ಶ್ರೀಮಾನ್ ಮಲ್ಲಿಕಾರ್ಜುನಪ್ಪನವರು – ಅವರೇ ತಿಳಿಸಿದಂತೆ – ಒಂದು ವರ್ಷದಿಂದ ನನ್ನನ್ನು ಇಲ್ಲಿಗೆ ಬರಮಾಡಿಕೊಳ್ಳಲು ಪ್ರಾರ್ಥಿಸುತ್ತಿದ್ದೇನೆ, ಎಂದರು; ವಾಸ್ತವವಾಗಿ, ಪೀಡಿಸುತ್ತಿದ್ದೇನೆ ಎನ್ನಲೂಬಹುದಾಗಿತ್ತು. ಆದರೆ ಅಂಥವರ ಪೀಡನೆ ನಿಜವಾಗಿಯೂ ಸುಖಕರ. ಏಕೆಂದರೆ ನಾನು ಆಗುವುದಿಲ್ಲ ಎಂದಾಗ ಅವರು ಮನಸ್ಸಿನಲ್ಲಿ ನೊಂದುಕೊಳ್ಳುವುದಿಲ್ಲ. ಅವರು ಸಮಯ ಒದಗಿದಾಗ ಮತ್ತೆ ಮತ್ತೆ ಪ್ರಯತ್ನಿಸಿ, ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ.

ಶ್ರೀಮಾನ್ ಮಲ್ಲಿಕಾರ್ಜುನಪ್ಪನವರು ಸ್ವಾಗತ ಭಾಷಣದಲ್ಲಿ ನನ್ನ ಬಗೆಗೆ ದೊಡ್ಡ ದೊಡ್ಡ ಮಾತುಗಳನ್ನು ಹೇಳಿದರು. ಹಾಗೆ ಹೇಳುವಾಗ ಮೇಲೆದ್ದು ನಿಂತು, ‘ತಡೆಯಿರಿ, ಮಾತು ಹೆಚ್ಚಾಯಿತು’ ಎಂದು ಹೇಳೋಣವೆನ್ನಿಸಿತು. ಕೂಡಲೆ ಅವರು ನನ್ನ ವಿದ್ಯಾರ್ಥಿ, ವಿದ್ಯಾರ್ಥಿಯ ಗುರುಸ್ತುತಿ ಕ್ಷಮ್ಯ ಎಂಬ ಭಾವನೆ ಹೊಳೆಯಿತು. ಆದ್ದರಿಂದ ಸುಮ್ಮನಾದೆ. ಅವರ ಸ್ತುತಿ ಅವರ ಗುರುಗೌರವವನ್ನು ಪ್ರಕಟಿಸುತ್ತದೆಯೆ ಹೊರತು, ತನ್ನ ಆಧ್ಯಾತ್ಮಿಕ ಪರಿಸ್ಥಿತಿಯನ್ನು ವರ್ಣಿಸುವುದಿಲ್ಲ. ಅವರು ಏನೇ ಹೇಳಿರಲಿ, ದೊಡ್ಡವರ ಚರಣತಲದಲ್ಲಿ ವಿದ್ಯಾರ್ಥಿಯಾಗುವ, ಜ್ಞಾನಾರ್ಜನೆ ಮಾಡುವ, ಸೇವೆ ಸಲ್ಲಿಸುವ ಭಾಗ್ಯ ನನ್ನ ಪಾಲಿಗಿದೆ ಎಂದು ಮಾತ್ರ ಹೇಳಬಲ್ಲೆ.

ಶ್ರೀಯುತರು ನನ್ನ ಸಾಧನೆ ಸಿದ್ಧಿಗಳನ್ನು ಕಾವ್ಯಮಯ ಶೈಲಿಯಲ್ಲಿ ವರ್ಣಿಸುತ್ತಿದ್ದಾಗ ನಾನು ಹಕ್ಕಿಯಂತೆ ಹಾರಿ, ಗರುಡನಂತೆ ಮುಗಿಲಾಚೆಗೇರಿ, ಅಮೃತಕಲಶವನ್ನು ತುಡುಕುತ್ತ ನನ್ನನ್ನು ನಾನೆ ಮರೆತಿದ್ದೆ. ಅಷ್ಟರಲ್ಲಿಯೆ ಮತ್ತೆ ಮರ್ತ್ಯಲೋಕಕ್ಕೆಳೆತಂದು ನನ್ನನ್ನು ಉಪಕುಲಪತಿ ಸ್ಥಾನದಲ್ಲಿರಿಸಿ ಮುಂದೆ ನಾನು ಮಾಡಬೇಕಾದ ಕೆಲಸವನ್ನು ನೆನಪಿಗೆ ತಂದುಕೊಟ್ಟಾಗ, ಗಾಡಿಗೆ ಕಟ್ಟಲು ಮೂಗುದಾರ ಹಿಡಿದು ಎಳೆದೊಯ್ಯುವ ಎತ್ತಿನಂತಾಗಿ ಸ್ವಲ್ಪ ಕುಗ್ಗಿದೆ. ಆದರೂ ಅವರಿಗೆ ಇಷ್ಟು ಭರವಸೆ ಕೊಡಬಲ್ಲೆ; ಲೌಕಿಕವಾದ ಬೇಡಿಕೆಗಳೇನಿದ್ದರೂ ವಿಶ್ವವಿದ್ಯಾನಿಲಯದ ಕೌನ್ಸಿಲ್ ಮತ್ತು ಸರ್ಕಾರ ಸಹಕಾರ ಮನೋಭಾವದಿಂದ, ಸಹಾನುಭೂತಿಯಿಂದ ಅವುಗಳನ್ನು ಗಮನಿಸುತ್ತವೆ ಎಂದು. ಅಲ್ಲದೆ ಇನ್ನು ಮುಂದೆ ವಿದ್ಯಾಪದ್ಧತಿ ಬದಲಾಗುವ ಕಾಲದಲ್ಲಿ, ರಾಜ್ಯ ಪುನರ್ವ್ಯವಸ್ಥೆಯಾಗುವ ಸಮಯದಲ್ಲಿ ಸರ್ಕಾರದ ಜವಾಬ್ದಾರಿ ಜನತೆಯ ಹೆಗಲಮೇಲೆ ಬೀಳುತ್ತದೆ. ಆದ್ದರಿಂದ ಇಂಥ ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ಕೊಡಬೇಕೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ.

ಪ್ರಾರಂಭ ಭಾಷಣ ಮಾಡಲು ಒಪ್ಪಿಕೊಂಡಿದ್ದೆ. ಆ ವಿಷಯವನ್ನು ಎರಡು ದಿನದ ಹಿಂದೆ ನೆನಪಿಗೆ ತಂದುಕೊಟ್ಟರು. ಏನನ್ನು ಮಾತಾಡಲಿ, ಎಂದು ಆಲೋಚಿಸಿದೆ. ವಿದ್ಯಾರ್ಥಿಗಳು ಇಷ್ಟೊಂದುಮಂದಿ ನೆರೆದಿದ್ದಾರೆ. ಇವರೆಲ್ಲ ಹೊಸದಾಗಿ ಲೋಕಕ್ಕೆ ಬಂದ ಚೇತನಗಳು. ವಿಶಾಲವಾದ ಪ್ರಪಂಚಕ್ಕೆ ಪ್ರವೇಶಿಸಿ, ಗರಿಗೆದರಿ ಹಾರಲೆಳಸಿಯೂ ಹಾರಲಾರದ ಚೇತನಗಳು ಕೆಲವು; ಸ್ವಲ್ಪ ದೂರ ಹಾರಿ ಕೆಳಗುರುಳುವಂಥವು ಕೆಲವು; ಕೊನೆ ಮುಟ್ಟುವ ಕಾತರತೆಯಿಂದ ಮುನ್ನುಗ್ಗುವ ಚೇತನಗಳು ಅಲ್ಲೊಂದು ಇಲ್ಲೊಂದು. ಇಂಥವರ ಮುಂದೆ ಕನಸಿನ ಪ್ರಪಂಚವನ್ನಿಟ್ಟು ಮೋಸಗೊಳಿಸಬಹುದು; ಕಟುತರವಾದ ಸತ್ಯವನ್ನು ಹೇಳಿ ಭಯಗೊಳಿಸಬಹುದು. ನಮ್ಮ ದೇಶದ ಹಿಂದಿನ ಪರಿಸ್ಥಿತಿಯನ್ನು ನೆನೆದುಕೊಂಡು ಇಂದಿನ ಸುತ್ತಮುತ್ತಣ ವಾತಾವರಣದಲ್ಲಿ ನಮ್ಮ ನಾಡು ಮುಂದುವರಿಯು ಬಗೆ ಹೇಗೆ, ನಾವು ಸತ್ಪ್ರಜೆಗಳಾಗುವುದೆಂತು ಎನ್ನುವುದರ ಬಗೆಗೆ ನನ್ನ ಒಂದೆರಡು ಆಲೋಚನೆಗಳನ್ನು ನಿಮ್ಮ ಮುಂದಿಡುತ್ತೇನೆ. ಹಿರಿಯ ಮಿತ್ರರು ಬೆರಳೆತ್ತಿದ ಎಚ್ಚರಿಕೆಗಳಂತೆ ಇಲ್ಲಿ ಕುಳಿತಿದ್ದಾರೆ. ನಾನು ಹೇಳುವ ಮಾತುಗಳು ಔಪಚರಿಕವಲ್ಲ; ಹೃತ್ಪೂರ್ವಕವಾದುವು. ನನ್ನ ಆಲೋಚನೆಯ ಮೂಲದಲ್ಲಿ ತಪ್ಪುಗಳಿರಬಹುದು; ಹೃದಯದಲ್ಲಿ ಮಾತ್ರ ಯಾವ ತಪ್ಪೂ ಇಲ್ಲ.

ನಮ್ಮ ದೇಶ – ಭರತಖಂಡ – ಇದುವರೆಗೆ ಇದ್ದ ಕ್ರಮದಿಂದ ಇನ್ನಾವುದೋ ಬೇರೊಂದು ಕ್ರಮಕ್ಕೆ ಹೋಗುತ್ತಿದೆ. ದಿನದಿನಕ್ಕೂ ಒಂದೊಂದು ವಾರ್ತೆ ಮನೆಬಾಗಿಲಿಗೆ ಬರುತ್ತಿದೆ. ಭಾಷಾನುಗುಣವಾದ – ವಿಭಜನೆ ಅಲ್ಲ – ಪ್ರಾಂತ ರಚನೆ ಆಗುತ್ತಿದೆ. ಇಂಥ ಒಂದು ಸಂದರ್ಭದಲ್ಲಿ ನಾವಿದ್ದೇವೆ. ಈಗ ಭಾರತದ ಪ್ರಜೆಗಳಾದ ನಾವು, ಕರ್ಣಾಟಕದ ಪ್ರಜೆಗಳಾದ ನಾವು ಸಮಗ್ರ ನಾಡಿನ ಕ್ಷೇಮಾಭ್ಯುದಯದ ದೃಷ್ಟಿಯಿಂದ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಅದಕ್ಕಾಗಿ ನಾವು ಸತತವೂ ಆಲೋಚಿಸಬೇಕು. ಇಲ್ಲಿರುವ ವಿದ್ಯಾರ್ಥಿಗಳೆಲ್ಲರೂ ಬೆಂಗಳುರು ನಗರದವರಲ್ಲ; ಅವರಲ್ಲಿ ಎಷ್ಟೋ ಮಂದಿ ಹಳ್ಳಿಯಿಂದ ಬಂದವರು. ಕಷ್ಟಪಟ್ಟು ಎಸ್.ಎಸ್.ಎಲ್.ಸಿ. ಗುಡ್ಡವನ್ನು ಹತ್ತಿ, ಇಂಟರ್ ಬೆಟ್ಟ ಏರುವ ಕಾತರತೆಯಿಂದ ಬಂದಿದ್ದೀರಿ. ಏನೇನೋ ಹೊಂಗನಸುಗಳನ್ನು ತಲೆಯಲ್ಲಿ ಹೇರಿಕೊಂಡು, ಹೃದಯದಲ್ಲಿ ತುಂಬಿಕೊಂಡು ಬಂದಿದ್ದೀರಿ. ಬೆಂಗಳೂರಿಗೆ ಬಂದವನ ಎದೆ, ಕಣ್ಣು, ಮೈಕೂಡ ಕೋರೈಸಿ, ಮನಸ್ಸು ಛಿದ್ರವಾಗಿ, ಹೃದಯಭಗ್ನವಾಗಿ ಹೋಗಲು ಸಾಕಷ್ಟ ಅವಕಾಶವಿದೆ. ಇಲ್ಲಿ ಒಳ್ಳೆಯ ದಾರಿ ಹಿಡಿದು ಉದ್ಧಾರವಾಗಬಹುದು, ಕೆಟ್ಟ ದಾರಿ ಹಿಡಿದು ನಾಶವಾಗಬಹುದು. ಎಲ್ಲಕ್ಕೂ ಅನುಕೂಲಾವಕಾಶಗಳು ಯಥೇಚ್ಛವಾಗಿವೆ. ಕ್ಷಣ ಕಾಲ ನಿಮ್ಮ ನಿಮ್ಮ ಮನೆಯ ಪರಿಸ್ಥಿತಿಯನ್ನು ಜ್ಞಾಪಕಕ್ಕೆ ತಂದುಕೊಳ್ಳಿ. ಈಗತಾನೆ ನಿಮ್ಮ ತಾಯಿತಂದೆಯರು ಹೊಲಗದ್ದೆಗಳಿಂದ ಒದ್ದೆಯಾಗಿ ಬರುತ್ತಿರಬಹುದು; ನಿಮ್ಮ ತಂದೆಯರು ವ್ಯಾಪಾರದ ಮಳಿಗೆಗಳಲ್ಲಿ ಕುಳಿತು ಸಾಲಸೋಲಗಳ ಬಗ್ಗೆ, ಸಂಸಾರದ ಭಾರವನ್ನು ಕುರಿತು ಚಿಂತಿಸುತ್ತಿರಬಹುದು; ಪ್ರಾಥಮಿಕ ಶಾಲೆಯ ಉಪಾಧ್ಯಾಯ ತಂದೆಯರು ಶಾಲೆಯ ಕರ್ತವ್ಯಭಾರವನ್ನಿಳುಹಿ, ದೂರದ ಪೇಟೆಯಲ್ಲಿರುವ ಮಕ್ಕಳ ಬಗೆಗೆ ಹಂಬಲಿಸುತ್ತ, ಮನೆಯ ಕ್ಲೇಸ ಕಾರ್ಪಣ್ಯಗಳನ್ನೆದುರುಗೊಳ್ಳಲು ಕಾಲನ್ನೆಳೆಯುತ್ತ ಬರುತ್ತಿರಬಹುದು; ಬೆಳಗಿನಿಂದ ಗಿರಣಿಯಲ್ಲಿ ದುಡಿದು ದಣಿದ ಕಾರ್ಮಿಕ ತಂದೆ ತಾಯಿಯರು, ಮಕ್ಕಳನ್ನು ಸರಿಯಾಗಿ ಸಾಕದ ವ್ಯಥೆಯಿಂದ ತಪ್ತರಾಗಿ ತಮ್ಮ ಹರಕು ಮುರುಕು ಗುಡಿಸಲಿಗೆ ಹಿಂದಿರುಗುತ್ತಿರಬಹುದು. ಎಳೆಯ ಮನಸ್ಸು ಆಹ್ಲಾದಮಯ ವಾತಾವರಣದಲ್ಲಿ ಮನೆಯ ಆ ಎಲ್ಲ ಕಷ್ಟಕಾರ್ಪಣ್ಯಗಳನ್ನು ಮರೆತು, ಇಲ್ಲಿ ಓಲಾಡ ಬಹುದು. ನಗರದ ಗಲಿಬಿಲಿಯ ನಡುವೆ ನಾಗರಿಕ ವ್ಯಾಮೋಹಗಳ ಸುಳಿಯಲ್ಲಿ ಸಿಕ್ಕಿದ ಮುಗ್ಧಹೃದಯ ತನ್ನ ತಂದೆಯತಾಯಿಯರು, ಅಕ್ಕತಂಗಿಯರು ನೆಂಟರಿಷ್ಟರು – ಇಷ್ಟೇ ಅಲ್ಲ ತನ್ನ ಸಮಾಜ ಮತ್ತು ಮಾತೃಭೂಮಿ ತನ್ನಿಂದ ಏನನ್ನು ನಿರೀಕ್ಷಿಸುತ್ತದೆ, ಎನ್ನುವುದನ್ನೂ ಯೋಚಿಸದಿರಬಹುದು. ತನ್ನ ಮೇಲೆ ಎಂಥ ಗುರುತರವಾದ ಜವಾಬ್ದಾರಿಯಿದೆ, ತಾನು ಯಾರುಯಾರಿಗೆ ಎಷ್ಟರ ಮಟ್ಟಿಗೆ ಋಣಿ, ಎನ್ನುವುದನ್ನು ನಗರವನ್ನು ಹೊಕ್ಕ ತರುಣ ಮರೆಯಬಾರದು.

ಸ್ವಾಗತ ಭಾಷಣದಲ್ಲಿ ‘ವಿದ್ಯಾರ್ಥಿಗಳಲ್ಲಿ ಮತಿಗೌರವದ ಆವಶ್ಯಕತೆ’

[2] ಎಂಬ ನನ್ನ ಹಿಂದಿನ ಉಪನ್ಯಾಸದ ಪ್ರಸ್ತಾಪಬಂತು. ಅಲ್ಲಿ ಮತಿಗೌರವದ ಆವಶ್ಯಕತೆಯನ್ನು ವಿವರಿಸಿದೆ. ಮತಿಗೌರವಕ್ಕೂ ಆತ್ಮಸ್ವಾತಂತ್ರ್ಯಕ್ಕೂ ನಿಕಟವಾದ ಸಂಬಂಧವಿದೆ. ಇವೆರಡೂ ತಪಸ್ಸಿನಿಂದ ಲಭಿಸತಕ್ಕುವು. ವಿದ್ಯಾರ್ಥಿ ಜೀವನವೂ ಒಂದು ತಪಸ್ಯೆ. ವಿದ್ಯಾರ್ಥಿ ತಪಸ್ವಿ. ಅನ್ನಾಹಾರವನ್ನು ಬಿಟ್ಟಿರುವುದೇ, ಒಂಟಿಕಾಲದಲ್ಲಿ ತಲೆಕೆಳಗಾಗಿ ನಿಲ್ಲುವುದೇ ತಪಸ್ಸಲ್ಲ. ಶಕ್ತಿಯ ಅರ್ಜನೆಯೇ ತಪಸ್ಸು. ಅದರ ರೂಪಗಳು ಅನೇಕ; ಅದನ್ನು ಆರ್ಜಿಸುವ ವಿಧಾನಗಳು ಹಲವಾರು. ನಾವು ಯಾವ ಕೆಲಸ ಉದ್ಯೋಗಗಳನ್ನು ಕೈಕೊಂಡಿದ್ದರೂ ಅವುಗಳನ್ನು ಶ್ರದ್ಧೆಯಿಂದ, ಭಕ್ತಿಯಿಂದ, ನಿಷ್ಠೆಯಿಂದ, ಗುರಿ ಸಾರುವ ತನಕ ಸಾಧಿಸುವುದೇ ತಪಸ್ಸು. ಎಂಥ ಉಗ್ರ ಪರಿಸ್ಥಿತಿಯಲ್ಲಿಯೂ ಮನಸ್ಸನ್ನು ಛಿದ್ರಗೊಳಿಸದೆ ಏಕಾಗ್ರತೆಯಿಂದ ಮುಂದುವರಿಯುವುದೇ ತಪಸ್ಸು. ಈ ತಪಸ್ಯೆ ಇಲ್ಲದ ಜೀವನ ಜೀವನವಲ್ಲ. ದೇಶಕ್ಕೆ, ಹೆತ್ತಿರುವ ತಂದೆ ತಾಯಿಯರಿಗೆ, ಸಮಾಜಕ್ಕೆ ದ್ರೊಹವೆಸಗಬಾರದು. ಈ ದ್ರೋಹ ಒಮ್ಮೊಮ್ಮೆ ಪ್ರಜ್ಞಾಗೋಚರವಾಗುವುದಿಲ್ಲ. ಜೀವನದ ಸರ್ವಮುಖಗಳನ್ನೂ ಈಗಲೇ ಯೋಚಿಸಿ, ನಮ್ಮ ಕರ್ತವ್ಯವನ್ನು ನಿರ್ಣಯಿಸಿಕೊಂಡು ಸಾಧಿಸದಿದ್ದರೆ, ಬದುಕಿ ಪ್ರಯೋಜನವಿಲ್ಲದಂತಾಗುತ್ತದೆ. ಮಿಂಚಿ ಹೋದ ಕಾಲ ಮತ್ತೆ ಕೂಡಿ ಬರುವುದಿಲ್ಲ.

ನಾವು ವೈಸ್‌ಛಾನ್ಸಲರ್ ಆದ ಮೇಲೆ ಹೊಸ ಹೊಸ ಅನುಭವಗಳು ಆಗುತ್ತಿವೆ. ಈ ದಿನ ಮಧ್ಯಾಹ್ನ ಪರಿಶೀಲನೆಗಾಗಿ ಸೆಂಟ್ರಲ್ ಕಾಲೇಜಿಗೆ ಹೋಗಿದ್ದೆ. ಜ್ಯೂನಿಯರ್ ಬಿ.ಎಸ್.ಸಿ. ತರಗತಿಯಲ್ಲಿ ೧೦೦೦, ಸೀನಿಯರ್ ಬಿ.ಎಸ್.ಸಿ. ತರಗತಿಯಲ್ಲಿ ಸುಮಾರು ೯೦೦ ವಿದ್ಯಾರ್ಥಿಗಳಿದ್ದಾರೆ. ಅವರನ್ನು ‘ಮುಂದೆ ಏನು ಮಾಡುತ್ತೀರಿ?’ ಎಂದು ಕೇಳಿದೆ. ಕೆಲವರು ಉಪಾಧ್ಯಾಯರಾಗಬಹುದು, ಎಂದರು; ಮತ್ತೆ ಕೆಲವರು ಗುಮಾಸ್ತರಾಗಬಹುದು, ಎಂದರು; ಹಲವರು ಏನು ಕೆಲಸ ಸಿಗುತ್ತದೊ, ಎಂದರು. ಅದನ್ನು ಕೇಳಿದಾಗ, ನಾವೆಲ್ಲರೂ ಹೇಗೆ ನಿಸ್ಸಹಾಯಕರಂತೆ ಮುಂದುವರಿಯುತ್ತಿದ್ದೇವೆ ಎನ್ನಿಸಿತು. ವಿದ್ಯಾರ್ಥಿಗಳೂ ಹಾಗೆಯೇ ಮುಂದುವರಿಯುತ್ತಿದ್ದಾರೆ. ಇತ್ತೀಚೆಗೆ ಮತ್ತೊಂದು ಅನುಭವ ಆಯಿತು. ನನ್ನ ಒಬ್ಬ ಚಿಕ್ಕ ಸಹೋದರ ತನ್ನ ಅಹವಾಲು ಹೇಳಿಕೊಳ್ಳಲು ಬಂದ. ಅವನು ಹಿಂದುಳಿದ ಪಂಗಡಕ್ಕೆ ಸೇರಿದವನು. ಎಂ.ಬಿ.ಬಿ.ಎಸ್. ಮೊದಲ ಪರೀಕ್ಷೆಯಲ್ಲಿಯೇ ನಾಲ್ಕು ಸಲ ಫೆಯ್ಲಾಗಿದ್ದಾನೆ. ಆರ‍್ಡಿನೆನ್ಸ್ ಪ್ರಕಾರ ಅವನು ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳುವಂತಿಲ್ಲ. ತನ್ನ ಅಳವು – ಆಳ – ಎತ್ತರ ನೋಡದೆ ಉಸುಬಿನಲ್ಲಿ ಕಾಲಿಟ್ಟಿದ್ದಾನೆ. ಮುಂದೆ ಹೋಗುವಂತಿಲ್ಲ. “ಯಾಕಪ್ಪಾ ಹೀಗೆ ಮಾಡಿದ್ದು? ನಿನ್ನ ಪ್ರವೃತ್ತಿಗೆ ಹೊಂದಿಕೊಳ್ಳುವ ವಿಭಾಗವನ್ನು ಆರಿಸಿಕೊಳ್ಳಬಾರದೆ? ಸಾಮಾನ್ಯವಾದ ಬಿ.ಎ. ಅಥವಾ ಬಿ.ಎಸ್‌ಸಿ. ಪರೀಕ್ಷೆ ಮಾಡಿಕೊಂಡಿದ್ದರೂ ನಿನಗೆ ಒಳ್ಳೆಯದಾಗುತ್ತಿತ್ತು. ನೀನು ಹಿಂದುಳಿದ ಕೋಮಿನವನಾದ್ದರಿಂದ ಕೆಲಸವೂ ಸಿಗುತ್ತಿತ್ತು” ಎಂದು ಆ ಹುಡುಗನಿಗೆ ತಿಳಿವಳಿಕೆ ಹೇಳಲು ಪ್ರಯತ್ನಿಸಿದೆ. ಆ ಹುಡುಗ ಹೇಳಿದ: “ನಾನೀಗ ಏನು ಮಾಡಲಿ, ಸಾರ್? ‘ಕೋಮಿನ ಆಧಾರದ ಮೇಲೆ ಸೀಟುಗಳನ್ನು ಹಂಚುತ್ತಾರೆ. ನೀನು ಹೋಗದಿದ್ದರೆ ನಮ್ಮ ಕೋಮಿಗೆ ಮೀಸಲಾಗಿರುವ ಸೀಟುಗಳು ಉಳಿದುಹೋಗುತ್ತವೆ. ಅವು ಇನ್ನಾರಿಗಾದರೂ ಸಿಗುತ್ತವೆ. ನೀನು ಹೋಗಿ ಸೇರಿಕೊಳ್ಳಲೇಬೇಕು. ಮುಂದೆ ಡಾಕ್ಟರ್ ಆಗುತ್ತೀಯೆ; ಸುಖವಾಗಿರುತ್ತೀಯೆ’ ಎಂದು ನಮ್ಮಲ್ಲಿ ಕೆಲವರು ಒತ್ತಾಯಪಡಿಸಿದರು.” “ಈಗ ಏನು ಮಾಡೋದು. ಕಾನೂನಿನ ಪ್ರಕಾರ ಪರೀಕ್ಷೆ ಕಟ್ಟಲು ನಿನಗೆ ಅವಕಾಶವೇ ಇಲ್ಲ. ಒಂದು ಪಕ್ಷ ಅವಕಾಶವಿದ್ದರೂ ನೀನು ಉದ್ದಕ್ಕೂ ತಪ್ಪದೆ ಪಾಸಾಗುವ ಭರವಸೆಯೂ ಇರುವಂತೆ ಕಾಣುವುದಿಲ್ಲ. ಇದರಿಂದ ನಿನ್ನ ಜೀವನಕ್ಕೆ ತೊಂದರೆಯಾಗುವುದಿಲ್ಲವೆ?” ಎನ್ನುತ್ತಿರುವಷ್ಟರಲ್ಲಿ, ಅವನು ಮೂರ್ಛೆ ಹೋದಂತಾಗಿ ಕೆಳಗೆ ಬಿದ್ದುಬಿಟ್ಟನು. ಅವನನ್ನು ಉಪಚರಿಸಿ, ಸಂತೈಸಿ ಕಳುಹಿಸಬೇಕಾಯಿತು. ನಿಮ್ಮ ನಿಮ್ಮ ಶಕ್ತಿ ಸ್ವರೂಪ ಸ್ವಭಾವ ಸ್ವಧರ್ಮಗಳನ್ನಾಶ್ರಯಿಸಿ ಜೀವನದ ಗುರಿಯನ್ನೂ ಜೀವನ ವಿಧಾನಗಳನ್ನೂ ರೂಪಿಸಿಕೊಳ್ಳಬೇಕು. ಈಗ ನೀವು ಹಾಗೆ ಮಾಡುತ್ತಿಲ್ಲ. ವ್ಯಾಸಂಗ ವಿಷಯದ ಆಯ್ಕೆಯ ಬಗೆಗೆ ತಂದೆ ತಾಯಿಯರನ್ನು ಕೇಳಿದರೆ ‘ಮುಂದೆ ಹೆಚ್ಚಿಗೆ ಸಂಬಳ ಬರುವಂಥದನು ಆರಿಸಿಕೊ’ ಎನ್ನುತ್ತಾರೆ. ಸರಿ, ಪಿ.ಸಿ.ಎಂ. ಇದ್ದೇ ಇದೆ. ಉತ್ಸಾಹದ ಭರದಲ್ಲಿ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಗಮನಿಸದೆ ಮುನ್ನುಗ್ಗುತ್ತಾರೆ. ಸ್ವಲ್ಪ ದೂರ ಹೋದ ಮೇಲೆ ದಾರಿ ಕಡಿದಾಗಿ ಕಂಡಾಗ, ಉತ್ಸಾಹ ಕುಂದಿ ನಿರಾಶೆ ಕವಿದಾಗ ‘ನಾನು ಇಲ್ಲಿಗೇಕೆ ಬಂದೆ’ ಎಂದು ಯೋಚಿಸುತ್ತಾರೆ. ಆ ಕಡೆಯೂ ಹೋಗುವಂತಿಲ್ಲ, ಈ ಕಡೆಯೂ ಬರುವಂತಿಲ್ಲ. ಲ್ಯಾಬೋರೇಟರಿಗಾಗಿ ಪ್ರತಿವರ್ಷವೂ ಲಕ್ಷಗಟ್ಟಳೆ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಈ ದುಡ್ಡಿಗೆ ಸಾರ್ಥಕತೆ ಏನು? ಆನರ‍್ಸ್ ವಿದ್ಯಾರ್ಥಿಗಳ ವಿಷಯ ಈಗ ಬೇಡ. ಇಷ್ಟೊಂದು ಹಣ ಖರ್ಚು ಮಾಡಿದ ತರುವಾಯ ಈ ವಿದ್ಯಾರ್ಥಿಗಳು ಬಿ.ಎಸ್.ಸಿ. ಮಾಡಿ ನಾಳೆ ಕಚೇರಿಯಲ್ಲಿ ಕರಣಿಕರಾದರೆ ಈ ದುಡ್ಡೆಲ್ಲ ವ್ಯರ್ಥವಾದಂತೆ ತಾನೆ! ಆದರಿಂದ ದೇಶಕ್ಕೆ ಏನು ಪ್ರಯೋಜನ?

ಯಾವ ದಾರಿಯಲ್ಲಿ ಹೋದರೆ ಸಾರ್ಥಕತೆ ಎಂದು ಹೈಸ್ಕೂಲು ವಿದ್ಯಾರ್ಥಿಗೆ ಗೊತ್ತಾಗುವಂತಿರಬೇಕು. ಎಲ್ಲರೂ ಉತ್ತಮರಾಗಬೇಕು, ಸುಖ ಪಡಬೇಕು, ಸರಿ. ಆದರೆ ಸ್ವಧರ್ಮವನ್ನು ನಿರ್ಲಕ್ಷಿಸಿ ಸಾಹಸಕ್ಕೆ ಕೈಯಿಟ್ಟರೆ ಏನು ಪ್ರಯೋಜನ? ಆಕಸ್ಮಿಕವನ್ನೆ ಸಾಧಾರಣವೆಂದು ನಂಬಬಾರದು. ಗಣಿತದಲ್ಲಿ ೮೦ ಅಂಕಗಳು ಬಂದದ್ದರಿಂದಲೇ ತಾನು ಗಣಿತ ಶಾಸ್ತ್ರಜ್ಞನಾಗಬಲ್ಲೆನೆಂದು ಭಾವಿಸುವುದು ಸರಿಯಲ್ಲ. ಅಕಸ್ಮಾತ್ತಾಗಿ ಪರೀಕ್ಷೆಗೆ ಹಿಂದಿನ ದಿನ ಕೆಲವು ಲೆಕ್ಕಗಳನ್ನು ಮಾಡಿರುತ್ತಾನೆ. ಅದೃಷ್ಟವಶಾತ್ ಅವೇ ಲೆಕ್ಕ ಪರೀಕ್ಷೆಯಲ್ಲಿಯೂ ಬಂದಿರುತ್ತವೆ. ನಾನು ಪಾಸು ಮಾಡಿದಾಗಲು ಹಾಗೆಯೇ ಆಗಿತ್ತು. ಆದರೆ ನಾನು ಮೋಸಹೋಗಲಿಲ್ಲ. ನನಗೆ ಗೊತ್ತಿತ್ತು – ನಾನು ಮ್ಯಾತಮ್ಯಾಟಿಕ್ಸ್ ಜೀನಿಯಸ್ ಅಲ್ಲ, ಎಂದು. ಆರ‍್ಟ್‌ಸ್‌ ವಿಭಾಗಕ್ಕೆ ಸೇರಿದೆ. ಅನೇಕರಿಗೆ ತಾವು ಮಾಡುತ್ತಿರುವುದರ ಬಗೆಗೆ ಅರಿವೂ ಇಲ್ಲ, ಅದನ್ನು ಪೂರ್ತಿಗೊಳಿಸುವ ಧೈರ್ಯವೂ ಇಲ್ಲ. ಮನೆಯವರು ಹೇಳುತ್ತಾರೆಂದು ಮಾಡುವುದಾಗಿದೆ. ಕೆಲವು ವಿಭಾಗಗಳಲ್ಲಿ ಮಿತಸಂಖ್ಯೆಯ ಸ್ಥಾನ (Seat) ಇರುತ್ತವೆ. ಆ ಸ್ಥಾನ ಸಂಪಾದನೆಗಾಗಿಯೇ ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ವ್ಯಯಿಸುತ್ತಾರೆ. ಅದು ಸರಿಯಲ್ಲವೆಂದು ಕಾಣುತ್ತದೆ. ಅಂಥ ಪರಿಸ್ಥಿತಿ ತಪ್ಪಬೇಕು. ಆದಷ್ಟು ಮಟ್ಟಿಗೆ ನಮ್ಮ ನಮ್ಮ ಸ್ವಭಾವ ಸ್ವಧರ್ಮಗಳನ್ನನುಸರಿಸುವುದು ಮೇಲು. ಆರ್ಷೇಯ ಕಾಲದಿಂದ ನಮ್ಮವರು ಇದನ್ನು ಹೇಳುತ್ತಿದ್ದಾರೆ. ಅದನ್ನು ತಪ್ಪರ್ಥ ಮಾಡಿಕೊಂಡು ಕೆಟ್ಟಿದ್ದಾರೆ.

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್
ಸ್ವಧರ್ಮೋ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ[3]

ತನ್ನ ಶಕ್ತಿ ಸಾಮರ್ಥ್ಯ ಸ್ವಧರ್ಮ ಸ್ವಭಾವಗಳಿಗನುಗುಣವಾದ ಅನುಷ್ಠಾನವನ್ನು ಬಿಟ್ಟು, ಇನ್ನೊಬ್ಬನದು ಉತ್ತಮವೆಂದು ಅದನ್ನು ಮಾಡಲು ಹೋದರೆ, ಇದೂ ಅಲ್ಲದೆ ಅದೂ ದೊರೆಯದೆ ಹೋಗುತ್ತದೆ. ಬಣ್ಣದ ಚಿತ್ರ ಬರೆಯುವ ಸಂಸ್ಕಾರವಿರುವಾತ ಕಲ್ಲಿನ ಶಿಲ್ಪದ ಕೆಲಸಕ್ಕೆ ಕೈಹಾಕಿದರೆ ಎಲ್ಲೂ ಸಫಲತೆ ದೊರಕುವುದಿಲ್ಲ. ನಿಮ್ಮ ಆಪ್ತ ಗುರು ನಿಮ್ಮ ಸ್ವಂತ ಆಲೋಚನೆ; ನಿಮ್ಮ ದಾರಿಯನ್ನು ನೀವೇ ಹುಡುಕಿಕೊಳ್ಳಬೇಕು.

ಹೊಸ ವಿದ್ಯಾಪದ್ಧತಿ ಮುಂದಿನ ವರ್ಷದಿಂದ ಜಾರಿಗೆ ಬರಬೇಕೆಂದು ನಿರ್ಧರಿಸಿದೆ. ಸರ್ಕಾರವೂ ಸುಧಾರಣಾ ಸಮಿತಿಯ ಶಿಫಾರಸ್ಸುಗಳನ್ನು ಕ್ರಮ ಕ್ರಮವಾಗಿ ಕಾರ್ಯರೂಪಕ್ಕೆ ತರುತ್ತಿದೆ. ಡಿಗ್ರಿಗಳ ವ್ಯಾಮೋಹವನ್ನು ಹೋಗಲಾಡಿಸುವುದು ದೇಶಕ್ಷೇಮದ ಹೊಣೆಗಾರಿಕೆಯನ್ನು ಹೊತ್ತ ಸರ್ವರ ಕರ್ತವ್ಯ. ಸರ್ಕಾರದ ಆಡಳಿತಕ್ಕೆ ಡಿಗ್ರಿಗಳು ಅನಾವಶ್ಯಕವಲ್ಲವೆ, ಎಂಬುದನ್ನು ನೋಡಬೇಕು. ಹೃದಯಸ್ಪಂದಿಯಾದ ಅಭಿರುಚಿಯಿರದಿದ್ದರೂ ಉನ್ನತ ವಿದ್ಯಾಭ್ಯಾಸಕ್ಕೆ ಹಾತೊರೆಯುತ್ತಿರುವ ಕಾತರೆಯನ್ನು ಸರ್ಕಾರ ತಡೆಗಟ್ಟಬೇಕು. ಮನಶ್ಶಕ್ತಿ ವೃಥಾ ನಷ್ಟವಾಗುವ ಕೆಲಸ ಬಿಟ್ಟು, ಸಮಾಜಕ್ಕೆ ದೇಶಕ್ಕೆ ಉಪಯೋಗವಾಗುವಂಥ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಈಗ ಯೋಗ್ಯತೆಯನ್ನು ಸಂಬಳದ ಅಂತಸ್ತಿನ ಮೇಲೆ ನಿರ್ಧರಿಸುತ್ತೇವೆ. ಸ್ವತಂತ್ರವಾದ ದೇಶದಲ್ಲಿ ಯಾವ ವೃತ್ತಿಯೂ ಮೇಲಲ್ಲ, ಯಾವುದೂ ಕೀಳಲ್ಲ. ಈ ವಿಚಾರದಲ್ಲಿ ಸೋವಿಯಟ್ ಯೂನಿಯನ್ ನಮಗೆ ಮಾದರಿಯಾಗಬೇಕು. ಅಲ್ಲಿ ಮಹಾ ಕಾದಂಬರಿಕಾರನಿಗೆ, ಮಹಾಕವಿಗೆ, ಮಹಾಸಂಶೋಧಕನಿಗೆ, ಮಹಾವಿಜ್ಞಾನಿಗೆ ರಾಷ್ಟ್ರೀಯ ಬಹುಮಾನವನ್ನು ಕೊಡುವಂತೆಯೆ ಕೋಳಿ ಸಾಕುವವನಿಗೆ, ಜೋಳ ಬೆಳೆಯುವವನಿಗೆ, ಹಸು ಸಾಕುವವನಿಗೆ ಅದೇ ಬಹುಮಾನ ಕೊಡುತ್ತಾರೆ. ಅಲ್ಲಿಯ ರಾಜ್ಯಪದ್ಧತಿಯಲ್ಲಿ ದೊಡ್ಡ ಕಾದಂಬರಿ ಬರೆಯುವವರಿಗೆ ಎಷ್ಟು ಗೌರವ ದೊರೆಯುತ್ತದೆಯೋ ಉತ್ತಮ ತಳಿಯ ಕೋಳಿ ಹಂದಿ ಸಾಕುವ ರೈತನಿಗೂ ಅಷ್ಟೇ ಗೌರವ ದೊರೆಯುತ್ತದೆ. ಯಾವ ಕೆಲಸದ ಬಗೆಗೂ ಕೀಳು ಭಾವನೆಯಿಲ್ಲ. ಕಾಯಕದಲ್ಲಿ ಸಮಾನತೆ ಮತ್ತು ಗೌರವಗಳನ್ನು ಅವರು ಕಂಡುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಆ ದೃಷ್ಟಿ ಬೆಳೆಯಲು ಬಹಳ ಕಾಲ ಬೇಕಾಗುತ್ತದೇನೊ? ಅದು ಬೆಳೆಯದಿದ್ದರೆ ದೇಶದ ಕ್ಷೇಮ ಸಾಧ್ಯವಾಗದು.

ಸ್ವಧರ್ಮ ಮಾಡುತ್ತ, ತೃಪ್ತಿಯನ್ನು ಕಂಡುಕೊಂಡು, ಸಾಮರಸ್ಯ ಸಮನ್ವಯಗಳನ್ನು ಸಾಧಿಸಿಕೊಂಡು ಮುಂದುವರಿಯುವುದೇ ಬದುಕಿನ ಪರಮೋದ್ದೇಶವೆಂದು ಪ್ರಾಚೀನ ಮಹಾಪುರುಷರು ಬೋಧಿಸಿದ್ದಾರೆ. ದೊಡ್ಡದು ಸಣ್ಣದು ಎಂಬ ಭೇದಭಾವ ಇರಬಾರದು. ಎಲ್ಲರೂ ಮಂತ್ರಿಗಳಾಗುವುದು ಹೇಗೆ ಅಸಾಧ್ಯವೊ, ಹಾಗೆಯೆ ಎಲ್ಲರೂ ಐ.ಎ.ಎಸ್. ಅಧಿಕಾರಿಗಳಾಗುವುದಾಗಲಿ, ಇಂಜನಿಯರ್ ಆಗುವುದಾಗಲಿ ಅಸಾಧ್ಯ. ಅಂದರೆ ಹಾಗೆ ಆಗಬಾರದೆಂದಲ್ಲ. ಶಕ್ತಿ ಇರುವವರು ಅವುಗಳನ್ನು ಪಡೆಯಲು ಪ್ರಯತ್ನಿಸಬಹುದು. ಅಧೈರ್ಯ ಮಾತ್ರ ಖಂಡಿತ ಬೇಡ. ಸಮರಸ ಸಮನ್ವಯ ಮನೋಭಾವವನ್ನು ಬೆಳಸಿಕೊಂಡವನು ಯಾವ ಚಕ್ರವರ್ತಿಗೂ ಇಲ್ಲದ ಆತ್ಮಗೌರವವನ್ನು ಪಡೆಯುತ್ತಾನೆ, ಸುಖಶಾಂತಿಯನ್ನು ಅನುಭವಿಸುತ್ತಾರೆ. ಫೆಯ್ಲಾಗಿ, ಮುಂದರಿಯದೆ ಮೂರ್ಛೆಹೋದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಯಲ್ಲಿ ಆತ್ಮಗೌರವವೇ ಲುಪ್ತವೆಂದು ಹೇಳಬೇಕಾಗುತ್ತದೆ. ಸಣ್ಣ ತೊರೆಯನ್ನು ದಾಟದವನು ಹೊಳೆಗಳನ್ನು ಹೇಗೆ ದಾಟಿಯಾನು? ತಾಯಿ ಪರಿಚಾರಿಕೆಯಂತೆ! ಅವಳು ಇವನಿಗಾಗಿ ದುಡಿಯುತ್ತಿದ್ದಾಳೆ. ಬಿ.ಎಸ್.ಸಿ. ಸೇರಿ ಪಾಸು ಮಾಡಿದ್ದರೆ ಅವನು ಹಿಂದುಳಿದವನಾದುದರಿಂದ ಕೆಲಸ ಸಿಗುತ್ತಿತ್ತು. ಈ ವಿಶಾಲ ಪ್ರಪಂಚದಲ್ಲಿ ಅಧೈರ್ಯ ಅನಾವಶ್ಯಕ.

ಭಗವಂತನ ಪ್ರಪಂಚದಲ್ಲಿ ಯಾವ ಕೆಲಸವೂ ಕೀಳಲ್ಲ. ಎಲ್ಲಿದ್ದರೂ ನಮ್ಮ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಶ್ರದ್ಧೆಯಿಂದ ಮಾಡಬೇಕು. ಕರ್ತವ್ಯಚ್ಯುತರಾದಾಗ ಮಾತ್ರ ನಾವು ಕೀಳಾಗುತ್ತೇವೆ. ನಾಟಕ ಸ್ಪರ್ಧೆಯಲ್ಲಿ ಚಕ್ರವರ್ತಿಯ ಪಾತ್ರಧಾರಿ ತನ್ನ ಪಾತ್ರವನ್ನು ಸರಿಯಾಗಿ ಅಭಿನಯಿಸದಿದ್ದರೆ ಕೊನೆಯ ಬಹುಮಾನವೂ ದೊರಕುವುದಿಲ್ಲ; ಕಸಗುಡಿಸುವವನ ಅಭಿನಯ ಮೇಲ್ಮಟ್ಟದ್ದಾದರೆ ಪ್ರಥಮ ಬಹುಮಾನವೇ ಸಿಗುತ್ತದೆ.

ಸೂತ್ರಧಾರಿಣಿ ನೀನು; ಪಾತ್ರಚಾರಿಯು ನಾನು;
ಯಾವ ಪಾತ್ರವನಿತ್ತರೇನು ನೀನೆನಗೆ?
ನಿನ್ನ ಅಧ್ಯಕ್ಷತೆಯ ಈ ನಿನ್ನ ಲೀಲೆಯಲಿ
ಪರಮ ಪುರುಷಾರ್ಥರೂಪಿಣಿ ನೀನೆ ಕೊನೆಗೆ!

ಚವರಿವಿಡಿದರೆ ಮೇಲೆ, ಪೊರಕೆವಿಡಿದರೆ ಕೀಳೆ,
ಮಾಳ್ಪ ಕೆಲಸಗಳೆಲ್ಲ ನೈವೇದ್ಯವಾಗೆ?
ರಸಭೇದವಿಹುದೆ ಸುಖದುಃಖಗಳಿಗಾಟದಲಿ
ಜೀವಭಾವನೆ ಸಚ್ಚಿದಾನಂದವಾಗೆ?

ಸಚ್ಚಿದಾನಂದರೂಪಿಣಿ ನೀಂ, ಜಗದ್ಧಾತ್ರಿ,
ಮೆಚ್ಚುವಂದದಿ ನಾಂ ನಡೆಯೆ ಪಾತ್ರಚಾರಿ,
ಹೆಚ್ಚು ಕಡಮೆಯ ಹೆಮ್ಮೆ ದೈನ್ಯದ ವಿಭೇದವದು
ಹುಚ್ಚು ಬೆಮೆಯಲ್ತೆ, ಓ ಋತಸೂತ್ರಧಾರಿ![4]

ನಾವು ಮಾಡುವ ಕೆಲಸಗಳೆಲ್ಲ ನೈವೇದ್ಯವಾದರೆ ಅವು ಎಂಥವಾದರೇನು? ಶ್ರದ್ಧಾನಿಷ್ಠೆಗಳಿದ್ದರೆ ಹೆಚ್ಚು ಕಡಮೆಗಳ ಭೇದ ಹುಚ್ಚು ಭ್ರಮೆಯಾಗುತ್ತದೆ. ಭಗವಂತನ ಕೃಪಾಶಕ್ತಿಗೆ ಪಾತ್ರವಾಗುವುದಾದರೆ ಮಾನಾವಮಾನಗಳೂ ದಿವ್ಯ ಪದವಿಗಳಾಗುತ್ತವೆ.

ನಿನ್ನ ಪದಕಮಲದಲಿ ಮಲೆಮಾಡಿರುವ ನನಗೆ
ಆ ಸ್ಥಾನ ಈ ಸ್ಥಾನ ಎಲ್ಲವಾಸ್ಥಾನ!
ಅಲ್ಲಿಲ್ಲಿ ಎನಲೇನು? ನೀನೆ ಅಡಿಯಿಡುವಲ್ಲಿ
ದಿವ್ಯ ಪದಗಳಲ್ತೆ ಮಾನಾವಮಾನ!

ಬೆಟ್ಟಗಳೇರುವೆಯೊ? ಕಣಿವೆಗಳನಿಳಿಯುವೆಯೊ?
ಕೆಸರುಸುಬುಗಳೊಳಾಡಿ ವಿಹರಿಪೆಯೊ ನೀನು?
ಇಲ್ಲಿ ಸಂಚರಿಸಲ್ಲಿ ಚರಿಸದಿರೆನಲು ನನಗೆ
ನಿನ್ನ ಲೀಲೆಗೆ ಗೆರೆಯನೆಳೆವ ಹಕ್ಕೇನು?

ಎಲ್ಲಿ ನೀ ಪದವಿಡುವೆ ಅಲ್ಲೆ ಉತ್ತಮ ಪದವಿ;
ನಿನ್ನ ಪದವಲ್ಲದಾ ಪದವಿಯೂ ಹೀನ;
ನಿನ್ನಡಿಯ ಪುಡಿಯ ಬಡತನವೆ ಕಡವರ ಕಣಾ:
ನಿನ್ನಡಿಗೆ ದೂರವಿರೆ ಧನಿಕನೂ ದೀನ![5]

ಮಾನವನ ಆಸೆಗೆ ಮಿತಿಯಿಲ್ಲ. ತನ್ನ ಶ್ರೇಯಸ್ಸಿಗೆ ಬೇಕಾದುದು – ಬೇಡವಾದುದನ್ನೆಲ್ಲ ಅವನು ಆಶಿಸುತ್ತಾನೆ. ಆದರೆ ಆ ಆಶೆ ಭಗವಂತನ ಇಚ್ಛೆಯಾಗುವತನಕ ಸಲ್ಲದಿರುವುದು ಅವನ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದಲೆ ಒಳ್ಳೆಯದು. ಭಗವಂತನ ಆಶೀರ್ವಾದವಾಗಿ ನಮ್ಮ ಆಶೆ ಈಡೇರಬೇಕು.

ನನ್ನಾಸೆ ನಿನ್ನೆಚ್ಛೆಯಪ್ಪನ್ನೆಗಂ
ಸಲ್ಲದಿರಲಿ;
ನನ್ನ ಸಾಹನ ನಿನ್ನದಪ್ಪನ್ನೆಗಂ
ಗೆಲ್ಲದಿರಲಿ.

ಗೆಲ್ ಅಹಂಕಾರವನೆ ಬಲಿವನ್ನೆಗಂ
ಸೋಲೆ ಬರಲಿ;
ಸುಖ ನಿನ್ನ ಮರೆವಂತೆ ಮಾಳ್ಪನ್ನೆಗಂ
ದುಃಖವಿರಲಿ;

ನನ್ನಿಷ್ಟದಿಷ್ಟ ನೀನಪ್ಪನ್ನೆಗಂ
ಕಷ್ಟ ಬರಲಿ;
ಲಾಭ ಗುರುಲಾಭ ನೀನಪ್ಪನ್ನೆಗಂ
ನಷ್ಟ ಬರಲಿ![6]

ಈ ತರದ ಮನೋಧರ್ಮವನ್ನು ಪಾಲಿಸಿಕೊಂಡು ಹೋಗುವವನಿಗೆ ಯಾವ ಅನ್ಯಾಯವೂ ಸಂಭವಿಸುವುದಿಲ್ಲ. ಅನ್ಯಯವಾದರೂ ಅವನಿಗೆ ನಿರಾಶೆ, ದುಃಖ ಒದಗುವುದಿಲ್ಲ. ಅಂಥವರು ಎಂತಿರಲಿ, ಎಲ್ಲಿರಲಿ, ಚಕ್ರವರ್ತಿಗಳೆ! ಅಂಥವರಿಗೆ ಎಂಥ ಲೌಕಿಕ ಪ್ರತಿಷ್ಠೆ ಪ್ರಾಪ್ತವಾದರೂ ಅಹಂಕಾರಗೊಳ್ಳುವುದಿಲ್ಲ. ಯಾರು ನಿಂದಿಸಿದರೂ ದುಃಖ ಗೊಳ್ಳುವುದಿಲ್ಲ. ಸ್ತುತಿ ನಿಂದೆಗಳೆರಡೂ ಅವನಿಗೆ ಸಮಾನ:

“ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನ ಚಿತ್
ಅನಿಕೆತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೊ ನರಃ”[7]

ಅಂಥವರು ಎಷ್ಟು ಬಂದರೆ ಅಷ್ಟರಿಂದಲೆ ತೃಪ್ತಿ ಪಡೆಯುತ್ತಾರೆ. ಅವರ ಸಂತುಷ್ಟಿಗೆ ಸಂಬಳ ಪದವಿ ಶ್ರೀಮಂತಿಕೆ ಕಾರಣವೆಂದು ತಿಳಿಯುವುದು ತಪ್ಪು. ದೊಡ್ಡ ದೊಡ್ಡ ಅಧಿಕಾರದಲ್ಲಿರುವವರು ಯಾವುದೊ ಅಸಂತುಷ್ಟಿಯಿಂದ ನೀರಿಗೆ ಬಿದ್ದು ಸತ್ತಿರುವುದೂ, ಬ್ಯಾಂಕಿನಲ್ಲಿ ಕೋಟಿಗಟ್ಟಳೆ ರೂಪಾಯಿ ಇಟ್ಟಿರುವವರು ಆತ್ಮಹತ್ಯೆ ಮಾಡಿಕೊಂಡಿರುವುದೂ ನಮಗೆ ಹೊಸ ವಿಷಯಗಳಲ್ಲ. ಇದರಿಂದ ನಾನು ಬಡತನವನ್ನು ಬೋಧಿಸುತ್ತಿದ್ದೇನೆಂದು ತಿಳಿಯಬೇಡಿ. ನಿಮ್ಮ ಕೈಯಲ್ಲಾದಷ್ಟು ಸಂಪಾದಿಸಲು ಪ್ರಯತ್ನಪಡಿ. ಆದರೆ ಸಂಬಳದ ಅಂತರ ನಿಮ್ಮನ್ನು ನಿರಾಶೆಗೀಡುಮಾಡಕೂಡದೆಂಬುದೆ ನನ್ನ ಭಾವನೆ.

ವಿದ್ಯಾರ್ಥಿಗಳಾದ ನೀವು ಈಗಿನಿಂದ ಕಲೆಯ ಲೋಕವನ್ನು ಪ್ರವೇಶಿಸಿ ಅಲ್ಲಿಯ ತತ್ತ್ವಧರ್ಶನದ ಲಾಭವನ್ನು ಪಡೆಯಬಲ್ಲಿರಾದರೆ, ಜೀವನದಲ್ಲಿ ಸಮರಸ ಮತ್ತು ಸಮನ್ವಯ ಭಾವಗಳನ್ನು ಅನುಷ್ಠಾನಕ್ಕೆ ತಂದುಕೊಂಡು ಸುಖಿಗಳಾಗಿರಬಹುದು. ಕಲೆಯ ಭೂಮಿಕೆಯಲ್ಲಿ ಮೇಲು ಕೀಳುಗಳಿಲ್ಲ. ಅಲ್ಲಿ ಸರ್ವರೂ ಸಮ. ಅದನ್ನು ಪ್ರವೇಶಿಸಿದವರೆಲ್ಲ ಸಮ ಶ್ರೀಮಂತರೆ! ಅದನ್ನು ಹೊಕ್ಕ ಕೂಡಲೆ ಎಂಥ ಪ್ರಾಚೀನ ವೈಭವವನ್ನು ಸಂದರ್ಶಿಸುತ್ತೀರಿ; ಎಂಥ ಅದ್ಭುತ ವ್ಯಕ್ತಿಗಳ ಸಂದರ್ಶನ ಪಡೆಯುತ್ತೀರಿ! ಲೌಕಿಕ ಐಶ್ವರ್ಯವಿಲ್ಲದಿದ್ದರೂ ಸಾಹಿತ್ಯ ಲೋಕದ ಅನರ್ಘ್ಯ ಐಶ್ವರ್ಯದಿಂದ ನೀವು ಎಣೆಯಿಲ್ಲದ ಶ್ರೀಮಂತರಾಗುತ್ತೀರಿ. ಮಾನವನಿಗೆ ಅಭ್ಯುದಯ, ಶ್ರೇಯಸ್ಸು ಎರಡೂ ಬೇಕು. ಹೊಟ್ಟೆ ಹಸಿದಾಗ ಸಂಗೀತ ಏಕೆ? ಪ್ರಾಣಮಯಕೋಶದ ಅಭ್ಯುದಯಕ್ಕಾಗಿ ದುಡಿಯಬೇಕು, ನಿಜ. ಆದರೆ ಅದೇ ಸರ್ವಸ್ವವಲ್ಲ. ಅದು ಶ್ರೇಯಸ್ಸನ್ನು ಮರೆಸಬಾರದು. ಅಭ್ಯುದಯ ಸಾಧನೆಗೆ ವಿಜ್ಞಾನ, ಶ್ರೇಯಸ್ಸಿನ ಸಾಧನೆಗೆ ಕಲೆ ನೆರವಾಗುತ್ತವೆ. ಇವರೆಡರ ಸಾಧನೆಗೆ ಪೂರ್ವಭಾವಿಯಾಗಿ ವಿದ್ಯಾರ್ಜನೆ ಆವಶ್ಯಕ. ಕೇವಲ ಪುಸ್ತಕಕ್ರಿಮಿಯಾಗುವುದೂ ಸರಿಯಲ್ಲ. ಓದಿದುದನ್ನು ಅನುಷ್ಠಾನದಲ್ಲಿ ತರಬೇಕು. ೪-೫ ವರ್ಷಗಳು ನಗರದಲ್ಲಿದ್ದು ಸಿನಿಮಾ ನಾಟಕಾದಿಗಳನ್ನು ನೋಡಿಕೊಂಡು ಮಜಮಾಡಿದರೆ ನಿಮ್ಮ ಬಾಳು ನಿಷ್ಪ್ರಯೋಜಕವಾಗುತ್ತದೆ. ಐದು ವರ್ಷದ ಮಜದಿಂದ ಐವತ್ತು ವರ್ಷ ದುಃಖಪಡಬೇಕಾಗುತ್ತದೆ. ಐದು ವರ್ಷ ಕಷ್ಟಪಟ್ಟರೆ ನಿಮ್ಮ ಭವಿಷ್ಯಜೀವನ ಸುಖಮಯವಾಗಿ ಶಾಂತವಾಗಿ ಕೊನೆಗೊಳ್ಳುತ್ತದೆ.

ವಿದ್ಯಾರ್ಥಿಗಳ ಶಿಸ್ತಿನ ವಿಷಯ ಭಯಂಕರಾಕಾರವನ್ನು ತಾಳುತ್ತಿದೆ. ಜೂಆಲಜಿ ಶಾಖೆಯ ಇನ್‌ಸ್ಪೆಕ್ಷನ್‌ಗೆ ಹೋಗಿದ್ದಾಗ ಸ್ವಿಚ್‌ಗಳು ಕಳುವಾಗಿದ್ದುದು ಕಂಡುಬಂತು. ‘This sort of vandalism is going on’ ಎಂದರು ಅಧ್ಯಾಪಕರು. ಇಂಥದಕ್ಕೆಲ್ಲ ಒಬ್ಬಿಬ್ಬರು ಕಾರಣ ನಿಜ. ಇಡೀ ವಿದ್ಯಾರ್ಥಿ ಸಮುದಾಯವನ್ನೆ ದೂರುತ್ತಿಲ್ಲ. ಊರಲ್ಲಿ ನಡೆಯುವ ಕಳ್ಳತನಕ್ಕೆ ಯಾರೂ ಒಬ್ಬಿಬ್ಬರು ಕಾರಣ. ಬೆಂಗಳೂರಿನಲ್ಲಿ ನಡೆಯುವ ಕೊಲೆ ದರೋಡೆಗಳಿಗೂ ಹಾಗೆಯೇ. ಆದರೆ ಅಪಕೀರ್ತಿ ಇಡೀ ನಗರಕ್ಕೆ ಬರುತ್ತದೆ. ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ಎದುರು ಪಕ್ಷಕ್ಕೆ ತೊಂದರೆ ಕೊಡಲು ಅತ್ಯುತ್ಸಾಹ ಅಶಿಸ್ತುಗಳು ಹೇಗೆ ಸಹಾಯಕವಾಗಿದ್ದುವೊ, ಹಾಗೆಯೆ ಅವು ಸ್ವಾತಂತ್ರ‍್ಯಾ ನಂತರ ನಮಗೇ ಮಾರಕವಾಗಿ ಪರಿಣಮಿಸುತ್ತಿವೆ. ರಾಜಕೀಯ ಸಂಬಂಧವಾದ ಆಲೋಚನೆ, ಚರ್ಚೆ ನಡೆಯಬೇಕು. ಆದರೆ ಆಲೋಚನೆ ಚರ್ಚೆಗಳು ಕ್ರಿಯಾರೂಪವನ್ನು ತಾಳಬಾರದು. ಕರ್ಮರಂಗಕ್ಕಿಳಿಯುವಾಗ ಹಿಂದು ಮುಂದುಗಳನ್ನು ಆಲೋಚಿಸಬೇಕು. ಈ ಸಮಯದಲ್ಲಿ ತುಂಬ ಶಿಸ್ತು, ಸಂಯಮ ಬೇಕು. ಮುಂದೆ ನಿಮ್ಮ ಪಾಲಿಗೆ ೫೦ ವರ್ಷಗಳ ಬದುಕಿದೆ. ಆದ ಏನು ಬೇಕಾದರೂ ಮಾಡಬಹುದು. ದೊಡ್ಡವರಿಗೆ ಪ್ರತಿಷ್ಠೆ ಅಧಿಕಾರ ಬೇಕೆಂಬ ಚಾಳಿ ಪ್ರಬಲವಾಗಿರುತ್ತದೆ. ಆ ಚಾಳಿ ವಿದ್ಯಾರ್ಥಿಗಳಿಗೂ ತಪ್ಪಿದ್ದಲ್ಲ. ಕಾಲೇಜಿನ ಸಂಘಗಳಲ್ಲಿಯೂ ಚುನಾವಣೆ ಬಿಸಿಬಿಸಿಯಾಗಿ ನಡೆಯುತ್ತದೆ. ಚುನಾವಣೆಯ ಘೋಷಣೆಗಳೇನು, ಅಬ್ಬರವೇನು? ಹುಡುಗ ಬುದ್ಧಿವಂತ, ನಿಜ. ಕಾರ್ಯದರ್ಶಿಯೂ ಆದ. ಮೂರು ವರ್ಷ ಫೆಯ್ಲ್ ಆಗಿ ನಾಲ್ಕನೆಯ ವರ್ಷ ಮನೆಗೆ ಹೋದ. ಅಷ್ಟೇ ಪ್ರಯೋಜನ! ಆದುದರಿಂದ ಬೇರೆ ಬೇರೆ ಹವ್ಯಾಸಗಳಿಗೆ ಹೋಗದೆ ಪಾಠ ಪ್ರವಚನಗಳಲ್ಲಿ ಏಕಾಗ್ರತೆಯನ್ನು ಸಾಧಿಸಿ, ಐದು ವರ್ಷಗಳಲ್ಲಿ ಜ್ಞಾನಸಿದ್ಧಿಯನ್ನು ಪಡೆಯುವ ಮನೋಧರ್ಮವನ್ನೂ ದೃಢನಿಶ್ಚಯವನ್ನೂ ರೂಢಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಬೇಕು. ಈ ಸಂದರ್ಭದಲ್ಲಿ ಆಂಗ್ಲಕವಿ ಲಾಂಗ್‌ಫೆಲೋನ ಪದ್ಯಭಾಗ ನೆನಪಿಗೆ ಬರುತ್ತದೆ:

Lives of great men all remind us
We can make our lives sublime;
And departing, leave behind us
Footprints on the sands of time;
Foorprints that perhaps another,
Sailing over life’s solemn main,
A forlorn and shipwrecked brother,
Seeing shall take heart again.

ಹೀಗೆ ಹಿಂದಿನವರು ಬಿಟ್ಟು ಹೋಗಿರುವ ಹೆಜ್ಜೆಗಳೆಲ್ಲ ಪುಸ್ತಕ ರೂಪದಲ್ಲಿವೆ. ಅವರು ಬಿಟ್ಟುಹೋಗಿರುವ ಅನುಭವ ಸಂಪತ್ತನ್ನು, ಜ್ಞಾನವೈಭವವನ್ನು ನಿಮ್ಮ ಕೈವಶಮಾಡಿಕೊಳ್ಳಬೇಕು. ಅದ್ಯತನರಾದ ದೊಡ್ಡವರನ್ನು ಅನುಸರಿಸಬೇಕು. ಹಿರಿಯ ತತ್ತ್ವಗಳ ನಿತ್ಯಾನುಷ್ಠಾನದಿಂದ ಜಗದ್ವಿಖ್ಯಾತ ಮಹಾತ್ಮಾಗಾಂಧಿ ಆಗಲೂ ಸಾಧ್ಯ. ಲೌಕಿಕ ದೃಷ್ಟಿಗೆ ಅವರು ದೊಡ್ಡವರು. ಅವರಿಗಿಂತಲೂ ದೊಡ್ಡವರು ನಮಗೆ ಕಾಣದಂತೆ ಇರಬಹುದು. ಆದರೆ ಅಲೌಕಿಕದಲ್ಲಿ ಅವರವರಿಗೆ ಏನೂ ವ್ಯತ್ಯಾಸವಿಲ್ಲ. ಪ್ರತಿಯೊಬ್ಬರೂ ಗಾಂಧೀಜೀಯ ಮಟ್ಟಕ್ಕೆ ಬೆಳೆಯಬೇಕು. ಆದರೆ ಸ್ವಪ್ರತಿಷ್ಠೆಗಾಗಿ, ಹೆಸರಿಗಾಗಿ, ಅಹಂಕಾರದಿಂದ ಆಶ್ಲೀಲವಾಗಿ ಹೋರಾಡುವುದೇ ಶನಿ. ಇದರಿಂದ ಸಮಾಜಕ್ಕೆ ಹಾನಿಮಾಡಬೇಕಾಗುತ್ತದೆ. ಇನ್ನೊಬ್ಬರಿಗೆ ತೊಂದರೆ ತಂದೊಡ್ಡುವುದು ಸರಿಯಲ್ಲ. ಅಶ್ಲೀಲ ಸ್ಪರ್ಧೆಯಿಂದ ಸಮಾಜಕ್ಕೆ ಕೇಡೊದಗುತ್ತದೆ; ಸೇವಾಮನೋಭಾವದಿಂದ ಲೇಸುಂಟಾಗುತ್ತದೆ. ನಾವಿಂದು ಮಹತ್ತರ ಪರಿಸ್ಥಿತಿಯಲ್ಲಿದ್ದೇವೆ. ನಾವಿಂದು ಸ್ವತಂತ್ರರಾಗಿದ್ದೇವೆ. ೧೯೪೭ರ ಆಗಸ್ಟ್ ಮಧ್ಯರಾತ್ರಿ ನಡೆದ ಘಟನೆಯಷ್ಟೇ ಬೊಂಬಾಯಿಯಲ್ಲಿ ಆಟಾಮಿಕ್ ರೀಯಾಕ್ಟರ್ ಸ್ಥಾಪನೆಗೊಂಡ ನಿನ್ನೆಯ ಕ್ರಿಯೋನ್ಮುಖವಾದ ಘಟನೆಯೂ ಮಹತ್ತರವಾದುದು.

ಸಾಹಿತ್ಯ-ಸಂಸ್ಕೃತಿಯ ದೃಷ್ಟಿಯಿಂದಲೂ ನಾವಿಂದು ಅದ್ಭುತ ಕಾಲದಲ್ಲಿ ಜೀವಿಸುತ್ತಿದ್ದೇವೆ. ಒಂದೆರಡು ದಿನಗಳ ಹಿಂದೆ ಧಾರವಾಡದ ಆಕಾಶವಾಣಿಯಲ್ಲಿ ಕನ್ನಡ ಸಾಹಿತ್ಯ ಸಮಾಲೋಚನೆಗೆ ಸಂಬಂಧಿಸಿದ ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿ ಭಾಗವಹಿಸಿದ್ದವರೆಲ್ಲರೂ ಕನ್ನಡ ಸಾಹಿತ್ಯದ ಸಾಧನೆ ಸಿದ್ಧಿಗಳನ್ನು ಕುರಿತು ಚೆನ್ನಾಗಿ ಮಾತಾಡಿದರು. ಪಾಶ್ಚಾತ್ಯದೇಶಗಳಲ್ಲಿ ಸುಮಾರು ೨೦೦-೩೦೦ ವರ್ಷಗಳ ಅಂತರದಲ್ಲಿ ಹಲವಾರು ಹಂತಗಳಲ್ಲಿ ಏನೇನು ವೈವಿಧ್ಯೆ ಸಾಧಿತವಾಗಿದೆಯೋ, ಅದನ್ನೆಲ್ಲ ಕನ್ನಡದಲ್ಲಿ ಐವತ್ತು ವರ್ಷಗಳಲ್ಲಿಯೆ ಸಾಧಿಸಿದೆ. ಬಹುಶಃ ಗಾತ್ರದ ಪ್ರಮಾಣದಲ್ಲಿ ಆಂಗ್ಲ ಸಾಹಿತ್ಯದೊಡನೆ ಹೊಯ್‌ಕಯ್ಯಾಗಿ ನಿಲ್ಲದಿರಬಹುದು. ಸೃಷ್ಟಿ ಎಷ್ಟೋ ಶತಮಾನಗಳಿಂದ ಎಷ್ಟೋ ಹಂತಗಳನ್ನು ದಾಟಿಬಂದಿರುವುದನ್ನೆಲ್ಲ, ಹೊಟ್ಟೆಯಲ್ಲಿರುವ ಭ್ರೂಣ ಒಂಬತ್ತು ತಿಂಗಳಲ್ಲಿ ಅಭಿನಯಿಸಿ ಮುಂಬರಿಯುತ್ತದಂತೆ. ಈ ಉಪಮೆ ಕನ್ನಡ ಸಾಹಿತ್ಯಕ್ಕೆ ಸರಿಯಾಗಿ ಸಲ್ಲುತ್ತದೆ. ಅನೇಕರಿಗೆ ಇದು ಅತ್ಯುತ್ಪ್ರೇಕ್ಷೆ ಎಂದು ಕಾನಬಹುದು. ೫೦ ವರ್ಷಗಳ ಸಾಹಿತ್ಯ ಸೃಷ್ಟಿಯನ್ನು ಗಮನಿಸಿದರೆ ಅದರ ಸತ್ಯತೆ ಕಾಣುತ್ತದೆ; ನೀವು ಮಹಾ ಪುರುಷರ, ಮಹಾ ರಾಜಕಾರಣಿಗಳ, ಮಹಾಕವಿಗಳ, ಮಹಾಜ್ಞಾನಿಗಳ ಮಧ್ಯದಲ್ಲಿದ್ದೀರಿ. ನಿಮ್ಮ ಚೇತನ ತನ್ನ ನೂರಾರು ರಸನೆಗಳನ್ನು ದಿಕ್ಕು ದಿಕ್ಕಿಗೂ ನೀಡಿ, ಸರ್ವಸಾರವನ್ನು ಹೀರುವ ಸಾಮರ್ಥ್ಯವನ್ನೂ ಉತ್ಸಾಹವನ್ನೂ ಪಡೆಯಬೇಕು. ನಿಮ್ಮ ಆಕಾಂಕ್ಷೆ ಸಂಕಲ್ಪವಾಗಿ, ಅಭೀಪ್ಸೆಯಾಗಿ-ಉತ್ಕಟವಾದ ಅಭೀಪ್ಸೆ ಸಿದ್ಧಿಯಾಗಿ ಪರಿಣಮಿಸಬೇಕು. ಜೀವ ತನ್ನ ಪರಿಣಾಮ ಪಥದಲ್ಲಿ ಏನೇನು ರೂಪಾಕಾರಗಳನ್ನು ಪಡೆಯಿತೋ, ಅದಕ್ಕೆಲ್ಲ ಅದರ ಅಭೀಪ್ಸೆಯೇ ಕಾರಣ. ಮುಂದುವರಿಯುವ ಆತ್ಮದ ತೃಷ್ಣೆಯೇ ಆತ್ಮವನ್ನು ಮುಂದುವರಿಸುತ್ತದೆ. ಮೊದಲು ಭೂಮಿ ಉರಿಯುವ ಬೆಂಕಿಯಾಗಿತ್ತು; ಅನಂತರ ಮೃಣ್ಮಯವಾಯಿತು. ಮೃಣ್ಮಯತ್ವ ಸಸ್ಯತ್ವವಾಯಿತು. ಸತ್ಯತಾವರ್ಗದ ಹಾರೈಕೆಯ ಪ್ರಾಣಿಯನ್ನು ತಂದಿತು.

ಹಾರೈಸು ಹಾರೈಸು ಹಾರೈಸು ಜೀವ:
ಹಾರೈಸು ನೀನಾಗುವನ್ನೆಗಂ ದೇವ!
ಹಾರೈಸಿ ಹಾರೈಸಿ ಹಾರೈಸಿ
ಅನ್ನ ತಾನಾದುದೈ ಪ್ರಾಣ;
ಹಾರೈಸಿ ಹಾರೈಸಿ ಹಾರೈಸಿ
ಹಾರಿದುದೊ ನೀರಧಿಯ ಮೀನ!
ಹಾರೈಸಿ ಹಾರೈಸಿ ಹಾರೈಸಿ
ಹಸುರನುಸುರ್ದುವೊ ಕಲ್ಲು ಮಣ್ಣು;
ಹಾರೈಸಿ ಹಾರೈಸಿ ಹಾರೈಸಿ
ಕುರುಡು ಜಡಕುದಿಸಿತಯ್ ಕಣ್ಣು![8]

ಈ ವಿಧವಾದ ಅಭೀಪ್ಸೆ ನಿಮ್ಮಲ್ಲಿರಬೇಕು. ನಮ್ಮ ಜೀವನದಲ್ಲಿ ಹಿಂದಿನ ಕೆಲವು ಸಂಕುಚಿತಭಾವಗಳ ಪ್ರತ್ಯೇಕತಾಭಾವಗಳಿಗೆ ಆವಶ್ಯಕತೆಯಿಲ್ಲ; ಅವಕ್ಕೆ ಸ್ಥಾನವೂ ಇಲ್ಲ. ಇಡೀ ಪ್ರಪಂಚವೇ ಒಂದಾಗುವ ಕಾಲ ಇಂದು ಬಂದಿದೆ. ವಿಜ್ಞಾನ ಕಾಲದೇಶಗಳನ್ನು ಗೆದ್ದದು ಒಂದು ಮಾಡುತ್ತಿದೆ. ಆದುದರಿಂದ ಸಂಕುಚಿತ ಮನೋಭಾವನೆಯನ್ನು ತ್ಯಜಿಸಿ ಪೂರ್ಣದೃಷ್ಟಿಯನ್ನು ಸಾಧಿಸಬೇಕು. ಹತ್ತೊಂಬತ್ತನೆಯ ಶತಮಾನದ ಮಹದ್ವ್ಯಕ್ತಿಗಳು ಆ ಶ್ರೇಯಸ್ಸಿಗಾಗಿ ದುಡಿದು, ದಾರಿ ತೋರಿಸಿ ಹೋಗಿದ್ದಾರೆ. ನನ್ನದು ಮಾತ್ರ ಶ್ರೇಷ್ಠ, ಉಳಿದುದೆಲ್ಲ ಜಘನ್ಯ ಎಂಬ ಕೀಳು ಭಾವನೆ ಬೇಡ. ಎಂತು ಪಥ ಅಂತು ಮತ. ಯಾವ ದಾರಿಯಲ್ಲಿ ತೆರಳಿದರೂ ಭಗವಂತನ ಚರಣಾರವಿಂದದ ದರ್ಶನಲಾಭ ದೊರಕುತ್ತದೆ.

ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು. ಮತ ಮತಗಳಲ್ಲಿ, ಸಾಹಿತ್ಯ ಸಾಹಿತ್ಯಗಳಲ್ಲಿ, ಸಮಾಜ ಸಮಾಜಗಳಲ್ಲಿ-ಅಷ್ಟೇ ಏಕೆ? ರಾಜಕೀಯ ಕ್ಷೇತ್ರದಲ್ಲಿ, ಆರ್ಥಿಕ ಕ್ಷೇತ್ರದಲ್ಲಿ, ಸರ್ವತ್ರ ಅದು ವ್ಯಾಪಿಸಬೇಕು. ಅತ್ಯಂತ ಕೀಳಾದವನಿಗೂ ಮೇಲಾಗುವ ಅವಕಾಶವಿರಬೇಕು. ಇವೆರಡನ್ನೂ ಒಳಕೊಂಡ ಆಧ್ಯಾತ್ಮಿಕ ದೃಷ್ಟಿಯೆ ಪೂರ್ಣದೃಷ್ಟಿ. ಇದು ನಮ್ಮಿಂದ ಸಾಧ್ಯವಿಲ್ಲವೆಂದು ಹೇಳುವುದು ಸರಿಯಲ್ಲ. ತೀವ್ರವಾದ ಅಭೀಪ್ಸೆಯೊಂದಿದ್ದರೆ ಎಲ್ಲವೂ ಸಾಧ್ಯ ಎಂಬುದು ಪ್ರಕೃತಿಯ ರಹಸ್ಯಗಳನ್ನು ಶೋಧಿಸಲು ಹೊರಟ ವಿಜ್ಞಾನಿಯನ್ನು ಕೇಳಿದರೆ ಗೊತ್ತಾಗುತ್ತದೆ. ಅಭೀಪ್ಸೆ ಇದ್ದರೆ ಇದೆಲ್ಲ ಸಾಧ್ಯ.

ರಾಜಕೀಯದ ಬಿಸಿ ತೀವ್ರವಾಗಿದ್ದಾಗ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ದ ಕೆಲವು ಪದ್ಯಗಳನ್ನು ಬರೆದಿದ್ದೆ. ‘ಹೊಸ ಬಾಳಿನ ಗೀತೆ’ ಅವುಗಳಲ್ಲೊಂದು. ಅದರಲ್ಲಿ ಜಾತೀಯತೆಯ ಕ್ರೌರ್ಯವನ್ನೂ ಶ್ರೀಮಂತಿಕೆಯ ದೌಷ್ಟ್ಯವನ್ನೂ ವಿಪ್ಲವದ ಕಾಳಿ ಹೇಗೆ ದಮನಗೈಯುತ್ತಾಳೆನ್ನುವುದು ಚಿತ್ರಿತವಾಗಿದೆ.

“ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು!
ಎಂಬ ನವಯುಗ ವಾಣಿ ಘೋಷಿಸಿದೆ ಕೇಳಿ!

………………………………………………
“ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂಧು!”
ಎಂದು ಸಾಹಸಕೇಳಿ, ಹಿಂಜರಿಯಬೇಡಿ![9]

ಈ ಕವನದಲ್ಲಿರುವ ಬಿಸಿ ನಿಮಗೆ ಬೇಡ; ಬೆಳಕಿನ ಅಂಶ ಮಾತ್ರ ಸಾಕು. ಭರತ ಖಂಡದಲ್ಲಿ ಕ್ರಾಂತಿಕಾಳಿ ಕಾನೂನುಬದ್ಧವಾಗಿ ಹೆಜ್ಜೆ ಇಟ್ಟು, ನಿಧಾನವಾಗಿ ಬರುತ್ತಿದ್ದಾಳೆ: ಗಾಂಧೀಜಿಯವರ ಅಹಿಂಸಾತತ್ವವನ್ನಾಶ್ರಯಿಸಿ ಬಂದಂತೆ, ವಿನೋಬಾರವರ ಭೂದಾನ ಯಾತ್ರೆಯ ಭಾಷಣ ಮತ್ತು ಉಪದೇಶಗಳ ರೂಪದಲ್ಲಿಯೂ ಬರುತ್ತಿದ್ದಾಳೆ.

ನಾವು ಪರಕೀಯರಿಂದ ಆಕ್ರಾಂತರಾಗಿದ್ದವರು. ಈಗ ನಮ್ಮನ್ನು ನಮ್ಮವರೆ ಆಳುತ್ತಿದ್ದಾರೆ. ಕೇವಲ ಅಧಿಕಾರ ಬದಲಾವಣೆಯಿಂದಲೆ ನಮಗೆ ಪೂರ್ಣ ಮುಕ್ತಿ ದೊರೆಯುವುದಿಲ್ಲ. ಪಾಂಚವಾರ್ಷಿಕ ಯೋಜನೆಗಳು ಕಾರ್ಯಗತವಾಗಲು, ಪ್ರಯೋಜನಕಾರಿಯಾಗಲು ಹಿರಿಯರ ಹರಕೆ ಬೇಕು; ತಜ್ಞರ ವಿವೇಕವಿರಬೇಕು; ತರುಣರ ಶಕ್ತಿಯ ಮತ್ತು ಎಲ್ಲ ಜನರ ದುಡಿಮೆಯ ನೆರವು ಬೇಕು. ನಿಮ್ಮಲ್ಲಿ ಪ್ರತಿಯೊಬ್ಬರಿಗೂ, ಪ್ರತಿಯೊಬ್ಬರ ಹೃದಯದ ಸಾಹಸಕ್ಕೂ ಅವಕಾಶವಿದೆ. ಯಕ್ಷಿಣಿ ವಿದ್ಯೆಯಿಂದ ಏನೂ ಆಗಲಾರದು. ಎಲ್ಲರೂ ಸೇರಿ ಸರ್ಕಾರದೊಡನೆ ದುಡಿಯಬೇಕು. ಎಲ್ಲರೂ ಕರ್ತವ್ಯಶೀಲರಾಗಿ ತಪಸ್ವಿಗಳಾಗಿ ಮುಂದುವರಿದರೆ ದೇಶದ ಕ್ಷೇಮ, ಸಮಾಜದ ಕ್ಷೇಮ, ವ್ಯಕ್ತಿಯ ಕ್ಷೇಮ ಸಾಧ್ಯವಾಗುತ್ತದೆ.

ನಾನು ಈಗಾಗಲೆ ಹೇಳಿರುವ ಮಾತುಗಳು ಅಷ್ಟು ಸ್ವಾತಸ್ವವಾಗಿರಲಾರವು. ನಾನು ವಿನೋದಗೊಳಿಸಲು ಬಂದಿಲ್ಲ. ಕಹಿಯಾದರೂ ಚಿಂತೆಯಿಲ್ಲ, ನಿಜವನ್ನಿಡಲು ಬಂದಿದ್ದೇನೆ. ಒಬ್ಬನ ಜೀವನ ಪಥ ಮತ್ತೊಬ್ಬನ ಬದುಕನ್ನು ನಿರ್ಣಯಿಸಲಾರದು. ಸಂಚಿತ-ಪ್ರಾರಬ್ಧ-ಆಗಾಮಿ ಕರ್ಮಗಳು, ಸಾಮಾಜಿಕ ಪ್ರಾಕೃತಿಕ ಸನ್ನಿವೇಶಗಳು, ಮೇಲಾಗಿ ಸ್ವಯಂಕ್ರಿಯೆ ಪ್ರತಿಯೊಬ್ಬನ ಬಾಳನ್ನು ನಿರ್ಣಯಿಸಬೇಕು, ರೂಪಿಸಬೇಕು. ಒಂದೇ ಜೀವನೋದ್ದೇಶದ ಎರಕದಲ್ಲಿ ಎಲ್ಲವನ್ನೂ ಕರಗಿಸಿ ಏಕರೂಪತೆಯನ್ನು ಸಾಧಿಸುವ ಪ್ರಯತ್ನ ನಿಷ್ಪಲ. ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ಬಾಳಿನ ಗುರಿಯನ್ನು ಸಾಧಿಸಿಕೊಳ್ಳಬೇಕು. ನಿಮ್ಮ ವಿದ್ಯಾರ್ಥಿ ಜೀವನವನ್ನು ಮಾತ್ರ ವ್ಯರ್ಥಗೊಳಿಸಬೇಡಿ. ಯಾವ ರೀತಿಯ ತಪಸ್ಸು ನಿಮಗೆ ಸೂಕ್ತವೆಂದು ತೋರುವುದೊ ಅದನ್ನು ಆಚರಿಸಿ.

* * *


[1] ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ|| ಕೆ.ವಿ.ಪುಟ್ಟಣ್ಣನವರು ಬಸಪ್ಪ ಇಂಟರ್‌ಮೀಡಿಯಟ್ ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ತಾ|| ೭-೮-೫೬ ರಂದು ಮಾಡಿದ ಪ್ರಾರಂಭ ಭಾಷಣ.

[2]
[3] ಭಗವದ್ಗೀತೆ iii-೩೫.

[4] ‘ಅಗ್ನಿಹಂಸ’ ಕವನ ಸಂಗ್ರಹ ನೋಡಿ.

[5] ‘ಅಗ್ನಿಹಂಸ’ ಕವನ ಸಂಗ್ರಹ ನೋಡಿ.

[6] ‘ಅಗ್ನಿಹಂಸ’ ಕವನ ಸಂಗ್ರಹ ನೋಡಿ.

[7] ಭಗವದ್ಗೀತೆ xii-೧೯.

[8] ‘ಅಗ್ನಿಹಂಸ’ ಕವನ ಸಂಗ್ರಹ ನೋಡಿ.

[9] ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಕವನಸಂಗ್ರ ನೋಡಿ.