ನನಗೆ ಮನಶ್ಶಾಸ್ತ್ರದಲ್ಲಿ ಅಭಿಮಾನ. ಆದರೆ ಅಭಿಮಾನಕ್ಕಿಂತಲೂ ಇನ್ನೂ ಸ್ವಲ್ಪ ಹೆಜ್ಜೆ ಮುಂದಕ್ಕೆ ಹೋಗಬೇಕಾಗುತ್ತದೆ. ಜೀವಂತವಾದ ತೀವ್ರ ಆಸಕ್ತಿಯೂ ಇದೆ. ನಾನು ನಿತ್ಯವೂ ಓದುವ ಗ್ರಂಥಗಳಲ್ಲಿ ಒಂದಾದರೂ ಮನಶಾಸ್ತ್ರಕ್ಕೆ ಸಂಬಂಧಪಟ್ಟುದಾಗಿರುತ್ತದೆ. ಏಕೆಂದರೆ, ಅದು ನನಗೆ ಬರಿಯ ಶಾಸ್ತ್ರವಲ್ಲ; ಅದು ಒಂದು ರೀತಿಯಲ್ಲಿ ಸಾಕ್ಷಾತ್ಕಾರದ ಸೂತ್ರಗಳನ್ನು ಒಳಗೊಂಡ ಶಾಸ್ತ್ರ. ನನ್ನ ಸ್ವಂತ ಜೀವನದಲ್ಲಿ ಆಲೋಚನೆಯ ಆವಶ್ಯಕತೆಗಾಗಿ ಮನಶ್ಶಾಸ್ತ್ರ, ತತ್ವಶಾಸ್ತ್ರ, ಸಾಹಿತ್ಯ – ಇವೆಲ್ಲ ಭೇದಗಳನ್ನು ಕಲ್ಪಿಸಿಕೊಂಡಿರುವುದುಂಟು. ಆದರೆ ಅನುಭವದ ದೃಷ್ಟಿಯಿಂದ ನನ್ನ ಕಾವ್ಯದಲ್ಲಿ, ನನ್ನ ಸಾಹಿತ್ಯದಲ್ಲಿ ಮನಶ್ಶಾಸ್ತ್ರ, ತತ್ತ್ವಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರದ ವಿಷಯ- ಮುಂತಾದ ಇನ್ನೂ ಹಲವಾರು ವಿಷಯಗಳು, ಒಂದೇ ವ್ಯಕ್ತಿಯ ಶರೀರದಲ್ಲಿ ವಸ್ತುತಃ ಒಂದಕ್ಕೊಂದು ಬಹು ದೂರವಾಗಿ ಬೇರೆ ಬೇರೆಯಾಗಿರುವ ಪದಾರ್ಥಗಳು ಸೇರಿಕೊಂಡಿರುವಂತೆ, ಸೇರಿಕೊಂಡಿವೆ. ಯಾವುದೋ ಒಂದು ಸತ್ತ್ವ ಅದಕ್ಕೆ ಏಕತ್ವವನ್ನು ದಯಪಾಲಿಸಿದೆ. ನಮ್ಮ ಶರೀರದಲ್ಲಿರುವ ಮಾಂಸ, ರಕ್ತ, ಎಲುಬು – ಇವುಗಳನ್ನು ನೋಡಿದರೆ ಒಂದಕ್ಕೂ ಮತ್ತೊಂದಕ್ಕೂ ಎಷ್ಟು ವ್ಯತ್ಯಾಸ! ಒಂದು ಮೃದು, ಒಂದು ಕಠಿಣ – ನಾನಾ ರೂಪಗಳಲ್ಲಿ ವ್ಯತ್ಯಾಸ. ಈ ಬಹುತ್ವ, ಈ ಭೇದ, ಹಲವಾರು ಪ್ರಭೇದ – ಇವು ಶರೀರಕ್ಕೆ, ಶರೀರವನ್ನು ಉಪಯೋಗಿಸುವ ಜೀವಕ್ಕೆ ಅತ್ಯಂತ ಆವಶ್ಯಕವಾದ ಸಾಮಗ್ರಿ. ಹಾಗೆಯೇ ಜೀವನದಲ್ಲಿ ನಾವು ಬೇರೆ ಬೇರೆ ಅಧ್ಯಯನಕ್ಕಾಗಿ, ಆಲೋಚನೆಗಾಗಿ, ವಿಭಜನೆಗಳನ್ನು ಮಾಡಿ, ಬೇರೆ ಬೇರೆ ಶಾಸ್ತ್ರಗಳನ್ನು ಕಲ್ಪಿಸುತ್ತೇವೆ. ಆದರೆ ಬದುಕು ಇವುಗಳ ಪ್ರತ್ಯೇಕತಾ ಭಾವವನ್ನು ತೋರುವುದಿಲ್ಲ. ಇವೆಲ್ಲವೂ ಆವಶ್ಯಕ. ಆದುದರಿಂದ ಈ ಏಕಸೂತ್ರ ಈ ಏಕತ್ವ ಅವೆಲ್ಲವನ್ನೂ ಬಂಧಿಸಿದೆ.

ನನಗೆ ಇದು ಬದುಕಿನ ಅನುಷ್ಠಾನ ಪ್ರಯೋಜನದ ವಸ್ತುವಾಗಿರದೆ ಬರಿಯ ಶಾಸ್ತ್ರದ ಅಧ್ಯಯನ ವಿಷಯವಾಗಿದ್ದಿದ್ದರೆ ಇದರ ತಂಟೆಗೆ ಹೋಗದೆ ಸುಖವಾಗಿ ವೈಸ್‌ಚಾನ್ಸಲರ್‌ ಕರ್ತವ್ಯವಷ್ಟನ್ನೆ ನಿರ್ವಹಿಸುತ್ತಾ ಇರಬಹುದಾಗಿತ್ತು. ಆದರೆ ಶೈಶವ, ಯೌವನ, ಜರಾ ಬರುವಂತೆ ವೈಸ್‌ಚಾನ್ಸಲರ್ ಪದವಿ ಎಂಬುದೂ ಬಂದು ಹೋಗತಕ್ಕ ವಿಷಯ. ಆದುದರಿಂದ ಹೀಗೆ ಕ್ಷಣಿಕವಾಗಿ, ಕ್ಷಣಭಂಗುರವಾಗಿ ಬಂದು ಹೋಗುವಂಥ ವಿಷಯಗಳನ್ನ ನಿತ್ಯಸತ್ಯವೆಂದು ಹಿಡಿದುಕೊಂಡು, ಯಾವುದು ಶಾಶ್ವತವೊ, ಸದಾ ಇರುತ್ತದೆಯೊ ಅದನ್ನು ಮರೆತರೆ ನಿವೃತ್ತವಾದ ಮೇಲೆ ರೈಲ್ವೆ ಕಂಬಿಯನ್ನೊ ಮರದ ಕೊಂಬೆಯನ್ನೊ ಆಶ್ರಯಿಸಬೇಕಾಗಿ ಬಂದೀತು. ಆದ್ದರಿಂದಲೆ ಮನಶ್ಶಾಸ್ತ್ರದಲ್ಲಿ ನನಗೆ ಜೀವಂತವಾದ ಆಸಕ್ತಿ. ಬಹುಶಃ ನಾನು ಅದರ ಶಾಖೆ ಉಪಶಾಖೆಗಳಲ್ಲೆಲ್ಲ ಆಸಕ್ತನಾಗಿದ್ದೇನೆ. ಅಂತಹ ಶಾಖೆಗಳು ಇವೆ ಎಂಬುದೂ ಕೂಡ ನಿಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲವೆಂದು ಕಾಣುತ್ತದೆ. ಏಕೆಂದರೆ, ನನ್ನ ಗುರಿ ಬರಿಯ ಶಾಸ್ತ್ರಾಧ್ಯಯನ ಮಾತ್ರವಲ್ಲ. ನನ್ನ ಜೀವನದ ವಿಕಾಸದ ಮಾರ್ಗದಲ್ಲಿ, ಅದರ ಪ್ರಯಾಣದಲ್ಲಿ ಇವುಗಳಿಂದ ಏನೇನು ಸಹಾಯ ದೊರಕೀತು, ಶಕ್ತಿ ಲಭಿಸೀತು, ದಾರಿ ಕಂಡೀತು, ವಿಘ್ನಗಳ ಅಪಸರಣವಾದೀತು – ಎಂದರೆ ಮುಖ್ಯ ಆಸೆ, ಗುರಿ. ನಾನು ಇಲ್ಲಿಗೆ ಬರುತ್ತೇನೆಂದು ಒಪ್ಪಿಕೊಂಡಾಗ ಬಹುಶಃ ಅಸ್ಪಷ್ಟವಾದ ಈ ಪ್ರೇರಣೆಗಳೆಲ್ಲಾ ನನ್ನ ಮನಸ್ಸಿನ ಹಿಂದೆ ಇದ್ದುವೆಂದು ತೋರುತ್ತದೆ.

ನಾನು ಬಯಲಿನ ವ್ಯಕ್ತಿ, ಕಾಡಿನ ವ್ಯಕ್ತಿ, ಹೊಳೆ ಕೆರೆಗಳ ವ್ಯಕ್ತಿ, ಬಾನು ಬಯಲುಗಳ ವ್ಯಕ್ತಿ, ಅಲ್ಲಿ ನನ್ನ ಬಾಳು; ಇಲ್ಲಿ ಆ ಬಾಳನ್ನು ಕುರಿತು ಧ್ಯಾನ, ಆಲೋಚನೆ, ತತ್ತ್ರಗ್ರಹಣ, ಬಹುಶಃ ಬಾಳಿಲ್ಲದ ಆಲೋಚನೆ  ತತ್ತ್ವಗ್ರಹಣ – ಇವು ತುಂಬಾ ನೀರಸ, ‘ಮ್ಯೂಸಿಯಂ’ನಲ್ಲಿ ನೋಡುವ ಪ್ರಾಣಿಗಳಂತೆ. ಬಾಳು ಸಹಿತವಾಗಿದ್ದ ಪಕ್ಷದಲ್ಲಿ ಅವು ಅರಣ್ಯದ ಪ್ರಾಣಿಗಳಂತೆಯೆ ಅಥವಾ ಮೃಗಾಲಯದ ಜೀವಂತ ಪ್ರಾಣಿಗಳಂತೆಯೆ ಇರುತ್ತವೆ, ತಮ್ಮ ಜೀವಲಕ್ಷಣ ಸ್ವರೂಪಗಳನ್ನೊಳಗೊಂಡು.

ನಾನು ಮಾತನಾಡುತ್ತಿರುವುದು ಮನಶ್ಶಾಸ್ತ್ರದ ಸಂಘದಲ್ಲಿ – ಇಲ್ಲಿ ಹೆಚ್ಚಾಗಿ ಮನಶ್ಶಾಸ್ತ್ರದ ವಿದ್ಯಾರ್ಥಿಗಳೇ ಇದ್ದೀರಿ ಎಂದು ನನ್ನ ಭಾವನೆ. ಇಂದಿನ ಮನಶ್ಶಾಸ್ತ್ರ ನಾನು ಓದುತ್ತಿದ್ದ ಕಾಲದ ಮನಶ್ಶಾಸ್ತ್ರಕ್ಕಿಂತಲೂ ಶಾಖೋಪಶಾಖೆಗಳಲ್ಲಿ ಬಹುಮಟ್ಟಿಗೆ ಮುಂದುವರಿದಿದೆ, ಮುಂದುವರಿಯುತ್ತಿದೆ; ಬಹುಶಃ ಆಗ ಇದ್ದುದಕ್ಕಿಂತ ಹೆಚ್ಚಾಗಿ ಭಾರತೀಯತ್ವ ಸ್ವಲ್ಪಮಟ್ಟಿಗೆ ಪ್ರವೇಶಿಸಿದೆ ಎಂದು ತೋರುತ್ತದೆ. ವಿಶ್ವವಿದ್ಯಾನಿಲಯದ ಸಹಾಯಧನ ಆಯೋಗದವರು (University Grants Commission) ಈಗ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾಂಗವನ್ನು ಪ್ರಬಲಗೊಳಿಸಬೇಕು, ಪುಷ್ಟಿಗೊಳಿಸಬೇಕು – ಎಂದು ಆಲೋಚಿಸಿ ಅದಕ್ಕೆ ಸಹಾಯಧನ ನೀಡಿದ್ದಾರೆ. ಇನ್ನು ಈ ವಿವಿಧ ಅಧ್ಯಯನದ ಶಾಖೆಗಳಲ್ಲಿ ಸಂಶೋಧನೆಯ ಮಟ್ಟದ ಕೆಲಸ ನಡೆಯಬೇಕಾಗಿದೆ. ಅದಕ್ಕೆ ಅಧ್ಯಾಪಕರ ನಿರ್ದೇಶನದಲ್ಲಿ ಸಮರ್ಥರಾದ ವಿದ್ಯಾರ್ಥಿಗಳು ಹಗಲಿರುಳು ದುಡಿಯುವ ಕಾರ್ಯಕ್ಕೆ ಸೊಂಟಕಟ್ಟಿ ನಿಲ್ಲಬೇಕಾಗುತ್ತದೆ. ಈ ವಿಚಾರದಲ್ಲಿ ಇದುವರೆಗೆ ಸಂಗ್ರಹವಾಗಿರುವ ಮಹಶ್ಶಾಸ್ತ್ರದ ವಿಷಯ ಮತ್ತು ವಸ್ತುಗಳನ್ನು ಅರಿಯುವುದರಲ್ಲಿಯೆ ಪರ್ಯವಸಾನವಾಗಬಾರದು. ಅದೂ ಆವಶ್ಯಕಃ ಬೋಧನಾಂಗದ ಕೆಲಸವೂ ಅದೇ. ಇದುವರೆಗೆ ಬೇರೆ ಬೇರೆ ಜನಾಂಗಗಳಲ್ಲಿ ಮತ್ತು ನಮ್ಮ ದೇಶದಲ್ಲಿ ಅಡಕವಾಗಿರುವ ವಿದ್ಯೆ ಸಂಸ್ಕೃತಿ ಎಲ್ಲವೂ ಮಕ್ಕಳ ಮನಸ್ಸಿಗೆ ಹೋಗುವಂತೆ ಮಾಡತಕ್ಕದ್ದು ಒಂದು ರೀತಿಯ ಪ್ರಸಾರ, ಇದ್ದದ್ದನ್ನು ಹಂಚುವುದು – ಅದೇ ವಿಶ್ವವಿದ್ಯಾನಿಲಯದ ಬೋಧನಾಂಗದ ಕೆಲಸ. ಆದರೆ ಸಂಶೋಧನಾಂಗದ ಕೆಲಸ ಬೋಧನಾಂಗದ ಕೆಲಸ ಮುಗಿದ ಮೇಲೆ. ಈ ಸಂಶೋಧನಾಂಗದ ಕಾರ್ಯ ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುವುದು, ಜ್ಞಾನದ ದಿಗಂತಗಳನ್ನು ವಿಸ್ತರಿಸುವುದು. ಕೆಲವರ ಅಭಿಪ್ರಾಯದಲ್ಲಿ ವಿಶ್ವವಿದ್ಯಾನಿಲಯದ ಮುಖ್ಯ ಸ್ವರೂಪವೇ ಈ ಸಂಶೋಧನಾಂಗ, ಉಳಿದುದೆಲ್ಲವೂ ಗೌಣ. ಆದ್ದರಿಂದ ವಿಶ್ವವಿದ್ಯಾನಿಲಯ ಈ ಬೋಧನೆಯ ಕೆಲಸವನ್ನು ಇನ್ನು ಯಾರಿಗಾದರೂ ವಿಧಿಸಿ, ತನ್ನ ಗಮನವನ್ನೆಲ್ಲಾ ಶೋಧನೆಯ ಕೆಲಸದ ಮೇಲೆಯೇ ಕೇಂದ್ರಿಕರಿಸಬೇಕು ಎಂದು ಒಂದು ಅಬಿಪ್ರಾಯ. ಈ ವಿಚಾರವನ್ನು ಕುರಿತು ನಾನು ಇಲ್ಲಿ ಚರ್ಚೆಗೆ ಹೋಗುವುದಿಲ್ಲ. ಅಂತೂ ಈ ಸಂಶೋಧನಾಂಗವನ್ನ – ಅದರಲ್ಲೂ ಮನಶ್ಶಾಸ್ತ್ರದ ವಿಷಯವನ್ನು ಕುರಿತು ಒಂದೆರಡು ಮಾತುಗಳನ್ನು ಹೇಳುತ್ತೇನೆ.

ಬಹುಶಃ ಮನಶ್ಶಾಸ್ತ್ರದ ಶಾಖೆ ನಾವು ವಿದ್ಯಾರ್ಥಿಗಳಾಗುವುದಕ್ಕೆ ಮೂರು ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಯಿತು. ಎಂದರೆ, ನಾವು ವಿದ್ಯಾರ್ಥಿಗಳಾಗಿ ಬರುವ ವೇಳೆಗೆ ಮನಶ್ಶಾಸ್ತ್ರದ ಒಂದು ಇಲಾಖೆ ಪ್ರಾರಂಭವಾಗಿತ್ತು; ಅದಕ್ಕೆ ನಾಲ್ಕೈದು ವರ್ಷಗಳ ಹಿಂದೆ ಅದು ಇರಲಿಲ್ಲ. ಇರದಿದ್ದುದರಿಂದ ಏನು ಕೇಡಾಗಿತ್ತು? ವಿಶ್ವವಿದ್ಯಾನಿಲಯದ ಕೆಲಸ ನಡೆದುಕೊಂಡು ಹೋಗುತ್ತಿತ್ತ, ಅಸಾಧಾರಣ ಪ್ರಾಧ್ಯಾಪಕರು ಬರುತ್ತಿದ್ದರು, ಎಲ್ಲ ನಡೆಯುತ್ತಿತ್ತು – ಅದು ಇರದಿದ್ದುದರಿಂದ ಏನೂ ತೊಂದರೆ ಆಗುತ್ತಿರಲಿಲ್ಲ; ಹಾಗೆ ತೋರುತ್ತಿತ್ತು. ಆದರೆ ಯಾವುದೋ ದೇಶದಲ್ಲಿ, ಎಲ್ಲಿಯೋ ‘ಮನಸ್ಸು ಎಂಬುದು ಒಂದು ಮುಖ್ಯ ವಿಷಯ. ಉಳಿದ ಶರೀರಶಾಸ್ತ್ರ, ಪ್ರಾಣಿಶಾಸ್ತ್ರ, ಭೌತಶಾಸ್ತ್ರ, ರಾಜ್ಯಶಾಸ್ತ್ರಗಳನ್ನು ಹೇಗೆ ಅಧ್ಯಯನ ಮಾಡುವುದು ಆವಶ್ಯಕವೋ ಹಾಗೆಯೇ ಮನಸ್ಸನ್ನೂ ಒಂದು ಶಾಸ್ತ್ರವನ್ನಾಗಿ ಅಧ್ಯಯನಮಾಡಬೇಕು’ ಎಂಬುದು ಯಾರಿಗೋ ಗೋಚರವಾಗಿ, ಅವರು ಅದನ್ನು ಪ್ರಾರಂಭಿಸಿ, ಅದು ಇಲ್ಲಿಯೂ ಪ್ರಾರಂಭವಾಯಿತು. ಈ ಮನಶಾಸ್ತ್ರ – ಸೈಕಲಾಜಿ ಎಂಬುದು ಪ್ರಾರಂಭವಾದಾಗ ವಿಚಿತ್ರವಾದ ಶಬ್ದವಾಗಿತ್ತು. ಈಗ ಅದು ‘ಕಾಂಗ್ರೆಸ್’ ಎನ್ನುವ ಶಬ್ದಕ್ಕಿಂತ ಹೆಚ್ಚು ಪರಿಚಿತವಾಗಿದೆ. ಎಂದರೆ, ಅದು ಅಷ್ಟು ಆವಶ್ಯಕ. ಮಾತೆತ್ತಿದರೆ ಅದನ್ನು ಉಪಯೋಗಿಸುತ್ತೇವೆ. ಮನಶ್ಶಾಸ್ತ್ರ ಆವಶ್ಯಕ ಎಂಬ ಭಾವನೆ ಎಲ್ಲರಿಗೂ ಬಂದಿದೆ.

ಆದರೆ ಲೌಕಿಕವಾಗಿ, ಮನಶ್ಶಾಸ್ತ್ರ ತತ್ತ್ವಶಾಸ್ತ್ರ ಇವಿಲ್ಲದಿದ್ದರೂ ಚಿಂತೆಯಿಲ್ಲ, ಶುದ್ಧ ಮತ್ತು ಉನ್ನತವಾದ ಬರಿಯ ಪ್ರಾಣಿ ಜೀವನ, ನಾಗರಿಕ ಜೀವನ ನಡೆದುಕೊಂಡು ಹೋಗುತ್ತದೆ. ಪ್ರಾಣಿ ತಿನ್ನುತ್ತದೆ, ಚೆನ್ನಾಗಿ ಬಟ್ಟೆ ಹಾಕಿಕೊಳ್ಳುತ್ತದೆ, ಪ್ರಾಣಿಕಾರ್ಯವನ್ನೆಲ್ಲಾ ಮಾಡಿಕೊಂಡು ಹೋಗುತ್ತದೆ. ಅದಕ್ಕೆ ಮನಶ್ಶಾಸ್ತ್ರವನ್ನು ಅಧ್ಯಯನಮಾಡಬೇಕೆಂಬುದೂ ಗೋಚರಿಸದಿರಬಹುದು. ಆದರೆ ನಾವು ನಮ್ಮನ್ನು ಹೆಸರಿಸಿಕೊಳ್ಳುವಾಗ ಆನೆಯೆಂದು ಕರೆದುಕೊಂಡಿಲ್ಲ, ಕುದುರೆ ಎಂದು ಕರೆದುಕೊಂಡಿಲ್ಲ – ಮನುಷ್ಯ ಎಂದು ಕರೆದುಕೊಂಡಿದ್ದೇವೆ. ಬಹುಶಃ ಉಳಿದವುಗಳಿಗಿಂತ ಹೆಚ್ಚಾಗಿ ಮನಸ್ಸುಳ್ಳ ಜೀವಿ ಎಂದು ನಮ್ಮನ್ನು ನಾವೆ ಗುರುತಿಸಿಕೊಂಡಿದ್ದೇವೆ. ಆದುದರಿಂದ ಅದರ ಕಡೆಗೆ ಗಮನ ಕೊಡಬೇಕಾದುದು ಅತ್ಯಂತ ಆವಶ್ಯಕ.

ಆದರೆ ಬಹುಶಃ ಇತರ ಶಾಸ್ತ್ರಗಳಲ್ಲೆಂತೂ – ಇತರ ಶಾಸ್ತ್ರಗಳು ಎಂದರೆ ಭೌತಿಕ ಅಥವಾ ರಾಸಾಯನಿಕ – ಅಂತೆಯೆ ಮನಶ್ಶಾಸ್ತ್ರ ಎಂದರೆ ಪಾಶ್ಚಾತ್ಯರು ಏನು ಬರೆದಿದ್ದಾರೆಯೊ ಅದೇ ಪಠ್ಯಪುಸ್ತಕವನ್ನು, ಅಲ್ಲಿಯದೇ ‘ಬಿಹೇವಿಯರಿಸಂ’ ಇತ್ಯಾದಿಗಳನ್ನು ತಂದು ಇಲ್ಲಿ ನಾವು ಹುಡುಗರಿಗೆ ಬೋಧಿಸಬೇಕು – ಎನ್ನುವ ಭಾವನೆಯೇ ಹೆಚ್ಚು. ಪಾಶ್ಚಾತ್ಯರು ಹೊಸ ಹೊಸದಾಗಿ ಪದಗಳನ್ನು ಸೃಷ್ಟಿಸುತ್ತಾರೆ; ನಾವು ಅದರ ಅರ್ಥ, ವ್ಯಾಪ್ತಿಗಳನ್ನು ತಿಳಿದುಕೊಳ್ಳುತ್ತೇವೆ. ಆದರೆ ವಾಸ್ತವವಾಗಿ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ – ಸಾವಿರಾರು ಎಂಬುದನ್ನು ಆಲಂಕಾರಿಕವಾಗಿ ಹೇಳುತ್ತಿಲ್ಲ – ಪಾಶ್ಚಾತ್ಯರ ವಿದ್ಯೆ ಕಲ್ಪನೆಗಳು ಮುಟ್ಟಲಾರದ ಮಟ್ಟದಲ್ಲಿ ಮನಶ್ಶಾಸ್ತ್ರಸಂಬಂಧವಾಗಿ, ನಮ್ಮಲ್ಲಿ ಅದನ್ನು ಮನಶ್ಶಾಸ್ತ್ರ ಎಂಬ ಪ್ರತ್ಯೇಕವಾದ ಹೆಸರಿನಿಂದಲೇ ಗುರುತಿಸದಿದ್ದರೂ, ಅದ್ಭುತವಾದ ಗ್ರಂಥಗಳು ಸೃಷ್ಟಿಯಾಗಿವೆ. ಅಷ್ಟೇ ಅಲ್ಲ, ಈಗ ನಾವು ಪ್ರಯೋಗಶಾಲೆಗಳನ್ನು ಭೌತಿಕವಾಗಿ ನಿರ್ಮಿಸಿಕೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ವ್ಯಕ್ತಿಯ ಮನಸ್ಸೇ ಪ್ರಯೋಗಶಾಲೆಯಾಗಿ ಪರಿಣಮಿಸುತ್ತಿತ್ತು. ಈಗ ನಾವು ಕೇಳಿದರೆ ನಂಬುವುದಕ್ಕೇ ಕಷ್ಟವಾಗುವಂಥ ವಿಷಯಗಳನ್ನೆಲ್ಲಾ ಹಿಂದಿನವರು ಹೇಳಿದ್ದಾರೆ. ಈ ದಾರಿಯಲ್ಲಿ ಹೋದರೆ ಹೀಗೆ ಆಗುತ್ತದೆ, ಈ ಶಕ್ತಿಗಳು ಬರುತ್ತವೆ – ಎನ್ನುವುದನ್ನೆಲ್ಲಾ ಹೇಳಿದ್ದಾರೆ.

ಆದರೆ ಈಗಲೂ ಕೂಡ ಹಿಂದಿನ ದೊಡ್ಡ ದೊಡ್ಡವರು ಬರೆದಿದ್ದಾರೆ ಎಂಬ ಗೌರವವಿದ್ದರೂ, ನಮ್ಮನ್ನು ಯಾರಾದರೂ ಬಲವಾಗಿ ಅಲುಗಿಸಿ ಕೇಳಿದರೆ ಸ್ವಲ್ಪ ಸಂದೇಹ ಹುಟ್ಟುತ್ತದೆ – ‘ಏನಪ್ಪಾ, ಇದನ್ನೆಲ್ಲಾ ಹೇಗೆ ನಂಬುವುದು? ಸರಿಯಾದ ಪ್ರಯೋಗ, ಸಿದ್ಧಾಂತ, ಪ್ರತ್ಯಕ್ಷ ದರ್ಶನ – ಇವೆಲ್ಲಾ ಬೇಕಲ್ಲ’ – ಎಂದು. ಹಿಂದಿನವರು ಹೇಳಿರುವ ಆ ವಿದ್ಯೆಯೂ ಕೂಡ ಇಲ್ಲಿಗೇ ಬರುತ್ತದೆ ಎಂದು ನಾವಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ದೂರ ಕುಳಿತು ಹೇಳಿರುವುದಕ್ಕಾಗುವುದಿಲ್ಲ. ನಾವು ಮನಶ್ಶಾಸ್ತ್ರದ ಪ್ರಯೋಗಶಾಲೆಯನ್ನು ಸೃಷ್ಟಿಮಾಡಿ ಇಲಿಗಳನ್ನು ತರಬಹುದು, ಮೊಲಗಳನ್ನು ತರಬಹುದು, ಸ್ವಲ್ಪ ಧೈರ್ಯ ಮಾಡಿದರೆ ಹಾವುಗಳನ್ನೂ ತರಬಹುದು. ಅವುಗಳ ಹೊಟ್ಟೆಗೆ ಆಹಾರ ಕೊಟ್ಟು ಏನು ಸಂತೋಷಪಡುತ್ತವೆ ಎಂದು ನೋಡಬಹುದು; ಹಸಿವು ಹುಟ್ಟಿಸಿ, ಏನು ದುಃಖ ಪಡುತ್ತವೆ ಎಂದು ನೋಡಬಹುದು. ಇದನ್ನೆಲ್ಲಾ ನಾವು ಪ್ರಯೋಗ ಮಾಡಬಹುದು. ಆದರೆ ಹಾಗೆಯೇ ಒಬ್ಬ ಯೋಗಿಯನ್ನು ಇಲಿಯನ್ನು ಎತ್ತಿಕೊಂಡು ಬಂದ ಹಾಗೆ ತಂದು ಪ್ರಯೋಗ ಮಾಡುವುದಕ್ಕಾಗುತ್ತದೆಯೆ? ಒಬ್ಬ ಋಷಿ ಎಲ್ಲೋ ಕುಳಿತು ತಪಸ್ಸು ಮಾಡುತ್ತಿರುತ್ತಾನೆ – ಅವನನ್ನು ತರುವುದಕ್ಕಾಗುತ್ತದಯೆ? ಆ ದಾರಿಯಲ್ಲಿ ಬಹಳ ಗೋಪ್ಯವಾಗಿ, ಗುಂಭವಾಗಿ ಮುಂದುವರಿಯುವವರಿದ್ದಾರೆ – ಅವರನ್ನು ತರುವುದಕ್ಕಾಗುತ್ತದೆಯೆ? ಅಥವಾ ಆ ಮಹಾ ವಿದ್ಯೆಯನ್ನು ಅನಧಿಕಾರಿಗಳಿಗೆ ಹೇಳುವುದೇ ಪಾಷಂಡಿತನ ಎಂದು ಭಾವಿಸಿ, ಅದನ್ನು ರಕ್ಷಿಸಿಕೊಂಡಿರುತ್ತಾರೆ – ಅವರನ್ನೆಲ್ಲಾ ತರುವುದಕ್ಕಾದೀತೆ? ಮೊಲ ಇಲಿ ಹಾವುಗಳನ್ನೆಲ್ಲಾ ತಂದು ಪ್ರಯೋಗಶಾಲೆಯಲ್ಲಿಟ್ಟು ಪರೀಕ್ಷೆ ಮಾಡಿದಂತೆ ಅವರನ್ನು ತರುವುದಕ್ಕಾಗುತ್ತದೆಯೆ? ಆಗುವುದಿಲ್ಲ. ಅಂದರೇನು – ಪ್ರಯೋಗಶಾಲೆಗಳನ್ನು ಈ ರೀತಿ ನಿರ್ಮಿಸಿರುವುದರ ಜೊತೆಗೆ ನಮ್ಮನ್ನು ನಾವೇ ಪ್ರಯೋಗಶಾಲೆಗಳನ್ನಾಗಿ ಮಾಡಿಕೊಳ್ಳಬೇಕು. ಇನ್ನೊಂದು – ತಮ್ಮನ್ನು ತಾವೇ ಪ್ರಯೋಶಾಲೆಗಳನ್ನಾಗಿ ಮಾಡಿಕೊಂಡು,  ಈ ವಿಚಾರದಲ್ಲಿ ಮುಂದುವರಿಯುವವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಅನ್ವೇಷಣೆ ಮಾಡಬೇಕು. ಅವರು ‘ನಾವು ಇಲ್ಲಿದ್ದೇವೆ’ ಎಂದು ಜಾಹಿರಾತು ಹಾಕುವುದಿಲ್ಲ; ಅದಕ್ಕೆ ವ್ಯತಿರಿಕ್ತವಾಗಿ ತಮ್ಮಲ್ಲೇನೂ ಇಲ್ಲ, ತಮಗೇನೂ ಗೊತ್ತಿಲ್ಲ – ಎಂದೇ ಹೇಳಿಕೊಳ್ಳುತ್ತಾರೆ.

ಆದ್ದರಿಂದ ಇನ್ನು ಮುಂದೆ ಈ ವಿಚಾರದಲ್ಲಿ ವಿಶ್ವವಿದ್ಯಾನಿಲಯದ ಆಯೋಗ ಕೊಡುವ ಹಣದಿಂದ ನಾವು ಕಟ್ಟುವ ಪ್ರಯೋಗಶಾಲೆಗಳು ಮಾತ್ರವೇ ಮುಖ್ಯವಲ್ಲ; ಈ ವಿಷಯದಲ್ಲಿ ಬಹಳ ಮುಂದುವರಿಯಬೇಕೆಂದು ಬಯಸುವ ವಿದ್ಯಾರ್ಥಿಗಳು ಬೇಕು. ‘ನನ್ನ ಸ್ನೇಹಿತ ಮನಶ್ಶಾಸ್ತ್ರವನ್ನು ಅಧ್ಯಯನ ವಿಷಯವನ್ನಾಗಿ ಆರಿಸಿಕೊಂಡಿದ್ದಾನೆ; ಆದುದರಿಂದ ನಾನೂ ಮನಶ್ಶಾಸ್ತ್ರವನ್ನೇ ತೆಗೆದುಕೊಳ್ಳುತ್ತೇನೆ. ಅಪರಿಚಿತರ ಮಧ್ಯೆ ಹೋಗಿ ಕುಳಿತುಕೊಳ್ಳುವುದಕ್ಕಿಂತ ನನಗೆ ಪರಿಚಿತನಾಗಿರುವವನ ಜೊತೆಯಲ್ಲಿ ಕುಳಿತುಕೊಳ್ಳುವುದು ಲೇಸು’ – ಎಂಬ ಭಾವನೆಯಿಂದ ಬರುವ ವಿದ್ಯಾರ್ಥಿ ಅಪ್ರಯೋಜಕ. ಮನಶ್ಶಾಸ್ತ್ರದಲ್ಲಿ ಸಂಶೋಧನೆ ಎಂಬುದಿದೆ. ಅದು ತುಂಬಾ ದೊಡ್ಡ ಕೆಲಸ, ತುಂಬಾ ಗಂಭೀರವಾದ ಕೆಲಸ, ತುಂಬಾ ಗೌರವದ ಕೆಲಸ; ತುಂಬಾ ಕ್ಲೇಶಕರವಾದ ಕೆಲಸ ಎಂದೂ ನಾನು ಹೇಳುತ್ತೇನೆ. ಏಕೆಂದರೆ ಇದೆಲ್ಲಾ ಸುಲಭವಾಗಿ ಆಗುವ ಕೆಲಸವಲ್ಲ. ಇಲಿಯೇನೊ ನೀವು ಸಿಗರೇಟು ಸೇದುತ್ತಾ ಕೆಲಸ ಮಾಡುತ್ತಿದ್ದರೂ ನಿರ್ದಾಕ್ಷಿಣ್ಯವಾಗಿ ಸುಮ್ಮನಿರುತ್ತದೆ. ಆದರೆ ದೊಡ್ಡವರ ಹತ್ತಿರ ಹೋದಾಗ ಅಲ್ಲೊಂದು ನಿಯಮವಿರುತ್ತದೆ, ಸಂಯಮವಿರುತ್ತದೆ. ಅದನ್ನೆಲ್ಲಾ ನಾವು ನಂಬದಿದ್ದರೂ ಚಿಂತೆಯಿಲ್ಲ, ಅನುಸರಿಸಬೇಕು. ದೇವರು, ಜನ್ಮಾಂತರ – ಇತ್ಯಾದಿಗಳಲ್ಲೆಲ್ಲಾ ನಮಗೆ ನಂಬಿಕೆ ಇಲ್ಲದೆ ಇರಬಹುದು. – ಆದರೆ ಅದು ಅವನ ಪ್ರಯೋಗಶಾಲೆ. ಅದನ್ನು ಪ್ರವೇಶಿಸುವಾಗ ನಾವು ಅವನಿಗೆ ಧೈರ್ಯವಾಗಿ ಹೇಳಬಹುದು: ‘ಇದರಲ್ಲೆಲ್ಲಾ ನನಗೆ ನಂಬಿಕೆಯಿಲ್ಲ; ಆದರೂ ನಿನ್ನ ಕಟ್ಟು ಕಟ್ಟಳೆಗಳನ್ನೆಲ್ಲ ನಾನು ಅನುಸರಿಸುತ್ತೇನೆ. ಇದರಲ್ಲೇನಾದರೂ ತಿರುಳಿದ್ದರೆ ಗೊತ್ತಾಗುತ್ತದಲ್ಲ’ ಎಂದು. ಆಗ ಅವನಿಗೆ ನಂಬಿಕೆ ಬರುತ್ತದೆ. ಈ ತೆರನಾಗಿ ಅದನ್ನೇ ಒಂದು ಸಾಧನೆಯನ್ನಾಗಿ ಮಾಡಿ ಮುಂದುವರಿಯತಕ್ಕ ಚೇತನಗಳು ನಮ್ಮಲ್ಲಿ ಬಂದರೆ ಅವರು ಜಗತ್ತಿನ ಮನಃಶಾಸ್ತ್ರಜ್ಞರಾಗುತ್ತಾರೆ, ಬರಿಯ ಭಾರತದ ಅಥವಾ ಮಹಾರಾಜಾ ಕಾಲೇಜಿನ ಮನಶ್ಶಾಸ್ತ್ರಜ್ಞರಾಗುವುದಿಲ್ಲ. ಜಗತ್ತೇ ಅವರ ಬಳಿಗೆ ಬರುವಂತಾಗುತ್ತದೆ.

ಮುಂದಿನ ಸಂಶೋಧನಾಂಗದ ವಿಚಾರದಲ್ಲಿ ನನಗೆ ಹೀಗೆ ತೋರುತ್ತದೆ: ಭರತ ಖಂಡದ ಸಂಸ್ಕೃತ ಸಾಹಿತ್ಯದಲ್ಲ, ಪ್ರಾಚೀನ ವೇದವೇದಾಂತಗಳು, ಪುರಾಣಗಳು – ಪುರಾಣಗಳಲ್ಲಿ ಇಲ್ಲದಿರುವುದೇ ಇಲ್ಲ; ಅದು ಕಾಡಿದ್ದ ಹಾಗೆ; ಅಲ್ಲಿಗೆ ಹುಲಿಷಿಕಾರಿ ಮಾಡುವವರು ಬರಬಹುದು, ಬೀಟೆ ತೇಗ ಮುಂತಾದ ಮರಗಳನ್ನು ಕತ್ತರಿಸಿ ಮನೆಗೆ ತರುವವರೂ ಬರಬಹುದು ಅಥವಾ ಜೇನುಗೂಡನ್ನು ಹುಡುಕುವವರು ಬರಬಹುದು; ಹೀಗೆ ನೂರಾರು ಕೆಲಸಗಳನ್ನು ಮಾಡಬಹುದು – ನಮ್ಮ ತಂತ್ರಶಾಸ್ತ್ರಗಳು, ವೈಷ್ಣವಶಾಸ್ತ್ರಗಳು ಇವುಗಳಲ್ಲಿ ಸಾವಿರಾರು ವರ್ಷಗಳಿಂದಲೂ ಮುಂದಿನ ಸಂಶೋಧನೆಯ ವಿದ್ಯಾರ್ಥಿಗೆ ಆವಶ್ಯಕವಾಗುವ ಸಾಮಗ್ರಿ ವಿಫುಲವಾಗಿದೆ. ಪಾಶ್ಚಾತ್ಯ ಮನಶ್ಶಾಸ್ತ್ರದ ಮೂಲತತ್ತ್ವಗಳನ್ನು ತಿಳಿಯುವುದು; ಅವುಗಳನ್ನು ಪ್ರಸಾರ ಮಾಡುವುದು – ಇಷ್ಟರಲ್ಲೇ ಪರ್ಯವಸಾನವಾಗಬಾರದು. ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳ ದೊಡ್ಡ ದೊಡ್ಡ ಪ್ರಾಧ್ಯಾಪಕರು ಮನಶ್ಶಾಸ್ತ್ರದಲ್ಲಿ ಆಸಕ್ತರಾಗಿದ್ದಾರೆ. ಅನೇಕ ಅನ್ವೇಷಣೆಗಳಾಗುತ್ತಿವೆ. ಅದನ್ನೆಲ್ಲಾ ಓದುತ್ತಾ ಇದ್ದರೆ ನಿಮಗೆ ‘ಸ್ಪುಟ್ನಿಕ್‌’ನಲ್ಲಿ ಕುಳಿತು ಚಂದ್ರಮಂಡಲಕ್ಕೆ ಹೋಗುವಾಗ ಆಗುವಂಥ – ಬದುಕಿದ್ದರೆ ಆಗುವಂಥ – ಅನುಭವಗಳಾಗುತ್ತವೆ. ಅಂಥ ಪ್ರಯೋಗಗಳನ್ನೆಲ್ಲ ಇಲ್ಲಿ ನಡೆಸಬಹುದು. ಮನುಷ್ಯನ ಮನಸ್ಸಿನ ಶಕ್ತಿಯೇನು, ಅದರ ಔನ್ನತ್ಯವೇನು, ಆಳವೇನು – ಎಂಬುದನ್ನೆಲ್ಲ ಹುಡುಕುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅದು ಅತ್ಯಂತ ಆವಶ್ಯಕವಾದುದು.

ಸಾವಿರಾರು ವರ್ಷಗಳಿಂದ ನಮ್ಮಲ್ಲಿ ನಡೆದುಕೊಂಡು ಬರುತ್ತಿರುವ ಈ ವಿದ್ಯೆ ಪಾಶ್ಚಾತ್ಯರ ಆಧುನಿಕ ಮನಶ್ಶಾಸ್ತ್ರಕ್ಕೆ ಸರ್ವಸಮನಾಗಿದೆಯೆಂದು ನಾನು ಹೇಳುವುದಿಲ್ಲ. ಪಾಶ್ಚಾತ್ಯರದು ಸ್ವಲ್ಪ ಬಹಿರ್ಮುಖವಾದ ರೀತಿಯಲ್ಲಿಯೆ ಪ್ರಯೋಗ ಮತ್ತು ಆವಿಷ್ಕಾರಗಳ ಮೂಲಕ ಸಂಶೋಧನೆ ನಡೆದುಕೊಂಡು ಹೋಗಿದೆ. ಆದರೆ ನಮ್ಮದೂ ವೈಜ್ಞಾನಿಕ ರೀತಿಯೇ. ವೈಜ್ಞಾನಿಕ ಎಂದರೆ –  ಈ ದಾರಿಯಲ್ಲಿ ಈ ರೀತಿ ಹೋದರೆ ಈ ಫಲ ದೊರಕುತ್ತದೆ, ಈ ಕಾರ್ಯ ಕಾರಣ ಸಂಬಂಧವಿದೆ ಎಂಬುದನ್ನು ಹೇಳಿದ್ದಾರೆ. ಎಲ್ಲಿ ಕಾರ್ಯ ಕಾರಣ ಸಂಬಂಧ ಇಲ್ಲವೋ ಅಲ್ಲಿ ಇಲ್ಲ ಎಂದೂ ಹೇಳುತ್ತಾರೆ. ಇದು ಕಾರ್ಯ ಕಾರಣ ಸಂಬಂಧಕ್ಕೆ ಸಂಬಂಧಪಟ್ಟುದಲ್ಲ ಎನ್ನುವ ಕಾರಣವನ್ನೂ ಹೇಳುತ್ತಾರೆ. ಈ ದಾರಿಯಲ್ಲಿ ನಮ್ಮದು ವಿಶೇಷವಾಗಿ ಬೆಳೆದುಕೊಂಡುಹೋಯಿತು. ಆದರೆ ಅಂತರ್ಮುಖಿಯಾದುದರಿಂದ ಅವೈಜ್ಞಾನಿಕ ಎಂದು ಹೇಳುವುದಕ್ಕಾಗುವುದಿಲ್ಲ. ಒಬ್ಬ ವ್ಯಕ್ತಿ ವಿಮಾನದಲ್ಲಿ ಕುಳಿತು ಹತ್ತು ನಿಮಿಷ ಎಲ್ಲಿಯೋ ಹೋಗುತ್ತಾನೆ : ‘ಯಾರೂ ಹತ್ತಿರ ಬರಕೂಡದು, ದೂರ ಇರಬೇಕು’ ಎಂದು ಹೇಳಿ ಒಬ್ಬನೇ ಹೋಗಿ ಬರುತ್ತಾನೆ. ಆಗ ನಾವು ‘ಹೌದಪ್ಪಾ, ನೀನು ಏನೋ ಹೋಗಿಬಿಟ್ಟು ಬಂದ ಹಾಗಿತ್ತು’ ಎನ್ನುತ್ತೇವೆ. ಹಾಗಲ್ಲದೆ ‘ನೀನೂ ಬಾ ನಿನ್ನನ್ನೂ ಕೂರಿಸಿಕೊಂಡು ಹೋಗುತ್ತೇನೆ’ ಎಂದು ನಮ್ಮನ್ನು ಕರೆದೊಯ್ದಾಗ ಪ್ರತ್ಯಕ್ಷವಾದ ಅನುಭವ ದೊರಕುತ್ತದೆ. ಹಾಗೆಯೇ ಒಬ್ಬ ‘ನನಗೆ ಲಘಿಮಾಶಕ್ತಿ ಬಂದಿದೆ, ನನಗೆ ಗರಿಮಾ ಶಕ್ತಿ ಬಂದಿದೆ, ನಾನು ತೂಕದ ಹಲಗೆಯ ಮೇಲೆ ನಿಂತರೆ ಅದು ನೂರೋ ನೂರೈವತ್ತೋ ಪೌಂಡು ತೋರಿಸುತ್ತದೆ’ ಎನ್ನುತ್ತಾನೆ. ನಾಲ್ಕು ಜನ ಪ್ರಯತ್ನಿಸಿದರೂ ಅವನನ್ನು ಎತ್ತುವುದಕ್ಕಾಗುವುದಿಲ್ಲ. ಆಗ ನಮಗನಿಸುತ್ತದೆ; ಸಾಮಾನ್ಯವಾಗಿ ಇಬ್ಬರು ಎತ್ತಿಬಿಡಬಹುದು. ಈಗ ಎಷ್ಟು ಜನ ಬಂದರೂ ಎತ್ತುವುದಕ್ಕಾಗುವುದಿಲ್ಲ – ಎಂದು. ಆದರೆ ವಿಮಾನ ಮಾಡಿದವನು ‘ಇಲ್ಲಿ ಬಾ, ನೀನೂ ನಡೆಸು’ ಎಂದು ತೋರಿಸುವ ಹಾಗೆ ಲಘಿಮಾ ಅಥವಾ ಗರಿಮಾ ಶಕ್ತಿಯನ್ನು ಪಡೆದವನು ಮತ್ತೊಬ್ಬನಿಗೆ ತೋರಿಸುವುದಕ್ಕಾಗುವುದಿಲ್ಲ. ಅವನು ಹೇಳಿದ್ದನ್ನೆಲ್ಲ ಮಾಡುವುದಕ್ಕೂ ನೀವು ಸಿದ್ಧರಾಗಿಲ್ಲ. ಅವನು ಏನೇನನ್ನೋ ಬಿಡು ಎಂದು ಹೇಳುತ್ತಾನೆ. ನಿಮಗೆ ‘ಊಟ ಬಿಡು’ ಅನ್ನುವುದಿರಲಿ ‘ಸಿಗರೇಟು ಬಿಡು’ ಎಂದರೆ ‘ಪ್ರಾಣ ಬಿಡು’ ಎಂದ ಹಾಗಾಗುತ್ತದೆ. ಆದರೆ ಅವನು ‘ಊಟ ಬಿಡು, ಅದು ಬಿಡು, ಇದು ಬಿಡು’ ಎಂದರೆ ಆ ಪ್ರಯೋಗಗಳಿಗೆ ಒಳಗಾಗುವುದಕ್ಕೆ ನೀವು ಸಿದ್ಧರಾಗಿಲ್ಲ. ಆಗ ನಿಮಗೆ ‘ಎಂಥದೋ ಏನೋ ಮಾಡಿಕೊಂಡಿದ್ದಾನೆ. ಇದೆಲ್ಲ ಸುಳ್ಳು ಎಂತಲೇ ಕಾಣುತ್ತದೆ’ ಎಂಬ ಭಾವನೆಯಿಂದ ಆ ವಿಷಯಕ್ಕೆ ತಿರಸ್ಕಾರವೇ ಬರುತ್ತದೆ. ನಿಜವಾಗಿ ವೈಜ್ಞಾನಿಕ ದೃಷ್ಟಿ ಇರುವ ವಿದ್ಯಾರ್ಥಿ ಅದನ್ನು ತೆರೆದ ಮನಸ್ಸಿನಿಂದ ನೋಡುತ್ತಾನೆ. ತಾನದನ್ನು ಮಾಡುವುದಕ್ಕಾಗುವುದಿಲ್ಲ ಎಂದಮಾತ್ರಕ್ಕೆ ಅದನ್ನು ಅಲಕ್ಷಿಸುವುದಿಲ್ಲ. ಅದನ್ನು ಪಾಶ್ಚಾತ್ಯ ವೈಜ್ಞಾನಿಕರೀತಿಯಿಂದ ತೋರಿಸುವುದಕ್ಕಾಗುವುದಿಲ್ಲ. ಆದರೆ ಯಾವುದೋ ಒಂದು ವಿಧಾನವನ್ನನುಸರಿಸಿದರೆ ಅದು ಸಾಧ್ಯ. ಏಕೆಂದರೆ ಒಬ್ಬನಿಗೆ ಸಾಧ್ಯವಾದದ್ದು ಇನ್ನೊಬ್ಬನಿಗೂ ಸಾಧ್ಯವಾಗಲೇಬೇಕು. ಆದುದರಿಂದ ಅವನು ಹೇಳುತ್ತಾನೆ ‘ನೀನು ಈ ಕ್ರಮದಲ್ಲಿ ಹೋಗುವುದಾದರೆ ನಿನಗೆ ಸಿದ್ಧಿಯಾಗುತ್ತದೆ’ ಎಂದು. ಹಿಂದೆ ಪತ್ರಿಕೆಗಳಲ್ಲೆಲ್ಲ ಬಂತು : ತುಂಬಾ ಗಂಭೀರೆಯಾದ, ವೃದ್ಧೆಯಾದ ಒಬ್ಬ ಮಹಿಳೆ ಏನೋ ಒಂದಿಷ್ಟು ಕುಂಕುಮವನ್ನು ಕೈಗೆ ಹಾಕಿದರೆ ಯಾವುದೋ ವಿಗ್ರಹ ಬರುತ್ತದೆ, ಇನ್ನೇನೋ ಆಗುತ್ತದೆ- ಎಂಬ ವಾರ್ತೆ. ಅದನ್ನು ಯಾವಾಗಲೂ ನಂಬದೇ ಇರತಕ್ಕ ವ್ಯಕ್ತಿಯೂ ಕೂಡ ಹೋಗಿ ಕೈಯೊಡ್ಡಿದರೆ – ಪಾಪ, ಸಂಭಾವಿತೆಯಾದ ಆ ಮಹಿಳೆ ಯಕ್ಷಿಣಿ ಮಾಡಿ ದುಡ್ಡು ತೆಗೆದುಕೊಳ್ಳುವುದಕ್ಕೆ ಬಂದವರಲ್ಲ. ಏನೋ ಹೀಗಾಗುತ್ತದೆ, ಏಕೆ ಆಗುತ್ತದೆ ಎನ್ನುವುದು ಕೂಡ ಅವರಿಗೆ ಗೊತ್ತಿಲ್ಲ – ಒಂದು ವಿಗ್ರಹ ಬಂತು. ಇದು ಅಲ್ಪವಿಷಯ. ಆ ವಿಗ್ರಹಕ್ಕೆ ನಾಲ್ಕು ರೂಪಾಯಿ ಬೆಲೆಯಿರಬಹುದು. ಅದೇನೋ ದೊಡ್ಡದಲ್ಲ. ಆಧರೆ ಒಬ್ಬ ಪ್ರಬುದ್ಧನಾದ ವ್ಯಕ್ತಿಗೆ ಇದು ಒಂದು ಅದ್ಭುತಲೋಕಕ್ಕೆ ತೆರೆದ ಒಂದು ಚಿಕ್ಕ ಗವಾಕ್ಷವಾಗಿ ಪರಿಣಮಿಸುತ್ತದೆ.

ಮನಶ್ಶಾಸ್ತ್ರಜ್ಞನಾಗುವವನು ಇದನ್ನೆಲ್ಲ ವೈಜ್ಞಾನಿಕವಾಗಿ ಪರೀಕ್ಷೆ ಮಾಡದೆ ಸ್ವೀಕರಿಸಬೇಕೆಂದಲ್ಲ. ಬೇರೆ ಬೇರೆ ವೈಜ್ಞಾನಿಕ ಮಾರ್ಗಗಳಿವೆ. ಅವುಗಳಲ್ಲಿಯೂ ಹೋಗುವುದಕ್ಕೆ ಸಮರ್ಥರಾಗಬೇಕು. ಒಂದು ಕಡೆ, ಪಾಶ್ಚಾತ್ಯರು ತೋರಿಸಿಕೊಟ್ಟಿರುವ ದಾರಿಯಲ್ಲಿ ಪ್ರಯೋಗಗಳನ್ನು ಮಾಡಬೇಕು. ಇದೂ ತಕ್ಕಮಟ್ಟಿಗೆ ನಮ್ಮಲ್ಲಿ ನಡೆಯುತ್ತಿದೆ; ಸಮರ್ಥರು ಇದನ್ನು ಕೈಗೊಂಡಿದ್ದಾರೆ. ಆದರೆ ನಾನು ಹೇಳಿದ ಭಾರತೀಯ ಮನಶ್ಶಾಸ್ತ್ರದ ಗಣಿಗಳಲ್ಲಿ ಸಾವಿರಾರು ವರ್ಷಗಳಿಂದಲೂ ಅದ್ಭುತವಾದ ಶಕ್ತಿ ಅಡಗಿಕೊಂಡಿದೆ. ಹಾಗೆಂದು ಯಾರಾದರೂ ಹೇಳಿದರೆ ನಾವು ಹಾಸ್ಯಮಾಡಬಹುದು – ‘ರೇಡಿಯಂ’ ಅಥವಾ ‘ಥೋರಿಯಂ’ನಲ್ಲಿ ಶಕ್ತಿಯಿದೆಯೆಂದು ಯಾರಾದರೂ ಕೆಲವು ವರ್ಷಗಳ ಹಿಂದೆ ಹೇಳಿದ್ದರೆ ಹೇಗೆ ಹಾಸ್ಯಮಾಡುತ್ತಿದ್ದೆವೋ ಹಾಗೆ. ಅಣುವನ್ನೊಡೆದರೆ ಶಕ್ತಿ ಸ್ಫೋಟವಾಗುತ್ತದೆ ಎಂಬುದು ನಮಗೀಗ ಎಷ್ಟರಮಟ್ಟಿಗೆ ಗೊತ್ತಿದೆ! ‘ಅಯ್ಯೋ ಇದು ನಾ ಹುಟ್ಟುವುದಕ್ಕಿಂತ ಎಷ್ಟೋ ಮುನ್ನವೇ ಗೊತ್ತಿತ್ತು’ ಎನ್ನುವಂತಾಗಿದೆ. ಆದರೆ ಅದು ಹಾಗೆ ತಿಳಿದುಬರುವವರೆಗೂ ಅಗೋಚರವಾಗಿಯೆ ಇತ್ತು. ಭಾರತೀಯ ಮನಶ್ಶಾಸ್ತ್ರದ ಅದ್ಭುತವೂ ಹೀಗೆಯೇ. ಇದನ್ನು ಸಂಶೋಧಿಸುವುದು ಅಷ್ಟೊಂದು ಲಘುವಾದ ಕಾರ್ಯವಲ್ಲ.

ನಾನು ವಿದ್ಯಾರ್ಥಿಯಾಗಿದ್ದಾಗ ಎಂಥವರು ಮನಶ್ಶಾಸ್ತ್ರ ತೆಗೆದುಕೊಳ್ಳುತ್ತಿದ್ದರೋ ಅಂಥವರು ಬಂದರೆ ಎಂದೆಂದಿಗೂ ಮುಂದುವರಿಯುವುದು ಸಾಧ್ಯವೇ ಇಲ್ಲ. ಆ ಆಲಸ್ಯ, ಡಿಗ್ರಿ ಸಿಕ್ಕಿದರೆ ಸಾಕು ಎನ್ನುವ ಆ ಮನೋಭಾವ ಇರುವ ವ್ಯಕ್ತಿಗಳಿಂದ ಯಾವತ್ತೂ ಸಾಧ್ಯವಿಲ್ಲ. ಈ ವಿಚಾರದಲ್ಲಿ ಮುಂದೆ ಹೋಗುವವರಿಗೆ ಆಳವಾದ, ಶಾಸ್ತ್ರೀಯವಾದ, ತತ್ತ್ವಶಾಸ್ತ್ರೀಯವಾದ ಮತ್ತು ಮನಶ್ಶಾಸ್ತ್ರೀಯವೂ ಆದ ಸಂಸ್ಕೃತಜ್ಞಾನ ಅತ್ಯಂತ ಆವಶ್ಯಕ. ಅದು ಮೊದಲನೇ ಮೆಟ್ಟಿಲು; ಅದಿಲ್ಲದೆ ಹೋದರೆ ನೀವು ಏನನ್ನೂ ಗ್ರಹಿಸುವುದಕ್ಕೂ ಸಾಧ್ಯವಿಲ್ಲ. ಹಾಗಾದರೆ ಇದು ಅಸಾಧ್ಯವೆಂಬ ಭಾಔನೆ ಕೆಲವರ ಮನಸ್ಸಿನಲ್ಲಿ ಹುಟ್ಟಬಹುದು. ಹಾಗೇನಿಲ್ಲ. ಇದರಲ್ಲಿ ಎಲ್ಲರಿಗೂ ಪ್ರವೇಶವಿರುವುದಿಲ್ಲ. ಹೌದು. ನೂರು ಜನ ವಿದ್ಯಾರ್ಥಿಗಳಲ್ಲಿ ಒಬ್ಬನಿಗೆ ಇದು ಸಾಧ್ಯ. ಆದರೆ ನೂರಲ್ಲ, ಸಾವಿರದಲ್ಲಿ ಒಬ್ಬನಿಗೆ ಬಂತು ಎಂದರೂ ಯಥೇಚ್ಛವಾಗಿ ಬಂತೆಂದೇ ನನ್ನ ಭಾವನೆ. ಅಂತೂ ಈ ದಾರಿಯಲ್ಲೇ ಹೋಗಬೇಕು, ಮುಂದುವರಿಯಬೇಕು. ಅವಸರವಸರವಾಗಿ ಹೋದರೆ ಆಗುವುದಿಲ್ಲ. ಬಹುಶಃ ನಿಮ್ಮ ಜೀವಮಾನದಲ್ಲಿ ಎಲ್ಲಿಯೋ ಎರಡಂಗುಲ ದಾರಿಯನ್ನು ಸವೆಸಬಹುದು. ಆದರೂ ನಿವು ಎರಡಂಗುಲ ನಡೆದು, ಮುಂದೆ ಬರುವವನು ನಾಲ್ಕು ಅಂಗುಲ ನಡೆದು, ಒಟ್ಟಿನಲ್ಲಿ ದಾರಿಯನ್ನು ಮುಗಿಸಬಹುದು, ಪ್ರವೇಶಿಸಿ. ಆದರೆ ಇದು ಅಂತರ್ಮುಖ ವಿಷಯವಾದುದರಿಂದ ನಾನು ಧೈರ್ಯವಾಗಿ ಹೇಳಲಾರೆ. ವೈಜ್ಞಾನಿಕ ಪ್ರಪಂಚದಲ್ಲಿ ಅರ್ಹ, ಅನರ್ಹ, ಅನಧಿಕಾರಿ ಎಲ್ಲರಿಗೂ ಆಗುವಂಥ ಯಂತ್ರಗಳನ್ನು ಸೃಷ್ಟಿಸಿದ್ದೇವೆ. ದುಡ್ಡಿದ್ದ ಮಾತ್ರಕ್ಕೆ ಯಾರು ಬೇಕಾದರೂ ಹೋಗಿ, ಒಂದು ಕಾರನ್ನು ಕೊಂಡು ‘ಡ್ರೈವ್’ ಮಾಡಬಹುದು. ಹಾಗೆಯೇ – ಅದೇ ಮಟ್ಟದಲ್ಲಲ್ಲ – ಈ ಜ್ಞಾನ, ಈ ಶಕ್ತಿ ಹೆಚ್ಚು ಜನರಿಗೆ ಬರುವಂತೆ ಮಾಡುವುದು ಸಾಧ್ಯವೋ ಏನೋ?

ಅಂದರೇನು – ನಮ್ಮ ಭಾರತೀಯ ಮನಶ್ಶಾಸ್ತ್ರದ ಅಧ್ಯಯನ ಒಂದು, ಪಾಶ್ಚಾತ್ಯ ಶಾಸ್ತ್ರದ ಅಧ್ಯಯನ ಒಂದು: ಈ ಎರಡು ದಾರಿಗಳಲ್ಲಿ ಮುಂದುವರಿಯಬೇಕಾಗುತ್ತದೆ; ಹಿಂದೆ ಕಂಡುಹಿಡಿದುದಷ್ಟನ್ನ ನೋಡಿಕೊಂಡು ಬರೆದುಕೊಂಡು ಹೋಗುವುದು ಮಾತ್ರವೆ ಅಲ್ಲ. ಹೀಗೆ ಪ್ರಯತ್ನಪಡುವ ಸಾವಿರ ಜನರಲ್ಲಿ ಯಾವನೋ ಒಬ್ಬ – ಬಹುಶಃ ಮನಶ್ಶಾಸ್ತ್ರದ ಅವತಾರ ಪುರುಷ ಎಂದಿಟ್ಟುಕೊಳ್ಳೋಣ, ಏಕೆಂದರೆ, ಅವತಾರಪುರುಷ ಅಥವಾ ವಿಭೂತಿಪುರಷ ಎಷ್ಟೋ ಶತಮಾನಗಳಿಗೊಂದು ಸಲ ಬರುವವನು – ಬಂದಾಗ ಇನ್ನೂ ಮುಂದೆ ಹೋಗುತ್ತಾನೆ. ಇದುವರೆಗಿನ ಪ್ರಾಚ್ಯ, ಇದುವರೆಗಿನ ಪಾಶ್ಚಾತ್ಯ – ಎರಡನ್ನೂ ಅಳವಡಿಸಿಕೊಂಡು ಇನ್ನೂ ಯಾವುದೋ ಹೊಸ ದಿಕ್ಕಿನಲ್ಲಿ ನಮ್ಮನ್ನು, ಜನತೆಯನ್ನು ಕೊಂಡೊಯ್ಯುತ್ತಾನೆ. ಅಂತೂ ಇಷ್ಟು ದೊಡ್ಡ ಅನ್ವೇಷಣೆಯ ಕ್ಷೇತ್ರ, ಪ್ರಯೋಗಶಾಲೆ ನಿಮಗಾಗಿ, ಸಾಹಸಜ್ಞರಿಗಾಗಿ ಕಾದಿದೆ. ಅದನ್ನು ಸ್ವಲ್ಪ ಜನರಾದರೂ ಪ್ರವೇಶಿಸಬೇಕು.

ಇದು ಎಲ್ಲಕ್ಕಿಂತಲೂ ಆವಶ್ಯಕವಾಗಿ- ಹೆಚ್ಚಾಗಿ ಎಂದು ನಾನು ಹೇಳುವುದಿಲ್ಲ – ಬೋಧನಾಂಗದ ಕೆಲಸ. ಇದರ ಜೊತೆಗೆ ಸಂಶೋಧನಾಂಗ. ಇನ್ನೊಂದು ಅಂಗ – ಪ್ರಸಾರಾಂಗ. ಅದನ್ನು ಎಲ್ಲ ಶಾಖೆಗಳಲ್ಲಿಯೂ ವಿಶ್ವವಿದ್ಯಾನಿಲಯ ಕೈಗೊಳ್ಳುತ್ತಿದೆ. ಈ ಮನಶ್ಶಾಸ್ತ್ರದಲ್ಲಿ ನೀವೆಲ್ಲರೂ ಊಹಿಸಿರುವುದಕ್ಕಿಂತ ಹೆಚ್ಚಾಗಿ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ನನ್ನ ಆಸೆ. ಇದನ್ನು ನಾನು ಲಘುವಾಗಿ ಹೇಳುತ್ತಿಲ್ಲ.

ನಮ್ಮ ಅನೇಕ ಕೇಡು ಕಷ್ಟಗಳಿಗೆಲ್ಲ ನಮ್ಮ ಮನಸ್ಸಿನ ಅನುಕೂಲ ಮತ್ತು ಪ್ರತಿಕೂಲ ವ್ಯಾಪಾರಗಳೆ ಕಾರಣ. ಒಬ್ಬರು ಬಂದು Socialist pattern of society ಇರಲಿ, ಸಹಕಾರಪದ್ಧತಿಯಲ್ಲೇ ವ್ಯವಸಾಯ ಮಾಡೋಣ – ಎನ್ನುತ್ತಾರೆ. ಅದನ್ನು ಕೇಳಿ, ಭೂಮಿ ಇಲ್ಲದ ನೂರಾರು ಜನ ಚಪ್ಪಾಳೆ ತಟ್ಟುತ್ತಾರೆ. ಇದಕ್ಕೆ ಕಾರಣ ರಾಜಕೀಯವಲ್ಲ, ಮನಸ್ಸು. ಅವರಿಗೆ ಬೇಗ ಬೇಗ ಒಂದಿಷ್ಟು ಜಮೀನು ಕೊಟ್ಟುಬಿಡಿ – ಅವರೇ ಅದಕ್ಕೆ ವಿರೋಧವಾಗಿ ಕೈ ಎತ್ತುತ್ತಾರೆ! ಎಂದರೇನು – ಇದಕ್ಕೆಲ್ಲ ರಾಜಕೀಯ ಕಾರಣವಿದೆ ಎಂದು ನಾವು ತಿಳಿದುಕೊಂಡಿರುತ್ತೇವೆ. ಆದರೆ ವಾಸ್ತವವಾಗಿ ಇದಕ್ಕೆ ಮನಸ್ಸೇ ಮೂಲಕಾರಣ. ಎಲ್ಲರನ್ನೂ ನಮ್ಮಂತೆಯೇ ಎಂದು ನೋಡಬೇಕು, ಭೂಮಿಯೆಲ್ಲಾ ಭಗವಂತನದು, ಆದುದರಿಂದ ಎಲ್ಲರೂ ಒಟ್ಟಾಗಿರಬೇಕು – ಎಂದು ಹೇಳಿದಾಗ ಒಂದು ಕ್ಷಣದಲ್ಲಿ ಮನುಷ್ಯ ಮಗುವಾಗಿ ಬಿಟ್ಟು ‘ಅಃ ! ಇದೇ ಚೆನ್ನಾಗಿದೆ’ ಎನ್ನುತ್ತಾನೆ. ಆದರೆ ಎಷ್ಟು ಕಾಲ ಮಗುವಾಗಿರುವುದಕ್ಕೆ ಸಾಧ್ಯ? ಸ್ವಲ್ಪ ಹೊತ್ತಿನಲ್ಲೇ ‘ನಾನು, ನನ್ನದು’ ಎಂಬ ಭಾವನೆ ಬರುತ್ತದೆ. ಇದ್ದಕ್ಕಿದ್ದ ಹಾಗೆ ‘ಛೆ, ಛೆ – ಇದೆಲ್ಲಾದರೂ ಉಂಟೆ? ಇದು ಆಗುವುದಿಲ್ಲ’ ಎನ್ನಿಸುತ್ತದೆ. ಮನಶ್ಶಾಸ್ತ್ರ, ಮನಶ್ಶಾಸ್ತ್ರದ ವಿದ್ಯಾರ್ಥಿ ಇದನ್ನು ಸುಲಭವಾದ ಭಾಷೆಯಲ್ಲಿ – ಸಣ್ಣ ಸಣ್ಣ ಪುಸ್ತಕಗಳ ಮೂಲಕ, ಉಪನ್ಯಾಸಗಳ ಮೂಲಕ – ತಿಳಿಸುತ್ತಾ ಹೋಗಬೇಕು. ಅದೇ ಪ್ರಸಾರಾಂಗ. ಅದನ್ನು ನಮ್ಮ  ವಿಶ್ವವಿದ್ಯಾಲಯದ ಉಪಾಧ್ಯಾಯರು ನಾನಾ ಶಾಖೆಗಳಲ್ಲಿ ಕೈಗೊಂಡಿದ್ದಾರೆ, ಮಾಡುತ್ತಿದ್ದಾರೆ. ಅದು ಎಲ್ಲರ ಶ್ಲಾಘನೆಗೂ ಪಾತ್ರವಾಗಿದೆ. ವಿಶ್ವವಿದ್ಯಾನಿಲಯದ ಅಧ್ಯಾಪಕ ವರ್ಗಕ್ಕೆ ನಾನು ವೈಯಕ್ತಿಕವಾಗಿ ಅಲ್ಲದಿದ್ದರೂ ಸಾಮೂಹಿಕವಾಗಿ ಅತ್ಯಂತ ಕೃತಜ್ಞನಾಗಿದ್ದೇನೆ. ಏಕೆಂದರೆ ನಮ್ಮ ವಿಶ್ವವಿದ್ಯಾನಿಲಯ ಪ್ರಪಂಚದ ಇನ್ನಾವ ವಿಶ್ವವಿದ್ಯಾನಿಲಯವೂ ಮಾಡಿಲ್ಲದ ರೀತಿಯಲ್ಲಿ ಈ ಕೆಲಸವನ್ನು ಕೈಗೊಂಡಿದೆ. ವಿದ್ಯಾರ್ಥಿಗಳ ಮುಂದೆಯೂ ನಾನು ಮತ್ತೊಮ್ಮೆ ಈ ಪ್ರಸಾರದ ದೃಷ್ಟಿಯನ್ನು ಇಡುತ್ತಿದ್ದೇನೆ. ಮುಂದೆ ಈ ವಿಷಯಗಳನ್ನೆಲ್ಲಾ ಯಾರೋ ಇಬ್ಬರು ಮೂವರು ರಾಜಕೀಯ ವ್ಯಕ್ತಿಗಳು ತಮ್ಮಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿಯೋ, ಇಲ್ಲಿಯೋ ಉಪನ್ಯಾಸ ಮಾಡಿಬಿಟ್ಟರೆ ಆಗಲಿಲ್ಲ. ಈ ಭಾವನೆಗಳು ಕ್ರಮೇಣವಾಗಿ ಹಳ್ಳಿಯ ಜನರಲ್ಲಿ – ಎಲ್ಲ ಜನರಲ್ಲೂ – ಪ್ರವೇಶಿಸಬೇಕು.

ಎಲ್ಲ ಪರಿವರ್ತನೆಗಳಿಗೂ ಮೊದಲು ಮನಃಪರಿವರ್ತನೆಯಾದರೆ ಉಳಿದುದೆಲ್ಲ ಸರಸರ ಆಗಿಬಿಡುತ್ತದೆ. ಇದು ಎಷ್ಟರಮಟ್ಟಿಗೆ ಎಂದರೆ, ಭಾರಿ ಸಭೆಗಳಲ್ಲಿ, ಭಯಂಕರವಾದ ಭಿನ್ನಾಭಿಪ್ರಾಯ ಬರುವ ಸಂದರ್ಭದಲ್ಲಿ ಒಂದು ಕಾಫಿ ಕೊಡಿಸಿಬಿಟ್ಟರೆ ಅಭಿಪ್ರಾಯಗಳ ಏಕತ್ವ ಉಂಟಾಗುವ ಸಂಭವವುಂಟು. ಹೀಗೆ ಮನಸ್ಸಿನ ಪರಿವರ್ತನೆ ಅತ್ಯಂತ ಆವಶ್ಯಕ. ದಿನಬೆಳಗಾದರೆ ಪತ್ರಿಕೆ ತೆಗೆದು ನೋಡಿದಾಗ ಈ ಪ್ರಪಂಚದಷ್ಟು ಹೊಲಸು ಪ್ರಪಂಚ ಮತ್ತೊಂದಿಲ್ಲವೋ ಎನ್ನಿಸುತ್ತದೆ. ಆದರೆ ಇದಕ್ಕಿಂತ ಉತ್ತಮವಾದ ಪ್ರಪಂಚ ಬೇರೆ ಇದೆ – ಪತ್ರಿಕೆಯನ್ನು ಬಿಟ್ಟುನೋಡಿದರೆ, ಪ್ರತಿನಿತ್ಯವೂ ಆತ್ಮಹತ್ಯೆ, ಕೊಲೆ, ಪ್ರಣಯ ಸಂಬಂಧದಲ್ಲಿ ಖೂನಿ, ಜಾತ್ರೆಗೆ ಹೋಗಿದ್ದ ವ್ಯಕ್ತಿ ಶ್ರೀಮನ್ನಾರಾಯಣನಿಗೆ ನಮಸ್ಕಾರ ಮಾಡುತ್ತಿರುವಾಗ ಚೋರನಾರಾಯಣ ಜೇಬಿನಿಂದ ದುಡ್ಡು ಹಾರಿಸುವುದು, ಜಗಳ – ಇದನ್ನೆಲ್ಲ ಪತ್ರಿಕೆ ಜೋಡಿಸಿ ತಂದು ಒಟ್ಟು ಮಾಡುತ್ತದೆ. ಆಪಾದಿತರನ್ನೆಲ್ಲಾ ನೀವು ಜೈಲಿನಲ್ಲಿ ಸಂಧಿಸಿದಾಗ ಅವರಲ್ಲಿ ಒಬ್ಬೊಬ್ಬರೂ ಸಂಭಾವಿತರೆ – ಯಾವುದೋ ಒಂದು ಕ್ಷಣಿಕವಾದ ಆವೇಶಕ್ಕೆ ಒಳಗಾಗಿ ಅಲ್ಲಿಗೆ ಬಂದು ಜೀವಮಾನಪರ್ಯಂತ ಅಲ್ಲಿ ಕೊಳೆಯುತ್ತಿರುತ್ತಾರೆ. ನಮ್ಮ ಭಾವಗಳು ತೀವ್ರವಾದಾಗ ದಯಪಾಲಿಸಿದರೆ ಅದರಿಂದ ಎಷ್ಟು ಕಷ್ಟಗಳು, ದುರಂತಗಳು ಕಡಿಮೆಯಾಗುತ್ತವೆ! ಪೂರ್ತಿ ನಿಸ್ವಾರ್ಥೆಯನ್ನು ಸಾಧಿಸುವುದು ಕಷ್ಟ. ಅದು ಬೇಡ. ಆದರೆ ನಮ್ಮಲ್ಲಿರುವ ಸ್ವಾರ್ಥತೆಯನ್ನು ಕಡಿಮೆ ಮಾಡುವುದನ್ನು, ಅದಕ್ಕೊಂದು ಮಿತಿ ಕಲ್ಪಿಸುವುದನ್ನು ಕಲಿತರೂ ಎಷ್ಟು ಸಹಾಯವಾಗುತ್ತದೆ!

ಹಿಂದೆ ಇದನ್ನೆಲ್ಲ ನಾವು ಮನಶ್ಶಾಸ್ತ್ರದ ಸಹಾಯದಿಂದ ಮಾಡಲಿಲ್ಲ – ಮತದ ಸಹಾಯದಿಂದ ಮಾಡಿದೆವು. ಸ್ವರ್ಗ ನರಕಗಳನ್ನು ಸೃಷ್ಟಿಸಿ, ಪುರಾಣಗಳನ್ನು ರಚಿಸಿ ‘ಇಲ್ಲಿ ಇವನನ್ನು ನೀನು ಹೊಡೆದರೆ ಆಮೇಲೆ ಅಲ್ಲಿ ನಿನ್ನನ್ನು ಕಾಯಿಸಿದ ಶೂಲದ ತುದಿಗೆ ಚುಚ್ಚಿ ಎತ್ತುತ್ತಾರೆ! ಅನಂತರ ಮೇಲಿಂದ ಮೆಣಸಿನಕಾಯಿ ರಸ ಕಣ್ಣಿಗೆ ಬಿಡುತ್ತಾರೆ!’ ಹೀಗೆಲ್ಲಾ ಹೇಳಿದೆವು. ಇದನ್ನು ಕೇಳಿದವನು ಒಂದೆರಡು ಸಲ ಹೆದರುತ್ತಾನೆ. ಆಮೇಲೆ ಮೂರುನಾಲ್ಕು ಸಲ ಕೇಳಿದಾಗ ‘ಅಯ್ಯೋ! ಇದೆಲ್ಲಾ ಕಟ್ಟುಕತೆ, ಬಿಡೊ’ ಎನ್ನುತ್ತಾನೆ. ಆದುದರಿಂದ ಹಿಂದೆ ಸಾಧಿಸಿದ ರೀತಿಯಲ್ಲಿ ಈಗ ಸಾಧಿಸುವುದಕ್ಕಾಗುವುದಿಲ್ಲ. ಏಕೆಂದರೆ ನೀವು ಮತದ ವಿಚಾರದಲ್ಲೇ ಪ್ರಶ್ನೆ ಹಾಕುತ್ತೀರಿ; ಸ್ವರ್ಗನರಕಗಳ ವಿಚಾರದಲ್ಲಿ ‘ಅವೇನೂ ಇಲ್ಲ’ ಎಂದು ಧೈರ್ಯವಾಗಿಯೇ ಇದ್ದೀರಿ. ಇವೆಲ್ಲ ಹೋದಮೇಲೆ ಜನ ಏನನ್ನಾಶ್ರಯಿಸಬೇಕು? ಆದರೆ, ಏನಾದರೂ ಮೂಲಾಧಾರ ಇಲ್ಲದೆ ಹೋದರೆ ನಾವೆಲ್ಲ ಒಟ್ಟಿಗೆ ಬಾಳುವುದು ಕಷ್ಟವಾಗುತ್ತದೆ. ಆಗ ಯಾವನು ಬಲಿಷ್ಠನೋ ಅವನೇ ಬದುಕುತ್ತಾನೆ. ಎಂದರೆ ಪರಿಣಾಮದಲ್ಲಿ ಒಂದು ಪಶುಸಮಾಜ ಉತ್ಪತ್ತಿಯಾಗುತ್ತದೆ. ಇದನ್ನೇ ಮನಶ್ಶಾಸ್ತ್ರದ ರೀತಿಯಿಂದ ಹೇಳಿದರೆ ಅರ್ಥವಾಗುವುದಿಲ್ಲ, ಬೇಸರವಾಗುತ್ತದೆ, ಎಂಬ ಕಾರಣದಿಂದ ಸಾಹಿತ್ಯ ಮೆಲ್ಲಗೆ ಇದನ್ನೇ ಉಪಯೋಗಿಸಿಕೊಂಡು ‘ಒಂದು ಕತೆಯಾಗಿ ಹೇಳುತ್ತೇನೆ, ಕವಿತೆಯಾಗಿ ಹೇಳುತ್ತೇನೆ, ದೊಡ್ಡ ದೊಡ್ಡ ವ್ಯಕ್ತಿಗಳ ಜೀವನಚಿರಿತ್ರೆಯಾಗಿ ಹೇಳುತ್ತೇನೆ’ ಎಂದು ಅದರ ಮುಖಾಂತರವಾಗಿಯೇ – ಬೇರೆ ಯಾವುದೂ ಸಾಧಿಸದ ಪ್ರಮಾಣದಲ್ಲಿ – ಮೃಗವನ್ನು ಮನುಷ್ಯನನ್ನಾಗಿ ಮಾಡಿದೆ. ಸಾಹಿತ್ಯದಿಂದ ಈ ಕೆಲಸವಾಗಿದೆ. ಮನಶ್ಶಾಸ್ತ್ರ, ತತ್ತ್ವಶಾಸ್ತ್ರ, ಇತಿಹಾಸ – ಎಲ್ಲವನ್ನೂ ಸಾಹಿತ್ಯ ಸ್ವೀಕರಿಸುತ್ತದೆ.

ಈಗ ನಾನು ಪ್ರಸಾರಾಂಗದ ವಿಷಯ ಹೇಳಿದೆ. ಒಬ್ಬ ಮನಶ್ಶಾಸ್ತ್ರದ ವಿದ್ಯಾರ್ಥಿ – ಅವನು ಮನಶ್ಶಾಸ್ತ್ರದ ಪಾಠ ಹೇಳುವುದು ಬೇಡ – ‘ನಾನು ಕೃಷ್ಣಸಂಧಾನದ ಮನಶ್ಶಾಸ್ತ್ರೀಯವಾದ ಒಂದು ವಿಮರ್ಶೆ ಮಾಡುತ್ತೇನೆ’ ಎಂದು ಹೋಗಲಿ, ಜನರು ‘ಓಹೋ?! ಇವನು ಕೃಷ್ಣಸಂಧಾನ ಓದುತ್ತಾನೆ’ ಎಂದುಕೊಳ್ಳುತ್ತಾರೆ. ಜನರಿಗೆ ಈ ರೀತಿ ಮೋಸಮಾಡಬೇಕೆಂದು ನಾನು ಹೇಳುವುದಿಲ್ಲ. ಇವನು ಕೂಡ ಅದನ್ನು ಚೆನ್ನಾಗಿ ಓದಿದ್ದಾನೆ, ಅದರ ಸಾಹಿತ್ಯರೂಪದಿಂದ ಜನರನ್ನು ಆಕರ್ಷಿಸುತ್ತಾನೆ. ಅವರು ಆಕರ್ಷಿತರಾದ ಮೇಲೆ ಅದರಲ್ಲಿ ಧ್ವನಿಯ ರೂಪದಲ್ಲ, ಸೂಚನೆಯ ರೂಪದಲ್ಲಿ, ಅಡಕವಾಗಿರುವುದನ್ನು ತಿಕ್ಕಿ ಹೇಳುವುದಿಲ್ಲ; ಆದರೆ ಅವರ ಹೃದ್ಗೋಚರವಾಗದಂತೆ ಸೂಚಿಸಿ ಹೇಳುತ್ತಾನೆ. ಅವರು ಅದನ್ನು ಕೇಳಿ ಕಣ್ಣೀರು ಸುರಿಸುತ್ತಿರುವಾಗಲೆ ಅದರ ಭಾವ ಅವರ ಹೃದಯವನ್ನು ವ್ಯಾಪಿಸಿ ಅವರ ಚೇತನವನ್ನೆ ಪರಿವರ್ತಿಸಿರುತ್ತದೆ.

ನಾನು ಅನೇಕ ಸಲ ಪಾಠ ಹೇಳುತ್ತಿರುವಾಗ ನನ್ನ ವಿದ್ಯಾರ್ಥಿಗಳಿಗೆ ‘ಇವರೇನು ಮನಶ್ಶಾಸ್ತ್ರ ಹೇಳುತ್ತಿದ್ದಾರೊ, ತತ್ವಶಾಸ್ತ್ರ ಹೇಳುತ್ತಿದ್ದಾರೊ, ಸಾಹಿತ್ಯ ಹೇಳುತ್ತಿದ್ದಾರೊ’ – ಎಂದು ಕಂಡರೂ ಕಂಡಿರಬಹುದು. ನಿಜವಾದ ಸಾಹಿತ್ಯದ ವಿದ್ಯಾರ್ಥಿ – ಆನರ‍್ಸ್, ಎಂ.ಎ. ಓದುವಾಗ – ತತ್ವಶಾಸ್ತ್ರ, ಮನಶ್ಶಾಸ್ತ್ರ ಓದದಿದ್ದರೆ ಅವನು ಮಾಡುವ ವಿಮರ್ಶೆಯೆಲ್ಲ ಬರೀ ಬರುಬರು ನೊರೆಯಾಗುತ್ತದೆ. ಯಾವುದೇ ಒಂದು ಸಂಗತಿ ಅಲ್ಲಿ ನಡೆಯಿತು – ಎಂದು ಬರೀ ಚರಿತ್ರೆಯನ್ನಷ್ಟೇ ತಿಳಿಯದೆ, ಅದರ ಧ್ವನಿ, ಇಂಗಿತ, ದರ್ಶನ – ಇವುಗಳನ್ನು ಗುರುತಿಸಬೇಕಾದರೆ ನಿಮಗೆ ತತ್ವಶಾಸ್ತ್ರ, ಮನಶ್ಶಾಸ್ತ್ರಗಳ ಅರಿವು ಅತ್ಯಗತ್ಯ. ಹಾಗೆಯ ಮನಶ್ಶಾಸ್ತ್ರದ ವಿದ್ಯಾರ್ಥಿಗಳೂ ಸಾಹಿತ್ಯವನ್ನು ಅಭ್ಯಾಸ ಮಾಡಿ ಅದನ್ನು ಜನರು ಮನಸ್ಸಿನ ಮೇಲೆ ಎಷ್ಟು ಪರಿಣಾಮಕಾರಿಯಾಗಿ ಮಾಡಬಹುದು – ಎಂಬುದನ್ನು ನೋಡಬೇಕು. ಒಂದು ಮಹಾ ಪ್ರಬಂಧದಲ್ಲಿ ಯೂಂಗ್ ‘Psychology and Literature’ ಎಂಬ ಅಧ್ಯಾಯ ಬರೆದಿದ್ದಾನೆ. ಅದು ತುಂಬಾ ಗಹನವಾದ, ಅದ್ಭುತವಾದ ಪ್ರಬಂಧ. ಅದರ ಎಲ್ಲ ಅಂಶಗಳನ್ನು ನಾವೆಲ್ಲ ಒಪ್ಪಿಕೊಂಡುಬಿಡುತ್ತೇವೆ ಎಂದೂ ಅಲ್ಲ. ಆದರೆ ಒಬ್ಬ ಮನಶ್ಶಾಸ್ತ್ರಜ್ಞ ಈ ವಿಚಾರದಲ್ಲಿ ಏನು ಬೆಳಕನ್ನು ಬೀರಬಲ್ಲ, ಹೇಗೆ ಪ್ರವೇಶಿಸಬಲ್ಲ. The Literature of Vision, the Literature of Psychology – ಇದನ್ನೆಲ್ಲ ತೆಗೆದುಕೊಂಡು ಏನು ಮಾಡಬಹುದು, ಮನಶ್ಶಾಸ್ತ್ರ ಎಲ್ಲಿ ಪ್ರವೇಶಿಸಬಹುದು, ಎಲ್ಲಿ ಪ್ರವೇಶಿಸಬಾರದು – ಇದನ್ನೆಲ್ಲ ತಿಳಿಯಬಹುದು. ಒಬ್ಬನಿಗೆ ತಾನು ವಿಮಾನ ಸಾರಥಿಯಾಗಬೇಕೆಂದು ಆಸೆ. ಆದರೆ, ಹಾರುವುದರಿಂದ ಅವನ ಮನಸ್ಸಿನ ಮೇಲೆ ಏನು ಪರಿಣಾಮವಾಗಿ ಇನ್ನೂ ಯಾರ ಯಾರ ಜೀವನವನ್ನು ಹಾಳು ಮಾಡುತ್ತಾನೊ! ಆದರೆ ಇಲ್ಲಿ ಮನಶ್ಶಾಸ್ತ್ರ ಪ್ರವೇಶಿಸಿ ‘ಅಪ್ಪಾ, ನೀನೇನೊ ಹಾರಬೇಕು ಅಂತ ಇಚ್ಛೆ ಉಳ್ಳವನಾಗಿರಬಹುದು – ಆದರೆ ಇತರರ ಜತೆ ಹಾರು, ನೀನೇ ಹಾರಿಸಬೇಡ ಎಂದು ಹೇಳಬೇಕಾಗುತ್ತದೆ. ಈ ಕೆಲಸಗಳನ್ನೆಲ್ಲ ಮನಶ್ಶಾಸ್ತ್ರ ಮಾಡಬೇಕು. ಹೀಗೆ ಮನಶ್ಶಾಸ್ತ್ರ ಎಷ್ಟು ಮುಖ್ಯವಾದುದು, ಗಹನವಾದುದು, ನಮ್ಮ ಮೂಲಸ್ವರೂಪಕ್ಕೇ ಅಂಟಿಕೊಳ್ಳತಕ್ಕುದು. ಅದರ ವ್ಯಾಪ್ತಿ ಎಷ್ಟು ವಿಸ್ತಾರವಾದುದು, ಶಾಖೋಪಶಾಖೆಗಳನ್ನುಳ್ಳದು, ಎಲ್ಲ ಮಟ್ಟಗಳನ್ನೂ ಮುಟ್ಟತಕ್ಕದ್ದು – ಎಂಬುದನ್ನೆಲ್ಲ ತಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ.

ಕೊನೆಯದಾಗಿ ಈ ಮನಶ್ಶಾಸ್ತ್ರದ ಸಂಘದವರು ನನ್ನನ್ನು ಈ ಮುಕ್ತಾಯ ಭಾಷಣಕ್ಕೆ ಕರೆದು ನನ್ನ ಸ್ವಸ್ವರೂಪದ ಅನುಸಂಧಾನದಲ್ಲಿ ಕಾಲಕಳೆಯುವಂತೆ ಮಾಡಿದ್ದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ವಿಶೇಷವಾಗಿ ಪ್ರೊ|| ಕುಪ್ಪುಸ್ವಾಮಿಯವರಿಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ.

* * *


[1] ೧ ತಾ|| ೩-೩-೧೯೫೯ ರಂದು ಮಹಾರಾಜಾ ಕಾಲೇಜಿನ ಮನಶ್ಶಾಸ್ತ್ರ ಸಂಘದ ಮುಕ್ತಾಯ ಸಮಾರಂಭದಲ್ಲಿ ಮಾಡಿದ ಭಾಷಣ.