ದೇವಿ ಸರಸ್ವತಿಯಲ್ಲಿ ಮತ್ತು ಸರಸ್ವತಿಯ ಪುತ್ರರು ಭಕ್ತರುಗಳಲ್ಲಿ ವಿಜ್ಞಾಪನೆ:

ಪ್ರಾಚೀನ ಋಷಿಕವಿ ಮಂತ್ರದ್ರಷ್ಟಾರ ಒಬ್ಬನು ಜ್ಞಾನಾಧಿದೇವಿಯ ಸ್ತೋತ್ರ ಮಾಡುತ್ತ ಹೀಗೆ ಪ್ರಾರಂಭಿಸುತ್ತಾನೆ:

‘ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ|
ಸರ್ವವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋ ನಮಃ||
ಯಯಾ ವಿನಾ ಜಗತ್‌ಸರ್ವಂ ಶಶ್ವಜ್ಜೀವನ್‌ಮೃತಂ ಭವೇತ್‌|
ಜ್ಞಾನಾಧಿದೇವೀ ಯಾ ತಸ್ಯೈ ಸರಸ್ವತ್ಯೈ ನಮೋ ನಮಃ||
ಯಯಾ ವಿನಾ ಜಗತ್‌ಸರ್ವಂ ಮೂಕಮುನ್ಮತ್ತವತ್ ಸದಾ|
ಯಾ ದೇವೀ ವಾಗಧಿಷ್ಠಾತ್ರೀ ತಸ್ಯೈ ವಾಣ್ಯೈ ನಮೋ ನಮಃ||
ಮಾತರ್ ಮಾತರ್ ನಮಸ್ತೇ
ದಹ ದಹ ಜಡತಾಂ
ದೇಹಿ ಬುದ್ಧಿಂ ಪ್ರಶಾಂತಾಂ|

ಯಾವ ಜ್ಞಾನದೇವಿಯ ಆಶೀರ್ವಾದ ಇಲ್ಲದಿದ್ದರೆ ಜಗತ್ತು ಶಶ್ವಜ್ಜೀವನ್‌ಮೃತ ಸ್ಥಿತಿಯಲ್ಲಿರುತ್ತಿತ್ತೊ, ಬದುಕಿದ್ದರೂ ಸತ್ತಂತಹ ಸ್ಥಿತಿಯಲ್ಲಿರುತ್ತಿತ್ತೊ, ಯಾವ ವಾಗ್ದೇವಿಯ ಕೃಪೆ ಇಲ್ಲದಿದ್ದರೆ ಜಗತ್ತೆಲ್ಲಾ ‘ಮೂಕಮ್ ಉನ್ಮತ್ತವತ್ ಸದಾ’, ಹುಚ್ಚು ಹಿಡಿದವರ ಹಾಗೆ ಮೂಗರ ಹಾಗೆ ಸದಾ ಇರುತ್ತಿದ್ದಿತೊ, ಅಂತಹ ವಾಗಧಿಷ್ಠಾತ್ರಿಗೆ, ಅಂತಹ ಜ್ಞಾನಾಧಿದೇವಿಗೆ ನಮಸ್ಕರಿಸಿ ನನ್ನ ಭಾಷಣವನ್ನು ಪ್ರಾರಂಭಿಸುತ್ತೇನೆ.

ದೇವಿ ಸರಸ್ವತಿಯನ್ನು ಪ್ರಾರ್ಥಿಸಿದ ಋಷಿ ಕೊನೆಯಲ್ಲಿ ‘ಮಾತರ್ ಮಾತರ್ ನಮಸ್ತೇ’, ಎಂದು ಎರಡು ಬಾರಿ ಕರೆದು ದಹ ಜಡತಾಂ ದೇಹಿ ಬುದ್ದಿಂ ಪ್ರಶಾಂತಾಂ’, ಎಂದು ಎರಡುಬಾರಿ ಕೇಳಿಕೊಂಡಿದ್ದಾನೆ-ತಾಯೆ, ನಿನಗೆ ನಮಸ್ಕಾರ; ನಮ್ಮ ಜಡತ್ವವನ್ನು ದಹಿಸು ದಹಿಸು, ಪ್ರಶಾಂತವಾದ ಬುದ್ಧಿಯನ್ನು ಕೊಡು-ಎಂದು ಪ್ರಾರ್ಥಿಸಿದ್ದಾನೆ. ಬುದ್ಧಿಗೂ ಅನೇಕ ಗುಣಗಳಿರಬಹುದಲ್ಲ; ಆದ್ದರಿಂದಲೆ ಪ್ರಶಾಂತವಾದ ಬುದ್ಧಿಯನ್ನು ಕೊಡು, ನಮ್ಮ ಜಡತ್ವವನ್ನು ಸುಡುವಂತಹ ಬುದ್ದಿಯನ್ನು ಕೊಡು ಎಂದು ಪ್ರಾರ್ಥಿಸಿಕೊಂಡಿದ್ದಾನೆ ಆ ಋಷಿಕವಿ. ಸರಸ್ವತಿಯ ಚರಣಪೀಠಗಳಾದ ಈ ನಮ್ಮ ವಿದ್ಯಾಕ್ಷೇತ್ರಗಳು, ವಿಶ್ವವಿದ್ಯಾನಿಲಯಗಳು, ಈ ಎರಡು ಕೆಲಸವನ್ನೂ ಮಾಡಬೇಕು; ಇದು ನನ್ನ ಹಾರೈಕೆ.

ಮೈಸೂರು ವಿಶ್ವವಿದ್ಯಾನಿಲಯದ ಈ ಸ್ನಾತಕೋತ್ತರ ಬೊಧನ ಸಂಶೋಧನ ವಿಭಾಗಗಳ ವಿಚಾರವನ್ನು ಕುರಿತು ಶ್ರೀ ಮಲ್ಲಿಕಾರ್ಜುನಪ್ಪನವರು ನಮಗೆ ಆಗಲೆ ತಿಳಿಸಿದ್ದಾರೆ. ಹಾಗೆ ತಿಳಿಸುತ್ತಾ ಅವರು ನನ್ನಲ್ಲಿರುವ ವಿಶ್ವಾಸದಿಂದ ಮತ್ತು ಗೌರವದಿಂದ ಸ್ವಲ್ಪಮಟ್ಟಿಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅವರೇ ಸೂಚಿಸಿದಂತೆ, ನಾನು ಇದನ್ನೆಲ್ಲಾ ಊಹಿಸಿರಲಿಲ್ಲ; ಅಷ್ಟೇ ಅಲ್ಲ, ವಿಶ್ವವಿದ್ಯಾನಿಲಯದ ಧನಸಹಾಯದ ಆಯೋಗದವರು ಬಂದಾಗಲೂ ಕೂಡ, ನಮಗೆ ಇದ್ದ ಭಾವನೆ ಎಂತಹದೆಂದರೆ-ಈಗ ನಮ್ಮಲ್ಲಿರುವ ಸ್ನಾತಕೋತ್ತರ ಬೋಧನ ಸಂಶೋಧನ ವಿಭಾಗಗಳನ್ನೆ, ಹರಿದ ಅಂಗಿಯನ್ನು ತೇಪೆ ಹಾಕುವಹಾಗೆ, ಒಂದು ಸ್ವಲ್ಪ ಸ್ವಲ್ಪ ಸರಿಪಡಿಸುವುದು; ಸ್ವಲ್ಪ ಕಾಲರ್ ಹರಿದು ಹೋಗಿದೆ ಎಂದು ಅಲ್ಲಿ ಸ್ವಲ್ಪ ಹೊಲಿಯುವುದು, ಎಲ್ಲೊ ಅಂಗಿ ಗಿಡ್ಡವಾಗಿದೆ ಎಂದು ಅದಕ್ಕೆ ಬಟ್ಟೆಕೊಟ್ಟು ಉದ್ದಮಾಡುವುದು; ನಮಗಿದ್ದ ಗಮನವೆಲ್ಲ ಇಷ್ಟೆ. ಮಹಾರಾಜಾ ಕಾಲೇಜಿನಲ್ಲಿ ಸ್ಥಳಾಭಾವವಿದೆ, ಅಲ್ಲಿ ಅವರಿಗೆ ಸ್ಥಳ ಸಾಲದು. ಸರಿ ಇನ್ನಷ್ಟು ಜಾಗವನ್ನು ಸೇರಿಸಬೇಕು; ಪುಸ್ತಕಗಳು ಸಾಲದು, ಇನ್ನಷ್ಟು ಪುಸ್ತಕ ಸೇರಿಸುವುದು; ಅಧ್ಯಾಪಕರು ಸಾಲದು, ಇನ್ನಷ್ಟು ಅಧ್ಯಾಪಕರನ್ನು ಕೊಡಿ; ಹಾಗೆಯೆ, ಅಲ್ಲಿ ಪ್ರಯೋಗಶಾಲೆಗಳು ಸಾಲದು, ಪ್ರಯೋಗ ಮಂದಿರಗಳನ್ನು ಕಟ್ಟಿಸಿ-ಇಷ್ಟನ್ನೇ ನಾವು ಒಪ್ಪಿಕೊಂಡಿದ್ದುದು.

ಆದರೆ ಘಟನೆಗಳು  ಚಿತ್ರವಿಚಿತ್ರವಾಗಿ ನಡೆಯಲು ಪ್ರಾರಂಭವಾಗುತ್ತವೆ. ಶಕ್ತಿ ಸಂಕಲ್ಪಿಸಿದಾಗ, ಕೆಲಸ ಮಾಡುವವರಿಗೆ ಅರಿವೇ ಇಲ್ಲದಂತೆ, ನಾವು ಯಾವುದಕ್ಕೆ ವಿಘ್ನ ತಂದೊಡ್ಡಬೇಕೆಂದುಕೊಂಡು ಸನ್ನೆಹಾಕಿ ಮೀಟುತ್ತೇವೆಯೋ ಆ ಸನ್ನೆಗಳೆ ವಿಘ್ನಕೆ ಬದಲಾಗಿ ಕಾರ್ಯಸಾಧನೆ ಮಾಡುವಂತೆ ಸಹಾಯವಾಗುತ್ತವೆ. ಭಗವತ್‌ಕೃಪೆಯ ಪಾಕಕಾರ್ಯಕ್ಕೆ ಬಂದ ವಿಘ್ನಗಳೂ ಇಂಧನ ಮಾತ್ರವಾಗುತ್ತವೆ. ಹೀಗೆ ಪರವಾಗಿ ಕೆಲಸ ಮಾಡುವವರು, ವಿರುದ್ಧವಾಗಿ ಕೆಲಸಮಾಡುವವರು ಎಲ್ಲರೂ ಆ ಶಕ್ತಿಯ ಕೈಗೆ ಸಿಕ್ಕಿ ಕೆಲಸ ಮಾಡುತ್ತಲೆ ಇರುತ್ತಾರೆ. ಆ ತೆರದಲ್ಲಿ ಈ ಘಟನೆ ನಡೆದಿದೆ. ಎಲ್ಲರೂ ಎಷ್ಟರ ಮಟ್ಟಿಗೆ ಕಾರಣರೋ ನಾನು ಅಷ್ಟೇ ಮಟ್ಟಿಗೆ ಕಾರಣ. ಅಂದರೆ ಎಲ್ಲರೂ ಸ್ವಲ್ಪ ಸ್ವಲ್ಪ ನಿಮಿತ್ತ ಮಾತ್ರ ಕಾರಣರು ಎಂದಷ್ಟೆ ಹೇಳಬಹುದು.

ಈ ‘ಜಯಲಕ್ಷ್ಮಿವಿಲಾಸ ಭವನ’ವನ್ನುಕೊಂಡುಕೊಂಡದ್ದಾದರೂ ಒಂದು ಅನಿರೀಕ್ಷಿತ ಘಟನೆಯೆ. ಯಾವುದೋ ದಿನ ಶ್ರೀ ಸರ್ದಾರ್ ಬಸವರಾಜ ಅರಸಿನವರನ್ನು ಆ ಸಾರಸ್ವತಶಕ್ತಿ ಯಾವ ಕಾರಣಕ್ಕೊ ಈ ತಮ್ಮ ಭವನವನ್ನು ಮಾರುವಂತೆ ಪ್ರೇರಿಸಿತು. ಆ ಭವನವನ್ನು ಮಾರಬೇಕೆಂಬ ಭಾವನೆ ಅವರಲ್ಲಿ ಬಂದಿತು. ಆಗ ಯಾರೋ ಸೈನ್ಯದ ಇಲಾಖೆಯವರು ಅಲ್ಲಿಗೆ ಬರುತ್ತಾರೆ ಎಂದು, ಮತ್ತಾವುದೋ ಕೇಂದ್ರ ಸರ್ಕಾರದ ಕಚೇರಿ ಅಲ್ಲಿಗೆ ಬರುತ್ತದೆ ಎಂದು ಏನೇನೋ ಸುದ್ದಿ ಹಬ್ಬಿತು. ನಾನೂ ಕೂಡಸ ಅವರೊಡನೆ ಆ ಕಟ್ಟಡದ ವಿಷಯವಾಗಿ ಮಾತನಾಡಿದ್ದೆ. ಎಷ್ಟೇ ಪಟಿಂಗನಾದರೂ ಉಪಾಧ್ಯಾಯರಿಗಿಂತ ಬೇರೆ ಸಭ್ಯರಿರಲಾರರೆಂದು ಭಾವಿಸಿಯೋ ಏನೊ. ತಾವು ಆ ಎಡೆಯೆ ಮನೆಕಟ್ಟಿಕೊಂಡು ಬಾಳಬೇಕಾಗಿದ್ದುದರಿಂದ ಒಳ್ಳೆಯ ನೆರೆಹೊರೆಯನ್ನೆ ಬಯಸಿ ಶ್ರೀಯುತ ಅರಸಿನವರು ನಮಗೆ ಆ ಕಟ್ಟಡವನ್ನು ಕೊಡಲು ಮುಂದೆ ಬಂದರು.

ಎಷ್ಟೋ ಜನ ಈ ರಿಕ್ತ ಮಂದಿರವನ್ನೇಕೆ ಕೊಳ್ಳುವಿರಿ ಎಂದರು. ದಯವಿಟ್ಟು ಅನ್ಯಥಾ ಭಾವಿಸಬಾರದು. ಈಗ್ಗೆ ಎರಡು ತಿಂಗಳ ಹಿಂದೆ ಈ ಕಟ್ಟಡವನ್ನು ಯಾರಾದರೂ ನೋಡಬೇಕಿತ್ತು, ಹೀಗಿತ್ತೆಂಬುದು ತಿಳಿಯುತ್ತಿತ್ತು; ಅದಕ್ಕೆ ಬಂದಿರುವ ಈಗಿನ ರೂಪ ನಮ್ಮ ಎಂಜಿನಿಯರ್ ಇಲಾಖೆಯವರ ಶ್ರಮದ ಫಲ. -ಏಕಿಂತಹ ಸಾಹಸ ಎಂದೆಲ್ಲ ಹೆದರಿಸಿದರು. ಅವರಿಗೆಲ್ಲ ಸಮಾಧಾನ ಹೇಳಿದುದಾಯಿತು: ಈ ಕಟ್ಟಡ ಮಾತ್ರವೆ ಅಲ್ಲ, ಅದರ ಸುತ್ತಲೂ ಇರುವ ಮುನ್ನೂರು ಎಕರೆ ವಿಸ್ತಾರ ಭೂಪ್ರದೇಶವೆಲ್ಲ ದೊರೆಯುತ್ತದೆ, ಎಂದೆಲ್ಲ ಒಪ್ಪಿಸಿದ್ದಾಯಿತು. ಈ ಕಟ್ಟಡಕ್ಕೆ ತಗಲುವ ವೆಚ್ಚವನ್ನೆಲ್ಲ ಹೇಗಿದ್ದರೂ ವಿಶ್ವವಿದ್ಯಾನಿಲಯದ ಧನಸಹಾಯ ಮಂಡಲಿಯವರೆ ನೀಡುತ್ತಾರೆ ಎಂಬ ಧೈರ್ಯ ಬೇರೆ ಇದ್ದಿತು. ಆದರೆ ಕೊನೆಯಲ್ಲಿ ಅವರು ಹಣ ಕೊಡಲಿಕ್ಕೆ ಒಪ್ಪಲಿಲ್ಲ. ಆದರೂ ನಮ್ಮ ವಿಶ್ವವಿದ್ಯಾನಿಲಯದ ಖಜಾನೆಯ ಕೀಲಿಯ ಕೈಗಳನ್ನು ಇಟ್ಟುಕೊಳ್ಳತಕ್ಕಂತಹ ಕೆಲವು ಶಕ್ತಿಗಳ ಒಪ್ಪಿಗೆಯನ್ನು ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದೆವು. ನಾವು ಇಂದು ಈ ಪ್ರದೇಶವನ್ನು ಕೊಳ್ಳುವುದಾದರೆ ಮುಂದಿನ ಅಭಿವೃದ್ಧಿಗೆ ತಗಲುವ ಸಕಲ ರೀತಿಯ ಖರ್ಚುವೆಚ್ಚಗಳನ್ನೂ ವಿಶ್ವವಿದ್ಯಾನಿಲಯ ಧನಸಹಾಯ ಮಂಡಲಿಯವರೆ ನೀಡುವರೆಂಬ ಆಶ್ವಾಸನೆಯ ಧೈರ್ಯವನ್ನೂ ಪಡೆದುಕೊಂಡೆವು. ಹೀಗಾಗಿ ವ್ಯಾಪಾರವಾಯಿತು. ಕೊನೆಗೊಂದು ನಿರ್ಧಾರಕ್ಕೆ ಅವರೂ ಉದಾರವಾಗಿ ಒಪ್ಪಿದರು; ಜೊತೆಗೆ ಒಂದು ಲಕ್ಷ ರೂಪಾಯಿಗಳಷ್ಟು ಸೇವಾರ್ಥಧನವನ್ನು ಶ್ರೀ ಅರಸರವರು ತಮ್ಮ ಗತಿಸಿದ ಸಹಧರ್ಮಿಣಿಯವರ ನೆನಪಿಗಾಗಿ ಕೊಟ್ಟರು. ಹೀಗೆ ಈ ಭವನ, ಮತ್ತು ಈ ಸುತ್ತಣ ವಿಸ್ತಾರ ಭೂಪ್ರದೇಶಗಳ ಸ್ವಾಮ್ಯವನ್ನು ನಾವಿಂದು ಪಡೆದುಕೊಂಡಿದ್ದೇವೆ.

ಈಗ, ಇಲ್ಲಿ ಒಂದು ವಿಷಯ ಪ್ರಸ್ತಾಪಿಸುವುದು ಅನುಚಿತವಾಗಲಾರದು. ಮೈಸೂರಿನಲ್ಲಿರುವ ಮಹಾರಾಜಾ ಕಾಲೇಜು, ಬೆಂಗಳೂರಿನ ಸೆಂಟ್ರಲ್ ಕಾಲೇಜು ಎರಡೂ ನಮ್ಮ ವಿಶ್ವವಿದ್ಯಾನಿಲಯದ ಪ್ರಧಾನ ಅಂಗಗಳಾಗಿ ಈ ತನಕ ಬೆಳೆದುಕೊಂಡು ಬಂದಿವೆ. ವಿಶ್ವವಿದ್ಯಾನಿಲಯವೆಂದರೆ ಬರಿಯ ಕಾರ್ಯಸೌಧವೇನಲ್ಲವಲ್ಲ; ವಾಸ್ತವವಾಗಿ ಆ ಕಾಲೇಜುಗಳೆ. ಈ ಎರಡು ಪ್ರಧಾಣ ಕಾಲೇಜುಗಳ ಜೊತೆಗೆ ಉಳಿದ ಇತರ ಕಾಲೇಜುಗಳೂ ನಮ್ಮ ದೃಷ್ಟಿಗೆ ಬಂದುವು. ಈ ಎಲ್ಲ ಕಾಲೇಜುಗಳ ಪ್ರಾಶಸ್ತ್ಯ ಕಡಿಮೆಯಾದೀತಲ್ಲ ಎಂಬ ಆತಂಕಭಾವ ಸಹಜವಾಗಿಯೆ ಬರುತ್ತದೆ. ಇದರ ಮಧ್ಯೆ ಶ್ರೀ ಮೊದಲಿಯಾರ್ ಕಮಿಟಿ ಒಂದು ಏರ್ಪಟ್ಟಿದ್ದಿತು. ಅದರಲ್ಲಿ ನಾನೂ ಇದ್ದೆ. ವಿಶ್ವವಿದ್ಯಾನಿಲಯ ಆಯೋಗದ ನಿಯಮದ ಪ್ರಕಾರ ಸ್ನಾತಕೋತ್ತರ ಬೋಧನಾಂಗ ಸಂಶೋಧನಾಂಗಗಳನ್ನು ಸ್ನಾತಕಪೂರ್ವ ಬೋಧನಾಂಗದಿಂದ ಪ್ರತ್ಯೇಕಿಸಲೆ ಬೇಕಿದ್ದಿತು;  ಹಾಗಾದರೆ, ಉಳಿದೆಲ್ಲ ಜಿಲ್ಲಾ ಕಾಲೇಜುಗಳ ಜೊತೆಯಲ್ಲೆ ಈ ಎರಡು ಕಾಲೇಜುಗಳೂ ಬೇರ್ಪಡಲೆ ಬೇಕಾಯಿತು. ಆ ಸನ್ನಿವೇಶದಲ್ಲಿ ಅವುಗಳನ್ನು ಉಳಿಸಿಕೊಳ್ಳಲು ನಾನೂ ವಾದಿಸಿದೆ. ಎಷ್ಟೇ ಆದರೂ ನಾವು ಹುಟ್ಟಿ ಬೆಳೆದ, ಬಾಳಿ ಬದುಕಿದ ಮನೆ ಮಠಗಳಲ್ಲಿ ಒಂದು ಮೋಹ ಒಂದು ಮಮತೆ ಬೆಳೆದಿರುತ್ತದೆ; ನಾನು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿದ್ದವನು; ಅಧ್ಯಾಫಕನಾಗಿದ್ದು ಪ್ರಾಧ್ಯಾಪಕನಾಗಿದ್ದು ಪ್ರಿನ್ಸಿಪಾಲ್ ಆಗಿದ್ದವನು; ಆದ್ದರಿಂದ ಮಹಾರಾಜಾ ಕಾಲೇಜಿನ ವಿಚಾರದಲ್ಲಿ ನನಗೆ ಉಳಿದವರೆಲ್ಲರಿಗೆ ಎಷ್ಟು ಶ್ರದ್ದೆ ವಿಶ್ವಾಸಗಳಿರಬಹುದೂ ಅದಕ್ಕಿಂತಲೂ ಏನೂ ಕಡಿಮೆ ಭಾವನೆ ಇಲ್ಲ. ಅದಕ್ಕಾಗಿ ನಾನೂ ವಾದಿಸಿದವನೆ. ಆ ಕಾಲೇಜುಗಳನ್ನು ಪ್ರತ್ಯೇಕಿಸುವುದು ಸರಿಯಲ್ಲ, ಆದರೆ ಕಾನೂನಿಗೆ ತಕ್ಕಂತೆ ಪ್ರತ್ಯೇಕವಾಗಿರಬೇಕು. ಹೇಗೆ? ಅವುಗಳನ್ನು ಮಾದರಿ ಕಾಲೇಜುಗಳನ್ನಾಗಿ ವಿಶ್ವವಿದ್ಯಾನಿಲಯವೆ ನಡೆಸಬೇಕು. ವಿಶ್ವವಿದ್ಯಾನಿಲಯ ಸ್ನಾತಕಪೂರ್ವ ಶಿಕ್ಷಣವಿಚಾರದಲ್ಲಿ ಕೈಹಾಕಲೇ ಕೂಡದು; ಅವುಗಳನ್ನು ಯಾರಾದರೂ ನೋಡಿಕೊಂಡು ಹೋಗಲಿ; ಸರಕಾರವೇ ಮಾಡಿಕೊಳ್ಳಲಿ; ಪ್ರೈವೇಟ್ ಕಾಲೇಜಿನವರಾದರೂ ನಡೆಸಿಕೊಂಡಿರಲಿ; ವಿಶ್ವವಿದ್ಯಾನಿಲಯಕ್ಕೆ ಬರಿ ಸ್ನಾತಕೋತ್ತರ ಬೋಧನ ಸಂಶೋಧನೆಯ ಇರಲಿ ಎಂಬುದು ಉಚಿತವಲ್ಲ. ಮಹಾರಾಜಾ ಕಾಲೇಜು, ಸೆಂಟ್ರಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು-ಈ ಇಷ್ಟು ಕಾಲೇಜುಗಳನ್ನು ನಾವು ಮಾದರೀ ಕಾಲೇಜುಗಳನ್ನಾಗಿ ನಡೆಸುತ್ತೇವೆ, ಎಂದೆಲ್ಲ ವಾದಿಸಿದೆವು. ಇಷ್ಟಾದ ಅನಂತರ, ಹೋಗಲಿ, ಒಂದು ಎಂಟುನೂರ ವಿದ್ಯಾರ್ಥಿಗಳಿಗೆ ಮಾತ್ರ ಒಂದೊಂದು ಕಾಲೇಜಿನಲ್ಲಿ ಅಭ್ಯಾಸಾವಕಾಶ ಕೊಡುತ್ತೇವೆಂದು ಆಯೋಗದವರು ಒಪ್ಪಿಕೊಂಡರು.

ಆದರೆ ಘಟನೆಗಳು ಯಾವ ಯಾವ ರೂಪವನ್ನೋ ಪಡೆಯುತ್ತಾ ಹೋಗುತ್ತವೆ. ಯಾವಾಗ ಈ ಕಟ್ಟಡ ನಮಗೆ ದೊರೆಯುತ್ತದೆಂದು ನಿರ್ಧಾರವಾಯಿತೊ ಆಗ ಮತ್ತೆ ಕೆಲವು ಮಾರ್ಪಾಟುಗಳಾದುವು. ನಮ್ಮ ರಾಜ್ಯದಲ್ಲಿ ನಮ್ಮ ಸಹೋದರ ಸ್ಥಾನದಲ್ಲಿರುವ ಮತ್ತೊಂದು ವಿಶ್ವವಿದ್ಯಾನಿಲಯ-ಕರ್ನಾಟಕ ವಿಶ್ವವಿದ್ಯಾಲಯ-ತಾಣು ಒಂದು ದೊಡ್ಡ ಕ್ಷೇತ್ರವನ್ನೆ ಕಟ್ಟಿಕೊಂಡು ‘ವಿ.ವಿ.ಧ. ಸಹಾಯ ಮಂಡಲಿ’ ಯವರಿಂದ ಬೇಕಾದಷ್ಟು ಹಣಪಡೆದು ಕೆಲಸಮಾಡುತ್ತಿರುವುದು ನಮ್ಮ ದೃಷ್ಟಿಗೆ ಬಿದ್ದಿತ್ತು. ಇವೆಲ್ಲದರ ಜತೆಗೆ ಸರ್ಕಾರದ ಸೂಚನೆಯೂ ನನ್ನ ಸ್ವಂತ ಸೂಚನೆಯೂ ಒಂದೆ ಆಗಿದ್ದುದರಿಂದ ಈ ಕ್ಷೇತ್ರದಲ್ಲೆ ಸ್ನಾತಕೋತ್ತರ ಕಲಾವಿಜ್ಞಾನ ವಿಭಾಗಗಳೆರಡನ್ನೂ ತೆರೆಯಬೇಕೆಂದಾಯಿತು. ಗಾತ್ರದಲ್ಲಿ ಅಲ್ಲದಿದ್ದರೂ ಸ್ಥಳಾವಕಾಶ ಮತ್ತು ಉಪಯೋಗಗಳಲ್ಲಿ ಈ ಕಟ್ಟಡಕ್ಕೆ ಸರಿಸಮಾನ ವಾದ ಅಥವಾ ಇದನ್ನು ಮೀರಿಸತಕ್ಕಂಥ ಎರಡು ಮಹಾಸೌಧಗಳನ್ನು-ಒಂದು Humanities ಮತ್ತು Scienceಗೆ ನಿರ್ಮಿಸಲು ಮತ್ತು ಅವುಗಳ ಜೊತೆಯಲ್ಲಿ ಒಂದು ಮಹಾ ಪುಸ್ತಕ ಭಂಡಾರವನ್ನು ನಿರ್ಮಾಣ ಮಾಡಲು ‘ವಿ.ವಿ.ಧ. ಸಹಾಯ ಮಂಡಲಿ’ಯವರು ನೂರಕ್ಕೆ ನೂರು ನೆರವು ನೀಡುವುದಾಗಿ ಧೈರ್ಯವಿತ್ತರು.

ಇಲ್ಲಿ ನಡೆಯಬಹುದಾದ ಭವನ ನಿರ್ಮಾಣವೆಲ್ಲ ಇವುಗಳಿಷ್ಟರಿಂದಲೆ ಮುಗಿಯುವುದಿಲ್ಲ. ಬೇಕಾದರೆ ಅಲ್ಲೆ ಹೊರಗೆ ಇಟ್ಟಿರುವ ಆ Masterplan ನೋಡಿದರೆ ತಿಳಿಯುತ್ತದೆ. ಆ ಬೋಗಾದಿ ರಸ್ತೆಯಿಂದ ಸುಂಕದ ಕಟ್ಟೆಯವರೆಗೂ ಒಂದು ರಸ್ತೆ ಇದೆ. ಅಲ್ಲಿ ಒಂದು ಕಡೆಯಿಂದ ಪ್ರೊಫೆಸರ್ಸ್ ಕ್ವಾರ್ಟರ್ಸ್, ರೀಡರ್ಸ್ ಕ್ವಾರ್ಟರ್ಸ್, ಲೆಕ್ಚರರ್ಸ್ ಕ್ವಾರ್ಟರ್ಸ್, ಹೀಗೆಯೇ ಆರೋಗ್ಯ ಕೇಂದ್ರ, ಸ್ಕೂಲ್, ಹಾಸ್ಟೆಲ್ ಎಲ್ಲಾ ನಿರ್ಮಾಣ ವಾಗಬೇಕಾಗುತ್ತದೆ. ಈ ಎಲ್ಲಕ್ಕೂ ನಾವು ಶೇಕಡ ೫೦ರಷ್ಟು ಹಣವನ್ನು ಹಾಕಬೇಕು; ಇಲ್ಲವೆ ಅದನ್ನು ಬಡ್ಡಿಯಿಲ್ಲದ ಸಾಲವಾಗಿ ಪಡೆಯಬಹುದು; ಉಳಿದರ್ಧ ಅವರೆ ಸಹಾಯವಾಗಿ ನೀಡುತ್ತಾರೆ. ಅಂದರೆ ನಾವು ಇಲ್ಲಿ ಮಾಡಿಸುವ ಸುಮಾರು ಒಂದು ಕೋಟಿ ರೂಪಾಯಿ ಕೆಲಸಕ್ಕೆ ನಾವಾಗಿಯೆ ಏನೂ ಖರ್ಚುಮಾಡಬೇಕಾಗಿಲ್ಲ; ಎಲ್ಲವನ್ನು ಅವರೆ ಕೊಡುತ್ತಾರೆ.

ಇಂಥ ಒಂದು ಪರಿಸ್ಥಿತಿಯಲ್ಲಿ ನಾವಿದನ್ನು ಪ್ರಾರಂಭಿಸುತ್ತಿದ್ದೇವೆ. ಯಾವಾಗ ಈ ಭವನವನ್ನು ನಮ್ಮ ವಶಕ್ಕೆ ಪಡೆದುಕೊಂಡೆವೊ ಆ ಹೊತ್ತಿನಿಂದ ನಾನು ಇಲ್ಲಿ ಪ್ರದಕ್ಷಿಣೆ ಪ್ರಾರಂಭಮಾಡಿದೆ. ಬೆಳಗ್ಗೆ ಸಾಯಂಕಾಲ ಇನ್ನೆಲ್ಲಿಯೊ ಹೋಗುತ್ತಿದ್ದ ವಾಕಿಂಗಿನ ದಿಕ್ಕನ್ನು ಬದಲಾಯಿಸಿ ಇಲ್ಲಿಯೆ ಪ್ರದಕ್ಷಿಣೆ ಹಾಕತೊಡಗಿದೆ. ಬರಬರುತ್ತಾ ನನ್ನ ಕವಿಕಲ್ಪನಾ ಚಕ್ಷುಸಿಗೆ ಇನ್ನು ಐವತ್ತು ವರ್ಷಗಳಲ್ಲಿ ಈ ಕ್ಷೇತ್ರ ಏನಾಗುತ್ತೆ ಎಂಬುದು ಕಾಣತೊಡಗಿತು. ಇಲ್ಲೆಲ್ಲ ಕಟ್ಟಡಗಳ ಸಾಲು ಹರಿದಿರುತ್ತದೆ; ಅವುಗಳ ಮಧ್ಯೆ ರಸ್ತೆಗಳು ಹಾದುಹೋಗಿರುತ್ತವೆ; ಅಲ್ಲಿ ಒಂದೆಡೆಯಲ್ಲಿ ಸ್ನಾನಸರೋವರ; ಅಲ್ಲಲ್ಲೆ ಸ್ಮಾರಕ ಪೀಠಗಳು; ಎಲ್ಲೆಲ್ಲೂ ಎದ್ದು ಬೆಳೆದುನಿಂತಿರುವ ಬೃಹದ್ ವೃಕ್ಷಗಳಿಗೆ ಒಂದೊಂದಕ್ಕೂ ಒಬ್ಬೊಬ್ಬ ಮಹರ್ಷಿಯ, ಮಹಾಕವಿಯ, ಮಹಾವಿಜ್ಞಾನಿಯ ಹೆಸರು ಬಂದಿರುತ್ತದೆ-ಇದು ವ್ಯಾಸಪೀಠ, ಇದು ವಾಲ್ಮೀಕಿ ಪೀಠ, ಅದು ಕಾಳಿದಾಸ ಪೀಠ, ಅಲ್ಲಿ ಷೇಕ್ಸ್‌ಪಿಯರ್ ಪೀಠ, ಇಲ್ಲಿ ಪಂಪ ನಾರಣಪ್ಪರ ಹೆಸರಿನ ಪೀಠಗಳು, ಹೀಗೆ ಇಡಿ ಕ್ಷೇತ್ರವೆ ಮಹಾವ್ಯಕ್ತಿಗಳ ಹೆಸರಿನಿಂದ ತುಂಬಿ ಭಾವಮಯ ಮನೋಮಯ ಶಕ್ತಿಗಳ ನೆಲೆಮನೆಯಾಗಿರುತ್ತದೆ-ಎಂದೆಲ್ಲ ಚಿತ್ರಗಳನ್ನೂ ಕಾಣತೊಡಗಿದೆ. ಇಂತಹ ಮಹಾಕ್ಷೇತ್ರಕ್ಕೆ ಯೋಗ್ಯವಾದ ಹೆಸರೊಂದನ್ನು ಹುಡುಕತೊಡಗಿದೆ. ಕರ್ಣಾಟಕಕ್ಕೆ ಸಂಬಂಧಿಸಿದಂತಹ ಹೆಸರುಗಳನ್ನು, ಭಾರತಕ್ಕೆ ವಿಶ್ವಕ್ಕೆ ಸಂಬಂಧಪಟ್ಟಂತಹ ಹೆಸರುಗಳನ್ನು, ಹಾಗೆಯೆ ಅದರೊಂದು ಚೂರು ಇದರೊಂದು ಚೂರು ಸೇರಿಸಿ ಆಗಿರುವ ಹೆಸರುಗಳನ್ನು ಯೋಜಿಸಿ ಆಲೋಚಿಸಿದೆ. ಕೊನೆಗೆ ಈ ಹೆಸರು ಹೊಳೆಯಿತು. ದಿಟಕ್ಕೂ ಅದು ಯೋಚನೆಯ ಫಲವಾಗಿ ಬಂದದ್ದೇನಲ್ಲ, ಅದು ಮಿಂಚಿನಂತೆ ಹೊಳೆದು ಬಂದದ್ದು. ಅದನ್ನು ಯಾರಿಗೂ ಏಳೆಂಟು ದಿನಗಳವರೆಗೆ ಹೇಳದೆಯೆ ಹಾಗೆಯೆ ನಾನೆ ಮನನಮಾಡಿ, ಒಂದು ರೀತಿಯಲ್ಲಿ ಅದಕ್ಕೆ ಶಕ್ತಿಯನ್ನು ಆಹ್ವಾನಿಸಿ ‘ಮಾನಸಗಂಗೋತ್ರಿ’ ಎಂದು ಹೆಸರು ಇಟ್ಟಿದ್ದಾಯಿತು. ಇಟ್ಟ ಹೆಸರೆ ಕೊಟ್ಟ ಮಂತ್ರ; ಆದ್ದರಿಂದ ಅದೆ ತೊಟ್ಟ ದೀಕ್ಷೆಯೂ ಆಗಲಿ.

ಈ ‘ಮಾನಸಗಂಗೋತ್ರಿ’ ಎಂಬ ಹೆಸರಿನ ಔಚಿತ್ಯವನ್ನು ವಿವರಿಸುವ ಮುನ್ನ ಒಂದು ಮಾತು ಹೇಳಬಯಸುತ್ತೇನೆ. ಪತ್ರಿಕೆಗಳಲ್ಲಿ ಬಂದಿದ್ದ ಒಂದು ಮಾತು. ಅಲ್ಲಿ ಒಂದು ಚಿತ್ರವನ್ನು ಪ್ರಕಟಿಸಿ ಅದರ ಅಡಿಯಲ್ಲಿ, ಇದು ‘ಜಯಲಕ್ಷ್ಮೀ ವಿಲಾಸ ಭವನ’, ಈಗ ಇದಕ್ಕೆ ‘ಮಾನಸಗಂಗೋತ್ರಿ’ ಎಂಬ ಹೆಸರನ್ನು ಕೊಟ್ಟಿದೆ, ಎಂದೇನೊ ಬರೆದಿತ್ತು. ಇದಕ್ಕೇ ನಾವು ಪ್ರಾರ್ಥಿಸಬೇಕಾದದ್ದು “ಮಾತರ್ ಮಾತರ್, ನಮಸ್ತೇ; ದಹ ದಹ ಜಡತಾಂ, ದೇಹಿ ಬುದ್ಧಿಂ ಪ್ರಶಾಂತಾಂ;” ಎಂದು. ‘ಮಾನಸಗಂಗೋತ್ರಿ’ ಎಂಬುದು ಯಾವೊಂದು ಕಟ್ಟಡವೂ ಅಲ್ಲ. ಅದು ಇಡೀ ಕ್ಷೇತ್ರಕ್ಕೆ ಕೊಟ್ಟ ಹೆಸರು. ಹಾಗಾಗಿ ಈ ಭವನ ತನ್ನ ಮೊದಲ ಹೆಸರನ್ನೆ ಉಳಿಸಿಕೊಳ್ಳುತ್ತದೆ. ಯಾರೂ ಅದನ್ನು ಅಳಿಸಲಾರರು. ಅದು ‘ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಭವನ’ ಆಗಿಯೇ ಇರುತ್ತೆ. ನಮ್ಮ ಆಹ್ವಾನ ಪತ್ರಿಕೆಗಳಲ್ಲಿ ಅಚ್ಚು ಹಾಕಿಸಿದ್ದಾದರೂ ಅಷ್ಟೆ. ಏಕೊ ಏನೋ ಪತ್ರಿಕೆಗಳಲ್ಲಿ ಇಂಥಾ ಪ್ರಮಾದಗಳು ನಡೆಯುತ್ತಲೇ ಇರುತ್ತವೆ. ಅದಕ್ಕಾಗಿಯೇ ಮತ್ತೆ ಮತ್ತೆ ‘ದಹ ದಹ ಜಡತಾಂ’ ಎಂಬ ಪ್ರಾರ್ಥನೆ ನಡೆಯಬೇಕಾಗುತ್ತದೆ.

‘ಮಾನಸಗಂಗೋತ್ರಿ’ ಎಂಬ ಹೆಸರು ಭೌಗೋಲಿಕವೂ ಹೌದು, ಆಧ್ಯಾತ್ಮಿಕವೂ ಹೌದು. ನಮ್ಮ ಭರತವರ್ಷದ ಉತ್ತರದ ಎತ್ತರದಲ್ಲಿ ಹಿಮಾಲಯಗಳ ಮುಡಿಯಯಲ್ಲಿ ಗಂಗೆ ಹುಟ್ಟುವ ಎಎಯಿದೆ. ಮಾನಸಸರೋವರ, ಗಂಗೋತ್ರಿ ಎಂದೆಲ್ಲ ಆ ಪುಣ್ಯಕ್ಷೇತ್ರವನ್ನು ಕರೆಯುತ್ತಾರೆ. ಇಷ್ಟರಿಂದ ಈ ಹೆಸರು ಭೌಗೋಲಿಕಾರ್ಥ ಪಡೆದಿರುವಂತೆ ತೋರುತ್ತದೆ. ಆದರೆ ಯಾವ ಭಾರತೀಯನಿಗೂ ಗಂಗೆ ಎಂಬ ಮಾತಾಗಲಿ, ಮಾನಸ ಎಂಬ ಮಾತಾಗಲಿ, ಗಂಗೋತ್ರಿ ಎನ್ನುವ ಮಾತಾಗಲಿ ಕೇವಲ ಭೌಗೋಲಿಕ ಅಸ್ತಿತ್ವ ಪಡೆದಿರುವ ನಿರ್ಜೀವ ವಸ್ತುಗಳಲ್ಲ. ಅವುಗಳೆಲ್ಲ ಮಾನಸಿಕ ಆಧ್ಯಾತ್ಮಿಕ ಸಾಂಕೇತಿಕಾರ್ಥಗಳ ತವರಾಗಿವೆ. ಮಾನಸ ಎಂಬ ಮಾತು ಮಾನಸ ಸರೋವರಸೂಚಿ ಆಗಿರುವಂತೆಯೆ ಮನಸ್ ಸಂಬಂಧಿಯೂ ಆಗಿದೆ. ವಿದ್ಯಾಸಂಬಂಧಿಯೂ ಆಗಿದೆ. ಆ ಮಾನಸಸರೋವರದಂತೆ ಈ ಮಾನಸಗಂಗೋತ್ರಿ ಹಿಮಾಲಯದ ಎತ್ತರದಲ್ಲೆ ಇರಬೇಕಿಲ್ಲ. ಆದರೂ ಗಂಗೆ ಉದ್ಭವವಾಗುವುದು ಆ ಎತ್ತರದಲ್ಲಿ ಮಾತ್ರವೆ. ಮಾನಸದ ಮಾನಸಿಕ ಶೃಂಗೌನ್ನತ್ಯಗಳಲ್ಲಿ ಅತಿಮಾನಸವು ಅವತರಿಸಿ ಬರುತ್ತದೆ. ಅತಿಮಾನಸ ಮಾನಸಕ್ಕೆ ಅವತರಿಸುತ್ತದೆ ಎನ್ನುವ ಶ್ರೀ ಅರವಿಂದರ ಅಭಿಪ್ರಾಯ ಇದೇಯೆ. ಮಾನಸ ಸರೋವರ ಎಷ್ಟೇ ಪವಿತ್ರವಾದುದಾಗಿದ್ದರೂ ಅಲ್ಲಿ ಉದ್ಭವಿಸುವ ಗಂಗಾಜಲವೆಲ್ಲ ಅಲ್ಲಿಯೆ ಸಂಗ್ರಹಗೊಂಡು ನಿಂತಿದ್ದರೆ ಯಾರೂ ಅದನ್ನು ಮೆಚ್ಚುತ್ತಿರಲಿಲ್ಲ. ಮಳೆಗಾಲದಲ್ಲಿ ಸಂಗ್ರಹವಾಗಿ ಶೇಖರವಾದ ಹಿಮಜಲ ಬೇಸಗೆಯಲ್ಲಿ ಗಂಗಾ ಮುಂತಾದ ಇತರ ನದಿಗಳಿಗೆ ತವನಿಧಿ ಆಹಾರವಾಗಿ ಅವತರಿಸಿ ಬರುವುದರಿಂದಲೇ ಅದು ಪೂಜ್ಯ, ಪ್ರಿಯ, ಲೋಕಪ್ರಯೋಜನಕಾರಿ, ಕಲ್ಯಾಣಕಾರಿ. ಆ ಗಂಗೋತ್ರಿಯಲ್ಲಿ ಉದ್ಭವಿಸಿದ ಗಂಗೆ ನಾಡಿಗೆಲ್ಲ ಜಲಾಹಾರವಿತ್ತು ತಣಿಸಿ, ಅನೇಕ ಪುಣ್ಯಕ್ಷೇತ್ರಗಳಲ್ಲಿ ತೀರ್ಥವಾಗಿ ವರವಿತ್ತು ಗಂಗಾಸಾಗರ ಗಾಮಿಯಾಗುತ್ತಾಳೆ. ಹಾಗೆಯೆ ಋಷಿಗಳ ತಪಸ್ಸಿನಿಂದ ಅವತರಿಸಿ ಬಂದ ಜ್ಞಾನಗಂಗೆ ಅಲ್ಲಿಯೆ ತಳುವದೆ ಲೋಕಹಿತಾರ್ಥವಾಗಿ ಪಾತ್ರ ಪಾತ್ರಗಳಲ್ಲಿ ನಾಲೆ ಕಾಲುವೆಗಳಲ್ಲಿ ಹರಿದುಬರಬೇಕು.

ಋಷಿಗಳು ತಪಸ್ಸು ಎಂದಾಗ ಯಾರಾದರೂ ತಪ್ಪು ತಿಳಿಯುವುದು ಸಾಧ್ಯ. ಋಷಿ ಸಂತ ಎಂಬ ಎರಡು ಮಾತನ್ನೂ ಬೇರ್ಪಡಿಸಬೇಕು. ಶ್ರೀ ಅರವಿಂದರು ಆ ಅಂಶವನ್ನು ಸ್ಪಷ್ಟಪಡಿಸಿದ್ದಾರೆ. ಋಷಿ ಆದವನು ಸಂತನೂ ಆಗಿರಬೇಕಿಲ್ಲ. ಹಾಗಿದ್ದರೆ ಎಷ್ಟೊ ಮಂತ್ರದ್ರಷ್ಟಾರರಾದ ಋಷಿಗಳ ಜೀವನ ನಮ್ಮನ್ನು ನಿರಾಶರನ್ನಾಗಿ ಮಾಡುತ್ತಿತ್ತು. ಎಷ್ಟೋ ಜನ ಮಹಾಕವಿಗಳು ಋಷಿಗಳಾಗಿದ್ದರೂ ನೀತಿಯ ದೃಷ್ಟಿಯಿಂದ ಸಂತರಾಗಿಲ್ಲ, ಅವರ ಜೀವನ ಅಂತಹ ಸಭ್ಯವೇನಲ್ಲ. ಹೀಗಿದ್ದರೂ ಏಕೆ ಅವರು ಪೂಜ್ಯರಾಗಿದ್ದಾರೆ. ಎಂದರೆ ಅವರು ಸಾಮಾನ್ಯ ದೃಷ್ಟಿಗೆ ಅಗೋಚರವಾದುದನ್ನು ಕಾಣುತ್ತಾರೆ; ದೈವದತ್ತವಾದ ಯಾವುದೊ ಶಕ್ತಿಯಿಂದ ಅವರು ಮಂತ್ರದ್ರಷ್ಟಾರರೂ ಆಗಿರುತ್ತಾರೆ; ಅತಿಮಾನಸದ ಅವತರಣಕ್ಕೆ ಕಾರಣ ಭೂತರಾಗಿರುತ್ತಾರೆ ಎಂದಷ್ಟೆ.

ನಮ್ಮ ವಿದ್ಯಾಕ್ಷೇತ್ರದಲ್ಲಿ ಅಂತಹ ನಿರಂತರ ವಿದ್ಯಾತಪಸ್ಸಿನಲ್ಲಿ ತೊಡಗಿರುವ ಶ್ರದ್ಧಾತ್ಮರು ಕಿಂಚಿತ್ ಋಷ್ಯಂಶ ಸಂಭೂತರಾಗಿರುತ್ತಾರೆ. ಅಂತಹರು ಪಡೆದ ಜ್ಞಾನಗಂಗೆ ಅವರಲ್ಲಿಯೇ ನಿಲ್ಲದೆ ಅದು ಲೋಕಭುಮಿಕೆಗೆ ಹರಿದು ಸಾಗಬೇಕಾಗಿದೆ. ಮೊದಲು ಗಂಗೆಯ ಉದ್ಭವ ಅಗತ್ಯ; ಉದ್ಭವಿಸದೆ ಹರಿಯುವುದೆಲ್ಲಿ ಬಂತು! ಅದೇ ನಮ್ಮ ಸಂಶೋಧನಾಂಗದ ಕಾರ್ಯಕ್ಷೇತ್ರ. ಆ ಸಂಶೋಧನೆ ಬೋಧನವಾಗಿ ವಿದ್ಯಾರ್ಥಿಗಳಲ್ಲಿ ಹರಿಯಬೇಕು; ಅದು ಬೋಧನಾಂಗದ ಕಾರ್ಯ. ಮೇಲಾಗಿ ನದೀಪಾತ್ರದಿಂದ, ಗಂಗೋತ್ರಿಯಿಂದ ಬಹುದೂರಗತರಾದ ಒಳನಾಡಿನ ಜನತೆಗೆ, ಕಾಲುವೆ ಕಾಲುವೆಯ ನೀರಾಗಿ ಹರಿದು ಅವರವರ ಮನೆಯ ಬಾಗಿಲಿಗೆ ಹೋಗಬೇಕು; ಅವರ ಜೀವನಕ್ಷೇತ್ರವನ್ನೆಲ್ಲ ಆರ್ದ್ರಗೊಳಿಸಿ ಹುಲುಸಾಗಿ ಬೆಳೆಸಬೇಕು; ಶಕ್ತಿವತ್ತಾಗಿ ಮಾಡಬೇಕು; ಅದೇ ನಮ್ಮ ಪ್ರಸಾರಾಂಗದ ಕಾರ್ಯ. ಈ ಜ್ಞಾನಗಂಗೆ ಹೀಗೆ ಅವಸ್ಥಾತ್ರಯಗಳನ್ನು ಪಡೆದು ಸಂಶೋಧನಾಂಗ, ಬೋಧನಾಂಗ, ಪ್ರಸಾರಾಂಗಗಳಾಗಿ ವ್ಯವಹರಿಸುತ್ತಾಳೆ. ಮಾನಸಗಂಗೋತ್ರಿಗೆ ಅವತರಿಸುವ ಮಾನಸ-ಅತಿಮಾನಸ ಗಂಗೆ ಯಾವ ದೇಶದಿಂದಲಾದರೂ ಬರಲಿ, ಯಾವ ಭಾಷೆಯಿಂದಲಾದರೂ ಹರಿದು ಬರಲಿ, ಯಾವಕಾಲದ ಯಾವ ವ್ಯಕ್ತಿ ಶಕ್ತಿಗಳಿಂದಲಾದರೂ ಮತಧರ್ಮ ವಿಜ್ಞಾನಗಳಿಂದಲಾದರೂ ಅವತರಿಸಿ ಧುಮ್ಮಿಕ್ಕಿ ಬರಲಿ, ಇಲ್ಲಿನ ವಿದ್ವದುಪಾಸಕರು ಅದನ್ನು ಸ್ವೀಕರಿಸಬೇಕು. ಆದರೆ ಅವರಿಂದ ಅಲ್ಲಿಂದ ಹೊರಬರಬೇಕಾದ ಜ್ಞಾನಗಂಗೆ ಮೊದಲು ನಮ್ಮ ನೆಲದಲ್ಲಿ ಹರಿಯಬೇಕು, ನಮ್ಮ ನುಡಿಯಲ್ಲಿ ಮೂಡಿ ಬರಬೇಕು. ಹಾಗಿಲ್ಲದಿದ್ದರೆಲ್ಲಿ ಅದರ ಸಾರ್ಥಕ್ಯ? ವಿದ್ಯಾರ್ಥಿಗಳಿಗೆ ಬೋಧನರೂಪದಲ್ಲಿ ಒದಗಿಬರುವಾಗ, ನಾಡಿನ ಮೂಲೆ ಮೂಲೆಯ ಸಾಮಾನ್ಯರಿಗೆ ಲಭ್ಯವಾಗುವಾಗ ಆ ಗಂಗೆ ನಮ್ಮ ನೆಲದಲ್ಲೆ ಹರಿದು ಬರಬೇಕಾಗುತ್ತದೆ; ನಮ್ಮ ಭಾಷಾಪಾತ್ರದಲ್ಲೆ ಪ್ರವಹಿಸಿ ಬರಬೇಕಾಗುತ್ತದೆ; ಆಯಾ ಪ್ರದೇಶದಲ್ಲಿ ಆಯಾ ಪ್ರದೇಶ ಭಾಷಾಪಾತ್ರದಲ್ಲೇ ಹರಿದು ಬರಬೇಕಾಗುತ್ತದೆ. ನಮ್ಮ ಗಂಗೆ ಮೊದಲು ನಮ್ಮ ನೆಲವನ್ನು ಆರ್ದ್ರಗೊಳಿಸಬೇಕೆ ವಿನಾ ದೂರದ ಯಾವುದೊ ಥೇಂಸ್ ನದಿಯ ಸಂಗಮ ಸಂಲಗ್ನಕ್ಕಾಗಲಿ ಮತ್ತಾವುದೊ ನಯಾಗಾರಾ ಪ್ರಪಾತದ ಆಮೋದಕ್ಕಾಗಲಿ ನಮ್ಮ ನೆಲವನ್ನೆ ಬಿಟ್ಟು ಹಾರಿ ಹೋಗಬೇಕಾಗಿಲ್ಲ. ಮೊದಲು ಇಲ್ಲಿ ಹರಿದು ತನ್ನ ಆರ್ದ್ರತೆಯನ್ನು ವ್ಯಕ್ತಗೊಳಿಸಿಕೊಳ್ಳದ ಗಂಗೆ ಅಲ್ಲಿ ಹೇಗೆ ತಾನೆ ಶಕ್ತಳಾಗಿ ಹರಿದಾಳು. ಉಳಿದಾಳು? ಮೊದಲು ಇಲ್ಲಿ ಬದುಕಿದರೆ, ಇಲ್ಲಿ ತೀರ್ಥಶಕ್ತಿಯಾಗಿ ಬಾಳಿದರೆ, ದೂರದ ನದಿಗಳೆ ಇಲ್ಲಿಗೆ ಯಾತ್ರೆ ಬಂದಾವು. ನಾವೆ ಪ್ರಯಾಣ ಕೈಗೊಳ್ಳಬೇಕಿಲ್ಲ. ‘ಮಾನಸಗಂಗೋತ್ರಿ’ಯಲ್ಲಿ ಉದ್ಭವಾಗಲಿರುವ ಅಂತಹ ಜ್ಞಾನಗಂಗೆ ತನ್ನ ಪವಿತ್ರ ಕರ್ತವ್ಯವನ್ನು ಮರೆಯದಿರಲಿ.

ಈ ‘ಮಾನಸಗಂಗೋತ್ರಿ’ ಇಂದು ಈ ‘ಜಯಲಕ್ಷ್ಮೀ ವಿಲಾಸ ಭವನ’ದಲ್ಲಿ ಉದ್ಭವಿಸಲಿದೆ. ಅದು ಸಮಗ್ರಕ್ಷೇತ್ರವನ್ನು ಒಳಕೊಳ್ಳಲಿದೆ. ಈಗ ನಾವು ಈ ಭವನದಲ್ಲಿ ಮೂರು ಶಾಖೆಗಳನ್ನು ಮಾತ್ರ ತೆರೆದಿದ್ದೇವೆ; ಕನ್ನಡ, ರಾಜ್ಯಶಾಸ್ತ್ರ, ಸಂಸ್ಕೃತ. ಕನ್ನಡದವನಾದುದರಿಂದ ನಾನು ಆಲೋಚನೆ ಮಾಡಿ ಬೇರಾವುದಾದರೂ ಶಾಖೆಯನ್ನು ಮೊದಲು ಪ್ರಾರಂಭಿಸಬೇಕೆಂದು ಆಶಿಸಿದೆ. ಅದೇನು ಧರ್ಮ ಕರ್ಮ ಸಂಯೋಗದಿಂದಲೊ ಏನೊ ಆ ಬೇರೆ ಶಾಖೆಗಳು ಬರುವುದು ಪೋಸ್ಟ್‌ಪೋನ್ ಆಯಿತು; ಬರುತ್ತದೆ ಎಂದವರು Express Telegram ಕೊಟ್ಟರು! ಕೆಲಸ ನಿಂತಿತು; ಒಂದೆರಡು ವಾರ ಕಳೆಯಿತು. ಇದೂ ಕೂಡ ಆ ವ್ಯಕ್ತಿಗಳು ನಿರ್ಣಯಿಸಿದುದಲ್ಲ. ಆಯಿತು; ಈಗ ಈ ಮೂರು ಶಾಖೆಗಳು ಬಂದಿವೆ. ಮುಂದೆ ಇನ್ನೂ ಬೇರೆ ಇಲಾಖೆಗಳೂ ಬರುತ್ತವೆ. ಕರ್ಣಾಟಕದಲ್ಲಿ ಪ್ರಸಿದ್ಧರಾದ ವಿದ್ವಾಂಸರು ಈ ಶಾಖೆಗಳನ್ನು ಪ್ರಾರಂಭಿಸುತ್ತಿದ್ದಾರೆ-ಶ್ರೀಗಳಾದ ತೀ.ನಂ.ಶ್ರೀಕಂಠಯ್ಯನವರು, ತೋಟಪ್ಪನವರು, ಮುರುಳಸಿದ್ದಯ್ಯನವರು. ಇವರಂತೆಯೆ ನಮ್ಮ ಇತರ ಅಧ್ಯಾಪಕ ಮಿತ್ರರೂ ಸ್ನಾತಕೋತ್ತರ ವಿಭಾಗಕ್ಕೆ ಬರಲು ತುಂಬಾ ಆಸಕ್ತರಾಗಿದ್ದಾರೆ. ಈ ಕಟ್ಟಡವಾದರೊ ತನ್ನ ಒಂದೊಂದು ವರಾಂಡದಲ್ಲಿಯೆ ಎಷ್ಟೋ ತರಗತಿಗಳನ್ನು ಒಳಗೊಳ್ಳುವಂತಿದೆ. ಆದರೆ ನಾವೆಲ್ಲರೂ ಇಲ್ಲೆ ಬೀಡು ಬಿಡಲು ಆಗುವುದಿಲ್ಲ. ನಾನು ನನ್ನ ಅಧ್ಯಾಪಕ ಮಿತ್ರರನ್ನು ಕೇಳಿಕೊಂಡಿದ್ದೇನೆ. ಮತ್ತು ಕೇಳಿಕೊಳ್ಳುತ್ತಿದ್ದೇನೆ-ಈ ಕಟ್ಟಡದ ಜೊತೆಗೆ, ಒಂದು ಎರಡು ವರ್ಷಗಳಲ್ಲಿ, ಏನೆ ಅಡಚಣೆಗಳಿದ್ದರೂ, ಸೀಮೆಂಟ್ ಕಬ್ಬಿಣಗಳ ತೊಂದರೆ ಇದ್ದರೂ, ಸರಸ್ವತಿಯ ಕೃಪೆಯಿಂದ ಮತ್ತೆರಡು ಮೂರು ಮಹಾಮಂದಿರಗಳು ನಿರ್ಮಾಣವಾಗುತ್ತವೆ. ಈಗಿರುವ ಕಟ್ಟಡ ಎಲ್ಲರಿಗೂ ಸ್ಥಳಾವಕಾಶ ನೀಡದು; ವಿಜ್ಞಾನ ವಿಭಾಗಕ್ಕಂತೂ ಏನೂ ಸಾಲದು. ಆದ್ದರಿಂದ ಸದ್ಯಕ್ಕೆ ಎಲ್ಲರೂ ಒಂದು ಶಿಬಿರದಲ್ಲಿರುವಂತೆ ಇರಬೇಕಾಗಿದೆ.

ಹೊಸ ಪ್ರದೇಶಕ್ಕೆ ಮೊದಲು ಹೋದವರು ಇದು ನಮ್ಮದು ಇಷ್ಟು ನಮ್ಮದು ಎಂದು ಸ್ಥಳಾಕ್ರಮಣ ಮಾಡಿಕೊಳ್ಳುವುದು ವಾಡಿಕೆ. ಆಮೇಲೆ ಎಲ್ಲಿಗೆ ಬೇಕಾದರೂ ವಲಸೆ ಹೋಗಬಹುದು. ಮೊದಲು ಬಂದವರು ಈ ಕಟ್ಟಡದಲ್ಲಿ ಸ್ವಲ್ಪ ವಿಶಾಲವಾಗಿಯೇ ನೆಲಸಿದ್ದಾರೆ. ಆಗಲೆ ಯಾರೊ ಹೇಳಿದರು; ಕನ್ನಡ ಶಾಖೆಯವರು ಉಳಿದೆಲ್ಲರ ಸ್ಥಾನಕ್ಕಿಂತಲೂ ಮಿಗಿಲಾಗಿ ಹಿಡಿದಿಟ್ಟುಕೊಂಡಿದ್ದಾರೆ ಎಂದು. ಅದಕ್ಕೆ ಕಾರಣ, ಅವರೆ ಮೊದಲು ಬಂದರು ಎಂಬುದಷ್ಟೆ ಅಲ್ಲ; ಅದು ನಿಮಗೆ ಗೊತ್ತಿದೆ-ಕನ್ನಡ ಎಂತಿದ್ದರೂ ಎಂದಿದ್ದರೂ ಇನ್ನು ಬಹು ಶೀಘ್ರದಲ್ಲಿ ಶಿಕ್ಷಣ ಮಾಧ್ಯಮ ಭಾಷೆಯಾಗುತ್ತದೆ, ಅಧಿಕೃತಭಾಷೆಯಾಗುತ್ತದೆ. ಮತ್ತೆ ಕನ್ನಡಕ್ಕೆ ಪ್ರಪಂಚದಲ್ಲೆಲ್ಲಾದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲೆ, ಕರ್ನಾಟಕದಲ್ಲೆ, ಇನ್ನೆಲ್ಲಿಯೂ ಅಲ್ಲ. ಪ್ರಪಂಚದಲ್ಲಿ ಸಹಸ್ರಾರು ಇಂಗ್ಲಿಷ್ ಪ್ರಾಧ್ಯಾಪಕರಿದ್ದಾರೆ. ನೂರಾರು ಅರ್ಥಶಾಸ್ತ್ರ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಇದ್ದಾರೆ. ನಾವಿಲ್ಲಿ ಅವರುಗಳಿಗೆ ಅಷ್ಟು ಎಡೆಕೊಡದಿದ್ದರೂ ಅದರಿಂದ ಅವರಿಗಾಗಲಿ ಶಾಸ್ತ್ರಗಳಿಗಾಗಲಿ ಏನೊಂದೂ ನಷ್ಟ ಆಗುವುದಿಲ್ಲ. ಅವರಿಗೆ ಉಳಿದ ಜಗತ್ತು ಇದ್ದೆ ಇದೆ. ಕನ್ನಡಕ್ಕೆಂದರೆ ಇರುವುದು ಇಬ್ಬರೆ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಒಬ್ಬರು, ಇಲ್ಲಿ ಒಬ್ಬರು. ನೀವು ಇಲ್ಲಿ ಕನ್ನಡಕ್ಕೆ ಕನ್ನಡದವರಿಗೆ ಎಡೆಕೊಡದಿದ್ದರೆ ಸ್ಥಾನಮಾನ ಕೊಡದಿದ್ದರೆ ಜಗತ್ತಿನ ಮತ್ತಾವ ಭಾಗವೂ ಕನ್ನಡದ ಕೈಹಿಡಿಯುವುದಿಲ್ಲ. ನೀವು ಕೈಬಿಟ್ಟರೆ ಅದಕ್ಕೆ ಸಮುದ್ರವೆ ಗತಿ. ಆದ್ದರಿಂದ ಕನ್ನಡವನ್ನು ಕುರಿತು ಮಾತನಾಡುವಾಗ ಯೋಚಿಸುವಾಗ ನಾವು ವಿವೇಕಯುತರಾಗಿರಬೇಕು. ಆದ್ದರಿಂದ ಕನ್ನಡ ಶಾಖೆಯವರೇನಾದರೂ ಒಂದಷ್ಟು ಜಾಗ ಹೆಚ್ಚು ಪಡೆದಿದ್ದರೆ ತಪ್ಪಲ್ಲ.

ನಾನಿಲ್ಲಿ ಮಾತನಾಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಯಾವ ಬಗೆಯಾದ ಉಪಚಾರ ಭಾವವೂ ಇಲ್ಲ, ಮಾತಿನಲ್ಲಿ ಯಾವ ಅಲಂಕಾರಿತೆಯೂ ಇಲ್ಲ. ನಾವೆಲ್ಲ ಏನು ಮಾಡುತ್ತೇವೆ ಮಾಡಿದ್ದೇವೆ ಎಂಬುದನ್ನು ಹಿಂದೆಯೇ ತಿಳಿಸಿದ್ದೇನೆ. ಈಗ, ನನಗೇನಂತೆ ಎಂದು ಹೇಳದೆಯೆ ಕನ್ನಡ ನಾಡಿನ ಎಲ್ಲ ವರ್ಗದವರ ದೃಷ್ಟಿ-ಚೇತನಗಳೂ ಈ ವಿಷಯದಲ್ಲಿ ಆಸಕ್ತವಾಗಬೇಕು; ಇದು ಬೆಳೆಯುವಂತೆ ಮಾಡಬೇಕು. ಯಾರೊ ರಿಜಿಸ್ಟ್ರಾರ್ ಇದ್ದಾರೆ. ಯಾರೊ ವೈಸ್ ಛಾನ್ಸಲರ್ ಇದ್ದಾರೆ, ಯಾರೊ ಮಾಡಿಕೊಳ್ಳುತ್ತಾರೆ, ಮಾಡಿಕೊಳ್ಳಲಿ ಎಂದು ಸಾರ್ವಜನಿಕರು ಕೂಡ ಉದಾಸೀನರಾಗಬಾರದು; ಆಸಕ್ತಿ ಕಳೆದುಕೊಳ್ಳಬಾರದು. ಕೇವಲ ರಾಜಕೀಯ ಆಕಸ್ತಿ ಒಂದನ್ನೆ ಇಟ್ಟುಕೊಳ್ಳದೆ ನಿಜವಾಗಿಯೂ ಸಾಂಸ್ಕೃತಿಕವಾದ ಆಸಕ್ತಿಯನ್ನು ಇಟ್ಟುಕೊಳ್ಳಬೇಕು; ಅದೇ ಕ್ಷೇಮ. ಅದರಿಂದಲೆ ನಾನು ಇಲ್ಲಿ ನೆರೆದಿರುವ ಎಲ್ಲರನ್ನೂ ಕೇಳಿಕೊಳ್ಳುವುದೇನೆಂದರೆ, ತಮ್ಮ ಆಶೀರ್ವಾದ ಈ ಮಾನಸಗಂಗೋತ್ರಿಯ ಕಡೆಗೆ ಇರಲಿ. ಇಲ್ಲಿ ನಾಡಿನ ನಿಮ್ಮೆಲ್ಲರ ಮಕ್ಕಳೂ ನಮ್ಮೆಲ್ಲರ ಮಕ್ಕಳೂ ಬಂದು ಎಷ್ಟೊ ಸಾವಿರಾರು ಸಂಶೋಧನೆಗಳನ್ನು ಮಾಡುವಂತಹ, ಅಧ್ಯಯನ ಕಾಲ ಬರುತ್ತದೆ. ನಮ್ಮ Master plan ನಂತೆ ಸಾವಿರಾರು ವಿದ್ಯಾರ್ಥಿಗಳಿಗೆ, ನಾಲ್ಕು ವಿದ್ಯಾರ್ಥಿನಿಲಯಗಳಲ್ಲಿ ನಿವಾಸ ಸೌಲಭ್ಯವಿರುತ್ತದೆ. ಸ್ಥಳಕ್ಕೆ ಬರಗಾಲವಿಲ್ಲ. ನಗರಸಭೆಯವರು ಈ ಮಾನಸಗಂಗೋತ್ರಿ ಬೆಳೆಯಲು ಏನೇನು ಬೇಕೊ ಅದನ್ನು ಒದಗಿಸುತ್ತಾರೆಂದು ನಂಬಿರುವೆ. ಹೀಗೆ ಎಲ್ಲರ ಸಹಕಾರ ಆಸಕ್ತಿ ಪ್ರಾರ್ಥನೆ ಆಶೀರ್ವಾದಗಳ ಬೆಂಬಲವಿದ್ದರೆ ನಮ್ಮ ‘ಮಾನಸಗಂಗೋತ್ರಿ’ ಬೆಳೆಯುವುದರಲ್ಲಿ ಸಂಶಯವಿಲ್ಲ. ಇನ್ನು ಐವತ್ತು ವರ್ಷಗಳಲ್ಲಿ ಮಯಸೂರಿಗೆ ಪ್ರೇಕ್ಷಕರಾಗಿ ಯಾತ್ರಿಕರಾಗಿ ಬರುವವರು ಶ್ರವಣಬೆಳಗೊಳ, ಶಿವನಸಮುದ್ರ, ಬೇಲೂರು, ಹಳೆಯಬೀಡು, ಸೋಮನಾಥಪುರ, ಬೃಂದಾವನಗಳಿಗೆ ಮಾತ್ರವೆ ಅಲ್ಲದೆ ಮಾನಸಗಂಗೋತ್ರಿಯ ಕ್ಷೇತ್ರಕ್ಕೂ ಬರುತ್ತಾರೆ; ಬಂದು ದರ್ಶಿಸಿ ಹೋಗುತ್ತಾರೆ. ನಾವಿಂದು ಆ ಕಾಲಕ್ಕಾಗಿ ದುಡಿಯಬೇಕಾಗಿದೆ.

ಕೊನೆಯದಾಗಿ ನಾನು ಅಧ್ಯಾಪಕ ವರ್ಗದವರಲ್ಲಿ ಬೇಡಿಕೊಳ್ಳುವುದಿಷ್ಟೆ; ಮೊದಲೆ ತಿಳಿಸಿದಂತೆ ಈ ಮಾನಸಗಂಗೋತ್ರಿ ಎಲ್ಲ ಭಾಷಾಸ್ರೋತಗಳನ್ನೂ ತನ್ನೆಡೆಗೆ ಬರಮಾಡಿಕೊಳ್ಳಲಿ. ಎಲ್ಲ ಮತಧರ್ಮಗಳ ಪ್ರಾಚ್ಯ ಪಾಶ್ಚಾತ್ಯ ಮಹಾನದಿಗಳ ನೀರಿನಿಂದಲೂ ಅದು ಸಮೃದ್ಧವಾಗಲಿ. ಆದರೆ ಶೇಖರವಾದ ಆ ಜಲರಾಶಿಯನ್ನು ನಮ್ಮ ನಾಡಿನ ಜನತೆಗೆ ಹರಿಸಲು ನಮ್ಮ ಪ್ರದೇಶ ಭಾಷಾಪಾತ್ರಗಳನ್ನೆ ಕಾಲುವೆಗಳನ್ನಾಗಿ ತೆಗೆದುಕೊಳ್ಳಲಿ. ಹಾಗಿಲ್ಲದಿದ್ದರೆ ನಮ್ಮ ಉದ್ದೇಶವೆ ಜನತೆಯನ್ನು ಮುಟ್ಟಿದಂತಾಗುವುದಿಲ್ಲ. ನಮ್ಮ ವಿದ್ವಾಂಸರು ಒಂದೇ ಭಾಷೆ ಕಲಿತರೆ ಸಾಕಾಗುವುದಿಲ್ಲ. ಇಂಗ್ಲಿಷ್ ಇರುತ್ತದೆ; ಆದರೆ ಅದರ ಜತೆಗೆ ರಷ್ಯನ್, ಜರ್ಮನ್, ಚೈನೀ ಭಾಷೆಗಳೂ ನಮ್ಮ ಜ್ಞಾನಗಂಗಾ ಪಾತ್ರಗಳಾದಾವು. ಹೊರಗಿನ ಜ್ಞಾನ ಗಂಗೆ ನಮ್ಮಲ್ಲಿಗೆ ಬರಲು ಅವುಗಳೆಲ್ಲ ಬೇಕು. ನಮ್ಮ ನಾಡಿನಲ್ಲಿ ಆ ಜಲರಾಶಿಯನ್ನು ಹರಿಸಲು ನಮ್ಮ ನುಡಿನಾಲೆಗಳೆ ಬೇಕು. ಹಾಗಾದರೆ, ಯಾವುದು ಕೆಲವರಲ್ಲಿಯೆ ಎತ್ತರದಲ್ಲಿಯೇ ಉಳಿದಿರಬಹುದಿತ್ತೋ ಮಡುಗೊಂಡಿರುತ್ತಿದ್ದಿತೊ ಅದು ಸರ್ವ ವ್ಯಾಪಿಯಾಗುತ್ತದೆ.

ಈ ಸಮಾರಂಭಕ್ಕೆ ನನ್ನ ಆಹ್ವಾನವನ್ನು ಗೌರವಿಸಿ ತಾವೆಲ್ಲ ಇಲ್ಲಿಗೆ ದಯಮಾಡಿಸಿದ್ದೀರಿ. ಪ್ರತಿಯೊಬ್ಬರಿಗೂ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಅಲ್ಲದೆ, ನಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ, ನಾನು ಅಧಿಕಾರಕ್ಕೆ ಬಂದ ದಿನವೂ ಈ ಮಾತನ್ನೆ ಹೇಳಿದ್ದೆ, ಅಧಿಕಾರ ಬಿಟ್ಟು ಹೊಗುವ ದಿನವೂ ಅದೇ ಮಾತನ್ನು ಹೇಳಿ ಹೋಗುತ್ತೇನೆ: ನಾನು ಎಷ್ಟು ಜನ ವೈಸ್‌ಛಾನ್ಸಲರ್‌ಗಳು ಬಂದು ಹೋದಮೇಲೆಯೂ ಇಂದಿರುವಂತೆಯೆ ಇರುತ್ತೇನೆ. ಇಂದೆಂತೊ ಅಂತೆಯೆ ಮುಂದೂ ಈ ಕ್ಷೇತ್ರದಲ್ಲಿ, ಅವರಾರೂ ಬರದಿದ್ದರೂ, ನಾನು ಮಾತ್ರ ದಿನಕ್ಕೊಂದು ಬಾರಿಯಾದರೂ ಸಂಚರಿಸಿ ಹೋಗುತ್ತೇನೆ. ಮಾನಸಗಂಗೋತ್ರಿ ಮತ್ತು ಅದರ ಶಿಕ್ಷಣ ವಿಭಾಗಗಳೂ ನನ್ನ ಕಣ್ಣ ಮುಂದೆಯೆ ಬೆಳೆದು ಬಾಳುವುದನ್ನು ನೋಡುತ್ತ ಇರುತ್ತೇನೆ. ಯಾರೊ ಹೇಳುತ್ತಿದ್ದರು: ನೀವು ಈ ಶಿಕ್ಷಣಮಾಧ್ಯಮವನ್ನು ಸ್ವಲ್ಪ ಭದ್ರವಾಗಿ ನೆಲೆಗೊಳ್ಳುವಂತೆ ಮಾಡಿಬಿಟ್ಟು ಹೋದರೆ ಒಳ್ಳೆಯದರು ಎಂದು. ಅದೊಂದು ಹುಚ್ಚು. ಯಾವ ಒಬ್ಬ ವ್ಯಕ್ತಿಯೂ ಮಾಡುವುದಲ್ಲ ಅದು. ನೀವೆಲ್ಲ, ಜನತೆಯಲ್ಲ, ಮಾಡಬೇಕಾದ ಕರ್ತವ್ಯ. ನಾನೆಲ್ಲೊ ಒಂದು ಸಾರಿ ಹೇಳಿದ್ದೆ: ಹುಟ್ಟಿದವನಿಗೆ ಶೈಶವ, ಬಾಲ್ಯ, ಕೌಮಾರ, ಯೌವನ, ಜರೆ ಬರುವಂತೆ ಇವೆಲ್ಲ ಪದವಿಗಳು-ವಿದ್ಯಾರ್ಥಿ, ಅಧ್ಯಾಪಕ, ಪ್ರಿನ್ಸಿಪಾಲ್, ವೈಸ್ ಛಾನ್ಸಲರ್-ಎಂಬ ದರ್ಜೆಗಳು ಬಂದು ಬಂದು ಹೋಗುತ್ತವೆ. ಹೀಗಿರುವುದರಿಂದ ಶಾಶ್ವತಪದವನ್ನೂ ದಶೆಯನ್ನೂ ಯಾರೂ ಮರೆಯಬಾರದು. ಯಾರೇ ಬರಲಿ, ನಾವು ಹಿಡಿದಿರುವ ಕಾರ್ಯ ವನ್ನು ಯಶಸ್ವಿಯಾಗಿ ನಡೆಸುವಂತೆ, ನಾವು ಸೇರಲಿರುವ ಗುರಿ ತಪ್ಪದಿರುವಂತೆ, ಎಲ್ಲರೂ ನ್ಯಾಯವಾಗಿ ವರ್ತಿಸುವಂತೆ ನಿಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ.

ಕಚ್ಚಾಡುವುದು ಕರ್ಣಾಟಕದ ರೋಗವಾಗಿಬಿಟ್ಟಿದೆ. ಒಡೆದುಹೋಗಿರುವ ಮನಸ್ಸನ್ನು ಕೂಡಿಸಿ ಒಲಿಸಿದರೆ ಎಲ್ಲಾ ಕ್ಷೇತ್ರಗಳಲ್ಲೂ ಅಮೃತೋದ್ಭವವಾದೀತು:

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದಚ್ಚರಿಸು;
ಕಚ್ಚಾಡುವನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ.
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

* * *


[1] ತಾರೀಖು ೨೮-೪-೧೯೬೦ರಂದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಬೋಧನ ಸಂಶೋಧನ ಕ್ಷೇತ್ರವಾದ ‘ಮಾನಸಗಂಗೋತ್ರಿ’ಯ, ಪ್ರಾರಂಭೋತ್ಸವವನ್ನು ನೆರವೇರಿಸಿದ ಉಪಕುಲಪತಿ ಡಾ.ಕೆ.ವಿ. ಪುಟ್ಟಪ್ಪ, ಎಂ.ವಿ.ಡಿ.ಲಿಟ್. ಅವರು ಮಾಡಿದ ಅಧ್ಯಕ್ಷ ಭಾಷಣದ ಸಂಗ್ರಹ.