಿಚಾರವನ್ನು ಗ್ರಹಿಸಿ ಪುಷ್ಟಿಯನ್ನು ಪಡೆಯಬಲ್ಲೆ. ನಮ್ಮ ದೇಶದಲ್ಲಿ ವಿಷಯ ಪರಿಜ್ಞಾನಕ್ಕಾಗಿ ಅನೇಕರಿಗೆ ಇಂಗ್ಲಿಷ್ ಭಾಷೆಯನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ಜ್ಞಾನವಿದ್ದರೆ ಸಾಕು.

ಒಬ್ಬ ‘ಎಂಜಿನಿಯರ್’ ‘ಮೆಡಿಕಲ್ ಮ್ಯಾನ್’ ಇವರಿಗೆ ಭಾಷಾ ಜ್ಞಾನ ಬೇಕು. ಹಾಗೆಯೆ ಒಬ್ಬ ಮಂತ್ರಿಯಾಗುವವನಿಗೂ ಭಾಷಾಜ್ಞಾನ ಬೇಕು. ಎಂಜಿನಿಯರ್ ಅಥವಾ ಮೆಡಿಕಲ್ ಮ್ಯಾನ್ ಆಗುವವನನ್ನು ಷೇಕ್ಸ್‌ಪಿಯರ್, ಕೀಟ್ಸ್, ಮಿಲ್ಟನ್, ವರ್ಡ್ಸ್‌ವರ್ತ್‌, Mysticism of Coleridge- ಈ ವಿಚಾರಗಳಲ್ಲಿ ಇಂಗ್ಲಿಷಿನಲ್ಲಿ ಪ್ರಬಂಧ ಬರೆಯಲಿಲ್ಲವೆಂದು ಐದು ವರ್ಷ ‘ಫೇಲ್’ ಮಾಡಿಸಿದರೆ ದೇಶಕ್ಕೆ ದೊಡ್ಡ ನಷ್ಟ. “ನಿಮ್ಮ ಇಂಗ್ಲಿಷ್ ತಂಟೆಗೆ ಬರೋದಿಲ್ಲ. ನಾನು Polytechnic ಗೋ Politics ಗೋ ಹೋಗುತ್ತೇನೆ. ಬಿಟ್ಟುಬಿಡಿ” ಎಂದರೆ ನಾವು ಬಿಡುವುದಿಲ್ಲ. “ಇಲ್ಲ Mysticism of Coleridge ಬರೆದ ಹೊರತು ಬಿಡುವುದಿಲ್ಲ”, ಎಂದರೆ ಅವನು ಎಷ್ಟುಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ. “ನಾನು ಏತಕ್ಕೂ ಪ್ರಯೋಜನವಿಲ್ಲದವನು” ಎಂದು ನಿರಾಶೆಗೊಳ್ಳುತ್ತಾನೆ. ಕೆಲವರು ಬೇರೆ ರೀತಿಯ ಧೈರ್ಯ ಮಾಡಿಕೊಂಡು ರೈಲ್ವೆ ಕಂಬಿಗೆ ಸಿಕ್ಕುತ್ತಾರೆ, ಹೊಳೆಗೆ ಹಾರುತ್ತಾರೆ! ಈ ರೀತಿಯಾದ ನಷ್ಟಕ್ಕೆ ಅವಕಾಶ ಕೊಡದಂತೆ ನೋಡಿಕೊಳ್ಳಬೇಕಾದುದು ಅತ್ಯಂತ ಆವಶ್ಯಕ. ನಾಳೆಯದಿನ ಎಂಜಿನಿಯರ್ ಆಗಲು ಹೋಗುವವನಿಗೆ `Mysticism of Coleridge,’ ‘The Character of Hamlet’ ತಿಳಿಯದಿದ್ದರೂ ಕ್ಷಮಿಸಬೇಕಾಗುತ್ತದೆ. ಯಂತ್ರಶಿಲ್ಪ ವೈದ್ಯ ಇತ್ಯಾದಿ ಶಾಖೆಗಳಲ್ಲಿ ಪರಿಣತರಾಗುವ ವಿದ್ಯಾರ್ಥಿಗಳಿಗೆ ಇಂಗ್ಲಿಷನ್ನು ಭಾಷೆಗೋಸ್ಕರವಾಗಿಯೆ ಕಲಿಸಬೇಕು. ಸಾಹಿತ್ಯದಲ್ಲಿ ಅಭಿರುಚಿ ಇಲ್ಲದವನನ್ನು ಸಾಹಿತ್ಯದ ಕಡೆಗೆ ಬರಬೇಡವೆಂದು ಹೇಳಿಕಳುಹಿಸಬೇಕು.

ಇಂತಾದರೆ, ವಿದ್ಯಾರ್ಥಿಗೆ ಸಾಹಿತ್ಯದ ಗಂಧವೆ ಬೇಡವೆ? ಎಂದು ಪ್ರಶ್ನಿಸಬಹುದು. ಈ ಕಾರ್ಯವನ್ನು ಇನ್ನು ಮುಂದೆ ಕನ್ನಡಕ್ಕೆ ಬಿಟ್ಟುಬಿಡಿ. ಅತ್ಯುನ್ನತ ಸಾಹಿತ್ಯಕೃತಿಗಳು, ಅತ್ಯಂತ ಗಹನವಾದ ಆಲೋಚನಾ ವಿಚಾರಗಳು ಇವುಗಳೆಲ್ಲ ಕನ್ನಡ ಸಾಹಿತ್ಯದಲ್ಲಿ ಈಗಾಗಲೆ ಮೈದೋರಿವೆ. ಇಂಗ್ಲಿಷ್ ಸಾಹಿತ್ಯಕ್ಕೆ ಸರಿಸಾಟಿಯಾಗಿ, ಪ್ರಮಾಣದಲ್ಲಿ ಅಲ್ಲದಿದ್ದರೂ ಗುಣದಲ್ಲಿ, ಸಾಕಷ್ಟು ಸಾಹಿತ್ಯ ಸಿದ್ಧವಾಗಿದೆ, ಮುಂದೆ ಸಿದ್ಧವಾಗುತ್ತದೆ. ಕನ್ನಡವು ಒದಗಿಸುವಷ್ಟು ಹೃದಯಸ್ಪರ್ಶಿಯಾಗಿ ಇಂಗ್ಲಿಷ್ ಒದಗಿಸಲಾರದು. ಭಾವ ಬುದ್ಧಿ ಪುಷ್ಟಿಗಳನ್ನು ಪಡೆಯಲು ಕನ್ನಡವಿದೆ, ಸಂಸ್ಕೃತವಿದೆ. ಈಗ ಇಂಗ್ಲಿಷಿನ ಉತ್ತಮ ಕೃತಿಗಳು ಕನ್ನಡಕ್ಕೆ ಬಂದಿವೆ, ಮುಂದೆ ಇನ್ನೂ ಬರುತ್ತವೆ.

ಇಂಗ್ಲಿಷ್ ಅಭ್ಯಾವನ್ನು ಕುರಿತು ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಫ್ರಾನ್ಸಿಸ್ ಥಾಮಸ್ ರಚಿಸಿದ ‘ಹೌಂಡ್ ಆಫ್ ಹೆವನ್’ ಎಂಬ ಕವನ ಕನ್ನಡದಲ್ಲಿ ‘ದೇವಕೇತು’ ಎಂಬ ಹೆಸರಿನಿಂದ ದೊರಕುತ್ತದೆ. ಈ ಕನ್ನಡ ಕವನವನ್ನು ಓದಿ ‘ಹೌಂಡ್ ಆಫ್ ಹೆವನ್’ ಕವನದ ಪುಷ್ಟಿ ಶಕ್ತಿಗಳನ್ನು ವಿದ್ಯಾರ್ಥಿ ಗ್ರಹಿಸುತ್ತಾನೆ. ಇಂಗ್ಲಿಷ್ ಭಾಷೆಯನ್ನು ಕಲಿತಮೇಲೆ ಇಂಗ್ಲಿಷ್ ಸಾಹಿತ್ಯದ ಪುಷ್ಟಿ ಶಕ್ತಿಗಳನ್ನು ಕನ್ನಡದ ಭಾಷಾಂತರಗಳ ಮೂಲಕ ಪಡೆಯುವುದು ಸಾಧ್ಯ. ಈಗ ಫ್ರಾನ್ಸ್ ದೇಶದಲ್ಲಿ ಷೇಕ್ಸ್‌ಪಿಯರ್ ಕೃತಿಗಳನ್ನು ಇಂಗ್ಲಿಷಿನಲ್ಲಿ ಓದಿ ಫ್ರೆಂಚ್ ಭಾಷೆಯಲ್ಲಿ ವಿವರಿಸುತ್ತಾರೆ. ಇನ್ನು ಮುಂದೆ ಇಂಗ್ಲಿಷ್ ಪುಸ್ತಕಗಳನ್ನು ಕನ್ನಡದಲ್ಲಿಯೆ ಪಾಠ ಹೇಳಬೇಕು. ನಮ್ಮಲ್ಲಿ ಸಾಹಿತ್ಯಕ್ಕೋಸ್ಕರ ಕನ್ನಡ ಆನರ್ಸ್ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಅಭ್ಯಾಸಮಾಡಬೇಕು. ಅವರು ಇಂಗ್ಲಿಷಿನಲ್ಲಿರುವ ಮೂಲಕೃತಿಗಳನ್ನು ಅಧ್ಯಯನ ಮಾಡಬೇಕು, ಭಾಷಾಂತರವನ್ನಲ್ಲ. ಆದರೆ ಪರೀಕ್ಷೆಗಳಲ್ಲಿ ಉತ್ತರವನ್ನು ಕನ್ನಡದಲ್ಲಿಯೆ ಬರೆಯಬೇಕು. ಎಲ್ಲಿ ಅಗತ್ಯವೋ ಅಲ್ಲಿ ಇಂಗ್ಲಿಷಿನಲ್ಲಿ ಉದ್ಧರಿಸುತ್ತಾನೆ. ಮಿಲ್ಟನ್ ಕವಿಯ `Paradise Lost’ ಎಂಬ ಕಾವ್ಯದ ವಿಚಾರವಾಗಿ ಪ್ರಬಂಧವನ್ನು ಬರೆಯುವವನು ಕನ್ನಡದಲ್ಲಿ ಉತ್ತಮವಾಗಿ ಬರೆಯಬಲ್ಲ. ಕಾವ್ಯದ ಮುಖ್ಯ ಭಾಗಗಳನ್ನು ಇಂಗ್ಲಿಷಿನಲ್ಲಿಯೆ ಉದ್ಧರಿಸಿ ಬರೆಯುವುದರಿಂದ ಇಂಗ್ಲಿಷ್ ಸಾಹಿತ್ಯದ ಪುಷ್ಟಿ ಶಕ್ತಿಗಳನ್ನು ಗ್ರಹಿಸಿದಂತಾಗುತ್ತದೆ. ಇಂಗ್ಲಿಷಿನಲ್ಲಿಯೆ ಪ್ರಬಂದವನ್ನು ಬರೆದರೆ ಕನ್ನಡದಲ್ಲಿ ಬರೆಯುವಷ್ಟು ಸಮರ್ಪಕವಾಗಿ ಬರೆಯಲಾರ. ಈ ವಿಚಾರವನ್ನು ನಾನೊಮ್ಮೆ ಹಿಂದೆ ಅಕ್ಯಾಡೆಮಿಕ್ ಕೌನ್ಸಿಲ್ ಸದಸ್ಯರಿಗೆ ಹೇಳಿದಾಗ ಕೆಲವರು ನಕ್ಕುಬಿಟ್ಟರು. ಅವರಿಗೆ ಈ ವಿಚಾರವನ್ನು ಕಟುವಾದ ರೀತಿಯಲ್ಲಿ ಹೇಳಿ ತೋರಿಸಬೇಕಾಯಿತು. ಆಗತಾನೆ ಸ್ವಾತಂತ್ರ್ಯ ಬಂದ ಕಾಲ. ನಾನು ಹೇಳಿದೆ: “ಸರಪಣಿಯಿಂದ ಬಹುಕಾಲ ಕಟ್ಟಿದ ನಾಯಿ ಬಿಚ್ಚಿದ ಮೇಲೆಯೂ ಅಲ್ಲಿಯೆ ಕುಳಿತಿರುತ್ತದೆ. ಯಾರಾದರೂ ಒದ್ದಹೊರತು ಮುಂದೆ ಹೋಗುವುದಿಲ್ಲ. ಸರಪಣಿ ಬಿಚ್ಚಿದರೂ, ಇಲ್ಲಿಯೆ ಇರಬೇಕು, ಇದು ನನ್ನಹಣೆಬರಹ ಎಂದು ತಿಳಿದುಕೊಂಡಿರುತ್ತದೆ. ದಾಸ್ಯದ ಸಂಕೋಲೆ ಬಿಚ್ಚಿದರೂ ಮನಸ್ಸಿನ ದಾಸ್ಯ ಹೋಗುವುದಿಲ್ಲ.” ನಮಗೆ ಇಂಗ್ಲಿಷ್ ಸಾಹಿತ್ಯದ ಭಾವ, ಪುಷ್ಟಿ, ಶಕ್ತಿಗಳು ಬೇಕು. ಕನ್ನಡ, ಸಂಸ್ಕೃತ ಮೊದಲಾದ ಸಾಹಿತ್ಯವಿಭಾಗದ ಆನರ್ಸ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯದ ವಿಶೇಷ ಅಭ್ಯಾಸ ಬೇಕು. ಅವರು ಷೇಕ್ಸ್‌ಪಿಯರ್, ಮಿಲ್ಟನ್, ವರ್ಡ್ಸ್‌ವರ್ತ್‌ಮೊದಲಾದ ಕವಿಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ನಿಷ್ಕೃಷ್ಟವಾದ ಜ್ಞಾನವನ್ನು ಪಡೆಯಲಿ. ಆದರೆ ಇಂಗ್ಲಿಷನ್ನು ಕನ್ನಡದಲ್ಲಿ ಬೋಧಿಸಬೇಕು. ಪರೀಕ್ಷೆಯಲ್ಲಿ ಉತ್ತರಗಳನ್ನು ಕನ್ನಡದಲ್ಲಿ ಬರೆಯಬೇಕು. ನೀವು ಈ ಕ್ರಮದಲ್ಲಿ ಮುಂದುವರಿಯಬೇಕು. ಅದರಿಂದ ದೇಶಕ್ಕೆ ಕ್ಷೇಮ. ಸಹಸ್ರಾರು ವಿದ್ಯಾರ್ಥಿಗಳ ಶ್ರೇಯಸ್ಸೂ ಆಗುತ್ತದೆ. ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ದಂಗೆಯ ಮನೋಭಾವವನ್ನು ಬೆಳೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಒಮ್ಮೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಮಿಲ್ಟನ್ ಕವಿಯ ”On His Blindness” ಎಂಬ ಸಾನೆಟ್ ಕವನವಿತ್ತು. ಅದನ್ನು ಶಾಲೆಯಲ್ಲಿ ಪಾಠಹೇಳಿ ಇಂಗ್ಲಿಷಿನಲ್ಲಿ ತಾತ್ಪರ್ಯ ಬರೆಸಿದ್ದರು. ಅದನ್ನು ಓದಿದ ವಿದ್ಯಾರ್ಥಿ ಉತ್ತರವನ್ನು ಹೊಲಸಾಗಿ ಬರೆದಿದ್ದ. ಅದನ್ನು ಕಂಡು, ನೋಡಪ್ಪ, ಈ ಕವನದ ಭಾವ ಇಷ್ಟು ಎಂದು ಕನ್ನಡದಲ್ಲಿ ವಿವರಿಸಿದಾಗ “ಇಷ್ಟೇನೆ!” ಎಂದು ಹೇಳಿದ. ಕನ್ನಡದಲ್ಲಿ ಬರೆಯಲು ಹೇಳಿದಾಗ ಉತ್ತಮ ರೀತಿಯಲ್ಲಿ ಬರೆದ. ನಮಗೆ ಬೇಕಾದುದು ಇಂಗ್ಲಿಷ್ ಸಾಹಿತ್ಯದ ಪುಷ್ಟಿ, ಶಕ್ತಿ, ಅದನ್ನು ಪಡೆಯಲು ಇಂಗ್ಲಿಷ್ ಪಾಠಗಳನ್ನು ಕನ್ನಡದಲ್ಲಿ ಬೋಧಿಸಬೇಕು. ಪರೀಕ್ಷೆಯಲ್ಲಿ ಉತ್ತರವನ್ನು ಕನ್ನಡದಲ್ಲಿ ಬರೆಯಬೇಕು. ಇದರಿಂದ ದೇಶದ ಕಲ್ಯಾಣವಾಗುತ್ತದೆ. ಇಂಗ್ಲಿಷ್ ಕವಿಗಳೂ ಸಾಹಿತಿಗಳೂ ಹೆಚ್ಚು ಆತ್ಮೀಯರಾಗಿ ನಮ್ಮ ಬಳಿಗೆ ಬರುತ್ತಾರೆ. ಯಾವ ಪೂರ್ವಾಭಿಪ್ರಾಯಗಳನ್ನೂ ಇಟ್ಟುಕೊಳ್ಳದೆ ಶಿಕ್ಷಣತಜ್ಞರು ನಿರ್ಮಲ ಹೃದಯದಿಂದ ಈ ವಿಚಾರಗಳನ್ನು ಮನನಮಾಡಬೇಕು.

ಇನ್ನು ಇಂಗ್ಲಿಷ್ ಕೃತಿಗಳನ್ನು ಭಾಷಾಂತರ ಮಾಡುವ ವಿಚಾರ. ಈ ವಿಚಾರವನ್ನು ರಾಜಕೀಯ ಕಾರಣಗಳಿಗೋಸ್ಕರವಾಗಿಯೊ, ಬೇರೆ ಕಾರಣಗಳಿಗಾಗಿಯೊ ಮಾತನಾಡುವ ವಿಚಾರ ಬೇರೆ. ಸಾಹಿತ್ಯದ ವಿಚಾರವಾಗಿ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕಾಗಲಿ, ಕನ್ನಡ ಕೃತಿಗಳನ್ನು ಇಂಗ್ಲಿಷಿಗಾಗಲಿ ಭಾಷಾಂತರಿಸುವ ಕೆಲಸವನ್ನು ಪ್ರತಿಭೆ ಮತ್ತು ಶಕ್ತಿಗೇ ಬಿಡಬೇಕು. ಈ ಕಾರ್ಯಕ್ಕೆ ಯಾರನ್ನು ಆರಿಸಬೇಕೆಂದು ಹೇಳುವುದು ಕಷ್ಟ. ಪ್ರತಿಭೆ ಇರುವವರನ್ನೆ ಆರಿಸಬೇಕು. ಅಂದರೆ, ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಅರಿತು ಕನ್ನಡದಲ್ಲಿ ಅತ್ಯುತ್ತಮವಾದ ರೀತಿಯಲ್ಲಿ ಬರೆಯುವ ಸಾಮರ್ಥ್ಯವಿರಬೇಕು. ಒಂದು ದೃಷ್ಟಿಯಲ್ಲಿ ಭಾಷಾಂತರ ಕಾರ್ಯ ಮೂಲಸೃಷ್ಟಿ ಕಾರ್ಯಕ್ಕಿಂತ ಕಷ್ಟಕರ. ಏಕೆಂದರೆ ಮೂಲಸೃಷ್ಟಿಗೆ ಒಂದು ಭಾಷೆ ತಿಳಿದಿದ್ದರೆ ಸಾಕು. ಭಾಷಾಂತರಕ್ಕೆ ಎರಡೂ ಭಾಷೆಯ ವಿಶೇಷಜ್ಞಾನ ಆವಶ್ಯಕ.

ನಮ್ಮ ಮಕ್ಕಳ ವಿದ್ಯಾಭ್ಯಾಸದ ಕ್ರಮವನ್ನು ಸ್ವಲ್ಪ ಗಮನಿಸೋಣ. ಮಾಧ್ಯಮಿಕ ಶಾಲೆಯಲ್ಲಿ ಇಟ್ಟಿರುವ ಇಂಗ್ಲಿಷ್ ವ್ಯಾಕರಣದ ಗಾತ್ರವನ್ನು ನೋಡಿಯೆ ಮಕ್ಕಳು ಮೂರ್ಛೆ ಹೋಗುವಂತಿದೆ! ನನಗೆ ತಿಳಿದ ಇಂಗ್ಲಿಷ್ ವ್ಯಾಕರಣವೆಲ್ಲವನ್ನು ಬರೆದರೂ ಏಳು ಎಂಟು ಪುಟಗಳಾಗಬಹುದು! ಇಂಗ್ಲಿಷ್ ಮಾತ್ರವಲ್ಲ, ಎಲ್ಲ ಭಾಷೆಯ ವ್ಯಾಕರಣಗಳೂ ಅಷ್ಟೆ. ಅವು ಮಕ್ಕಳ ಮನಸ್ಸಿಗೆ ಗ್ರಾಹ್ಯವಾಗುವಷ್ಟು ಚಿಕ್ಕದಾಗಿರಬೇಕು. ಮಕ್ಕಳ ಮುಂದೆ ಪಾಂಡಿತ್ಯ ಪ್ರದರ್ಶನ ಬೇಡ. ಚರಿತ್ರೆ, ಭೂಗೋಳದ ಪುಸ್ತಕಗಳೂ ಅಷ್ಟೆ. ಆ ಗಾತ್ರದಿಂದ ಮಕ್ಕಳಿಗೆ ಪ್ರಯೋಜನವಾಗುವುದಿಲ್ಲ. ಪಠ್ಯಪುಸ್ತಕಗಳನ್ನು ಸಿದ್ಧಮಾಡುವಾಗ ಮನಶ್ಯಾಸ್ತ್ರ ದೃಷ್ಟಿಯಿಂದ, ಅದರಲ್ಲೂ ಮಕ್ಕಳ ಮನಸ್ಸಿನ ಪರಿಜ್ಞಾನದಿಂದ ಬೇರೆ ಬೇರೆ ಭಾಷೆಯವರು ಏನು ಮಾಡಿದ್ದಾರೆ, ಏನು ಹೇಳುತ್ತಾರೆ-ಎಂಬುನ್ನು ಮನ್ನಿಸಬೇಕು. ಈಗ ರಷ್ಯಾದಲ್ಲಿ ನೂರಾರು ಭಾಷೆಗಳಿವೆ. ಉಜ್‌ಬೆಕ್ ಸಂಸ್ಥಾನದಲ್ಲಿ ಆಡುವ ಭಾಷೆ ಹೊರತು ಲಿಪಿ ಕೂಡ ಇರಲಿಲ್ಲ. ಅಂತಹ ಕಾಡು ಜನರಿದ್ದ ದೇಶವದು. ಈಗ ಅದರ ಭಾಷೆ ಬೆಳೆದು ಒಂದು ವಿಶ್ವವಿದ್ಯಾನಿಲಯವು ನಿರ್ಮಿತವಾಗಿ ಲಕ್ಷಾಂತರ ಗ್ರಂಥಗಳು ಸೃಷ್ಟಿಯಾಗಿ ಸಂಶೋಧನೆಯ ಕಾರ್ಯವೂ ನಡೆಯುತ್ತಿದೆ. ಇದನ್ನು ನೋಡಿದಾಗ ಆಶ್ಚರ್ಯವೂ ಆನಂವೂ ಆಗುತ್ತದೆ. ಎಲ್ಲೊ ಒಂದು ಮೂಲೆಯ ದೇಶ ಇಂತಹ ಅದ್ಬುತ ರೀತಿಯಲ್ಲಿ ಮುಂದುವರಿದಿರುವಾಗ ಆ ದೇಶ ವೈಜ್ಞಾನಿಕ ಜ್ಞಾನವನ್ನು ಹೇಗೆ ಪಡೆಯುತ್ತಿದೆ, ಇಂಗ್ಲಿಷನ್ನು ಎಷ್ಟರಮಟ್ಟಿಗೆ ಬಳಸುತ್ತಿದೆ-ಎಂಬುದನ್ನು ತಿಳಿಯಬೇಕು. Let us not be sentimental. Let us be scientific and rational. ಚೀಣಾ ಮೊದಲಾದ ದೇಶಗಳಲ್ಲಿ ಇಂಗ್ಲಿಷಿನ ಸ್ಥಾನಮಾನವೇನೆಂಬುದನ್ನು ಅರಿತುಕೊಳ್ಳೋಣ. ಈ ವಿಶಾಲವಾದ ದೃಷ್ಟಿಯಿಂದಲೂ ವಿಚಾರದಿಂದಲೂ ವಿವೇಕಿಗಳಾಗಿ ಇನ್ನು ಮುಂದೆ ನಮ್ಮ ಮಕ್ಕಳ ತಲೆ ಮೇಲೆ ಇಂಗ್ಲಿಷ್ ಚಪ್ಪಡಿಯ ಭಾರವನ್ನು ಹೊರಿಸಿ ಅವರನ್ನು ಕುಂಠಿತರನ್ನಾಗಿ ಮಾಡುವ ಅನುಚಿತ ಕಾರ್ಯವನ್ನು ನಿಲ್ಲಿಸಬೇಕು. ಈ ವಿಚಾರವಾಗಿ ಎಲ್ಲ ಉಪಾಧ್ಯಾಯರೂ ಚೆನ್ನಾಗಿ ಆಲೋಚಿಸಿ ರಾಷ್ಟ್ರದ ಅಭ್ಯುದಯಕ್ಕೆ ಸಾಧಕವಾದುದನ್ನು ಕಾರ್ಯರೂಪಕ್ಕೆ ತರಲು ಯತ್ನಿಸಬೇಕು. ಇಂಗ್ಲಿಷಿನಲ್ಲಿ ಸಾಧಿಸಿರುವಷ್ಟನ್ನು ನಾವು ಸಾಧಿಸಿಲ್ಲವೆಂದು ದುಃಖಿಸಬೇಕಾಗಿಲ್ಲ. ವೈಜ್ಞಾನಿಕ ಕ್ಷೇತ್ರವನ್ನು ಬಿಟ್ಟರೆ ಸಾಹಿತ್ಯ, ಅಲಂಕಾರ ಇತ್ಯಾದಿ ಪ್ರಕಾರಗಳಲ್ಲಿ ಭಾರತೀಯರು ನಾಚಿಕೊಳ್ಳಬೇಕಾಗಿಲ್ಲ. ಗ್ರೀಕ್, ಫ್ರೆಂಚ್, ಜರ್ಮನ್, ಲ್ಯಾಟಿನ್-, ಈ ಯಾವ ಭಾಷೆಗಳೂ ಮಾಡದ ಅದ್ಭುತ ಪ್ರಗತಿಯನ್ನು ಭಾರತೀಯ ಕಾವ್ಯಮೀಮಾಂಸೆ ಸಾಧಿಸಿದೆ. ಈಚೆಗೆ ಐ.ಎ.ರಿಚರ್ಡ್ಸ್ ಮೊದಲಾದವರು ಈ ದೃಷ್ಟಿಯಲ್ಲಿ ಸ್ವಲ್ಪಮಟ್ಟಿಗೆ ವಿಚಾರಮಾಡಿದ್ದಾರೆ ಅಷ್ಟೆ.

ಇನ್ನು ಇಂಗ್ಲಿಷ್ ಉಚ್ಚಾರಣೆಯ ವಿಚಾರ. ಇಂಗ್ಲಿಷಿನವರಂತೆಯೆ ಉಚ್ಚಾರಣೆ ಮಾಡುವವರು ಮಾಡಿಕೊಳ್ಳಲಿ. ಎಲ್ಲರೂ ಹಾಗೆಯೆ ಮಾತನಾಡಬೇಕಾದುದು ಅನಾವರ್ಶಯಕ. ಬಂಗಾಳ ದೇಶದಲ್ಲಿ ಹಿರಿಯ ವಿಜ್ಞಾನಿಗಳು ಇಂಗ್ಲಿಷಿನಲ್ಲಿ ಮಾತನಾಡಿದುದನ್ನು ದಕ್ಷಿಣ ದೇಶದವರು ಅರ್ಥ ಮಾಡಿಕೊಳ್ಳುವುದು ಕಷ್ಟವಾಯಿತಂತೆ! ಅದಕ್ಕೆ ಮುಖ್ಯ ಕಾರಣ ಉಚ್ಛಾರಣೆಯ ರೀತಿ. ಬೆಂಗಳೂರು ಕಂಟೋನ್ಮೆಂಟಿನಲ್ಲಿರುವವರು ಇಂಗ್ಲಿಷಿನವರಂತೆಯೆ ಮಾತನಾಡುವುದನ್ನು ಕಲಿತಿದ್ದಾರೆ. ಅವರು ಹಾಗೆಯೆ ಮಾತನಾಡಲಿ. ಆಕಾಶವಾಣಿಯಲ್ಲಿ ಬೇಕಾದರೆ ಪ್ರಸಾರ ಮಾಡಿಕೊಳ್ಳಲಿ. ಆದರೆ ವಿದ್ಯಾರ್ಥಿಗಳು ಹಾಗೆಯೆ ಮಾತನಾಡಲಿ ಎಂದು ಒತ್ತಾಯಪಡಿಸುವುದು ಬೇಡ. ಎಷ್ಟು ಸಾಧ್ಯವೊ ಅಷ್ಟರಮಟ್ಟಿಗೆ ಸ್ಪಷ್ಟವಾದ ಉಚ್ಚಾರಣೆಯನ್ನು ಕಲಿತರೆ ಸಾಕು.

ಪ್ರೊ|| ಶಾಂತವೀರಪ್ಪನವರು ಶ್ರೀರಾಜಗೋಪಾಲಾಚಾರಿ ಅವರು ಇಂಗ್ಲಿಷ್ ವಿಚಾರವಾಗಿ ಹೇಳಿರುವುದನ್ನು ಪ್ರಸ್ತಾಪಿಸಿದರು. ಶ್ರೀ ರಾಜಗೋಪಾಲಾಚಾರಿಯವರು ಬಿ.ಸಿ.ಜಿ., ವ್ಯಾಕ್ಸಿನೇಷನ್ ವಿಚಾರವಾಗಿ ಮಾತನಾಡಿದ್ದಾರೆ, ಇಂಗ್ಲಿಷ್ ವಿಚಾರವಾಗಿ ಹೇಳಿದ್ದಾರೆ, ಇನ್ನೂ ಅನೇಕ ವಿಚಾರವಾಗಿ ಮಾತನಾಡಿದ್ದಾರೆ. ಅವರು ಹೇಳಿದುದೆಲ್ಲ ಸತ್ಯವೆಂದು ನಂಬುವುದಕ್ಕಾಗುತ್ತದೆಯೆ? ಈ ವಿಚಾರವಾಗಿ ನಾವು ಸ್ವತಂತ್ರವಾಗಿ ಆಲೋಚನೆ ಮಾಡಬೇಕು. ನಮ್ಮ ದೇಶದಲ್ಲಿ ಕೆಲವರು ಇಂಗ್ಲಿಷ್ ಬೇಡವೆ ಬೇಡ ಎಂದು ಹೇಳಿದರೆ ಮತ್ತೆ ಕೆಲವರು ಇಂಗ್ಲಿಷ್‌ನಿಂದಲೆ ಸಕಲ ಅಭ್ಯುದಯ ಎಂದು ಹೇಳುವವರಿದ್ದಾರೆ. ಇನ್ನೊಬ್ಬ ಪ್ರತಿಭಾಶಾಲಿಗಳು-ಭಾರತದ ದೊಡ್ಡ ಸ್ಥಾನದಲ್ಲಿದ್ದು ಈಗ ನಿವೃತ್ತರಾದವರು-ಹೇಳಿದರು: “ನಾವು ಆ ಭಾಷೆ ಈ ಭಾಷೆ ಎಂದು ಕಟ್ಟಿಕೊಂಡು ಒದ್ದಾಡುವುದಕ್ಕಿಂತ ಚಿಕ್ಕಂದಿನಿಂದಲೆ ಮಕ್ಕಳು ಮರಿ ಎಲ್ಲರೂ ಇಂಗ್ಲಿಷನ್ನೆ ಅಭ್ಯಾಸ ಮಾಡಲಿ, ವ್ಯವಹಾರ ಭಾಷೆಯೂ ಇಂಗ್ಲಿಷೆ ಆಗಲಿ. ಅದರಿಂದ ‘one world’ ಆಗುವುದಕ್ಕೆ ಸಹಾಯವಾಗುತ್ತದೆ” ಎಂದು. ಅದಕ್ಕೆ ನಾನು ಹೇಳಿದೆ, “ನೀವು ಸೈನ್ಯ ಕ್ಷೇತ್ರದಲ್ಲಿ ಕೆಲಸ ಮಡಿದವರು, ದೊಡ್ಡ ದೊಡ್ಡ Campaign ನಡೆಸಿದರು. ಆದರೆ ವಿದ್ಯಾಕ್ಷೇತ್ರದಲ್ಲಿ Campaign ಭಾವನೆ ಸಲ್ಲದು” ಎಂದು. ನಮ್ಮ ದೇಶದಲ್ಲಿ ಇಂಗ್ಲಿಷ್ ಬೇಡವೆ ಬೇಡ ಎಂದು ಹೇಳುವವರು ಕೆಲವರಿದ್ದಾರೆ; ದೇಶಭಾಷೆಗಳೆ ಬೇಡ, ಇಂಗ್ಲಿಷಿರಲಿ ಎಂದು ಹೇಳುವವರೂ ಇದ್ದಾರೆ. ಈ ಎರಡೂ ತೀವ್ರಭಾವನೆಗಳನ್ನು ದೂರ ಮಾಡಿ ಯಾವ ಮಾರ್ಗವನ್ನು ಕೈಗೊಂಡರೆ ನಮ್ಮ ದೇಶಕ್ಕೆ ಕ್ಷೇಮವೂ ಸಹಾಯವೊ ಆ ಮಾರ್ಗವನ್ನು ನಿಶ್ಚಯಿಸಬೇಕು.

ನಿಮ್ಮಲ್ಲಿ ಎಸ್.ಎಸ್‌.ಎಲ್‌.ಸಿ. ಪರೀಕ್ಷೆ ಮಂಡಲಿಯಲ್ಲಿ ಕೆಲಸಮಾಡಿದವರಿದ್ದೀರ. ಅಲ್ಲಿ ಬೇರೆ ಬೇರೆ ವಿಷಯಗಳ ಫಲಿತಾಂಶವನ್ನು ನೋಡಿದ್ದೀರಿ. ಇಂಗ್ಲಿಷಿನಲ್ಲಿ ತೇರ್ಗಡೆಯಾಗದ ಸಂಖ್ಯೆಯನ್ನು ಕಂಡು ಮರುಗಿದ್ದೀರಿ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಬೆಲೆ ಕಟ್ಟಿದ್ದೀರಿ. ವಿಶ್ವವಿದ್ಯಾನಿಲಯದಲ್ಲಿ ನಾವು ನೋಡುತ್ತ ಇದ್ದೇವೆ. ವಿಶ್ವವಿದ್ಯಾನಿಲಯದವರು “ಹೈಸ್ಕೂಲಿನಲ್ಲಿ ಅಸ್ತಿಭಾರ ಸರಿಯಾಗಿಲ್ಲ, ನಾವೇನು ಮಾಡುವುದಕ್ಕಾಗುತ್ತದೆ?” ಎನ್ನುತ್ತಾರೆ. ಹೈಸ್ಕೂಲಿನವರು, “ನಾವು ಏನು ಮಾಡುವುದಕ್ಕಾಗುತ್ತದೆ; ಮಾಧ್ಯಮಿಕ ಶಾಲೆಯಲ್ಲಿ ಏನೇನೂ ಶಿಕ್ಷಣವಿಲ್ಲ” ಎನ್ನುತ್ತಾರೆ. ಹೀಗೆ ಇನ್ನೊಬ್ಬರ ಮೇಲೆ ತಪ್ಪುಹೊರಿಸುವುದರಿಂದ ಸಮಸ್ಯೆಯನ್ನು ಪರಿಹರಿಸಿದಂತಾಗುವುದಿಲ್ಲ. ಇದು ತುಂಬ ಗಹನವಾದ ವಿಚಾರ. ನಿಮ್ಮ ನಿರ್ಣಯಗಳ ಸಾಮೂಹಿಕಕ ಆಧಾರಗಳಿಂದಲಾದರೂ ಮಕ್ಕಳು ಇಂಗ್ಲಿಷ್ ಚಪ್ಪಡಿಗಳನ್ನು ಹೊರುವ ಕೆಲಸವನ್ನು ತಪ್ಪಿಸಬೇಕು. ವಿದ್ಯಾರ್ಥಿಗಳು ತಮ್ಮ ಕಾಲ ಮತ್ತು ಶಕ್ತಿಯ ಮೂರು ಪಾಲನ್ನು ಇಂಗ್ಲಿಷ್ ಕಲಿಯುವುದಕ್ಕಾಗಿ ಉಪಯೋಗಿಸುತ್ತಿದ್ದಾರೆ. ವ್ಯರ್ಥಪರಿಣಾಮದ ಈ ವೃಥಾ ಶ್ರಮವನ್ನು ಪರಿಹರಿಸುವುದು ಸಾಧ್ಯ.

ಈಗ ಪ್ರಿ-ಯೂನಿವರ್ಸಿಟಿ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. Logic ಬಹಳ ಕಷ್ಟವಾದ ಪಾಠವೆಂದು ವಿದ್ಯಾರ್ಥಿಗಳು ತಿಳಿದಿದ್ದರು. ಈಗ ಆ ಪಾಠವನ್ನು ಕನ್ನಡದಲ್ಲಿ ಬೇಗನೆ ಗ್ರಹಿಸುವಂತಾಗಿದೆ. ಭೌತಶಾಸ್ತ್ರ ಮೊದಲಾದವು ಕನ್ನಡದ ಮೂಲಕ ಸುಲಭವಾಗಿ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಇನ್ನು ಕನ್ನಡದಲ್ಲಿ ಹೆಚ್ಚಾಗಿ ಗಹನವಾದ ಶಾಸ್ತ್ರ ಗ್ರಂಥಗಳು ಸಿದ್ಧವಾಗಿ ವಿದ್ಯಾರ್ಥಿಗಳು ಸುಲಭವಾಗಿ ಗ್ರಹಿಸುವಂತಾಗುತ್ತದೆ. ಈ ದೃಷ್ಟಿಯಲ್ಲಿ ಮುಂದುವರಿದರೆ ತಂದೆತಾಯಿಗಳಿಗಾಗುತ್ತಿರುವ ನಷ್ಟವೂ, ಉಪಾಧ್ಯಾಯರ ವ್ಯರ್ಥಶ್ರಮವೂ, ವಿದ್ಯಾರ್ಥಿಗಳ ನಿರಾಶೆ ಹತಾಶೆಗಳೂ ಪರಿಹಾರವಾಗಿ ರಾಷ್ಟ್ರದ ಸರ್ವೋದಯಕ್ಕೆ ಹೊಸ ಚೈತನ್ಯ ಮೂಡಿದಂತಾಗುತ್ತದೆ. ಇಂಗ್ಲಿಷನ್ನು ದೊಡ್ಡ ‘ಚಿನ್ನದ’ ಕಡಾಯಿಯೆಂದೇ ಭಾವಿಸೋಣ. ಅದರ ತುಂಬ ಹಾಲಿರುವುದನ್ನೂ ಒಪ್ಪಿಕೊಳ್ಳೋಣ. ಆದರೆ ನಮ್ಮ ಮಕ್ಕಳಿಗೆ ಪುಷ್ಟಿಗಾಗಿ ಹಾಲು ಕೊಡುವಾಗ ಚಿಕ್ಕ ಒಳಲೆಯಲ್ಲಿ ಕೊಟ್ಟರೆ ಸಾಕು. ಅದಕ್ಕೆ ಬದಲಾಗಿ ಚಿನ್ನದ ಕಡಾಯಿ ಬಹಳ ಬೆಲೆಯುಳ್ಳದ್ದು ಎಂದು ಮಕ್ಕಳು ಅದರಲ್ಲಿ ಹಾಲು ಕುಡಿಯಲೆಂದು ಬಿಟ್ಟರೆ ಆ ಕಡಾಯಿಯನ್ನು ಎತ್ತುವಾಗ ಹಾಲನ್ನು ಚೆಲ್ಲಿಕೊಂಡು ಆ ಭಾರವಾದ ಕಡಾಯಿಯನ್ನು ಮೈಮೇಲೆ ಹಾಕಿಕೊಂಡು ಮಕ್ಕಳು ಅಪಘಾತಕ್ಕೆ ಒಳಗಾಗುತ್ತಾರೆ. ಒಂದುವೇಳೆ ಎತ್ತಲು ಸಮರ್ಥರಾದ ಮಕ್ಕಳೂ ಅದನ್ನು ಚೆಲ್ಲಿಕೊಂಡು ಸುರಿದುಕೊಂಡರೂ ಹಾಲು ಹೊಟ್ಟೆಗೆ ಹೋಗದಿರಬಹುದು. ಚಿನ್ನದ ಕಡಾಯಿ ಎಷ್ಟೇ ಬೆಲೆಬಾಳುವುದಾದರೂ ಅದರ ಭಾರಾಪಘಾತ ನಮಗೆ ಬೇಡ.

ಕಂಟೋನ್ಮೆಂಟ್ ಹೈಸ್ಕೂಲಿನ ಸಮಕ್ಕೆ ತಿಪ್ಪಗೊಂಡದೆ ಹೈಸ್ಕೂಲ್ ಬರಬೇಕೆಂದರೆ ಹೇಗೆ ಸಾಧ್ಯ? ಹಳ್ಳಿಯ ವಿದ್ಯಾರ್ಥಿ ಪಟ್ಟಣದ ವಿದ್ಯಾರ್ಥಿಯ ಸ್ಥಿತಿಗೆ ಬರಬೇಕೆಂದರೆ ಹೇಗೆ ಸಾಧ್ಯ? ನಮ್ಮ ದೇಶದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಖಾನೆ ಅಣೆಕಟ್ಟುಗಳ ಕೆಲಸಕಾರ್ಯಗಳನ್ನೂ ನಿಲ್ಲಿಸಿ, ಅದರಿಂದ ಉಳಿತಾಯವಾಗುವ ಎಲ್ಲ ಸಂಪತ್ತನ್ನೂ ಇಂಗ್ಲಿಷ್ ವಿದ್ಯಾಭ್ಯಾಸದ ಮಟ್ಟವನ್ನು ಏರಿಸಲು ವಿನಿಯೋಗಿಸಿದರೂ, ಇನ್ನೂ ಕೋಟ್ಯಂತರ ರೂಪಾಯಿಗಳನ್ನು ಸುರಿದರೂ, ಇನ್ನೂ ನೂರು ವರ್ಷಗಳ ಕಾಲ ಸತತವಾಗಿ ದುಡಿದರೂ ಇಂಗ್ಲಿಷ್ ಭಾಷಾಜ್ಞಾನ ನಮ್ಮ ವಿದ್ಯಾರ್ಥಿಗಳಲ್ಲಿ ಈಗಿರುವುದಕ್ಕಿಂತಲೂ ಹುಚ್ಚೇನೂ ಉತ್ತಮವಾಗುವುದಿಲ್ಲವೆಂದು ಖಚಿತವಾಗಿ ಹೇಳುತ್ತೇನೆ. ಒಂದು ವೇಳೆ ನಾಲ್ವರು ವಿದ್ಯಾರ್ಥಿಗಳಿಗೆ ಒಬ್ಬ ಇಂಗ್ಲಿಷ್ ಅಧ್ಯಾಪಕನನ್ನು ನೇಮಿಸಿ ಇಂಗ್ಲಿಷನ್ನು ದಿನಕ್ಕೆ ನಾಲ್ಕು ಗಂಟೆಗಳಕಾಲ ಪಾಠ ಹೇಳಿಸಿದರೆ ಉಳಿದ ಪಾಠಗಳ ಗತಿಯೇನು? ಈ ಭ್ರಾಂತಿಯನ್ನು ಬಿಟ್ಟು ದೇಶದ ಅಪಾರ ನಷ್ಟವನ್ನು ತಡೆಗಟ್ಟಲು ಇಂಗ್ಲಿಷಿನ ಹೊರೆಯನ್ನು ಕಡಿಮೆಮಾಡಿ ವಿದ್ಯಾರ್ಥಿಗಳ ನವೋದಯಕ್ಕೆ ಪ್ರೇರಕವಾಗುವ ನಿರ್ಣಯಗಳನ್ನು ಮಾಡಬೇಕು.

ಇಂದಿನ ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಇನ್ನೊಬ್ಬರು ಬರೆದುಕೊಟ್ಟ ಪ್ರಬಂಧಗಳನ್ನು ಬಾಯಿಪಾಠಮಾಡಿ, ಪರೀಕ್ಷೆಯಲ್ಲಿ ಅದೃಷ್ಟವಶಾತ್ ಅವೇ ಪ್ರಶ್ನೆಗಳು ಬಂದರೆ ಹೇಗೋ ತೇರ್ಗಡೆಯಾಗುವ ಮಾರ್ಗವೊಂದನ್ನೆ ಅನುಸರಿಸುತ್ತಿದ್ದಾರೆ. ಪರೀಕ್ಷೆಯ ಮರುದಿನವೆ ಅವರಿಗೆ ಎಲ್ಲವೂ ಮರೆತುಹೋಗಿರುತ್ತದೆ. ನಾನು ವಿದ್ಯಾರ್ಥಿಯಾಗಿದ್ದಾಗ ವರ್ಡ್ಸ್ ವರ್ತ್ ಕವಿಯ Tintern Abbey ಎಂಬ ಕವನವು ಪಠ್ಯಪುಸ್ತಕದಲ್ಲಿತ್ತು. ನನಗೆ ‘ದರ್ಶನ’ದಲ್ಲಿ ಆಸಕ್ತಿ ಇದ್ದುದರಿಂದ ಕವನವನ್ನು ಅರ್ಥಮಾಡಿಕೊಂಡು ಪ್ರಬಂಧ ಬರೆದಿದ್ದೆ. ಪರೀಕ್ಷೆಯಲ್ಲಿಯೂ (ಕ್ಲಾಸ್ ಪರೀಕ್ಷೆಯಲ್ಲಿ) ಉತ್ತಮರೀತಿಯಲ್ಲಿ ಬರೆದೆ. ಅಧ್ಯಾಪಕರು ಆ ಉತ್ತರವನ್ನು ಮೆಚ್ಚಿ ”What a good answer!” ಎಂದು ತರಗತಿಯಲ್ಲಿ ತಂದು ಓದಿದರು. ಕೆಲವು ವಿದ್ಯಾರ್ಥಿಗಳು ನಾನು ಬರೆದ ಪ್ರಬಂಧವನ್ನು ಬಾಯಿಪಾಠಮಾಡಿ ತೇರ್ಗಡೆಯಾದರು. ಈ ಸ್ಥಿತಿಯಲ್ಲಿ ನಮ್ಮ ಇಂಗ್ಲಿಷ್ ವಿದ್ಯಾಭ್ಯಾಸ ನಡೆಯುತ್ತಿದೆ. ಎಲ್ಲರ ಬಾಯಿಗೂ ಇಂಗ್ಲಿಷನ್ನು ತುರುಕುವ ಹವ್ಯಾಸವನ್ನು ಬದಲಾಯಿಸಬೇಕು. ಆದ್ದರಿಂದ ಯಾರಿಗೆ ಎಷ್ಟು ಇಂಗ್ಲಿಷ್ ಬೇಕೆಂಬುದನ್ನು ನಿರ್ಣಯಿಸಿದರೆ ದೇಶದ ಕ್ಷೇಮವನ್ನು ಸಾಧಿಸಿ, ದೇಶಕ್ಕೆ ಜನಕ್ಕೆ ಆಗುತ್ತಿರುವ ಅಪಾರ ನಷ್ಟವನ್ನು ನಿಲ್ಲಿಸಬಹುದು.

ಇಂಗ್ಲಿಷ್ ತರಗತಿಯಲ್ಲಿ ಎದ್ದು ನಿಂತು ಇಂಗ್ಲಿಷಿನಲ್ಲಿಯೆ ಪ್ರರ್ಶನೆ ಕೇಳಬೇಕು. ವಿದ್ಯಾರ್ಥಿಗೆ ತಿಳಿಯುವ ಬಯಕೆ ಇದ್ದರೂ ಇಂಗ್ಲಿಷಿನಲ್ಲಿ ಪ್ರಶ್ನೆಕೇಳಲು ಸರಿಯಾಗಿ ಬರುವುದಿಲ್ಲ. ಅದರೊಡನೆ ಇಂಗ್ಲಿಷ್ ತಪ್ಪಾದರೆ ಯಾರಾದರೂ ನಗುವರೊ ಎಂಬ ಹೆದರಿಕೆ. ಇಂತಾಗಿ ಬಾಯಿಬಿಡದೆ ತೆಪ್ಪಗೆ ಕುಳಿತಿರುತ್ತಾನೆ. ಇಂಗ್ಲಿಷನ್ನು ಕನ್ನಡದಲ್ಲಿ ಬೋಧಿಸಿದರೆ ವಿದ್ಯಾರ್ಥಿ ತನ್ನ ಸಂದೇಹಗಳನ್ನು ಪರಹರಿಸಿಕೊಳ್ಳಲು ಸಮರ್ಥನಾಗುತ್ತಾನೆ. ತಲೆಹರಟೆ ಎಂದು ಹೇಳಿಸಿಕೊಳ್ಳುವವರೆಗೆ ಬೇಕಾದರೂ ಪ್ರಶ್ನೆಗಳನ್ನು ಧೈರ್ಯವಾಗಿ ಕೇಲುತ್ತಾನೆ. ಅದರಿಂದ ಅವನ ಜ್ಞಾನವಿಕಾಸಕ್ಕೆ ತುಂಬ ಪ್ರಯೋಜನವಾಗುತ್ತದೆ.

ಈ ದೃಷ್ಟಿಯಿಂದ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ನಾವು ಎಷ್ಟು ಇಂಗ್ಲಿಷ್ ಬಳಸಬೇಕೆಂಬುದನ್ನು ನಾವೇ ನಿರ್ಣಯಿಸಬೇಕು. ಬೇರೆಯವರು ನಿರ್ಣಯಿಸಲೆಂದು ಬಿಡುವುದು ಹೆಚ್ಚು ಅಪಾಯಕರ. ರಾಜಕೀಯ ಕಾರಣಕ್ಕಾಗಿ ದುಡಿಯುವ ವ್ಯಕ್ತಿಗಳು ಉಗ್ರವಾದ ನಿರ್ಣಯಗಳನ್ನು ಬೇಕಾದರೂ ಕೈಗೊಳ್ಳಬಹುದು. ತಮ್ಮ ಪ್ರತಿಷ್ಠೆಯನ್ನು ಬೆಳೆಸಿಕೊಳ್ಳಬೇಕೆನ್ನುವವರು ಈ ದೌರ್ಬಲ್ಯಗಳನ್ನು ಆಶ್ರಯಿಸಿಕೊಂಡು “ಮಕ್ಕಳೇ, ನಿಮ್ಮ ಭವಿಷ್ಯವನ್ನು ನಾವು ಕಟ್ಟುತ್ತೇವೆ. ನಮಗೆ ಬೆಂಬಲ ಕೊಡಿ” ಎಂದು ಹೇಳಿ ಗಲಾಟೆ ಎಬ್ಬಿಸಬಹುದು. ಇದಕ್ಕೆ ಅವಕಾಶ ಕೊಡದೆ ನೀವು ಈ ಗಹನವಾದ ವಿಚಾರವನ್ನು ಚೆನ್ನಾಗಿ ಪರಿಶೀಲಿಸಿ ಇಂಗ್ಲಿಷನ್ನು ಎಷ್ಟು ಇಟ್ಟುಕೊಳ್ಳಬೇಕು, ಯಾವ ತೆರದಲ್ಲಿ ಇಟ್ಟುಕೊಳ್ಳಬೇಕು, ಯಾರ ತಲೆಯ ಮೇಲೆ ಎಷ್ಟು ಭಾರವನ್ನು ಹೊರಿಸಬೇಕು-ಎಂದು ನಿರ್ಣಯಿಸಿ, ಇಂಗ್ಲಿಷಿನ ಭವಿಷ್ಯವನ್ನು ನಿರ್ಣಯಿಸಿದರೆ ದೇಶಕ್ಕೆ ಕ್ಷೇಮ. ದೇಶಹಿತಕ್ಕಾಗಿ ಯೋಗ್ಯ ನಿರ್ಣಯಗಳನ್ನು ಕೈಗೊಳ್ಳಲು ವಾಗ್ದೇವಿ ತಮಗೆಲ್ಲರಿಗೂ ಶಕ್ತಿಯನ್ನು ದಯೆಗೈಯಲೆಂದು ಪ್ರಾರ್ಥಿಸಿ ಧನ್ಯವಾದಗಳನ್ನು ಆರ್ಪಿಸುತ್ತೇನೆ.

* * *

ಇಂಗಿಹೋಗುತಿದೆ ಇಂಗ್ಲಿಷಿನ ಮರುಭೂಮಿಯಲಿ
ನಿನ್ನ ಮಕ್ಕಳ ಶಕ್ತಿ-ಬುದ್ಧಿ-ಪ್ರತಿಭಾ;
ರಾಷ್ಟ್ರನಾಯಕ ಮನದಿ ವಿವೇಕರೂಪದಿ ಮೂಡಿ,
ಓ ರಸಮಯೀ ಸರಸ್ವತಿಯೆ, ಪೊರೆ ಬಾ!

ಕಲ್ಲ ಕುಂಡದಿ ನೆಟ್ಟ ಅಶ್ವತ್ಥ ಸಸಿಯಂತೆ
ಕಿಮುಳ್ಚಿ ಗುಜ್ಜಾಗುತಿದೆ ಮೊಳೆವೆ ಚೈತನ್ಯ;
ಭೂಮಿಯಲಿ ಬೇರೂರಿ, ಬಾನೆಡೆಗೆ ತಲೆಯೆತ್ತಿ
ನಿಲುವವರಿಗೇತಕೀ ದಾಸ್ಯದೈನ್ಯ?

ಗಾಂಧಿಯಿಂದಿಂಗ್ಲಿಷರ ದಾಸ್ಯದಿಂ ಪಾರಾದೆ;
ಅವನ ಕೊಂದಿಂಗ್ಲಿಷಿಗೆ ದಾಸಿಯಾದೆ.
ಓ ತಾಯಿ ಭಾರತಿಯೆ, ಚೀಣಿಯರನೆ ಮೀರಿ
ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ!

* * *


[1] ಮೈಸೂರು ವಿದ್ಯಾಭ್ಯಾಸದ ಇಲಾಖೆಯ ಆಶ್ಯದಲ್ಲಿ ಮೈಸೂರಿನಲ್ಲಿ ೨೫-೧-೧೯೫೯ರಲ್ಲಿ ನಡೆದ ಇಂಗ್ಲಿಷ್ ಭಾಷಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಛಾನ್ಸಲರ್ ಅವರು ಮಾಡಿದ ಭಾಷಣ.